ಶುಕ್ರವಾರ, ಅಕ್ಟೋಬರ್ 5, 2012

ರೈ





ಡಾನ್ ಒಬ್ಬನ `ಚಿನ್ನ ಚಿನ್ನ ಆಸೈ.....'

ಲಿಫ್ಟ್ ಒಳಗೆ ಹೋದಾಗಲೇ ಗೊತ್ತಾಗಿದ್ದು... ಐದನೇ ಮಹಡಿಯ ಬಟನ್ ತೆಗೆದು ಹಾಕಿದ್ದಾರೆ ಅಂತ. ನಾಲ್ಕನೇ ಮಹಡಿಗೆ ಹೋಗಿ, ಅಲ್ಲಿಂದ ಒಂದು ಮಹಡಿ ಹತ್ತಬೇಕು ಅಂತ ಗೊತ್ತಾಯ್ತು. ಸರಿ... ನಾಲ್ಕನೇ ಮಹಡಿಗೆ ಬಟನ್ ಒತ್ತಿ ಸುಮ್ಮನೆ ನಿಂತೆ.
ನಾಲ್ಕನೇ ಮಹಡಿಯಲ್ಲಿ ಲಿಫ್ಟ್ ನಿಲ್ಲುತ್ತಲೇ ನನ್ನನ್ನು ಸ್ವಾಗತಿಸಿದ್ದು ಶಾಟ್ ಗನ್ ಗಳನ್ನು ಹಿಡಿದುಕೊಂಡಿದ್ದ ಮೂರು ಜನ. ಬೇಡದವರು ಬಂದರೆ ಲಿಫ್ಟ್ ನಿಂದ ಹೊರಗೆ ಹೆಣ ಮಾತ್ರ ಹೊರಗೆ ಬರಲು ಸಾಧ್ಯಅಂತ ಅನ್ಕೊಂಡೆ. ಅವರೇ ಲಿಫ್ಟ್ ನ ಗೇಟ್ ತೆಗೆದು, `ವಿನಯ್?’ ಅಂತ ಕೇಳಿದ್ರು. ಸುಮ್ಮನೆ ತಲೆ ಅಲ್ಲಾಡಿಸಿದೆ.
ಒಂದು ಸಲ ಮೇಲಿಂದ ಕೆಳಗೆ ತಡಕಾಡಿ, ಪಕ್ಕದಲ್ಲಿದ್ದ ಮೆಟ್ಟಿಲ ಕಡೆ ಕೈ ತೋರಿಸಿದರು. ಅಲ್ಲೊಂದು ಮೇಜಿನ ಮೇಲೆ ಇನ್ನಿಬ್ಬರು ಪಿಸ್ತೂಲ್ ಹಿಡಿದುಕೊಂಡು, ಒರಗಿ ನಿಂತಿದ್ದರು. ಐದನೇ ಮಹಡಿಯಲ್ಲಿ ಇವರನ್ನು ಬಿಟ್ಟರೆ ಇನ್ಯಾರೂ ಇರೋದಿಲ್ಲ ಅನ್ನೋದಂತೂ ಖಚಿತವಾಗಿ ಹೋಯ್ತು.
`ಬನ್ನಿ ಮಾರಾಯರೆ... ಮುಂಚೆ ಎಲ್ಲೋ ಮೀಟ್ ಮಾಡಿದ್ದೆವು ಅಲ್ಲವಾ?’ ಅಂತ ಮಂಗಳೂರು ಶೈಲಿಯಲ್ಲಿ ಪ್ರಶ್ನೆ ಬಂತು.
`ನಿಮ್ಮನ್ನು ಇಂಡಿಯಾಕ್ಕೆ ಕರೆದುಕೊಂಡು ಬಂದ ಶುರುವಿನಲ್ಲಿ ಜೈಲಲ್ಲಿ ಸಿಕ್ಕಿದ್ದೆ,’ ಅಂತ ನಗುತ್ತಾ ಮಂಗಳೂರು ಶೈಲಿಯಲ್ಲೇ ಹೇಳಿದೆ. ನಾನು ಜೈಲಿನಲ್ಲಿ ನೋಡಿದಾಗ `ಫಿಟ್ ಆಗಿದ್ದವರಿಗೆ, ಈಗ ಸ್ವಲ್ಪ ಹೊಟ್ಟೆ ಬಂದಿದೆ ಅಂದುಕೊಂಡೆ.
`ನಿಮ್ಮದು ಯಾವ ಊರು?’ ಅಂತ ಕೇಳಿದರು.
`ಮೂಡಿಗೆರೆ... ಆದರೆ ಕಾರ್ಕಾಳ ಮತ್ತು ಉಡುಪಿಯಲ್ಲಿ ಓದಿದ್ದೆ. ಪುತ್ತೂರಿನ ಹತ್ತಿರ ಚಾರ್ವಕ ಇದೆಯಲ್ಲ, ಅಲ್ಲಿ ಸಿ.ಪಿ.ಜಯರಾಂ ನನಗೆ ಭಾವನಾಗಬೇಕು,’ ಅಂದೆ.
`ಹೌದಾ ಮಾರಾಯರೆ... ಹಾಗಾದರೆ ನೀವು ನಮಗೆ ತುಂಬಾ ಹತ್ತಿರದವರಾದಿರಲ್ಲ?’ ಅಂತ ಉತ್ತರ ಬಂತು.
ಮುತ್ತಪ್ಪ ರೈ ಭೇಟಿಯಾಗಲು ನನಗೆ ದೊಡ್ಡ ಕಾರಣಗಳೇನೂ ಇರಲಿಲ್ಲ. ನನ್ನ ಕ್ರೈಂ ರಿಪೋರ್ಟಿಂಗ್ ಸಮಯದಲ್ಲೂ ಅಷ್ಟೆ, ಭೂಗತ ಪ್ರಪಂಚ ಅಂತ ಪಟ್ಟಿ ಕಟ್ಟಿಕೊಂಡವರನ್ನು ಭೇಟಿಯಾಗುವಾಗ ಯಾವುದಾದರೂ ಹೋಟೆಲ್ ಗಳಲ್ಲೇ ಭೇಟಿ ಮಾಡುತ್ತಿದ್ದೆನೇ ಹೊರತು, ಅವರಿರುವ ಜಾಗಕ್ಕೆ ಅಥವಾ ಅಡ್ಡೆಗಳಿಗೆ ಹೋಗದಂತೆ ಎಚ್ಚರ ವಹಿಸುತ್ತಿದ್ದೆ. ಆದರೆ, ಮುತ್ತಪ್ಪ ರೈ ದುಬೈನಿಂದ ವಾಪಾಸ್ ಬಂದು, ಕೇಸ್ ಗಳಿಂದ ಖುಲಾಸೆಯಾಗಿ, ಭೂಗತ ಪ್ರಪಂಚದ ಚಟುವಟಿಕೆಗಳಿಂದ ದೂರವಾಗಿದ್ದೇನೆ, ಅನ್ನೋ ಹೇಳಿಕೆಗಳು ಬಂದಿದ್ದವು.
ಅದರ ಮಧ್ಯ, ವಿದೇಶಿ ಪತ್ರಕರ್ತನೊಬ್ಬ ಬಂದು, ಬೆಂಗಳೂರಿನ `ಲ್ಯಾಂಡ್ ಮಾಫಿಯಾದ ದೊರೆ ಮುತ್ತಪ್ಪ ರೈ,’ ಅನ್ನೋ ಬರವಣಿಗೆಯನ್ನು ಇಂಟರ್ನೆಟ್ ನಲ್ಲಿ ಹಾಕಿದ್ದ. ಅದನ್ನು ನಮ್ಮ ಎಡಿಟರ್ ಬಲರಾಂಗೆ ತೋರಿಸಿದಾಗ, `ನೀನ್ಯಾಕೆ ಮುತ್ತಪ್ಪ ರೈ ಜೊತೆ ಮಾತಾಡಬಾರದು?’ ಅಂತ ಹೇಳಿದರು.
ಹಾಗೂ ಹೀಗೂ ರೈ ನಂಬರ್ ಸಂಪಾದಿಸಿ ಫೋನ್ ಹಚ್ಚಿ, ಸದಾಶಿವನಗರದ ಫ್ಲ್ಯಾಟ್ ನಲ್ಲಿ ಭೇಟಿ ನಿಶ್ಚಯವಾಗಿತ್ತು. ಆ ಸೆಕ್ಯುರಿಟಿ ದಾಟಿಕೊಂಡು ಹೋದ ನನಗೆ, ಮೊದಲು ವಾತಾವರಣ ತಿಳಿಗೊಳಿಸಬೇಕಿತ್ತು. ಬಾದರಾಯಣ ಸಂಬಂಧ ಮಾತಾಡುತ್ತಾ, ರೈ ಜೊತೆ ವಿಜಯ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಮಡಿಕೇರಿಯ ರಾಧಾಂಟಿ ಬಗ್ಗೆ ಹೇಳಿದೆ. `ರಾಧಾ ಮ್ಯಾಡಂ ನಿಮಗೆ ಗೊತ್ತಾ? ಅವರ ಮಗಳು ಸಂಗೀತ ದುಬೈನಲ್ಲಿದ್ದಾಳಲ್ಲ. ತುಂಬಾ ಒಳ್ಳೆಯ ಜನ,’ ಅಂತ  ಹಳೇ ನೆನಪುಗಳಿಗೆ ಹೋಗುತ್ತಿದ್ದಾಗಲೇ, ಎತ್ತರದ ವ್ಯಕ್ತಿಯೊಬ್ಬರು ಒಳಗೆ ಬಂದರು.
`ಇವರು ಗೊತ್ತಾ... ನಿಮ್ಮ ಊರಿನವರೇ... ಚಂದ್ರು ಅಂತ,’ ರೈ ಹೇಳುವಾಗಲೇ ನಾನು ಮಧ್ಯ ಬಾಯಿ ಹಾಕಿ, `ಬೈರಮುಡಿ ಚಂದ್ರು,’ ಅಂದೆ.
`ನೀವು ಗೊತ್ತಾಗಲಿಲ್ಲ,’ ಅಂತ ಚಂದ್ರು ಹೇಳಿದಾಗ, `ನಾನು ಮಾಕೋನಹಳ್ಳಿ ಡಾ. ಮಾಧವ ಗೌಡರ ಮಗ, ವಿನಯ್,’ ಅಂತ ಪರಿಚಯ ಮಾಡಿಕೊಂಡೆ.
`ಹೌದಾ? ಇಲ್ಲೇನು ಮಾಡ್ತಿದ್ದೀಯಾ? ಅಣ್ಣ... ಈ ಹುಡುಗ ನನಗೆ ಸಂಬಂಧಿಯಾಗಬೇಕು,’ ಅಂತ ಉದ್ವೇಗದಿಂದ ಚಂದ್ರು ಮಾತಾಡೋಕೆ ಶುರು ಮಾಡಿದ್ರು. ಚಂದ್ರು ಮತ್ತು ರೈ ಒಡನಾಟ ನನಗೆ ಬಹಳ ಸಮಯದಿಂದ ಗೊತ್ತಿತ್ತು. `ಯಾಕೋ ನಮ್ಮ ಈ ಭೇಟಿ ಟ್ರ್ಯಾಕ್ ತಪ್ತಾ ಇದೆ,’ ಅಂತ ಅನ್ನಿಸೋಕೆ ಶುರುವಾಯ್ತು.
ಅಷ್ಟರಲ್ಲೇ ಚಂದ್ರು ಜೇಬಿನಿಂದ ಒಂದು ಪ್ಯಾಕ್ ಎಲೆಕ್ಟ್ರಾನಿಕ್ ಸಿಗರೇಟ್ ತೆಗೆದು, `ಅಣ್ಣ ಸಿಕ್ತು ನೋಡಿ. ಇನ್ನು ಇದನ್ನು ಸೇದೋಕೆ ಶುರು ಮಾಡಿ,’ ಅಂತ ಕೊಟ್ಟವರೇ, ಅದನ್ನು ಉಪಯೋಗಿಸುವುದು ಹೇಗೆ ಅಂತ ಹೇಳಿಕೊಡೋಕೆ ಶುರುಮಾಡಿದ್ರು. ಅದನ್ನು ಒಂದು ದಂ ಎಳೆದ ರೈ, ಮುಂದೆ ಬೆಂಕಿಯಂತೆ ಕಾಣುವ ಕೆಂಪು ಬಣ್ಣವನ್ನು ಮುಟ್ಟಿ ನೋಡಿ, `ಇದು ಸುಡೋಲ್ಲ, ಅಲ್ಲವಾ?’ ಅಂತ ಕೇಳಿದ್ರು.
ಏನೋ ಹೊಳೆದಂತೆ, `ಒಂದು ನಿಮಿಷ... ಅಮ್ಮನಿಗೆ ತೋರಿಸಿ ಬರುತ್ತೇನೆ,’ ಅಂತ ಹೇಳಿ, ಎದುರುಗಡೆ ಇದ್ದ ಫ್ಲ್ಯಾಟ್ ಕಡೆಗೆ ಹೋದರು. ಎರಡೇ ನಿಮಿಷದಲ್ಲಿ ಹ್ಹಿ..ಹ್ಹಿ...ಹ್ಹಿ ಅಂತ ನಗುತ್ತಾ ವಾಪಾಸ್ ಬಂದು ನಮ್ಮ ಎದುರು ಬಂದು ಕುಳಿತರು. `ಅಮ್ಮನಿಗೆ ಒಂದು ಸೆಕೆಂಡ್ ಬಿ.ಪಿ ರೈಸ್ ಆದದ್ದಲ್ಲ ಮಾರಾಯರೆ. ನಾನು ಏನು ಮಾಡಿದೆ ಗೊತ್ತಾ? ಅಮ್ಮನ ಹತ್ತಿರ ಏನೋ ಮಾತಾಡುತ್ತಾ, ಒಂದು ದಂ ಎಳೆದು, ಸಿಗರೇಟನ್ನು ಕಿಸೆಯ ಒಳಗೆ ಹಾಕಿದೆ. ಅಮ್ಮ ಒಂದೇ ಸಲ, ಮುತ್ತಪ್ಪ, ಶರ್ಟ್ ಸುಡುತ್ತೆ ಅಂತ ಕೂಗಿದ್ದಲ್ಲ....ಅಂತ ಇನ್ನೂ ಜೋರಾಗಿ ನಗಲು ಆರಂಭಿಸಿದರು.
ಒಂದು ಕ್ಷಣ ರೈ ಮುಖವನ್ನೇ ನೋಡಿದೆ. ಕಾಲೇಜು ಹುಡುಗರ ಮುಖದಲ್ಲಿದ್ದ ತುಂಟತನವಿತ್ತು. ಅಲ್ಲಿಂದ ಮುಂದಿನ ಮಾತುಕತೆ ತುಂಬಾ ಸರಾಗವಾಗಿ ನೆಡೆದುಕೊಂಡು ಹೋಯಿತು. ಲ್ಯಾಂಡ್ ಮಾಫಿಯಾದ ವಿಷಯವನ್ನು ನಿರಾಕರಿಸಿದ ರೈ, ಅವರ ಕನಸುಗಳ ಬಗ್ಗೆ ಮಾತಾಡಲು ಶುರುಮಾಡಿದರು. ಉಡುಪಿಯ ಹತ್ತಿರವಿರು ಹತ್ತೊಂಬತ್ತು ಎಕರೆ ಜಾಗವನ್ನು ಪಕ್ಷಿಧಾಮದ ರೀತಿ ಬೆಳೆಸುವ ಬಗ್ಗೆ ಮತ್ತು ಎಚ್ ಡಿ ಕೋಟೆಯ ಹತ್ತಿರವಿರುವ ಜಾಗವನ್ನು ವನ್ಯಜೀವಿಗಳ ಸಂರಕ್ಷಣೆಗೆ ಮೀಸಲಿಡುವ ಬಗ್ಗೆ ಮಾತಾಡಿದಾಗ, ನನಗೆ ಆಶ್ಚರ್ಯವಾಯಿತು. ಇಷ್ಟೆಲ್ಲಾ ತುಂಟತನ ಮತ್ತು ಕನಸುಗಳನ್ನು ಹೊತ್ತವರು, ಇಪ್ಪತ್ನಾಲ್ಕು ಘಂಟೆ ಸೆಕ್ಯುರಿಟಿ ಮಧ್ಯದಲ್ಲಿ ಬದುಕಬೇಕಾದ ಪರಿಸ್ಥಿತಿ ನೋಡಿ, ಅಯ್ಯೋ ಅನಿಸಿತು.
ಅಲ್ಲಿನ ಇಂಟರ್ ವ್ಯೂ ಮುಗಿಸಿ ಆಫೀಸಿಗೆ ಬಂದವನೇ, ಬಲರಾಂ ಹತ್ತಿರ ನೆಡೆದ ವಿಷಯವನ್ನೆಲ್ಲ ಹೇಳಿದೆ. `ತುಂಬಾ ಇಂಟರೆಸ್ಟಿಂಗ್ ಆಗಿದೆ ವಿನಯ್. ಲ್ಯಾಂಡ್ ಮಾಫಿಯಾ ಬಿಟ್ಟು, ಅಲ್ಲಿ ನೆಡೆದ ವಿಷಯದ ಬಗ್ಗೆ ಒಂದು ಲೇಖನ ಬರಿ. ಅದು ಹೇಗೆ ಬರುತ್ತೆ ಅಂತ ನೋಡಿ, ಏನು ಮಾಡೋದು ಅಂತ ಯೋಚನೆ ಮಾಡೋಣ, ಅಂದರು.
ನನಗೇನೂ ಈ ಕಥೆ ಪ್ರಕಟವಾಗೋ ಗ್ಯಾರಂಟಿ ಇರಲಿಲ್ಲ. ಸರಿ, ಎಡಿಟರ್ ಹೇಳಿದ ಮೇಲೆ ನಂದೇನು ಅಂತ, ರೈ ಅಮ್ಮನನ್ನು ಹೆದರಿಸಿದರಿಂದ ಶುರು ಮಾಡಿಕೊಂಡು, ಒಂದು ಲೇಖನ ಬರೆದೆ. ಅದನ್ನು ಬಲರಾಂ ರಿಗೆ ಕಳುಹಿಸಿದ ಮೇಲೆ, ಅವರ ಕೋಣೆಗೆ ಹೋದೆ. ನನ್ನನ್ನು ನೋಡಿದವರೆ ನಗುತ್ತಾ, `ಬಾ, ಅದನ್ನೇ ಓದುತ್ತಿದ್ದೆ. ವಿನಯ್, ಇದು ತುಂಬಾ ಇಂಟರೆಸ್ಟಿಂಗ್ ಆಗಿದೆ. ಭಾನುವಾರಕ್ಕೆ ತಗೋಳ್ತೀನಿ. ಮುತ್ತಪ್ಪ ರೈ ಫೋಟೋ ಏನಾದ್ರೂ ತೆಗೆದಿದ್ದೀಯಾ? ಅಂತ ಕೇಳಿದರು.
`ಇಲ್ಲ ಸರ್.... ಹಳೇ ಫೋಟೋ ಯಾವುದಾದರೂ ಉಪಯೋಗಿಸಬೇಕಷ್ಟೆ, ಅಂದೆ.
`ಭಾನುವಾರಕ್ಕೆ ಇನ್ನೂ ಮೂರು ದಿನ ಇದೆ. ಅಷ್ಟರೊಳಗೆ ಹೊಸದೇ ತೆಗೆಸು. ಹಳೇ ಫೋಟೋ ಯಾಕೆ? ಅಂತ ಹೇಳಿದರು.
`ಸರಿ ಸರ್, ಅಂತ ಹೇಳಿ, ರೈಗೆ ಫೋನ್ ಹಚ್ಚಿದೆ.
`ನಾನು ಇನ್ನೂ ಮೂರು ದಿನ ಸಿಟಿಗೆ ಬರುವುದಿಲ್ಲ ವಿನಯ್... ಏನು ಮಾಡುವುದು? ಅಂತ ಕೇಳಿದರು.
`ಸರ್, ನಾನೇ ಬಿಡದಿಗೆ ಬರುತ್ತೇನೆ ಬಿಡಿ. ಆ ಮನೆ ನೋಡ್ಬೇಕು ಅಂತ ಮೈಸೂರಿಗೆ ಹೋಗುವಾಲೆಲ್ಲ ಅಂದುಕೊಳ್ಳುತ್ತಿದ್ದೆ. ನೋಡಿದ ಹಾಗೆ ಆಗುತ್ತೆ, ಅಂತ ಹೇಳಿದೆ.
`ಆಗಲಿ... ಹನ್ನೊಂದು ಘಂಟೆಗೆ ಬಂದುಬಿಡಿ. ಮನೆಯಲ್ಲೇ ಇರುತ್ತೇನೆ, ಅಂದರು.
ರೈ ಬಿಡದಿ ಮನೆ ಬಗ್ಗೆ ತುಂಬಾ ಕೇಳಿದ್ದೆ. ಎಲ್ಲಾ ರಿಪೋರ್ಟರ್ ಗಳ ಬಾಯಲ್ಲಿ ಮತ್ತು ಬರವಣಿಗೆಯಲ್ಲಿ. ಅದರ ಸೆಕ್ಯುರಿಟಿ ಬಗ್ಗೆಯಂತೂ, ದಾರಿಯುದ್ದಕ್ಕೂ ನೆಲದಲ್ಲಿ ಕ್ಯಾಮೆರಾ ಅಡಗಿಸಿ ಇಟ್ಟಿದ್ದಾರೆ ಅಂತ ಬೇರೆ ಹೇಳಿದ್ರು.
ಬಿಡದಿ ಮನೆಯ ಮೊದಲನೇ ಗೇಟು ದಾಟಿದಾಗ, ಅಂತಾ ಸೆಕ್ಯುರಿಟಿ ಇಲ್ಲ ಅನ್ನಿಸ್ತು.  ಗ್ಸನಾಡು ಅನ್ನೋ ಪಾಳು ಬಿದ್ದ ಆ ಹೌಸಿಂಗ್ ಲೇಔಟ್ ನಲ್ಲಿ, ಇಬ್ಬರು ಗನ್ ಮ್ಯಾನ್ ಗಳನ್ನು ಬಿಟ್ಟರೆ ಯಾರೂ ಇರಲಿಲ್ಲ. ಅಲ್ಲಿಂದ ಮುಂದೆ ಹೋದಾಗ ಎದುರಾಗಿದ್ದೇ ದೊಡ್ಡ ಗೋಡೆ ಮತ್ತು ಅದರ ಮಧ್ಯ ಒಂದು ಕಿಂಡಿಯಂತಹ ಬಾಗಿಲು. ಅಲ್ಲಿನ ಸೆಕ್ಯುರಿಟಿ ನೋಡಿದಾಗ ಅನ್ನಿಸಿತು: `ಇಲ್ಲೂ ಹಾಗೇನೇ, ಅಂತ.
ಒಳಗೆ ಹೋಗುತ್ತಲೇ ನಾನು ನೆಲದೊಳಗೆ ಇಟ್ಟ ಕ್ಯಾಮೆರಾಗಳಿಗಾಗಿ ಕಣ್ಣಾಡಿಸತೊಡಗಿದೆ. ಆ ಕಿಂಡಿಯಂತ ಬಾಗಿಲಿನಿಂದ ಮನೆಗೆ ಸಾಧಾರಣ ನೂರೈವತ್ತು ಅಡಿಗಳಾದರೂ ಇದೆ. ನೆಲದಲ್ಲೆಲ್ಲೂ ಕಾಣದಿದ್ದಾಗ, ಅಲ್ಲಿ ಬೆಳೆದಿದ್ದ ಹೂಗಿಡಗಳ ಮಧ್ಯ ಏನಾದರೂ ಇದೆಯಾ ಅಂತ ಕಣ್ಣಾಡಿಸುತ್ತಾ ಮುಂದೆ ಹೋದೆ. ನಾನು ನೆಡೆದುಕೊಂಡು ಬರುವುದನ್ನು ಬಾಗಿಲಲ್ಲಿ ನಿಂತಿದ್ದ ಮುತ್ತಪ್ಪ ರೈ ನೋಡುತ್ತಿದ್ದರು. ಹತ್ತಿರ ಹೋದ ತಕ್ಷಣ ಕೇಳಿದರು: `ಆ ಗಿಡಗಳ ಮಧ್ಯ ಏನು ಕ್ಯಾಮೆರಾ ಹುಡುಕುತ್ತಿದ್ದಿರಾ? ಅಂತ. ಪೆಚ್ಚಾಗಿ ನಕ್ಕೆ.
`ಅಲ್ಲ ಮಾರಾಯರೆ... ನನ್ನನ್ನು ಕೊಲ್ಲಲು ಕೋಟಿಗಟ್ಟಲೆ ಸುಪಾರಿ ಕೊಡಬೇಕು. ಒಂದು ಹೆಲಿಕಾಪ್ಟರ್ ತೆಗೆದುಕೊಂಡು ಬಂದು ಕಾರ್ಪೆಟ್ ಬಾಂಬಿಂಗ್ ಮಾಡಿದರೆ, ಈ ಕ್ಯಾಮೆರಾ ಇಟ್ಟುಕೊಂಡು ನಾನು ಏನು ಮಾಡಬೇಕು. ನೀವು ರಿಪೋರ್ಟರ್ ಗಳು ಅಷ್ಟೂ ಯೋಚನೆ ಮಾಡದೆ ಬರೀತೀರಲ್ಲಾ? ಅಂದರು. ನಾನೇನೂ ಮಾತಾಡಲಿಲ್ಲ.
ಅಷ್ಟರಲ್ಲಿ ಅವರೇ ತಿರುಗಿ, `ವಿನಯ್, ನೋಡಿ ಅಲ್ಲಿ ನನ್ನ ನವಿಲು ಮರಿಗಳು, ಅಂದರು. ತಿರುಗಿ ನೋಡಿದರೆ, ಅವರ ವಿಶಾಲವಾದ ಹೂತೋಟದಲ್ಲಿ ಐದು ಚಿಕ್ಕ ಚಿಕ್ಕ ನವಿಲು ಮರಿಗಳು, ಕೋಳಿಗಳ ಜೊತೆ ಮೇಯುತ್ತಿದ್ದವು.
`ಇವೆಲ್ಲಿ ಸಿಕ್ಕಿದವು? ಅಂತ ಕೇಳಿದೆ.
`ಇವುಗಳ ಮೊಟ್ಟೆಗಳನ್ನು ಯಾರೋ ತಂದು ಕೊಟ್ಟರು. ಯಾವ ಮೊಟ್ಟೆ ಅಂತ ಗೊತ್ತಾಗದೆ, ಕೋಳಿ ಮೊಟ್ಟೆಗಳ ಜೊತೆ ಮರಿ ಮಾಡಲು ಇಟ್ಟೆವು. ನೋಡಿದರೆ ನವಿಲು ಮರಿಗಳು. ಇರಲಿ ಅಲ್ಲವಾ? ಅಂತ ನಕ್ಕರು.
ಹಾಗೇ, ಅವರ ನಾಯಿಗಳನ್ನು ತೋರಿಸಲು ಆರಂಭಿಸಿದರು. ಎಲ್ಲಾ ನಾಯಿಗಳನ್ನು ನೋಡಿದ ಮೇಲೆ, ಅವರದೊಂದು ಹೊಸ ಪಗ್ ಮರಿಯನ್ನು ತೋರಿಸಿದರು. ಅವರು ಮುಟ್ಟಿದ ಕೂಡಲೇ, ಆ ನಾಯಿ ಮರಿ ಉಚ್ಚೆ ಹೊಯ್ದುಕೊಂಡಿತು. `ಇದೊಂದು ಹೆದರು ಪುಕ್ಕಲು ನಾಯಿ ಮಾರಾಯರೆ. ನನ್ನ ರೆಪ್ಯುಟೇಶನ್ ಗೆ, ಇದು ಇಲ್ಲಿ ಹೇಗೆ ಬಂದು ಸೇರಿತು ಅನ್ನೋದೇ ಆಶ್ಚರ್ಯ, ಅಂತ ನಗೋಕೆ ಶುರು ಮಾಡಿದ್ರು. ಮನೆ ಸುತ್ತಲೂ ಸುತ್ತಾಡಿದ ಮೇಲೆ ಊಟಕ್ಕೆ ಕುಳಿತೆವು. ಫಿಶ್ ಕರಿ ಮತ್ತು ನನಗೆ ಇಷ್ಟವಾದ ಚಿಕ್ಕನ್ ಸುಕ್ಕ ಮಾಡಿದ್ದರು. ನಾನು ಕುಸಲಕ್ಕಿ ಅನ್ನ ಊಟ ಮಾಡುತ್ತೇನೆ ಎಂದಾಗ, ರೈ ಅವರ ತಾಯಿಗೆ ಆಶ್ಚರ್ಯವಾಯಿತು. ನಾನು ಮತ್ತೆ ಮಂಗಳೂರು ಕಡೆಯ ನನ್ನ ಬಾದರಾಯಣ ಸಂಬಂಧಗಳನ್ನು ಹೇಳಬೇಕಾಯಿತು.
ಸಾಕಷ್ಟು ಫೋಟೋಗಳನ್ನು ತೆಗೆದಮೇಲೆ ನಾನು ಅಲ್ಲಿಂದ ಹೊರಟೆ. ನನ್ನನ್ನು ಬಿಳ್ಕೊಳ್ಳಲು ಮನೆಯ ಬಾಗಿಲವರೆಗೆ ಬಂದ ರೈ, `ವಿನಯ್ ಅವರೆ, ಒಂದು ವಿಷಯ.... ನಿಮಗೆ ಈ ಕಾಡು ಪ್ರಾಣಿಗಳ ಸಂರಕ್ಷಣೆ ಬಗ್ಗೆ ಬಹಳ ವಿಷಯ ಗೊತ್ತಿದೆ. ಈಗ ನಾನು ನನ್ನ ಉಡುಪಿ ಮತ್ತು ಎಚ್ ಡಿ ಕೋಟೆಯ ಜಾಗದಲ್ಲಿ ಏನಾದರೂ ಮಾಡಬೇಕು ಅಂತ ಇದ್ದೇನೆ. ಆದರೆ, ಅಲ್ಲಿರುವ ಪ್ರಾಣಿಗಳಿಗೆ ಏನೂ ತೊಂದರೆ ಆಗಬಾರದು ಮತ್ತು ಅಲ್ಲಿ ಸುತ್ತಮುತ್ತ ಇರುವ ಪ್ರಾಣಿಗಳಿಗೆ ಅದರಿಂದ ಸಹಾಯವಾಗಬೇಕು. ನೀವೊಂದು ಸಲ ನನ್ನ ಜೊತೆ ಅವೆರೆಡು ಜಾಗಗಳಿಗೆ ಬಂದರೆ, ನಾನು ತೋರಿಸುತ್ತೇನೆ. ನೀವು ನನಗೆ ಸಲಹೆಗಳನ್ನು ಕೊಡಬಹುದು, ಅಂದರು.
ನಾನು ನಗುತ್ತಾ `ಆಗಲಿ... ಸಿಕ್ಕೋಣ ಮತ್ತೆ, ಅಂದೆ.
ಆ ಕಿಂಡಿಯಂತ ಬಾಗಿಲನ್ನು ದಾಟುವಾಗ ಮನೆ ಕಡೆಗೆ ತಿರುಗಿ ನೋಡಿದೆ. ರೈ ಬಾಗಿಲಲ್ಲಿ ಇರಲಿಲ್ಲ. ಬಾಗಿಲು ದಾಟಿ ಕಾರಿಗೆ ಹತ್ತುವಾಗ ಯಾಕೋ ರೋಜಾ ಸಿನೆಮಾದ ಹಾಡು ನೆನಪಾಯಿತು: `ಚಿನ್ನ ಚಿನ್ನ ಆಸೈ.......



ಮಾಕೋನಹಳ್ಳಿ ವಿನಯ್ ಮಾದವ