ಶುಕ್ರವಾರ, ಜೂನ್ 29, 2012

ರಥಯಾತ್ರೆ


ಆ ಮುಗುಳ್ನಗುವಿನ ಹಿಂದೆ ನೂರು ಅರ್ಥಗಳಿವೆ ಅನ್ನಿಸಿತ್ತು
                                 
ವಿಧಾನಸೌಧದಿಂದ ವಾಪಾಸ್ ಬರುವಾಗಲೇ ನಂಗೇನೋ ಕಾದಿದೆ ಅನ್ನಿಸಿತ್ತು. ನಮ್ಮ ಎಡಿಟರ್ ಶಂತನು ದತ್ತ ನನ್ನನ್ನು ಕಾಣಲು ಹೇಳಿದ್ದಾರೆ ಅಂತ ಬ್ಯರೋ ಛೀಫ್ ಮಟ್ಟೂ ಹೇಳಿದ್ದರು. ಕೇಂದ್ರ ಮತ್ತು ರಾಜ್ಯದಲ್ಲಿ ಚುನಾವಣೆ ಬೇರೆ ಘೋಷಣೆಯಾಗಿತ್ತು.
ಒಳಗೆ ಹೋದ ತಕ್ಷಣವೇ, ದತ್ತ ಅವರು ಕೇಳಿದ್ರು: `ವಿನಯ್, ಅದ್ವಾನಿಸ್ ರಥ್ ಯಾತ್ರಾ ಇಸ್ ಪಾಸಿಂಗ್ ಥ್ರೂ ಕರ್ನಾಟಕ. ಐ ವಾಂಟ್ ಯು ಟು ಕವರ್ ದಿ ಎಂಟೈರ್ ಯಾತ್ರ.  `ಓಕೆ  ಸರ್ಅಂತ ಹೇಳಿ` ಹೊರಗೆ ಬಂದವನಿಗೆ ಎದೆ ಹೊಡ್ಕೊಳ್ಳೋಕೆ ಶುರುವಾಯ್ತು.
ಅಲ್ಲಿವರೆಗೆ, ಒಂದೆರೆಡು ಮದ್ಯಂತರ ಚುನಾವಣೆ ವರದಿ ಮಾಡಿದ್ದು ಬಿಟ್ಟರೆ, ನಂಗೇನೂ ಅಂತಾ ಅನುಭವ ಇರಲಿಲ್ಲ. ಅದೂ ಅಲ್ದೆ, ಉಪ ಪ್ರಧಾನ ಮಂತ್ರಿ ಲಾಲ ಕೃಷ್ಣ ಅದ್ವಾನಿಯವರ ಭಾರತ ಉದಯ ಯಾತ್ರೆಯ ಕರ್ನಾಟಕ ಪ್ರವಾಸವನ್ನು ನಾನು ನೋಡಿಕೊಳ್ಳಬೇಕಿತ್ತು. ಸರಿ, ನಂಗೇನಂತೆ ಅನ್ಕೊಂಡು ಸಿದ್ದವಾಗೇ ಇದ್ದೆ.
ಅದ್ವಾನಿಯವರು ಕರ್ನಾಟಕ ಪ್ರವೇಶಿಸಿದ ತಕ್ಷಣ, ನಾನು ಅತ್ತಿಬೇಲೆಯಿಂದಲೇ ಬಿ.ಜೆ.ಪಿ.ಯವರು ನಮಗಾಗಿ ವ್ಯವಸ್ಥೆ ಮಾಡಿದ್ದ ವ್ಯಾನಿಗೆ ಹತ್ತಿಕೊಂಡೆ. ನನ್ನಂತೆ ಬೇರೆ ಬೇರೆ ಮಾಧ್ಯಮದಿಂದ ಬಂದ ಪ್ರತಿನಿಧಿಗಳನ್ನು ನೋಡಿಕೊಳ್ಳುವ ಉಸ್ತುವಾರಿಯನ್ನು, ಪಕ್ಷದ ಪ್ರಕಾಶ್ ವಹಿಸಿಕೊಂಡಿದ್ದ. ಅವನ ಜೊತೆಗೆ ಮೂರ್ನಾಲ್ಕು ಹುಡುಗರು ಬೇರೆ. ಆಗೆಲ್ಲ ಬಿ.ಜೆ.ಪಿ. ಪಕ್ಷದವರ ಜೊತೆ ಪ್ರವಾಸ ಎಂದರೆ, ಪತ್ರಕರ್ತರನ್ನು ಯಾವುದೇ ತೊಂದರೆ ಇಲ್ಲದಂತೆ ನೋಡಿಕೊಳ್ಳುತ್ತಾರೆ ಅಂತ ಹೇಳ್ತಿದ್ರು. ಆದ್ರೆ, ಇದು ನನ್ನ ಮೊದಲ ಪ್ರವಾಸವಾಗಿತ್ತು.
ಮೊದಮೊದಲು ತಮಾಷೆಯಾಗಿತ್ತು. ಯಾವುದಾದರೂ ಊರಿನ ಮಧ್ಯ ಅದ್ವಾನಿಯವರ ರಥ ನಿಂತ ತಕ್ಷಣ, ನಾವೆಲ್ಲಾ ವ್ಯಾನಿನಿಂದ ಇಳಿದು ಓಡುತ್ತಿದ್ದೆವು. ಅದ್ವಾನಿಯವರ ವ್ಯಾನಿನಲ್ಲಿ ಒಂದು ಚಿಕ್ಕ ಪ್ಲಾಟ್ ಫಾರ್ಮ್ ಇತ್ತು. ಅವರು ಅದರ ಮೇಲೆ ನಿಂತ ತಕ್ಷಣ, ವ್ಯಾನಿನ ಮೇಲ್ಚಾವಣಿ ತೆಗೆದುಕೊಂಡು, ಹೈಡ್ರಾಲಿಕ್ ಮೂಲಕ ಆ ಪ್ಲಾಟ್ ಫಾರ್ಮ್ ಮೇಲಕ್ಕೆ ಬರುತ್ತಿತ್ತು. ಅವರ ಒಂದೆರೆಡು ನಿಮಿಷದ ಭಾಷಣ ಮುಗಿದ ತಕ್ಷಣ, ನಾವು ವಾಪಾಸ್ ಓಡಬೇಕಿತ್ತು. ಯಾವುದೇ ವಾಹನ, ಯಾರಿಗೂ ಕಾಯುವಂತಿರಲಿಲ್ಲ. `ಟೈಟ್ ಸೆಕ್ಯುರಿಟಿ.
ಮೊದಲನೇ ದಿನ ಕಳೆದ ತಕ್ಷಣ ನಾವೆಲ್ಲ ಆರಾಮವಾದೆವು. ಓಡಾಟ ಕಮ್ಮಿಯಾಗಿತ್ತು. ಯಾಕೆಂದ್ರೆ, ಐದು ನಿಮಿಷಗಳ ಭಾಷಣದಲ್ಲಿ ಅದ್ವಾನಿಯವರು ಅಂಥಾ ತಲೆ ಹೋಗುವಂತದೇನೂ ಹೇಳ್ತಿರಲಿಲ್ಲ. ಶಿವಮೊಗ್ಗದಿಂದ ಸೊರಬಕ್ಕೆ ಹೋದ ತಕ್ಷಣ, ಟೈಮ್ಸ್ ಆಫ್ ಇಂಡಿಯಾದ ಅನಿತಾ ರಾವ್ ಕಾಶಿ, ಅದ್ವಾನಿಯವರಿದ್ದ ವ್ಯಾನ್ ಹತ್ತಿದಳು. ಅಲ್ಲಿಂದ ಮುಂದಿನ ನಿಲುಗಡೆಯಲ್ಲಿ ವಾಪಾಸ್ ನಮ್ಮ ವ್ಯಾನಿಗೆ ಬಂದು ಕೂತಳು. ಆಗಲೇ ನಂಗೆ ಗೊತ್ತಾಗಿದ್ದು, ಅವಳು ಅದ್ವಾನಿಯವರ ಸಂದರ್ಶನ ಮಾಡಿದ್ದಾಳೆ, ಅಂತ.
ಅವತ್ತು ರಾತ್ರಿ ಹುಬ್ಬಳ್ಳಿಯಲ್ಲಿ ಉಳಿದುಕೊಂಡಾಗ, ಬಿ.ಜೆ.ಪಿ ಯ ಪ್ರಕಾಶ್ ಜಾವಡೇಕರ್ ಅವರನ್ನು ಮಾತಾಡಿಸಿ, ನಾನು ಅದ್ವಾನಿಯವರನ್ನು ಸಂದರ್ಶಿಸಬೇಕು ಅಂತ ಕೇಳ್ದೆ. ಅವರು, ನಾಳೆ ದಾರಿಯಲ್ಲಿ ನೋಡೋಣ ಅಂದರು.
ಮಾರನೇ ದಿನ ಮಧ್ಯಾಹ್ನ, ಬಾಗಲಕೋಟೆಯಲ್ಲಿ ದೊಡ್ಡ ಸಮಾವೇಶ ಏರ್ಪಟ್ಟಿತ್ತು. ಅದು ಮುಗಿಯುವ ಹೊತ್ತಿಗೆ ಜಾವಡೇಕರ್ ನನ್ನ ಹತ್ತಿರ ಬಂದು, ಅದ್ವಾನಿಯವರ ವ್ಯಾನ್ ಹತ್ತಿಕೊಳ್ಳಲು ಹೇಳಿದರು. ಬಾಗಲಕೋಟೆಯಿಂದ, ಬಿಜಾಪುರದವರೆಗೆ ಎಲ್ಲೂ ನಿಲ್ಲುವುದಿಲ್ಲ ಎಂದೂ, ಅಷ್ಟು ಹೊತ್ತಿನಲ್ಲಿ ನಾನು ಅದ್ವಾನಿಯವರನ್ನು ಮಾತಾಡಿಸಬಹುದು ಅಂತ ಹೇಳಿದ್ರು.
ಆಗ ನನಗೆ ತಲೆ ಬಿಸಿ ಶುರುವಾಯ್ತು. ನಾನು ಅದ್ವಾನಿಯವರನ್ನು ಸಂದರ್ಶಿಸಬೇಕು ಅಂತ ಹೇಳಿದ್ರೂ, ಏನೂ ತಯಾರಿ ಮಾಡಿಕೊಂಡಿರಲಿಲ್ಲ. ಆಫೀಸಿನಲ್ಲೂ ಹೇಳಿರಲಿಲ್ಲ, ಸೀದ ಶಂತನು ದತ್ತ ಅವರಿಗೆ ಫೋನ್ ಮಾಡಿ, ಅದ್ವಾನಿಯವರ ಸಂದರ್ಶನ ಸಿಕ್ಕಿದೆ, ಮಾಡಬಹುದಾ? ಅಂತ ಕೇಳಿದೆ. ಅವರು ಖುಶಿಯಾಗಿ, ಮಾಡು ಅಂದರು.
ಅದ್ವಾನಿಯವರ ವ್ಯಾನ್ ಹತ್ತಿ ಒಂದು ಸಲ ಸುತ್ತ ನೋಡಿದೆ. ಕೂರಲು, ಮಲಗಲು ಮತ್ತು ಶೌಚಾಲಯದ ವ್ಯವಸ್ಥೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿದ್ದಾರೆ ಅನ್ನಿಸಿತು. ಅದರೊಳಗೆ, ನನ್ನನ್ನು ಬಿಟ್ಟರೆ, ಇನ್ನೊಬ್ಬ 10-12 ವರ್ಷದ ಹುಡುಗನಿದ್ದ. ಒಂದೈದು ನಿಮಿಷ ಬಿಟ್ಟು ಅದ್ವಾನಿಯವರು ವ್ಯಾನ್ ಹತ್ತಿದರು. ಮುಂದಿನ ಡ್ರೈವರ್ ಪಕ್ಕದ ಸೀಟಿನಿಂದ ಯಾವುದೋ ಪರಿಚಯದ ಧ್ವನಿ ಬಂದಂತಾಯ್ತು. ತಿರುಗಿ ನೋಡಿದರೆ, ಡ್ರೈವರ್ ಪಕ್ಕದಲ್ಲಿ, ಬಿ.ಜೆ.ಪಿ.ಯ ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಕೂತಿದ್ದರು. ಯಡಿಯೂರಪ್ಪನವರು ಮೌನವಾಗಿದ್ದರೆ, ಅನಂತ್ ಕುಮಾರ್ ಮಾತಾಡ್ತಾನೇ ಇದ್ದರು.
ವ್ಯಾನ್ ಹೊರಟ ತಕ್ಷಣ ಅದ್ವಾನಿಯವರು ನನ್ನ ಹೆಸರು ಮತ್ತೆ ಪೂರ್ವಾಪರವನ್ನೆಲ್ಲ ವಿಚಾರಿಸಿಕೊಂಡರು. ನಿಧಾನವಾಗಿ ಮಾತು ರಾಜಕೀಯದತ್ತ ಹೊರಳಿದಾಗ, ನಾನು ಸಂದರ್ಶನಕ್ಕೆ ತಯಾರಾದೆ.
ಆಗ ಬಿ.ಜೆ.ಪಿ.ಯು `ಭಾರತ ಪ್ರಕಾಶಿಸುತ್ತಿದೆ’ ಅನ್ನೋ ಘೋಷಣೆಯೊಂದಿಗೆ ಚುನಾವಣೆಗೆ ಹೊರಟಿದ್ದರು. ಆದ್ರೆ, ಸ್ವಲ್ಪ ದಿನಗಳ ಹಿಂದೆ, ಅದ್ವಾನಿಯವರು `ರೈತರು ಪ್ರಕಾಶಿಸುತ್ತಿಲ್ಲ,’ ಅಂತ ಹೇಳಿ, ದೊಡ್ಡ ಗುಲ್ಲೆದ್ದಿತ್ತು. ಸಂದರ್ಶನ ಶುರುವಾಗುತ್ತಲೇ ಕೇಳಿದೆ: `ನೀವು ರೈತರು ಪ್ರಕಾಶಿಸುತ್ತಿಲ್ಲ ಎಂದು ಹೇಳಿದಿರಿ ಅಂತ ಪತ್ರಿಕೆಗಳಲ್ಲಿ ತಪ್ಪಾಗಿ ವರದಿ ಆಗಿದೆಯೇ?’.
`ಹೌದು. ನಾನು ಹೇಳಿದ್ದು, ರೈತರು ಕೆಲವು ಕಷ್ಟಗಳನ್ನು ಎದುರಿಸುತ್ತಿದ್ದಾರೆ ಅಂತ. ನಮ್ಮ ಸರ್ಕಾರ ರೈತರಿಗಾಗಿ ….’ ಎಂದು ಅದ್ವಾನಿಯವರು ವಿವರಿಸುತ್ತಾ ಹೋದರು.
ಸ್ವಲ್ಪ ಹೊತ್ತು ಸುಮ್ಮನೆ ಕೇಳಿದ ನಾನು, ಮಧ್ಯ ಬಾಯಿ ಹಾಕಿ, `ಹಾಗಾದ್ರೆ, ರೈತರು ಪ್ರಕಾಶಿಸುತ್ತಿದ್ದಾರಾ? ಕರ್ನಾಟಕ, ತಮಿಳು ನಾಡು, ಮಹಾರಾಷ್ಟ್ರಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಉತ್ತರ ಭಾರತದಲ್ಲೂ ಇದು ಆಗುತ್ತಿದೆಯಲ್ಲ?’ ಅಂತ ಕೇಳಿದೆ.
ಅದಕ್ಕವರು, ರಾಜ್ಯ ಸರ್ಕಾರಗಳು, ರೈತರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಎಂದರು. ತಕ್ಷಣವೇ ನಾನು, `ಹಾಗಾದ್ರೆ, ಕೇಂದ್ರ ಸರ್ಕಾರಕ್ಕೆ ಯಾವುದೇ ಹೊಣೆಗಾರಿಕೆ ಇಲ್ಲವೇ?’ ಅಂತ ಕೇಳ್ದೆ.
ಅದ್ವಾನಿಯವರು ಹಿಂದಕ್ಕೆ ಒರಗಿ ಕುಳಿತು, ದೀರ್ಘವಾಗಿ ಉಸಿರೆಳೆದು, ಒಂದು ಮುಗುಳ್ನಗೆ ನಕ್ಕರು. ಆ ಮುಗುಳ್ನಗೆಯ ಹಿಂದೆ, ನೂರು ಅರ್ಥಗಳು ಅಡಗಿದ್ದವೇನೋ ಅನ್ನಿಸಿತು. ಹತ್ತೇ ಸೆಕೆಂಡಿನಲ್ಲಿ ಅವರ ಉತ್ತರವನ್ನು ಮುಂದುವರೆಸಿದರು.
ನಾನಂತೂ, ಆರು ವರ್ಷದ ಆಡಳಿತದಲ್ಲಿ, ಬಿ.ಜೆ.ಪಿ. ಕಾಂಗ್ರೆಸ್ ಗಿಂತ ಏನೂ ಕಡಿಮೆ ಇಲ್ಲದಂತೆ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬಂತೆಯೇ ಪ್ರಶ್ನೆಗಳನ್ನು ಹಾಕುತ್ತಿದ್ದೆ. ಅದ್ವಾನಿಯವರಂತೂ, ನನ್ನ ಪ್ರಶ್ನೆಗಳನ್ನು ಮೊದಲೇ ಊಹಿಸಿದಂತೆ ಉತ್ತರಗಳನ್ನು ಕೊಡುತ್ತಿದ್ದರು. ಕೆಲವು ಪ್ರಶ್ನೆಗಳು ಪೂರ್ತಿಯಾಗುವ ಮೊದಲೇ, ಅದ್ವಾನಿಯವರ ಉತ್ತರ ಶುರುವಾಗಿರುತ್ತಿತ್ತು. ಅವರು ಉತ್ತರ ಕೊಟ್ಟ ಮೇಲೆ, ನನಗೆ ಕೇಳಲು ಯಾವುದೇ ಉಪ ಪ್ರಶ್ನೆಗಳು ಉಳಿದಿರುತ್ತಿರಲಿಲ್ಲ.
ಹದಿನೈದು ನಿಮಿಷದಲ್ಲಿ ಸಂದರ್ಶನ ಮುಗಿದು ಹೋಗಿತ್ತು. ನಾನು ಮೊದಲು ನೋಡಿದ್ದ ಹುಡುಗ, ಅದ್ವಾನಿಯವರ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಿದ್ದ. ಅವತ್ತೇ ಗೊತ್ತಾಗಿದ್ದು ನನಗೆ, ಅದ್ವಾನಿಯವರಿಗೆ ಕುರುಕು ತಿಂಡಿಗಳು ಅಂದ್ರೆ ಇಷ್ಟ ಅಂತ. ಊಟವಾಗಿ ಅರ್ಧ ಘಂಟೆಯೂ ಆಗಿರಲಿಲ್ಲ – ರವೆ ಉಂಡೆ, ಚಕ್ಕುಲಿ, ಕೋಡುಬಳೆಗಳನ್ನು, ಒಂದರ ಹಿಂದೊಂದರಂತೆ ಕುರುಕುತ್ತಿದ್ದರು. ಈ ವಯಸ್ಸಿನಲ್ಲೂ ಹೀಗೆ ತಿನ್ನುವುದನ್ನು ನೋಡಿ, ನನಗೆ ಆಶ್ಚರ್ಯವಾಯ್ತು.
ನಂಗೇನೋ ಅದ್ವಾನಿಯವರ ಮೇಲೆ ವಿಪರೀತ ಗೌರವ ಶುರುವಾಯ್ತು. ಅವರು ಉತ್ತರ ಕೊಡುತ್ತಿದ್ದ ರೀತಿ ನೋಡಿ, ನನ್ನಂಥ ಎಷ್ಟು ಪುಡಿ ಪತ್ರಕರ್ತರನ್ನು ಕೊಡವಿ ಬಿಸಾಕಿರಬಹುದು, ಅಂತ ಯೋಚನೆ ಮಾಡುತ್ತಿದ್ದೆ. ಆದರೆ, ಅದ್ವಾನಿಯವರಿಗೆ ನಾನು ಇಷ್ಟವಾಗಲಿಲ್ಲ ಅಂತಾನೂ ಅನ್ನಿಸ್ತು.
ನಾನು ಅವರ ಬಾಲ್ಯದ ಮತ್ತು ಪಾಕಿಸ್ಥಾನ ವಿಭಜನೆಯ ಬಗ್ಗೆ ಕೇಳಲು ಹೊರಟಾಗ, ಅವರು ಪಕ್ಕದಲ್ಲಿದ್ದ ಪುಸ್ತಕ ಎತ್ತಿಕೊಂಡು ಓದಲು ಶುರುಮಾಡಿದ್ರು. ಮುಂದೆ ಕುಳಿತ್ತಿದ್ದ ಅನಂತ್ ಕುಮಾರ್, `ಆ ಪುಸ್ತಕ ಚೆನ್ನಾಗಿದೆ ಅಂತ ಕೇಳಿದ್ದೇನೆ,’ ಅಂತ ಹೇಳಿದಾಗ, ಅದ್ವಾನಿಯವರು, `ನೀವು ಓದಿದ್ರೆ ಮಾತ್ರ ಹೇಳಬೇಕು. ಯಾರೋ ಹೇಳಿದ್ದು ಕೇಳಿಕೊಂಡು ಅಭಿಪ್ರಾಯ ಕೊಡಬಾರದು,’ ಅಂದ್ರು.
ಬಿಜಾಪುರ ತಲುಪಿದ ತಕ್ಷಣ, ನಾನು ನನ್ನ ವ್ಯಾನಿಗೆ ಹೋದೆ. ಹಾಗೇ, ಶಂತನು ದತ್ತರಿಗೆ ಫೋನ್ ಮಾಡಿ, ಸಂದರ್ಶನದ ಬಗ್ಗೆ ಹೇಳಿದೆ. ಆಗಲೇ, ಸಂಜೆಯಾಗಿತ್ತು. ಬಿಜಾಪುರದಲ್ಲಿ ಸಮಾವೇಶ ಬೇರೆ ಇತ್ತು. `ಒಳ್ಳ ಸಂದರ್ಶನ. ಇವತ್ತು ಆಗದೇ ಹೋದ್ರೂ ಪರವಾಗಿಲ್ಲ, ನಾಳೆ ಫೈಲ್ ಮಾಡು,’ ಅಂತ ಶಂತನು ದತ್ತ ಹೇಳಿದ್ರು.
ಆದ್ರೆ, ಮಾರನೇ ದಿನ ವಾಪಾಸ್ ಬರುವುದಿತ್ತು. ಸಮಾವೇಶ ಮುಗಿದ ತಕ್ಷಣ, ಇಂಟರ್ ನೆಟ್ ಪಾರ್ಲರ್ ಗೆ ಹೋಗಿ, ಸಮಾವೇಶದ ವರದಿ ಮತ್ತು ಸಂದರ್ಶನ, ಎರಡನ್ನೂ ಮುಗಿಸಿ ಕಳುಹಿಸಿದೆ. ರಾತ್ರಿ ಸಂಧರ್ಶನದ ಬಗ್ಗೆ ತಲೆ ಕೆಡಿಸಿಕೊಳ್ಳಲು ಸಮಯವೇ ಆಗಲಿಲ್ಲ. ಒಂಬತ್ತು ಘಂಟೆಗೆ ಹೋಟೆಲ್ ರೂಮಿಗೆ ಬಂದು ಸ್ನಾನ ಮಾಡಿ ಮುಗಿಸಿಕೊಳ್ಳುವ ಸಮಯದಲ್ಲಿ, ತಿಕೋಟಾದ ಶಾಸಕರಾದ ಶಿವಾನಂದ ಪಾಟೀಲರ ಹಿಂಬಾಲಕರು ಬಂದು, ನನ್ನನ್ನು ಕರೆದುಕೊಂಡು ಹೋದರು. ನಾನು ಬಿಜಾಪುರಕ್ಕೆ ಬರುವುದು ತಿಳಿದ ಪಾಟೀಲರು, ರಾತ್ರಿ ಊಟಕ್ಕೆ ಸಿಗುವಂತೆ ಹೇಳಿದ್ದರು. ಅವರ ಜೊತೆ ಊಟ ಮಾಡಿ ಬರುವ ಹೊತ್ತಿಗೆ, ಬೆಳಗ್ಗಿನ ಜಾವ ಮೂರು ಘಂಟೆ. ಆರು ಘಂಟೆಗೆ ಎದ್ದು ವಾಪಾಸ್ ಹೊರಟೆವು.
ಬೆಂಗಳೂರಿಗೆ ಬಂದ ಮಾರನೇ ದಿನ, ನಮ್ಮ ಪೇಪರ್ ನಲ್ಲಿ ಅದ್ವಾನಿಯವರ ಸಂದರ್ಶನ ಬಂದಿರಲಿಲ್ಲ. ಅದು, ನನ್ನ ಪತ್ರಕರ್ತ ಜೀವನದ ಅತಿ ದೊಡ್ಡ ಸಂದರ್ಶನ ಅಂದ್ಕೊಂಡಿದ್ದೆ. ಜಾಗ ಇರಲಿಲ್ಲ ಅಂತ ಕಾಣುತ್ತೆ ಅನ್ಕೊಂಡೆ. ಆಫೀಸಿಗೆ ಬಂದಾಗ, ಮಟ್ಟು ಮತ್ತು ಶಂತನು ದತ್ತ ಒಳ್ಳೆ ಕೆಲಸ ಮಾಡಿದ್ದೀಯ ಅಂತ ಹೇಳಿದ್ರು. ನಾನು ಸಂದರ್ಶನದ ಬಗ್ಗೆ ಕೇಳಿದಾಗ, ಅದನ್ನು ಎಲ್ಲಾ ಎಡಿಷನ್ ಗಾಗಿ, ಚೆನೈಗೆ ಕಳುಹಿಸಲಾಗಿದೆ ಅಂದರು.
ಮಾರನೇ ದಿನ ಬೆಳಗ್ಗೆ, ನಮ್ಮ ಪತ್ರಿಕೆಯ ಮುಖಪುಟದಲ್ಲಿ ಅದ್ವಾನಿಯವರ ಸಂದರ್ಶನ ಪ್ರಕಟವಾಗಿತ್ತು. ಆದರೆ, ಅದು ನಾನು ಮಾಡಿದ ಸಂದರ್ಶನವಾಗಿರಲಿಲ್ಲ. ನಮ್ಮ ಪತ್ರಿಕೆಯ ದೆಹಲಿಯ ಬಾತ್ಮೀದಾರಳಾಗಿದ್ದ ಅನಿತಾ ಸಲೂಜಾ ಎಂಬ ಮಹಿಳೆ, ನಾಗಪುರದಲ್ಲಿ ಮಾಡಿದ್ದಳು. ಇಡೀ ಸಂದರ್ಶನದಲ್ಲಿ, ಬಿ.ಜೆ.ಪಿ ಯ ವಿರುದ್ದವಾದ ಯಾವುದೇ ಪ್ರಶ್ನೆಗಳಿರಲಿಲ್ಲ.
ಆಫೀಸಿಗೆ ಹೋದವನಿಗೆ, ಇದರ ಬಗ್ಗೆ ಕೆದುಕಬೇಕು ಅಂತ ಅನ್ನಿಸಲಿಲ್ಲ. ಮಟ್ಟೂ ನನ್ನನ್ನು ಕರೆದು ತೋರಿಸದರು. `ಬೆಳಗ್ಗೆ ನೋಡ್ದೆ,’ ಅಂತ ಶುಷ್ಕ ನಗು ನಕ್ಕೆ.
`ನೆನ್ನೆ ಸಾಯಂಕಾಲದವರೆಗೆ ನಮಗೂ ಗೊತ್ತಿರಲಿಲ್ಲ. ಅನಿತಾ ಸಲೂಜಾ ದೆಹಲಿಯಿಂದ ವಿಮಾನದಲ್ಲಿ ನಾಗಪುರಕ್ಕೆ ಬಂದು, ಅಲ್ಲಿ ಸಂದರ್ಶನ ಮಾಡಿದಳಂತೆ. ಈ ಸಂದರ್ಶನ ಹಾಕಿಕೋಬೇಕು ಅಂತ ಚೆನೈನಿಂದ ನಮಗೆ ಸೂಚನೆ ಬಂತು,’ ಅಂದ್ರು.
ನಾನೇನೂ ಮಾತಾಡ್ಲಿಲ್ಲ. ಅದ್ವಾನಿಯವರ ಮುಗುಳ್ನಗೆ ಒಮ್ಮೆ ಕಣ್ಣಮುಂದೆ ಹಾದು ಹೋಯ್ತು.


ಮಾಕೋನಹಳ್ಳಿ ವಿನಯ್ ಮಾಧವ

ಶುಕ್ರವಾರ, ಜೂನ್ 22, 2012

ಬಲಿದಾನ


ಯಾಕೋ, ಅವನ ತಮ್ಮ ಹೇಳಿದ್ದೇ ಸರಿ ಅನ್ಸುತ್ತೆ

ಕಂಪ್ಯೂಟರ್ ಮುಂದೆ ಏನೋ ಮಾಡ್ತಾ ಕೂತಿದ್ದವನು ಸುಮ್ಮನೆ ತಲೆ ಎತ್ತಿ ನೋಡ್ದಾಗ, ನಮ್ಮ ಎಡಿಟರ್ ಕೃಷ್ಣ ಪ್ರಸಾದ್ (ಕೆ.ಪಿ) ನನ್ನ ಕಡೇನೇ ಬರ್ತಿದ್ದಾರೆ ಅನ್ನಿಸಿತ್ತು. ವಿಜಯ ಟೈಮ್ಸ್ ಗೆ ಸೇರಿ ಮೂರ್ನಾಲ್ಕು ತಿಂಗಳಾಗಿತ್ತಷ್ಟೆ. ನನ್ನ ಮತ್ತೆ ಕೆ.ಪಿ ಸಂಬಂಧ ಅಷ್ಟೇನೂ ಸರಿ ಇರಲಿಲ್ಲ.
ನೇರವಾಗಿ ಮಾತಾಡ್ತಾರೆ ಅನ್ನಿಸಿದ್ರೂ, ಸ್ವಲ್ಪ ತಿಕ್ಕಲುತನ ಇದೆ ಅನ್ನಿಸಿತ್ತು. ಒಂದೆರೆಡು ಸಲ ನೇರವಾಗಿ ಜಗಳಕ್ಕೂ ಇಳಿದ ಮೇಲೆ, ನಂಗ್ಯಾಕೆ ಬೇಕು ಅಂತ ಮಾತನ್ನೇ ಕಡಿಮೆ ಮಾಡ್ದೆ.
ಕೈಯಲ್ಲೊಂದು ರಬ್ಬರ್ ಚೆಂಡು ಹಿಡ್ಕೊಂಡು, ಕ್ರಿಕೆಟ್ ಬೌಲಿಂಗ್ ಥರ ಕೈ ತಿರುಗಿಸುತ್ತಾ, ರಿಪೋರ್ಟಿಂಗ್ ವಿಭಾಗದ ಉದ್ದಗಲಕ್ಕೂ ಓಡಾಡೋದು ಕೆ.ಪಿ. ಯ ಅಭ್ಯಾಸ ಕೂಡ. ಹಾಗಾಗಿ ನಾನೂ ತಲೆ ಕೆಡಿಸಿಕೊಳ್ಳದೆ, ಸುಮ್ಮನೆ ನನ್ನ ಕೆಲಸ ಮುಂದುವರೆಸಿದೆ.
ನನ್ನ ಪಕ್ಕ ಬಂದು ನಿಂತವರೇ ಕೇಳಿದ್ರು: `ಮಂಜುನಾಥ್ ಶಣ್ಮುಗಂ ನೆನಪಿದ್ಯಾ?’
ಹಾಗೇ ತಲೆ ಎತ್ತಿ, ಚುಟುಕಾಗಿ ಉತ್ತರಿಸಿದೆ: `ಮುಂದಿನ ವಾರಕ್ಕೆ ಒಂದು ವರ್ಷ ಆಗ್ತಿದೆ, ಅವನ ಕೊಲೆಯಾಗಿ.’
`ಮತ್ತೆ ನೀನೇನು ಮಾಡ್ತೀಯ ಅದಕ್ಕೆ?’ ಅಂತ ಕೇಳಿದ್ರು.
`ನಾಳೆ ಕೆ.ಜಿ.ಎಫ್. ಗೆ ಹೋಗಿ ಅವರ ಮನೆಯವರ್ನ ಮೀಟ್ ಮಾಡ್ತೀನಿ. ಆಮೇಲೇನಾಗುತ್ತೆ ನೋಡೋಣ,’ ಅಂದೆ.
`ಸ್ಪೇಸ್ ಬಗ್ಗೆ ತಲೆ ಕೆಡಿಸ್ಕೋಬೇಡ. ಪ್ಯಾಕೇಜ್ ಮಾಡು. ಚೆನ್ನಾಗಿರ್ಬೇಕು,’ ಅಂತ ಹೇಳಿದವರು, ನನ್ನ ಪ್ರತಿಕ್ರಿಯೆಗೂ ಕಾಯದೆ ಮುಂದೆ ಹೋದ್ರು.
ಕೆಲಸದ ವಿಷಯ ಬಂದಾಗ ಕೆ.ಪಿ. ಯಾವಾಗಲೂ ಗಂಭೀರವಾಗಿರುತ್ತಿದ್ದರು. ಸುತ್ತ ನಾಲ್ಕೈದು ಜನ ಇದ್ದಾಗ ಮಾತ್ರ ಸ್ವಲ್ಪ ಲೂಸಾಗಿ ಮಾತಾಡ್ತಿದ್ರು. ನಂಗದು ಇಷ್ಟವಾಗ್ತಿರ್ಲಿಲ್ಲ.
ಮಾರನೇ ದಿನ ಎದ್ದವನೇ ಕೆ.ಜಿ.ಎಫ್ ಗೆ ಹೊರಟೆ. ಅಲ್ಲೇ ರಾಬರ್ಟ್ ಸನ್ ಪೇಟೆಯಲ್ಲಿ ಕೇಳ್ದಾಗ, ಮಂಜುನಾಥ್ ಮನೆ ಹುಡುಕೋದು ಕಷ್ಟವಾಗ್ಲಿಲ್ಲ. ಊರ ಹೊರಗಿನ ಸಣ್ಣ ಮನೆ. ಶಣ್ಮುಗಂ ಮತ್ತು ಅವರ ಹೆಂಡತಿ ಪ್ರಮೀಳ ಇಬ್ಬರೇ ಇದ್ದರು. ಮಗನನ್ನು ಕಳೆದುಕೊಂಡು ಒಂದು ವರ್ಷವೂ ಆಗಿಲ್ಲ, ಇವರನ್ನು ಏನಂತ ಮಾತಾಡ್ಸೋದು?, ಅಂತ ಯೋಚನೆ ಮಾಡ್ತಿದ್ದಾಗಲೆ, ಆ ದಂಪತಿಗಳು ಆತ್ಮೀಯವಾಗಿ ಒಳಗೆ ಬರಮಾಡಿಕೊಂಡರು.
ಮಂಜುನಾಥ್ ಕೊಲೆ ಪ್ರಕರಣ ರಾಷ್ಟ್ರದಾದ್ಯಂತ ಸುದ್ದಿ ಮಾಡಿತ್ತು. ಇಂಡಿಯನ್ ಆಯಿಲ್ ಕಾರ್ಪೋರೇಶನ್ ನಲ್ಲಿ ಅಧಿಕಾರಿಯಾಗಿದ್ದ ಅವರು, ಉತ್ತರ ಪ್ರದೇಶದ ಲಖೀಮ್ ಪುರ್ ಖೀರಿ ಅನ್ನೋ ಜಾಗದಲ್ಲಿ, ಪೆಟ್ರೋಲ್ ಕಲಬರೆಕೆ ಮಾಡುವವರ ವಿರುದ್ದ ಸಮರ ಸಾರಿದ್ದರು. ಅಲ್ಲಿನ ಮಾಫಿಯಾ ಅವರಿಗೆ ಗುಂಡು ಹೊಡೆದು ಕೊಂದು ಹಾಕಿ, ಅವರ ದೇಹವನ್ನು ಎಸೆಯಲು ಹೋಗುವಾಗ ಪೋಲಿಸರ ಕೈಗೆ ಸಿಕ್ಕಿಹಾಕಿಕೊಂಡಿದ್ದರು. ಕೆಲವು ದಿನಗಳ ಹಿಂದೆ, ರಾಷ್ಟ್ರೀಯ ಹೆದ್ದಾರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ದಕ್ಷ ಅಧಿಕಾರಿಯಾಗಿದ್ದ ಸತ್ಯೇಂದ್ರ ದುಬೆ ಅನ್ನುವವರನ್ನೂ, ಮಾಫಿಯಾ ಬಿಹಾರಿನಲ್ಲಿ ಕೊಂದು ಹಾಕಿತ್ತು. ಮಂಜುನಾಥ್ ಕೊಲೆ ಮಾಡಿದವರಿಗೆ ಉಗ್ರ ಶಿಕ್ಷೆ ಕೊಡ್ಬೇಕು ಅಂತ ದೇಶದಾದ್ಯಂತ ಕೂಗೆದ್ದಿತ್ತು.
ಮಂಜುನಾಥನ ತಂದೆ ಮತ್ತು ತಾಯಿ, ತಮ್ಮ ಮಗ ಸತ್ತು ಹೋಗಿದ್ದಾನೆ ಅಂತ ನಮಗೆ ಅನ್ನಿಸ್ತನೇ ಇಲ್ಲ. ``ಇಲ್ಲೆಲ್ಲೋ ಓಡಾಡ್ಕೊಂಡು ಇದ್ದಾನೆ ಅನ್ನಿಸ್ತದೆ. ರಮಣ ಮಹರ್ಷಿಯವರಿಂದ ಬಹಳ ಪ್ರಭಾವಿತನಾಗಿದ್ದ,’’ ಅಂತ ಭಾವುಕರಾಗಿ ಹೇಳಿದರು. ಅವರ ಇನ್ನೊಬ್ಬ ಮಗ ರಾಘವೇಂದ್ರ ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದಾನೆ ಅಂತ ಹೇಳಿ, ಅವನ ನಂಬರ್ ಕೊಟ್ಟರು. ಹಾಗೇನೆ, ಮಂಜುನಾಥನ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಲು ಓಡಾಡುತ್ತಿದ್ದ ಅವನ ಆತ್ಮೀಯ ಗೆಳೆಯ ಅಖಿಲ್ ನಂಬರ್ ಕೂಡ ಕೊಟ್ಟರು.
ಅಖಿಲ್ ಫೋನಿಗೆ ಸಿಕ್ಕಿದ ತಕ್ಷಣ ಎಲ್ಲಾ ವಿವರಗಳನ್ನು ಕೊಟ್ಟ. ಕೇಸ್ ಏನಾಗ್ತಿದೆ, ಟ್ರಸ್ಟ್ ಕೆಲಸ ಎಲ್ಲಿವರೆಗೆ ಬಂದಿದೆ ಮತ್ತು ಮಂಜುನಾಥನ ಹಳೇ ಸಹಪಾಠಿಗಳು ಹೇಗೆ ಸಹಕರಿಸುತ್ತಿದ್ದಾರೆ ಅನ್ನುವುದನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದ. ಆದ್ರೆ, ರಾಘವೇಂದ್ರ ಮಾತ್ರ ಯಾಕೋ ಹಿಂದೇಟು ಹೊಡೆದ.
ಯಾಕೆ, ಏನು ಅಂತ ನೂರೆಂಟು ಪ್ರಶ್ನೆಗಳನ್ನು ಕೇಳಿದ ಮೇಲೆ, `ಸರ್, ನನ್ನ ತಂದೆ, ತಾಯಿಯವರನ್ನು ಮಾತಾಡ್ಸಿದ ಮೇಲೆ, ನಾನೂ ಮಾತಾಡ್ಬೇಕಾ? ಸಿಗಲೇ ಬೇಕಾ?’ ಅಂತೆಲ್ಲ ಕೇಳೋಕೆ ಶುರು ಮಾಡ್ದ. ಇವನ್ಯಾಕೋ ಎಡವಟ್ಟು ಗಿರಾಕಿ ಅನ್ನಿಸ್ತು. ಏನೇ ಆಗ್ಲಿ ಅಂತ, ಸಿಗಲೇ ಬೇಕು ಅಂತ ಹಟ ಹಿಡಿದೆ. ಒಂದೆರೆಡು ದಿನ ಒದ್ದಾಡಿದ ಅವನು, ಅವತ್ತೊಂದು ದಿನ ಬೆಳಗ್ಗೆ ಬನ್ನೇರುಘಟ್ಟ ರಸ್ತೆಯ, ಐ.ಐ.ಎಂ. ಹತ್ತಿರ ಸಿಗಲು ಒಪ್ಪಿಕೊಂಡ.
ಪಕ್ಕದ ಹೋಟೆಲ್ ಒಂದರಲ್ಲಿ ತಿಂಡಿಗೆ ಇಬ್ಬರೂ ಕೂತೆವು. ಎಂ.ಟೆಕ್. ಮಾಡಿಕೊಂಡು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಾಘವೇಂದ್ರ, ಯಾಕೋ ಚಡಪಡಿಸುತ್ತಿದ್ದ. ನಾನು ತಿಂಡಿ ಆರ್ಡರ್ ಮಾಡಿದ ತಕ್ಷಣ ಹೇಳ್ದ: `ನಾನು ಹೀಗೆ ಹೇಳ್ತೀನಿ ಅಂತ ತಪ್ಪು ತಿಳ್ಕೋಬೇಡಿ ಸರ್. ನೀವೆಲ್ಲಾ ಯೋಚನೆ ಮಾಡೋ ಹಾಗೆ ನಾನು ಮಾಡೋಲ್ಲ ಸರ್.’
`ಅಂದ್ರೆ?’
`ಅದೇ ಸರ್, ನಮ್ಮಣ್ಣ ದೇಶಕ್ಕಾಗಿ ತ್ಯಾಗ ಮಾಡಿದ್ದಾನೆ, ಹೋರಾಡಿದ್ದಾನೆ, ಹುತಾತ್ಮ ಅಂತೆಲ್ಲ ಪೇಪರ್ ನಲ್ಲಿ ಬರೀತಾರಲ್ಲ, ನಾನು ಹಾಗೆ ಯೋಚನೆ ಮಾಡೋಲ್ಲ ಸರ್. ನನ್ನ ಪ್ರಕಾರ, ನನ್ನಣ್ಣ ಒಬ್ಬ ಮೂರ್ಖ,’ ಅಂತ ತಣ್ಣಗೆ ಹೇಳಿದ.
ನಾನವನ ಮುಖವನ್ನೇ ನೋಡುತ್ತಿದ್ದರೆ, ಅವನು ಎಲ್ಲೋ ನೋಡುತ್ತ, ಏನೋ ಯೋಚಿಸುತ್ತಿದ್ದ. ಒಂದೆರೆಡು ನಿಮಿಷ ನಾವಿಬ್ಬರೂ ಮಾತಾಡಲಿಲ್ಲ. ಕೊನೆಗೆ ಅವನೇ ಮುಂದುವರೆಸಿದ: `ಸರ್, ನನಗೆ ಮತ್ತು ಸುಜಾತಾಗೆ (ಸಹೋದರಿ) ಅಣ್ಣನೇ ಎಲ್ಲಾ ಆಗಿದ್ದ. ಅವನಿಂದಾಗಿಯೇ ನಾನು ಇಷ್ಟೆಲ್ಲಾ ಚೆನ್ನಾಗಿ ಓದಿದ್ದು. ತುಂಬಾನೇ ಪ್ರೀತಿಯಿಂದ ನೋಡಿಕೊಂಡ. ಏನೇ ಅದ್ರೂ, ಅಣ್ಣ ಇದ್ದಾನೆ ಅಂತ ಧೈರ್ಯ ಇತ್ತು. ಜೀವನದಲ್ಲಿ ಹಾಗೆ ಮಾಡ್ತೀನಿ, ಹೀಗೆ ಮಾಡ್ತೀನಿ ಅಂತ ಏನೇನೋ ಕನಸು ಕಟ್ಟಿಕೊಂಡಿದ್ದೆ. ಅದಕ್ಕೂ ಅಣ್ಣ ಇದ್ದಾನೆ ಅನ್ನೋ ಧೈರ್ಯನೆ.  ಈಗ ನೋಡಿ ಸರ್, ನಾನು ಬೆಂಗಳೂರಲ್ಲಿ ಇದ್ರೂ ನನ್ನ ತಂದೆ, ತಾಯಿಗೆ ಹೆದರಿಕೆ. ದಿನಕ್ಕೆ ನಾಲ್ಕು ಸಲ ಫೋನ್ ಮಾಡ್ತೀನಿ, ಅಂತೂ ಅವರಿಗೆ ಸಮಾಧಾನ ಇಲ್ಲ. ಹೆದರ್ಕೊಂಡು ಬದುಕೋ ಪರಿಸ್ಥಿತಿ ಬಂದಿದೆ. ನಂಗೇನಾಗುತ್ತೋ ಅಂತ ನನ್ನ ತಂದೆ ತಾಯಿಯರು ಹೆದರ್ಕೋತ್ತಾರೆ, ಅವರಿಗೇನಾಗುತ್ತೋ ಅಂತ ನಾನು ಹೆದರ್ಕೋತ್ತೀನಿ. ಬದುಕಲ್ಲಿ ಕಾನ್ಫಿಡೆನ್ಸೇ ಇಲ್ಲದ ಹಾಗಾಗಿದೆ,’ ಅಂದ.
`ಅದ್ಸರಿ ಸರ್, ನನ್ನಣ್ಣ ಅಲ್ಲಿಗೆ ಹೋಗೋ ಮುಂಚೆ ಕರಪ್ಷನ್ ಇರ್ಲಿಲ್ವಾ? ಅವನು ಸತ್ತ ದಿನಾನೇ ಅದು ನಿಂತು ಹೋಯ್ತಾ? ಮುಂದೆ ಕರಪ್ಷನ್ ಇರಲ್ವಾ? ಹಾಗಾದ್ರೆ, ಇವ್ನು ಸತ್ತು ಸಾಧಿಸಿದ್ದು ಏನು? ನಾನೇನು ನನ್ನ ಅಣ್ಣ ಮಾಫಿಯಾ ಜೊತೆ ಸೇರಿ ದುಡ್ಡು ಮಾಡ್ಬೇಕು ಅಂತ ಹೇಳ್ಲಿಲ್ಲ. ಅವನು ಈ ವಿಷಯ ನನ್ನ ಹತ್ರ ಹೇಳಿ, ಈ ಮಾಫೀಯಾದವರು ಕೆಟ್ಟ ಜನ ಅಂತ ಹೇಳಿದ್ದ. ನಾನವನಿಗೆ ಹುಶಾರಾಗಿರಲು ಹೇಳಿದ್ದೆ. ಎಲ್ಲಾದನ್ನೂ ಒಂದೇ ಸಲ ತಲೇ ಮೇಲೆ ಎಳ್ಕೊಂಡು, ಹೊರಟೇ ಹೋದ. ನಂಗೀಗ ಅಣ್ಣನೂ ಇಲ್ಲ, ಮುಂದೆ ಏನಾದ್ರು ಸಲಹೆ ಬೇಕು ಅಂದ್ರೆ ಕೊಡೋರೂ ಇಲ್ಲ. ತುಂಬಾ ಡಿಪೆಂಡ್ ಆಗಿದ್ದೆ ಸರ್, ಅವನ ಮೇಲೆ,’ ಅಂತ ಕಣ್ಣಲ್ಲಿ ನೀರು ತುಂಬ್ಕೊಂಡು ಹೇಳ್ದ.
ಮಂಜುನಾಥ್ ಸತ್ತ ಮೇಲೆ, ಅವನ ಕೆಲಸವನ್ನು ರಾಘವೇಂದ್ರನಿಗೆ ಕೊಡ್ತೀವಿ ಅಂತ ಕಂಪನಿಯವರು ಹೇಳಿದ್ರಂತೆ. ತಂದೆ, ತಾಯಿನ ನೋಡ್ಕೋಬೇಕು, ಹಾಗಾಗಿ ದಕ್ಷಿಣ ಭಾರತದಲ್ಲಿ ಪೋಸ್ಟಿಂಗ್ ಕೊಡ್ತೀವಿ ಅಂತ ಮಾತು ಕೊಟ್ರೆ ಸೇರ್ತೀನಿ ಅಂದನಂತೆ. ಆದ್ರೆ, ಕಂಪನಿಯವರು ಯಾವುದೇ ಥರದ ಆಶ್ವಾಸನೆ ಕೊಡಲು ಆಗೋದಿಲ್ಲ ಅಂದ್ರಂತೆ. `ನೋಡಿ ಸರ್, ಇದು ನನ್ನ ಪರಿಸ್ಥಿತಿ. ನಾನು ಪ್ರೈವೇಟ್ ಕಂಪನಿಯಲ್ಲಿ ಈಗ ಕೆಲಸ ಶುರು ಮಾಡಿದ್ದೀನಿ. ನಂದೂ ಎಜ್ಯುಕೇಶನ್ ಸಾಲ ಬಾಕಿ ಇದೆ. ನಿಧಾನವಾಗಿ ತೀರಿಸ್ಕೊಳ್ತೀನಿ. ಆದ್ರೆ, ನಮ್ಮಣ್ಣ ಮಾತ್ರ, ವಿನಾಕಾರಣ ಜೀವ ಕಳ್ಕೊಂಡ, ಅಷ್ಟೆ,’ ಅಂತ ರಾಘವೇಂದ್ರ ಹೇಳ್ದಾಗ, ನನಗೇನು ಹೇಳ್ಬೇಕು ಅಂತ ಗೊತ್ತಾಗಲಿಲ್ಲ.
`ನೋಡು ರಾಘವೇಂದ್ರ, ಒಂದು ಕೆಟ್ಟ ಘಟನೆ ಆಯ್ತು ಅಂತ, ಜೀವನಾನ ನೆಗೆಟಿವ್ ಆಗಿ ತಗೋಬೇಡ. ನಿಮ್ಮಣ್ಣನನ್ನು ಕೊಲೆ ಮಾಡಿದವರಿಗೆ ಶಿಕ್ಷೆ ಆಗೇ ಆಗುತ್ತೆ,’ ಅಂದೆ.
`ಇಲ್ಲ ಸರ್. ಜೀವನಾನ ನನ್ನ ಜಾಗದಲ್ಲಿ ನಿಂತು ನೋಡಿ. ಈಗಲ್ಲದಿದ್ರೂ, ಇನೈದು ವರ್ಷದಲ್ಲಾದ್ರೂ ನಿಮಗೆ ಗೊತ್ತಾಗುತ್ತೆ… ನಾನು ಹೇಳಿದ್ದು ಸರಿ ಅಂತ. ನಮ್ಮಣ್ಣನನ್ನು ಕೊಲೆ ಮಾಡಿದವರಿಗೆ ಶಿಕ್ಷೆಯಾಗುವುದರಿಂದ, ನನ್ನ ಅಣ್ಣನ ಜಾಗವನ್ನು ಯಾರೂ ತುಂಬೋದಿಲ್ಲವಲ್ಲ. ಶಿಕ್ಷೆ ಕಟ್ಕೊಂಡು ನಂಗೇನಾಗ್ಬೇಕು?’ ಅಂದ.
`ಆಂಗ್ರಿ ಯಂಗ್ ಮ್ಯಾನ್… ಮುಂದೆ ಸರಿಯಾಗ್ತಾನೆ,’ ಅನ್ಕೊಂಡು ಆಫೀಸಿಗೆ ಬಂದೆ. ಅವತ್ತೇ ಸ್ಟೋರಿ ಮುಗಿಸಿ, ಕೆ.ಪಿ.ಗೆ ಮೇಲ್ ಮಾಡ್ದೆ. ಎರಡು ದಿನ ಬಿಟ್ಟು ನೋಡಿದ್ರೆ, ಅರ್ಧ ಪುಟಕ್ಕಿಂತ ಹೆಚ್ಚು ಜಾಗ ಕೊಟ್ಟು, ನನ್ನ ಸ್ಟೋರಿ ತಗೊಂಡಿದ್ರು. ಬೆಂಗಳೂರಿನ ಯಾವುದೇ ಪೇಪರ್ ಸಹ ಮಂಜುನಾಥನ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ.
ಸಾಯಂಕಾಲದ ಹೊತ್ತಿಗೆ ನನ್ನ ಫೋನ್ ಗೆ ಒಂದು ಮೆಸೆಜ್ ಬಂತು. ಚುರುಮುರಿ ಬ್ಲಾಗ್ ನೋಡು. ಕೆ.ಪಿ. ನಿನ್ನ ಬಗ್ಗೆ ಬರೆದಿದ್ದಾರೆ, ಅಂತ. ಹಾಗೇ ಬ್ಲಾಗ್ ತೆಗೆದು ನೋಡ್ದೆ. `ಮಂಜುನಾಥನಂತ ಹೀರೋವನ್ನು ಎಲ್ಲರೂ ಮರೆತಿದ್ದಾಗ, ಅವನ ಬಗ್ಗೆ ಅಧ್ಬುತವಾದ ಲೇಖನ ಬರೆದಿರುವ ವಿನಯ್ ಮಾಧವ್ ಗೆ ಅಂಭಿನಂದನೆಗಳು,’ ಅಂತ ಬರ್ದಿದ್ರು. ವಿಚಿತ್ರ ಮನುಷ್ಯ ಅನ್ನಿಸಿತು. ನಾನು ಮತ್ತೆ ಕೆ.ಪಿ. ಸರಿಯಾಗಿ ಮಾತಾಡಿ ಒಂದು ತಿಂಗಳ ಹತ್ತಿರ ಆಗಿತ್ತು. ಅದನ್ನೇನೂ ಅವರು ತಲೆಗೆ ಹಚ್ಚಿಕೊಂಡಿರಲಿಲ್ಲ.
ಮುಂದಿನ ನಾಲ್ಕೈದು ತಿಂಗಳಲ್ಲಿ, ಲಖೀಮ್ ಪುರದ ಕೋರ್ಟ್, ಮಂಜುನಾಥನ ಕೊಲೆ ಪ್ರಕರಣದಲ್ಲಿ ಬಂದಿತರಾಗಿದ್ದ ಎಲ್ಲಾ ಎಂಟು ಜನರಿಗೆ ಶಿಕ್ಷೆ ವಿಧಿಸಿತ್ತು. ಪೆಟ್ರೋಲ್ ಬಂಕಿನ ಮಾಲಿಕನಿಗೆ ಗಲ್ಲು ಶಿಕ್ಷೆಯನ್ನೂ ವಿಧಿಸಿತ್ತು. ರಾಘವೇಂದ್ರನಿಗೆ ಫೋನ್ ಮಾಡಿ ಹೇಳೋಣ ಅನ್ಕೊಂಡೆ, ಸುಮ್ಮನಾದೆ.
ಎರಡು ವರ್ಷಗಳ ಬಳಿಕ, ಅಲಹಾಬಾದ್ ಹೈಕೋರ್ಟ್, ಪೆಟ್ರೋಲ್ ಬಂಕ್ ಮಾಲಿಕನ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತು. ಹಾಗೇ, ಎಂಟು ಆರೋಪಿಗಳಲ್ಲಿ, ಮೂರುಜನರನ್ನು ಬಿಡುಗಡೆಗೊಳಿಸಿತು. ಈಗ ಕೇಸ್ ಸುಪ್ರೀಂ ಕೋರ್ಟ್ ನಲ್ಲಿದೆ.
ಒಂದೊಂದ್ಸಲ, ಮಂಜುನಾಥ್ ನೆನಪಾದಗಲೆಲ್ಲ, ರಾಘವೇಂದ್ರ ಹೇಳಿದ್ದೇ ಸರಿ ಅಂತ ಅನ್ನಿಸ್ತದೆ.


ಮಾಕೋನಹಳ್ಳಿ ವಿನಯ್ ಮಾಧವ್


ಶುಕ್ರವಾರ, ಜೂನ್ 15, 2012

ದರೋಡೆಕೋರರು


ಅದೇ… ಸ್ಟುವರ್ಟ್ ಪುರಂ ಪೋಲಿಸ್ ಸ್ಟೇಷನ್


ಮೊನ್ನೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಓದಿದೆ…. ಡಕಾಯಿತರ ಗುಂಪೊಂದು ಯುವಕನಿಗೆ ಹೊಡೆದದ್ದಲ್ಲದೆ, ಮನೆ ಲೂಟಿ ಮಾಡಿ ಹೋಗುವಾಗ, ಗಾಯಗೊಂಡ ಯುವಕನಿಗೆ ಪ್ರಥಮ ಚಿಕಿತ್ಸೆ ಕೂಡ ಕೊಟ್ಟು ಹೋದರಂತೆ.
ಪಕ್ಕನೆ ನೆನಪು ಬಂದಿದ್ದು ಒಂದೇ ಹೆಸರು…. ಸ್ಟುವರ್ಟ್ ಪುರಂ ಪೋಲಿಸ್ ಸ್ಟೇಷನ್. ಮತ್ತೆ ಬಂದರಾ ಅಲ್ಲಿಂದ ಜನಗಳು ಅಂತ ಅನ್ನಿಸ್ತು. ಹತ್ತು ವರ್ಷಗಳ ಮೇಲಾಗಿದೆ, ಅಲ್ಲಿಂದ ಜನಗಳು ಬೆಂಗಳೂರಿನ ಕಡೆಗೆ ಬಂದು. ಬರೋಕೆ ಸಾಧ್ಯನೇ ಇಲ್ಲ ಅಂತಾನೂ ಅನ್ನಿಸ್ತದೆ. ಯಾಕೆಂದ್ರೆ, ಜೀವನ ಅಷ್ಟೊಂದು ಬದಲಾಗಿ ಬಿಟ್ಟಿದೆ.
ತೊಂಬತ್ತರ ದಶಕದಲ್ಲಿ, ಈ ಹೆಸರನ್ನು ಇಟ್ಟುಕೊಂಡು ಚಿರಂಜೀವಿ ಒಂದು ಸಿನಿಮಾ ಕೂಡ ಮಾಡಿದ್ದರು. ಆ ಸಿನಿಮಾಕ್ಕೂ, ಈ ಜನಗಳಿಗೂ, ಯಾವುದೇ ಸಂಬಂಧಗಳಿಲ್ಲ.
1997-98 ರಲ್ಲಿ ಇರಬೇಕು. ಬೆಂಗಳೂರಿನ ಹೊರವಲಯವಾಗಿದ್ದ ರಾಮಮೂರ್ತಿ ನಗರ, ಬಾಣಸವಾಡಿ, ಕೆ.ಆರ್.ಪುರಂ, ಕೆಂಗೇರಿ, ಯಲಹಂಕ, ವೈಟ್ ಫೀಲ್ಡ್, ಕಾಡುಗೋಡಿ ಮುಂತಾದ ಕಡೆಗಳಲ್ಲಿ ಡಕಾಯಿತಿ ಶುರುವಾಯ್ತು. ಹೆಚ್ಚಿನ ಕಡೆ, ತೋಟದ ಮನೆಗಳು ಮತ್ತು ಹೊಸದಾಗಿ ಬರುತ್ತಿರುವ ಬಡಾವಣೆಗಳಲ್ಲಿ ಈ ಡಕಾಯಿತರು ದರೋಡೆ ಮಾಡುತ್ತಿದ್ದರು.
ಎಲ್ಲಾ ಕಡೆಗಳಲ್ಲೂ ಒಂದೇ ಥರದ ದಾಳಿ ನೆಡೆಸುತ್ತಿದ್ದರು. ಮೊದಲು ಟೆಲಿಫೋನ್ ವೈರ್ ಕತ್ತರಿಸಿ, ಆಮೇಲೆ ಕರೆಂಟ್ ತೆಗೆದು, ಮನೆಗಳ ಬಾಗಿಲು ತಟ್ಟುತ್ತಿದ್ದರು. ಮೊಬೈಲ್ ಫೋನ್ ಗಳು ಇಲ್ಲದ ಆ ಕಾಲದಲ್ಲಿ, ಜನಗಳಿಗೆ ಸಹಾಯಕ್ಕೆ ಕರೆಯಲು ಯಾವುದೇ ಸಾಧನಗಳಿರುತ್ತಿರಲಿಲ್ಲ. ಬಾಗಿಲು ತೆರೆಯದಿದ್ದರೆ, ಬಾಗಿಲು ಒಡೆಯುವುದಾಗಿ ಬೆದರಿಸುತ್ತಿದ್ದರು. ಸಾಧಾರಣವಾಗಿ, ಮನೆಯೊಳಗಿದ್ದವರು ಬಾಗಿಲು ತೆಗೆಯುತ್ತಿದ್ದರು.
ಒಂದು ಸಲ ಬಾಗಿಲು ತೆಗೆದ ತಕ್ಷಣ, ಮನೆಯೊಳಗಿದ್ದವರನ್ನೆಲ್ಲ ಒಂದು ಕೋಣೆಯೊಳಗೆ ಕೂಡಿಹಾಕಿ, ಯಾರಾದರೊಬ್ಬರಿಗೆ ಚಿನ್ನ ಮತ್ತು ಹಣ ಇಟ್ಟಿರುವ ಜಾಗ ತೋರಿಸುವಂತೆ ಬೆದರಿಸುತ್ತಿದ್ದರು. ಮನೆ ದೋಚಿದ ನಂತರ, ಆ ಮನೆಯ ಒಬ್ಬರನ್ನು ಕರೆದುಕೊಂಡು ಹೋಗಿ, ಪಕ್ಕದ ಮನೆ ಬಾಗಿಲು ತಟ್ಟಿ ಎಬ್ಬಿಸುವಂತೆ ಹೇಳುತ್ತಿದ್ದರು. ಹಾಗೆ, ಒಂದರ ಹಿಂದೊಂದು, ಐದಾರು ಮನೆಗಳನ್ನು ದೋಚಿ, ಜಾಗ ಖಾಲಿ ಮಾಡುತ್ತಿದ್ದರು.
ಆಗಿನ ಅಪರಾಧಿ ಜಗತ್ತು, ಈಗಿನಂತೆ ಇರಲಿಲ್ಲ. ರೋಲ್ ಕಾಲ್ ಮಾಡುವ ರೌಡಿ ಗುಂಪುಗಳು, ಒಂದೆರೆಡು ಕೊಲೆಗಳು, ಸರಗಳ್ಳತನ, ಇವೇ ಮುಂತಾದವು ನೆಡೆಯುತ್ತಿದ್ದವು. ಡಕಾಯಿತಿ ಮತ್ತು ಕೋಮು ಗಲಭೆಗಳು ತುಂಬಾ ದೊಡ್ಡ ವಿಷಯಗಳಾಗುತ್ತಿದ್ದವು. ಕ್ರೈಂ ರಿಪೋರ್ಟಿಂಗ್ ಆಗ ತಾನೆ ಶುರು ಮಾಡಿಕೊಂಡಿದ್ದ ನಾನು, ಎಲ್ಲೇ ಡಕಾಯತಿಯಾದರೂ ಹೋಗಿ ಬರುತ್ತಿದ್ದೆ. ದೊಣ್ಣೆಗಳನ್ನು ಹಿಡಿದುಕೊಂಡು, ಹೆಂಗಸರು, ಮಕ್ಕಳನ್ನು ಹೆದರಿಸಿ, ಹೊಡೆದು ಬಡಿದು ಎಲ್ಲವನ್ನೂ ದೋಚುವ ಈ ಡಕಾಯಿತರಿಗೆ ಗುಂಡು ಹಾರಿಸಿ ಕೊಲ್ಲಬೇಕು ಅನ್ನಿಸ್ತಿತ್ತು. ಹಾಗೇ ಒಂದು ದಿನ, ರಾಮುಮೂರ್ತಿನಗರದಲ್ಲಿ, ಒಂದು ಹೊಸ ಬಡಾವಣೆಯಲ್ಲಿ ಡಕಾಯಿತಿ ಆಯ್ತು ಅಂತ ಸುದ್ದಿ ಬಂತು, ಸರಿ, ಬೈಕ್ ಹತ್ತಿದವನೇ, ಅಲ್ಲಿಗೆ ಹೋದೆ. ಡಕಾಯಿತರು ಏಳು ಮನೆಗಳನ್ನು ಲೂಟಿ ಮಾಡಿದ್ದರು. ಎಲ್ಲರೂ ಹೊಸದಾಗಿ ಮನೆ ಕಟ್ಟಿಕೊಂಡು ಬಂದಿದ್ದರಿಂದ, ಹೆಚ್ಚಿನ ಹಣವೇನೂ ಹೋಗಿರಲಿಲ್ಲ. ಚಿನ್ನ ಮಾತ್ರ ಪೂರ್ತಿ ಖಾಲಿ ಮಾಡಿದ್ದರು.
ಹಾಗೇ ಹೋಗುತ್ತಿದ್ದಾಗ, ಪೋಲಿಸರ ಜೊತೆ ಇಬ್ಬರು ಮಾತಾಡುತ್ತಿರುವುದು ಕಂಡು, ಹತ್ತಿರ ಹೋದೆ. ಒಬ್ಬ ಮಾತ್ರ ಪೋಲಿಸರ ಜೊತೆ ಮಾತಾಡ್ತಾ ಇದ್ದ. ಇನ್ನೊಬ್ಬ ತಲೆ ಅಲ್ಲಾಡಿಸ್ತಿದ್ದ. ಏನಾದ್ರೂ ಕೇಳದ್ರೆ, ಪೇಪರ್ ಮೇಲೆ ಬರೆದು ತೋರಿಸುತ್ತಿದ್ದ. ಆದರೆ,  ತುಂಬಾ ಶಾಂತವಾಗಿದ್ದ. ಮೂಕನಿರಬೇಕು ಅನ್ಕೊಂಡೆ.
ಪೋಲಿಸ್ ಅವರಿಬ್ಬರನ್ನು ಬಿಟ್ಟು ಮುಂದೆ ಹೋದಾಗ, ನಾನು ಹೋಗಿ ಪೋಲಿಸರನ್ನ ಸೇರ್ಕೊಂಡೆ. `ಮೂಕನಾ ಸರ್?’ ಅಂತ ಕೇಳ್ದೆ.
`ಇಲ್ಲರೀ. ಮಾತೆಲ್ಲ ಚೆನ್ನಾಗಿ ಬರುತ್ತೆ. ಅದೇನೋ ಮೌನ ವ್ರತವಂತೆ. ಅದಕ್ಕೆ ಪಕ್ಕದ ಮನೆಯವರು, ಅವರ ಪರವಾಗಿ ಮಾತಾಡ್ತಾ ಇದ್ರು,’ ಅಂದ್ರು.
`ಇವ್ರ ಮನೆನೂ ದರೋಡೆ ಆಯ್ತಾ?’ ಅಂತ ಕೇಳ್ದೆ.
`ಆಗಿದೆ. ಪಕ್ಕದ ಮನೆಯವನೇ ಬಾಗಿಲು ತಟ್ಟಿ ತೆಗೆಸಿದವನು. ಈಯಪ್ಪ ಏನೂ ಮಾತಾಡಲಿಲ್ಲವಂತೆ. ದರೋಡೆಕೋರರು ಹೋಗೋವರೆಗೂ ಸುಮ್ಮನೆ ಒಂದು ಕಡೆ ನಿಂತ್ಕೊಂಡು ನೋಡ್ತಿದ್ದನಂತೆ,’ ಅಂದ ಪೋಲಿಸರು ಮುಂದಿನ ಮನೆ ಕಡೆಗೆ ಹೊರಟರು.
ವಿಚಿತ್ರ ಅನ್ನಿಸಿತು. ಏನಾದ್ರಾಗಲಿ ಅಂತ ಧೈರ್ಯ ಮಾಡಿ, ಆ ಮೌನಿ ಬಾಬನ ಕಡೆಗೆ ಹೋಗಿ, ನನ್ನ ಪರಿಚಯ ಮಾಡಿಕೊಂಡೆ. ಅವನ ಬದಲು, ಅವನ ಪಕ್ಕದ ಮನೆಯವನೇ ಮಾತಾಡ್ದ. ಪಕ್ಕದ ಮನೆಯವನ ಹೆಸರೇನೋ ಕೃಷ್ಣ ಅಂತ ಇರಬೇಕು. ಡಕಾಯಿತರು ಮೊದಲು ಕೃಷ್ಣನ ಮನೆಯನ್ನು ದೋಚಿದ್ದಾರೆ. ಆಮೇಲೆ, ಪಕ್ಕದ ಮನೆಯವರನ್ನು ಎಬ್ಬಿಸಲು ಹೇಳಿದ್ದಾನೆ. ಪಕ್ಕದ ಮನೆಯ ಯಜಮಾನನ್ನು ಬಿಟ್ಟು ಇನ್ನುಳಿದವರೆಲ್ಲ ಊರಿಗೆ ಹೋಗಿದ್ದರಂತೆ. ಪಕ್ಕದ ಮನೆಯವರ ಮೌನ ವ್ರತದ ಬಗ್ಗೆ ಗೊತ್ತಿದ್ದ ಕೃಷ್ಣ, ಅವನೇ ಡಕಾಯಿತರಿಗೆ ಮಾರ್ಗದರ್ಶಿಯಾಗಿದ್ದಾನೆ.
`ತುಂಬಾ ಕೆಟ್ಟವರು ಅಂತ ಅನ್ನಿಸ್ಲಿಲ್ಲ ಸರ್. ಇವರಿಗೆ ಮೌನ ವ್ರತ ಇದೆ ಅಂತ ಹೇಳಿದ ತಕ್ಷಣ, ಎಲ್ಲರೂ ಇವರಿಗೆ ಕೈ ಮುಗಿದು, ಮೂಲೆಯಲ್ಲಿ ನಿಲ್ಲಲು ಹೇಳಿದ್ರು. ಆಮೇಲೆ, ಬೀರುವಿನ ಕೀ ಇಸ್ಕೊಂಡು, ಚಿನ್ನವನ್ನೆಲ್ಲ ತಗೊಂಡ್ರು. ಹೋಗ್ತಾ ಇದ್ದಾಗ, ದೇವರ ಮುಂದೆ ಇದ್ದ ಹುಂಡಿಗೆ ಒಬ್ಬ ಕೈ ಹಾಕ್ದ. ಇನ್ನೊಬ್ಬ ಅದೇನು ಅಂತ ಕೇಳ್ದ. ಆ ಹುಂಡಿಯಲ್ಲಿರುವ ದುಡ್ಡನ್ನು ತಿರುಪತಿಯ ಹುಂಡಿಗೆ ಹಾಕೋಕೆ ಅಂತ ಇಟ್ಟಿದ್ದಾರೆ ಅಂತ ನಾನು ಹೇಳ್ದೆ. ತಕ್ಷಣ, ಒಬ್ಬರಾದ ಮೇಲೆ ಒಬ್ಬರು ದೇವರಿಗೆ ಅಡ್ಡ ಬಿದ್ದು, ಆ ಹುಂಡಿಗೆ ಜೇಬಿನಿಂದ ದುಡ್ಡು ತೆಗೆದು ಹಾಕಿ, ಅದನ್ನೂ ತಿರುಪತಿಗೆ ತಲುಪಿಸಲು ಹೇಳಿದ್ರು,’ ಅಂದ ಕೃಷ್ಣ.
`ಆಗ ಇವ್ರೇನು ಮಾಡ್ತಿದ್ರು?’ ಅಂತ ಕೇಳ್ದೆ.
`ಇವ್ರದ್ದು ಮೌನ ವ್ರತ ಅಲ್ವಾ ಸರ್? ಸುಮ್ಮನೆ ನಿಂತ್ಕೊಂಡು ತಲೆ ಆಡಿಸ್ತಿದ್ರು,’ ಅಂದ ಕೃಷ್ಣ. ಹುಚ್ಚಾಬಟ್ಟೆ ನಗು ಬಂದ್ರೂ ನಗೋ ಹಾಗೆ ಇರ್ಲಿಲ್ಲ. ಸುಮ್ಮನೆ ತಲೆ ಅಲ್ಲಾಡಿಸಿ, ಅಲ್ಲಿಂದ ಜಾಗ ಖಾಲಿ ಮಾಡ್ದೆ.
ಯಾಕೋ ಈ ಡಕಾಯಿತರು ಡಿಫರೆಂಟ್ ಅನ್ನಿಸ್ತು. ಚೆನ್ನಾಗಿ ಯೋಚನೆ ಮಾಡ್ದಾಗ, ಇವರು ಯಾರಿಗೂ ಹೊಡೆದು, ಬಡಿದು ಮಾಡಿದ ದಾಖಲೆಗಳಿರಲಿಲ್ಲ. ಒಂದು ಸಲ ಮಾತ್ರ, ಒಬ್ಬ ಗಲಾಟೆ ಮಾಡಿದ ಹೆಂಗಸಿಗೆ ಹೊಡೆದನಂತೆ. ತಕ್ಷಣ, ಅವನ ಗುಂಪಿನ ಇನ್ನೊಬ್ಬ, ಇವನಿಗೇ ಚೆನ್ನಾಗಿ ಬಾರಿಸಿ, ಆ ಹೆಂಗಸಿನ ಕ್ಷೆಮೆ ಕೇಳುವಂತೆ ಮಾಡಿದನಂತೆ.
ಇನ್ನೊಂದು ಸಲ, ಇವರು ದರೋಡೆ ಮಾಡುವಾಗ, ಚಿಕ್ಕ ಮಗುವಿಗೆ ಎಚ್ಚರವಾಗಿ ಅಳಲು ಶುರು ಮಾಡ್ತಂತೆ. ತಕ್ಷಣವೇ ಗುಂಪಿನಲ್ಲಿದ್ದ ಇಬ್ಬರು ತಮ್ಮ ದೋಚುವ ಕೆಲಸ ಬಿಟ್ಟು, ಆ ಮಗುವಿನ ತಾಯಿಗೆ ಗ್ಯಾಸ್ ಸ್ಟೋವ್ ಹಚ್ಚಲು ಹೇಳಿ, ಹಾಲು ಬಿಸಿ ಮಾಡುವಂತೆ ಹೇಳಿದರಂತೆ. ತಾಯಿ ಹಾಲು ಬಿಸಿ ಮಾಡುವಾಗ, ಒಬ್ಬ ಮಗುವಿನ ಫೀಡಿಂಗ್ ಬಾಟಲ್ ತೊಳೆದು ತಾಯಿಯ ಕೈಗೆ ಕೊಟ್ಟನಂತೆ.
ಇವೆಲ್ಲ ಬೇರೆ ಬೇರೆ ಕಡೆಗಳಲ್ಲಿ, ಬೇರೆ ಬೇರೆ ಸಂದರ್ಭಗಳಲ್ಲಿ ಆದ ಘಟನೆಗಳು. ಅವನ್ನೆಲ್ಲ ಒಟ್ಟಿಗೆ ಸೇರಿಸಿದಾಗ, ಈ ಡಕಾಯಿತರು ಯಾವ ನಮೂನೆಯ ಪ್ರಾಣಿಗಳು ಅಂತ ಅರ್ಥವಾಗಲಿಲ್ಲ. ಒಬ್ಬಿಬ್ಬರನ್ನು ಕೇಳಿ ನೋಡಿದಾಗ, ಅವರಿಗೂ ಗೊತ್ತಿರಲಿಲ್ಲ.
ಒಂದೆರೆಡು ದಿನ ಬಿಟ್ಟು ಯಾವುದೋ ಕೆಲಸದ ಮೇಲೆ ಮಾಗಡಿ ರೋಡ್ ಪೋಲಿಸ್ ಸ್ಟೇಷನ್ ಗೆ ಹೋಗಿದ್ದೆ. ಅಲ್ಲಿನ ಇನ್ಸ್ ಪೆಕ್ಟರ್ ನಾಗರಾಜ್ ಜೊತೆ ಮಾತಾಡ್ತಾ, ಮೌನಿ ಬಾಬಾನ ಕಥೆ ಹೇಳಿ ನಗೋಕೆ ಶುರು ಮಾಡ್ದೆ. ಹಾಗೇನೆ, ದರೋಡೆ ಮಾಡಿದ ದುಡ್ಡನ್ನ ಹುಂಡಿಗೆ ಹಾಕಿದ ಕಥೆನೂ ಹೇಳ್ದೆ.
ಅಲ್ಲಿವರೆಗೆ ನಾಗರಾಜ್ ದರೋಡೆಕೋರರ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ. ನಾನು ಹೇಳ್ತಿದ್ದ ಹಾಗೆ, `ಆ ಮನೆಗಳೆಲ್ಲ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿದ್ದಾವಾ? ಅವರು ತೆಲುಗು ಮತ್ತೆ ಹಿಂದಿ ಮಾತಾಡ್ತಾರಾ?’ ಅಂತ ಕೇಳಿದ್ರು.
ಸ್ವಲ್ಪ ಯೋಚನೆ ಮಾಡ್ದಾಗ, ನಾನು ಎಲ್ಲಾ ಸ್ಥಳಗಳಿಗೆ ಹೋಗುವಾಗ ರೈಲ್ವೆ ಟ್ರ್ಯಾಕ್ ಹತ್ತಿರದಲ್ಲಿರೋದು ನೆನಪಾಯ್ತು. ಅವರು ತೆಲುಗು ಮತ್ತೆ ಹಿಂದಿ ಭಾಷೆಯಲ್ಲಿ ಮಾತಾಡೋದು ಸರಿಯಾಗೇ ಇತ್ತು. `ಯಾರಿವರು?’ ಅಂತ ಕೇಳ್ದೆ.
`ಗ್ಯಾರಂಟಿಯಾಗಿ ಹೇಳೋಕ್ಕಾಗೋಲ್ಲ. ಇವರೆಲ್ಲ ಸ್ಟುವರ್ಟ್ ಪುರಂ ಕಡೆಯಿಂದ ಬಂದಿರಬಹುದು. ಆದ್ರೆ ಅಲ್ಲಿ ಜನ ಸುಮಾರು ಐದಾರು ವರ್ಷಗಳಿಂದ ಬಂದಿಲ್ಲ,’ ಅಂದ್ರು.
ಎಪ್ಪತ್ತನೇ ದಶಕದ ಕೊನೆ ಭಾಗದಲ್ಲಿರಬಹುದು. ಬೆಂಗಳೂರಿನ ಸುತ್ತ ಮುತ್ತ ದರೋಡೆಕೋರರ ಹಾವಳಿ ಶುರುವಾಗಿತ್ತು. ಪೋಲಿಸರಿಗೆ ಇದು ದೊಡ್ಡ ತಲೆನೋವಾಗಿತ್ತು. ಒಂದೆರೆಡು ಕಡೆ, ದರೋಡೆಕೋರರು ಮನೆಯವರನ್ನು ಹೊಡೆದು ಕೊಲೆ ಸಹ ಮಾಡಿದ್ದರು. ಅದಕ್ಕಾಗಿ ವಿಶೇಷವಾದ ತಂಡವನ್ನೂ ರಚಿಸಿದ್ದರು.
ಸುಮಾರು ದಿನ ತೆನಿಖೆ ನೆಡೆಸಿದ ಮೇಲೆ, ಪೋಲಿಸರು ಇದು ಎರಡು ಬೇರೆ ಬೇರೆ ತಂಡಗಳಿಂದ ನೆಡೆಯುತ್ತಿರುವ ದರೋಡೆ ಅಂತ ಗೊತ್ತಾಯ್ತು. ಒಂದು ತಂಡ ಮನೆ ಬಾಗಿಲನ್ನು ಕಲ್ಲು, ಹಾರೆಗಳಿಂದ ಒಡೆದು ಹಾಕಿ, ಮನೆಯ ಒಳಗಿದ್ದವರ ಮೇಲೆ ಹಲ್ಲೆ ನೆಡೆಸಿ, ಇದ್ದದ್ದನ್ನು ದೋಚಿಕೊಂಡು ಹೋಗುತ್ತಿದ್ದರು. ಎರಡನೇ ಗುಂಪು ಮಾತ್ರ ಹಾಗಲ್ಲ. ಮನೆಯ ಕರೆಂಟ್ ಮತ್ತು ಟೆಲಿಫೋನ್ ಕತ್ತರಿಸಿ, ಮಾತಲ್ಲೇ ಹೆದರಿಸಿ ಬಾಗಿಲು ತೆಗೆಯುವಂತೆ ಮಾಡುತ್ತಿದ್ದರು. ಹೆಂಗಸರು ಮತ್ತು ಮಕ್ಕಳನ್ನು ಗೌರವದಿಂದ ಕಾಣುತ್ತಿದ್ದ ಈ ಗುಂಪು, ಯಾರಿಗೂ ಹೊಡೆಯುತ್ತಿರಲಿಲ್ಲ. ದರೋಡೆಯಾದ ಎಲ್ಲಾ ಮನೆಗಳೂ ರೈಲ್ವೆ ಟ್ರ್ಯಾಕ್ ಹತ್ತಿರದಲ್ಲೇ ಇರುತ್ತಿದ್ದವು.
ಮೊದಲನೆ ಗುಂಪು ಬೇಗನೆ ಸಿಕ್ಕಿಹಾಕಿಕೊಂಡಿತ್ತು. ಅದೊಂದು ಕಲ್ಲು ವಡ್ಡರ ಗುಂಪು. ಎರಡನೇ ಗುಂಪು ರೈಲ್ವೇ ಟ್ರ್ಯಾಕ್ ಹತ್ತಿರವೇ ಯಾಕೆ ದರೋಡೆ ಮಾಡ್ತಾರೆ ಅಂತ ಪೋಲಿಸರಿಗೆ ಗೊತ್ತಾಗಲಿಲ್ಲ.
ಕೊನೆಗೆ, ರೈಲ್ವೆ ಸ್ಟೇಷನ್ನ ಪ್ಲಾಟ್ ಪಾರ್ಮ್ ನಲ್ಲಿ ಪೋಲಿಸರು ಹಮಾಲಿಗಳಂತೆ ಕೆಲಸ ಮಾಡೋಕೆ ಶುರುಮಾಡಿದ್ದ ಗುಂಪಿನಲ್ಲಿ ನಾಗರಾಜ್ ಕೂಡ ಇದ್ದರು. ಒಂದೆರೆಡು ದಿನಗಳಲ್ಲೇ ಪೋಲಿಸರಿಗೆ ಒಂದು ಅಲೆಮಾರಿ ಗುಂಪಿನ ಮೇಲೆ ಅನುಮಾನ ಬಂತು. ಆ ಗುಂಪಿನ ಹೆಂಗಸರು ಬಿದಿರಿನ ಬುಟ್ಟಿ ಹೆಣೆಯುತ್ತಿದ್ದರೆ, ಗಂಡಸರು ಸುಮ್ಮನೆ ಕುಳಿತುಕೊಂಡಿರುತ್ತಿದ್ದರು. ಮಧ್ಯದಲ್ಲಿ ರೈಲ್ವೇ ಟ್ರ್ಯಾಕ್ ಪಕ್ಕದಲ್ಲಿ ನೆಡೆದುಕೊಂಡು ಹೋಗಿ, ಎಷ್ಟೋ ಹೊತ್ತಿನಮೇಲೆ ವಾಪಾಸ್ ಬರುತ್ತಿದ್ದರು. ಅವರನ್ನು ಹಿಡಿಯೋಕೆ ಹೋದಾಗ, ಒಂದು ನಾಲ್ಕು ಜನರನ್ನು ಬಿಟ್ಟು, ಇನ್ನೆಲ್ಲರೂ ತಪ್ಪಿಸಿಕೊಂಡಿದ್ದರು. ಆಗಲೇ ಬೆಂಗಳೂರು ಪೋಲಿಸರಿಗೆ ಸ್ಟುವರ್ಟ್ ಪುರಂ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿದ್ದು.
ಸ್ಟುವರ್ಟ್ ಪುರಂ, ಆಂದ್ರಪ್ರದೇಶದ ರಾಯಲ್ ಸೀಮಾ ಬರಡು ಪ್ರದೇಶದಲ್ಲಿರುವ ಒಂದು ಊರು. ಇಲ್ಲಿರುವ ಹೆಚ್ಚಿನವರೆಲ್ಲ ಮಣ್ಣು ವಡ್ಡರು. ಶತಮಾನಗಳಿಂದ ದರೋಡೆಯನ್ನೇ ಕಸುಬಾಗಿಟ್ಟುಕೊಂಡವರು. ಬ್ರಿಟಿಶರು ಸಹ ಸ್ಟುವರ್ಟ್ ಪುರಂ ಸಹವಾಸಕ್ಕೆ ಹೆಚ್ಚಾಗಿ ಹೋಗುತ್ತಿರಲಿಲ್ಲವಂತೆ.
ಆದರೆ, ಬದಲಾವಣೆ ಬಂದಿದ್ದು ಸ್ಟುವರ್ಟ್ ಎನ್ನೋ ಬ್ರಿಟಿಶ್ ಪೋಲಿಸ್ ಆಫಿಸರ್ ಅಲ್ಲಿಗೆ ಟ್ರಾನ್ಸ್ ಫರ್ ಆಗಿ ಬಂದ ಮೇಲೆ. ನೂರಾರು ಕಿಲೋಮೀಟರ್ ಹರಡಿರುವ ಈ ಪ್ರದೇಶದಲ್ಲಿ ಅವನು ಮಾಡಿದ ಮೊದಲ ಕೆಲಸ ಅಂದರೆ, ಒಂದು ಪೋಲಿಸ್ ಸ್ಟೇಶನ್ ಸ್ಥಾಪಿಸಿದ್ದು. ಅದಾದ ಮೇಲೆ, ಅಲ್ಪ ಸ್ವಲ್ಪ ವ್ಯವಸಾಯಕ್ಕೆ ಯೋಗ್ಯವಾದ ಜಾಗವನ್ನು ಗುರುತಿಸಿ, ಯಾರಾದರೂ ದರೋಡೆ ಅಥವಾ ಯಾವುದಾರೂ ಅಪರಾಧ ಮಾಡಿದವರನ್ನು ಹಿಡಿದುಕೊಂಡು ಬಂದು, ಅಲ್ಲಿ ಅವರಿಗೆ ವ್ಯವಸಾಯವನ್ನು ಕಲಿಸುತ್ತಿದ್ದನಂತೆ. ಸ್ವಲ್ಪ ವರ್ಷಗಳಲ್ಲಿ ಸ್ಟುವರ್ಟ್ ಜನಪ್ರಿಯನಾಗಿ, ಅಪರಾಧ ಮಾಡದಿದ್ದವರೂ ಸಹ ಅಲ್ಲಿ ಬಂದು ಕೆಲಸ ಮಾಡೋಕೆ ಶುರು ಮಾಡಿದರಂತೆ. ಯಾಕೆಂದ್ರೆ, ಬೆಳೆಯ ಒಂದು ಪಾಲನ್ನು ಸ್ಟುವರ್ಟ್, ಕೆಲಸ ಮಾಡಿದವರಿಗೇ ಕೊಡುತ್ತಿದ್ದನಂತೆ. ಸ್ಟುವರ್ಟ್ ತೀರಿಹೋದ ಮೇಲೂ ಈ ವ್ಯವಸ್ಥೆ ಹಾಗೇ ಮುಂದುವರೆಯಿತಂತೆ. ಸ್ವಾತಂತ್ರ್ಯಾನಂತರ ಇದನ್ನು ಆಂದ್ರ ಸರ್ಕಾರದವರು ನೆಡೆಸಿಕೊಂಡು ಹೋಗುತ್ತಿದ್ದಾರೆ, ಅಂತ ನಾಗರಾಜ್ ಹೇಳಿದ್ರು.
ಎಷ್ಟೇ ಜನ ಬದಲಾದರೂ, ನೂರಾರು ಕಿಲೋಮೀಟರ್ ಇರೋ ಈ ಬೆಂಗಾಡಿನಲ್ಲಿ ಎಲ್ಲರನ್ನ ಬದಲಿಸೋಕ್ಕೆ ಸಾಧ್ಯವಂತೂ ಇರಲಿಲ್ಲ. ಯಾರ ಕೈಗೂ ಸುಲಭವಾಗಿ ಸಿಗದ ಈ ಜನಗಳು, ಪೋಲಿಸರು ಬರೋ ಸೂಚನೆ ಸಿಕ್ಕಿದ ತಕ್ಷಣ, ಬೆಂಗಾಡಿನ ಮಣ್ಣು ದಿಬ್ಬಗಳ ನೆಡೆವೆ  ಕಣ್ಮರೆಯಾಗುತ್ತಿದ್ದರಂತೆ.
ಈ ಊರಿನ ಕೆಲವು ಧಣಿಗಳು, ಈ ಮಣ್ಣುವಡ್ಡರನ್ನು ಸಾಕುತ್ತಿದ್ದರಂತೆ. ಈ ಮಣ್ಣು ವಡ್ಡರು ದರೋಡೆಗಾಗಿ ಬೇರೆ ಊರುಗಳಿಗೆ ಹೋಗುವಾಗ, ಈ ದಣಿಗಳ ಹತ್ರ ಹೋಗಿ ಹೇಳುತ್ತಿದ್ದರಂತೆ. ದಣಿಗಳು ಇವರಿಗೆ ಒಂದೈದು ಸಾವಿರ ಕೊಟ್ಟು ಕಳುಹಿಸುತ್ತಿದ್ದರಂತೆ. ಆ ದುಡ್ಡು ತಗೊಂಡು, ಈ ವಡ್ಡರುಗಳು ರೈಲು ಹತ್ತಿ, ಯಾವುದಾದರೊಂದು ದೊಡ್ಡ ಊರಿಗೆ ಹೋಗುತ್ತಿದ್ದರು. ಅಲ್ಲೇ ರೈಲ್ವೇ ಪ್ಲಾಟ್ ಫಾರಂ ಮೇಲೆ ಕ್ಯಾಂಪ್ ಮಾಡುತ್ತಿದ್ದರಂತೆ. ಬೆಳಗ್ಗೆ ಹೊತ್ತು ಗಂಡಸರು ರೈಲ್ವೇ ಟ್ರ್ಯಾಕ್ ಗಳ ಮೇಲೆ ನೆಡ್ಕೊಂಡು ಹೋಗಿ, ದರೋಡೆ ಮಾಡಲು ಒಳ್ಳೇ ಸ್ಥಳ ಯಾವುದು ಅಂತ ನೋಡಿಕೊಂಡು ಬರುತ್ತಿದ್ದರಂತೆ. ರಾತ್ರಿ ಹೊತ್ತು ಹೋಗಿ ದರೋಡೆ ಮಾಡಿಕೊಂಡು ಬಂದು, ಪ್ಲಾಟ್ ಫಾರಂ ಮೇಲೆ ಮಲಗಿರುತ್ತಿದ್ದರಂತೆ. ಭಾಷೆ ಮತ್ತು ದಾರಿ ಗೊತ್ತಲ್ಲದ ಊರುಗಳಾದ್ದರಿಂದ, ಅವರು ರೈಲ್ವೇ ಟ್ರ್ಯಾಕ ಪಕ್ಕದಲ್ಲೇ ನೆಡೆದುಕೊಂಡು ಹೋಗಿ, ಅದೇ ದಾರಿಯಲ್ಲಿ ವಾಪಾಸ್ ಬರುತ್ತಿದ್ದರಂತೆ. ದಾರಿ ತಪ್ಪಿ ಕಳೆದು ಹೋಗದಿರುವಂತೆ ಅವರು ಮಾಡುತ್ತಿದ್ದ ಪ್ಲ್ಯಾನ್ ಇದು.
ದಣಿಗಳು ಕೊಟ್ಟ ದುಡ್ಡು ಮುಗಿಯತ್ತಾ ಬರುತ್ತಿದ್ದಂತೆ, ಇವರು ಮತ್ತೆ ರೈಲು ಹತ್ತಿ ಊರಿಗೆ ವಾಪಾಸ್ ಹೋಗುತ್ತಿದ್ದರಂತೆ. ತಾವು ದರೋಡೆ ಮಾಡಿದ ಯಾವುದೇ ವಸ್ತುಗಳನ್ನೂ ಅವರು ಇಟ್ಟುಕೊಳ್ಳುತ್ತಿರಲಿಲ್ಲವಂತೆ. ಎಲ್ಲವನ್ನೂ ದಣಿಗಳಿಗೆ ಕೊಟ್ಟು, ಅವರು ಎಷ್ಟು ಕೊಡ್ತಾರೋ ಅದರಲ್ಲಿ ಒಂದು ಪಾಲನ್ನು ದೇವರಿಗೆ ಉತ್ಸವ ಮಾಡಿ, ಉಳಿದ ದುಡ್ಡನ್ನು ಹಂಚಿಕೊಳ್ಳುತ್ತಿದ್ದರಂತೆ. ದುಡ್ಡು ಖಾಲಿಯಾದ ತಕ್ಷಣ, ಮತ್ತೆ ದಣಿಗಳ ಮನೆ ಮುಂದೆ ಹೋಗಿ, ಆನಂತರ ರೈಲು ಹತ್ತುತ್ತಿದ್ದರಂತೆ. ಈ ಗುಂಪುಗಳನ್ನು ಸಾಕಿದ ಎಷ್ಟೋ ದಣಿಗಳು ಆಂದ್ರದ ಎಂ.ಎಲ್.ಎ ಸಹ ಆದರಂತೆ.
ಬೆಂಗಳೂರಿಂದ ಹೋದ ಪೋಲಿಸರಿಗೆ ನಿರಾಶೆ ಕಾದಿತ್ತು. ಮೊದಲನೆಯದಾಗಿ, ಆಂದ್ರದ ಪೋಲಿಸ್ ತಲೆನೇ ಕೆಡಿಸ್ಕೊಳ್ಳಲಿಲ್ಲ. ಹುಟ್ಟಿದ್ದಾಗಿನಿಂದ ಈ ಮಣ್ಣು ವಡ್ಡರನ್ನು ನೋಡಿದ್ದ ಅವರಿಗೆ, ಇದೇನೂ ದೊಡ್ಡ ವಿಷಯ ಅನ್ನಿಸಿರಲಿಲ್ಲ. ಆ ಹಳ್ಳಿಗಳನ್ನು ಹುಡುಕಿಕೊಂಡು ಜೀಪಿನಲ್ಲೇ ಹೋಗಬೇಕು. ಆ ಬೆಂಗಾಡಿನಲ್ಲಿ ಜೀಪಿನ ಧೂಳು ಕಿಲೋಮೀಟರ್ ದೂರದಿಂದ ಕಾಣುತ್ತೆ. ಧೂಳು ಎದ್ದ ತಕ್ಷಣ ಇವರೆಲ್ಲ ದಿಬ್ಬಗಳ ನೆಡುವೆ ಕಾಣೆಯಾಗುತ್ತಿದ್ದರು. ಅಂತೂ ಇಂತೂ ಕಷ್ಟ ಪಟ್ಟು, ಇಬ್ಬರನ್ನು ಹಿಡ್ಕೊಂಡು ಬಂದ್ರಂತೆ.
`ಮತ್ತೆ ಅವ್ರು ಬರ್ಲಿಲ್ವಾ?’ ಅಂತ ಕೇಳ್ದೆ.
`ಹಾಗೇನಿಲ್ಲ. ಬಂದು ಹೋಗ್ತಿದ್ರು. ನಮ್ಮ ಪೋಲಿಸರೂ ಅಲ್ಲಿಗೆ ಹೋಗಿ ಕೆಲವರ್ನ ಹಿಡ್ಕೊಂಡು ಬರ್ತಿದ್ರು. ಇತ್ತೀಚೆಗೆ ಜೀವನ ಚೇಂಜ್ ಆಗೋಕೆ ಶುರುವಾಯ್ತು ನೋಡು. ಅವರಿಗೂ ಮಣ್ಣಿನ ಕೆಲ್ಸ ಸಿಗೋಕೆ ಶುರುವಾಯ್ತು ಅಂತ ಕಾಣುತ್ತೆ. ಐದಾರು ವರ್ಷಗಳಿಂದ ನಾನು ಕೇಳಿಲ್ಲ. ಈಗೇನಾದ್ರೂ ಬಂದ್ರಾ ಅಂತ ನೋಡ್ಬೇಕು,’ ಅಂದ್ರು ನಾಗರಾಜ್.
ನಾಗರಾಜ್ ಕಥೆ ಕೇಳಿದಮೇಲೆ, ಸ್ಟುವರ್ಟ್ ಪುರಂಗೆ ಒಂದ್ಸಲ ಹೋಗಬೇಕು ಅಂತ ಅನ್ನಿಸ್ತಿತ್ತು. ಯಾಕೋ ಏನೋ, ಅದಕ್ಕೆ ಟೈಮೇ ಸೆಟ್ ಆಗ್ಲಿಲ್ಲ. ಆಗಾಗ ದರೋಡೆ ಪ್ರಕರಣಗಳು ನೆಡೆದಾಗ, ಸ್ಟುವರ್ಟ್ ಪುರಂ ನೆನಪಿಗೆ ಬರ್ತಿತ್ತು.
ನಾನು ಟೈಮ್ಸ್ ಆಫ್ ಇಂಡಿಯಾಗೆ ಸೇರಿದ ಮೇಲೆ, ನಮ್ಮ ಪೇಪರ್ ನವರು ಕ್ರೆಸ್ಟ್ ಅನ್ನೋ, ವಾರಕ್ಕೊಮ್ಮೆ ಹೊರ ಬರುವ ಮ್ಯಾಗಜೀನ್ ಹೊರ ತಂದರು. ಆ ಸಮಯದಲ್ಲಿ ನಾನು ಅಲ್ಲಿನ ಅಸೋಸಿಯೇಟ್ ಎಡಿಟರ್ ಜಯಂತ್ ಕೊಡ್ಕಿಣಿಯವರಿಗೆ ಸ್ಟುವರ್ಟ್ ಪುರಂ ಕಥೆ ಹೇಳಿದ್ದೆ. ಅವರು ನನಗೆ ಸ್ಟುವರ್ಟ್ ಪುರಂಗೆ ಹೋಗಿ, ಕ್ರೆಸ್ಟ್ ಗೆ ಯಾಕೆ ಒಂದು ಕಥೆ ಬರೆಯಬಾರದು? ಅಂತ ಕೇಳಿದರು. ನಾನೇನೋ ತಯಾರಿದ್ದೆ, ಆಫಿಸಿನಲ್ಲಿ ಬೇರೆಯವರ ಪ್ರತಿಕ್ರಿಯೆ ಸರಿ ಇರಲಿಲ್ಲ. ಇನ್ಯಾವತ್ತಾದರೂ ಹೋದರಾಯ್ತು ಅಂತ ಸುಮ್ಮನಾದೆ.
ಅಲ್ಲಿಂದ ಮುಂದೆ ಸ್ಟುವರ್ಟ್ ಪುರಂ ನಂಗೆ ಮರೆತೇ ಹೋಗಿತ್ತು. ಮೊನ್ನೆ ದರೋಡೆ ಪ್ರಕರಣ ಓದುವವರೆಗೆ……


ಮಾಕೋನಹಳ್ಳಿ ವಿನಯ್ ಮಾಧವ್

ಗುರುವಾರ, ಜೂನ್ 7, 2012

ಡಾ.ಕುಮಾರಸ್ವಾಮಿ


ಸದ್ದಾಂ ಬಾಂಬಲ್ಲ…. ಬೆಂಗಳೂರು ಟ್ರಾಫಿಕ್



`ವಿನು… ಡಾ. ಕುಮಾರಸ್ವಾಮಿಯವರ ಬರ್ತ್ ಡೇ. ನಂದಿನಿ ಡಾಕ್ಟರ್ ಹೇಳಿದ್ರು, ಪ್ರಕಾಶ್ ಕಫೆಯಲ್ಲಿ ಮಾಡ್ತಾರಂತೆ,’ ಅಂತ ಅಂಬಿಕಾ ಹೇಳ್ದಾಗ, `ಎಷ್ಟು ವರ್ಷ?’ ಅಂತ ಕೇಳ್ದೆ.
`61 ಆಯ್ತಂತೆ. ಅವರ ರಿಲೇಟಿವ್ಸ್ ನೆಲ್ಲ ಕರ್ದಿದ್ದಾರೆ. ಅವತ್ತು ಸ್ವಲ್ಪ ಬೇಗ ಆಫೀಸಿಂದ ಬರ್ತಿರಾ?’ ಅಂತ ಕೇಳಿದ್ಲು.
ಇಲ್ಲೇ ಚಾಮರಾಜಪೇಟೆಲೇ ಇರೋದಲ್ವಾ? ನೀವೆಲ್ಲ ಹೋಗಿರಿ. ನಾನು ಬರ್ತೀನಿ,’ ಅಂದೆ.
ಡಾ. ಕುಮಾರಸ್ವಾಮಿಗೆ 61 ವರ್ಷ…. ಆದ್ರೆ ಹೋದ ನಾಲ್ಕು ವರ್ಷಗಳಲ್ಲಿ ಏನೆಲ್ಲಾ ಆಗ್ಹೋಯ್ತು, ಅಂದ್ಕೊಂಡೆ. ಯಾಕೋ ಹೋಗಿ ಅವರನ್ನ ಮಾತಾಡಿಸ್ಬೇಕು ಅಂದ್ಕೊಂಡೆ…. ಬರ್ತ್ ಡೇಲಿ ನೋಡ್ಬಹುದಲ್ಲಾ, ಆಮೇಲ್ಯಾವತ್ತಾದ್ರೂ ಹೋದ್ರಾಯ್ತು, ಅಂದ್ಕೊಂಡೆ.
ಬರ್ತ್ ಡೇ ದಿನ, ಡಾ. ಕುಮಾರಸ್ವಾಮಿಯವರು ಶೇರ್ವಾನಿ, ತಲೆಗೊಂದು ಮೈಸೂರು ಪೇಟ ಹಾಕ್ಕೊಂಡು, ನಂದಿನಿ ಡಾಕ್ಟರ್ ಮತ್ತು ಮಗ ಕರಣ್ ಸಹಾಯದಿಂದ ಕೇಕ್ ಇಟ್ಟ ಟೇಬಲ್ ಕಡೆಗೆ ಬಂದರು. ಕೇಕ್ ಕೂಡ ಒಂದು ಕಾರಿನ ಆಕಾರದಲ್ಲಿ ಮಾಡಿಸಿದ್ದರು. ಕೇಕ್ ಕತ್ತರಿಸಿ ಕೂತ ಡಾ.ಕುಮಾರಸ್ವಾಮಿಯವರನ್ನು ವಿಷ್ ಮಾಡೋಕೆ ಹೋದಾಗ, ತಮ್ಮ ಎಡಗೈನಲ್ಲಿ ನನ್ನ ಕೈ ಹಿಡ್ಕೊಂಡು, ನಗುತ್ತಾ, `ಬಂದದ್ದಕ್ಕೆ ಥ್ಯಾಂಕ್ಸ್’ ಎನ್ನುವಂತೆ ಕೀರಲು ಧ್ವನಿ ಹೊರಡಿಸಿದಾಗ, ನನಗೆ ಪಿಚ್ಚೆನಿಸಿತು.
ನಾನು ಮೊದಲ ಸಲ ಡಾ.ಕುಮಾರಸ್ವಾಮಿಯವರನ್ನು ನೋಡಿದ್ದು ಮದುವೆಯಾದ ಹೊಸತರಲ್ಲಿ. ಕೌಬಾಯ್ ಟೋಪಿ ಹಾಕ್ಕೊಂಡು, ಹಳೇ ಕಾಲದ ಸಿಟ್ರಾನ್ ಕಾರಿನಲ್ಲಿ, ಚಾಮರಾಜಪೇಟೆಯ ನಮ್ಮ ಮಾವನ ಮನೆ ಹತ್ತಿರದ ಸ್ವಸ್ತಿಕ್ ಆಸ್ಪತ್ರೆಯ ಮುಂದೆ ನಿಲ್ಲಿಸಿದರು. ಅವರ ಹೂಗಳಿದ್ದ ಬಣ್ಣ ಬಣ್ಣದ ಶರ್ಟ್ ಮತ್ತೆ ಅವರ ಬಣ್ಣ ನೋಡಿ, ಯಾರೋ ಆಂಗ್ಲೋ ಇಂಡಿಯನ್ ಇರಬೇಕು ಅನ್ಕೊಂಡೆ.
ಸ್ವಲ್ಪ ದಿನಗಳು ಕಳೆದ ಮೇಲೆ, ನಾನು ಮೊದಲು ನೋಡಿದ ಸಿಟ್ರಾನ್ ಕಾರ್ ಅಲ್ಲದೆ, ಇನ್ನೂ ಮೂರ್ನಾಲ್ಕು ಹಳೇ ಕಾರುಗಳಲ್ಲಿ ಅವರು ಬರುವುದನ್ನು ನೋಡಿದಾಗ, ಇವರಿಗೆ ವಿಂಟೇಜ್ ಕಾರು ಹುಚ್ಚಿದೆ ಅನ್ನಿಸಿತ್ತು. ಸ್ವಸ್ತಿಕ್ ಆಸ್ಪತ್ರೆಯಲ್ಲಿ ಹೆಚ್ಚೇನೂ ರೋಗಿಗಳು ಬರುವುದನ್ನು ನಾನು ನೋಡಿರಲಿಲ್ಲ. ಅದಕ್ಕೆ ಅವರೇನೂ ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ.
ಒಂದೆರೆಡು ವರ್ಷ, ಅವರನ್ನು ನಾನು ಕಾರಿನಿಂದಲೇ ಗುರುತಿಸುತ್ತಿದ್ದೆ. ಯಾವತ್ತೂ ಭೇಟಿಯಾಗಿರಲಿಲ್ಲ. ಸೃಷ್ಟಿ ಹುಟ್ಟಿದ ಮೇಲೆ, ಅಂಬಿಕಾ ಅವಳದೇ ಡೆಂಟಲ್ ಕ್ಲಿನಿಕ್ ತೆಗೆದಾಗ, ಅದರ ಮೊದಲನೇ ದಿನ ಡಾ.ಕುಮಾರಸ್ವಾಮಿ ಮತ್ತು ನಂದಿನಿ ಡಾಕ್ಟರ್ ರನ್ನೂ ಕರೆದಿದ್ದರು. ಮೊದಲನೇ ಭೇಟಿಯಲ್ಲೇ ಇವರು ತುಂಬಾ ಮಾತಾಡ್ತಾರೆ ಅನ್ನಿಸಿತು. ಮಾತಿನ ಮಧ್ಯದಲ್ಲಿ ಅವರ ಕಾರುಗಳ ಬಗ್ಗೆ ಕೇಳಿದೆ. ಆಗ ಗೊತ್ತಾಯ್ತು… ಅವರ ಹತ್ತಿರ ಐದು ವಿಂಟೇಜ್ ಕಾರುಗಳು ಇವೆ ಅಂತ.
ಡಾ.ಕುಮಾರಸ್ವಾಮಿ ಮತ್ತು ನಂದಿನಿ ಡಾಕ್ಟರ್, 1985ರಲ್ಲಿ ಕುವೈತ್ ಗೆ ಹೋಗಿ ಕೆಲಸಕ್ಕೆ ಸೇರಿದ್ದರು. ಅವರ ಮಗ ಕರಣ್ ಹುಟ್ಟಿದ್ದು ಕೂಡ ಅಲ್ಲಿ. ಎಲ್ಲವೂ ಚೆನ್ನಾಗಿಯೇ ನೆಡೆಯಿತು…. 1990ರಲ್ಲಿ ಸದ್ದಾಂ ಹುಸೇನ್ ಕುವೈತ್ ಆಕ್ರಮಿಸುವವರೆಗೆ. ರಾತ್ರಿ ಬೆಳಗಾಗುವುದರೊಳಗೆ ಜೀವನ ಶೈಲಿಯೇ ಬದಲಾಗಿ ಹೋಯ್ತು.
ಗಂಡ-ಹೆಂಡತಿ ಇಬ್ಬರೂ ಡಾಕ್ಟರ್ ಗಳಾದ್ದರಿಂದ, ಇವರಿಗೇನೂ ಅಂತಾ ತೊಂದರೆಯಾಗಲಿಲ್ಲ. ಆದರೂ, ಕರಣ್ ಚಿಕ್ಕ ಮಗು, ಮತ್ತೆ ಮಿಲಿಟರಿ ಆಡಳಿತದಲ್ಲಿ ಮುಂದೇನು? ಅನ್ನೋದು ಇವರಿಗೂ ಆತಂಕವಾಗಿತ್ತು. ವಿದೇಶದಿಂದ ಬಂದವರೆಲ್ಲಾ ಅವರವರ ದೇಶಗಳಿಗೆ ಹೊರಡುತ್ತಿದ್ದರು. ಹಾಗೆ ಹೊರಡಲು ಇರಾಕ್ ಸರ್ಕಾರದ ಅನುಮತಿ ಪಡೆಯಬೇಕಿತ್ತು.  ಇವರಿಬ್ಬರೂ ಡಾಕ್ಟರ್ ಗಳಾದ್ದರಿಂದ, ಇವರಿಗೆ ಅನುಮತಿ ಕೊನೆಗೆ ಸಿಗುವುದು ಅಂತ ಗ್ಯಾರಂಟಿಯಾಯ್ತು.
ಒಂದೆರೆಡು ತಿಂಗಳು ಕಳೆದಿರಬಹುದು… ಅವರ ಅಕ್ಕ, ಪಕ್ಕದಲ್ಲಿದ್ದ ಪಾಕಿಸ್ತಾನ ಮೂಲದವರು, ತಾವು ತಮ್ಮ ದೇಶಕ್ಕೆ ಕಾರಿನಲ್ಲಿ ಹೋಗುವುದಾಗಿ ಹೇಳಿದರು. ಕುತೂಹಲದಿಂದ, ಕಾರಿನಲ್ಲಿ ಪಾಕಿಸ್ತಾನ ತಲುಪುವುದು ಹೇಗೆ ಅಂತ ವಿಷಯ ತಿಳಿದುಕೊಂಡರು. ಆಗಲೇ ಇಬ್ಬರಿಗೂ ಹೊಳೆದಿದ್ದು: ಕುವೈತ್ ನಿಂದ ಪಾಕಿಸ್ತಾನಕ್ಕೆ ತಲುಪಬಹುದಾದರೆ, ಭಾರತಕ್ಕೂ ತಲುಪಬಹುದು, ಅಂತ.
ಎರಡೇ ದಿನಗಳಲ್ಲಿ ಪ್ರಯಾಣದ ತಯಾರಿ ನೆಡೆಸಿದರು. ಡಾ.ಕುಮಾರಸ್ವಾಮಿಯವರ ಅಣ್ಣನೂ ಅಲ್ಲೇ ಕುವೈತಿನಲ್ಲಿ ಇದ್ದರು. ಎರಡೂ ಸಂಸಾರಗಳೂ, ತಮ್ಮ ಪ್ರಯಾಣಕ್ಕೆ ಎಷ್ಟು ಸಾಮಾನುಗಳು ಬೇಕೋ ಅಷ್ಟನ್ನು, ಇದೇ ಪುಟ್ಟ ಸಿಟ್ರಾನ್ ಕಾರಿನಲ್ಲಿ ಹಾಕಿಕೊಂಡು, ಪುಟ್ಟ ಕರಣ್ ನನ್ನೂ ತುಂಬಿಕೊಂಡು, ಹೊರಟರು.
ಕುವೈತ್ ದಾಟಿದ ತಕ್ಷಣ, ಇರಾಕ್ ದೇಶದ ಒಂದು ತುದಿಯಿಂದ, ಇನ್ನೊಂದು ತುದಿಯವರೆಗೆ ಡ್ರೈವ್ ಮಾಡಿಕೊಂಡು, ಇರಾನ್ ಪ್ರವೇಶಿಸಿ, ಆ ದೇಶದ ಒಂದು ತುದಿಯಿಂದ ಇನ್ನೊಂದು ತುದಿ ತಲುಪಿ, ಟರ್ಕಿಯ ಮುಖಾಂತರ ಪಾಕಿಸ್ತಾನವನ್ನೂ ತಲುಪಿದರು. ಎಲ್ಲಾ ದೇಶಗಳಲ್ಲೂ ಅದೇ ಕಥೆ. ಹಗಲು ಹೊತ್ತಿನಲ್ಲಿ ಮಾತ್ರ ಡ್ರೈವ್ ಮಾಡುತ್ತಿದ್ದ ಇವರು, ರಾತ್ರಿಯಾದ ತಕ್ಷಣ ಯಾವುದಾದರೂ ವಸತಿ ಗೃಹಗಳಲ್ಲಿ ಉಳಿದುಕೊಳ್ಳುತ್ತಿದ್ದರು. ವಾಘಾ ಗಡಿಯಲ್ಲಿ ಇವರನ್ನು ಒಂದು ದಿನ ಕಾಯಿಸಲಾಯಿತು. ಅಲ್ಲಿಂದ ದೆಹಲಿಗೆ ತಲುಪುವಾಗ, ಅವರು 20 ದಿನಗಳ ಕಾಲ ಪ್ರಯಾಣ ಮಾಡಿದ್ದರು. ಇನ್ನೂ ಹತ್ತು ದಿನ ಡ್ರೈವ್ ಮಾಡಿಕೊಂಡು, ಡಾ.ಕುಮಾರಸ್ವಾಮಿಯವರ ಹುಟ್ಟೂರಾದ ಗುಲ್ಬರ್ಗ ತಲುಪಿದ್ದರು.
ಕುವೈತ್ ನಲ್ಲಿ ಪರಿಸ್ಥಿತಿ ಸುಧಾರಿಸುವವರೆಗೆ ಭಾರತದಲ್ಲೇ ಇದ್ದ ಡಾ.ಕುಮಾರಸ್ವಾಮಿಯವರು, ಬೆಂಗಳೂರಿನಲ್ಲಿ ಕೆಲವು ಆಸ್ತಿಗಳನ್ನೂ ಖರೀದಿಸಿದ್ದರು. ಅಲ್ಲಿಂದ ಮತ್ತೆ ಕುವೈತ್ ಗೆ ಹೋದಾಗ, ಅವರಿಗೆ ಆಶ್ಚರ್ಯ ಕಾಯ್ದಿತ್ತು. ಅವರು ಮನೆಯನ್ನು ಯಾವ ಪರಿಸ್ಥಿತಿಯಲ್ಲಿ ಬಿಟ್ಟು ಹೋಗಿದ್ದರೋ, ಅದೇ ಪರಿಸ್ಥಿತಿಯಲ್ಲಿ ಇತ್ತು. ಇನ್ನೂ ಕೆಲವು ವರ್ಷ ಅಲ್ಲಿದ್ದವರು, ಕರಣ್ ಓದಿಗಾಗಿ ಬೆಂಗಳೂರಿಗೆ ವಾಪಾಸ್ ಬಂದರು.  ಆಗಲೇ ಅವರು ಶುರು ಮಾಡಿದ್ದು ಸ್ವಸ್ತಿಕ್ ಆಸ್ಪತ್ರೆ.
2008ರ ಮೇ ತಿಂಗಳಲ್ಲಿ ನಾನು ತುಂಬಾನೇ ಬ್ಯಸಿಯಾಗಿದ್ದೆ. ಅಂಬಿಕಾಳ ತಮ್ಮ ಬಾಬುವಿನ ಮದುವೆ ನಿಶ್ಚಯವಾಗಿತ್ತು. ನನ್ನ ಮಾವ ಬೇರೆ ತೀರಿಹೋಗಿದ್ದ ಕಾರಣ, ನನ್ನ ತಲೆಮೇಲೆ ಜವಾಬ್ದಾರಿ ಹೆಚ್ಚಿತ್ತು. ಆಗಲೇ ಮಧ್ಯದಲ್ಲಿ ಅನಾಹುತವಾಗಿ ಹೋಗಿತ್ತು.
ಅವತ್ತೊಂದು ದಿನ, ಇದ್ದಕ್ಕಿದ್ದಂತೆ ಜೋರಾಗಿ ಮಳೆ ಶುರುವಾಯ್ತಂತೆ. ಡಾ.ಕುಮಾರಸ್ವಾಮಿ, ಕರಣ್ ನನ್ನು ಕರ್ಕೊಂಡು, ರಸ್ತೆಯ ಆಚೆ ಬದಿ ನಿಲ್ಲಿಸಿದ್ದ ತಮ್ಮ ಸಿಟ್ರಾನ್ ಕಾರ್ ಗೆ ಕವರ್ ಹಾಕಲು ರಸ್ತೆ ದಾಟಲು ಹೊರಟಿದ್ದಾರೆ. ಎಲ್ಲಿಂದಲೋ ನುಗ್ಗಿದ ಬೈಕ್ ಬಂದು, ಡಾ.ಕುಮಾರಸ್ವಾಮಿಯವರಿಗೆ ಡಿಕ್ಕಿ ಹೊಡೆದು, ಅವರು ರಸ್ತೆಗೆ ಬಿದ್ದಿದ್ದಾರೆ. ಹೆಡ್ ಇಂಜ್ಯುರಿ!
ಮುಂದೆ ಸುಮಾರು ಮೂರು ತಿಂಗಳ ಕಾಲ ಆಸ್ಪತ್ರೆಯಲ್ಲೇ ಕಾಲ ಕಳೆದಿದ್ದಾರೆ. ತಲೆಯ ಒಂದು ಭಾಗದಲ್ಲಿ ರಕ್ತ ಹೆಪ್ಪುಗಟ್ಟಿ, ದೇಹದ ಒಂದು ಭಾಗಕ್ಕೆ ಪಾರ್ಶ್ವವಾಯು ಹೊಡೆದಿದೆ. ಇವರು ಜೀವನವಿಡೀ ಹಾಸಿಗೆ ಬಿಟ್ಟು ಏಳುವಂತಿಲ್ಲ ಅಂತ ಡಾಕ್ಟರ್ ಹೇಳಿದ್ದಾರೆ.
ಇಂತಹ ಸಂಧರ್ಭದಲ್ಲಿ, ನಂದಿನಿ ಡಾಕ್ಟರ್ ಏಕಾಏಕಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಡಾ.ಕುಮಾರಸ್ವಾಮಿಯವರನ್ನು ತಮ್ಮ ಸ್ವಸ್ತಿಕ್ ಆಸ್ಪತ್ರೆಗೆ ಸೇರಿಸಿ, ತಾವೇ ನೋಡಿಕೊಳ್ಳುತ್ತೇವೆ ಅಂದಿದ್ದಾರೆ. ಅದಕ್ಕೆ ಅವರ ಬಂಧುಗಳೆಲ್ಲ ವಿರೋದಿಸಿದರೂ, ನಂದಿನಿ ಡಾಕ್ಟರ್ ಒಪ್ಪಿಲ್ಲ. ಈ ವಿಷಯ ಅಂಬಿಕಾ ನನಗೆ ಹೇಳಿದಾಗ ನಾನೇ ಹೇಳಿದ್ದೆ: `ಕಷ್ಟ ಆಗುತ್ತೆ ಅಂತ ಕಾಣುತ್ತೆ. ಈ ಆಸ್ಪತ್ರೆಲಿ ಬೇರೆ ಅಷ್ಟೊಂದು ಅನುಕೂಲಗಳಿಲ್ಲ,’ ಅಂತ. `ಆದ್ರೂ, ಅವರವರಿಗೆ ಅವರ ಅನುಕೂಲ ಏನೂಂತ ಗೊತ್ತಿರುತ್ತೆ. ಕರಣ್ ಬೇರೆ ಇನ್ನೊಂದೆರೆಡು ವರ್ಷದಲ್ಲಿ ಡಾಕ್ಟರ್ ಆಗ್ತಾನೆ. ಅವರ ಪ್ಲಾನ್ ಏನಿದೆ ನಮಗೇನು ಗೊತ್ತು,’ ಅಂತಾನೂ ಸೇರಿಸಿದ್ದೆ.
ಅಲ್ಲಿಂದ ಮುಂದೆ ನಂದಿನಿ ಡಾಕ್ಟರ್ ಮತ್ತು ಅಂಬಿಕಾಳ ಒಡನಾಟ ಜಾಸ್ತಿಯಾಯ್ತು. ಆಗೊಮ್ಮೆ, ಈಗೊಮ್ಮೆ ಡಾ.ಕುಮಾರಸ್ವಾಮಿಯವರ ಫಿಸಿಯೋಥೆರಪಿ ಬಗ್ಗೆ ಮಾತಾಡ್ತಾ ಇದ್ಲು. ನಾನೂ ಮಧ್ಯದಲ್ಲಿ ಒಂದೆರೆಡು ಸಲ ಆಸ್ಪತ್ರೆಗೆ ಹೋಗಿದ್ದೆ. ಆದರೆ, ಮೇಲಿನ ಮಹಡಿಯಲ್ಲಿದ್ದ ಡಾ.ಕುಮಾರಸ್ವಾಮಿಯವರನ್ನು ನೋಡಿರಲಿಲ್ಲ.
ನಂದಿನಿ ಡಾಕ್ಟರ್, ಡಾ.ಕುಮಾರಸ್ವಾಮಿಯವರ ಎಲ್ಲಾ ವಸ್ತುಗಳನ್ನೂ ತೋರಿಸಿದರು. ದಂಗಾಗಿ ಹೋಗಿದ್ದೆ. ಬರೀ ಐದು ಕಾರುಗಳಲ್ಲ. ಅದನ್ನು ಬಿಟ್ಟು ಸೂಟ್ ಕೇಸಿನಲ್ಲಿ ಮಡಚಿ ಇಟ್ಟುಕೊಳ್ಳಬಹುದಾದ ಸೈಕಲ್, ಮೊಪೆಡ್, ಯೂರೋಪ್ ಮತ್ತು ಅಮೆರಿಕಾಗೆ ಹೋದಾಗ ತಂದು ಇಟ್ಟುಕೊಂಡಿದ್ದ ಏನೇನೋ ವಿಶೇಷವಾದ ಸಾಮಾನುಗಳಿದ್ದವು. ಅವರಿಗೆ ಜೀವನದಲ್ಲಿ ಇದ್ದ ಆಸಕ್ತಿಯನ್ನು ನೋಡಿ ಅಸೂಯೆಯಾಯ್ತು ಅಂದರೂ ತಪ್ಪೇನಲ್ಲ. ಸದ್ದಾಂ ಬಾಂಬಿಗೂ ಕರಗದ ಈ ಚೈತನ್ಯವನ್ನು ಬೆಂಗಳೂರು ಟ್ರಾಫಿಕ್ ಉಡುಗಿಸಿತ್ತು.
ಒಂದು ವರ್ಷವೇ ಕಳೆದಿರಬಹುದು. ಒಂದು ದಿನ ಅಂಬಿಕಾ ಒಳ್ಳೆ ಮೂಡಲ್ಲಿದ್ದಾಳೆ ಅನ್ನಿಸ್ತು. ಸ್ವಲ್ಪ ಹೊತ್ತಿನ ನಂತರ ಅವಳೇ ಹೇಳೋಕೆ ಶುರು ಮಾಡಿದ್ಲು. `ವಿನು, ಗೊತ್ತಾ. ಡಾ.ಕುಮಾರಸ್ವಾಮಿ ಇದ್ದಾರಲ್ಲ, ಈಗ ಅವರ ಕೆಲಸ ಅವರೇ ಮಾಡ್ಕೊಳ್ಳೋಕೆ ಶುರು ಮಾಡಿದ್ದಾರೆ. ಹಾಗೆ, ಏನಾದ್ರೂ ಹೇಳ್ಬೇಕೂ ಅಂದ್ರೆ, ಬರೆದು ತೋರಿಸ್ತಾರೆ. ನಾವು ಹೇಳೋದೆಲ್ಲಾ ಅರ್ಥ ಆಗ್ತದೆ ಅವರಿಗೆ,’ ಅಂದ್ಲು.
`ಏನು? ಮ್ಯಾಜಿಕ್ ಆಯ್ತಾ?’ ಅಂತ ತಮಾಶೆ ಮಾಡ್ದೆ.
`ಇಲ್ಲ ವಿನೂ… ಇಷ್ಟು ದಿನ ಫೀಸಿಯೋಥೆರಪಿ ಮಾಡಿದ್ರಲ್ಲಾ? ಡಾ.ಕುಮಾರಸ್ವಾಮಿ ಸಹ ತುಂಬಾನೆ ಕೋ ಆಪರೇಟ್ ಮಾಡಿ, ಟ್ರೈ ಮಾಡಿದ್ರು. ನೋಡೋಕೆ ಖುಷಿಯಾಗುತ್ತೆ,’ ಅಂದ್ಲು. ನಂದಿನಿ ಡಾಕ್ಟರ್ ಬಗ್ಗೆ ಹೆಮ್ಮೆ ಎನ್ನಿಸತೊಡಗಿತ್ತು. ನಂಗೂ ಹೋಗಿ ಅವರನ್ನು ನೋಡ್ಬೇಕು ಅನ್ನಿಸಿದ್ರೂ, ಹೋಗೋಕೆ ಆಗಿರ್ಲಿಲ್ಲ.
ಈ ಮಧ್ಯ, ನಂದಿನಿ ಡಾಕ್ಟರ್ ಬೇರೆ ಸೃಷ್ಟಿನ ತುಂಬಾ ಹಚ್ಚಿಕೊಳ್ಳೋಕೆ ಶುರು ಮಾಡಿದ್ರು. ಅವಳಿಗೆ ಮ್ಯಾತ್ಸ್ ಕಷ್ಟ ಅಂತ, ಅದಕ್ಕೆ ಟ್ಯೂಶನ್ ಬೇರೆ ಕೊಡೋಕೆ ಶುರು ಮಾಡಿದ್ರು. ಅಂಬಿಕಾಗೆ ಬೇರೆ ಒಂಥರಾ ಅಡ್ವೈಸರ್ ಆಗಿದ್ರು. ಬರ್ತ್ ಡೇ ದಿನ ಡಾ.ಕುಮಾರಸ್ವಾಮಿಯವರನ್ನು ನೋಡಿದಾಗ, ಅಂಬಿಕಾ ಹೇಳಿದ್ದು ಸರಿ ಅಂತ ಅನ್ನಿಸ್ತು.
ಬರ್ತ್ ಡೇ ಕಳೆದು ಸ್ವಲ್ಪ ದಿನ ಆದ ಮೇಲೆ ಡಾ.ಕುಮಾರಸ್ವಾಮಿಯವರನ್ನು ನೋಡಲು ಹೋಗಿದ್ದೆ. ಕೆಳಗಡೆ ರಿಸೆಪ್ಷನ್ ಹತ್ತಿರ ಒಬ್ಬರೇ ಕೋಲಿನ ಸಹಾಯದಲ್ಲಿ ನೆಡ್ಕೊಂಡು ಬರ್ತಿದ್ರು. ನನ್ನ ಮುಖ ನೋಡಿದ ತಕ್ಷಣ ನಕ್ಕು, ಸೋಫಾ ಕಡೆಗೆ ಕರ್ಕೊಂಡು ಹೋದ್ರು. ತುಂಬಾ ಹೊತ್ತು ಇಬ್ಬರೂ ಮಾತಾಡ್ತಾ ಇದ್ದೆವು. ಅವರಿಗೇನಾದ್ರು ಹೇಳಬೇಕಿದ್ರೆ, ಪೇಪರ್ ಮೇಲೆ ಎಡಗೈನಿಂದ ಬರೆಯಲು ಪ್ರಯತ್ನ ಮಾಡ್ತಿದ್ರು. ಅದು ಸ್ವಲ್ಪ ಅಸ್ಪಷ್ಟವಾದ್ರೂ ಸಹ, ಮಾತು ಮುಂದುವರೆಸಲು ಸಹಾಯವಾಗುತ್ತಿತ್ತು.
ಮಾತಿನ ಮಧ್ಯ ನಂದಿನಿ ಡಾಕ್ಟರ್ ಸಹ ಸೇರಿಕೊಂಡ್ರು. ಡಾ.ಕುಮಾರಸ್ವಾಮಿಯವರ ವಸ್ತು ಸಂಗ್ರಹದ ಬಗ್ಗೆ ಮಾತು ಹೊರಳಿತು. `ನಾವು ಕುವೈತ್ ನಿಂದ ಡ್ರೈವ್ ಮಾಡಿಕೊಂಡು ಬಂದ ಕಾರು ಬಿಟ್ಟು, ಇನ್ನೆಲ್ಲಾ ಹಳೇ ಕಾರುಗಳನ್ನು ಮಾರಿಬಿಟ್ಟೆ. ಕುಮಾರ್ ಸರಿ ಇದ್ದಾಗ, ಅವರು ನೋಡ್ಕೊಳ್ತಿದ್ರು. ಈಗ ದಿನಾ ಅದನ್ನ ಸ್ಟಾರ್ಟ್ ಮಾಡಿ, ಮೇಂಟೇನ್ ಮಾಡೋಕೆ ಯಾರೂ ಇಲ್ಲ. ಕರಣ್ ಬೇರೆ ಕೊಯಮತ್ತೂರಿನಲ್ಲಿ ಓದ್ತಿದ್ದಾನೆ. ಅವನು ವಾಪಾಸ್ ಬರ್ತಾನೋ ಇಲ್ವೋ. ಬಂದ್ರೂ, ಇವನ್ನ ಮೆಂಟೇನ್ ಮಾಡೋಕೆ ಇಂಟರೆಸ್ಟ್ ಇರುತ್ತೋ ಇಲ್ವೋ,’ ಅಂದ್ರು ನಂದಿನಿ ಡಾಕ್ಟರ್.
ಜೀವನದಲ್ಲಿ ಚಿಕ್ಕ ಘಟನೆ ಏನಾದ್ರು ನೆಡೆದರೆ, ಇಡೀ ಪ್ರಪಂಚವನ್ನ ಮತ್ತೆ ದೇವರು, ಹಣೆ ಬರಹಗಳನ್ನು ದೂಷಿಸುತ್ತಾ ಕೂರುವ ಜನಗಳ ಮಧ್ಯ, ಈ ಇಬ್ಬರು ಡಾಕ್ಟರ್ ಗಳನ್ನು ಎಲ್ಲಿಡಬೇಕು ಅಂತ ಗೊತ್ತಾಗಲಿಲ್ಲ.


ಮಾಕೋನಹಳ್ಳಿ ವಿನಯ್ ಮಾಧವ

ಶನಿವಾರ, ಜೂನ್ 2, 2012

ಮೆಡಲ್


 ಅಪ್ಪ…. ನಂಗೆ ಮೆಡಲ್ ತೋರಿಸ್ತೀಯಾ?

`ರೀ ವಿನಯ್… ನಿಮಗೆ ಕಣ್ರಿ ಫೋನ್’ ಅಂತ ಬಾಲು ಹೇಳ್ದಾಗ ಸಿಟ್ಟೇ ಬಂದಿತ್ತು. ಬೆಳಗ್ಗಿನಿಂದ ಇದೇ ಗೋಳು. ಕಮೀಷನರ್ ಆಫೀಸಿಗೆ ಹೋದಾಗ ಸಿಕ್ಕಿದವರೆಲ್ಲಾ ಇದನ್ನೇ ಕೇಳ್ತಿದ್ರು. `ಸರ್, ಮೆಡಲ್ ಲಿಸ್ಟ್ ವಿಷಯ ಏನಾದ್ರೂ ಗೊತ್ತಾಯ್ತಾ? ನಂದೂ ಹೆಸರಿತ್ತು ಅದ್ರಲ್ಲಿ,’ ಅಂತ.
ಕೆಲವು ಕಾನ್ಸ್ಟೇಬಲ್ ಗಳಂತೂ, `ನಮ್ಮ ಸಾಹೇಬರರ್ದು ಇದ್ಯಾ?’ ಅಂತ ದಂಬಾಲು ಬೀಳುತ್ತಿದ್ದರು.
ನಂಗಂತೂ ಸಾಕಾಗಿ ಹೋಗಿತ್ತು. ಆಫೀಸಿಗೆ ಬಂದರೆ, ಒಂದು ಹತ್ತು ಜನ ಫೋನ್ ಮಾಡಿ ನಂಬರ್ ಬಿಟ್ಟಿದ್ದರು. ಯಾರಿಗೆ ವಾಪಾಸ್ ಫೋನ್ ಮಾಡಿದ್ರೂ ಒಂದೇ ಪ್ರಶ್ನೆ: `ಸರ್… ಮೆಡಲ್ ಲಿಸ್ಟ್’.
ಯಾವ ಕೆಲಸನೂ ಸರಿ ಆಗ್ತಿರಲಿಲ್ಲ, ಈ ಮೆಡಲ್ ಲಿಸ್ಟ್ ಗಲಾಟೆಲಿ. ಆಫೀಸ್ ನಲ್ಲೂ ಫೋನ್ ಗಳ ಕಾಟ. ಸಧ್ಯ, ಆಗಿನ್ನೂ ಮೊಬೈಲ್ ಫೋನ್ ಬಂದಿರಲಿಲ್ಲ. ಬಂದಿದ್ದರೆ, ಒಡೆದೇ ಹಾಕ್ತಿದ್ನೇನೋ… ಅಷ್ಟೊಂದು ರೇಜಿಗೆಯಾಗಿತ್ತು.
ಈ ಆಫೀಸಿನಲ್ಲಿ ಇದ್ದರೆ ತಲೆ ಕೆಟ್ಟು ಹೋಗುತ್ತೆ ಅಂತ ಬೈಕ್ ಹತ್ತಿದವನೇ, ಸೀದ ಚಿಕ್ಕಪೇಟೆ ಪೋಲಿಸ್ ಸ್ಟೇಶನ್ ಗೆ ಬಂದೆ. ಎಲ್ಲೋ ಹೊರಗಡೆ ಹೋಗಿದ್ದ ಇನ್ಸ್ ಪೆಕ್ಟರ್ ಬಿ.ಕೆ.ಶಿವರಾಂ, ಆಗ ತಾನೆ ಬಂದಿಳಿದರು.
ಸುಮ್ಮನೆ ತಲೆಹರಟೆಗೆ ಕೇಳಿದೆ: `ಏನ್ರಿ ಶಿವರಾಂ? ನಿಮಗೆ ಮೆಡಲ್ ಬರ್ಲಿಲ್ವಾ?’ ಅಂತ ನಕ್ಕೆ.
`ಬ್ಯಾಡ ಸ್ವಾಮಿ… ಅವ್ರು ಕೊಟ್ರೂ ಬ್ಯಾಡ. ಇಲ್ಲಿವರೆಗೆ ಕೊಟ್ಟಿರೋದೇ ಸಾಕಾಗಿದೆ,’ ಅಂತ ನಕ್ಕರು.
`ಯಾಕೆ? ಏನಾಯ್ತು?’ ಅಂದೆ.
`ಮೆಡಲ್ ಗಳಿಗೂ ಮತ್ತೆ ನನ್ನ ಜಾತಕಕ್ಕೂ ಸರಿ ಹೋಗೋಲ್ಲ ಕಣ್ರಿ. ಏನಾದ್ರು ಎಡವಟ್ಟಾಗುತ್ತೆ,’ ಅಂತ ಅಂದ್ರು.
ಹಾಗೇ ಅವರ ಛೇಂಬರ್ ನಲ್ಲಿ ಕೂತು ಮಾತಾಡ್ತಾ ಶಿವರಾಂ ಅವರ ಮೆಡಲ್ ಕಥೆ ಶುರು ಮಾಡಿದ್ರು:
ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ, ಅತೀ ದೊಡ್ಡ ಕ್ರೈಂಗಳಲ್ಲಿ ಗಂಧದ ಸಾಗಾಣಿಕೆಯೂ ಒಂದು. ಆಗಿನ ಬೆಂಗಳೂರು ಕಮೀಷನರ್ ಹರ್ಲಂಕರ್ ಅವರು ಗಂಧಸಾಗಾಣಿಕೆಯವರನ್ನು ಮಟ್ಟ ಹಾಕಲು ಒಂದು ವಿಶೇಷ ತಂಡವನ್ನೇ ಮಾಡಿದ್ದರು. ಅದರಲ್ಲಿ, ಆಗ ತಾನೆ ಪ್ರೊಬೇಶನರಿ ಮುಗಿಸಿ ಬಂದಿದ್ದ ಶಿವರಾಂ ಕೂಡ ಒಬ್ಬರು.
ಒಂದು ಸಲ ಯಾವುದೋ ಮಾಹಿತಿಯ ಮೇರೆಗೆ, ಪೋಲಿಸ್ ತಂಡ ಎರಡು ಜೀಪ್ ಗಳನ್ನು ಹಿಂಬಾಲಿಸಲು ಶುರು ಮಾಡಿವೆ. ಮಾಹಿತಿ ಸರಿ ಇದ್ದುದ್ದರಿಂದ, ಆ ಜೀಪಿನಲ್ಲಿದ್ದವರು ಕೂಡ ಸ್ಪೀಡಾಗಿ ಹೋಗತೊಡಗಿದರು. ಸರಿ, ಸಿನಿಮಾ ಮಾದರಿ ಛೇಸ್ ಶುರುವಾಯ್ತು. ಗಂಧದ ಕಳ್ಳರ ಡ್ರೈವರ್ ತುಂಬಾನೆ ಚೆನ್ನಾಗಿ ಓಡಿಸುತ್ತಿದ್ದ. ಪೋಲಿಸ್ ತಂಡವನ್ನು ಎಸಿಪಿ ಸಾಹೇಬರೊಬ್ಬರು ಮುನ್ನೆಡೆಸುತ್ತಿದ್ದರು. ಯಾವುದೇ ಕಾರಣಕ್ಕೂ ಜೀಪಿನ ಚಕ್ರ ಬಿಟ್ಟು ಬೇರೆ ಯಾವ ಕಡೆಗೂ ಗುಂಡು ಹಾರಿಸಬಾರದು ಅಂತ ತಾಕೀತು ಮಾಡಿದ್ದರು.
ಹೀಗೆ ಶುರುವಾದ ಛೇಸಿಂಗ್ ಹಾಸನದ ಹತ್ತಿರದವರೆಗೂ ಹೋಯ್ತು. ಏನಾಯ್ತೋ ಏನೋ, ಶಿವರಾಂ ತಮ್ಮ ರಿವಾಲ್ವಾರ್ ನಿಂದ ಮುಂದೆ ಹೋಗುತ್ತಿದ್ದ ಜೀಪಿನೊಳಗೇ ಗುಂಡು ಹಾರಿಸಿದರು. ಡ್ರೈವರ್ ಗೆ ಗುಂಡು ಬಿದ್ದಿದ್ದು ಎಲ್ಲರಿಗೂ ಗೊತ್ತಾಯ್ತು. ಸ್ವಲ್ಪ ದೂರ ಹೋದಮೇಲೆ, ಕಾಡಿನಲ್ಲಿ ಜೀಪ್ ಸಿಕ್ಕಿತು. ಡ್ರೈವರ್ ಹೆಣವಾಗಿದ್ದ ಮತ್ತೆ ಇನ್ನುಳಿದವರು ತಪ್ಪಿಸಿಕೊಂಡು ಹೋಗಿದ್ದರು .
ಎಸಿಪಿ ಸಾಹೇಬರಂತೂ ಶಿವರಾಂ ಮೇಲೆ ಬಾಯಿಗೆ ಬಂದಂತೆ ಎಗರಾಡಲು ಶುರುಮಾಡಿದ್ರು. ``ನಾನು ಹೇಳಿರ್ಲಿಲ್ವಾ? ಚಕ್ರಕ್ಕೆ ಮಾತ್ರ ಗುಂಡು ಹಾರಿಸ್ಬೇಕೂಂತ? ಈಗಿವನು ಸತ್ತು ಹೋಗಿದ್ದಾನೆ. ಹ್ಯೂಮನ್ ರೈಟ್ಸ್ ಅವರು ಬರ್ತಾರೆ. ನಂಗೇನಂತೆ? ನಾನಂತೂ ನೀನೇ ಗುಂಡು ಹಾರಿಸಿದ್ದು ಅಂತ ರಿಪೋರ್ಟ್ ಕೊಟ್ಟು ಶಿಸ್ತು ಕ್ರಮಕ್ಕೆ ರೆಕಮೆಂಡ್ ಮಾಡ್ತೀನಿ. ಒಂದ್ಸಲ ಸಸ್ಪೆಂಡ್ ಆದ್ರೆ ಗೊತ್ತಾಗುತ್ತೆ, ಸೀನಿಯರ್ಸ್ ಹೇಳಿದ ಮಾತು ಕೇಳ್ಬೇಕು ಅಂತ,’ ಅಂದ್ರು.
ಆಗ ತಾನೆ ಸರ್ವಿಸ್ ಗೆ ಸೇರಿದ್ದ ಶಿವರಾಂಗೆ ಏನು ಮಾಡ್ಬೇಕು ಅಂತ ಗೊತ್ತಾಗಿಲ್ಲ. ಸುಮ್ಮನೆ ತಲೆ ತಗ್ಗಿಸಿ ನಿಂತಿದ್ದಾರೆ. ಪೋಸ್ಟ್ ಮಾರ್ಟಂ ಮುಗಿಸಿ ಎಲ್ಲರೂ ಹೊರಟರು.
ಆದ್ರೆ, ಬೆಂಗಳೂರಿನಲ್ಲಿ ಸೀನ್ ಬೇರೆಯಾಗಿತ್ತು. ಹರ್ಲಂಕರ್ ರವರು ಪೋಲಿಸ್ ತಂಡವನ್ನು ಸ್ವಾಗತ ಮಾಡಲು ನೆಲಮಂಗಲಕ್ಕೆ ಒಂದು ತಂಡ ಕಳುಹಿಸಿದ್ದರು. ತಂಡವು ಹರ್ಲಂಕರ್ ಅವರ ಮುಂದೆ ಬಂದ ತಕ್ಷಣ, ಎಲ್ಲರಿಗೂ ಶಭಾಸ್ ಗಿರಿ ಕೊಟ್ಟು, ತುಂಬಾನೆ ಹೊಗಳಿದರು. ಡ್ರೈವರ್ ಗೆ ಗುಂಡು ಹೊಡೆದವರು ಯಾರು? ಅಂತ ಕೇಳಿದರು.
ಶಿವರಾಂ ಕೈ ಎತ್ತುವುದರೊಳಗೆ ಎಸಿಪಿ ಸಾಹೇಬರು ಎದೆ ಸೆಟೆಸಿ, `ನಾನೇ ಸರ್,’ ಎಂದರು. ಹರ್ಲಂಕರ್ ಎಸಿಪಿಯ ಬೆನ್ನು ತಟ್ಟಿ ಶಹಬಾಸ್ ಗಿರಿ ಕೊಡುತ್ತಿರುವಾಗ, ಶಿವರಾಂಗೆ ಏನಾಗ್ತಾ ಇದೆ ಅಂತ ಗೊತ್ತಾಗದೆ, ಪೆಚ್ಚು ಮುಖ ಹಾಕಿಕೊಂಡು ಜೊತೆಯವರನ್ನು ನೋಡಿದರು. ಯಾರೂ ಮಾತಾಡಲಿಲ್ಲ. ಆಮೇಲೆ, ಈ ಸಾಹಸಕ್ಕಾಗಿ ಎಸಿಪಿ ಸಾಹೇಬರು ಮೆಡಲ್ ಬೇರೆ ತಗೊಂಡ್ರು.
ಶಿವರಾಂಗೆ ಈ ಘಟನೆಯನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಅಂತ ಗೊತ್ತಾಗದೆ, ಯಾರಿಗೂ ಹೇಳಿಕೊಳ್ಳಲಾಗದೆ, ಸುಮ್ಮನಾದರು.
ಇದಾಗಿ ಕೆಲವು ವರ್ಷಗಳಾದ ಮೇಲೆ, ಬೆಂಗಳೂರಿನಲ್ಲಿ ಕೊತ್ವಾಲ ರಾಮಚಂದ್ರನ ಹಾವಳಿ ಹೆಚ್ಚಾಗಿತ್ತು. ಎಷ್ಟೇ ಪ್ರಯತ್ನ ಪಟ್ಟರೂ, ಪೋಲಿಸ್ ಕೈಗೆ ಸಿಗುತ್ತಿರಲಿಲ್ಲ. ಆಗಿನ ಡಿಸಿಪಿ ಮರಿಸ್ವಾಮಿಯವರಂತೂ ಊಟ ನಿದ್ರೆ ಬಿಟ್ಟು, ತಮ್ಮ ಪೋಲಿಸರ ಬೆನ್ನು ಬಿದ್ದರು. ಕೊನೆಗೂ ಕೊತ್ವಾಲ ಸಿಕ್ಕಿದ್ದು ಶಿವರಾಂ ಕೈಗೆ.
ಈ ಕೇಸಿನಲ್ಲಿ ಶಿವರಾಂಗೆ ಮೆಡಲ್ ಕೊಡಲು ಶಿಫಾರಸ್ಸು ಮಾಡುವುದಾಗಿ ಮರಿಸ್ವಾಮಿಯವರು ಹೇಳಿದ್ದರು. ಅದೇ ಸಮಯದಲ್ಲಿ ಎರಡು ಘಟನೆಗಳು ನೆಡೆದವು. ಶಿವರಾಂ, ಆಗಿನ ಪ್ರಮುಖ ರಾಜಕಾರಣಿಯಾಗಿದ್ದ ಹಾಜಿ ಅಬ್ದುಲ್ ಸತ್ತಾರ್ ಸೇಠ್ ಮಗನನ್ನು ಯಾವುದೋ ಕೇಸಿನಲ್ಲಿ ಬಂಧಿಸಿದ್ದರು. ಆಗಿನ ಡಿ.ಜಿ. ಆಗಿದ್ದ ನಿಜಾಮುದ್ದೀನ್ ಹೇಳಿದ್ದರೂ ಬಿಟ್ಟಿರಲಿಲ್ಲ. ಅದೇ ವರ್ಷ, ಶಿವರಾಂ ಮಗಳು ಹುಟ್ಟಿದ್ದಳು.
ಮೆಡಲ್ ಲಿಸ್ಟ್ ಬಂದಾಗ, ಶಿವರಾಂ ಹೆಸರು ಇರಲಿಲ್ಲ. ದಾವಣಗೆರೆಯ ಇನ್ಸ್ ಪೆಕ್ಟರ್ ಒಬ್ಬ ಇಪ್ಪತ್ತು ಸಾವಿರ ರೂಪಾಯಿ ದರೋಡೆ ಮಾಡಿದ್ದವರನ್ನು ಹಿಡಿದಿದ್ದಕ್ಕಾಗಿ, ಅವರಿಗೆ ಕೊಟ್ಟಿದ್ದರು. ಮರಿಸ್ವಾಮಿಯವರು ಕರೆದು, ಮೆಡಲ್ ಬರದಿದ್ದಕ್ಕೆ ಬೇಜಾರಾಯ್ತಾ? ಅಂತ ಕೇಳಿದರು.
`ಇಲ್ಲ ಸರ್. ಮೆಡಲ್ ಕೊಟ್ಟರೆ ತಗೊಳ್ತೀನಿ. ಇಲ್ಲದೇ ಹೋದರೆ, ನನ್ನ ಮಗಳಿಗೆ ಬೇರೆ ಹೆಸರಿಡ್ತೀನಿ,’ ಅಂತ ತಮಾಶೆ ಮಾಡಿದ್ರು.
`ಮಗಳಿಗೆ ಏನಂತ ಹೆಸರಿಡಬೇಕು ಅಂತ ಇದ್ದೀರಿ? ಮೆಡಲ್ ಕೊಡದೇ ಹೋದ್ರೆ ಏನಂತ ಇಡ್ತೀರಿ?’ ಅಂತ ಮರಿಸ್ವಾಮಿ ಕೇಳಿದ್ರು.
`ಈಗ ಸ್ಪಂದನ ಅಂತ ಇಡ್ಬೇಕು ಅಂತ ಇದ್ದೀನಿ. ಮೆಡಲ್ ಸಿಗದೇ ಹೋದ್ರೆ ಪ್ರಶಸ್ತಿ ಅಂತ ಇಡ್ತೀನಿ,’ ಅಂತ ಶಿವರಾಂ ಹೇಳಿದ್ರು.
`ಸ್ಪಂದನ ಅಂತಲೇ ಇಡಿ. ಅದು ಹ್ಯಾಗೆ ಮೆಡಲ್ ಸಿಗೋಲ್ಲ ಅಂತ ನಾನೂ ನೋಡ್ತೀನಿ,’ ಅಂದ್ರು ಮರಿಸ್ವಾಮಿ.
ಶಿವರಾಂ ಏನೋ ಮಗಳಿಗೆ ಸ್ಪಂದನ ಅಂತ ಹೆಸರಿಟ್ಟರು. ಆದ್ರೆ, ಅವರಿಗೆ ಮೆಡಲ್ ಕೊಡೋಕೆ ನಿಜಾಮುದ್ದಿನ್ ಒಪ್ಪಲೇ ಇಲ್ಲ. ಅಲ್ಲಿಂದ ಮುಂದೆ, ಈ ಮೆಡಲ್ ಗಳ ಸಹವಾಸವೇ ಬೇಡ ಅಂತ ಶಿವರಾಂ ಸುಮ್ಮನಿದ್ದರು.
ಒಂದೈದಾರು ವರ್ಷ ಅಗಿರಬಹುದು. ವೀರಪ್ಪನ್ ಹಿಡಿಯಲು ಸರ್ಕಾರ ರಚಿಸಿದ್ದ ಎಸ್ ಟಿ ಎಫ್ ನಲ್ಲಿ  ಶಿವರಾಂ ಕೆಲಸ ಮಾಡುತ್ತಿದ್ದರು. ಒಂದು ದಿನ ಕ್ಯಾಂಪ್ ನಲ್ಲಿ ಇದ್ದಾಗ ಟೆಲಿಗ್ರಾಂ ಬಂತು. ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ಹಂತಕ ಶಿವರಸನ್ ಮತ್ತು ಅವನ ತಂಡದವರು ಅಡಗಿಕೊಂಡಿದ್ದಾಗ, ಅದನ್ನು ಪತ್ತೆ ಹಚ್ಚಿ, ಕೇಂದ್ರದ ತಂಡದವರು ಬರುವವರೆಗೆ ಆ ಮನೆಯನ್ನು ಸುತ್ತುವರೆದ ಪೋಲಿಸ್ ತಂಡಕ್ಕೆ ಮೆಡಲ್ ಕೊಡಲಾಗಿದೆ. ಅದರಲ್ಲಿ ತಮಗೂ ಮೆಡಲ್ ಬಂದಿರುವುದರಿಂದ, ತಕ್ಷಣವೇ ಮರುದಿನದ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಹೊರಟು ಬರಬೇಕು ಎಂದು ಪೋಲಿಸ್ ಕೇಂದ್ರ ಕಛೇರಿಯಿಂದ ಬಂದಿತ್ತು.
ಶಿವರಸನ್ ಕೇಸ್, ಶಿವರಾಂ ಜೀವನದಲ್ಲಿ ಒಂದು ದೊಡ್ಡ ಕೇಸ್ ಅಂತ ಹೇಳಬಹುದು. ಶಿವರಸನ್ ಬೆಂಗಳೂರಿನಲ್ಲಿ ಅಡಗಿರುವ ಸುದ್ದಿ ಕೇಳಿದ ತಕ್ಷಣ, ಆಗಿನ ಡಿಸಿಪಿ ಆಗಿದ್ದ ಕೆಂಪಯ್ಯನವರ ಜೊತೆ ಕೆಲಸ ಶುರು ಹಚ್ಚಿಕೊಂಡು, ಮಾಹಿತಿ ಸಂಗ್ರಹಿಸಲು ಶುರು ಮಾಡಿದ್ದರು.
ಶಿವರಸನ್ ಮತ್ತು ಸಂಗಡಿಗರು ಕೋಣನಕುಂಟೆಯಲ್ಲಿ ಅವಿತುಕೊಂಡಿರುವ ಸುದ್ದಿ ಸಿಕ್ಕ ತಕ್ಷಣ, ಬೆಳಗ್ಗೆ ಹಾಲು ಕೊಡುವವಳ ಜೊತೆ ಕೋಣನಕುಂಟೆಯ ಮನೆ ತಲುಪಿದ ಮೊದಲ ತಂಡದಲ್ಲಿದ್ದವರೇ ಶಿವರಾಂ ಮತ್ತು ರಮೇಶ್ ಚಂದ್ರ. ಆಕೆ ಹಾಲು ಕೊಟ್ಟ ತಕ್ಷಣ, ಶಿವರಸನ್ ತಂಡದವರು ಒಳಗೆ ಇದ್ದಾರೆ ಅಂತ ಗ್ಯಾರಂಟಿ ಮಾಡಿಕೊಂಡು, ಅವರು ಹೊರಗೆ ಬರದಂತೆ ಬಾಗಿಲುಗಳನ್ನು ಹೊರಗಿನಿಂದ ಭದ್ರಪಡಿಸಿದ್ದರು. ಹಾಗೇನಾದ್ರೂ ಹೊರಗೆ ಬಂದರೆ, ಅವರನ್ನು ತಡೆಯೋಕೆ ಅಂತ ಶಿವರಾಂ ಮತ್ತೆ ರಮೇಶ್ ಚಂದ್ರ ಅವರನ್ನು ಮನೆ ಪಕ್ಕದಲ್ಲೇ ಕಾವಲಿಗೆ ಬಿಟ್ಟು,  ಉಳಿದ ಪೋಲಿಸರು ದೂರದಿಂದ ಸುತ್ತುವರೆದಿದ್ದರು.
ಇವರಿಬ್ಬರು ಮನೆಯ ಗೋಡೆಗೆ ಬೆನ್ನು ಕೊಟ್ಟು ನಿಲ್ಲಬೇಕಿತ್ತು. ಒಳಗಿರುವವರು ಗುಂಡು ಹಾರಿಸಿದರೆ, ಮೊದಲು ತಗಲುತ್ತಿದ್ದದ್ದು ಇವರಿಬ್ಬರಿಗೆ. ಕೇಂದ್ರದ ತಂಡ ಬರುವ ಹೊತ್ತಿಗೆ ಸಾಯಂಕಾಲವಾಗಿತ್ತು. ಅಲ್ಲಿಯವರೆಗೆ ಕಾವಲು ಕಾಯುತ್ತಿದ್ದ ಇವರಿಬ್ಬರಿಗೆ ಮುಕ್ತಿ ಸಿಕ್ಕಿದ್ದೇ ಆಗ.
ಏನೋ ಒಂದು.. ಈ ಕೇಸಿನಲ್ಲಾದರೂ ನನ್ನ ಕೆಲಸ ಗುರುತಿಸಿದ್ದಾರಲ್ಲಾ ಅಂತ ಅನ್ಕೊಂಡು, ಶಿವರಾಂ ರಜೆ ಹಾಕಿ, ಬೆಂಗಳೂರಿಗೆ ಬಸ್ ಹತ್ತಿದರು. ಬೆಂಗಳೂರಿಗೆ ತಲುಪುವಾಗ ರಾತ್ರಿಯಾಗಿತ್ತು. ಬೆಳಗ್ಗೆ ಎದ್ದವರೇ ರಮೇಶ್ ಚಂದ್ರ ಅವರಿಗೆ ಫೋನ್ ಹಚ್ಚಿದರು.
`ನೀನ್ಯಾಕೋ ಬರೋಕೆ ಹೋದೆ? ನಿಂಗೂ ಮೆಡಲ್ ಇಲ್ಲ. ನಂಗೂ ಇಲ್ಲ. ಮೊದಲು ಲಿಸ್ಟ್ ನಲ್ಲಿ ಇಬ್ಬರ ಹೆಸರೂ ಅನೌನ್ಸ್ ಆಗಿತ್ತು. ನೆನ್ನೆ ಸಾಯಂಕಾಲ ಏನೋ ಲಾಸ್ಟ್ ಮಿನಿಟ್ ಚೇಂಜಸ್ ಅಂತೆ, ನಮ್ಮಿಬ್ಬರನ್ನ ಬಿಟ್ಟು, ಬೇರೆಯವರಿಗೆ ಕೊಟ್ಟಿದ್ದಾರೆ,’ ಅಂತ ತಣ್ಣಗೆ ಹೇಳಿದರು ರಮೇಶ್ ಚಂದ್ರ.
ಹೊಸ ಲಿಸ್ಟ್ ನೋಡಿದಾಗ ಶಿವರಾಂ ದಂಗು ಬಡಿದು ಹೋಗಿದ್ದಾರೆ. ಒಂದಿಷ್ಟು ಜನ ಕೆಲಸ ಮಾಡಿರುವವರ ಜೊತೆ, ಕಾಫಿ, ಟೀ ಸಪ್ಲೈ ಮಾಡಿದವರಿಗೆ ಕೂಡ ಮೆಡಲ್ ಕೊಡಲಾಗಿತ್ತು. ಇದಕ್ಕೆ ಹ್ಯಾಗೆ ರಿಯಾಕ್ಟ್ ಮಾಡ್ಬೇಕು ಅಂತ ಶಿವರಾಂಗೆ ಗೊತ್ತಾಗ್ಲೇ ಇಲ್ಲ. ಇನ್ನೇನು ಬೆಂಗಳೂರಿಗೆ ಬಂದಾಗಿದೆ. ಒಂದ್ಸಲ ಕೆಂಪಯ್ಯನವರಿಗೆ ಮುಖ ತೋರಿಸಿ ಹೋದರಾಯ್ತು, ಅನ್ಕೊಂಡು ಸೀದ ಪೋಲಿಸ್ ಕೇಂದ್ರ ಕಛೇರಿಗೆ ಬಂದಿದ್ದಾರೆ .
ಇವರನ್ನ ನೋಡಿದ ತಕ್ಷಣ ಕೆಂಪಯ್ಯನವರು, `ಏನಯ್ಯ? ಸಾಯಂಕಾಲ ಮೆಡಲ್ ತಗೊಳ್ಳೋಕೆ ರೆಡಿನಾ?’ ಅಂತ ತಮಾಷೆ ಮಾಡಿದ್ದಾರೆ.
`ನಮಗೆಲ್ಲ ಯಾರು ಕೊಡ್ತಾರೆ ಸರ್, ಮೆಡಲ್?’ ಅಂತ ಸಪ್ಪೆಯಾಗಿ ಹೇಳಿದ್ದಾರೆ ಶಿವರಾಂ.
`ಯಾಕೆ? ಏನಾಯ್ತು? ನಾನೆ ನೋಡಿದ್ದೀನಿ ಲಿಸ್ಟ್ ನಲ್ಲಿ ನಿನ್ನ ಹೆಸರು,’ ಅಂದಿದ್ದಾರೆ.
ನೆಡದಿದ್ದನೆಲ್ಲ ಶಿವರಾಂ ಹೇಳಿದ ತಕ್ಷಣ ಕೆಂಪಯ್ಯ ಸಿಟ್ಟಿಗೆದ್ದಿದ್ದಾರೆ. `ನಾನು ಆಪರೇಶನ್ ಹೆಡ್ ಮಾಡಿದ್ದು. ನಂಗೆ ಗೊತ್ತು, ಯಾರ್ಯಾರು ಕೆಲಸ ಮಾಡಿದ್ದಾರೆ ಅಂತ. ನಿಂಗೆ ಮತ್ತೆ ರಮೇಶ್ ಚಂದ್ರನಿಗೆ ಮೆಡಲ್ ಕೊಡದೇ ಹೋದ್ರೆ, ನಾನೂ ಮೆಡಲ್ ತಗೊಳ್ಳೋದಿಲ್ಲ,’ ಅಂತ ಕೂಗಾಡಿದ್ದಾರೆ.
ಮತ್ತೊಂದು ಘಂಟೆಯೊಳಗೆ ಶಿವರಾಂ ಮತ್ತು ರಮೇಶ್ ಚಂದ್ರರ ಹೆಸರು ಮತ್ತೆ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಏನೋ ಒಂದು, ಅನ್ಕೊಂಡು ಸಾಯಂಕಾಲ ಇಬ್ಬರೂ ಸಂಸಾರ ಸಹಿತವಾಗಿ, ಮೆಡಲ್ ಪ್ರಧಾನ ಸಮಾರಂಭಕ್ಕೆ ಹೋದರು.
ಎಲ್ಲರ ಹೆಸರು ಕರೆದ ಮೇಲೆ, ಇನ್ಸ್ಪೆಕ್ಟರ್ ಗಳಲ್ಲಿ ಕೊನೆಯದಾಗಿ ರಮೇಶ್ ಚಂದ್ರ ಮತ್ತು ಶಿವರಾಂ ಹೆಸರು ಕರೆದಿದ್ದಾರೆ. ಮೆಡಲ್ ಇಸ್ಕೊಂಡ ಶಿವರಾಂ, ಮೆಡಲ್ ನೋಡುತ್ತಾ, ಸ್ಟೇಜ್ ಇಳಿದಾಗ, ಅವರಿಗಿಂತ ಮೊದಲು ಮೆಡಲ್ ತಗೊಂಡ ಇನ್ಸ್ ಪೆಕ್ಟರ್ ಸಿಕ್ಕಿದ್ದಾರೆ.
`ಕಂಗ್ರಾಚ್ಯುಲೇಶನ್’ ಅಂತ ಶಿವರಾಂ ಹೇಳಿ ಮುಗಿಸುವ ಮೊದಲೇ, ಆ ಇನ್ಸ್ ಪೆಕ್ಟರ್, `ಶಿವರಾಂ, ಈ ಮೆಡಲ್ ನಂದು. ನಿಮ್ಮ ಹೆಸರನ್ನೆಲ್ಲಾ ಕೊನೆ ಗಳಿಗೇಲಿ ಸೇರ್ಸಿದ್ರಲ್ಲಪ್ಪಾ… ಅದಕ್ಕೆ ನಂದನ್ನ ನಿಮಗೆ ಸ್ಟೇಜ್ ಮೇಲೆ ಕೊಡೋಕೆ ಅಂತ ಇಸ್ಕೊಂಡಿದ್ರು. ನಿಮಗೆ ಹೊಸ ಮೆಡಲ್ ಆರ್ಡರ್ ಮಾಡಿದ್ದಾರೆ. ಮುಂದಿನ ವಾರ ಮನೆಗೆ ಕಳುಹಿಸಿಕೊಡಬಹುದು,’ ಅಂದು ಮೆಡಲ್ ಕೈಯಿಂದ ಕಿತ್ತುಕೊಂಡು ಹೊರಟೇ ಬಿಟ್ಟ.
ಮೊದಲೇ ತಲೆಕೆಟ್ಟು ಹೋಗಿದ್ದ ಶಿವರಾಂಗೆ ಏನು ಹೇಳ್ಬೇಕು ಅಂತ ಗೊತ್ತಾಗ್ಲೇ ಇಲ್ಲ. ಹಾಗೇ ಕಾಲೆಳೆದುಕೊಂಡು, ತಮ್ಮ ಮನೆಯವರು ಕೂತ ಕಡೆ ಹೋಗಿ, ಕುರ್ಚಿ ಮೇಲೆ ಕುಕ್ಕರಿಸಿದರು. ಅಲ್ಲೇ ಪಕ್ಕದ ಕುರ್ಚಿಯಲ್ಲಿ ಕೂತಿದ್ದ ಪುಟ್ಟ ಸ್ಪಂದನ, ಅಪ್ಪನ ತೊಡೆ ಮೇಲೆ ಹತ್ತಿ ಕೇಳಿದಳು: `ಅಪ್ಪ… ನಿನ್ನ ಮೆಡಲ್ ನಂಗೆ ತೋರಿಸ್ತೀಯಾ?’ ಅಂತ.
ಕಥೆ ಮುಗಿಸಿದ ಶಿವರಾಂ ಹೇಳಿದ್ರು: `ವಿನಯ್, ಯಾಕಾದ್ರೂ ಬದ್ಕಿದ್ದೀನಿ ಅನ್ನಿಸ್ಬಿಟ್ಟಿತ್ತು, ಅವತ್ತು. ಆರು ವರ್ಷದ ಮಗೂಗೆ ಈ ರಾಜಕೀಯನ ಹ್ಯಾಗೆ ಹೇಳೋದು. ಇಲ್ಲೇ ಸತ್ತು ಹೋಗ್ಬಾರ್ದಾ? ಅಂತ ಅನ್ನಿಸಿ, ಕಣ್ಣಲ್ಲಿ ನೀರು ಬಂತು.’
ಭಾವೋದ್ವೇಗಕ್ಕೆ ಒಳಗಾಗಿ ಶಿವರಾಂ, ಕಣ್ಣಲ್ಲಿ ನೀರು ತುಂಬ್ಕೊಂಡು ಕಥೆ ಹೇಳ್ತಿದ್ರೆ, ಎದುರು ಕೂತು ನಾನು ಬಿದ್ದು ಬಿದ್ದು ನಗ್ತಿದ್ದೆ. ಆ ಪುಟ್ಟ ಸ್ಪಂದನಳನ್ನು ನಾನು ನೋಡಿದ್ದೇನೆ. ಈಗ ದೊಡ್ಡವಳಾಗಿ, ನಟ ವಿಜಯ್ ರಾಘವನನ್ನು ಮದುವೆಯಾಗಿದ್ದಾಳೆ. ಈ ದೊಡ್ಡ ಹುಡುಗಿಯನ್ನು ನಾನು ನೋಡಿಲ್ಲ.
ಶಿವರಾಂ ನೆನಪಾದಾಗಲೆಲ್ಲ, ಪುಟ್ಟ ಸ್ಪಂದನಳ ಮುಖ ಒಮ್ಮೆ ಕಣ್ಣ ಮುಂದೆ ಬರುತ್ತೆ.



ಮಾಕೋನಹಳ್ಳಿ ವಿನಯ್ ಮಾಧವ್