ಗುರುವಾರ, ಡಿಸೆಂಬರ್ 22, 2011

ಶನಿ


ಶನಿಪುತ್ರನಿಗೇ ಶನಿಕಾಟ…..

ಆಗ ನಾನಿನ್ನೂ ಪತ್ರಿಕಾರಂಗಕ್ಕೆ ಬಂದಿರಲಿಲ್ಲ. ಜೆ.ಪಿ. ನಗರದ ಸಾರಕ್ಕಿ ಗೇಟ್ ಹತ್ತಿರ ಗೆಳೆಯರ ಜೊತೆ ಮನೆ ಮಾಡಿಕೊಂಡಿದ್ದೆ. ಅವರೆಲ್ಲ ಕೆಲಸಕ್ಕೆ ಹೋಗುತ್ತಿದ್ದರು. ಆದರೆ ನಾನು ಮಾತ್ರ ಮನೆಯಲ್ಲಿರುತ್ತಿದ್ದೆ. ಸಾಯಂಕಾಲ, ಯಾರಾದರೂ ಬೇಗ ಮನೆಗೆ ಬಂದರೆ, ಬನಶಂಕರಿ ದೇವಸ್ಥಾನದ ಹತ್ತಿರ ಇದ್ದ ಶಾಸ್ತ್ರಿ ಬೇಕರಿಗೆ ವಾಕಿಂಗ್ ಹೋಗುತ್ತಿದ್ದೆವು.
ಅವನನ್ನು ಮೊದಲು ನೋಡಿದ್ದು ಬೇಕರಿಯ ಪಕ್ಕದಲ್ಲೇ… ಬೇಕರಿಗೆ ಹೊಂದಿಕೊಂಡಂತೆ, ಬೀಡಿ, ಸಿಗರೇಟಂಗಡಿ ತರಹದ ಮರದ ಗೂಡಿನಲ್ಲಿ, ಶನಿಮಹಾತ್ಮನ ಫೋಟೋ ಹಾಕಿದ ಗುಡಿಇತ್ತು. ಅದರೆದುರು, ಒಂದು ಕುರ್ಚಿಯ ಮೇಲೆ ಕಾವಿಬಟ್ಟೆ, ಮುಕ್ಕಾಲು ಅಡಿ ಎತ್ತರದ ಪೇಟ, ಚಿತ್ರವಿಚಿತ್ರವಾದ ಹಾರಗಳು ಮತ್ತು ನಾಮಗಳನ್ನು ಹಾಕಿಕೊಂಡು ಕೂತಿರುತ್ತಿದ್ದ. ಜೊತೆಯಲ್ಲಿ ಯಾವಾಗಲೂ ಒಬ್ಬ ಹುಡುಗ. ಆಚೀಚೆ ಹೋಗುವ ಹುಡುಗಿಯರ ಕಡೆ ಕಣ್ಣು ಹಾಯಿಸುತ್ತಾ, ಆ ಹುಡುಗನ ಜೊತೆ ಏನೋ ಮಾತಾಡುತ್ತಾ ಇರುತ್ತಿದ್ದ.
ಯಾವಾಗಲೂ ಮನಸ್ಸಿನಲ್ಲಿ ಬೈಕೋತ್ತಿದ್ದೆ. ಇವನ್ಯಾವನೋ, ಶನಿ ಹೆಸರಿನಲ್ಲಿ ದಂಧೆ ಮಾಡ್ತಾ ಇದ್ದಾನೆ ಅಂತ. ಪಕ್ಕದಲ್ಲಿ ದೊಡ್ಡ ಬೋರ್ಡ್ ಬೇರೆ. ಕನಕಪುರದ ಹತ್ತಿರ ಶನಿಮಹಾತ್ಮ ದೇವಸ್ಥಾನ ಕಟ್ಟುವುದರ ಬಗ್ಗೆ.
ಒಂದಿನ, ಕೆಂಪೇಗೌಡ ಕಾಲೇಜಿನಲ್ಲಿ ಓದುತ್ತಿದ್ದ ಚಿಕ್ಕಮಗಳೂರಿನ ಹಾರ್ಜಳ್ಳಿ ವಿನಯ್ ಬಂದಿದ್ದ. ಶಾಸ್ತ್ರಿ ಬೇಕರಿಯ ಹತ್ತಿರ ಹೋದಾಗ, `ಇವನೊಬ್ಬ ಶನಿ ಕಣೋ… ಹುಡಿಗೀರಿಗೆ ಲೈನ್ ಹೊಡಿತಾ ಕೂತಿರ್ತಾನೆ’ ಅಂದೆ.
ಆ ಕಡೆ ನೋಡಿದವನೇ, : `ಇವ್ನಾ! ಇಲ್ಲಿದ್ದಾನಾ… ಆಮೇಲೆ ಹೇಳ್ತೀನಿ ತಾಳು,’ ಅಂದ.
ವಾಪಾಸು ನೆಡೆದುಕೊಂಡು ಹೋಗುವಾಗ ವಿನಯ್ ಹೇಳಿದ: `ನಮ್ಮ ಹಾಸ್ಟೆಲ್ (ಬನಶಂಕರಿ ಎರಡನೇ ಹಂತದಲ್ಲಿ) ಇದೆಯಲ್ಲಾ, ಅಲ್ಲಿ ಒಂದು ಮಸಾಜ್ ಪಾರ್ಲರ್ ಇತ್ತು. ಇವನು ಅಲ್ಲಿ ವಾಚ್ ಮ್ಯಾನ್ ಆಗಿದ್ದ. ನಾಲ್ಕೈದು ವರ್ಷದ ಹಿಂದೆ ಪೋಲಿಸ್ ರೈಡ್ ಮಾಡಿದಾಗ, ಇವನನ್ನೂ ಅರೆಸ್ಟ್ ಮಾಡಿದ್ದರು. ಅಲ್ಲಿಗೆ ಇವನೇ `ಪಿಂಪ್’ ಅಂತೆ. ಜೈಲಿಂದ ವಾಪಾಸ್ ಬಂದ ಮೇಲೆ, ಒಂದೆರಡು ಸಲ ಹಾಸ್ಟೆಲ್ ಹತ್ತಿರ ಬಂದಿದ್ದ. ನಮ್ಮ ಹಾಸ್ಟೆಲ್ ನಲ್ಲಿ ಅವನ ಹಳೇ ಗಿರಾಕಿಗಳನ್ನು ಹುಡುಕಿಕೊಂಡು. ಆಮೇಲೆ ಇವತ್ತೇ ನೋಡಿದ್ದು.’
ವಿನಯ್, ತುಂಬಾ ಸಂಭಾವಿತ ಹುಡುಗ. ಯಾವತ್ತೂ, ಯಾರ ಮೇಲೂ ಕೆಟ್ಟದಾಗಿ ಮಾತಾಡಿದವನಲ್ಲ. ಹಾಗೇ, ಮೊದಲ ಸಲ ನೋಡಿದಾಗಲೇ ನನಗೆ ಆ ಶನಿಸ್ವಾಮಿಯ ಬಗ್ಗೆ ಕೆಟ್ಟ ಅಭಿಪ್ರಾಯ ಬಂದಿತ್ತು. ನಾವೂ ಹುಡುಗಿಯರನ್ನು ನೋಡುತ್ತಿದ್ದೆವು, ಆದರೆ ಅವನು ಹುಡುಗಿಯರ ಕಡೆ ಕಣ್ಣುಹಾಯಿಸುವ ರೀತಿ ನನಗೆ ಇಷ್ಟವಾಗಿರಲಿಲ್ಲ. ಆಸಾಮಿ ನನಗಿಂತ ಬಲವಾಗಿದ್ದ. ಏನೋ ಯಡವಟ್ಟು ಗಿರಾಕಿ ಅಂತ ಅನ್ನಿಸುತ್ತಿತ್ತು. ವಿನಯ್ ಹೇಳಿದ ಮೇಲೆ ಅನುಮಾನವೇ ಉಳಿಯಲಿಲ್ಲ.
ನಾನು ಇಂಡಿಯನ್ ಎಕ್ಷ್ ಪ್ರೆಸ್ ಗೆ ಸೇರಿದ ಮೇಲೆ, ಕ್ರೈಂ ರಿಪೋರ್ಟಿಂಗ್ ಸಲುವಾಗಿ, ಊರಿಡೀ ಸುತ್ತುತ್ತಿರುತ್ತಿದ್ದೆ. . ಈ ಶನಿ ಸ್ವಾಮಿ ಆಗಾಗ ದಾರಿಯಲ್ಲಿ ಸಿಗುತ್ತಿದ್ದ. `ಕೈನೆಟಿಕ್ ಸ್ಪಾರ್ಕ್’ ಅನ್ನೋ ಡಬ್ಬಾ ಮೊಪೆಡ್ ಮೇಲೆ ಓಡಾಡುತ್ತಿದ್ದ. ಕೆಲವುಸಲ, ಮೆಜೆಸ್ಟಿಕ್ ನಿಂದ ರಾಜಾಜಿನಗರಕ್ಕೆ ಹೋಗುವ ದಾರಿಯಲ್ಲಿದ್ದ, ಇನ್ನೊಂದು ಸಣ್ಣ ಶನಿಮಹಾತ್ಮ ಗೂಡಿನ ಹತ್ತಿರವೂ ಕೂತಿರುತ್ತಿದ್ದ. ಸ್ವಲ್ಪ ದಿನ ಬಿಟ್ಟು, ಅವನನ್ನು ಒಂದು ಹಳೇ ಫಿಯಟ್ ಕಾರಿನಲ್ಲಿ ಓಡಾಡುವುದು ನೋಡಿದೆ. ಇನ್ನೂ ಕೆಲವು ದಿನ ಬಿಟ್ಟು, ಒಂದು ಕಂಟೆಸ್ಸಾ ಕಾರನ್ನು ಓಡಿಸಿಕೊಂಡು ಹೋಗುವುದನ್ನೂ ನೋಡಿದೆ. ಅವನನ್ನು ನೋಡಿದಾಗಲೆಲ್ಲ, ಯಾಕೋ ಕಿರಿಕಿರಿಯಾಗುತ್ತಿತ್ತು.
ಒಂದಿನ ಪೋಲಿಸ್ ಕಮೀಷನರ್ ರೇವಣ್ಣಸಿದ್ದಯ್ಯರವರ ಕೊಠಡಿಗೆ ಹೋಗೋಣ ಅಂತ ಹೋದರೆ, ಹೊರಗಡೆ ಶನಿಸ್ವಾಮಿ ನಿಂತಿದ್ದ. ಏನಪ್ಪಾ ಇದೂ ಅನ್ಕೊಂಡು, ಪಕ್ಕದಲ್ಲೇ ಇದ್ದ ಸೆಂಟ್ರಿ ಸೋಮುನ ಕೇಳಿದೆ: `ಸಾಹೇಬ್ರು ಬ್ಯುಸಿನಾ?’ ಅಂತ.
ಸೋಮು ಉತ್ತರಿಸುವುದರೊಳಗೆ ಈ ಸ್ವಾಮಿ ಮಧ್ಯ ಬಾಯಿ ಹಾಕಿ: `ಬೇಗ ಹೇಳಪ್ಪಾ ಸಾಹೇಬರಿಗೇ… ಇವತ್ತು ನಿನ್ನ ಹಣೆಬರಹ ಚೆನ್ನಾಗಿದೆ, ಬುಧವಾರ ಬಂದಿದ್ದೀನಿ. ಶನಿವಾರ ಬಂದು, ನೀನು ಹೀಗೆ ಲೇಟ್ ಮಾಡಿದ್ದರೆ, ನನ್ನ ಮೇಲೆ ಶನಿ ಅವಾಹನೆಯಾಗಿ….’ ಅಂತ ಕೂಗಾಡೊಕೆ ಶುರು ಮಾಡ್ದ.
ನನಗೇನಾಯ್ತೋ ಏನೋ, `ಏನೋ ಮಾಡ್ತಿದ್ದೆ? ಅವನ ಕೆಲ್ಸ ಮಾಡೋಕೆ ಬಿಡು. ಕಮಿಷನರ್ ಫ್ರೀ ಇದ್ರೆ ನಿನ್ನ ನೋಡ್ತಾರೆ,’ ಅಂತ ಅವನ ಕಡೆ ನುಗ್ಗೇಬಿಟ್ಟೆ. ಪಕ್ಕದಲ್ಲಿದ್ದ ಕನ್ನಡ ಪ್ರಭದ ಅಶೋಕ್ ರಾಮ್ ನನ್ನ ಬೆನ್ನು ಹಿಡಿದು, `ಹೋಗಲಿ ಬಾ’ ಅಂದ. ಸರಿ, ಅಲ್ಲಿಂದ ಹೊರಟೆವು.
`ಅಲ್ವೋ, ಇದ್ದಕ್ಕಿದ್ದಂತೆ ನಿನಗೇನಾಯ್ತೋ ಅವನ ಮೇಲೆ ಎಗರಾಡೋಕೆ?’ ಅಂದ ಅಶೋಕ.
`ನಿಂಗೊತ್ತಿಲ್ಲ ಕಣೋ… ಇವನೊಬ್ಬ ಪಿಂಪ್. ಹ್ಯಾಗೆ ಕಾನ್ಸ್ಟೇಬಲ್ ಗಳ ಮೇಲೆ ರೋಫ್ ಹಾಕ್ತಾನೆ ನೋಡು,’ ಅಂತ ಹೇಳಿ, ಆ ಸ್ವಾಮಿಯ ಬಗ್ಗೆ ನನಗೆ ಗೊತ್ತಿದ್ದನೆಲ್ಲ ಹೇಳಿದೆ.
`ಸರಿ ಕಣೋ, ಅವನು ಪಿಂಪ್ ಆದರೆ ನಿನಗೇನೋ ಕಷ್ಟ? ಬೆಂಗಳೂರಲ್ಲಿ ಸಾವಿರಾರು ಜನ ಇದ್ದಾರೆ, ಎಲ್ಲಾರ ಮೇಲೆ ಎಗರಿ ಹೋಗ್ತೀಯಾ? ಅದು ನಿನ್ನ ಕೆಲಸ ಅಲ್ಲ. ಮತ್ತೆ, ಅವನಿಗೆ ಏನಾದರೂ ಮಾಡ್ಬೇಕಾದರೆ ನಿನ್ನ ಹತ್ತಿರ ಏನಾದರೂ ಎವಿಡೆನ್ಸ್ ಇರಬೇಕು. ರೋಡಲ್ಲಿ ಕೂಗಾಡದಲ್ಲ,’ ಅಂದ.
ನನಗೂ ಸರಿ ಅನ್ನಿಸ್ತು. ಯಾಕೋ ಸ್ವಲ್ಪ ಜಾಸ್ತಿನೇ ರಿಯಾಕ್ಟ ಮಾಡ್ದೆ ಅಂತಾನೂ ಅನ್ನಿಸ್ತು. ಮಾರನೇ ದಿನ ಬಂದು ಸೋಮುವನ್ನು ಆ ಶನಿಸ್ವಾಮಿ ಯಾಕೆ ಬಂದಿದ್ದ ಅಂತ ಕೇಳಿದೆ. `ಯಾವುದೋ ಸೈಟ್ ವಿಷಯ… ಪೋಲಿಸ್ ಇವನಿಗೆ ಸಪೋರ್ಟ್ ಮಾಡಿಲ್ಲ ಅಂತ ಸಾಹೇಬರಿಗೆ ಹೇಳೋಕೆ ಬಂದಿದ್ದ,’ ಅಂತ ಹೇಳಿದ. ನಾನು ಆ ವಿಷಯ ಅಶೋಕ್ ಗೆ ಹೇಳ್ದೆ.
ಎರಡನೇ ದಿನ ಅಶೋಕ್ ಬಂದವನೇ, `ನಿನ್ನ ಫ್ರೆಂಡ್ ವಿಷಯ ಗೊತ್ತಾಯ್ತು ಕಣೋ,’ ಅಂದ.
ಯಾರೋ ಅದೂ? ಅಂತ ಕೇಳಿದರೆ, `ಅವನೇ ಕಣೋ, ಶನಿಸ್ವಾಮಿ. ಅವನು ಜಯನಗರದ 8ನೇ ಬ್ಲಾಕ್ ನಲ್ಲಿ ಯಾರದೋ ಸೈಟ್ ಹೊಡೆಯೋಕೆ ನೋಡಿದ್ದಾನೆ. ಅವರು ಅವನ ಸೊಂಟ ಮುರಿಯೋ ಹಾಗೆ ಬಾರಿಸಿದ್ದಾರೆ. ಆ ಕಂಟೆಸ್ಸಾ ಕಾರ್ ವಿಷ್ಣುವರ್ಧನ್ ದಂತೆ. ಯಾವುದೋ ಪೂಜೆ ಮಾಡಿಸ್ತೀನಿ ಅಂತ ತಗೊಂಡು ಹೋದವನು, ವಾಪಾಸ್ ಕೊಟ್ಟಿಲ್ಲವಂತೆ,’ ಅಂತ ವಿಸ್ತಾರವಾದ ವರದಿ ಕೊಟ್ಟ.
`ಈಗೇನು ಮಾಡೋಣ?’ ಅಂತ ಕೇಳಿದೆ. `ಸಧ್ಯಕ್ಕೆ ಕ್ರೈಂ ರಿಪೋರ್ಟ್ ಮಾಡೋಣ. ಸಮಯ ಬಂದಾಗ ನೋಡೋಣ,’ ಅಂತ ತಣ್ಣಗೆ ಹೇಳಿದ ಅಶೋಕ.
ಅದಾಗಿ ಸ್ವಲ್ಪ ದಿನಗಳನಂತರ, ಪದ್ಮನಾಭನಗರದ ಹತ್ತಿರ ಇರುವ ಅಶೋಕನ ಮನೆ ಹತ್ತಿರ ಹೋಗಿದ್ದೆ. ಮೆಟ್ಟಲು ಹತ್ತುವಾಗ ಸುಮ್ಮನೆ ಅಲ್ಲಿ ನಿಂತ ಕಾರಿನ ಕಡೆ ನೋಡಿದೆ. ಅನುಮಾನವೇ ಇಲ್ಲ… ಆ ಶನಿಸ್ವಾಮಿ ಓಡಿಸುತ್ತಿದ್ದ ಫಿಯಟ್ ಕಾರ್. `ಅಲ್ವೋ ಅಶೋಕ, ಆ ಕಾರ್ ಯಾಕೆ ಅಲ್ಲಿ ನಿಂತಿದೆ?’ ಅಂತ ಕೇಳ್ದೆ.
`ಆಗಾಗ ನಿಂತಿರ್ತದೆ ಕಣೋ. ಆ ಮನೇಲಿ ಭಜನೆ ಎಲ್ಲಾ ಆಗ್ತಾ ಇರ್ತದೆ. ಯಾಕೆ? ಏನ್ಸಮಚಾರ?’ ಅಂತ ಕೇಳಿದ.
`ಅದು ಶನಿ ಸ್ವಾಮಿ ಕಾರ್ ಕಣೊ,’ ಅಂದೆ.
`ಓ… ಇದೇ ಕಾರಾ ಅವನ್ದು? ಕೆಲವು ಸಲ ಕಂಟೆಸ್ಸಾ ಕಾರ್ ಸಮೇತ ನಿಂತಿರ್ತದೆ. ಅದೇ ಇರ್ಬೇಕು ವಿಷ್ಣುವರ್ಧನ್ ದು. ಅದೇನಾ ಭಜನೆ? ನೋಡೋಣ ತಾಳು,’ ಅಂದ.
ಒಂದೇ ವಾರದಲ್ಲಿ ಅಶೋಕ ಹೇಳಿದ: `ಆ ಸ್ವಾಮಿಯ ಎರಡೂ ಕಾರ್ ಸೀಝ್ ಆಗಿ ಜಯನಗರ ಪೋಲಿಸ್ ಸ್ಟೇಷನ್ ಹತ್ತಿರ ಇದೆ.’
ಆಗಿದ್ದಿಷ್ಟು. ಅಶೋಕ ಆ ಕಾರ್ ಬರುವುದನ್ನು ಕಾಯ್ದು, ಅದರಿಂದ ಸ್ವಾಮಿ ಇಳಿಯುವುದನ್ನು ನೋಡಿ ಧೃಡಪಡಿಸಿಕೊಂಡಿದ್ದಾನೆ. ಆಮೇಲೆ, ಬೆಂಗಳೂರು ದಕ್ಷಿಣ ಡಿ.ಸಿ.ಪಿ ಆಗಿದ್ದ ಸತ್ಯನಾರಾಯಣ ರಾವ್ ಅವರಿಗೆ ಹೇಳಿದ್ದಾನೆ. ಅವರು ವಿಚಾರಿಸಿ ನೋಡಿದಾಗ, ಆ ಎರಡೂ ಕಾರುಗಳನ್ನು ಈ ಶನಿಸ್ವಾಮಿ ಪೂಜೆಯ ಹೆಸರಿನಲ್ಲಿ ತಂದು ವಾಪಾಸ್ ಕೊಟ್ಟಿರಲಿಲ್ಲ. ಆ ವಿಷಯದಲ್ಲಿ, ದೂರುಗಳೂ ದಾಖಲಾಗಿದ್ದವು. ಪೋಲಿಸರು, ಎರಡೂ ಕಾರುಗಳನ್ನು ಜಪ್ತಿ ಮಾಡಿದ್ದರು.
ಸತ್ಯನಾರಾಯಣ ರಾವ್ ಅವರಿಗೆ ಫೋನ್ ಮಾಡಿ, `ಸರ್, ಆ ಕಂಟೆಸ್ಸಾ ಕಾರ್ ವಿಷ್ಣುವರ್ಧನ್ ದಾ? ಅಂತ ಕೇಳಿದೆ. `ಅದೆಲ್ಲಾ ಯಾಕೆ ವಿನಯ್? ಕಂಪ್ಲೇಂಟ್ ಇತ್ತು, ಸೀಝ್ ಮಾಡಿದ್ದೇವೆ. ಅಷ್ಟು ಸಾಕು ಬಿಡಿ,’ ಅಂದರು.
ನನಗೇನೋ ಬಹಳ ಖುಶಿಯಾಗಿತ್ತು. ಕೆಟ್ಟ ಖುಶಿ ಅಂತಾರಲ್ಲ… ಹಾಗೆ. ಅಶೋಕ ಏನೋ ಈ ಸ್ವಾಮಿಗೆ ಒಂದು ದಾರಿ ತೋರಿಸಿದ್ದಾನೆ. ನಾನೂ ಏನಾದರೂ ಮಾಡಬೇಕು ಅಂತ ತಲೆಯಲ್ಲಿ ಹುಳ ಕೊರೆಯೋಕೆ ಶುರು ಆಯ್ತು.
ಆಗ ತಲೆಗೆ ಬಂದಿದ್ದೇ ಕಸ್ತೂರಿ ರಂಗನ್. ಆಗ ತಾನೇ, ಬೆಂಗಳೂರು ಕಾರ್ಪೋರೇಶನ್ ನಲ್ಲಿ ಬಿ.ಎಮ್.ಟಿ.ಎಫ್.ಗೆ ವರ್ಗವಾಗಿ ಬಂದಿದ್ದರು. ಸರಿ, ಅವರ ಹತ್ತಿರ ಹೋಗಿ, ಅದೂ ಇದೂ ಮಾತಾಡುತ್ತಾ, ಶನಿಸ್ವಾಮಿಯ ಕಥೆಗೆ ಒಗ್ಗರಣೆ ಸೇರಿಸಿ ಹೇಳಿದೆ.
ಸಮಾಧಾನವಾಗಿ ಕೇಳಿದ ಕಸ್ತೂರಿ ರಂಗನ್, `ಮತ್ತಿನ್ನೇನು ಮಾಡಿದ್ರು ಸ್ವಾಮಿಗಳು?’ ಅಂತ ನನ್ನನ್ನೇ ಕೇಳಿದರು. ನಿಜ ಹೇಳ್ಬೇಕು ಅಂದ್ರೆ, ನನ್ನ ಹತ್ರ ಈ ಕಥೆ ಬಿಟ್ಟರೆ ಏನೂ ಸರಕು ಇರಲಿಲ್ಲ. `ಅವನು ಕನಕಪುರದ ಹತ್ತಿರ ಒಂದು ದೇವಸ್ಥಾನ ಕಟ್ತಾನಂತೆ. 40 ಎಕರೆ ಜಾಗದಲ್ಲಿ. ಅದ್ಯಾರದ್ದೋ ಏನೋ?’ ಅಂದೆ.
`ಅದಿರಲಿ. ಆ ಶಾಸ್ತ್ರಿ ಬೇಕರಿ ಹಿಂದೆ ಒಂದು ಸಣ್ಣ ಹೊಂಡ ಇದೆಯಲ್ಲ, ಅದೂ ಮತ್ತೆ ರೋಡಿನ ಆಚೆಕಡೆ ಇರುವ ಎರಡೆಕರೆ ಜಾಗಕ್ಕೆ ನಕಲಿ ಪೇಪರ್ ತಯಾರು ಮಾಡಿಕೊಂಡಿದ್ದಾನೆ. ಎಲ್ಲಾ ಸೇರಿದರೆ ಜಾಗ ಕೋಟಿಗಟ್ಟಲೆ ಬೆಲೆ ಬಾಳುತ್ತೆ. ಜಾಗ ಕಾರ್ಪೋರೇಶನ್ ದು ಬೇರೆ. ಏನಾಗುತ್ತೋ ನೋಡೋಣ, ದೇವರಿಚ್ಚೆ,’ ಅಂತ ರಾಗವಾಗಿ ಹೇಳಿದರು. ಕಸ್ತೂರಿ ರಂಗನ್ ಅವರನ್ನು ಗೊತ್ತಿದ್ದ ನನಗೆ, ಇನ್ನು ಈ ಸ್ವಾಮಿಯ ಕಥೆ ಮುಗಿಯಿತು ಅಂತ ಗ್ಯಾರಂಟಿಯಾಯ್ತು.
ಅವತ್ತಿನಿಂದ, ದಿನಾ ಸಾಯಂಕಾಲ ಕಸ್ತೂರಿ ರಂಗನ್ ಅವರ ಆಫೀಸಿಗೆ ಫೋನ್ ಮಾಡಿ, ಯಾವುದಾದರೂ ಡೆಮಾಲಿಷನ್ ಇದೆಯಾ ಅಂತ ಕೇಳೋಕೆ ಶುರು ಮಾಡ್ದೆ. ಎರಡು ವಾರವಾಗಿರಬಹುದು, ಅಲ್ಲಿನ ಟೆಲಿಫೋನ್ ಆಪರೇಟರ್ ಗೆ ಏನೋ ಸಂಶಯ ಬಂತು. ಯಾವತ್ತೂ, ಯಾವ ವರದಿಗಾರರೂ ಇಲ್ಲಿಗೆ ಫೋನ್ ಮಾಡೋದಿಲ್ಲ. ಇವನ್ಯಾಕೆ ಹೀಗೆ ದಿನಾ ಮಾಡ್ತಾ ಇರ್ತಾನೆ ಅಂತ. ಒಂದಿನ ಕೇಳೇಬಿಟ್ಟ: `ಸರ್, ಏನಾದರೂ ವಿಷಯ ಇತ್ತಾ. ದಿನಾ ಡಿಮಾಲಿಷನ್ ಬಗ್ಗೆ ಕೇಳ್ತೀರಲ್ಲಾ,’ ಅಂತ.
ಸ್ವಲ್ಪ ಅನುಮಾನಿಸುತ್ತಲೇ: `ಅಲ್ಲಾ, ಸಾಹೇಬರು ಹೇಳ್ತಾ ಇದ್ದರು. ಆ ಬನಶಂಕರಿ ದೇವಸ್ಥಾನದ ಹತ್ತಿರ ಏನೋ ನಕಲಿ ದಾಖಲೆ ಸೃಷ್ಟಿಮಾಡಿದ್ದಾರೆ ಅಂತ…. ಅದಕ್ಕೇ ಕೇಳ್ತಿದ್ದೆ,’ ಅಂದೆ.
`ಆ ಶನಿಸ್ವಾಮಿದಾ… ಅಲ್ಲಾ ಸರ್, ಈ ಸಾಹೇಬ್ರು ಮಾಡೋ ಕೆಲ್ಸಕ್ಕೆ, ನಾವು ಜೀವ ಕೈಯಲ್ಲಿ ಇಟ್ಕೊಂಡು ತಿರುಗಬೇಕು ಅಷ್ಟೆ. ಆ ಸ್ವಾಮಿ ಏನೋ ನಕಲಿ ದಾಖಲೆ ತಯಾರು ಮಾಡಿದ್ನಂತೆ. ಅದಕ್ಕೆ ಶನಿ ದೇವಸ್ಥಾನನೇ ತಗೊಂಡು ಬಂದು ನಮ್ಮ ಆಫೀಸಿನಲ್ಲಿ ಇಡೋದಾ? ಮೊದಲೇ ದಿನಾ ಪೂಜೆ ನೆಡಿತ್ತಿದ್ದ ದೇವಸ್ಥಾನ. ಆಫೀಸಿನೊಳಗೆ ಬರುವಾಗ ಆ ಕಡೆ ತಿರುಗಿ ನೋಡೋಕೇ ಹೆದರಿದೆ ಆಗುತ್ತೆ,’ ಅಂದ.
`ಯಾಕ್ರೀ? ಏನಾಯ್ತು?’ ಅಂದೆ.
`ಹೋದ ವಾರ ಸಾಹೇಬ್ರು ನಮ್ಮನೆಲ್ಲ ಕರ್ಕೊಂಡು ಬನಶಂಕರಿಗೆ ಹೋದ್ರು. ಅಲ್ಲಿ ನಕಲಿ ದಾಖಲೆ ತಯಾರು ಮಾಡಿದ ಜಾಗನೆಲ್ಲ ನೋಡಿದ್ವಿ. ಅಲ್ಲೇನೂ ಕಟ್ಟಿರಲಿಲ್ಲ. ಎಲ್ಲಾನೂ ಕಾರ್ಪೋರೇಶನ್ ಜಾಗ ಅಂತ ಬೋರ್ಡ್ ಹಾಕಿ ವಾಪಾಸ್ ಬರುವಾಗ, ಅಲ್ಲೋಂದು ಶನಿದೇವರ ಗುಡಿ ಇತ್ತು. ಆ ಶನಿದೇವರ ಗುಡಿಯ ಪೂಜಾರಿನೇ ನಕಲಿ ದಾಖಲೆ ತಯಾರು ಮಾಡಿದ್ದಂತೆ. ಹಾಗಂತ, ಆ ದೇವಸ್ಥಾನವನ್ನೇ ಎತ್ತಿಸಿಕೊಂಡು ಬಂದು, ನಮ್ಮ ಆಫೀಸಿನ ಹಿಂದುಗಡೆ ಇಡೋದಾ? ಸಾಹೇಬ್ರಿಗೇನೋ ದೇವರ ಬಗ್ಗೆ ಹೆದರಿಕೆ ಇಲ್ಲ. ಜೊತೆಯಲ್ಲಿ, ಆ ದೇವಸ್ಥಾನದ ಗುಡಿಯನ್ನು ನಮ್ಮ ಕೈಲೇ ಎತ್ತಿಸಿದರು. ನಮ್ಮ ಕಥೆ ಹೇಳಿ ಈಗ, ಎಲ್ಲಾದರೂ ಹೋಗಿ ಹರಕೆ ಕಟ್ಕೋಬೇಕು ಅಷ್ಟೆ’ ಅಂತ ಗೋಳಾಡಿದ.
ನನಗಂತೂ ಕುಣಿದಾಡುವಷ್ಟು ಖುಶಿಯಾಯ್ತು. ಮೊದಲೇ ಕಸ್ತೂರಿ ರಂಗನ್ ಮೇಲೆ ನನಗೆ ಅಭಿಮಾನ.. ಅದು ಹತ್ತು ಪಾಲು ಹೆಚ್ಚಾಯ್ತು. `ಬಡ್ಡಿಮಗಂಗೆ ಹಾಗೇ ಆಗಬೇಕು’ ಅಂತ ಮನಸ್ಸಿನಲ್ಲೇ ಶಪಿಸಿದೆ.
ಆಗ, ಇಂಡಿನ್ ಎಕ್ಸಪ್ರೆಸ್ ಗೆ ನಚ್ಚಿ ಮುಖ್ಯ ವರದಿಗಾರರಾಗಿದ್ದರು. ಏನಾದರೂ ಸುದ್ದಿ ಬೆಳವಣಿಗೆ ಇದ್ದಾಗ, ಎದುರು ಸಿಕ್ಕಿದವರನ್ನು `ಹೋಗಿ ನೋಡ್ಕೊಂಡು ಬಾ’ ಅಂತಿದ್ರು. ಹಾಗಾಗಿ, ಒಂದೆರಡು ಬಾರಿ ಮುಖ್ಯಮಂತ್ರಿಯಾಗಿದ್ದ ಜೆ ಎಚ್ ಪಟೇಲರ ಹಿಂದೆ ನಾನು ತಿರುಗಬೇಕಾಗಿತ್ತು. `ಅವರೇನು ಹೇಳ್ತಾರೆ ಕೇಳ್ಕೊಂಡು ಬಂದು ಬರಿ. ನಾನು ಕಾಪಿ ಸರಿ ಮಾಡಿಕೊಡ್ತೀನಿ’ ಅಂತ ಹೇಳ್ತಿದ್ರು. ನಾನಂತೂ, ಬೇಕಾದ್ದು, ಬೇಡದಿದ್ದದ್ದು ಎಲ್ಲಾ ಬರೆದಿಟ್ಟು, ಅವರ ತಲೆ ಹಾಳು ಮಾಡ್ತಿದ್ದೆ.
ಅದರಿಂದ ನಚ್ಚಿಗೆಷ್ಟು ಪ್ರಯೋಜನವಾಯ್ತೋ ನಂಗೊತ್ತಿಲ್ಲ. ನನಗಂತೂ, ಪಟೇಲರ ಮಾಧ್ಯಮ ಸಲಹೆಗಾರರಾದ ಶಂಕರಲಿಂಗಪ್ಪನವರ ಪರಿಚಯವಾಯ್ತು. ತುಂಬಾ ಸಂಭಾವಿತರಾದ ಶಂಕರಲಿಂಗಪ್ಪನವರಿಗೆ, ನಮ್ಮ ಕುಟುಂಬದಲ್ಲಿ ಕೆಲವರ ಪರಿಚಯವಿದ್ದ ಕಾರಣ, ನನ್ನನ್ನು ವಿಶ್ವಾಸದಿಂದ ಮಾತನಾಡಿಸುತ್ತಿದ್ದರು. ನಾನು ಅವರ ಹತ್ತಿರ ಸ್ವಲ್ಪ ಹೆಚ್ಚು ಅನ್ನಿಸುವಷ್ಟು ಸಲಿಗೆ ಬೆಳೆಸಿಕೊಂಡಿದ್ದೆ. ಯಾವಾಗಲೂ ಸಮಾಧಾನದಿಂದಿರುತ್ತಿದ್ದ ಶಂಕರಲಿಂಗಪ್ಪ, ನನ್ನ ಹುಚ್ಚು ಮತ್ತು ಪೆದ್ದು ಮಾತುಗಳನ್ನು ನಗುತ್ತಲೇ ಸಹಿಸಿಕೊಂಡಿದ್ದರು.
ಒಂದಿನ, ವಿಧಾನಸೌಧದ ಹತ್ತಿರ ಶಂಕರಲಿಂಗಪ್ಪನವರು ಆ ಶನಿಸ್ವಾಮಿಯ ಹತ್ತಿರ ಮಾತನಾಡುತ್ತಿದ್ದದ್ದು ನೋಡಿದೆ. ಸ್ವಾಮಿ ಆಕಡೆ ಹೋದಕೂಡಲೇ, ಶಂಕರಲಿಂಗಪ್ಪನವರ ಹತ್ತಿರ ಹೋಗಿ, `ಏನು ಸಮಾಚಾರ? ಏನಂತೆ ಆ ಸ್ವಾಮಿದೂ?’ ಅಂತ ಕೇಳಿದೆ.
`ಏನೋ ಪಾಪ, ಪೋಲಿಸರು ತುಂಬಾ ತೊಂದರೆ ಕೊಡ್ತಾರಂತೆ. ಸಾಹೇಬರನ್ನು ನೋಡಬೇಕಂತೆ…ಮಾತಾಡ್ತಾ ಇದ್ದ್ರು’ ಅಂದರು.
`ರೀ, ಅವನು ಪಿಂಪ್ ಕಣ್ರೀ. ಎಲ್ಲಾದರೂ ನಿಮ್ಮ ಸಾಹೇಬರಿಗೆ ಪರಿಚಯ ಮಾಡಿಸ್ಬೇಕಲ್ಲಾ…. ನಿಮ್ಮನ್ನ ಸುಮ್ಮನೆ ಬಿಡಲ್ಲ,’ ಅಂದೆ.
`ಹೋಗ್ಲಿ ಬಿಡೋ.. ಅವ್ರೂ ಬದುಕಬೇಕು. ಏನೋ ಕಷ್ಟ ಹೇಳ್ಕೊಂಡಾಗ ಹ್ಯಾಗೆ ಸುಮ್ಮನಾಗೋದು? ಏನೋ ಕೈಲಾದ ಸಹಾಯ ಮಾಡ್ಬೇಕು,’ ಅಂದರು. ನಾನೇನೋ ಹೇಳಲು ಹೊರಟೆ. ಆದರೆ ಬೇರೆ ಯಾರೋ ಬಂದಿದ್ದರಿಂದ ಸುಮ್ಮನಾದೆ.
ಒಂದೆರೆಡು ವಾರದಲ್ಲಿ, ನಚ್ಚಿ ಮತ್ತೆ ನನ್ನನ್ನು ಪಟೇಲರ ಮನೆಗೆ ಓಡಿಸಿದರು. ಏನೋ ರಾಜಕೀಯ ಬೆಳವಣಿಗೆ, ಪಟೇಲರು ಏನು ಹೇಳ್ತಾರೆ ಅಂತ ಕೇಳ್ಕೊಂಡು ಬಾ ಅಂದರು. ಒಂದೆರೆಡು ಬೇರೆ ಪತ್ರಿಕೆಗಳ ವರದಿಗಾರರೂ ಇದ್ದರು. ಪಟೇಲರು ಯಾಕೋ ಮುಂದಿನ ಬಾಗಿಲ ಬದಲು, ಮನೆಯ ಬದಿಯಲ್ಲಿದ್ದ ಬಾಗಿಲಿಂದ ಹೊರಟರು. ನಾವೆಲ್ಲಾ ಪಕ್ಕದ ಬಾಗಿಲಿನ ಹತ್ತಿರ ಓಡುವುದರೊಳಗೆ, ಪಟೇಲರು ಕಾರಿನೊಳಗೆ ಕೂತಾಗಿತ್ತು. ನಾವು ಪ್ರಶ್ನೆ ಕೇಳಿದಾಗ ಪಟೇಲರು, ವಾಪಾಸ್ ಬಂದು ಮಾತಾಡ್ತೀನಿ ಅಂದರು.
 ನಾವು ತಿರುಗುವುದರೊಳಗೆ ಹಿಂದಿನಿಂದ ಶಂಕರಲಿಂಗಪ್ಪನವರ ಧ್ವನಿ ಬಂತು: `ಸರ್, ಸ್ವಾಮೀಜಿ ನಿಮ್ಮ ಹತ್ತಿರ ಮಾತಾಡಬೇಕಂತೆ.'
ತಿರುಗಿ ನೋಡಿದರೆ, ಶಂಕರಲಿಂಗಪ್ಪನವರ ಪಕ್ಕ ನಿಂತಿದ್ದ.. `ಶನಿಸ್ವಾಮಿ'.
`ಏನಂತೆ?' ಅಂದರು ಪಟೇಲರು.
`ನಾನು ಶನಿಪುತ್ರ... ಶನಿಮಹಾಸ್ವಾಮಿ' ಅಂದ ಸ್ವಾಮೀಜಿ.
ಪಟೇಲರಿಗೆ ಸರಿಯಾಗಿ ಕೇಳಲಿಲ್ಲ ಅಂತ ಕಾಣುತ್ತೆ. `ಏನಾಯ್ತು?’ ಅಂದರು.
`ನಾನು… ಶನಿಯ ಮಗ.. ಶನಿಪುತ್ರ ಮಹಾಸ್ವಾಮಿ,’ ಅಂತ ಎದೆ ಉಬ್ಬಿಸಿ ಹೇಳಿದ.
`ಸರಿ, ನಿಮ್ಮ ತಂದೆಯವರನ್ನು ಕೇಳಿದೆ ಅಂತ ಹೇಳಿ,’ ಅಂದ ಪಟೇಲರು, ಕಾರ್ ಡ್ರೈವರ್ ಬೆನ್ನು ಮುಟ್ಟಿದರು. ಕಾರು ಬುರ್ರನೆ ಮುಂದೆ ಹೋಯ್ತು. ಎಲ್ಲರೂ ಘೊಳ್ಳನೆ ನಕ್ಕರು. ನಾನೂ ಹೊಟ್ಟೆ ಹಿಡ್ಕೊಂಡು ಶನಿಸ್ವಾಮಿಯ ಕಡೆ ನೋಡಿದೆ. ಅವನು ಪೆಚ್ಚಾಗಿ ಶಂಕರಲಿಂಗಪ್ಪನವರ ಮುಖ ನೋಡುತ್ತಿದ್ದ. ಶಂಕರಲಿಂಗಪ್ಪನವರು ನಗು ತಡೆಯಲು ಎಲ್ಲೋ ನೋಡುತ್ತಿರುವಂತೆ ನಟಿಸುತ್ತಿದ್ದರು. ಮತ್ತೆ ಶನಿಸ್ವಾಮಿಯ ಕಡೆ ನೋಡುವಾಗ, ಅವನು ಏನೋ ಗೊಣಗುತ್ತ, ಮುಖ್ಯಮಂತ್ರಿಗಳ ಮನೆಯಿಂದ ಹೊರಗಡೆ ಹೋಗುತ್ತಿದ್ದ.
`ಹೇಳಿದ್ರೆ ಕೇಳ್ತೀರಾ… ಹಾಗೇ ಆಗಬೇಕು ನಿಮಗೆ,’ ಅಂತ ಶಂಕರಲಿಂಗಪ್ಪನವರಿಗೆ ಹೇಳ್ದೆ.
`ಸರಿ ಬಿಡೋ ಮಾರಾಯಾ… ನಿಂದೊಳ್ಳೆ ಕಥೆ ಆಯ್ತಲ್ಲಾ. ಸಾಹೇಬ್ರನ್ನ ಮೀಟ್ ಮಾಡ್ಸೋಕೆ ಸ್ವಾಮೀಜಿ ಹೇಳಿದ್ರು, ನಾನು ಮಾಡಿಸ್ದೆ ಅಷ್ಟೆ,’ ಅಂತ ನಗ್ತಾನೇ ಹೇಳಿದ್ರು. ಎಷ್ಟೋ ದಿನಗಳವರೆಗೆ, ಈ ವಿಷಯ ತೆಗೆದು ಶಂಕರಲಿಂಗಪ್ಪನವರಿಗೆ ತಮಾಷೆ ಮಾಡ್ತಿದ್ದೆ.
ಅದಾದ ಮೇಲೂ ಶನಿಸ್ವಾಮಿಯನ್ನು ಎಷ್ಟೋ ಸಲ ಕಮೀಷನರ್ ಆಫೀಸು, ವಿಧಾನಸೌಧದ ಹತ್ತಿರ ನೋಡಿದ್ದೇನೆ. ದೇಹವೆಲ್ಲ ಇಳಿದುಹೋಗಿತ್ತು. ಕೈಕಾಲು ಸಣ್ಣ, ಹೊಟ್ಟೆ ಡುಮ್ಮ ಅನ್ನುವ ಹಾಗೆ ಆಗಿಹೋಗಿದ್ದ. ನೆಡೆಯುವಾಗಲೂ ಅಷ್ಟೆ, ಕಾಲನ್ನು ದೂರವಾಗಿ ಅಡ್ಡಗಾಲು ಹಾಕುತ್ತಿದ್ದ. ಕಾಯಿಲೆಯವನ ತರಹ ಕಾಣ್ತಿದ್ದ. `ಯಾರೋ ಸೊಂಟ ಮುರಿದಿರಬೇಕು, ಇಲ್ಲವೇ, ಯಾವುದೋ ಕಾಯಿಲೆ ಹತ್ತಿಸಿಕೊಂಡಿದ್ದಾನೆ,’ ಅಂದ್ಕೊಂಡು ಸುಮ್ಮನಾದೆ. ಬರುಬರುತ್ತಾ, ಅವನು ಸಿಗುವುದೂ ಕಮ್ಮಿಯಾಯ್ತು.
ಆಗೆಲ್ಲಾ, ವಿಧಾನಸೌಧದೊಳಗೆ ಕಾವಿಧಾರಿಗಳು ಬರುವುದು ಕಡಿಮೆಯಿತ್ತು. ಈಗ ತುಂಬಾ ಜನ ಸಿಕ್ತಾರೆ. ಕಾವಿಬಟ್ಟೆ ಕಂಡಾಗಲೆಲ್ಲಾ ನನ್ನ ಕಣ್ಣು ಸುಮ್ಮನೆ ಹುಡುಕುತ್ತೆ: `ಆ ಉದ್ದವಾದ ಟೋಪಿ’

ಮಾಕೋನಹಳ್ಳಿ ವಿನಯ್ ಮಾಧವ್





2 ಕಾಮೆಂಟ್‌ಗಳು:

  1. ಪ್ರೀತಿಯ ವಿನಯ್್,
    ಸಖ್ಖತ್ತಾಗಿದೆ! ಅರುಣ್್ ಅವರಂತೆ ನನಗೂ ಈ ಬರೆಹದ ಕಟ್ಟಕಡೆಯ ಭಾಗ ಮಾತ್ರವೇ ಗೊತ್ತಿತ್ತು. ಶನಿಸ್ವಾಮಿಯ ಪೂವಾ೯ಪರ ಒಂದೇ ಉಸಿರಿನಲ್ಲಿ ಓದಿ ಮುಗಿಸಿದೆ. ಅಶೋಕ್್ರಾಮ್್ ಎಂತಹ ಕೂಲ್್ ಪ್ರೊಫೆಷನಲ್್ ಅನ್ನೋ ನನ್ನ ಇಂಪ್ರೆಷನ್್ ಇನ್ನಷ್ಟು ಗಟ್ಟಿ ಆಯ್ತು. ಬೆಂಗಳೂರಿನ ಕ್ರೈಂ ವರದಿಗಳ ಕತೆಯನ್ನು ಬಲು ವಿಶಿಷ್ಟವಾಗಿ ಹೇಳುವ ಕಲೆ ನಿಮಗೆ ಕರಗತ ಆಗಿದೆ. ಹೆಚ್ಚು ಬರೀರಿ ಮತ್ತು ಎಂದೋ ಒಂದಿನ ಪಬ್ಲಿಷ್್ ಮಾಡಿ.

    ಪ್ರತ್ಯುತ್ತರಅಳಿಸಿ