ರೈಫಲ್
ತುದಿಯಲ್ಲಿ ನಿಂತಾಗ ನನಗೆ ನಗು ತಡೆಯಲಾಗುತ್ತಿರಲಿಲ್ಲ
ಸವಾಯ್
ಮಾಧೋಪುರ್ ನಿಂದ ರೈಲು ಹತ್ತಿದಾಗ ಬೆಳಗ್ಗಿನ ಜಾವ ಒಂದು ಘಂಟೆಯಾಗಿತ್ತು. ಮೂರು ದಿನಗಳ ಕಾಲ, ರಾಜಸ್ಥಾನದ
ರಣಥಂಬೋರಿನ ಕಾಡುಗಳಲ್ಲಿ ಸುತ್ತಾಡಿ, ವಾಪಾಸ್ ದೆಹಲಿಗೆ ಹೊರಟಿದ್ದೆ.
ರೈಲು
ಒಂದು ಘಂಟೆ ತಡವಾಗಿ ಬಂದಿತ್ತು. ದೆಹಲಿಯಲ್ಲಿ ಇಳಿದ ತಕ್ಷಣ ಏರ್ ಪೋರ್ಟ್ ಗೆ ಹೋಗಿ, ಅಲ್ಲಿಂದ ಬೆಂಗಳೂರಿಗೆ
ಹೊರಡಬೇಕಿತ್ತು. ಅದಕ್ಕಿದ್ದದ್ದು ಬರೀ ಒಂದೂವರೆ ಘಂಟೆ ಸಮಯ. ಈ ರೈಲು ಬೇರೆ ತಡವಾಗಿ ಬಂದಿದ್ದರಿಂದ,
ಯಾಕೋ ಎಡವಟ್ಟಾಗಬಹುದು ಅನ್ನಿಸೋಕೆ ಶುರುವಾಯ್ತು.
ಈಗಿದ್ದ
ಪ್ರಶ್ನೆ ಎಂದರೆ, ರೈಲಲ್ಲಿ ನಿದ್ರೆ ಮಾಡುವುದೋ, ಅಥವಾ ಬೆಳಗ್ಗೆ ವಿಮಾನದಲ್ಲಿ ನಿದ್ರೆ ಮಾಡುವುದೋ
ಅನ್ನುವುದು. ಇನ್ನೂ ನಾಲ್ಕೈದು ಘಂಟೆ ಮಲಗದೇ ಏನು ಮಾಡುವುದು ಅನ್ನೋದೂ ದೊಡ್ಡ ಪ್ರಶ್ನೆಯಾಗಿತ್ತು.
ನನ್ನ ಕಂಪಾರ್ಟ್ ಮೆಂಟಿನಲ್ಲಿ ಒಬ್ಬನೇ ಇದ್ದಿದ್ದರಿಂದ, ನನಗೆ ಮಾಡಲೇನೂ ಕೆಲಸವಿರಲಿಲ್ಲ. ಸುಮ್ಮನೇ
ಹಾಗೇ ಹೊರಳಿಕೊಂಡೆ.
ಸಾಧಾರಣ
ಮೂರು ಘಂಟೆಯಾಗಿರಬಹುದು. ಯಾರೋ ನನ್ನನ್ನು ತಿವಿದ ಹಾಗಾಯ್ತು. ತಿರುಗಿ ನೋಡಿದರೆ, ಖಾಕಿ ಬಟ್ಟೆಯಲ್ಲಿದ್ದ
ಇಬ್ಬರು, ಕೈಯಲ್ಲಿ ರೈಫಲ್ ಹಿಡಿದುಕೊಂಡು ನಿಂತಿದ್ದರು. ನೋಡಿದ ತಕ್ಷಣ ಅನ್ನಿಸಿತು: ರೈಲ್ವೇ ಪೋಲಿಸ್
ಇರಬೇಕು ಅಂತ.
ಒಬ್ಬ
ನನ್ನತ್ತಲೇ ರೈಫಲ್ ಗುರಿ ಇಟ್ಟರೆ, ಇನ್ನೊಬ್ಬ ನನ್ನ ಜೊತೆ ಮಾತಾಡಲು ಆರಂಭಿಸಿದ. ಯಾರು? ಎಲ್ಲಿಂದ
ಎಲ್ಲಿಗೆ ಪ್ರಯಾಣ? ಅಂತ ಹಿಂದಿಯಲ್ಲಿ ಪ್ರಶ್ನೆ ಹಾಕಲು ಆರಂಭಿಸಿದ. ನನ್ನ ಕ್ಯಾಮೆರಾ ಬ್ಯಾಗ್ ನೋಡಿ,
ಅದರಲ್ಲಿ ಏನಿದೆ? ಅಂತಾನೂ ಕೇಳಿದ.
ಪೋಲಿಸರ
ಜೊತೆ ಸಾಕಷ್ಟು ಪಳಗಿದ ನನಗೆ ಏನೂ ಅನ್ನಿಸಲಿಲ್ಲ. ನಾನು ಬೆಂಗಳೂರಿನ ಪತ್ರಕರ್ತ ಎಂದೂ, ರಣಥಂಬೋರಿಗೆ
ಹೋಗಿ, ದೆಹಲಿಗೆ ಹಿಂದುರುಗುತ್ತಿದ್ದೇನೆ ಅಂತ ನಗುತ್ತಲೇ ಹಿಂದಿಯಲ್ಲಿ ಉತ್ತರಿಸಿದೆ. ಅವರು ನನ್ನ
ಕ್ಯಾಮೆರಾ ಬ್ಯಾಗ್ ತೆಗೆದು ತೋರಿಸಲು ಹೇಳಿದರು
ಒಂದೊಂದೇ
ಕ್ಯಾಮೆರಾ ಮತ್ತು ಲೆನ್ಸ್ ಗಳನ್ನು ತೆಗೆದು ತೋರಿಸಿದೆ. ಪತ್ರಕರ್ತ ಅಂದರೆ ಏನು ಮಾಡ್ತೀರಿ ಅಂತ ಒಬ್ಬ
ಕೇಳಿದ. ನಾನು ನಗುತ್ತಲೇ ಸಾಧಾರಣವಾಗಿ ಕ್ರೈಂ ರಿಪೋರ್ಟರ್ ಗಳು ಮಾಡುವ ಕೆಲಸಗಳನ್ನು ವಿವರಿಸುತ್ತಿದ್ದೆ.
ರೈಲ್ವೇ ಅಪಘಾತ ಅಥವಾ ಅಲ್ಲೇನಾದರೂ ಅಪರಾಧಗಳು ಆದರೆ, ರೈಲ್ವೇ ಪೋಲಿಸರ ಹಿರಿಯ ಅಧಿಕಾರಿಗಳನ್ನೂ ಭೇಟಿಯಾಗ್ತೀನಿ
ಅಂತ ಹೇಳಿದೆ.
ರೈಫಲ್
ನನ್ನತ್ತಲೇ ಗುರಿ ಮಾಡಿ ಇಟ್ಟುಕೊಂಡವನು ತಕ್ಷಣ ಕೇಳಿದ: `ನಿನ್ನದೇನಾದ್ರೂ ಐಡೆಂಟಿಟಿ ಕಾರ್ಡ್ ಇದ್ದರೆ
ತೋರಿಸು,’ ಅಂತ.
ನಗುತ್ತಲೇ
ನನಗೆ ವಾರ್ತಾ ಇಲಾಖೆಯವರು ಕೊಟ್ಟಿದ್ದ ಗುರುತು ಚೀಟಿಯನ್ನು ಅವನ ಕೈಗೆ ಕೊಟ್ಟೆ. ಅದನ್ನು ನೋಡಿದ ತಕ್ಷಣವೇ,
ಇನ್ನೇನಾದರೂ ಗುರುತಿನ ಚೀಟಿ ಇದೆಯಾ? ಅಂತ ಕೇಳಿದ. ನನ್ನ ಆಫೀಸಿನ ಗುರುತಿಚ ಚೀಟಿ ಮತ್ತು ಪ್ರೆಸ್
ಕ್ಲಬ್ ಗುರುತಿನ ಚೀಟಿಗಳನ್ನೂ ಅವನ ಕೈಯಲ್ಲಿ ಇಟ್ಟೆ.
ಅದನ್ನು
ವಾಪಾಸ್ ನನಗೆ ಕೊಡುತ್ತಾ ಹೇಳಿದ: `ನೋಡಿ, ದೊಡ್ಡ ಆಫೀಸರ್ ಗಳು ಗೊತ್ತು ಅಂತ ಹೇಳಿದ್ರೆ, ನಾವು ನಮ್ಮ
ಕೆಲಸ ಮಾಡೋದು ನಿಲ್ಲಿಸೋಕೆ ಆಗೋಲ್ಲ,’ ಅಂದ.
ನನಗೆ
ಇನ್ನೂ ನಗು ಬಂತು. `ನಾನೇನು ತೋರಿಸೋಲ್ಲ ಅಂತ ಹೇಳಿಲ್ಲವಲ್ಲ? ನಿಮ್ಮ ಕೆಲಸ ನೀವು ಮಾಡಿದರೆ ನನಗೇನೂ
ಬೇಜಾರಿಲ್ಲ,’ ಅಂದೆ.
`ನೀವು
ಬೇಜಾರು ಮಾಡ್ಕೊಂಡ್ರೂ ನಾವೇನೂ ಮಾಡೋಕ್ಕಾಗೋಲ್ಲ. ದೊಡ್ಡ ಆಫೀಸರ ಹೆಸರು ಹೇಳಿದ ತಕ್ಷಣ ನಮ್ಮ ಕೆಲಸ
ಮಾಡದಿದ್ದರೆ, ಭದ್ರತೆಗೆ ತೊಂದರೆ ಆಗುತ್ತೆ,’ ಅಂತ ಜೋರಾಗಿ ಹೇಳಿದ.
ನಾನೊಂದು
ಕ್ಷಣ ಪೆಚ್ಚಾದೆ. ಏನಾದ್ರೂ ತಪ್ಪು ಮಾತಾಡಿದೆನಾ ಅಂತ ಯೋಚಿಸಿದೆ. ನಾನು ನಕ್ಕಷ್ಟೂ ಅವನಿಗೆ ಪಿತ್ತ
ನೆತ್ತಿಗೇರುತ್ತಿದೆ ಅಂತ ಅನ್ನಿಸ್ತು. ಗಂಭೀರವಾಗಿ ಕೇಳಿದೆ: `ಇನ್ನೇನಾದ್ರೂ ತೋರಿಸ್ಬೇಕಾ?’ ಅಂತ.
ಅವನ
ಪಕ್ಕದಲ್ಲಿದ್ದವನಿಗೆ ನಮ್ಮ ಸಂಭಾಷಣೆ ಎತ್ತ ಸಾಗುತ್ತಿದೆ ಅಂತ ಗೊತ್ತಾಯ್ತು ಅಂತ ಕಾಣುತ್ತೆ. ಅವನ
ಹೆಗಲಿಗೆ ಕೈ ಹಾಕಿದವನೇ, ಪಕ್ಕದ ಕಂಪಾರ್ಟ್ ಮೆಂಟಿಗೆ ಕರ್ಕೊಂಡು ಹೋದ. ಹೋಗುತ್ತ ಹಿಂದಕ್ಕೆ ತಿರುಗಿ,
ಮುಗುಳ್ನಗುತ್ತಾ ಹೇಳಿದ: `ಅಚ್ಚಾ ಸಾಬ್, ಆಪ್ ಸೋ ಜಾಯಿಯೇ’ ಅಂತ.
ಈಗ
ನಾನು ಗೊಂದಲದಲ್ಲಿ ಬಿದ್ದೆ. ನಗಬೇಕೋ ಬೇಡವೋ ಅಂತ. ಸರಿ, ಸುಮ್ಮನೆ ತಲೆ ಅಲ್ಲಾಡಿಸಿದೆ.
ಇದೆಲ್ಲ
ಆಗಿ ಎರಡು ವರ್ಷಗಳೇ ಕಳೆದಿರಬೇಕು. ಒಂದು ದಿನ ನಮ್ಮ ಬ್ಯುರೋ ಛೀಫ್ ಮಟ್ಟೂ ಕರೆದವರೇ, ಕುದುರೇಮುಖ
ಕಬ್ಬಿಣ ಅದಿರು ಕಂಪನಿಯವರು ಪತ್ರಕರ್ತರನ್ನು ಕುದುರೇಮುಖಕ್ಕೆ ಕರೆದುಕೊಂಡು ಹೋಗ್ತಾರೆ ಅಂದ್ರು. ನಾನೇನೂ
ಮಾತಾಡಲಿಲ್ಲ. ಐದು ವರ್ಷದಿಂದ ಕುದುರೇಮುಖದಲ್ಲಿನ ಗಣಿಗಾರಿಕೆ ವಿರುದ್ದವಾಗಿ ಬರೆಯುತ್ತಿದ್ದ ನನಗೆ
ಅಲ್ಲಿ ಹೋಗಿ ನೋಡೋಕೆ ಏನೂ ಇರಲಿಲ್ಲ. ಚಿಕ್ಕಂದಿನಿಂದ ನೋಡಿದ ಜಾಗ ಬೇರೆ. ಈಗ ಸುಪ್ರೀಂ ಕೋರ್ಟ್ ಕುದುರೇಮುಖದಲ್ಲಿ
ಗಣಿಗಾರಿಕೆಯನ್ನು ನಿಲ್ಲಿಸಬೇಕು ಅಂತ ತೀರ್ಪು ನೀಡಿತ್ತು. ತೀರ್ಪು ಬಂದ ಮೇಲೆ ಕುದುರೇಮುಖ ಕಂಪನಿಯ
ಅಧಿಕಾರಿಗಳು ನನಗೆ ಮರ್ಯಾದೆ ಕೊಟ್ಟು ಮಾತಾಡಲು ಶುರು ಮಾಡಿದ್ದರು.
ಮಟ್ಟೂನೆ
ಮತ್ತೆ ಮುಂದುವರೆಸಿದರು. `ನೀನೇ ಹೋಗ್ಬೇಕಂತೆ. ಎಡಿಟರ್ ಸಹ ಹೇಳಿದ್ದಾರೆ,’ ಅಂದ್ರು. ಕಂಪನಿಯ ಅಧಿಕಾರಿಯೊಬ್ಬರು
ಮಟ್ಟೂ ಎದುರೇ ಕೂತಿದ್ದರು.
`ಯಾವಾಗ
ಹೊರಡೋದು?’ ಅಂತ ಕೇಳಿದೆ.
`ನಾಡಿದ್ದು
ಮಧ್ಯಾಹ್ನ ಏರ್ ಪೋರ್ಟ್ ಗೆ ಬಂದುಬಿಡಿ. ಮಂಗಳೂರಿಗೆ ಹೋಗಿ, ಅಲ್ಲಿಂದ ಕಾರಿನಲ್ಲಿ ಕುದುರೇಮುಖಕ್ಕೆ
ಹೋಗುವುದು,’ ಅಂತ ಅಧಿಕಾರಿ ಹೇಳಿದರು.
`ಅಲ್ರೀ,
ಇಲ್ಲಿಂದಲೇ ಕುದುರೇಮುಖಕ್ಕೆ ಕಾರಿನಲ್ಲಿ ಹೋಗಬಹುದಲ್ಲ? ಎರಡೂ ಒಂದೇ ಆಗೋಲ್ವಾ?’ ಅಂತ ಕೇಳಿದೆ.
`ಬೇರೆ
ರಿಪೋರ್ಟರ್ ಗಳೂ ಬರ್ತಾರೆ. ಅದಕ್ಕೆ….’ ಅಂತ ತಡವರಿಸಿದ.
`ಕಾರ್ಪರೇಟ್
ಕಲ್ಚರ್’ ಅಂತ ಗೊಣಗಿಕೊಂಡು ಹೋದೆ. ಎರಡು ದಿನ ಬಿಟ್ಟು ಮಧ್ಯಾಹ್ನ ಏರ್ ಪೋರ್ಟ್ ನಲ್ಲಿ ಹಾಜರಿದ್ದೆ.
ಅಭ್ಯಾಸದಂತೆ ಕ್ಯಾಮೆರಾ ಬ್ಯಾಗ್ ಹೆಗಲಿಗೆ ಹಾಕಿಕೊಂಡಿದ್ದೆ. ಬೆಂಗಳೂರಿನಿಂದ ಐದು ಜನ ರಿಪೋರ್ಟರ್
ಗಳು ಹೋಗುವುದು ಅಂತ ಗೊತ್ತಾಯ್ತು. ಏನೂ ಮಾತಾಡದೆ, ಚೆಕ್ ಇನ್ ಮಾಡುವ ಕಡೆಗೆ ನೆಡೆದೆ.
ನನ್ನ
ಬ್ಯಾಗ್ ಗಳನ್ನು ಚೆಕ್ ಮಾಡಡಲು ಹಾಕಿ, ನಾನೂ ಚೆಕ್ಕಿಂಗಿಗೆ ಹೋದೆ. ನನ್ನ ಬ್ಯಾಗ್ ಬಂದರೂ, ಕ್ಯಾಮೆರಾ
ಬ್ಯಾಗ್ ಬಂದಿರಲಿಲ್ಲ. ಅದನ್ನೇ ಕಾಯುತ್ತಾ ನಿಂತಾಗ, ಅಲ್ಲಿನ ಸೆಕ್ಯುರಿಟಿ ಆಫಿಸರ್ ಬಂದು, ಹಸಿರು
ಬಣ್ಣದ ಕ್ಯಾಮೆರಾ ಬ್ಯಾಗ್ ನಿಮ್ಮದಲ್ವಾ? ಅಂತ ಕೇಳಿದ.
ಹೌದು
ಅಂದವನೇ, ಅವರ ಹಿಂದೆ ಹೋದೆ. ಅಲ್ಲಿ ನಿಂತಿದ್ದ ಹಿರಿಯ ಅಧಿಕಾರಿಯೊಬ್ಬರು `ಇದರಲ್ಲೇನಿದೆ?’ ಅಂತ ಕೇಳಿದರು.
`ಎರಡು
ಕ್ಯಾಮೆರಾ, ಐದಾರು ಲೆನ್ಸ್ ಗಳು,’ ಅಂತ ಹೇಳಿದೆ.
`ತೆಗೆಯಿರಿ
ನೋಡೋಣ,’ ಅಂದ್ರು. ತೆಗೆದು ತೋರಿಸಿದೆ. `ಇನ್ನೂ ಏನೋ ಇದೆ,’ ಅಂದ್ರು.
`ಇಲ್ಲ
ಸರ್.ಇದು ಸಾದಾರಣ ನಾನು ಕಾಡಿಗೆ ತೆಗೆದುಕೊಂಡು ಹೋಗುವ ಬ್ಯಾಗ್. ಇದರಲ್ಲಿ ಇನ್ನೇನೂ ಇರೋದಿಲ್ಲ,’
ಅಂದೆ.
ಯಾಕೋ
ಅವರು ತಲೆ ಅಲ್ಲಾಡಿಸಲು ಶುರು ಮಾಡಿದ್ರು. ನನಗೂ ಏನೋ ಅನುಮಾನ ಬಂದು ತುಂಬಾ ಯೋಚಿಸಿದೆ. ತಕ್ಷಣ ನೆನಪಾಯ್ತು….
ನಗುತ್ತಲೇ, ಬ್ಯಾಗಿನ ಬದಿಯಲ್ಲಿದ್ದ ಕೆಲವು ಕಂಪಾರ್ಟ್ ಮೆಂಟ್ ಗಳಲ್ಲಿ ಒಂದಕ್ಕೆ ಕೈ ಹಾಕಿ, ಒಂಬತ್ತು
ಇಂಚಿನ ಚೂರಿಯೊಂದನ್ನು ಹೊರಗೆ ತೆಗೆದು ಅಧಿಕಾರಿಯ ಕೈಯಲ್ಲಿ ಕೊಟ್ಟೆ. ಯಾಕೋ ಬೆನ್ನಲ್ಲಿ ಏನೋ ತಾಗಿದ
ಹಾಗಾಯ್ತು. ನೋಡಿದರೆ, ಇಬ್ಬರು ಸೆಕ್ಯುರಿಟಿಯವರು ತಮ್ಮ ರೈಫಲ್ ಗಳನ್ನು ನನ್ನ ಬೆನ್ನಿಗೆ ಹಿಡಿದು
ನಿಂತಿದ್ದರು.
ಪರಿಸ್ಥಿತಿಯೇನೋ
ಗಂಭೀರವಾಗಿತ್ತು. ನಾನು ಮಾತ್ರ ಪಕ್ಕನೆ ನಗೋಕೆ ಶುರುಮಾಡಿದೆ. ನನ್ನನ್ನು ನೋಡಿದ ಸೆಕ್ಯುರಿಟಿಯವರು
ಮಾತ್ರ ಗಲಿಬಿಲಿಗೊಂಡರು. ನಾನೇ ಶುರು ಮಾಡಿದೆ: `ಇದು ನಾನು ಕಾಡಿಗೆ ಹೋಗುವಾಗ ತೆಗೆದುಕೊಂಡು ಹೋಗುವ
ಕ್ಯಾಮೆರಾ ಬ್ಯಾಗ್. ಕಾಡಿಗಲ್ಲಿ ಸುತ್ತಾಡುವಾಗ ಇರಲಿ ಅಂತ ಚೂರಿಯನ್ನು ತೆಗೆದು ಬ್ಯಾಗಿನಲ್ಲಿ ಇಟ್ಟಿದ್ದೆ.
ಎರಡು ವರ್ಷದಿಂದ ಆ ಚೂರಿಯನ್ನು ಹೊರಗೆ ತೆಗೆಯುವ ಪ್ರಮೇಯವೇ ಬರದಿದ್ದರಿಂದ, ಮರೆತು ಹೋಗಿತ್ತು,’ ಅಂದೆ.
ಸೆಕ್ಯುರಿಟಿ
ಆಫಿಸರ್ ಸುಮ್ಮನೆ ತಲೆ ಅಲ್ಲಾಡಿಸಿ, ಅವರ ಕೆಳಗಿನ ಸಿಬ್ಬಂದಿಗೆ, ನನ್ನನ್ನು ಕಮಾಂಡೆಂಟ್ ಹತ್ತಿರ ಕರೆದುಕೊಂಡು
ಹೋಗುವಂತೆ ಹೇಳಿದರು. ನಾನು ಮುಂದೆ ನೆಡೆಯುವಾಗ, ನನ್ನ ಬೆನ್ನಿಗೆ ತಾಗಿಕೊಂಡಿದ್ದ ಎರಡು ರೈಫಲ್ ಗಳು
ಸಹ ಹಿಂಬಾಲಿಸಿದವು.
ಕಮಾಂಡೆಂಟ್
ಕೋಣೆಯ ಹತ್ತಿರ ಹೋಗುವಾಗ ತಲೆ ಎತ್ತಿ ನಾಮಫಲಕದಲ್ಲಿ ಅವರ ಹೆಸರು ಓದಿದೆ. `ಬಾಲಸುಬ್ರಹ್ಮಣ್ಯಂ’ ಅಂತ
ಬರೆದಿರೋದು ನೋಡಿ, ಇನ್ನೂ ಜೋರಾಗಿ ನಗು ಬಂತು. ವಾರದಲ್ಲಿ ಐದು ಸಲವಾದರೂ ಅವರಿಗೆ ಫೋನ್ ಮಾಡುತ್ತಿದ್ದೆ.
ಏರ್ ಪೋರ್ಟ್ ಸೆಕ್ಯುರಿಟಿಯಲ್ಲಿ ಏನಾದ್ರೂ ಸುದ್ದಿ ಇದೆಯಾ ಅಂತ.
ನಾನು
ಕೋಣೆಯೊಳಗೆ ಹೋದಾಗ ಬಾಲಸುಬ್ರಹ್ಮಣ್ಯಂ ನನ್ನ ಚೂರಿ ಹಿಡಿದುಕೊಂಡು ನೋಡುತ್ತಿದ್ದರು. ನಾನೂ ಎರಡು ವರ್ಷಗಳಿಂದ
ತೆಗೆದು ನೋಡಿರಲಿಲ್ಲ. ಅಲ್ಲಲ್ಲಿ ತುಕ್ಕು ಹಿಡಿದಿತ್ತು. ಅವರು ನನ್ನ ಮುಖ ನೋಡಿ ಏನೋ ಕೇಳುವುದರೊಳಗೆ,
ನಾನು ನನ್ನ ಪರ್ಸ್ ನಿಂದ ವಿಸಿಟಿಂಗ್ ಕಾರ್ಡ್ ತೆಗೆದು ಅವರಿಗೆ ಕೊಟ್ಟೆ. ಅದನ್ನು ನೋಡಿದ ತಕ್ಷಣ ಅವರು
ಜೋರಾಗಿ ನಗೋಕೆ ಶುರು ಮಾಡಿದ್ರು.
`ಏನ್ರೀ?
ನಿಮ್ಮದಾ ಇದು? ಇದನ್ಯಾಕೆ ಚೆಕ್ ಇನ್ ಮಾಡೋಕೆ ಹೋದ್ರಿ?’ ಅಂತ ಕುಳಿತುಕೊಳ್ಳುವಂತೆ ತಮ್ಮ ಮುಂದಿನ
ಕುರ್ಚಿ ತೋರಿಸಿದರು. ನಾನು ಕೂರಲೆಂದು ಹಿಂದೆ ತಿರುಗಿ ನೋಡಿದರೆ, ರೈಫಲ್ ಹಿಡಿದುಕೊಂಡ ಸೆಕ್ಯುರಿಟಿಯವರು
ಮುಖ ಮುಖ ನೋಡಿಕೊಳ್ಳುತ್ತಿದ್ದರು. ನೆಡೆದದ್ದನ್ನು ಸೂಕ್ಷ್ಮವಾಗಿ ಹೇಳಿದೆ.
`ಈಗೇನು
ಮಾಡಲಿ? ಪ್ರೆಸ್ ಕಾನ್ಫರೆನ್ಸ್ ಕರೆದು ಜರ್ನಲಿಸ್ಟ್ ಎರೋಪ್ಲೇನ್ ಒಳಗೆ ಮಾರಕಾಸ್ತ್ರ ತೆಗೆದುಕೊಂಡು
ಹೋಗುವಾಗ ಅರೆಸ್ಟ್ ಮಾಡಲಾಗಿದೆ ಅಂತ ಹೇಳ್ಲಾ?’ ಅಂತ ಇನ್ನೂ ಜೋರಾಗಿ ನಗಲು ಶುರುಮಾಡಿದ್ರು.
ಅಷ್ಟರಲ್ಲೇ
ಅವರ ಕೋಣೆ ಹೊರಗಡೆಯಿಂದ ಯಾರೋ ಇಣುಕಿದಂತಾಯ್ತು. `ಸುಮ್ಮನೆ ಹೋಗ್ತೀಯೋ, ಇಲ್ವೋ. ಇಲ್ಲೇನು ಕೆಲಸ ನಿಮ್ಮಗಳಿಗೆ?’
ಅಂತ ಬಾಲಸುಬ್ರಹ್ಮಣ್ಯಂ ಗದರಿಸಿದರು. ನಾನು ತಿರುಗಿ ನೋಡಿದಾಗ ಹೇಳಿದರು: `ಸಿಟಿ ಪೋಲಿಸ್. ಇಲ್ಲೇನೋ
ಆಯ್ತು ಅಂತ ಗೊತ್ತಾಗುತ್ತಲ್ಲ, ಬಂದು ಕೇಸ್ ಹಾಕಿ, ದುಡ್ಡು ಕಿತ್ತುಕೊಳ್ಳೋಕೆ ಅಂತ ಕಾಯ್ತಿದ್ದಾರೆ.
ಈ ಚೂರಿನ ಏನ್ಮಾಡ್ತೀಯ? ಬೇಕಾದರೆ ಮಂಗಳೂರಿಗೆ ಕಳುಹಿಸುತ್ತೇನೆ. ವಾಪಾಸ್ ಬರುವಾಗ ಮಾತ್ರ ಚೆಕ್ ಇನ್
ಮಾಡುವ ಮೊದಲೇ ಸೆಕ್ಯುರಿಟಿಯವರಿಗೆ ಹೇಳಿ, ಸರೆಂಡರ್ ಮಾಡಿ. ಇಲ್ಲಿ ಬಂದು ತಗೋಬಹುದು,’ ಅಂದ್ರು.
`ಬೇಡ
ಸರ್. ಈ ಚೂರಿ ಇಟ್ಕೊಂಡು ಬಂದಿದ್ದರಿಂದ ನಾವಿಬ್ಬರೂ ಒಬ್ಬರನೊಬ್ಬರು ನೋಡಿದ್ವಿ. ಇಲ್ಲದೇ ಹೋಗಿದ್ದರೆ,
ಬರೀ ಫೋನಿನಲ್ಲಿ. ಆ ನೆನಪಿಗೆ ಇದನ್ನ ನೀವೇ ಇಟ್ಕೊಳ್ಳಿ. ಮಂಗಳೂರಿಂದ ಬಂದ ಮೇಲೆ ಸಿಕ್ತೀನಿ,’ ಅಂತ
ಹೇಳಿ, ವಿಮಾನದ ಕಡೆಗೆ ಹೊರಟೆ….
ಮಾಕೋನಹಳ್ಳಿ
ವಿನಯ್ ಮಾಧವ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ