ಶುಕ್ರವಾರ, ಆಗಸ್ಟ್ 24, 2012

ಸರಗಳ್ಳ


ಹಿ ಬಿಲ್ಟ್ ದಿ ಹೌಸ್ ಚೈನ್ ಬೈ ಚೈನ್

ಆಗಲೇ ಐದೂವರೆಯಾಗ್ತಾ ಬಂದಿತ್ತು. ಬೆಳಗ್ಗಿನಿಂದ ಏನೂ ಬರೆದಿರಲಿಲ್ಲ. ತಲೆ ಹೋಗುವಂತದೇನೂ ಬರೆಯೋಕೂ ಇರಲಿಲ್ಲ. ಆದ್ರೂ ಕೈಯಲ್ಲಿದ್ದ ಸಣ್ಣ ಪುಟ್ಟ ಕ್ರೈಂ ಸುದ್ದಿಯಾದ್ರೂ ಬರೆದು ಮುಗಿಸಿರುತ್ತಿದ್ದೆ. ಇವತ್ತು ಅದೂ ಮಾಡಿರಲಿಲ್ಲ.
ನೋಟ್ ಬುಕ್ ತೆಗೆದು ಹಾಗೇ ಕಣ್ಣಾಡಿಸಿದೆ. ಒಂದು ಕೊಲೆ, ಎರಡು ಸುಲಿಗೆ, ಎರಡು ಅಪಘಾತ ಮತ್ತು ಒಂದು ಸಣ್ಣ ಪ್ರೆಸ್ ನೋಟ್. ಸಾಯಂಕಾಲ ಕೋರ್ಟ್ ನಲ್ಲೂ ಏನೂ ಸಿಕ್ಕಿರಲಿಲ್ಲ.
ಸಾಧಾರಣವಾಗಿ ಬೆಳಗ್ಗಿನ ಸುದ್ದಿಯನ್ನು ಬರೆದೇ ಕೋರ್ಟ್ ಗೆ ಹೋಗ್ತಿದ್ದೆ. ಕನ್ನಡ ಪ್ರಭದ ವರದಿಗಾರರಾಗಿದ್ದ ಶ್ರೀಶ ಅದನ್ನು ನನಗೆ ಹೇಳಿಕೊಟ್ಟಿದ್ದರು. `ಸ್ಟೋರಿ ಇಟ್ಕೊಂಡು ಕಾಯೋದು ಹೆಣ ಇಟ್ಕೊಂಡ ಹಾಗೆ ಕಣ್ರೀ. ತಕ್ಷಣ ಬರೆದು ಮುಗಿಸಬೇಕು. ಇಲ್ಲದೇ ಹೋದರೆ, ಹೆಣದ ಥರ ಕೊಳೆಯೋಕೆ ಶುರುವಾಗುತ್ತೆ, ಅಷ್ಟೆ,’ ಅಂದಿದ್ದರು.
ಇವತ್ತೊಂದು ದಿನ ಬಿಟ್ಟು, ಯಾವಾಗಲೂ ಅದನ್ನು ಪಾಲಿಸುತ್ತಿದ್ದೆ. ನೋಟ್ ಬುಕ್ಕಿನಲ್ಲಿದ್ದ ಸುದ್ದಿಗಳನ್ನು ಬರೆದ ಮೇಲೆ, ಪ್ರೆಸ್ ನೋಟಿನ ಕಡೆ ಕಣ್ಣಾಡಿಸಿದೆ. ಮೂರೇ ಪ್ಯಾರಾಗ್ರಾಫ್… ಯಾವುದೋ ಸರಗಳ್ಳನನ್ನು ಸಿಸಿಬಿ ಯವರು ಹಿಡಿದು, ಹನ್ನೆರೆಡು ಸರಗಳನ್ನು ವಶಪಡಿಸಿಕೊಂಡಿದ್ದರು.
ತೊಂಬತ್ತರ ಕೊನೆಯ ಭಾಗದವರೆಗೂ ಸರಗಳ್ಳತನ ಅಂದರೆ ಜನ ಮಾತಾಡಿಕೊಳ್ಳುವ ಸುದ್ದಿ. ಸರಗಳ್ಳರ ಕೆಲವು ಗುಂಪುಗಳೇ ಹುಟ್ಟಿಕೊಂಡಿದ್ದೆವು. ಸರಗಳ್ಳತನವಾದಾಗ ಒಂದೆರೆಡು ಸಾಲಿನ ಸುದ್ದಿ ಮಾಡುತ್ತಿದ್ದೆವು. ಅದನ್ನು ಪೋಲಿಸರು ಹಿಡಿದಾಗ ಅಷ್ಟೇನೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.
ಆ ಪ್ರೆಸ್ ನೋಟನ್ನು ಶಪಿಸಿಕೊಂಡೆ. ಸೈಕ್ಲೋಸ್ಟೈಲ್ ಮಾಡಿದ ಆ ಕಾಗದವನ್ನು ಓದುವುದೇ ಒಂದು ತೆನಿಖೆ ಇದ್ದಂತೆ. ಸರಗಳ್ಳನ ಹೆಸರು ರವಿ ಅಂತಲೂ, ಆತನು ಬೆಂಗಳೂರಿನ ದಕ್ಷಿಣ ಭಾಗವಾದ ಜಯನಗರದ ಸುತ್ತ ಮುತ್ತ ಸರಗಳ್ಳತನ ಮಾಡುತ್ತಿದ್ದನೆಂದೂ ಇತ್ತು. ಮುಂದಿನದನ್ನು ಓದಲು ಆಗುತ್ತಿರಲಿಲ್ಲ. ಅವನು ಸರಗಳ್ಳತನ ಮಾಡಿದ….. ಕನಕಪು…. ಅಂತ ಅಸ್ಪಷ್ಟವಾಗಿ ಏನೋ ಇತ್ತು.
ಆ ಪ್ರೆಸ್ ನೋಟನ್ನ ಡೆಕ್ಕನ್ ಹೆರಾಲ್ಡ್ ನ ಊಮನ್ ಜಾನ್ ಕೈಯಿಂದ ಕಿತ್ತುಕೊಂಡು ಬಂದಿದ್ದೆ. ಅದೇ ಸಮಯಕ್ಕೆ ನಮ್ಮ ಬ್ಯುರೋ ಛೀಫ್ ಮಟ್ಟು ನನ್ನನ್ನು ಕರೆದು, `ವಾಟ್ ಇಸ ದೆರ್ ಇನ ಕ್ರೈಂ ಪಾ? ಪೇಜಸ್ ಅರ್ ಲುಕಿಂಗ್ ಲೈಕ್ ಫುಟ್ ಬಾಲ್ ಗ್ರೌಂಡ್ ಪಾ… ಚರ್ನ್ ಔಟ್ ಸಮ್ ಸ್ಟೋರಿ ನೋ?’ ಅಂತ ತಮಾಷೆ ಮಾಡಿದ್ರು. `ಇದೊಳ್ಳೆ ಕಥೆ. ಹನುಮಂತರಾಯ ಹಗ್ಗ ಮೇಯೋವಾಗ, ಪೂಜಾರಿ ಶಾವಿಗೆ ಬೇಡಿದ್ನಂತೆ,’ ಅನ್ಕೊಂಡು ವಾಪಾಸ್ ನನ್ನ ಜಾಗಕ್ಕೆ ಬಂದೆ.
ಒಂದೈದು ನಿಮಿಷ ತಲೆ ಕೆರೆದುಕೊಂಡರೂ, ಏನೋ ಹೊಳೆಯಲಿಲ್ಲ. ಮೂಲೆಯಲ್ಲಿ ಮುದ್ದೆಯಾಗಿದ್ದ ಪ್ರೆಸ್ ನೋಟ್ ತಗೊಂಡು ಮತ್ತೆ ಓದೋಕೆ ಪ್ರಯತ್ನ ಮಾಡಿದೆ. ಕೊನೆಗೆ ಸಿಟ್ಟು ಬಂದು, ಸಿಸಿಬಿ ಡಿಸಿಪಿ ಯಾಗಿದ್ದ ಉಲ್ಫತ್ ಹುಸೇನ್ ರವರಿಗೆ ಫೋನ್ ಮಾಡ್ದೆ.
ಪ್ರೆಸ್ ನೋಟ್ ಸರಿಯಾಗಿ ಪ್ರಿಂಟ್ ಆಗಿಲ್ಲ ಅಂತ ಬೆಂಡೆತ್ತಬೇಕು ಅನ್ಕೊಂಡು, `ಏನ್ಸಾರ್, ನಿಮ್ಮ ಪ್ರೆಸ್ ನೋಟಲ್ಲಿ ಕೊನೆ ಪ್ಯಾರಾಗ್ರಾಫ್ ಕಾಣ್ತಾನೇ ಇಲ್ಲ?’ ಅಂತ ಶುರು ಹಚ್ಕೊಂಡೆ. ಉಲ್ಫತ್ ಬೇರೆ ಕಾಲೇಜಿನಲ್ಲಿ ನನ್ನ ಚಿಕ್ಕಮ್ಮನ ಸಹಪಾಠಿಯಾಗಿದ್ದವರು. ನೇರವಾಗಿ ಜಗಳವಾಡೋಕೂ ಆಗ್ತಿರಲಿಲ್ಲ. ಯಾಕೇಂದ್ರೆ, ಅವರಿಗೆ ಜಗಳವಾಡಿ ಅಭ್ಯಾಸ ಇರಲಿಲ್ಲ.
`ಅದೇನ್ರೀ… ಅದು, ಅವನು ಸರಗಳ್ಳತನ ಮಾಡಿದ ದುಡ್ಡಲ್ಲಿ, ಕನಕಪುರದಲ್ಲಿ ಒಂದು ಮನೆ ಕಟ್ತಾ ಇದ್ದ ಅಂತ. ಸೈಕ್ಲೋಸ್ಟೈಲ್ ಮಾಡೋವಾಗ, ಅದು ಸರಿಯಾಗಿ ಬಂದಿಲ್ಲ. ನಮ್ಮವರರೂ ನೋಡ್ದೆ ಹಂಚಿಬಿಟ್ಟಿದ್ದಾರೆ,’ ಅಂದ್ರು.
ನನಗೆ ಜಗಳ ಮಾಡೋದು ಮರ್ತೇ ಹೋಯ್ತು. `ಸರ್, ಐದೇ ನಿಮಿಷದಲ್ಲಿ ನಿಮ್ಮ ಆಫೀಸಲ್ಲಿ ಇರ್ತೀನಿ. ಎಲ್ಲೂ ಹೋಗಬೇಡಿ,’ ಅಂದವನೇ ಹೊರಟೆ. ಹಾಗೇ ಮಟ್ಟೂರವರ ಛೇಂಬರ್ ದಾಟುವಾಗು, `ಛೀಫ್, ಐ ವಿಲ್ ಬಿ ಬ್ಯಾಕ್ ಇನ್ ಟೆನ್ ಮಿನಿಟ್ಸ್, ಐ ಗಾಟ್ ಎ ಗುಡ್ ಸ್ಟೋರಿ,’ ಅಂತ ಕೂಗಿಕೊಂಡು ಓಡಿದೆ. `ಟೆಲ್ ಮಿ ವಾಟ್ ಇಸ್ ಇಟ್,’ ಅಂತ ಮಟ್ಟೂ ಕೂಗಿದ್ದು ಕಿವಿಗೆ ಬಿದ್ದರೂ, ಅದಕ್ಕೆ ಉತ್ತರಿಸುವ ಗೋಜಿಗೆ ಹೋಗಲಿಲ್ಲ.
ಉಲ್ಫತ್ ಮುಂದೆ ಕೂತವನೇ, `ಸರ್, ಮೊದಲಿಂದ ಸರಿಯಾಗಿ ಹೇಳಿ… ಇವನು ಬರೀ ಚೈನ್ ಕದ್ದೇ ಮನೆ ಕಟ್ಟಿದ್ದಾನಾ?’ ಅಂದೆ.
`ಇನ್ನೂ ಪೂರ್ತಿಯಾಗಿಲ್ಲ. ಕಟ್ತಾ ಇದ್ದಾನೆ. ಅದಕ್ಕೆ ಪೂರ್ತಿ ದುಡ್ಡು ಚೈನ್ ಕದ್ದೇ ಮಾಡಿದ್ದು,’ ಅಂತ ಹೇಳ್ತಾ, ಒಂದು ಅರ್ಧ ಕಟ್ಟಿದ್ದ ಎರಡಂತಸ್ತಿನ ಮನೆ ಫೋಟೋ ತೋರಿಸಿ, `ಇದು ಪೂರ್ತಿ ಆಗೋಕ್ಕೆ ಹನ್ನೆರೆಡರಿಂದ ಹದಿಮೂರು ಲಕ್ಷ ಆಗುತ್ತೆ. ಆಗಲೇ ಎಂಟರಿಂದ ಹತ್ತು ಲಕ್ಷ ಖರ್ಚು ಮಾಡಿದ್ದಾನೆ,’ ಅಂದ್ರು.
 `ಅಲ್ಲ ಸರ್, ಇವನು ಹನ್ನೆರೆಡು ಸರ ಕದ್ದು ಹತ್ತು ಲಕ್ಷ ಸಂಪಾದನೆ ಮಾಡಿದ್ನಾ?’ ಅಂತ ಕೇಳಿದೆ.
`ಇಲ್ಲಾರಿ, ಅದೊಂದು ದೊಡ್ಡ ಕಥೆ,’ ಅಂತ ಉಲ್ಫತ್ ಹೇಳೋಕೆ ಶುರುಮಾಡಿದ್ರು.
ರವಿ ಕನಕಪುರದ ಪಕ್ಕದ ಹಳ್ಳಿಯವನಾದ್ರೂ, ಅವನ ವಿಷಯ ಕನಕಪುರದಲ್ಲಿ ಯಾರಿಗೂ ಗೊತ್ತಿಲ್ಲ. ಯಾರ ಹತ್ತಿರವೂ ಮಾತಾಡದ ಅವನು, ಅವನ ತಂದೆಯ ಐದೆಕೆರೆ ಜಮೀನಿನಲ್ಲಿ ಇದ್ದ. ಕುಡಿಯುತ್ತಿರಲಿಲ್ಲ, ಸಿಗರೇಟು ಸೇದುತ್ತಿರಲಿಲ್ಲ ಮತ್ತು ಹುಡುಗಿಯರನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಮನುಷ್ಯರ ಸಹವಾಸವನ್ನೇ ಮಾಡುತ್ತಿರಲಿಲ್ಲ.
ಹಾಗೇನೇ, ಒಂದು ಯಮಾಹಾ ಮೋಟಾರ್ ಸೈಕಲ್ ಖರೀದಿಸಿದ. ಅವನಿಗೆ ಮೋಟಾರ್ ಸೈಕಲ್ ಹತ್ತಿ ಬೆಂಗಳೂರಿಗೆ ಬರುವುದು ಒಂದು ಶೋಕಿ. ಆ ಮೋಟಾರ್ ಸೈಕಲ್ ಗೆ ಮೂರು ಬಣ್ಣದ ಪೆಟ್ರೋಲ್ ಟ್ಯಾಂಕ್ ಮತ್ತು ಸೈಡ್ ಬಾಕ್ಸ್ ಗಳನ್ನೂ ಖರೀದಿಸಿದ್ದ. ಬೆಂಗಳೂರಿಗೆ ಬಂದು ಅವನು ಏನು ಮಾಡ್ತಾನೆ ಅನ್ನೋದು ಅವನ ಮನೆಯವರಿಗೂ ಗೊತ್ತಿರಲಿಲ್ಲ.
ಒಂದು ಸಲ, ಮನೆಯಲ್ಲಿ ಹೊಸ ಮನೆ ಕಟ್ಟುವ ವಿಷಯ ಪ್ರಸ್ತಾಪವಾಯಿತು.  ಆಗ ರವಿ ಒಳ್ಳೇ ಮನೆ ಕಟ್ಟುವ ವಿಷಯ ಹೇಳಿದ. ಅಲ್ಲಿಂದ ಮನೆ ಕಟ್ಟಲು ಬೇಕಾಗುವ ದುಡ್ಡನ್ನು ಅವನೇ ಹೊಂದಿಸಲು ಶುರುಮಾಡಿದ. ಬೆಂಗಳೂರಲ್ಲಿ ಮಗ ಬ್ಯುಸಿನೆಸ್ ಮಾಡ್ತಿದ್ದಾನೆ ಅಂತ ಮನೆಯವರು ತಿಳಿದಿದ್ದರು.
ಬೆಂಗಳೂರಿಗೆ ಬರುವಾಗ ರವಿಯು ತನ್ನ ಮೋಟಾರ್ ಸೈಕಲ್ ನ ನಾಲ್ಕು ನಂಬರ್ ಗಳಲ್ಲಿ ಯಾವುದಾದರೂ ಒಂದೋ, ಎರಡೋ ನಂಬರ್ ಗಳ ಮೇಲೆ ಗ್ರೀಸ್ ಹಚ್ಚುತ್ತಿದ್ದ. ಹಾಗಾಗಿ, ನೋಡುವವರಿಗೆ, ಒಂದೋ, ಎರಡೋ ನಂಬರ್ ಇದ್ದಂತೆ ಕಾಣುತ್ತಿತ್ತು. ಪ್ರತೀ ಸಲ ಟ್ಯಾಂಕ್ ಬದಲಾಯಿಸುವುದರಿಂದ, ಅದರ ಬಣ್ಣ ಬೇರೆ ಅಂತ ಆಗುತ್ತಿತ್ತು. ಒಂದು ಸಲ ಬೆಂಗಳೂರಿಗೆ ಬಂದರೆ, ಎಂಟರಿಂದ ಹತ್ತು ಸರ ಕದಿಯುತ್ತಿದ್ದ ಮತ್ತು ನೆಟ್ಟಗೆ ಊರಿಗೆ ವಾಪಾಸ್ ಹೋಗುತ್ತಿದ್ದ. ಅವುಗಳಲ್ಲಿ ಒಂದೆರೆಡು ಘಟನೆಗಳು ಪತ್ರಿಕೆಗಳಲ್ಲಿ ಬಂದರೆ, ಉಳಿದವನ್ನು ಪೋಲಿಸರು ಮುಚ್ಚಿಹಾಕುತ್ತಿದ್ದರು.
ರವಿಗೆ ಇನ್ನೊಂದು ಅಭ್ಯಾಸವಿತ್ತು. ಸರಗಳ್ಳತನ ಮಾಡುವಾಗ ಬರೀಕಾಲಿನಲ್ಲಿ ಮೋಟಾರ್ ಸೈಕಲ್ ಓಡಿಸುತ್ತಿದ್ದ. ತನ್ನ ಚಪ್ಪಲಿಯನ್ನು ಕನಕಪುರ ರಸ್ತೆಯ ಒಂದು ಕಾಡಿನಲ್ಲಿ ಇಟ್ಟು ಬರುತ್ತಿದ್ದ. ವಾಪಾಸ್ ಹೋಗುವಾಗ, ಹಾಕಿಕೊಂಡು ಹೋಗುತ್ತಿದ್ದ. ಬರಿಗಾಲ ಸರಗಳ್ಳನ ವಿಷಯವನ್ನು ಒಂದಿಬ್ಬರು ಸರ ಕಳೆದುಕೊಂಡ ಹೆಂಗಸರು ಪೋಲಿಸರಿಗೆ ಹೇಳಿದ್ದರು.
ಹೀಗಿದ್ದಾಗ ಒಂದು ಸಲ ರವಿಯನ್ನು ಸಂಚಾರ ಪೋಲಿಸರು ತಡೆದು ನಿಲ್ಲಿಸಿ ಅವನ ಲೈಸೆನ್ಸ್ ಮತ್ತು ಮೋಟಾರ್ ಸೈಕಲ್ ನ ದಾಖಲೆಗಳನ್ನು ಕೇಳಿದರು. ಅದರಲ್ಲೋಬ್ಬ ಕಾನ್ಸ್ ಟೇಬಲ್ ಮುಂಚೆ ಜಯನಗರ ಠಾಣೆಯಲ್ಲಿ ಕ್ರೈಂ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಅವನು ಬರಿಗಾಲ ಸರಗಳ್ಳನ ಬಗ್ಗೆ ಕೇಳಿದ್ದ. ಬರಿಗಾಲಲ್ಲಿ ದಾಖಲೆಗಳನ್ನು ತಂದುಕೊಟ್ಟ ರವಿಯನ್ನು ಚಪ್ಪಲಿ ಬಗ್ಗೆ ಕೇಳಿದ. ರವಿ, ತಾನು ಶಬರಿಮಲೈಗೆ ಹೋಗುತ್ತಿರುವುದಾಗಿ ಹೇಳಿದ. ಜೀನ್ಸ್ ಮತ್ತು ಟೀ ಶರ್ಟ್ ಹಾಕಿದ ಹುಡುಗ, ಕುತ್ತಿಗೆಯಲ್ಲಿ ಮಾಲೆಯನ್ನೂ ಹಾಕದೆ ಶಬರಿಮಲೈಗೆ ಹೋಗೋದನ್ನು ನಂಬಲು ಕಾನ್ಸ್ ಟೇಬಲ್ ಸಿದ್ದವಿರಲಿಲ್ಲ. ಅಲ್ಲೇ ಹಿಡಿದು ಜೇಬನ್ನು ತಲಾಶ್ ಮಾಡಿದಾಗ, ಎರಡು ಚಿನ್ನದ ಸರಗಳು ಹೊರಕ್ಕೆ ಬಂದವು.
ರವಿಯನ್ನು ಹಿಡಿದು ಸಿಸಿಬಿಗೆ ಕೊಡಲಾಯ್ತು. ಆದರೆ, ಐದೇ ದಿನದೊಳಗೆ ಅವನ ತಂದೆ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿ, ತಮ್ಮ ಮಗನನ್ನು ಹುಡುಕಿ ಕೊಡಬೇಕು ಅಂತ ಕೋರ್ಟ್ ಮೊರೆ ಹೋದರು.
``ನಮ್ಮ ಪ್ರಕಾರ ಇವನು ನೂರು ಸರಗಳ್ಳತನವಾದರೂ ಮಾಡಿದ್ದಾನೆ. ಹನ್ನೆರೆಡು ಕೇಸ್ ರಿಕವರಿಯಾಗುವುದರೊಳಗೆ ಅವನಪ್ಪ ಕೋರ್ಟ್ ಗೆ ಹೋದ. ಹಾಗಾಗಿ ಈಗ ರೆಗ್ಯುಲರೈಸ್ ಮಾಡಿದೆವು. ಮತ್ತೆ ಪೋಲಿಸ್ ಕಸ್ಟಡಿಗೆ ತಗೊಂಡು ರಿಕವರಿ ಶುರುಮಾಡಬೇಕು. ಒಂದು ಸಲ ರೆಗ್ಯುಲರೈಸ್ ಆದರೆ, ಬಾಯಿ ಬಿಡೋದು ಕಷ್ಟ,’ ಅಂದರು.
ನಾನು ಆ ಮನೆಯ ಫೋಟೊ ತೆಗೆದುಕೊಂಡು ಸೀದ ಆಫೀಸಿಗೆ ಬಂದವನೇ, ವರದಿ ಬರೆಯೋಕೆ ಶುರು ಮಾಡಿದೆ. ಮೊದಲು ತಲೆಗೆ ಬಂದ ವಾಕ್ಯವೇ, `ಹಿ ಬಿಲ್ಟ್ ದಿ ಹೌಸ್ ಚೈನ್ ಬೈ ಚೈನ್,’ ಅಂತ. ನಾನು ವರದಿ ಬರೆಯುವಾಗ, ಮಟ್ಟು ಹಿಂದುಗಡೆಯಿಂದ ಬಂದು, ನಾನು ಏನು ಬರೀತಾ ಇದ್ದೀನಿ ಅಂತ ಇಣುಕಿ ನೋಡಿ ಹೋಗಿದ್ದೂ ಗೊತ್ತಾಗಿರಲಿಲ್ಲ. ಅವರು ಮೀಟಿಂಗ್ ಮುಗಿಸಿ ಮನೆಗೆ ಹೋಗುವಾಗ ಮಾತ್ರ ನನಗೆ ಹೇಳಿದರು: ಲೌಲಿ ಸ್ಟೋರಿ ಪಾ’ ಅಂತ.
ಮಾರನೇ ದಿನ ಪೋಲಿಸ್ ಕಮೀಷನರ್ ಆಫೀಸಿಗೆ ಹೋದಾಗ ಡೆಕ್ಕನ್ ಹೆರಾಲ್ಡ್ ನಿಂದ ಸುಬ್ರಹ್ಮಣ್ಯ ಬಂದಿದ್ದ. `ಒಳ್ಳೆ ಸ್ಟೋರಿ ಕಣೋ,’ ಅಂತ ಹೇಳಿದಾಗ, ಸುಮ್ಮನೆ ಹಲ್ಲು ಕಿರಿದೆ.
`ನಿಂಗೆ ಪ್ರೆಸ್ ನೋಟ್ ಕೊಡೋದೂ ಕಷ್ಟ. ಬೆಳಗ್ಗೆನೆ ಬೈಸ್ಕೋಬೇಕಾಗುತ್ತೆ,’ ಅಂತ ಹಿಂದುಗಡೆಯಿಂದ ಧ್ವನಿ ಬಂದಾಗ ತಿರುಗಿ ನೋಡಿದೆ.
ಊಮನ್ ಜಾನ್ ನಗುತ್ತಾ ನಿಂತಿದ್ದ.


ಮಾಕೋನಹಳ್ಳಿ ವಿನಯ್ ಮಾಧವ್

1 ಕಾಮೆಂಟ್‌: