ಹಬ್ಬಾಚರಣೆ ಎಂಬ ಹುಚ್ಚು ಮುಂಡೇ ಮದುವೆ
`ಈ ವರ್ಷ ನಮ್ಮ ಕ್ಲಬ್ ನಲ್ಲಿ
ಕ್ರಿಸ್ ಮಸ್ ಪಾರ್ಟಿಗೆ ಬರ್ತೀಯಾ?
ಮುಂಚೇನೇ ಹೇಳಿ ಹೆಸರು ರಿಜಿಸ್ಟರ್ ಮಾಡ್ಬೇಕು,’ ಅಂತ ನನ್ನ
ಸಂಬಂಧಿಯೊಬ್ಬನು ಕೇಳಿದಾಗ, ಪುಸುಕ್ಕನೆ ಅವನ ಮುಖಕ್ಕೇ ನಕ್ಕೆ.
`ಏನಾಯ್ತೋ? ಪಾರ್ಟಿಗೆ ಬರ್ತೀಯಾ ಅಂತ ಕೇಳಿದ್ರೆ ನಗ್ತೀಯಲ್ಲಾ?’
ಅಂದ.
`ಅಲ್ವೋ, ಮೊನ್ನೆ ನೋಡಿದ್ರೆ ತೋಟದ ಆಳುಗಳನ್ನ ಈ ಕ್ರಿಶ್ಚಿಯನ್
ಮಿಷನರಿಯವರು ಬಂದು ಮತಾಂತರ ಮಾಡಿ ಹಾಳುಮಾಡ್ತಿದ್ದಾರೆ ಅಂತ ಕೂಗಾಡ್ತಿದ್ದಲ್ಲ. ನೀನ್ಯಾವಾಗ ಪರ್ಬು (ಕ್ರಿಶ್ಚಿಯನ್ ಗಳಿಗೆ ಮಲೆನಾಡಿನಲ್ಲಿ ಉಪಯೋಗಿಸುವ
ಪದ) ಆದೆ? ನಿಮ್ಮ ಕ್ಲಬ್ ನಲ್ಲಿ ಎಷ್ಟು ಜನ ಪರ್ಬುಗಳಿದ್ದಾರೆ?’
ಅಂತ ಕೇಳಿದೆ.
`ಹತ್ತಿಪ್ಪತ್ತು ಇರ್ಬೇಕು. ಅವ್ರು ಬರಲ್ಲ ಕಣಾ... ಚರ್ಚ್ ಗೆ ಹೋಗಿರ್ತಾರೆ. ನಾವೇ ಪಾರ್ಟಿ ಮಾಡಾದು,’ ಅಂದ.
`ನಿಮ್ಮನೆಲಿ ಚೌಡಿಗೆ ಕೋಳಿ, ಹಂದಿ ಕಡ್ದಾಗ ಅಥವಾ ಸುಗ್ಗಿ ಸಮಯದಲ್ಲಿ
ಕ್ಲಬ್ ನಲ್ಲಿ ಪಾರ್ಟಿ ಮಾಡ್ತೀರಾ?’ ಅಂತ ಕೇಳ್ದೆ.
`ಇಲ್ಲಪ್ಪ... ಅವೆಲ್ಲ ಮನೆ ಮಟ್ಟಿಗೆ ಮಾತ್ರ ಅಲ್ಲಾ ಮಾರಾಯಾ...
ಯಾಕ್ಹೇಳು?’ ಅಂದ.
`ಅಲ್ವೋ... ನಮ್ ಮಲೆನಾಡಲ್ಲಿ, ಗಣಪತಿ
ಹಬ್ಬ ಸೇರ್ದಂಗೆ ಎಲ್ಲಾ ಹಬ್ಬದಲ್ಲೂ ಮಾಂಸ ಮಾಡ್ತಾರೆ. ನಮ್ಮ ಹಬ್ಬ ಯಾವ್ದೂ
ನಿಮ್ ಕ್ಲಬ್ ನಲ್ಲಿ ಮಾಡಲ್ಲ. ಯುಗಾದಿ ಸಮೇತ ಮಾಡಲ್ಲ. ಕ್ರಿಸ್ ಮಸ್ ಮತ್ತೆ ಹೊಸ ವರ್ಷ ಮಾತ್ರ ಮಾಡ್ತೀರ. ಹೆಂಗೋ ಇದು?’
ಅಂತ ಕೇಳ್ದೆ.
`ಬರ್ತೀಯೋ ಇಲ್ವೋ ಹೇಳೋ ಮಾರಾಯ. ಸುಮ್ಮನೆ ತಲೆ ತಿನ್ಬೇಡ.
ಬರೋದಿದ್ರೆ ನಿನ್ನ ಹೆಸರು ಬರ್ಸಿರ್ತೀನಿ. ಇಲ್ದೇ ಹೋದ್ರೆ
ತೆಪ್ಪಗೆ ಬೆಂಗ್ಳೂರಲ್ಲೇ ಬಿದ್ದಿರು,’ ಅಂದ. ನಾ ಸುಮ್ಮನೆ ನಕ್ಕೆ.
ಕ್ರಿಶ್ಚಿಯನ್
ಧರ್ಮಕ್ಕೆ ಮತಾಂತರ ಅನ್ನೋದು ಮಲೆನಾಡಿನಲ್ಲಿ ಒಂದು ಪಿಡುಗು. ಇವಾಂಗಲಿಸ್ಟ್ ಅನ್ನೋ ಒಂದು ಪಂಗಡ ಇದೆ.
ಮತಾಂತರವನ್ನು ದಂಧೆಯಾಗಿ ಮಾಡಿಕೊಂಡಿದೆ. ಆಳುಗಳ ಕೇರಿಗೆ
ಹೋಗಿ, ಏಸುಕ್ರಿಸ್ತನ ಬಗ್ಗೆ ಮತ್ತು ಅವನು ಮಾಡುವ ಜಾದುಗಳ ಬಗ್ಗೆ ಕಥೆಗಳನ್ನು
ಹೇಳುತ್ತಾರೆ. ಕೆಲವು ಸಭೆಗಳನ್ನು ಆಯೋಜಿಸಿ, ಅಲ್ಲಿದೆವ್ವದ
ಕಾಟಕ್ಕೊಳಗಾದವರು ಎನ್ನಲಾದ ಕೆಲವರನ್ನು ಕರೆತಂದು, ಅವರ ಮೈಮೇಲಿನ ದೆವ್ವವನ್ನು
ಬಿಡಿಸಿ ತೋರಿಸುತ್ತಾರೆ. ಆನಂತರ, ಅಲ್ಲಿಗೆ ಹೋದ
ಈ ಕೆಲಸದ ಆಳುಗಳನ್ನು ಮತಾಂತರ ಮಾಡಿ, ಅವರ ಕುತ್ತಿಗೆಗೆ ಶಿಲುಬೆ ಸಿಗಿಸಿ
ಕಳುಹಿಸುತ್ತಾರೆ.
ಮನೆಗೆ
ವಾಪಾಸಾದ ಆಳುಗಳು ಮುಂಚಿನಂತೆಯೇ ಕಾಫಿ ತೋಟದ ಕೆಲಸಗಳಿಗೆ ಬರುತ್ತಿರುತ್ತಾರೆ. ಹೋದ ವರ್ಷ ಸುಗ್ಗಿ,
ಗಣಪತಿ ಹಬ್ಬ ಮತ್ತು ಆಯುಧ ಪೂಜೆಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದವರು,
ಈ ವರ್ಷ ಬದಿಯಲ್ಲಿ ನಿಂತು ನೋಡುತ್ತಿರುತ್ತಾರೆ. ಪ್ರಸಾದ
ಕೊಡಲು ಹೋದರೆ, `ನಮ್ಮ ಜಾತಿಯಲ್ಲಿ ಪ್ರಸಾದ ತಗೊಳ್ಳೋದಿಲ್ಲ,’ ಅಂತ ಮುಖಕ್ಕೆ ಹೊಡೆದ ಹಾಗೆ ಹೇಳ್ತಾರೆ. ಇವರುಗಳಿಗೆ ಜಾತಿ ಮತ್ತು
ಧರ್ಮದ ನೆಡುವಿನ ವ್ಯತ್ಯಾಸವೇ ಗೊತ್ತಿರೋದಿಲ್ಲ. ತೋಟದ ಮಾಲಿಕರು ಮತ್ತು
ಮತಾಂತರಗೊಳ್ಳದ ಆಳುಗಳಿಗೆ ಇದೊಂದು ದೊಡ್ಡ ಕಿರಿಕಿರಿಯ ವಿಷಯ. ವರ್ಷವಿಡೀ
ಪರ್ಬುಗಳನ್ನು ಬೈದುಕೊಂಡು ತಿರುಗ್ತಿರ್ತಾರೆ.
ತಮಾಷೆ
ಎಂದರೆ, ಮತಾಂತರವಾದವರಿಗೆ ಏಸು ಕ್ರಿಸ್ತನ ಭಜನೆಗಳನ್ನು ಸಹ ಹೇಳಿಕೊಟ್ಟಿರುತ್ತಾರೆ. ಇವ್ಯಾವುದೂ ನಿಜವಾದ ಕ್ರೈಸ್ತ ಧರ್ಮದ ಆಚರಣೆಯಲ್ಲಿ ಇಲ್ಲ. ಮೂಡಿಗೆರೆಯ
ಚರ್ಚ್ ನ ಫಾದರ್ ಪಿಂಟೋ
ಹತ್ತಿರ ಈ ವಿಷಯ ಕೇಳಿದಾಗ, ಅವರು ನಗಲಾರಂಬಿಸಿದರು. `ಏನು ಮಾಡುವುದು ಹೇಳಿ? ಭಾನುವಾರ ಚರ್ಚ್ ಗೆ ಬಂದು, ಇಲ್ಲಿ ಭಜನೆ ಮಾಡೋದಿಲ್ಲ ಅಂತ ಗೊತ್ತಾದಾಗ
ಕಕ್ಕಾಬಿಕ್ಕಿಯಾಗುತ್ತಾರೆ. ಇಲ್ಲಿ ಬೈಬಲ್ ಓದುವುದು ಮಾತ್ರ. ಯಾವಾಗಾದ್ರೂ ಹಾಡುವವರು ಸಿಕ್ಕಿದಾಗ ಕಾಯರ್ (Choir) ಇರುತ್ತದೆ.
ಭಜನೆಗಳಿಗೂ ಮತ್ತು ಕಾಯರ್ ಗಳಿಗೂ ವ್ಯತ್ಯಾಸ ಇರುತ್ತದೆ ನೋಡಿ. ಇಲ್ಲಿ ಯಾರೇ ಬಂದರೂ ನಾವು ಬರಬೇಡ ಅನ್ನೋದಿಲ್ಲ. ಬಂದು ಪ್ರಾರ್ಥನೆ
ಮಾಡಿಕೊಂಡು ಹೋಗ್ತಾರೆ. ಇನ್ನು ಮಾಟ, ಮಂತ್ರ ಎಲ್ಲ
ಇಲ್ಲಿ ಇರೋದಿಲ್ಲ,’ ಅಂದರು.
ನನ್ನ
ವೈಯಕ್ತಿಕ ಅಭಿಪ್ರಾಯದಲ್ಲಿ,
ಬಡವರೇ ಹೆಚ್ಚಾಗಿರೋ ಜಾಗಗಳಲ್ಲಿ ಬೋರ್ಡ್ ಹಾಕಿಕೊಂಡಿರೋ ಮಾಂತ್ರಿಕ, ತಾಂತ್ರಿಕರು ಮತ್ತು ದರ್ಗಾಗಳಲ್ಲಿ ಎಲ್ಲಾ ಕಾಯಿಲೆ ವಾಸಿ ಮಾಡುತ್ತೇವೆ ಎಂದು ಹೇಳಿಕೊಳ್ಳೋ
ಬಾಬಾಗಳಷ್ಟೇ ಡೋಂಗಿಗಳು ಇವರು. ಮಲೆನಾಡಿನಲ್ಲಿ ಈ ಥರದ ಮತಾಂತರದ ಪಿಡುಗನ್ನು
ಕುವೆಂಪುರವರ `ಕ್ರೈಸ್ತನಲ್ಲ, ಪಾದ್ರಿಯ ಮಗಳು,’
ಅನ್ನೋ ಸಣ್ಣ ಕಥೆಯಿಂದ ಹಿಡಿದು, ಮಲೆಗಳಲ್ಲಿ ಮದುಮಗಳು
ಕಾದಂಬರಿಯಲ್ಲಿ ಸಹ ನೋಡಬಹುದು. ಕುವೆಂಪುರವರ ಬಾಲ್ಯದಿಂದ ಹಿಡಿದು,
ಇವತ್ತಿನವರೆಗೆ, ಮಲೆನಾಡಿನಲ್ಲಿ ಇದೊಂದು ದಂಧೆಯಾಗಿ ಉಳಿದಿದೆ.
ಅದೆಲ್ಲ
ಹಾಳಾಗಲಿ. ದಿನ ಬೆಳಗೆದ್ದರೆ ಪರ್ಬುಗಳನ್ನ ಬೈಕೊಂಡು, ಬಿಜೆಪಿಗೆ
ಓಟು ಕೊಡೋ ಹುಡುಗರು ಸಹ, ಕ್ರಿಸ್ ಮಸ್ ಮತ್ತು ಹೊಸ ವರ್ಷ
ಆಚರಣೆಗೆ, ಹೊಸ ಸೂಟುಗಳನ್ನು ಹೊಲಿಸಿಕೊಂಡು, ಕ್ಲಬ್ ಎಡತಾಗುವುದನ್ನು ನೋಡಿದರೆ,
ನಗು ಬರುತ್ತದೆ. ಪಾರ್ಟಿ ಎಂದರೆ ಗುಂಡು, ತುಂಡು ಮತ್ತು ಸೊಂಟ ಬಿದ್ದು ಹೋಗುವವರೆಗೆ ಕುಣಿತ. ಕೆಲವು ಆಟಗಳು. ಇನ್ನೇನೂ ಘನಾಂದಾರಿ ಕೆಲಸ ಮಾಡೋದು ನನ್ನ ಗಮನಕ್ಕಂತೂ ಬಂದಿಲ್ಲ.
ಈಗೆಲ್ಲ
ಹಬ್ಬಗಳ ಆಚರಣೆ ನೋಡಿದಾಗ ತಲೆ ಬಿಸಿಯಾಗುತ್ತೆ. ನಮಗೆಲ್ಲ ಯುಗಾದಿ, ದೀಪಾವಳಿ, ಗಣಪತಿ ಹಬ್ಬ ಬಿಟ್ಟರೆ
ಬೇರೆ ಹಬ್ಬಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ನಮ್ಮ ಕಡೆ ಹೋಳಿಯೇನು ಅಂಥಾ ದೊಡ್ಡ ಹಬ್ಬವಲ್ಲ.
ಇನ್ನುಳಿದ ಹಾಗೆ, ಚೌಡಿ ಕಲ್ಲಿಗೆ ಪೂಜೆ, ಸುಗ್ಗಿ ಹಬ್ಬಗಳು ನಮಗೆ ವಿಶೇಷ ಅಷ್ಟೆ. ಸಕಲೇಶಪುರದ ಕಾನ್ವೆಂಟ್
ನಲ್ಲಿ ಓದುವಾಗ, ಕ್ರಿಸ್ ಮಸ್ ಸಮಯದಲ್ಲಿ ಸಿಸ್ಟರ್ ಗಳು ಕೇಕ್ ಕೊಡುತ್ತಿದ್ದದ್ದು ನೆನಪಿದೆ. ಇನ್ನೊಂದೆರೆಡು
ತುಂಡು ಕೊಟ್ಟಿದ್ದರೆ ಇವರ ಗಂಟೇನು ಹೋಗ್ತಿತ್ತು ಅಂತ ಗೊಣಗಿಕೊಳ್ಳುತ್ತಿದ್ದೆವು.
ಕಾಲೇಜಿಗೆ
ಬರುವ ಹೊತ್ತಿಗೆ ಬಕ್ರೀದ್ ಹಬ್ಬಕ್ಕೆ ಗೆಳೆಯರ ಮನೆಯಿಂದ ಬಿರಿಯಾನಿ ಬರುತ್ತಿತ್ತು, ಇಲ್ಲಾ ಅವರ ಮನೆಗೆ
ನಾವೇ ಹೋಗುತ್ತಿದ್ದೆವು. ಮನೆಗೆ ಹೋಗೋದು ತುಂಬಾ ಇಷ್ಟ. ಯಾಕಂದರೆ, ಬಿರಿಯಾನಿ ತಿಂದ ಮೇಲೆ ಫಿರ್ನಿ
ತಿನ್ನೋ ಮಜಾನೇ ಬೇರೆ. ಇತ್ತೀಚಿನ ವರ್ಷಗಳಲ್ಲಿ ಬಕ್ರೀದ್ ಗೆ ಯಾರೂ ಕರೆದದ್ದು ನೆನಪಿಲ್ಲ. ಆದರೆ,
ಪ್ರತಿ ಈದ್ ಮಿಲಾದ್ ಸಮಯದಲ್ಲಿ, ಈಗ ದೂರದರ್ಶನದಲ್ಲಿ ಕೆಲಸ ಮಾಡುತ್ತಿರುವ ಆಯೆಶಾ ಖಾನುಂ, ಮನೆಗೆ
ಕರೆದು ಊಟ ಹಾಕುತ್ತಾಳೆ.
ಇತ್ತೀಚಿನ
ದಿನಗಳಲ್ಲಿ ಯಾವ ಹಬ್ಬ, ಯಾಕೆ ಆಚರಿಸುತ್ತಾರೆ ಅಂತ ಗೊತ್ತೇ ಆಗೋದಿಲ್ಲ. ಮೊನ್ನೆ ಆಫೀಸಿನಲ್ಲಿ ಸುಧಾ
ಜೊತೆ ಮಾತಾಡುವಾಗ, ಅಕ್ಷಯ ತೃತೀಯದ ಬಗ್ಗೆ ಮಾತು ಬಂತು. `ನೀನೇನು ಚಿನ್ನ ತಗೊಳೋಲ್ವಾ?’ ಅಂತ ತಮಾಷೆ
ಮಾಡಿದೆ.
`ಅಕ್ಷಯ
ತದಿಗೆ ತಗೊಳ್ಳೋ ಹಬ್ಬ ಅಲ್ಲಾರಿ. ಇದು ದಾನ ಕೊಡೋ ಹಬ್ಬ. ತಗೊಳ್ಳೋ ಹಬ್ಬ ಅಂತ ಯಾಕಾಯ್ತು ಅನ್ನೋದು
ನಮಗೇ ಗೊತ್ತಿಲ್ಲ,’ ಅಂದಳು.
ಅಂದ್ರೆ,
ಇದು ನಿಮ್ಮ ಹಬ್ಬಾನ? ತದಿಗೆ ಅಂದ್ರೆ? ‘ ಅಂತ ಜೈನ ಧರ್ಮಕ್ಕೆ ಸೇರಿದ ಸುಧಾಳಿಗೆ ಕೇಳಿದೆ.
`ತದಿಗೆ
ಅಂದ್ರೆ, ಇದು ಪಕ್ಷದ ಮೂರನೇ ದಿನ ಬರೋದು. ಪಾಡ್ಯ, ಬಿದಿಗೆ, ತದಿಗೆ ಇಲ್ವಾ? ಅದು. ಈ ಹಬ್ಬಕ್ಕೆ ಒಂದು
ಕಥೆ ಇದೆ. ನಮ್ಮ ಮೊದಲ ತೀರ್ಥಂಕರರು ಕಾಡಲ್ಲಿ ಹನ್ನೆರೆಡು ವರ್ಷ ತಪಸ್ಸು ಮಾಡಿ, ಊರಿಗೆ ಇದೇ ತದಿಗೆಯ
ದಿನ ವಾಪಾಸು ಬಂದರಂತೆ. ಆಗ ಕಬ್ಬಿನ ಹಾಲು ಮಾರುತ್ತಿದ್ದವನೊಬ್ಬ, ಅವನ ಹತ್ತಿರ ಏನೂ ಇಲ್ಲ ಅಂತ, ತೀರ್ಥಂಕರರಿಗೆ
ಕಬ್ಬಿನ ಹಾಲು ಕೊಟ್ಟನಂತೆ. ಅಲ್ಲಿಂದ ಮುಂದೆ ಅವನ ವ್ಯಾಪಾರ ಅಭಿವೃದ್ದಿಯಾಯಿತಂತೆ. ಹಾಗಾಗಿ, ಈ ತದಿಗೆಯ
ದಿನ ಏನಾದರೂ ದಾನ ಮಾಡಿದರೆ, ಅದು ಅಕ್ಷಯವಾಗುತ್ತೆ ಅಂತ ನಂಬಿಕೆ. ಅದಕ್ಕೇ ನೋಡಿ, ಶ್ರವಣಬೆಳಗೊಳದಲ್ಲಿ
ನಾಳೆ ಗೊಮ್ಮಟೇಶ್ವರನಿಗೆ ಕಬ್ಬಿನ ಹಾಲಿನ ಅಭಿಷೇಕ ಇರುತ್ತೆ,’ ಅಂದಳು.
`ಓ...
ತೃತೀಯ ಅನ್ನೋದೇ ಸುಳ್ಳು. ಮತ್ತೆ ಚಿನ್ನ ತಗೊಳ್ಳೋದು ಅನ್ನೋ ನಂಬಿಕೆ ಯಾವಾಗ ಬಂತು?’ ಅಂತ ಕೇಳಿದೆ.
`ಗೊತ್ತಿಲ್ಲ
ಕಣ್ರಿ.... ರಾಜಸ್ಥಾನದಿಂದ ಮಾರ್ವಾಡಿಗಳು ಚಿನ್ನದ ವ್ಯಾಪರಕ್ಕೆ ಬಂದ್ರಲ್ಲ, ಅದರ ಸಲುವಾಗಿ ಆಗಿರ್ಬೇಕು.
ಅದೂ ಇತ್ತೀಚೆಗೆ ಶುರುವಾಗಿದ್ದು,’ ಅಂದಳು.
ಅಕ್ಷಯ
ತೃತೀಯಕ್ಕೆ ಒಂದು ತಿಂಗಳಿಂದ ಎಲ್ಲಾ ಚಿನ್ನದ ಅಂಗಡಿಗಳು ಸಿಂಗರಿಸಿಕೊಂಡಿರುತ್ತವೆ. ಎಲ್ಲಾ ಬಗೆಯ ವ್ಯಾಪಾರಿಗಳೂ
ಒಂದೊಂದು ಗಿಮಿಕ್ ಮಾಡುತ್ತಿರುತ್ತಾರೆ. ಕಾರು ಕೊಂಡರೂ ಸಹ, ಐದು ಗ್ರಾಂ ಚಿನ್ನ ಉಚಿತ ಅನ್ನೋ ಜಾಹಿರಾತುಗಳು
ರೇಡಿಯೋ ಮತ್ತು ಟೀವಿಗಳಲ್ಲಿ ಕೂಗಾಡುತ್ತಿರುತ್ತವೆ. ಅಕ್ಷಯ ತದಿಗೆಯನ್ನು ಅಕ್ಷಯ ತೃತೀಯ ಅಂತ ನಂಬಿದವರ
ಜೇಬಿಗೆ ತೂತು ಕೊರೆಯೋ ಯೋಜನೆ ಅಷ್ಟೆ.
ಅದೇ
ಯೋಚನೆ ಮಾಡುತ್ತಾ ಇದ್ದೆ. ನಾವೆಲ್ಲ ಓದುವಾಗ, ಯಾರದಾದರೂ ಹುಟ್ಟಿದ ಹಬ್ಬಕ್ಕೆ ಮತ್ತು ಹೊಸ ವರ್ಷಕ್ಕೆ
ಗ್ರೀಟಿಂಗ್ ಕಾರ್ಡ್ ಕಳುಹಿಸುವುದು ಒಂದು ವಾಡಿಕೆಯಾಗಿತ್ತು. ನಂತರ, ಯುಗಾದಿ, ಸಂಕ್ರಾಂತಿ ಮತ್ತು
ದೀಪಾವಳಿ ಹಬ್ಬಗಳು ಇವಕ್ಕೆ ಸೇರ್ಪಡೆಯಾದವು. ಇವುಗಳ ಸಂಖ್ಯೆ ನಿಧಾನವಾಗಿ ಹೆಚ್ಚಾಗಿದ್ದು ಆರ್ಚೀಸ್
ಅನ್ನೋ ಗ್ರೀಟಿಂಗ್ ಮತ್ತು ಉಡುಗೊರೆಗಳ ಕಂಪನಿ ಭಾರತಕ್ಕೆ ಬಂದ ಮೇಲೆ.
ಹುಟ್ಟಾ
ಹುಂಬರಾಗಿ, ನಿಂತಕಾಲಲ್ಲಿ ಯಾರ ಜೊತೆ, ಎಲ್ಲಿ ಬೇಕಾದರೂ ಹೊಡೆದಾಟಕ್ಕೆ ನಿಲ್ಲುವಂತಹ ನಾವು, ಕಾಲೇಜಿನಲ್ಲಿ
ಓದುವಾಗ ಹೀರೋಗಳಾಗುವ ಕನಸು ಕಾಣಲೂ ಸಾಧ್ಯವಿರಲಿಲ್ಲ. ಆದರೂ, ವಯಸ್ಸು. ಫುಟ್ ಬಾಲ್, ಬ್ಯಾಸ್ಕೆಟ್
ಬಾಲ್ ಆಡುವಾಗ, ಯಾವುದಾದರೂ ಹುಡುಗಿ ನಮ್ಮ ಕಡೆಗೂ ನೋಡುತ್ತಿರಬಹುದು ಅನ್ನೋ ಆಸೆ. ಕದ್ದು ಮುಚ್ಚಿ
ನೋಡಿದರೂ, ನೋಡುತ್ತಿದ್ದಾರೋ, ಇಲ್ಲವೋ ಅನ್ನೋದು ಗೊತ್ತಾಗ್ತಾ ಇರಲಿಲ್ಲ. ಮತ್ತೆ, ಆಗೇನೂ ವ್ಯಾಲೆಂಟೈನ್ಸ್
ಡೇ ಅನ್ನೋದನ್ನ ನಾವು ಕೇಳೇ ಇರಲಿಲ್ಲ. ಆಗೇನಾದ್ರು ಗೊತ್ತಿದ್ದರೆ, ಒಂದು ಪ್ರಯತ್ನ ಮಾಡಬಹುದಿತ್ತೋ,
ಏನೋ?
ಆಗೆಲ್ಲ
ಕೆಂಪು ಬಟ್ಟೆ ಹಾಕಿದವರನ್ನು ಕೊಂಗ, ತಮಿಳ ಅಂತ ತಮಾಷೆ ಮಾಡ್ತಿದ್ವಿ. ಈಗ ನೋಡಿದರೆ, ವ್ಯಾಲೆಂಟೈನ್ಸ್
ದಿನ ಎಲ್ಲರೂ ಕೆಂಪು ಬಟ್ಟೆಯನ್ನೇ ಹಾಕಿಕೊಂಡು ತಿರುಗುತ್ತಿರುತ್ತಾರೆ. ಹೊಟೆಲ್ ಗಳಿಂದ ಹಿಡಿದು, ಮೊಬೈಲ್,
ಚಿನ್ನ, ಪ್ರವಾಸೋದ್ಯಮ..... ಎಲ್ಲಾರೂ ಹೇಳೋದು ಒಂದೆ. `ನಮ್ಮ ಗ್ರಾಹಕರು ಮಾತ್ರ ತಮ್ಮ ಮನದನ್ನೆಯನ್ನು
ಹೆಚ್ಚು ಪ್ರೀತಿಸುವುದು,’ ಅಂತ. ಅದನ್ನು ನಂಬಿ ಪಿಗ್ಗಿ ಬಿದ್ದವರ ಸಂಖ್ಯೆ ಎಷ್ಟು ಅನ್ನೋದು, ವ್ಯಾಪಾರಿಗಳು
ಜಾಹಿರಾತಿಗೆ ಖರ್ಚು ಮಾಡುವ ಪರಿ ನೋಡಿದರೆ ಗೊತ್ತಾಗುತ್ತೆ.
ಅದಷ್ಟೇ
ಅಲ್ಲ. ಪ್ರೇಮಿಗಳ ದಿನದ ಜೊತೆಗೆ, ಅಪ್ಪ, ಅಮ್ಮ, ಮಗ, ಮಗಳು, ಗಂಡ ಮತ್ತು ಹೆಂಡತಿಯ ದಿನಗಳೂ ಹುಟ್ಟಿಕೊಂಡಿವೆ.
ವ್ಯಾಪಾರಿಗಳಿಗೆ ಇವೆಲ್ಲ `ಮಿನಿ ಲಾಟರಿಗಳು’ ಅಷ್ಟೆ. ಒಟ್ಟಲ್ಲಿ, ಈ ಹಬ್ಬದಾಚರಣೆಗಳು ಒಂಥರಾ ಹುಚ್ಚು
ಮುಂಡೆ ಮದುವೆ ಅಷ್ಟೆ. ಇದರಲ್ಲಿ ಉಣ್ಣೋಕೇನಾದ್ರೂ ಕಲ್ತಿದ್ರೆ, ನಂಗೂ ನಾಕು ಕಾಸು ಸಿಕ್ತಿತ್ತೇನೋ?....
ಮಾಕೋನಹಳ್ಳೀ
ವಿನಯ್ ಮಾಧವ
Nicely betrayed.. How true is this. People blindly fall prey to gimmicks
ಪ್ರತ್ಯುತ್ತರಅಳಿಸಿ