ಈ ಗೋರಕ್ಷಕ ಕೇಸರಿ ಪಡೆಯವರಲ್ಲ
ಮೊನ್ನೆ ಊರಿಗೆ
ಹೋಗಿದ್ದಾಗ ಅಮ್ಮ, ನೋಡೋ ಈ ಇನ್ವಿಟೇಶನ್.... ಅರಸು ಮಗನ ಮದುವೆ ಕಾಗದ ಅಂದರು.
ಒಂದು ಕ್ಷಣ ಯಾವ ಅರಸು ಅಂತ ತಲೆಗೆ ಹೊಳೀಲಿಲ್ಲ.... ಆಮೇಲೆ ನೆನಪಾಯ್ತು... ನಮ್ಮ ಊರಲ್ಲಿ ಇದ್ದ
ಪಶುವೈದ್ಯ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದ ಕೃಷ್ಣರಾಜು ಅರಸ್
ಅಂತ.
ಕೃಷ್ಣರಾಜಉ ಅರಸ್ ರನ್ನು ಒಂದೆರೆಡು ಸಲ ನೋಡಿರಬಹುದಷ್ಟೆ. ಅಂಥಾ ನೆನಪಿಲ್ಲ. ನಮ್ಮ ಊರಾದ ಮೇಲೆ,
ಅವರು ದಾರದಹಳ್ಳಿಗೆ ವರ್ಗವಾಗಿ ಹೋದರು. ಅವರ ಪತ್ನಿ ಪದ್ಮಲತಾರವರು ನಮ್ಮೂರ
ಶಾಲೆಯಲ್ಲೇ ಶಿಕ್ಷಕಿಯಾಗಿದ್ದಾರೆ. ಹಾಗಾಗಿ ನಮ್ಮೂರಿನ ಸಂಬಂಧ ಅವರಿಗೆ ಪೂರ್ತಿಯೇನೂ
ಕಡಿದು ಹೋಗಿಲ್ಲ.
ನೋಡು,
ಆ ಇನ್ವಿಟೇಷನ್ ಹ್ಯಾಗಿದೆ ಅಂತ.... ಪೂರ್ತಿ ದನಗಳ ಬಗ್ಗೆನೇ ಇದೆ. ಈ ಕಾಲದಲ್ಲಿ
ಯಾರು ದನಗಳನ್ನ ಇಷ್ಟೊಂದು ಪ್ರೀತಿಸ್ತಾರೆ, ಅಂತ ಅಮ್ಮ ಹೇಳಿದಾಗ, ಪತ್ರಿಕೆಯನ್ನು ಹೊರಕ್ಕೆ ತೆಗೆದೆ. ಮೊದಲನೇ ಪುಟದಲ್ಲೇ ಕಾಮಧೇನುವಿನ ಕೃಪೆಯ ಈ
ವಿವಾಹಕ್ಕೆ ಆಹ್ವಾನ ಅಂತ ಶುರುವಾಗಿದ್ದು, ವಧು-ವರರಿಗಿಂತ, ಹಸು-ಕರುಗಳೇ ಪತ್ರಿಕೆ ತುಂಬಾ ರಾರಾಜಿಸುತ್ತಿದ್ದವು.
ನಮ್ಮ ಮನೆಯಲ್ಲಿ
ಹಸು ಸಾಕುವುದನ್ನು ನಿಲ್ಲಿಸಿ ಸಾಧಾರಣ ಹದಿನೈದು ವರ್ಷವಾಯಿತು. ಮೊದಲೆಲ್ಲ,
ನಮ್ಮ ಗೆಂಡೆಹಳ್ಳಿ ಮನೆಯಲ್ಲಿ ಹಸು, ಎಮ್ಮೆಗಳು ಯಾವಾಗಲೂ ಇರುತ್ತಿದ್ದವು. ಅವನ್ನು ಕಾಯೋಕೆ ಅಂತ ಹುಡುಗರೂ
ಇರುತ್ತಿದ್ದರು.
ರಜಕ್ಕೆ ಗೆಂಡೇಹಳ್ಳಿಗೆ ಹೋದಾಗ,
ದನ, ಎಮ್ಮೆಗಳನ್ನು ನೋಡೋದೇ ಒಂದು ಸಂಭ್ರಮ. ಅಮ್ಮ ಮಾತ್ರ ದನದ ಕೊಟ್ಟಿಗೆಗೆ ಹೋಗೋಕೆ ಬಿಡುತ್ತಿರಲಿಲ್ಲ.
ಅಂತೂ, ಕದ್ದು ಹೋಗೋದು ತಪ್ಪಿಸೋಕೆ ಆಗುತ್ತಿರಲಿಲ್ಲ. ದನ ಕಾಯೋದು ಇಷ್ಟ ಆದರೂ, ಹೋದರೆ ಪೆಟ್ಟು ಬೀಳೋದು
ಗ್ಯಾರಂಟಿ ಅಂತ ಗೊತ್ತಿದ್ದರಿಂದ, ಹೋಗುತ್ತಿರಲಿಲ್ಲ.
ಆಗೆಲ್ಲ ದನ ಮೇಯಿಸಲು ಬೇಕಾದಷ್ಟು
ಹರ (ಕೊಡಗಿನ ಕಡೆಯಲ್ಲಿ ಬಾಣೆ ಅಂತ ಕರೆಯುತ್ತಾರೆ) ಇರುತ್ತಿದ್ದವು. ಸಾಧಾರಣವಾಗಿ ಈಚಲು ಗುತ್ತಿ,
ಈಚಲು ಮರ, ನೇರಳೆ ಮರ ಮತ್ತು ಚೊಟ್ಟೇಹಣ್ಣಿನ ಮರಗಳೇ ಜಾಸ್ತಿ. ಮೊದಲನೇ ಮಳೆಯಾದಾಗ ಮಾತ್ರ ಹಣ್ಣುಬಿಟ್ಟು,
ಮೂರ್ನಾಲ್ಕು ದಿನಗಳಲ್ಲಿ ಖಾಲಿಯಾಗುವ ಚೊಟ್ಟೆಹಣ್ಣಂತೂ, ಇತ್ತೀಚೆಗೆ ನಮ್ಮ ಕಡೆ ಕಣ್ಮರೆಯಾಗಿ ಹೋಗಿದೆ.
ಈಚಲು ಮರ ಮತ್ತು ಗುತ್ತಿಗಳೂ ಇಲ್ಲ ಮತ್ತೆ ಈಗಿನ ಮಕ್ಕಳಿಗೆ ಈಚಲು ಹಣ್ಣು ಮತ್ತು ಖರ್ಜೂರ ಒಂದೇ ರುಚಿ
ಅಂತ ಹೇಳಿದರೆ, ಅದೆಲ್ಲಿ ಬೆಳೆಯುತ್ತವೆ? ಅಂತ ಕೇಳ್ತಾವೆ. ನಾಮಾವಶೇಷವಾಗಿ ಹೋಗಿವೆ.
ಗೆಂಡೇಹಳ್ಳಿಯಲ್ಲಿ ಹಸುಗಳಿಗಿಂತ
ಎಮ್ಮೆಗಳದ್ದೇ ನೆನಪು ನನಗೆ ಹೆಚ್ಚು. ಪ್ರತೀ ಸಲ ಹೋದಾಗ, ಒಂದೊಂದು ಎಮ್ಮೆಯ ಕಥೆ ಇರುತ್ತಿತ್ತು. ಅಜ್ಜಿ,
ರಮೇಶ ಅನ್ನೋ ಅನಾಥ ಹುಡುಗನನ್ನು ಸಾಕಿಕೊಂಡಿದ್ದರು. ಒಂದ್ಸಲ ಅವನು ಎಮ್ಮೆಯನ್ನು ಮೇಯೋಕೆ ಬಿಟ್ಟ ತಕ್ಷಣ,
ಅದರ ಬೆನ್ನ ಮೇಲೆ ಕೂತು, `ಯಾರೇ ಕೂಗಾಡಲಿ, ಊರೇ ಹೋರಾಡಲಿ,’ ಅಂತ ಡಾ! ರಾಜ್ ಕುಮಾರ್ ಶೈಲಿಯಲ್ಲಿ
ಹಾಡೋಕೆ ಶುರು ಮಾಡಿದ್ದಾನೆ. ಬೇಸಿಗೆಯಾದ್ದರಿಂದ ಎಮ್ಮೆ ನೇರವಾಗಿ ಮನೆ ಹಿಂದುಗಡೆ ಇದ್ದ ಕರೆಗೆ ಇಳಿದಿದೆ.
ಈಜು ಬರದ ರಮೇಶನನ್ನು ಅಲ್ಲೇ ಯಾರೋ ನೋಡಿ, ನೀರಿನಿಂದ ಹೊರಗೆ ಎಳೆದು ಹಾಕಿದ್ದರು.
ಚಿಕ್ಕಂದಿನಲ್ಲಿ, ಬುದ್ದಿ ಇಲ್ಲದ
ಕೆಲಸ ಮಾಡಿದಾಗಲೆಲ್ಲ, ಎಮ್ಮೆ, ಕೋಣ ಅಂತ ಬೈತಿದ್ದರು. ಗೆಂಡೇಹಳ್ಳಿಯಲ್ಲಿದ್ದ ಒಂದು ಎಮ್ಮೆ ಅಜ್ಜಿಗೆ
ಬಿಟ್ಟು, ಯಾರಿಗೂ ಹಾಲು ಕೊಡುತ್ತಿರಲಿಲ್ಲ. ಯಾರಾದರೂ ಕೆಚ್ಚಲಿಗೆ ಕೈ ಹಾಕಿದರೆ, ಒದೆಯುತ್ತಿತ್ತು.
ಆದರೆ, ಹಾಲು ಮಾತ್ರ ಧಂಡಿಯಾಗಿ ಕೊಡ್ತಿತ್ತು.
ಹೀಗೇ ಒಂದ್ಸಲ ಅಜ್ಜಿ ನೆಂಟರ
ಮನೆಗೆ ಹೋಗಿದ್ದರು. ಚಿಕ್ಕಂದಿನಿಂದ ನಮ್ಮ ಮನೆಯಲ್ಲಿ ಬೆಳೆದ ಮಣಿ (ಎರಡು ವಾರಗಳ ಹಿಂದೆ ತೀರಿಕೊಂಡ)
ತುಂಬಾ ಯೋಚನೆ ಮಾಡಿ, ಅಜ್ಜಿಯ ಹಳೇ ಸೀರೆಯೊಂದನ್ನು ಸುತ್ತಿಕೊಂಡು, ಹಾಲು ಕರೆದ. ಯಾವುದೇ ಪ್ರತಿರೋಧ
ವ್ಯಕ್ತ ಪಡಿಸದೆ, ಎಮ್ಮೆ ಹಾಲು ಕೊಟ್ಟಿತು.
ಹೀಗೇ ಒಂದೆರೆಡು ಸಲ ಆದ ಮೇಲೆ,
ಮಣಿ ಆ ಸೀರೆಯನ್ನು ತಾನೇ ಇಟ್ಟುಕೊಂಡು, ಅಜ್ಜಿ ಇಲ್ಲದಾಗ ಹಾಲು ಕರೆಯಲು ಉಪಯೋಗಿಸುತ್ತಿದ್ದ. ಒಂದ್ಸಲ
ಮಣಿ ಹಾಲು ಕರೆಯುತ್ತಿದ್ದಾಗ, ಮನೆಯೊಳಗಿಂದ ಯಾರೋ ಕರೆದಿದ್ದಾರೆ. ಏನು ಮಾಡ್ತಿದ್ದೀನಿ ಅಂತ ಮರೆತ
ಮಣಿ ಉತ್ತರಿಸಿದ್ದಾನೆ. ಗಂಡಸರ ಧ್ವನಿ ಕೇಳಿದ ಎಮ್ಮೆ, ರಪ್ಪಂತ ಒದ್ದ ರಭಸಕ್ಕೆ, ಮಣಿ ಮತ್ತೆ ಹಾಲಿನ ತಪ್ಪಲೆ ಮಾರು ದೂರ ಹೋಗಿ
ಬಿದ್ದಿದ್ದಾರೆ. ಮಣಿಗೆ ಸುಧಾರಿಸಿಕೊಳ್ಳಲು ಒಂದು ವಾರವೇ ಬೇಕಾಯ್ತಂತೆ. ಅಲ್ಲಿಂದ ಮುಂದೆ ಮಣಿ ಯಾವತ್ತೂ ಆ ಸಾಹಸಕ್ಕೆ ಕೈ ಹಾಕಲಿಲ್ಲ. ಎಮ್ಮೆಯೂ ಅಷ್ಟೆ, ಹಾಲು
ಕರೆಯುವ ಮುನ್ನ ಅಜ್ಜಿಯ ಧ್ವನಿ ಕೇಳದೆ, ಹಾಲು ಕರೆಯಲು ಬಿಡುತ್ತಿರಲಿಲ್ಲ.
ನಾವು ಮೂಡಸಸಿಯ ಮನೆಗೆ ಮೊದಲನೇ ಹಸುವನ್ನು ಶಿವಮೊಗ್ಗದ ಲಲಿತ ದೊಡ್ಡಮ್ಮನ ಮನೆಯಿಂದ ತಂದದ್ದು. ಗೌರಿ ಹಬ್ಬದ
ಸಮಯದಲ್ಲಿ ಹುಟ್ಟಿದ್ದರಿಂದ, ಅದಕ್ಕೆ ಗೌರಿ ಅಂತಲೇ ಹೆಸರಿಟ್ಟಿದ್ದರು. ನಮ್ಮ
ಮನೆಗೆ ಬಂದ ಮೇಲೆ, ಅದು ಹಾಕಿದ ಕರು ಮಂಗಳವಾರ ಹುಟ್ಟಿದ್ದರಿಂದ, ಅದನ್ನ ಮಂಗಳ ಅಂತ ಕರೀತಿದ್ವಿ.
ನಮ್ಮೂರಿನ ಮಲೆನಾಡು ಗಿಡ್ಡ
ಮತ್ತೆ ಉಳಿದ ದನಗಳಿಗೆ ಹೋಲಿಸಿದರೆ, ಈ ಜರ್ಸಿ ದನಗಳು ಬಹಳ ಮುಗ್ದ ಪ್ರಾಣಿಗಳು. ದಿನಾ ಬೆಳಗ್ಗೆ ಅವುಗಳಿಗೆ
ರೊಟ್ಟಿ ಅಥವಾ ಕಡುಬನ್ನು ಕೈಯಾರೆ ತಿನ್ನಿಸುತ್ತಿದ್ದೆವು. ಮನೆ ಸುತ್ತ ಸುಮಾರು ಸೀಬೇ ಹಣ್ಣಿನ ಮರಗಳಿದ್ದವು.
ಸೀಬೇ ಹಣ್ಣು ಇಷ್ಟವಾದರೂ, ಅವುಗಳು ಕೆಳಗೇ ನೇತಾಡುತ್ತಿದ್ದರೂ, ಬಾಯಿ ಹಾಕಿ ತಿನ್ನಬೇಕು ಅಂತ ಗೊತ್ತಾಗುತ್ತಿರಲಿಲ್ಲ.
ಸೀಬೇ ಹಣ್ಣಿನ ಪಕ್ಕ ನಿಂತು, ಸೀಬೇ ಹಣ್ಣನೊಮ್ಮೆ, ಅಮ್ಮನ ಮುಖವನ್ನೊಮ್ಮೆ ನೋಡುತ್ತಾ ನಿಂತಿರುತ್ತಿದ್ದವು.
ನಾವ್ಯಾರಾದರೂ ಹೋಗಿ ಕಿತ್ತು ತಿನ್ನಿಸಿದರೆ, ತಿನ್ನುತ್ತಿದ್ದವು.
ಗೌರಿ ಮತ್ತು ಮಂಗಳ
ಸುಮಾರು ಕರುಗಳನ್ನು ಹಾಕಿದ್ದು ನೆನಪಿದೆ. ಮನೆಯಲ್ಲಿ ಹಾಲು, ಮೊಸರು, ಬೆಣ್ಣೆ ಮತ್ತು ತುಪ್ಪ ಧಂಡಿಯಾಗಿ ಇರುತ್ತಿತ್ತು.
ಹೆಚ್ಚಿನವು ಗಂಡು ಕರುಗಳಾದ್ದರಿಂದ, ಅವುಗಳನ್ನು ನಮ್ಮ ತೋಟಕ್ಕೆ
ಬಯಲುಸೀಮೆಯ ಬಾಣಾವರ-ಜಾವಗಲ್ ಕಡೆಯಿಂದ ಬರುತ್ತಿದ್ದ ಆಳುಗಳು, ಹೊಲದ
ಕೆಲಸಕ್ಕೆ ಅಂತ ತೆಗೆದುಕೊಂಡು ಹೋಗುತ್ತಿದ್ದರು. ವಯಸ್ಸಾದ ಮೇಲೆ ಗೌರಿ ಕರು ಹಾಕುವುದನ್ನು
ನಿಲ್ಲಿಸಿತ್ತು. ಅದೇ ಸಮಯದಲ್ಲಿ, ಹೆಣ್ಣು ಕರುವಿಗೆ ಜನ್ಮಕೊಡುವ
ಸಮಯದಲ್ಲಿ ಪಶುವೈದ್ಯ ನಿರೀಕ್ಷಕನ ಎಡವಟ್ಟಿನಿಂದ ಮಂಗಳ ಸತ್ತು ಹೋಯಿತು. ಹುಟ್ಟುತ್ತಲೇ
ತಬ್ಬಲಿಯಾದ ಕರುವನ್ನು, ಗೌರಿ ತುಂಬಾ ಚೆನ್ನಾಗಿ ನೋಡಿಕೊಂಡಿತ್ತು. ಕೈ
ತುತ್ತು ಹಾಕಿ ಬೆಳೆಸಿದ ಮಂಗಳ ಸತ್ತಿದ್ದನ್ನು ಅಮ್ಮ ಎಷ್ಟೋ ವರ್ಷ ಹೊಟ್ಟೆ ಉರಿದುಕೊಂಡು ಹೇಳುತ್ತಿದ್ದರು.
ಆ ಸಮಯದಲ್ಲೇ
ನಮ್ಮೂರಿಗೆ ಬಂದಿದ್ದು ಈ ಅರಸ್.
ಯಾವಾಗಲೂ ರಜಕ್ಕೆ ಹೋದಾಗ ಅಮ್ಮ ಹೊಸ ನಿರೀಕ್ಷಕರ ಬಗ್ಗೆ ಹೇಳುತ್ತಿದ್ದರು. ಕೆಲಸದಲ್ಲಿ ತುಂಬಾ
ಆಸಕ್ತಿ ಇದ್ದು, ಹಸುಗಳಿದ್ದ ಮನೆಗಳಿಗೆ ಹೋಗಿ ಚಿಕಿತ್ಸೆ ನೀಡುತ್ತಿದ್ದರು.
ಹಸು ನೋಡಿಕೊಳ್ಳಲು ಜನ ಸಿಗೋದು ಕಷ್ಟವಾದ ಮೇಲೆ, ಅಮ್ಮ ಹಸುವನ್ನು ನಮ್ಮ
ಸಂಬಂಧಿಕರಿಗೇ ಕೊಟ್ಟರು. ಆಗ ಅರಸ್ ತುಂಬಾ ಬೇಜಾರು ಮಾಡಿಕೊಂಡು, ಅಮ್ಮನಿಗೆ
ಇಟ್ಟುಕೊಳ್ಳಿ ಅಂತ ವಿನಂತಿಸಿಕೊಂಡಿದ್ದರಂತೆ.
ಆ ಹೊತ್ತಿಗಾಗಲೇ ಹಸು ಮತ್ತೆ
ಎಮ್ಮೆ ಸಾಕೋದನ್ನು ನಮ್ಮ ಕಡೆಯಲ್ಲಿ ನಿಲ್ಲಿಸಿಯಾಗಿತ್ತು. ದನ ಮೇಯಿಸೋಕೆ ಮತ್ತು ಕೊಟ್ಟಿಗೆ ನೋಡಿಕೊಳ್ಳೋಕೆ
ಜನ ಸಿಕ್ಕುತ್ತಿರಲಿಲ್ಲ. ಹರಗಳೆಲ್ಲ ಕಾಫೀ ತೋಟಗಳಾಗಿ, ಮೇಯಿಸಲು ಜಾಗವೂ ಇರಲಿಲ್ಲ. ಹಸು ಸಾಕಲೇ ಬೇಕು
ಅಂತ ಹಟವಿದ್ದವರು ಜರ್ಸಿ ದನಗಳನ್ನು ತಂದು, ಕೊಟ್ಟಿಗೆಯೊಳಗೇ ಸಾಕುವುದು ಶುರುವಾಗಿತ್ತು. ಈಗಲೂ ಅಷ್ಟೆ....
ಅಲ್ಲೊಬ್ಬರು, ಇಲ್ಲೊಬ್ಬರು ಜರ್ಸಿ ದನಗಳನ್ನು ಸಾಕಿರುವುದು ಬಿಟ್ಟರೆ, ಮುಂಚಿನಂತೆ ನಮ್ಮ ನಾಡ ದನಗಳು
ಮತ್ತು ಎಮ್ಮೆಗಳು ಕಾಣೆಯಾಗಿವೆ. ಅವೇನಿದ್ದರೂ, ಮೂಡಿಗರೆಯಿಂದ ಆಚೆಗೆ ಉಳಿದುಕೊಂಡಿವೆ ಅಂತ ನನ್ನ ಭಾವನೆ.
ನಾವೂ, ಹಾಲು ಬೇಕಾದಗ ಪ್ರಹ್ಲಾದಣ್ಣನ ಮನೆ ಅಥವಾ ತುದಿಯಾಲ ಮಂಜುನಾಥಣ್ಣನ ಮನೆಗಳಿಂದ
ಕೊಳ್ಳುತ್ತೇವೆ. ಇಲ್ಲದೇ ಹೋದರೆ ಇದ್ದೇ ಇದೆ..... ಡೈರಿಯ ಪ್ಲಾಸ್ಟಿಕ್ ಚೀಲದ ಹಾಲು.
ಇತ್ತೀಚೆಗೆ
ದಾರದಹಳ್ಳಿಗೆ ಹೋದಾಗಲೆಲ್ಲ ಬಹಳ ಜನ ಅರಸ್ ವಿಷಯ ಮಾತನಾಡುವುದನ್ನು ಕೇಳಿದ್ದೇನೆ. ಆಮೇಲೆ
ಗೊತ್ತಾಯ್ತು, ದಾರದಹಳ್ಳಿಯಲ್ಲಿದ್ದ ಸಣ್ಣ ಪಶುವೈದ್ಯಶಾಲೆಯನ್ನು ಒಂದು ದನಗಳ ಬಗ್ಗೆ ವಸ್ತು ಸಂಗ್ರಹಾಲಯವನ್ನಾಗಿ
ಮಾಡಿದ್ದಾರೆ ಅಂತೆ. ಅದರಲ್ಲಿ ದನಗಳ ಬಗ್ಗೆ ಎಷ್ಟೊಂದು ಮಾಹಿತಿ ಅನ್ನೋದನ್ನು ಜನಗಳು ಹೇಳೋದು ಕೇಳಿದರೆ,
ಇಡೀ ದೇಶದಲ್ಲಿ ಅಷ್ಟೊಂದು ಮಾಹಿತಿ ಎಲ್ಲೂ ಸಿಗೋದು ಅನುಮಾನ.
ಆಹ್ವಾನ ಪತ್ರಿಕೆ
ನೋಡಿ ಯಾಕೋ ಮನಸ್ಸಿಗೆ ಪಿಚ್ಚೆನಿಸಿತು. ನಾನೇ ವ್ಯಾನಿನಲ್ಲಿ ತಂದ ಗೌರಿ ಮತ್ತು ಅದರ ಕರು ಮಂಗಳ
ಕಣ್ಣ ಮುಂದೆ ಹಾದು ಹೋದಂತೆ ಅನ್ನಿಸಿತು. ಚಿಕ್ಕಂದಿನಲ್ಲಿ ನಮ್ಮ ಗೆಂಡೆಹಳ್ಳಿ ಮನೆಯಲ್ಲಿ ಇದ್ದ
ದನ, ಎಮ್ಮೆಗಳೂ ನೆನಪಾದವು. ಈಗ, ಗೆಂಡೆಹಳ್ಳಿಯಲ್ಲಿದ್ದ
ಕೊಟ್ಟಿಗೆ ಕೆಡವಿ, ಅಲ್ಲಿ ಆಳುಗಳಿಗೆ
ಮನೆಗಳನ್ನು ಕಟ್ಟಿದ್ದೇವೆ. ನೋಡಿಕೊಳ್ಳೋಕೆ ಕಷ್ಟ ಅಂತ ದೊಡ್ಡ ನಾಯಿಗಳನ್ನು ಸಾಕೋದು ನಿಲ್ಲಿಸಿ,
ಡ್ಯಾಶ್ ಹೌಂಡ್ ಥರದ ಸಣ್ಣ ನಾಯಿಗಳನ್ನು ಸಾಕೋಕೆ ಶುರುಮಾಡಿದ್ದೇವೆ. ಮಲೆನಾಡಿನಲ್ಲಿ
ಪಶುಸಂಗೋಪನೆ ಕ್ಷೀಣಿಸುತ್ತಿರುವ ಈ ಸಂಧರ್ಭದಲ್ಲಿ, ಅರಸ್ ಎಂಥಹಾ
ಕ್ರಾಂತಿ ಮಾಡುತ್ತಿದ್ದಾರೆ ಅಂತ ಅನ್ನಿಸಿತು.
ಸಮಾಧಾನದ ವಿಷಯವೆಂದರೆ, ಅವರ
ಈ ಕ್ರಾಂತಿ ಗುರುತಿಸದೇ ಹೋಗಿಲ್ಲಿ. ಕರ್ನಾಟಕದಲ್ಲಷ್ಟೇ ಅಲ್ಲ, ಆಂದ್ರ ಪ್ರದೇಶದಲ್ಲೂ ಅವರ ಪ್ರತಿಭೆಯನ್ನು
ಗುರುತಿಸಿದ್ದಾರೆ. ಹೋದ ವರ್ಷ, ಕನ್ನಡ ಪ್ರಭ-ಸುವರ್ಣ ನ್ಯೂಸ್ ಕೊಡುವ `ಅಸಮಾನ್ಯ ಕನ್ನಡಿಗ’ ಪ್ರಶಸ್ತಿ
ಕೂಡ ಇವರ ಪಾಲಾಯಿತು.
ನನಗೆ ಅದಕ್ಕಿಂತ ಖುಷಿ ಕೊಟ್ಟಿದ್ದು,
ಅವರ ಆಹ್ವಾನ ಪತ್ರಿಕೆ.
ಮಾಕೋನಹಳ್ಳಿ
ವಿನಯ್ ಮಾಧವ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ