ಬುಧವಾರ, ಅಕ್ಟೋಬರ್ 31, 2018

ಕಾಳಿಂಗ




ಕಾಳಿಂಗರಾಯನ ಪುನರ್ವಸತಿ ಪುರಾಣ….


`ಅಗಾ… ಅಲ್ಲಿದೆ ನೋಡಿ,’ ಅಂತ ಬಾಲಣ್ಣನ (ಬಾಲಾಜಿ) ಮೇಸ್ತ್ರಿ ಕೈ ತೋರಿಸಿದ. ಕಾಫಿ ಗಿಡದ ಕೆಳಗೆ ಬಗ್ಗಿ ನೋಡಿದಾಗ, ಒಂದಿಪ್ಪತೈದು ಅಡಿ ಕೆಳಗೆ, ಕಾಫಿ ಗಿಡಗಳ ಮಧ್ಯದಲ್ಲಿ ಮರ ಕಸಿ ಮಾಡಿದಾಗ ಕೆಳಗೆ ಬಿದ್ದಿದ್ದ ಒಣಗಿದ ಕೊಂಬೆಗಳ ನೆಡುವೆ ಅರ್ಧ ಅಡಿ ಮುಖ ಮಾತ್ರ ಕಾಣುತ್ತಿತ್ತು.

ಕಾಳಿಂಗ ಸರ್ಪವನ್ನು ಕಾಡಿನಲ್ಲಿ ನೋಡಿದ್ದು ಮೊದಲಲ್ಲದೇ ಹೋದರೂ, ಅದನ್ನು ಹಿಡಿಯುವುದು ನೋಡುವುದು ಮೊದಲನೇ ಸಲವಾದ್ದರಿಂದ ವಿಪರೀತ ಕುತೂಹಲವಿತ್ತು. ಅದನ್ನು ಹಿಡಿದು ಬೇರೆಕಡೆ ಬಿಡುವುದರ ಬಗ್ಗೆ ನನಗೆ ಭಿನ್ನಾಭಿಪ್ರಾಯವಿದ್ದರೂ, ನಾನು ಬಿಳಗಲಿಗೆ ಹೋಗುವುದಕ್ಕಿಂತ ಮುಂಚೆಯೇ ಅದನ್ನು ಹಿಡಿಯುವುದಕ್ಕೆ ಮುಹೂರ್ತ ನಿಗದಿಯಾಗಿತ್ತು. ಮುಂದೇನಾಗುತ್ತೆ ನೋಡೋಣ ಅಂತ ಸುಮ್ಮನಾದೆ.

ಮೂಡಿಗೆರೆಯ ಕಳಸದ ಹತ್ತಿರ ಇರೋ ಈ ಬಿಳಗಲಿಯ ನಂಟು ಕಳೆದುಕೊಳ್ಳೋದು ನನಗೆ ಬಹಳ ಕಷ್ಟ. ಅಪ್ಪನ ತಂಗಿ ಶಾಂತತ್ತೆಯನ್ನು ಅಲ್ಲಿಗೆ ಕೊಟ್ಟಿದ್ದು ಮಾತ್ರವಲ್ಲ, ನನ್ನಜ್ಜಿಯ ತವರು ಮನೆಯೂ ಬಿಳಗಲಿಯೇ. ಚಿಕ್ಕಂದಿನಲ್ಲಿ ಹೆಚ್ಚಿನ ರಜಾದಿನಗಳನ್ನು ಕಳೆದಿರುವುದೂ ಇಲ್ಲೇ. ಬಿಳಗಲಿ ಕುಟುಂಬದ ಎಲ್ಲರೂ ಮಾವ, ಭಾವಂದಿರೇ. ಹಾಗಾಗಿ, ಬಿಳಗಲಿ ಕುಟುಂಬದವರ ಜೊತೆ ನನಗೆ ಕೆಲವು ಅಘೋಶಿತ ಸ್ವಾತಂತ್ರ್ಯಗಳಿವೆ.

ಶಾಂತತ್ತೆ ಮಗ ಅಶೋಕಣ್ಣ ಇರುವ ಮನೆಯೇ ನಾನು ಹುಟ್ಟಿದಾಗ ಹೇಗಿತ್ತೋ, ಹಾಗೇ ಇದೆ. ಸದಾ ಹರಿಯುವ ಹಳ್ಳದ ಸೇತುವೆ ದಾಟಿದರೆ, ಮೂರು ಸುತ್ತಲೂ ಗದ್ದೆ ಬೈಲು, ಮನೆ ಪಕ್ಕದಲ್ಲೊಂದು ಚಿಕ್ಕ ದೇವಸ್ಥಾನ, ಹಿಂದೆ ಗುಡ್ಡ, ಕಾಡು ಮತ್ತೆ ಸುತ್ತಲೂ ಕಣ್ಣು ಹಾಯಿಸುವಷ್ಟೂ ಹಸಿರು. ಮಲೆನಾಡಿನಲ್ಲಿ ಹುಟ್ಟಿ ಬೆಳೆದವರು ಸಹ `ವಾವ್’ ಎನ್ನುವಂಥಹ ಜಾಗ.

ಅವತ್ತು ಅಶೋಕಣ್ಣನ ಎರಡನೇ ಮಗ ಪ್ರತೀಕ್ ನ ಮದುವೆಯ ಹಿಂದಿನ ದಿನದ ಸಮಾರಂಭ. ಮನೆ ತಲುಪಿ ಇನ್ನೂ ಬಂದ ನೆಂಟರನ್ನು ಮಾತಾಡಿಸಿ ಮುಗಿದಿರಲಿಲ್ಲ. ಅಷ್ಟರಲ್ಲಿ ಸುಂಕಸಾಲೆ ರವಿ ಮಾವ ಬಂದವನೇ, `ಅಳಿಯ, ಕಾಳಿಂಗ ಸರ್ಪ ಹಿಡಿಯೋಕೆ ಹೋಗ್ತಿದ್ದೀನಿ,’ ಅಂದ.

`ಎಲ್ಲಿ? ಯಾವಾಗ?’ ಅಂದೆ.

`ಇಲ್ಲೇ ಹಿಂದೆ ಕಣೋ… ಬಾಲು ತೋಟದಲ್ಲಿದೆ. ನಾಲ್ಕೈದು ದಿನದಿಂದ ಅಲ್ಲೇ ಮಲಗಿದೆಯಂತೆ. ಏನಾಗಿದೆ ಅಂತ ಗೊತ್ತಿಲ್ಲ. ಅಲ್ಲೇ ಇದೆ ಅಂದ್ರೆ ಏನಾದ್ರೂ ಆಗಿರ್ಬೇಕು,’ ಅಂದ. `ಇರಬಹುದು… ನೀನೇ ಹಿಡೀತ್ತೀಯಾ?’ ಅಂತ ಕೇಳಿದೆ.

`ಯಾರೋ ಬರ್ತಾರಂತೆ. ಇಲ್ಲದೇ ಹೋದರೆ ನಾನೇ ಹಿಡಿಯೋದು,’ ಅಂದ. ಪೂರ್ತಿ ನಂಬಿಕೆ ಬರದೇ ಹೋದರೂ, ತಲೆ ಅಲ್ಲಾಡಿಸಿದೆ. ಅಷ್ಟರಲ್ಲೇ ನೆನಪಾಯಿತು. ಯಾವಾಗಲೂ ಬೆಂಗಳೂರು ಬಿಡುವಾಗ ಕ್ಯಾಮರಾ ಕಾರಿನಲ್ಲಿ ಹಾಕಿಕೊಳ್ಳುತ್ತಿದ್ದ ನಾನು, ಮದುವೆ ಮನೆಗೆ ಏಕೆ ಅಂತ ಬಿಟ್ಟು ಬಂದಿದ್ದೆ. ಪಿಚ್ಚೆನಿಸಿತು, ಅಂತೂ ಮೊಬೈಲ್ ನಲ್ಲಿ ಎಷ್ಟಾಗುತ್ತೋ ನೋಡೋಣ ಅಂತ ಸುಮ್ಮನಾದೆ.

ಊಟ ಮುಗಿದರೂ ಹಾವು ಹಿಡಿಯುವ ಸುದ್ದಿಯೇ ಇರಲಿಲ್ಲ. ಸ್ವಲ್ಪ ಹೊತ್ತು ಬಿಟ್ಟು ರವಿ ಮಾವನನ್ನು ಕೇಳಿದಾಗ, ಹಿಡಿಯುವವರು ಮತ್ತು ಫಾರೆಸ್ಟ್ ಗಾರ್ಡ್ ಊಟ ಮಾಡುತ್ತಿದ್ದಾರೆ, ಮುಗಿದ ತಕ್ಷಣ ಹೋಗೋಣ ಅಂದ. ಅವರ ಊಟ ಮುಗಿದ ತಕ್ಷಣ, ನಾನು, ಅಣ್ಣ ವೆಂಕಟೇಶ್, ರವಿ ಮಾವ, ಶ್ರೀನಾಥ್ ಎಲ್ಲರೂ ಬಾಲಣ್ಣನ ಜೀಪಿನಲ್ಲಿ ಹೊರಟೆವು. ನಮ್ಮ ಜೀಪಿನ ಹಿಂದೆ ಕಾರಿನಲ್ಲಿ ಇಬ್ಬರು ಮತ್ತು ಬೈಕಿನಲ್ಲಿ ಫಾರೆಸ್ಟ್ ಗಾರ್ಡ್ ಬಂದರು.

ನಮಗಾಗೇ ಕಾಯುತ್ತಿದ್ದ ಬಾಲಣ್ಣನ ಮೇಸ್ತ್ರಿ ಮತ್ತು ತೋಟದ ಕೆಲಸದವರು ಸೀದ ಕಾಫಿ ಗಿಡಗಳ ಮಧ್ಯೆ ನೆಡೆಯೋಕೆ ಶುರುಮಾಡಿದರು. ನಾನು ಅವರ ಬೆನ್ನ ಹಿಂದೆಯೇ ಇದ್ದೆ. ಸ್ವಲ್ಪ ದೂರ ಹೋದವರೇ, ಬಗ್ಗಿ ನೋಡುತ್ತಾ, ಕಾಫಿಗಿಡಗಳ ನೆಡುವೆ ತೋರಿಸಿದಾಗ, ನನಗೆ ಕಾಣಿಸಿದ್ದು ಬರೀ ಅರ್ಧ ಅಡಿಯಷ್ಟು ಮಾತ್ರ. ಹಿಂದೆ ಬರುತ್ತಿದ್ದ ಆರು ಜನಗಳಿಗೆ ನಾನೇ ಜೋರಾಗಿ ಹೇಳಿದೆ – ಇಲ್ಲೇ ಇದೆ, ಅಂತ.

ಒಂದು ನಿಮಿಷ ಹಾಗೇ ಇದ್ದ ಕಾಳಿಂಗ ಸರ್ಪ, ತನ್ನ ತಲೆಯನ್ನು ಸರಕ್ಕನೆ ಹಿಂದಕ್ಕೆ ಎಳೆದುಕೊಂಡು ಮಾಯವಾಯಿತು. ಒಣಗಿದ ಸೌದೆ ಮತ್ತು ಸೊಪ್ಪುಗಳ ನೆಡುವೆ ಏನೂ ಕಾಣಲಿಲ್ಲ. ಹಾವು ಹಿಡಿಯಲು ಬಂದ ರಫೀಕ್ ಮತ್ತು ಅಹ್ಮದ್ ರಿಗೆ ಕೆಳಗಿನಿಂದ ಬರಲು ಹೇಳಿ, ನಾನೂ ಬಳಸಿಕೊಂಡು ಕೆಳಗಿನಿಂದ ಕಾಫಿಗಿಡಗಳ ನಡುವೆ ಬಂದೆ. ಯಾಕೋ ಕೆಳಗೆ ಬಿದ್ದಿದ್ದ ಎಲ್ಲಾ ಕೊಂಬೆ ಮತ್ತು ಎಲೆಗಳೂ ಒಂದೇ ಥರ ಕಾಣೋಕೆ ಶುರುವಾಯಿತು. `ಈ ಕೊಂಬೆ ಹತ್ತಿರ ಇತ್ತು ಅಂತ ಕಾಣುತ್ತೆ,’ ಅಂತ ಹೇಳುವಾಗಲೇ, ಮೇಲಿನಿಂದ ನನಗೆ ಹಾವು ತೋರಿಸಿದ ಮೇಸ್ತ್ರಿ, `ಇಲ್ಲ ಅಣ್ಣ, ಆ ಮುಂದಿನ ಕೊಂಬೆ ಹತ್ತಿರ ಇತ್ತು,’ ಅಂದ. ಅವನು ನಿಂತಿದ್ದ ಜಾಗ ನೋಡಿದಾಗಲೇ ನಾನು ಎಲ್ಲಿದ್ದೇನೆ ಅನ್ನುವುದು ಸರಿಯಾಗಿ ಗೊತ್ತಾಗಿದ್ದು. ಹಾಗೇ ಕೆಳಗೆ ಕಣ್ಣು ಹಾಯಿಸಿದೆ…. ಯಾಕೋ, ಕಾಳಿಂಗ ತಪ್ಪಿಸಿಕೊಂಡಿತು ಅಂತ ಅನ್ನಿಸೋಕೆ ಶುರುವಾಯಿತು.

ಅಹ್ಮದ್ ಸುಮ್ಮನೆ ಸುತ್ತಾ ಕಣ್ಣಾಡಿಸುತ್ತಿದ್ದ. ರಫೀಕ್ ಮಾತ್ರ ನನಗೆ ಎಷ್ಟು ಕಾಣಿಸಿತು? ಹೇಗೆ ತಲೆ ಹಿಂದೆ ಎಳೆದುಕೊಂಡಿತು ಅಂತ ಪ್ರಶ್ನೆ ಮಾಡುತ್ತಾ, ಅಕ್ಕಪಕ್ಕದಲ್ಲಿದ್ದ ಮರಗಳ ಬುಡಗಳ ಕಡೆ ಕಣ್ಣಾಡಿಸುತ್ತಾ ಇದ್ದ. ನಾನು ಪಕ್ಕದಲ್ಲಿದ್ದ ನೇರಳೆ ಮರದ ಕಡೆಗೆ ಹೋಗಲು ಹೆಜ್ಜೆ ಹಾಕಿದ ತಕ್ಷಣ, ನನ್ನ ಕೈ ಹಿಡಿದು ಬದಿಗೆಳೆದ. ಸುತ್ತಲೂ ನೋಡಿದೆ, ಏನೂ ಕಾಣಿಸಲಿಲ್ಲ.
ನಿಧಾನವಾಗಿ ಮರದ ಬುಡದ ಹತ್ತಿರ ಕುಳಿತ ರಫೀಕ್, `ಓ, ಬುಡದಲ್ಲಿ ಒಟ್ಟೆ (ತೂತು) ಇವೆ… ಇಲ್ಲಿ ನೋಡಿ, ಹಾವು ಓಡಾಡಿ ಅಂತ ಕಾಣ್ತದೆ, ದಾರಿ ಸವೆದಿದೆ,’ ಅಂತ ತೋರಿಸಿದ. ಮರದ ಎರಡು ಬೇರುಗಳ ಮಧ್ಯದಲ್ಲಿ ಇದ್ದ ಬಿಲದ ಥರದ ತೂತಿನ ದಾರಿಯೇನೋ ಸವೆದು, ಮಣ್ಣು ನುಣುಪಾಗಿ ಹೋಗಿತ್ತು. ಆದರೆ, ನಾನು ನೋಡಿದ ಹಾವಿನ ಗಾತ್ರಕ್ಕಿಂತ ಬಿಲದ ಬಾಗಿಲು ಚಿಕ್ಕದಾಗಿದೆ ಅನ್ನಿಸಿತು. ಒಬ್ಬೊಬ್ಬರಾಗಿ ಬಂದು ಮರದ ಸುತ್ತ ನಿಲ್ಲೋಕೆ ಶುರು ಮಾಡಿದರು.

ಮೊಬೈಲ್ ಫೋನಿನ ಟಾರ್ಚ್ ಹಾಕಿ, ರಫೀಕ್ ಒಳಗೆ ಬಗ್ಗಿ ನೋಡಿದ. `ಕಾಣ್ತಿದೆಯಾ?’ ಅಂತ ನಾನು ಕೇಳಿದಾಗ, ಅದಕ್ಕೆ ಉತ್ತರ ಕೊಡುವ ಗೋಜಿಗೆ ಹೋಗದೆ, `ಒಂದು ಕಡ್ಡಿ ಕೊಡಿ,’ ಅಂದ. ಪಕ್ಕದಲ್ಲಿದ್ದ ಮೇಸ್ತ್ರಿ ಒಂದು ಒಣಗಿದ ಕಡ್ಡಿ ಕೊಟ್ಟಾಗ, `ಇದರಲ್ಲಿ ಚುಚ್ಚಿದರೆ, ಅಲ್ಲಿ ಹಾವು ಇದ್ದರೆ, ಅದಕ್ಕೆ ಗಾಯವಾಗುತ್ತೆ. ಹಸಿ ಕಡ್ಡಿ ಕೊಡಿ. ಒಳಗೆ ತಾಗಿದರೆ ಬಗ್ಗಬೇಕು, ಅಂತಹದು,’ ಅಂದ. ಒಂದು ಹಸಿ ಕಾಫಿ ಗಿಡದ ಚಿಗುರು ರೆಂಬೆಯನ್ನು ಒಳಗೆ ಚುಚ್ಚಿ ನೋಡಿದ ರಫೀಕ್, ಏನೂ ಸಿಗಲಿಲ್ಲ ಅನ್ನುವಂತೆ ತಲೆ ಆಡಿಸಿದ. ಆದರೆ, ದೃಷ್ಟಿ ಮಾತ್ರ ಅಲ್ಲಿಂದ ಕದಲಲಿಲ್ಲ.

`ಇವೆರೆಡು ಬೇರುಗಳನ್ನು ಬಿಡಿಸಬೇಕು… ಪಿಕಾಸಿ ತರಿಸಿ’, ಅಂತ ರಫೀಕ್ ಹೇಳಿದ ತಕ್ಷಣ, ಒಂದಿಬ್ಬರು ಆಳುಗಳು ಮೇಲೆ ಸಲಕರಣೆ ಇಡಲು ಕಟ್ಟಿರುವ ಕೋಣೆಗೆ ಓಡಿದರು. ಅಷ್ಟು ಹೊತ್ತಿಗಾಗಲೇ ಮರದ ಸುತ್ತ ಜನ ಕಡಿಮೆಯಾಗಿದ್ದರು. ಹಾರೆ ಮತ್ತು ಪಿಕಾಸಿ ಬಂದ ತಕ್ಷಣ, ಎರಡು ಬೇರುಗಳ ಮಧ್ಯ ಇದ್ದ ಮಣ್ಣನ್ನು ತೆಗೆಯೋಕೆ ಶುರುಮಾಡಿದರು. ಮೊಬೈಲ್ ನಲ್ಲಿ ಇದ್ದ ಟಾರ್ಚ್ ಬೆಳಕು ಬಿಟ್ಟು ಸಂದಿಯೊಳಗೆ ಬಗ್ಗಿನೋಡಿ, ತಲೆ ಆಡಿಸುವುದು ಮುಂದುವರೆದಿತ್ತು. ಆ ಮರಕ್ಕೆ ಹಬ್ಬಿದ ಮೆಣಸಿನ ಬಳ್ಳಿಯನ್ನೂ ಕತ್ತರಿಸಿ ಹಾಕಲಾಯಿತು. ಮಣ್ಣು ಸರಿಸಿದ ತಕ್ಷಣ, ಮರದ ಕೆಳಗೆ ಟೊಳ್ಳಾಗಿದ್ದು, ಗೆದ್ದಲು ಗೂಡಿನ ಅವಶೇಷಗಳು ಕಾಣಿಸಿದವು. ಅಂತೂ ಹಾವಿನ ಪತ್ತೆಯಿರಲಿಲ್ಲ. ಆದರೆ, ಮರದ ಕೆಳಗೆ ತುಂಬಾ ಜಾಗ ಇರುವುದು ಗೊತ್ತಾಯಿತು. ಗೆದ್ದಲುಗಳು ಹಾವಿಗೆ ಅರಮನೆ ಕಟ್ಟಿವೆ ಅಂತ ಅನ್ನಿಸ್ತು.

ರಫೀಕ್ ಮತ್ತು ಅಹ್ಮದ್ ತುಂಬಾ ಎಚ್ಚರಿಕೆಯಿಂದ ಮಣ್ಣು ತೆಗೆಯೋಕೆ ಹೇಳುತ್ತಿದ್ದ. ಸ್ವಲ್ಪ ಹೊತ್ತಿಗೆ, ಬೇರು ಕತ್ತರಿಸಲು ಮರ ಕುಯ್ಯುವ ಯಂತ್ರ ಸಹ ಬಂತು. ಯಾಕೋ, ನಾವು ಯೋಚನೆ ಮಾಡಿದ್ದಕ್ಕಿಂತ ಹೆಚ್ಚಿನ ಸಮಯ ಆಗುತ್ತೆ ಅಂತ ಅನಿಸಿ, ಗಿಡಗಳ ಮಧ್ಯದಿಂದ ರಸ್ತೆಗೆ ಬಂದು ನಿಂತೆ.

ರಸ್ತೆಯಲ್ಲಿದ್ದ ಬಾಲಣ್ಣ,  `ನೋಡಲ್ಲಿ ಕಾಣ್ತಾ ಇದ್ಯಲ್ಲ, ಅದೇ ಮಲ್ಲೇಶನ ಬೆಟ್ಟ,’ ಅಂದ.

`ಓ… ಆ ಕಡೆಯಿಂದ ಮಳೆ ಈಕಡೆಗೇ ಬರ್ತಾ ಇರೋ ಹಾಗಿದೆ?’ ಅಂದೆ.

`ಅದಕ್ಕೆ ಆಳುಗಳು ಕೊಡೆ ತಂದಿಟ್ಟಿದ್ದಾರೆ ನೋಡು,’ ಅಂದ ಬಾಲಣ್ಣ. ಅದ್ಯಾವ ಮಾಯೆಯಲ್ಲೋ, ಬಾಲಣ್ಣನ ಕೆಲಸದವರು ಆರು ಕೊಡೆಗಳು ಮತ್ತೆ ಎರಡು-ಮೂರು ದೊಡ್ಡ ಪ್ಲಾಸ್ಟಿಕ್ ಹಾಳೆಗಳನ್ನು ತಂದಿಟ್ಟಿದ್ದರು. ನೋಡ್ತಾ ಇದ್ದ ಹಾಗೆ ಮಳೆ ಬಂದೇ ಬಿಡ್ತು. ಕೊಡೆ ಹಿಡಿದುಕೊಂಡು ಕೆಳಗೆ ಕಾಲನ್ನು ನೋಡಿದರೆ, ಒಂದೆರೆಡು ಜಾಗದಲ್ಲಿ ಜಿಗಣೆ ಕಚ್ಚಿದ ರಕ್ತದ ಗುರುತು ಕಾಣಿಸಿತು. ಸಾಯಲಿ ಅಂತ ಸುಮ್ಮನಾದೆ.

ಹದಿನೈದಿಪ್ಪತ್ತು ನಿಮಿಷ ಕಳೆದಿರಬಹುದು. ಮರ ಕುಯ್ಯುವ ಯಂತ್ರದ ಸದ್ದು ಮತ್ತು ಮಣ್ಣು ತೆಗೆಯುವ ಸದ್ದು ಕೇಳುತ್ತಲೇ ಇತ್ತು. ಒಮ್ಮೆಗೆ ಗಿಡಗಳ ಮಧ್ಯದಿಂದ ಹೊರಗೆ ಓಡಿಬಂದ ಇಬ್ಬರು ಹೆಣ್ಣಾಳುಗಳು `ಹಾವು,’ ಅಂದರು. ನಾನು ಗಿಡಗಳೊಳಗೆ ನುಗ್ಗಿ, ನೇರಳೆ ಮರದ ಹತ್ತಿರ ಹೋದೆ. ಪ್ಲಾಸ್ಟಿಕ್ ಹೊದ್ದಿದ್ದ ಅಹ್ಮದ್, ನನಗೆ ಬೆನ್ನು ಹಾಕಿ, ಮರದ ಬೇರುಗಳ ನೆಡುವೆ ಮಾಡಿದ್ದ ಜಾಗದಲ್ಲಿ ಬಗ್ಗಿ ನೋಡುತ್ತಿದ್ದ. ಹಾವನ್ನು ಹಿಡಿಯುವ ಇಕ್ಕಳವೊಂದನ್ನು ಹಿಡಿದುಕೊಂಡ ರಫೀಕ್, ಅವನ ಪಕ್ಕ ನಿಂತಿದ್ದ.

ಒಂದೆರೆಡು ನಿಮಿಷದ ಬಳಿಕ, ಅಹ್ಮದ್ ಕೈ ಹಾಕಿ ಹಾವನ್ನು ಹೊರಗೆ ಎಳೆಯಲು ಪ್ರಯತ್ನಿಸಿದ. ಆದರೆ, ಮಳೆಯ ನೀರೂ ಸೇರಿಕೊಂಡು, ಎಳೆದಂತೆಲ್ಲ ಜಾರಿ ವಾಪಾಸ್ ಹೋಗುತ್ತಿತ್ತು. ಇಕ್ಕಳವನ್ನು ಮರದ ಕೆಳಗೆ ಹಾಕಿ, ಹಾವನ್ನು ಹೊರಗೆ ಎಳೆಯಲು ಪ್ರಯತ್ನಿಸಿದವನೇ, ಹಾಗೇ ಇಕ್ಕಳವನ್ನು ಪಕ್ಕಕ್ಕಿಟ್ಟರು. `ತಲೆ ಸಿಕ್ತಾ ಇಲ್ಲ. ಸೊಂಟಕ್ಕೆ ಕ್ಲ್ಯಾಂಪ್ ಹಾಕಿದರೆ ಅದಕ್ಕೆ ಏಟಾಗುತ್ತೆ. ಒಂದು ಸಣ್ಣ ಕೊಕ್ಕೆ ಮಾಡ್ಕೊಡಿ. ಕಾಫೀ ಗಿಡದ್ದಾದರೆ ಒಳ್ಳೆಯದು. ಗಟ್ಟಿ ಇರ್ತದೆ,’ ಅಂದ.

ಅಹ್ಮದ್ ಬೆನ್ನಿನಿಂದಾಗಿ, ಒಳಗೇನಾಗುತ್ತಿದೆ ಎನ್ನುವುದು ನನಗೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಮಳೆಯಲ್ಲೇ ಗಿಡದೊಳಗೆ ನುಗ್ಗಿದ್ದರಿಂದ ಬಟ್ಟೆಯೆಲ್ಲ ಒದ್ದೆಯಾಗಿತ್ತು. ಪಕ್ಕದ ಗಿಡದೊಳಗೆ ಹೋಗೋಣ ಅಂತ ನೋಡಿದರೆ, ರವಿ ಮಾವ ಅಲ್ಲಿ ನಿಂತುಕೊಂಡು ವಿಡಿಯೋ ಮಾಡುತ್ತಿದ್ದ. ಇರಲಿ ಅಂತ ಅಲ್ಲೇ ನಿಂತುಕೊಂಡೆ. ಎರಡೇ ನಿಮಿಷದಲ್ಲಿ ಕೊಕ್ಕೆಯೊಂದು ಅಹ್ಮದ್ ಕೈಸೇರಿತು. ಕೊಕ್ಕೆಯನ್ನು ಒಳಗೆ ಹಾಕಿ ಅರ್ಧ ಹಾವನ್ನು ಎಳದೇ ಬಿಟ್ಟ. ಏನಾಗ್ತಿದೆ ಅಂತ ನೋಡುವಷ್ಟರಲ್ಲಿ, ಮತ್ತೊಮ್ಮೆ ಹಾವಿನ ಮೈಯನ್ನು ಹೊರಗೆಳೆದು, ಕೊಕ್ಕೆಯನ್ನು ಅಲ್ಲೇ ಬಿಟ್ಟು, ಕೈ ಹಾಕಿ ಹೊರಗೆಳೆದಾಗ ನನಗೆ ಕಾಣಿಸಿದ್ದು ಅಹ್ಮದ್ ಕೈಯಲ್ಲಿದ್ದ ಕಾಳಿಂಗದ ತಲೆ. ಯಾವ ಗಳಿಗೆಯಲ್ಲಿ ಅಂತ ಗೊತ್ತಿಲ್ಲ, ರಫೀಕ್ ಅದರ ಬಾಲ ಹಿಡ್ಕೊಂಡಿದ್ದ....
ಮೊದಲು ನೋಡಿದಾಗ ನಾನೆಂದುಕೊಂಡಿದ್ದರಗಿಂತ ತಲೆ ದಪ್ಪವಾಗಿತ್ತು. ಮಳೆ ನೀರಿನಿಂದಾಗಿ, ಹಾವು ಒದ್ದಾಡಿದಾಗಲೆಲ್ಲ ಅಹ್ಮದ್ ಮತ್ತು ರಫೀಕರ ಕೈ ಜಾರುತ್ತಿತ್ತು ಅಂತ ಕಾಣುತ್ತೆ. ಹಂತ ಹಂತವಾಗಿ ತಮ್ಮ ಹಿಡಿತವನ್ನು ಬಿಗಿಗೊಳಿಸುತ್ತಿದ್ದರು. ಹಾವನ್ನು ಹಿಡಿದುಕೊಂಡೇ, ಬಗ್ಗಿಕೊಂಡು, ಗಿಡಗಳ ನೆಡುವಿನಿಂದ ರಸ್ತೆಗೆ ಬಂದರು. ಅಲ್ಲಿಂದ ಮೇಲೆ ಸಮತಟ್ಟಾದ ಜಾಗಕ್ಕೆ ನೂರೈವತ್ತು ಮೀಟರ್ ಗಳಾದರೂ ಇತ್ತು.

ನಾನು ಸ್ವಲ್ಪ ಹಿಂದಿದ್ದೆ. ಹನ್ನೊಂದರಿಂದ ಹನ್ನೆರೆಡು ಅಡಿ ಉದ್ದವಿದ್ದ ಹಾವು ಭಾರವಾಗಿ ಕಾಣುತ್ತಿತ್ತು. ಮಳೆ ಕಾರಣ ಜಾರುತ್ತಿದ್ದ ಹಾವಿನ ತಲೆಯನ್ನು ಒಂದೆರೆಡು ಬಾರಿ ಕೆಳಕ್ಕೆ ಅಹ್ಮದ್ ಇಟ್ಟರೂ, ರಫೀಕ್ ಬಾಲದಿಂದ ಕೈ ತೆಗೆಯುತ್ತಿರಲಿಲ್ಲ. ಹಾವು ತೋಟದೊಳಗೆ ಓಡಿಹೋಗಲು ಪ್ರಯತ್ನಿಸುತ್ತೇ ಹೊರತು, ಯಾವುದೇ ಪ್ರತಿರೋಧ ವ್ಯಕ್ತಪಡಿಸುತ್ತಿರಲಿಲ್ಲ.

ಆಗ ಶುರುವಾಯ್ತು ಜಿಜ್ಞಾಸೆ… ಹಾವನ್ನು ಚೀಲದೊಳಗೆ ಹಾಕಿಕೊಂಡು ಅಲ್ಲಿಗೆ ತೆಗೆದುಕೊಂಡು ಹೋಗಬೇಕೋ, ಅಥವಾ ಮತ್ತೆ ಹಾಗೇ ಎತ್ತಿಕೊಂಡು ಹೋಗಬೇಕೋ?  ಅಂತ. ಹಿಡಿದವರೇನೋ ಚೀಲಕ್ಕೆ ಹಾಕಲು ತಯಾರಾದರು, ಆದರೆ, ಫಾರೆಸ್ಟ್ ಗಾರ್ಡ್ ಮಾತ್ರ, ಒಂದು ಸಲ ಚೀಲಕ್ಕೆ ಹಾಕಿದರೆ, ಮತ್ತೆ ಹಾವನ್ನು ಹೊರಗೆ ತೆಗೆಯೋಕೆ ಬಿಡೋದಿಲ್ಲ ಅಂತ ಶುರು ಮಾಡಿದ. ಆದರೆ ರಫೀಕ್ ಅದಕ್ಕೆ ಒಪ್ಪಲಿಲ್ಲ. `ನಾವು ಇದನ್ನ ಚಾರ್ಮಾಡಿಗೆ ತಗೊಂಡು ಹೋಗಿ ಬಿಡಬೇಕು. ದಾರಿಯಲ್ಲಿ ಯಾರಾದರೂ ಕೇಳಿದರೆ, ನಾವು ಯಾರ ತೋಟದಲ್ಲಿ ಹಿಡಿದೆವು ಅನ್ನೋದನ್ನ ಹೇಳಬೇಕಾಗುತ್ತೆ. ಹಾಗಾಗಿ, ತೋಟದ ಯಜಮಾನರ ಜೊತೆ ನಮಗೆ ಹಾವಿನ ಫೋಟೋ ಬೇಕು. ಅದಕ್ಕಾದರೂ ಹೊರಗೆ ತೆಗೆಯಲೇ ಬೇಕು,’ ಅಂತ ಹಟ ಹಿಡಿದ.

ನನಗ್ಯಾಕೋ ಎರಡೂ ಅಪಾಯಕಾರಿ ಅಂತ ಅನ್ನಿಸಿತು. ಏನಾಗುತ್ತೋ ನೋಡೋಣ ಅಂತ ಸುಮ್ಮನಾದೆ. ಹಾವನ್ನು   ಹಾಗೇ ಹೊತ್ತುಕೊಂಡು ಹೋಗುವುದಕ್ಕೆ ಎಲ್ಲರ ವಿರೋಧ ಬಂತು. ಹಾಗೇ, ಚೀಲದಿಂದ ಮತ್ತೆ ತೆಗೆಯಲೇ ಬೇಕು ಅನ್ನುವವರ ಸಂಖ್ಯೆಯೂ ಹೆಚ್ಚಾಯಿತು. ಪೆಚ್ಚಾದ ಗಾರ್ಡ್, `ಏನಾದ್ರೂ ಮಾಡ್ಕೊಳ್ಳಿ,’ ಅಂತ ಸುಮ್ಮನಾದ. ಹಾವು ಚೀಲದೊಳಗೆ ಸೇರಿತು.

ತೋಟದ ಗೇಟಿನ ಹತ್ತಿರ ಚಪ್ಪರದ ಹಾಗಿರುವ, ಗೋಡೆಗಳಿಲ್ಲದ ಒಂದು ಹೆಂಚಿನ ಚಾವಣಿ ಇತ್ತು. ಹಾವನ್ನು ಅದರ ಕೆಳಗೆ ನೆಲದಲ್ಲಿ ಮೊದಲು ಬಿಟ್ಟರು. ಕಾಳಿಂಗ ಸರ್ಪದ ಬಗ್ಗೆ ಬಗೆಬಗೆಯ ಕಥೆಗಳನ್ನು ಕೇಳಿದ್ದ ಕೆಲಸದವರಿಗೆ ನಿರಾಸೆಯಾಗಿರಬೇಕು. `ಹೆಡೆನೇ ಎತ್ತುತ್ತಿಲ್ಲ? ಎಷ್ಟು ಎತ್ತರ ನಿಲ್ಲುತ್ತೇ?’ ಅಂತ ಪ್ರಶ್ನೆ ಕೇಳುತ್ತಿದ್ದರು. ಮೂವತ್ತಕ್ಕಿಂತಲೂ ಹೆಚ್ಚು ಕಾಳಿಂಗ ಹಿಡಿದಿದ್ದೇವೆ ಎಂದು ಹೇಳಿಕೊಂಡ ರಫೀಕ್ ಸುಮ್ಮನೆ ನಗುತ್ತಾ, `ಹಾಗೆಲ್ಲ ಸುಮ್ಮನೆ ಯಾರಿಗೂ ಕಚ್ಚಲ್ಲ. ಕಚ್ಚಿಸಿಕೊಂಡವರು ಉಳಿಯೋಲ್ಲ. ಕಳಸದ ಭಟ್ಟರನ್ನ ಬಿಟ್ಟರೆ, ಕಾಳಿಂಗದ ಕೈಯಲ್ಲಿ ಕಚ್ಚಿಸಿಕೊಂಡವರನ್ನು ನಾನು ಕೇಳೇ ಇಲ್ಲ. ಇದು ಇದ್ದ ಕಡೆ ಬೇರೆ ಹಾವು, ಹೆಗ್ಗಣಗಳ ಕಾಟನೇ ಇರಲ್ಲ. ಮನುಷ್ಯರು ಬರೋದು ಕಂಡ್ರೆ ಸಾಕು, ಓಡಿ ಹೋಗಿ ಅವಿತುಕೊಳ್ತದೆ. ಎಲ್ಲರೂ ಹೋದಮೇಲೆ ಹೊರಗೆ ಬರುತ್ತೆ,’ ಅಂದ.

ಬಾಲಣ್ಣನ ಮೇಸ್ತ್ರಿ, `ಓ, ಇದು ಇಲ್ಲೇ ಇದಿದ್ದಿದ್ದರೆ ಏನೂ ಆಗ್ತಿರಲಿಲ್ಲ, ಅಂತ ಹೇಳಿದಾಗ, ರಫೀಕ್ ಸುಮ್ಮನೆ ನಕ್ಕ. ಕೆಲಸದವರಿಂದಾದಿಯಾಗಿ ಎಲ್ಲರೂ ಅವರವರ ಮೊಬೈಲ್ ಫೋನ್ ಗಳಲ್ಲಿ ಫೋಟೋ ತೆಗೆಯುವುದರಲ್ಲಿ ನಿರತರಾದರು. ಹಾವು ಮಾತ್ರ ತಪ್ಪಿಸಿಕೊಂಡು ಹೋಗಲು ಜಾಗವಿದೆಯೇ ಎಂದು ಹುಡುಕುತ್ತಿತ್ತು. ರಫೀಕ್ ಅದಕ್ಕೆ ಅವಕಾಶ ಕೊಡದೆ, ಬಾಲ ಹಿಡಿದುಕೊಂಡಿದ್ದ. ಅಹ್ಮದ್ ಹಿಂದುಗಡೆಯಿಂದ ನಿಧಾನವಾಗಿ ಹಾವಿನ ಬೆನ್ನನ್ನು ತಡುವುತ್ತಾ ಬಂದವನು, ಒಮ್ಮೆ ಮೆಲ್ಲಗೆ ಅದರ ತಲೆ ಸವರಿದ.

ಒಂದೈದು ನಿಮಿಷದ ಬಳಿಕ, ಅಹ್ಮದ್ ಮತ್ತು ರಫೀಕ್ ಹಾವನ್ನೆತ್ತಿಕೊಂಡು ಸ್ವಲ್ಪ ಬಯಲಿಗೆ ತಂದರು. ಅಷ್ಟು ಹೊತ್ತಿಗೆ ಮಳೆಯೂ ನಿಂತಿತ್ತು. ಅವರಿಗೆ ಬಾಲಣ್ಣನ ಜೊತೆ ಒಂದು ಫೋಟೋ ಬೇಕಿತ್ತಷ್ಟೆ. ಬಾಲಣ್ಣ ಫೋಟೋಗೆ ಬರೋ ಹೊತ್ತಿಗೆ, ರವಿ ಮಾವ, ಶ್ರೀನಾಥ್ ಎಲ್ಲರೂ ಫೋಟೋಗಳನ್ನು ತೆಗೆಸಿಕೊಂಡಾಗಿತ್ತು. ಹಾವು ನಿಧಾನವಾಗಿ ಚೀಲದೊಳಗೆ ಸೇರಿದಾಗ, ಮನಸ್ಸಿಗೆ ಪಿಚ್ಚೆನಿಸಿತು. ಅಣ್ಣ ವೆಂಕಟೇಶ್ ಮಾತ್ರ ಫಾರೆಸ್ಟ್ ಗಾರ್ಡ್ ಗೆ, ರಫೀಕ್ ಮತ್ತು ಅಹ್ಮದ್ ಜೊತೆ ಹೋಗಿ, ಚಾರ್ಮಾಡಿಯಲ್ಲಿ ಬಿಡುವವರೆಗೆ ಇರಬೇಕೆಂದು ಹೇಳುತ್ತಿದ್ದ. ಕಾಳಿಂಗ ಸರ್ಪದ ಬಗ್ಗೆ ಇರುವಂತೆಯೇ, ಅವುಗಳನ್ನು ಹಿಡಿಯುವವರ ಬಗ್ಗೆಯೂ ಬಹಳಷ್ಟು ಕಥೆಗಳಿವೆ. ಅದರ ವಿಷವನ್ನು ಕ್ಯಾನ್ಸರ್ ಚಿಕಿತ್ಸೆಗಾಗಿ ಬಳಸುತ್ತಾರೆ ಮತ್ತು ಅದನ್ನು ಹಿಡಿದವರಿಂದ ಕಾಳಿಂಗ ಸರ್ಪವನ್ನು ಕೊಂಡು, ಮಾರುವವರ ದೊಡ್ಡ ಜಾಲವೇ ಇದೆ, ಅಂತ. ಇದರಲ್ಲಿ ಬಹಳಷ್ಟು ನಿಜವಿದ್ದರೂ, ಈ ಇಬ್ಬರು ಹುಡುಗರ ಬಗ್ಗೆ ಅನುಮಾನ ಪಡುವಂಥಹದು ನನಗೇನೂ ಕಾಣಿಸಲಿಲ್ಲ. 

ಕಾಳಿಂಗ ಸರ್ಪ ಆರು ಅಡಿ ಎತ್ತರ ನಿಂತು ವಿಷವನ್ನು ಉಗುಳುತ್ತದೆ, ಅದು ಅಟ್ಟಿಸಿಕೊಂಡು ಬಂದು ಕಚ್ಚುತ್ತದೆ, ಕಚ್ಚಿದ ಅರ್ಧ ನಿಮಿಷದೊಳಗೆ ಜೀವ ಹೋಗುತ್ತದೆ… ಇತ್ಯಾದಿ ಕಥೆಗಳನ್ನು ನಾವು ಮುಂಚಿನಿಂದಲೂ ಕೇಳಿಕೊಂಡೇ ಬೆಳೆದವರು.

ಮೊದಲನೆಯದಾಗಿ, ಕಾಳಿಂಗ ಸರ್ಪ ವಿಷಪೂರಿತ ಹಾವುಗಳಲ್ಲೇ ದೊಡ್ಡದು ಎನ್ನುವುದು ನಿಜ. ಹಾಗೆ ನೋಡಿದರೆ, ನಾವು ಹಿಡಿದ ಕಾಳಿಂಗ ಚಿಕ್ಕದು ಎಂದೇ ಹೇಳಬೇಕು. ಸಾಧಾರಣವಾಗಿ 13-14 ಅಡಿಗಳಷ್ಟು ಉದ್ದವಿರುತ್ತವೆ. 16 ಅಡಿ ಉದ್ದದ ಕಾಳಿಂಗ ಸರ್ಪವಿರುವುದೂ ನಿಜ. ಸಾಧಾರಣವಾಗಿ ಹಾವುಗಳು ತಮ್ಮ ಉದ್ದದ ಮೂರನೇ ಒಂದರಷ್ಟು ಎತ್ತರ ನಿಲ್ಲಬಲ್ಲವು. ಆ ಲೆಖ್ಖದಲ್ಲಿ ಹೇಳುವುದಾದರೆ ಮಾತ್ರ ಇವು ಐದು ಅಡಿಗಳಷ್ಟು ಎತ್ತರದವರೆಗೆ ನಿಲ್ಲಬಲ್ಲವು. ನೋಡಿದವರು ಯಾರೂ ಇಲ್ಲ.
ಕಾಳಿಂಗ ಸರ್ಪ ವಿಷ ಉಗುಳುವುದೂ ಒಂದು ಮೂಢನಂಬಿಕೆಯೇ ಹೊರತು ಸತ್ಯವಲ್ಲ. ಎಲ್ಲಾ ಹಾವುಗಳಂತೆ, ಇವುಗಳಿಗೂ ಕಣ್ಣು ಮಂದ ಮತ್ತುಕಿವಿ ಇರುವುದಿಲ್ಲ. ಅವುಗಳೇನಿದ್ದರೂ, ನಾಲಿಗೆಯಿಂದ ವಾಸನೆ ಹಿಡಿಯುತ್ತವೆ. ಸಾಧಾರಣವಾಗಿ, ಅವುಗಳು ತಾವು ಬದುಕುವ ಜಾಗದಲ್ಲಿ ಪ್ರಾದೇಶಿಕ ಪ್ರಾತಿಬಲ್ಯತೆ ಹೊಂದಿರುತ್ತವೆ. ಬೇರೆ ಕಾಳಿಂಗ ಸರ್ಪವನ್ನು ಆ ಜಾಗದಲ್ಲಿ ಬರಲು ಬಿಡುವುದಿಲ್ಲ. ತನ್ನ ಪ್ರದೇಶದಲ್ಲಿ ಬರುವ ಬೇರೆ ಹಾವುಗಳು, ನವಿಲಿನ ಮೊಟ್ಟೆಗಳು, ಇಲಿ, ಹೆಗ್ಗಣಗಳು ಮುಂತಾದ ಚಿಕ್ಕ ಪ್ರಾಣಿಗಳನ್ನು ತಿಂದು ಬದುಕುತ್ತವೆ. ನಿಜ ಹೇಳಬೇಕೆಂದರೆ, ಕಾಳಿಂಗ ರೈತ ಮಿತ್ರನೇ ಹೊರತು, ಶತ್ರುವಂತೂ ಅಲ್ಲವೇ ಅಲ್ಲ.

ಇಷ್ಟೆಲ್ಲಾ ಬಲಶಾಲಿಯಾದ ಈ ಹಾವು, ಅತೀವ ನಾಚಿಕೆ ಸ್ವಭಾವದ್ದು. ಮನುಷ್ಯರ ಹೆ‍ಜ್ಜೆ ಸದ್ದು ಕೇಳಿದ ತಕ್ಷಣ ಓಡಿಹೋಗಿ ಬಿಲದಲ್ಲಿ ಸೇರಿಕೊಳ್ಳುತ್ತವೆ. ನೇರಳೆ ಮರದ ಪೊಟರೆಯೊಳಗೆ ಆರಾಮವಾಗಿದ್ದ ಈ ಕಾಳಿಂಗ ಹೇಗೆ ನಾಲ್ಕೈದು ದಿನ ಹೊರಗಡೆ ಇತ್ತು ಅನ್ನೋದು ನನಗೆ ಅರ್ಥವಾಗಲಿಲ್ಲ.

ಹೋದ ವರ್ಷ, ಕಳಸದ ಹತ್ತಿರ ಪ್ರಫುಲ್ಲದಾಸ್ ಭಟ್ಟರು ತಾವೇ ಹಿಡಿದ ಕಾಳಿಂಗ ಸರ್ಪಕ್ಕೆ ಬಲಿಯಾದರು. ಬಹಳಷ್ಟು ಕಾಳಿಂಗಗಳನ್ನು ಹಿಡಿದಿದ್ದ ಭಟ್ಟರು, ಅತೀವ ಆತ್ಮವಿಶ್ವಾಸದಿಂದ ಫೋಟೋ ತೆಗೆಸುವ ಸಲುವಾಗಿ ಹಾವಿನ ತಲೆಯನ್ನು ತಮ್ಮ ಎದೆಯ ಬಳಿಗೆ ತಂದರು. ಮೊದಲೇ ಗಾಭರಿಯಾಗಿದ್ದ ಹಾವು, ಹಿಡಿತ ಸ್ವಲ್ಪ ಸಡಿಲವಾದ ತಕ್ಷಣ, ಅವರ ಎದೆಗೆ ಮತ್ತು ಕೈಗೆ ಕಚ್ಚಿತಂತೆ. ಬಹುಶಃ, ವಿಶ್ವದಲ್ಲಿ ಕಾಳಿಂಗ ಸರ್ಪದ ಕಡಿತಕ್ಕೆ ಬಲಿಯಾದ ಮೂರನೇ ವ್ಯಕ್ತಿ ಭಟ್ಟರು ಅಂತ ಕಾಣುತ್ತೆ.

ರಫೀಕ್ ಮತ್ತು ಅಹ್ಮದ್ ಚೀಲವನ್ನು ಕಾರಿನೊಳಗೆ ಹಾಕಿಕೊಂಡು ಹೊರಟಾಗ ಸ್ವಲ್ಪ ಬೇಸರವಾಯಿತು. ಕಾಳಿಂಗಕ್ಕೆ ಹೆದರಿ ಕೆಲಸದವರು ತೋಟದ ಆ ಕಡೆಗೆ ಹೋಗುವುದನ್ನೇ ನಿಲ್ಲಿಸಿದ್ದರು. ಹಾಗಾಗಿ, ಬಾಲಣ್ಣನಿಗೆ ಹೇಳಿದ್ದರೂ ಹಿಡಿಸದೇ ಬಿಡುತ್ತಿರಲಿಲ್ಲ.
ನಾನು ಅಲ್ಲಿಗೆ ತಲುಪುವ ಮೊದಲೇ ಆ ಕಾಳಿಂಗದ ಹಣೆಬರಹ ನಿರ್ಧಾರವಾಗಿದ್ದರಿಂದ, ನಾನೂ ಸುಮ್ಮನಾದೆ…


ಮಾಕೋನಹಳ್ಳಿ ವಿನಯ್ ಮಾಧವ












 



1 ಕಾಮೆಂಟ್‌:

  1. ಕಾಳಿಂಗಸರ್ಪ ಪುರಾಣವೂ ಸೊಗಸಾಗಿದೆ. ಹಾವಿನ ಗುಣ ಧರ್ಮ ಹೇಳುತ್ತಲೇ ಅದು ನಿರುಪದ್ರವಿ ಎನ್ನುವುದನ್ನು ಓದುಗರ ಮನಸ್ಸಿನಲ್ಲಿ ನೆಲೆಸಿ ಬಿಟ್ಟಿದ್ದೀರಿ. ತೇಜಸ್ವಿ ಬರವಣಿಗೆ ನೆನಪಿಗೆ ಬಂತು.

    ಪ್ರತ್ಯುತ್ತರಅಳಿಸಿ