ಶುಕ್ರವಾರ, ಸೆಪ್ಟೆಂಬರ್ 28, 2012

ಡ್ರಗ್ಸ್


ಮಡುಗಟ್ಟಿದ ಆಕ್ರೋಶ ಅಂದ್ರೆ ಇದೇನಾ?

`ವಿನಯ್, ಕೊನೆಗೂ ಸಿಕ್ಕಿಬಿಟ್ಟರು ಕಣ್ರೀ…. ನೆನ್ನೆ ಇಡೀ ದಿನ ಸುಸ್ತಾಗಿ ಹೋದ್ವಿರೀ,’ ಅಂತ ಬೆಳಗ್ಗೆ ಆರೂವರೆ ಘಂಟೆಗೆ ಫೋನ್ ಬಂದಾಗ ನನಗೂ ಸರಿಯಾಗಿ ಅರ್ಥವಾಗಲಿಲ್ಲ.
`ಯಾರು ವಿಜಯ್? ಡ್ರಗ್ಸ್ ಗ್ಯಾಂಗಾ?’ ಅಂದೆ.
`ಹೌದು ರೀ… ನಾ ಹೇಳ್ತಿದ್ದೆನಲ್ಲ… ಕೊರಿಯರ್ ನಲ್ಲಿ ಕಳಿಸೋ ಇನ್ನೊಂದು ಪಾರ್ಟಿ ಇದೆ ಅಂತ. ತುಂಬಾನೇ ವರ್ಕ್ ಮಾಡ್ತಿದ್ವಿ. ಈ ಸಲ ಇಬ್ಬರು ಸಿಕ್ಕಿದ್ದಾರೆ….ಒಬ್ಬಳು ಹುಡುಗಿನೂ ಇದ್ದಾಳೆ,’ ಅಂದ್ರು.
`ಹೌದಾ? ಇಬ್ರೂ ನೈಜೀರಿಯಾದವರಾ?’ ಅಂತ ಕೇಳಿದೆ.
`ಇಲ್ಲರೀ.. ಹುಡುಗಿ ನಾರ್ಥ್ ಈಸ್ಟ್ ನವಳು. ಅವಳ ಅಡ್ರೆಸ್ ಕನ್ಫರ್ಮ್ ಮಾಡ್ತಿದ್ದೀವಿ. ಹುಡುಗ ಮಾತ್ರ ನೈಜೀರಿಯಾದವನು. ಇಬ್ಬರೂ ಡೆಲ್ಲಿಯಲ್ಲಿ ಓದ್ತಾ ಇದ್ದಾರೆ. ಡೆಲ್ಲಿಯಿಂದ ಇಲ್ಲಿಗೆ ಬಂದು, ಕೊರಿಯರ್ ನಲ್ಲಿ ಡ್ರಗ್ಸ್ ಬೇರೆ ದೇಶಕ್ಕೆ ಕೊರಿಯರ್ ಮಾಡಿ, ವಾಪಾಸ್ ಹೋಗುತ್ತಿದ್ದರು. ಹನ್ನೊಂದು ಘಂಟೆಯೊಳಗೆ ಬಂದು ಬಿಡಿ. ಹನ್ನೊಂದು ಘಂಟೆಗೆ ಅವರನ್ನು ಕೋರ್ಟ್ ಗೆ ಪ್ರೊಡ್ಯೂಸ್ ಮಾಡೋಕೆ ಕಮೀಷನರ್ ಹೇಳಿದ್ದಾರೆ,’ ಅಂದ್ರು.
ಅವರಿಬ್ಬರ ಹೆಸರು ಕೇಳಿದಾಗ, ಹುಡುಗನ ಹೆಸರು ಬರ್ಟ್ರಾಂಡ್ ತೊಚೇಕ್ವ ಇಕ್ವಾಕ ಅಂತನೂ, ಹುಡುಗಿಯ ಹೆಸರು ಡಫೀರ ವಾಲಂಗ್ ಅಂತಾನೂ ಹೇಳಿ, ಫೋನ್ ಇಟ್ಟರು.
ಸರಿ, ಒಂದಿಬ್ಬರು ಟೆಲಿವಿಷನ್ ಫ್ರೆಂಡ್ಸ್ ಗಳಿಗೆ ಸಂಕ್ಷಿಪ್ತವಾಗಿ ವಿವರ ಕೊಟ್ಟೆ. ಅವರಿಬ್ಬರನ್ನು ಎಲ್ಲಿ ಇಟ್ಟಿದ್ದಾರೆ ಅಂತ ವಿಷಯನೂ ಹೇಳಿ, ನಾನು ಬೇಗನೆ ತಯಾರಾಗೋಕೆ ಶುರುಮಾಡಿದೆ.
ವಿಜಯ್ ಕಸ್ಟಮ್ಸ್ ನಲ್ಲಿ ಇದ್ದ ನನ್ನ ಸ್ನೇಹಿತ. ಅವರು ಮತ್ತು ಅವರ ಒಂದು ತಂಡ, ಮೈಮೇಲೆ ದೆವ್ವ ಬಂದಂತೆ ಕೆಲಸ ಮಾಡುತ್ತಿದ್ದರು. ಯಾವ ಸಮಯದಲ್ಲಿ ಫೋನ್ ಮಾಡಿದರೂ ತಲೆ ಕೆಡಿಸಿಕೊಳ್ಳದೆ ಮಾತಾಡುತ್ತಿದ್ದರು. ಇಡೀ ತಂಡವೇ ಡ್ರಗ್ಸ್ ಹಿಂದೆ ಬಿದ್ದಿತ್ತು. ಬೆಂಗಳೂರಿನಿಂದ ಬೇರೆ ದೇಶಗಳಿಗೆ ಕಳುಹಿಸುವ ಮತ್ತು ಬೇರೆ ದೇಶಗಳಿಂದ ಇಲ್ಲಿಗೆ ತರಿಸುವ ಮಾಫಿಯಾವನ್ನು ಅವರು ಬೆನ್ನು ಹತ್ತಿದ್ದರು. ಯಾವುದೇ ಒಂದು ಪಾರ್ಟಿಯನ್ನು ಹಿಡದರೂ, ತಕ್ಷಣ ನನಗೆ ಫೋನ್ ಮಾಡಿ ಹೇಳುತ್ತಿದ್ದರು.
ನಾನು ವಿಜಯ್ ಆಫೀಸ್ ತಲುಪುವಾಗ ಹತ್ತು ಘಂಟೆ ದಾಟಿತ್ತು. ಆಗಲೇ ಒಂದಿಬ್ಬರು ಟೆಲಿವಿಷನ್ ಗೆಳೆಯರು ಫೋನ್ ಮಾಡಿ, ಆ ಇಬ್ಬರನ್ನು ವಿಡಿಯೋ ತೆಗೆಯೋಕೆ ಅಧಿಕಾರಿಗಳು ಬಿಡ್ತಾ ಇಲ್ಲ ಅಂತ ನನಗೆ ಹೇಳಿದರು. ಅಲ್ಲಿಗೆ ನಾನು ತಲುಪಿದ ಮೇಲೆ ಏನಾದರೂ ಮಾಡ್ತೀನಿ ಅಂತ ಹೇಳಿ, ನಾನು ವಿಜಯ್ ಆಫೀಸಿಗೆ ಹೋದೆ.
ಆ ಆಫೀಸಿನಲ್ಲಿ ನನ್ನನ್ನು ಯಾರೂ ತಡೆಯುತ್ತಿರಲಿಲ್ಲ. ವಾರಕ್ಕೆ ಎರಡು ಸಲವಾದರೂ ಹೋಗುತ್ತಿದ್ದದ್ದರಿಂದ, ಎಲ್ಲರೂ ಪರಿಚಯವಾಗಿದ್ದರು. ವಿಜಯ್ ಕೋರ್ಟ್ ಗೆ ಹೊರಡುವ ತರಾತುರಿಯಲ್ಲಿ ಕಾಗದಗಳನ್ನು ಸಿದ್ದಪಡಿಸುತ್ತಿದ್ದರು. ನನ್ನನ್ನು ನೋಡಿದವರೇ, `ಇದು ತುಂಬಾ ಇಂಟರೆಸ್ಟಿಂಗ್ ಕೇಸ್. ನೀವೇ ಮಾತಾಡಿ. ಆ ಹುಡುಗಿ ಇನ್ನೋಸೆಂಟ್ ಅಂತ ಆ ಹುಡುಗನೇ ಹೇಳ್ತಾನೆ. ಆದ್ರೆ, ಈ ಕೇಸಿಂದ ಅವಳು ತಪ್ಪಿಸಿಕೊಳ್ಳೋಕೆ ಆಗೋಲ್ಲ. ಯಾಕೆಂದ್ರೆ, ಎಲ್ಲಾ ಕನ್ಸೈನ್ ಮೆಂಟ್ ಗಳೂ ಅವಳ ಹೆಸರಲ್ಲೇ ಬುಕ್ ಆಗಿರೋದು,’ ಅಂತ ಹೇಳಿದರು.
ಈ ಇಬ್ಬರು ಬಹಳ ಸಮಯದಿಂದ ಹೆರಾಯಿನ್ ಮತ್ತು ಬ್ರೌನ್ ಶುಗರ್ ಗಳನ್ನು ಡೆಲ್ಲಿಯಿಂದ ತೆಗೆದುಕೊಂಡು ಬಂದು, ಬೆಂಗಳೂರಿನ ವಿವಿಧ ಕೊರಿಯರ್ ಆಫೀಸ್ ಗಳಿಂದ, ಸ್ಪೇನ್, ಕೆನಡಾ, ದಕ್ಷಿಣ ಆಫ್ರಿಕಾ ಮುಂತಾದ ದೇಶಗಳಿಗೆ ಕಳುಹಿಸುತ್ತಿದ್ದರು. ಕೆಲವು ಸಲ ಅವರ ಮಾಲುಗಳು ಸಿಕ್ಕಿಬಿದ್ದರೂ, ಅದನ್ನು ಯಾರು ಬುಕ್ ಮಾಡಿದರು ಅನ್ನೋದು ಗೊತ್ತಾಗುತ್ತಿರಲಿಲ್ಲ. ಯಾಕೆಂದ್ರೆ, ಡಫೀರಾ ಹೆಸರಿನಲ್ಲಿ ಕೊಲ್ಕತ್ತಾ, ಮುಂಬೈ ಮುಂತಾದ ಸ್ಥಳಗಳ ನಕಲಿ ಗುರುತು ಚೀಟಿಗಳನ್ನು ತಯಾರಿಸಿ, ಆ ವಿಳಾಸಗಳನ್ನು ಕೊಟ್ಟಿರುತ್ತಿದ್ದರು. ಬೆಳಗ್ಗಿನ ವಿಮಾನದಲ್ಲಿ ಬಂದಿಳಿದು, ಮೂರು ನಾಲ್ಕು ಪಾರ್ಸೆಲ್ ಗಳನ್ನು ಕೊರಿಯರ್ ಗೆ ಹಾಕಿ, ಸಾಯಂಕಾಲದ ವಿಮಾನದಲ್ಲಿ ವಾಪಾಸ್ ಹೋಗಿಬಿಡುತ್ತಿದ್ದರು.
ಆದರೆ, ಈ ಸಲ ಮಾತ್ರ ಇವರಿಬ್ಬರೂ ಬಂದ ತಕ್ಷಣವೇ ವಿಜಯ್ ತಂಡಕ್ಕೆ ವಿಷಯ ಗೊತ್ತಾಯಿತು. ನಾಲ್ಕು ತಂಡಗಳಲ್ಲಿ ಹುಡುಕೋಕೆ ಶುರುಮಾಡಿದವರಿಗೆ, ಸಾಯಂಕಾಲದ ಹೊತ್ತಿಗೆ ಕೋರಮಂಗಲದ ಕೊರಿಯರ್ ಆಫೀಸಿನಲ್ಲಿ ಸಿಕ್ಕಿದರು. ವಿಜಯ್ ತಂಡ ಇವರನ್ನು ಪಾರ್ಸೆಲ್ ಬಗ್ಗೆ ಕೇಳಿದ ತಕ್ಷಣ, ಹುಡುಗ ಮೊದಲನೇ ಮಹಡಿಯಿಂದ ಹಾರಿ ಓಡಿ ಹೋಗೋಕೆ ನೋಡಿದ್ದಾನೆ. ಆದರೆ, ಇವರ ಹುಡುಗರು ಅವನನ್ನು ಹಿಡಿದುಕೊಂಡಿದ್ದಾರೆ.
ಇಷ್ಟು ಹೇಳಿದ ವಿಜಯ್, ಪಕ್ಕದ ರೂಮಿಗೆ ಕರೆದುಕೊಂಡು ಹೋಗಿ, ಅಲ್ಲಿ ಕುಳಿತಿದ್ದ ಇಬ್ಬರಿಗೆ, `ಇವರು ಕೇಳಿದ್ದಕ್ಕೆಲ್ಲ ಉತ್ತರ ಹೇಳಿ,’ ಅಂತ ನನ್ನನ್ನು ಬಿಟ್ಟು ಹೋದರು.
ನೈಜೀರಿಯನ್ ಹುಡುಗ ಕಟ್ಟು ಮಸ್ತಾಗಿದ್ದ. ಹಾಗೆಯೇ, ಆ ಹುಡುಗಿ ಕೂಡ ಮುದ್ದಾಗಿದ್ದಳು. ಯಾಕೋ, ಅವರಿಬ್ಬರನ್ನು ನೋಡಿದ ತಕ್ಷಣ `ಪಾಪ’ ಅನ್ನಿಸಿತು.
ನಿಧಾನವಾಗಿ ಹುಡುಗನ ಜೊತೆ ಮಾತಾಡೋಕೆ ಶುರು ಮಾಡಿದೆ. ನಾನು ಕೇಳಿದ್ದಕ್ಕೆಲ್ಲ ಸ್ಪಷ್ಟವಾಗಿ ಉತ್ತರ ಕೊಡುತ್ತಾ ಹೋದ. ನನ್ನನ್ನು ಪೋಲಿಸ್ ಅಂತ ತಪ್ಪಾಗಿ ತಿಳಿದ್ದಿದ್ದಾರೆ ಅಂತ ನನಗೆ ಅನ್ನಿಸಿತು.
`ಸರ್, ನನ್ನ ತಂದೆ ನೈಜೀರಿಯಾದಲ್ಲಿ ಪಾದ್ರಿ. ನಾನು ಐದು ವರ್ಷದ ಕೆಳಗೆ ಡೆಲ್ಲಿಗೆ ಮ್ಯಾನೆಜ್ ಮೆಂಟ್ ಓದೋಕೆ ಅಂತ ಬಂದೆ. ಮೊದಲ ಎರಡು ವರ್ಷ, ಕಷ್ಟ ಪಟ್ಟು ಓದಿದೆ. ಆದರೆ ಇಲ್ಲಿನ ಬದುಕು ದುಬಾರಿ. ಆಗ ನನ್ನ ಸ್ನೇಹಿತರು ಈ ಡ್ರಗ್ ವ್ಯವಹಾರದ ಬಗ್ಗೆ ನನಗೆ ಹೇಳಿಕೊಟ್ಟರು.
ಅದೇ ಸಮಯದಲ್ಲಿ ನನಗೆ ಡಫೀರ ಪರಿಚಯವಾಯಿತು. ನನಗೂ ಈ ಬ್ಯುಸಿನೆಸ್ ಮಾಡಲು ಇಲ್ಲಿಯವರೊಬ್ಬರ ಅವಶ್ಯಕತೆಯಿತ್ತು. ಡಫೀರಾಗೆ ನಾನು ಬಟ್ಟೆಗಳ ರಫ್ತು ಮಾಡುವುದಾಗಿಯೂ, ನಾನು ಈ ದೇಶದ ಪ್ರಜೆಯಲ್ಲವಾದ್ದರಿಂದ, ನನ್ನ ಹೆಸರಿನಲ್ಲಿ ಡಾಕ್ಯುಮೆಂಟ್ ಕಳುಹಿಸಲು ಕಷ್ಟವಾಗುತ್ತಿರುವುದಾಗಿಯೂ ಹೇಳಿದೆ. ಪಾಪ ಅವಳು, ನನಗೆ ಸಹಾಯ ಮಾಡಲು ಒಪ್ಪಿಕೊಂಡಳು. ನಾನೇ ನಕಲಿ ಗುರುತು ಪತ್ರಗಳನ್ನು ತಯಾರಿಸಿ, ಅವುಗಳಿಗೆ ಡಫೀರಾಳ ಫೋಟೋ ಅಂಟಿಸಿ, ಅವಳನ್ನು ಕೊರಿಯರ್ ಆಫೀಸ್ ಗಳಿಗೆ ಕರೆದುಕೊಂಡು ಹೋಗಿ, ಪಾರ್ಸೆಲ್ ಕಳುಹಿಸುತ್ತಿದ್ದೆ’.
`ಅವಳಿಗೆ ನಾನು ಡ್ರಗ್ ವ್ಯವಹಾರ ಮಾಡುವುದು ಗೊತ್ತಾಗದಂತೆ ತುಂಬಾ ಎಚ್ಚರ ವಹಿಸಿದ್ದೆ. ಅವಳು ತುಂಬಾ ಒಳ್ಳೆ ಹುಡುಗಿ. ಬರುಬರುತ್ತಾ, ನನಗೆ ಅವಳು ತುಂಬಾ ಇಷ್ಟವಾಗತೊಡಗಿದಳು. ಅವಳನ್ನು ಮದುವೆಯಾಗಬೇಕು ಅಂತ ಯೋಚನೆ ಮಾಡಿ, ನಾವಿಬ್ಬರೂ ಒಟ್ಟಿಗೆ ಇರೋಕೆ ಶುರುಮಾಡಿದೆವು. ಇತ್ತೀಚೆಗೆ ನಾನು ಈ ಡ್ರಗ್ಸ್ ಬ್ಯುಸಿನೆಸ್ ಬಿಡಬೇಕು ಮತ್ತು ಬೇರೆ ಯಾವುದಾದರೂ `ಲೀಗಲ್’ ಬ್ಯುಸಿನೆಸ್ ಶುರು ಮಾಡಬೇಕು ಅಂತ ಯೋಚನೆ ಮಾಡ್ತಿದ್ದೆ. ಅದಕ್ಕೆ ಬಂಡವಾಳ ಬೇಕಿತ್ತು ಮತ್ತೆ ನಾನು ಡಫೀರಾಳ ಜೊತೆ ಡೆಲ್ಲಿಯಲ್ಲಿರೋಕೆ ಒಂದು ಫ್ಲ್ಯಾಟ್ ತಗೋಬೇಕಿತ್ತು. ಅದಕ್ಕೆ ಅಂತ ನಾನು ಇನ್ನೊಂದೆರೆಡು ಸಲ `ಕನ್ಸೈನ್ ಮೆಂಟ್’ ಕಳುಹಿಸಿ, ಸೆಟಲ್ ಆಗಿಬಿಡೋಕೆ ಯೋಚನೆ ಮಾಡಿದ್ದೆ’, ಅಂದ.
`ನಿನಗೆ ಈ ಡ್ರಗ್ಸ್ ಯಾರು ಸಪ್ಲೈ ಮಾಡುತ್ತಿದ್ದರು?’ ಅಂತ ಕೇಳಿದೆ.
`ಇದು ಎಲ್ಲಿಂದ ಬರುತ್ತೆ ಅಂತ ನನಗೂ ಗೊತ್ತಿಲ್ಲ. ಈ ಪಾರ್ಸೆಲ್ ಗಳನ್ನು ನನಗೆ ಕೊಡುವವರು ಮಾತ್ರ ಗೊತ್ತು. ಅವರ ವಿವರಗಳನ್ನು ಬೇಕಾದರೆ ನಾನು ಕೊಡುತ್ತೇನೆ. ಸರ್, ಇದರಲ್ಲಿ ಡಫೀರಾದೇನೂ ತಪ್ಪಿಲ್ಲ. ಅವಳನ್ನು ಬಿಟ್ಟುಬಿಡಿ ಸರ್. ಎಲ್ಲಾ ತಪ್ಪುಗಳನ್ನೂ ನಾನು ಒಪ್ಪಿಕೊಳ್ಳುತ್ತೇನೆ. ಅವಳು ತುಂಬಾ ಒಳ್ಳೆಯ ಹುಡುಗಿ ಸರ್,’ ಅಂದ.
ನಾನು ನಿಧಾನವಾಗಿ ಹುಡುಗಿಯ ಕಡೆಗೆ ತಿರುಗಿ, `ಯಾವೂರು?’ ಅಂತ ಕೇಳಿದೆ.
`ಶಿಲ್ಲಾಂಗ್…. ಮೇಘಾಲಯ,’ ಅಂದಳು.
`ಅಲ್ಲಿ ನಿಮ್ಮ ಕುಟುಂಬದ ಬ್ಯುಸಿನೆಸ್ ಇದೆಯಾ?’ ಅಂತ ಕೇಳಿದೆ.
ಸುಮ್ಮನೆ ತಲೆ ಆಡಿಸಿದಳು.
`ನೀನು ಇದರಲ್ಲಿ ಹೇಗೆ ಬಿದ್ದೆ?’ ಅಂತ ಕೇಳಿದೆ.
ತನ್ನ ಎರಡೂ ಕೈಗಳಿಂದ, ಮೂಗು ಮತ್ತು ಗಲ್ಲವನ್ನು ಮುಚ್ಚಿಕೊಂಡು ಶೂನ್ಯವನ್ನು ದಿಟ್ಟಿಸತೊಡಗಿದಳು. ರಾತ್ರೆಯೆಲ್ಲ ನಿದ್ರೆ ಮಾಡಿಲ್ಲ ಅನ್ನೋದು ಸ್ಪಷ್ಟವಾಗಿ ಕೆಂಪಾದ ಕಣ್ಣುಗಳಿಂದ ಗೊತ್ತಾಗತೊಡಗಿತು. ಆಕೆ ಏನೂ ಉತ್ತರಿಸಲಿಲ್ಲ.
ಸರಿ, ಇವಳಿಂದ ಇನ್ನೇನೂ ಸಿಗೋದಿಲ್ಲ ಅಂದ್ಕೊಂಡು ಹೊರಡಲು ಎದ್ದೆ. ತಕ್ಷಣವೇ ಡಫೀರಾ ಮಾತಾಡಿದಳು: `ಸರ್, ನನ್ನ ಕುಟುಂಬಕ್ಕೆ ನಾನು ಅರೆಸ್ಟ್ ಆಗಿರೋದು ಗೊತ್ತಾಗಬಾರದು. ಅವರಿಗೆ ತಡೆದುಕೊಳ್ಳಲು ಆಗೋದಿಲ್ಲ,’ ಅಂದಳು.
ನಾನು ತಲೆ ಅಲ್ಲಾಡಿಸುತ್ತಾ ತಿರುಗಿದಾಗ, ಆ ಹುಡುಗ ನನ್ನ ಎಡದ ಕೈ ಹಿಡಿದುಕೊಂಡು: `ಸರ್, ಡಫೀರಾಳನ್ನು ಬಿಟ್ಟು ಬಿಡಿ ಸರ್. ಅವಳು ತುಂಬಾ ಮುಗ್ದೆ. ಅವಳಿಗೆ ಏನು ಶಿಕ್ಷೆ ಇದೆಯೋ, ಅದನ್ನು ಸಹ ನಾನೇ ಅನುಭವಿಸುತ್ತೇನೆ. ನನ್ನನ್ನು ನೇಣಿಗೇರಿಸಿದರೂ ಪರವಾಗಿಲ್ಲ. ಅವಳಿಗೆ ಸಹಾಯ ಮಾಡಿ ಸರ್,’ ಅಂತ ಅಂಗಲಾಚಿದೆ.
ಅವನ ಮುಖವನ್ನೇ ನೋಡಿದೆ. ಅವನ ಕಣ್ಣಲ್ಲಿ ನೀರು ಹನಿಗೂಡಿತ್ತು. ಹಾಗೇ ಡಫೀರಾಳ ಮುಖ ನೋಡಿದೆ. ಅವಳು ಎವೆಯಿಕ್ಕದೆ  ಅವನನ್ನೇ ನೋಡುತ್ತಿದ್ದಳು. ಅವಳ ಕಣ್ಣಲ್ಲಿ ಒಂದು ಹನಿ ನೀರು ಕೂಡ ಇರಲಿಲ್ಲ. ಅದು ಸಿಟ್ಟೋ, ದುಃಖವೋ ಅನ್ನೋದು ಗೊತ್ತಾಗಲಿಲ್ಲ. ಇದೇನಾ `ಮಡುಗಟ್ಟಿದ ಆಕ್ರೋಶ’ ಅಂದರೆ ಅಂದ್ಕೊಂಡೆ.
ಹೊರಗಡೆ ಬಂದವನು ವಿಜಯ್ ಹತ್ತಿರ ಹೋಗಿ, `ಟೀವಿಯವರಿರೆ ವಿಡಿಯೋ ತೆಗೆಯೋಕೆ ಬಿಡಲಿಲ್ಲವಂತೆ? ಒಂದಿಬ್ಬರು ಕೇಳಿದರು, ಅಂದೆ.
`ಇಲ್ಲ ವಿನಯ್. ತುಂಬಾ ಪ್ರೆಶರ್ ಇದೆ. ಕೋರ್ಟ್ ಹತ್ತಿರ ತಗೊಳ್ಳೋಕೆ ಹೇಳಿ,’ ಅಂದರು.
`ಸರಿ,’ ಅಂತ ಹೇಳಿ, ಅಲ್ಲಿಂದ ಹೊರಟೆ.
ಆಫೀಸಿಗೆ ಬಂದವನೇ, ನನ್ನ ಜೊತೆ ಕೆಲಸ ಮಾಡುತ್ತಿದ್ದ ಶಿಲ್ಲಾಂಗ್ ಹುಡುಗಿ ಧರಿಣ್ಯಳಿಗೆ ವಿಷಯ ಹೇಳಿದೆ. ಡಫೀರಾ ವಾಲಂಗ್ ಎಂದ ತಕ್ಷಣವೇ, `ವಾಲಂಗ್ ಶಿಲ್ಲಾಂಗ್ ನಲ್ಲೇ ದೊಡ್ಡ ಕುಟುಂಬ. ಆ ಕುಟುಂಬದ ಹುಡುಗಿ ಯಾಕೆ ಹೀಗೆ ಮಾಡಿದಳು? ಅವಳನ್ನು ನಾನು ನೋಡಬಹುದಾ?’ ಅಂತ ಕೇಳಿದಳು.
`ಈಗ ಅವಳನ್ನು ಜೈಲಿಗೆ ಕಳುಹಿಸಿದ್ದಾರೆ. ಬೇಕಾದರೆ ಹೇಳು… ನಾಳೆ ನಾಡಿದ್ದರಲ್ಲಿ ವ್ಯವಸ್ಥೆ ಮಾಡ್ತೀನಿ,’ ಅಂದೆ.
ಎರಡು ದಿನ ಬಿಟ್ಟು ವಿಜಯ್ ಗೆ ಫೋನ್ ಮಾಡಿ, `ಡಫೀರಾ ಕುಟುಂಬ ಶಿಲ್ಲಾಂಗ್ ನಲ್ಲೇ ದೊಡ್ಡ ಕುಟುಂಬ ಅಂತೆ. ನನ್ನ ಜೊತೆ ಕೆಲಸ ಮಾಡುವ ಹುಡುಗಿ ಶಿಲ್ಲಾಂಗ್ ನವಳು. ಅವಳು ಹೇಳಿದಳು,’ ಅಂದೆ.
`ಹೌದು ವಿನಯ್. ಅದಕ್ಕೇ ನಾವು ವಿಡಿಯೋ ತೆಗೆಯೋಕೆ ಬಿಡಲಿಲ್ಲ. ಅವಳು ಅರೆಸ್ಟ್ ಆದ ವಿಷಯ ಗೊತ್ತಾದ ತಕ್ಷಣ ನಮಗೆ ಶಿಲ್ಲಾಂಗ್ ಮತ್ತು ಡೆಲ್ಲಿಯಿಂದ ಫೋನ್ ಗಳು ಬರಲಾರಂಬಿಸಿದವು. ವಿ ವರ್ ಅಂಡರ್ ಟ್ರೆಮೆಂಡಸ್ ಪ್ರೆಶರ್. ಮೀಡಿಯಾಗೆ ಹೇಳಬಾರದು ಅಂತ ಇದ್ದೆವು……,’ ಅಂತ ಹೇಳುತ್ತಾ ಹೋದಾಗ, ಶೂನ್ಯವನ್ನೇ ದಿಟ್ಟಿಸುತ್ತಿದ್ದ ಡಫೀರಾಳ ಮುಖ ಒಮ್ಮೆ ಕಣ್ಣ ಮುಂದೆ ಬಂತು…….


ಮಾಕೋನಹಳ್ಳಿ ವಿನಯ್ ಮಾದವ್



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ