ಶುಕ್ರವಾರ, ಸೆಪ್ಟೆಂಬರ್ 7, 2012

ಅಸಮಾನತೆ



ಆ ಕಲ್ಲುಗಳ ಮಧ್ಯದಲ್ಲಿ ಜೀವಕ್ಕೆ ಬೆಲೆ ಇರಲಿಲ್ಲ


`ಥೂತ್ತೆರಿ...ಯಾವಾಗಲೂ ಹೀಗೇ ಆಗೋದು. ನಾನೊಂದು ಕಡೆ ಇದ್ರೆ, ಇನ್ನೊಂದು ಕಡೆ ಏನಾದ್ರೂ ಆಗಿರ್ತದೆ...ಅಂತ ಬೈಕೊಂಡೆ. ಅವತ್ತು ಬೆಳಗ್ಗಿನಿಂದ ಯಲಹಂಕದಲ್ಲಿ ಯಾವುದೋ ಒಂದು ಸೆಮಿನಾರ್ ನಲ್ಲಿ ಕೂತಿದ್ದೆ. ಇನ್ನೇನು ಹೊರಡಬೇಕು ಅನ್ನೊವಾಗ ಗೊತ್ತಾಯ್ತು.. ಬೇಗೂರಿನ ಕ್ವಾರಿಯಲ್ಲಿ ಡೈನಮೈಟ್ ಸಿಡಿದು ಒಬ್ಬ ಸತ್ತು ಹೋದ, ಅಂತ.
ಈಗ ಆಫೀಸಿಗೆ ವಾಪಾಸ್ ಬಂದು, ಅಲ್ಲಿಂದ ಹೊಸೂರು ರಸ್ತೆ ತಲುಪಿ, ಬೇಗೂರಿನ ಕಾಡು ದಾರಿಗೆ ತಿರುಗಿಕೊಳ್ಳಬೇಕು. ಎಷ್ಟೇ ಬೇಗ ಹೋದರೂ, ಎರಡು ಘಂಟೆ ಬೇಕಿತ್ತು. ಬೆಳಗ್ಗಿನಿಂದ ಇದ್ದ ಸುದ್ದಿಗಳನ್ನು ಕಂಪ್ಯೂಟರ್ ಗೆ ತುಂಬಿಸಿ ಹೊರಟರೆ ಇನ್ನೂ ಅನುಕೂಲ. ಅಂತೂ, ಅಲ್ಲಿಗೆ ತಲುಪುವ ಹೊತ್ತಿಗೆ ಸಾಯಂಕಾಲ ನಾಲ್ಕೈದು ಘಂಟೆ ಗ್ಯಾರಂಟಿ, ಅಂತ ಅನ್ಕೊಂಡೆ.
ಬೆಂಗಳೂರಿನ ಸುತ್ತ ಮುತ್ತ ಇದೊಂದು ಶುರುವಾಗಿತ್ತು. ಕ್ವಾರಿಗಳಲ್ಲಿ ಡೈನಮೈಟ್ ಸಿಡಿದು ಸಾಯೋದು. ಮೊದಲಾಗಿದ್ದರೆ, ಈ ಕ್ವಾರಿಗಳು ಬಿಡದಿ, ಕನಕಪುರದ ಕಡೆ ಇರುತ್ತಿದ್ದವು. ಕೆಲವು ಸಲ ಈ ಥರದ ಅನಾಹುತಗಳು ನೆಡೆದರೂ, ನಮಗೆ ಗೊತ್ತಾಗುವ ಹೊತ್ತಿಗೆ ಒಂದೆರೆಡು ತಿಂಗಳು ಆಗಿರುತ್ತಿದ್ದವು. ಮೊಬೈಲ್ ಇಲ್ಲದ, ಪೇಜರ್ ಗಳೇ ಅತ್ಯಾಧುನಿಕವಾದ ಸಂಪರ್ಕ ಸಾಧನವಾಗಿದ್ದ ಕಾಲವದು. ಅಪ್ಪಿ ತಪ್ಪಿ ಗೊತ್ತಾದರೂ, ಅಲ್ಲಿನ ಪೋಲಿಸ್ ಗಳು, `ಅದಾ ಸರ್, ಹೋದ ತಿಂಗಳು ಆಗಿದ್ದು,’ ಅಂತ ಹೇಳಿ ದಾರಿ ತಪ್ಪಿಸುತ್ತಿದ್ದರು. ನಾವೂ ಸುಮ್ಮನಾಗುತ್ತಿದ್ದೆವು.
ಆದರೆ, ಬೆಂಗಳೂರಿನಲ್ಲಿ ಐಟಿ ಕಂಪನಿಗಳು ಹೆಚ್ಚಾಗಲು ಆರಂಭವಾದ ಮೇಲೆ, ಕೆ.ಆರ್.ಪುರಂ ನಿಂದ ವೈಟ್ ಫೀಲ್ಡ್ ಕಡೆಗೂ, ಮಡಿವಾಳದಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೂ ಒಂದೊಂದೇ ಹೊಸ ಕಟ್ಟಡಗಳು ತಲೆ ಎತ್ತಲು ಆರಂಭಿಸಿದವು. ಹಾಗೇನೇ, ಆ ಪ್ರದೇಶಗಳಲ್ಲಿದ್ದ ಕಲ್ಲು ಗುಡ್ಡೆಗಳೆಲ್ಲ ಕ್ವಾರಿಗಾಳಾಗಿ ಬದಲಾಗಿ ಹೋದವು.
ಯಲಹಂಕದಿಂದ ಆಫೀಸಿಗೆ ಬಂದವನೇ, ಒಂದು ಟ್ಯಾಕ್ಸಿಗೆ ಹೇಳಿ, ಬೇಗ ಬೇಗನೆ ಸುದ್ದಿಯನ್ನು ಟೈಪ್ ಮಾಡಿದೆ. ಹಾಗೇ ಹೊರಡುವ ಮುಂಚೆ, ಘಟನೆ ಎಷ್ಟು ಹೊತ್ತಿಗೆ ನೆಡೆದದ್ದು ಅಂತ ವಿಚಾರಿಸಿದೆ. ಪೋಲಿಸರಿಗೆ ಗೊತ್ತಾಗಿದ್ದೇ 11 ಘಂಟೆಗೆ ಅಂತೆ. ಹಾಗಾದರೆ, ಒಂಬತ್ತೂವರೆ ಸುಮಾರಿಗೆ ಆಗಿರಬಹುದು ಅಂದುಕೊಂಡೆ.
ನಮಗೆ ಈ ಡೈನಮೈಟ್ ಸ್ಪೋಟದಿಂದ ಸಾಯುವವರ ವಿಷಯ ಬಂದಾಗ ತುಂಬಾನೇ ಹುಶಾರಾಗಿರುತ್ತಿದ್ದೆವು. ಹೋದ ಸಲ, ಇದೇ ಊರಿನ ಹತ್ತಿರ ಡೈನಮೈಟ್ ಸಿಡಿದು, ಎರಡು ಮಕ್ಕಳೂ ಸೇರಿದಂತೆ ಆರು ಜನ ಸತ್ತಿದ್ದರು. ಅದಾದ ಸ್ವಲ್ಪ ದಿನ ಡೈನಮೈಟ್ ಕುರಿತಾಗಿ ವಿಷಯವನ್ನು ಸಂಗ್ರಹಿಸುತ್ತಿದ್ದೆ. ಹೊಸದಾಗಿ ಆರಂಭವಾಗಿರುವ ಈ ಕ್ವಾರಿಗಳಲ್ಲಿ ಕೆಲವಕ್ಕೆ ಸರ್ಕಾರದ ಪರವಾನಿಗೆ ಇರುವುದಿಲ್ಲ ಮತ್ತು ಅವರೆಲ್ಲರೂ ಕಾನೂನು ಬಾಹಿರವಾಗಿ ಡೈನಮೈಟ್ ಉಪಯೋಗಿಸುತ್ತಾರೆ ಅನ್ನೋದು ಗೊತ್ತಾಗಿತ್ತು. ಈ ಡೈನಮೈಟ್ ಗಳನ್ನು ನೀರಾವರಿ ಇಲಾಖೆಯ ಅಧಿಕಾರಿಗಳ ಜೊತೆ ಶಾಮೀಲಾಗಿ, ಸರ್ಕಾರದ ಗೋದಾಮುಗಳಿಂದ ಕದ್ದು ತರುತ್ತಾರೆ ಅಂತಾನೂ ಗೊತ್ತಾಗಿತ್ತು. ಲೈಸೆನ್ಸ್ ಇಲ್ಲದೆ ಡೈನಮೈಟ್ ಮಾರುವ ದೊಡ್ಡ ಜಾಲವೇ ಈ ಹೊಸ ಕ್ವಾರಿಗಳ ಹತ್ತಿರ ಇರುತ್ತವೆ ಅನ್ನೋದೂ ಗೊತ್ತಾಗಿತ್ತು. ಆದರೆ, ಅದನ್ನು ಬರೆಯಲು ಇನ್ನೂ ಅವಕಾಶ ಸಿಕ್ಕಿರಲಿಲ್ಲ.
ನಮ್ಮ ಕಾರು ಇನ್ನೂ ಹೊಸೂರು ರಸ್ತೆಯಿಂದ ತಿರುಗುತ್ತಿರುವಾಗಲೇ, ಎದುರುಗಡೆಯಿಂದ ಟೈಮ್ಸ್ ಆಫ್ ಇಂಡಿಯಾ ಮತ್ತು ಡೆಕ್ಕನ್ ಹೆರಾಲ್ಡ್ ವರದಿಗಾರರು ಹೋಗಿದ್ದ ಎರಡು ಟ್ಯಾಕ್ಸಿಗಳು ಬಂದವು. ಡೆಕ್ಕನ್ ಹೆರಾಲ್ಡ್ ನ ಸುಬ್ರಹ್ಮಣ್ಯ ನನ್ನನ್ನು ನೋಡಿದ ತಕ್ಷಣ ಗಾಡಿ ನಿಲ್ಲಿಸಲು ಹೇಳಿ ಕೆಳಗಿಳಿದ. ನಾನೂ ಕೆಳಗಿಳಿದು ಅವನ ಜೊತೆ ಮಾತಿಗಾರಂಭಿಸಿದೆ.
`ಹೋಗಿ ಏನೂ ಪ್ರಯೋಜನ ಇಲ್ಲ ಕಣೋ. ಬೆಳಗ್ಗೆ ಏಳೂವರೆ, ಎಂಟು ಘಂಟೆಗೇ ಆಗಿದೆ. ಪರ್ಮಿಟ್ ಇಲ್ಲ ಅಂತ ಕಾಣುತ್ತೆ. ಪೋಲಿಸರಿಗೆ ಗೊತ್ತಾದರೆ ತೊಂದರೆ ಅಂತ ಬಾಡಿನ ಸುಟ್ಟು ಹಾಕೋಕೆ ನೋಡಿದ್ದಾರೆ. ಅಷ್ಟರಲ್ಲಿ ಪೋಲಿಸರಿಗೆ ಸುದ್ದಿ ಬಂದು, ಜಾಗಕ್ಕೆ ಬಂದಿದ್ದಾರೆ. ಪೋಲಿಸರು ಬಂದಿದ್ದು ನೋಡಿ ಅಲ್ಲಿಂದ ಎಲ್ಲರೂ ಕಾಡಿಗೆ ಓಡಿ ಹೋಗಿದ್ದಾರೆ. ಅಲ್ಲಿ ಹೆಣ ಮತ್ತು ಹತ್ತು ಜನ ಪೋಲಿಸ್ ಬಿಟ್ಟು ಇನ್ಯಾರೂ ಇಲ್ಲ. ಎಸ್.ಪಿ ನಾರಾಯಣ ಗೌಡ ಕೂಡ ಬಂದಿದ್ದರು. ಅವರೂ ಹೊರಟರು ಅಂತ ಕಾಣುತ್ತೆ. ಕಾಡಿನಲ್ಲಿದ್ದವರಿಗೆ ಪೋಲಿಸ್ ಏನೂ ಮಾಡೋದಿಲ್ಲ ಅಂತ ಮೆಸೆಜ್ ಕಳುಹಿಸಿದ್ದಾರೆ. ನಾಳೆ ಹೊತ್ತಿಗೆ ಅವರು ವಾಪಾಸ್ ಬರಬಹುದು,’ ಅಂದ.
ಸುಬ್ರಹ್ಮಣ್ಯ ಹೇಳಿದ್ದು ಸರಿ ಅಂತ ಅನ್ನಿಸಿದರೂ, ಅಷ್ಟು ದೂರ ಬಂದು, ಇನ್ನೂ ಐದು ಕಿಲೋಮೀಟರ್ ದೂರಕ್ಕೆ ಯಾಕೆ ಚೌಕಾಶಿ ಮಾಡಬೇಕು? ಅನ್ನಿಸಿತು. `ಸರಿ ಕಣೋ... ಅಲ್ಲಿವರೆಗೆ ಹೋಗಿ ಜಾಗಾನಾದ್ರೂ ನೋಡ್ಕೊಂಡು ಬರ್ತೀನಿ. ಫೋಟೋಗ್ರಾಫರ್ ಗೆ ಜಾಗದ ಫೋಟೋ ಬೇಕಲ್ಲಾ?’ ಅಂದೆ. `ಸರಿ,’ ಅಂತ ಹೇಳಿ, ಇಬ್ಬರೂ ನಮ್ಮ ನಮ್ಮ ಕಾರು ಹತ್ತಿಕೊಂಡೆವು.
ನಾವು ಜಾಗ ತಲುಪುವ ಹೊತ್ತಿಗೆ ಸುಮಾರು ಐದು ಘಂಟೆ ದಾಟಿತ್ತು. ಅದೇ ಸಮಯದಲ್ಲಿ, ಹೆಣ ತಗೊಂಡು ಹೋಗಲು ಒಂದು ಆಂಬುಲೆನ್ಸ್ ಬಂತು. ಹಾಗೇ ಗುಡ್ಡ ಹತ್ತಿ ಕ್ವಾರಿ ಹತ್ತಿರ ಹೋಗುವಾಗ, ನಾರಾಯಣ ಗೌಡರು ಎದುರುಗಡೆಯಿಂದ ಬಂದರು.
`ಸರ್, ನೀವು ಹೋದ್ರಿ ಅಂತ ಹೇಳಿದ್ರು?’ ಅಂತ ಶುರು ಮಾಡಿದೆ.
`ಇಲ್ಲಪ್ಪಾ... ಇನ್ನೊಂಚೂರು ಕೆಲಸ ಇತ್ತು. ಈಗ ತಾನೆ ನಮ್ಮ ಕೆಲಸ ಶುರುವಾಗಿದೆ. ಇನ್ನೂ ಸ್ವಲ್ಪ ಹೊತ್ತು ಆಗುತ್ತೆ,’ ಅಂತ ನಕ್ಕರು.
`ಏನು? ಇಲ್ಲಿದ್ದವರೆಲ್ಲಾ ಕಾಡಿಂದ ವಾಪಾಸ್ ಬರೋಕೆ ಕಾಯ್ತೀರಾ?’ ಅಂತ ಕೇಳಿದೆ.
`ಎಲ್ಲರೂ ಬಂದಾಯ್ತು... ಹತ್ತು ನಿಮಿಷ ಆಯ್ತು. ಅವರ ಜೊತೆನೇ ಮಾತಾಡ್ತಾ ಇದ್ದೆ,’ ಅಂದರು. ಸುತ್ತಾ ನೋಡಿದಾಗ, ಒಂದೈವತ್ತು ಅಡಿ ದೂರದಲ್ಲಿ ಅರ್ಧ ಸುಟ್ಟ ಹೆಣ ಬಿದ್ದಿತ್ತು. `ಟೈರು ಮತ್ತೆ ಸೀಮೇ ಎಣ್ಣೆ ಹಾಕಿ ಸುಡೋಕೆ ನೋಡಿದ್ದಾರೆ. ಮಳೆ ಬೇರೆ ಬಂದಿತ್ತಲ್ಲ, ಸರಿಯಾಗಿ ಹತ್ತಿಲ್ಲ. ಅಷ್ಟರೋಳಗೆ ನಮ್ಮವರು ಬಂದು ಆರಿಸಿದ್ದಾರೆ. ಈಗ ಪೋಸ್ಟ್ ಮಾರ್ಟಂಗೆ ಕಳುಹಿಸಬೇಕು,’ ಅಂದರು.
ಹಾಗೇ ಮುಂದೆ ನೆಡೆದುಕೊಂಡು ಹೋದೆ. ಕ್ವಾರಿ ಒಂದು ಗುಂಡಿಯೊಳಗಿತ್ತು. ಅದರ ಮೇಲೆ ಮೂರ್ನಾಲ್ಕು ಗುಡಿಸಲು ಕಟ್ಟಿದ್ದರು. ಸತ್ತು ಹೋದ ಹುಡುಗನಿಗೆ 19 ವರ್ಷ ವಯಸ್ಸಂತೆ. ತಮಿಳುನಾಡಿನಿಂದ ಬಂದವನಂತೆ. ಹಾಗಂತ, ಅಲ್ಲಿಯೇ ಇದ್ದ ಒಬ್ಬ ಕನ್ನಡದ ಕೆಲಸಗಾರ ನನಗೆ ಹೇಳುತ್ತಾ, ನನ್ನ ಜೊತೆ ನೆಡೆದುಕೊಂಡು ಬಂದ. ಕೊನೆ ಗುಡಿಸಲ ಮುಂದೆ, ಒಬ್ಬಳು ಹೆಂಗಸು ಮತ್ತು ಇನ್ನೊಬ್ಬ ಹುಡುಗಿ ಕುಳಿತಿದ್ದರು. ಇಬ್ಬರ ಮುಖವೂ ಅತ್ತೂ, ಅತ್ತೂ ಬತ್ತಿಹೋದಂತೆ ಕಾಣುತ್ತಿತ್ತು.
`ಸರ್, ಆ ಹುಡುಗನ ತಾಯಿ ಮತ್ತು ಅವನ ಹೆಂಡತಿ. ತಮಿಳುನಾಡಿನಿಂದ ಬಂದಿದ್ದಾರೆ,’ ಅಂದ.
ತಾಯಿಗೆ ಸುಮಾರು 36 ವರ್ಷ ವಯಸ್ಸಿರಬಹುದು. ಹೆಂಡತಿಗೆ 15-16 ವರ್ಷ ವಯಸ್ಸಿರಬಹುದು. `ಪಾಪಅನ್ನಸಿತು. `ನಿಮಗೆ ಎಷ್ಟು ಹೊತ್ತಿಗೆ ವಿಷಯ ಗೊತ್ತಾಯ್ತು?’ ಅಂತ ತಾಯಿಯನ್ನು ಉದ್ದೇಶಿಸಿ ಕೇಳಿದೆ.
ಅವಳಿಗೆ ಏನು ಅರ್ಥವಾಯ್ತೋ ಏನೋ. ನನ್ನನ್ನು ಪೋಲಿಸ್ ಅಂತ ಅಂದುಕೊಂಡಿರಬೇಕು. ಒಂದೇ ಉಸಿರಿನಲ್ಲಿ, ತಮಿಳಿನಲ್ಲಿ ಕಥೆ ಹೇಳೋಕೆ ಶುರುಮಾಡಿದ್ಲು. `ಸರ್, ಇವತ್ತು ಅವನ ಹುಟ್ಟಿದ ಹಬ್ಬ ಅಲ್ವಾ, ಅದಕ್ಕೆ ಅವನಿಗೆ ಹೋಳಿಗೆ ಇಷ್ಟ ಅಂತ ಮಾಡಿಕೊಂಡು, ಹೊಸ ಶರ್ಟ್ ತಗೊಂಡು ನಾವಿಬ್ಬರೂ ಆರು ಘಂಟೆಗೆ ಬಂದೆವು. ಇನ್ನೊಂದು ವಿಷಯ ಅಂದ್ರೆ, ಈ ಹುಡುಗಿ ಗರ್ಭಿಣಿ ಅಂತ ಮೊನ್ನೆ ಗೊತ್ತಾಯ್ತು. ಅವನಿಗೆ ಆಶ್ಚರ್ಯ ಪಡಿಸಬೇಕು ಅಂತ ಹೇಳದೆ ಬಂದೆವು. ಇವಳು ನನ್ನ ಅಣ್ಣನ ಮಗಳೇ ಸರ್,’ಅಂತ ಅಳೋಕೆ ಶುರು ಮಾಡಿದ್ಲು.
ಇವರನ್ನು ನೋಡಿದ ತಕ್ಷಣವೇ ಆ ಹುಡುಗ ಖುಶಿಯಿಂದ, `ಇವತ್ತು ಒಂದೇ ಡೈನಮೈಟ್ ಇಟ್ಟರೆ ನನ್ನ ಕೆಲಸ ಮುಗಿಯುತ್ತದೆ. ಡೈನಮೈಟ್ ಇಟ್ಟು, ಸ್ನಾನ ಮಾಡಿ, ಹೊಸ ಶರ್ಟ್ ಹಾಕಿಕೊಂಡು, ಹೋಳಿಗೆ ತಿನ್ನುತ್ತೇನೆ,’ ಅಂದವನೇ, ಕ್ವಾರಿಗೆ ಇಳಿದು ಓಡಿದ್ದಾನೆ. ಅಲ್ಲಿಯವರೆಗೆ ಡೈನಮೈಟ್ ಹೇಗೆ ಇಡುತ್ತಾರೆ ಅನ್ನೋದನ್ನು ನೋಡಿರದ ಅತ್ತೆ ಮತ್ತು ಸೊಸೆ ಕೂಡ ಗುಡ್ಡದ ಅಂಚಿಗೆ ಬಂದು ನಿಂತಿದ್ದಾರೆ. ನೋಡುತ್ತಿದ್ದಂತೆ ಡೈನಮೈಟ್ ಸಿಡಿದು, ಹುಡುಗ ಸತ್ತೇ ಹೋಗಿದ್ದಾನೆ.
`ನಾನು ನೋಡ್ತಾ ಇದ್ದಾಗ ನನ್ನ ಮಗ ಏರೋಪ್ಲೇನ್ ನಂತೆ ಮೇಲಕ್ಕೆ ಹೋಗಿ, ಹಾಗೇ ಕೆಳಕ್ಕೆ ಬಿದ್ದ ಸರ್. ಇಷ್ಟು ಸಣ್ಣ ಹುಡುಗಿ, ಗರ್ಭಿಣಿ ಬೇರೆ... ಇವಳನ್ನು ಏನು ಮಾಡ್ಲಿ?’ ಅಂತ ಎದೆ ಬಡಿದುಕೊಂಡು ಅಳೋಕೆ ಶುರು ಮಾಡಿದಳು.
ವಾಪಾಸ್ ಬರುವಾಗ ತುಂಬಾ ಬೇಜಾರಾಗಿತ್ತು. ಆಫೀಸಿಗೆ ಬಂದವನೇ, ಡೈನಮೈಟ್ ಮತ್ತು ಕ್ವಾರಿ ದಂಧೆಗಳ ಬಗ್ಗೆ ಒಂದು ವರದಿ ಬರೆದು, ಆ ತಾಯಿಯ ಬಾಯಿಂದ ಬಂದ ವಿಷಯವನ್ನು ವಿಸ್ತಾರವಾಗಿ ಒಂದು ವರದಿ ಮಾಡಿದೆ. ಮಾರನೇ ದಿನ ನೋಡಿದರೆ, ದಂಧೆಯ ವಿಷಯ ದೊಡ್ಡದಾಗಿ ಪ್ರಕಟವಾದರೆ, ಈ ಹುಡುಗನ ಸಾವನ್ನು ಮೂರೇ ಪ್ಯಾರಾಗಳಲ್ಲಿ, ಒಂದು ಬಾಕ್ಸ್ ಐಟಂ ಆಗಿ ತಗೊಂಡಿದ್ದರು. ಅದನ್ನು ನೋಡಿ ತುಂಬಾ ಬೇಜಾರಾಯಿತು.
ಮಾರನೇ ದಿನ, ಡೆಸ್ಕ್ ಉಸ್ತುವಾರಿಯಾಗಿದ್ದ ಉತ್ತರಾ ಹತ್ತಿರ ಈ ಕಥೆಯ ಬಗ್ಗೆ ಮಾತಾಡಿ, ನನಗೆ ಆ ತಾಯಿ ಹೇಳಿದ ವಿಷಯ ತುಂಬಾ ಬೇಜಾರಾಗಿತ್ತು, ಅಂದೆ. `ನಿನ್ನ ಸ್ಟೋರಿ ಚೆನ್ನಾಗಿತ್ತು. ನೀನು ಚೆನ್ನಾಗಿ ಬರೆದಿದ್ದೆ. ಆದ್ರೆ, ಜಾಗ ಇರಲಿಲ್ಲ. ಮತ್ತೆ, ಸತ್ತು ಹೋದವನು ಕೂಲಿ ಹುಡುಗ. ಅಂಥವರ ಕಥೆ ಓದುವವರೂ ಕಡಿಮೆ. ಹಾಗಾಗಿ ಚಿಕ್ಕದಾಗಿ ತೆಗೆದುಕೊಂಡೆವು,’ ಅಂದರು.
ನಾನೇನೂ ಮಾತಾಡಲಿಲ್ಲ, ಹಾಗೇ ಪೋಲಿಸ್ ಕಮೀಷನರ್ ಆಫೀಸಿಗೆ ಹೋಗಿ ಪ್ರೆಸ್ ರೂಂನಲ್ಲಿ ಸುಮ್ಮನೆ ಕುಳಿತೆ. ಅಲ್ಲಿ ಕ್ರೈಂ ರಿಪೋರ್ಟರ್ ಗಳೆಲ್ಲ ಯಾವುದೋ ವಿಷಯದಲ್ಲ, ಸಮಾನತೆಯ ಬಗ್ಗೆ ವಾದ ಮಾಡುತ್ತಿದ್ದರು. ಅಷ್ಟರಲ್ಲಿ, ಟೈಮ್ಸ್ ಆಫ್ ಇಂಡಿಯಾದ ಶ್ರೀಧರ್ ಪ್ರಸಾದ್, `ಜಗತ್ತಿನಲ್ಲಿ ಸಮಾನತೆ ಅನ್ನೋದು ಸಾವಲ್ಲಿ ಮಾತ್ರ ಕಾಣಬಹುದು. ಒಲ್ಲಿ ಡೆತ್ ಇಸ್ ದಿ ಈಕ್ವಲೈಸರ್. ಏನಂತೀಯಾ ವಿನಿ?’ ಅಂತ ನನ್ನನ್ನು ಕೇಳಿದ.
`ಇಟ್ ಡಿಪೆಂಡ್ಸ್ ಕಣೋ... ಈವನ್ ಡೆತ್ಸ್ ಹ್ಯಾವ್ ಸಮ್ ಎಕ್ಸೆಪ್ಷನ್ಸ್ ಇನ್ ಜರ್ನಲಿಸಂ,’ ಅಂದೆ.
`ಅದು ಹ್ಯಾಗೋ... ಡೆತ್ ಇಸ್ ಡೆತ್, ಅಲ್ವಾ?’ ಅಂದ.
`ಇಲ್ಲ ಕಣೋ... ಕೂಲಿಯವನು ಸತ್ರೆ ಒಂದು ಪ್ಯಾರಾ... ಅದೇ ರೌಡಿ ಸತ್ತರೆ, ನಾಲ್ಕು ಕಾಲಂ... ಇನ್ಯಾವುದೋ ಫಿಲಂ ಸ್ಟಾರ್ ಸತ್ತರೆ, ಮೂರು ಪೇಜ್.... ಎಲ್ಲೋ ಈಕ್ವಲೈಸರ್?’ ಅಂತ ಹೇಳಿ, ಅವನ ಉತ್ತರಕ್ಕೂ ಕಾಯದೆ, ಸಿಗರೇಟ್ ಸೇದೋಕೆ ಅಂತ ಹೊರಗಡೆ ಬಂದೆ.....


ಮಾಕೋನಹಳ್ಳಿ ವಿನಯ್ ಮಾಧವ್ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ