ಸಾಯಿಬಾಬ
ಕಣ್ತೆರೆದಾಗ……
ಆಫೀಸಿಗೆ
ಹೊರಡೋಕೆ ಅಂತ ಶೂ ಹಾಕ್ತಾ ಇರೋವಾಗ, ಏನಾದ್ರೂ `ಬ್ರೇಕಿಂಗ್ ನ್ಯೂಸ್’ ಇದೆಯಾ ಅಂತ ನ್ಯೂಸ್ ಚಾನೆಲ್
ಹಾಕಿದೆ. ಬಂದೇ ಬಿಡ್ತು… `ಪವಾಡವಾಗಿ ಬಿಟ್ಟಿದೆ…. ಕಣ್ಣು ಬಿಟ್ಟ ಶೀರ್ಡಿ ಸಾಯಿಬಾಬಾ’ ಅಂತ.
ಒಂದು
ಸಾಯಿಬಾಬಾನ ಪ್ರತಿಮೆ ತೋರಿಸುತ್ತಿದ್ದರು. ಒಂದು ಕಣ್ಣು ತೆಗೆದಂತೆ ಕಾಣುತ್ತಿತ್ತು ಮತ್ತು ಕೆಲವು
ಹೆಂಗಸರು ಆ ಪ್ರತಿಮೆಗೆ ಆರತಿ ಎತ್ತುತ್ತಿದ್ದರು. ಆ ಮನೆಯ ಹೊರಗಡೆ ಜನರು ಸಾಲುಗಟ್ಟಿ ನಿಂತಿರುವುದನ್ನೂ
ತೋರಿಸುತ್ತಿದ್ದರು.
`ಇದಕ್ಕೇನೂ
ಬರ ಇಲ್ಲ. ಗಣೇಶ ಹಾಲು ಕುಡಿದಾಯ್ತು, ಈಗ ಸಾಯಿಬಾಬ ಕಣ್ಣು ಬಿಟ್ಟಿದ್ದಾರೆ,’ ಅಂತ ಅನ್ಕೊಂಡು, ಟಿವಿ
ಆರಿಸಿ ಕಮೀಷನರ್ ಆಫೀಸಿಗೆ ಹೊರಟೆ. ಅಲ್ಲಿ ನೋಡಿದರೂ ಸಾಯಿಬಾಬನದೇ ಮಾತು.
`ಇವರೆಲ್ಲ ಯಾವ ಕಾಲದಲ್ಲಿ ಇದ್ದಾರೆ?’ ಅಂತ ಅನ್ಕೊಂಡು ಆಫೀಸಿಗೆ
ಬಂದರೆ, ಅಲ್ಲಿ ನಮ್ಮ ಛೀಫ್ ರಿಪೋರ್ಟರ್ ಆಗಿದ್ದ ಕುಶಾಲ ಬಂದು, `ಗವಿ ಗಂಗಾಧರೇಶ್ವರ ದೇವಸ್ಥಾನದ ಹತ್ತಿರ
ಒಂದು ಮನೆಯಲ್ಲಿ ಸಾಯಿಬಾಬ ಕಣ್ಣು ಬಿಟ್ಟಿದ್ದಾರಂತೆ. ನೀನೇನೂ ತಲೆ ಕೆಡಿಸಿಕೊಳ್ಳಬೇಡ. ಫೋಟೋಗ್ರಾಫರ್
ಮತ್ತು ರಿಪೋರ್ಟರ್ ಕಳುಹಿಸಿದ್ದೇನೆ,’ ಅಂತ. ಆಗಲೇ ನನಗೆ ಹೊಳೆದಿದ್ದು… `ಬಾಬ ಕಣ್ಣು ಬಿಟ್ಟಿದ್ದು
ನಮಗೂ ಸಹ ನ್ಯೂಸ್’ ಅಂತ.
ಸಾಯಂಕಾಲದ
ಹೊತ್ತಿಗೆ ಬಾಬ ಕಣ್ಣು ತೆಗೆದಿದ್ದು ದೊಡ್ಡ ಸುದ್ದಿಯಾಗಿತ್ತು. ಅವತ್ತು ಬೇರೆ ಗುರು ಪೂರ್ಣಿಮೆಯಂತೆ.
ಯಾವ ಟಿವಿಯಲ್ಲಿ ನೋಡಿದರೂ, ಇದೇ ಸುದ್ದಿ. ಆ ಮನೆಯ ಮಾಲಿಕ ಬಾಬು ಅಂತ… ಅವನು ದೊಡ್ಡ ಧರ್ಮಾರ್ಥನಂತೆ
ಆಗಾಗ ಪೋಸು ಕೊಡುತ್ತಿದ್ದ. ನನಗಂತೂ ರೇಜಿಗೆಯಾಗಲು ಶುರುವಾಗಿತ್ತು.
ಈ
ಗವಿ ಗಂಗಾಧರೇಶ್ವರ ದೇವಸ್ಥಾನದ ಹತ್ತಿರದ ಚಾಮರಾಜಪೇಟೆಯಲ್ಲೇ ನಾನಿದ್ದಿದ್ದು. ಆದರೆ, ಆ ಕಡೆಗೆ ಅವತ್ತು
ಹೋಗಿರಲಿಲ್ಲ. ಇನ್ನೇನು ಸಾಯಂಕಾಲದವರೆಗೆ ಅಲ್ಲಿಗೆ ಹೋಗೋಕೆ ಸಾಧ್ಯವಿಲ್ಲ ಅಂತ ಅನ್ಕೊಂಡು ಸುಮ್ಮನಾದೆ.
ಟಿವಿಯಲ್ಲಿ ನೋಡಿದರೆ, ಯಾವುದೋ ಜಾತ್ರೆಯಲ್ಲಿದ್ದಂತೆ ಜನಗಳು ಗಿಜಿಗಿಡುತ್ತಿದ್ದರು. ಪೋಲಿಸರಂತೂ ಇಡೀ
ದೇವಸ್ಥಾನವನ್ನೇ ಸುತ್ತುವರೆದಿದ್ದರು.
ರಾತ್ರೆ
ಮನೆಗೆ ಬಂದಾಗ, ನಮ್ಮತ್ತೆ ಟಿವಿಯಲ್ಲಿ ಅದನ್ನೇ ನೋಡುತ್ತಿದ್ದರು. `ಇದೇನೋ ಶುರುವಾಗಿದೆ ನೋಡ್ದಾ?’ ಅಂತ ಕೇಳಿದ್ರು.
`ಜನಗಳಿಗೇನು?
ಈ ಥರದ್ದೇನಾದ್ರೂ ಸಿಕ್ಕಿದ್ರೆ ಸಾಕು.. ಇಡೀ ದಿನ ಹಬ್ಬ ಮಾಡ್ತಾರೆ,’ ಅಂತ ನಕ್ಕೆ.
`ಇಲ್ಲೇ
ಹಿಂದುಗಡೆ ಇರೋದು. ನಾಳೆ ಬೆಳಗ್ಗೆ ವಾಕಿಂಗ್ ಹೋದಾಗ, ಹೋಗಿ ನೋಡ್ಕೊಂಡು ಬರಬೇಕು,’ ಅಂತ ಅಂದ್ರು.
`ಅಷ್ಟರೊಳಗೆ
ಕಣ್ನು ಮುಚ್ಚಿದ್ರೆ ಏನು ಮಾಡ್ತೀರಿ?’ ಅಂತ ತಮಾಷೆ ಮಾಡಿದೆ.
`ಕಣ್ಣು
ಮುಚ್ಚಿದ್ರೆ ಆ ವಿಗ್ರಹನೇ ನೋಡ್ಕೊಂಡು ಬರೋದು,’ ಅಂತ ಅವರೂ ನಕ್ಕರು.
ಯಾಕೋ
ವಿಷಯ ವಿಕೋಪಕ್ಕೆ ಹೋಗ್ತಾ ಇದೆ ಅನ್ನಿಸ್ತು. ಎರಡು ದಿನ ಬಿಟ್ಟು, ಬೆಳಗ್ಗೆ ಆಫೀಸಿಗೆ ಹೊರಡುವ ಮುಂಚೆ,
ಆ ಮನೆಯನ್ನಾದ್ರೂ ನೋಡ್ಕೊಂಡು ಬರೋಣ ಅಂತ ಆ ಕಡೆ ಹೋದೆ. ನಾನು ಯೋಚನೆ ಮಾಡಿದಂತೆ, ಆ ಮನೆ ಗವಿ ಗಂಗಾಧರೇಶ್ವರ
ದೇವಸ್ಥಾನದ ಹತ್ತಿರ ಅಲ್ಲ, ಪಕ್ಕದಲ್ಲೇ ಇತ್ತು.
ನನಗೆ
ಗೊತ್ತಿದ್ದಂತೆ, ಕೆಂಪೇಗೌಡನಗರ ಪೋಲಿಸ್ ಠಾಣೆಯ ಪಕ್ಕದಲ್ಲಿದ್ದ ಇಡೀ ಗುಡ್ಡವೇ ದೇವಸ್ಥಾನಕ್ಕೆ ಸೇರಿದ್ದು.
ಅದರಲ್ಲಿ, ಹಿಂದುಗಡೆ ಭಾಗದಲ್ಲಿ ಕೆಲವು ಕಲ್ಯಾಣ ಮಂಟಪಗಳು ಮತ್ತು ಯೋಗ ಶಾಲೆ ಇದ್ದಿದ್ದು ನೋಡಿದ್ದೆ.
ಇವುಗಳ ಮಧ್ಯದಲ್ಲಿ ಮನೆ ಇದ್ದಿದ್ದು ಗೊತ್ತಿರಲಿಲ್ಲ.
ಯಾರನ್ನಾದರೂ
ಕೇಳೋಣ ಅಂದ್ರೆ, ಜನಗಳ ಜಾತ್ರೆಯೇ ಇತ್ತು. ಜಾತ್ರೆಯಲ್ಲಿದ್ದಂತೆ ಸಣ್ಣ ಸಣ್ಣ ಅಂಗಡಿಗಳೂ ತಲೆ ಎತ್ತಿದ್ದವು.
ಪೋಲಿಸರನ್ನು ಮಾತಾಡಿಸೋಕೆ ಹೋದ್ರೆ, ಮೈಮೇಲೆ ಬಂದರು. ಅವರಿಗೂ ಎರಡು ದಿನಗಳಿಂದ ಊಟ, ನಿದ್ರೆ ಇಲ್ಲದೆ
ಸಾಕಾಗಿ ಹೋಗಿತ್ತು ಅಂತ ಕಾಣುತ್ತೆ. ಪಕ್ಕದಲ್ಲಿದ್ದ ಸ್ಲಂ ಜನಗಳಂತೂ ಮಜಾ ತಗೊಳ್ತಿದ್ದಂತೆ ಅನ್ನಿಸ್ತು.
ಒಟ್ಟಿನಲ್ಲಿ, ಒಂದು ಹುಚ್ಚಾಸ್ಪತ್ರೆಗೆ ಹೋಗಿ ಬಂದ ಹಾಗಾಯ್ತು.
ಆಮೇಲೆ
ವಿಚಾರಿಸಿದರೆ ಆಯ್ತು ಅನ್ಕೊಂಡು ವಾಪಾಸ್ ಬಂದೆ. ಅವತ್ತಿಡೀ ನಾನು ಈ ಸಾಯಿಬಾಬಾನ ಬಗ್ಗೆ ತಲೆ ಕೆಡಿಸಿಕೊಂಡು,
ಟಿವಿಯಲ್ಲಿ ಬರುತ್ತಿದ್ದ ಕಾರ್ಯಕ್ರಮಗಳನ್ನು ಗಮನವಿಟ್ಟು ನೋಡಿದೆ. ಅಲ್ಲಿಗೆ ಹೋಗಿದ್ದ ಕೆಲವು ಟಿವಿ
ರಿಪೋರ್ಟರ್ ಗಳನ್ನೂ ಮಾತಾಡಿಸಿದೆ.
ಅಗ
ನನಗೆ ಗೊತ್ತಾಗಿದಿಷ್ಟು. ಆ ಜಾಗದಲ್ಲಿ ಕೆಲವು ಅರ್ಚಕರ ಮನೆಗಳೂ ಇವೆ ಮತ್ತು ಬಾಬುವಿನ ಮನೆಯೂ ಇದೆ.
ಆ ಮನೆಯ ಮಾಲಿಕ ವಿಗ್ರಹದ ಹತ್ತಿರಕ್ಕೆ ಯಾವುದೇ ಕ್ಯಾಮೆರಾಗಳನ್ನೂ ಬಿಟ್ಟಿರಲಿಲ್ಲ. ಜನಗಳು ಮಾತ್ರ
ಐದು ಅಡಿ ದೂರದವರೆಗೆ ಹೋಗಬಹುದಿತ್ತು. ಕಾಣಿಕೆಯ ದುಡ್ಡಿನಲ್ಲಿ
ಸಾಯಿಬಾಬಾನ ಗುಡಿ ಕಟ್ಟಿ, ಬಾಬಾನ ಸೇವೆ ಮಾಡುತ್ತಾ ಜೀವನ ಕಳೆಯುವುದಾಗಿ ಆ ಮನೆ ಮಾಲಿಕ ಹೇಳಿದ್ದನಂತೆ.
ನಾನಂತೂ ಅದನ್ನು ನಂಬಲು ತಯಾರಿರಲಿಲ್ಲ.
ಸಾಯಂಕಾಲದ
ಹೊತ್ತಿಗೆ ನನಗೆ ಅನುಮಾನ ಬಲವಾಗಲು ಶುರುವಾಯ್ತು. ಯಾರನ್ನು ಕೇಳುವುದು ಅನ್ನೋದು ಮಾತ್ರ ಗೊತ್ತಾಗಲಿಲ್ಲ.
ಸುಮ್ಮನೆ ಕೆಂಪೇಗೌಡನಗರದ ಪೋಲಿಸ್ ಸ್ಟೇಷನ್ ಗೆ ಫೋನ್ ತಿರುಗಿಸಿದೆ. ಫೋನ್ ಎತ್ತಿದ ಕಾನ್ಸ್ ಟೇಬಲ್
ಜೊತೆ ಸುಮ್ಮನೆ ಮಾತಾಡೋಕೆ ಶುರುಮಾಡ್ದೆ:
`ಏನ್ರೀ?
ಎರಡು ದಿನದಿಂದ ಊಟ, ನಿದ್ರೆ ಏನೂ ಇಲ್ಲ ಅಂತ ಕಾಣುತ್ತೆ? ಎಲ್ಲಾ ಸಾಯಿಬಾಬನ ಕೃಪೆನಾ?’ ಅಂದೆ.
`ಏನು
ಮಾಡೋದು ಸರ್? ಇರ್ತದ್ದಲ್ಲ ನಮಗೆ ಒಂದಲ್ಲಾ ಒಂದು,’ ಅಂದ.
`ಅಲ್ರಿ…
ನೀವೂ ನಂಬ್ತಿರಾ ಇದನ್ನೆಲ್ಲಾ?’ ಅಂದೆ.
`ಏನು
ಮಾಡೋದು ಸರ್? ದೇವರು ಅಂದ ಮೇಲೆ ಅದನ್ನೆಲ್ಲಾ ಪ್ರಶ್ನೆ ಮಾಡೋಕೆ ಆಗುತ್ತಾ?’ ಅಂದ.
`ಅಲ್ರಿ…
ಎರಡು ದಿನದಲ್ಲಿ ತುಂಬಾ ತೊಂದರೆ ಆಗಿರಬೇಕಲ್ಲ?’ ಅಂದೆ.
`ಅಯ್ಯೋ
ಏನು ಹೇಳ್ತೀರಾ ಸರ್? ಬರಿ ಪಿಕ್ ಪಾಕೆಟ್ ಮತ್ತು ಚೈನ್ ಸ್ನ್ಯಾಚಿಂಗ್ ಕೇಸ್ ಗಳು. ಈ ಜನಗಳು ಹುಚ್ಚೆದ್ದು
ಹೋಗಿದ್ದಾರೆ. ಕಳ್ಕೊಂಡ ಮೇಲೆ ಸೀದ ಸ್ಟೇಷನ್ ಗೆ ಬರ್ತಾರೆ,’ ಅಂತ ನಕ್ಕ.
`ಅಲ್ಲ?
ಆ ದೇವಸ್ಥಾನದ ಜಾಗದಲ್ಲಿ ಈ ಬಾಬು ಮನೆ ಹ್ಯಾಗೆ ಬಂತು?’ ಅಂತ ಕೇಳ್ದೆ.
`ಅದು
ಹ್ಯಾಗೆ ಬಂತೋ ಗೊತ್ತಿಲ್ಲ. ಕಾರ್ಪೋರೇಷನ್ ನವರು ಅವರ ಮೇಲೆ ಕೇಸ್ ಹಾಕಿದ್ರು. ಅದೇನೋ ಕಾರ್ಪೋರೇಷನ್
ಕಡೆಗೇ ಕೇಸ್ ಆಯ್ತು ಅಂತ ಯಾರೋ ಮಾತಾಡ್ಕೋತ್ತಿದ್ರು,’ ಅಂದ.
`ಕಾರ್ಪೋರೇಷನ್
ಕಡೆಗೇ ಕೇಸ್ ಆದ್ರೆ ಇನ್ನೂ ಯಾಕೆ ಖಾಲಿ ಮಾಡಿಸಿಲ್ಲ?’ ಅಂತ ಕೇಳ್ದೆ.
`ಅದೇನೋ
ಖಾಲಿ ಮಾಡೋಕೆ ನೋಟಿಸ್ ಕೊಟ್ಟಿದ್ರಂತೆ. ನಂಗೆ ಸರಿಯಾಗಿ ಗೊತ್ತಿಲ್ಲ,’ ಅಂದ.
`ಓ…
ಖಾಲಿ ಮಾಡೋಕೆ ನೋಟಿಸ್ ಕೊಟ್ಟ ತಕ್ಷಣ ಅವರ ಮನೇಲಿ ಸಾಯಿಬಾಬ ಕಣ್ಣು ಬಿಟ್ಟರಂತಾ?’ ಅಂತ ಕೇಳ್ದೆ.
`ದೇವರ
ಬಗ್ಗೆ ಹಾಗೆಲ್ಲ ಮಾತಾಡಬಾರದು ಸರ್. ಯಾವುದೋ ವಿಷಯಕ್ಕೆ, ಇನ್ಯಾವುದೋ ವಿಷಯ ಸೇರಿಸ್ತಿದ್ದೀರಲ್ಲ…
ನೋಡಿ, ಕಲಿಗಾಲದಲ್ಲಿ ದೇವರು ಕಣ್ಣು ಬಿಟ್ಟಿದ್ದಾನೆ. ಒಳ್ಳೆಯದಕ್ಕೋ, ಕೆಟ್ಟದಕ್ಕೋ ಗೊತ್ತಿಲ್ಲ. ನಾನು
ಮಾತ್ರ ದೇವರ ವಿಷಯ ಕೆಟ್ಟದಾಗಿ ಮಾತಾಡೋದಿಲ್ಲ ಸರ್,’ ಅಂದ.
`ಸರಿ,’
ಅಂತ, ಅದೂ ಇದೂ ಮಾತಾಡಿ ಫೋನ್ ಕೆಳಗಿಟ್ಟೆ. ನನಗಂತೂ ಅನುಮಾನನೇ ಉಳಿದಿರಲಿಲ್ಲ, ಬಾಬಾ ಕಣ್ಣು ಬಿಟ್ಟಿದ್ದು
ಯಾಕೆ ಅನ್ನೋದ್ರಲ್ಲಿ. ಆದ್ರೆ, ಆ ಕೇಸ್ ಬಗ್ಗೆ ಯಾರ ಹತ್ರ ವಿಚಾರಿಸೋದು ಅನ್ನೋದು ಮಾತ್ರ ಗೊತ್ತಾಗಲಿಲ್ಲ.
ಆಗಲೇ ಏಳು ಘಂಟೆಯಾಗಿತ್ತು ಮತ್ತು ಕಾರ್ಪೋರೇಷನ್ ಬೀಗ ಹಾಕಿರುತ್ತೆ.
ಸರಿ,
ಕುಶಾಲಳನ್ನು ಕರೆದು ವಿಷಯ ಹೇಳಿದೆ. `ಅಲ್ಲಾ ಕಣೋ, ಎಂಥಾ ದೊಡ್ಡ ಫ್ರಾಡ್ ಅಲ್ವಾ? ನಾನೂ ನಂಬಿರಲಿಲ್ಲ,’
ಅಂದವಳೇ, ಸೀದ ನಮ್ಮ ಎಡಿಟರ್ ಬಲರಾಮರ ಹತ್ತಿರ ಹೋಗಿ ವಿಷಯ ಹೇಳಿದಳು.
ಮನೆಗೆ
ಹೊರಡುತ್ತಿದ್ದ ಬಲರಾಮ್, `ದಿಸ್ ಇಸ್ ಎಬೌಟ್ ರಿಲಿಜಿಯಸ್ ಸೆಂಟಿಮೆಂಟ್ಸ್. ಬಿ ಕಾಶಿಯಸ್ ವೆನ್ ಯು
ಆರ್ ರೈಟಿಂಗ್,’ ಅಂದರು.
ಇಷ್ಟಾದರೆ
ಸಾಕು ಅಂದ್ಕೊಂಡು, ಬಾಬ ಕಣ್ಣುತೆರೆದ ಮನೆ ಕಾರ್ಪೋರೇಷನ್ ಜಾಗದ ಒತ್ತುವರಿ ಅಂತ. ಮಾರನೇ ದಿನ ನೋಡಿದರೆ,
ಎರಡನೇ ಪುಟದ ಮೂಲೆಯಲ್ಲಿ ನನ್ನ ವರದಿ ಮುದುಡಿ ಕೂತಿತ್ತು. ಅವತ್ತು ಕಾರ್ಪೋರೇಷನ್ ಆಫೀಸಿಗೆ ಹೋಗಿ,
ಕೇಸಿಗೆ ಸಂಬಂಧಪಟ್ಟ ಕಾಗದಗಳನ್ನು ತೆಗೆಸಬೇಕು ಅನ್ಕೊಂಡಿದ್ದವನು, ಹಾಳಾಗಿ ಹೋಗ್ಲಿ ಅಂತ ಸುಮ್ಮನಾದೆ.
ಆದರೆ,
ಮಧ್ಯಾಹ್ನದ ಹೊತ್ತಿಗೆ ಪವಾಡ ಜರುಗಿತು. ಮನೆ ಮಾಲಿಕರು ಬಾಬಾ ದರ್ಶನವನ್ನು ನಿಲ್ಲಿಸಿದರು. ಸಾಯಂಕಾಲದ
ಹೊತ್ತಿಗೆ, ಅಲ್ಲಿನ ಜನಜೀವನ ಮೊದಲಿನಂತೆಯೇ ಆಯಿತು.
ಈಗ,
ದಿನಾ ನಾನು ಆ ದಾರಿಯಲ್ಲಿ ತಿರುಗುತ್ತೇನೆ. ಅವತ್ತು ಅಲ್ಲಿ ಏನಾಯ್ತು? ಬಾಬಾ ಏನಾದರೂ ತೆರೆದ ಕಣ್ಣು
ಮುಚ್ಚಿಬಿಟ್ಟರೇ? ಅಥವಾ, ಬಾಬುವಿಗೇ ಬಾಬಾ ಬಗ್ಗೆ ನಂಬಿಕೆ ಕಡಿಮೆಯಾಯ್ತಾ? ಅಂತ ಗೊತ್ತಾಗಲೇ ಇಲ್ಲ.
ಇನ್ನೊಂದು
ಗೊತ್ತಾಗ್ದೆ ಇರೋ ವಿಷಯ ಅಂದ್ರೆ, ಕಾರ್ಪೋರೇಶನ್ ನವರು ಆ ಮನೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡರೋ,
ಇಲ್ಲವೋ ಅನ್ನೋದು………
ಮಾಕೋನಹಳ್ಳಿ
ವಿನಯ್ ಮಾಧವ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ