ಶನಿವಾರ, ಮಾರ್ಚ್ 17, 2012

ಕಂಬಾಲಪಲ್ಲಿ


ಏಳು ಹೆಣಗಳ ಮಧ್ಯ ನಿಂತಿತ್ತೊಂದು ನಾಯಿ…..


`ಸ್ಟಾರ್ಟ್ ಟು ಚಿಂತಾಮಣಿ ವಿತ್ ಫೋಟೋಗ್ರಾಫರ್’ ಅಂತ ಬ್ಯುರೋ ಛೀಫ್ ಮಟ್ಟೂ ಫೋನ್ ಮಾಡಿ ಹೇಳಿದಾಗ  ಶಾಪ ಹಾಕಿದೆ. ಮಧ್ಯಾಹ್ನ ಊಟಕ್ಕೆ ಸಿಕ್ತೀನಿ ಅಂತ ಯಾರಿಗೋ ಹೇಳಿದ್ದೆ. ಅದಾದ ಮೇಲೆ ಇನ್ನೊಬ್ಬರು ಯಾವುದೋ ವರದಿಗೆ ದಾಖಲೆಗಳನ್ನು ಕೊಡ್ತೀನಿ ಅಂದಿದ್ದರು. ಆಗಲೇ 11 ಘಂಟೆ ಆಗಿದ್ದರಿಂದ, ಚಿಂತಾಮಣಿಗೆ ಹೋಗಿ ಬಂದು, ಈ ಎರಡು ಕೆಲಸ ಮುಗಿಸೋಕ್ಕೆ ಆಗೋಲ್ಲ ಅಂದ್ಕೊಂಡೆ.
ಕಮೀಶನರ್ ಆಫೀಸ್ ನಿಂದ ಹೊರಡುವ ಮೊದಲು ಇಂಟೆಲಿಜೆನ್ಸ್ ವಿಭಾಗದ ನಾಗರಾಜ್ ಕಂಡು, ಚಿಂತಾಮಣಿಯಲ್ಲಿ ಏನಾಯ್ತು? ಅಂತ ಕೇಳಿದೆ. ` `ಚಿಂತಾಮಣಿಯಿಂದ 20 ಕಿಲೋಮೀಟರ್ ದೂರದಲ್ಲಿ ಕಂಬಾಲಪಲ್ಲಿ ಅಂತ ಹಳ್ಳಿ. ಅಲ್ಲಿ ಏಳು ಜನ ದಲಿತರನ್ನ ಕೊಲೆ ಮಾಡಿದ್ದಾರಂತೆ,’ ಅಂದರು.
ಸರಿ, ಇನ್ನೇನು ರಾತ್ರಿವರೆಗೆ ಬರೋಕ್ಕಾಗಲ್ಲ, ಅಂದ್ಕೊಂಡು ಆಫೀಸಿಗೆ ಬರೋ ಹೊತ್ತಲ್ಲಿ, ಕನ್ನಡ ಪ್ರಭದಿಂದ ಉ.ಮ.ಮಹೇಶ್ ಮತ್ತು ಫೋಟೋಗ್ರಾಫರ್ ಈಶ್ವರ ತಯಾರಾಗಿ ನಿಂತಿದ್ದರು. ಕೆಳಗೆ ಕಾಯುತ್ತಿದ್ದ ಕಾರಿನಲ್ಲಿ ಚಿಂತಾಮಣಿಯ ಕಡೆಗೆ ಹೊರಟೆವು.
ಚಿಂತಾಮಣಿ ತಲುಪಿದ ತಕ್ಷಣ, ಅಲ್ಲಿದ್ದ ಪೋಲಿಸ್ ಹತ್ತಿರ ಕಂಬಾಲಪಲ್ಲಿಗೆ ದಾರಿ ಕೇಳಿದೆ. ಅವನು ದಾರಿ ಹೇಳಿದ ತಕ್ಷಣ, `ಅದು ಬಿಲ್ಲಾಂಡ ಹಳ್ಳಿಗೆ ಹೋಗುತ್ತಲ್ವಾ?’ ಅಂತ ಕೇಳಿದೆ. `ಬಿಲ್ಲಾಂಡ ಹಳ್ಳಿಯಿಂದ ಎರಡೇ ಕಿಲೋಮೀಟರ್,’ ಅಂದಾಗ, `ಈ ಗಲಾಟೆಗೆ ಮತ್ತು ಬಿಲ್ಲಾಂಡ ಹಳ್ಳಿಗೆ ಏನಾದ್ರೂ ಸಂಬಂಧ ಇದೆಯಾ?’ ಅಂತ ಕೇಳಿದೆ. `ನಂಗೊತ್ತಿಲ್ಲ,’ ಅಂದವನೇ ಮುಖ ತಿರುಗಿಸಿಕೊಂಡ.
ಕಾರು ಮುಂದೆ ಹೋಗುತ್ತಿದ್ದಂತೆ ಈಶ್ವರ ಕೇಳಿದ: `ಅದ್ಯಾವ ಗಲಾಟೆ ಮಾಮ?’ ಅಂತ. `ಎರಡು ವರ್ಷ ಆಗ್ತಾ ಬಂತು ಕಣೋ. ಊರವರೆಲ್ಲಾ ಸೇರಿ ಪೋಲಿಸರಿಗೆ ಹೊಡೆದಿದ್ದರು. ಇಬ್ಬರು ಪೋಲಿಸ್ ಸತ್ತು, ಆರೇಳು ಜನರಿಗೆ ಸರಿಯಾಗಿ ಗಾಯ ಆಗಿತ್ತು. ಊರವರೆಲ್ಲಾ ಒಳ್ಳೆ ಜನಗಳು. ಎಲ್ಲರೂ ಸೇರಿ ದಲಿತ ಸಂಘರ್ಷ ಸಮಿತಿಯ ಆಫೀಸ್ ತೆಗೆಯಕೂಡದು ಅಂತ ಗಲಾಟೆ ಮಾಡಿದ್ದರು. ಅದರಲ್ಲಿ ದಲಿತರೇ ಮುಂದೆ ಇದ್ದರು. ಈಗ ನೋಡಿದ್ರೆ, ಎಲ್ಲಾ ಎಡವಟ್ಟಾದ ಹಾಗೆ ಕಾಣ್ತದೆ,’ ಅಂದೆ.
ಎರಡು ವರ್ಷಗಳ ಹಿಂದೆ ಇದೇ ದಾರಿಯಲ್ಲಿ ಬಂದಾಗ, ನನ್ನ ಜೊತೆ ಫೋಟೋಗ್ರಾಫರ್ ಸಾಗ್ಗೆರೆ ರಾಧಾಕೃಷ್ಣ ಇದ್ದ  ನಾವು ಬಿಲ್ಲಾಂಡ ಹಳ್ಳಿಗೆ ಹೋದಾಗ ಒಂದೇ ಒಂದು ಗಂಡು ಪ್ರಾಣಿಯೂ ಊರಲ್ಲಿರಲಿಲ್ಲ. ಒಂದಿಬ್ಬರು ಅಂಗವಿಕಲರನ್ನು ಬಿಟ್ಟರೆ, ಬರೀ ಪೋಲಿಸರು. ಎಲ್ಲಾ ಮನೆಗಳ ಬಾಗಿಲನ್ನು ಭದ್ರವಾಗಿ ಹಾಕಲಾಗಿತ್ತು. ಇಡೀ ಊರನ್ನು ಸುತ್ತಿದರೂ ಮಾತಾಡಲು ಯಾರೂ ಸಿಕ್ಕಿರಲಿಲ್ಲ. ಒಬ್ಬ ವಯಸ್ಸಾದವರು ಜಗುಲಿಯ ಲ್ಲಿ ಕೂತಿದ್ದರು. ಅವರಿಗೆ ತೆಲುಗು ಬಿಟ್ಟು ಯಾವ ಭಾಷೆಯೂ ಬರುತ್ತಿರಲಿಲ್ಲ. ರಾಧಾಕೃಷ್ಣ ಮಾತಾಡಲು ಪ್ರಯತ್ನಿಸಿದರೂ, ಅವರು ಮಾತಾಡಲು ಒಪ್ಪಲಿಲ್ಲ.
ನಾವು ಬರೋಕ್ಕೆ ಮುಂಚೆಯೇ ಎಲ್ಲಾ ಪತ್ರಿಕೆಗಳ ವರದಿಗಾರು ಮತ್ತು ಹಿರಿಯ ಪೋಲಿಸ್ ಅಧಿಕಾರಿಗಳು ಆಗಲೇ ಬಂದು ಹೋಗಿದ್ದರಿಂದ, ನಮಗೆ ಇನ್ನೂ ಗಾಬರಿಯಾಗಲು ಶುರುವಾಯ್ತು. ಊರಿಡೀ ಸುತ್ತಿದಮೇಲೆ, ಒಂದು ಜಗಲಿಯ ಮೇಲೆ ಕೂತಿದ್ದ ಪೋಲಿಸ್ ಆಫೀಸರ್ ಒಬ್ಬರ ಜೊತೆ ಹೋಗಿ ಕೂತೆ. ಇನ್ಸ್ ಪೆಕ್ಟರ್ ಅಥವಾ ಡಿ.ವೈ.ಎಸ್.ಪಿ ಇರಬೇಕು ಅಂದ್ಕೊಂಡೆ. ಅವರ ಜೊತೆ ಐದು ನಿಮಿಷ ಮಾತಾಡಿದ ಮೇಲೆ ಹೇಳಿದರು: `ನೋಡಿ, ನನ್ನ ಹೆಸರು ಎಲ್ಲೂ ಬರಬಾರದು. ತುಂಬಾ ಸೆನ್ಸಿಟಿವ್ ಇಶ್ಯೂ. ತುಂಬಾ ಬೇಜಾರಾಗುತ್ತೆ,’ ಅಂದರು.
`ನೋಡಿ, ಅಲ್ಲಿ ಕಾಣುತ್ತಲ್ಲ ಕಲ್ಲಿನ ದಿಬ್ಬ, ಅದನ್ನು ದಾಟಿದರೆ ಆಂಧ್ರಪ್ರದೇಶ. ಇನ್ನೂರು ಮೀಟರ್ ಕೂಡ ಇಲ್ಲ. ಈ ಊರು ಅಂತಲ್ಲ. ಇಲ್ಲಿನ ಸುತ್ತಮುತ್ತಲ ಹಳ್ಳಿಯ ಜನಗಳೆಲ್ಲಾ ತುಂಬಾ ಒಳ್ಳೆಯವರು. ನೋಡಿ, ಸ್ವಾತಂತ್ರ್ಯ ಬಂದ ಮೇಲಿಂದ, ಈ ಸುತ್ತ ಮುತ್ತದ ಹತ್ತು ಹಳ್ಳಿಗಳಿಂದ, ಒಂದೇ ಒಂದು  ಪೋಲಿಸ್ ಕಂಪ್ಲೇಂಟ್ ಇಲ್ಲ. ಹತ್ತಿರದ ಪೋಲಿಸ್ ಸ್ಟೇಷನ್ ಎಂದರೆ ಚಿಂತಾಮಣಿ. ಇರೋದೇ ಎರಡು ಜಾತಿಗಳು. ರೆಡ್ಡಿ ಮತ್ತು ದಲಿತರು. ರೆಡ್ಡಿಗಳ ಮನೆಯಲ್ಲಿ ದಲಿತರು ಕೆಲಸಕ್ಕೆ ಹೋಗ್ತಾರೆ. ಹಾಗೇನೆ, ಅನುಕೂಲಸ್ಥ ದಲಿತರ ಮನೆಗಳಿಗೆ ರೆಡ್ಡಿಗಳು ಕೆಲಸಕ್ಕೆ ಹೋಗ್ತಾರೆ. ಏನಾದ್ರೂ ಸಣ್ಣ ಪುಟ್ಟ ಜಗಳಗಳಾದ್ರೆ, ಅವರವರೇ ಕೂತು ಸಮಾಧಾನ ಮಾಡ್ತಿದ್ರು,’ ಅಂದರು.
`ಮತ್ತೆ ಪೋಲಿಸ್ ಯಾಕೆ ಇಲ್ಲಿ ಬಂದು ಪೆಟ್ಟು ತಿನ್ನೋಕೆ ಹೋದ್ರು?’ ಅಂತ ಕೇಳ್ದೆ.
`ಇತ್ತೀಚೆಗೆ, ಈ ಕಡೆಯ ಕೆಲವು ಹುಡುಗರು ಓದೋಕೆ ಅಂತ ಚಿಂತಾಮಣಿಗೆ ಹೋದ್ರು. ಅವರೊಲ್ಲಬ್ಬ ಹುಡುಗಂಗೆ ಶಿವಣ್ಣನ ಪರಿಚಯವಾಯ್ತು. ಶಿವಣ್ಣ ಚಿಂತಾಮಣಿಯಲ್ಲಿ ಮುಂದಕ್ಕೆ ಬರುತ್ತಿರುವ ದಲಿತ ನಾಯಕ. ಒಂದ್ಸಲ ಅವನನ್ನು ಊರಿಗೆ ಕರೆದುಕೊಂಡು ಬಂದನಂತೆ. ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯಾವುದೇ ದಲಿತ ಸಂಘಟನೆಗಳ ಶಾಖೆಗಳಿಲ್ಲ ಅಂತ ಬೇಜಾರು ಮಾಡಿಕೊಂಡು, ಇಲ್ಲಿ ಒಂದು ಶಾಖೆ ತೆರೆಯುವ ವಿಷಯ ಮಾತಾಡಿದ್ದಾನೆ. ಆದರೆ ಆ ಹುಡುಗನ ಅಪ್ಪ ಇಬ್ಬರಿಗೂ ಬೈದು, ಸರಿ ಇರುವ ಊರಿನಲ್ಲಿ ಇಂಥಾದ್ದೇನೂ ಅವಶ್ಯಕಥೆ ಇಲ್ಲಾ ಅಂದಿದ್ದಾರೆ. ಇಬ್ಬರೂ ವಾಪಾಸ್ ಚಿಂತಾಮಣಿಗೆ ಹೋಗಿದ್ದಾರೆ,’ ಅಂದ್ರು.
ಆ ಕಥೆ ಅಲ್ಲಿಗೆ ನಿಂತಿದ್ದರೆ ಪರವಾಗಿಲ್ಲ. ಚಿಂತಾಮಣಿಗೆ ಹೋದ ಹುಡುಗರು, ಆದದ್ದಾಗಲಿ ಒಂದು ಶಾಖೆಯನ್ನು ತೆಗೆದೇ ಬಿಡುವ, ಎಂಬ ಹಠಕ್ಕೆ ಬಿದ್ದರು. ಊರವರೆಲ್ಲ ಸೇರಿ, ಅಷ್ಟೇ ಹಠದಿಂದ ವಿರೋಧಿಸಿದರು. ವಿಷಯ ಪೋಲಿಸ್ ಠಾಣೆಯ ಮೆಟ್ಟಲೇರಿತು ಮತ್ತು ಊರಿನ ದಲಿತರೇ `ನಮಗೆ ಹೊರಗಿನವರು ಬಂದು ಯಾವುದೇ ಸಂಘ ಸಂಸ್ಥೆಗಳ ಶಾಖೆಗಳನ್ನು ತೆಗೆಯುವ ಅವಶ್ಯಕತೆಯಿಲ್ಲ’ ಅಂತ ಹೇಳಿದರು. ಇನ್ನೇನು ಶಾಖೆ ತೆರೆಯಲು ಎರಡು ದಿನ ಬಾಕಿ ಇದೆ ಎನ್ನುವಾಗ, ಪೋಲಿಸರು ಊರಿಗೆ ಕಾವಲು ಹಾಕಿದರು. ಹಾಗೆಯೇ, ಶಾಖೆ ತೆರೆಯದಂತೆ, ಶಿವಣ್ಣನ ಜೊತೆ ಮಾತುಕತೆ ಶುರು ಮಾಡಿದರು.
ಮೊದಲ ಸಲ ಊರಿನ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಬಂದ ಪೋಲಿಸರನ್ನು ಊರವರು ಚೆನ್ನಾಗಿಯೇ ನೋಡಿಕೊಂಡರು. ಪೋಲಿಸರು ಮುಖ್ಯ ರಸ್ತೆಯಿಂದ ಊರಿಗೆ ತಿರುಗುವ ಜಾಗದಲ್ಲಿ ಒಂದು ಸಣ್ಣ ಕ್ಯಾಂಪ್ ಹಾಕಿಕೊಂಡಿದ್ದರು. ಹಳ್ಳಿಯವರೆಲ್ಲ ಸೇರಿ ಕ್ಯಾಂಪಿನ ಹತ್ತಿರವೇ ದೊಡ್ಡ ಪಾತ್ರೆಗಳಲ್ಲಿ ಪೋಲಿಸರಿಗೆ ಅಡುಗೆ ಮಾಡಿ ಊಟ ಬಡಿಸುತ್ತಿದ್ದರು.
ಎರಡು ದಿನ ಚೆನ್ನಾಗಿಯೇ ಇತ್ತು. ಮೂರನೇ ದಿನ ಬೆಳಗ್ಗೆ ಶಿವಣ್ಣ ಶಾಖೆ ತೆರೆಯುವ ನಿರ್ಧಾರವನ್ನು ಕೈ ಬಿಟ್ಟಿರುವುದಾಗಿ ಸುದ್ದಿ ಬಂತು. ಇನ್ನೇನು ಸಾಯಂಕಾಲದ ಹೊತ್ತಿಗೆ ಪೋಲಿಸರು ಅಲ್ಲಿಂದ ಜಾಗ ಖಾಲಿ ಮಾಡುವುದು ಅಂತ ಮಾತಾಡಿಕೊಳ್ತಾ ಇದ್ದರು.
ತೊಂದರೆ ಶುರುವಾಗಿದ್ದೇ ಮಧ್ಯಾಹ್ನ ಊಟದ ಹೊತ್ತಿನಲ್ಲಿ. ವೈರ್ ಲೆಸ್ ನಲ್ಲಿ ಶಿವಣ್ಣ ಪೋಲಿಸರ ಜೊತೆ ಬಿಲ್ಲಾಂಡ ಹಳ್ಳಿಯ ಕಡೆ ಹೊರಟ ಸುದ್ದಿ ಬಂತು. ವಿಷಯವೇನೆಂದರೆ, ಶಾಖೆ ತೆಗೆಯುವ ನಿರ್ಧಾರದಿಂದ ಹಿಂದೆ ಸರಿದಿದ್ದ ಶಿವಣ್ಣ, ಬಿಲ್ಲಾಂಡ ಹಳ್ಳಿಯಲ್ಲಿ ಧ್ವಜಾರೋಹಣ ಮಾಡಿ, ತಮ್ಮ ನಿರ್ಧಾರವನ್ನು ಅಲ್ಲಿ ಜನರೆದುರು ತಾವೇ ಪ್ರಕಟಿಸುವುದಾಗಿ ಹೇಳಿದ್ದರಂತೆ. ಅದಕ್ಕೆ ಒಪ್ಪಿದ ಪೋಲಿಸರು, ಶಿವಣ್ಣನನ್ನು ತಮ್ಮ ಜೊತೆಯಲ್ಲಿಯೇ ಕರೆದುಕೊಂಡು ಹೊರಟರಂತೆ.
ಆದರೆ ಇಲ್ಲಿ ಆದದ್ದೇ ಬೇರೆ. ಶಾಖೆಯನ್ನು ಪೋಲಿಸ್ ಬೆಂಗಾವಲಿನಲ್ಲಿ ಶಿವಣ್ಣ ಉದ್ಘಾಟಿಸುತ್ತಾರೆ ಅಂತ ಸುದ್ದಿ ಹಬ್ಬಿತು. ಅಲ್ಲಿದ್ದ ಊರಿನವರು ಪೋಲಿಸರ ಮೇಲೆ ತಿರುಗಿ ಬಿದ್ದರು. ಕುದಿಯುತ್ತಿದ್ದ ಸಾರನ್ನು ಪೋಲಿಸರ ಮೇಲೆ ಎರಚಿ. ಕೈಗೆ ಸಿಕ್ಕಿದ ದೊಣ್ಣೆ ಮತ್ತು ಕಲ್ಲುಗಳಲ್ಲಿ ಅವರನ್ನು ಮನಸೋ ಇಚ್ಚೆ ಥಳಿಸಿದರು. ಇಬ್ಬರು ಸತ್ತು ಹೋದರೆ, ಇನ್ನು ನಾಲ್ಕು ಜನ ಪಕ್ಕದ ಭಟ್ಟರಹಳ್ಳಿಯವರೆಗೆ ಓಡಿ, ಜೀವ ಉಳಿಸಿಕೊಂಡರು. ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರೂ ಕೂಡ ದಲಿತರೇ..
ಆಫೀಸರ್ ಕಥೆ ಹೇಳಿ ಮುಗಿಸಿದ ತಕ್ಷಣ,: `ಸರ್, ನೀವೂ ಈ ಕಡೆಯವರಾ?’ ಅಂತ ಕೇಳಿದೆ.
`ಇಲ್ಲಪ್ಪ, ನಾನು ಕೋಲಾರದ ಕಡೆಯವನು. ನನಗಾಗಲೀ, ನನ್ನ ಜಾತಿಗಾಗಲೀ, ಇದರ ಜೊತೆ ಸಂಬಂಧವೇ ಇಲ್ಲ,’ ಅಂತ ವಿಷಾದದ ನಗು ನಕ್ಕು, ತಮ್ಮ ಶರ್ಟನ್ನು ಸ್ವಲ್ಪ ಪಕ್ಕಕ್ಕೆ ಸರಿಸಿ ತಮ್ಮ ಭುಜದಲ್ಲಿದ್ದ ಜನಿವಾರ ತೋರಿಸಿದರು.
`ಸರ್, ತಮ್ಮ ಹೆಸರು ಗೊತ್ತಾಗಲಿಲ್ಲ,’ ಅಂದೆ.
`ಅದೊಂದು ಬೇಡಪ್ಪಾ. ಇನ್ನೆರೆಡು ವರ್ಷದಲ್ಲಿ ರಿಟೈರ್ ಆಗ್ತೀನಿ… ಹೊರಡು, ಲೇಟಾಗುತ್ತೆ,’ ಅಂದರು.
ಅಲ್ಲಿಂದ ನೇರವಾಗಿ ಚಿಂತಾಮಣಿಗೆ ಬಂದು ಶಿವಣ್ಣನ ಬಗ್ಗೆ ವಿಚಾರಿಸುವಾಗಲೇ, ಬಸ್ ಸ್ಟ್ಯಾಂಡ್ ಹತ್ತಿರದ ಕಟ್ಟಡದಿಂದ ಟೈಮ್ಸ್ ಆಫ್ ಇಂಡಿಯಾದ ರಿಪೋ ರ್ಟರ್ ವಿಕಾಸ್ ಹಂಡೆ ಹೊರಗೆ ಬರುತ್ತಿದ್ದ. ಅವನ ಹತ್ತಿರ ಹೋಗಿ ಮಾತಾಡಿದಾಗ, ಶಿವಣ್ಣನು ಆ ಕಟ್ಟಡದಲ್ಲಿದ್ದಾನೆಂದೂ, ಪೋಲಿಸರ ಮೇಲಿನ ಹಲ್ಲೆಯನ್ನು ರೆಡ್ಡಿಗಳು ಮಾತ್ರ ಮಾಡಿರುವುದಾಗಿ ಹೇಳಿದ್ದಾನೆಂದೂ, ಹೇಳಿದ.
ಇಂಥವನ ಹತ್ತಿರ ಏನು ಮಾತಾಡೋದು ಅನ್ಕೊಂಡು ಹಾಗೇ ವಾಪಾಸ್ ಬಂದಿದ್ದೆ.
ಇಷ್ಟೆಲ್ಲಾ ಒಗ್ಗಟ್ಟಿನಲ್ಲಿದ್ದ ಈ ಹಳ್ಳಿಯಲ್ಲಿ ಏನಾಯ್ತು? ಅಂತ ಯೋಚಿಸುವಾಗಲೇ ಭಟ್ಟರಹಳ್ಳಿಯ ಹತ್ತಿರ ಕಾರು ಬಂತು. ಮೊದಲಿಗೆ ನನ್ನ ಕಣ್ಣಿಗೆ ರಾಚಿದ್ದೇ ದೊಡ್ಡದೊಂಡು ಬೋರ್ಡ್: `ಭಟ್ಟರಹಳ್ಳಿ ಪೋಲಿಸ್ ಠಾಣೆ’. ಹೋದ ಸಲ ಗಲಾಟೆಯಾದಮೇಲೆ ಬಂತು ಅಂತ ಕಾಣುತ್ತೆ ಅನ್ಕೊಂಡೆ. ಅಲ್ಲಿಂದ ಮುಂದೆ ಹೋಗಿ ಕಂಬಾಲಪಲ್ಲಿ ಸೇರಿದಾಗ ಮೊದಲು ಕಂಡಿದ್ದು ಒಂದು ಹೆಣ ಮತ್ತು ಅದನ್ನು ಮನೆ ಹೊರಗಡೆ ನಿಂತು ನೋಡುತ್ತಿದ್ದ ಹೆಂಗಸರು.
ಆಗಿದ್ದಿಷ್ಟೆ. ಆ ದಿನ ಬೆಳಗ್ಗೆ, ಊರಿನ ನೀರು ಸರಬರಾಜು ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದ ಕೃಷ್ಣಾ ರೆಡ್ಡಿ, ನೀರು ಬಿಡಲು ಹೋದಾಗ, ದಲಿತರ ಒಂದು ಗುಂಪು ಅವನನ್ನು ಮಚ್ಚಿನಿಂದ ಕಡಿದು ಕೊಲೆ ಮಾಡಿದರಂತೆ. ಅರ್ಧ ಘಂಟೆಯೊಳಗೆ, ರೆಡ್ಡಿಗಳ ಗುಂಪೊಂದು ಬಂದು ಕೊಲೆಗಡುಕರನ್ನು ಹುಡುಕುವಾಗ, ಆಗ ತಾನೆ ಬಸ್ಸಿನಿಂದ ಇಳಿದ ದಲಿತರಿಬ್ಬರನ್ನು ಅಟ್ಟಿಸಿಕೊಂಡು ಹೋಗಿದ್ದಾರೆ. ಅವರು ಹತ್ತಿರ ಸಿಕ್ಕಿದ ಮನೆಯೊಳಗೆ ಓಡಿಹೋಗಿ ಬಾಗಿಲು ಹಾಕಿಕೊಂಡಾಗ, ಹೊರಗಿನಿಂದ ಚಿಲುಕ ಹಾಕಿ, ಎರಡೂ ಮನೆಗಳಿಗೆ ಬೆಂಕಿ ಹಾಕಿದ್ದಾರೆ. ಅದರಿಂದ ಇಬ್ಬರು ತಪ್ಪಿಸಿಕೊಂಡರೂ, ಏಳು ಜನ ಸುಟ್ಟುಹೋಗಿದ್ದಾರೆ.
ಕೃಷ್ಣ ರೆಡ್ಡಿಯ ಹೆಣ ದಾಟಿಕೊಂಡು, ಇನ್ನೂ ಏಳು ಶವಗಳಿದ್ದ ಜಾಗಕ್ಕೆ ಹೋಗುವಾಗ ಸಾಯಂಕಾಲವಾಗತೊಡಗಿತು. ಊರ ಹೊರಗಿನ ಹೊಲದಲ್ಲಿ ಏಳೂ ಶವಗಳನ್ನು ಇಡಲಾಗಿತ್ತು. 150 ಅಡಿಗಳ ಒಳಗೆ ಯಾರೂ ಹೋಗದಂತೆ ಪೋಲಿಸರು ಸುತ್ತುವರೆದಿದ್ದರು. ಒಂದು ಸಾವಿರಕ್ಕೂ ಹೆಚ್ಚು ಜನ ಅಲ್ಲಿ ಸೇರಿದ್ದರು. ಇಡೀ ಹೊಲವನ್ನು ಒಂದು ಸುತ್ತು ಬಂದಾಗ, ಅಲ್ಲಿ ಶಾಸಕ ಮುನಿಯಪ್ಪ ಮತ್ತು ಸಂಸದ ಮುನಿಯಪ್ಪರಿಬ್ಬರು ಇದ್ದದ್ದು ಕಂಡು ಬಂತು.
ಇಂಥಹ ಸಂದರ್ಭಗಳಲ್ಲಿ, ರಿಪೋರ್ಟರ್ ಮತ್ತು ಫೋಟೋಗ್ರಾಫರ್ ಗಳು ಒಟ್ಟಿಗೆ ಇರೋದಿಲ್ಲ. ಸ್ವಲ್ಪ ದೂರದಲ್ಲಿದ್ದುಕೊಂಡು, ಎಲ್ಲವನ್ನೂ ನೋಡುತ್ತಿರುತ್ತೇವೆ ಮತ್ತು ಸನ್ನೆಯ ಮೂಲಕ ಇನ್ನೊಬ್ಬರಿಗೆ ಸೂಚನೆ ನೀಡುತ್ತೇವೆ. ಆಗಾಗ ಒಬ್ಬರು ಇನ್ನೊಬ್ಬರ ಕಡೆಗೆ ಏನಾದರೂ ಸನ್ನೆಗಳಿವೆಯಾ ಅಂತ ತಿರುಗಿ ನೋಡುತ್ತಿರುತ್ತೇವೆ.
ಹಾಗೇ ಸುತ್ತುವಾಗ ಬಿಲ್ಲಾಂಡ ಹಳ್ಳಿಯಲ್ಲಿ ಸಿಕ್ಕಿದ್ದ ಪೋಲಿಸ್ ಆಫೀಸರ್ ಕಣ್ಣಿಗೆ ಬಿದ್ದರು. ನಾನು ಮಾತಾಡಲು ಹತ್ತಿರ ಹೋದರೆ, ಅವರು ತಿರುಗಿ ನೆಡೆದೇ ಬಿಟ್ಟರು. ನೆನಪಾಗಲಿಲ್ಲ ಅಂತ ಕಾಣುತ್ತೆ ಅನ್ಕೊಂಡು ಅವರ ಹಿಂದೆ ಹೋದಾಗ, ಅವರು ಹೇಳಿದರು: `ಒಂದೈದು ನಿಮಿಷ ಸುಮ್ಮನಿರು. ನಾ ಆಮೇಲೆ ಮಾತಾಡ್ತೀನಿ,’ ಅಂತ. ನಾನು ವಾಪಾಸು ತಿರುಗಿ, ರಾಜಕಾರಣಿಗಳಿದ್ದ ಗುಂಪಿನ ಜೊತೆ ಸೇರಿಕೊಂಡು, ಅವರು ಹೇಳುವುದನ್ನು ಕೇಳಿಸಿಕೊಳ್ಳಲು ಶುರುಮಾಡಿದೆ.
ಒಂದೈದು ನಿಮಿಷ ಬಿಟ್ಟು ಪೋಲಿಸ್ ಆಫೀಸರ್ ಕಡೆ ತಿರುಗಿ ನೋಡಿದಾಗ, ಅವರು ಸನ್ನೆಯಲ್ಲೇ ನನ್ನನ್ನು ಕರೆದರು. ಹತ್ತಿರ ಹೋದವನೇ: `ಏನ್ಸಾರ್, ಹೀಗಾಗಿಬಿಟ್ಟಿದೆ? ಎಷ್ಟೊಂದು ಒಗ್ಗಟ್ಟಲ್ಲಿ ಇದ್ರಲ್ವಾ?’ ಅಂದೆ.
`ಹೌದಪ್ಪಾ… ಏನು ಮಾಡೋದು ಹೇಳು. ಹೋದ್ಸಲದ ಗಲಾಟೆಯ ತೆನಿಖೆ ಸಮಯದಲ್ಲಿ ದಲಿತರಿಗೆ ಅನ್ಯಾಯವಾಗಿದೆ ಅಂತ ಕೂಗು ಎದ್ದಿತ್ತು. ತೆನಿಖೆ ಮುಗಿದು, ಚಾರ್ಜ್ ಶೀಟ್ ಹಾಕುವುದರ ಹೊತ್ತಿಗೆ, ಬಿಲ್ಲಾಂಡ ಹಳ್ಳಿಯ ಜೊತೆ, ಸುತ್ತ ಹತ್ತು ಹಳ್ಳಿಗಳಲ್ಲಿ ದಲಿತ ಸಂಘಟನೆಗಳ ಶಾಖೆಗಳು ಹುಟ್ಟಿಕೊಂಡವು. ಎಲ್ಲಾ ಊರುಗಳಲ್ಲೂ ಜಾತಿ ಆಧಾರದ ಮೇಲೆ ಗುಂಪುಗಾರಿಕೆ ಶುರುವಾಯ್ತು. ಇಲ್ಲಿಂದ ಬರುವ ಕೇಸ್ ಗಳನ್ನು ನೋಡಿ, ಇಲ್ಲಿಗೇ ಒಂದು ಪೋಲಿಸ್ ಔಟ್ ಪೋಸ್ಟ್ ಮಾಡಿದರು. ಈಗ ನೋಡಿದರೆ ಹೀಗಾಗಿದೆ. ಮುಂದೇನಾಗುತ್ತೋ ಗೊತ್ತಿಲ್ಲ,’ ಅಂದರು.
`ಮೊದಲನೇ ಕೊಲೆ ಯಾಕಾಯ್ತು?’ ಅಂತ ಕೇಳಿದೆ. `ನೆನ್ನೆ ಸಾಯಂಕಾಲ, ಇಬ್ಬರು ದಲಿತ ಹುಡುಗರು ಪಕ್ಕದ ಹಳ್ಳಿಗೆ ಹೋಗುವಾಗ, ನಮ್ಮ ಜಮೀನಿನ ಮೇಲೆ ಹೋಗ್ತೀರಾ?’ ಅಂತ ಗಲಾಟೆ ಶುರುವಾಗಿದ್ದು. ಇಲ್ಲೀ ವರೆಗೆ ತಲುಪಿದೆ,’ ಅಂದರು.
ಮನಸ್ಸಿಗೆ ಪಿಚ್ಚೆನಿಸಿತು. ಅವರಿಂದ ಬಿಳ್ಕೊಟ್ಟು  ಹಿಂದಕ್ಕೆ ತಿರುಗಿದೆ. ಹೆಣಗಳಿಂದ ಸ್ವಲ್ಪ ದೂರದಲ್ಲಿ ಏನೋ ಅಲ್ಲಾಡಿದಂತೆ ಅನ್ನಿಸಿತು. ಸರಿಯಾಗಿ ನೋಡಿದರೆ, ನಾಯಿಯೊಂದು ಹೆಣಗಳ ಕಡೆಗೆ ನಿಧಾನವಾಗಿ ಬರುತ್ತಿತ್ತು. ತಕ್ಷಣವೇ ಈಶನಿಗೆ ಹುಡುಕಿದೆ. ನನ್ನಿಂದ ಸ್ವಲ್ಪ ದೂರದಲ್ಲಿ ಬೆನ್ನು ಹಾಕಿಕೊಂಡು ನಿಂತಿದ್ದ. ಯಾಕೋ ನನ್ನ ಕಡೆ ತಿರುಗಲೇ ಇಲ್ಲ. ಸಣ್ಣ ಕಲ್ಲೊಂದನ್ನೆತ್ತಿ ಅದರಲ್ಲಿ ಹೊಡೆದಾಗ ತಿರುಗಿ, `ಏನು?’ ಎಂಬಂತೆ ತಲೆ ಆಡಿಸಿದ.
ನಾನು ಹೆಣಗಳ ಕಡೆಗೆ ತಿರುಗಿ ನೋಡಿ, ಮತ್ತೆ ಅವನ ಮುಖ ನೋಡಿದೆ.
ಅವನೂ ಆ ಕಡೆ ನೋಡಿದ, ಆದರೆ ಏನು ಅಂತ ಗೊತ್ತಾಗದೆ ಮತ್ತೆ ನನ್ನ ಮುಖ ನೋಡಿದ.
ನಾನು ಮತ್ತೆ ಹೆಣಗಳ ಕಡೆಗೆ ಸನ್ನೆ ಮಾಡಿ, `ನಾಯಿ’ ಎಂದು ಹೇಳುವಂತೆ ಬಾಯಯಾಡಿಸಿದೆ.
ಮತ್ತೆ ಹೆಣಗಳ ಕಡೆಗೆ ನೋಡಿದ ಈಶ, ನನ್ನ ಕಡೆನೇ ಬರೋಕೆ ಶುರುಮಾಡಿದ. ಅಷ್ಟರಲ್ಲಾಗಲೇ ನಾಯಿ ಹೆಣಗಳ ಪಕ್ಕಕ್ಕೇ ಬಂದಿತ್ತು. ನಾನು ಈಶನ ಕಡೆ ಓಡಿದವನೇ, `ನೋಡೋ ಅಲ್ಲಿ, ನಾಯಿ ಹೆಣ ತಿನ್ನೋಕೆ ಬರ್ತಿದೆ,’ ಅಂತ ಮೆಲ್ಲಗೆ ಹೇಳಿದ.
ಈಶ ನಿಧಾನವಾಗಿ ಹೆಣಗಳ ಕಡೆಗೆ ಹೋಗಲು ಆರಂಭಿಸಿದ. ನಮ್ಮಿಬ್ಬರ ಸನ್ನೆಗಳನ್ನು ಗಮನಿಸುತ್ತಿದ್ದ ಪೋಲಿಸ್ ಒಬ್ಬ ಓಡಿಹೋದವನೇ, ಹೆಣಕ್ಕೆ ಬಾಯಿ ಹಾಕುತ್ತಿದ್ದ ನಾಯಿಯನ್ನು ಓಡಿಸಿದ. ಈಶ ಅಸಹಾಯಕತೆಯಿಂದ ನನ್ನ ಮುಖ ನೋಡುವುದರೊಳಗೆ, ನನಗೆ ಪಿತ್ತ ನೆತ್ತಿಗೇರಿತ್ತು.
`ಯಾವ ಬೋಳಿಮಗ ನಿನಗೆ ಫೋಟೋಗ್ರಾಫರ್ ಕೆಲಸ ಕೊಟ್ಟಿದ್ದೋ? ಕತ್ತೆ ಕಾಯೋಕೆ ಹೋಗು. ಕ್ಯಾಮೆರಾ ಹಿಡ್ಕೊಂಡು ಬಂದ್ರೆ ಸಾಕಾ? ಅಲ್ಲ ಕಣೋ, ಎರಡು ಸಾವಿರ ಜನಗಳ ಮಧ್ಯ ನಾಯಿ ಹೆಣಕ್ಕೆ ಬಾಯಿ ಹಾಕೋದು ನಿನಗೆ ಫೋಟೋ ಅಂತ ಅನ್ನಿಸ್ಲಿಲ್ವಾ?’ ಅಂತ ಕೂಗಾಡಿದೆ.
`ಅಲ್ಲ ಮಾಮ… ನನ್ನ ಹತ್ರ ಲೆನ್ಸ್ ಇರಲಿಲ್ಲ. ಯಾರಿಗೂ ಗೊತ್ತಾಗದ ಹಾಗೆ ಸ್ವಲ್ಪ ಹತ್ರ ಹೋಗೋಣ ಅಂತಿದ್ದೆ. ಮತ್ತೆ ಎದುರಿಗೆ….’ ಅಂತ ಏನೋ ಹೇಳೋಕೆ ಹೋದ.
`ಮುಚ್ಚೋ ಬಾಯಿ. ಆ ಫೋಟೊ ಪಬ್ಲಿಷ್ ಆಗದಿದ್ದರೆ ಕತ್ತೆ ಬಾಲ. ನಿನ್ನ ಜೀವನದಲ್ಲಿ ಇಷ್ಟು ಒಳ್ಳೆ ಫೋಟೊ ಸಿಕ್ತಿತ್ತೇನೋ? ಅಷ್ಟಾದರೂ ಯೋಚನೆ ಮಾಡೋಕಾಗಲ್ವ? ಹಾಳಾಗ್ಹೋಗು. ನಂಗೇನಾಗಬೇಕು? ನಂದೇ ಕ್ಯಾಮೆರಾ ತರಬೇಕಿತ್ತು ನಾನು’ ಅಂತ ಮತ್ತೆ ಕೂಗಾಡಿದೆ.
ಸಾಧಾರಣವಾಗಿ ಜಗಳಗಂಟನಾದ ಈಶ ಏನೂ ಮಾತಾಡಲಿಲ್ಲ. ವಾಪಾಸ್ ಬರುವಾಗಲೂ ಕೂಡ, ಕಾರಿನಲ್ಲಿ ಏನೂ ಹೇಳಲಿಲ್ಲ. ಅವನ ಮುಖದಲ್ಲಿ ಸಿಟ್ಟಿಗಿಂತ ಜಾಸ್ತಿ ನೋವೇ ಇತ್ತು. ನಾನಂತೂ, ಆಫೀಸಿನಲ್ಲಿ ವರದಿ ಬರೆದು ಮನೆಗೆ ಹೋದಮೇಲೂ ನನಗೆ ಮೂಡ್ ಸರಿ ಹೋಗಿರಲಿಲ್ಲ.
ಮಾರನೇ ದಿನ ಮಧ್ಯಾಹ್ನ ಆಫೀಸಿಗೆ ಬಂದಾಗ, ಫೋಟೋಗ್ರಫಿ ವಿಭಾಗದಲ್ಲಿ ಈಶ ಕೂತುಕೊಂಡು ಯಾವುದೋ ನೆಗೆಟಿವ್ ನೋಡುತ್ತಿದ್ದ. ನನಗಿನ್ನೂ ಅಸಮಾಧಾನ ಕಮ್ಮಿಯಾಗಿರಲಿಲ್ಲ. ಟೇಬಲ್ ಮೇಲೆ ಹರಡಿದ್ದ ಫೋಟೋಗಳನ್ನು ನೋಡಿದಾಗ, ಅವೆಲ್ಲಾ ಕಂಬಾಲಪಲ್ಲಿಯ ಫೋಟೊಗಳಾಗಿದ್ದವು. ಹೆಣಗಳ ಹತ್ತಿರದ ಫೋಟೊಗಳನ್ನು ನೋಡಿದಾಗ, ಬೆಳಕು ಸ್ವಲ್ಪ ಕಮ್ಮಿಯಿದ್ದಂತೆ ಕಂಡಿತು.
ಹಾಗೇ ಅವನ ಕೈಯಿಂದ ನೆಗೆಟಿವ್ ಇಸ್ಕೊಂಡು ನೋಡಿದೆ. ನಾವು ನಿಂತಿದ್ದ ಜಾಗದ ಎದುರುಗಡೆಯಿಂದ ಇಳಿ ಬಿಸಿಲು ಹೊಡೆಯುತ್ತಿತ್ತು. ಅಂಥ ಸಂದರ್ಭಗಳಲ್ಲಿ ಪೋಟೋ ತೆಗೆಯಲು ಕಷ್ಟ. ನಾವು ನಿಂತಿದ್ದ ಜಾಗದಿಂದ ಏನೂ ಮಾಡಿದರೂ ನಾಯಿ ಹೆಣಕ್ಕೆ ಬಾಯಿ ಹಾಕುತ್ತಿದ್ದ ಫೋಟೋ ತೆಗೆಯಲು ಆಗುತ್ತಿರಲಿಲ್ಲ ಅನಿಸಿತು. ಅಂತೂ ಉಳಿದ ಫೋಟೋಗಳನ್ನು ಈಶ ಚೆನ್ನಾಗಿಯೇ ತೆಗೆದಿದ್ದ.
`ಈ ಎದುರು ಬಿಸಿಲಲ್ಲಿ ಹೆಂಗೋ ತೆಗೆದೆ? ಅದೂ ಇಳಿ ಬಿಸಿಲು, ಮತ್ತೆ ಲೈಟ್ ಸಮೇತ ಕಡಿಮೆ ಇದೆ,’ ಅಂದೆ.
`ಹೂಂ ಮಾಮ… ಅದಕ್ಕೆ ನೀನು ಆ ನಾಯಿದು ಹೇಳ್ದಾಗ ಹತ್ತಿರ ಹೋಗೋಕ್ಕೆ ನೋಡ್ದೆ. ಎದುರು ಬಿಸಿಲಲ್ಲಿ ಏನೂ ಬರ್ತಿರಲಿಲ್ಲ. ಆ ಪೋಲಿಸವನು ನೋಡ್ಬಿಟ್ಟ. ನೀನು ನೋಡಿದ್ರೆ ಕೂಗಾಡ್ಬಿಟ್ಟೆ,’ ಅಂದ.
`ಏನೋ, ಹೋಗ್ಲಿ ಬಿಡು. ಆ ಜಾಗಾನೇ ಸರಿ ಇಲ್ಲ. ಹೋದವರೆಲ್ಲ ಜಗಳ ಆಡ್ತಾರೆ,’ ಅಂತ ಹೇಳಿ ಹೊರಗಡೆ ಬಂದೆ.
ಸೌಜನ್ಯಕ್ಕಾದ್ರೂ ಈಶನಿಗೆ `ಸಾರಿ’ ಹೇಳಲಿಲ್ಲ.


ಮಾಕೋನಹಳ್ಳಿ ವಿನಯ್ ಮಾಧವ

 


5 ಕಾಮೆಂಟ್‌ಗಳು:

  1. ಚೆನ್ನಾಗಿದೆ ಕಣೋ...!
    ಹೌದು, ನೀನೂ ಸಾರಿ ಹೇಳ್ತಿಯೋನೋ...! -That is the news!

    ಪ್ರತ್ಯುತ್ತರಅಳಿಸಿ
  2. A great piece... all of us have lots to regret and lots to feel for when we look back the path we walked. It's these experiences which makes you strong and teaches you what life is.

    ಪ್ರತ್ಯುತ್ತರಅಳಿಸಿ