ಶುಕ್ರವಾರ, ಆಗಸ್ಟ್ 17, 2012

ಅಣ್ಣು


ಯಾರು? ತಪ್ಪಿದ್ದೆಲ್ಲಿ? ಅನ್ನೋದು ಯಕ್ಷ ಪ್ರಶ್ನೆಯಾಗೇ ಉಳೀತು

ಬೆಳಗ್ಗಿನ ಜಾವ ಐದೂವರೆಯಾಗಿತ್ತು. ಮನೆ ಮುಂದೆ ಆಟೋರಿಕ್ಷಾ ಬಂದು ನಿಂತ ಸದ್ದಾಯಿತು. ಹಾಗೇ, ಗೇಟು ತೆಗೆದು ಯಾರೋ ಒಳಗಡೆ ಬಂದು, ಕಿಟಕಿಯಿಂದ ಕೈ ಹಾಕಿ, ಬೀಗದ ಕೀಲಿ ತೆಗೆದುಕೊಂಡ ಶಬ್ದ ಬಂತು.
`ಕುಟ್ಟಪ್ಪ ಬಂದಿರಬೇಕು’ ಅಂದ್ಕೊಂಡೆ. ಆರು ಜನ ಹುಡುಗರು ಸೇರಿ ಮಾಡಿಕೊಂಡಿದ್ದ ಬಾಡಿಗೆ ಮನೆ.  ನನ್ನನ್ನು ಹೊರತಾಗಿಸಿ, ಎಲ್ಲರೂ ಕೆಲಸಕ್ಕೆ ಹೋಗುತ್ತಿದ್ದರು. ಯಾರಾದರೂ ಊರಿಗೆ ಹೋದವರು, ರಾತ್ರಿ ಬಸ್ಸಿಗೆ ಬಂದು, ಈ ಥರ ಕೀಲಿ ತೆಗೆದು ಒಳಗೆ ಬರುವುದು ವಾಡಿಕೆ. ಹಾಗಾಗಿ, ನಾನೇನೂ ಏಳುವ ಗೋಜಿಗೆ ಹೋಗಲಿಲ್ಲ.
ಕುಟ್ಟಪ್ಪ ಒಳಗೆ ಬಂದವನೇ ಕೊಡವ ಭಾಷೆಯಲ್ಲಿ ಏನೋ ಮಾತಾಡಲು ಶುರುಮಾಡಿದ. ಒಂದೆರೆಡು ನಿಮಿಷ ಬಿಟ್ಟು, ನೀನು ಇಲ್ಲಿ ಮಲಗಿಕೋ ಅಂತ ಹೇಳಿದ್ದು ಕೇಳಿಸಿತು. `ಯಾರನ್ನ ಕರ್ಕೊಂಡು ಬಂದಿದ್ದಾನೆ? ಅವನ ಜೊತೆ ಪಕ್ಕದ ರೂಮಲ್ಲಿ ಮಲಗೋಕೆ  ಹೇಳೋಕೆ ಬಿಟ್ಟು, ಹಾಲಲ್ಲಿ ಮಲಗೋಕೆ ಯಾಕೆ ಹೇಳ್ತಿದ್ದಾನೆ?’ ಅಂತ ಗೊತ್ತಾಗಲಿಲ್ಲ.
ಹೊರಗಡೆಯಿಂದ `ಓ…’ ಅಂತ ಯಾರೋ ಅಂದಿದ್ದು ಕೇಳಿಸ್ತು. `ಇದ್ಯಾರಪ್ಪಾ?’ ಅಂತ ಅನ್ಕೊಂಡ್ರೂ, ಸುಮ್ಮನೆ ಬಿದ್ದುಕೊಂಡಿದ್ದೆ.
ಬೆಳಗ್ಗೆ ಎದ್ದು ನೋಡಿದರೆ, ಮೂಲೆಯಲ್ಲಿ ಒಂದು ಬೆಡ್ ಶೀಟ್ ಹೊದ್ದುಕೊಂಡು, ಯಾರೋ ಒಬ್ಬ ಹುಡುಗ ಬಿದ್ದುಕೊಂಡಿದ್ದ. ಕುಟ್ಟಪ್ಪನ ಕಾಫೀ ತೋಟದಲ್ಲಿ ಕೆಲಸ ಮಾಡುವ ಆಳಿರಬೇಕು ಅನ್ಕೊಂಡೆ. ನಾನೆದ್ದ ಸ್ವಲ್ಪ ಹೊತ್ತಿನಲ್ಲಿ, ಹೇಮಂತ, ವೇದಮೂರ್ತಿ, ಜಯಂತ ಮತ್ತು ಗಣಪತಿ ಸಹ ಎದ್ದರು. ನಮ್ಮ ಮನೆ ಒಂಥರಾ ದರ್ಮ ಛತ್ರದ ಥರ ಇದ್ದಿದ್ದರಿಂದ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ.
ಸ್ವಲ್ಪ ಹೊತ್ತಿಗೆ ಆ ಹುಡುಗನೂ ಎದ್ದು ಕೂತು ಮಿಕಿ ಮಿಕಿ ನೋಡೋಕೆ ಶುರು ಮಾಡ್ದ. `ಏನೋ ಹೆಸರು?’ ಅಂತ ಕೇಳಿದ ತಕ್ಷಣ `ಅಣ್ಣು’ ಅಂದ. `ಯಾವೂರು?’ ಅಂತ ಕೇಳಿದಾಗ, `ಕುಟ್ಟ’ ಅಂದ. ಸರಿ, ನಾಗರಹೊಳೆ ಕಾಡಿಂದ ನೇರವಾಗಿ ಬಂದಿದ್ದಾನೆ ಅಂದ್ಕೊಂಡೆ. ಮುಂದೇನು ಕೇಳ್ಬೇಕು ಅಂತ ಗೊತ್ತಾಗಲಿಲ್ಲ. ಎಲ್ಲರ ಜೊತೆ ಅವನಿಗೂ ಟೀ ಕೊಟ್ಟು, ಸುಮ್ಮನಾದೆ.
ಕುಟ್ಟಪ್ಪ ಏಳುವಾಗ ಉಳಿದವರೆಲ್ಲ ಕೆಲಸಕ್ಕೆ ಹೋಗಿದ್ದರು. ಅಷ್ಟರವರೆಗೆ, ಅಣ್ಣು ಮೂಲೆಯಲ್ಲಿ ನಿಂತುಕೊಂಡು ಎಲ್ಲವನ್ನೂ ಕುತೂಹಲದಿಂದ ನೋಡುತ್ತಿದ್ದ. ಕುಟ್ಟಪ್ಪ ಏಳುವ ಹೊತ್ತಿಗೆ, ನಾನು ಆ ಹುಡುಗನಿಗೆ ಬ್ರೆಡ್ ಕೊಟ್ಟು ತಿನ್ನಲು ಹೇಳಿದ್ದೆ.
`ಇವನು ನಮ್ಮ ಅಕ್ಕನ ತೋಟದಲ್ಲಿ ಕೆಲಸಕ್ಕೆ ಇದ್ದ. ಇಲ್ಲಿ ಮನೆ ಕೆಲಸ ಮಾಡೋಕೆ ಇರಲಿ ಅಂತ ಕರ್ಕೊಂಡು ಬಂದೆ,’ ಅಂದ.
ನಾನೇನೂ ಮಾತಾಡಲಿಲ್ಲ. ಸಾಯಂಕಾಲ ಎಲ್ಲರೂ ಬರಲಿ ಅಂತ ಸುಮ್ಮನಾದೆ. ಯಾಕೋ ಈ ಹುಡುಗನ್ನ ಕೆಲಸಕ್ಕೆ ಇಟ್ಟುಕೊಳ್ಳಲು ಎಲ್ಲರೂ ಒಪ್ಪೋದಿಲ್ಲ ಅನ್ನಿಸಿತು. 13-14 ವರ್ಷದ ಆ ಹುಡುಗ ಯಾವಾಗ ಸ್ನಾನ ಮಾಡಿದ್ದ ಅಥವಾ ಯಾವಾಗ ಬಟ್ಟೆ ಒಗೆದಿದ್ದ ಅಂತ ಖಂಡಿತವಾಗಿ ಹೇಳೋಕೆ ಆಗ್ತಿರಲಿಲ್ಲ. ಮನೆಯಲ್ಲಿದ್ದವರೆಲ್ಲ `ಕ್ಲೀನಪ್ಪಗಳು’. ಇವನನ್ನು ಇಟ್ಕೋತ್ತಾರಾ? ಅಂತ ಅನ್ನಿಸಿತ್ತು.
ಆದರೆ, ಬಂದ ತಕ್ಷಣವೇ ವೇದಮೂರ್ತಿ ಅಣ್ಣುವನ್ನು ಒಪ್ಪಿಕೊಂಡೇ ಬಿಟ್ಟ. ಮೊದಲ ಕೆಲಸ ಮಾಡಿದ್ದು ಅಂದ್ರೆ, ಅವನಿಗೆ ಸೋಪು ತಂದುಕೊಟ್ಟು ಸ್ನಾನ ಮಾಡಲು ಹೇಳಿದ್ದು. ಆಮೇಲೆ, ಅವನಿಗೆ ಬೇರೆ ಹಳೇ ಬಟ್ಟೆ ಕೊಟ್ಟು, ಅವನು ಹಾಕಿಕೊಂಡು ಬಂದಿದ್ದ ಬಟ್ಟೆಯನ್ನು ಒಗೆಯಲು ಹೇಳಿದ್ದು. ಸಾಯಂಕಾಲದೊಳಗೆ ಅಣ್ಣು ಸ್ವಚ್ಚವಾಗಿ ಕಾಣೋಕೆ ಶುರುವಾದ.
ಅವತ್ತಿನಿಂದ ಅಣ್ಣು ನಮ್ಮ ಮನೆಯ ಏಳನೇ ಸದಸ್ಯನಾಗೇ ಬಿಟ್ಟ. ಅಣ್ಣು ನಾಗರಹೊಳೆಯ ಪಕ್ಕದಲ್ಲಿರುವ ಕುಟ್ಟದಿಂದ ಬಂದ ಕಾಡು ಕುರುಬರ ಹುಡುಗ. ಅವನಿಗೆ ಕಾಡು ಕುರುಬರಿಗಿರುವ ಎಲ್ಲಾ ಗುಣಗಳೂ ಇದ್ದವು. ನಾವು ಏನು ಹೇಳಿದರೂ, ಅದು ಅವನಿಗೆ ಬೇರೆ ಥರಾನೇ ಅರ್ಥವಾಗಿ, ಅನರ್ಥಗಳಾಗುತ್ತಿದ್ದವು. ಈ ಬ್ರಹ್ಮಚಾರಿಗಳ ಸಂಸಾರಕ್ಕೆ ಅವನೊಂದು ಥರ ಮನರಂಜನೆಯ ಮೂಲವಾಗಿದ್ದ.
ಮೊದಲು, ಕನಕರಾಜನ ಅಂಗಡಿಗೆ ಹೋಗಿ, ಹಾಲು ತಂದು ಟೀ ಮಾಡುವುದನ್ನು ಕಲಿತ. ಆಮೇಲೆ, ನಿಧಾನವಾಗಿ ಅನ್ನ ಮತ್ತು ಸಾರು ಮಾಡಿ, ಎಲ್ಲರಿಗೂ ಮೊಟ್ಟೆ ಮಾಡಿಕೊಡುವುದನ್ನೂ ಕಲಿತ. ನಮಗೆ ಇಷ್ಟು ಕೆಲಸ ಸಾಕಾಗುತ್ತಿತ್ತು.
ಅಣ್ಣುವನ್ನು ತಿದ್ದೋ ಕೆಲಸ ವೇದಮೂರ್ತಿ ಮಾಡಿದ. ಎಲ್ಲರ ಹಳೇ ಬಟ್ಟೆಗಳನ್ನು ತೆಗೆದು ಅಣ್ಣುವಿಗೆ ಕೊಟ್ಟ. ಅವನಿಗೆ ದಿನಾ ಸ್ನಾನ ಮಾಡಬೇಕು ಅಂತ ತಾಕೀತು ಮಾಡಿದ. ಅವನ ಒಡೆದ ಕೈ, ಕಾಲುಗಳಿಗೆ ಹಚ್ಚಲು ವ್ಯಾಸೆಲಿನ್ ತಂದು ಕೊಟ್ಟ. ಒಂದೆರೆಡು ವಾರದಲ್ಲೇ ಅಣ್ಣು ಲಕ ಲಕ ಹೊಳೆಯಲಾರಂಭಿಸಿದ. ಅದರೆ, ಅವನ ಕನ್ನಡಕೊಳಗೆ, ಕೊಡವ ಭಾಷೆ ಮತ್ತು ಸ್ವಲ್ಪ ಮಲಯಾಳಂ ಎಲ್ಲಾ ಸೇರಿರುತ್ತಿತ್ತು. ಒಟ್ಟಾರೆ ನಮಗೆ ಅರ್ಥವಾಗುತ್ತಿತ್ತು.
ಸ್ವಲ್ಪ ದಿನಗಳಲ್ಲೇ ಅಣ್ಣು ನಮಗಿಂತ ಕ್ಲೀನ್ ಅನ್ನಿಸೋಕೆ ಶುರುವಾಯ್ತು. ದಿನಕ್ಕೆರೆಡು ಸಲ ಸ್ನಾನ ಮಾಡುತ್ತಿದ್ದ. ನೀಟಾಗಿ ವ್ಯಾಸೆಲಿನ್ ಹಚ್ಚಿಕೊಂಡು, ಮೂರು ಸಲ ಬಟ್ಟೆ ಬದಲಾಯಿಸುತ್ತಿದ್ದ. `ಯಾಕೋ?’ ಅಂತ ಕೇಳಿದರೆ, ಫಕ್ಕನೆ ಹಲ್ಲು ಬಿಟ್ಟು ನಗುತ್ತಿದ್ದ. ನಾವೂ ನಕ್ಕು ಸುಮ್ಮನಾಗುತ್ತಿದ್ದೆವು.
ನಮಗಷ್ಟೇ ಅಲ್ಲ. ಬೇಗನೆ, ನಮ್ಮ ಮನೆಗೆ ಬರುತ್ತಿದ್ದ ಎಲ್ಲರಿಗೂ ಅಣ್ಣು ಅಚ್ಚುಮೆಚ್ಚಾಗಿದ್ದ. ವೇದಮೂರ್ತಿ ಯುರೇಕಾ ಫೋರ್ಬ್ಸ್ ನಲ್ಲಿ ಕೆಲಸ ಮಾಡುತ್ತಿದ್ದದರಿಂದ, ಅವನ ಸಹೋದ್ಯೋಗಿಗಳು ಮನೆಗೆ ಬರುತ್ತಿದ್ದರು. ಬಂದವರೇ, ನಾನು ಇರುವುದನ್ನು ಲೆಖ್ಖಕ್ಕೇ ತೆಗೆದುಕೊಳ್ಳದಂತೆ, `ಅಣ್ಣೂ, ಟೀ ಮಾಡ್ತೀಯೇನೋ?’ ಅಂತ ಕೇಳ್ತಿದ್ರು. ತಕ್ಷಣವೇ ಅಣ್ಣು ಪುಸ್ತಕ ತೆಗೆದುಕೊಂಡು ಕನಕರಾಜನ ಅಂಗಡಿಗೆ ಹೊರಡುತ್ತಿದ್ದ. ಆಮೇಲೇ ನಮ್ಮ ಜೊತೆ ಮಾತು.
ಅಣ್ಣು ಟೀ ಮಾಡಲು ಶುರುಮಾಡಿದ ಮೇಲೆ ಇನ್ಯಾರಾದರೂ ಬಂದರೆ, ಅಲ್ಲಿಂದಲೇ ಕೂಗಿ ಹೇಳುತ್ತಿದ್ದೆವು: `ಆಣ್ಣು, ಇನ್ನೂ ಇಬ್ಬರು ಬಂದಿದ್ದಾರೆ,’ ಅಂತ.
`ಸರಿ, ಉದ್ದ ಮಾಡ್ತೀನಿ,’ ಅಂತ ಅವನೂ ಕೂಗ್ತಿದ್ದ. ಉದ್ದ ಮಾಡ್ತೀನಿ ಅಂದರೆ, ಮಾಡುತ್ತಿದ್ದ ಟೀ ಗೆ ಇನ್ನೂ ಸ್ವಲ್ಪ ನೀರು ಹಾಕುವುದು. ಹೀಗಾಗಿ, ಅರ್ಧ ಲೀಟರ್ ಹಾಲಿನಿಂದ, ಎರಡು ಜನರಿಂದ ಹಿಡಿದು, ಹತ್ತು-ಹದಿನೈದು ಜನರವರೆಗೂ ಟೀ ಸರಬರಾಜಾಗುತ್ತಿತ್ತು. ಕೆಲವು ಸಲವಂತೂ, ನೀರಿಗೆ ಟೀ ಪುಡಿ ಮತ್ತು ಸಕ್ಕರೆ ಹಾಕಿದ್ದಂತೆ ಅನ್ನಿಸ್ತಿತ್ತು. `ಯಾಕೋ, ಇನ್ನೂ ಸ್ವಲ್ಪ ಹಾಲು ತರೋದಲ್ವೇನೋ?’ ಅಂತ ಕೇಳಿದರೆ, `ಚೆನ್ನಾಗೇ ಇದ್ಯಲ್ಲ ಅಣ್ಣ,’ ಅಂತ ನಮ್ಮ ಬಾಯಿ ಮುಚ್ಚಿಸುತ್ತಿದ್ದ.
ಅಣ್ಣುವಿನ ಈ ಫಾರ್ಮುಲಾ ಕೆಲವು ಸಲ ಸಾರಿಗೂ ಉಪಯೋಗಿಸುತ್ತಿದ್ದ. ಯಾಕೇಂದ್ರೆ, ಏಳು ಜನಕ್ಕೆ ಸಾರು ಮಾಡಲು ಎಷ್ಟು ಬೇಳೆ ಹಾಕಬೇಕು ಅಂತ ವೇದಮೂರ್ತಿ ಹೇಳಿಕೊಟ್ಟಿದ್ದ. ಜಾಸ್ತಿ ಜನ ಆದಾಗ, ಆಣ್ಣು ಸಾರನ್ನು ಉದ್ದಮಾಡಿ, ಅವನೇ ಹೇಳಿದಂತೆ, `ತಿಳಿ ಸಾಂಬಾರ್’ ಮಾಡಿ ಬಡಿಸುತ್ತಿದ್ದ.
ಅಣ್ಣು ಕಲಿತದ್ದು ಒಂದರೆಡಲ್ಲ. ಮನೆಯಲ್ಲಿದ್ದ ಮ್ಯೂಸಿಕ್ ಸೆಟ್ ಹಾಕೋದು ಕಲಿತ. ಹಾಗೇನೆ, ಅದರ ರೇಡಿಯೋದಲ್ಲಿ, ಪಕ್ಕದ ಮನೆ ಹುಡುಗಿ ಕಾರ್ಡ್ ಲೆಸ್ ಫೋನ್ ಉಪಯೋಗಿಸಿ ಮಾತಾಡುವಾಗ, ಅದು ಶಾರ್ಟ್ ವೇವ್ ನ ಒಂದು ವೇವ್ ಲೆಂತ್ ನಲ್ಲಿ ಸಿಗುತ್ತೆ ಅಂತಾನೂ ಕಂಡು ಹಿಡಿದ. ಬೈಕ್ ಗಳನ್ನು ನೋಡಿದರೆ ರೋಮಾಂಚನಗೊಳ್ಳುತ್ತಿದ್ದ. ಮನೆಯಲ್ಲಿ ಆರು ಬೈಕ್ ಗಳು ಇದ್ದವು. ಅದರ ಜೊತೆ ನಮ್ಮ ಸ್ನೇಹಿತರ ಬೈಕ್ ಗಳೂ ಬರುತ್ತಿದ್ದವು. ಪ್ರತೀ ಬೈಕ್ ಗಳನ್ನು ಒಂದು ಸುತ್ತು ಬಂದು, ಏನೋ ಪರೀಕ್ಷಿಸುವಂತೆ ನೋಡುತ್ತಿದ್ದ.
ಒಂದು ಸಲ, ವೇದಮೂರ್ತಿಯ ಹತ್ತಿರ ತಾನೂ ಬೈಕ್ ಓಡಿಸೋಕೆ ಕಲಿಸಬೇಕು ಅಂತ ಕೇಳಿದ್ದಾನೆ. ವೇದಮೂರ್ತಿ ಎಲ್ಲವನ್ನೂ ಹೇಳಿಕೊಟ್ಟು, `ಸರಿ, ಓಡಿಸು’ ಅಂತ ಕೊಟ್ಟಿದ್ದಾನೆ. ವೇದಮೂರ್ತಿ ಕಣ್ಣು ಮುಚ್ಚಿ ಬಿಡುವುದರೊಳಗೆ, ಕ್ಲಚ್ ಬಿಟ್ಟು, ಆಕ್ಸಲರೇಟರ್ ಕೊಟ್ಟ ರಭಸಕ್ಕೆ ಬೈಕ್ ನೇರವಾಗಿ ಮನೆಯ ಹತ್ತಿರವಿದ್ದ ಕಾರ್ಪೋರೇಶನ್ ತೊಟ್ಟಿಯ ಪಕ್ಕ ಬಿದ್ದಿತ್ತಂತೆ. ಅಣ್ಣು ತೊಟ್ಟಿಯೊಳಗಿಂದ ಎದ್ದು ಬಂದನಂತೆ. ಸಾಯಂಕಾಲ ಇದನ್ನು ವೇದಮೂರ್ತಿಯೇ ನಮಗೆ ಹೇಳಿದಾಗ, ನಾವೆಲ್ಲ ಬಿದ್ದೂ ಬಿದ್ದು ನಕ್ಕಿದ್ದೆವು.
ಇದರ ಜೊತೆ ಅಣ್ಣು ಮತ್ತು ವೇದಮೂರ್ತಿಯ ಇನ್ನೊಂದು ಒಪ್ಪಂದವಿತ್ತು. ಪ್ರತೀ ವಾರ, ಅಣ್ಣುವನ್ನು ಒಂದು ಸಿನಿಮಾಕ್ಕೆ ಕರ್ಕೊಂಡು ಹೋಗಬೇಕಿತ್ತು. ವೇದಮೂರ್ತಿಯೇ ಅವನನ್ನು ನಂದಾ ಥೀಯೇಟರ್ ಗೆ ಕರ್ಕೊಂಡು ಹೋಗಿ, ಒಂದು ಟಿಕೆಟ್ ಕೊಡಿಸಿ, ಇಂಟರ್ ವೆಲ್ ನಲ್ಲಿ ಏನಾದ್ರೂ ತಿನ್ನೋಕೆ ಸ್ವಲ್ಪ ದುಡ್ಡು ಕೊಟ್ಟು ಬರುತ್ತಿದ್ದ. ಸಿನೆಮಾ ನೋಡಿ ಬಂದ ಎರಡು ದಿನ ಅಣ್ಣು ಎದೆ ಉಬ್ಬಿಸಿಕೊಂಡು ನೆಡೆಯುತ್ತಿದ್ದ. ಒಂದು ಸಲ ಸಿನೆಮಾದಿಂದ ಬಂದ ಅಣ್ಣುವನ್ನು ವೇದಮೂರ್ತಿ ಕೇಳೇ ಬಿಟ್ಟ: `ನೀನು ನೋಡಿದ ಸಿನಿಮಾ ಕಥೆ ಹೇಳೋ’ ಅಂತ.
ಒಂದೆರೆಡು ನಿಮಿಷ ಹೇಗೆ ಶುರುಮಾಡಬೇಕು ಅಂತ ತಲೆ ಕೆರ್ಕೊಂಡವನೇ ಹೇಳ್ದ: `ಅವನು ಬಂದು ಹೊಡೆದ… ಇವನು ಬಿದ್ದ’ ಅಂತ.
`ಯಾರು ಹೊಡೆದ್ರೋ? ಯಾರು ಬಿದ್ದಿದ್ದು?’ ಅಂತ ನಾನು ಕೇಳ್ದೆ.
`ಅದೇ, ಪರಬಕರ್ ಹೊಡೆದ, ಇನ್ನೊಬ್ಬ ಬಿದ್ದ,’ ಅಂದ.
ವೇದಮೂರ್ತಿ ಬಿದ್ದು ಬಿದ್ದು ನಗೋಕೆ ಶುರು ಮಾಡ್ದ. `ಏನಾಯ್ತೋ?’ ಅಂತ ಕೇಳಿದ್ರೆ, `ನಾನು ಕರ್ಕೊಂಡು ಹೋಗಿದ್ದು ವಿಷ್ಣುವರ್ಧನ್ ಸಿನೆಮಾಕ್ಕೆ,’ ಅಂದ.
ನಾವ್ಯಾರೂ ಇಲ್ಲದ ಹೊತ್ತಿನಲ್ಲಿ ಅಣ್ಣು ಮನೆ ಎದುರಿಗಿದ್ದ ಮರ ಹತ್ತಿ ಕೂತಿರುತ್ತಿದ್ದ. ನಾವೆಲ್ಲ ಬೈಕ್ ತೊಳೆಯಲು ಹೊರಟರೆ, ನೀರು ಸಪ್ಲೈ ಮಾಡೋದ್ರಿಂದ ಹಿಡಿದು, ಬೈಕ್ ಒರೆಸೋವರೆಗೂ ಕೈ ಹಾಕುತ್ತಿದ್ದ. ವೇದಮೂರ್ತಿ ಅವನಿಗೆ ಅಕ್ಷರಾಭ್ಯಾಸ ಸಹ ಶುರು ಮಾಡಿದ್ದ. ಅಂತೂ, ಅದೊಂದು ಜೀವ ನಮ್ಮ ಜೊತೆಯಲ್ಲಿ ಒಂದು ವರ್ಷಕ್ಕಿಂತ ಜಾಸ್ತಿ ಇತ್ತು.
ಒಂದು ದಿನ ಎಲ್ಲೋ ಹೊರಗೆ ಹೋಗಿ ಬಂದಾಗ, ಕುಟ್ಟಪ್ಪ ಮುಖ ದಪ್ಪ ಮಾಡ್ಕೊಂಡು ಗೇಟ್ ಹತ್ತಿರ ನಿಂತಿದ್ದ. `ಏನಾಯ್ತೋ?’ ಅಂತ ಕೇಳ್ತಾನೇ ಒಳಗೆ ಹೋಗಿ ನೋಡಿದರೆ, ಅಣ್ಣುವಿನ ಮೈಯಲ್ಲಿ ಬಾಸುಂಡೆ ಬಂದಿತ್ತು. ಅವನು ತಲೆ ತಗ್ಗಿಸಿಕೊಂಡು, ಅಪರಾಧಿಯ ಥರ ನಿಂತಿದ್ದ.
`ನೋಡೋ… ಇಷ್ಟೆಲ್ಲ ಸಲಿಗೆ ಕೊಟ್ಟಿದ್ದೀರಲ್ಲ ನೀವೆಲ್ಲ. ದಾರಿಲಿ ಹೋಗೋ ಹುಡುಗಿಯರನ್ನ ಚುಡಾಯಿಸೋಕೆ ಶುರು ಮಾಡಿದ್ದಾನಂತೆ,’ ಅಂದ ಕುಟ್ಟಪ್ಪ.
ನಾವು ನಾಲ್ಕೈದು ವರ್ಷಗಳಿಂದ ಬ್ರಹ್ಮಚಾರಿಗಳೇ ಆ ಮನೆಯಲ್ಲಿದ್ದರೂ, ಒಂದೇ ಒಂದು ದಿನ ನಮ್ಮ ಮೇಲೆ ಯಾರೂ ಬೆಟ್ಟುಮಾಡಿ ತೋರಿಸದಂತೆ ಎಚ್ಚರ ವಹಿಸಿದ್ದೆವು. ಪ್ರತೀ ಶನಿವಾರ ನಮ್ಮ ಮನೆಯಲ್ಲಿ ಪಾರ್ಟಿ ನೆಡೆಯುತ್ತಿದ್ದರೂ, ಅಕ್ಕ ಪಕ್ಕದವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದೆವು. ಕೆಲವೊಮ್ಮೆ ಹತ್ತು-ಹನ್ನೆರೆಡು ಜನ ಇರುತ್ತಿದ್ದದ್ದೂ ಇತ್ತು.
ಅಣ್ಣುವಿನ ಮುಖವನ್ನೇ ನೋಡಿದೆ. ಸಣ್ಣದಾಗಿ ಮೀಸೆ ಬರಲು ಶುರುವಾಗಿತ್ತು. ನಾನೇನೂ ಮಾತಾಡಲಿಲ್ಲ. ರಾತ್ರಿ ಬಂದ ವೇದಮೂರ್ತಿಗೆ ವಿಷಯ ಗೊತ್ತಾಗಿ ತುಂಬಾ ನೊಂದುಕೊಂಡ. ಹದಿನೈದೇ ದಿನದಲ್ಲಿ ಕುಟ್ಟಪ್ಪ ಅಣ್ಣುವನ್ನು ಊರಿಗೆ ವಾಪಾಸ್ ಕಳುಹಿಸಿದ.
ಅಣ್ಣು ಊರಿಗೆ ಹೋಗಿದ್ದರಿಂದ ನಮಗೇನೂ ತೊಂದರೆಯಾಗಲಿಲ್ಲ. ನಮ್ಮ ನಮ್ಮ ಕೆಲಸ ಮಾಡಿಕೊಂಡು ಅಭ್ಯಾಸವಿದ್ದ ನಾವು, ಆರಾಮವಾಗೇ ಇದ್ದೆವು. ಅಣ್ಣು ಮಾತ್ರ ಕುಟ್ಟಪ್ಪನ ಅಕ್ಕನ ಮನೆಯಲ್ಲಿ ತೋಟದ ಕೆಲಸಕ್ಕೆ ಹೋಗಲು ಶುರುಮಾಡಿದ ಅಂತ ಗೊತ್ತಾಯ್ತು.
ಇನ್ನಾರು ತಿಂಗಳಲ್ಲಿ ಕುಟ್ಟಪ್ಪ ಮೈಸೂರಿನಲ್ಲಿ ಕೆಲಸಕ್ಕೆ ಸೇರಿಕೊಂಡ. ಅವನ ಮದುವೆಯೂ ಗೊತ್ತಾಯ್ತು.
ಕುಟ್ಟಪ್ಪನ ಮದುವೆಗೆ ನಾವೆಲ್ಲರೂ ಮಡಿಕೇರಿಗೆ ಹೊದೆವು. ಅಲ್ಲಿ ಒಂದಿಪ್ಪತ್ತು ಜನರ ದೊಡ್ಡ ಗುಂಪೇ ಇತ್ತು. ನಾವೆಲ್ಲ ಮಡಿಕೇರಿ ತಿರುಗಿಕೊಂಡು, ಸಾಯಂಕಾಲದ ಹೊತ್ತಿಗೆ ಕೊಡವ ಸಮಾಜದ ಹತ್ತಿರ ಬಂದೆವು. ಆಚೀಚೆ ಓಡಾಡುತ್ತಾ, ಸಿಗರೇಟ್ ಸೇದೋಕೆ ಅಂತ ಹೊರಗಡೆ ಬಂದೆ. ಯಾರೋ ನನ್ನ ಕಡೆ ನೆಡೆದುಕೊಂಡು ಬಂದಂತಾಯಿತು. ತಿರುಗಿ ನೋಡುವುದರಲ್ಲಿ, `ಅಣ್ಣಾ’ ಅಂತ ತಬ್ಬಿಕೊಂಡ ಅಣ್ಣು.
ಗಪ್ಪಂತ ಹೊಡೆಯಿತು ಸರಾಯಿ ವಾಸನೆ. ಅಣ್ಣು ತೊದಲುತ್ತಾ ಏನೇನೋ ಮಾತಾಡ್ತಾನೆ ಇದ್ದ. ನನಗೆ ವಾಂತಿ ಬರುವಂತಾಗಿತ್ತು. ಹಾಗೂ ಹೀಗೂ ತಪ್ಪಿಸಿಕೊಂಡು ಬಂದೆ. ಒಳಗೆ ಬಂದವನೇ ವೇದಮೂರ್ತಿಗೆ ಅಣ್ಣುವಿನ ವಿಷಯ ಹೇಳಿದೆ.
ಒಂದರ್ಧ ಘಂಟೆ ಕಳೆದಿರಬಹುದು. ವಾಲಗದ ಸದ್ದು ನಿಂತಾಗ ಹೊರಗಡೆ ಯಾರೋ ಕೂಗಾಡುವುದು ಕೇಳಿಸಿತು. ಹಾಗೇ ಬಾಗಿಲಿಂದ ಹೊರಗಡೆ ನೋಡಿದಾಗ, ಅಣ್ಣು ಕೂಗಾಡುತ್ತಿದ್ದ. ಅವನ ಜೊತೆ ಇದ್ದ ಇನ್ನಿಬ್ಬರು ಅವನಿಗೆ ತಲೆ ಮೇಲೆ ಹೊಡೆದು, ಎಳೆದುಕೊಂಡು ಹೋಗುತ್ತಿದ್ದರು.
ಒಂದೇ ವರ್ಷದಲ್ಲಿ ಅಣ್ಣು ಪ್ರಪಂಚ ಸುತ್ತಿ ಬಂದಿದ್ದಾನೆ ಅನ್ನಿಸಿತು. ಅವನು ಕೆಟ್ಟು ಪಟ್ಟಣ ಸೇರಿದನೋ ಅಥವಾ ಪಟ್ಟಣದಿಂದ ಬಂದು ಕೆಟ್ಟನೋ ಅಂತ ಗೊತ್ತಾಗಲಿಲ್ಲ.
ಎಷ್ಟೇ ನೆನಪಿಸಿಕೊಂಡರೂ, ಅವನು ನಮ್ಮ ಮನೆಯಲ್ಲಿದ್ದಾಗಿನ ಮುಗ್ದ ಮುಖ ನೆನಪಿಗೆ ಬರಲೇ ಇಲ್ಲ……


ಮಾಕೋನಹಳ್ಳಿ ವಿನಯ್ ಮಾಧವ  



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ