ಗುರುವಾರ, ಸೆಪ್ಟೆಂಬರ್ 7, 2017

ಕಾಡುವ ತೇಜಸ್ವಿ

ನಿರುತ್ತರ………

`ಸರ್, ತೇಜಸ್ವಿಯವರು ಹೋಗಿಬಿಟ್ರಂತೆ’ ಅಂತ ಫೋನ್ ನಲ್ಲಿ ಆ ಕಡೆಯಿಂದ ಸ್ವರ ಬಂದಾಗ, ನನ್ನ ಕಾರು ಕೃಷ್ಣಗಿರಿ ದಾಟಿ, ಚೆನೈ ಕಡೆಗೆ ಧಾವಿಸುತ್ತಿತ್ತು. ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಹಾಗೇ ಕೂತೆ.
`ಒಂದು ಗುಡ್ ಬೈನೂ ಇಲ್ಲ…. ಹೋಗಿಬಿಟ್ರಾ?’, ಅಂತ ಅನ್ನಿಸ್ತು.
ಗುಡ್ ಬೈ ಹೇಳೋಕೆ ಅವ್ರೇನಾದ್ರೂ ಊರಿಗೆ ಹೋಗ್ತಿದ್ರಾ? ಅಥವಾ ನಾನೇನು ಅವರ ಸಂಬಂಧಿಕನಾ? ಅವರ ಅಸಂಖ್ಯಾತ ಅಭಿಮಾನಿಗಳಲ್ಲಿ ನಾನೂ ಒಬ್ಬ, ಅಷ್ಟೆ. ನಾಲ್ಕಾರು ಸಲ ಭೇಟಿ ಮಾಡಿದ ತಕ್ಷಣ ಯಾಕೆ ಹೀಗೆ ಯೋಚನೆ ಮಾಡ್ತಿದ್ದೀನಿ? ಅನ್ನಿಸ್ತು.
ಸ್ವಲ್ಪ ದಿನದ ಹಿಂದೆ ಫೋನ್ ಮಾಡಿದಾಗ, ಮೈ ಪೂರ್ತಿ ಅಲರ್ಜಿ ಆಗಿದೆ ಮಾರಾಯ. ಯಾವುದೋ ಕೇರಳದ ಎಣ್ಣೆ ಟ್ರೈ ಮಾಡಿದ್ದೆ. ಮೈಸೂರಲ್ಲಿ ಆಸ್ಪತ್ರೆಯಲ್ಲಿ ಬೇರೆ ಇರಬೇಕಾಯ್ತು, ಅಂತ ಹೇಳಿದ್ರು. ಅದನ್ನು ಬಿಟ್ಟರೆ, ಯಾವುದೇ ತೊಂದರೆ ಇದ್ದಂತೆ ಕಾಣಿಸಲಿಲ್ಲ.
ವಾಪಾಸ್ ಮೂಡಿಗೆರೆಗೆ ಹೊರಡಲಾ? ಅಂತನೂ ಯೋಚನೆ ಮಾಡಿದೆ. ಹೋಗಿ ಏನು ಮಾಡುವುದು ಅನ್ನೋದು ಅರ್ಥ ಆಗಲಿಲ್ಲ. ನೂರಾರು ಅಭಿಮಾನಿಗಳು, ರಾಜಕಾರಣಿಗಳ ಮಧ್ಯ ನನಗೇನು ಕೆಲಸ ಅಂತಾನೂ ಅನ್ನಿಸ್ತು. ತೆಪ್ಪಗೆ ಚೆನೈ ಕಡೆಗೆ ಹೋದೆ.
ಊರಿಗೆ ಹೋದಾಗ ನಾಲ್ಕಾರು ಭಾರಿ ತೇಜಸ್ವಿಯವರ ಮನೆಗೂ ಹೋಗಿದ್ದೆ. ಹಾಗಾಗಿ, ನಾನು ಫೋನ್ ಮಾಡಿದ ತಕ್ಷಣ, ಎಲ್ಲಿದ್ದೀಯಾ? ಅಂತ ಕೇಳುತ್ತಿದ್ದರು. ಊರಿಗೆ ಬಂದಿದ್ದೇನೆ, ನಿಮ್ಮ ಮನೆಗೆ ಬರ್ತೀನಿ ಅಂದರೆ, `ಅಲ್ಲಾ ಮಾರಾಯ… ನೀವು ಬೆಂಗಳೂರಿನಲ್ಲಿರೋರಿಗೆ ತಲೇಲಿ ಏನಿದೆ ಅಂತೀನಿ? ನಿಮಗ್ ಮಾಡಾಕೆ ಕೆಲ್ಸ ಇಲ್ಲಾ ಅಂದ್ರೆ, ನಂಗೂ ಇಲ್ವಾ? ಇಲ್ಲಿ ಬಂದು ನನ್ನ ತಲೆ ತಿನ್ಬೇಡ,’ ಅಂತ ಮುಖಕ್ಕೆ ಹೊಡೆದಂತೆ ಹೇಳ್ತಿದ್ರು.
ಭಂಡಗೆಟ್ಟ ನಾನು, `ಸಾರ್, ಸಾಯಂಕಾಲ ದಾರದಹಳ್ಳಿಗೆ ಹೋಗ್ತಿದ್ದೀನಿ. ದಾರಿಲಿ ನಿಮ್ಮ ಮನೆಗೆ ಬಂದು ಹೋಗ್ತೀನಿ. ಮೂರುವರೆ, ನಾಲ್ಕು ಘಂಟೆಗೆ ಬರ್ತೀನಿ,’ ಅಂದರೆ, `ಅಯ್ಯೊಯ್ಯೊ, ಅಷ್ಟೊತ್ತಿಗೆ ಬರ್ಬೇಡ ಮಾರಾಯ. ಐದು ಘಂಟೆ ಮೇಲೆ ಬಾ… ಹತ್ತೇ ನಿಮಿಷ, ಆಯ್ತಾ? ನಂಗೆ ತುಂಬಾ ಕೆಲಸ ಇದೆ,’ ಅನ್ನುತ್ತಿದ್ದರು. ಹತ್ತು ನಿಮಿಷದೊಳಗೆ ಅವರ ಮನೆ ಬಿಟ್ಟ ಉದಾಹಾರಣೆಗಳಿಲ್ಲ. ಒಂದೆರೆಡು ಸಲ, ನಾಲ್ಕೈದು ಘಂಟೆ ಸಹ ಕಳೆದಿದ್ದೇನೆ.
ತೇಜಸ್ವಿಯವರು ತೀರಿ ಹೋದ ಒಂದೆರೆಡು ವರ್ಷ, ಅವರ ಪುಸ್ತಕ ಮತ್ತೆ ಮತ್ತೆ ತಿರುವಿ ಹಾಕುವಾಗ ಏನೋ ಕಳೆದು ಹೋದಂತೆ ಭಾಸವಾಗುತ್ತಿತ್ತು. ಆನಂತರ, ತೇಜಸ್ವಿಯವರು ಇಲ್ಲ ಅನ್ನೋದು  ಅಭ್ಯಾಸವಾಗಿಹೋಯಿತು.
ಮೂರ್ನಾಲ್ಕು ವರ್ಷದ ಹಿಂದೆ ಮಳೆಗಾಲದಲ್ಲಿ ಊರಿಗೆ ಹೋದಾಗ ಹಾಗೇ ಕೊಟ್ಟಿಗೆಹಾರದ ಸಮೀಪ ಮಲಯಮಾರುತಕ್ಕೆ ಒಂದು ಡ್ರೈವ್ ಹೋದೆ. ಅದರ ಪಕ್ಕದಲ್ಲೇ ಸರ್ಕಾರ ತೇಜಸ್ವಿಯವರ ಹೆಸರಿನಲ್ಲಿ ಜೀವಿ ವೈವಿಧ್ಯ ಸಂಶೋಧನಾ ಕೇಂದ್ರ ಸ್ಥಾಪಿಸಲು ಜಾಗ ನೀಡಲು ನಿರ್ಧಾರ ಮಾಡಿದ್ದು ನೋಡಿದಮೇಲೆ ಯಾಕೋ ಮತ್ತೆ ಕಾಡತೊಡಗಿದರು. ತೇಜಸ್ವಿಯವರ ವಿಷಯ ನಾನು ಹೆಚ್ಚು ಮಾತನಾಡುವುದು ಕೆಂಜಿಗೆ ಪ್ರದೀಪ್ ರವರ ಜೊತೆ ಮಾತ್ರ. ಅವತ್ತು ಫೋನ್ ಮಾಡಿದರೂ, ಮಾತನಾಡಲು ಆಗಲಿಲ್ಲ.
ಒಂದೆರೆಡು ತಿಂಗಳ ಬಳಿಕ ಮತ್ತೆ ಪ್ರದೀಪ್ ಗೆ ಫೋನ್ ಮಾಡಿ, ನಾನು ಮಲಯ ಮಾರುತಕ್ಕೆ ಹೋಗಿದ್ದು ಹೇಳಿದೆ. `ತುಂಬಾ ಚೆನ್ನಾಗಿತ್ತು ಪ್ರದೀಪಣ್ಣ.. ತೇಜಸ್ವಿ ಇದ್ದಿದ್ರೆಅಲ್ಲೇ ಎರಡು ಕಥೆ ಬರೀತಿದ್ರು ಅನ್ನಿಸ್ತಿದೆ,’ ಅಂದೆ.
`ಇರಬಹುದು… ನನ್ನ ಪ್ರಕಾರತೇಜಸ್ವಿ ಬರೆಯೋದು ತುಂಬಾ ಇತ್ತು ನೋಡಿ. ಅವ್ರು ಇಷ್ಟ ಬಂದಾಗ ಬರೆಯೋರುಫೋಟೋ ತೆಗೆಯೋರುಪೇಂಟಿಂಗ್ ಮಾಡೋರು ಇಲ್ದೆ ಹೋದ್ರೆಮೀನು ಹಿಡಿಯೋರು. ಅವರಿಗೆ ಮೀನು ಹಿಡಿಯೋದ್ರ ಬಗ್ಗೆ ಒಂದು ಪುಸ್ತಕ ಬರೀಬೇಕೂಂತ ತುಂಬಾ ಇಷ್ಟ ಇತ್ತು. ನನ್ನ ಹತ್ರ ತುಂಬಾ ಸಲ ಹೇಳಿದ್ರು,’ ಅಂದ್ರು ಪ್ರದೀಪ್.
`ಮತ್ಯಾಕೆ ಬರೀಲಿಲ್ಲ. ಅವ್ರಿಗೇನು ಅದನ್ನ ಬರೆಯೋದು ಕಷ್ಟ ಆಗ್ತಿರ್ಲಿಲ್ಲ ಅಲ್ವಾ?’ ಅಂದೆ.
`ಅವ್ರು ಯಾವುದೇ ಪುಸ್ತಕ ಬರೆಯೋಕೆ ಮುಂಚೆ ತುಂಬಾ ರಿಸರ್ಚ್ ಮಾಡ್ತಿದ್ರು. ಪ್ರತೀ ಸಲ ಮೀನು ಹಿಡಿಯೋಕೆ ಹೋದಾಗಲೂಏನಾದ್ರು ಒಂದು ಹೊಸ ವಿಷಯ ಹಿಡ್ಕೊಂಡು ಬರ್ತಿದ್ರು. ಸುಮಾರು ಪುಸ್ತಕಗಳನ್ನು ಓದಿದ್ರು. `ಹೆಮಿಂಗ್ವೆ ಬರೆದ ಓಲ್ಡ್ ಮ್ಯಾನ್ ಆಂಡ್ ದಿ ಸೀ ಅವರ ಮೇಲೆ ತುಂಬಾ ಪರಿಣಾಮ ಬೀರಿತ್ತು. ಎಷ್ಟೋ ಸಲ ನನ್ನ ಹತ್ರಾನೇ ಹೇಳಿದ್ರು.. ನೋಡಿ ಪ್ರದೀಪ್ಬರೆದ್ರೆ ಅಂತ ಪುಸ್ತಕ ಬರೀಬೇಕುಅಂತ. ಹಾಗಾಗೇ ಅವರು ಮೀನು ಹಿಡೀವಾಗ ತುಂಬಾ ಎಕ್ಸ್ ಪರಿಮೆಂಟ್ ಮಾಡ್ತಿದ್ರು,’ ಅಂದರು.
`ನೀವು ಓದಿದ್ರಾ ಆ ಪುಸ್ತಕ?’ ಅಂತ ನನ್ನನ್ನು ಕೇಳಿದಾಗನಾನು ಹೆಮಿಂಗ್ವೆಯ ಯಾವುದೇ ಪುಸ್ತಕ ಓದಿಲ್ಲ ಅಂತ ಹೇಳಿದೆ. `ಅದನ್ನ ಓದಬೇಕು ಕಣ್ರಿ. ಸಣ್ಣ ಪುಸ್ತಕ… ಅದಕ್ಕೆ ನೊಬೆಲ್ ಬಂದಿತ್ತು. ಮತ್ತೆ ಮತ್ತೆ ಓದಿಸುತ್ತೆ,’ ಅಂದರು.
`ಮತ್ತಿನ್ನೇನು ಬರೀಬೇಕು ಅಂತಿದ್ರೂ,’ ಅಂತ ಮೆಲ್ಲಗೆ ಕೇಳಿದೆ.
`ಅದನ್ನ ಹೇಳೋದು ಕಷ್ಟ ಕಣ್ರಿ. ಅವ್ರಿಗೆ ತುಂಬಾ ವಿಷಯಗಳಲ್ಲಿ ಆಸಕ್ತಿ ಇತ್ತು. ಅವರ ಇಷ್ಟವಾದ ಸಬ್ಜೆಕ್ಟ್ ಅಂದ್ರೆ ಫಿಸಿಕ್ಸ್ ಮತ್ತು ಮೆಟಾ ಫಿಸಿಕ್ಸ್ ನಲ್ಲಿ ತುಂಬಾ ಆಸಕ್ತಿ ಇತ್ತು. ಅದಷ್ಟೇ ಅಲ್ಲ. ಅವರು ಸೃಷ್ಟಿಯ ಮೂಲವನ್ನೇ ಹುಡುಕೋಕೆ ಹೊರಟಿದ್ದರು ಅಂತ ಕಾಣುತ್ತೆ. ನನಗೆ ಅರ್ಥವಾಗಿರೋ ಹಾಗೆ ಹೇಳಿದ್ರೆ…. ಅದೇ ಸರಿ ಅಂತಲ್ಲ.. ಅದು ನಾನು ಅರ್ಥ ಮಾಡಿಕೊಂಡ ರೀತಿ ಅಷ್ಟೆ. ಅವ್ರು ಒಂದು ಸೀರೀಸ್ ಆಫ್ ಪುಸ್ತಕಗಳಲ್ಲಿ ಇವೆಲ್ಲವನ್ನೂ ಹೊರಗೆ ತರಬೇಕೂಂತ ಇದ್ದರು ಅನ್ನಿಸುತ್ತೆ. ಅದು ಕನ್ನಡದ ಪುಸ್ತಕಗಳಲ್ಲೇ ವಿಭಿನ್ನವಾಗಿರಬೇಕು ಅಂತ ಅವರಿಗಿತ್ತು ಅಂತ ಕಾಣಿಸುತ್ತೆ. ಮಾಯಾ ಲೋಕ ಪುಸ್ತಕವನ್ನೇ ನೋಡಿಅದರ ಲೇ ಔಟ್ಪ್ರಿಂಟಿಂಗ್ ಫಾಂಟ್ಎಲ್ಲಾ ಬೇರೆ ಥರಾನೇ ಇದೆ. ಅದರ ಭಾಗ 2, 3, 4… ಹೀಗೇ ಎಷ್ಟು ಹೋಗ್ತಿತ್ತು ಅಂತಾನೂ ಗೊತ್ತಿಲ್ಲ. ಬಹುಶಃಅದರಲ್ಲಿ ಇವೆಲ್ಲ ಬರ್ತಿತ್ತು ಅಂತ ಕಾಣುತ್ತೆ. ಅಥವಾನಾನು ಹಾಗೆ ಅರ್ಥ ಮಾಡಿಕೊಂಡಿದ್ದೀನಿ,’ ಅಂದರು.
`ಪ್ರದೀಪಣ್ಣ… ಈ ಮಾಯಾ ಲೋಕ ನಂಗೆ ಸರಿಯಾಗಿ ಅರ್ಥವಾಗ್ಲಿಲ್ಲ. ಅದಕ್ಕೆ ಬೇರೆಯವರ ಒಪೀನಿಯನ್ ಕೇಳಿದ್ದೆ. ಕೆಲವರು ಅಂದ್ರು ಇದು ಕಾವೇರಿ ವಿವಾದ ಮನಸ್ಸಲ್ಲಿಟ್ಟುಕೊಂಡು ಬರೆದ ಹಾಗಿದೆ ಅಂತ. ಇನ್ನು ಕೆಲವರಿಗೆಇದು ಕಿರಗೂರಿನ ಗಯ್ಯಾಳಿಗಳು ಕಥೆಯ ಮುಂದುವರೆದ ಭಾಗ ಅನ್ನಿಸ್ತು,’ ಅಂತ ಕೇಳಿದೆ.
 `ಕಾವೇರಿ ವಿವಾದ ಅನ್ನೋದು ನಾನು ಒಪ್ಪೋದಿಲ್ಲ. ಕಿರುಗೂರಿನ ಗಯ್ಯಾಳಿಗಳು ಅನ್ನೋದು ಒಂದು ಥರದಲ್ಲಿ ಇರಬಹುದೇನೋ. ನಾನು ಅರ್ಥ ಮಾಡಿಕೊಂಡಿರೋದೇ ಬೇರೆ ಥರ. ಈಗಮಾಯಾ ಲೋಕ ಒಂದು ಹೂವಿನ ಎಸಳಿದ್ದ ಹಾಗೆ. ಅದರ ಮುಂದಿನ ಭಾಗಗಳೆಲ್ಲ ಇನ್ನೆಲ್ಲಾ ಎಸಳುಗಳು. ಎಲ್ಲೋ ಒಂದು ಕಡೆಗೆ ಸೇರಿಪೂರ್ತಿ ಹೂವಾಗುತ್ತೆ. ಆಮೇಲೆಪೂರ್ತಿ ಗಿಡವನ್ನೂ ಮಾಡುವ ಹೊತ್ತಿಗೆಇನ್ನಷ್ಟು ವಿಷಯಗಳು ಬಂದು ಸೇರಿರುತ್ತವೆ. ಕೊನೆಗೆ ಮರ ಗಿಡಗಳುಬೆಟ್ಟ ಗುಡ್ಡಗಳು ಎಲ್ಲಾ ಸೇರಿ ಕಾಡಾಗುವಾಗಸೃಷ್ಟಿಯ ಎಲ್ಲಾ ವಿಷಯಗಳೂ ಅದರಲ್ಲಿ ಚರ್ಚೆಯಾಗಬೇಕು ಅನ್ನೋದು ಅವರ ವಿಚಾರ ಇತ್ತು ಅಂತ ಕಾಣುತ್ತೆ. ಅವರಿಗೆ ಫಿಲಾಸಫಿಯಲ್ಲೂ ಆಸಕ್ತಿಯಿತ್ತು. ಇನ್ನೊಂದು ಪುಸ್ತಕ ಅವರು ಹೇಳ್ತಿದ್ದಿದ್ದು… ಆರ್ಟ್ ಆಫ್ ಮೋಟಾರ್ ಸೈಕಲ್ ಮೇಂಟೇನೆನ್ಸ್ ಅಂತೇನೋ ಬರುತ್ತೆ…’ ಅಂತ ಪ್ರದೀಪ್ ಹೇಳುವಾಗ, ನಾನು ಮಧ್ಯ ಬಾಯಿ ಹಾಕಿ, `ಜೆನ್ ಆಂಟ್ ಮೋಟಾರ್ ಸೈಕಲ್ ಮೇಂಟೇನೆನ್ಸ್.. ರಾಬರ್ಟ್. ಎಂ. ಪ್ರಿಸಿಗ್ ಬರೆದದ್ದು. ಅವನು ಲೀಲಾ ಅಂತ ಇನ್ನೊಂದು ಪುಸ್ತಕ ಬರೆದಿದ್ದಾನೆ. ತುಂಬಾ ಚೆನ್ನಾಗಿವೆ,’ ಅಂತ ಹೇಳಿದೆ.
`ಕರೆಕ್ಟ್… ಅದೇ ನೋಡಿ. ಅವರು ಕೊನೆಯಲ್ಲಿ ಸೃಷ್ಟಿ ಮತ್ತು ಸತ್ಯ ಅನ್ನೋದನ್ನ ವೈಜ್ಞಾನಿಕವಾಗಿ ಬರೆಯೋಕೆ ಯೋಚಿಸಿದ್ರು ಅನ್ನಿಸುತ್ತದೆ’, ಅಂದಾಗನನಗೆ ಫಕ್ಕನೆ ನಗು ಬಂದುಏನು ಬುದ್ದ ಆಗೋಕೆ ಹೊರಟಿದ್ರಾಅಂತ ಕೇಳೋಕೆ ನಾಲಿಗೆ ತುದಿಯವರೆಗೆ ಬಂದಿತ್ತು. ಆದರೆಪ್ರದೀಪ್ ರವರ ಮಾತಿನ ಲಹರಿ ಮುಗಿದಿರಲಿಲ್ಲ.
`ಬರವಣಿಗೆಗಳಿಗೆ ವೈಜ್ಞಾನಿಕ ತಳಹದಿ ಇರಬೇಕು ಅನ್ನೋದು ಅವರ ವಾದವಾಗಿತ್ತು. ಅದನ್ನು ಬರವಣಿಗೆ ರೂಪದಲ್ಲಿ ತರುವುದು ಕಷ್ಟ ಅಂತ ನಮಗೆ ಅನ್ನಿಸಿದ್ದರೂಆ ದಿಕ್ಕಿನಲ್ಲಿ ಅವರು ಪ್ರಯತ್ನ ಮಾಡುತ್ತಿದ್ದರು.  ಇದರಲ್ಲಿ ಕಾಲಮಾನಫಿಸಿಕ್ಸ್ಬಾಹ್ಯಾಕಾಶಜೀವರಾಶಿ ಎಲ್ಲವನ್ನೂ ಸೇರಿಸಿಮನುಷ್ಯನ ಚಿಂತನೆಗಳಿಗೆ ಒಂದು ಅರ್ಥ ಹುಡುಕೋ ಪ್ರಯತ್ನದಲ್ಲಿದ್ರುಅಂತ ಅನ್ನಿಸ್ತದೆ,’ ಅಂದರು.
`ಹಾಗಾದ್ರೆಅವರಿಗೆ ಸ್ಟೀಫನ್ ಹಾಪ್ಕಿನ್ಸ್ ನ `ಎ ಬ್ರೀಫ್ ಹಿಸ್ಟರಿ ಆಫ್ ಟೈಮ್’ ಕೂಡ ತುಂಬಾ ಇಷ್ಟದ ಪುಸ್ತಕ ಅಂತ ಕಾಣುತ್ತೆ,’ ಅಂತ ಕೇಳಿದೆ.
`ಅದನ್ನ ಅವ್ರು ಯಾವ ಕಾಲದಲ್ಲೋ ಓದಿ ಮುಗಿಸಿದ್ದರು. ಆ ಪುಸ್ತಕ ಬಂದಾಗಲೇಅವರು ಜರ್ಮನಿಯಿಂದ ಪುಸ್ತಕ ತರಿಸಿ ಓದಿದ್ದರು. ನನಗೆ ಸುಮಾರು ಸಲ ಅದನ್ನ ಕನ್ನಡಕ್ಕೆ ಅನುವಾದ ಮಾಡಲಿಕ್ಕೆ ಹೇಳಿದ್ರು. ಅದನ್ನ ಹ್ಯಾಗ್ರೀ ಕನ್ನಡದಲ್ಲಿ ಬರೆಯೋದು?,’ ಅಂತ ನಕ್ಕರು.
ತಲೆ ಗಿಮ್ಮೆನ್ನಲು ಶುರುವಾಯ್ತು. ಯಾಕೋ ತೇಜಸ್ವಿ ಮತ್ತೆ ಕಾಡಲು ಶುರು ಮಾಡಿದರು. ಮತ್ತೆ ಮಾಯಾ ಲೋಕ ಕೈಗೆತ್ತಿಕೊಂಡೆ. ಮಾಯಾಲೋಕದ ಕೊನೆ ಪುಟಕ್ಕೆ ಬರುವ ಹೊತ್ತಿಗೆ ಏನೋ ಹೊಳೆದಂತಾಯಿತು. `ಅಣ್ಣಪಣ್ಣ ಇದು ಬಸವನಗುಂಡಿ ಹತ್ರ ಹೇಮಾವತಿ ನದಿ ಸೇರುತ್ತದೆ ಅಂತ ಅಂದಾಜು ಮಾಡಿದ್ದ. ಆದರೆ, ಆ ಕುರುಚಲು ಕಾಡಿನಲ್ಲಿ ನೆಡೆಯುತ್ತಾ ನನಗೆ ನಿದಾನವಾಗಿ ಅನುಮಾನ ಶುರು ಆಯ್ತು. ಏಕೆಂದರೆ, ಈ ಹಳ್ಳ ಹೇಮಾವತಿ ನದಿಗೆ ಸಂಪೂರ್ಣ ವಿರುದ್ದ ದಿಕ್ಕಿನಲ್ಲಿ ಹರಿಯುತ್ತಿದೆ!’.
ಹೌದು, ಇದು ಮಹಾನದಿ ನೈಲ್ ಮೂಲ ಹುಡುಕಲು ಹೊರಟವರಿಗೆ ಉಂಟಾದ ಜಿಜ್ಞಾಸೆ! ಹಾಗಾದರೆ, ಇದು ಕಿರುಗೂರಿನ ಗಯ್ಯಾಳಿಯೂ ಅಲ್ಲ, ಕಾವೇರಿ ವಿವಾದವನ್ನು ಗುರಿ ಇಟ್ಟುಕೊಂಡು ಬರೆದದ್ದೂ ಅಲ್ಲ .... ನದೀ ಮೂಲಗಳಲ್ಲಿ ನೆಡೆಯುವ ಪ್ರಾಕೃತಿಕ ವೈಶಿಷ್ಟ್ಯಗಳು... ಮುಂದೆ? ಅದಕ್ಕೆ ಭಾಗ ಎರಡು ಬರಲೇ ಇಲ್ಲವಲ್ಲ!
ಅಲ್ಲಿಂದ ಪ್ರತೀ ಪುಸ್ತಕಕ್ಕೂ ಒಂದು ಹೊಸ ಆಯಾಮ ದೊರಕೋಕೆ ಶುರುವಾಯ್ತು. ಜುಗಾರಿ ಕ್ರಾಸ್ ಆಗಲಿ ಅಥವಾ ಚಿದಂಬರ ರಹಸ್ಯವಾಗಲಿ, ಒಂದು ಕಾದಂಬರಿ ಅನ್ನೋ ಮನೋಭಾವ ಬದಲಾಯಿತು. ಅದು `ಸೃಷ್ಟಿ ಮತ್ತು ಸತ್ಯ’ ಸಂಶೋಧನೆಯ ಒಂದು ಕೊಂಡಿ ಅನ್ನಿಸೋಕೆ ಶುರುವಾಯ್ತು. ಪ್ರಿಸಿಗ್ ಮಾಡಿದ್ದೂ ಇದನ್ನೇ.... ಮೋಟಾರ್ ಸೈಕಲ್ ಸವಾರಿ ಮಾಡುತ್ತಾ, ಮೌಲ್ಯವನ್ನು ಪ್ರಶ್ನಿಸಿದವನು, ಲೀಲಾ ಎನ್ನೋ ವೇಶ್ಯೆಯ ಜೊತೆ ಹಡ್ಸನ್ ನದಿಯಮೇಲೆ ತೇಲುತ್ತಾ, ನೈತಿಕತೆಯ ಬಗ್ಗೆ ಮಾತನಾಡಿದ್ದು.
ಕೀಟ ಜಗತ್ತಿನಿಂದ ಹಿಡಿದು, ಮಿಲ್ಲೇನಿಯಂ ಸೀರೀಸ್, ಫ್ಲೈಯಿಂಗ್ ಸಾಸರ್ ನಂಥಹ ವೈಜ್ಞಾನಿಕ ಹಿನ್ನಲೆಯ ಬರಹಗಳಿರಬಹುದು ಅಥವಾ ಕೃಷ್ಣೇಗೌಡರ ಆನೆ, ರಹಸ್ಯ ವಿಶ್ವದಂಥಹ ಲಘು ಕಥೆಗಳಿರಬಹುದು, ಅವುಗಳಿಗೆ ನನ್ನದೇ ಆದ ವಿಶ್ಲೇಷಣೆಗಳು ಬರತೊಡಗಿದವು. ಪ್ರತೀ ಪುಸ್ತಕ ಮತ್ತೆ ಓದಿದಾಗ, ನೂರಾರು ಪ್ರಶ್ನೆಗಳು ಮೂಡಲು ಶುರುವಾದವು. ಅವುಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದರೂ, ಎಷ್ಟೋ ಪ್ರಶ್ನೆಗಳು, ಪ್ರಶ್ನೆಗಳಾಗೇ ಉಳಿದವು.
ತೇಜಸ್ವಿ ಮುಟ್ಟಿದ ವಿಷಯಗಳೆಷ್ಟು ಅನ್ನೋದನ್ನ ಹಾಗೇ ಲೆಖ್ಖ ಹಾಕೋಕೆ ಶುರು ಮಾಡಿದೆ. ರಹಸ್ಯ ವಿಶ್ವದಂತ ಮುಗ್ದ ಕಥೆಯಿಂದ ಹಿಡಿದು, ಚರಿತ್ರೆ, ಅರ್ಥಶಾಸ್ತ್ರ, ಸಮಾಜ, ವಿಜ್ಙಾನದ ಎಲ್ಲಾ ಅಂಗಗಳೂ ಸೇರಿಹೋಗಿದ್ದವು. ಪ್ರತಿಯೊಂದು ವಿಷಯಕ್ಕೂ, ಸೃಷ್ಟಿಗೂ ಸಂಬಂಧವನ್ನು ಕಲ್ಪಿಸುವ ಅವರ ಬರವಣಿಗೆಗಳು, ಬಿಡಿಬಿಡಿಯಾಗಿ ಓದಿದಾಗ ಅರ್ಥವಾಗಿರಲಿಲ್ಲ ಅನ್ನಿಸಿತು.
ಯಾಕೋ, ಕರ್ವಾಲೋ ಮಾತ್ರ ಮತ್ತೆ ಪೂರ್ತಿ ಓದಲಾಗಲಾಗಲೇ ಇಲ್ಲ. ವಿಪರೀತ ಪ್ರಶ್ನೆಗಳೇಳತೊಡಗಿದವು. ಮೊದಲನೇ ಪುಟ ಮೂಡಿಗೆರೆಯ ಜೇನು ಸೊಸೈಟಿಯಿಂದ ಯಾಕೆ ಶುರುವಾಯ್ತು ಅನ್ನೋದೇ ಒಂದು ಪ್ರಶ್ನೆಯಾಗಿತ್ತು. ಏನೋ ತಡಕಾಡುವಾಗ, ಆಲ್ಬರ್ಟ್ ಐನ್ ಸ್ಟೀನ್ ಹೇಳಿದ ಮಾತು ಸಿಕ್ಕಿತು. `ಜಗತ್ತಿನಿಂದ ಜೇನುನೊಣಗಳು ಕಣ್ಮರೆಯಾದರೆ, ಭೂಮಿಯಲ್ಲಿ ಮನುಷ್ಯನ ಆಯಸ್ಸು ನಾಲ್ಕು ವರ್ಷ ಮಾತ್ರ.
ವಿಕಾಸದ ಕೊಂಡಿಯ ವಿಷಯಕ್ಕೆ ಬರುವ ಮುಂಚೆ, ವಿನಾಶದ ಮುನ್ಸೂಚನೆಯ ಬಗ್ಗೆಯೂ ಮಾತನಾಡಿದ್ದರು.
ಮುಂದೆ ಕಾಡಿಗೆ ಹೋದಾಗಲೆಲ್ಲ, ನನ್ನದೇ ರೀತಿಯಲ್ಲಿ ಪ್ರಕೃತಿಯನ್ನು ವಿಶ್ಲೇಷಿಸಲು ಶುರು ಮಾಡಿದೆ. ಬ್ರಹ್ಮಗಿರಿಗೆ ಹೋದಾಗ ನೋಡಿದ ಹಾರುವ ಓತಿ, ಎಂಟು ವರ್ಷ ಬೆಂಕಿ ಬೀಳದಂತೆ ನೋಡಿಕೊಂಡ ಜಾಗದಲ್ಲಿ, ಬೆಂಕಿ ನಿರೋಧಕ ಗಿಡಗಳು ಹುಟ್ಟಿದ್ದು, ನಾನು ಹುಟ್ಟೋಕೆ ಮುಂಚೆ ಭತ್ತದ ಗದ್ದೆಯಾಗಿ, ಜನರು ಖಾಲಿ ಮಾಡಿದ ಹಡ್ಲು ಒಂದು ನಿಧಾನವಾಗಿ ಜೌಗು ಪ್ರದೇಶವಾಗಿ ಪರಿವರ್ತನೆಗೊಳ್ಳುತ್ತಿದ್ದದ್ದು ನೋಡುವಾಗ, ತೇಜಸ್ವಿ ಡಾರ್ವಿನ್ ವಿಕಾಸವಾದವನ್ನು ಯಾಕೆ ಅಷ್ಟೊಂದು ಹಚ್ಚಿಕೊಂಡಿದ್ದರು ಅನ್ನೋದು ಅರ್ಥವಾಗಲು ಶುರುವಾಯ್ತು.
ಮುಂದೆ, ಅವತಾರ್, ಲೈಫ್ ಆಫ್ ಪೈ ಸೇರಿದಂತೆ, ಎಷ್ಟೋ ಸಿನೆಮಾಗಳು ಸಹ, ತೇಜಸ್ವಿಯವರ ವಿಚಾರಧಾರೆಯ ಮೂಸೆಯಿಂದ ಹೊರಬಂದಂತೆ ಅರ್ಥೈಸಿಕೊಂಡಿದ್ದೇನೆ ಅಂದರೂ ತಪ್ಪೇನಿಲ್ಲ.
ವಿಕಾಸವಾದವನ್ನು ಅಷ್ಟೊಂದು ಹಚ್ಚಿಕೊಂಡಿದ್ದರೂ, ಡಾರ್ವಿನ್ ನ `survival of the fittest’ ಗಿಂತ, `survival of adoptable’, ಅನ್ನೋದನ್ನ ತೇಜಸ್ವಿ ನಂಬಿದ್ದರು ಅನ್ನೋದು ನನ್ನ ಭಾವನೆ. ಅವರ ಜೀವನದಲ್ಲಿ ಅದನ್ನು ಅಳವಡಿಸಿಕೊಂಡಿದ್ದರು ಕೂಡ.
ದೇಶದಲ್ಲಿ ಬರಹಗಾರರೆಲ್ಲ ಇನ್ನೂ ಪ್ರಕಾಶಕರ ಜೊತೆ ಜಗಳವಾಡುವ ಹೊತ್ತಿನಲ್ಲಿ, ಅಮೇರಿಕಾದಿಂದ ಡೆಸ್ಕ್ ಟಾಪ್ ಪಬ್ಲಿಷರ್ ತರಿಸಿ, ಕನ್ಫ್ಯೂಸ್ ಆಗಿ, ಮಗುವಿನಂತೆ ರಚ್ಚೆ ಹಿಡಿದು, ಅದನ್ನು ಅರ್ಥಮಾಡಿಕೊಂಡು ಉಪಯೋಗಿಸಲು ಶುರುಮಾಡಿದ್ದರು. ನನಗೆ ತಿಳಿದಂತೆ, ಬೆಂಗಳೂರಲ್ಲಿದ್ದ ನನಗಿಂತ ಮುಂಚೆ ಡಿಜಿಟಲ್ ಕ್ಯಾಮೆರಾ ಉಪಯೋಗಿಸಲು ಶುರುಮಾಡಿದ್ದರು.
ಅವರ ಹೊಸ ವಿಚಾರಗಳು ಓದುತ್ತಾ ಹೋದಂತೆ, ವಾಸ್ತವತೆಯಿಂದ ದೂರ ಅವರೆಂದೂ ಬದುಕಿಲ್ಲ ಅನ್ನೋದು ಸ್ಪಷ್ಟವಾಗುತ್ತೆ. ಜಾಗತೀಕರಣ ಮತ್ತು ಹೊಸ ಆರ್ಥಿಕ ವ್ಯವಸ್ಥೆಯಿಂದಾಗುವ ಪರಿಣಾಮಗಳನ್ನು ವಿವರಿಸುತ್ತಲೇ, ಅದನ್ನು ಒಪ್ಪಿಕೊಂಡು ಬದುಕಲೇಬೇಕಾದ ಮತ್ತು ಅದರಲ್ಲೇ ನಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳುವ ಅನಿವಾರ್ಯತೆಯನ್ನು ಹೇಳುತ್ತಾರೆ.
ಕರ್ನಾಟಕ ಸರ್ಕಾರ ಸಿದ್ದಪಡಿಸಿದ ಕನ್ನಡ ತಂತ್ರಾಂಶವನ್ನು ಮೈಕ್ರೋಸಾಫ್ಟ್ ಕಂಪನಿಗೆ ಯಾಕೆ ಕೊಡಬಾರದು ಅನ್ನೋದನ್ನ ನನ್ನ ಜೊತೆಯೂ ಮಾತಾಡಿದ್ದರು. ಅದರ ಸೋರ್ಸ್ ಕೋಡ್ ಎಲ್ಲರಿಗೂ ಲಭ್ಯ ಮಾಡದಿದ್ದರೆ, ನಾವೇ ಒಂದು ಹೊಸ ತಂತ್ರಾಂಶ ತಯಾರಿಸಬೇಕು ಅಂತಾನೂ ಹೋರಾಡಿದರು. ಆದರೆ, ಅವರು ಹೇಳಿದ ಕಾರಣಗಳು ನನಗೆ ಸರಿಯಾಗಿ ಅರ್ಥವಾಗುವ ಹೊತ್ತಿಗೆ, ಅವರಿರಲಿಲ್ಲ.
ಯಾವುದೇ `ಇಸಂ’ ಗಳಿಗೆ ಅಂಟಿಕೊಳ್ಳದೆ, ಸಾಮಾಜಿಕ ಜಾಡ್ಯಗಳನ್ನು ಎಗ್ಗಿಲ್ಲದೆ ಟೀಕಿಸಿ, ಆನೆಯಂತೆ ನೆಡೆದುಕೊಂಡು ಹೋದರು ಅನ್ನಿಸಿತು. ಮೈಸೂರಿನ ತಮ್ಮ ಮನೆಯಮೇಲೆ ದಾಳಿಗೆ ಕಾರಣರಾದ ಸಂಘಪರಿವಾರವನ್ನು ದ್ವೇಷಿಸಿದಷ್ಟೇ, ಜಾಗತಿಕ ಇಸ್ಲಾಂ ಮೂಲಭೂತವಾದವನ್ನೂ ದ್ವೇಷಿಸುತ್ತಿದ್ದರು. ಅವರೇ ಬೆಳೆದುಬಂದ ಸಮಾಜವಾದವನ್ನೂ, ರೈತರ ಚಳುವಳಿಗಳು ಹಾದಿ ತಪ್ಪಿದ್ದನ್ನೂ ಟೀಕಿಸಿದರು.
ನನ್ನ ಪಾಲಿಗಂತೂ ತೇಜಸ್ವಿ, ಓದಿದಷ್ಟೂ, ಬರೆದಷ್ಟೂ ಮುಗಿಯದ – ವಿಶ್ಲೇಷಿದಷ್ಟೂ ಅರ್ಥವಾಗದ, ಒಂದು ದೈತ್ಯವಾಗಿ ಪರಿವರ್ತನೆಗೊಂಡರು. ಕೋಟ್ಯಂತರ ವರ್ಷಗಳ ವಿಕಾಸವನ್ನೂ, ಸಮಕಾಲೀನ ಆರ್ಥಿಕ, ಸಾಮಾಜಿಕ ಮತ್ತು ವೈಜ್ಙಾನಿಕ ಬದಲಾವಣೆಯಳನ್ನೂ, ಹೊಸ ಆರ್ಥಿಕ ನೀತಿಯಿಂದ ಸಮಾಜವನ್ನು ನೈತಿಕ ಮತ್ತು ಭೌದ್ದಿಕ ದಿವಾಳಿಯತ್ತ ಕೊಂಡೊಯ್ಯುತ್ತಿರುವುದನ್ನೂ ಮತ್ತು ನಿಧಾನವಾಗಿ ಮನುಕುಲ ವಿನಾಶದತ್ತ ಜಾರುತ್ತಿರುವುದನ್ನೂ, ನಿರರ್ಗಳವಾಗಿ, ಸರಳವಾಗಿ ಪ್ರತಿಪಾದಿಸುತ್ತಿದ್ದರು, ಅನ್ನಿಸುತ್ತದೆ.
ನನ್ನ ಪ್ರಕಾರ, ತೇಜಸ್ವಿಯನ್ನು ವರ್ಣಿಸುವುದು, ಕುರುಡರು ಆನೆಯನ್ನು ಮುಟ್ಟಿ ವರ್ಣಿಸಿದ ಹಾಗೆ. ನಾನು ಯಾವ ಭಾಗವನ್ನು ತಡವಿ ಇಷ್ಟೊಂದು ಬರೆದೆ ಎಂದು ಗೊತ್ತಿಲ್ಲ.
ಈಗಲೂ ಅವರ ಮನೆಯ ಗೇಟಿನ ಮುಂದೆ ಕಾರಿನಲ್ಲಿ ಹೋಗುವಾಗ, `ಇಲ್ಲಿ ಬಂದು ನನ್ನ ಸಮಯ ಹಾಳುಮಾಡಬೇಡ ಮಾರಾಯ,’ ಅನ್ನೋ ಮಾತು ನೆನಪಾಗುತ್ತದೆ.
ಆಗೆಲ್ಲ ಹೋದಾಗ, ನಾನು ತೇಜಸ್ವಿಗೆ ಯಾವುದೇ ಪ್ರಶ್ನೆಗಳನ್ನು ಕೇಳಿದ ನೆನಪಿಲ್ಲ. ಈಗಲೂ ಅವರ ಸಮಯ ಹಾಳುಮಾಡುವಷ್ಟು ಸಮಯ ನನಗಿದೆ. ಅದರ ಜೊತೆ, ನೂರಾರು ಪ್ರಶ್ನೆಗಳಿವೆ. ಆದರೆ, ಅದನ್ನು ಕೇಳೋಕೆ ಅವರೇ ಇಲ್ಲ.
ಈಗಲೂ ನಾನು ಅವರ ತೋಟದ ಗೇಟಿನ ಮುಂದೆ ಹೋಗುವಾಗ ಬೋರ್ಡೊಂದು ಅಣಕಿಸುತ್ತದೆ – ನಿರುತ್ತರ.




ಮಾಕೋನಹಳ್ಳಿ ವಿನಯ್ ಮಾಧವ.