ಹುಲಿ ಸಂತತಿ ರಕ್ಷಿಸಿದ ದುರ್ಗೆ
ಅದ್ಯಾಕೋ ಗೊತ್ತಿಲ್ಲ, ಬಾಲ್ಯದಿಂದಲೂ ನಾನು ಕಾಂಗ್ರೆಸ್ ವಿರೋಧಿಯಾಗಿ
ಬೆಳೆದೆ. ಬಹುಷ:, ನಾವು ಶಾಲೆಯಲ್ಲಿದ್ದಾಗ ತುರ್ತುಪರಿಸ್ಥಿತಿ ಇದ್ದದ್ದು, ಆಮೇಲೆ ಇಂದಿರಾ ಗಾಂಧಿ
ಚುನಾವಣೆಯಲ್ಲಿ ಸೋತದ್ದು, ಮತ್ತೆ ಅಧಿಕಾರಕ್ಕೆ ಬಂದಿದ್ದೂ ಕಾರಣವಿರಬಹುದು.

ಬೆಂಗಳೂರು ಸೇರಿ, ಪತ್ರಿಕೋದ್ಯಮ ಶುರು ಮಾಡೋ ಹೊತ್ತಿಗೆ,
ಎಲ್ಲರ ಮನೆಯ ದೋಸೆ ತೂತು ಅನ್ನೋದು ಅರ್ಥವಾಗಿತ್ತು. ಅದರ ಮಧ್ಯ, ಕೆಲವು ರಾಜಕಾರಣಿಗಳು ವೈಯಕ್ತಿಕವಾಗಿ
ಇಷ್ಟವಾಗೋಕೆ ಶುರುವಾದವು. ಅವರುಗಳ ವೈಯಕ್ತಿಕ ದೌರ್ಬಲ್ಯಗಳನ್ನು ನಿರ್ಲಕ್ಷಿಸಿ, ಸಾಮಾಜಿಕ ಕಳಕಳಿ,
ವಿಧ್ವತ್ತು ಮತ್ತು ಕೆಲವು ವಿಷಯಗಳಲ್ಲಿ ಅವರಿಗಿದ್ದ ಜ್ಙಾನ, ವಾಕ್ಚಾತುರ್ಯಗಳನ್ನು ಇಷ್ಟಪಡೋಕೆ ಶುರುಮಾಡಿದೆ.
ಎಲ್ಲಾ ಪಕ್ಷಗಳನ್ನೂ ಒಂದೇ ಸಮನಾಗಿ ನೋಡೋದೂ ಅಭ್ಯಾಸವಾಗಿ ಹೋಗಿತ್ತು.
ವನ್ಯಜೀವಿಗಳ
ಬೆನ್ನುಹತ್ತಿ ಹೋದಾಗ ಕೆಲವು ಸತ್ಯಗಳು ಅರ್ಥವಾಗತೊಡಗಿದವು. ಕುದುರೆಮುಖ ಗಣಿಗಾರಿಕೆ ವಿರುದ್ದ ತಿರುಗಿ
ಬಿದ್ದಾಗ ಸಹಾಯಕ್ಕೆ ಬಂದದ್ದು ಕಾನೂನು ಮಾತ್ರ. ಜಾಗತೀಕರಣ ಮತ್ತು ವ್ಯಾಪಾರಿಕರಣದ ಗುಂಗಿಗೆ ಬಿದ್ದ
ದೇಶದಲ್ಲಿ, ಸಾರ್ವಜನಿಕ ವಲಯದ ಈ ಉದ್ದಿಮೆಯ ವಿರುದ್ದ ಹೋರಾಡೋದು ಸುಲಭದ ಮಾತಾಗಿರಲಿಲ್ಲ.
ಹೆಚ್ಚಾಗಿ, ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಪರಿಸರ
ಸಂರಕ್ಷಣಾ ಕಾಯ್ದೆಯ ಮೊರೆಹೋಗಬೇಕಾಯ್ತು. ಕಾನೂನು ಹೋರಾಟದ ಮುಂಚೂಣಿಯಲ್ಲಿದ್ದ ಪ್ರವೀಣ್ ಭಾರ್ಗವ್,
ಈ ಕಾಯ್ದೆಗಳ ಯಾವುದೇ ಪರಿಚ್ಚೇದಗಳನ್ನು ನಿರರ್ಗಳವಾಗಿ ಗಿಣಿ ಪಾಠದಂತೆ ಹೇಳುತ್ತಿದ್ದರು. ನಾನು ಬಾಯಿ
ಬಿಟ್ಟುಕೊಂಡು ಕೇಳುತ್ತಿದ್ದೆ. ಈ ಎರಡೂ ಕಾಯ್ದೆಗಳು ಅನುಷ್ಟಾನವಾಗಿದ್ದು, ಕ್ರಮವಾಗಿ 1972 ಮತ್ತು
1980 ರಲ್ಲಿ. ಆದನ್ನು ತಂದವರೇ ಪ್ರಧಾನ ಮಂತ್ರಿ ಇಂದಿರಾ ಗಾಂಧಿ.
ಮೊದಮೊದಲಿಗೆ ಉದಾಸೀನ ಮಾಡಿದ್ದೆ. ಕಾಂಗ್ರೆಸ್ ಪಕ್ಷ ಅನ್ನೋದು
ಇಂದಿರಾ ಗಾಂಧಿಯ ಕಪಿ ಮುಷ್ಟಿಯಲ್ಲಿತ್ತು. ಯಾವ ಕಾಯ್ದೆ ತಂದರೂ, ಎಲ್ಲರೂ ತಲೆ ತಗ್ಗಿಸಿ ಹೆಬ್ಬೆಟ್ಟು
ಒತ್ತುತ್ತಿದ್ದರು ಅನ್ನೋ ಭಾವನೆ ಇತ್ತು. ನಿಧಾನವಾಗಿ ಕಾಂಗ್ರೆಸ್ ಪಕ್ಷ ಹಸು ಮತ್ತು ಹಾಲು ಕುಡಿಯುವ
ಕರುವಿನ ಗುರುತಿನಿಂದ, ಹಸ್ತದ ಗುರುತಿಗೆ ಬಂದ ಬೆಳವಣಿಗೆಗಳನ್ನು ಗಮನಿಸಿದಾಗ, ಇಂದಿರಾ ಗಾಂಧಿಯ ಹಾದಿ
ಅಷ್ಟೊಂದು ಸರಳವಾಗಿರಲಿಲ್ಲ ಅನ್ನೋದು ಅರ್ಥವಾಗಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಬಾರಿ ಭುಗಿಲೆದ್ದ
ಬಂಡಾಯ, ವಿಭಜನೆ, ವೈಯಕ್ತಿಕ ಸೋಲುಗಳ ನೆಡುವೆಯೂ, ಇಂದಿರಾ ಗಾಂಧಿ ಪ್ರಶ್ನಾತೀತ ನಾಯಕಿಯಾಗಿ ಹೊರಹೊಮ್ಮಿದ್ದರು.
ಇವೆಲ್ಲದರ ನೆಡುವೆ, ಇಂತಹ ಎರಡು ಕಾನೂನುಗಳನ್ನು ಇಂದಿರಾ
ಗಾಂಧಿ ಹೇಗೆ ಮತ್ತು ಏಕೆ ಜಾರಿ ಮಾಡಿದರು ಅನ್ನೋದು ಯಕ್ಷಪ್ರಶ್ನೆಯಾಗೇ ಉಳಿದಿತ್ತು. ಏಕೆಂದರೆ, ಈ
ಕಾಯ್ದೆಗಳನ್ನು ಓದಿ, ಅರ್ಥಮಾಡಿಕೊಂಡವರಿಗೆ ಮಾತ್ರ ಅವುಗಳ ಆಳ ಮತ್ತು ಅಗಲ ಅರ್ಥವಾಗುವುದು. ಸೃಷ್ಟಿ,
ಪ್ರಕೃತಿ, ಪರಿಸರ ಮತ್ತು ಸಮತೋಲನದ ಬಗ್ಗೆ ಕಾಳಜಿ ಮತ್ತು ತಿಳುವಳಿಕೆ ಇಲ್ಲದವರು ಮತ್ತು ಅವುಗಳ ಬಗ್ಗೆ
ವೈಜ್ಞಾನಿಕ ವಿಶ್ಲೇಷಣೆ ಮಾಡದವರು, ಈ ಕಾಯ್ದೆಯನ್ನು ತರುವುದಿರಲಿ, ಅರ್ಥಮಾಡಿಕೊಳ್ಳಲೂ ಸಾಧ್ಯವಿಲ್ಲ.
ಇಂದಿರಾ ಗಾಂಧಿಯ ವೈಯಕ್ತಿಕ ಜೀವನ, ಅದರಲ್ಲೂ ಅವರು ಪ್ರಕೃತಿಯ
ಬಗ್ಗೆ ಯಾತಕ್ಕಾಗಿ ಅಷ್ಟೊಂದು ಕಾಳಜಿ ವಹಿಸಿದ್ದರು ಅನ್ನೋದರ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ.
ಕೆಲವು ಪಠ್ಯಪುಸ್ತಕಗಳ ಜಾಳು ಜಾಳಾದ ವಿವರಗಳಂತೆ,
ಆಕೆ ನೆಹರೂ ಪುತ್ರಿ, ಪರಿಸರದ ಬಗ್ಗೆ ಕಾಳಜಿ ಇದ್ದವರು, ಬಂಗ್ಲಾ ದೇಶದ ವಿಭಜನೆಗಾಗಿ ಪಾಕಿಸ್ತಾನದ ಸೇನೆಯನ್ನುಸೆದೆಬಡಿದವರು, ಸರ್ವಾಧಿಕಾರಿಯಂತೆ ತುರ್ತುಪರಿಸ್ಥಿತಿ ಹೇರಿದವರು, ಇಂತಹ ವಿವರಗಳು ಮಾತ್ರ
ಸಿಗುತ್ತಿದ್ದವು. ಆ ಸಂದರ್ಭದಲ್ಲೇ ಕೈಗೆ ಸಿಕ್ಕಿದ್ದು, ನಮ್ಮ ಜಿಲ್ಲೆಯವರೇ ಆದ, ಕೇಂದ್ರದ ಮಾಜಿ ಪರಿಸರ
ಮತ್ತು ಅರಣ್ಯ ಮಂತ್ರಿ ಜೈರಾಂ ರಮೇಶ್ ಬರೆದ: `ಇಂದಿರಾ ಗಾಂಧಿ, ಎ ಲೈಫ್ ಇನ್ ನೇಚರ್’.
ಇಂದಿರಾ ಗಾಂಧಿಯ ಜೀವನದಲ್ಲಿ ಬರೆದ, ಬಂದ ಪತ್ರಗಳನ್ನೇ ಪ್ರಧಾನವಾಗಿಟ್ಟುಕೊಂಡು
ಬರೆದ ಈ ಪುಸ್ತಕ ಕಥೆಯಂತೆ ಓದಿಸಿಕೊಂಡು ಹೋಗುವುದಿಲ್ಲ. ವಿವಿಧ ವರ್ಷಗಳ ಘಟನೆಗಳು ಹಿಂದೆ, ಮುಂದೆ
ಓಡಾಡುತ್ತಿರುತ್ತವೆ. ಪುಸ್ತಕದ ಪೂರ್ತಿ ಇಂದಿರಾ ಗಾಂದಿಯವರ ಜೀವನದ ಪತ್ರ ವ್ಯವಹಾರಗಳ ಸುತ್ತ ಕೇಂದ್ರೀಕೃತವಾಗಿದೆ.
ಆದರೆ, ಇಂದಿರಾ ಪ್ರಿಯದರ್ಶಿನಿ ಎಂಬ ಹುಡುಗಿ, ಇಂದಿರಾ ಗಾಂಧಿಯಾಗಿ ರೂಪುಗೊಂಡ ವಿವರಗಳು ವಿಸ್ತಾರವಾಗಿ
ಅರ್ಥವಾಗುತ್ತದೆ.
ಅದು ಅಕ್ಟೋಬರ್ 27, 1984…. ಕಾಶ್ಮೀರದ ರಾಜ್ಯಪಾಲರ ಸಲಹೆಯ
ವಿರುದ್ದವಾಗಿ, ಇಂದಿರಾ ಗಾಂಧಿ ಕಾಶ್ಮೀರ ಕಣಿವೆಗೆ ತಮ್ಮ ಮೊಮ್ಮಕ್ಕಳನ್ನು ಕರೆದುಕೊಂಡು ಹೊರಟೇಬಿಟ್ಟರು.
ಅಂತಾ ರಾಜಕಾರಣವೇನಲ್ಲ. ವಸಂತ ಕಾಲದಲ್ಲಿ ಚಿನಾರ್ ಎಲೆಗಳು ಮೈದುಂಬಿ ರಂಗುರಂಗಾಗಿ ನಿಂತಿವೆ ಅನ್ನುವ
ಸುದ್ದಿ ಸಿಕ್ಕಿತ್ತು. ಎಷ್ಟೋ ವರ್ಷಗಳಾಗಿದ್ದವು, ತನ್ನ ತವರೂರಿನಿ ಈ ವೈಭವ ನೋಡದೆ. ಎಷ್ಟೋ ಸಲ ಹೋಗಬೇಕೆಂದರೂ,
ಬಿಡುವಿಲ್ಲದ ಕೆಲಸದಿಂದಾಗಿ ಆಗಿರಲಿಲ್ಲ.
ಈ ಸಲ ಮಾತ್ರ, ಹಿಂದು ಮುಂದು ನೋಡದೆ ಕಾಶ್ಮೀರಕ್ಕೆ ಹೋದವರೆ,
ಚಿನಾರ್ ಮರಗಳ ಮಧ್ಯೆ ಮನಸಾರೆ ತಿರುಗಾಡಿದರು. ಅಷ್ಟೇ ಅಲ್ಲ, ತಮ್ಮ ಅತ್ಯಂತ ಪ್ರೀತಿಯ ದಿಚಿಗಾಂ ರಾಷ್ಟ್ರೀಯ
ಉದ್ಯಾನವನಕ್ಕೂ ಭೇಟಿ ನೀಡಿದರು. ನಾಲ್ಕೇ ದಿನ, ತಮ್ಮ ಅಂಗರಕ್ಷಕನಿಂದಲೇ ಬರ್ಬರವಾಗಿ ಹತ್ಯೆಯಾದರು.
ಓದಿ ಮನಸ್ಸಿಗೆ ಪಿಚ್ಚೆನಿಸಿತು.
ಎರಡು ಕಾಯ್ದೆಗಳ ಬಗ್ಗೆ ಬಹಳ ಕುತೂಹಲವಿತ್ತು. 1971-72,
ಇಂದಿರಾ ಗಾಂಧಿ ಮಹತ್ತರ ಹೆಜ್ಜೆಗಳನ್ನು ಇಡುತ್ತಿದ್ದರು. ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದ ಬೆನ್ನಲ್ಲೇ,
ಸೋವಿಯತ್ ದೇಶದ ಜೊತೆ ದ್ವಿಪಕ್ಷೀಯ ಸಂಬಂಧದ ವಿಷಯ ಸಹಿ ಹಾಕುವುದು, ಬಾಂಗ್ಲಾ ದೇಶ ವಿಮೋಚನೆಯಂತ ವಿಷಯಗಳಲ್ಲಿ
ಮುಳುಗಿ ಹೋಗಿದ್ದರು. ಇದೇ ಸಮಯದಲ್ಲಿ, ನಕ್ಸಲ್ ಬಾರಿಯಲ್ಲಿ ಚಳುವಳಿಯೂ ಹುಟ್ಟಿಕೊಂಡಿತು. ಈ ವಿಷಯಗಳಲ್ಲಿ
ಇಂದಿರಾ ಗಾಂಧಿಗೆ ಮಾರ್ಗದರ್ಶನ ನೀಡಲು ಅವರ ಕಾರ್ಯದರ್ಶಿ ಪಿ ಎನ್ ಹಕ್ಸರ್ ಇದ್ದರು.
ಆದರೆ, ಕಾರ್ಯದರ್ಶಿಯ ಸಹಾಯವಿಲ್ಲದೆ ಇಂದಿರಾ ಗಾಂಧಿಯ ಮೆದುಳು
ಇನ್ನೊಂದು ದಿಕ್ಕಿನಲ್ಲಿ ಕೆಲಸ ಮಾಡುತ್ತಿತ್ತು. ಸ್ವಲ್ಪ ದಿನಗಳಲ್ಲೇ, ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು
ಜಾರಿಗೆ ತಂದೇ ಬಿಟ್ಟರು.

ಮುಂದಿನ ಕೆಲವೇ ದಿನಗಳಲ್ಲಿ, ಪರಿಸರ ಸಂರಕ್ಷಣೆ ಕಾಯ್ದೆ ನಮ್ಮ
ದೇಶದಲ್ಲಿ ಜಾರಿಯಾಯ್ತು. ಈ ಪರಿಯ ಕಳಕಳಿಯನ್ನು ಊಹಿಸಲೂ ಕಷ್ಟವೇ ಸರಿ.
ನೆಹರೂ ಬಗ್ಗೆ ಯಾವುದೇ ಆಭಿಪ್ರಾಯವಿದ್ದರೂ ಸರಿ. ನನ್ನ ಪ್ರಕಾರ,
ದೇಶಕ್ಕೆ ಅವರ ಅತ್ಯುತ್ತಮ ಕೊಡುಗೆ ಇಂದಿರಾ ಗಾಂಧಿ. ಆಕೆಗೆ 13 ವರ್ಷವಿದ್ದಾಗ, ಸ್ವೀಡನ್ನಿನ ಮೌರಿಸ್
ಮೇಟರ್ಲಿಂಕ್ ಬರೆದ, ಜೇನ್ನೊಣದ ಜೀವನ ಪುಸ್ತಕವನ್ನು ಕೊಡುಗೆಯಾಗಿ ಕೊಟ್ಟರು. ಅಲ್ಲಿಂದ ಶುರುವಾದ ಪ್ರಕೃತಿಯ
ಜೊತೆಯ ಕೊಂಡಿ, ಕೊನೆ ಉಸಿರಿರುವವರೆಗೂ ಉಳಿದುಕೊಂಡಿತು.
ಮೊದಲ ಬಾರಿಗೆ ಇಂದಿರಾ ಹುಲಿಯನ್ನು ನೋಡಿದ್ದು 1952 ರಲ್ಲಿ
-- ಜೋಗ್ ಜಲಪಾತ ನೋಡಲು ಹೋದಾಗ. ದೆಹಲಿಯ ತೀನ್ ಮೂರ್ತಿ ಭವನದಲ್ಲಿ ಒಂದು ಸಣ್ಣ ಮೃಗಾಲಯವನ್ನಿಟ್ಟುಕೊಂಡು,
ಅದರಲ್ಲಿ ಮೂರು ಹುಲಿಮರಿಗಳನ್ನು ಸಾಕಿಕೊಂಡಿದ್ದರೂ, ಕಾಡಿನಲ್ಲಿ ಕಂಡ ಹುಲಿಯ ಬಗ್ಗೆ ಇಂದಿರಾ ಗಾಂಧಿ
ಅಭಿಮಾನದಿಂದ ವಿವರಿಸುತ್ತಾರೆ.
ಪರಿಸರ ಸಂರಕ್ಷಣೆ ಕಾಯ್ದೆ ತಂದಷ್ಟು ಸುಲಭವಾಗಿರಲಿಲ್ಲ. ಸ್ವಾತಂತ್ರ್ಯ
ಬಂದ ಹೊಸತರಲ್ಲಿ, ಜನಗಳು, ಮಹಾರಾಜರು, ಹೊಸದಾಗಿ ಚುನಾಯಿತರಾದ ಸದಸ್ಯರುಗಳಿಗೆ ಅವರದೇ ಆದ ಅಭಿಪ್ರಾಯಗಳಿದ್ದವು.
ಭರತ್ ಪುರ ಪಕ್ಷಿಧಾಮಕ್ಕೆ ಕಂಟಕ 1953 ರಲ್ಲೇ, ಅಲ್ಲಿನ ಮಹಾರಾಜನಿಂದ ಶುರುವಾಗಿತ್ತು. ಆಗ ನೆಹರೂ
ಪ್ರಧಾನಿಯಾಗಿದ್ದರು. ಅದನ್ನು ರಾಷ್ಟ್ರೀಯ ಉದ್ಯಾನವನವನ್ನಾಗಿ ಘೋಷಿಸಲು, ಇಂದಿರಾ ಗಾಂಧಿ 1982 ರ
ವರೆಗೆ ಕಾಯಬೇಕಾಯ್ತು. ಇತ್ತೀಚೆಗೆ ಹುಲಿ ಸಂತತಿ ಕಳ್ಳ ಬೇಟೆಯಿಂದ ನಾಶವಾದ ಸರಿಸ್ಕಾ ಕಾಡನ್ನು ಸಂರಕ್ಷಿಸಲು
ಕೂಡ ಇಂದಿರಾ ಗಾಂಧಿ ತುಂಬಾ ಹೆಣಗಬೇಕಾಗಿತ್ತು.
ಪರಿಸರ ಮತ್ತು ಆರ್ಥಿಕೆ ಬೆಳವಣಿಗೆ ಬಗ್ಗೆ ಇಂದಿರಾ ಗಾಂಧಿಗಿದ್ದ
ಸಮಚಿತ್ತವನ್ನು ಈ ಪುಸ್ತಕ ಬಹಳ ಚೆನ್ನಾಗಿ ವಿಶ್ಲೇಷಿಸುತ್ತದೆ. ನಮ್ಮ ಜನಸಂಖ್ಯೆ 50 ಕೋಟಿಗೆ ಹತ್ತಿರವಾಗುತ್ತಿದ್ದಾಗಲೇ,
ಇಂದಿರಾ ಗಾಂದಿ ಕುಟುಂಬ ಯೋಜನೆ ಜಾರಿಗೊಳಿಸಲು ಆರಂಭಿಸಿದರು. ಅದು ಅಂತಾ ಯಶಸ್ಸೇನೂ ಕೊಡದಿದ್ದರೂ,
ಆ ಥರದ ಚಿಂತನೆ ಈಗಿನ ರಾಜಕಾರಣಿಗಳ ಹತ್ತಿರವೂ ಸುಳಿದಿಲ್ಲ. ನಮ್ಮ ಜನಸಂಖ್ಯೆ 125 ಕೋಟಿ ದಾಟಿ, ಮುನ್ನುಗ್ಗುತ್ತಿದೆ.
ಯಾವುದೇ ಪಕ್ಷದ ರಾಜಕಾರಣಿಯೂ ಆ ವಿಷಯ ಮಾತನಾಡುತ್ತಿಲ್ಲ. ಪ್ರಾಕೃತಿಕ ಸಂಪತ್ತಿಗೆ ಅನುಗುಣವಾಗಿ ಜನಸಂಖ್ಯೆ
ಇದ್ದರೆ ಮಾತ್ರ ಆರ್ಥಿಕ ಸಧೃಡತೆ ಸಾಧ್ಯ ಅನ್ನೋ ಸತ್ಯವನ್ನು, ಜಿಡಿಪಿಯ ಸಂಖ್ಯಾಶಾಸ್ತ್ರದ ಮಿಥ್ಯದ
ಕನಸಿನ ಕೆಳಗೆ ಗುಡಿಸುತ್ತಾರೆ. ಯಾಕಂದರೆ, ಜನಸಂಖ್ಯೆ ಎನ್ನುವುದು ಇವರಿಗೆ ಮತ ಸಂಪತ್ತು.
ಈ ಪುಸ್ತಕವನ್ನೋದುವಾಗ
ನನಗನ್ನಿಸಿದ್ದೆನೆಂದರೆ, ಕಾಂಗ್ರೆಸ್ಸಿಗರೂ ಸೇರಿದಂತೆ ಇಂದಿರಾ ಗಾಂಧಿಯನ್ನು ಸಂಪೂರ್ಣವಾಗಿ ಯಾರೂ
ಅರ್ಥಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಪುಸ್ತಕ, ಮಿಥ್ಯಾರೋಪಕ್ಕೊಳಗಾದ ನಾಯಕಿಯೊಬ್ಬಳನ್ನು ಅರ್ಥಮಾಡಿಕೊಳ್ಳಲು
ಸಹಕಾರಿಯಾಗುತ್ತದೆ ಮತ್ತು ಅದಕ್ಕಾಗಿ, ಜೈರಾಂ ರಮೇಶರಿಗೆ ಧನ್ಯವಾದಗಳನ್ನು ಅರ್ಪಿಸಬೇಕಾಗಿದೆ.
ಆದರೂ, ಈ ಪುಸ್ತಕದಿಂದಾಗಿ, ಜೈರಾಂ ರಮೇಶರ ಬಗ್ಗೆ ಒಂದು ಪ್ರಶ್ನೆ
ಉಧ್ಬವಿಸುತ್ತದೆ. ಜೈರಾಂ ರಮೇಶ್ ರವರೇ ಹೇಳುವಂತೆ, ಅವರ ಇಪ್ಪತ್ತಾರು ತಿಂಗಳ ಮಂತ್ರಿಗಿರಿಯಲ್ಲಿ,
ಅವರು ತೀವ್ರ ಆರ್ಥಿಕ ಬೆಳವಣಿಗೆಯ ಹರಿಕಾರನಿಂದ, ಆರ್ಥಿಕ ಬೆಳವಣಿಗೆಯು ಪರಿಸರ ಸಮತೋಲನದ ಪರಿಮಿತಿಯಲ್ಲಿರಬೇಕು
ಅನ್ನೋ ವ್ಯಾಖ್ಯಾನಕ್ಕೆ ಇಳಿದರು. ನಮ್ಮ ದೇಶವು,
`ಈಗ ಆರ್ಥಿಕ ಬೆಳವಣಿಗೆ ಗಳಿಸಿ, ಮುಂದೆ ಅದಕ್ಕೆ ಬೆಲೆತೆರಬಹುದು,’ ಅನ್ನೋ ಅಂಧ ವಾದವನ್ನು ಒಪ್ಪಲು
ಸಾಧ್ಯವೇ ಇಲ್ಲ. ನಮ್ಮ ದೇಶದಲ್ಲಿ ಆಗಲೇ 124 ಕೋಟಿ ಜನರಿದ್ದಾರೆ ಮತ್ತು ಮುಂದಿನ ಐವತ್ತು ವರ್ಷಗಳಲ್ಲಿ,
ಇದಕ್ಕೆ ಇನ್ನೂ ಒಂದನೇ ಮೂರರಷ್ಟು ಜನ ಸೇರಿಕೊಳ್ಳಲಿದ್ದಾರೆ. ಹವಾಮಾನ ಬದಲಾವಣೆ ಒಂದು ವಿನಾಶಕ ಸತ್ಯ. ಅದು ಮುಂಗಾರು ಮಳೆಯ
ಚಕ್ರ, ಹಿಮಗಡ್ಡೆಗಳು ಮತ್ತು ಸಮುದ್ರ ಮಟ್ಟವನ್ನೇ ಬದಲಿಸಿದೆ. ಮಾಲಿನ್ಯ ಮತ್ತು ರಾಸಾಯನಿಕ ಕಲುಷಿತಗಳು
ಜನರ ಆರೋಗ್ಯದ ಮೇಲೆ ಪರಿಣಾಮ ಬೀರತೊಡಗಿವೆ.
ಇಷ್ಟೆಲ್ಲಾ ಹೇಳಿದ ಜೈರಾಂ ರಮೇಶ್ ರವರೇ, ಇದೇ ಕಾಂಗ್ರೆಸ್
ಸರ್ಕಾರ, ವನ್ಯಜೀವಿಗಳಿಗೆ ಮಾರಕವಾಗುವ ಬುಡಕಟ್ಟು ಜನಾಂಗ ಹಕ್ಕು ಕಾಯ್ದೆಯನ್ನು ಜಾರಿಗೊಳಿಸುವಾಗ,
ನೀವೇಕೆ ಮೌನ ವಹಿಸಿದ್ದಿರಿ? ಬುಡಕಟ್ಟು ಜನಾಂಗದವರಿಗೆ ಪುಸರ್ವಸತಿ ಎನ್ನುವುದು ವರವಾಗುತ್ತಿತ್ತು.
ಅದರಿಂದ, ವನ್ಯಜೀವಿಗಳೂ ಬದುಕಿ, ಪರಿಸರ ಸಮತೋಲನವೂ ಆಗುತ್ತಿತ್ತು. ಇಂದಿರಾ ಗಾಂಧಿಯವರ ಎಲ್ಲಾ ಚಿಂತನೆಗಳನ್ನು
ಅಂದಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಘ, ಕಾಂಗ್ರೆಸ್ ನಾಯಕರುಗಳಿಗೆ ವಿವರಿಸಿ, ಅವರಿಗೆ ಪರಿಸ್ಥಿತಿ
ಅರ್ಥಮಾಡಿಕೊಡುವ ಪ್ರಯತ್ನ ಮಾಡಿದ್ದೀರಾ?.... ನನಗಂತೂ ಗೊತ್ತಿಲ್ಲ.
1943 ರಲ್ಲಿ, ಅಹ್ಮದ್ ನಗರದ ಜೈಲಿನಲ್ಲಿದ್ದ ಇಂದಿರಾ ಗಾಂಧಿ,
ಒಂದು ದೊಡ್ಡ ಬೇವಿನ ಮರ ಬಿದ್ದ ಬಗ್ಗೆ ತಮ್ಮ ತಂದೆ ನೆಹರುರವರಿಗೆ ಹೀಗೆ ಪತ್ರ ಬರೆಯುತ್ತಾರೆ.
`The potent bear
whose hug
Was feared by
all, is now a rug.’
ಯಾಕೋ ಅನ್ನಿಸಿತು… ಇಂದಿರಾ ಗಾಂಧಿ ಅಸ್ಥೆಯಿಂದ ತಂದ ಎರಡು
ಕಾನೂನುಗಳ ಸ್ಥಿತಿಯೂ ಹೀಗೇ ಆಗುತ್ತಿದೆ ಅಂತ. ಆದರೆ, ಕೆಲವೆಡೆ ನ್ಯಾಯಾಂಗ ಮಧ್ಯ ಪ್ರವೇಶ ಮಾಡಿದ್ದರಿಂದ,
ಅದರ ಮೂಲ ರೂಪಕ್ಕೆ ಧಕ್ಕೆಯಾಗಿಲ್ಲ ಅಷ್ಟೆ.
ಇಂದಿರಾ ಪ್ರಿಯದರ್ಶಿನಿ, ಇಂದಿರಾ ಗಾಂಧಿಯಾಗಿ ರೂಪುಗೊಂಡಿದ್ದು
ನೆಹರು ಪುತ್ರಿಯಾದ್ದರಿಂದಲೂ ಅಲ್ಲ, ಫಿರೋಜ್ ಗಾಂಧಿಯ ಪತ್ನಿಯಾದ್ದರಿಂದಲೂ ಅಲ್ಲ. ಅದು ಆಕೆ ಪ್ರಕೃತಿಯ
ಜೊತೆ ಬೆಸೆದುಕೊಂಡು ಬೆಳೆದು ಬದುಕಿದ ರೀತಿಯಿಂದಾಗಿ. ಅದನ್ನು ಸಂರಕ್ಷಿಸಲು ಆಕೆಗಿದ್ದ ಕಳಕಳಿ ಮತ್ತು
ಅದಕ್ಕಾಗಿ ಆಕೆಗಿದ್ದ ಛಲ. ಆರ್ಥಿಕ ಬೆಳವಣಿಗೆ ಮತ್ತು ಸಂರಕ್ಷಣೆಯ ಸಮತೋಲನ ಕಾಪಾಡುವ ನಿಟ್ಟಿನಲ್ಲಿ
ಆಕೆಗಿದ್ದ ವೈಜ್ಞಾನಿಕ ತಿಳುವಳಿಕೆ. ಈ ವಿಷಯದಲ್ಲಿ, ಯಾವುದೇ ಕೀಳು ರಾಜಕೀಯಕ್ಕೆ ಇಳಿಯದೇ, ಎಲ್ಲೂ
ಹೊಂದಾಣಿಕೆ ಮಾಡಿಕೊಳ್ಳದೆ ಆಡಳಿತ ನೆಡೆಸಿದ್ದರಿಂದ.
ಇಂದಿರಾ ಗಾಂಧಿಯ ಸರ್ವಾಧಿಕಾರಿ ಧೋರಣೆಯ ಬಗ್ಗೆ ನನಗೆ ಮೊದಲಿಂದಲೂ
ವಿರೋಧವಿತ್ತು. ಆದರೆ, 1969 ರಲ್ಲಿ, ತನ್ನ ಗೆಳತಿ
ಡೊರೋತಿ ನೋರ್ಮನ್ ರಿಗೆ ಬರೆದ ಪತ್ರವನ್ನು ನೋಡಿದ ಮೇಲೆ, ನನ್ನ ವಿಚಾರ ಬದಲಾಯಿತು. ಆ ಪತ್ರವನ್ನು ಇಂಗ್ಲಿಷ್ ನಲ್ಲೇ ಓದಿದರೆ ಉತ್ತಮ.

ಇಂದಿರಾ ಗಾಂಧಿ ಎತ್ತರದ ವ್ಯಕ್ತಿಯಾಗೇ ಉಳಿಯುತ್ತಾರೆ. ಯಾವ
ವಿರೋಧವನ್ನೂ ಲಕ್ಷಿಸದೆ, ಮುಂದಿನ ಪೀಳಿಗೆಗೆ ಏನನ್ನು ಉಳಿಸಬೇಕೆನ್ನುವುದನ್ನು, ಪ್ರಪಂಚ ಮಾತನಾಡುವ
ಮೊದಲೇ ಮಾಡಿ ತೋರಿಸಿದ್ದರು.
ಈಗ ನಾನೂ ವಾಜಪೇಯಿಯವರ ಮಾತನ್ನು ಒಪ್ಪುತ್ತೇನೆ. ಆಕೆ ದುರ್ಗೆ….
ಹುಲಿಯ ಮೇಲೆ ಸವಾರಿ ಮಾಡಲಿಲ್ಲ. ಬದಲಾಗಿ, ಹುಲಿಗಳನ್ನು ನಮ್ಮ ಮತ್ತು ನಮ್ಮ ಮಕ್ಕಳ ಪೀಳಿಗೆಗೆ ಉಳಿಸಿದಾಕೆ…..
ಈ ಹೆಂಗಸನ್ನು ಎಷ್ಟೋ ವರ್ಷ ದ್ವೇಶಿಸಿದೆ, ನಂತರ ಗೌರವಿಸಿದೆ,
ಈಗ ಪ್ರೀತಿಸಲಾರಂಭಿಸಿದೆ…… ಹುಟ್ಟು ಹಬ್ಬದ
ಶುಭಾಶಯಗಳು ಇಂದಿರಮ್ಮ……
ಮಾಕೋನಹಳ್ಳಿ ವಿನಯ್ ಮಾಧವ.
ಇಂದಿರಾಗಾಂಧಿಗೆ ಸಂಬಂಧಿಸಿದಂತೆ ನಿಮ್ಮ ಅಭಿಪ್ರಾಯವೇ ನನ್ನದೂ ಸಹ. ಇವತ್ತಿನ ರಾಜಕಾರಣಿಗಳನ್ನು ನೋಡಿದ ನಂತರ ಇಂದಿರಾಗಾಂಧಿ ದೇವತೆಯಂತೆ ಕಾಣುತ್ತಾರೆ. ಅವರು ಭಾರತದ ಹೆಮ್ಮೆಯ ಪ್ರಧಾನಿ .
ಪ್ರತ್ಯುತ್ತರಅಳಿಸಿ