ಕೊಂಡಿ ಕಳಚುವ ಮುನ್ನ ಮಾತನಾಡಿದ ವಿಶ್ವಣ್ಣನ ಲೇಖನಿ…..

`ನೋಡೋ,
ವಿಶ್ವನಾಥ್ ಅವನ ಮಗಳ ಮದುವೆಯನ್ನ ಸಾಮೂಹಿಕ ವಿವಾಹದಲ್ಲಿ ಮಾಡ್ತಾನಂತೆ. ಒಂದೈವತ್ತು ಮದುವೆ ಒಟ್ಟಿಗೆ
ಆಗ್ಬಹುದಂತೆ.’
ಫೋನ್
ಕೆಳಗಿಟ್ಟ ತಕ್ಷಣ ಕೇಳಿದೆ… `ನಚ್ಚಿ, ಯಾರದು ವಿಶ್ವನಾಥ್?’
`ಮುಂಚೆ
ಫಾರೆಸ್ಟ್ ಮಿನಿಸ್ಟರ್ ಆಗಿರ್ಲಿಲ್ವಾ? ಕೆ ಆರ್ ನಗರದವನು…. ನಿಂಗೆ ಪಟೇಲ, ದೇವೇಗೌಡ ಬಿಟ್ರೆ ಯಾರು
ಗೊತ್ತು? ಇವ್ನೂ ಸ್ವಲ್ಪ ಪಟೇಲನ ಥರ ಕಣೋ. ಒಳ್ಳೇ ಜೋಕ್ ಮಾಡ್ತಾನೆ, ಆದ್ರೆ, ಸ್ವಲ್ಪ raw ಅಷ್ಟೆ.
ನಿಂಗಿಷ್ಟ ಆಗ್ತಾನೆ ನೋಡು,’ ಅಂತ ಅಂದ್ರು.
ಫಾರೆಸ್ಟ್
ಮಿನಿಸ್ಟರ್ ಆಗಿದ್ದ ವಿಶ್ವನಾಥ್ ಬಗ್ಗೆ ನನ್ನ ವನ್ಯಜೀವಿ ಗುರು ಚಿನ್ನಪ್ಪನವರ ಬಾಯಲ್ಲಿ ಕೇಳಿದ್ದೆ.
1994 ರ ಚುನಾವಣೆಯಲ್ಲಿ ಸೋತಿದ್ದರು. ನನಗೆ ಜೆ ಎಚ್ ಪಟೇಲರು ಇಷ್ಟವಾಗಿದ್ದವರು ಅನ್ನೋದರಲ್ಲಿ ಇವತ್ತಿಗೂ
ಸಂಶಯವಿಲ್ಲ. ವಿಶ್ವನಾಥ್ ಮತ್ತು ಜೆ ಎಚ್ ಪಟೇಲರ ಹೋಲಿಕೆ ಬಗ್ಗೆ ನನಗೆ ಸಂಶಯವಿತ್ತು. ಆದರೂ, ನಚ್ಚಿ
ಸಾಧಾರಣವಾಗಿ ಉತ್ಪ್ರೇಕ್ಷೆ ಮಾಡುವುದಿಲ್ಲವಾದ್ದರಿಂದ, ನಾನು ಸುಮ್ಮನಾದೆ. ವಿಶ್ವನಾಥ್ ರವರ ಮಗಳ ಮದುವೆ
125 ಸಾಮೂಹಿಕ ವಿವಾಹದಲ್ಲಿ ನೆಡೆದದ್ದು ಪತ್ರಿಕೆಗಳಲ್ಲೂ ಬಂದಿತ್ತು.
1999
ರ ಚುನಾವಣೆಯಲ್ಲಿ ವಿಶ್ವನಾಥ್ ಗೆದ್ದಿದ್ದಲ್ಲದೆ, ಮಂತ್ರಿಯೂ ಆದರು. ಪಟೇಲರಿಗಿಂತ ಸುಲಭವಾಗಿ ನನಗೆ
ಸಿಗುತ್ತಿದ್ದರು. ಕಾರಣವೇನೆಂದರೆ, ಆಗಾಗ ವಿಧಾನಸೌಧಕ್ಕೂ ನನ್ನನ್ನು ನಚ್ಚಿ ಕಳುಹಿಸುತ್ತಿದ್ದರು.
ಪಟೇಲರಂತೆ ಇವರಿಗೂ ಹಾಸ್ಯಪ್ರಜ್ಞೆ ಚೆನ್ನಾಗಿದೆ ಅಂತ ನನಗೆ ಅನ್ನಿಸಿತ್ತು. ಆದರೂ, ಪಟೇಲರಿಗೂ, ಇವರಿಗೂ
ಏನೋ ಒಂದು ವ್ಯತ್ಯಾಸ ಎದ್ದು ಕಾಣುತ್ತಿತ್ತು. ಅದೇನೆಂದು ಅರ್ಥವಾಗಲು ಬಹಳ ವರ್ಷಗಳೇ ಬೇಕಾದವು.
1994
ರಿಂದ 2004 ರವರೆಗೆ ಇದ್ದ ಜನತಾ ಮತ್ತು ಕಾಂಗ್ರೆಸ್ ಸರ್ಕಾರಗಳಲ್ಲಿ ನಾನು ಗಮನಿಸಿದ್ದು ಎಂದರೆ, ನಮ್ಮ
ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನಲ್ಲಿದ್ದ ಪ್ರತಿನಿಧಿಗಳು. ಅದರಲ್ಲಿ ಬಹಳಷ್ಟು ಉತ್ತಮ ವಾಗ್ಮಿಗಳು
ಮತ್ತು ಜ್ಞಾನಿಗಳು ಇದ್ದರು ಅಂತ ಹೇಳಬಹುದು. ಜೆ ಎಚ್ ಪಟೇಲ್, ಎಂ ಪಿ ಪ್ರಕಾಶ್, ಎಸ್ ಎಂ ಕೃಷ್ಣ,
ಎಂ ವೈ ಘೋರ್ಪಡೆ, ಮಲ್ಲಿಕಾರ್ಜುನ ಖರ್ಗೆ, ಭೈರೇಗೌಡ, ರಮೇಶ್ ಕುಮಾರ್, ನಂಜೇಗೌಡ, ಕೆ ಎಚ್ ರಂಗನಾಥ್,
ಡಿ ಬಿ ಚಂದ್ರೇಗೌಡ, ಸಿದ್ದರಾಮಯ್ಯ… ಹೀಗೇ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಅವರ ಸಾಲಿನಲ್ಲಿ ವಿಶ್ವನಾಥ್
ಅನಾಮತ್ತಾಗಿ ಸೇರುತ್ತಾರೆ.
ಪಟೇಲರಿಗಿದ್ದ
ತಾಳ್ಮೆ ವಿಶ್ವನಾಥ್ ರವರಿಗೆ ಇಲ್ಲ. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ, ಪಟೇಲ್ ಒಂದು ಜ್ಞಾನಸಾಗರ
ಅಂತಾನೇ ಹೇಳಬಹುದು. ಎಸ್ ಎಂ ಕೃಷ್ಣ ಬಿಟ್ಟರೆ, ಈ ವಿಷಯದಲ್ಲಿ ಅವರಿಗೆ ಯಾರನ್ನೂ ಹೋಲಿಸಲು ಕಷ್ಟ.
ಆದರೂ, ಎಸ್ ಎಂ ಕೃಷ್ಣರಿಗಿಂತ ಪಟೇಲರು ಭಿನ್ನವೇ. ಪಟೇಲ್ ಸಮಾಜವಾದಿ ಮತ್ತು ಶ್ರೀಮಂತ ಹಿನ್ನೆಲೆಯಿಂದ
ಬಂದವರು. ಆದರೆ, ಜೀವನದ ಅನುಭವ ಮತ್ತು ಅವರ ಅಗಾಧ ಜ್ಞಾನದಿಂದ, ಅವರು ಯಾವುದೇ ಸೈದ್ದಾಂತಿಕ ನೆಲೆಗಟ್ಟನ್ನು
ಸಾರ್ವತ್ರಿಕ ಸತ್ಯ ಅಂತ ಒಪ್ಪಿಕೊಳ್ಳಲಿಲ್ಲ.

ಪರಿಚಯವಾದ
ಮೇಲೆ ನಿಧಾನವಾಗಿ ವಿಶ್ವನಾಥರ ಜೊತೆ ಸಲುಗೆಯಿಂದ ಇರಲು ಆರಂಭಿಸಿದೆ. ಸರ್ ಅನ್ನೋ ಪದ ಹೋಗಿ, ರೀ ವಿಶ್ವಣ್ಣ
ಅಂತಾನೂ ಕರೆಯೋಕೆ ಶುರು ಮಾಡಿದೆ. ಅವರ ಹಾಸ್ಯಪ್ರಜ್ಞೆಯಂತೂ ಬಹಳ ಇಷ್ಟವಾಗುತ್ತಿತ್ತು. ವಿಷಯಾಧಾರಿತ
ಚರ್ಚೆಗಳಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಿದ್ದರು. ಒಂದು ಸಲ ವಿಧಾನ ಪರಿಷತ್ತಿನಲ್ಲಿ ಉಮಾಶ್ರೀಯವರು,
`ವಿಶ್ವನಾಥರು ಒಳ್ಳೆ ಜೋಕರ್,’ ಅಂದುಬಿಟ್ಟರು. ಒಂದು ಕ್ಷಣ ಸಿಟ್ಟಾದರೂ, ಸುಧಾರಿಸಿಕೊಂಡ ವಿಶ್ವನಾಥರು,
ಜೋಕರ್ ಅನ್ನೋದರ ಬದಲು `ವಿಕಟಕವಿ’ ಅಂತ ಹೇಳಬಹುದು ಅಂದರು…. ಆ ಪದವನ್ನು ಯಾವಕಡೆಯಿಂದ ಓದಿದರೂ, ವಿಕಟಕವಿಯೇ
ಆಗುತ್ತದೆ ಅಂತ ನನಗೆ ಅನ್ನಿಸಿತು.
2004
ಮತ್ತು 2008ರ ಚುನಾವಣೆಯಲ್ಲಿ ಸೋತನಂತರ, ವಿಶ್ವನಾಥ್ ಇನ್ನು ರಾಜಕೀಯ ನಿವೃತ್ತಿ ಅಂದುಕೊಂಡಿದ್ದೆ.
ಅಷ್ಟರಲ್ಲಿ ಅವರು ಲೋಕಸಭೆಯ ಮೆಟ್ಟಿಲು ಹತ್ತಿದ್ದರು. ಮತ್ತೆ 2014ರಲ್ಲಿ ಸೋತರು. ಇನ್ನು ಮುಗಿದೇ
ಹೋಯಿತು ಅನ್ನುವಷ್ಟರಲ್ಲಿ, ಕಾಂಗ್ರೆಸ್ ಬಿಟ್ಟು ಯಾರೂ ಊಹಿಸದಂತೆ ಜನತಾ ದಳಕ್ಕೆ ಸೇರಿ, ಮತ್ತೆ ಹುಣಸೂರಿನಿಂದ
ಗೆದ್ದು, ಪಕ್ಷದ ಅಧ್ಯಕ್ಷರೂ ಆದರು.
ಇದರ
ಹಿಂದಿನ ರಾಜಕೀಯ ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ಯಾಕಂದರೆ, ನಾನೀಗ ಬರೆಯುತ್ತಿರುವುದು ವಿಶ್ವನಾಥರ
ಪುಸ್ತಕಗಳ ಬಗ್ಗೆ. 2004ರ ನಂತರ ವಿಧಾನಸಭೆಗೆ ಬರುವ
ಸದಸ್ಯರ ಗುಣಮಟ್ಟ ಕಡಿಮೆಯಾಗಿದೆ ಅನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ವಿಷಯಾಧಾರಿತ ಚರ್ಚೆಗಳಿಗಿಂತ,
ಗಲಾಟೆಗಳೇ ಹೆಚ್ಚಾದಂತ ಅನ್ನಿಸುತ್ತಿದೆ. ಹೊಸ ವಿಷಯಗಳು ತಿಳಿದುಕೊಳ್ಳುವುದು ಮರೀಚಿಕೆಯೇ ಸರಿ. ಕೆಲವೊಂದು
ಕೊರೆತಗಳನ್ನೂ ಸೇರಿದಂತೆ, ಅಧ್ಬುತವಾದ ಚರ್ಚೆ, ಭಾಷಣಗಳನ್ನು ಕೇಳಿರುವ ನಮಗೆ, ಯಾಕೋ ವಿಧಾನಸಭಾ ಕಲಾಪಗಳು
ಮೀನು ಮಾರುಕಟ್ಟೆಯ ಗಲಾಟೆಯಂತೆ ಅನ್ನಿಸುತ್ತದೆ ಅಂದರೂ ತಪ್ಪಾಗಲಾರದು.
ಮೊನ್ನೆ
ನನ್ನ ಗಮನ ಸೆಳೆದದ್ದು ವಿಶ್ವನಾಥರ ಪುಸ್ತಕ -- `ಅಥೆನ್ಸ್ ನ ರಾಜ್ಯಾಡಳಿತ’ ಬಿಡುಗಡೆ ಸಮಾರಂಭ. ಮೊದಲಿಂದಲೂ
ನನಗೆ ಗ್ರೀಕ್ ಕಥೆಗಳು ನಮ್ಮ ಪುರಾಣಗಳಷ್ಟೇ ಇಷ್ಟ. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಗ್ರೀಕ್ ಮತ್ತು
ಭಾರತದ ಪುರಾಣಗಳ ಮೂಲ ಒಂದೇ. ಗ್ರೀಕ್ ರಾಜ್ಯಾಡಳಿತದ ಬಗ್ಗೆ ವಿಶ್ವನಾಥ್ ಬರೆದಿದ್ದಾರೆ ಅಂದಾಗ ಕುತೂಹಲ
ತಡೆಯಲಾಗಲಿಲ್ಲ. ಒಂದು ಪ್ರತಿಯನ್ನು ಪಡೆದು ಓದಿದೆ.


ಅಥೆನ್ಸ್
ನ ರಾಜ್ಯಭಾರದ ಮುಂಚೆ, ವಿಶ್ವನಾಥರು `ದಿ ಟಾಕಿಂಗ್ ಶಾಪ್’ ಅನ್ನೋ ಪುಸ್ತಕವನ್ನು ಬರೆದಿದ್ದರು. ಆ
ಪುಸ್ತಕ ನನಗೆ ಓದಲಾಗಲಿಲ್ಲ. ಅದು ಹೆಚ್ಚಾಗಿ ಸಂಸದೀಯ ರಾಜಕೀಯ ಮತ್ತು ಅದರ ಚರಿತ್ರೆಯ ಬಗ್ಗೆ ಬರೆಯಲಾಗಿದೆಯಂತೆ.
ಅದರ ಮುಂದುವರೆದ ಭಾಗವೇ, ಅಥೆನ್ಸ್ ನ ರಾಜ್ಯಭಾರ. ಇದು ಗ್ರೀಕ್ ಇತಿಹಾಸದಲ್ಲಿ, ಎರಡೂವರೆ ಸಾವಿರ ವರ್ಷಗಳ
ಹಿಂದೆ ಪ್ರಜಾಪ್ರಭುತ್ವ ಹುಟ್ಟಿದ ಮತ್ತು ನೆಡೆದು ಬಂದ ದಾರಿಯ ಬಗ್ಗೆ ಸವಿಸ್ತಾರವಾಗಿ ಬೆಳಕು ಚೆಲ್ಲುತ್ತದೆ.
ಕ್ರಿಸ್ತ
ಪೂರ್ವದಲ್ಲೇ ಅಥೆನ್ಸ್ ನಲ್ಲಿ ಹುಟ್ಟಿದ ಪ್ರಜಾಪ್ರಭುತ್ವದ ಬಗ್ಗೆ ನನಗೆ ಅಲ್ಪಸ್ವಲ್ಪ ತಿಳುವಳಿಕೆ
ಇತ್ತು. ಆದರೆ, ವಿಲ್ಲಿಯಂ ಶೇಕ್ಸ್ ಪಿಯರ್ ನ ನಾಟಕಗಳ ಮೂಲಕ, ರೋಮನ್ ಸಾಮ್ರಾಜ್ಯದಲ್ಲಿ ಇದ್ದ ಪ್ರಜಾಪ್ರಭುತ್ವದ
ಬಗ್ಗೆ ಗೊತ್ತಾದರೂ, ಸಮಗ್ರವಾದ ಜ್ಞಾನ ಇರಲಿಲ್ಲ. ಪ್ರಜಾಪ್ರಭುತ್ವದ ಮೂಲದ ಬಗ್ಗೆ ಯಾರಿಗಾದರೂ ತಿಳಿಯುವ
ಹಂಬಲವಿದ್ದರೆ, ಈ ಪುಸ್ತಕ ಉತ್ತಮವಾದ ಕೈಪಿಡಿಯೂ ಆಗಬಲ್ಲದು ಹಾಗೂ ಸುಲಭವಾಗಿ ಓದಿಸಿಕೊಂಡು ಹೋಗಬಲ್ಲದು.
ಪ್ರಜಾಪ್ರಭುತ್ವದ
ಮೂಲವನ್ನು ಸಾಕ್ಷ್ಯಚಿತ್ರದಂತೆ ನಿರೂಪಿಸುವುದರ ಬದಲು, ಕ್ರಿಸ್ತಪೂರ್ವದಲ್ಲಿದ್ದ ಗ್ರೀಕ್ ಸಮಾಜ, ಕಟ್ಟುಪಾಡುಗಳು,
ನಂಬಿಕೆಗಳ ಬಗ್ಗೆ ಕೂಲಂಕುಶವಾಗಿ ಚರ್ಚಿಸಿದ್ದಾರೆ. ಗ್ರೀಕರ ಸಾಮಾಜಿಕ ಬೆಳವಣಿಗೆಗಳಿಗೆ ಕಾರಣಕರ್ತರಾದ
ಮಹಾನ್ ಚಿಂತಕರಾದ ಪ್ಲಾಟೋ, ಸಾಕ್ರಟಿಸ್, ಅರಿಸ್ಟಾಟಲ್ ಮತ್ತು ಅವನ ಶಿಷ್ಯ ಅಲೆಕ್ಸಾಂಡರ್ ಬಗ್ಗೆಯೂ
ವಿವರಗಳಿವೆ. ಕಲ್ಲುಗಳೇ ಮತಗಳಾಗಿ, ಆಲಿವ್ ಮರದ ಕೆಳಗೆ
ಅಥಿನಾ ದೇವಿಯ ಪೂಜೆಯೊಂದಿಗೆ ಆರಂಭವಾಗುತ್ತಿದ್ದ ಕಲಾಪಗಳನ್ನು ಲಿಖಿತ ರೂಪದಲ್ಲಿ ದಾಖಲಿಸಲಾಗುತ್ತಿತ್ತು.
ಅದೂ ಎರಡೂವರೆ ಸಾವಿರ ವರ್ಷಗಳ ಕೆಳಗೆ ಅನ್ನುವುದೇ ಅಧ್ಬುತ.

ನನ್ನ
ಅಭಿಪ್ರಾಯದಲ್ಲಿ, ನಮ್ಮ ವಿಶ್ವವಿಧ್ಯಾಲಯಗಳಲ್ಲಿ ಇತಿಹಾಸ ಪ್ರಾಧ್ಯಾಪಕರು ಮಾಡಬೇಕಾಗಿದ್ದ ಕೆಲಸವನ್ನು,
ವಿಶ್ವನಾಥ್ ಅವರಿಗಿಂತ ಚೆನ್ನಾಗಿ ಮಾಡಿದ್ದಾರೆ. ಪ್ರಜಾಪ್ರಭುತ್ವಕ್ಕೆ ಗ್ರೀಕ್ ಸಮಾಜದ ಕೊಡುಗೆಯ ಬಗ್ಗೆ
ಇದೊಂದು ಉತ್ತಮ ಪುಸ್ತಕ. ಈ ಪುಸ್ತಕವನ್ನು ಓದಿ, ಗ್ರೀಕ್ ದೇಶದ ಇಂದಿನ ಸ್ಥಿತಿಗತಿಗಳನ್ನು ಅವಲೋಕಿಸಿದಾಗ,
ಟ್ರಾಯ್ ಯುದ್ದಕ್ಕೆ ಹೊರಡುವ ಮುನ್ನ, ಯುದ್ದದ ನಾಯಕ ಅಕಿಲೀಸ್ ಗೆ ಅವನ ತಾಯಿ ಹೇಳುವ ಮಾತು ನೆನಪಾಗುತ್ತದೆ:
`your glory walks hand in hand with your doom’.
ಪತ್ರಿಕೋದ್ಯಮದ
ಆರಂಭದಲ್ಲಿ ನಾನು ಕಂಡ ರಾಜಕಾರಣಿಗಳು ಈಗ ಪಳೆಯುಳಿಕೆಗಳಾಗಿದ್ದಾರೆ. ಅದರ ಕೊನೆಯ ಕೊಂಡಿಯೇ ವಿಶ್ವನಾಥ್
ಅಂದರೆ ತಪ್ಪಾಗಲಾರದು. ಆ ಕೊಂಡಿ ಕಳಚುವ ಮುನ್ನ, ಅವರ ಲೇಖನಿ ಮತ್ತಷ್ಟು ಮಾತನಾಡಲಿ ಅಂತ ಅನ್ನಿಸ್ತಿದೆ…..
ಮಾಕೋನಹಳ್ಳಿ
ವಿನಯ್ ಮಾಧವ.
ತುಂಬ ಚುಟುಕು ಹಾಗು ವಿವಿಧಮಯವಾಗಿದೆ
ಪ್ರತ್ಯುತ್ತರಅಳಿಸಿವಿನಯ್ , ವಿಶ್ವನಾಥ್ ಅವರ ಇನ್ನೊಂದು ಮುಖವನ್ನು ಅದ್ಭುತವಾಗಿ ಚಿತ್ರಿಸಿದ್ದೀರಿ. ನನಗೂ ಸಹ ನಿಡುಗಾಲದ ಗೆಳೆಯರು. ಅವರೊಡನೆ ಮಾತಾಡುತ್ತಾ ಕುಳಿತರೆ ಸಮಯ ಸರಿದಿದ್ದೇ ಗೊತ್ತಾಗುವುದಿಲ್ಲ. ಅತ್ಯತ್ತಮ ವಾಗ್ಮಿ..
ಪ್ರತ್ಯುತ್ತರಅಳಿಸಿ