ಶುಕ್ರವಾರ, ಜೂನ್ 22, 2012

ಬಲಿದಾನ


ಯಾಕೋ, ಅವನ ತಮ್ಮ ಹೇಳಿದ್ದೇ ಸರಿ ಅನ್ಸುತ್ತೆ

ಕಂಪ್ಯೂಟರ್ ಮುಂದೆ ಏನೋ ಮಾಡ್ತಾ ಕೂತಿದ್ದವನು ಸುಮ್ಮನೆ ತಲೆ ಎತ್ತಿ ನೋಡ್ದಾಗ, ನಮ್ಮ ಎಡಿಟರ್ ಕೃಷ್ಣ ಪ್ರಸಾದ್ (ಕೆ.ಪಿ) ನನ್ನ ಕಡೇನೇ ಬರ್ತಿದ್ದಾರೆ ಅನ್ನಿಸಿತ್ತು. ವಿಜಯ ಟೈಮ್ಸ್ ಗೆ ಸೇರಿ ಮೂರ್ನಾಲ್ಕು ತಿಂಗಳಾಗಿತ್ತಷ್ಟೆ. ನನ್ನ ಮತ್ತೆ ಕೆ.ಪಿ ಸಂಬಂಧ ಅಷ್ಟೇನೂ ಸರಿ ಇರಲಿಲ್ಲ.
ನೇರವಾಗಿ ಮಾತಾಡ್ತಾರೆ ಅನ್ನಿಸಿದ್ರೂ, ಸ್ವಲ್ಪ ತಿಕ್ಕಲುತನ ಇದೆ ಅನ್ನಿಸಿತ್ತು. ಒಂದೆರೆಡು ಸಲ ನೇರವಾಗಿ ಜಗಳಕ್ಕೂ ಇಳಿದ ಮೇಲೆ, ನಂಗ್ಯಾಕೆ ಬೇಕು ಅಂತ ಮಾತನ್ನೇ ಕಡಿಮೆ ಮಾಡ್ದೆ.
ಕೈಯಲ್ಲೊಂದು ರಬ್ಬರ್ ಚೆಂಡು ಹಿಡ್ಕೊಂಡು, ಕ್ರಿಕೆಟ್ ಬೌಲಿಂಗ್ ಥರ ಕೈ ತಿರುಗಿಸುತ್ತಾ, ರಿಪೋರ್ಟಿಂಗ್ ವಿಭಾಗದ ಉದ್ದಗಲಕ್ಕೂ ಓಡಾಡೋದು ಕೆ.ಪಿ. ಯ ಅಭ್ಯಾಸ ಕೂಡ. ಹಾಗಾಗಿ ನಾನೂ ತಲೆ ಕೆಡಿಸಿಕೊಳ್ಳದೆ, ಸುಮ್ಮನೆ ನನ್ನ ಕೆಲಸ ಮುಂದುವರೆಸಿದೆ.
ನನ್ನ ಪಕ್ಕ ಬಂದು ನಿಂತವರೇ ಕೇಳಿದ್ರು: `ಮಂಜುನಾಥ್ ಶಣ್ಮುಗಂ ನೆನಪಿದ್ಯಾ?’
ಹಾಗೇ ತಲೆ ಎತ್ತಿ, ಚುಟುಕಾಗಿ ಉತ್ತರಿಸಿದೆ: `ಮುಂದಿನ ವಾರಕ್ಕೆ ಒಂದು ವರ್ಷ ಆಗ್ತಿದೆ, ಅವನ ಕೊಲೆಯಾಗಿ.’
`ಮತ್ತೆ ನೀನೇನು ಮಾಡ್ತೀಯ ಅದಕ್ಕೆ?’ ಅಂತ ಕೇಳಿದ್ರು.
`ನಾಳೆ ಕೆ.ಜಿ.ಎಫ್. ಗೆ ಹೋಗಿ ಅವರ ಮನೆಯವರ್ನ ಮೀಟ್ ಮಾಡ್ತೀನಿ. ಆಮೇಲೇನಾಗುತ್ತೆ ನೋಡೋಣ,’ ಅಂದೆ.
`ಸ್ಪೇಸ್ ಬಗ್ಗೆ ತಲೆ ಕೆಡಿಸ್ಕೋಬೇಡ. ಪ್ಯಾಕೇಜ್ ಮಾಡು. ಚೆನ್ನಾಗಿರ್ಬೇಕು,’ ಅಂತ ಹೇಳಿದವರು, ನನ್ನ ಪ್ರತಿಕ್ರಿಯೆಗೂ ಕಾಯದೆ ಮುಂದೆ ಹೋದ್ರು.
ಕೆಲಸದ ವಿಷಯ ಬಂದಾಗ ಕೆ.ಪಿ. ಯಾವಾಗಲೂ ಗಂಭೀರವಾಗಿರುತ್ತಿದ್ದರು. ಸುತ್ತ ನಾಲ್ಕೈದು ಜನ ಇದ್ದಾಗ ಮಾತ್ರ ಸ್ವಲ್ಪ ಲೂಸಾಗಿ ಮಾತಾಡ್ತಿದ್ರು. ನಂಗದು ಇಷ್ಟವಾಗ್ತಿರ್ಲಿಲ್ಲ.
ಮಾರನೇ ದಿನ ಎದ್ದವನೇ ಕೆ.ಜಿ.ಎಫ್ ಗೆ ಹೊರಟೆ. ಅಲ್ಲೇ ರಾಬರ್ಟ್ ಸನ್ ಪೇಟೆಯಲ್ಲಿ ಕೇಳ್ದಾಗ, ಮಂಜುನಾಥ್ ಮನೆ ಹುಡುಕೋದು ಕಷ್ಟವಾಗ್ಲಿಲ್ಲ. ಊರ ಹೊರಗಿನ ಸಣ್ಣ ಮನೆ. ಶಣ್ಮುಗಂ ಮತ್ತು ಅವರ ಹೆಂಡತಿ ಪ್ರಮೀಳ ಇಬ್ಬರೇ ಇದ್ದರು. ಮಗನನ್ನು ಕಳೆದುಕೊಂಡು ಒಂದು ವರ್ಷವೂ ಆಗಿಲ್ಲ, ಇವರನ್ನು ಏನಂತ ಮಾತಾಡ್ಸೋದು?, ಅಂತ ಯೋಚನೆ ಮಾಡ್ತಿದ್ದಾಗಲೆ, ಆ ದಂಪತಿಗಳು ಆತ್ಮೀಯವಾಗಿ ಒಳಗೆ ಬರಮಾಡಿಕೊಂಡರು.
ಮಂಜುನಾಥ್ ಕೊಲೆ ಪ್ರಕರಣ ರಾಷ್ಟ್ರದಾದ್ಯಂತ ಸುದ್ದಿ ಮಾಡಿತ್ತು. ಇಂಡಿಯನ್ ಆಯಿಲ್ ಕಾರ್ಪೋರೇಶನ್ ನಲ್ಲಿ ಅಧಿಕಾರಿಯಾಗಿದ್ದ ಅವರು, ಉತ್ತರ ಪ್ರದೇಶದ ಲಖೀಮ್ ಪುರ್ ಖೀರಿ ಅನ್ನೋ ಜಾಗದಲ್ಲಿ, ಪೆಟ್ರೋಲ್ ಕಲಬರೆಕೆ ಮಾಡುವವರ ವಿರುದ್ದ ಸಮರ ಸಾರಿದ್ದರು. ಅಲ್ಲಿನ ಮಾಫಿಯಾ ಅವರಿಗೆ ಗುಂಡು ಹೊಡೆದು ಕೊಂದು ಹಾಕಿ, ಅವರ ದೇಹವನ್ನು ಎಸೆಯಲು ಹೋಗುವಾಗ ಪೋಲಿಸರ ಕೈಗೆ ಸಿಕ್ಕಿಹಾಕಿಕೊಂಡಿದ್ದರು. ಕೆಲವು ದಿನಗಳ ಹಿಂದೆ, ರಾಷ್ಟ್ರೀಯ ಹೆದ್ದಾರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ದಕ್ಷ ಅಧಿಕಾರಿಯಾಗಿದ್ದ ಸತ್ಯೇಂದ್ರ ದುಬೆ ಅನ್ನುವವರನ್ನೂ, ಮಾಫಿಯಾ ಬಿಹಾರಿನಲ್ಲಿ ಕೊಂದು ಹಾಕಿತ್ತು. ಮಂಜುನಾಥ್ ಕೊಲೆ ಮಾಡಿದವರಿಗೆ ಉಗ್ರ ಶಿಕ್ಷೆ ಕೊಡ್ಬೇಕು ಅಂತ ದೇಶದಾದ್ಯಂತ ಕೂಗೆದ್ದಿತ್ತು.
ಮಂಜುನಾಥನ ತಂದೆ ಮತ್ತು ತಾಯಿ, ತಮ್ಮ ಮಗ ಸತ್ತು ಹೋಗಿದ್ದಾನೆ ಅಂತ ನಮಗೆ ಅನ್ನಿಸ್ತನೇ ಇಲ್ಲ. ``ಇಲ್ಲೆಲ್ಲೋ ಓಡಾಡ್ಕೊಂಡು ಇದ್ದಾನೆ ಅನ್ನಿಸ್ತದೆ. ರಮಣ ಮಹರ್ಷಿಯವರಿಂದ ಬಹಳ ಪ್ರಭಾವಿತನಾಗಿದ್ದ,’’ ಅಂತ ಭಾವುಕರಾಗಿ ಹೇಳಿದರು. ಅವರ ಇನ್ನೊಬ್ಬ ಮಗ ರಾಘವೇಂದ್ರ ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದಾನೆ ಅಂತ ಹೇಳಿ, ಅವನ ನಂಬರ್ ಕೊಟ್ಟರು. ಹಾಗೇನೆ, ಮಂಜುನಾಥನ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಲು ಓಡಾಡುತ್ತಿದ್ದ ಅವನ ಆತ್ಮೀಯ ಗೆಳೆಯ ಅಖಿಲ್ ನಂಬರ್ ಕೂಡ ಕೊಟ್ಟರು.
ಅಖಿಲ್ ಫೋನಿಗೆ ಸಿಕ್ಕಿದ ತಕ್ಷಣ ಎಲ್ಲಾ ವಿವರಗಳನ್ನು ಕೊಟ್ಟ. ಕೇಸ್ ಏನಾಗ್ತಿದೆ, ಟ್ರಸ್ಟ್ ಕೆಲಸ ಎಲ್ಲಿವರೆಗೆ ಬಂದಿದೆ ಮತ್ತು ಮಂಜುನಾಥನ ಹಳೇ ಸಹಪಾಠಿಗಳು ಹೇಗೆ ಸಹಕರಿಸುತ್ತಿದ್ದಾರೆ ಅನ್ನುವುದನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದ. ಆದ್ರೆ, ರಾಘವೇಂದ್ರ ಮಾತ್ರ ಯಾಕೋ ಹಿಂದೇಟು ಹೊಡೆದ.
ಯಾಕೆ, ಏನು ಅಂತ ನೂರೆಂಟು ಪ್ರಶ್ನೆಗಳನ್ನು ಕೇಳಿದ ಮೇಲೆ, `ಸರ್, ನನ್ನ ತಂದೆ, ತಾಯಿಯವರನ್ನು ಮಾತಾಡ್ಸಿದ ಮೇಲೆ, ನಾನೂ ಮಾತಾಡ್ಬೇಕಾ? ಸಿಗಲೇ ಬೇಕಾ?’ ಅಂತೆಲ್ಲ ಕೇಳೋಕೆ ಶುರು ಮಾಡ್ದ. ಇವನ್ಯಾಕೋ ಎಡವಟ್ಟು ಗಿರಾಕಿ ಅನ್ನಿಸ್ತು. ಏನೇ ಆಗ್ಲಿ ಅಂತ, ಸಿಗಲೇ ಬೇಕು ಅಂತ ಹಟ ಹಿಡಿದೆ. ಒಂದೆರೆಡು ದಿನ ಒದ್ದಾಡಿದ ಅವನು, ಅವತ್ತೊಂದು ದಿನ ಬೆಳಗ್ಗೆ ಬನ್ನೇರುಘಟ್ಟ ರಸ್ತೆಯ, ಐ.ಐ.ಎಂ. ಹತ್ತಿರ ಸಿಗಲು ಒಪ್ಪಿಕೊಂಡ.
ಪಕ್ಕದ ಹೋಟೆಲ್ ಒಂದರಲ್ಲಿ ತಿಂಡಿಗೆ ಇಬ್ಬರೂ ಕೂತೆವು. ಎಂ.ಟೆಕ್. ಮಾಡಿಕೊಂಡು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಾಘವೇಂದ್ರ, ಯಾಕೋ ಚಡಪಡಿಸುತ್ತಿದ್ದ. ನಾನು ತಿಂಡಿ ಆರ್ಡರ್ ಮಾಡಿದ ತಕ್ಷಣ ಹೇಳ್ದ: `ನಾನು ಹೀಗೆ ಹೇಳ್ತೀನಿ ಅಂತ ತಪ್ಪು ತಿಳ್ಕೋಬೇಡಿ ಸರ್. ನೀವೆಲ್ಲಾ ಯೋಚನೆ ಮಾಡೋ ಹಾಗೆ ನಾನು ಮಾಡೋಲ್ಲ ಸರ್.’
`ಅಂದ್ರೆ?’
`ಅದೇ ಸರ್, ನಮ್ಮಣ್ಣ ದೇಶಕ್ಕಾಗಿ ತ್ಯಾಗ ಮಾಡಿದ್ದಾನೆ, ಹೋರಾಡಿದ್ದಾನೆ, ಹುತಾತ್ಮ ಅಂತೆಲ್ಲ ಪೇಪರ್ ನಲ್ಲಿ ಬರೀತಾರಲ್ಲ, ನಾನು ಹಾಗೆ ಯೋಚನೆ ಮಾಡೋಲ್ಲ ಸರ್. ನನ್ನ ಪ್ರಕಾರ, ನನ್ನಣ್ಣ ಒಬ್ಬ ಮೂರ್ಖ,’ ಅಂತ ತಣ್ಣಗೆ ಹೇಳಿದ.
ನಾನವನ ಮುಖವನ್ನೇ ನೋಡುತ್ತಿದ್ದರೆ, ಅವನು ಎಲ್ಲೋ ನೋಡುತ್ತ, ಏನೋ ಯೋಚಿಸುತ್ತಿದ್ದ. ಒಂದೆರೆಡು ನಿಮಿಷ ನಾವಿಬ್ಬರೂ ಮಾತಾಡಲಿಲ್ಲ. ಕೊನೆಗೆ ಅವನೇ ಮುಂದುವರೆಸಿದ: `ಸರ್, ನನಗೆ ಮತ್ತು ಸುಜಾತಾಗೆ (ಸಹೋದರಿ) ಅಣ್ಣನೇ ಎಲ್ಲಾ ಆಗಿದ್ದ. ಅವನಿಂದಾಗಿಯೇ ನಾನು ಇಷ್ಟೆಲ್ಲಾ ಚೆನ್ನಾಗಿ ಓದಿದ್ದು. ತುಂಬಾನೇ ಪ್ರೀತಿಯಿಂದ ನೋಡಿಕೊಂಡ. ಏನೇ ಅದ್ರೂ, ಅಣ್ಣ ಇದ್ದಾನೆ ಅಂತ ಧೈರ್ಯ ಇತ್ತು. ಜೀವನದಲ್ಲಿ ಹಾಗೆ ಮಾಡ್ತೀನಿ, ಹೀಗೆ ಮಾಡ್ತೀನಿ ಅಂತ ಏನೇನೋ ಕನಸು ಕಟ್ಟಿಕೊಂಡಿದ್ದೆ. ಅದಕ್ಕೂ ಅಣ್ಣ ಇದ್ದಾನೆ ಅನ್ನೋ ಧೈರ್ಯನೆ.  ಈಗ ನೋಡಿ ಸರ್, ನಾನು ಬೆಂಗಳೂರಲ್ಲಿ ಇದ್ರೂ ನನ್ನ ತಂದೆ, ತಾಯಿಗೆ ಹೆದರಿಕೆ. ದಿನಕ್ಕೆ ನಾಲ್ಕು ಸಲ ಫೋನ್ ಮಾಡ್ತೀನಿ, ಅಂತೂ ಅವರಿಗೆ ಸಮಾಧಾನ ಇಲ್ಲ. ಹೆದರ್ಕೊಂಡು ಬದುಕೋ ಪರಿಸ್ಥಿತಿ ಬಂದಿದೆ. ನಂಗೇನಾಗುತ್ತೋ ಅಂತ ನನ್ನ ತಂದೆ ತಾಯಿಯರು ಹೆದರ್ಕೋತ್ತಾರೆ, ಅವರಿಗೇನಾಗುತ್ತೋ ಅಂತ ನಾನು ಹೆದರ್ಕೋತ್ತೀನಿ. ಬದುಕಲ್ಲಿ ಕಾನ್ಫಿಡೆನ್ಸೇ ಇಲ್ಲದ ಹಾಗಾಗಿದೆ,’ ಅಂದ.
`ಅದ್ಸರಿ ಸರ್, ನನ್ನಣ್ಣ ಅಲ್ಲಿಗೆ ಹೋಗೋ ಮುಂಚೆ ಕರಪ್ಷನ್ ಇರ್ಲಿಲ್ವಾ? ಅವನು ಸತ್ತ ದಿನಾನೇ ಅದು ನಿಂತು ಹೋಯ್ತಾ? ಮುಂದೆ ಕರಪ್ಷನ್ ಇರಲ್ವಾ? ಹಾಗಾದ್ರೆ, ಇವ್ನು ಸತ್ತು ಸಾಧಿಸಿದ್ದು ಏನು? ನಾನೇನು ನನ್ನ ಅಣ್ಣ ಮಾಫಿಯಾ ಜೊತೆ ಸೇರಿ ದುಡ್ಡು ಮಾಡ್ಬೇಕು ಅಂತ ಹೇಳ್ಲಿಲ್ಲ. ಅವನು ಈ ವಿಷಯ ನನ್ನ ಹತ್ರ ಹೇಳಿ, ಈ ಮಾಫೀಯಾದವರು ಕೆಟ್ಟ ಜನ ಅಂತ ಹೇಳಿದ್ದ. ನಾನವನಿಗೆ ಹುಶಾರಾಗಿರಲು ಹೇಳಿದ್ದೆ. ಎಲ್ಲಾದನ್ನೂ ಒಂದೇ ಸಲ ತಲೇ ಮೇಲೆ ಎಳ್ಕೊಂಡು, ಹೊರಟೇ ಹೋದ. ನಂಗೀಗ ಅಣ್ಣನೂ ಇಲ್ಲ, ಮುಂದೆ ಏನಾದ್ರು ಸಲಹೆ ಬೇಕು ಅಂದ್ರೆ ಕೊಡೋರೂ ಇಲ್ಲ. ತುಂಬಾ ಡಿಪೆಂಡ್ ಆಗಿದ್ದೆ ಸರ್, ಅವನ ಮೇಲೆ,’ ಅಂತ ಕಣ್ಣಲ್ಲಿ ನೀರು ತುಂಬ್ಕೊಂಡು ಹೇಳ್ದ.
ಮಂಜುನಾಥ್ ಸತ್ತ ಮೇಲೆ, ಅವನ ಕೆಲಸವನ್ನು ರಾಘವೇಂದ್ರನಿಗೆ ಕೊಡ್ತೀವಿ ಅಂತ ಕಂಪನಿಯವರು ಹೇಳಿದ್ರಂತೆ. ತಂದೆ, ತಾಯಿನ ನೋಡ್ಕೋಬೇಕು, ಹಾಗಾಗಿ ದಕ್ಷಿಣ ಭಾರತದಲ್ಲಿ ಪೋಸ್ಟಿಂಗ್ ಕೊಡ್ತೀವಿ ಅಂತ ಮಾತು ಕೊಟ್ರೆ ಸೇರ್ತೀನಿ ಅಂದನಂತೆ. ಆದ್ರೆ, ಕಂಪನಿಯವರು ಯಾವುದೇ ಥರದ ಆಶ್ವಾಸನೆ ಕೊಡಲು ಆಗೋದಿಲ್ಲ ಅಂದ್ರಂತೆ. `ನೋಡಿ ಸರ್, ಇದು ನನ್ನ ಪರಿಸ್ಥಿತಿ. ನಾನು ಪ್ರೈವೇಟ್ ಕಂಪನಿಯಲ್ಲಿ ಈಗ ಕೆಲಸ ಶುರು ಮಾಡಿದ್ದೀನಿ. ನಂದೂ ಎಜ್ಯುಕೇಶನ್ ಸಾಲ ಬಾಕಿ ಇದೆ. ನಿಧಾನವಾಗಿ ತೀರಿಸ್ಕೊಳ್ತೀನಿ. ಆದ್ರೆ, ನಮ್ಮಣ್ಣ ಮಾತ್ರ, ವಿನಾಕಾರಣ ಜೀವ ಕಳ್ಕೊಂಡ, ಅಷ್ಟೆ,’ ಅಂತ ರಾಘವೇಂದ್ರ ಹೇಳ್ದಾಗ, ನನಗೇನು ಹೇಳ್ಬೇಕು ಅಂತ ಗೊತ್ತಾಗಲಿಲ್ಲ.
`ನೋಡು ರಾಘವೇಂದ್ರ, ಒಂದು ಕೆಟ್ಟ ಘಟನೆ ಆಯ್ತು ಅಂತ, ಜೀವನಾನ ನೆಗೆಟಿವ್ ಆಗಿ ತಗೋಬೇಡ. ನಿಮ್ಮಣ್ಣನನ್ನು ಕೊಲೆ ಮಾಡಿದವರಿಗೆ ಶಿಕ್ಷೆ ಆಗೇ ಆಗುತ್ತೆ,’ ಅಂದೆ.
`ಇಲ್ಲ ಸರ್. ಜೀವನಾನ ನನ್ನ ಜಾಗದಲ್ಲಿ ನಿಂತು ನೋಡಿ. ಈಗಲ್ಲದಿದ್ರೂ, ಇನೈದು ವರ್ಷದಲ್ಲಾದ್ರೂ ನಿಮಗೆ ಗೊತ್ತಾಗುತ್ತೆ… ನಾನು ಹೇಳಿದ್ದು ಸರಿ ಅಂತ. ನಮ್ಮಣ್ಣನನ್ನು ಕೊಲೆ ಮಾಡಿದವರಿಗೆ ಶಿಕ್ಷೆಯಾಗುವುದರಿಂದ, ನನ್ನ ಅಣ್ಣನ ಜಾಗವನ್ನು ಯಾರೂ ತುಂಬೋದಿಲ್ಲವಲ್ಲ. ಶಿಕ್ಷೆ ಕಟ್ಕೊಂಡು ನಂಗೇನಾಗ್ಬೇಕು?’ ಅಂದ.
`ಆಂಗ್ರಿ ಯಂಗ್ ಮ್ಯಾನ್… ಮುಂದೆ ಸರಿಯಾಗ್ತಾನೆ,’ ಅನ್ಕೊಂಡು ಆಫೀಸಿಗೆ ಬಂದೆ. ಅವತ್ತೇ ಸ್ಟೋರಿ ಮುಗಿಸಿ, ಕೆ.ಪಿ.ಗೆ ಮೇಲ್ ಮಾಡ್ದೆ. ಎರಡು ದಿನ ಬಿಟ್ಟು ನೋಡಿದ್ರೆ, ಅರ್ಧ ಪುಟಕ್ಕಿಂತ ಹೆಚ್ಚು ಜಾಗ ಕೊಟ್ಟು, ನನ್ನ ಸ್ಟೋರಿ ತಗೊಂಡಿದ್ರು. ಬೆಂಗಳೂರಿನ ಯಾವುದೇ ಪೇಪರ್ ಸಹ ಮಂಜುನಾಥನ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ.
ಸಾಯಂಕಾಲದ ಹೊತ್ತಿಗೆ ನನ್ನ ಫೋನ್ ಗೆ ಒಂದು ಮೆಸೆಜ್ ಬಂತು. ಚುರುಮುರಿ ಬ್ಲಾಗ್ ನೋಡು. ಕೆ.ಪಿ. ನಿನ್ನ ಬಗ್ಗೆ ಬರೆದಿದ್ದಾರೆ, ಅಂತ. ಹಾಗೇ ಬ್ಲಾಗ್ ತೆಗೆದು ನೋಡ್ದೆ. `ಮಂಜುನಾಥನಂತ ಹೀರೋವನ್ನು ಎಲ್ಲರೂ ಮರೆತಿದ್ದಾಗ, ಅವನ ಬಗ್ಗೆ ಅಧ್ಬುತವಾದ ಲೇಖನ ಬರೆದಿರುವ ವಿನಯ್ ಮಾಧವ್ ಗೆ ಅಂಭಿನಂದನೆಗಳು,’ ಅಂತ ಬರ್ದಿದ್ರು. ವಿಚಿತ್ರ ಮನುಷ್ಯ ಅನ್ನಿಸಿತು. ನಾನು ಮತ್ತೆ ಕೆ.ಪಿ. ಸರಿಯಾಗಿ ಮಾತಾಡಿ ಒಂದು ತಿಂಗಳ ಹತ್ತಿರ ಆಗಿತ್ತು. ಅದನ್ನೇನೂ ಅವರು ತಲೆಗೆ ಹಚ್ಚಿಕೊಂಡಿರಲಿಲ್ಲ.
ಮುಂದಿನ ನಾಲ್ಕೈದು ತಿಂಗಳಲ್ಲಿ, ಲಖೀಮ್ ಪುರದ ಕೋರ್ಟ್, ಮಂಜುನಾಥನ ಕೊಲೆ ಪ್ರಕರಣದಲ್ಲಿ ಬಂದಿತರಾಗಿದ್ದ ಎಲ್ಲಾ ಎಂಟು ಜನರಿಗೆ ಶಿಕ್ಷೆ ವಿಧಿಸಿತ್ತು. ಪೆಟ್ರೋಲ್ ಬಂಕಿನ ಮಾಲಿಕನಿಗೆ ಗಲ್ಲು ಶಿಕ್ಷೆಯನ್ನೂ ವಿಧಿಸಿತ್ತು. ರಾಘವೇಂದ್ರನಿಗೆ ಫೋನ್ ಮಾಡಿ ಹೇಳೋಣ ಅನ್ಕೊಂಡೆ, ಸುಮ್ಮನಾದೆ.
ಎರಡು ವರ್ಷಗಳ ಬಳಿಕ, ಅಲಹಾಬಾದ್ ಹೈಕೋರ್ಟ್, ಪೆಟ್ರೋಲ್ ಬಂಕ್ ಮಾಲಿಕನ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತು. ಹಾಗೇ, ಎಂಟು ಆರೋಪಿಗಳಲ್ಲಿ, ಮೂರುಜನರನ್ನು ಬಿಡುಗಡೆಗೊಳಿಸಿತು. ಈಗ ಕೇಸ್ ಸುಪ್ರೀಂ ಕೋರ್ಟ್ ನಲ್ಲಿದೆ.
ಒಂದೊಂದ್ಸಲ, ಮಂಜುನಾಥ್ ನೆನಪಾದಗಲೆಲ್ಲ, ರಾಘವೇಂದ್ರ ಹೇಳಿದ್ದೇ ಸರಿ ಅಂತ ಅನ್ನಿಸ್ತದೆ.


ಮಾಕೋನಹಳ್ಳಿ ವಿನಯ್ ಮಾಧವ್


2 ಕಾಮೆಂಟ್‌ಗಳು: