ಅಪ್ಪ…. ನಂಗೆ ಮೆಡಲ್ ತೋರಿಸ್ತೀಯಾ?
`ರೀ
ವಿನಯ್… ನಿಮಗೆ ಕಣ್ರಿ ಫೋನ್’ ಅಂತ ಬಾಲು ಹೇಳ್ದಾಗ ಸಿಟ್ಟೇ ಬಂದಿತ್ತು. ಬೆಳಗ್ಗಿನಿಂದ ಇದೇ ಗೋಳು.
ಕಮೀಷನರ್ ಆಫೀಸಿಗೆ ಹೋದಾಗ ಸಿಕ್ಕಿದವರೆಲ್ಲಾ ಇದನ್ನೇ ಕೇಳ್ತಿದ್ರು. `ಸರ್, ಮೆಡಲ್ ಲಿಸ್ಟ್ ವಿಷಯ
ಏನಾದ್ರೂ ಗೊತ್ತಾಯ್ತಾ? ನಂದೂ ಹೆಸರಿತ್ತು ಅದ್ರಲ್ಲಿ,’ ಅಂತ.
ಕೆಲವು
ಕಾನ್ಸ್ಟೇಬಲ್ ಗಳಂತೂ, `ನಮ್ಮ ಸಾಹೇಬರರ್ದು ಇದ್ಯಾ?’ ಅಂತ ದಂಬಾಲು ಬೀಳುತ್ತಿದ್ದರು.
ನಂಗಂತೂ
ಸಾಕಾಗಿ ಹೋಗಿತ್ತು. ಆಫೀಸಿಗೆ ಬಂದರೆ, ಒಂದು ಹತ್ತು ಜನ ಫೋನ್ ಮಾಡಿ ನಂಬರ್ ಬಿಟ್ಟಿದ್ದರು. ಯಾರಿಗೆ
ವಾಪಾಸ್ ಫೋನ್ ಮಾಡಿದ್ರೂ ಒಂದೇ ಪ್ರಶ್ನೆ: `ಸರ್… ಮೆಡಲ್ ಲಿಸ್ಟ್’.
ಯಾವ
ಕೆಲಸನೂ ಸರಿ ಆಗ್ತಿರಲಿಲ್ಲ, ಈ ಮೆಡಲ್ ಲಿಸ್ಟ್ ಗಲಾಟೆಲಿ. ಆಫೀಸ್ ನಲ್ಲೂ ಫೋನ್ ಗಳ ಕಾಟ. ಸಧ್ಯ, ಆಗಿನ್ನೂ
ಮೊಬೈಲ್ ಫೋನ್ ಬಂದಿರಲಿಲ್ಲ. ಬಂದಿದ್ದರೆ, ಒಡೆದೇ ಹಾಕ್ತಿದ್ನೇನೋ… ಅಷ್ಟೊಂದು ರೇಜಿಗೆಯಾಗಿತ್ತು.
ಈ
ಆಫೀಸಿನಲ್ಲಿ ಇದ್ದರೆ ತಲೆ ಕೆಟ್ಟು ಹೋಗುತ್ತೆ ಅಂತ ಬೈಕ್ ಹತ್ತಿದವನೇ, ಸೀದ ಚಿಕ್ಕಪೇಟೆ ಪೋಲಿಸ್ ಸ್ಟೇಶನ್
ಗೆ ಬಂದೆ. ಎಲ್ಲೋ ಹೊರಗಡೆ ಹೋಗಿದ್ದ ಇನ್ಸ್ ಪೆಕ್ಟರ್ ಬಿ.ಕೆ.ಶಿವರಾಂ, ಆಗ ತಾನೆ ಬಂದಿಳಿದರು.
ಸುಮ್ಮನೆ
ತಲೆಹರಟೆಗೆ ಕೇಳಿದೆ: `ಏನ್ರಿ ಶಿವರಾಂ? ನಿಮಗೆ ಮೆಡಲ್ ಬರ್ಲಿಲ್ವಾ?’ ಅಂತ ನಕ್ಕೆ.
`ಬ್ಯಾಡ
ಸ್ವಾಮಿ… ಅವ್ರು ಕೊಟ್ರೂ ಬ್ಯಾಡ. ಇಲ್ಲಿವರೆಗೆ ಕೊಟ್ಟಿರೋದೇ ಸಾಕಾಗಿದೆ,’ ಅಂತ ನಕ್ಕರು.
`ಯಾಕೆ?
ಏನಾಯ್ತು?’ ಅಂದೆ.
`ಮೆಡಲ್
ಗಳಿಗೂ ಮತ್ತೆ ನನ್ನ ಜಾತಕಕ್ಕೂ ಸರಿ ಹೋಗೋಲ್ಲ ಕಣ್ರಿ. ಏನಾದ್ರು ಎಡವಟ್ಟಾಗುತ್ತೆ,’ ಅಂತ ಅಂದ್ರು.
ಹಾಗೇ
ಅವರ ಛೇಂಬರ್ ನಲ್ಲಿ ಕೂತು ಮಾತಾಡ್ತಾ ಶಿವರಾಂ ಅವರ ಮೆಡಲ್ ಕಥೆ ಶುರು ಮಾಡಿದ್ರು:
ಎಪ್ಪತ್ತು
ಮತ್ತು ಎಂಬತ್ತರ ದಶಕದಲ್ಲಿ, ಅತೀ ದೊಡ್ಡ ಕ್ರೈಂಗಳಲ್ಲಿ ಗಂಧದ ಸಾಗಾಣಿಕೆಯೂ ಒಂದು. ಆಗಿನ ಬೆಂಗಳೂರು
ಕಮೀಷನರ್ ಹರ್ಲಂಕರ್ ಅವರು ಗಂಧಸಾಗಾಣಿಕೆಯವರನ್ನು ಮಟ್ಟ ಹಾಕಲು ಒಂದು ವಿಶೇಷ ತಂಡವನ್ನೇ ಮಾಡಿದ್ದರು.
ಅದರಲ್ಲಿ, ಆಗ ತಾನೆ ಪ್ರೊಬೇಶನರಿ ಮುಗಿಸಿ ಬಂದಿದ್ದ ಶಿವರಾಂ ಕೂಡ ಒಬ್ಬರು.
ಒಂದು
ಸಲ ಯಾವುದೋ ಮಾಹಿತಿಯ ಮೇರೆಗೆ, ಪೋಲಿಸ್ ತಂಡ ಎರಡು ಜೀಪ್ ಗಳನ್ನು ಹಿಂಬಾಲಿಸಲು ಶುರು ಮಾಡಿವೆ. ಮಾಹಿತಿ
ಸರಿ ಇದ್ದುದ್ದರಿಂದ, ಆ ಜೀಪಿನಲ್ಲಿದ್ದವರು ಕೂಡ ಸ್ಪೀಡಾಗಿ ಹೋಗತೊಡಗಿದರು. ಸರಿ, ಸಿನಿಮಾ ಮಾದರಿ
ಛೇಸ್ ಶುರುವಾಯ್ತು. ಗಂಧದ ಕಳ್ಳರ ಡ್ರೈವರ್ ತುಂಬಾನೆ ಚೆನ್ನಾಗಿ ಓಡಿಸುತ್ತಿದ್ದ. ಪೋಲಿಸ್ ತಂಡವನ್ನು
ಎಸಿಪಿ ಸಾಹೇಬರೊಬ್ಬರು ಮುನ್ನೆಡೆಸುತ್ತಿದ್ದರು. ಯಾವುದೇ ಕಾರಣಕ್ಕೂ ಜೀಪಿನ ಚಕ್ರ ಬಿಟ್ಟು ಬೇರೆ ಯಾವ
ಕಡೆಗೂ ಗುಂಡು ಹಾರಿಸಬಾರದು ಅಂತ ತಾಕೀತು ಮಾಡಿದ್ದರು.
ಹೀಗೆ
ಶುರುವಾದ ಛೇಸಿಂಗ್ ಹಾಸನದ ಹತ್ತಿರದವರೆಗೂ ಹೋಯ್ತು. ಏನಾಯ್ತೋ ಏನೋ, ಶಿವರಾಂ ತಮ್ಮ ರಿವಾಲ್ವಾರ್ ನಿಂದ
ಮುಂದೆ ಹೋಗುತ್ತಿದ್ದ ಜೀಪಿನೊಳಗೇ ಗುಂಡು ಹಾರಿಸಿದರು. ಡ್ರೈವರ್ ಗೆ ಗುಂಡು ಬಿದ್ದಿದ್ದು ಎಲ್ಲರಿಗೂ
ಗೊತ್ತಾಯ್ತು. ಸ್ವಲ್ಪ ದೂರ ಹೋದಮೇಲೆ, ಕಾಡಿನಲ್ಲಿ ಜೀಪ್ ಸಿಕ್ಕಿತು. ಡ್ರೈವರ್ ಹೆಣವಾಗಿದ್ದ ಮತ್ತೆ
ಇನ್ನುಳಿದವರು ತಪ್ಪಿಸಿಕೊಂಡು ಹೋಗಿದ್ದರು .
ಎಸಿಪಿ
ಸಾಹೇಬರಂತೂ ಶಿವರಾಂ ಮೇಲೆ ಬಾಯಿಗೆ ಬಂದಂತೆ ಎಗರಾಡಲು ಶುರುಮಾಡಿದ್ರು. ``ನಾನು ಹೇಳಿರ್ಲಿಲ್ವಾ? ಚಕ್ರಕ್ಕೆ
ಮಾತ್ರ ಗುಂಡು ಹಾರಿಸ್ಬೇಕೂಂತ? ಈಗಿವನು ಸತ್ತು ಹೋಗಿದ್ದಾನೆ. ಹ್ಯೂಮನ್ ರೈಟ್ಸ್ ಅವರು ಬರ್ತಾರೆ.
ನಂಗೇನಂತೆ? ನಾನಂತೂ ನೀನೇ ಗುಂಡು ಹಾರಿಸಿದ್ದು ಅಂತ ರಿಪೋರ್ಟ್ ಕೊಟ್ಟು ಶಿಸ್ತು ಕ್ರಮಕ್ಕೆ ರೆಕಮೆಂಡ್
ಮಾಡ್ತೀನಿ. ಒಂದ್ಸಲ ಸಸ್ಪೆಂಡ್ ಆದ್ರೆ ಗೊತ್ತಾಗುತ್ತೆ, ಸೀನಿಯರ್ಸ್ ಹೇಳಿದ ಮಾತು ಕೇಳ್ಬೇಕು ಅಂತ,’
ಅಂದ್ರು.
ಆಗ
ತಾನೆ ಸರ್ವಿಸ್ ಗೆ ಸೇರಿದ್ದ ಶಿವರಾಂಗೆ ಏನು ಮಾಡ್ಬೇಕು ಅಂತ ಗೊತ್ತಾಗಿಲ್ಲ. ಸುಮ್ಮನೆ ತಲೆ ತಗ್ಗಿಸಿ
ನಿಂತಿದ್ದಾರೆ. ಪೋಸ್ಟ್ ಮಾರ್ಟಂ ಮುಗಿಸಿ ಎಲ್ಲರೂ ಹೊರಟರು.
ಆದ್ರೆ,
ಬೆಂಗಳೂರಿನಲ್ಲಿ ಸೀನ್ ಬೇರೆಯಾಗಿತ್ತು. ಹರ್ಲಂಕರ್ ರವರು ಪೋಲಿಸ್ ತಂಡವನ್ನು ಸ್ವಾಗತ ಮಾಡಲು ನೆಲಮಂಗಲಕ್ಕೆ
ಒಂದು ತಂಡ ಕಳುಹಿಸಿದ್ದರು. ತಂಡವು ಹರ್ಲಂಕರ್ ಅವರ ಮುಂದೆ ಬಂದ ತಕ್ಷಣ, ಎಲ್ಲರಿಗೂ ಶಭಾಸ್ ಗಿರಿ ಕೊಟ್ಟು,
ತುಂಬಾನೆ ಹೊಗಳಿದರು. ಡ್ರೈವರ್ ಗೆ ಗುಂಡು ಹೊಡೆದವರು ಯಾರು? ಅಂತ ಕೇಳಿದರು.
ಶಿವರಾಂ
ಕೈ ಎತ್ತುವುದರೊಳಗೆ ಎಸಿಪಿ ಸಾಹೇಬರು ಎದೆ ಸೆಟೆಸಿ, `ನಾನೇ ಸರ್,’ ಎಂದರು. ಹರ್ಲಂಕರ್ ಎಸಿಪಿಯ ಬೆನ್ನು
ತಟ್ಟಿ ಶಹಬಾಸ್ ಗಿರಿ ಕೊಡುತ್ತಿರುವಾಗ, ಶಿವರಾಂಗೆ ಏನಾಗ್ತಾ ಇದೆ ಅಂತ ಗೊತ್ತಾಗದೆ, ಪೆಚ್ಚು ಮುಖ
ಹಾಕಿಕೊಂಡು ಜೊತೆಯವರನ್ನು ನೋಡಿದರು. ಯಾರೂ ಮಾತಾಡಲಿಲ್ಲ. ಆಮೇಲೆ, ಈ ಸಾಹಸಕ್ಕಾಗಿ ಎಸಿಪಿ ಸಾಹೇಬರು
ಮೆಡಲ್ ಬೇರೆ ತಗೊಂಡ್ರು.
ಶಿವರಾಂಗೆ
ಈ ಘಟನೆಯನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಅಂತ ಗೊತ್ತಾಗದೆ, ಯಾರಿಗೂ ಹೇಳಿಕೊಳ್ಳಲಾಗದೆ, ಸುಮ್ಮನಾದರು.
ಇದಾಗಿ
ಕೆಲವು ವರ್ಷಗಳಾದ ಮೇಲೆ, ಬೆಂಗಳೂರಿನಲ್ಲಿ ಕೊತ್ವಾಲ ರಾಮಚಂದ್ರನ ಹಾವಳಿ ಹೆಚ್ಚಾಗಿತ್ತು. ಎಷ್ಟೇ ಪ್ರಯತ್ನ
ಪಟ್ಟರೂ, ಪೋಲಿಸ್ ಕೈಗೆ ಸಿಗುತ್ತಿರಲಿಲ್ಲ. ಆಗಿನ ಡಿಸಿಪಿ ಮರಿಸ್ವಾಮಿಯವರಂತೂ ಊಟ ನಿದ್ರೆ ಬಿಟ್ಟು,
ತಮ್ಮ ಪೋಲಿಸರ ಬೆನ್ನು ಬಿದ್ದರು. ಕೊನೆಗೂ ಕೊತ್ವಾಲ ಸಿಕ್ಕಿದ್ದು ಶಿವರಾಂ ಕೈಗೆ.
ಈ
ಕೇಸಿನಲ್ಲಿ ಶಿವರಾಂಗೆ ಮೆಡಲ್ ಕೊಡಲು ಶಿಫಾರಸ್ಸು ಮಾಡುವುದಾಗಿ ಮರಿಸ್ವಾಮಿಯವರು ಹೇಳಿದ್ದರು. ಅದೇ
ಸಮಯದಲ್ಲಿ ಎರಡು ಘಟನೆಗಳು ನೆಡೆದವು. ಶಿವರಾಂ, ಆಗಿನ ಪ್ರಮುಖ ರಾಜಕಾರಣಿಯಾಗಿದ್ದ ಹಾಜಿ ಅಬ್ದುಲ್
ಸತ್ತಾರ್ ಸೇಠ್ ಮಗನನ್ನು ಯಾವುದೋ ಕೇಸಿನಲ್ಲಿ ಬಂಧಿಸಿದ್ದರು. ಆಗಿನ ಡಿ.ಜಿ. ಆಗಿದ್ದ ನಿಜಾಮುದ್ದೀನ್
ಹೇಳಿದ್ದರೂ ಬಿಟ್ಟಿರಲಿಲ್ಲ. ಅದೇ ವರ್ಷ, ಶಿವರಾಂ ಮಗಳು ಹುಟ್ಟಿದ್ದಳು.
ಮೆಡಲ್
ಲಿಸ್ಟ್ ಬಂದಾಗ, ಶಿವರಾಂ ಹೆಸರು ಇರಲಿಲ್ಲ. ದಾವಣಗೆರೆಯ ಇನ್ಸ್ ಪೆಕ್ಟರ್ ಒಬ್ಬ ಇಪ್ಪತ್ತು ಸಾವಿರ
ರೂಪಾಯಿ ದರೋಡೆ ಮಾಡಿದ್ದವರನ್ನು ಹಿಡಿದಿದ್ದಕ್ಕಾಗಿ, ಅವರಿಗೆ ಕೊಟ್ಟಿದ್ದರು. ಮರಿಸ್ವಾಮಿಯವರು ಕರೆದು,
ಮೆಡಲ್ ಬರದಿದ್ದಕ್ಕೆ ಬೇಜಾರಾಯ್ತಾ? ಅಂತ ಕೇಳಿದರು.
`ಇಲ್ಲ
ಸರ್. ಮೆಡಲ್ ಕೊಟ್ಟರೆ ತಗೊಳ್ತೀನಿ. ಇಲ್ಲದೇ ಹೋದರೆ, ನನ್ನ ಮಗಳಿಗೆ ಬೇರೆ ಹೆಸರಿಡ್ತೀನಿ,’ ಅಂತ ತಮಾಶೆ
ಮಾಡಿದ್ರು.
`ಮಗಳಿಗೆ
ಏನಂತ ಹೆಸರಿಡಬೇಕು ಅಂತ ಇದ್ದೀರಿ? ಮೆಡಲ್ ಕೊಡದೇ ಹೋದ್ರೆ ಏನಂತ ಇಡ್ತೀರಿ?’ ಅಂತ ಮರಿಸ್ವಾಮಿ ಕೇಳಿದ್ರು.
`ಈಗ
ಸ್ಪಂದನ ಅಂತ ಇಡ್ಬೇಕು ಅಂತ ಇದ್ದೀನಿ. ಮೆಡಲ್ ಸಿಗದೇ ಹೋದ್ರೆ ಪ್ರಶಸ್ತಿ ಅಂತ ಇಡ್ತೀನಿ,’ ಅಂತ ಶಿವರಾಂ
ಹೇಳಿದ್ರು.
`ಸ್ಪಂದನ
ಅಂತಲೇ ಇಡಿ. ಅದು ಹ್ಯಾಗೆ ಮೆಡಲ್ ಸಿಗೋಲ್ಲ ಅಂತ ನಾನೂ ನೋಡ್ತೀನಿ,’ ಅಂದ್ರು ಮರಿಸ್ವಾಮಿ.
ಶಿವರಾಂ
ಏನೋ ಮಗಳಿಗೆ ಸ್ಪಂದನ ಅಂತ ಹೆಸರಿಟ್ಟರು. ಆದ್ರೆ, ಅವರಿಗೆ ಮೆಡಲ್ ಕೊಡೋಕೆ ನಿಜಾಮುದ್ದಿನ್ ಒಪ್ಪಲೇ
ಇಲ್ಲ. ಅಲ್ಲಿಂದ ಮುಂದೆ, ಈ ಮೆಡಲ್ ಗಳ ಸಹವಾಸವೇ ಬೇಡ ಅಂತ ಶಿವರಾಂ ಸುಮ್ಮನಿದ್ದರು.
ಒಂದೈದಾರು
ವರ್ಷ ಅಗಿರಬಹುದು. ವೀರಪ್ಪನ್ ಹಿಡಿಯಲು ಸರ್ಕಾರ ರಚಿಸಿದ್ದ ಎಸ್ ಟಿ ಎಫ್ ನಲ್ಲಿ ಶಿವರಾಂ ಕೆಲಸ ಮಾಡುತ್ತಿದ್ದರು. ಒಂದು ದಿನ ಕ್ಯಾಂಪ್ ನಲ್ಲಿ
ಇದ್ದಾಗ ಟೆಲಿಗ್ರಾಂ ಬಂತು. ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ಹಂತಕ ಶಿವರಸನ್ ಮತ್ತು ಅವನ ತಂಡದವರು
ಅಡಗಿಕೊಂಡಿದ್ದಾಗ, ಅದನ್ನು ಪತ್ತೆ ಹಚ್ಚಿ, ಕೇಂದ್ರದ ತಂಡದವರು ಬರುವವರೆಗೆ ಆ ಮನೆಯನ್ನು ಸುತ್ತುವರೆದ
ಪೋಲಿಸ್ ತಂಡಕ್ಕೆ ಮೆಡಲ್ ಕೊಡಲಾಗಿದೆ. ಅದರಲ್ಲಿ ತಮಗೂ ಮೆಡಲ್ ಬಂದಿರುವುದರಿಂದ, ತಕ್ಷಣವೇ ಮರುದಿನದ
ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಹೊರಟು ಬರಬೇಕು ಎಂದು ಪೋಲಿಸ್ ಕೇಂದ್ರ ಕಛೇರಿಯಿಂದ ಬಂದಿತ್ತು.
ಶಿವರಸನ್
ಕೇಸ್, ಶಿವರಾಂ ಜೀವನದಲ್ಲಿ ಒಂದು ದೊಡ್ಡ ಕೇಸ್ ಅಂತ ಹೇಳಬಹುದು. ಶಿವರಸನ್ ಬೆಂಗಳೂರಿನಲ್ಲಿ ಅಡಗಿರುವ
ಸುದ್ದಿ ಕೇಳಿದ ತಕ್ಷಣ, ಆಗಿನ ಡಿಸಿಪಿ ಆಗಿದ್ದ ಕೆಂಪಯ್ಯನವರ ಜೊತೆ ಕೆಲಸ ಶುರು ಹಚ್ಚಿಕೊಂಡು, ಮಾಹಿತಿ
ಸಂಗ್ರಹಿಸಲು ಶುರು ಮಾಡಿದ್ದರು.
ಶಿವರಸನ್
ಮತ್ತು ಸಂಗಡಿಗರು ಕೋಣನಕುಂಟೆಯಲ್ಲಿ ಅವಿತುಕೊಂಡಿರುವ ಸುದ್ದಿ ಸಿಕ್ಕ ತಕ್ಷಣ, ಬೆಳಗ್ಗೆ ಹಾಲು ಕೊಡುವವಳ
ಜೊತೆ ಕೋಣನಕುಂಟೆಯ ಮನೆ ತಲುಪಿದ ಮೊದಲ ತಂಡದಲ್ಲಿದ್ದವರೇ ಶಿವರಾಂ ಮತ್ತು ರಮೇಶ್ ಚಂದ್ರ. ಆಕೆ ಹಾಲು
ಕೊಟ್ಟ ತಕ್ಷಣ, ಶಿವರಸನ್ ತಂಡದವರು ಒಳಗೆ ಇದ್ದಾರೆ ಅಂತ ಗ್ಯಾರಂಟಿ ಮಾಡಿಕೊಂಡು, ಅವರು ಹೊರಗೆ ಬರದಂತೆ
ಬಾಗಿಲುಗಳನ್ನು ಹೊರಗಿನಿಂದ ಭದ್ರಪಡಿಸಿದ್ದರು. ಹಾಗೇನಾದ್ರೂ ಹೊರಗೆ ಬಂದರೆ, ಅವರನ್ನು ತಡೆಯೋಕೆ ಅಂತ
ಶಿವರಾಂ ಮತ್ತೆ ರಮೇಶ್ ಚಂದ್ರ ಅವರನ್ನು ಮನೆ ಪಕ್ಕದಲ್ಲೇ ಕಾವಲಿಗೆ ಬಿಟ್ಟು, ಉಳಿದ ಪೋಲಿಸರು ದೂರದಿಂದ ಸುತ್ತುವರೆದಿದ್ದರು.
ಇವರಿಬ್ಬರು
ಮನೆಯ ಗೋಡೆಗೆ ಬೆನ್ನು ಕೊಟ್ಟು ನಿಲ್ಲಬೇಕಿತ್ತು. ಒಳಗಿರುವವರು ಗುಂಡು ಹಾರಿಸಿದರೆ, ಮೊದಲು ತಗಲುತ್ತಿದ್ದದ್ದು
ಇವರಿಬ್ಬರಿಗೆ. ಕೇಂದ್ರದ ತಂಡ ಬರುವ ಹೊತ್ತಿಗೆ ಸಾಯಂಕಾಲವಾಗಿತ್ತು. ಅಲ್ಲಿಯವರೆಗೆ ಕಾವಲು ಕಾಯುತ್ತಿದ್ದ
ಇವರಿಬ್ಬರಿಗೆ ಮುಕ್ತಿ ಸಿಕ್ಕಿದ್ದೇ ಆಗ.
ಏನೋ
ಒಂದು.. ಈ ಕೇಸಿನಲ್ಲಾದರೂ ನನ್ನ ಕೆಲಸ ಗುರುತಿಸಿದ್ದಾರಲ್ಲಾ ಅಂತ ಅನ್ಕೊಂಡು, ಶಿವರಾಂ ರಜೆ ಹಾಕಿ,
ಬೆಂಗಳೂರಿಗೆ ಬಸ್ ಹತ್ತಿದರು. ಬೆಂಗಳೂರಿಗೆ ತಲುಪುವಾಗ ರಾತ್ರಿಯಾಗಿತ್ತು. ಬೆಳಗ್ಗೆ ಎದ್ದವರೇ ರಮೇಶ್
ಚಂದ್ರ ಅವರಿಗೆ ಫೋನ್ ಹಚ್ಚಿದರು.
`ನೀನ್ಯಾಕೋ
ಬರೋಕೆ ಹೋದೆ? ನಿಂಗೂ ಮೆಡಲ್ ಇಲ್ಲ. ನಂಗೂ ಇಲ್ಲ. ಮೊದಲು ಲಿಸ್ಟ್ ನಲ್ಲಿ ಇಬ್ಬರ ಹೆಸರೂ ಅನೌನ್ಸ್
ಆಗಿತ್ತು. ನೆನ್ನೆ ಸಾಯಂಕಾಲ ಏನೋ ಲಾಸ್ಟ್ ಮಿನಿಟ್ ಚೇಂಜಸ್ ಅಂತೆ, ನಮ್ಮಿಬ್ಬರನ್ನ ಬಿಟ್ಟು, ಬೇರೆಯವರಿಗೆ
ಕೊಟ್ಟಿದ್ದಾರೆ,’ ಅಂತ ತಣ್ಣಗೆ ಹೇಳಿದರು ರಮೇಶ್ ಚಂದ್ರ.
ಹೊಸ
ಲಿಸ್ಟ್ ನೋಡಿದಾಗ ಶಿವರಾಂ ದಂಗು ಬಡಿದು ಹೋಗಿದ್ದಾರೆ. ಒಂದಿಷ್ಟು ಜನ ಕೆಲಸ ಮಾಡಿರುವವರ ಜೊತೆ, ಕಾಫಿ,
ಟೀ ಸಪ್ಲೈ ಮಾಡಿದವರಿಗೆ ಕೂಡ ಮೆಡಲ್ ಕೊಡಲಾಗಿತ್ತು. ಇದಕ್ಕೆ ಹ್ಯಾಗೆ ರಿಯಾಕ್ಟ್ ಮಾಡ್ಬೇಕು ಅಂತ ಶಿವರಾಂಗೆ
ಗೊತ್ತಾಗ್ಲೇ ಇಲ್ಲ. ಇನ್ನೇನು ಬೆಂಗಳೂರಿಗೆ ಬಂದಾಗಿದೆ. ಒಂದ್ಸಲ ಕೆಂಪಯ್ಯನವರಿಗೆ ಮುಖ ತೋರಿಸಿ ಹೋದರಾಯ್ತು,
ಅನ್ಕೊಂಡು ಸೀದ ಪೋಲಿಸ್ ಕೇಂದ್ರ ಕಛೇರಿಗೆ ಬಂದಿದ್ದಾರೆ .
ಇವರನ್ನ
ನೋಡಿದ ತಕ್ಷಣ ಕೆಂಪಯ್ಯನವರು, `ಏನಯ್ಯ? ಸಾಯಂಕಾಲ ಮೆಡಲ್ ತಗೊಳ್ಳೋಕೆ ರೆಡಿನಾ?’ ಅಂತ ತಮಾಷೆ ಮಾಡಿದ್ದಾರೆ.
`ನಮಗೆಲ್ಲ
ಯಾರು ಕೊಡ್ತಾರೆ ಸರ್, ಮೆಡಲ್?’ ಅಂತ ಸಪ್ಪೆಯಾಗಿ ಹೇಳಿದ್ದಾರೆ ಶಿವರಾಂ.
`ಯಾಕೆ?
ಏನಾಯ್ತು? ನಾನೆ ನೋಡಿದ್ದೀನಿ ಲಿಸ್ಟ್ ನಲ್ಲಿ ನಿನ್ನ ಹೆಸರು,’ ಅಂದಿದ್ದಾರೆ.
ನೆಡದಿದ್ದನೆಲ್ಲ
ಶಿವರಾಂ ಹೇಳಿದ ತಕ್ಷಣ ಕೆಂಪಯ್ಯ ಸಿಟ್ಟಿಗೆದ್ದಿದ್ದಾರೆ. `ನಾನು ಆಪರೇಶನ್ ಹೆಡ್ ಮಾಡಿದ್ದು. ನಂಗೆ
ಗೊತ್ತು, ಯಾರ್ಯಾರು ಕೆಲಸ ಮಾಡಿದ್ದಾರೆ ಅಂತ. ನಿಂಗೆ ಮತ್ತೆ ರಮೇಶ್ ಚಂದ್ರನಿಗೆ ಮೆಡಲ್ ಕೊಡದೇ ಹೋದ್ರೆ,
ನಾನೂ ಮೆಡಲ್ ತಗೊಳ್ಳೋದಿಲ್ಲ,’ ಅಂತ ಕೂಗಾಡಿದ್ದಾರೆ.
ಮತ್ತೊಂದು
ಘಂಟೆಯೊಳಗೆ ಶಿವರಾಂ ಮತ್ತು ರಮೇಶ್ ಚಂದ್ರರ ಹೆಸರು ಮತ್ತೆ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಏನೋ ಒಂದು,
ಅನ್ಕೊಂಡು ಸಾಯಂಕಾಲ ಇಬ್ಬರೂ ಸಂಸಾರ ಸಹಿತವಾಗಿ, ಮೆಡಲ್ ಪ್ರಧಾನ ಸಮಾರಂಭಕ್ಕೆ ಹೋದರು.
ಎಲ್ಲರ
ಹೆಸರು ಕರೆದ ಮೇಲೆ, ಇನ್ಸ್ಪೆಕ್ಟರ್ ಗಳಲ್ಲಿ ಕೊನೆಯದಾಗಿ ರಮೇಶ್ ಚಂದ್ರ ಮತ್ತು ಶಿವರಾಂ ಹೆಸರು ಕರೆದಿದ್ದಾರೆ.
ಮೆಡಲ್ ಇಸ್ಕೊಂಡ ಶಿವರಾಂ, ಮೆಡಲ್ ನೋಡುತ್ತಾ, ಸ್ಟೇಜ್ ಇಳಿದಾಗ, ಅವರಿಗಿಂತ ಮೊದಲು ಮೆಡಲ್ ತಗೊಂಡ
ಇನ್ಸ್ ಪೆಕ್ಟರ್ ಸಿಕ್ಕಿದ್ದಾರೆ.
`ಕಂಗ್ರಾಚ್ಯುಲೇಶನ್’ ಅಂತ ಶಿವರಾಂ ಹೇಳಿ ಮುಗಿಸುವ ಮೊದಲೇ,
ಆ ಇನ್ಸ್ ಪೆಕ್ಟರ್, `ಶಿವರಾಂ, ಈ ಮೆಡಲ್ ನಂದು. ನಿಮ್ಮ ಹೆಸರನ್ನೆಲ್ಲಾ ಕೊನೆ ಗಳಿಗೇಲಿ ಸೇರ್ಸಿದ್ರಲ್ಲಪ್ಪಾ…
ಅದಕ್ಕೆ ನಂದನ್ನ ನಿಮಗೆ ಸ್ಟೇಜ್ ಮೇಲೆ ಕೊಡೋಕೆ ಅಂತ ಇಸ್ಕೊಂಡಿದ್ರು. ನಿಮಗೆ ಹೊಸ ಮೆಡಲ್ ಆರ್ಡರ್
ಮಾಡಿದ್ದಾರೆ. ಮುಂದಿನ ವಾರ ಮನೆಗೆ ಕಳುಹಿಸಿಕೊಡಬಹುದು,’ ಅಂದು ಮೆಡಲ್ ಕೈಯಿಂದ ಕಿತ್ತುಕೊಂಡು ಹೊರಟೇ
ಬಿಟ್ಟ.
ಮೊದಲೇ ತಲೆಕೆಟ್ಟು ಹೋಗಿದ್ದ ಶಿವರಾಂಗೆ ಏನು ಹೇಳ್ಬೇಕು ಅಂತ
ಗೊತ್ತಾಗ್ಲೇ ಇಲ್ಲ. ಹಾಗೇ ಕಾಲೆಳೆದುಕೊಂಡು, ತಮ್ಮ ಮನೆಯವರು ಕೂತ ಕಡೆ ಹೋಗಿ, ಕುರ್ಚಿ ಮೇಲೆ ಕುಕ್ಕರಿಸಿದರು.
ಅಲ್ಲೇ ಪಕ್ಕದ ಕುರ್ಚಿಯಲ್ಲಿ ಕೂತಿದ್ದ ಪುಟ್ಟ ಸ್ಪಂದನ, ಅಪ್ಪನ ತೊಡೆ ಮೇಲೆ ಹತ್ತಿ ಕೇಳಿದಳು: `ಅಪ್ಪ…
ನಿನ್ನ ಮೆಡಲ್ ನಂಗೆ ತೋರಿಸ್ತೀಯಾ?’ ಅಂತ.
ಕಥೆ ಮುಗಿಸಿದ ಶಿವರಾಂ ಹೇಳಿದ್ರು: `ವಿನಯ್, ಯಾಕಾದ್ರೂ ಬದ್ಕಿದ್ದೀನಿ
ಅನ್ನಿಸ್ಬಿಟ್ಟಿತ್ತು, ಅವತ್ತು. ಆರು ವರ್ಷದ ಮಗೂಗೆ ಈ ರಾಜಕೀಯನ ಹ್ಯಾಗೆ ಹೇಳೋದು. ಇಲ್ಲೇ ಸತ್ತು
ಹೋಗ್ಬಾರ್ದಾ? ಅಂತ ಅನ್ನಿಸಿ, ಕಣ್ಣಲ್ಲಿ ನೀರು ಬಂತು.’
ಭಾವೋದ್ವೇಗಕ್ಕೆ ಒಳಗಾಗಿ ಶಿವರಾಂ, ಕಣ್ಣಲ್ಲಿ ನೀರು ತುಂಬ್ಕೊಂಡು
ಕಥೆ ಹೇಳ್ತಿದ್ರೆ, ಎದುರು ಕೂತು ನಾನು ಬಿದ್ದು ಬಿದ್ದು ನಗ್ತಿದ್ದೆ. ಆ ಪುಟ್ಟ ಸ್ಪಂದನಳನ್ನು ನಾನು
ನೋಡಿದ್ದೇನೆ. ಈಗ ದೊಡ್ಡವಳಾಗಿ, ನಟ ವಿಜಯ್ ರಾಘವನನ್ನು ಮದುವೆಯಾಗಿದ್ದಾಳೆ. ಈ ದೊಡ್ಡ ಹುಡುಗಿಯನ್ನು
ನಾನು ನೋಡಿಲ್ಲ.
ಶಿವರಾಂ ನೆನಪಾದಾಗಲೆಲ್ಲ, ಪುಟ್ಟ ಸ್ಪಂದನಳ ಮುಖ ಒಮ್ಮೆ ಕಣ್ಣ
ಮುಂದೆ ಬರುತ್ತೆ.
ಮಾಕೋನಹಳ್ಳಿ ವಿನಯ್ ಮಾಧವ್
bahala chennaagide.ee prasangavannu shivaram prajavaani ya ankanadalli chikkadagi helidru...
ಪ್ರತ್ಯುತ್ತರಅಳಿಸಿnimma niroopane bahala khushi kodutte...
manikanth.