ಶುಕ್ರವಾರ, ಜೂನ್ 15, 2012

ದರೋಡೆಕೋರರು


ಅದೇ… ಸ್ಟುವರ್ಟ್ ಪುರಂ ಪೋಲಿಸ್ ಸ್ಟೇಷನ್


ಮೊನ್ನೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಓದಿದೆ…. ಡಕಾಯಿತರ ಗುಂಪೊಂದು ಯುವಕನಿಗೆ ಹೊಡೆದದ್ದಲ್ಲದೆ, ಮನೆ ಲೂಟಿ ಮಾಡಿ ಹೋಗುವಾಗ, ಗಾಯಗೊಂಡ ಯುವಕನಿಗೆ ಪ್ರಥಮ ಚಿಕಿತ್ಸೆ ಕೂಡ ಕೊಟ್ಟು ಹೋದರಂತೆ.
ಪಕ್ಕನೆ ನೆನಪು ಬಂದಿದ್ದು ಒಂದೇ ಹೆಸರು…. ಸ್ಟುವರ್ಟ್ ಪುರಂ ಪೋಲಿಸ್ ಸ್ಟೇಷನ್. ಮತ್ತೆ ಬಂದರಾ ಅಲ್ಲಿಂದ ಜನಗಳು ಅಂತ ಅನ್ನಿಸ್ತು. ಹತ್ತು ವರ್ಷಗಳ ಮೇಲಾಗಿದೆ, ಅಲ್ಲಿಂದ ಜನಗಳು ಬೆಂಗಳೂರಿನ ಕಡೆಗೆ ಬಂದು. ಬರೋಕೆ ಸಾಧ್ಯನೇ ಇಲ್ಲ ಅಂತಾನೂ ಅನ್ನಿಸ್ತದೆ. ಯಾಕೆಂದ್ರೆ, ಜೀವನ ಅಷ್ಟೊಂದು ಬದಲಾಗಿ ಬಿಟ್ಟಿದೆ.
ತೊಂಬತ್ತರ ದಶಕದಲ್ಲಿ, ಈ ಹೆಸರನ್ನು ಇಟ್ಟುಕೊಂಡು ಚಿರಂಜೀವಿ ಒಂದು ಸಿನಿಮಾ ಕೂಡ ಮಾಡಿದ್ದರು. ಆ ಸಿನಿಮಾಕ್ಕೂ, ಈ ಜನಗಳಿಗೂ, ಯಾವುದೇ ಸಂಬಂಧಗಳಿಲ್ಲ.
1997-98 ರಲ್ಲಿ ಇರಬೇಕು. ಬೆಂಗಳೂರಿನ ಹೊರವಲಯವಾಗಿದ್ದ ರಾಮಮೂರ್ತಿ ನಗರ, ಬಾಣಸವಾಡಿ, ಕೆ.ಆರ್.ಪುರಂ, ಕೆಂಗೇರಿ, ಯಲಹಂಕ, ವೈಟ್ ಫೀಲ್ಡ್, ಕಾಡುಗೋಡಿ ಮುಂತಾದ ಕಡೆಗಳಲ್ಲಿ ಡಕಾಯಿತಿ ಶುರುವಾಯ್ತು. ಹೆಚ್ಚಿನ ಕಡೆ, ತೋಟದ ಮನೆಗಳು ಮತ್ತು ಹೊಸದಾಗಿ ಬರುತ್ತಿರುವ ಬಡಾವಣೆಗಳಲ್ಲಿ ಈ ಡಕಾಯಿತರು ದರೋಡೆ ಮಾಡುತ್ತಿದ್ದರು.
ಎಲ್ಲಾ ಕಡೆಗಳಲ್ಲೂ ಒಂದೇ ಥರದ ದಾಳಿ ನೆಡೆಸುತ್ತಿದ್ದರು. ಮೊದಲು ಟೆಲಿಫೋನ್ ವೈರ್ ಕತ್ತರಿಸಿ, ಆಮೇಲೆ ಕರೆಂಟ್ ತೆಗೆದು, ಮನೆಗಳ ಬಾಗಿಲು ತಟ್ಟುತ್ತಿದ್ದರು. ಮೊಬೈಲ್ ಫೋನ್ ಗಳು ಇಲ್ಲದ ಆ ಕಾಲದಲ್ಲಿ, ಜನಗಳಿಗೆ ಸಹಾಯಕ್ಕೆ ಕರೆಯಲು ಯಾವುದೇ ಸಾಧನಗಳಿರುತ್ತಿರಲಿಲ್ಲ. ಬಾಗಿಲು ತೆರೆಯದಿದ್ದರೆ, ಬಾಗಿಲು ಒಡೆಯುವುದಾಗಿ ಬೆದರಿಸುತ್ತಿದ್ದರು. ಸಾಧಾರಣವಾಗಿ, ಮನೆಯೊಳಗಿದ್ದವರು ಬಾಗಿಲು ತೆಗೆಯುತ್ತಿದ್ದರು.
ಒಂದು ಸಲ ಬಾಗಿಲು ತೆಗೆದ ತಕ್ಷಣ, ಮನೆಯೊಳಗಿದ್ದವರನ್ನೆಲ್ಲ ಒಂದು ಕೋಣೆಯೊಳಗೆ ಕೂಡಿಹಾಕಿ, ಯಾರಾದರೊಬ್ಬರಿಗೆ ಚಿನ್ನ ಮತ್ತು ಹಣ ಇಟ್ಟಿರುವ ಜಾಗ ತೋರಿಸುವಂತೆ ಬೆದರಿಸುತ್ತಿದ್ದರು. ಮನೆ ದೋಚಿದ ನಂತರ, ಆ ಮನೆಯ ಒಬ್ಬರನ್ನು ಕರೆದುಕೊಂಡು ಹೋಗಿ, ಪಕ್ಕದ ಮನೆ ಬಾಗಿಲು ತಟ್ಟಿ ಎಬ್ಬಿಸುವಂತೆ ಹೇಳುತ್ತಿದ್ದರು. ಹಾಗೆ, ಒಂದರ ಹಿಂದೊಂದು, ಐದಾರು ಮನೆಗಳನ್ನು ದೋಚಿ, ಜಾಗ ಖಾಲಿ ಮಾಡುತ್ತಿದ್ದರು.
ಆಗಿನ ಅಪರಾಧಿ ಜಗತ್ತು, ಈಗಿನಂತೆ ಇರಲಿಲ್ಲ. ರೋಲ್ ಕಾಲ್ ಮಾಡುವ ರೌಡಿ ಗುಂಪುಗಳು, ಒಂದೆರೆಡು ಕೊಲೆಗಳು, ಸರಗಳ್ಳತನ, ಇವೇ ಮುಂತಾದವು ನೆಡೆಯುತ್ತಿದ್ದವು. ಡಕಾಯಿತಿ ಮತ್ತು ಕೋಮು ಗಲಭೆಗಳು ತುಂಬಾ ದೊಡ್ಡ ವಿಷಯಗಳಾಗುತ್ತಿದ್ದವು. ಕ್ರೈಂ ರಿಪೋರ್ಟಿಂಗ್ ಆಗ ತಾನೆ ಶುರು ಮಾಡಿಕೊಂಡಿದ್ದ ನಾನು, ಎಲ್ಲೇ ಡಕಾಯತಿಯಾದರೂ ಹೋಗಿ ಬರುತ್ತಿದ್ದೆ. ದೊಣ್ಣೆಗಳನ್ನು ಹಿಡಿದುಕೊಂಡು, ಹೆಂಗಸರು, ಮಕ್ಕಳನ್ನು ಹೆದರಿಸಿ, ಹೊಡೆದು ಬಡಿದು ಎಲ್ಲವನ್ನೂ ದೋಚುವ ಈ ಡಕಾಯಿತರಿಗೆ ಗುಂಡು ಹಾರಿಸಿ ಕೊಲ್ಲಬೇಕು ಅನ್ನಿಸ್ತಿತ್ತು. ಹಾಗೇ ಒಂದು ದಿನ, ರಾಮುಮೂರ್ತಿನಗರದಲ್ಲಿ, ಒಂದು ಹೊಸ ಬಡಾವಣೆಯಲ್ಲಿ ಡಕಾಯಿತಿ ಆಯ್ತು ಅಂತ ಸುದ್ದಿ ಬಂತು, ಸರಿ, ಬೈಕ್ ಹತ್ತಿದವನೇ, ಅಲ್ಲಿಗೆ ಹೋದೆ. ಡಕಾಯಿತರು ಏಳು ಮನೆಗಳನ್ನು ಲೂಟಿ ಮಾಡಿದ್ದರು. ಎಲ್ಲರೂ ಹೊಸದಾಗಿ ಮನೆ ಕಟ್ಟಿಕೊಂಡು ಬಂದಿದ್ದರಿಂದ, ಹೆಚ್ಚಿನ ಹಣವೇನೂ ಹೋಗಿರಲಿಲ್ಲ. ಚಿನ್ನ ಮಾತ್ರ ಪೂರ್ತಿ ಖಾಲಿ ಮಾಡಿದ್ದರು.
ಹಾಗೇ ಹೋಗುತ್ತಿದ್ದಾಗ, ಪೋಲಿಸರ ಜೊತೆ ಇಬ್ಬರು ಮಾತಾಡುತ್ತಿರುವುದು ಕಂಡು, ಹತ್ತಿರ ಹೋದೆ. ಒಬ್ಬ ಮಾತ್ರ ಪೋಲಿಸರ ಜೊತೆ ಮಾತಾಡ್ತಾ ಇದ್ದ. ಇನ್ನೊಬ್ಬ ತಲೆ ಅಲ್ಲಾಡಿಸ್ತಿದ್ದ. ಏನಾದ್ರೂ ಕೇಳದ್ರೆ, ಪೇಪರ್ ಮೇಲೆ ಬರೆದು ತೋರಿಸುತ್ತಿದ್ದ. ಆದರೆ,  ತುಂಬಾ ಶಾಂತವಾಗಿದ್ದ. ಮೂಕನಿರಬೇಕು ಅನ್ಕೊಂಡೆ.
ಪೋಲಿಸ್ ಅವರಿಬ್ಬರನ್ನು ಬಿಟ್ಟು ಮುಂದೆ ಹೋದಾಗ, ನಾನು ಹೋಗಿ ಪೋಲಿಸರನ್ನ ಸೇರ್ಕೊಂಡೆ. `ಮೂಕನಾ ಸರ್?’ ಅಂತ ಕೇಳ್ದೆ.
`ಇಲ್ಲರೀ. ಮಾತೆಲ್ಲ ಚೆನ್ನಾಗಿ ಬರುತ್ತೆ. ಅದೇನೋ ಮೌನ ವ್ರತವಂತೆ. ಅದಕ್ಕೆ ಪಕ್ಕದ ಮನೆಯವರು, ಅವರ ಪರವಾಗಿ ಮಾತಾಡ್ತಾ ಇದ್ರು,’ ಅಂದ್ರು.
`ಇವ್ರ ಮನೆನೂ ದರೋಡೆ ಆಯ್ತಾ?’ ಅಂತ ಕೇಳ್ದೆ.
`ಆಗಿದೆ. ಪಕ್ಕದ ಮನೆಯವನೇ ಬಾಗಿಲು ತಟ್ಟಿ ತೆಗೆಸಿದವನು. ಈಯಪ್ಪ ಏನೂ ಮಾತಾಡಲಿಲ್ಲವಂತೆ. ದರೋಡೆಕೋರರು ಹೋಗೋವರೆಗೂ ಸುಮ್ಮನೆ ಒಂದು ಕಡೆ ನಿಂತ್ಕೊಂಡು ನೋಡ್ತಿದ್ದನಂತೆ,’ ಅಂದ ಪೋಲಿಸರು ಮುಂದಿನ ಮನೆ ಕಡೆಗೆ ಹೊರಟರು.
ವಿಚಿತ್ರ ಅನ್ನಿಸಿತು. ಏನಾದ್ರಾಗಲಿ ಅಂತ ಧೈರ್ಯ ಮಾಡಿ, ಆ ಮೌನಿ ಬಾಬನ ಕಡೆಗೆ ಹೋಗಿ, ನನ್ನ ಪರಿಚಯ ಮಾಡಿಕೊಂಡೆ. ಅವನ ಬದಲು, ಅವನ ಪಕ್ಕದ ಮನೆಯವನೇ ಮಾತಾಡ್ದ. ಪಕ್ಕದ ಮನೆಯವನ ಹೆಸರೇನೋ ಕೃಷ್ಣ ಅಂತ ಇರಬೇಕು. ಡಕಾಯಿತರು ಮೊದಲು ಕೃಷ್ಣನ ಮನೆಯನ್ನು ದೋಚಿದ್ದಾರೆ. ಆಮೇಲೆ, ಪಕ್ಕದ ಮನೆಯವರನ್ನು ಎಬ್ಬಿಸಲು ಹೇಳಿದ್ದಾನೆ. ಪಕ್ಕದ ಮನೆಯ ಯಜಮಾನನ್ನು ಬಿಟ್ಟು ಇನ್ನುಳಿದವರೆಲ್ಲ ಊರಿಗೆ ಹೋಗಿದ್ದರಂತೆ. ಪಕ್ಕದ ಮನೆಯವರ ಮೌನ ವ್ರತದ ಬಗ್ಗೆ ಗೊತ್ತಿದ್ದ ಕೃಷ್ಣ, ಅವನೇ ಡಕಾಯಿತರಿಗೆ ಮಾರ್ಗದರ್ಶಿಯಾಗಿದ್ದಾನೆ.
`ತುಂಬಾ ಕೆಟ್ಟವರು ಅಂತ ಅನ್ನಿಸ್ಲಿಲ್ಲ ಸರ್. ಇವರಿಗೆ ಮೌನ ವ್ರತ ಇದೆ ಅಂತ ಹೇಳಿದ ತಕ್ಷಣ, ಎಲ್ಲರೂ ಇವರಿಗೆ ಕೈ ಮುಗಿದು, ಮೂಲೆಯಲ್ಲಿ ನಿಲ್ಲಲು ಹೇಳಿದ್ರು. ಆಮೇಲೆ, ಬೀರುವಿನ ಕೀ ಇಸ್ಕೊಂಡು, ಚಿನ್ನವನ್ನೆಲ್ಲ ತಗೊಂಡ್ರು. ಹೋಗ್ತಾ ಇದ್ದಾಗ, ದೇವರ ಮುಂದೆ ಇದ್ದ ಹುಂಡಿಗೆ ಒಬ್ಬ ಕೈ ಹಾಕ್ದ. ಇನ್ನೊಬ್ಬ ಅದೇನು ಅಂತ ಕೇಳ್ದ. ಆ ಹುಂಡಿಯಲ್ಲಿರುವ ದುಡ್ಡನ್ನು ತಿರುಪತಿಯ ಹುಂಡಿಗೆ ಹಾಕೋಕೆ ಅಂತ ಇಟ್ಟಿದ್ದಾರೆ ಅಂತ ನಾನು ಹೇಳ್ದೆ. ತಕ್ಷಣ, ಒಬ್ಬರಾದ ಮೇಲೆ ಒಬ್ಬರು ದೇವರಿಗೆ ಅಡ್ಡ ಬಿದ್ದು, ಆ ಹುಂಡಿಗೆ ಜೇಬಿನಿಂದ ದುಡ್ಡು ತೆಗೆದು ಹಾಕಿ, ಅದನ್ನೂ ತಿರುಪತಿಗೆ ತಲುಪಿಸಲು ಹೇಳಿದ್ರು,’ ಅಂದ ಕೃಷ್ಣ.
`ಆಗ ಇವ್ರೇನು ಮಾಡ್ತಿದ್ರು?’ ಅಂತ ಕೇಳ್ದೆ.
`ಇವ್ರದ್ದು ಮೌನ ವ್ರತ ಅಲ್ವಾ ಸರ್? ಸುಮ್ಮನೆ ನಿಂತ್ಕೊಂಡು ತಲೆ ಆಡಿಸ್ತಿದ್ರು,’ ಅಂದ ಕೃಷ್ಣ. ಹುಚ್ಚಾಬಟ್ಟೆ ನಗು ಬಂದ್ರೂ ನಗೋ ಹಾಗೆ ಇರ್ಲಿಲ್ಲ. ಸುಮ್ಮನೆ ತಲೆ ಅಲ್ಲಾಡಿಸಿ, ಅಲ್ಲಿಂದ ಜಾಗ ಖಾಲಿ ಮಾಡ್ದೆ.
ಯಾಕೋ ಈ ಡಕಾಯಿತರು ಡಿಫರೆಂಟ್ ಅನ್ನಿಸ್ತು. ಚೆನ್ನಾಗಿ ಯೋಚನೆ ಮಾಡ್ದಾಗ, ಇವರು ಯಾರಿಗೂ ಹೊಡೆದು, ಬಡಿದು ಮಾಡಿದ ದಾಖಲೆಗಳಿರಲಿಲ್ಲ. ಒಂದು ಸಲ ಮಾತ್ರ, ಒಬ್ಬ ಗಲಾಟೆ ಮಾಡಿದ ಹೆಂಗಸಿಗೆ ಹೊಡೆದನಂತೆ. ತಕ್ಷಣ, ಅವನ ಗುಂಪಿನ ಇನ್ನೊಬ್ಬ, ಇವನಿಗೇ ಚೆನ್ನಾಗಿ ಬಾರಿಸಿ, ಆ ಹೆಂಗಸಿನ ಕ್ಷೆಮೆ ಕೇಳುವಂತೆ ಮಾಡಿದನಂತೆ.
ಇನ್ನೊಂದು ಸಲ, ಇವರು ದರೋಡೆ ಮಾಡುವಾಗ, ಚಿಕ್ಕ ಮಗುವಿಗೆ ಎಚ್ಚರವಾಗಿ ಅಳಲು ಶುರು ಮಾಡ್ತಂತೆ. ತಕ್ಷಣವೇ ಗುಂಪಿನಲ್ಲಿದ್ದ ಇಬ್ಬರು ತಮ್ಮ ದೋಚುವ ಕೆಲಸ ಬಿಟ್ಟು, ಆ ಮಗುವಿನ ತಾಯಿಗೆ ಗ್ಯಾಸ್ ಸ್ಟೋವ್ ಹಚ್ಚಲು ಹೇಳಿ, ಹಾಲು ಬಿಸಿ ಮಾಡುವಂತೆ ಹೇಳಿದರಂತೆ. ತಾಯಿ ಹಾಲು ಬಿಸಿ ಮಾಡುವಾಗ, ಒಬ್ಬ ಮಗುವಿನ ಫೀಡಿಂಗ್ ಬಾಟಲ್ ತೊಳೆದು ತಾಯಿಯ ಕೈಗೆ ಕೊಟ್ಟನಂತೆ.
ಇವೆಲ್ಲ ಬೇರೆ ಬೇರೆ ಕಡೆಗಳಲ್ಲಿ, ಬೇರೆ ಬೇರೆ ಸಂದರ್ಭಗಳಲ್ಲಿ ಆದ ಘಟನೆಗಳು. ಅವನ್ನೆಲ್ಲ ಒಟ್ಟಿಗೆ ಸೇರಿಸಿದಾಗ, ಈ ಡಕಾಯಿತರು ಯಾವ ನಮೂನೆಯ ಪ್ರಾಣಿಗಳು ಅಂತ ಅರ್ಥವಾಗಲಿಲ್ಲ. ಒಬ್ಬಿಬ್ಬರನ್ನು ಕೇಳಿ ನೋಡಿದಾಗ, ಅವರಿಗೂ ಗೊತ್ತಿರಲಿಲ್ಲ.
ಒಂದೆರೆಡು ದಿನ ಬಿಟ್ಟು ಯಾವುದೋ ಕೆಲಸದ ಮೇಲೆ ಮಾಗಡಿ ರೋಡ್ ಪೋಲಿಸ್ ಸ್ಟೇಷನ್ ಗೆ ಹೋಗಿದ್ದೆ. ಅಲ್ಲಿನ ಇನ್ಸ್ ಪೆಕ್ಟರ್ ನಾಗರಾಜ್ ಜೊತೆ ಮಾತಾಡ್ತಾ, ಮೌನಿ ಬಾಬಾನ ಕಥೆ ಹೇಳಿ ನಗೋಕೆ ಶುರು ಮಾಡ್ದೆ. ಹಾಗೇನೆ, ದರೋಡೆ ಮಾಡಿದ ದುಡ್ಡನ್ನ ಹುಂಡಿಗೆ ಹಾಕಿದ ಕಥೆನೂ ಹೇಳ್ದೆ.
ಅಲ್ಲಿವರೆಗೆ ನಾಗರಾಜ್ ದರೋಡೆಕೋರರ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ. ನಾನು ಹೇಳ್ತಿದ್ದ ಹಾಗೆ, `ಆ ಮನೆಗಳೆಲ್ಲ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿದ್ದಾವಾ? ಅವರು ತೆಲುಗು ಮತ್ತೆ ಹಿಂದಿ ಮಾತಾಡ್ತಾರಾ?’ ಅಂತ ಕೇಳಿದ್ರು.
ಸ್ವಲ್ಪ ಯೋಚನೆ ಮಾಡ್ದಾಗ, ನಾನು ಎಲ್ಲಾ ಸ್ಥಳಗಳಿಗೆ ಹೋಗುವಾಗ ರೈಲ್ವೆ ಟ್ರ್ಯಾಕ್ ಹತ್ತಿರದಲ್ಲಿರೋದು ನೆನಪಾಯ್ತು. ಅವರು ತೆಲುಗು ಮತ್ತೆ ಹಿಂದಿ ಭಾಷೆಯಲ್ಲಿ ಮಾತಾಡೋದು ಸರಿಯಾಗೇ ಇತ್ತು. `ಯಾರಿವರು?’ ಅಂತ ಕೇಳ್ದೆ.
`ಗ್ಯಾರಂಟಿಯಾಗಿ ಹೇಳೋಕ್ಕಾಗೋಲ್ಲ. ಇವರೆಲ್ಲ ಸ್ಟುವರ್ಟ್ ಪುರಂ ಕಡೆಯಿಂದ ಬಂದಿರಬಹುದು. ಆದ್ರೆ ಅಲ್ಲಿ ಜನ ಸುಮಾರು ಐದಾರು ವರ್ಷಗಳಿಂದ ಬಂದಿಲ್ಲ,’ ಅಂದ್ರು.
ಎಪ್ಪತ್ತನೇ ದಶಕದ ಕೊನೆ ಭಾಗದಲ್ಲಿರಬಹುದು. ಬೆಂಗಳೂರಿನ ಸುತ್ತ ಮುತ್ತ ದರೋಡೆಕೋರರ ಹಾವಳಿ ಶುರುವಾಗಿತ್ತು. ಪೋಲಿಸರಿಗೆ ಇದು ದೊಡ್ಡ ತಲೆನೋವಾಗಿತ್ತು. ಒಂದೆರೆಡು ಕಡೆ, ದರೋಡೆಕೋರರು ಮನೆಯವರನ್ನು ಹೊಡೆದು ಕೊಲೆ ಸಹ ಮಾಡಿದ್ದರು. ಅದಕ್ಕಾಗಿ ವಿಶೇಷವಾದ ತಂಡವನ್ನೂ ರಚಿಸಿದ್ದರು.
ಸುಮಾರು ದಿನ ತೆನಿಖೆ ನೆಡೆಸಿದ ಮೇಲೆ, ಪೋಲಿಸರು ಇದು ಎರಡು ಬೇರೆ ಬೇರೆ ತಂಡಗಳಿಂದ ನೆಡೆಯುತ್ತಿರುವ ದರೋಡೆ ಅಂತ ಗೊತ್ತಾಯ್ತು. ಒಂದು ತಂಡ ಮನೆ ಬಾಗಿಲನ್ನು ಕಲ್ಲು, ಹಾರೆಗಳಿಂದ ಒಡೆದು ಹಾಕಿ, ಮನೆಯ ಒಳಗಿದ್ದವರ ಮೇಲೆ ಹಲ್ಲೆ ನೆಡೆಸಿ, ಇದ್ದದ್ದನ್ನು ದೋಚಿಕೊಂಡು ಹೋಗುತ್ತಿದ್ದರು. ಎರಡನೇ ಗುಂಪು ಮಾತ್ರ ಹಾಗಲ್ಲ. ಮನೆಯ ಕರೆಂಟ್ ಮತ್ತು ಟೆಲಿಫೋನ್ ಕತ್ತರಿಸಿ, ಮಾತಲ್ಲೇ ಹೆದರಿಸಿ ಬಾಗಿಲು ತೆಗೆಯುವಂತೆ ಮಾಡುತ್ತಿದ್ದರು. ಹೆಂಗಸರು ಮತ್ತು ಮಕ್ಕಳನ್ನು ಗೌರವದಿಂದ ಕಾಣುತ್ತಿದ್ದ ಈ ಗುಂಪು, ಯಾರಿಗೂ ಹೊಡೆಯುತ್ತಿರಲಿಲ್ಲ. ದರೋಡೆಯಾದ ಎಲ್ಲಾ ಮನೆಗಳೂ ರೈಲ್ವೆ ಟ್ರ್ಯಾಕ್ ಹತ್ತಿರದಲ್ಲೇ ಇರುತ್ತಿದ್ದವು.
ಮೊದಲನೆ ಗುಂಪು ಬೇಗನೆ ಸಿಕ್ಕಿಹಾಕಿಕೊಂಡಿತ್ತು. ಅದೊಂದು ಕಲ್ಲು ವಡ್ಡರ ಗುಂಪು. ಎರಡನೇ ಗುಂಪು ರೈಲ್ವೇ ಟ್ರ್ಯಾಕ್ ಹತ್ತಿರವೇ ಯಾಕೆ ದರೋಡೆ ಮಾಡ್ತಾರೆ ಅಂತ ಪೋಲಿಸರಿಗೆ ಗೊತ್ತಾಗಲಿಲ್ಲ.
ಕೊನೆಗೆ, ರೈಲ್ವೆ ಸ್ಟೇಷನ್ನ ಪ್ಲಾಟ್ ಪಾರ್ಮ್ ನಲ್ಲಿ ಪೋಲಿಸರು ಹಮಾಲಿಗಳಂತೆ ಕೆಲಸ ಮಾಡೋಕೆ ಶುರುಮಾಡಿದ್ದ ಗುಂಪಿನಲ್ಲಿ ನಾಗರಾಜ್ ಕೂಡ ಇದ್ದರು. ಒಂದೆರೆಡು ದಿನಗಳಲ್ಲೇ ಪೋಲಿಸರಿಗೆ ಒಂದು ಅಲೆಮಾರಿ ಗುಂಪಿನ ಮೇಲೆ ಅನುಮಾನ ಬಂತು. ಆ ಗುಂಪಿನ ಹೆಂಗಸರು ಬಿದಿರಿನ ಬುಟ್ಟಿ ಹೆಣೆಯುತ್ತಿದ್ದರೆ, ಗಂಡಸರು ಸುಮ್ಮನೆ ಕುಳಿತುಕೊಂಡಿರುತ್ತಿದ್ದರು. ಮಧ್ಯದಲ್ಲಿ ರೈಲ್ವೇ ಟ್ರ್ಯಾಕ್ ಪಕ್ಕದಲ್ಲಿ ನೆಡೆದುಕೊಂಡು ಹೋಗಿ, ಎಷ್ಟೋ ಹೊತ್ತಿನಮೇಲೆ ವಾಪಾಸ್ ಬರುತ್ತಿದ್ದರು. ಅವರನ್ನು ಹಿಡಿಯೋಕೆ ಹೋದಾಗ, ಒಂದು ನಾಲ್ಕು ಜನರನ್ನು ಬಿಟ್ಟು, ಇನ್ನೆಲ್ಲರೂ ತಪ್ಪಿಸಿಕೊಂಡಿದ್ದರು. ಆಗಲೇ ಬೆಂಗಳೂರು ಪೋಲಿಸರಿಗೆ ಸ್ಟುವರ್ಟ್ ಪುರಂ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿದ್ದು.
ಸ್ಟುವರ್ಟ್ ಪುರಂ, ಆಂದ್ರಪ್ರದೇಶದ ರಾಯಲ್ ಸೀಮಾ ಬರಡು ಪ್ರದೇಶದಲ್ಲಿರುವ ಒಂದು ಊರು. ಇಲ್ಲಿರುವ ಹೆಚ್ಚಿನವರೆಲ್ಲ ಮಣ್ಣು ವಡ್ಡರು. ಶತಮಾನಗಳಿಂದ ದರೋಡೆಯನ್ನೇ ಕಸುಬಾಗಿಟ್ಟುಕೊಂಡವರು. ಬ್ರಿಟಿಶರು ಸಹ ಸ್ಟುವರ್ಟ್ ಪುರಂ ಸಹವಾಸಕ್ಕೆ ಹೆಚ್ಚಾಗಿ ಹೋಗುತ್ತಿರಲಿಲ್ಲವಂತೆ.
ಆದರೆ, ಬದಲಾವಣೆ ಬಂದಿದ್ದು ಸ್ಟುವರ್ಟ್ ಎನ್ನೋ ಬ್ರಿಟಿಶ್ ಪೋಲಿಸ್ ಆಫಿಸರ್ ಅಲ್ಲಿಗೆ ಟ್ರಾನ್ಸ್ ಫರ್ ಆಗಿ ಬಂದ ಮೇಲೆ. ನೂರಾರು ಕಿಲೋಮೀಟರ್ ಹರಡಿರುವ ಈ ಪ್ರದೇಶದಲ್ಲಿ ಅವನು ಮಾಡಿದ ಮೊದಲ ಕೆಲಸ ಅಂದರೆ, ಒಂದು ಪೋಲಿಸ್ ಸ್ಟೇಶನ್ ಸ್ಥಾಪಿಸಿದ್ದು. ಅದಾದ ಮೇಲೆ, ಅಲ್ಪ ಸ್ವಲ್ಪ ವ್ಯವಸಾಯಕ್ಕೆ ಯೋಗ್ಯವಾದ ಜಾಗವನ್ನು ಗುರುತಿಸಿ, ಯಾರಾದರೂ ದರೋಡೆ ಅಥವಾ ಯಾವುದಾರೂ ಅಪರಾಧ ಮಾಡಿದವರನ್ನು ಹಿಡಿದುಕೊಂಡು ಬಂದು, ಅಲ್ಲಿ ಅವರಿಗೆ ವ್ಯವಸಾಯವನ್ನು ಕಲಿಸುತ್ತಿದ್ದನಂತೆ. ಸ್ವಲ್ಪ ವರ್ಷಗಳಲ್ಲಿ ಸ್ಟುವರ್ಟ್ ಜನಪ್ರಿಯನಾಗಿ, ಅಪರಾಧ ಮಾಡದಿದ್ದವರೂ ಸಹ ಅಲ್ಲಿ ಬಂದು ಕೆಲಸ ಮಾಡೋಕೆ ಶುರು ಮಾಡಿದರಂತೆ. ಯಾಕೆಂದ್ರೆ, ಬೆಳೆಯ ಒಂದು ಪಾಲನ್ನು ಸ್ಟುವರ್ಟ್, ಕೆಲಸ ಮಾಡಿದವರಿಗೇ ಕೊಡುತ್ತಿದ್ದನಂತೆ. ಸ್ಟುವರ್ಟ್ ತೀರಿಹೋದ ಮೇಲೂ ಈ ವ್ಯವಸ್ಥೆ ಹಾಗೇ ಮುಂದುವರೆಯಿತಂತೆ. ಸ್ವಾತಂತ್ರ್ಯಾನಂತರ ಇದನ್ನು ಆಂದ್ರ ಸರ್ಕಾರದವರು ನೆಡೆಸಿಕೊಂಡು ಹೋಗುತ್ತಿದ್ದಾರೆ, ಅಂತ ನಾಗರಾಜ್ ಹೇಳಿದ್ರು.
ಎಷ್ಟೇ ಜನ ಬದಲಾದರೂ, ನೂರಾರು ಕಿಲೋಮೀಟರ್ ಇರೋ ಈ ಬೆಂಗಾಡಿನಲ್ಲಿ ಎಲ್ಲರನ್ನ ಬದಲಿಸೋಕ್ಕೆ ಸಾಧ್ಯವಂತೂ ಇರಲಿಲ್ಲ. ಯಾರ ಕೈಗೂ ಸುಲಭವಾಗಿ ಸಿಗದ ಈ ಜನಗಳು, ಪೋಲಿಸರು ಬರೋ ಸೂಚನೆ ಸಿಕ್ಕಿದ ತಕ್ಷಣ, ಬೆಂಗಾಡಿನ ಮಣ್ಣು ದಿಬ್ಬಗಳ ನೆಡೆವೆ  ಕಣ್ಮರೆಯಾಗುತ್ತಿದ್ದರಂತೆ.
ಈ ಊರಿನ ಕೆಲವು ಧಣಿಗಳು, ಈ ಮಣ್ಣುವಡ್ಡರನ್ನು ಸಾಕುತ್ತಿದ್ದರಂತೆ. ಈ ಮಣ್ಣು ವಡ್ಡರು ದರೋಡೆಗಾಗಿ ಬೇರೆ ಊರುಗಳಿಗೆ ಹೋಗುವಾಗ, ಈ ದಣಿಗಳ ಹತ್ರ ಹೋಗಿ ಹೇಳುತ್ತಿದ್ದರಂತೆ. ದಣಿಗಳು ಇವರಿಗೆ ಒಂದೈದು ಸಾವಿರ ಕೊಟ್ಟು ಕಳುಹಿಸುತ್ತಿದ್ದರಂತೆ. ಆ ದುಡ್ಡು ತಗೊಂಡು, ಈ ವಡ್ಡರುಗಳು ರೈಲು ಹತ್ತಿ, ಯಾವುದಾದರೊಂದು ದೊಡ್ಡ ಊರಿಗೆ ಹೋಗುತ್ತಿದ್ದರು. ಅಲ್ಲೇ ರೈಲ್ವೇ ಪ್ಲಾಟ್ ಫಾರಂ ಮೇಲೆ ಕ್ಯಾಂಪ್ ಮಾಡುತ್ತಿದ್ದರಂತೆ. ಬೆಳಗ್ಗೆ ಹೊತ್ತು ಗಂಡಸರು ರೈಲ್ವೇ ಟ್ರ್ಯಾಕ್ ಗಳ ಮೇಲೆ ನೆಡ್ಕೊಂಡು ಹೋಗಿ, ದರೋಡೆ ಮಾಡಲು ಒಳ್ಳೇ ಸ್ಥಳ ಯಾವುದು ಅಂತ ನೋಡಿಕೊಂಡು ಬರುತ್ತಿದ್ದರಂತೆ. ರಾತ್ರಿ ಹೊತ್ತು ಹೋಗಿ ದರೋಡೆ ಮಾಡಿಕೊಂಡು ಬಂದು, ಪ್ಲಾಟ್ ಫಾರಂ ಮೇಲೆ ಮಲಗಿರುತ್ತಿದ್ದರಂತೆ. ಭಾಷೆ ಮತ್ತು ದಾರಿ ಗೊತ್ತಲ್ಲದ ಊರುಗಳಾದ್ದರಿಂದ, ಅವರು ರೈಲ್ವೇ ಟ್ರ್ಯಾಕ ಪಕ್ಕದಲ್ಲೇ ನೆಡೆದುಕೊಂಡು ಹೋಗಿ, ಅದೇ ದಾರಿಯಲ್ಲಿ ವಾಪಾಸ್ ಬರುತ್ತಿದ್ದರಂತೆ. ದಾರಿ ತಪ್ಪಿ ಕಳೆದು ಹೋಗದಿರುವಂತೆ ಅವರು ಮಾಡುತ್ತಿದ್ದ ಪ್ಲ್ಯಾನ್ ಇದು.
ದಣಿಗಳು ಕೊಟ್ಟ ದುಡ್ಡು ಮುಗಿಯತ್ತಾ ಬರುತ್ತಿದ್ದಂತೆ, ಇವರು ಮತ್ತೆ ರೈಲು ಹತ್ತಿ ಊರಿಗೆ ವಾಪಾಸ್ ಹೋಗುತ್ತಿದ್ದರಂತೆ. ತಾವು ದರೋಡೆ ಮಾಡಿದ ಯಾವುದೇ ವಸ್ತುಗಳನ್ನೂ ಅವರು ಇಟ್ಟುಕೊಳ್ಳುತ್ತಿರಲಿಲ್ಲವಂತೆ. ಎಲ್ಲವನ್ನೂ ದಣಿಗಳಿಗೆ ಕೊಟ್ಟು, ಅವರು ಎಷ್ಟು ಕೊಡ್ತಾರೋ ಅದರಲ್ಲಿ ಒಂದು ಪಾಲನ್ನು ದೇವರಿಗೆ ಉತ್ಸವ ಮಾಡಿ, ಉಳಿದ ದುಡ್ಡನ್ನು ಹಂಚಿಕೊಳ್ಳುತ್ತಿದ್ದರಂತೆ. ದುಡ್ಡು ಖಾಲಿಯಾದ ತಕ್ಷಣ, ಮತ್ತೆ ದಣಿಗಳ ಮನೆ ಮುಂದೆ ಹೋಗಿ, ಆನಂತರ ರೈಲು ಹತ್ತುತ್ತಿದ್ದರಂತೆ. ಈ ಗುಂಪುಗಳನ್ನು ಸಾಕಿದ ಎಷ್ಟೋ ದಣಿಗಳು ಆಂದ್ರದ ಎಂ.ಎಲ್.ಎ ಸಹ ಆದರಂತೆ.
ಬೆಂಗಳೂರಿಂದ ಹೋದ ಪೋಲಿಸರಿಗೆ ನಿರಾಶೆ ಕಾದಿತ್ತು. ಮೊದಲನೆಯದಾಗಿ, ಆಂದ್ರದ ಪೋಲಿಸ್ ತಲೆನೇ ಕೆಡಿಸ್ಕೊಳ್ಳಲಿಲ್ಲ. ಹುಟ್ಟಿದ್ದಾಗಿನಿಂದ ಈ ಮಣ್ಣು ವಡ್ಡರನ್ನು ನೋಡಿದ್ದ ಅವರಿಗೆ, ಇದೇನೂ ದೊಡ್ಡ ವಿಷಯ ಅನ್ನಿಸಿರಲಿಲ್ಲ. ಆ ಹಳ್ಳಿಗಳನ್ನು ಹುಡುಕಿಕೊಂಡು ಜೀಪಿನಲ್ಲೇ ಹೋಗಬೇಕು. ಆ ಬೆಂಗಾಡಿನಲ್ಲಿ ಜೀಪಿನ ಧೂಳು ಕಿಲೋಮೀಟರ್ ದೂರದಿಂದ ಕಾಣುತ್ತೆ. ಧೂಳು ಎದ್ದ ತಕ್ಷಣ ಇವರೆಲ್ಲ ದಿಬ್ಬಗಳ ನೆಡುವೆ ಕಾಣೆಯಾಗುತ್ತಿದ್ದರು. ಅಂತೂ ಇಂತೂ ಕಷ್ಟ ಪಟ್ಟು, ಇಬ್ಬರನ್ನು ಹಿಡ್ಕೊಂಡು ಬಂದ್ರಂತೆ.
`ಮತ್ತೆ ಅವ್ರು ಬರ್ಲಿಲ್ವಾ?’ ಅಂತ ಕೇಳ್ದೆ.
`ಹಾಗೇನಿಲ್ಲ. ಬಂದು ಹೋಗ್ತಿದ್ರು. ನಮ್ಮ ಪೋಲಿಸರೂ ಅಲ್ಲಿಗೆ ಹೋಗಿ ಕೆಲವರ್ನ ಹಿಡ್ಕೊಂಡು ಬರ್ತಿದ್ರು. ಇತ್ತೀಚೆಗೆ ಜೀವನ ಚೇಂಜ್ ಆಗೋಕೆ ಶುರುವಾಯ್ತು ನೋಡು. ಅವರಿಗೂ ಮಣ್ಣಿನ ಕೆಲ್ಸ ಸಿಗೋಕೆ ಶುರುವಾಯ್ತು ಅಂತ ಕಾಣುತ್ತೆ. ಐದಾರು ವರ್ಷಗಳಿಂದ ನಾನು ಕೇಳಿಲ್ಲ. ಈಗೇನಾದ್ರೂ ಬಂದ್ರಾ ಅಂತ ನೋಡ್ಬೇಕು,’ ಅಂದ್ರು ನಾಗರಾಜ್.
ನಾಗರಾಜ್ ಕಥೆ ಕೇಳಿದಮೇಲೆ, ಸ್ಟುವರ್ಟ್ ಪುರಂಗೆ ಒಂದ್ಸಲ ಹೋಗಬೇಕು ಅಂತ ಅನ್ನಿಸ್ತಿತ್ತು. ಯಾಕೋ ಏನೋ, ಅದಕ್ಕೆ ಟೈಮೇ ಸೆಟ್ ಆಗ್ಲಿಲ್ಲ. ಆಗಾಗ ದರೋಡೆ ಪ್ರಕರಣಗಳು ನೆಡೆದಾಗ, ಸ್ಟುವರ್ಟ್ ಪುರಂ ನೆನಪಿಗೆ ಬರ್ತಿತ್ತು.
ನಾನು ಟೈಮ್ಸ್ ಆಫ್ ಇಂಡಿಯಾಗೆ ಸೇರಿದ ಮೇಲೆ, ನಮ್ಮ ಪೇಪರ್ ನವರು ಕ್ರೆಸ್ಟ್ ಅನ್ನೋ, ವಾರಕ್ಕೊಮ್ಮೆ ಹೊರ ಬರುವ ಮ್ಯಾಗಜೀನ್ ಹೊರ ತಂದರು. ಆ ಸಮಯದಲ್ಲಿ ನಾನು ಅಲ್ಲಿನ ಅಸೋಸಿಯೇಟ್ ಎಡಿಟರ್ ಜಯಂತ್ ಕೊಡ್ಕಿಣಿಯವರಿಗೆ ಸ್ಟುವರ್ಟ್ ಪುರಂ ಕಥೆ ಹೇಳಿದ್ದೆ. ಅವರು ನನಗೆ ಸ್ಟುವರ್ಟ್ ಪುರಂಗೆ ಹೋಗಿ, ಕ್ರೆಸ್ಟ್ ಗೆ ಯಾಕೆ ಒಂದು ಕಥೆ ಬರೆಯಬಾರದು? ಅಂತ ಕೇಳಿದರು. ನಾನೇನೋ ತಯಾರಿದ್ದೆ, ಆಫಿಸಿನಲ್ಲಿ ಬೇರೆಯವರ ಪ್ರತಿಕ್ರಿಯೆ ಸರಿ ಇರಲಿಲ್ಲ. ಇನ್ಯಾವತ್ತಾದರೂ ಹೋದರಾಯ್ತು ಅಂತ ಸುಮ್ಮನಾದೆ.
ಅಲ್ಲಿಂದ ಮುಂದೆ ಸ್ಟುವರ್ಟ್ ಪುರಂ ನಂಗೆ ಮರೆತೇ ಹೋಗಿತ್ತು. ಮೊನ್ನೆ ದರೋಡೆ ಪ್ರಕರಣ ಓದುವವರೆಗೆ……


ಮಾಕೋನಹಳ್ಳಿ ವಿನಯ್ ಮಾಧವ್

3 ಕಾಮೆಂಟ್‌ಗಳು: