ಮಾಕೋನಹಳ್ಳಿ ವಿನಯ್ ಮಾಧವ್

ಒಬ್ಬನೇ ಇರುವಾಗ ಬಹಳಷ್ಟು ಸಲ ಈ ಯೋಚನೆ ಬಂದಿದೆ. "ನಾನಿಲ್ಲಿಗೆ ಹೇಗೆ ಬಂದೆ? ಮುಂದೆ ಎಲ್ಲಿಗೆ ಹೋಗುತ್ತೇನೆ?" ಉತ್ತರವಿಲ್ಲ. ಪದವಿ ತಿರಸ್ಕೃತನಾಗಿ, ಗೆಂಡೇಹಳ್ಳಿಯಲ್ಲಿನ ರೈಸ್ ಮಿಲ್ ನೋಡಿಕೊಳ್ಳುವಾಗ ಬೆಂಗಳೂರಿಗೆ ಬಂದು ನೆಲೆಸುವ ಯೋಜನೆ ಇರಲಿಲ್ಲ. ದುರ್ಧಾನ ತೆಗೆದುಕೊಂಡವನಂತೆ ಮತ್ತೆ ಡಿಗ್ರಿ ಮುಗಿಸುತ್ತೇನೆಂದು ಶಿವಮೊಗ್ಗಕ್ಕೆ ಹೋದಾಗಲೂ, ಮುಂದೇನು ಅಂತ ತಿಳಿದಿರಲಿಲ್ಲ. ಪದವಿಯೂ ಇಲ್ಲದೆ, ಬೆಂಗಳೂರಿಗೆ ರೈಲು ಹತ್ತಿದಾಗ ಏಕೆ ಹೋಗುತ್ತೇನೆ, ಎಷ್ಟು ದಿನ ಇರುತ್ತೆನೆ ಅಂತಾನೂ ಗೊತ್ತಿರಲಿಲ್ಲ. ಜಾತ್ರೆಯಲ್ಲಿ ಕಳೆದುಹೋದ ಮುಗುವಿನಂತೆ ಇಷ್ಟು ದೂರ ಪಯಣಿಸಿದರೂ ಆ ಪ್ರಶ್ನೆಗಳು ಕಾಡುತ್ತಿರುತ್ತೇವೆ. ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ಹತ್ತಿರದ ಮಾಕೋನಹಳ್ಳಿ ಕುಂಟುಂಬಕ್ಕೆ ಸೇರಿದವ ನಾನು. ಕುಟುಂಬಕ್ಕೆ ಬಹಳಷ್ಟು ರಾಜಕೀಯ ನಂಟು, ಆದರೆ ಅಪ್ಪ ಡಾಕ್ಟರ್. ಅವರಿಗೆ ನಗರಗಳು ಸರಿಹೊಂದಲಿಲ್ಲ. ಹಳ್ಳಿಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಾಗಿ ಹಾಗೆಯೇ ನಿವೃತ್ತರಾದರು. ನನಗೂ ನಗರಗಳು ಸರಿಹೊಂದದಿದ್ದರೂ, ನನ್ನ ಬದುಕೊಂದು ವಿರೋಧಾಭಾಸಗಳ ತಿರುಗಾಟ. ಬೆಂಗಳೂರಿಗೆ ಬರುವವವರೆಗೆ ಪುಸ್ತಕಗಳನ್ನು ಹಿಡಿಯದಿದ್ದವನು, ಮೈಮೇಲೆ ಭೂತ ಬಂದವನಂತೆ ಓದತೊಡಗಿದೆ. 1994ರವರೆಗೆ ನ್ಯೂಸ್ ಪೇಪರ್ ಹೇಗಿರುತ್ತೆ ಅಂತ ಕುತೂಹಲಕ್ಕೂ ನೋಡದಿದ್ದವನು,1996ರಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರನಾಗಿ ಕೆಲಸ ಮಾಡಲಾರಂಭಿಸಿದೆ. ಎಂದಿದ್ದರೂ ಊರಿಗೆ ಹೋಗಲೇಬೇಕಲ್ಲ ಅಂತ ಯೋಚಿಸುತ್ತಲೇ, 15 ವರ್ಷ ಕಳೆದು ಹೋದವು. ಇವೆಲ್ಲದರ ನಡುವೆ, ತುಂಬಾ ಕಾಡುವ ನೆನಪುಗಳನ್ನು ಎಲ್ಲಿಡಬೇಕು ಎಂದು ಯೋಚಿಸುವಾಗ, ಎಂದೋ ಒಂದು ದಿನ ಆಕಸ್ಮಿಕವಾಗಿ ತೆಗೆದು ಉಪಯೋಗಿಸದೇ ಇಟ್ಟಿದ ಬ್ಲಾಗ್ ನೆನಪಾಯಿತು...ತಿರುಗಾಟ
ಸದ್ಯಕ್ಕೆ ನೆಲೆ ಕಂಡಿರುವುದು ಬೆಂಗಳೂರು ಎಂಬ ಬೆಂದಕಾಳೂರಿನಲ್ಲಿ, ಪತ್ರಿಕೋದ್ಯಮ ವೃತ್ತಿಯಲ್ಲಿ...
ನನಗೆ ಅತ್ಯಂತ ಕುತೂಹಲ ಮೂಡಿಸುವ ವಿಷಯ 'ಜೀವನ'...


1 ಕಾಮೆಂಟ್‌: