ಶನಿವಾರ, ಡಿಸೆಂಬರ್ 31, 2011

ಶ್ರೀಲಂಕಾ


ಸ್ಟೆನ್ ಗನ್ ಮತ್ತು ರಷ್ಯನ್ ಹುಡುಗಿಯರು…





ಯಾಕೊ ಶಿವಾನಂದ ವೃತ್ತದಲ್ಲಿ ಸಿಗ್ನಲ್ ತುಂಬಾ ಹೊತ್ತು ನಿಂತಿತ್ತು. ಹಾಗೇ, ಸುತ್ತಲೂ ಇದ್ದ ಒಂದೊಂದೇ ಬೋರ್ಡ್ ಗಳನ್ನು ಓದುತ್ತಿದ್ದೆ. `ಶ್ರೀಲಂಕಾದಲ್ಲಿ, ಮೂರು ದಿನ ಮತ್ತು ಎರಡು ರಾತ್ರಿಗೆ ಬರೀ 11 ಸಾವಿರ’ ಅಂತ ದೊಡ್ಡದಾದ ಬೋರ್ಡ್ ಕಾಣಿಸಿತು.
2006ನೇ ಇಸವಿ ಮುಗಿಯಲು ಇನ್ನು ಹದಿನೈದು ದಿನ ಬಾಕಿ ಇತ್ತು. ಹಾಗೇ ಫೋನ್ ಎತ್ತಿ ಅಂಬಿಕಾಗೆ ಫೋನ್ ಮಾಡಿ ಕೇಳಿದೆ: `ಹೊಸ ವರ್ಷಕ್ಕೆ ಶ್ರೀಲಂಕಾಗೆ ಹೋಗೋಣ್ವಾ?’. ಮೊದಲು ತಮಾಷೆ ಅನ್ಕೊಂಡವಳು, ಬೋರ್ಡ್ ಬಗ್ಗೆ ಹೇಳಿದಾಗ, `ಜೊತೆಗ್ಯಾರು ಬರ್ತಿದ್ದಾರೆ?’ ಅಂತ ಕೇಳಿದಳು.
ಅಲ್ಲೀವರೆಗೆ, ನಾನೂ ಯೋಚನೆ ಮಾಡಿರ್ಲಿಲ್ಲ. ಸರಿ, ನನ್ನ ಹೈಸ್ಕೂಲ್ ಗೆಳೆಯ ಮತ್ತು ಎವರ್ ಗ್ರೀನ್ ಬ್ಯಾಚೆಲರ್ ವಿನೋದ್ ಗೆ ಫೋನ್ ಮಾಡಿದೆ. ಹಾಗೇನೆ, ಎಲ್ಲಾದಕ್ಕೂ `ಆಗೊಲ್ಲ’ ಅಂತ ಶುರುಮಾಡುವ ಅಮರೇಶ್ ದಾಸಪ್ಪ ಮತ್ತು ಅವನ ಹೆಂಡತಿ ಸೌಮ್ಯಳನ್ನೂ ಹೊರಡಿಸಿದೆ.
ಲಂಕೆಯನ್ನು ತಲುಪಿದ ತಕ್ಷಣ ಮಾಡಿದ ಮೊದಲ ಕೆಲಸ ಎಂದರೆ, ವಿಮಾನ ನಿಲ್ದಾಣದಲ್ಲಿದ್ದ ಸುಂಕರಹಿತ ಮಾಲ್ ನಲ್ಲಿ ಸುತ್ತಾಡಿದ್ದು. ನಾವು ಮೂವರೂ ವೈನ್ ಶಾಪ್ ನಲ್ಲಿ ತುಂಬಾನೇ ಬ್ಯುಸಿಯಾಗಿದ್ದ ಕಾರಣ ಅಂಬಿಕಾ ಮತ್ತು ಸೌಮ್ಯ ಅವರ ದಾರಿ ನೋಡಿಕೊಂಡರು. ಎರಡು ಗಂಟೆ ಬಿಟ್ಟು ನಾವೆಲ್ಲಾ ಕೆಳಗೆ ಬಂದು ನಮ್ಮ ನಮ್ಮ ಬ್ಯಾಗ್ ತಗೊಳ್ಳೋಕೆ ಬಂದೆವು. ಅಮರೇಶ್ ದಾಸನ ಬ್ಯಾಗ್ ಮಾತ್ರ ನಾಪತ್ತೆ. ಹೆಚ್ಚು ಕಡಿಮೆ ಒಂದು ಗಂಟೆ ಹುಡುಕಿದ ಮೇಲೆ, ಅಮರೇಶನ ಬ್ಯಾಗ್ ನಂತೆ ಕಾಣುವ ಇನ್ನೊಂದು ಬ್ಯಾಗ್ ಅಲ್ಲಿತ್ತು. ಯಾಕೋ ಅನುಮಾನ ಬಂದು ವಿಚಾರಿಸಿದರೆ, ನನ್ನ ಅನುಮಾನ ಸರಿಯಾಗೇ ಇತ್ತು. ಯಾರೋ ಅಮರೇಶನ ಬ್ಯಾಗನ್ನು ತೆಗೆದುಕೊಂಡು, ಅವರದನ್ನು ಬಿಟ್ಟು ಹೋಗಿದ್ದರು. ಸರಿ, ನಿಲ್ದಾಣದವರಿಗೆ ನಮ್ಮ ಹೋಟೆಲ್ ನ ವಿವರಗಳನ್ನು ಕೊಟ್ಟು, ಹೊರಟೆವು.
ಮಾರನೇ ದಿನ ಬೆಳಗ್ಗೆ, ಎಲ್ಲರ ಸ್ನಾನವಾದರೂ ಅಮರೇಶ ಮಾತ್ರ ಹಾಸಿಗೆ ಮೇಲೇ ಕೂತಿದ್ದ. `ಏನೋ? ಅಂಡರ್ ವೇರ್ ಸಾಲ ಬೇಕಾ ಸ್ನಾನ ಮಾಡೋಕೆ?’ ಅಂತ ನಾವು ತಮಾಶೆ ಮಾಡುತ್ತಿರುವಾಗಲೇ, ಬ್ಯಾಗ್ ತೆಗೆದುಕೊಂಡು ಹೋಗಿದ್ದವರು ಬಂದು, ಕ್ಷೆಮೆ ಕೇಳಿ, ಬ್ಯಾಗನ್ನು ವಾಪಾಸ್ ಕೊಟ್ಟು ಹೋದರು.
ಆ ದಿನವಿಡೀ ನಾವು ಕೊಲಂಬೋ ನಗರವನ್ನು ಸಿಟಿ ಬಸ್ನಲ್ಲಿ ಸುತ್ತಾಡಿದೆವು. ನಮಗೆ ತಿಳಿದದ್ದಿಷ್ಟು. ಶ್ರೀಲಂಕಾ ಜನಗಳು, ತಮ್ಮ ದೇಶವನ್ನು ತುಂಬಾ ಶುಚಿಯಾಗಿಡುತ್ತಾರೆ. ತುಂಬಾ ಮೃದುಭಾಷಿಗಳು. ನೆಡೆದುಕೊಂಡು ಹೋಗುವಾಗ, ಯಾವುದೇ ಕಾರಣದಿಂದ ನಾವು ರಸ್ತೆಗೆ ಇಳಿದರೆ, ಎಲ್ಲಾ ಕಡೆಗಳಿಂದ ಬರುವ ವಾಹನಗಳೂ ನಿಲ್ಲುತ್ತವೆ. ಯಾವುದೇ ಚಾಲಕರ ಮುಖದಲ್ಲಿ ಅಸಹನೆ ಇರುವುದಿಲ್ಲ. ನಗುತ್ತಲೇ, `ರಸ್ತೆ ದಾಟಿ’ ಎಂಬಂತೆ ಕೈ ತೋರಿಸುತ್ತಾರೆ. ಇವೆಲ್ಲಾ ನಮ್ಮ ದೇಶದಲ್ಲಿ ಸಾಧ್ಯವಿಲ್ಲ.
ಸಾಯಂಕಾಲದ ಹೊತ್ತಿಗೆ, ನನಗೆ ಲಂಕನ್ನರು ತುಂಬಾ ಇಷ್ಟವಾಗತೊಡಗಿದರು. ನಾವಿದ್ದ ಹೋಟೆಲ್ ಗಲಧರಿ ಸಮುದ್ರ ತೀರದಲ್ಲೇನೊ ಇತ್ತು. ಅದರ ಎದುರಿನಲ್ಲಿದ್ದಿದ್ದು, ಶ್ರೀಲಂಕಾದ ಹಳೇ ಸಂಸತ್ ಭವನ. ಹಿಂದುಗಡೆ, ವಿಶ್ವ ವಾಣಿಜ್ಯ ಕೇಂದ್ರ ಮತ್ತು ಶ್ರೀಲಂಕಾ ರಿಸರ್ವ್ ಬ್ಯಾಂಕ್. ಸ್ವಲ್ಪ ಹಿಂದೆ ಹೋಗಿ ನೋಡಿದಾಗ ಗೊತ್ತಾಯ್ತು, ಅದು ಶ್ರೀಲಂಕಾದ ನೌಕಾನೆಲೆ ಅಂತ. ಸುತ್ತಾ ಮುತ್ತಾ ಹೋಟೆಲ್ ಗಳು ಇದ್ದರೂ, ಅದು ಮಿಲಿಟರಿಯ ಚಟುವಟಿಕೆ ಕೇಂದ್ರ ಅಂತ ಗೊತ್ತಾಯ್ತು. ಎಲ್ ಟಿ ಟಿ ಇ ಏನಾದರೂ ಕೊಲಂಬೋ ಮೇಲೆ ದಾಳಿ ನೆಡೆಸಿದರೆ, ಅದು ಇದೇ ಜಾಗವನ್ನು ಅಯ್ದುಕೊಳ್ಳುತ್ತದೆ ಅಂತ ನನ್ನ ಕ್ರೈಂ ರಿಪೋರ್ಟರ್ ಮನಸ್ಸು ಹೇಳಿತು.
ಸಾಯಂಕಾಲ ಹೋಟೆಲ್ ಗೆ ವಾಪಾಸ್ ಬಂದವರೇ, ಎಲ್ಲರೂ ಸುತ್ತಾಡಲು ಹೊರಟೆವು. ಹೊರಗೆ ಬಂದ ತಕ್ಷಣ, ನಾನು ಹಳೇ ಸಂಸತ್ ಭವನದ ಫೋಟೋ ತೆಗೆಯಲು ಹೊರಟೆ. `ಸರ್…ಸರ್..’ ಅಂತ ಯಾರೊ ಕರೆದ ಹಾಗಾಯಿತು. ನೋಡಿದರೆ, ಶ್ರೀಲಂಕಾದ ಪೋಲಿಸ್ ನಿಂತಿದ್ದ. ಸಿಂಹಳಿ ಭಾಷೆಯಲ್ಲಿ, ವಿನಮ್ರನಾಗಿ ಏನೋ ಹೇಳಿದ. `ನಾನು ಟೂರಿಸ್ಟ್. ನನಗೆ ನಿಮ್ಮ ಭಾಷೆ ಅರ್ಥವಾಗುವುದಿಲ್ಲ,’ ಅಂತ ನಗುತ್ತಲೇ ಇಂಗ್ಲಿಷ್ ನಲ್ಲಿ ಹೇಳಿದೆ.
`ಸೆಕ್ಯುರಿಟಿ ಝೋನ್ ಸರ್… ನೋ ಫೋಟೋಸ್,’ ಅಂತ ಇಂಗ್ಲಿಶ್ ನಲ್ಲಿ ಹೇಳಿದ. ಅವನ ವಿನಮ್ರತೆ ನೋಡಿ ದಂಗಾಗಿ ಹೋದೆ. ಮಾತು ಮಾತಿಗೆ ಕೂಗಾಡುವ ನಮ್ಮ ಪೋಲಿಸರ ನೆನಪಾಯ್ತು.
ಕೂಡಲೇ ಅವನ ಕ್ಷೆಮೆ ಕೇಳಿ, ಡಿಜಿಟಲ್ ಕ್ಯಾಮರಾದಲ್ಲಿದ್ದ ಫೋಟೋಗಳನ್ನು ಅವನ ಎದುರೇ ಅಳಿಸಿ ಹಾಕಿದೆ. ಸಮುದ್ರ ತೀರವನ್ನಂತೂ ತುಂಬಾನೆ ಶುಚಿಯಾಗಿಟ್ಟಿದ್ದರು. ಸಣ್ಣ ಅಂಗಡಿ ಮತ್ತು ಹೋಟೆಲ್ ಗಳಿಗಾಗಿ ಸಿಮೆಂಟಿನ ಕಟ್ಟೆ ಕಟ್ಟಿದ್ದರು. ಏನಾದರೂ ಎಸೆಯಬೇಕಿದ್ದರೆ, ಎಲ್ಲರೂ ಕಸದ ಬುಟ್ಟಿಗಳನ್ನು ಹುಡುಕಿ ಅದರಲ್ಲಿ ಹಾಕುತ್ತಿದ್ದರು. ಯಾರಾದರೂ ನೆಲದ ಮೇಲೆ ಎಸೆದರೆ, ಆ ಅಂಗಡಿಯವರೇ ಬಂದು, ಅವುಗಳನ್ನು ಹೆಕ್ಕಿ, ಕಸದ ಬುಟ್ಟಿಗೆ ಹಾಕುತ್ತಿದ್ದರು. ವರ್ಷದ ಕೊನೆಯಾದ್ದರಿಂದ ಜನಗಳೂ ಬಹಳಷ್ಟಿದ್ದರು.
ರೂಮಿಗೆ ಬರುವಾಗಲೇ ನಾವು ಹೊರಗಡೆಯಿಂದ ಊಟ ಕಟ್ಟಿಸಿಕೊಂಡು ಬಂದಿದ್ದೆವು. ನಾವು ಮೂರು ಜನ ಹುಡುಗರು ಒಂದು ಕೋಣೆಯಲ್ಲಿದ್ದರೆ, ಅಂಬಿಕಾ ಮತ್ತು ಸೌಮ್ಯ ಇನ್ನೊಂದು ಕೋಣೆಯಲ್ಲಿದ್ದರು. ಮೇಲುಗಡೆಗೆ ಬರುವಾಗಲೇ ಹುಡುಗಿಯರಿಬ್ಬರೂ ಕೆಳಗೆ ಡಿಸ್ಕೋ ಇರುವುದನ್ನು ವಿಚಾರಿಸಿಕೊಂಡು ಬಂದಿದ್ದರು. ಆ ಹೋಟೆಲ್ ನಲ್ಲಿ ಉಳಿದುಕೊಂಡವರಿಗೆ ಪ್ರವೇಶ ಉಚಿತ ಅಂತಾನೂ ತಿಳಿದುಕೊಂಡಿದ್ದರು.
ಸ್ವಲ್ಪ ಹೊತ್ತಿಗೆ, `ಡಿಸ್ಕೋ ಗೆ ಹೋಗೋಣ’ ಅಂತ ವರಾತ ತೆಗೆದರು. ನಾವು ಮೂರೂ ಜನರೂ ಯಾವುದೇ ಆಸಕ್ತಿ ತೋರಿಸಲಿಲ್ಲ. `ಬೇಕಾದರೆ, ನೀವಿಬ್ಬರೇ ಹೋಗಿ ಬನ್ನಿ’ ಅಂತ ಹೇಳಿದೆವು. `ನೀವೂ ಗಂಡಸ್ರಾ! ಹೆಂಡತಿಯರನ್ನು ಡಿಸ್ಕೋಗೆ ಒಬ್ಬರೇ ಹೋಗಿ ಅಂತೀರಲ್ಲಾ,’ ಅಂತ ಇಬ್ಬರೂ ಜಗಳಕ್ಕೆ ನಿಂತಾಗ, ವಿನೋದ್ ಮುಸಿ ಮುಸಿ ನಕ್ಕ.
ನಮ್ಮ ಹೆಂಡತಿಯರು ನಮ್ಮ ಗಂಡಸ್ತನವನ್ನೇ ಪ್ರಶ್ನೆ ಮಾಡಿದ್ದು, ನಮ್ಮಿಬ್ಬರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಎದುರುಗಡೆ ಟೇಬಲ್ ಮೇಲೆ, ಎರಡು ಲೀಟರ್ ಜಾನಿ ವಾಕರ್ ನಮ್ಮನ್ನು ಕೈ ಬೀಸಿ ಕರೆಯುತ್ತಿತ್ತು. ಹೆಂಗಸರಿಬ್ಬರೂ ಗೊಣಗುತ್ತಾ ಡಿಸ್ಕೋ ತೆಕ್ ಕಡೆಗೆ ಹೋದರು.
ಹನ್ನೆರಡು ಗಂಟೆಗೆ ವಾಪಾಸ್ ಬಂದವರೇ ಹೊಸವರ್ಷಕ್ಕೆ ವಿಶ್ ಮಾಡಿ, ನಾವೇನಾದರೂ ಡಿಸ್ಕೋ ತೆಕ್ ಬರುವ ಯೋಚನೆ ಇದೆಯೇ ಅಂತ ಚೆಕ್ ಮಾಡಿದರು. ಪ್ರಯೋಜನವಾಗಲಿಲ್ಲ… ಗೊಣಗುತ್ತಾ ಹೊರಟರು. ನನಗೂ ಮತ್ತು ವಿನೋದ್ ಗೂ ಹೊರಗಡೆ ಒಂದು ಸುತ್ತು ವಾಕಿಂಗ್ ಹೋಗುವ ಮನಸ್ಸಿದ್ದರೂ, ಅಮರೇಶನಿಗಿರಲಿಲ್ಲ. ಸರಿ, ಅವನನ್ನು ರೂಮಿನಲ್ಲೇ ಬಿಟ್ಟು, ನಾವಿಬ್ಬರೂ ಹೊರಟೆವು.
ಹಾಗೇ ಬೀಚಿನ ಕಡೆಯಿಂದ ದೊಡ್ಡದೊಂದು ಸುತ್ತು ಹೊಡೆದು, ಬೇಕಾಬಿಟ್ಟಿ ಮಾತಾಡುತ್ತಾ ಮುಖ್ಯರಸ್ತೆಗೆ ತಲುಪಿದೆವು. ರಸ್ತೆಯಲ್ಲಿ ಯಾರೂ ಇರಲಿಲ್ಲ ಮತ್ತು ಒಳಗಿದ್ದ ಜಾನಿ ವಾಕರ್ ಇಷ್ಟ ಬಂದಿದ್ದನ್ನು ಮಾತಾಡಿಸುತ್ತಿದ್ದ. ಸ್ವಲ್ಪ ದೂರ ಹೋದಮೇಲೆ, ಒಂದರ್ದ ಕಿಲೋಮೀಟರ್ ದೂರದಲ್ಲಿರುವ ಟ್ರಾಫಿಕ್ ಸಿಗ್ನಲ್ ಕಾಣಿಸಿತು. ಆ ಸಿಗ್ನಲ್ ನಲ್ಲಿ ಎಡಕ್ಕೆ ರೋಡು ದಾಟಿದರೆ, ಇನ್ನೊಂದು ಅರ್ಧ ಕಿಲೋಮೀಟರ್ ನಲ್ಲಿ ನಮ್ಮ ಹೋಟೆಲ್.
ಏನನ್ನಿಸಿತೋ  ಏನೋ… `ಬಾ ಆ ಕಡೆ ಹೋಗೋಣ’ ಅಂತ ವಿನೋದ್ ಗೆ ಹೇಳಿ ಒಂದೇ ಉಸಿರಿಗೆ ರಸ್ತೆ ದಾಟಿ, ಆ ಕಡೆ ಫುಟ್ ಪಾತ್ ಗೆ ಹೋದೆ. ರಸ್ತೆ ಮಧ್ಯದ ವಿಭಜನೆ ಯಾಕೋ ತುಂಬಾ ಎತ್ತರ ಇದೆ ಅಂತ ಅನ್ನಿಸಿತು. `ಏನೋ, ಡಿವೈಡರ್ ಒಳ್ಳೆ ಕಾಂಪೌಂಡ್ ಥರ ಇದೆಯಲ್ಲೋ,’ ಅಂತ ಹೇಳಿ ಮುಗಿಸುವುದರೊಳಗೆ ಯಾವುದೋ ಭಾರವಾದ ಹೆಜ್ಜೆಗಳು ನಮ್ಮ ಕಡೆಗೇ ಓಡಿ ಬಂದಂತೆ ಅನ್ನಿಸಿತು. ತಿರುಗಿ ನೋಡಿದಾಗ, ಕತ್ತಲಲ್ಲಿ ಇಬ್ಬರು ನಮ್ಮಕಡೆಗೇ ಓಡಿಬರುತ್ತಿದ್ದರು. ಅವರ ಕೈಯಲ್ಲಿ ಏನೋ ಇದ್ದಂತೆ ಅನ್ನಿಸಿತು. ಮತ್ತೆ ಸರಿಯಾಗಿ ನೋಡಿದಾಗ, ಅವರಿಬ್ಬರ ಕೈಯಲ್ಲಿದ್ದದು… ಸ್ಟೆನ್ ಗನ್.
ಕೈ ಕಾಲು ಒಮ್ಮೆಲೇ ತಣ್ಣಗಾದಂತೆ ಅನ್ನಿಸಿತು. ಕುಡಿದಿದ್ದ ಹೆಂಡ, ಹಿಡಿದಿದ್ದ ಹುಚ್ಚು ಎರಡೂ ಇಳಿದು ಹೋಯ್ತು. ನಾನೂ, ವಿನೋದ್ ಕಲ್ಲಿನಂತೆ ನಿಂತೆವು. ಇಬ್ಬರೂ ಹತ್ತಿರ ಬಂದಾಗ ಗೊತ್ತಾಯ್ತು ಅವರು ಸೈನಿಕರು ಅಂತ. ಇಬ್ಬರಿಗೂ ಹದಿನೆಂಟು ವರ್ಷ ಇರಬಹುದು, ಆದರೆ ಕಟ್ಟುಮಸ್ತಾಗಿದ್ದರು. ಟ್ರಿಗರ್ ಮೇಲೆ ಕೈ ಇಟ್ಟುಕೊಂಡೇ, ನಮ್ಮನ್ನು ಮೇಲಿಂದ ಕೆಳಗೆ ಅಳೆಯುತ್ತಾ, ನಯವಾಗಿಯೇ ಏನೋ ಸಿಂಹಳೀ ಭಾಷೆಯಲ್ಲಿ ಹೇಳಿದರು.
ತೊದಲುತ್ತಲೇ ಹೇಳಿದೆ: `ಐ ಕಾಂಟ್ ಅಂಡರ್ ಸ್ಟ್ಯಾಂಡ್ ಯುವರ್ ಲಾಂಗ್ವೇಜ್,’ ಅಂತ. `ಮಿಲಿಟರಿ ಝೋನ್ ಸರ್, ರೆಸ್ಟ್ರಿಕ್ಟೆಡ್ ಏರಿಯಾ… ನೋ ವಾಕಿಂಗ್ ಆನ್ ದಿಸ್ ಸೈಡ್ ಆಫ್ ಫುಟ್ ಪಾತ್. ಮಿಲಿಟರಿ ಛೀಫ್ ಹೌಸ್. ವಾಕಿಂಗ್ ಓನ್ಲಿ ದಟ್ ಸೈಡ್ ಸರ್.’
ಕುಡಿದಿದ್ದ ಹೆಂಡ, ಹಿಡಿದಿದ್ದ ಹುಚ್ಚು ಎರಡೂ ಇಳಿದು ಹೋಯ್ತು. ನನಗೇ ಕೇಳಿಸದಷ್ಟು ಮೆಲ್ಲಗೆ `ಸಾರಿ’ ಅಂದು, ಮತ್ತೆ ರಸ್ತೆ ದಾಟಿ ಆ ಕಡೆಯ ಫುಟ್ ಪಾತ್ ಹತ್ತಿ, ಸಿಗ್ನಲ್ ಕಡೆ ನೆಡೆಯಲು ಶುರುಮಾಡಿದೆವು. ಎರಡು, ಮೂರು ನಿಮಿಷ ಬಾಯಿಂದ ಮಾತೇ ಹೊರಡಲಿಲ್ಲ. ಸ್ವಲ್ಪ ಸುಧಾರಿಸಿಕೊಂಡು ವಿನೋದ್ ಗೆ ಹೇಳಿದೆ: `ಡೆಲ್ಲಿಯಲ್ಲಾಗಿದ್ದರೆ, ನಮ್ಮ ಸೆಕ್ಯುರಿಟಿಯವರು, ಮೊದಲು ಗುಂಡು ಹೊಡೆದು, ಆಮೇಲೆ ನಾವು ಯಾರು ಅಂತ ವಿಚಾರಿಸುತ್ತಿದ್ದರು.’
`ಹೌದಾ? ಯಾಕ್ಹಾಗೆ?’ ಅಂತ ಕೇಳಿದ.
`ಗೊತ್ತಿಲ್ಲ ಕಣೋ. ನಾನೂ ಸೆಕ್ಯುರಿಟಿ ವಿಷಯ ಬಂದಾಗ, ಅದೇ ಸರಿ ಅನ್ಕೊಂಡಿದ್ದೆ. ನಮ್ಮಷ್ಟೇ ಇವರಿಗೂ ರಿಸ್ಕ್ ಇದೆ. ಆದ್ರೆ, ಇವರ ಪೋಲಿಸ್, ಮಿಲಿಟರಿಯವರು ಬಿಹೇವ್ ಮಾಡೋದನ್ನ ನೋಡಿದರೆ, ನಮ್ಮವರದು ಅತೀ ಆಯ್ತು ಅಂತ ಅನ್ನಿಸುತ್ತೆ. ವರ್ಷಕ್ಕೊಂದಿಬ್ಬರಾದರೂ ಈ ಥರ ಸಾಯ್ತಾರೆ ಡೆಲ್ಲೀಲಿ. ಇಲ್ಲಿನ ಪೋಲಿಸ್ ಜನಗಳ ಹತ್ತಿರ ನೆಡ್ಕೊಳ್ಳೋದು ನೋಡಿದ್ರೆ, ನಮ್ಮವರು ಇವರ ಕಾಲು ಸಂಧಿ ನುಸಿಯಬೇಕು ಅಷ್ಟೆ,’ ಅಂದೆ.
ಹಾಗೇ ಸಿಗ್ನಲ್ ದಾಟಿ ಹೋಟೆಲ್ ಕಡೆ ತಿರುಗಿದೆವು. ಸ್ವಲ್ಪ ದೂರ ಭಾಷಣ ಬಿಗಿಯುತ್ತಾ ಸಾಗಿದ ನನಗೆ, ವಿನೋದ್ ನನ್ನ ಜೊತೆ ಇಲ್ಲ ಅನ್ನಿಸಿ ತಿರುಗಿ ನೋಡಿದೆ. ಅವನು, ಮೂವತ್ತು ಅಡಿ ಹಿಂದೆ ಯಾರೋ ಇಬ್ಬರ ಜೊತೆ ಮಾತಾಡ್ತಾ ಇದ್ದ. `ಏನಪ್ಪಾ ಇದು?’ ಅಂತ ಕಾಯ್ತಾ ನಿಂತೆ. ವಿನೋದ್ ಏನೋ ಕೈ ಆಡಿಸುತ್ತಾ ನನ್ನ ಕಡೆ ಬಂದ.
`ಯಾರೋ ಅದು? ಏನಂತೆ?’ ಅಂತ ಕೇಳ್ದೆ.
`ಥೂ… ಹುಡುಗಿ ಬೇಕಾ ಅಂತ ಕೇಳ್ತಿದ್ದಾರೆ,’ ಅಂದ.
ನಾನಲ್ಲೇ ನಿಂತು ತಿರುಗಿ ನೋಡಿದೆ. `ಅಲ್ಲಾ ಕಣೋ, ನಾವಿಬ್ಬರು ಊಟ ಕಟ್ಟಿಸಿಕೊಂಡು ಬರುವಾಗಲೂ ಯಾರೋ ನಿನ್ನ ಕೇಳಿದ್ರು. ಈಗಲೂ ಕೇಳ್ತಿದ್ದಾರೆ. ನಿಂಗೆ ಮದುವೆ ಆಗಿಲ್ಲ ಅಂತ ಹಣೆಮೇಲೆ ಬರ್ಕೊಂಡು ಓಡಾಡ್ತಿದ್ದಿಯಾ?’ ಅಂದೆ.
`ನಡಿ ಅಣ್ನ ಸುಮ್ನೆ. ರೂಮಿಗೆ ಹೋಗೊಣ,’ ಅಂದ ವಿನೋದ್.
`ಅಲ್ಲಾ ಕಣೋ, ನಾನೂ ಜೊತೆಯಲ್ಲಿದ್ದೆ. ನನ್ಯಾರೂ ಕೇಳ್ಲಿಲ್ಲ. ಎಲ್ಲಾರೂ ನಿನ್ನೇ ಕೇಳ್ತಾರಲ್ಲಾ, ಏನ್ಕತೆ ಅಂತ ಕೇಳ್ದೆ,’ ಅಂತ ಚುಡಾಯಿಸುತ್ತಲೇ ರೂಮಿಗೆ ಬಂದೆವು.
ಅಂಬಿಕಾ ಮತ್ತು ಸೌಮ್ಯ, ರೂಮಿನಲ್ಲಿ ಅಮರೇಶನ ಜೊತೆ ಕೂತಿದ್ದರು. ನಮ್ಮನ್ನು ನೋಡುತ್ತಲೇ, `ಏನ್ರೋ ಅದೂ?’ ಅಂದ.
`ನೋಡೋ, ಇವನ ಹಣೇ ಮೇಲೇನಾದರೂ ಮದುವೆ ಆಗಿಲ್ಲ ಅಂತ ಬರ್ದಿದೆಯಾ ಅಂತ. ಎರಡು ಸಲ ಇವನಿಗೆ ಹುಡುಗಿ ಬೇಕಾ ಅಂತ ಕೇಳಿದರು. ಪಕ್ಕದಲ್ಲಿ ನಾನಿದ್ದರೂ, ನನಗೆ ಕ್ಯಾರೆ ಅನ್ನಲಿಲ್ಲ. ನಾನೇನು ಗಂಡಸಿನ ತರ ಕಾಣೋಲ್ವಾ. ಇವನಿಗಿಂತ ಎತ್ತರ ಇದ್ದೀನಿ ಮತ್ತೆ ಬಾಡಿನೂ ಮೇಂಟೇನ್ ಮಾಡಿದ್ದೀನಿ,’ ಅಂತ ನಗುತ್ತಾ ಹೇಳಿದೆ.
ತಕ್ಷಣವೇ ಅವರು ಮೂರೂ ಜನ ವಿನೋದ್ ಮೇಲೆ ಮುಗಿಬಿದ್ದರು. ನಾನಂತೂ, ನನ್ನ ಗಂಡಸ್ತನವನ್ನು ಅಲಕ್ಷಿಸಿದ ಆ ಮಧ್ಯವರ್ತಿಗಳ ಮೇಲೆ ಮನಸೋ ಇಚ್ಚೆ ದಾಳಿ ನೆಡೆಸಿದೆ. ನನ್ನ ಹೆಂಡತಿ ನನ್ನ ಗಂಡಸ್ತನ ಪ್ರಶ್ನಿಸಿದಾಗಲೂ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ಇದೊಂದು ನನ್ನ ವಿರುದ್ದದ ಪಿತೂರಿ ಅಂತಲೇ ವಾದಿಸಿದೆ.
ನಮ್ಮ ಕಾಟ ತಡೆಯಲಾಗದೆ, ವಿನೋದ್ ಅವನ ಮತ್ತು ಮಧ್ಯವರ್ತಿಗಳ ಮಧ್ಯ ನೆಡೆದ ಮಾತುಕತೆ ವಿವರಿಸಿದ. ಸರ್ ಹುಡುಗಿ ಬೇಕಾ ಅಂತ ಕೇಳಿದಾಗ, ವಿನೋದ್, ನಾನು ಸಂಸಾರದ ಜೊತೆ ಬಂದಿದ್ದೇನೆ ಅಂತ ಹೇಳಿದ್ದಾನೆ. ಅದಕ್ಕೆ ಅವರು, `ಪರವಾಗಿಲ್ಲ ಸರ್, ರೂಮಿಗೆ ಹೋಗಿ ಪಂಚೆ ಉಟ್ಕೊಂಡು ಬೀಚಿಗೆ ಬನ್ನಿ. ಒಳ್ಳೇ ರಷ್ಯನ್ ಹುಡುಗಿಯರು. ಅಲ್ಲಿಗೇ ಕರೆದುಕೊಂಡು ಬರ್ತೀವಿ,’ ಅಂದಿದ್ದಾರೆ. ಏನು ಹೇಳ್ಬೇಕು ಅಂತ ಗೊತ್ತಾಗದೆ, ವಿನೋದ್ ಓಡಿ ಬಂದಿದ್ದಾನೆ.
`ಇವರಿಬ್ಬರಿಗಾದರೆ ಸಂಸಾರ. ನಿಮಗ್ಯವದ್ರೀ ಸಂಸಾರ? ಹೋಗಿ ರಷ್ಯನ್ ಹುಡುಗಿಯರನ್ನು ನೋಡಿಕೊಂಡಾದರೂ ಬನ್ರಿ,’ ಅಂತ ಅಂಬಿಕಾ ಮತ್ತು ಸೌಮ್ಯ ಕಾಲೆಳೆಯಲು ಶುರು ಮಾಡಿದರು. ನಮ್ಮ ಕಾಟ ತಡೆಯಲಾಗದೆ, ವಿನೋದ್ ಮುಸುಕೆಳೆದುಕೊಂಡು ಮಲಗಿದ. ಎಷ್ಟೇ ಕರೆದರೂ ಮಾತಾಡದಿದ್ದಾಗ, ಹೆಂಗಸರಿಬ್ಬರೂ ಅವರ ರೂಮಿನ ಕಡೆ ಹೊರಟರು.
ಸ್ವಲ್ಪ ಹೊತ್ತಿಗೆ ಅಮರೇಶ್ ಕೂಡ ಮಲಗಲು ಅಣಿಯಾದ. ರಷ್ಯನ್ ಹುಡುಗಿಯರ ಗಲಾಟೆಯಲ್ಲಿ, ಸ್ಟೆನ್ ಗನ್ ನಳಿಗೆಗೆ ಎದೆಕೊಟ್ಟಿದ್ದು ಮರೆತೇ ಹೋಗಿತ್ತು. ನಗುತ್ತಾ ಜಾನಿ ವಾಕರ್ ಕಡೆಗೆ ಕೈ ಚಾಚಿದೆ.

ಮಾಕೋನಹಳ್ಳಿ ವಿನಯ್ ಮಾಧವ್

                                                                                                              

3 ಕಾಮೆಂಟ್‌ಗಳು:

  1. HOSA VARUSHAKKE KALIDUVAGA NINNA "JOHNY WALKER" ,SOLDIERS,RUSSIAN HUDIGIYARU,DISCO,EDELAVU EE CHALIYALI NENAPU MADIKONDU NAMAGELLA OORISUTHIDIYA L T T E.....

    ಪ್ರತ್ಯುತ್ತರಅಳಿಸಿ
  2. ವಿನಯ್ ಕತೆ ಬರೆಯೋ ಕಲೆ ಕೈ ಹಿಡಿದಿದೆ. ಬರೆಯಲು ಶುರು ಮಾಡಿ. ಈಗಾಗಲೇ ತಡ ಆಗಿ ಹೋಯ್ತು. ಬರೆದಿದ್ದರೆ ನನಗೆ ಗೊತ್ತಿಲ್ಲ....

    ಪ್ರತ್ಯುತ್ತರಅಳಿಸಿ
  3. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ