ಸದ್ದಾಂ ಬಾಂಬಲ್ಲ…. ಬೆಂಗಳೂರು ಟ್ರಾಫಿಕ್
`ವಿನು…
ಡಾ. ಕುಮಾರಸ್ವಾಮಿಯವರ ಬರ್ತ್ ಡೇ. ನಂದಿನಿ ಡಾಕ್ಟರ್ ಹೇಳಿದ್ರು, ಪ್ರಕಾಶ್ ಕಫೆಯಲ್ಲಿ ಮಾಡ್ತಾರಂತೆ,’
ಅಂತ ಅಂಬಿಕಾ ಹೇಳ್ದಾಗ, `ಎಷ್ಟು ವರ್ಷ?’ ಅಂತ ಕೇಳ್ದೆ.
`61
ಆಯ್ತಂತೆ. ಅವರ ರಿಲೇಟಿವ್ಸ್ ನೆಲ್ಲ ಕರ್ದಿದ್ದಾರೆ. ಅವತ್ತು ಸ್ವಲ್ಪ ಬೇಗ ಆಫೀಸಿಂದ ಬರ್ತಿರಾ?’ ಅಂತ
ಕೇಳಿದ್ಲು.
ಇಲ್ಲೇ
ಚಾಮರಾಜಪೇಟೆಲೇ ಇರೋದಲ್ವಾ? ನೀವೆಲ್ಲ ಹೋಗಿರಿ. ನಾನು ಬರ್ತೀನಿ,’ ಅಂದೆ.
ಡಾ.
ಕುಮಾರಸ್ವಾಮಿಗೆ 61 ವರ್ಷ…. ಆದ್ರೆ ಹೋದ ನಾಲ್ಕು ವರ್ಷಗಳಲ್ಲಿ ಏನೆಲ್ಲಾ ಆಗ್ಹೋಯ್ತು, ಅಂದ್ಕೊಂಡೆ.
ಯಾಕೋ ಹೋಗಿ ಅವರನ್ನ ಮಾತಾಡಿಸ್ಬೇಕು ಅಂದ್ಕೊಂಡೆ…. ಬರ್ತ್ ಡೇಲಿ ನೋಡ್ಬಹುದಲ್ಲಾ, ಆಮೇಲ್ಯಾವತ್ತಾದ್ರೂ
ಹೋದ್ರಾಯ್ತು, ಅಂದ್ಕೊಂಡೆ.
ಬರ್ತ್
ಡೇ ದಿನ, ಡಾ. ಕುಮಾರಸ್ವಾಮಿಯವರು ಶೇರ್ವಾನಿ, ತಲೆಗೊಂದು ಮೈಸೂರು ಪೇಟ ಹಾಕ್ಕೊಂಡು, ನಂದಿನಿ ಡಾಕ್ಟರ್
ಮತ್ತು ಮಗ ಕರಣ್ ಸಹಾಯದಿಂದ ಕೇಕ್ ಇಟ್ಟ ಟೇಬಲ್ ಕಡೆಗೆ ಬಂದರು. ಕೇಕ್ ಕೂಡ ಒಂದು ಕಾರಿನ ಆಕಾರದಲ್ಲಿ
ಮಾಡಿಸಿದ್ದರು. ಕೇಕ್ ಕತ್ತರಿಸಿ ಕೂತ ಡಾ.ಕುಮಾರಸ್ವಾಮಿಯವರನ್ನು ವಿಷ್ ಮಾಡೋಕೆ ಹೋದಾಗ, ತಮ್ಮ ಎಡಗೈನಲ್ಲಿ
ನನ್ನ ಕೈ ಹಿಡ್ಕೊಂಡು, ನಗುತ್ತಾ, `ಬಂದದ್ದಕ್ಕೆ ಥ್ಯಾಂಕ್ಸ್’ ಎನ್ನುವಂತೆ ಕೀರಲು ಧ್ವನಿ ಹೊರಡಿಸಿದಾಗ,
ನನಗೆ ಪಿಚ್ಚೆನಿಸಿತು.
ನಾನು
ಮೊದಲ ಸಲ ಡಾ.ಕುಮಾರಸ್ವಾಮಿಯವರನ್ನು ನೋಡಿದ್ದು ಮದುವೆಯಾದ ಹೊಸತರಲ್ಲಿ. ಕೌಬಾಯ್ ಟೋಪಿ ಹಾಕ್ಕೊಂಡು,
ಹಳೇ ಕಾಲದ ಸಿಟ್ರಾನ್ ಕಾರಿನಲ್ಲಿ, ಚಾಮರಾಜಪೇಟೆಯ ನಮ್ಮ ಮಾವನ ಮನೆ ಹತ್ತಿರದ ಸ್ವಸ್ತಿಕ್ ಆಸ್ಪತ್ರೆಯ
ಮುಂದೆ ನಿಲ್ಲಿಸಿದರು. ಅವರ ಹೂಗಳಿದ್ದ ಬಣ್ಣ ಬಣ್ಣದ ಶರ್ಟ್ ಮತ್ತೆ ಅವರ ಬಣ್ಣ ನೋಡಿ, ಯಾರೋ ಆಂಗ್ಲೋ
ಇಂಡಿಯನ್ ಇರಬೇಕು ಅನ್ಕೊಂಡೆ.
ಸ್ವಲ್ಪ
ದಿನಗಳು ಕಳೆದ ಮೇಲೆ, ನಾನು ಮೊದಲು ನೋಡಿದ ಸಿಟ್ರಾನ್ ಕಾರ್ ಅಲ್ಲದೆ, ಇನ್ನೂ ಮೂರ್ನಾಲ್ಕು ಹಳೇ ಕಾರುಗಳಲ್ಲಿ
ಅವರು ಬರುವುದನ್ನು ನೋಡಿದಾಗ, ಇವರಿಗೆ ವಿಂಟೇಜ್ ಕಾರು ಹುಚ್ಚಿದೆ ಅನ್ನಿಸಿತ್ತು. ಸ್ವಸ್ತಿಕ್ ಆಸ್ಪತ್ರೆಯಲ್ಲಿ
ಹೆಚ್ಚೇನೂ ರೋಗಿಗಳು ಬರುವುದನ್ನು ನಾನು ನೋಡಿರಲಿಲ್ಲ. ಅದಕ್ಕೆ ಅವರೇನೂ ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ.
ಒಂದೆರೆಡು
ವರ್ಷ, ಅವರನ್ನು ನಾನು ಕಾರಿನಿಂದಲೇ ಗುರುತಿಸುತ್ತಿದ್ದೆ. ಯಾವತ್ತೂ ಭೇಟಿಯಾಗಿರಲಿಲ್ಲ. ಸೃಷ್ಟಿ ಹುಟ್ಟಿದ
ಮೇಲೆ, ಅಂಬಿಕಾ ಅವಳದೇ ಡೆಂಟಲ್ ಕ್ಲಿನಿಕ್ ತೆಗೆದಾಗ, ಅದರ ಮೊದಲನೇ ದಿನ ಡಾ.ಕುಮಾರಸ್ವಾಮಿ ಮತ್ತು
ನಂದಿನಿ ಡಾಕ್ಟರ್ ರನ್ನೂ ಕರೆದಿದ್ದರು. ಮೊದಲನೇ ಭೇಟಿಯಲ್ಲೇ ಇವರು ತುಂಬಾ ಮಾತಾಡ್ತಾರೆ ಅನ್ನಿಸಿತು.
ಮಾತಿನ ಮಧ್ಯದಲ್ಲಿ ಅವರ ಕಾರುಗಳ ಬಗ್ಗೆ ಕೇಳಿದೆ. ಆಗ ಗೊತ್ತಾಯ್ತು… ಅವರ ಹತ್ತಿರ ಐದು ವಿಂಟೇಜ್ ಕಾರುಗಳು
ಇವೆ ಅಂತ.
ಡಾ.ಕುಮಾರಸ್ವಾಮಿ
ಮತ್ತು ನಂದಿನಿ ಡಾಕ್ಟರ್, 1985ರಲ್ಲಿ ಕುವೈತ್ ಗೆ ಹೋಗಿ ಕೆಲಸಕ್ಕೆ ಸೇರಿದ್ದರು. ಅವರ ಮಗ ಕರಣ್ ಹುಟ್ಟಿದ್ದು
ಕೂಡ ಅಲ್ಲಿ. ಎಲ್ಲವೂ ಚೆನ್ನಾಗಿಯೇ ನೆಡೆಯಿತು…. 1990ರಲ್ಲಿ ಸದ್ದಾಂ ಹುಸೇನ್ ಕುವೈತ್ ಆಕ್ರಮಿಸುವವರೆಗೆ.
ರಾತ್ರಿ ಬೆಳಗಾಗುವುದರೊಳಗೆ ಜೀವನ ಶೈಲಿಯೇ ಬದಲಾಗಿ ಹೋಯ್ತು.
ಗಂಡ-ಹೆಂಡತಿ
ಇಬ್ಬರೂ ಡಾಕ್ಟರ್ ಗಳಾದ್ದರಿಂದ, ಇವರಿಗೇನೂ ಅಂತಾ ತೊಂದರೆಯಾಗಲಿಲ್ಲ. ಆದರೂ, ಕರಣ್ ಚಿಕ್ಕ ಮಗು, ಮತ್ತೆ
ಮಿಲಿಟರಿ ಆಡಳಿತದಲ್ಲಿ ಮುಂದೇನು? ಅನ್ನೋದು ಇವರಿಗೂ ಆತಂಕವಾಗಿತ್ತು. ವಿದೇಶದಿಂದ ಬಂದವರೆಲ್ಲಾ ಅವರವರ
ದೇಶಗಳಿಗೆ ಹೊರಡುತ್ತಿದ್ದರು. ಹಾಗೆ ಹೊರಡಲು ಇರಾಕ್ ಸರ್ಕಾರದ ಅನುಮತಿ ಪಡೆಯಬೇಕಿತ್ತು. ಇವರಿಬ್ಬರೂ ಡಾಕ್ಟರ್ ಗಳಾದ್ದರಿಂದ, ಇವರಿಗೆ ಅನುಮತಿ ಕೊನೆಗೆ
ಸಿಗುವುದು ಅಂತ ಗ್ಯಾರಂಟಿಯಾಯ್ತು.
ಒಂದೆರೆಡು
ತಿಂಗಳು ಕಳೆದಿರಬಹುದು… ಅವರ ಅಕ್ಕ, ಪಕ್ಕದಲ್ಲಿದ್ದ ಪಾಕಿಸ್ತಾನ ಮೂಲದವರು, ತಾವು ತಮ್ಮ ದೇಶಕ್ಕೆ
ಕಾರಿನಲ್ಲಿ ಹೋಗುವುದಾಗಿ ಹೇಳಿದರು. ಕುತೂಹಲದಿಂದ, ಕಾರಿನಲ್ಲಿ ಪಾಕಿಸ್ತಾನ ತಲುಪುವುದು ಹೇಗೆ ಅಂತ
ವಿಷಯ ತಿಳಿದುಕೊಂಡರು. ಆಗಲೇ ಇಬ್ಬರಿಗೂ ಹೊಳೆದಿದ್ದು: ಕುವೈತ್ ನಿಂದ ಪಾಕಿಸ್ತಾನಕ್ಕೆ ತಲುಪಬಹುದಾದರೆ,
ಭಾರತಕ್ಕೂ ತಲುಪಬಹುದು, ಅಂತ.
ಎರಡೇ
ದಿನಗಳಲ್ಲಿ ಪ್ರಯಾಣದ ತಯಾರಿ ನೆಡೆಸಿದರು. ಡಾ.ಕುಮಾರಸ್ವಾಮಿಯವರ ಅಣ್ಣನೂ ಅಲ್ಲೇ ಕುವೈತಿನಲ್ಲಿ ಇದ್ದರು.
ಎರಡೂ ಸಂಸಾರಗಳೂ, ತಮ್ಮ ಪ್ರಯಾಣಕ್ಕೆ ಎಷ್ಟು ಸಾಮಾನುಗಳು ಬೇಕೋ ಅಷ್ಟನ್ನು, ಇದೇ ಪುಟ್ಟ ಸಿಟ್ರಾನ್
ಕಾರಿನಲ್ಲಿ ಹಾಕಿಕೊಂಡು, ಪುಟ್ಟ ಕರಣ್ ನನ್ನೂ ತುಂಬಿಕೊಂಡು, ಹೊರಟರು.
ಕುವೈತ್
ದಾಟಿದ ತಕ್ಷಣ, ಇರಾಕ್ ದೇಶದ ಒಂದು ತುದಿಯಿಂದ, ಇನ್ನೊಂದು ತುದಿಯವರೆಗೆ ಡ್ರೈವ್ ಮಾಡಿಕೊಂಡು, ಇರಾನ್
ಪ್ರವೇಶಿಸಿ, ಆ ದೇಶದ ಒಂದು ತುದಿಯಿಂದ ಇನ್ನೊಂದು ತುದಿ ತಲುಪಿ, ಟರ್ಕಿಯ ಮುಖಾಂತರ ಪಾಕಿಸ್ತಾನವನ್ನೂ
ತಲುಪಿದರು. ಎಲ್ಲಾ ದೇಶಗಳಲ್ಲೂ ಅದೇ ಕಥೆ. ಹಗಲು ಹೊತ್ತಿನಲ್ಲಿ ಮಾತ್ರ ಡ್ರೈವ್ ಮಾಡುತ್ತಿದ್ದ ಇವರು,
ರಾತ್ರಿಯಾದ ತಕ್ಷಣ ಯಾವುದಾದರೂ ವಸತಿ ಗೃಹಗಳಲ್ಲಿ ಉಳಿದುಕೊಳ್ಳುತ್ತಿದ್ದರು. ವಾಘಾ ಗಡಿಯಲ್ಲಿ ಇವರನ್ನು
ಒಂದು ದಿನ ಕಾಯಿಸಲಾಯಿತು. ಅಲ್ಲಿಂದ ದೆಹಲಿಗೆ ತಲುಪುವಾಗ, ಅವರು 20 ದಿನಗಳ ಕಾಲ ಪ್ರಯಾಣ ಮಾಡಿದ್ದರು.
ಇನ್ನೂ ಹತ್ತು ದಿನ ಡ್ರೈವ್ ಮಾಡಿಕೊಂಡು, ಡಾ.ಕುಮಾರಸ್ವಾಮಿಯವರ ಹುಟ್ಟೂರಾದ ಗುಲ್ಬರ್ಗ ತಲುಪಿದ್ದರು.
ಕುವೈತ್
ನಲ್ಲಿ ಪರಿಸ್ಥಿತಿ ಸುಧಾರಿಸುವವರೆಗೆ ಭಾರತದಲ್ಲೇ ಇದ್ದ ಡಾ.ಕುಮಾರಸ್ವಾಮಿಯವರು, ಬೆಂಗಳೂರಿನಲ್ಲಿ
ಕೆಲವು ಆಸ್ತಿಗಳನ್ನೂ ಖರೀದಿಸಿದ್ದರು. ಅಲ್ಲಿಂದ ಮತ್ತೆ ಕುವೈತ್ ಗೆ ಹೋದಾಗ, ಅವರಿಗೆ ಆಶ್ಚರ್ಯ ಕಾಯ್ದಿತ್ತು.
ಅವರು ಮನೆಯನ್ನು ಯಾವ ಪರಿಸ್ಥಿತಿಯಲ್ಲಿ ಬಿಟ್ಟು ಹೋಗಿದ್ದರೋ, ಅದೇ ಪರಿಸ್ಥಿತಿಯಲ್ಲಿ ಇತ್ತು. ಇನ್ನೂ
ಕೆಲವು ವರ್ಷ ಅಲ್ಲಿದ್ದವರು, ಕರಣ್ ಓದಿಗಾಗಿ ಬೆಂಗಳೂರಿಗೆ ವಾಪಾಸ್ ಬಂದರು. ಆಗಲೇ ಅವರು ಶುರು ಮಾಡಿದ್ದು ಸ್ವಸ್ತಿಕ್ ಆಸ್ಪತ್ರೆ.
2008ರ
ಮೇ ತಿಂಗಳಲ್ಲಿ ನಾನು ತುಂಬಾನೇ ಬ್ಯಸಿಯಾಗಿದ್ದೆ. ಅಂಬಿಕಾಳ ತಮ್ಮ ಬಾಬುವಿನ ಮದುವೆ ನಿಶ್ಚಯವಾಗಿತ್ತು.
ನನ್ನ ಮಾವ ಬೇರೆ ತೀರಿಹೋಗಿದ್ದ ಕಾರಣ, ನನ್ನ ತಲೆಮೇಲೆ ಜವಾಬ್ದಾರಿ ಹೆಚ್ಚಿತ್ತು. ಆಗಲೇ ಮಧ್ಯದಲ್ಲಿ
ಅನಾಹುತವಾಗಿ ಹೋಗಿತ್ತು.
ಅವತ್ತೊಂದು
ದಿನ, ಇದ್ದಕ್ಕಿದ್ದಂತೆ ಜೋರಾಗಿ ಮಳೆ ಶುರುವಾಯ್ತಂತೆ. ಡಾ.ಕುಮಾರಸ್ವಾಮಿ, ಕರಣ್ ನನ್ನು ಕರ್ಕೊಂಡು,
ರಸ್ತೆಯ ಆಚೆ ಬದಿ ನಿಲ್ಲಿಸಿದ್ದ ತಮ್ಮ ಸಿಟ್ರಾನ್ ಕಾರ್ ಗೆ ಕವರ್ ಹಾಕಲು ರಸ್ತೆ ದಾಟಲು ಹೊರಟಿದ್ದಾರೆ.
ಎಲ್ಲಿಂದಲೋ ನುಗ್ಗಿದ ಬೈಕ್ ಬಂದು, ಡಾ.ಕುಮಾರಸ್ವಾಮಿಯವರಿಗೆ ಡಿಕ್ಕಿ ಹೊಡೆದು, ಅವರು ರಸ್ತೆಗೆ ಬಿದ್ದಿದ್ದಾರೆ.
ಹೆಡ್ ಇಂಜ್ಯುರಿ!
ಮುಂದೆ
ಸುಮಾರು ಮೂರು ತಿಂಗಳ ಕಾಲ ಆಸ್ಪತ್ರೆಯಲ್ಲೇ ಕಾಲ ಕಳೆದಿದ್ದಾರೆ. ತಲೆಯ ಒಂದು ಭಾಗದಲ್ಲಿ ರಕ್ತ ಹೆಪ್ಪುಗಟ್ಟಿ,
ದೇಹದ ಒಂದು ಭಾಗಕ್ಕೆ ಪಾರ್ಶ್ವವಾಯು ಹೊಡೆದಿದೆ. ಇವರು ಜೀವನವಿಡೀ ಹಾಸಿಗೆ ಬಿಟ್ಟು ಏಳುವಂತಿಲ್ಲ ಅಂತ
ಡಾಕ್ಟರ್ ಹೇಳಿದ್ದಾರೆ.
ಇಂತಹ
ಸಂಧರ್ಭದಲ್ಲಿ, ನಂದಿನಿ ಡಾಕ್ಟರ್ ಏಕಾಏಕಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಡಾ.ಕುಮಾರಸ್ವಾಮಿಯವರನ್ನು
ತಮ್ಮ ಸ್ವಸ್ತಿಕ್ ಆಸ್ಪತ್ರೆಗೆ ಸೇರಿಸಿ, ತಾವೇ ನೋಡಿಕೊಳ್ಳುತ್ತೇವೆ ಅಂದಿದ್ದಾರೆ. ಅದಕ್ಕೆ ಅವರ ಬಂಧುಗಳೆಲ್ಲ
ವಿರೋದಿಸಿದರೂ, ನಂದಿನಿ ಡಾಕ್ಟರ್ ಒಪ್ಪಿಲ್ಲ. ಈ ವಿಷಯ ಅಂಬಿಕಾ ನನಗೆ ಹೇಳಿದಾಗ ನಾನೇ ಹೇಳಿದ್ದೆ:
`ಕಷ್ಟ ಆಗುತ್ತೆ ಅಂತ ಕಾಣುತ್ತೆ. ಈ ಆಸ್ಪತ್ರೆಲಿ ಬೇರೆ ಅಷ್ಟೊಂದು ಅನುಕೂಲಗಳಿಲ್ಲ,’ ಅಂತ. `ಆದ್ರೂ,
ಅವರವರಿಗೆ ಅವರ ಅನುಕೂಲ ಏನೂಂತ ಗೊತ್ತಿರುತ್ತೆ. ಕರಣ್ ಬೇರೆ ಇನ್ನೊಂದೆರೆಡು ವರ್ಷದಲ್ಲಿ ಡಾಕ್ಟರ್
ಆಗ್ತಾನೆ. ಅವರ ಪ್ಲಾನ್ ಏನಿದೆ ನಮಗೇನು ಗೊತ್ತು,’ ಅಂತಾನೂ ಸೇರಿಸಿದ್ದೆ.
ಅಲ್ಲಿಂದ
ಮುಂದೆ ನಂದಿನಿ ಡಾಕ್ಟರ್ ಮತ್ತು ಅಂಬಿಕಾಳ ಒಡನಾಟ ಜಾಸ್ತಿಯಾಯ್ತು. ಆಗೊಮ್ಮೆ, ಈಗೊಮ್ಮೆ ಡಾ.ಕುಮಾರಸ್ವಾಮಿಯವರ
ಫಿಸಿಯೋಥೆರಪಿ ಬಗ್ಗೆ ಮಾತಾಡ್ತಾ ಇದ್ಲು. ನಾನೂ ಮಧ್ಯದಲ್ಲಿ ಒಂದೆರೆಡು ಸಲ ಆಸ್ಪತ್ರೆಗೆ ಹೋಗಿದ್ದೆ.
ಆದರೆ, ಮೇಲಿನ ಮಹಡಿಯಲ್ಲಿದ್ದ ಡಾ.ಕುಮಾರಸ್ವಾಮಿಯವರನ್ನು ನೋಡಿರಲಿಲ್ಲ.
ನಂದಿನಿ
ಡಾಕ್ಟರ್, ಡಾ.ಕುಮಾರಸ್ವಾಮಿಯವರ ಎಲ್ಲಾ ವಸ್ತುಗಳನ್ನೂ ತೋರಿಸಿದರು. ದಂಗಾಗಿ ಹೋಗಿದ್ದೆ. ಬರೀ ಐದು
ಕಾರುಗಳಲ್ಲ. ಅದನ್ನು ಬಿಟ್ಟು ಸೂಟ್ ಕೇಸಿನಲ್ಲಿ ಮಡಚಿ ಇಟ್ಟುಕೊಳ್ಳಬಹುದಾದ ಸೈಕಲ್, ಮೊಪೆಡ್, ಯೂರೋಪ್
ಮತ್ತು ಅಮೆರಿಕಾಗೆ ಹೋದಾಗ ತಂದು ಇಟ್ಟುಕೊಂಡಿದ್ದ ಏನೇನೋ ವಿಶೇಷವಾದ ಸಾಮಾನುಗಳಿದ್ದವು. ಅವರಿಗೆ ಜೀವನದಲ್ಲಿ
ಇದ್ದ ಆಸಕ್ತಿಯನ್ನು ನೋಡಿ ಅಸೂಯೆಯಾಯ್ತು ಅಂದರೂ ತಪ್ಪೇನಲ್ಲ. ಸದ್ದಾಂ ಬಾಂಬಿಗೂ ಕರಗದ ಈ ಚೈತನ್ಯವನ್ನು
ಬೆಂಗಳೂರು ಟ್ರಾಫಿಕ್ ಉಡುಗಿಸಿತ್ತು.
ಒಂದು
ವರ್ಷವೇ ಕಳೆದಿರಬಹುದು. ಒಂದು ದಿನ ಅಂಬಿಕಾ ಒಳ್ಳೆ ಮೂಡಲ್ಲಿದ್ದಾಳೆ ಅನ್ನಿಸ್ತು. ಸ್ವಲ್ಪ ಹೊತ್ತಿನ
ನಂತರ ಅವಳೇ ಹೇಳೋಕೆ ಶುರು ಮಾಡಿದ್ಲು. `ವಿನು, ಗೊತ್ತಾ. ಡಾ.ಕುಮಾರಸ್ವಾಮಿ ಇದ್ದಾರಲ್ಲ, ಈಗ ಅವರ
ಕೆಲಸ ಅವರೇ ಮಾಡ್ಕೊಳ್ಳೋಕೆ ಶುರು ಮಾಡಿದ್ದಾರೆ. ಹಾಗೆ, ಏನಾದ್ರೂ ಹೇಳ್ಬೇಕೂ ಅಂದ್ರೆ, ಬರೆದು ತೋರಿಸ್ತಾರೆ.
ನಾವು ಹೇಳೋದೆಲ್ಲಾ ಅರ್ಥ ಆಗ್ತದೆ ಅವರಿಗೆ,’ ಅಂದ್ಲು.
`ಏನು?
ಮ್ಯಾಜಿಕ್ ಆಯ್ತಾ?’ ಅಂತ ತಮಾಶೆ ಮಾಡ್ದೆ.
`ಇಲ್ಲ
ವಿನೂ… ಇಷ್ಟು ದಿನ ಫೀಸಿಯೋಥೆರಪಿ ಮಾಡಿದ್ರಲ್ಲಾ? ಡಾ.ಕುಮಾರಸ್ವಾಮಿ ಸಹ ತುಂಬಾನೆ ಕೋ ಆಪರೇಟ್ ಮಾಡಿ,
ಟ್ರೈ ಮಾಡಿದ್ರು. ನೋಡೋಕೆ ಖುಷಿಯಾಗುತ್ತೆ,’ ಅಂದ್ಲು. ನಂದಿನಿ ಡಾಕ್ಟರ್ ಬಗ್ಗೆ ಹೆಮ್ಮೆ ಎನ್ನಿಸತೊಡಗಿತ್ತು.
ನಂಗೂ ಹೋಗಿ ಅವರನ್ನು ನೋಡ್ಬೇಕು ಅನ್ನಿಸಿದ್ರೂ, ಹೋಗೋಕೆ ಆಗಿರ್ಲಿಲ್ಲ.
ಈ
ಮಧ್ಯ, ನಂದಿನಿ ಡಾಕ್ಟರ್ ಬೇರೆ ಸೃಷ್ಟಿನ ತುಂಬಾ ಹಚ್ಚಿಕೊಳ್ಳೋಕೆ ಶುರು ಮಾಡಿದ್ರು. ಅವಳಿಗೆ ಮ್ಯಾತ್ಸ್
ಕಷ್ಟ ಅಂತ, ಅದಕ್ಕೆ ಟ್ಯೂಶನ್ ಬೇರೆ ಕೊಡೋಕೆ ಶುರು ಮಾಡಿದ್ರು. ಅಂಬಿಕಾಗೆ ಬೇರೆ ಒಂಥರಾ ಅಡ್ವೈಸರ್
ಆಗಿದ್ರು. ಬರ್ತ್ ಡೇ ದಿನ ಡಾ.ಕುಮಾರಸ್ವಾಮಿಯವರನ್ನು ನೋಡಿದಾಗ, ಅಂಬಿಕಾ ಹೇಳಿದ್ದು ಸರಿ ಅಂತ ಅನ್ನಿಸ್ತು.
ಬರ್ತ್
ಡೇ ಕಳೆದು ಸ್ವಲ್ಪ ದಿನ ಆದ ಮೇಲೆ ಡಾ.ಕುಮಾರಸ್ವಾಮಿಯವರನ್ನು ನೋಡಲು ಹೋಗಿದ್ದೆ. ಕೆಳಗಡೆ ರಿಸೆಪ್ಷನ್
ಹತ್ತಿರ ಒಬ್ಬರೇ ಕೋಲಿನ ಸಹಾಯದಲ್ಲಿ ನೆಡ್ಕೊಂಡು ಬರ್ತಿದ್ರು. ನನ್ನ ಮುಖ ನೋಡಿದ ತಕ್ಷಣ ನಕ್ಕು, ಸೋಫಾ
ಕಡೆಗೆ ಕರ್ಕೊಂಡು ಹೋದ್ರು. ತುಂಬಾ ಹೊತ್ತು ಇಬ್ಬರೂ ಮಾತಾಡ್ತಾ ಇದ್ದೆವು. ಅವರಿಗೇನಾದ್ರು ಹೇಳಬೇಕಿದ್ರೆ,
ಪೇಪರ್ ಮೇಲೆ ಎಡಗೈನಿಂದ ಬರೆಯಲು ಪ್ರಯತ್ನ ಮಾಡ್ತಿದ್ರು. ಅದು ಸ್ವಲ್ಪ ಅಸ್ಪಷ್ಟವಾದ್ರೂ ಸಹ, ಮಾತು
ಮುಂದುವರೆಸಲು ಸಹಾಯವಾಗುತ್ತಿತ್ತು.
ಮಾತಿನ
ಮಧ್ಯ ನಂದಿನಿ ಡಾಕ್ಟರ್ ಸಹ ಸೇರಿಕೊಂಡ್ರು. ಡಾ.ಕುಮಾರಸ್ವಾಮಿಯವರ ವಸ್ತು ಸಂಗ್ರಹದ ಬಗ್ಗೆ ಮಾತು ಹೊರಳಿತು.
`ನಾವು ಕುವೈತ್ ನಿಂದ ಡ್ರೈವ್ ಮಾಡಿಕೊಂಡು ಬಂದ ಕಾರು ಬಿಟ್ಟು, ಇನ್ನೆಲ್ಲಾ ಹಳೇ ಕಾರುಗಳನ್ನು ಮಾರಿಬಿಟ್ಟೆ.
ಕುಮಾರ್ ಸರಿ ಇದ್ದಾಗ, ಅವರು ನೋಡ್ಕೊಳ್ತಿದ್ರು. ಈಗ ದಿನಾ ಅದನ್ನ ಸ್ಟಾರ್ಟ್ ಮಾಡಿ, ಮೇಂಟೇನ್ ಮಾಡೋಕೆ
ಯಾರೂ ಇಲ್ಲ. ಕರಣ್ ಬೇರೆ ಕೊಯಮತ್ತೂರಿನಲ್ಲಿ ಓದ್ತಿದ್ದಾನೆ. ಅವನು ವಾಪಾಸ್ ಬರ್ತಾನೋ ಇಲ್ವೋ. ಬಂದ್ರೂ,
ಇವನ್ನ ಮೆಂಟೇನ್ ಮಾಡೋಕೆ ಇಂಟರೆಸ್ಟ್ ಇರುತ್ತೋ ಇಲ್ವೋ,’ ಅಂದ್ರು ನಂದಿನಿ ಡಾಕ್ಟರ್.
ಜೀವನದಲ್ಲಿ
ಚಿಕ್ಕ ಘಟನೆ ಏನಾದ್ರು ನೆಡೆದರೆ, ಇಡೀ ಪ್ರಪಂಚವನ್ನ ಮತ್ತೆ ದೇವರು, ಹಣೆ ಬರಹಗಳನ್ನು ದೂಷಿಸುತ್ತಾ
ಕೂರುವ ಜನಗಳ ಮಧ್ಯ, ಈ ಇಬ್ಬರು ಡಾಕ್ಟರ್ ಗಳನ್ನು ಎಲ್ಲಿಡಬೇಕು ಅಂತ ಗೊತ್ತಾಗಲಿಲ್ಲ.
ಮಾಕೋನಹಳ್ಳಿ
ವಿನಯ್ ಮಾಧವ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ