ನನಗಿಷ್ಟವಾದ
ಕನ್ನಡಿಗರು.....
2000
ನೇ ಇಸವಿ... ಮುದುವೆಯಾದ ತಕ್ಷಣ ಅಂಬಿಕಾಳನ್ನು ಕರೆದುಕೊಂಡು, ಕುಲು-ಮನಾಲಿಗೆ. ನಾಲ್ಕೈದು ದಿನ ಸುತ್ತಾಡಿದ
ಮೇಲೆ, ಹೊರಡುವ ಹಿಂದಿನ ದಿನ ಊರೊಳಗೆ ಸುತ್ತಾಡಲು ಹೋಗಿದ್ದೆವು. ಒಂದು ಅಂಗಡಿಯಲ್ಲಿ ಅಂಬಿಕಾಳಿಗೆ
ಬೌಧ್ದರ ಘಂಟೆಯೊಂದು ಇಷ್ಟವಾಯಿತು.
``ಕಿತನೇಕಾ
ಹೈ?’’ ಅಂತ ಕೇಳಿದೆ.
``ತೀನ್
ಸೌ ಅಸ್ಸಿ,’’ ಅಂದಳು ಅಂಗಡಿಯಾಕೆ.
``ಜಾಸ್ತಿಯಾಯ್ತು…
ಬೇರೆ ಕಡೆ ಕೊಡಿಸ್ತೀನಿ ಬಿಡು,’’ ಅಂತ ಅಂಬಿಕಾಳಿಗೆ ಹೇಳಿದೆ.
``ಜಾಸ್ತಿಯೇನೂ
ಇಲ್ಲ… ಸ್ವಲ್ಪ ಕಡಿಮೆ ಮಾಡಿ ಕೊಡ್ತೀನಿ,’’ ಅಂದಳು, ಅಂಗಡಿಯ ಟಿಬೆಟನ್ ಹೆಂಗಸು.
``ಕೊಪ್ಪನಾ?’’
ಅಂತ ಕೇಳಿದೆ. (ಕುಶಾಲನಗರದಲ್ಲಿ ಬೈಲುಕುಪ್ಪೆಗೆ ಕೊಪ್ಪ ಅಂತ ಕರೀತ್ತಾರೆ)
``ಕೊಪ್ಪ
ಗೊತ್ತಾ?’’ ಅಂತ ಹೆಂಗಸು ಕೇಳಿದಳು.
``ನಾ
ಹುಟ್ಟಿದ್ದು ಸುಂಟಿಕೊಪ್ಪದಲ್ಲಿ. ಬೆಳೆದದ್ದು ಪಾಲಿಬೆಟ್ಟದಲ್ಲಿ. ಅಮ್ಮನ ಊರು ಸೋಮವಾರಪೇಟೆ,’’ ಅಂತ
ಹೇಳಿದೆ.
``ಇನ್ನೂರೈವತ್ತು
ಕೊಡಿ ಸಾಕು,’’ ಅಂತ ಘಂಟೆಯನ್ನು ಪೊಟ್ಟಣ ಕಟ್ಟೋಕೆ ಶುರು ಮಾಡಿದಳು.
ನಾನು
ದುಡ್ಡು ಕೊಡೋ ಸಮಯದಲ್ಲಿ, ಆ ಹೆಂಗಸಿನ ಗಂಡ ಬಂದು, ಟಿಬೆಟನ್ ಭಾಷೆಯಲ್ಲಿ ಏನೋ ಕೇಳಿದ. ಅವಳ ಉತ್ತರದಿಂದ
ಸಿಡಿಮಿಡಿಗೊಂಡ. ಆಕೆ ಕನ್ನಡದಲ್ಲಿ, ``ಅವರು ಸೋಮವಾರಪೇಟೆಯವರು, ನೀ ಸುಮ್ಮನಿರು,’’ ಅಂದಳು. ಗಂಡ
ಪೆಚ್ಚಾಗಿ ನಕ್ಕ.
ಅವರಿಬ್ಬರೂ
ಹುಟ್ಟಿ, ಬೆಳೆದದ್ದು ಬೈಲುಕುಪ್ಪೆಯಲ್ಲಂತೆ. ಎರಡು ವರ್ಷಗಳ ಹಿಂದೆ ಮನಾಲಿಗೆ ಬಂದು, ಅಂಗಡಿ ತೆರೆದಿದ್ದಾರಂತೆ.
ವ್ಯಾಪಾರ ಚೆನ್ನಾಗಿದ್ದರೂ, ಯಾಕೋ ಬೈಲುಕುಪ್ಪೆನೇ ಇಷ್ಟವಂತೆ. ವಾಪಾಸ್ ಹೋಗುವ ಇರಾದೆ ಇದೆ ಅಂತ ಹೇಳಿದರು.
ನಾವೆಲ್ಲ
ಕಾಲೇಜ್ ಓದುವಾಗ, ಟಿಬೆಟನ್ ರ ಹತ್ತಿರ, ಶೂ, ಜರ್ಕಿನ್ ಗಳನ್ನು ಕೊಳ್ಳುತ್ತಿದ್ದೆವು. ಆಗ, ವಿದೇಶೀ
ಬ್ರಾಂಡ್ ದುಬಾರಿಯಾಗಿದ್ದು, ಟಿಬೆಟನ್ ಮಾಲುಗಳ ಮೇಲೆ ಅವಲಂಬಿತವಾಗಿದ್ದೆವು. ಕೊಡಗು ಜಿಲ್ಲೆಯ, ಯಾವುದೇ
ಊರಿನ ಸಂತೆಗಳಲ್ಲೂ ಟಿಬೆಟನ್ ಗಳು ಬರುತ್ತಿದ್ದರು. ನಾನು ನೋಡಿದ ಹಾಗೆ, ಎಲ್ಲರೂ ಕನ್ನಡ ಮಾತನಾಡುತ್ತಿದ್ದರು
ಸಹ. ಬೈಲುಕುಪ್ಪೆಯಲ್ಲಂತೂ, ಹಳ್ಳಿಯ ಕನ್ನಡಿಗರು, ಟಿಬೆಟನ್ ರ ಮನೆ ಕೆಲಸಕ್ಕೆ ಹೋಗುತ್ತಿದ್ದರು ಮತ್ತು
ಟಿಬೆಟನ್ ಭಾಷೆ ಸಹ ಕಲಿತ್ತಿದ್ದರು.
ಇತ್ತೀಚಿನ
ದಿನಗಳಲ್ಲಿ ಟಿಬೆಟನ್ ರ ಜೊತೆ ವ್ಯಾಪಾರ ಮಾಡಿಲ್ಲ ಮತ್ತು ಅವರ ಈಗಿನ ಜೀವನ ಶೈಲಿ ಬಗ್ಗೆ ಅಷ್ಟೇನು
ಮಾಹಿತಿಯಿಲ್ಲ.
ಟೈಮ್ಸ್
ಆಫ್ ಇಂಡಿಯಾ ಮತ್ತು ಡೆಕ್ಕನ್ ಕ್ರಾನಿಕಲ್ ಕಛೇರಿಗಳು ರೆಸಿಡೆನ್ಸಿ ರಸ್ತೆಯ ಹತ್ತಿರ ಇದ್ದುದ್ದರಿಂದ,
ನಾನು ಸಂತ ಜೋಸೆಫರ ಕಾಲೇಜಿನ ಹತ್ತಿರದ ಸೈನಿಕ ಭವನದಲ್ಲಿದ್ದ ವೈಲ್ಟ್ ಸ್ಪೈಸ್ ಅನ್ನೋ ಹೋಟೆಲ್ ಗೆ,
ಆಗಾಗ ಮಧ್ಯಾಹ್ನ ಊಟಕ್ಕೆ ಹೋಗುತ್ತಿದ್ದೆ. ಕೆಲ ಕೊಡಗಿನ ಹುಡುಗರು ಸೇರಿ ನೆಡೆಸುತ್ತಿದ್ದ ಸಣ್ಣ ಹೋಟೆಲ್.
ಅಕ್ಕಿ ರೊಟ್ಟಿ, ಪಂದಿ ಕರಿ ಥರದ ಕೊಡಗಿನ ಅಡುಗೆಗಳನ್ನು ಚೆನ್ನಾಗಿ ಮಾಡುತ್ತಿದ್ದರು.
ಅಲ್ಲಿ
ಬಹಳ ಇಷ್ಟವಾಗಿದ್ದು, ಸಾಧಾರಣ ಹದಿನೆಂಟು-ಇಪ್ಪತ್ತು ವರ್ಷದ ಈ ಹುಡುಗ ಮನೋಜ್. ಅಲ್ಲಿ ಹಾಕುತ್ತಿದ್ದ
ಇಂಗ್ಲಿಷ್ ಹಾಡುಗಳನ್ನು ಆಸಕ್ತಿಯಿಂದ ಕೇಳುತ್ತಿದ್ದ ನನಗೆ, ಎಲ್ಲಾ ಹಾಡುಗಳನ್ನೂ ಪೆನ್ ಡ್ರೈವ್ ಗೆ
ಹಾಕಿಕೊಟ್ಟಿದ್ದ. ಒಂದೆರೆಡು ಸಲ ಕಾಣದಿದ್ದಾಗ, ವಿರಾಜಪೇಟೆಗೆ ಹೋಗಿದ್ದಾಗಿ ಹೇಳಿದ್ದ. ಅರಳು ಹುರಿದಂತೆ
ಕನ್ನಡ ಮತ್ತು ಕೊಡವ ಭಾಷೆಯನ್ನು ಮಾತನಾಡುತ್ತಿದ್ದರೂ, ಇಂಗ್ಲಿಷ್ ಬಗ್ಗೆ ಅಷ್ಟೇನೂ ಒಲವು ತೋರಿಸುತ್ತಿರಲಿಲ್ಲ.
ಕೊನೆಗೆ
ಎಷ್ಟರವರಗೆ ನಮ್ಮ ಸಂಬಂಧ ಬೆಳೆಯಿತೆಂದರೆ, ನಾನು ಎಷ್ಟು ಹೊತ್ತಿಗೆ ಬರುತ್ತೇನೆ ಮತ್ತು ಎಷ್ಟು ಜನ
ಬರುತ್ತೇವೆ ಅಂತ ಮನೋಜನಿಗೆ ಫೋನ್ ಮಾಡಿ ಹೇಳಿದರೆ, ಅವನು ಅಷ್ಟು ಅಡುಗೆ ಮಾಡಿಸಿಡುತ್ತಿದ್ದ. ಒಂದು
ದಿನ ಊಟವಾದ ಮೇಲೆ ಬಿಲ್ ಕೊಡುವಾಗ, ``ಸರ್, ನಾನೊಂದೆರೆಡು ತಿಂಗಳು ಇರೋದಿಲ್ಲ… ಊರಿಗೆ ಹೋಗಿ ಬರುತ್ತೇನೆ,’’
ಅಂತ ಮನೋಜ್ ಮೆಲ್ಲಗೆ ಹೇಳಿದ.
ಕೊಡಗು
ಚೆನ್ನಾಗಿ ಗೊತ್ತಿರುವ ನಾನು, ``ಎಲ್ಲೋ ನಿಮ್ಮೂರು,’’ ಅಂತ ಕೇಳಿದೆ.
``ಅಸ್ಸಾಂ
ಸರ್,’’ ಅಂದಾಗ, ಅಷ್ಟು ದಿನ ಕೊಡವರ ಹುಡುಗ ಅಂದುಕೊಂಡಿದ್ದ ನಾನು ದಂಗಾಗಿ ಹೋದೆ.
``ಅಲ್ವೋ…
ನಾನು ನಿನ್ನನ್ನ ವಿರಾಜಪೇಟೆಯವನು ಅಂದ್ಕೊಂಡಿದ್ದೆನಲ್ಲೋ? ಇಷ್ಟು ಚೆನ್ನಾಗಿ ಕನ್ನಡ ಮತ್ತು ಕೊಡವ
ತಕ್ ಮಾತಾಡ್ತೀಯಲ್ಲ. ಅದು ಹ್ಯಾಗೆ?’’ ಅಂತ ಕೇಳಿದೆ.
``ಬೆಂಗಳೂರಿಗೆ
ಬಂದು ಏಳು ವರ್ಷ ಆಯ್ತು ಸರ್. ಆಗಿಂದ ಇವರ ಜೊತೆಯಲ್ಲೇ ಇದ್ದೇನೆ. ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ.
ಇವರ ಜೊತೆ ಇದ್ದೇ ನಾನು ಕನ್ನಡ, ಕೊಡವ ತಕ್ ಎಲ್ಲಾ ಕಲಿತಿದ್ದು. ಸ್ವಲ್ಪ ದಿನ ಊರಿಗೆ ಹೋಗಿ ಬರಬೇಕು
ಸರ್,’’ ಅಂತ ನಕ್ಕ. ಅವನು ಬೇಡ ಅಂದರೂ, ಐನೂರು ರೂಪಾಯಿ ಅವನ ಜೇಬಿನಲ್ಲಿ ತುರುಕಿ, ಬಂದ ಮೇಲೆ ಫೋನ್
ಮಾಡು ಎಂದು ಹೇಳಿದೆ.
ಮನೋಜನ
ಫೋನ್ ಬರಲಿಲ್ಲ. ಇದರ ಮಧ್ಯ, ನಮ್ಮ ಕಛೇರಿ ಕೂಡ ಕೋರಮಂಗಲಕ್ಕೆ ಸ್ಥಳಾಂತರವಾಯಿತು. ಒಂದೆರೆಡು ಸಲ ಹೋಟೆಲ್
ಗೆ ಹೋದಾಗ, ಅದು ಮುಚ್ಚಿತ್ತು. ಅಲ್ಲಿಂದ ಮುಂದೆ, ಆ ಹೋಟೆಲ್ ಕಡೆಗೆ ಹೋಗಲಿಲ್ಲ. ಒಂದು ಸಲ ಮನೋಜನಿಗೆ
ಫೋನ್ ಮಾಡಲು ಪ್ರಯತ್ನಿಸಿದರೆ, ಈ ಸಂಖ್ಯೆ ಅಸ್ತಿತ್ವದಲ್ಲಿಲ್ಲ ಎಂದು ಬಂತು.
ರಾತ್ರಿ
ಮನೆಗೆ ಹೋಗುವಾಗ, ಯಾವಾಗಾದರೊಮ್ಮೆ, ಸೌತ್ ಎಂಡ್ ಸರ್ಕಲ್ ಹತ್ತಿರ ಇರೋ ವಿಜಯ ಕಾಲೇಜಿನ ಎದುರು ಇರುವ
ಹೌಸ್ ಆಫ್ ಕಬಾಬ್ ನಿಂದ ಏನಾದರೂ ಕಟ್ಟಿಸಿಕೊಂಡು ಹೋಗುತ್ತೇನೆ. ಏನು ಬೇಕು ಅಂತ ಹೇಳಿ, ಹದಿನೈದು ನಿಮಿಷವಾದರೂ
ಕಾಯಬೇಕಾಗುತ್ತದೆ. ಒಂದು ಸಲ ಸಿಗರೇಟ್ ಖಾಲಿಯಾಗಿತ್ತು. ಪಕ್ಕದಲ್ಲೇ ಒಂದು ಡಬ್ಬಿ ಅಂಗಡಿ ಇಟ್ಟುಕೊಂಡವನಿಗೆ,
ಒಂದು ಪ್ಯಾಕ್ ಕ್ಲಾಸಿಕ್ ಮೈಲ್ಟ್ ಕೊಡು, ಎಂದೆ.
ದುಡ್ಡು
ಕೊಟ್ಟಾಗ, ``ಸರ್, ಇಪ್ಪತ್ತು ರೂಪಾಯಿ ಚಿಲ್ಲರೆ ಇದೆಯಾ,’’ ಅಂತ ಕೇಳಿದ.
ಇಪ್ಪತ್ತು
ರೂಪಾಯಿ ಕೊಡುತ್ತಾ, ``ಪರವಾಗಿಲ್ಲ ಕಣಯ್ಯ ನೀನು. ಬೆಂಗಳೂರಿನಲ್ಲಿ, ಸಿಗರೇಟ್ ಮತ್ತು ಬೀಡಾ ಮಾರೋ
ವ್ಯಾಪಾರನ ಉತ್ತರ ಪ್ರದೇಶದವರು ಬಂದು ಆಕ್ರಮಿಸಿಕೊಂಡಿದ್ದಾರೆ. ನೀನೊಬ್ಬ ಕನ್ನಡಿಗ ಅವರ ಮಧ್ಯ ಬದುಕುಳಿದಿದ್ದೀಯಲ್ಲಾ?’’
ಅಂತ ಹೇಳಿದೆ.
``ಸಾರ್,
ನಾನೂ ಸಹ ಉತ್ತರ ಪ್ರದೇಶದವನು,’’ ಅಂತ ತಣ್ಣಗೆ ಹೇಳಿದ. ನಾನು ಪೆಚ್ಚಾದೆ.
``ಎಷ್ಟು
ವರ್ಷ ಆಯ್ತು ಇಲ್ಲಿ ಬಂದು?’’ ಅಂತ ಕೇಳಿದೆ.
``ಎರಡು
ವರ್ಷ ಸರ್,’’ ಅಂದ.
``ಇಷ್ಟು
ಚೆನ್ನಾಗಿ ಕನ್ನಡ ಮಾತಾಡ್ತೀಯಲ್ಲಪ್ಪಾ?’’ ಅಂದೆ.
``ಬೆಳಗ್ಗೆ
ಹೊತ್ತಲ್ಲಿ ಗಿರಾಕಿಗಳು ಕಡಿಮೆ ಇರ್ತಾರೆ. ಆಚೀಚಿನ ಅಂಗಡಿಯವರ ಜೊತೆ ಕನ್ನಡ ಮಾತಾಡಿ ಕಲಿತೆ. ಬಂದವರಲ್ಲಿ
ಕಡಿಮೆ ಜನ ನನ್ನನ್ನು ಕನ್ನಡದಲ್ಲಿ ಮಾತಾಡಿಸೋದು ಸರ್. ನಾನೂ ನೋಡ್ತೀನಿ. ಅವರಿಗೆ ಕನ್ನಡ ಬರುತ್ತೆ
ಅಂದರೆ, ನಾನೂ ಕನ್ನಡ ಮಾತಾಡ್ತೀನಿ. ಅವರಿಗೆ ಬರದೇ ಹೋದರೆ, ಹಿಂದಿಯಲ್ಲಿ ಮಾತಾಡ್ತೀನಿ. ಕನ್ನಡದಲ್ಲಿ
ಮಾತಾಡೋಕೆ ಖುಶಿಯಾಗುತ್ತೆ ಸರ್,’’ ಅಂದ.
ಈಗಲೂ
ಒಮ್ಮೊಮ್ಮೆ ಅವನನ್ನು ನೋಡ್ತಾ ಇರ್ತೀನಿ. ಸಿಗರೇಟ್ ಇಲ್ಲದೇ ಹೋದರೆ, ಅವನ ಬಳಿ ಕೊಂಡು ಕೊಳ್ಳುತ್ತೇನೆ.
ಇದ್ದರೆ, ಮುಗುಳ್ನಕ್ಕು ಮುಂದೆ ಹೋಗ್ತೀನಿ. ಹೊರಗಡೆಯಿಂದ ಬಂದ ಜನ ಕನ್ನಡ ಮಾತಾನಾಡುವುದಿಲ್ಲ ಅಂತ
ಬೊಬ್ಬೆ ಹೊಡೆಯುವವರನ್ನು ನೋಡಿದಾಗ, ನಮ್ಮವರು ಎಷ್ಟು ಜನ ಅಭಿಮಾನದಿಂದ ಕನ್ನಡ ಮಾತನಾಡುತ್ತಾರೆ ಅನ್ನೋ
ಪ್ರಶ್ನೆ ಮೂಡುತ್ತದೆ. ಇದನ್ನೇ ಉತ್ತರ ಪ್ರದೇಶದ ಸಿಗರೇಟ್ ಮಾರುವ ಹುಡುಗ ನನಗೆ ಹೇಳಿದ್ದು…. ಕನ್ನಡ
ಬರುವವರೂ ಹಿಂದಿಯಲ್ಲಿ ಕೇಳ್ತಾರೆ ಅಂತ. ಸಣ್ಣ, ಪುಟ್ಟ ವ್ಯಾಪಾರಿಗಳ ಹತ್ತಿರ ನಾವು ಕನ್ನಡದಲ್ಲಿ ಮಾತನಾಡಿದರೆ,
ಅವರು ಎಲ್ಲಿಂದ ಬಂದವರಾದರೂ ಕನ್ನಡ ಕಲಿತೇ ಕಲಿಯುತ್ತಾರೆ ಅಂತ ನನಗೆ ಅನ್ನಿಸಿತು.
ರಾಜ್ಯೋತ್ಸವದ
ಅಸಂಖ್ಯಾತ ಶುಭಾಷಯಗಳು ವಾಟ್ಸಪ್, ಫೇಸ್ ಬುಕ್ ಗಳಲ್ಲಿ ಹರಿದು ಬರುವಾಗ, ಯಾಕೋ ಈ ಮೂರು ಜನರ ಮುಖ ಕಣ್ಣ
ಮುಂದೆ ಬಂದಂತಾಯಿತು.
ಮಾಕೋನಹಳ್ಳಿ
ವಿನಯ್ ಮಾಧವ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ