ಶುಕ್ರವಾರ, ಜೂನ್ 29, 2012

ರಥಯಾತ್ರೆ


ಆ ಮುಗುಳ್ನಗುವಿನ ಹಿಂದೆ ನೂರು ಅರ್ಥಗಳಿವೆ ಅನ್ನಿಸಿತ್ತು
                                 
ವಿಧಾನಸೌಧದಿಂದ ವಾಪಾಸ್ ಬರುವಾಗಲೇ ನಂಗೇನೋ ಕಾದಿದೆ ಅನ್ನಿಸಿತ್ತು. ನಮ್ಮ ಎಡಿಟರ್ ಶಂತನು ದತ್ತ ನನ್ನನ್ನು ಕಾಣಲು ಹೇಳಿದ್ದಾರೆ ಅಂತ ಬ್ಯರೋ ಛೀಫ್ ಮಟ್ಟೂ ಹೇಳಿದ್ದರು. ಕೇಂದ್ರ ಮತ್ತು ರಾಜ್ಯದಲ್ಲಿ ಚುನಾವಣೆ ಬೇರೆ ಘೋಷಣೆಯಾಗಿತ್ತು.
ಒಳಗೆ ಹೋದ ತಕ್ಷಣವೇ, ದತ್ತ ಅವರು ಕೇಳಿದ್ರು: `ವಿನಯ್, ಅದ್ವಾನಿಸ್ ರಥ್ ಯಾತ್ರಾ ಇಸ್ ಪಾಸಿಂಗ್ ಥ್ರೂ ಕರ್ನಾಟಕ. ಐ ವಾಂಟ್ ಯು ಟು ಕವರ್ ದಿ ಎಂಟೈರ್ ಯಾತ್ರ.  `ಓಕೆ  ಸರ್ಅಂತ ಹೇಳಿ` ಹೊರಗೆ ಬಂದವನಿಗೆ ಎದೆ ಹೊಡ್ಕೊಳ್ಳೋಕೆ ಶುರುವಾಯ್ತು.
ಅಲ್ಲಿವರೆಗೆ, ಒಂದೆರೆಡು ಮದ್ಯಂತರ ಚುನಾವಣೆ ವರದಿ ಮಾಡಿದ್ದು ಬಿಟ್ಟರೆ, ನಂಗೇನೂ ಅಂತಾ ಅನುಭವ ಇರಲಿಲ್ಲ. ಅದೂ ಅಲ್ದೆ, ಉಪ ಪ್ರಧಾನ ಮಂತ್ರಿ ಲಾಲ ಕೃಷ್ಣ ಅದ್ವಾನಿಯವರ ಭಾರತ ಉದಯ ಯಾತ್ರೆಯ ಕರ್ನಾಟಕ ಪ್ರವಾಸವನ್ನು ನಾನು ನೋಡಿಕೊಳ್ಳಬೇಕಿತ್ತು. ಸರಿ, ನಂಗೇನಂತೆ ಅನ್ಕೊಂಡು ಸಿದ್ದವಾಗೇ ಇದ್ದೆ.
ಅದ್ವಾನಿಯವರು ಕರ್ನಾಟಕ ಪ್ರವೇಶಿಸಿದ ತಕ್ಷಣ, ನಾನು ಅತ್ತಿಬೇಲೆಯಿಂದಲೇ ಬಿ.ಜೆ.ಪಿ.ಯವರು ನಮಗಾಗಿ ವ್ಯವಸ್ಥೆ ಮಾಡಿದ್ದ ವ್ಯಾನಿಗೆ ಹತ್ತಿಕೊಂಡೆ. ನನ್ನಂತೆ ಬೇರೆ ಬೇರೆ ಮಾಧ್ಯಮದಿಂದ ಬಂದ ಪ್ರತಿನಿಧಿಗಳನ್ನು ನೋಡಿಕೊಳ್ಳುವ ಉಸ್ತುವಾರಿಯನ್ನು, ಪಕ್ಷದ ಪ್ರಕಾಶ್ ವಹಿಸಿಕೊಂಡಿದ್ದ. ಅವನ ಜೊತೆಗೆ ಮೂರ್ನಾಲ್ಕು ಹುಡುಗರು ಬೇರೆ. ಆಗೆಲ್ಲ ಬಿ.ಜೆ.ಪಿ. ಪಕ್ಷದವರ ಜೊತೆ ಪ್ರವಾಸ ಎಂದರೆ, ಪತ್ರಕರ್ತರನ್ನು ಯಾವುದೇ ತೊಂದರೆ ಇಲ್ಲದಂತೆ ನೋಡಿಕೊಳ್ಳುತ್ತಾರೆ ಅಂತ ಹೇಳ್ತಿದ್ರು. ಆದ್ರೆ, ಇದು ನನ್ನ ಮೊದಲ ಪ್ರವಾಸವಾಗಿತ್ತು.
ಮೊದಮೊದಲು ತಮಾಷೆಯಾಗಿತ್ತು. ಯಾವುದಾದರೂ ಊರಿನ ಮಧ್ಯ ಅದ್ವಾನಿಯವರ ರಥ ನಿಂತ ತಕ್ಷಣ, ನಾವೆಲ್ಲಾ ವ್ಯಾನಿನಿಂದ ಇಳಿದು ಓಡುತ್ತಿದ್ದೆವು. ಅದ್ವಾನಿಯವರ ವ್ಯಾನಿನಲ್ಲಿ ಒಂದು ಚಿಕ್ಕ ಪ್ಲಾಟ್ ಫಾರ್ಮ್ ಇತ್ತು. ಅವರು ಅದರ ಮೇಲೆ ನಿಂತ ತಕ್ಷಣ, ವ್ಯಾನಿನ ಮೇಲ್ಚಾವಣಿ ತೆಗೆದುಕೊಂಡು, ಹೈಡ್ರಾಲಿಕ್ ಮೂಲಕ ಆ ಪ್ಲಾಟ್ ಫಾರ್ಮ್ ಮೇಲಕ್ಕೆ ಬರುತ್ತಿತ್ತು. ಅವರ ಒಂದೆರೆಡು ನಿಮಿಷದ ಭಾಷಣ ಮುಗಿದ ತಕ್ಷಣ, ನಾವು ವಾಪಾಸ್ ಓಡಬೇಕಿತ್ತು. ಯಾವುದೇ ವಾಹನ, ಯಾರಿಗೂ ಕಾಯುವಂತಿರಲಿಲ್ಲ. `ಟೈಟ್ ಸೆಕ್ಯುರಿಟಿ.
ಮೊದಲನೇ ದಿನ ಕಳೆದ ತಕ್ಷಣ ನಾವೆಲ್ಲ ಆರಾಮವಾದೆವು. ಓಡಾಟ ಕಮ್ಮಿಯಾಗಿತ್ತು. ಯಾಕೆಂದ್ರೆ, ಐದು ನಿಮಿಷಗಳ ಭಾಷಣದಲ್ಲಿ ಅದ್ವಾನಿಯವರು ಅಂಥಾ ತಲೆ ಹೋಗುವಂತದೇನೂ ಹೇಳ್ತಿರಲಿಲ್ಲ. ಶಿವಮೊಗ್ಗದಿಂದ ಸೊರಬಕ್ಕೆ ಹೋದ ತಕ್ಷಣ, ಟೈಮ್ಸ್ ಆಫ್ ಇಂಡಿಯಾದ ಅನಿತಾ ರಾವ್ ಕಾಶಿ, ಅದ್ವಾನಿಯವರಿದ್ದ ವ್ಯಾನ್ ಹತ್ತಿದಳು. ಅಲ್ಲಿಂದ ಮುಂದಿನ ನಿಲುಗಡೆಯಲ್ಲಿ ವಾಪಾಸ್ ನಮ್ಮ ವ್ಯಾನಿಗೆ ಬಂದು ಕೂತಳು. ಆಗಲೇ ನಂಗೆ ಗೊತ್ತಾಗಿದ್ದು, ಅವಳು ಅದ್ವಾನಿಯವರ ಸಂದರ್ಶನ ಮಾಡಿದ್ದಾಳೆ, ಅಂತ.
ಅವತ್ತು ರಾತ್ರಿ ಹುಬ್ಬಳ್ಳಿಯಲ್ಲಿ ಉಳಿದುಕೊಂಡಾಗ, ಬಿ.ಜೆ.ಪಿ ಯ ಪ್ರಕಾಶ್ ಜಾವಡೇಕರ್ ಅವರನ್ನು ಮಾತಾಡಿಸಿ, ನಾನು ಅದ್ವಾನಿಯವರನ್ನು ಸಂದರ್ಶಿಸಬೇಕು ಅಂತ ಕೇಳ್ದೆ. ಅವರು, ನಾಳೆ ದಾರಿಯಲ್ಲಿ ನೋಡೋಣ ಅಂದರು.
ಮಾರನೇ ದಿನ ಮಧ್ಯಾಹ್ನ, ಬಾಗಲಕೋಟೆಯಲ್ಲಿ ದೊಡ್ಡ ಸಮಾವೇಶ ಏರ್ಪಟ್ಟಿತ್ತು. ಅದು ಮುಗಿಯುವ ಹೊತ್ತಿಗೆ ಜಾವಡೇಕರ್ ನನ್ನ ಹತ್ತಿರ ಬಂದು, ಅದ್ವಾನಿಯವರ ವ್ಯಾನ್ ಹತ್ತಿಕೊಳ್ಳಲು ಹೇಳಿದರು. ಬಾಗಲಕೋಟೆಯಿಂದ, ಬಿಜಾಪುರದವರೆಗೆ ಎಲ್ಲೂ ನಿಲ್ಲುವುದಿಲ್ಲ ಎಂದೂ, ಅಷ್ಟು ಹೊತ್ತಿನಲ್ಲಿ ನಾನು ಅದ್ವಾನಿಯವರನ್ನು ಮಾತಾಡಿಸಬಹುದು ಅಂತ ಹೇಳಿದ್ರು.
ಆಗ ನನಗೆ ತಲೆ ಬಿಸಿ ಶುರುವಾಯ್ತು. ನಾನು ಅದ್ವಾನಿಯವರನ್ನು ಸಂದರ್ಶಿಸಬೇಕು ಅಂತ ಹೇಳಿದ್ರೂ, ಏನೂ ತಯಾರಿ ಮಾಡಿಕೊಂಡಿರಲಿಲ್ಲ. ಆಫೀಸಿನಲ್ಲೂ ಹೇಳಿರಲಿಲ್ಲ, ಸೀದ ಶಂತನು ದತ್ತ ಅವರಿಗೆ ಫೋನ್ ಮಾಡಿ, ಅದ್ವಾನಿಯವರ ಸಂದರ್ಶನ ಸಿಕ್ಕಿದೆ, ಮಾಡಬಹುದಾ? ಅಂತ ಕೇಳಿದೆ. ಅವರು ಖುಶಿಯಾಗಿ, ಮಾಡು ಅಂದರು.
ಅದ್ವಾನಿಯವರ ವ್ಯಾನ್ ಹತ್ತಿ ಒಂದು ಸಲ ಸುತ್ತ ನೋಡಿದೆ. ಕೂರಲು, ಮಲಗಲು ಮತ್ತು ಶೌಚಾಲಯದ ವ್ಯವಸ್ಥೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿದ್ದಾರೆ ಅನ್ನಿಸಿತು. ಅದರೊಳಗೆ, ನನ್ನನ್ನು ಬಿಟ್ಟರೆ, ಇನ್ನೊಬ್ಬ 10-12 ವರ್ಷದ ಹುಡುಗನಿದ್ದ. ಒಂದೈದು ನಿಮಿಷ ಬಿಟ್ಟು ಅದ್ವಾನಿಯವರು ವ್ಯಾನ್ ಹತ್ತಿದರು. ಮುಂದಿನ ಡ್ರೈವರ್ ಪಕ್ಕದ ಸೀಟಿನಿಂದ ಯಾವುದೋ ಪರಿಚಯದ ಧ್ವನಿ ಬಂದಂತಾಯ್ತು. ತಿರುಗಿ ನೋಡಿದರೆ, ಡ್ರೈವರ್ ಪಕ್ಕದಲ್ಲಿ, ಬಿ.ಜೆ.ಪಿ.ಯ ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಕೂತಿದ್ದರು. ಯಡಿಯೂರಪ್ಪನವರು ಮೌನವಾಗಿದ್ದರೆ, ಅನಂತ್ ಕುಮಾರ್ ಮಾತಾಡ್ತಾನೇ ಇದ್ದರು.
ವ್ಯಾನ್ ಹೊರಟ ತಕ್ಷಣ ಅದ್ವಾನಿಯವರು ನನ್ನ ಹೆಸರು ಮತ್ತೆ ಪೂರ್ವಾಪರವನ್ನೆಲ್ಲ ವಿಚಾರಿಸಿಕೊಂಡರು. ನಿಧಾನವಾಗಿ ಮಾತು ರಾಜಕೀಯದತ್ತ ಹೊರಳಿದಾಗ, ನಾನು ಸಂದರ್ಶನಕ್ಕೆ ತಯಾರಾದೆ.
ಆಗ ಬಿ.ಜೆ.ಪಿ.ಯು `ಭಾರತ ಪ್ರಕಾಶಿಸುತ್ತಿದೆ’ ಅನ್ನೋ ಘೋಷಣೆಯೊಂದಿಗೆ ಚುನಾವಣೆಗೆ ಹೊರಟಿದ್ದರು. ಆದ್ರೆ, ಸ್ವಲ್ಪ ದಿನಗಳ ಹಿಂದೆ, ಅದ್ವಾನಿಯವರು `ರೈತರು ಪ್ರಕಾಶಿಸುತ್ತಿಲ್ಲ,’ ಅಂತ ಹೇಳಿ, ದೊಡ್ಡ ಗುಲ್ಲೆದ್ದಿತ್ತು. ಸಂದರ್ಶನ ಶುರುವಾಗುತ್ತಲೇ ಕೇಳಿದೆ: `ನೀವು ರೈತರು ಪ್ರಕಾಶಿಸುತ್ತಿಲ್ಲ ಎಂದು ಹೇಳಿದಿರಿ ಅಂತ ಪತ್ರಿಕೆಗಳಲ್ಲಿ ತಪ್ಪಾಗಿ ವರದಿ ಆಗಿದೆಯೇ?’.
`ಹೌದು. ನಾನು ಹೇಳಿದ್ದು, ರೈತರು ಕೆಲವು ಕಷ್ಟಗಳನ್ನು ಎದುರಿಸುತ್ತಿದ್ದಾರೆ ಅಂತ. ನಮ್ಮ ಸರ್ಕಾರ ರೈತರಿಗಾಗಿ ….’ ಎಂದು ಅದ್ವಾನಿಯವರು ವಿವರಿಸುತ್ತಾ ಹೋದರು.
ಸ್ವಲ್ಪ ಹೊತ್ತು ಸುಮ್ಮನೆ ಕೇಳಿದ ನಾನು, ಮಧ್ಯ ಬಾಯಿ ಹಾಕಿ, `ಹಾಗಾದ್ರೆ, ರೈತರು ಪ್ರಕಾಶಿಸುತ್ತಿದ್ದಾರಾ? ಕರ್ನಾಟಕ, ತಮಿಳು ನಾಡು, ಮಹಾರಾಷ್ಟ್ರಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಉತ್ತರ ಭಾರತದಲ್ಲೂ ಇದು ಆಗುತ್ತಿದೆಯಲ್ಲ?’ ಅಂತ ಕೇಳಿದೆ.
ಅದಕ್ಕವರು, ರಾಜ್ಯ ಸರ್ಕಾರಗಳು, ರೈತರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಎಂದರು. ತಕ್ಷಣವೇ ನಾನು, `ಹಾಗಾದ್ರೆ, ಕೇಂದ್ರ ಸರ್ಕಾರಕ್ಕೆ ಯಾವುದೇ ಹೊಣೆಗಾರಿಕೆ ಇಲ್ಲವೇ?’ ಅಂತ ಕೇಳ್ದೆ.
ಅದ್ವಾನಿಯವರು ಹಿಂದಕ್ಕೆ ಒರಗಿ ಕುಳಿತು, ದೀರ್ಘವಾಗಿ ಉಸಿರೆಳೆದು, ಒಂದು ಮುಗುಳ್ನಗೆ ನಕ್ಕರು. ಆ ಮುಗುಳ್ನಗೆಯ ಹಿಂದೆ, ನೂರು ಅರ್ಥಗಳು ಅಡಗಿದ್ದವೇನೋ ಅನ್ನಿಸಿತು. ಹತ್ತೇ ಸೆಕೆಂಡಿನಲ್ಲಿ ಅವರ ಉತ್ತರವನ್ನು ಮುಂದುವರೆಸಿದರು.
ನಾನಂತೂ, ಆರು ವರ್ಷದ ಆಡಳಿತದಲ್ಲಿ, ಬಿ.ಜೆ.ಪಿ. ಕಾಂಗ್ರೆಸ್ ಗಿಂತ ಏನೂ ಕಡಿಮೆ ಇಲ್ಲದಂತೆ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬಂತೆಯೇ ಪ್ರಶ್ನೆಗಳನ್ನು ಹಾಕುತ್ತಿದ್ದೆ. ಅದ್ವಾನಿಯವರಂತೂ, ನನ್ನ ಪ್ರಶ್ನೆಗಳನ್ನು ಮೊದಲೇ ಊಹಿಸಿದಂತೆ ಉತ್ತರಗಳನ್ನು ಕೊಡುತ್ತಿದ್ದರು. ಕೆಲವು ಪ್ರಶ್ನೆಗಳು ಪೂರ್ತಿಯಾಗುವ ಮೊದಲೇ, ಅದ್ವಾನಿಯವರ ಉತ್ತರ ಶುರುವಾಗಿರುತ್ತಿತ್ತು. ಅವರು ಉತ್ತರ ಕೊಟ್ಟ ಮೇಲೆ, ನನಗೆ ಕೇಳಲು ಯಾವುದೇ ಉಪ ಪ್ರಶ್ನೆಗಳು ಉಳಿದಿರುತ್ತಿರಲಿಲ್ಲ.
ಹದಿನೈದು ನಿಮಿಷದಲ್ಲಿ ಸಂದರ್ಶನ ಮುಗಿದು ಹೋಗಿತ್ತು. ನಾನು ಮೊದಲು ನೋಡಿದ್ದ ಹುಡುಗ, ಅದ್ವಾನಿಯವರ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಿದ್ದ. ಅವತ್ತೇ ಗೊತ್ತಾಗಿದ್ದು ನನಗೆ, ಅದ್ವಾನಿಯವರಿಗೆ ಕುರುಕು ತಿಂಡಿಗಳು ಅಂದ್ರೆ ಇಷ್ಟ ಅಂತ. ಊಟವಾಗಿ ಅರ್ಧ ಘಂಟೆಯೂ ಆಗಿರಲಿಲ್ಲ – ರವೆ ಉಂಡೆ, ಚಕ್ಕುಲಿ, ಕೋಡುಬಳೆಗಳನ್ನು, ಒಂದರ ಹಿಂದೊಂದರಂತೆ ಕುರುಕುತ್ತಿದ್ದರು. ಈ ವಯಸ್ಸಿನಲ್ಲೂ ಹೀಗೆ ತಿನ್ನುವುದನ್ನು ನೋಡಿ, ನನಗೆ ಆಶ್ಚರ್ಯವಾಯ್ತು.
ನಂಗೇನೋ ಅದ್ವಾನಿಯವರ ಮೇಲೆ ವಿಪರೀತ ಗೌರವ ಶುರುವಾಯ್ತು. ಅವರು ಉತ್ತರ ಕೊಡುತ್ತಿದ್ದ ರೀತಿ ನೋಡಿ, ನನ್ನಂಥ ಎಷ್ಟು ಪುಡಿ ಪತ್ರಕರ್ತರನ್ನು ಕೊಡವಿ ಬಿಸಾಕಿರಬಹುದು, ಅಂತ ಯೋಚನೆ ಮಾಡುತ್ತಿದ್ದೆ. ಆದರೆ, ಅದ್ವಾನಿಯವರಿಗೆ ನಾನು ಇಷ್ಟವಾಗಲಿಲ್ಲ ಅಂತಾನೂ ಅನ್ನಿಸ್ತು.
ನಾನು ಅವರ ಬಾಲ್ಯದ ಮತ್ತು ಪಾಕಿಸ್ಥಾನ ವಿಭಜನೆಯ ಬಗ್ಗೆ ಕೇಳಲು ಹೊರಟಾಗ, ಅವರು ಪಕ್ಕದಲ್ಲಿದ್ದ ಪುಸ್ತಕ ಎತ್ತಿಕೊಂಡು ಓದಲು ಶುರುಮಾಡಿದ್ರು. ಮುಂದೆ ಕುಳಿತ್ತಿದ್ದ ಅನಂತ್ ಕುಮಾರ್, `ಆ ಪುಸ್ತಕ ಚೆನ್ನಾಗಿದೆ ಅಂತ ಕೇಳಿದ್ದೇನೆ,’ ಅಂತ ಹೇಳಿದಾಗ, ಅದ್ವಾನಿಯವರು, `ನೀವು ಓದಿದ್ರೆ ಮಾತ್ರ ಹೇಳಬೇಕು. ಯಾರೋ ಹೇಳಿದ್ದು ಕೇಳಿಕೊಂಡು ಅಭಿಪ್ರಾಯ ಕೊಡಬಾರದು,’ ಅಂದ್ರು.
ಬಿಜಾಪುರ ತಲುಪಿದ ತಕ್ಷಣ, ನಾನು ನನ್ನ ವ್ಯಾನಿಗೆ ಹೋದೆ. ಹಾಗೇ, ಶಂತನು ದತ್ತರಿಗೆ ಫೋನ್ ಮಾಡಿ, ಸಂದರ್ಶನದ ಬಗ್ಗೆ ಹೇಳಿದೆ. ಆಗಲೇ, ಸಂಜೆಯಾಗಿತ್ತು. ಬಿಜಾಪುರದಲ್ಲಿ ಸಮಾವೇಶ ಬೇರೆ ಇತ್ತು. `ಒಳ್ಳ ಸಂದರ್ಶನ. ಇವತ್ತು ಆಗದೇ ಹೋದ್ರೂ ಪರವಾಗಿಲ್ಲ, ನಾಳೆ ಫೈಲ್ ಮಾಡು,’ ಅಂತ ಶಂತನು ದತ್ತ ಹೇಳಿದ್ರು.
ಆದ್ರೆ, ಮಾರನೇ ದಿನ ವಾಪಾಸ್ ಬರುವುದಿತ್ತು. ಸಮಾವೇಶ ಮುಗಿದ ತಕ್ಷಣ, ಇಂಟರ್ ನೆಟ್ ಪಾರ್ಲರ್ ಗೆ ಹೋಗಿ, ಸಮಾವೇಶದ ವರದಿ ಮತ್ತು ಸಂದರ್ಶನ, ಎರಡನ್ನೂ ಮುಗಿಸಿ ಕಳುಹಿಸಿದೆ. ರಾತ್ರಿ ಸಂಧರ್ಶನದ ಬಗ್ಗೆ ತಲೆ ಕೆಡಿಸಿಕೊಳ್ಳಲು ಸಮಯವೇ ಆಗಲಿಲ್ಲ. ಒಂಬತ್ತು ಘಂಟೆಗೆ ಹೋಟೆಲ್ ರೂಮಿಗೆ ಬಂದು ಸ್ನಾನ ಮಾಡಿ ಮುಗಿಸಿಕೊಳ್ಳುವ ಸಮಯದಲ್ಲಿ, ತಿಕೋಟಾದ ಶಾಸಕರಾದ ಶಿವಾನಂದ ಪಾಟೀಲರ ಹಿಂಬಾಲಕರು ಬಂದು, ನನ್ನನ್ನು ಕರೆದುಕೊಂಡು ಹೋದರು. ನಾನು ಬಿಜಾಪುರಕ್ಕೆ ಬರುವುದು ತಿಳಿದ ಪಾಟೀಲರು, ರಾತ್ರಿ ಊಟಕ್ಕೆ ಸಿಗುವಂತೆ ಹೇಳಿದ್ದರು. ಅವರ ಜೊತೆ ಊಟ ಮಾಡಿ ಬರುವ ಹೊತ್ತಿಗೆ, ಬೆಳಗ್ಗಿನ ಜಾವ ಮೂರು ಘಂಟೆ. ಆರು ಘಂಟೆಗೆ ಎದ್ದು ವಾಪಾಸ್ ಹೊರಟೆವು.
ಬೆಂಗಳೂರಿಗೆ ಬಂದ ಮಾರನೇ ದಿನ, ನಮ್ಮ ಪೇಪರ್ ನಲ್ಲಿ ಅದ್ವಾನಿಯವರ ಸಂದರ್ಶನ ಬಂದಿರಲಿಲ್ಲ. ಅದು, ನನ್ನ ಪತ್ರಕರ್ತ ಜೀವನದ ಅತಿ ದೊಡ್ಡ ಸಂದರ್ಶನ ಅಂದ್ಕೊಂಡಿದ್ದೆ. ಜಾಗ ಇರಲಿಲ್ಲ ಅಂತ ಕಾಣುತ್ತೆ ಅನ್ಕೊಂಡೆ. ಆಫೀಸಿಗೆ ಬಂದಾಗ, ಮಟ್ಟು ಮತ್ತು ಶಂತನು ದತ್ತ ಒಳ್ಳೆ ಕೆಲಸ ಮಾಡಿದ್ದೀಯ ಅಂತ ಹೇಳಿದ್ರು. ನಾನು ಸಂದರ್ಶನದ ಬಗ್ಗೆ ಕೇಳಿದಾಗ, ಅದನ್ನು ಎಲ್ಲಾ ಎಡಿಷನ್ ಗಾಗಿ, ಚೆನೈಗೆ ಕಳುಹಿಸಲಾಗಿದೆ ಅಂದರು.
ಮಾರನೇ ದಿನ ಬೆಳಗ್ಗೆ, ನಮ್ಮ ಪತ್ರಿಕೆಯ ಮುಖಪುಟದಲ್ಲಿ ಅದ್ವಾನಿಯವರ ಸಂದರ್ಶನ ಪ್ರಕಟವಾಗಿತ್ತು. ಆದರೆ, ಅದು ನಾನು ಮಾಡಿದ ಸಂದರ್ಶನವಾಗಿರಲಿಲ್ಲ. ನಮ್ಮ ಪತ್ರಿಕೆಯ ದೆಹಲಿಯ ಬಾತ್ಮೀದಾರಳಾಗಿದ್ದ ಅನಿತಾ ಸಲೂಜಾ ಎಂಬ ಮಹಿಳೆ, ನಾಗಪುರದಲ್ಲಿ ಮಾಡಿದ್ದಳು. ಇಡೀ ಸಂದರ್ಶನದಲ್ಲಿ, ಬಿ.ಜೆ.ಪಿ ಯ ವಿರುದ್ದವಾದ ಯಾವುದೇ ಪ್ರಶ್ನೆಗಳಿರಲಿಲ್ಲ.
ಆಫೀಸಿಗೆ ಹೋದವನಿಗೆ, ಇದರ ಬಗ್ಗೆ ಕೆದುಕಬೇಕು ಅಂತ ಅನ್ನಿಸಲಿಲ್ಲ. ಮಟ್ಟೂ ನನ್ನನ್ನು ಕರೆದು ತೋರಿಸದರು. `ಬೆಳಗ್ಗೆ ನೋಡ್ದೆ,’ ಅಂತ ಶುಷ್ಕ ನಗು ನಕ್ಕೆ.
`ನೆನ್ನೆ ಸಾಯಂಕಾಲದವರೆಗೆ ನಮಗೂ ಗೊತ್ತಿರಲಿಲ್ಲ. ಅನಿತಾ ಸಲೂಜಾ ದೆಹಲಿಯಿಂದ ವಿಮಾನದಲ್ಲಿ ನಾಗಪುರಕ್ಕೆ ಬಂದು, ಅಲ್ಲಿ ಸಂದರ್ಶನ ಮಾಡಿದಳಂತೆ. ಈ ಸಂದರ್ಶನ ಹಾಕಿಕೋಬೇಕು ಅಂತ ಚೆನೈನಿಂದ ನಮಗೆ ಸೂಚನೆ ಬಂತು,’ ಅಂದ್ರು.
ನಾನೇನೂ ಮಾತಾಡ್ಲಿಲ್ಲ. ಅದ್ವಾನಿಯವರ ಮುಗುಳ್ನಗೆ ಒಮ್ಮೆ ಕಣ್ಣಮುಂದೆ ಹಾದು ಹೋಯ್ತು.


ಮಾಕೋನಹಳ್ಳಿ ವಿನಯ್ ಮಾಧವ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ