ಬನ್ಸಿಯ
ಕುದುರೆ ಮತ್ತು ವಾಟಾಳ್ ಕತ್ತೆ….
ಮೊನ್ನೆ
ಬನ್ಸಿ ಸಿಕ್ಕಿದ್ದ. ತುಂಬಾ
ದಿನಗಳಾಗಿತ್ತು, ಹಾಗೇ ಲೋಕಾಭಿರಾಮವಾಗಿ ಮಾತಾಡಿ ಹೊರಡುವಾಗ ಮತ್ತೆ
ನೆನಪಾಗಿದ್ದು ಕುದುರೆ. ಯಾವಾಗಲೂ ಹಾಗೆ. ಬನ್ಸಿಯನ್ನು ನೋಡಿದಾಗ ಕುದುರೆ ಮತ್ತು
ಕನ್ನಡ ಚಳುವಳಿಗಾರ ವಾಟಾಳ್ ನಾಗರಾಜ್ ರನ್ನು ನೋಡುವಾಗ ಕತ್ತೆ ನೆನಪಾಗದೇ ಇರುವುದಿಲ್ಲ.
ಬನ್ಸಿ
ಮತ್ತು ನಾನು ಒಟ್ಟಿಗೇ ಪತ್ರಕರ್ತರಾಗಿದ್ದು. ಅವನು ಏಶಿಯನ್ ಏಜ್ ಸೇರಿ, ಅಲ್ಲಿಂದ
ಟೈಮ್ಸ್ ಆಫ್ ಇಂಡಿಯಾಗೆ ಸೇರಿದ. ನಾನು
ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿದ್ದೆ. ಇಬ್ಬರೂ
ಕ್ರೈಂ ರಿಪೋರ್ಟರ್ ಗಳು.
ಆ
ದಿನಗಳಲ್ಲಿ, ಕ್ರೈಂ
ರಿಪೋರ್ಟರ್ ಗಳ ನೆಡುವೆ ಪೈಪೋಟಿ ಜೋರಾಗಿತ್ತು. ನಮ್ಮ ಪತ್ರಿಕೆಯಲ್ಲಿ ನಾನೊಬ್ಬನೇ ಇದ್ದೆ. ಆದರೆ, ಟೈಂಸ್ ಆಫ್ ಇಂಡಿಯಾ ಸೇರಿದಂತೆ, ಕೆಲವಾರು
ಪತ್ರಿಕೆಗಳಲ್ಲಿ ಇಬ್ಬರು, ಮೂವರು
ಕ್ರೈಂ ರಿಪೋರ್ಟರ್ ಗಳು ಇರುತ್ತಿದ್ದರು. ದೇವರಿಗಿರಬೇಕಾದ ತಾಳ್ಮೆ ಇದ್ದ ಬನ್ಸಿಗೆ, ದೂರ್ವಾಸ
ಮುನಿಯ ಅಪರಾವತಾರದಂತಿದ್ದ ಶ್ರೀಧರ್ ಪ್ರಸಾದ್, ಬನ್ಸಿಯ
ಜೊತೆಗಾರ.
ಈ
ಪೈಪೋಟಿಗಳ ನೆಡುವೆ, ಕೆಲವು
ಪತ್ರಿಕೆಗಳ ವರದಿಗಾರರ ಗೋಳು ಹೇಳತೀರದು. ಯಾವುದಾದರೂ
ಸುದ್ದಿ ಸಿಗದೇಹೋದರೆ, ಮರುದಿನ ಆಫೀಸ್ ನಲ್ಲಿ ಅವರ ತಿಥಿ! ನನಗ್ಯಾವತ್ತೂ ಇಂಥಾ ಪರಿಸ್ತಿತಿ ಬಂದಿರಲಿಲ್ಲ. ಒಟ್ಟಿಗೆ, ಪೋಲಿಸ್
ಕಮಿಷನರ್ ಆಫೀಸಿನಲ್ಲಿ ಕೂತು ಮಾತಾಡುವಾಗ, ನನಗೆ
ಬೇರೆಯವರ
ಕಷ್ಟ ಅರ್ಥವಾಗುತ್ತಿತ್ತು. ಕೆಲವರಂತೂ,
ಅಫೀಸಿನಲ್ಲಿ ಕ್ರೈಂ ರಿಪೋರ್ಟಿಂಗ್ ನಿಂದ ಹೊರ ಬರಲು ಎಲ್ಲಾ ತರಹದ ಕಾರಣಗಳನ್ನೂ ಕೊಡುತ್ತಿದ್ದರು.
ನಿಧಾನವಾಗಿ, ವರದಿಗಾರರೆಲ್ಲ, ಒಂದು ಒಳ ಒಪ್ಪಂದಕ್ಕೆ ಬಂದೆವು. ಅದೇನೆಂದರೆ, ಆ ದಿನದ
ಸುದ್ದಿಗಳನ್ನು ಎಲ್ಲರೂ ಹಂಚಿಕೊಳ್ಳುವುದು. ವಿಶೇಷ ವರದಿಗಳನ್ನು ಮಾತ್ರ ಯಾರೂ ಪ್ರಶ್ನಿಸುವಂತಿಲ್ಲ. ಸರಿ, ರಾತ್ರಿ ಒಂಬತ್ತು ಘಂಟೆಗೆ ನಮ್ಮ ಸುದ್ದಿ ವಿನಿಮಯ ನೆಡೆಯುತ್ತಿತ್ತು. ನಮಗ್ಯಾರಿಗೂ ಮದುವೆಯಾಗಿಲ್ಲದಿದ್ದ ಕಾರಣ, ಕೆಲವೊಮ್ಮೆ
ಒಟ್ಟಿಗೆ ರಾತ್ರಿ ಊಟಕ್ಕೂ ಹೋಗುತ್ತಿದ್ದೆವು.
ನನಗೊಂದು
ಅಭ್ಯಾಸವಿತ್ತು. ನನ್ನ ಕೈಯಲ್ಲಿದ್ದ ವರದಿಗಳನ್ನು ಮುಗಿಸಿದ ತಕ್ಷಣ, ಯಾವುದಾದರೂ
ಪೋಲಿಸ್ ಅಧಿಕಾರಿಗೆ ಫೋನ್ ಮಾಡಿ, ಸುಮ್ಮನೆ ತಲೆ ತಿನ್ನುತ್ತಿದ್ದೆ. ಅದು ಕಮಿಷನರ್ ಇರಬಹುದು, ಅಥವಾ
ಕಾನ್ಸ್ ಟೇಬಲ್ ಇರಬಹುದು. ಕೆಲವೊಮ್ಮೆ, ಮಾತಿನ ಮಧ್ಯ ಒಳ್ಳೆ ವಿಶೇಷ ವರದಿಗಳು ಹುಟ್ಟಿದ್ದೂ ಇದೆ. ಆಗೇನೂ
ಮೊಬೈಲ್ ಫೋನ್ ಗಳು ಇರಲಿಲ್ಲ. ಒಂದು
ದಿನ, ಆಗಿನ
ದಕ್ಷಿಣ ವಿಭಾಗದ ಡಿ.ಸಿ.ಪಿ. ಆಗಿದ್ದ
ಸತ್ಯನಾರಾಯಣ ರಾವ್ ಅವರಿಗೆ ಫೋನ್ ಹಚ್ಚಿದೆ.
`ಸಾಹೇಬ್ರು ಇಲ್ಲ, ಊರಲ್ಲಿಲ್ಲ’ ಅಂತ ಆ ಕಡೆಯಿಂದ
ಉತ್ತರ ಬಂತು.
ಧ್ವನಿ
ಯಾಕೋ ಅವರ ಡ್ರೈವರ್ ದು ಅಂತ ಅನ್ನಿಸಿತು. ಯಾಕೋ
ಸ್ವಲ್ಪ ಮೂಡ್ ಹಾಳಾಗಿದೆ ಅಂತಾನೂ ಅನ್ನಿಸಿತು. `ಯಾರು? ರಾಜುನಾ’ ಅಂದೆ.
ಅವನಿಗೂ
ನನ್ನ ಧ್ವನಿ ಗುರುತಾಯ್ತು. `ವಿನಯ್ ಸರ್, ಸಾಹೇಬ್ರು
ನಾಡಿದ್ದು ಬರ್ತಾರೆ’ ಅಂದ.
`ಯಾಕ್ರೀ, ಸುಸ್ತಾಗಿದ್ದ
ಹಾಗಿದೆ?’ ಅಂದೆ.
`ಬೆಳಗ್ಗಿಂದ ಆ ಕುದುರೆ
ಹಿಡಿತಾ ಇದ್ವಲ್ಲ. ಬಡ್ಡೀಮಗಂದು, ಸಾಯಂಕಾಲದವರೆಗೆ ಆಟಾಡಿಸಿತು. ಊಟ
ಸಮೇತ ಇಲ್ಲ, ತಲೆ
ನೋಯ್ತಾ ಇದೆ. ಮನೆಗೆ
ಹೋಗಿ ಮಲಗಿದರೆ ಸಾಕು,’ ಅಂದು.
`ಯಾವ ಕುದುರೆರೀ? ನಿವ್ಯಾಕೆ
ಹಿಡಿಯೋಕೆ ಹೋದಿರಿ?’ ಅಂದೆ.
`ಓ… ನಿಮಿಗೊತ್ತಾಗಲಿಲ್ವಾ? ಬೆಳಗ್ಗೆ ಜಯನಗರ 5ನೀ
ಬ್ಲಾಕ್ ಆಟದ ಮೈದಾನ ಇದೆಯಲ್ಲ, ಅದರ
ಹತ್ತಿರ ಒಂದು ಹುಚ್ಚು ಕುದುರೆ ಬಂದಿತ್ತು. ಬೆಳಗ್ಗೆ
ಆಫೀಸ್ ಗೆ ಹೋಗ್ತಿದ್ದ ನಾಲ್ಕೈದು ಜನಕ್ಕೆ ಕಚ್ಚಿ ಬಿಡೋದಾ? ಸ್ಕೂಟರ್
ನಲ್ಲಿ ಹೋಗೋರನ್ನ ಬೀಳಿಸಿ ಕಚ್ಚಿದೆ ಸರ್. ಸರಿ, ನಮಗೆ ಗೊತ್ತಾಯ್ತು. ಸಾಹೇಬರೂ ಇರಲಿಲ್ಲ. ನಾನೂ
ಹೋದೆ. ಕುದುರೇನೇನೋ
ಆಟದ ಮೈದಾನದ ಒಳಗೆ ಓಡಿಸಿದ್ವಿ. ಹಿಡಿಯೋಕೆ
ಮಾತ್ರ ಆಗಲಿಲ್ಲ. ಒಂದು
ವ್ಯಾನ್ ಪೋಲಿಸ್ ಕರೆಸಿದ್ವಿ. ಆಗ್ಲೇ
ಇಲ್ಲ. ಕೊನೆಗೆ, ಹೆಬ್ಬಾಳದ ನಾಯಿ ಆಸ್ಪತ್ರೆಯಿಂದ ಡಾಕ್ಟರ್ ನ ಕರೆಸಿದ್ವಿ. ಅವರು ಇಂಜೆಕ್ಷನ್ ಕೊಟ್ಟು ಮಲಗಿಸಿ, ತಗೊಂಡು
ಹೋದ್ರು. ಊಟಾನೂ
ಇಲ್ಲ, ಏನೂ
ಇಲ್ಲ. ಅದು
ಕಚ್ಚಿದ್ರೆ ಹುಚ್ಚು ಹಿಡಿಯುತ್ತಂತೆ,’ ಅಂದ.
`ಆ ಡಾಕ್ಟ್ರ
ನಂಬರ್ ಇದೆಯಾ?’ ಅಂದೆ.
`ಇಲ್ಲೇ ಬರ್ಕೊಂಡಿದ್ದೆ, ತಗೊಳ್ಳಿ,’ ಅಂತ
ಕೊಟ್ಟ. ಸರಿ, ಡಾಕ್ಟರ್ ಗೂ ಪೋನ್ ಮಾಡಿ, ದೊಡ್ಡದೊಂದು
ರಿಪೋರ್ಟ್ ತಯಾರಿಸಿದೆ.
ಹತ್ತೇ
ನಿಮಿಷದಲ್ಲಿ ನಮ್ಮ ಸಂಪಾದಕರಾಗಿದ್ದ ಕೆ.ವಿ.ರಮೇಶ್ ಬಂದು ವರದಿಯ ಬಗ್ಗೆ ಒಂದೆರೆಡು ಪ್ರಶ್ನೆ ಕೇಳಿದರು. `ಮೈ
ಗಾಡ್’ ಎನ್ನುತ್ತಾ
ಅವರ ಕೋಣೆಗೆ ಹೋದರು. ಆಗಲೇ
ನನಗೆ ಗೊತ್ತಾಗಿದ್ದು: `ಇದು ತುಂಬಾ ಇಂಪಾರ್ಟೆಂಟ್. ನಾಳೆ, ಬೇರೆ
ಪತ್ರಿಕೆ ವರದಿಗಾರರಿಗೆ ಪೂಜೆಯಾಗುತ್ತೆ,’ ಅಂತ.
ಯಾರಿಗಿಲ್ಲದಿದ್ದರೂ
ಪರವಾಗಿಲ್ಲ. ಬನ್ಸಿಗೆ
ತೊಂದರೆ ಆಗೋದು ಬೇಡ ಅಂತ ಅವನಿಗೆ ಫೋನ್ ಮಾಡಿದೆ. `ಶ್ರೀಧರ್
ಹಿಯರ್’ ಅಂತ
ಎತ್ತಿದ, ದೂರ್ವಾಸ
ಮುನಿ.
`ನೋಡೋ, ಒಂದು
ರಿಪೋರ್ಟ್ ಇದೆ. ನಾನು
ದೊಡ್ಡದಾಗಿ ಕೊಟ್ಟಿದ್ದೀನಿ. ನಿಮಗೆ ಸುದ್ದಿ ತಪ್ಪಿ ಹೋಗಬಾರದಷ್ಟೆ. ನಾಲ್ಕು ಪ್ಯಾರಾ ಕೊಡ್ತೀನಿ. ಜಾಸ್ತಿ ಬರೀಬಾರ್ದು,’ ಅಂದೆ.
`ಅಣ್ಣಾ… ನನ್ನ
ಶಿಫ್ಟ್ ಮುಗೀತು. ಬನ್ಸಿ
ಬರ್ತಾ ಇದ್ದಾನೆ. ಅವನಿಗೆ
ಫೋನ್ ಕೊಡ್ತೀನಿ. ಅವನಿಗೇ
ಕೊಡು,’ ಅಂತ
ಬನ್ಸಿ ಕೈಗೆ ಫೋನ್ ವರ್ಗಾಯಿಸಿದ. ಬನ್ಸಿ ಸುದ್ದಿ ತೆಗೆದುಕೊಂಡಿದ್ದಲ್ಲದೆ, ಅವನಿಗೆ ಸಿಕ್ಕಿದ್ದ ಒಂದೆರೆಡು ಸಣ್ಣ ಸುದ್ದಿಗಳನ್ನೂ ನನಗೆ ಕೊಟ್ಟ. ಸರಿ, ಅವುಗಳನ್ನೂ ವರದಿ ಮಾಡಿ, ನಾನು
ಮನಗೆ ಹೋದೆ.
ಬೆಳಗ್ಗೆ
ನೋಡಿದರೆ, ಸುದ್ದಿ
ನಮ್ಮ ಪತ್ರಿಕೆಯಲ್ಲಿ ಮುಖಪುಟದಲ್ಲಿ ಬಂದಿತ್ತು. ಟೈಂಸ್
ಆಫ್ ಇಂಡಿಯಾದಲ್ಲಿ ಸೇರಿದಂತೆ, ಯಾವುದೇ ಪತ್ರಿಕೆಯಲ್ಲಿ
ಅದರ ಸುಳಿವೇ ಇರಲಿಲ್ಲ. ಜಾಗ
ಕಡಿಮೆ ಇತ್ತೇನೋ ಅಂದುಕೊಂಡು ಸುಮ್ಮನಾದೆ.
ಮಧ್ಯಾಹ್ನದ ಹೊತ್ತಿಗೆ, ಕಮೀಷನರ್ ಅಫಿಸ್
ಗೆ ಹೋಗಿ, ಪ್ರೆಸ್ ರೂಮಿನಲ್ಲಿ ಎಲ್ಲರ ಜೊತೆ ಮಾತಾಡ್ತಾ ಕೂತಿದ್ದೆ. ಮುಖ ಗಂಟಿಕ್ಕಿಕೊಂಡು ಶ್ರೀಧರ್
ಬರುವುದು ಕಂಡ ನಾನು: `ಅಲ್ವೋ, ಜಾಗ ಇರಲಿಲ್ವಾ? ಕುದುರೆ ಸುದ್ದಿ ಕೊಟ್ಟಿದ್ನಲ್ಲಾ?’ ಅಂದೆ.
`ನನ್ನೇನ್ ಕೇಳ್ತೀಯಾ? ಬರ್ತಾ ಇದ್ದಾನಲ್ಲಾ,
ಅವನ್ನೇ ಕೇಳು,’ ಅಂದವನೇ, ಸಿಗರೇಟು ಹಚ್ಚಿ ಬುಸಬುಸನೆ ಹೊಗೆ ಬಿಡೋಕೆ ಶುರು ಮಾಡಿದ. ಹಿಂದೆಯೇ ಬಂದ
ಬನ್ಸಿ, ಸಮಾಧಾನದಿಂದಲೇ, `ಸಿಟ್ಟು ಮಾಡ್ಕೋಬೇಡ ಕಣೋ, ಅದೇನಾಯ್ತು ಗೊತ್ತಾ?’ ಅಂದ.
`ಇನ್ನೇನೋ ಅಗ್ಬೇಕು? ಅಲ್ಲಾ, ಇವನು ಫೋನ್ಮಾಡಿ
ಕೊಟ್ಟಿದ್ದಾನೆ. ನಿನಗಾಗ್ದೆ ಹೋಗಿದ್ದರೆ, ಹೇಳ್ಬೇಕಿತ್ತು. ಐದು ನಿವಿಷದಲ್ಲಿ ನಾನೇ ಬರೀತ್ತಿದ್ದೆ,’
ಅಂತ ಕೂಗಾಡಿದ. ಬನ್ಸಿ ಪೆಚ್ಚಾಗಿ ನಿಂತ.
`ಏನಾಯ್ತೋ ಬನ್ಸಿ?’ ಅಂತ ನಾನೇ ಕೇಳಿದೆ.
` `ಅಣ್ಣಾ… ನೀ ಸುದ್ದಿ ಕೊಟ್ಟಲ್ಲಾ, ಅದ್ನ ಒಂದು ಪೇಪರ್ ನಲ್ಲಿ ಬರ್ಕೊಂಡೆ. ಅದನ್ನ ಟೈಪ್ ಮಾಡೋಣಾ
ಅಂತ ಇದ್ದೆ, ಅಷ್ಟೊತ್ತಿಗೆ ರೈಲ್ವೇ ರಿಸರ್ವೇಷನ್ ಬಂತು. ಅದೇ ಪೇಪರ್ ತಿರುಗಿಸಿ, ಅದರ ಹಿಂದೆ ರೈಲ್ವೇ
ರಿಸರ್ವೇಷನ್ ಬರ್ಕೊಂಡು, ಆ ಪೇಪರ್ ನ ಡೆಸ್ಕಿಗೆ ಕೊಟ್ಟೆ. ಮರ್ತೇ ಹೋಯ್ತು,’ ಅಂದ ತಣ್ಣಗೆ.
`ಅಲ್ವೋ…..’ ಅಂತ ಏನೋ ಹೇಳಲು ಹೋಗಿ,
ಸುಮ್ಮನಾದೆ. ಇಬ್ಬರನ್ನೂ ಬೆಳಗ್ಗೆ ಎಬ್ಬಿಸಿದ್ದು ಅವರ ಸಂಪಾದಕ ಬಲರಾಮರ ಫೋನ್. ಹತ್ತುಘಂಟೆಯ ಹೊತ್ತಿಗೆ
ಆಫೀಸಿಗೆ ಕರೆಸಿ, ಸೋಪು, ನೀರು ಏನೂ ಇಲ್ಲದೆ, ಇಬ್ಬರಿಗೂ ಒಂದು ಘಂಟೆ ಸ್ನಾನ ಮಾಡಿಸಿ ಕಳುಹಿಸಿದ್ದರು,
ಅಷ್ಟೆ! ಇವರಿಬ್ಬರ ಅವಸ್ಥೆಗಿಂತ, ಹಿಂದಿನ ದಿನ, ಕುದುರೆ ಕೈಲಿ ಕಚ್ಚಿಸಿಕೊಂಡು, ಊಟಬಿಟ್ಟು ಅದನ್ನು
ಹಿಡಿದವರ ಪರಿಸ್ಥಿತಿಯೇ ವಾಸಿ ಅಂತ ಅನ್ನಿಸಿತು.
ಒಂದು ಪತ್ರಿಕೆ ಹೇಗೆ ಕೆಲಸ ಮಾಡುತ್ತೆ
ಅಂತ ಸಾಮಾನ್ಯ ಪ್ರಜ್ನೆಯೂ ಇಲ್ಲದ ಆ ಕಾಲದಲ್ಲಿ, ನಾವ್ಯಾವುದೋ ಸಾಮ್ರಾಜ್ಯ ಆಳುತ್ತಿದ್ದೇವೆ ಎಂಬ ಭ್ರಮೆಯಲ್ಲಿರುತ್ತಿದ್ದೆವು.
ಏನು ಬರೆಯಬೇಕು, ಏನು ಬರೆಯಬಾರದು ಅನ್ನೋದು ನಮ್ಮದೇ ನಿರ್ಧಾರ. ಸರಿಯಾಗಿದ್ದಾಗ, ನಾಲ್ಕಾರು ಜನ ಹೊಗಳಿದಾಗ,
ಎದೆ ಉಬ್ಬಿಸಿಕೊಂಡು ನೆಡೆಯುತ್ತಿದ್ದೆವು. ಯಡವಟ್ಟಾಗಿ, ಆಫೀಸಿನಲ್ಲಿ ಯದ್ವಾತದ್ವಾ ಬೈಸಿಕೊಂಡಾಗ ಮಾತ್ರ,
ಪೆಕರು ಪೆಕರಾಗಿ, ತಲೆಕೆರೆದುಕೊಂಡು ತಿರುಗುತ್ತಿದ್ದೆವು.
ಅಂತಹ ನಿರ್ಧಾರಗಳಲ್ಲಿ, ಬೆಂಗಳೂರಿನಲ್ಲಿ
ಪ್ರತಿನಿತ್ಯ ನೆಡೆಯುತ್ತಿದ್ದ ಪ್ರತಿಭಟನೆಗಳನ್ನು ವರದಿ ಮಾಡುವುದಿಲ್ಲ ಎಂಬುದೂ ಒಂದು. ಆಗ ಮಹಿಳಾ
ಸಂಘಟನೆಗಳು, ದಲಿತ ಸಂಘಟನೆಗಳು ಮತ್ತು ಕನ್ನಡ ಪರ ಸಂಘಟನೆಗಳು, ದಿನವೂ ಒಂದಲ್ಲೋಂದು ಕಾರಣದಿಂದ ಪ್ರತಿಭಟನೆ
ನೆಡೆಸುತ್ತಿದ್ದವು. ನನ್ನ ನಿರ್ಧಾರಕ್ಕೆ, ಸೈದ್ದಾಂತಿಕ ಕಾರಣವೇನೂ ಇರಲಿಲ್ಲ. ಎಂಬತ್ತಕ್ಕೂ ಹೆಚ್ಚು
ಪೋಲಿಸ್ ಠಾಣೆಗಳಲ್ಲಿ ನೆಡೆಯುವ ಅನಾಹುತಗಳ ಹಿಂದೆ ಹೋಗುವುದರೊಳಗೆ, ಇದಕ್ಕೆ ಸಮಯ ಸಿಗುತ್ತಿರಲಿಲ್ಲ.
ಕನ್ನಡ ಸಂಘಟನೆಗಳಲ್ಲಿ ಆಗ ಎಂ ಎಲ್ ಎ
ಆಗಿದ್ದ ವಾಟಾಳ್ ನಾಗರಾಜ್ ಅವರದ್ದೇ ಸಾಮ್ರಾಜ್ಯ. ದಿನಕ್ಕೊಂದು ವಿನೂತನ ಪ್ರತಿಭಟನೆ, ಫೋಟೋಗ್ರಾಫರ್
ಗಳಿಗೆ ಹಬ್ಬ. ಕನ್ನಡ ಪತ್ರಿಕೆಗಳಲ್ಲಿ ಆಗಾಗ ನೋಡುತ್ತಿದ್ದರೂ, ಇಂಗ್ಲಿಷ್ ಪತ್ರಿಕೆಗಳು ಅಷ್ಟೇನು
ತಲೆಕೆಡಿಸಿಕೊಂಡಿರಲಿಲ್ಲ.
ಇದಲ್ಲದೆ, ನಮ್ಮ ಛೀಫ್ ಆಗಿದ್ದ ನಚ್ಚಿ
ಒಮ್ಮೆ ವಾಟಾಳ್ ಅವರಿಗೆ ತಗುಲಿಕೊಂಡಿದ್ದರು. ಅಸೆಂಬ್ಲಿಯಲ್ಲಿ ಮಾತಾಡುತ್ತಾ ವಾಟಾಳ್, ಇಂಡಿಯನ್ ಎಕ್ಸ್
ಪ್ರೆಸ್ ತಮಿಳುನಾಡಿನ ಪೇಪರ್, ಕನ್ನಡ ವಿರೋದಿ ಅಂತ ಹೇಳಿಬಿಟ್ಟರು. ಕೆರಳಿದ ನಚ್ಚಿ ಬರೆದೇ ಬಿಟ್ಟರು:
`ಕನ್ನಡ ಆಕ್ಟಿವಿಸ್ಟ್ ವಿ.ನಾಗರಾಜ್ ಸೇಸ್…….’ ಅಂತ. `ವಾಟಾಳ್’ ಅನ್ನೋ ಟ್ರಂಪ್ ಕಾರ್ಡ್ ಮೂಲಕ್ಕೇ, ನಚ್ಚಿ ಕೈ ಹಾಕಿದ್ದರು. ಮರುದಿನ ಅಸೆಂಬ್ಲಿಯಲ್ಲಿ ನಚ್ಚಿಗೆ ಕೈ ಮುಗಿದು: `ಸ್ವಾಮಿ, ಇನ್ನು ನಿಮ್ಮ
ಸಹವಾಸಕ್ಕೆ ಬರೋಲ್ಲ. ಏನಾದರೂ ಮಾಡಿಕೊಳ್ಳಿ, ವಿ.ನಾಗರಾಜ್ ಅಂತ ಮಾತ್ರ ಬರೀಬೇಡಿ,’ ಅಂದಿದ್ದರು. ಹಾಗಾಗಿ,
ವಾಟಾಳ್ ಬಗ್ಗೆ ಏನೂ ಬರೆಯೋಲ್ಲ ಅಂತ ನಾನೂ ನಿರ್ಧರಿಸಿದ್ದೆ.
ಆಗ ವಿಧಾನಸೌಧದ ಸುತ್ತ ಬೇಲಿಯಾಗಲೀ, ಈಗಿನಂತೆ
ಭದ್ರತೆಯಾಗಲೀ ಇರಲಿಲ್ಲ. ವಿಧಾನಸೌಧದ ಒಳಗಿನ ರಸ್ತೆಯನ್ನು ಅಡ್ಡದಾರಿಯಾಗಿಯೂ ಉಪಯೋಗಿಸುತ್ತಿದ್ದೆವು.
ಒಂದು ದಿನ, ಇದೇ ಅಡ್ಡದಾರಿಯಲ್ಲಿ ಬರುವಾಗ, ವಾಟಾಳ್ ನಾಗರಾಜ್ ಮತ್ತು ಒಂದ್ಹತ್ತು ಜನ ವಿಧಾನಸೌಧದ
ಹತ್ತಿರ ಕಂಡರು. ಅವರ ಪಕ್ಕ ಒಂದು ಟೆಂಪೋ ಬೇರೆ ನಿಂತಿತ್ತು. ಏನು ಅಂತ ಆ ಕಡೆ ನೋಡಿದಾಗ, ಒಬ್ಬ ಒಂದು
ಕತ್ತೆಯನ್ನು ಹಿಡಿದುಕೊಂಡಿದ್ದರೆ, ಇನ್ನೊಬ್ಬ ಎರಡು ಕೋಳಿಗಳನ್ನು ಹಿಡಿದುಕೊಂಡಿದ್ದ. ನಾಯಿ, ಬೆಕ್ಕು,
ಕುರಿಗಳೂ ಇದ್ದವು. ಇನ್ನಿಬ್ಬರು, ಟೆಂಪೋದಿಂದ ಒಂದು ಎಮ್ಮೆಯನ್ನು ನಿಧಾನವಾಗಿ ಇಳಿಸುತ್ತಿದ್ದರು.
ಸರಿ, ರಾಜಕಾರಣಿಗಳನ್ನು, ಈ ಪಾಪದ ಪ್ರಾಣಿಗಳಿಗೆ ಹೋಲಿಸುವ
ಪ್ರತಿಭಟನೆ, ಅಂತ ನೋಡುತ್ತಾ ನಿಂತೆ.
ಎಮ್ಮೆಯನ್ನು ಇಳಿಸಿದ ತಕ್ಷಣ, ಇಬ್ಬರೂ
ಮತ್ತೆ ಟೆಂಪೋ ಮೇಲೆ ಹತ್ತಿದರು. ಏನು ಅಂತ ನೊಡುತ್ತಿದ್ದಂತೆ, ಒಂದು ಉದ್ದವಾದ ದೊಣ್ಣೆಯನ್ನು ಹೆಗಲಿಗೆ
ಹೊತ್ತುಕೊಂಡರು. ಅದರಲ್ಲಿತ್ತು, ನಾಲ್ಕೂ ಕಾಲುಗಳನ್ನು ದೊಣ್ಣೆಗಳಿಗೆ ಬಿಗಿದು, ತಲೆಕೆಳಕ್ಕಾಗಿ ಕಟ್ಟಿದ್ದ
ಹಂದಿ. ಇವರು ಎತ್ತುತ್ತಿದ್ದಂತೆ, ಹಂದಿ ಕಿರ್ರೋ…. ಅಂತ ಜೋರಾಗಿ ಕೂಗಲು ಶುರುಹಚ್ಚಿಕೊಂಡಿತು. ಏನಾಯ್ತು
ಅಂತ ನೋಡೋದ್ರೊಳಗೆ, ಕತ್ತೆ ಗಾಬರಿಯಾಗಿ, ಹಿಡಿದುಕೊಂಡವನನ್ನು ಝಾಡಿಸಿ, ವಿಧಾನಸೌಧದ ಹುಲ್ಲುಗಳ ಮೇಲೆ
ಓಡತೊಡಗಿತು. ವಾಟಾಳ್ ಜೊತೆ ತಮಟೆ ಹೊಡೆಯುತ್ತಿದ್ದ ಗೋಪಿ, `ಹಿಡ್ಕೊಳ್ರೋ…ಹಿಡ್ಕೊಳ್ರೋ’ ಅಂತ ಕೂಗಿದ
ತಕ್ಷಣ, ಹಂದಿಯನ್ನು ಕೆಳಗೆ ಹಾಕಿದ ಇಬ್ಬರು ಕತ್ತೆಯ ಹಿಂದೆ `ಸತ್ತೆವೋ, ಬಿದ್ದೆವೋ’ ಅಂತ ಓಡಲು ಶುರುಮಾಡಿದರು.
ಇನ್ನೂ ಗಾಬರಿಯಾದ ಕತ್ತೆ, ವಿಧಾನಸೌಧದ ಆವರಣ ದಾಟಿ, ರಸ್ತೆಯನ್ನೂ ದಾಟಿ, ಹೈಕೋರ್ಟ್ ಆವರಣದೊಳಗೆ ಹೋಗಿ,
ಕಬ್ಬನ್ ಪಾರ್ಕ್ ನಲ್ಲಿ ಕಣ್ಮರೆಯಾಯ್ತು. ಅದರ ಹಿಂದೆಯೇ, ಇವರಿಬ್ಬರೂ ಕೂಡ…
ಆಫೀಸಿಗೆ ಬಂದವನೇ ನಚ್ಚಿಗೆ ನೋಡಿದ್ದನ್ನು
ಹೇಳಿ, ನಗಲಾರಂಭಿಸಿದೆ. `ಲೋ ಮಾಕೋನಹಳ್ಳಿ, ಐಟಮ್ ಚೆನ್ನಾಗಿದೆ ಕಣೋ. ಬರಿಯೋ…. ನಸೀಬು ಚೆನ್ನಾಗಿದ್ದರೆ
ಪ್ರಿಂಟ್ ಆಗುತ್ತೆ’ ಅಂದರು. ಸರಿ, ನೋಡೋಣ ಅನ್ಕೊಂಡು ಸುಮ್ಮನಾದೆ. ಒಂದೆರೆಡು ಘಂಟೆ ಬಿಟ್ಟು ವಿಧಾನಸೌಧದ
ಹತ್ತಿರ ಹೋದೆ. ಅಲ್ಲಿ ಯಾರೂ ಇರಲಿಲ್ಲ. ಪ್ರತಿಭಟನೆ ಮುಗಿಸಿ ಹೋಗಿದ್ದಾರೆ ಅನ್ಕೊಂಡು, ನೃಪತುಂಗ ರಸ್ತೆಯಲ್ಲಿರುವ
ಕೋರ್ಟ್ ಕಡೆ ಹೊರಟೆ. ಗೋಪಾಲಗೌಡ ವೃತ್ತದ ಹತ್ತಿರ ಹೋದಾಗ, ಕಬ್ಬನ್ ಪಾರ್ಕ್ ಮರದಡಿಯಲ್ಲಿ, ಕತ್ತೆಯನ್ನು
ಹಿಡಿದುಕೊಂಡು, ಓಡಿದವರಿಬ್ಬರು ನಿಂತಿದ್ದರು. ಬೈಕ್ ನಿಲ್ಲಿಸಿ, ಅವರ ಹತ್ತಿರ ಹೋಗಿ: `ಕತ್ತೆ ಸಿಕ್ತಾ?’
ಅಂದೆ.
`ಇಡೀ ಪಾರ್ಕ್ ಎರಡು ಸುತ್ತು ಹೊಡಸ್ತು…
ಅವರೇನೋ ಸ್ಟ್ರೈಕ್ ಮುಗಿಸಿ ಹೋದ್ರು. ನಾವೀಗ, ಕತ್ತೆ ಜೊತೆ ರಾಜಾಜಿನಗರ ಧೋಬಿ ಘಾಟ್ ವರೆಗೆ ನೆಡಕೊಂಡು
ಹೋಗಬೇಕು,’ ಅಂದ ಒಬ್ಬ.
`ಟೆಂಪೋ ಇತ್ತಲ್ಲ?’ ಅಂದೆ.
`ಬೇರೆ ಪ್ರಾಣಿ ತಂದಿರ್ತರಲ್ಲಾ, ಅದನ್ನ
ವಾಪಾಸ್ ಕೊಡೋಕೆ ಹೋಗಿರ್ತದೆ,’ ಅಂದ.
`ಅಲ್ಲಾ, ಈ ಕತ್ತೆ ಹಿಂದೆ ಯಾಕೆ ಓಡಿದ್ರೀ?’
ಅಂತ ಕೇಳಿದೆ.
`ಅಯ್ಯೋ ಸ್ವಾಮಿ, ಇದು ಧೋಬಿ ಘಾಟ್ ನಿಂದ
ಬಾಡಿಗೆಗೆ ತಂದಿದ್ದು. ಬಾಡಿಗೆ ಐವತ್ತು ರೂಪಾಯಿ ಕೊಟ್ಟಿದ್ದೀವಿ. ಕತ್ತೆ ವಾಪಾಸ್ ಕೊಡದೇ ಹೋದರೆ,
ಒಂದುವರೆ ಸಾವಿರ ಕೊಡಬೇಕು, ಅಷ್ಟೆ,’ ಅಂದ ಇನ್ನೊಬ್ಬ.
ಕತ್ತೆ ಕಡೆ ನೋಡಿದೆ. ಅದು ಏನೂ ಅಗಿಲ್ಲ
ಎಂಬಂತೆ, ತಿನ್ನಲು ಏನಾದರೂ ಸಿಗುತ್ತಾ ಅಂತ, ಆ ಕಡೆ, ಈ ಕಡೆ ನೋಡ್ತಾ ಇತ್ತು. ಸರಿ ಅಂತ ಅಲ್ಲಿಂದ
ಹೊರಟೆ.
ವಾಟಾಳ್ ಪ್ರತಿಭಟನೆ, ಕಡೆಗೂ ಸುದ್ದಿಯಾಗಲೇ
ಇಲ್ಲ. ಆದರೆ, ಕತ್ತೆ ಓಡಿಹೋಗಿದ್ದು ಮಾತ್ರ, ನಮ್ಮ ಪತ್ರಿಕೆಯಲ್ಲಿ, ಮುಖಪುಟ ಸುದ್ದಿಯಾಗಿತ್ತು
ಮಾಕೋನಹಳ್ಳಿ ವಿನಯ್ ಮಾಧವ
Vatalge mattu avara kattege jayavaagali
ಪ್ರತ್ಯುತ್ತರಅಳಿಸಿMYSORIGE HODAAGA TAANGA MELE SAVARI MADABEKEMBA AASE, E KUDUREYA NENAPU MATRA AAGADIRALI MARAYA...bhatta
ಪ್ರತ್ಯುತ್ತರಅಳಿಸಿಈ ಪೋಸ್ಟ್ ಓದಿದಾಗ ನಾನೂ ಕಂಡ ಅದೆಷ್ಟೋ ಸುದ್ಧಿ ಅನರ್ಥಗಳು ನೆನಪಾದವು ಸರ್. Good one!
ಪ್ರತ್ಯುತ್ತರಅಳಿಸಿHilarious!
ಪ್ರತ್ಯುತ್ತರಅಳಿಸಿnimma vrutti badukinalli kanisida intha swaarasyakara anubhavagalannu bareyiri sir...ee baraha bahala chennaagide
ಪ್ರತ್ಯುತ್ತರಅಳಿಸಿManikanth