ಶುಕ್ರವಾರ, ಆಗಸ್ಟ್ 3, 2012

ಗಾಯಕ



ಹಾಡು ಮುಗಿಯುವ ಮುನ್ನ……..

`ಲೋ ಮಾಕೋನಹಳ್ಳಿ…. ಏನ್ಮಾಡ್ತಿದ್ದೀಯೋ? ಓಬೇರಾಯ್ ಹೋಟೆಲ್ ಗೆ ಬರ್ತೀಯಾ?,’ ಅಂತ ನಮ್ಮ ಛೀಫ್ ರಿಪೋರ್ಟರ್ ಆಗಿದ್ದ ನಚ್ಚಿ ಕೇಳಿದ್ರು.
ಎರಡು ಮೂರು ದಿನ ರಜಾ ಇದ್ದ ಕಾಲವದು. ಲಾಟರಿ ಹೊಡಿತಾ ಕೂತಿದ್ದೆ, ಆಫೀಸಿನಲ್ಲಿ. `ಓಬೇರಾಯ್ ಗಾ? ಏನ್ಸಮಾಚಾರ ಅಲ್ಲಿ?’ ಅಂತ ಕೇಳ್ದೆ.
`ನುಸ್ರತ್ ಫತೇ ಆಲಿಖಾನ್ ಅಲ್ಲಿದ್ದಾರಂತೆ. ಸಿಕ್ಕಿದ್ರೆ ಇಂಟರ್ ವ್ಯೂ ಮಾಡೋಣ ಅಂತ. ಬರ್ತೀಯಾ?’ ಅಂದ್ರು. ಹೆಲ್ಮೆಟ್ ತೆಗೆದುಕೊಂಡವನೇ, ನಚ್ಚಿ ಹಿಂದೆ ಹೊರಟೆ.
ಬೈಕ್ ಹತ್ತುವಾಗು ಮೆಲ್ಲಗೆ ಕೇಳ್ದೆ: `ನಚ್ಚಿ, ಪಾಕಿಸ್ತಾನದಲ್ಲೂ ಜನ ಘಜಲ್ ಕೇಳ್ತಾರಾ? ಈ ನುಸ್ರತ್ ಖಾನ್ ಘಜಲ್ ಗಳು ತುಂಬಾ ಫೇಮಸ್ಸಾ?’
`ಮಾಕೋನಹಳ್ಳಿ ಗೌಡನ ಥರಾನೇ ಪ್ರಶ್ನೆ ಕೇಳ್ದೆ ಬಿಡು. ಅಲ್ಲ ಕಣೋ. ಇಪ್ಪತ್ನಾಲ್ಕು ಘಂಟೆ ಸೊಂಟಕ್ಕೆ ಆ ವಾಕ್ ಮನ್ ಸಿಕ್ಕಿಸಿಕೊಂಡು ಹಾಡುಗಳನ್ನ ಕೇಳ್ತಿರ್ತೀಯಾ? ಎಲ್ಲಾ ಮ್ಯೂಸಿಕ್ ಬಗ್ಗೆ ಮಾತಾಡ್ತಿರ್ತೀಯಾ? ನುಸ್ರತ್ ಫತೇಆಲಿ ಖಾನ್ ಬಗ್ಗೆ ಗೊತ್ತಿಲ್ಲ ಅಂತೀಯಲ್ಲ? ಘಜಲ್ ಇಂಡಿಯಾದಷ್ಟೇ ಪಾಕಿಸ್ತಾನದಲ್ಲೂ ಇಷ್ಟ ಪಡ್ತಾರೆ. ಇವರು ಸೂಫೀ ಹಾಡುಗಳನ್ನೂ ಅಧ್ಬುತವಾಗಿ ಹಾಡ್ತಾರೆ,’ ಅಂದ್ರು.
ನಾನು ತೆಪ್ಪಗಾದೆ. ಅದಕ್ಕೆ ಕಾರಣ ಕೂಡ ಇತ್ತು. ಕಾಲೆಜ್ ದಿನಗಳಲ್ಲಿ ಸಿಕ್ಕ ಹಾಡುಗಳನ್ನೆಲ್ಲಾ ಕೇಳ್ತಿದ್ವಿ. ಹಿಂದಿ, ಕನ್ನಡ ಚಿತ್ರಗೀತೆಗಳಿಂದ ಶುರುವಾಗಿದ್ದು, ಕಾರ್ಕಾಳದಲ್ಲಿ ಓದುವಾಗ ಮಲೇಶಿಯಾದ ಹುಡುಗರ ಜೊತೆ ಸೇರಿ ಇಂಗ್ಲಿಶ್ ಹಾಡುಗಳನ್ನೂ ಕೇಳಲು ಆರಂಭಿಸಿದ್ದೆ. ನಾಮ್ ಚಲನಚಿತ್ರದಲ್ಲಿ ಪಂಕಜ್ ಉದಾಸ್ ಹಾಡಿದ `ಚಿಟ್ಟಿ ಆಯೀಯೆ…’ ಹಾಡಿನಿಂದ ಪ್ರಭಾವಿತನಾಗಿ, ಅವರ ಎಲ್ಲಾ ಘಜಲ್ ಗಳನ್ನೂ ಕೇಳಲು ಶುರುಮಾಡಿದ್ದೆ. ಬೆಂಗಳೂರಿಗೆ ಬಂದ ಮೇಲೆ, ತಮಿಳು, ಮಲಯಾಳಂ ಮತ್ತು ತೆಲುಗು ಹಾಡುಗಳನ್ನೂ ಕೇಳಲು ಶುರುಮಾಡಿದ್ದೆ. ಯಾವುದೋ ಸಂಧರ್ಭಗಳಲ್ಲಿ, ಯೇಸುದಾಸ್, ಪಂಡಿತ್ ಭೀಮಸೇನ್ ಜೋಶಿ ಮತ್ತು ಡಾ! ಬಾಲಮುರುಳಿ ಕೃಷ್ಣರ ಸಂಗೀತ ಕಛೇರಿಗಳಿಗೂ ಹೋಗಿದ್ದೆ. ಇದೆಲ್ಲಾ ಸೇರಿ, ನಾನು ಸಂಗೀತ ಪ್ರೇಮಿ ಅನ್ನೋ ಭ್ರಮೆಯಲ್ಲಿ, ಸೊಂಟಕ್ಕೊಂದು ವಾಕ್ ಮನ್ ಸಿಕ್ಕಿಸಿಕೊಂಡು, ಯಾವಾಗಲೂ ಹಾಡು ಕೇಳುತ್ತಾ ತಿರುಗುತ್ತಿದ್ದೆ.
ನನ್ನ ಭ್ರಮೆಗೆ ಏಟು ಬಿದ್ದದ್ದೇ ನಾನು ಇಂಡಿಯನ್ ಎಕ್ಸ್ ಪ್ರೆಸ್ ಗೆ ಸೇರಿದ ಮೇಲೆ. ಅಲ್ಲಿ, ಉತ್ತರಾ, ವಿನಯಾ ಹೆಗಡೆ, ವಾಸಂತಿ, ನಚ್ಚಿ, ನಮ್ಮ ಎಡಿಟರ್ ಕೆ.ವಿ.ರಮೇಶ್ ರವರಿಗೆ ಸಂಗೀತದಲ್ಲಿದ್ದ ಅಪಾರ ಜ್ಞಾನ ನೋಡಿ, ನನ್ನ ಭ್ರಮೆ ಕಡಿಮೆಯಾಗತೊಡಗಿತು. ಪಂಕಜ್ ಉದಾಸ್ ಬಿಟ್ಟರೆ, ಅನುಪ್ ಜಲೋಟ, ಜಗಜೀತ್ ಸಿಂಘ್ ಮತ್ತು ಇತರರ ಘಜಲ್ ಗಳ ಬಗ್ಗೆ ನನಗೇನೂ ಗೊತ್ತೇ ಇರಲಿಲ್ಲ. ಹಾಗೇನೆ, ಜೇಸುದಾಸ್ ಬಗ್ಗೆ ನನಗೆ ತಿಳಿದಿದ್ದಿದ್ದು ತುಂಬಾ ಕಡಿಮೆ ಅಂತ ಅನ್ನಿಸೋಕೆ ಶುರುವಾಗಿತ್ತು. ಅವರೆಲ್ಲ ಸಂಗೀತದ ಬಗ್ಗೆ ಮಾತಾಡ್ತಿದ್ರೆ, ನನಗೆ ಯಾರೋ ಲ್ಯಾಟಿನ್ ಭಾಷೆಯಲ್ಲಿ ಮಾತಾಡ್ತಿದ್ದಂತೆ ಅನ್ನಿಸೋಕೆ ಶುರುವಾಯ್ತು. ಆದ್ರೂ ವಾಕ್ ಮನ್ ಹಾಕಿಕೊಂಡು ತಿರುಗೋದು ಕಮ್ಮಿ ಮಾಡಿರಲಿಲ್ಲ.
ಗಡಿಬಿಡಿಯಾಗಿದ್ದೇ ಬೆಂಗಳೂರಿಗೆ ನುಸ್ರತ್ ಫತೇಆಲಿ ಖಾನ್ ಬರ್ತಾರೆ ಅಂತ ನಮ್ಮ ಆಫೀಸಿನಲ್ಲಿ ಸಂಭ್ರಮ ಶುರುವಾದ ಮೇಲೆ. ನಾನು ಕೇಳದಿರುವ ಪ್ರಸಿದ್ದ ಗಾಯಕರ ಸಾಲಿಗೆ ಇನ್ನೊಂದು ಹೆಸರು ಸೇರ್ಪಡೆಯಾಗಿತ್ತು. ನಚ್ಚಿ ಮುಂದೆ ಬಾಯಿಬಿಟ್ಟು ಬಣ್ಣಗೇಡು ಮಾಡಿಕೊಂಡಿದ್ದೆ.
ಓಬೇರಾಯ್ ಹೋಟೆಲ್ ಹತ್ತಿರ ಬೈಕ್ ನಿಲ್ಲಿಸಿ, ನಚ್ಚಿ ಹಿಂದೆ ನೆಡ್ಕೊಂಡು ಒಳಗೆ ಹೊದೆ. ನಾವು ಸ್ವಾಗತಕಾರರ ಹತ್ತಿರ ಹೋಗುವಾಗಲೇ, ಆಗ ಮಂತ್ರಿಯಾಗಿದ್ದ ರೋಶನ್ ಬೇಗ್ ಮೆಟ್ಟಲು ಇಳ್ಕೊಂಡು ಬಂದರು. `ಸಧ್ಯ, ಇಲ್ಲೇ ಸಿಕ್ದ,’ ಅಂತ ಅಂದವರೇ, ನಚ್ಚಿ ಬೇಗ್ ಕಡೆಗೆ ಕೈ ಬೀಸಿದರು.
ರೋಶನ್ ಬೇಗ್ ಸಹ ನಮ್ಮ ಕಡೆಗೇ ಬಂದು, `ಏನು ನಚ್ಚಿ? ಇಲ್ಲಿವರೆಗೆ ಬಂದಿದ್ದೀರಿ?’ ಅಂತ ನಕ್ಕರು.
`ಏ ನೋಡಪ್ಪಇಂಟರ್ ವ್ಯೂ ಮಾಡ್ಬೇಕು. ಒಂದೈದು ನಿಮಿಷ ಸಿಕ್ಕಿದ್ರೆ ಸಾಕು,’ ಅಂದ್ರು. ನಾನು ನಚ್ಚಿ ಮುಖ ನೋಡೋಕೆ ಶುರು ಮಾಡ್ದೆ.
ತಕ್ಷಣ ರೋಶನ್ ಬೇಗ್, `ಕಷ್ಟ ನಚ್ಚಿ. ಅವರಿಗೆ ಹುಶಾರಿಲ್ಲ,’ ಅಂದ್ರು. ಆಗಲೇ ನನಗೆ ಗೊತ್ತಾಗಿದ್ದು: ರೋಶನ್ ಬೇಗ್ ಈ ಕಾರ್ಯಕ್ರಮದ ರೂವಾರಿ ಅಂತ.
`ಏ ನೋಡಪ್ಪಾಬೇಕಾದ್ರೆ ಕಾಯ್ತೀವಿ. ಐದು ನಿಮಿಷ ಸಿಕ್ಕಿದ್ರೆ ಸಾಕು,’ ಅಂತ ನಚ್ಚಿ ಕೇಳಿದ್ರು.
`ಇಲ್ಲ ನಚ್ಚಿ. ನಿಮಗೆ ಇಲ್ಲ ಅಂತೀನಾ? ನೋಡಿ, ಅವರಿಗೆ ವಿಪರೀತ ಶುಗರ್. ಅದ್ರ ಮೇಲೆ, ಅವರು ಹೊಸ ಚಪ್ಪಲಿ ತಗೊಂಡಿದ್ರಂತೆ. ಅದನ್ನು ಹಾಕಿಕೊಂಡು ಶೂ ಬೈಟ್ ಆಗಿ, ಕಾಲೆಲ್ಲ ಊದಿ ಹೋಗಿದೆ. ಡಾಕ್ಟರ್ ಮೆಡಿಸನ್ ಕೊಟ್ಟಿದ್ದಾರೆ. ಅವರು ಮಲಗಿದ ಮೇಲೆನೇ ನಾನು ಕೆಳಕ್ಕೆ ಬಂದಿದ್ದು,’ ಅಂತ ಮಾತಾಡುತ್ತಲೇ, ಬೇಗ್ ತಮ್ಮ ಬ್ರೀಫ್ ಕೇಸ್ ತೆಗೆದು, ಅದರಿಂದ ಕೆಲವು ಪಾಸ್ ಗಳನ್ನು ನಚ್ಚಿ ಕೈಗೆ ಕೊಟ್ಟರು. ನಚ್ಚಿ ಅದನ್ನು ಹಾಗೇ ತೆಗೆದು ನನ್ನ ಕೈಗೆ ಕೊಟ್ಟರು. ನಾನೂ ಅದನ್ನು ಹಾಗೇ ಶರ್ಟ್ ಒಳಕ್ಕೆ ಸೇರಿಸಿದೆ.
ಹಾಗೇ ವಾಪಾಸ್ ಬರುವಾಗ ನಚ್ಚಿ ಹೇಳಿದ್ರು: `ಕಾನ್ಸರ್ಟ್ ಮಿಸ್ ಮಾಡ್ಬೇಡ. ತುಂಬಾ ಚೆನ್ನಾಗಿರುತ್ತೆ. ಜೊತೆಗೆ ಯಾರಾದರೂ ಫ್ರೆಂಡ್ಸ್ ಕರ್ಕೊಂಡು ಹೋಗು.
`ನೀವು ಬರೋಲ್ವ ನಚ್ಚಿ?’ ಅಂತ ಕೇಳ್ದೆ.
`ನೋಡ್ಬೇಕು ಗುರೂಟೈಮ್ ಆದ್ರೆ ಹೋಗ್ತೀನಿ. ನಂಗೆ ನಾನು ವ್ಯವಸ್ಥೆ ಮಾಡ್ಕೋತ್ತೀನಿ. ನೀನು ಹೋಗು,’ ಅಂದ್ರು.
ಆಫೀಸಿಗೆ ಬಂದವನೇ ಆ ಪಾಸ್ ಗಳನ್ನು ತೆಗೆದು ನೋಡಿದೆ. ಐದು ಸಾವಿರ ರೂಪಾಯಿಯ ಐದು ಪಾಸ್ ಗಳನ್ನು ನಮಗೆ ಕೊಟ್ಟಿದ್ದರು. ಯಾರನ್ನು ಕರೆಯೋದು ಅಂತ ಗೊತ್ತಾಗಲಿಲ್ಲ. ನಾನು ಹೋಗೋದೂ ಗ್ಯಾರಂಟಿ ಇರಲಿಲ್ಲ. ಯಾಕೆಂದ್ರೆ, ಕಛೇರಿ ಶುರುವಾಗೋದು ಏಳೂವರೆ ಘಂಟೆಗೆ. ಆ ಹೊತ್ತಿಗೆ, ಕ್ರೈಂ ರಿಪೋರ್ಟರ್ ಗಳು ಬ್ಯುಸಿಯಾಗಿರುತ್ತಾರೆ.
ಏನು ಮಾಡೋದು ಅಂತ ಗೊತ್ತಾಗಲಿಲ್ಲ. ಒಂದೆರೆಡು ಸ್ನೇಹಿತರಿಗೆ ಫೋನ್ ಮಾಡಿ ನೋಡಿದೆ. ಅವರಿಗೂ ಘಜಲ್ ಜ್ಞಾನ ಅಷ್ಟಕ್ಕಷ್ಟೆ ಅಂತ ಗೊತ್ತಾಯ್ತು. ಏಳೂವರೆ ಹೊತ್ತಿಗೆ ಯಾಕೋ ದುಗುಡ ಶುರುವಾಯ್ತು. ಐದು ಪಾಸ್ ಇದೆ, ಅಂತೂ ಇವರ ಹಾಡು ಕೇಳೋಕ್ಕೆ ಆಗೋಲ್ಲ ಅಂತ.
ಒಂದಷ್ಟು ಹೊತ್ತು ತಲೆಕೆಡಿಸಿಕೊಂಡ ಮೇಲೆ, ಏನಾದರೂ ಆಗಲಿ. ಬಂದು ಕ್ರೈಂ ನೋಡಿಕೊಂಡರಾಯ್ತು ಅಂತ ಹೆಲ್ಮೆಟ್ ತಗೊಂಡು ಎದ್ದೆ.
ನಾನು ಸೆಂಟ್ ಜೋಸೆಫ್ ಮೈದಾನ ಸೇರುವ ಹೊತ್ತಿಗೆ ಕಛೇರಿ ಶುರುವಾಗಿದೆ ಅನ್ನುವ ಸೂಚನೆಗಳು ಸಿಕ್ಕಿದವು. ದೂರದಿಂದಲೇ ಹಾಡು ಮೆಲ್ಲಗೆ ಕೇಳಿಸುತ್ತಿತ್ತು. ಬೈಕಿನಿಂದ ಇಳಿದವನೇ, ಹೆಲ್ಮೆಟ್ ಕೈಯಲ್ಲಿ ಹಿಡಿದುಕೊಂಡು, ಗೇಟಿನ ಕಡೆ ನೆಡೆದೆ. ಯಾಕೋ ನಾನು ಸರಿಯಾದ ಜಾಗಕ್ಕೆ ಬಂದಿಲ್ಲ ಅಂತ ಅನ್ನಿಸೋಕೆ ಶುರುವಾಯ್ತು.
ಗೇಟಿನ ಹತ್ತಿರ, ಶೇರವಾನಿ ಧರಿಸಿದ ಒಬ್ಬರು ಟಿಕೆಟ್ ಗಾಗಿ ಗೋಗರಿಯುತ್ತಿದ್ದರು. ತಾವು ಮದರಾಸಿನಿಂದ ಬಂದಿರುವುದಾಗಿ, ಎಷ್ಟು ದುಡ್ಡಾದರೂ ಕೊಡಲು ತಯಾರು ಅಂತ ಹೇಳುತ್ತಾ, ಎರಡು ಟಿಕೆಟ್ ಆದರೂ ಕೊಡುವಂತೆ ಕೇಳುತ್ತಿದ್ದರು. ನಾನು ಶರ್ಟ್ ಒಳಗಿದಂದ ಪಾಸ್ ಗಳನ್ನು ತೆಗೆದವನೇ, ಒಂದನ್ನು ನನ್ನ ಕೈಯಲ್ಲಿ ಇಟ್ಟುಕೊಂಡು, ಇನ್ನುಳಿದವನ್ನು ಅವರ ಕೈಗೆ ಇಟ್ಟೆ. ಅವರು ತಿರುಗಿ ನೋಡುವುದರಲ್ಲಿ, `ಅದು ಕಾಂಪ್ಲಿಮೆಂಟರಿ ಪಾಸ್. ನನ್ನ ಜೊತೆ ಯಾರೂ ಬಂದಿಲ್ಲ. ಅದಕ್ಕೆ ಏನೂ ಕೊಡಬೇಕಾಗಿಲ್ಲ,’ ಅಂತ ಹೇಳಿ, ಹಿಂದೆ ತಿರುಗಿಯೂ ನೋಡದೆ, ಗೇಟ್ ಕೀಪರ್ ಕಡೆ ಹೋದೆ.
ನಾನು ಕೊಟ್ಟ ಪಾಸ್ ನೋಡಿದವನೇ, ಗೇಟ್ ಕೀಪರ್ ನನ್ನನ್ನು ಮೇಲಿಂದ ಕೆಳಗೆ ನೋಡಿದ. ನಾನು ತಲೆ ನಿರ್ವಿಕಾರವಾಗಿ ಹೇಳಿದೆ: `ಪ್ರೆಸ್,’ ಅಂತ.  ಒಳಗೆ ಹೋದವನಿಗೆ ಗೊತ್ತಾಯ್ತು, ಆ ಗೇಟ್ ಕೀಪರ್ ನನ್ನನ್ನು ಯಾಕೆ ಹಾಗೆ ನೋಡಿದ ಅಂತ.
ನನಗೆ ಸಿಕ್ಕಿದ ಪಾಸ್, ಮುಂದುಗಡೆ ಸೋಫಾ ಆಗಿತ್ತು. ಅಲ್ಲಿ ಕೂತವರ ವೇಷ-ಭೂಷಣಕ್ಕೂ, ನಾನು ಬಂದಂತ ರೀತಿಗೂ ತಾಳೆಯಾಗುತ್ತಿರಲಿಲ್ಲ. ಜೀನ್ಸ್ ಪ್ಯಾಂಟ್, ಟಿ ಶರ್ಟ್ ಹಾಕಿಕೊಂಡ ನಾನು, ಗಂಭೀರವಾಗಿ ಬಟ್ಟೆ ಹಾಕಿಕೊಂಡು ಬಂದವರ ಮುಂದೆ, ಕಾಫೀ-ಟೀ ಸರಬರಾಜು ಮಾಡುವ ಹುಡುಗನ ಥರ ಕಾಣುತ್ತಿದ್ದೆ. ಆದರೆ, ಎಲ್ಲರೂ ಸಂಗೀತದಲ್ಲಿ ತಲ್ಲೀನವಾಗಿದ್ದರು.
ನಾನು ಕೊನೆಯಲ್ಲಿದ್ದ ಸೋಫಾದ ಮೂಲೆಯಲ್ಲಿ ಮುದುಡಿ ಕುಳಿತೆ. ನನ್ನ ಹಿಂದೆಯೇ, ನನ್ನ ಕೈಯಲ್ಲಿ ಪಾಸ್ ತೆಗೆದುಕೊಂಡವರು ಮೂರು ಜನರ ಸಂಸಾರ ಒಳಗೆ ಬಂದರು. ಇಬ್ಬರು ವಯಸ್ಸಾದ ದಂಪತಿಗಳು, ಇನ್ನೊಬ್ಬರು ಅವರ ಮಗ ಅಂತ ಕಾಣುತ್ತೆ. ಮೂರೂ ಜನರೂ ನನ್ನನ್ನು ನೋಡಿ, ಮುಗುಳ್ನಕ್ಕು, `ಥ್ಯಾಂಕ್ಸ್ಅನ್ನುವಂತೆ ತಲೆ ಆಡಿಸಿದರು. ನಾನೂ ಅವರಿಗೆ ಪ್ರತಿಕ್ರಿಯೆ ನೀಡಿದರೂ, ಯಾಕೋ ಕಸಿವಿಸಿಯಾಗಲು ಶುರುವಾಯ್ತು.
ಒಂದೆರೆಡು ನಿಮಿಷದಲ್ಲಿ, ಅಲ್ಲಿಯವರೆಗೆ ಹಾಡುತ್ತಿದ್ದ ಹಾಡು ಕೊನೆಯಾಯ್ತು. ವೇದಿಕೆ ಮೇಲೆ ನುಸ್ರತ್ ಫತೇ ಆಲಿಖಾನ್ ಅಲ್ಲದೆ, ಇನ್ನೂ ಹತ್ತು ಜನ ಪಠಾಣರಂತೆ ವೇಷ ಹಾಕಿಕೊಂಡು ಕೂತಿದ್ರು. ಎರಡು ನಿಮಿಷದ ನಂತರ ಮುಂದಿನ ಹಾಡು ಶುರುವಾಯ್ತು. `ಅಲ್ಲಾ ಹೋ....’ . ಅವೆರೆಡು ಪದ ಬಿಟ್ಟರೆ, ನನಗೆ ಇನ್ನೇನೂ ಅರ್ಥವಾಗಲಿಲ್ಲ. ಆದರೆ ಹಾಡು ಅಧ್ಬುತವಾಗಿದೆ ಅಂತ ಅನ್ನಿಸಿತು. ಯಾವುದೋ ಲೋಕದಿಂದ ಹಾಡು ಬರುತ್ತಿರುವಂತೆ ಅನ್ನಿಸೋಕ್ಕೆ ಶುರುವಾಯ್ತು. ಆದ್ರೆ, ಬೇರೆಯವರು ಆ ಹಾಡನ್ನು ಆಸ್ವಾದಿಸುವ ರೀತಿ ನೋಡಿ, ಮಧ್ಯದಲ್ಲೇ ಮತ್ತೆ ಕಸಿವಿಸಿಯಾಗಲು ಶುರುವಾಯ್ತು. ಅದು ಕಸಿವಿಸಿಯೋ, ಕಿಳರಿಮೆಯೋ ಗೊತ್ತಾಗಲಿಲ್ಲ. ಕೂತಲ್ಲೇ ಚಡಪಡಿಸಿದೆ. ಆ ಹಾಡು ಮುಗಿಯುತ್ತಿದ್ದಂತೆ, ಎಲ್ಲರೂ ಚಪ್ಪಾಳೆ ತಟ್ಟುವಾಗ, ನಾನು ಹೆಲ್ಮೆಟ್ ಎತ್ತಿಕೊಂಡು ಅಲ್ಲಿಂದ ಹೊರಕ್ಕೆ ನೆಡೆದೆ. ಆಫೀಸಿಗೆ ಬರುವವರೆಗೆ ಎಲ್ಲೂ ತಿರುಗಿ ನೋಡಲಿಲ್ಲ.
ಆಫೀಸಿಗೆ ಬಂದ ಮೇಲೆ, ನಾನು ಅಲ್ಲಿ ಇನ್ನೂ ಸ್ವಲ್ಪ ಹೊತ್ತು ಇರಬೇಕಿತ್ತು ಅಂತ ಅನ್ನಿಸೋಕೆ ಶುರುವಾಯ್ತು. ಈ ವಾರದಲ್ಲಿ ಯಾವಾಗಾದರೂ ನುಸ್ರತ್ ಫತೇ ಆಲಿಖಾನ್ ಹಾಡಿನ ಕ್ಯಾಸೆಟ್ ತಗೋಬೇಕು ಅಂತ ಅನ್ಕೊಂಡೆ. ಮಾರನೇ ದಿನ ಪೇಪರ್ ನಲ್ಲಿ ನೋಡಿದರೆ, ಈ ಕಛೇರಿಯ ವರದಿಯನ್ನು ನಮ್ಮ ಎಡಿಟರ್ ಕೆ.ವಿ.ರಮೇಶ್, ಖುದ್ದಾಗಿ ಮಾಡಿದ್ದರು.
ಎಂಟು-ಹತ್ತು ದಿನ ಕಳೆದಿರಬಹುದು. ನನ್ನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಆಫ್ ಶಾನ್ ಯಾಸ್ಮಿನ್ ಮನೆಗೆ ಹೋಗಿದ್ದೆ. ಅವಳ ಯಜಮಾನರಾದ ಬೆಲಗೂರು ಸಮೀಉಲ್ಲಾ ಜೊತೆ ಮಾತಾಡ್ತಾ, ಯಾಕೋ ಅವರ ಸಂಗೀತದ ಸಿ.ಡಿ ಕಡೆ ನನ್ನ ಗಮನ ಹೋಯ್ತು. ನೋಡಿದರೆ, ನುಸ್ರತ್ ಫತೇ ಆಲಿಖಾನ್ ರ ಮೂರು ಸಿ.ಡಿ ಗಳಿದ್ದವು. ಒಂದೊಂದೇ ಹಾಡುಗಳ ಹೆಸರನ್ನು ಓದುತ್ತಾ ಹೋದಾಗ, ಕೆಲವು ಹಿಂದಿ ಸಿನಿಮಾಗಳಲ್ಲಿ ಅವರ ಹಾಡುಗಳನ್ನು ಅಳವಡಿಸಿಕೊಂಡಿದ್ದು ಗಮನಕ್ಕೆ ಬಂತು.
`ಏನ್ರಿ ಸಮೀ? ಈ ಹಾಡು ಸಿನಿಮಾದಲ್ಲಿ ಇದೆಯಲ್ವಾ?’ ಅಂತ ಕೇಳ್ದೆ.
`ಇದಷ್ಟೇ ಅಲ್ಲ ಕಣ್ರಿ. ಇವರ ತುಂಬಾ ಹಾಡುಗಳನ್ನು ಸಿನಿಮಾಗಳಿಗೆ ಅಳವಡಿಸಿಕೊಂಡಿದ್ದಾರೆ. ಇವರ ಪರ್ಮಿಶನ್ ಸಹ ತಗೊಂಡಿಲ್ಲ. ಅವೇ ಹಾಡುಗಳನ್ನು, ಬೇರೆಯವರ ಹತ್ತಿರ ಹಾಡಿಸಿದ್ದಾರೆ ಅಷ್ಟೆ,’ ಅಂದ್ರು.
`ನನ್ನ ಹತ್ರ ಸಿ.ಡಿ ಪ್ಲೇಯರ್ ಇಲ್ಲ. ಇವರ ಕ್ಯಾಸೆಟ್ ತಗೋಬೇಕು,’ ಅಂತ ಹೇಳ್ದೆ.
ಮತ್ತೂ ಒಂದೆರೆಡು ದಿನ ಬಿಟ್ಟು ಬೆಳಗ್ಗೆ ಪೇಪರ್ ನಲ್ಲಿ ಸುದ್ದಿ ಬಂದಿತ್ತು: `ಖ್ಯಾತ ಘಜಲ್ ಗಾಯಕ ನುಸ್ರತ್ ಫತೇ ಆಲಿಖಾನ್ ತೀರಿಕೊಂಡರು,’ ಅಂತ. ಇತ್ತೀಚೆಗೆ ಅವರಿಗೆ ಶೂ ಬೈಟ್ ಆಗಿದ್ದು, ಅದು ಗ್ಯಾಂಗ್ರೀನ್ ಆಗಿ ತಿರುಗಿತ್ತು. ಅವರು, ಸಾಯಂಕಾಲ ಹೃದಯಾಘಾತದಿಂದ ತೀರಿಕೊಂಡರು, ಅಂತಾನೂ ಬರೆದಿತ್ತು.
ನಚ್ಚಿ ಆಫೀಸಿಗೆ ಬಂದ ತಕ್ಷಣ, ಅವರಿಗೆ ಸುದ್ದಿ ತೋರಿಸಿದೆ. `ಹೌದು ಗುರೂಅವತ್ತು ರೋಶನ್ ಬೇಗ್ ಹೇಳಿದ್ದನಲ್ಲಾ, ಶೂ ಬೈಟ್ ಆಗಿದೆ ಅಂತ. ಅದೇ ಇದು. ಅದಕ್ಕೇ ಅವತ್ತು ಹೇಳಿದ್ದು, ಕಾನ್ಸರ್ಟ್ ಮಿಸ್ ಮಾಡ್ಬೇಡಾ ಅಂತ,’ ಅಂದರು.
ಯಾಕೋ ಮತ್ತೊಮ್ಮೆ ಅನ್ನಿಸಿತು: `ಅಲ್ಲಿ ನಾನು ಇನ್ನೂ ಸ್ವಲ್ಪ ಹೊತ್ತು ಇರಬೇಕಿತ್ತು,’ ಅಂತ.


ಮಾಕೋನಹಳ್ಳಿ ವಿನಯ್ ಮಾಧವ್

1 ಕಾಮೆಂಟ್‌:

  1. ಚೆನ್ನಾಗಿ ಬರೀತಿದಿಯಾ ಗುರೂ... ತುಂಬಾ ಪ್ರಾಮಾಣಿಕವಾಗಿ ಹೇಳ್ತಾ ಇದಿಯಾ... ಹೀಗೇ ಮುಂದುವರಿಸು.

    ಪ್ರತ್ಯುತ್ತರಅಳಿಸಿ