ಶನಿವಾರ, ಮಾರ್ಚ್ 31, 2012

ಸ್ಯಾಂಡಲ್ ಫಾಕ್ಸ್


ಯುವರಾಜರೂ ಮತ್ತು ವೀರಪ್ಪನ್

ಇಂಡಿಯನ್ ಎಕ್ಸ್ ಪ್ರೆಸ್ ಸೇರಿ ಕೆಲವು ತಿಂಗಳುಗಳಾದ ಮೇಲೆ, ನಿಧಾನವಾಗಿ ಪ್ರೆಸ್ ಕ್ಲಬ್ ಗೆ ಕಾಲಿಡಲಾರಂಭಿಸಿದೆ. ಯಾವಾಗಲೂ ಅದರ ಬದಿಯಲ್ಲಿರುವ ಗೇಟಿನಿಂದಲೇ ಒಳಗೆ ಹೋಗುತ್ತಿದ್ದೆ. ಆಗ ಹಾದು ಹೋಗುತ್ತಿದ್ದದ್ದೇ ಬೆಂಗಳೂರು ವರದಿಗಾರರ ಕೂಟದ ಎದುರಿನಿಂದ.
ಯಾಕೋ ಇಷ್ಟವಾಗುತ್ತಿರಲಿಲ್ಲ. ಶೀಟಿನ ಒಂದು ಕೊಠಡಿಯ ಆ ಕಟ್ಟಡದ ಒಳಗೆ ಯಾವಾಗಲೂ ಸ್ವಲ್ಪ ಕತ್ತಲು. ಒಳಗಡೆ ಒಂದು ಮೇಜು, ಅದರ ಮೇಲೊಂದು ಟೈಪ್ ರೈಟರ್, ಸುತ್ತಲೂ ಕುರ್ಚಿಗಳು. ಇನ್ನೊಂದು ಕಬ್ಬಿಣದ ಅಲ್ಮೇರಾ. ಮೊದಲನೇ ಸಲ ನೋಡಿದಾಗ, ಯಾವುದೋ ರಹಸ್ಯ ಕಾರ್ಯಾಚರಣೆಯ ಕಾರಾಸ್ಥಾನದಂತೆ ಕಾಣುತ್ತಿತ್ತು.
ಒಂದೊದ್ಸಲ, ಸಮೀಉಲ್ಲಾ ಅದರ ಮುಂದೆ ನಿಂತಿದ್ದಾಗ ಅಲ್ಲೇ ನಿಂತು ಅವರನ್ನು ಮಾತಾಡಿಸ್ತಿದ್ದೆ. ಸಮೀಉಲ್ಲಾ ದಿನಾ ಸಾಯಂಕಾಲ ಎಕ್ಸ್ ಪ್ರೆಸ್ ಗೆ ಬರುತ್ತಿದ್ದರು. ಅವರ ಪತ್ನಿ ಅಫ್ ಶಾನ್ ಳನ್ನು ಕರೆದುಕೊಂಡು ಹೋಗಲು. ಹಾಗಾಗಿ ನನಗೆ ಪರಿಚಯವಾಗಿತ್ತು.
ಸ್ವಲ್ಪ ದಿನಗಳ ನಂತರ, ನನ್ನ ಜೊತೆ ಇರುತ್ತಿದ್ದ ಪ್ರಕಾಶ್ ಕೂಡ ಕೂಟದ ಒಳಗೆ ಹೋಗಿ ಬರಲು ಆರಂಭಿಸಿದ. ಒಂದಿನ ಪ್ರಕಾಶ್ನು ಮತ್ತು ಸಮಿ, ನನ್ನನ್ನು ಆ ತೆಳ್ಳಗಿನ ವ್ಯಕ್ತಿಗೆ ಪರಿಚಯ ಮಾಡಿದರು. `ಇವರು ಶಿವರಾಜ್’ ಅಂದಾಗ ನಾನು ಸುಮ್ಮನೆ `ಹಲೋ’ ಅಂದಿದ್ದೆ. ಸ್ವಲ್ಪ ದಿನಗಳಲ್ಲೇ, ಅಗತ್ಯಕ್ಕಿಂತ ಹೆಚ್ಚಾಗಿ ಹತ್ತಿರವಾದೆವು.
ಕೆಲವೇ ದಿನಗಳಲ್ಲಿ ಅರ್ಥವಾಗಿದ್ದು ಎಂದರೆ, ಇದೊಂದು ಸುದ್ದಿ ವಿನಿಮಯ ಕೇಂದ್ರ.
ಶಿವರಾಜ್ ಮತ್ತು ಸಮಿ ಅಲ್ಲದೆ, ಇವರೊಂದಿಗೆ ಆರ್.ಟಿ.ವಿಠ್ಠಲ ಮೂರ್ತಿ, ಸಂಯುಕ್ತ ಕರ್ನಾಟಕದ ಜಾನ್ ಮಥಾಯಿಸ್ ಮತ್ತು ಈ ನಾಡು ಪತ್ರಿಕೆಯ ಆದಿ ನಾರಾಯಣ ಬಹಳ ಹತ್ತಿರವಾಗಿದ್ದಾರೆ ಅಂತ ಅನ್ನಿಸುತ್ತಿತ್ತು.
ಆಗಾಗ ಮಾತಿನ ಮಧ್ಯದಲ್ಲಿ ಎಲ್ಲರೂ ಒಟ್ಟಿಗೆ ನಗುತ್ತಿದ್ದದ್ದು ಒಂದು ಪದದ ಬಳಕೆಯಾದಾಗ: `ಸ್ಯಾಂಡಲ್ ಫಾಕ್ಸ್’. `ಏನ್ರೀ ಅದೂ ಸ್ಯಾಂಡಲ್ ಫಾಕ್ಸ್’ ಅಂದರೆ, `ಅದೊಂದು ದೊಡ್ಡ ಕಥೆ ಬಿಡಿ’ ಅಂತ ನಗ್ತಿದ್ರು. ನಂಗ್ಯಾಕೋ ಇವರೆಲ್ಲಾ ನಿಗೂಢ ಮನುಷ್ಯರು ಅನ್ನಿಸೋಕೆ ಶುರುವಾಯ್ತು.
ಅಂತೂ ಹಟ ಬಿಡದೆ ಇವರ ಇತಿಹಾಸ ಹುಡುಕಲು ಆರಂಭಿಸಿದೆ. ಶಿವರಾಜ್ ಮತ್ತು ವಿಠ್ಠಲ ಮೂರ್ತಿ, ಎಂಬತ್ತರ ದಶಕದ ಒಂದೇ ದಿನ ವರದಿಗಾರಿಕೆಗೆ ಕಾಲಿಟ್ಟು, ಎರಡು ದಿಕ್ಕುಗಳಿಂದ ವಿಧಾನ ಸೌಧಕ್ಕೆ ಕಾಲಿಟ್ಟದ್ದರು. ಶಿವರಾಜ್ ಮೈಸೂರು ಮಿತ್ರಕ್ಕೆ ಸೇರಿದ್ದರು ಮತ್ತು ವಿಠ್ಠಲ ಮೈಸೂರು ಮೂಲದ ಆಂದೋಲನ ಪತ್ರಿಕೆಗೆ ಸೇರಿದ್ದರು. ದೊಡ್ಡ ಪತ್ರಿಕೆಗಳಿಂದ ಬರುವ ವಿಧಾನ ಸೌಧದ ಹಿರಿಯ ವರದಿಗಾರರ ಅಲೆಯನ್ನು ನೋಡಿ ಕಂಗಾಲಾದ ಇಬ್ಬರೂ ಒಟ್ಟಾಗಿದ್ದರಂತೆ. ಅದೇ ಸಮಯದಲ್ಲಿ ಕನ್ನಡ ಬಾರದ ಆದಿನಾರಾಯಣ ಕೂಡ ಇವರ ಜೊತೆ ಸೇರಿಕೊಂಡಿದ್ದಾನೆ. ಕೆಲವೇ ದಿನಗಳಲ್ಲಿ, ಅವರ ಜೊತೆಗೆ, ಮೈಸೂರು ಮೂಲದ ಮಹಾನಂದಿ ಪತ್ರಿಕೆ ಸೇರಿದ್ದ ಬೆಲಗೂರು ಸಮೀಉಲ್ಲಾ ಮತ್ತು ಮಥಾಯಿಸ್ ಸಹಿತ ಸೇರಿಕೊಂಡು, ಒಟ್ಟಾಗಿ ಸುದ್ದಿಗಳ ಹುಡುಕಾಟ ಶುರು ಮಾಡಿಕೊಂಡಿದ್ದಾರೆ. ಮೊದಮೊದಲು ಇವರನ್ನು ಗಣನೆಗೆ ತೆಗೆದುಕೊಳ್ಳದ ಹಿರಿಯ ವರದಿಗಾರರು, ಆನಂತರ ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ.
ಆದರೆ ಎಡವಟ್ಟಾಗಿದ್ದು ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ. ಒಂದಿನ, ಖರ್ಗೆಯವರ ಪ್ರೆಸ್ ಕಾನ್ಫರೆನ್ಸ್ ನೆಡೆಯುತ್ತಿತ್ತು. ಆಗ ತಾನೆ ಬಂಗಾರಪ್ಪನವರು ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ಟಿದ್ದರು. ಅವರ ಮಗ ಕುಮಾರ್ ಬಂಗಾರಪ್ಪ ಇನ್ನೂ ಕಾಂಗ್ರೆಸ್ ನಲ್ಲೇ ಇದ್ದರು. ಪತ್ರಕರ್ತರೊಬ್ಬರು ಮಾರ್ಮಿಕವಾಗಿ : `ಮಹಾರಾಜರೇನೋ ಹೋದರು, ಯುವರಾಜರ ಕಥೆಯೇನು?’ ಅಂತ ಕೇಳಿದರು.
ಅಷ್ಟೇ ಮಾರ್ಮಿಕವಾಗಿ ಖರ್ಗೆ: `ಯುವರಾಜರು ಪಕ್ಷ ವಿರೋಧಿ ಚಟುವಟಿಕೆ ನೆಡೆಸಿದರೆ, ಅವರ ವಿರುದ್ದ ಕ್ರಮ ತೆಗೆದುಕೊಳ್ಳುತ್ತೇವೆ,’ ಅಂದರು. ಖರ್ಗೆಯವರು ಈ ಉತ್ತರ ಹೇಳುವುದಕ್ಕೂ, ಶಿವರಾಜ್ ಪತ್ರಿಕಾ ಗೋಷ್ಟಿಯ ಒಳಗೆ ಬರುವುದಕ್ಕೂ ಸರಿಯಾಯ್ತು. ಯುವರಾಜರು ಅಂದ ತಕ್ಷಣ ಅವರ ಕಿವಿಯೂ ನೆಟ್ಟಗಾಯ್ತು.
ಆಗ ಕಾಂಗ್ರೆಸ್ ನಲ್ಲಿ ಇದ್ದ ಮೈಸೂರಿನ ಯುವರಾಜರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೂ ಮತ್ತು ಸರ್ಕಾರಕ್ಕೂ, ಮೈಸೂರಿನ ಅರಮನೆ ವಿಷಯದಲ್ಲಿ ಜಟಾಪಟಿ ನೆಡೆದಿತ್ತು. ಅದರಿಂದಾಗಿ ಯುವರಾಜರು ಕಾಂಗ್ರೆಸ್ ಬಿಡಬಹುದು ಎಂದು ದಟ್ಟವಾಗಿ ಸುದ್ದಿ ಹಬ್ಬಿತ್ತು. ಅದೇ ಸಮಯದಲ್ಲಿ ಖರ್ಗೆ ಯುವರಾಜರ ವಿರುದ್ದ ಕ್ರಮದ ಬಗ್ಗೆ ಮಾತಾಡಿದ್ದರು. ಮಾರನೇ ದಿನ ಮೈಸೂರು ಮಿತ್ರದಲ್ಲಿ ಮುಖಪುಟ ವರದಿಯಾಗಿ ಬಂತು: `ಪಕ್ಷ ವಿರೋಧಿ ಚಟುವಟಿಕೆ ನೆಡೆಸಿದರೆ, ಯುವರಾಜರ ವಿರುದ್ದ ಕ್ರಮ: ಖರ್ಗೆ’ ಅಂತ.
ಸುದ್ದಿ ಓದಿದ ಒಡೆಯರ್ ಅವರು ಖರ್ಗೆಯವರಿಗೆ ತಮ್ಮ ಲಾಯರ್ ಮುಖಾಂತರ ನೋಟಿಸ್ ಕಳುಹಿಸಿದರು. ಅದೂ ದೊಡ್ಡ ಸುದ್ದಿಯಾಯ್ತು. ಅದಕ್ಕೆ ಪ್ರತಿಯಾಗಿ ಖರ್ಗೆಯವರು, ಒಡೆಯರ್ ವಿರದ್ದ ಮಾತಾಡಿಲ್ಲದ್ದರಿಂದ, ನೋಟಿಸ್ ಅಗತ್ಯವಿರಲಿಲ್ಲ ಅಂತೇನೊ ಹೇಳಿದರಂತೆ. ಅದಕ್ಕೆ ಒಡೆಯರ್ ಅವರ ಪ್ರತಿಕ್ರಿಯೆ ತೆಗೆದುಕೊಳ್ಳಲು ಬೆಂಗಳೂರಿನ ಅರಮನೆಗೆ ಫೋನ್ ಮಾಡಿದಾಗ, ಮಹಾರಾಣಿ ಪ್ರಮೋದಾ ದೇವಿಯವರು ಫೋನ್ ಎತ್ತಿಕೊಂಡಿದ್ದಾರೆ. ಶಿವರಾಜ್ ಖರ್ಗೆಯವರ ವಿಚಾರ ಕೇಳಿದಾಗ, ಪ್ರಮೋದಾ ದೇವಿಯವರು, `ಯಾರು ಖರ್ಗೆ ಅಂದರೆ?’ ಅಂತ ಕೇಳಿದ್ದಾರೆ. ಅದೂ ವರದಿಯಾದಾಗ, ಖರ್ಗೆ ಹೈರಾಣಾಗಿ ಹೋಗಿದ್ದರಂತೆ.
ಆದರೆ ಖರ್ಗೆಯವರಷ್ಟೇ ಇಕ್ಕಟ್ಟಿಗೆ ಸಿಕ್ಕಿದ್ದು ಅವರ ವಿಶೇಷಾಧಿಕಾರಿಯಾಗಿದ್ದವಿಜಯೇಂದ್ರ. ವಿಜಯೇಂದ್ರ ಅವರಿಗೆ ಮೊದಲನೇ ದಿನದಿಂದಲೇ ಒಂದು ತಿದ್ದುಪಡಿ ಹಾಕಿಸಲು ಖರ್ಗೆಯವರು ತಾಕೀತು ಮಾಡಿದ್ದರಂತೆ. ಆದರೆ, ಮೈಸೂರು ಮೂಲದ ಮೂರೂ ಪತ್ರಿಕೆಯವರಾದ ಶಿವರಾಜ್, ಸಮಿ ಮತ್ತು ವಿಠ್ಠಲಮೂರ್ತಿಯವರಲ್ಲಿ, ಒಬ್ಬರ ವರದಿಗೆ ವಿರುದ್ದವಾಗಿ ಇನ್ನೊಬ್ಬರು ವರದಿ ಬರೆಯಬಾರದೆಂಬ ಅಲಿಖಿತ ಒಪ್ಪಂದವಿತ್ತು. ಹಾಗಾಗಿ, ವಿಜಯೇಂದ್ರ ಎಷ್ಟೇ ಗೋಗರೆದರೂ ಇವರಿಬ್ಬರು ಏನನ್ನೂ ಬರೆಯಲು ಒಪ್ಪಲಿಲ್ಲ. ನಾಲ್ಕೈದು ದಿನ ಕಳೆದ ನಂತರ ಆ ವಿಷಯ ತನ್ನಿಂದ ತಾನೇ ತಣ್ಣಗಾಯ್ತಂತೆ.
ಇದೊಂದು ಎಡವಟ್ಟು ಬಿಟ್ಟರೆ, ಈ ಗುಂಪಿನ ಸುದ್ದಿಗಲನ್ನು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವೇ ಇರಲಿಲ್ಲ. ರಾಜ್ಯದ ಎಷ್ಟೋ ಸುದ್ದಿಗಳನ್ನು ಮೈಸೂರಿನಿಂದ ಸ್ಪೋಟಿಸಿದ ಹೆಗ್ಗಳಿಕೆ ಇವರದು. ಅದರಲ್ಲಿ ಮೊದಲನೆಯದಾಗಿ ನಿಲ್ಲುವುದೇ ಈ ಸ್ಯಾಂಡಲ್ ಫಾಕ್ಸ್.
ಆಗ ವೀರಪ್ಪನ್ ಬಗ್ಗೆ ವರದಿಗಳು ಕಡ್ಲೆ-ಪುರಿಯಂತೆ ಮಾರಾಟವಾಗುತ್ತಿದ್ದವು. ಒಂದು ದಿನ, ಆದಿ ನಾರಾಯಣ ಬಂದು, ತಮಿಳುನಾಡಿನ ಎಸ್.ಟ.ಎಫ್. ಮುಖ್ಯಸ್ಥ ವಾಲ್ಟರ್ ದವರಾಂ ತಮ್ಮ ಪತ್ರಿಕೆಗೆ ಇಂಟರ್ ವ್ಯೂ ಕೊಟ್ಟಿರುವುದಾಗಿಯೂ, ಅದರಲ್ಲಿ ವೀರಪ್ಪನ್ ಹಿಡಿಯಲು `ಆಪರೇಶನ್ ಸ್ಯಾಂಡಲ್ ಫಾಕ್ಸ್’ ಸಧ್ಯದಲ್ಲಿ ಆರಂಭಿಸುವುದಾಗಿಯೂ ಹೇಳಿದ್ದಾನೆ. ಆದರೆ ಕರ್ನಾಟಕದ ಕಡೆಯಿಂದ ಏನು ಮಾಡ್ತಿದ್ದಾರೆ ಅಂತ ಅವನಿಗೆ ಗೊತ್ತಿರಲಿಲ್ಲ. ಅದೇ ಸಂಧರ್ಭದಲ್ಲಿ ದಿ ವೀಕ್ ಮ್ಯಾಗಜೀನ್ ನಲ್ಲಿ ಬಂದ, ಅಸ್ಸಾಂನ ಉಲ್ಫಾ ಉಗ್ರವಾದಿಗಳು ಕರ್ನಾಟಕದಲ್ಲಿ ಆಶ್ರಯ ಪಡೆಯುತ್ತಿರುವುದರಿಂದ, ಅವರ ಮೇಲೆ ಕಾರ್ಯಾಚರಣೆ ನೆಡೆಸಲು ಸಿದ್ದತೆ ನೆಡೆದಿದೆ ಎಂಬ ಸುದ್ದಿಯನ್ನು ಇವರುಗಳು ಮಾತಾಡುತ್ತಿದ್ದರಂತೆ. ಸರಿ, ಎರಡೂ ವಿಷಯಗಳಲ್ಲಿ ಕರ್ನಾಟಕದಲ್ಲಿ ಏನಾಗ್ತಿದೆ ಅಂತ ತಿಳ್ಕಳೋಕೆ ಆಗಿನ ಅರಣ್ಯ ಮಂತ್ರಿ ಗುರುಪಾದಪ್ಪ ನಾಗಮಾರಪಲ್ಲಿಯವರ ಹತ್ತಿರ ಹೋಗಿದ್ದಾರೆ.
`ಏನ್ಸಾರ್? ತಮಿಳುನಾಡಿನವರು ಆಪರೇಶನ್ ಸ್ಯಾಂಡಲ್ ಫಾಕ್ಸ್ ಮಾಡ್ತಿದ್ದಾರಂತಲ್ಲ ವೀರಪ್ಪನ್ ಹಿಡಿಯೋಕೆ… ನೀವೇನೂ ಮಾಡ್ತಾ ಇಲ್ವಾ?’ ಅಂತ ಸಮಿ ಕೇಳಿದ್ದೇ ತಡ, ಮಂತ್ರಿಗಳು `ಅದೇನೋ ಮಾಡ್ತಿದ್ದಾರಂತಪ್ಪ. ನಾವೆಲ್ಲಾ ಒಟ್ಟಿಗೇ ಮಾಡ್ತಿದ್ದೀವಲ್ಲಾ,’ ಅಂದಿದ್ದಾರೆ.
`ಅಂದ್ರೆ ಸ್ಯಾಂಡಲ್ ಫಾಕ್ಸ್ ಕರ್ನಾಟಕ-ತಮಿಳುನಾಡಿನ ಜಂಟಿ ಕಾರ್ಯಾಚರಣೆನಾ?’ ಅಂತ ಕೇಳಿದ್ದಾರೆ. ಅದಕ್ಕೆ ಮಂತ್ರಿಗಳು `ಒಟ್ಟಿಗೇ ಮಾಡ್ತಿದ್ದೇವೆ. ಅವರು ನಮಗೇನೂ ಹೇಳೋಲ್ಲ ಬಿಡ್ರಿ,’ ಅಂದರಂತೆ.
 ಸರಿ, ಇದು ತಮಿಳುನಾಡು ಮತ್ತು ಕರ್ನಾಟಕದ ಜಂಟಿ ಕಾರ್ಯಾಚರಣೆ ಅಂತ ಗೊತ್ತಾದ ತಕ್ಷಣ, ಇವರುಗಳು ಬಂದು ವರದಿಯನ್ನು ಕಳುಹಿಸಿದ್ದಾರೆ. ವಾಲ್ಟರ್ ದವರಾಂ ಇಂಟರ್ ವ್ಯೂ ಬಂದು ಒಂದು ವಾರವಾಗಿದ್ದರೂ ಯಾರೂ ಕ್ಯಾರೇ ಅಂದಿರಲಿಲ್ಲ. ಮೈಸೂರಿನ ಈ ಮೂರು ಪತ್ರಿಕೆಗಳು ವರದಿಯನ್ನು ಅಚ್ಚು ಮಾಡಿದ ತಕ್ಷಣವೇ, ಪತ್ರಿಕೋಧ್ಯಮ ಎದ್ದು ನಿಂತಿತ್ತು.
ಕನ್ನಡ ಪತ್ರಿಕೆಗಳ ಮೈಸೂರಿನ ವರದಿಗಾರರೆಲ್ಲ ಮಾರನೇ ದಿನವೇ ಕರ್ನಾಟಕ ಎಸ್.ಟಿ.ಎಫ್. ಅಧಿಕಾರಿಗಳನ್ನು ಸಂಪರ್ಕಿಸಿ ವಿಷಯ ತಿಳಿಯಲು ಯತ್ನಿಸಿದ್ದಾರೆ. ಅವರಿಗೆ ಈ ಹೆಸರಿನ ಕಾರ್ಯಾಚರಣೆ ಗೊತ್ತಿಲ್ಲ ಅಂತ ಗೊತ್ತಾದ ತಕ್ಷಣ, ಇವೇ ವರದಿಗಳನ್ನು ಆಧರಿಸಿ ಬೇರೆ ವರದಿ ತಯಾರಿಸಿದ್ದಾರೆ. ಕೆಲವರಂತೂ, ಆ ಕಾರ್ಯಾಚರಣೆಯ ಹೆಸರನ್ನು ಕನ್ನಡಕ್ಕೆ ಯಥಾವತ್ತಾಗಿ ಅನುವಾದಿಸಿ, ಅದಕ್ಕೆ `ಗಂಧದ ನರಿ ಕಾರ್ಯಾಚರಣೆ’ ಅಂತ ನಾಮಕರಣ ಮಾಡಿದ್ದಾರೆ. ಆದರೆ, ವರದಿಯ ತಿರುಳೆಲ್ಲ ಈ ಮೂರು ವರದಿಗಳನ್ನಾಧರಿಸಿ ಬರೆದಿದ್ದರು.
ಮೊದಲೆರೆಡು ದಿನ ಕನ್ನಡ ಪತ್ರಿಕೆಗಳದ್ದಾದರೆ, ಮೂರನೇ ದಿನದಿಂದ ಇಂಗ್ಲಿಶ್ ಪತ್ರಿಕೆಗಳ ಸರದಿ. ಮುಂದಿನ ಒಂದು ತಿಂಗಳ ಮಟ್ಟಿಗೆ, ಇದು ರಾಷ್ಟ್ರ ಮಟ್ಟದ ಸುದ್ದಿಯಾಗಿ ಬೆಳೆದಿತ್ತು. ಇದರ ಮೂಲ ಯಾವುದು ಅಂತ ಯಾರಿಗೂ ಸರಿಯಾಗಿ ತಿಳಿದಿರಲಿಲ್ಲ.
ನಾನು ನೊಡುವಾಗ, ಶಿವರಾಜ್, ವಿಠ್ಠಲ ಮೂರ್ತಿ ಮತ್ತು ಸಮಿ, ವರದಿಗಳನ್ನು ಕೈಯಲ್ಲಿ ಬರೆದು, ಫ್ಯಾಕ್ಸ್ ಮುಖಾಂತರ ಕಳುಹಿಸುತ್ತಿದ್ದರು. ನಿಧಾನವಾಗಿ, ಟೈಪಿಂಗ್ ಬರುವ ಹುಡುಗರನ್ನು ಹುಡುಕಿ, ಟೈಪ್ ಮಾಡಿದ ಪ್ರತಿಗಳನ್ನು ಫ್ಯಾಕ್ಸ್ ಮಾಡಲು ಆರಂಭಿಸಿದರು. ದಿನ ಕಳೆದಂತೆ, ರಾಜ್ಯದ ಎಲ್ಲಾ ಮೂಲೆಗಳಿಂದ, ಜಿಲ್ಲಾ ಪತ್ರಿಕೆಯವರು ಇವರನ್ನು ಹುಡುಕಿಕೊಂಡು ಬಂದು, ತಮ್ಮ ಪತ್ರಿಕೆಗಳಿಗೂ ಸುದ್ದಿ ಕೊಡುವಂತೆ ಕೇಳಿಕೊಂಡಾಗ, ಇವರ ಕಾರ್ಯಾಚರಣೆಯ ವ್ಯಾಪ್ತಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಹಬ್ಬಿತು.
ಕೆಲ ಕಾಲದ ನಂತರ, ಸಮಿಉಲ್ಲಾ ಮಹಾನಂದಿ ಬಿಟ್ಟು ಪ್ರಿಯಾಂಕ ಪತ್ರಿಕೆ ಸೇರಿ, ಈ ಟೀವಿ ಮುಖಾಂತರ ಉದಯ ಟೀವಿಯಲ್ಲಿ ಸೆಟಲ್ ಆದರು. ಹಾಗೇ, ಸಂಯುಕ್ತ ಕರ್ನಾಟಕ ಬಿಟ್ಟು ಜನವಾಹಿನಿ ಸೇರಿ, ಅದರ ಸಂಪಾದಕನೂ ಆದ ಮಥಾಯಿಸ್, ಜನವಾಹಿನಿ ಮುಚ್ಚಿದ ನಂತರ ಪತ್ರಿಕೋದ್ಯಮವನ್ನೇ ಬಿಟ್ಟು ಹೋದ. ಹಾಗೆಯೇ, ಛೀಫ್ ರಿಪೋರ್ಟರ್ ಆದ ನಂತರ, ಆದಿ ನಾರಾಯಣನ ಹಾಜರಿ ಕೂಡ ಸ್ಯಾಂಡಲ್ ಫಾಕ್ಸ್ ಗುಂಪಿನಲ್ಲಿ ಕಡಿಮೆಯಾಗತೊಡಗಿತು.
ಈ ಮಧ್ಯ, ವರದಿಗಾರರ ಕೂಟದಲ್ಲಿ ನಿಧಾನವಾಗಿ ಕೆಲವು ಬದಲಾವಣೆಗಳಾದವು. ಕಟ್ಟಡದ ಪಕ್ಕದಲ್ಲಿದ್ದ ಮರದ ರೆಂಬೆ ಬಿದ್ದ ಪ್ರಯುಕ್ತ, ಮೇಲಿದ್ದ ಶೀಟ್ ಒಡೆದು ಹೋಗಿ, ಆಗಿನ ಕಾರ್ಯದರ್ಶಿಯಾಗಿದ್ದ ಪಿ.ತ್ಯಾಗರಾಜ್ ಓಡಾಡಿ, ಆರ್.ಸಿ.ಸಿ ಹಾಕಿಸಿದರು. ಅದಾದ ನಂತರ, ಉದಯವಾಣಿಯ ಅ.ಮ.ಸುರೇಶ ವಿಪರೀತ ಮುತುವರ್ಜಿ ವಹಿಸಿದ ಪರಿಣಾಮವಾಗಿ, ಕೂಟದಲ್ಲಿ ಕಂಪ್ಯೂಟರ್ ಗಳು ತಲೆ ಎತ್ತಿದವು. ಅಲ್ಲಿಯವರೆಗೆ ತಂತ್ರಜ್ನಾನ ಅಂದರೆ ಮಾರುದೂರ ಹಾರುತ್ತಿದ್ದ ವಿಠ್ಠಲ ಮೂರ್ತಿ, ಟೈಪಿಂಗ್ ಕಲಿತ್ತದ್ದಲ್ಲದೆ, ಇ-ಮೇಲ್ ತೆಗೆದು, ಅದರ ಮುಖಾಂತರ ಸುದ್ದಿ ಕಳುಹಿಸಲು ಆರಂಭಿಸಿದ.   
ಇದೆಲ್ಲಾ ನೋಡಿದ ಮೇಲೆ, ಶಿವರಾಜ್ ಸಹ ಇ-ಮೇಲ್ ಖಾತೆ ತೆರೆದರು. ಆದರೆ, ಕಂಪ್ಯೂಟರ್ ಕಲಿಯುವ ಗೋಜಿಗೆ ಹೋಗಲಿಲ್ಲ. ಮತ್ತೆ ಟೈಪಿಂಗ್ ಬರುವ ಹುಡುಗರ ಸಹಾಯದಿಂದಲೇ, ಇ-ಮೇಲ್ ಮುಖಾಂತರ ಸುದ್ದಿ ಕಳುಹಿಸುತ್ತಾರೆ.
ಅಂದ ಹಾಗೆ, ಈಗ, ನಾನೂ ಸೇರಿದಂತೆ, ಕೆಲವು ಪ್ರಮುಖ ಪತ್ರಿಕೆಗಳ ವರದಿಗಾರರು, ಈ ಸ್ಯಾಂಡಲ್ ಫಾಕ್ಸ್ ಗುಂಪಿಗೆ `ಒಂದಾಣೆ ಪಾರ್ಟ್ನರ್ ಗಳು!’


ಮಾಕೋನಹಳ್ಳಿ ವಿನಯ್ ಮಾಧವ್

ಶನಿವಾರ, ಮಾರ್ಚ್ 17, 2012

ಕಂಬಾಲಪಲ್ಲಿ


ಏಳು ಹೆಣಗಳ ಮಧ್ಯ ನಿಂತಿತ್ತೊಂದು ನಾಯಿ…..


`ಸ್ಟಾರ್ಟ್ ಟು ಚಿಂತಾಮಣಿ ವಿತ್ ಫೋಟೋಗ್ರಾಫರ್’ ಅಂತ ಬ್ಯುರೋ ಛೀಫ್ ಮಟ್ಟೂ ಫೋನ್ ಮಾಡಿ ಹೇಳಿದಾಗ  ಶಾಪ ಹಾಕಿದೆ. ಮಧ್ಯಾಹ್ನ ಊಟಕ್ಕೆ ಸಿಕ್ತೀನಿ ಅಂತ ಯಾರಿಗೋ ಹೇಳಿದ್ದೆ. ಅದಾದ ಮೇಲೆ ಇನ್ನೊಬ್ಬರು ಯಾವುದೋ ವರದಿಗೆ ದಾಖಲೆಗಳನ್ನು ಕೊಡ್ತೀನಿ ಅಂದಿದ್ದರು. ಆಗಲೇ 11 ಘಂಟೆ ಆಗಿದ್ದರಿಂದ, ಚಿಂತಾಮಣಿಗೆ ಹೋಗಿ ಬಂದು, ಈ ಎರಡು ಕೆಲಸ ಮುಗಿಸೋಕ್ಕೆ ಆಗೋಲ್ಲ ಅಂದ್ಕೊಂಡೆ.
ಕಮೀಶನರ್ ಆಫೀಸ್ ನಿಂದ ಹೊರಡುವ ಮೊದಲು ಇಂಟೆಲಿಜೆನ್ಸ್ ವಿಭಾಗದ ನಾಗರಾಜ್ ಕಂಡು, ಚಿಂತಾಮಣಿಯಲ್ಲಿ ಏನಾಯ್ತು? ಅಂತ ಕೇಳಿದೆ. ` `ಚಿಂತಾಮಣಿಯಿಂದ 20 ಕಿಲೋಮೀಟರ್ ದೂರದಲ್ಲಿ ಕಂಬಾಲಪಲ್ಲಿ ಅಂತ ಹಳ್ಳಿ. ಅಲ್ಲಿ ಏಳು ಜನ ದಲಿತರನ್ನ ಕೊಲೆ ಮಾಡಿದ್ದಾರಂತೆ,’ ಅಂದರು.
ಸರಿ, ಇನ್ನೇನು ರಾತ್ರಿವರೆಗೆ ಬರೋಕ್ಕಾಗಲ್ಲ, ಅಂದ್ಕೊಂಡು ಆಫೀಸಿಗೆ ಬರೋ ಹೊತ್ತಲ್ಲಿ, ಕನ್ನಡ ಪ್ರಭದಿಂದ ಉ.ಮ.ಮಹೇಶ್ ಮತ್ತು ಫೋಟೋಗ್ರಾಫರ್ ಈಶ್ವರ ತಯಾರಾಗಿ ನಿಂತಿದ್ದರು. ಕೆಳಗೆ ಕಾಯುತ್ತಿದ್ದ ಕಾರಿನಲ್ಲಿ ಚಿಂತಾಮಣಿಯ ಕಡೆಗೆ ಹೊರಟೆವು.
ಚಿಂತಾಮಣಿ ತಲುಪಿದ ತಕ್ಷಣ, ಅಲ್ಲಿದ್ದ ಪೋಲಿಸ್ ಹತ್ತಿರ ಕಂಬಾಲಪಲ್ಲಿಗೆ ದಾರಿ ಕೇಳಿದೆ. ಅವನು ದಾರಿ ಹೇಳಿದ ತಕ್ಷಣ, `ಅದು ಬಿಲ್ಲಾಂಡ ಹಳ್ಳಿಗೆ ಹೋಗುತ್ತಲ್ವಾ?’ ಅಂತ ಕೇಳಿದೆ. `ಬಿಲ್ಲಾಂಡ ಹಳ್ಳಿಯಿಂದ ಎರಡೇ ಕಿಲೋಮೀಟರ್,’ ಅಂದಾಗ, `ಈ ಗಲಾಟೆಗೆ ಮತ್ತು ಬಿಲ್ಲಾಂಡ ಹಳ್ಳಿಗೆ ಏನಾದ್ರೂ ಸಂಬಂಧ ಇದೆಯಾ?’ ಅಂತ ಕೇಳಿದೆ. `ನಂಗೊತ್ತಿಲ್ಲ,’ ಅಂದವನೇ ಮುಖ ತಿರುಗಿಸಿಕೊಂಡ.
ಕಾರು ಮುಂದೆ ಹೋಗುತ್ತಿದ್ದಂತೆ ಈಶ್ವರ ಕೇಳಿದ: `ಅದ್ಯಾವ ಗಲಾಟೆ ಮಾಮ?’ ಅಂತ. `ಎರಡು ವರ್ಷ ಆಗ್ತಾ ಬಂತು ಕಣೋ. ಊರವರೆಲ್ಲಾ ಸೇರಿ ಪೋಲಿಸರಿಗೆ ಹೊಡೆದಿದ್ದರು. ಇಬ್ಬರು ಪೋಲಿಸ್ ಸತ್ತು, ಆರೇಳು ಜನರಿಗೆ ಸರಿಯಾಗಿ ಗಾಯ ಆಗಿತ್ತು. ಊರವರೆಲ್ಲಾ ಒಳ್ಳೆ ಜನಗಳು. ಎಲ್ಲರೂ ಸೇರಿ ದಲಿತ ಸಂಘರ್ಷ ಸಮಿತಿಯ ಆಫೀಸ್ ತೆಗೆಯಕೂಡದು ಅಂತ ಗಲಾಟೆ ಮಾಡಿದ್ದರು. ಅದರಲ್ಲಿ ದಲಿತರೇ ಮುಂದೆ ಇದ್ದರು. ಈಗ ನೋಡಿದ್ರೆ, ಎಲ್ಲಾ ಎಡವಟ್ಟಾದ ಹಾಗೆ ಕಾಣ್ತದೆ,’ ಅಂದೆ.
ಎರಡು ವರ್ಷಗಳ ಹಿಂದೆ ಇದೇ ದಾರಿಯಲ್ಲಿ ಬಂದಾಗ, ನನ್ನ ಜೊತೆ ಫೋಟೋಗ್ರಾಫರ್ ಸಾಗ್ಗೆರೆ ರಾಧಾಕೃಷ್ಣ ಇದ್ದ  ನಾವು ಬಿಲ್ಲಾಂಡ ಹಳ್ಳಿಗೆ ಹೋದಾಗ ಒಂದೇ ಒಂದು ಗಂಡು ಪ್ರಾಣಿಯೂ ಊರಲ್ಲಿರಲಿಲ್ಲ. ಒಂದಿಬ್ಬರು ಅಂಗವಿಕಲರನ್ನು ಬಿಟ್ಟರೆ, ಬರೀ ಪೋಲಿಸರು. ಎಲ್ಲಾ ಮನೆಗಳ ಬಾಗಿಲನ್ನು ಭದ್ರವಾಗಿ ಹಾಕಲಾಗಿತ್ತು. ಇಡೀ ಊರನ್ನು ಸುತ್ತಿದರೂ ಮಾತಾಡಲು ಯಾರೂ ಸಿಕ್ಕಿರಲಿಲ್ಲ. ಒಬ್ಬ ವಯಸ್ಸಾದವರು ಜಗುಲಿಯ ಲ್ಲಿ ಕೂತಿದ್ದರು. ಅವರಿಗೆ ತೆಲುಗು ಬಿಟ್ಟು ಯಾವ ಭಾಷೆಯೂ ಬರುತ್ತಿರಲಿಲ್ಲ. ರಾಧಾಕೃಷ್ಣ ಮಾತಾಡಲು ಪ್ರಯತ್ನಿಸಿದರೂ, ಅವರು ಮಾತಾಡಲು ಒಪ್ಪಲಿಲ್ಲ.
ನಾವು ಬರೋಕ್ಕೆ ಮುಂಚೆಯೇ ಎಲ್ಲಾ ಪತ್ರಿಕೆಗಳ ವರದಿಗಾರು ಮತ್ತು ಹಿರಿಯ ಪೋಲಿಸ್ ಅಧಿಕಾರಿಗಳು ಆಗಲೇ ಬಂದು ಹೋಗಿದ್ದರಿಂದ, ನಮಗೆ ಇನ್ನೂ ಗಾಬರಿಯಾಗಲು ಶುರುವಾಯ್ತು. ಊರಿಡೀ ಸುತ್ತಿದಮೇಲೆ, ಒಂದು ಜಗಲಿಯ ಮೇಲೆ ಕೂತಿದ್ದ ಪೋಲಿಸ್ ಆಫೀಸರ್ ಒಬ್ಬರ ಜೊತೆ ಹೋಗಿ ಕೂತೆ. ಇನ್ಸ್ ಪೆಕ್ಟರ್ ಅಥವಾ ಡಿ.ವೈ.ಎಸ್.ಪಿ ಇರಬೇಕು ಅಂದ್ಕೊಂಡೆ. ಅವರ ಜೊತೆ ಐದು ನಿಮಿಷ ಮಾತಾಡಿದ ಮೇಲೆ ಹೇಳಿದರು: `ನೋಡಿ, ನನ್ನ ಹೆಸರು ಎಲ್ಲೂ ಬರಬಾರದು. ತುಂಬಾ ಸೆನ್ಸಿಟಿವ್ ಇಶ್ಯೂ. ತುಂಬಾ ಬೇಜಾರಾಗುತ್ತೆ,’ ಅಂದರು.
`ನೋಡಿ, ಅಲ್ಲಿ ಕಾಣುತ್ತಲ್ಲ ಕಲ್ಲಿನ ದಿಬ್ಬ, ಅದನ್ನು ದಾಟಿದರೆ ಆಂಧ್ರಪ್ರದೇಶ. ಇನ್ನೂರು ಮೀಟರ್ ಕೂಡ ಇಲ್ಲ. ಈ ಊರು ಅಂತಲ್ಲ. ಇಲ್ಲಿನ ಸುತ್ತಮುತ್ತಲ ಹಳ್ಳಿಯ ಜನಗಳೆಲ್ಲಾ ತುಂಬಾ ಒಳ್ಳೆಯವರು. ನೋಡಿ, ಸ್ವಾತಂತ್ರ್ಯ ಬಂದ ಮೇಲಿಂದ, ಈ ಸುತ್ತ ಮುತ್ತದ ಹತ್ತು ಹಳ್ಳಿಗಳಿಂದ, ಒಂದೇ ಒಂದು  ಪೋಲಿಸ್ ಕಂಪ್ಲೇಂಟ್ ಇಲ್ಲ. ಹತ್ತಿರದ ಪೋಲಿಸ್ ಸ್ಟೇಷನ್ ಎಂದರೆ ಚಿಂತಾಮಣಿ. ಇರೋದೇ ಎರಡು ಜಾತಿಗಳು. ರೆಡ್ಡಿ ಮತ್ತು ದಲಿತರು. ರೆಡ್ಡಿಗಳ ಮನೆಯಲ್ಲಿ ದಲಿತರು ಕೆಲಸಕ್ಕೆ ಹೋಗ್ತಾರೆ. ಹಾಗೇನೆ, ಅನುಕೂಲಸ್ಥ ದಲಿತರ ಮನೆಗಳಿಗೆ ರೆಡ್ಡಿಗಳು ಕೆಲಸಕ್ಕೆ ಹೋಗ್ತಾರೆ. ಏನಾದ್ರೂ ಸಣ್ಣ ಪುಟ್ಟ ಜಗಳಗಳಾದ್ರೆ, ಅವರವರೇ ಕೂತು ಸಮಾಧಾನ ಮಾಡ್ತಿದ್ರು,’ ಅಂದರು.
`ಮತ್ತೆ ಪೋಲಿಸ್ ಯಾಕೆ ಇಲ್ಲಿ ಬಂದು ಪೆಟ್ಟು ತಿನ್ನೋಕೆ ಹೋದ್ರು?’ ಅಂತ ಕೇಳ್ದೆ.
`ಇತ್ತೀಚೆಗೆ, ಈ ಕಡೆಯ ಕೆಲವು ಹುಡುಗರು ಓದೋಕೆ ಅಂತ ಚಿಂತಾಮಣಿಗೆ ಹೋದ್ರು. ಅವರೊಲ್ಲಬ್ಬ ಹುಡುಗಂಗೆ ಶಿವಣ್ಣನ ಪರಿಚಯವಾಯ್ತು. ಶಿವಣ್ಣ ಚಿಂತಾಮಣಿಯಲ್ಲಿ ಮುಂದಕ್ಕೆ ಬರುತ್ತಿರುವ ದಲಿತ ನಾಯಕ. ಒಂದ್ಸಲ ಅವನನ್ನು ಊರಿಗೆ ಕರೆದುಕೊಂಡು ಬಂದನಂತೆ. ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯಾವುದೇ ದಲಿತ ಸಂಘಟನೆಗಳ ಶಾಖೆಗಳಿಲ್ಲ ಅಂತ ಬೇಜಾರು ಮಾಡಿಕೊಂಡು, ಇಲ್ಲಿ ಒಂದು ಶಾಖೆ ತೆರೆಯುವ ವಿಷಯ ಮಾತಾಡಿದ್ದಾನೆ. ಆದರೆ ಆ ಹುಡುಗನ ಅಪ್ಪ ಇಬ್ಬರಿಗೂ ಬೈದು, ಸರಿ ಇರುವ ಊರಿನಲ್ಲಿ ಇಂಥಾದ್ದೇನೂ ಅವಶ್ಯಕಥೆ ಇಲ್ಲಾ ಅಂದಿದ್ದಾರೆ. ಇಬ್ಬರೂ ವಾಪಾಸ್ ಚಿಂತಾಮಣಿಗೆ ಹೋಗಿದ್ದಾರೆ,’ ಅಂದ್ರು.
ಆ ಕಥೆ ಅಲ್ಲಿಗೆ ನಿಂತಿದ್ದರೆ ಪರವಾಗಿಲ್ಲ. ಚಿಂತಾಮಣಿಗೆ ಹೋದ ಹುಡುಗರು, ಆದದ್ದಾಗಲಿ ಒಂದು ಶಾಖೆಯನ್ನು ತೆಗೆದೇ ಬಿಡುವ, ಎಂಬ ಹಠಕ್ಕೆ ಬಿದ್ದರು. ಊರವರೆಲ್ಲ ಸೇರಿ, ಅಷ್ಟೇ ಹಠದಿಂದ ವಿರೋಧಿಸಿದರು. ವಿಷಯ ಪೋಲಿಸ್ ಠಾಣೆಯ ಮೆಟ್ಟಲೇರಿತು ಮತ್ತು ಊರಿನ ದಲಿತರೇ `ನಮಗೆ ಹೊರಗಿನವರು ಬಂದು ಯಾವುದೇ ಸಂಘ ಸಂಸ್ಥೆಗಳ ಶಾಖೆಗಳನ್ನು ತೆಗೆಯುವ ಅವಶ್ಯಕತೆಯಿಲ್ಲ’ ಅಂತ ಹೇಳಿದರು. ಇನ್ನೇನು ಶಾಖೆ ತೆರೆಯಲು ಎರಡು ದಿನ ಬಾಕಿ ಇದೆ ಎನ್ನುವಾಗ, ಪೋಲಿಸರು ಊರಿಗೆ ಕಾವಲು ಹಾಕಿದರು. ಹಾಗೆಯೇ, ಶಾಖೆ ತೆರೆಯದಂತೆ, ಶಿವಣ್ಣನ ಜೊತೆ ಮಾತುಕತೆ ಶುರು ಮಾಡಿದರು.
ಮೊದಲ ಸಲ ಊರಿನ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಬಂದ ಪೋಲಿಸರನ್ನು ಊರವರು ಚೆನ್ನಾಗಿಯೇ ನೋಡಿಕೊಂಡರು. ಪೋಲಿಸರು ಮುಖ್ಯ ರಸ್ತೆಯಿಂದ ಊರಿಗೆ ತಿರುಗುವ ಜಾಗದಲ್ಲಿ ಒಂದು ಸಣ್ಣ ಕ್ಯಾಂಪ್ ಹಾಕಿಕೊಂಡಿದ್ದರು. ಹಳ್ಳಿಯವರೆಲ್ಲ ಸೇರಿ ಕ್ಯಾಂಪಿನ ಹತ್ತಿರವೇ ದೊಡ್ಡ ಪಾತ್ರೆಗಳಲ್ಲಿ ಪೋಲಿಸರಿಗೆ ಅಡುಗೆ ಮಾಡಿ ಊಟ ಬಡಿಸುತ್ತಿದ್ದರು.
ಎರಡು ದಿನ ಚೆನ್ನಾಗಿಯೇ ಇತ್ತು. ಮೂರನೇ ದಿನ ಬೆಳಗ್ಗೆ ಶಿವಣ್ಣ ಶಾಖೆ ತೆರೆಯುವ ನಿರ್ಧಾರವನ್ನು ಕೈ ಬಿಟ್ಟಿರುವುದಾಗಿ ಸುದ್ದಿ ಬಂತು. ಇನ್ನೇನು ಸಾಯಂಕಾಲದ ಹೊತ್ತಿಗೆ ಪೋಲಿಸರು ಅಲ್ಲಿಂದ ಜಾಗ ಖಾಲಿ ಮಾಡುವುದು ಅಂತ ಮಾತಾಡಿಕೊಳ್ತಾ ಇದ್ದರು.
ತೊಂದರೆ ಶುರುವಾಗಿದ್ದೇ ಮಧ್ಯಾಹ್ನ ಊಟದ ಹೊತ್ತಿನಲ್ಲಿ. ವೈರ್ ಲೆಸ್ ನಲ್ಲಿ ಶಿವಣ್ಣ ಪೋಲಿಸರ ಜೊತೆ ಬಿಲ್ಲಾಂಡ ಹಳ್ಳಿಯ ಕಡೆ ಹೊರಟ ಸುದ್ದಿ ಬಂತು. ವಿಷಯವೇನೆಂದರೆ, ಶಾಖೆ ತೆಗೆಯುವ ನಿರ್ಧಾರದಿಂದ ಹಿಂದೆ ಸರಿದಿದ್ದ ಶಿವಣ್ಣ, ಬಿಲ್ಲಾಂಡ ಹಳ್ಳಿಯಲ್ಲಿ ಧ್ವಜಾರೋಹಣ ಮಾಡಿ, ತಮ್ಮ ನಿರ್ಧಾರವನ್ನು ಅಲ್ಲಿ ಜನರೆದುರು ತಾವೇ ಪ್ರಕಟಿಸುವುದಾಗಿ ಹೇಳಿದ್ದರಂತೆ. ಅದಕ್ಕೆ ಒಪ್ಪಿದ ಪೋಲಿಸರು, ಶಿವಣ್ಣನನ್ನು ತಮ್ಮ ಜೊತೆಯಲ್ಲಿಯೇ ಕರೆದುಕೊಂಡು ಹೊರಟರಂತೆ.
ಆದರೆ ಇಲ್ಲಿ ಆದದ್ದೇ ಬೇರೆ. ಶಾಖೆಯನ್ನು ಪೋಲಿಸ್ ಬೆಂಗಾವಲಿನಲ್ಲಿ ಶಿವಣ್ಣ ಉದ್ಘಾಟಿಸುತ್ತಾರೆ ಅಂತ ಸುದ್ದಿ ಹಬ್ಬಿತು. ಅಲ್ಲಿದ್ದ ಊರಿನವರು ಪೋಲಿಸರ ಮೇಲೆ ತಿರುಗಿ ಬಿದ್ದರು. ಕುದಿಯುತ್ತಿದ್ದ ಸಾರನ್ನು ಪೋಲಿಸರ ಮೇಲೆ ಎರಚಿ. ಕೈಗೆ ಸಿಕ್ಕಿದ ದೊಣ್ಣೆ ಮತ್ತು ಕಲ್ಲುಗಳಲ್ಲಿ ಅವರನ್ನು ಮನಸೋ ಇಚ್ಚೆ ಥಳಿಸಿದರು. ಇಬ್ಬರು ಸತ್ತು ಹೋದರೆ, ಇನ್ನು ನಾಲ್ಕು ಜನ ಪಕ್ಕದ ಭಟ್ಟರಹಳ್ಳಿಯವರೆಗೆ ಓಡಿ, ಜೀವ ಉಳಿಸಿಕೊಂಡರು. ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರೂ ಕೂಡ ದಲಿತರೇ..
ಆಫೀಸರ್ ಕಥೆ ಹೇಳಿ ಮುಗಿಸಿದ ತಕ್ಷಣ,: `ಸರ್, ನೀವೂ ಈ ಕಡೆಯವರಾ?’ ಅಂತ ಕೇಳಿದೆ.
`ಇಲ್ಲಪ್ಪ, ನಾನು ಕೋಲಾರದ ಕಡೆಯವನು. ನನಗಾಗಲೀ, ನನ್ನ ಜಾತಿಗಾಗಲೀ, ಇದರ ಜೊತೆ ಸಂಬಂಧವೇ ಇಲ್ಲ,’ ಅಂತ ವಿಷಾದದ ನಗು ನಕ್ಕು, ತಮ್ಮ ಶರ್ಟನ್ನು ಸ್ವಲ್ಪ ಪಕ್ಕಕ್ಕೆ ಸರಿಸಿ ತಮ್ಮ ಭುಜದಲ್ಲಿದ್ದ ಜನಿವಾರ ತೋರಿಸಿದರು.
`ಸರ್, ತಮ್ಮ ಹೆಸರು ಗೊತ್ತಾಗಲಿಲ್ಲ,’ ಅಂದೆ.
`ಅದೊಂದು ಬೇಡಪ್ಪಾ. ಇನ್ನೆರೆಡು ವರ್ಷದಲ್ಲಿ ರಿಟೈರ್ ಆಗ್ತೀನಿ… ಹೊರಡು, ಲೇಟಾಗುತ್ತೆ,’ ಅಂದರು.
ಅಲ್ಲಿಂದ ನೇರವಾಗಿ ಚಿಂತಾಮಣಿಗೆ ಬಂದು ಶಿವಣ್ಣನ ಬಗ್ಗೆ ವಿಚಾರಿಸುವಾಗಲೇ, ಬಸ್ ಸ್ಟ್ಯಾಂಡ್ ಹತ್ತಿರದ ಕಟ್ಟಡದಿಂದ ಟೈಮ್ಸ್ ಆಫ್ ಇಂಡಿಯಾದ ರಿಪೋ ರ್ಟರ್ ವಿಕಾಸ್ ಹಂಡೆ ಹೊರಗೆ ಬರುತ್ತಿದ್ದ. ಅವನ ಹತ್ತಿರ ಹೋಗಿ ಮಾತಾಡಿದಾಗ, ಶಿವಣ್ಣನು ಆ ಕಟ್ಟಡದಲ್ಲಿದ್ದಾನೆಂದೂ, ಪೋಲಿಸರ ಮೇಲಿನ ಹಲ್ಲೆಯನ್ನು ರೆಡ್ಡಿಗಳು ಮಾತ್ರ ಮಾಡಿರುವುದಾಗಿ ಹೇಳಿದ್ದಾನೆಂದೂ, ಹೇಳಿದ.
ಇಂಥವನ ಹತ್ತಿರ ಏನು ಮಾತಾಡೋದು ಅನ್ಕೊಂಡು ಹಾಗೇ ವಾಪಾಸ್ ಬಂದಿದ್ದೆ.
ಇಷ್ಟೆಲ್ಲಾ ಒಗ್ಗಟ್ಟಿನಲ್ಲಿದ್ದ ಈ ಹಳ್ಳಿಯಲ್ಲಿ ಏನಾಯ್ತು? ಅಂತ ಯೋಚಿಸುವಾಗಲೇ ಭಟ್ಟರಹಳ್ಳಿಯ ಹತ್ತಿರ ಕಾರು ಬಂತು. ಮೊದಲಿಗೆ ನನ್ನ ಕಣ್ಣಿಗೆ ರಾಚಿದ್ದೇ ದೊಡ್ಡದೊಂಡು ಬೋರ್ಡ್: `ಭಟ್ಟರಹಳ್ಳಿ ಪೋಲಿಸ್ ಠಾಣೆ’. ಹೋದ ಸಲ ಗಲಾಟೆಯಾದಮೇಲೆ ಬಂತು ಅಂತ ಕಾಣುತ್ತೆ ಅನ್ಕೊಂಡೆ. ಅಲ್ಲಿಂದ ಮುಂದೆ ಹೋಗಿ ಕಂಬಾಲಪಲ್ಲಿ ಸೇರಿದಾಗ ಮೊದಲು ಕಂಡಿದ್ದು ಒಂದು ಹೆಣ ಮತ್ತು ಅದನ್ನು ಮನೆ ಹೊರಗಡೆ ನಿಂತು ನೋಡುತ್ತಿದ್ದ ಹೆಂಗಸರು.
ಆಗಿದ್ದಿಷ್ಟೆ. ಆ ದಿನ ಬೆಳಗ್ಗೆ, ಊರಿನ ನೀರು ಸರಬರಾಜು ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದ ಕೃಷ್ಣಾ ರೆಡ್ಡಿ, ನೀರು ಬಿಡಲು ಹೋದಾಗ, ದಲಿತರ ಒಂದು ಗುಂಪು ಅವನನ್ನು ಮಚ್ಚಿನಿಂದ ಕಡಿದು ಕೊಲೆ ಮಾಡಿದರಂತೆ. ಅರ್ಧ ಘಂಟೆಯೊಳಗೆ, ರೆಡ್ಡಿಗಳ ಗುಂಪೊಂದು ಬಂದು ಕೊಲೆಗಡುಕರನ್ನು ಹುಡುಕುವಾಗ, ಆಗ ತಾನೆ ಬಸ್ಸಿನಿಂದ ಇಳಿದ ದಲಿತರಿಬ್ಬರನ್ನು ಅಟ್ಟಿಸಿಕೊಂಡು ಹೋಗಿದ್ದಾರೆ. ಅವರು ಹತ್ತಿರ ಸಿಕ್ಕಿದ ಮನೆಯೊಳಗೆ ಓಡಿಹೋಗಿ ಬಾಗಿಲು ಹಾಕಿಕೊಂಡಾಗ, ಹೊರಗಿನಿಂದ ಚಿಲುಕ ಹಾಕಿ, ಎರಡೂ ಮನೆಗಳಿಗೆ ಬೆಂಕಿ ಹಾಕಿದ್ದಾರೆ. ಅದರಿಂದ ಇಬ್ಬರು ತಪ್ಪಿಸಿಕೊಂಡರೂ, ಏಳು ಜನ ಸುಟ್ಟುಹೋಗಿದ್ದಾರೆ.
ಕೃಷ್ಣ ರೆಡ್ಡಿಯ ಹೆಣ ದಾಟಿಕೊಂಡು, ಇನ್ನೂ ಏಳು ಶವಗಳಿದ್ದ ಜಾಗಕ್ಕೆ ಹೋಗುವಾಗ ಸಾಯಂಕಾಲವಾಗತೊಡಗಿತು. ಊರ ಹೊರಗಿನ ಹೊಲದಲ್ಲಿ ಏಳೂ ಶವಗಳನ್ನು ಇಡಲಾಗಿತ್ತು. 150 ಅಡಿಗಳ ಒಳಗೆ ಯಾರೂ ಹೋಗದಂತೆ ಪೋಲಿಸರು ಸುತ್ತುವರೆದಿದ್ದರು. ಒಂದು ಸಾವಿರಕ್ಕೂ ಹೆಚ್ಚು ಜನ ಅಲ್ಲಿ ಸೇರಿದ್ದರು. ಇಡೀ ಹೊಲವನ್ನು ಒಂದು ಸುತ್ತು ಬಂದಾಗ, ಅಲ್ಲಿ ಶಾಸಕ ಮುನಿಯಪ್ಪ ಮತ್ತು ಸಂಸದ ಮುನಿಯಪ್ಪರಿಬ್ಬರು ಇದ್ದದ್ದು ಕಂಡು ಬಂತು.
ಇಂಥಹ ಸಂದರ್ಭಗಳಲ್ಲಿ, ರಿಪೋರ್ಟರ್ ಮತ್ತು ಫೋಟೋಗ್ರಾಫರ್ ಗಳು ಒಟ್ಟಿಗೆ ಇರೋದಿಲ್ಲ. ಸ್ವಲ್ಪ ದೂರದಲ್ಲಿದ್ದುಕೊಂಡು, ಎಲ್ಲವನ್ನೂ ನೋಡುತ್ತಿರುತ್ತೇವೆ ಮತ್ತು ಸನ್ನೆಯ ಮೂಲಕ ಇನ್ನೊಬ್ಬರಿಗೆ ಸೂಚನೆ ನೀಡುತ್ತೇವೆ. ಆಗಾಗ ಒಬ್ಬರು ಇನ್ನೊಬ್ಬರ ಕಡೆಗೆ ಏನಾದರೂ ಸನ್ನೆಗಳಿವೆಯಾ ಅಂತ ತಿರುಗಿ ನೋಡುತ್ತಿರುತ್ತೇವೆ.
ಹಾಗೇ ಸುತ್ತುವಾಗ ಬಿಲ್ಲಾಂಡ ಹಳ್ಳಿಯಲ್ಲಿ ಸಿಕ್ಕಿದ್ದ ಪೋಲಿಸ್ ಆಫೀಸರ್ ಕಣ್ಣಿಗೆ ಬಿದ್ದರು. ನಾನು ಮಾತಾಡಲು ಹತ್ತಿರ ಹೋದರೆ, ಅವರು ತಿರುಗಿ ನೆಡೆದೇ ಬಿಟ್ಟರು. ನೆನಪಾಗಲಿಲ್ಲ ಅಂತ ಕಾಣುತ್ತೆ ಅನ್ಕೊಂಡು ಅವರ ಹಿಂದೆ ಹೋದಾಗ, ಅವರು ಹೇಳಿದರು: `ಒಂದೈದು ನಿಮಿಷ ಸುಮ್ಮನಿರು. ನಾ ಆಮೇಲೆ ಮಾತಾಡ್ತೀನಿ,’ ಅಂತ. ನಾನು ವಾಪಾಸು ತಿರುಗಿ, ರಾಜಕಾರಣಿಗಳಿದ್ದ ಗುಂಪಿನ ಜೊತೆ ಸೇರಿಕೊಂಡು, ಅವರು ಹೇಳುವುದನ್ನು ಕೇಳಿಸಿಕೊಳ್ಳಲು ಶುರುಮಾಡಿದೆ.
ಒಂದೈದು ನಿಮಿಷ ಬಿಟ್ಟು ಪೋಲಿಸ್ ಆಫೀಸರ್ ಕಡೆ ತಿರುಗಿ ನೋಡಿದಾಗ, ಅವರು ಸನ್ನೆಯಲ್ಲೇ ನನ್ನನ್ನು ಕರೆದರು. ಹತ್ತಿರ ಹೋದವನೇ: `ಏನ್ಸಾರ್, ಹೀಗಾಗಿಬಿಟ್ಟಿದೆ? ಎಷ್ಟೊಂದು ಒಗ್ಗಟ್ಟಲ್ಲಿ ಇದ್ರಲ್ವಾ?’ ಅಂದೆ.
`ಹೌದಪ್ಪಾ… ಏನು ಮಾಡೋದು ಹೇಳು. ಹೋದ್ಸಲದ ಗಲಾಟೆಯ ತೆನಿಖೆ ಸಮಯದಲ್ಲಿ ದಲಿತರಿಗೆ ಅನ್ಯಾಯವಾಗಿದೆ ಅಂತ ಕೂಗು ಎದ್ದಿತ್ತು. ತೆನಿಖೆ ಮುಗಿದು, ಚಾರ್ಜ್ ಶೀಟ್ ಹಾಕುವುದರ ಹೊತ್ತಿಗೆ, ಬಿಲ್ಲಾಂಡ ಹಳ್ಳಿಯ ಜೊತೆ, ಸುತ್ತ ಹತ್ತು ಹಳ್ಳಿಗಳಲ್ಲಿ ದಲಿತ ಸಂಘಟನೆಗಳ ಶಾಖೆಗಳು ಹುಟ್ಟಿಕೊಂಡವು. ಎಲ್ಲಾ ಊರುಗಳಲ್ಲೂ ಜಾತಿ ಆಧಾರದ ಮೇಲೆ ಗುಂಪುಗಾರಿಕೆ ಶುರುವಾಯ್ತು. ಇಲ್ಲಿಂದ ಬರುವ ಕೇಸ್ ಗಳನ್ನು ನೋಡಿ, ಇಲ್ಲಿಗೇ ಒಂದು ಪೋಲಿಸ್ ಔಟ್ ಪೋಸ್ಟ್ ಮಾಡಿದರು. ಈಗ ನೋಡಿದರೆ ಹೀಗಾಗಿದೆ. ಮುಂದೇನಾಗುತ್ತೋ ಗೊತ್ತಿಲ್ಲ,’ ಅಂದರು.
`ಮೊದಲನೇ ಕೊಲೆ ಯಾಕಾಯ್ತು?’ ಅಂತ ಕೇಳಿದೆ. `ನೆನ್ನೆ ಸಾಯಂಕಾಲ, ಇಬ್ಬರು ದಲಿತ ಹುಡುಗರು ಪಕ್ಕದ ಹಳ್ಳಿಗೆ ಹೋಗುವಾಗ, ನಮ್ಮ ಜಮೀನಿನ ಮೇಲೆ ಹೋಗ್ತೀರಾ?’ ಅಂತ ಗಲಾಟೆ ಶುರುವಾಗಿದ್ದು. ಇಲ್ಲೀ ವರೆಗೆ ತಲುಪಿದೆ,’ ಅಂದರು.
ಮನಸ್ಸಿಗೆ ಪಿಚ್ಚೆನಿಸಿತು. ಅವರಿಂದ ಬಿಳ್ಕೊಟ್ಟು  ಹಿಂದಕ್ಕೆ ತಿರುಗಿದೆ. ಹೆಣಗಳಿಂದ ಸ್ವಲ್ಪ ದೂರದಲ್ಲಿ ಏನೋ ಅಲ್ಲಾಡಿದಂತೆ ಅನ್ನಿಸಿತು. ಸರಿಯಾಗಿ ನೋಡಿದರೆ, ನಾಯಿಯೊಂದು ಹೆಣಗಳ ಕಡೆಗೆ ನಿಧಾನವಾಗಿ ಬರುತ್ತಿತ್ತು. ತಕ್ಷಣವೇ ಈಶನಿಗೆ ಹುಡುಕಿದೆ. ನನ್ನಿಂದ ಸ್ವಲ್ಪ ದೂರದಲ್ಲಿ ಬೆನ್ನು ಹಾಕಿಕೊಂಡು ನಿಂತಿದ್ದ. ಯಾಕೋ ನನ್ನ ಕಡೆ ತಿರುಗಲೇ ಇಲ್ಲ. ಸಣ್ಣ ಕಲ್ಲೊಂದನ್ನೆತ್ತಿ ಅದರಲ್ಲಿ ಹೊಡೆದಾಗ ತಿರುಗಿ, `ಏನು?’ ಎಂಬಂತೆ ತಲೆ ಆಡಿಸಿದ.
ನಾನು ಹೆಣಗಳ ಕಡೆಗೆ ತಿರುಗಿ ನೋಡಿ, ಮತ್ತೆ ಅವನ ಮುಖ ನೋಡಿದೆ.
ಅವನೂ ಆ ಕಡೆ ನೋಡಿದ, ಆದರೆ ಏನು ಅಂತ ಗೊತ್ತಾಗದೆ ಮತ್ತೆ ನನ್ನ ಮುಖ ನೋಡಿದ.
ನಾನು ಮತ್ತೆ ಹೆಣಗಳ ಕಡೆಗೆ ಸನ್ನೆ ಮಾಡಿ, `ನಾಯಿ’ ಎಂದು ಹೇಳುವಂತೆ ಬಾಯಯಾಡಿಸಿದೆ.
ಮತ್ತೆ ಹೆಣಗಳ ಕಡೆಗೆ ನೋಡಿದ ಈಶ, ನನ್ನ ಕಡೆನೇ ಬರೋಕೆ ಶುರುಮಾಡಿದ. ಅಷ್ಟರಲ್ಲಾಗಲೇ ನಾಯಿ ಹೆಣಗಳ ಪಕ್ಕಕ್ಕೇ ಬಂದಿತ್ತು. ನಾನು ಈಶನ ಕಡೆ ಓಡಿದವನೇ, `ನೋಡೋ ಅಲ್ಲಿ, ನಾಯಿ ಹೆಣ ತಿನ್ನೋಕೆ ಬರ್ತಿದೆ,’ ಅಂತ ಮೆಲ್ಲಗೆ ಹೇಳಿದ.
ಈಶ ನಿಧಾನವಾಗಿ ಹೆಣಗಳ ಕಡೆಗೆ ಹೋಗಲು ಆರಂಭಿಸಿದ. ನಮ್ಮಿಬ್ಬರ ಸನ್ನೆಗಳನ್ನು ಗಮನಿಸುತ್ತಿದ್ದ ಪೋಲಿಸ್ ಒಬ್ಬ ಓಡಿಹೋದವನೇ, ಹೆಣಕ್ಕೆ ಬಾಯಿ ಹಾಕುತ್ತಿದ್ದ ನಾಯಿಯನ್ನು ಓಡಿಸಿದ. ಈಶ ಅಸಹಾಯಕತೆಯಿಂದ ನನ್ನ ಮುಖ ನೋಡುವುದರೊಳಗೆ, ನನಗೆ ಪಿತ್ತ ನೆತ್ತಿಗೇರಿತ್ತು.
`ಯಾವ ಬೋಳಿಮಗ ನಿನಗೆ ಫೋಟೋಗ್ರಾಫರ್ ಕೆಲಸ ಕೊಟ್ಟಿದ್ದೋ? ಕತ್ತೆ ಕಾಯೋಕೆ ಹೋಗು. ಕ್ಯಾಮೆರಾ ಹಿಡ್ಕೊಂಡು ಬಂದ್ರೆ ಸಾಕಾ? ಅಲ್ಲ ಕಣೋ, ಎರಡು ಸಾವಿರ ಜನಗಳ ಮಧ್ಯ ನಾಯಿ ಹೆಣಕ್ಕೆ ಬಾಯಿ ಹಾಕೋದು ನಿನಗೆ ಫೋಟೋ ಅಂತ ಅನ್ನಿಸ್ಲಿಲ್ವಾ?’ ಅಂತ ಕೂಗಾಡಿದೆ.
`ಅಲ್ಲ ಮಾಮ… ನನ್ನ ಹತ್ರ ಲೆನ್ಸ್ ಇರಲಿಲ್ಲ. ಯಾರಿಗೂ ಗೊತ್ತಾಗದ ಹಾಗೆ ಸ್ವಲ್ಪ ಹತ್ರ ಹೋಗೋಣ ಅಂತಿದ್ದೆ. ಮತ್ತೆ ಎದುರಿಗೆ….’ ಅಂತ ಏನೋ ಹೇಳೋಕೆ ಹೋದ.
`ಮುಚ್ಚೋ ಬಾಯಿ. ಆ ಫೋಟೊ ಪಬ್ಲಿಷ್ ಆಗದಿದ್ದರೆ ಕತ್ತೆ ಬಾಲ. ನಿನ್ನ ಜೀವನದಲ್ಲಿ ಇಷ್ಟು ಒಳ್ಳೆ ಫೋಟೊ ಸಿಕ್ತಿತ್ತೇನೋ? ಅಷ್ಟಾದರೂ ಯೋಚನೆ ಮಾಡೋಕಾಗಲ್ವ? ಹಾಳಾಗ್ಹೋಗು. ನಂಗೇನಾಗಬೇಕು? ನಂದೇ ಕ್ಯಾಮೆರಾ ತರಬೇಕಿತ್ತು ನಾನು’ ಅಂತ ಮತ್ತೆ ಕೂಗಾಡಿದೆ.
ಸಾಧಾರಣವಾಗಿ ಜಗಳಗಂಟನಾದ ಈಶ ಏನೂ ಮಾತಾಡಲಿಲ್ಲ. ವಾಪಾಸ್ ಬರುವಾಗಲೂ ಕೂಡ, ಕಾರಿನಲ್ಲಿ ಏನೂ ಹೇಳಲಿಲ್ಲ. ಅವನ ಮುಖದಲ್ಲಿ ಸಿಟ್ಟಿಗಿಂತ ಜಾಸ್ತಿ ನೋವೇ ಇತ್ತು. ನಾನಂತೂ, ಆಫೀಸಿನಲ್ಲಿ ವರದಿ ಬರೆದು ಮನೆಗೆ ಹೋದಮೇಲೂ ನನಗೆ ಮೂಡ್ ಸರಿ ಹೋಗಿರಲಿಲ್ಲ.
ಮಾರನೇ ದಿನ ಮಧ್ಯಾಹ್ನ ಆಫೀಸಿಗೆ ಬಂದಾಗ, ಫೋಟೋಗ್ರಫಿ ವಿಭಾಗದಲ್ಲಿ ಈಶ ಕೂತುಕೊಂಡು ಯಾವುದೋ ನೆಗೆಟಿವ್ ನೋಡುತ್ತಿದ್ದ. ನನಗಿನ್ನೂ ಅಸಮಾಧಾನ ಕಮ್ಮಿಯಾಗಿರಲಿಲ್ಲ. ಟೇಬಲ್ ಮೇಲೆ ಹರಡಿದ್ದ ಫೋಟೋಗಳನ್ನು ನೋಡಿದಾಗ, ಅವೆಲ್ಲಾ ಕಂಬಾಲಪಲ್ಲಿಯ ಫೋಟೊಗಳಾಗಿದ್ದವು. ಹೆಣಗಳ ಹತ್ತಿರದ ಫೋಟೊಗಳನ್ನು ನೋಡಿದಾಗ, ಬೆಳಕು ಸ್ವಲ್ಪ ಕಮ್ಮಿಯಿದ್ದಂತೆ ಕಂಡಿತು.
ಹಾಗೇ ಅವನ ಕೈಯಿಂದ ನೆಗೆಟಿವ್ ಇಸ್ಕೊಂಡು ನೋಡಿದೆ. ನಾವು ನಿಂತಿದ್ದ ಜಾಗದ ಎದುರುಗಡೆಯಿಂದ ಇಳಿ ಬಿಸಿಲು ಹೊಡೆಯುತ್ತಿತ್ತು. ಅಂಥ ಸಂದರ್ಭಗಳಲ್ಲಿ ಪೋಟೋ ತೆಗೆಯಲು ಕಷ್ಟ. ನಾವು ನಿಂತಿದ್ದ ಜಾಗದಿಂದ ಏನೂ ಮಾಡಿದರೂ ನಾಯಿ ಹೆಣಕ್ಕೆ ಬಾಯಿ ಹಾಕುತ್ತಿದ್ದ ಫೋಟೋ ತೆಗೆಯಲು ಆಗುತ್ತಿರಲಿಲ್ಲ ಅನಿಸಿತು. ಅಂತೂ ಉಳಿದ ಫೋಟೋಗಳನ್ನು ಈಶ ಚೆನ್ನಾಗಿಯೇ ತೆಗೆದಿದ್ದ.
`ಈ ಎದುರು ಬಿಸಿಲಲ್ಲಿ ಹೆಂಗೋ ತೆಗೆದೆ? ಅದೂ ಇಳಿ ಬಿಸಿಲು, ಮತ್ತೆ ಲೈಟ್ ಸಮೇತ ಕಡಿಮೆ ಇದೆ,’ ಅಂದೆ.
`ಹೂಂ ಮಾಮ… ಅದಕ್ಕೆ ನೀನು ಆ ನಾಯಿದು ಹೇಳ್ದಾಗ ಹತ್ತಿರ ಹೋಗೋಕ್ಕೆ ನೋಡ್ದೆ. ಎದುರು ಬಿಸಿಲಲ್ಲಿ ಏನೂ ಬರ್ತಿರಲಿಲ್ಲ. ಆ ಪೋಲಿಸವನು ನೋಡ್ಬಿಟ್ಟ. ನೀನು ನೋಡಿದ್ರೆ ಕೂಗಾಡ್ಬಿಟ್ಟೆ,’ ಅಂದ.
`ಏನೋ, ಹೋಗ್ಲಿ ಬಿಡು. ಆ ಜಾಗಾನೇ ಸರಿ ಇಲ್ಲ. ಹೋದವರೆಲ್ಲ ಜಗಳ ಆಡ್ತಾರೆ,’ ಅಂತ ಹೇಳಿ ಹೊರಗಡೆ ಬಂದೆ.
ಸೌಜನ್ಯಕ್ಕಾದ್ರೂ ಈಶನಿಗೆ `ಸಾರಿ’ ಹೇಳಲಿಲ್ಲ.


ಮಾಕೋನಹಳ್ಳಿ ವಿನಯ್ ಮಾಧವ

 


ಶನಿವಾರ, ಮಾರ್ಚ್ 3, 2012

ಹಿರಿಯ

ಛೆ!... ನಾ ಹಾಗೆ ಮಾಡ್ಬಾರ್ದಿತ್ತು


ಹೋದ ಶುಕ್ರವಾರ ಚಂದ್ರು ಫೋನ್ ಮಾಡಿ ಹೇಳಿದ: `ಸರ್, ಧನಂಜಯಪ್ಪ ತೀರಿಕೊಂಡ್ರಂತೆ’.
ತಕ್ಷಣವೇ `ನಾ ಹಾಗೆ ಮಾಡ್ಬಾರ್ದಿತ್ತು,’ ಅನ್ಕೊಂಡು ತುಟಿ ಕಚ್ಕೊಂಡೆ.
ನಾನು ಕ್ರೈಂ ರಿಪೋರ್ಟಿಂಗ್ ಗೆ ಬಂದ ಮೊದಲ ದಿನವೇ ನನಗೆ ಪರಿಚಯವಾಗಿದ್ದರು. ತಲೆ ಮೇಲೆ ಪ್ರಪಂಚನೇ ಹೊತ್ತುಕೊಂಡಂತೆ, ಎಲ್ಲೋ ಕಳೆದು ಹೋದವರಂತೆ ಓಡಾಡುತ್ತಿದ್ದರು. ಮೊದಮೊದಲು ಅಷ್ಟೇನೂ ತಲೆಕೆಡಿಸಿಕೊಂಡಿರಲಿಲ್ಲ. ಒಂದಿನ, ನನ್ನ ಯಾವುದೋ ವಿಶೇಷ ವರದಿಯನ್ನು ಓದಿ ಬಂದವರೇ, `ನೋಡೋ, ಅಂಥಾದ್ದೇನಾದ್ರು ಇದ್ರೆ ನಮಗೂ ಒಂದೆರೆಡು ಪ್ಯಾರಾ ಹೇಳು. ಆಮೇಲೆ ನಿಮಗೆ ಹ್ಯಾಗೆ ಬೇಕೋ, ಹಾಗೆ ಬರ್ಕೊಳ್ಳಿ,’ ಅಂದಿದ್ದರು.
ಟೆಲಿವಿಷನ್ ಗಳ ಹಾವಳಿಯಿಲ್ಲದ, ಮೊಬೈಲ್ ಹಾಗೂ ಇಂಟರ್ನೆಟ್ ಕಾಟವಿಲ್ಲದ ಆ ಕಾಲದಲ್ಲಿ, ಸಂಜೆ ಪತ್ರಿಕೆಗಳು ಮತ್ತು ನ್ಯೂಸ್ ಏಜೆನ್ಸಿಗಳನ್ನು ನಾವು ತುಂಬಾನೇ ಮುತುವರ್ಜಿಯಿಂದ ಗಮನಿಸುತ್ತಿದ್ದೆವು. ನಾವೇನಾದ್ರು ಎರಡು ಪ್ಯಾರಾ ಸಂಜೆವಾಣಿಗೆ ಕೊಟ್ಟರೆ, ಮರುದಿನ ಎಲ್ಲಾ ಪತ್ರಿಕೆಗಳು ಅದನ್ನು ಫಾಲೋ ಅಪ್ ಮಾಡಿ, ನಮ್ಮ ವಿಶೇಷ ವರದಿಗೆ ಯಾವುದೇ ಕಿಮ್ಮತ್ತಿರುತ್ತಿರಲಿಲ್ಲ. `ಇದೊಳ್ಳೆ ಕಥೆಯಾಯ್ತಲ್ಲಾ,’ ಅಂದ್ಕೊಂಡು ಸುಮ್ಮನಾದೆ.
ಯಾಕೋ ಇದೊಂಥರಾ ತಮಾಶೆ ಅಂತ ಕೂಡ ಅನ್ನಿಸತೊಡಗಿತು. ಕೆಲವು ಸಲ, ವಿಷಯ ಗೊತ್ತಿದ್ದರೂ ಮಧ್ಯಾಹ್ನ ಎರಡೂವರೆವರೆಗೆ ಸುಮ್ಮನಿದ್ದು, `ಧನು, ಈ ಸುದ್ದಿ ಗೊತ್ತಾಗ್ಲಿಲ್ವಾ?’  ಅಂತ ಕೇಳಿದಾಗ ಅವರಿಗೆ ಸಿಟ್ಟೇ ಬರುತ್ತಿತ್ತು. `ನಿಂಗೆ ಬರೀ ಹುಡುಗಾಟ. ಒಂದಿನ ಹೊಡೆದ್ಬಿಡ್ತೀನಿ ನೋಡು,’ ಅಂತಿದ್ರು.
ಆದ್ರೆ ಎಲ್ಲರಿಗಿಂತ ಅವರನ್ನು ಗೋಳು ಹುಯ್ಕೊಂಡಿದ್ದುಡ್ಯಾನಿ. ಡ್ಯಾನಿ ನನಗಿಂತ ಮುಂಚೆ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಕ್ರೈಂ ರಿಪೋರ್ಟರ್. ಅವನಂತ ಕಿಡಿಗೇಡಿ, ನಮ್ಮ ಕ್ರೈಂ ರಿಪೋರ್ಟರ್ ಗಳಲ್ಲಿ ಯಾರೂ ಬರಲೇ ಇಲ್ಲ. ಬರೀ ಧನಂಜಯಪ್ಪ ಅಲ್ಲ, ಯಾರು ಸಿಕ್ಕಿದರೂ ಬಿಡುತ್ತಿರಲಿಲ್ಲ. ಅವನ ವಿಚಿತ್ರ ಖಯಾಲಿಗಳಲ್ಲಿ ಒಂದೆಂದರೆ, ಯಾವುದೋ ಆಗದೇ ಇರುವ ಸುದ್ದಿಯನ್ನು, ಯಾವುದಾದರೊಂದು ಪೇಪರ್ ನಲ್ಲಿ ಬರುವ ಹಾಗೆ ಮಾಡಿ, ರಿಪೋರ್ಟರ್ ಗಳನ್ನು ಗೋಳು ಹುಯ್ಕೊಳ್ಳೋದು. ಇದು ಎಲ್ಲರಿಗೂ ಗೊತ್ತಿದ್ದರೂ, ಡ್ಯಾನಿ ಅಧ್ಬುತವಾದ ಕ್ರೈಂ ರಿಪೋರ್ಟರ್ ಅನ್ನುವುದರಲ್ಲಿ ಯಾವುದೇ ಸಂದೇಹವಿರಲಿಲ್ಲ. ಅವನಿಗೆ ಕಥೆ ಹೇಳುವ ಕಲೆಯಂತೂ ಇನ್ನೂ ಅಧ್ಬುತವಾಗಿತ್ತು. ಇದೆಲ್ಲದರ ಪರಿಣಾಮವಾಗಿ, ಗುಂಡಿಗೆ ಬೀಳುವವರ ಸಂಖ್ಯೆಯೂ ಹೆಚ್ಚಿತ್ತು.
ಒಂದ್ಸಲ ಹೀಗೇ ಆಯ್ತು. ಸಾಲಾರ್ ಪತ್ರಿಕೆಯ ಸಿದ್ದಿಕಿ ಅಲ್ದೂರಿಗೆ ಯಾವುದೋ ಒಂದು ಕಥೆಯನ್ನು ಡ್ಯಾನಿ ಹೇಳಿದ. ಅದರ ಬಗ್ಗೆ ಸ್ವಲ್ಪ ಗೊತ್ತಿದ್ದ ಅಲ್ದೂರಿ, `ಅದು ಹಾಗೆ ಇಲ್ಲ ಕಣೋ,’ ಅಂತ ಏನೋ ಹೇಳೋಕೆ ಹೋದ. `ಏನೋ ಒಳ್ಳೆ ಸ್ಟೋರಿ ಅಂತ ನಿನ್ನೊಬ್ಬನಿಗೇ ಕೊಡ್ತಿದ್ದೀನಿ. ನಿನ್ನ ಉರ್ದು ಪೇಪರ್ ಓದಿ ಕಮೀಷನರ್ ಕ್ಲಾರಿಫಿಕೇಷನ್ ಬೇರೆ ಕೊಡ್ತಾರೆ ಅಂತ ಹೆದರ್ತೀಯ. ಉರ್ದು ಓದೋಕೆ ನಿಮ್ಮ ಸಾಬರನ್ನ ಬಿಟ್ಟು ಬೇರೆ ಯಾರಿಗೆ ಬರುತ್ತೆ?’ ಅಂದ. ಸರಿ ಅನ್ಕೊಂಡು ಸಿದ್ದಿಕಿ ಬರೆದೇ ಬಿಟ್ಟ.
ಮಾರನೇ ದಿನ ಕಮೀಶನರ್ ಚಂದೂಲಾಲ್ ಪ್ರೆಸ್ ಕಾನ್ಫರೆನ್ಸ್ ಇತ್ತು. ಎಲ್ಲರಿಗಿಂತ ಕೊನೆಗೆ ಸಿದ್ದಿಕಿ ಬಂದು ಕೂರುತ್ತಿರುವಾಗಲೇ, ಚಂದೂಲಾಲ್ ಇದ್ದವರು, ಸಾಲಾರ್ ಪೇಪರ್ ಎತ್ತಿ: `ಅರೆ ಸಿದ್ದಿಕಿ, ತೂ ಕ್ಯಾ ಲಿಖಾರೇ ಇದರ್? ಐಸಾ ನಹಿ ಹುವಾರೇ,’ ಅಂತ ಉರ್ದುವಿನಲ್ಲಿ ಹೇಳಿದಾಗ ಎಲ್ಲಾರೂ ಸುಸ್ತು.
ವಿಷಯವೇನೆಂದರೆ, ಚಂದೂಲಾಲ್ ಅವರ ಪ್ರಾಥಮಿಕ ಶಿಕ್ಷಣವನ್ನು ಉರ್ದುವಿನಲ್ಲೇ ಆರಂಭಿಸಿದವರು. ಆನಂತರ, ಉರ್ದು ಕವಿತೆಗಳ ಗೀಳು ಹಚ್ಚಿಸಿಕೊಂಡು, ಪ್ರತಿದಿನ ಬೆಳಗ್ಗೆ ಸಾಲಾರ್ ಪೇಪರ್ ಮೊದಲು ಓದುತ್ತಿದ್ದರು.
ಇಂಥ ಅನೇಕ ಕುಚೇಷ್ಟೆಗಳಿಗೆ ಧನಂಜಯಪ್ಪನೂ ಬಲಿಯಾಗಿದ್ದರು. ಸಂಜೆವಾಣಿಯ ಎಡಿಷನ್ ಗೆ ಕೊನೇ ಸುದ್ದಿ ಕೊಡಬೇಕಾಗಿದ್ದು ಎರಡೂವರೆಯ ಒಳಗೆ. ಅದೇ ಸಮಯಕ್ಕೆ ಬಂದ ಡ್ಯಾನಿ ಏನಾದರೊಂದು ಸುದ್ದಿ ಹೇಳಿಬಿಡುತ್ತಿದ್ದ. ಸಂಜೆವಾಣಿ ಬಿಟ್ಟು, ಇನ್ನೆಲ್ಲೂ ಅದು ಸುದ್ದಿಯಾಗುತ್ತಿರಲಿಲ್ಲ.
ಒಂದ್ಸಲ, ಇದೇ ಥರ ಡ್ಯಾನಿ ದೊಡ್ಡ ಸುದ್ದಿಯನ್ನೇ ಮಾಡಿಸಿಬಿಟ್ಟಿದ್ದ. ಎಡಿಷನ್ ಹೋಗುವ ಸಮಯದಲ್ಲಿ, ಇಸ್ರೇಲಿನ ಎರಡು ಭಯೋತ್ಪಾದಕ ಗುಂಪುಗಳು ಬೆಂಗಳೂರಿನಲ್ಲಿ ಬಂದು, ಹೆಣ್ಣೂರಿನಲ್ಲಿ ಬಾಡಿಗೆ ಮನೆಯಲ್ಲಿ ಉಳಿದಿದ್ದಾರೆಂದೂ, ಅವರೆಲ್ಲರೂ ತುಂಬಾ ಆಯುಧಗಳನ್ನು ಇಟ್ಟುಕೊಂಡಿದ್ದಾರೆಂದೂ ಸಂಜೆವಾಣಿಯಲ್ಲಿ ಪ್ರಕಟವಾಯ್ತು. ಆಗಿನ ಇಂಟೆಲಿಜೆನ್ಸ್ ವಿಭಾಗದಲ್ಲಿದ್ದ ಡಿ.ಸಿ.ಪಿ. ತುಂಬಾನೇ ಪಾಪದವರಾಗಿದ್ದರು. ಸಂಜೆವಾಣಿಯ ವರದಿ ಆಧರಿಸಿ ಅವರೂ ಒಂದು ರಿಪೋರ್ಟ್ ತಯಾರಿಸಿ, ಕಮೀಷನರ್ ಕಡೆಗೆ ಕಳುಹಿಸಿ ಕೈ ತೊಳೆದುಕೊಂಡರು.
ಸಂಜೆವಾಣಿ ವರದಿ ನೋಡಿದ್ದ ಆಗಿನ ಕಮೀಷನರ್ ಪಿ. ಕೋದಂಡರಾಮಯ್ಯ, ಹೆಣ್ಣೂರಿನ ಆ ಮನೆಗೆ ಒಬ್ಬ ಪೋಲಿಸ್ ಇನ್ಸ್ ಪೆಕ್ಟರ್ ಕಳುಹಿಸಿ, ಅ ಮನೆಯ ವಿವರಗಳನ್ನು ತೆಗೆದುಕೊಂಡಿದ್ದರು. ಆ ಮನೆ ಒಬ್ಬರು ಡಾಕ್ಟರ್ ದು, ಮತ್ತು ಅದು ಅವರಿಗೆ ಪಿತ್ರಾರ್ಜಿತವಾಗಿ ಬಂದಿದ್ದು. ಡಾಕ್ಟರ್ ಮನೆಯವರನ್ನು ಬಿಟ್ಟರೆ, ಅಲ್ಲಿ ಯಾರೂ ಇರಲಿಲ್ಲ.
ಮರುದಿನ ಮಧ್ಯಾಹ್ನ ಪ್ರೆಸ್ ಕಾನ್ಫರೆನ್ಸ್ ಹೊತ್ತಿನಲ್ಲಿ, ಬೇರೆ ಫೈಲ್ ಗಳನ್ನು ನೋಡುವಾಗ ಕೋದಂಡರಾಮಯ್ಯನವರಿಗೆ, ಇಂಟೆಲಿಜೆನ್ಸ್ ವರದಿ ಕಣ್ಣಿಗೆ ಬಿತ್ತು. ಡಿ.ಸಿ.ಪಿ ಯನ್ನು ಕರೆದವರೇ, ಎದುರುಗಡೆ ವರದಿಗಾರರು ಇರುವುದನ್ನೂ ಮರೆತು, `ಕತ್ತೆ ಕಾಯಲು ಹೋಗು’ ಅಂತ ಬೈದರು. ಏನಾಗಿರಬಹುದು ಅಂತ ಊಹಿಸಿದ ಡಿ.ಸಿ.ಪಿ, ಧನಂಜಯಪ್ಪನನ್ನೊಮ್ಮೆ ಮತ್ತು ಡ್ಯಾನಿಯನ್ನೊಮ್ಮೆ ನೋಡಿ, ಬೆವರೊರಸಿಕೊಂಡು ಹೊರ ಹೋದರು.
ಆದರೆ, ಡ್ಯಾನಿಯ ಈ ಚಾಳಿ ಅವನಿಗೇ ತಿರುಗುಬಾಣವಾಗಿದ್ದು ನನ್ನಿಂದ. ಮುಂಬೈಸ್ಪೋಟದ ನಂತರ, ದಾವೂದ್ ಇಂಬ್ರಾಹಿಂಗಾಗಿ ಬೆಂಗಳೂರಲ್ಲಿ ಪೋಲಿಸರು ಹುಡುಕಾಟ ನೆಡೆಸಿದ್ದರು. ಆಗ ಡ್ಯಾನಿ, ನನ್ನೆದುರಲ್ಲೇ ಧನಂಜಯಪ್ಪನಿಗೆ, ಕಮೀಷನರ್ ಆಫೀಸಿನೆದುರು ಇದ್ದ ಪ್ರೆಸ್ಟೀಜ್ ಕಾಂಪ್ಲೆಕ್ಸ್ ನಿಂದ ಹಿಡಿದು, ಬೆಂಗಳೂರಿನ ಇಪ್ಪತೈದು ಪ್ರತಿಷ್ಟಿತ ಕಾಂಪ್ಲೆಕ್ಸ್ ಗಳ  ಹೆಸರು ಹೇಳಿ, ಅವೆಲ್ಲಾ ದಾವೂದ್ ಇಬ್ರಾಹಿಂಗೆ ಸೇರಿವೆಯೆಂದೂ, ಸಿ.ಬಿ.ಐ.ನವರು ಅವುಗಳನ್ನು ವಶಪಡಿಸಿಕೊಂಡಿವೆಯೆಂದೂ ಹೇಳಿದ. ಧನಂಜಯಪ್ಪ ಆ ಕಡೆಗೆ ಹೋದ ತಕ್ಷಣ, ನನ್ನ ಕಡೆ ನೋಡಿ ಕಣ್ಣು ಹೊಡೆದ. ಸರಿ, ಆಫೀಸಿಗೆ ಹೋದ ತಕ್ಷಣವೇ ನಮ್ಮ ಬ್ಯೂರೋ ಛೀಫ್ ಮಟ್ಟೂ ದಾವೂದ್ ಇಬ್ರಾಹಿಂ ಬಗ್ಗೆ ಕೇಳಿದರು. ನನಗೆ ಗೊತ್ತಿದ್ದನೆಲ್ಲಾ ಹೇಳಿ, ಡ್ಯಾನಿ ಸಂಜೆವಾಣಿಗೆ ಪ್ಲ್ಯಾಂಟ್ ಮಾಡಿದ ವಿಷಯವನ್ನೂ ಹೇಳಿದೆ. ತಕ್ಷಣ ಮಟ್ಟೂ: `ಒಂದು ಸಂಜೆವಾಣಿ ತಂದು ನನ್ನ ಟೇಬಲ್ ಮೇಲೆ ಇಟ್ಟಿರು. ಡ್ಯಾನಿಗೆ ಏನೂ ಹೇಳಬೇಡ,’ ಅಂದರು. ಸಂಜೆವಾಣಿ ಬಂದ ತಕ್ಷಣ, ಒಂದು ಪೇಪರ್ ಕೊಂಡು, ಮಟ್ಟೂ ಟೇಬಲ್ ಮೇಲೆ ಇಟ್ಟೆ.
ಮನೆಗೆ ಹೋಗಿ, ಚೆನ್ನಾಗಿ ನಿದ್ರೆ ಮಾಡಿ, ಆಫೀಸಿಗೆ ಡ್ಯಾನಿ ಬರುವ ಹೊತ್ತಿಗೆ ಸಂಜೆ ಆರು ಘಂಟೆಯಾಗಿತ್ತು. ಅವನನ್ನು ನೋಡಿದ ತಕ್ಷಣವೇ ಮಟ್ಟೂ: `ಡ್ಯಾನಿ, ಸಂಜೆವಾಣಿ ಹ್ಯಾಸ್ ಕ್ಯಾರೀಡ್ ಅಬೌಟ್ ದಾವೂದ್ ಪ್ರಾಪರ್ಟೀಸ್. ವಿ ವಿಲ್ ಟೇಕ್ ಇಟ್ ಫಾರ್ ದಿ ಫ್ರಂಟ್ ಪೇಜ್. ವಿನಯ್ ಇಸ ವೆರಿ ಜೂನಿಯರ್ ಅಂಡ್ ಯು ರೈಟ್ ದಿ ಕಾಪಿ,’ ಅಂದರು. ಡ್ಯಾನಿ ಏನೋ ಹೇಳಲು ಹೊರಟಾಗ ಅವನನ್ನು ತಡೆದು, `ಐ ವಾಂಟ್ ದಿ ಕಾಪಿ ಬೈ 7.30,’ ಅಂತ ಹೊರಗೆ ಹೋಗೇ ಬಿಟ್ಟರು.
ಈಗ ತಲೆ ಕೆರೆದುಕೊಳ್ಳುವ ಸರದಿ ಡ್ಯಾನಿಯದಾಗಿತ್ತು. ಮೀಟಿಂಗ್ ಮುಗಿಸಿದ ಮಟ್ಟೂ ಎಂಟು ಘಂಟೆಯವರೆಗೂ ವಾಪಾಸ್ ಬಂದಿರಲಿಲ್ಲ. ಡ್ಯಾನಿಯ ಹೆಂಡತಿ ಕವಿತಾ ಬೇರೆ ಕೆಳಗೆ ಬಂದು ಕಾಯುತ್ತಿದ್ದಳು. ವಾಪಾಸ್ ಬಂದವರೇ ಮಟ್ಟೂ: `ಸೀ ಡ್ಯಾನಿ, ಹ್ಯಾವ್ ಸಮ್ ಮರ್ಸಿ ಆನ್ ಸಂಜೆವಾಣಿ ರಿಪೋರ್ಟರ್ಸ್. ಡೋಂಟ್ ಡು ಇಟ್ ಅಗೈನ್,’ ಅಂತ ಹೇಳಿದಾಗ, ನಾವೆಲ್ಲಾ ಗೊಳ್ಳನೆ ನಕ್ಕೆವು.
ಮಾರನೇ ದಿನ ವಿಷಯ ಗೊತ್ತಾದಾಗ, ಧನಂಜಯಪ್ಪ ನಕ್ಕುಬಿಟ್ಟರು. `ಅವ್ನಿಗೆ ಹಾಗೇ ಮಾಡ್ಬೇಕು. ಸ್ವಲ್ಪನೂ ಸೀರಿಯಸ್ ನೆಸ್ ಇಲ್ಲಾ ನೋಡು,’ ಅಂದ್ರು. ಇದಾದ ಮೇಲೂ, ಅವರ ಆಫೀಸಿನಲ್ಲಿ ನನ್ನ ವರದಿಗಳ ಪ್ರಸ್ತಾಪವಾದಾಗಲೆಲ್ಲಾ ಬಂದು ಹೇಳ್ತಿದ್ರು: `ಬೆಳಗ್ಗೆನೇ ಟೆನ್ಷನ್ ಕೊಡ್ತೀಯ ನೋಡು. ಮೊದಲೇ ನನಗೆ ಬಿ.ಪಿ, ಶುಗರ್ ಇದೆ. ನನ್ನ ಸಾಯಿಸ್ತೀಯ, ಅಷ್ಟೆ.’
ತಿನ್ನೋ ವಿಷಯ ಬಂದಾಗ, ಧನಂಜಯಪ್ಪ ಮಗುವಿನ ಥರ ಆಡ್ತಿದ್ರು. ಪ್ರೆಸ್ ಕಾನ್ಫರೆನ್ಸ್ ಗಳಲ್ಲಿ ಕೇಕ್ ಇದ್ದರಂತೂ, ಮೊದಲು ತೆಗೆದು ಬಾಯಿಗೆ ಹಾಕಿಕೊಳ್ತಿದ್ರು. `ರೀ ಧನು, ಶುಗರ್ ಬೇರೆ ಇದೆ, ಕೇಕ್ ತಿಂತೀರಲ್ರೀ,’ ಅಂತ ರೇಗಿದ್ರೆ, `ನಿಂಗೊತ್ತಿಲ್ಲ ಕಣೋ ಈ ಶುಗರ್ ಸಹವಾಸ. ಆಗಾಗ ಏನಾದ್ರೂ ತಿನ್ನದೇ ಹೋದರೆ, ಶುಗರ್ ಕಮ್ಮಿಯಾಗಿಹೋಗುತ್ತೆ,’ ಅಂತಿದ್ರು.
`ಅದಕ್ಕೆ ಕೇಕ್ ತಿನ್ನೋಕೆ ಡಾಕ್ಟರ್ ಹೇಳಿದ್ದಾರ? ಬೇರೆ ಏನಾದ್ರೂ ತಿನ್ನಬಹುದಲ್ಲಾ,’ ಅಂದ್ರೆ, ಮಗು ಥರ ನಕ್ಕುಬಿಡೋರು. `ಹೋಗ್ಲಿ ಬಿಡಪ್ಪಾ. ಎಲ್ಲೂ ಸ್ವೀಟ್ ತಿನ್ನೋಕಾಗಲ್ಲ. ಇಲ್ಲಾದ್ರೂ ಒಂಚೂರು ತಿಂತೀನಿ,’ ಅಂದಾಗ, ನಮಗೇ ಬೇಜಾರಾಗುತ್ತಿತ್ತು.
ಸಂಜೆ ಪತ್ರಿಕೆಗಳಲ್ಲಿ ಆಗ ಸ್ಪರ್ದೆ ಇದ್ದದ್ದೇ ಸಂಜೆವಾಣಿ ಮತ್ತು ಈ ಸಂಜೆಯ ನೆಡುವೆ. ಮೊಬೈಲ್ ಫೋನ್ ಬರುವ ಮೊದಲು, ಸಂಜೆವಾಣಿಯವರು ವೈರ್ ಲೆಸ್ ಉಪಯೋಗಿಸಿ, ಸುದ್ದಿಗಳನ್ನು  ಆಫೀಸಿಗೆ ಕೊಡುತ್ತಿದ್ದರು. ಈ ವೈರ್ ಲೆಸ್, ಪೋಲಿಸ್ ವೈರ್ ಲೆಸ್ ಸಿಗ್ನಲ್ ಗಳನ್ನೂ ಸಹ ಗ್ರಹಿಸುತ್ತಿತ್ತು. ಇದರಿಂದ ನೇರವಾಗಿ ಏಟು ತಿಂದವರೆಂದರೆ, ಈ ಸಂಜೆಯ ರಾಮಸ್ವಾಮಿ ಕಣ್ವ.  ಎಷ್ಟೇ ಕಷ್ಟ ಪಟ್ಟರೂ, ಒಂದೆರೆಡು ಸುದ್ದಿಗಳು ಕೈತಪ್ಪಿ ಹೋಗುತ್ತಿದ್ದವು. ಇದರಿಂದಾಗಿ ಇಬ್ಬರ ನೆಡುವೆ ಒಂದು ಕಂದಕವೇ ಏರ್ಪಟ್ಟು, ಒಂದೆರೆಡು ವರ್ಷಗಳವರೆಗೆ, ಸವತಿಯರಂತೆ ಮೌನಯುದ್ದದಲ್ಲಿ ತೊಡಗಿದ್ದರು. ಮೊಬೈಲ್ ಫೋನ್ ಬಂದಮೇಲೆ, ಸಂಜೆವಾಣಿಯವರು, ವೈರ್ ಲೆಸ್ ತೆಗೆದುಹಾಕಿ, ಎಲ್ಲರಿಗೂ ಮೊಬೈಲ್ ಫೋನ್ ಕೊಟ್ಟರು. ಅಲ್ಲಿಂದಾಚೆ ಧನಂಜಯಪ್ಪ ಮತ್ತು ರಾಮಸ್ವಾಮಿಯ ಸಂಭಂಧ ಸುಧಾರಿಸುತ್ತಾ ಬಂತು.
ನಾನು ಕ್ರೈಂ ರಿಪೋರ್ಟಿಂಗ್ ಬಿಟ್ಟು, ಹೈಕೋರ್ಟ್, ರಾಜಕೀಯ ಎಲ್ಲಾ ಸುತ್ತಿ, ಮತ್ತೆ ಕ್ರೈಂ ರಿಪೋರ್ಟಿಂಗ್ ಬಂದಾಗ ಬಹಳಷ್ಟು ಬದಲಾವಣೆಗಳಾಗಿದ್ದವು. ಪೋಲಿಸ್ ಅಧಿಕಾರಿಗಳಿಗೆ ಟಿವಿಯಲ್ಲಿ ಕಾಣಿಸಿಕೊಳ್ಳುವ ಹುಚ್ಚಿನಿಂದ, ಎಲ್ಲಾ ಕೇಸ್ ಗಳನ್ನೂ ಸೆನ್ಸೇಷನ್ ಮಾಡಲು ಪ್ರಯತ್ನಿಸುತ್ತಿದ್ದರು. ಆ ಟಿವಿಗಳನ್ನು ಯಾವಾಗಲೂ ಹಚ್ಚಿಕೊಂಡು ಕೂರುವ ಎಡಿಟರ್ ಗಳೂ ಸಹ, ಸೆನ್ಸೇಷನ್ ಬಯಸುತ್ತಿದ್ದರು.
ನನಗೆ ಕ್ರೈಂ ರಿಪೋರ್ಟಿಂಗ್ ಮೇಲೆ ಮೊದಲಿನ ಹಿಡಿತ ಬರಲು ಸ್ವಲ್ಪ ಸಮಯವೇ ಹಿಡಿಯಿತು. ಆಗಲೇ ನಾನು ಗಮನಿಸಿದ್ದು: ಇಲ್ಲಿ ಬದಲಾಗದೇ ಇದ್ದದ್ದು , ಸಂಜೆವಾಣಿ ಮತ್ತು ಈ ಸಂಜೆ ಮಾತ್ರ. ಅದರ ಕೀರ್ತಿ, ಧನಂಜಯಪ್ಪ ಮತ್ತು ರಾಮಸ್ವಾಮಿಗೇ ಹೋಗಬೇಕು. ಅಂಥಾ ಮಹತ್ತರ ಬದಲಾವಣೆ ಕಾಲದಲ್ಲೂ, ಬದಲಾವಣೆಯನ್ನು ಒತ್ತಿ ನಿಂತು, ತಮ್ಮತನವನ್ನು ಇನ್ನೂ ಉಳಿಸಿಕೊಂಡಿದ್ದರು.
ಈ ಮಧ್ಯ ಧನಂಜಯಪ್ಪನ ಮಗಳ ಮದುವೆಗೆ ಆಗಿನ ಮುಖ್ಯಮಂತ್ರಿ ಯಡ್ಯೂರಪ್ಪನವರು ಬಂದಿದ್ದರು. ಗಡಿಬಿಡಿಯಲ್ಲಿ ನನಗೆ ಆಹ್ವಾನ ಪತ್ರಿಕೆ ಕೊಡಲು ಮರೆತರು ಅಂತ ಕಾಣುತ್ತೆ. `ಏನ್ರಿ? ಮುಖ್ಯಮಂತ್ರಿ ಬರುವ ಮದುವೆಗಳಿಗೆ ನಾವು ಬರಬಾರ್ದಾ? ಅದ್ಹ್ಯಾಗೆ ನನಗೆ ಕರೀಲಿಲ್ಲಾ?’ ಅಂತ ವಿಪರೀತವಾಗಿ ಕಾಲೆಳೆದೆ. ಅವರು ಸ್ವಲ್ಪ ನೊಂದುಕೊಂಡಾಗ ನಾನೇ ಹೇಳ್ದೆ: `ಬಿಡಿ ಧನು. ತಮಾಶೆ ಮಾಡ್ದೆ. ನನಗೂ ಮದುವೆ ಸಮಾರಂಭಗಳೆಂದ್ರೆ ದೂರ.’
ಅದನ್ನೇನೂಂತ ತಲೆಯಲ್ಲಿಟ್ಟುಕೊಂಡಿದ್ರೋ ಏನೋ, ಅವರ ಮಗನ ಮದುವೆ ಆಹ್ವಾನ ಪತ್ರಿಕೆ ಒಂದು ತಿಂಗಳ ಮುಂಚೆನೇ, ಖುದ್ದಾಗಿ ತಂದು ಕೊಟ್ರು. ಕಾರಲ್ಲಿಟ್ಟು ಮರೆತೆ. ಮತ್ತೆ ನೆನಪಾಗಿದ್ದು, ಅವರ ಮಗನ ಮದುವೆ ಮುಗಿದು ಒಂದು ವಾರವಾದಮೇಲೆ. ಧನಂಜಯಪ್ಪ ದೂರದಲ್ಲಿ ಬರುವುದು ಕಂಡಾಗ. ಎಲ್ಲೋ ಸ್ವಲ್ಪ ಅರ್ಜೆಂಟಾಗಿ ಹೋಗ್ಬೇಕಿತ್ತು. ಮಗನ ಮದುವೆಗೆ ಯಾಕೆ ಬರಲಿಲ್ಲ? ಅಂತ ಕೇಳಿದರೆ, ಉತ್ತರವಿರಲಿಲ್ಲ. ಹಾಗೇ ಬದಿಯಿಂದ ತಪ್ಪಿಸಿಕೊಂಡು, ಮಾತಾಡದೆ ಹೋಗಿದ್ದೆ.
ಮುಂದಿನ ವಾರವೇ ಚಂದ್ರು ನನಗೆ ಫೋನ್ ಮಾಡಿ ಹೇಳಿದ್ದು, ಧನಂಜಯಪ್ಪ ತೀರಿಕೊಂಡ್ರು ಅಂತ. ನಾನವತ್ತು ಮಾತಾಡ್ಸಬೇಕಿತ್ತು. ಏನೋ ಸ್ವಲ್ಪ ರೇಗ್ತಿದ್ರು ಅಷ್ಟೆ. ಈಗ, ರೇಗೋಕ್ಕೆ ಅವರಿಲ್ಲ….

ಮಾಕೋನಹಳ್ಳಿ ವಿನಯ್ ಮಾಧವ