ಶನಿವಾರ, ಜುಲೈ 7, 2012

ಮಲ್ಯ


ಕಾರ್ಪೊರೇಟ್ ಪಾಲಿಟಿಕ್ಸ್

ಹೆಚ್ಚು ಕಡಿಮೆ ಮೂರು ಘಂಟೆಗಳಾಗಿದ್ದವು, ಸದಾಶಿವ ನಗರದ ಫುಟ್ ಪಾತ್ ಮೇಲೆ ಅಬ್ಬೇಪಾರಿ ಥರ ಕೂತು. ತಲೆ ಚಿಟ್ಟು ಹಿಡಿದು ಹೋಗಿತ್ತು. ಆಗ ಟೆಲಿವಿಷನ್ ಹಾವಳಿ ಇಷ್ಟೇನೂ ಇರಲಿಲ್ಲ. ಬೇರೆ ಪತ್ರಿಕೆಯವರೂ ಬಂದಿರಲಿಲ್ಲ.
ನಾ ಕೂತಿದ್ದದು, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಮನೆ ಮುಂದೆ. ಸಂಯುಕ್ತ ಜನತಾ ದಳದ ಮುಖಂಡರುಗಳೆಲ್ಲಾ ದಂಡು ಕಟ್ಟಿಕೊಂಡು ಬಂದಿದ್ದಾರೆ ಅಂತ ಸುದ್ದಿ ಬಂದಿತ್ತು. ನೆಟ್ಟಗೆ ಹೆಗಡೆಯವರ ಮನೆ ಮುಂದೆ ಬಂದು ಕಾಯೋಕೆ ಶುರು ಮಾಡಿದೆ.
ನಾನು ಪತ್ರಕರ್ತನಾದ ಮೇಲೆ, ಇದು ಎರಡನೇ ಚುನಾವಣೆಯಾಗಿತ್ತು. 1999 ರಲ್ಲಿ, ಆಫೀಸಿನಲ್ಲಿ ನಾನೇ ಜೂನಿಯರ್. ಹಾಗಾಗಿ, ಎಲೆಕ್ಷನ್ ವಿಷಯ ಅಷ್ಟೇನೂ ತಲೆ ಕೆಡಿಸಿಕೊಂಡಿರಲಿಲ್ಲ. ಅದಾದ ಮೇಲೆ, ಶಂಕರಪ್ಪ ರಿಟೈರ್ ಆದರು. ಗೋವಿಂದ ರಾಜು, ನಚ್ಚಿ, ಭಾನುತೇಜ್, ಮಧು ಮತ್ತು ಕೆ.ಎನ್.ರೆಡ್ಡಿ ಬಿಟ್ಟು ಹೋದ ಮೇಲೆ, ನನಗೆ ಸೀನಿಯರ್ ಪಟ್ಟ ಬೇರೆ ಸಿಕ್ಕಿತ್ತು. ಅವರೆಲ್ಲ ಇದ್ದಾಗ, ಯಾವುದಕ್ಕೆ ಹೋಗಬೇಕು, ಯಾವುದನ್ನು ಫೋನಲ್ಲೇ ತಗೋಬಹುದು ಅಂತ ಹೇಳಿಕೊಡ್ತಿದ್ದರು. ಈಗ, ನಾನೇ ಎಲ್ಲಾದನ್ನೂ ನಿರ್ಧರಿಸಬೇಕಿತ್ತು.
ಕೊನೆಗೂ ಮನೆ ಬಾಗಿಲು ತೆಗೆದುಕೊಂಡಿತು. ಪಿ.ಜಿ.ಆರ್. ಸಿಂಧ್ಯಾ, ಮಹದೇವ ಪ್ರಸಾದ್, ಡಾ ಮಹದೇವಪ್ಪ, ಬಚ್ಚೇಗೌಡ… ಹೀಗೇ ಒಬ್ಬರ ಹಿಂದೊಬ್ಬರು ಬಂದರು. ಎಲ್ಲರ ಮುಖ ಕುಂಬಳಕಾಯಿಯಂತೆ ದಪ್ಪಗಾಗಿತ್ತು. ಇದ್ದಿದ್ದರಲ್ಲಿ ಮಹದೇವ ಪ್ರಸಾದ್ ಮುಖವೇ ಪರವಾಗಿರಲಿಲ್ಲ.
ಯಾರನ್ನಾದರೂ ಮಾತಾಡ್ಸೋಣ ಅಂತ ಮುಂದೆ ಹೋದೆ. ಎಲ್ಲರೂ ಕಾರುಗಳನ್ನು ಹತ್ತಿಕೊಂಡು ಮುಂದೆ ಹೋದ್ರು. ಸರಿ, ಹೆಗಡೆಯವರನ್ನು ಮಾತಾಡ್ಸೋಣ ಅಂತ ಮನೆ ಗೇಟ್ ಗೆ ಹೋದರೆ, ವಾಚ್ ಮನ್ ಆಗಲೇ ಒಳಗಿನಿಂದ ಚಿಲುಕ ಹಾಕಿ, `ಸಾಹೇಬರು ಸುಸ್ತಾಗಿದ್ದಾರೆ, ನಾಳೆ ಬನ್ನಿ’ ಅಂದ.
`ಥೂತ್ತೆರಿ, ಇನ್ನೇನು ಮಾಡೋದೀಗ?’ ಅಂತ ಯೋಚನೆ ಮಾಡ್ತಾ ಇದ್ದಾಗಲೇ ಆಫೀಸಿನಿಂದ ಫೋನ್ ಬಂದು, ಕಾಂಗ್ರೆಸ್ ಆಫೀಸಿನಲ್ಲಿ ಪ್ರೆಸ್ ಕಾನ್ಫರೆನ್ಸ್ ಇದೆ, ಅಲ್ಲಿಗೆ ಹೋಗಬೇಕು ಅಂತ ಮಾಹಿತಿ ಸಿಕ್ತು. ಕಾಂಗ್ರೆಸ್ ಆಫೀಸಿಗೆ ಹೋಗಿ, ಅಲ್ಲಿಂದ ಆಫೀಸಿಗೆ ಬಂದ ಮೇಲೂ, ಹೆಗಡೆಯವರ ಮನೆಯಲ್ಲಿ ಏನು ನೆಡೀತು ಅನ್ನೋದು ತಲೆಯಲ್ಲಿ ಕೊರೀತಾ ಇತ್ತು.
ಆಗಿದ್ದಿಷ್ಟೆ. 1999ರ ಚುನಾವಣೆಯಲ್ಲಿ, ಬಿ.ಜೆ.ಪಿಯ ಸಖ್ಯ ಮಾಡಿದ್ದ ಜೆಡಿ(ಯು), ಈ ಸಲ ಅದು ಬೇಡ ಅಂತ ನಿರ್ಧರಿಸಿತ್ತು. ಆದರೆ, ರಾಷ್ಟ್ರಮಟ್ಟದಲ್ಲಿ ಅವರ ಸಖ್ಯ ಮುಂದುವರೆದಿತ್ತು. ಇಲ್ಲಿನ ಜೆಡಿ(ಯು) ನಾಯಕರು, ಮುಂದೇನು ಮಾಡಬೇಕು ಅಂತ ಕೇಳೋಕೆ ಹೆಗಡೆಯವರ ಮನೆಗೆ ಹೋಗಿದ್ದರು. ಅನಾರೋಗ್ಯದ ಕಾರಣ, ಹೆಗಡೆಯವರು ಮನೆ ಬಿಟ್ಟು ಹೊರಗೆ ಬರುತ್ತಿರಲಿಲ್ಲ. ವಯಸ್ಸಾದ ಕಾರಣ, ಅವರಿಗೆ ಮರೆವೂ ಶುರುವಾಗಿದೆ ಅಂತ ಜನ ಮಾತಾಡ್ಕೋತ್ತಿದ್ರು.
ಸಾಯಂಕಾಲ ಬೆಲಗೂರು ಸಮೀಉಲ್ಲಾ ಸಿಕ್ಕಿದ್ರು. `ಅಲ್ರಿ, ಹೆಗಡೆ ಮನೇಲಿ ಏನೋ ಮೀಟಿಂಗ್ ನೆಡೆದಿದೆ. ಅದೇನು ಅಂತಾ ಗೊತ್ತಾಗ್ತಾ ಇಲ್ಲ. ಜೆಡಿ (ಯು) ಲೀಡರ್ಸ್ ಎಲ್ಲಾ ಹೋಗಿದ್ರು ಕಣ್ರಿ. ಯಾರೂ ಮಾತಾಡ್ಲಿಲ್ಲ,’ ಅಂದೆ.
`ಓ ಅದಾ? ಇವ್ರೆಲ್ಲಾ ಹೋಗಿ, ಮುಂದೆ ಏನು ಮಾಡ್ಬೇಕೂ ಅಂತ ಕೇಳಿದ್ರಂತೆ. ಮೊದಲೊಂದೈದು ನಿಮಿಷ ಸರಿಯಾಗೇ ಮಾತಾಡಿದ ಹೆಗಡೆಯವರು, ಆಮೇಲೆ ನೀವೆಲ್ಲಾ ಹೋಗಿ ವಿಜಯ್ ಜೊತೆ ಸೇರ್ಕೊಳ್ಳಿ. ಅವನ `ಯುವ ಶಕ್ತಿ, ರೈತ ಶಕ್ತಿ’ ಒಳ್ಳೇ ಸ್ಲೋಗನ್. ಗೆಲ್ತೀರಾ ಅಂದ್ರಂತೆ. ವಯಸ್ಸಾಗಿದೆ ನೋಡಿ, ಅವ್ರಿಗೆ ವಿಪರೀತ ಮರೆವು. ಹೇಳಿದ್ದನ್ನೇ ಮೂರು ಘಂಟೆ ಹೇಳಿದ್ರಂತೆ. ಎಲ್ಲರಗೂ ತಲೆನೋವು ಬಂದು, ಹೊರಗೆ ಬಂದ್ರಂತೆ,’ ಅಂದರು.
`ಯಾವ ವಿಜಯ್?’ ಅಂದೆ.
`ವಿಜಯ್ ಮಲ್ಯರೀ. ಎಲ್ಲರೂ ಹೋಗಿ ಜನತಾ ಪಕ್ಷ ಸೇರ್ಕೊಳ್ಳಿ ಅಂದ್ರಂತೆ,’ ಅಂತ ನಗಾಡೋಕೆ ಶುರು ಮಾಡಿದ್ರು. ನಾನೂ ನಗೋಕೆ ಶುರು ಮಾಡ್ದೆ. `ಅಲ್ರಿ, ಈ ಮಲ್ಯಂಗೇನು ಬಂತು? ರಾಜ್ಯ ಸಭಾ ಮೆಂಬರ್ ಆಗಿದ್ದಾನೆ. ಅವನ ಬ್ಯುಸಿನೆಸ್ ನೋಡ್ಕೊಂಡು ಇರೋದು ಬಿಟ್ಟು, ರಾಜಕಾರಣ ಮಾಡೋಕ್ಕಾಗುತ್ತಾ?’ ಅಂದೆ.
`ಅಲ್ಲಿಂದ್ಲೇ ಶುರುವಾಗಿದ್ದಂತೆ ಕಣ್ರಿ ಈ ಹುಚ್ಚು. ಅದಕ್ಕೆ ಹೆಗಡೆ ಹಿಡ್ಕೊಂಡು, ಸುಬ್ರಮಣ್ಯ ಸ್ವಾಮಿ ಜೊತೆ ಸೇರ್ಕೊಂಡು, ಜನತಾ ಪಕ್ಷನ ಮತ್ತೆ ಕಟ್ತೀನಿ ಅಂತ ಹೊರಟಿದ್ದಾನೆ. ಯಾರ್ಯಾರು ಅವನ ದುಡ್ಡು ತಿನ್ನೋಕೆ ಕಾಯ್ತಿದ್ದಾರೆ ಅಂತ ನೋಡ್ಬೇಕು,’ ಅಂದ್ರು.
`ಅಲ್ರಿ… ಆ ಹೆಗಡೆಗೆ ಹುಶಾರಿಲ್ಲ ಅಂತ ಗೊತ್ತಿದ್ದು ಇವರೆಲ್ಲ ಯಾಕ್ರಿ ಹೋಗ್ಬೇಕು?’ ಅಂದೆ.
`ಅದು ಹಾಗಲ್ಲ ಕಣ್ರಿ. ಹೋದವರೆಲ್ಲ ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷದಿಂದ ನಿಲ್ಲಬೇಕು ಅನ್ನೋದು ಡಿಸೈಡ್ ಮಾಡಿಕೊಂಡಿದ್ದಾರೆ. ಏನಂದ್ರೆ, ಹೆಗಡೆಯವರ ಹೆಸರು ಕೆಲವು ಕಡೆ ನೆಡೆಯುತ್ತೆ. ಅಲ್ಲೆಲ್ಲಾ ಹೋಗಿ ನಾವು ಹೆಗಡೆಯನ್ನು ಕೇಳಿ ಈ ಪಕ್ಷದಿಂದ ನಿಂತಿದ್ದೀವಿ ಅಂತ ಹೇಳೋಕೆ, ಅಷ್ಟೆ. ಹೆಗಡೆ ಮಾತು ಕೇಳ್ಕೊಂಡು ಮಲ್ಯನ ಜೊತೆ ಹೋಗುವಷ್ಟು ದಡ್ಡರ್ಯಾರೂ ಇಲ್ಲ ಬಿಡಿ,’ ಅಂದ್ರು ಸಮೀಉಲ್ಲಾ.
ಈ ವಿಜಯ್ ಮಲ್ಯನ ಮೊದಲು ನೋಡಿದ್ದು ಅವರು ರಾಜ್ಯ ಸಭೆ ಚುನಾವಣೆಗೆ ನಿಂತಾಗ. ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರು ಸಂಬಂಧಿಯಾದ್ದರಿಂದ ಸಹಾಯ ಮಾಡ್ತಾರೆ ಅನ್ನೋ ಹಮ್ಮಿನಲ್ಲಿ ನಿಂತು ಸೋತಿದ್ದರು.  ಎರಡನೇ ಸಲ ನಿಂತಾಗ, ಕೃಷ್ಣರವರು ಕಾಂಗ್ರೆಸ್ ನಿಂದ ಸಹಾಯ ಮಾಡಿ, ಬಿ.ಜೆ.ಪಿಯ ಶಾಸಕರನ್ನು ಖರೀದಿಸಿ, ಮಲ್ಯ ರಾಜ್ಯಸಭೆಗೆ ಆಯ್ಕೆಯಾಗುವಂತೆ ನೋಡಿಕೊಂಡರು.
ಆ ಎರಡೂ ಸಂಧರ್ಭಗಳಲ್ಲೂ, ಮಲ್ಯ ವಿಧಾನ ಸಭೆಯ ಮೊಗಸಾಲೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಎದುರು ಬಂದವರಿಗೆಲ್ಲ ಕೈ ಮುಗಿದು ಮಾತಾಡಿಸುತ್ತಿದ್ದರು. ಅವರ ವೇಷ ಭೂಷಣಕ್ಕೂ, ಅವರ ನಡುವಳಿಕೆಗಳಿಗೂ, ಒಂದಕ್ಕೊಂದು ತಾಳೆಯಾಗುತ್ತಿರಲಿಲ್ಲ.
ಚುನಾವಣೆ ಘೋಷಣೆಯಾದಾಗ, ಸಮೀಉಲ್ಲಾ ಹೇಳಿದ್ದು ನಿಜವಾಯ್ತು. ಜೆಡಿ(ಯು)ನಲ್ಲಿದ್ದ ಕೆಲವು ನಾಯಕರು ಅಲ್ಲೇ ಉಳಿದುಕೊಂಡರೆ, ಇನ್ನುಳಿದವರು ಜೆಡಿ(ಎಸ್), ಕಾಂಗ್ರೆಸ್ ಪಕ್ಷಗಳ ಕಡೆಗೆ ವಲಸೆ ಹೋದರು. ಮಾಜೀ ಮಂತ್ರಿ ಬಿ.ಟಿ.ಲಲಿತಾ ನಾಯಕ್ ಮತ್ತು ಮಾಜೀ ಕಾರ್ಪೋರೇಟರ್ ಪ್ರದೀಪ್ ಕುಮಾರ್ ರೆಡ್ಡಿ ಬಿಟ್ಟು, ಇನ್ಯಾರೂ ಮಲ್ಯನ ದಿಕ್ಕಿಗೆ ತಲೆ ಹಾಕಿ ಮಲಗಲಿಲ್ಲ. ಆದ್ರೂ ಮಲ್ಯ ಧೃತಿಗೆಟ್ಟಂತೆ ಕಾಣಲಿಲ್ಲ.
ಮೊದಲನೇ ಪ್ರೆಸ್ ಕಾನ್ಫರೆನ್ಸಿನಲ್ಲೇ ನಾನು ಮಲ್ಯನಿಗೆ ತಗುಲಿಕೊಂಡಿದ್ದೆ. ಒಂದೆರೆಡು ಪ್ರಶ್ನೆಗಳನ್ನು ಕೇಳುತ್ತಲೇ, ಮಲ್ಯನಿಗೆ ಕಿರಿಕಿರಿಯಾಯ್ತು ಅಂತ ಕಾಣುತ್ತೆ. `ಈವನ್ ಐ ಓನ್ ಅ ನ್ಯೂಸ್ ಪೇಪರ್, ಮೈ ಫ್ರೆಂಡ್,’ ಅಂತ ನಕ್ಕರು. `ಬಟ್, ಐ ಆಮ್ ನಾಟ್ ಸ್ಟ್ಯಾಂಡಿಂಗ್ ವಿಥ್ ಅನ್ ಅಪ್ಲಿಕೇಶನ್ ಟು ಜಾಯಿನ್ ದಟ್ ಪೇಪರ್,’ ಅಂತ ಅಷ್ಟೇ ತೀಕ್ಷ್ಣವಾಗಿ ಉತ್ತರಿಸಿದ್ದೆ. ಆಗ, ಏಶಿಯನ್ ಏಜ್ ಪತ್ರಿಕೆ ಮಲ್ಯರ ಒಡೆತನದಲ್ಲಿತ್ತು. ಅದರ ಸಂಪಾದಕಿಯಾಗಿದ್ದ ತುಷಿತ ಮಿತ್ರ ಮಲ್ಯರವರ ಪತ್ರಿಕಾ ಪ್ರಚಾರ ಕಾರ್ಯದರ್ಶಿನಿಯಾಗಿ ಸೇರಿದ್ದರು.
ಅಲ್ಲಿಗೆ ಇಬ್ಬರೂ ಸುಮ್ಮನಾಗಿ, ಪ್ರೆಸ್ ಕಾನ್ಫರೆನ್ಸ್ ಮುಂದುವರೆಯಿತು. ಕೊನೆಗೆ ಏನಾದ್ರೂ ಪ್ರಶ್ನೆಗಳಿವೆಯಾ ಅಂತ ಮಲ್ಯ ನನ್ನ ಕಡೆ ನೋಡಿದಾಗ, ನಾನು ಮುಖ ತಿರುಗಿಸಿಕೊಂಡೆ.
`ಮೈ ಫ್ರೆಂಡ್ ಇಸ್ ಸ್ಟಿಲ್ ಆಂಗ್ರಿ ವಿಥ್ ಮಿ. ವಿ ಹ್ಯಾವ್ ಟು ಟೇಕ್ ಇಟ್ ಸ್ಪೋರ್ಟಿವ್ ಲಿ,’ ಅಂತ ನಕ್ಕರು. `ಕೊಬ್ಬು ನನ್ಮಗಂಗೆ… ಈಗ ಮಸ್ಕಾ ಹೊಡಿಯೋಕೆ ನೋಡ್ತಿದ್ದಾನೆ,’ ಅಂತ ಮನಸ್ಸಲ್ಲೇ ಬೈಕೊಂಡೆ.
ಅದಾದ ನಂತರ ನನಗೂ ಮತ್ತು ಮಲ್ಯರಿಗೂ ಯಾವುದೇ ವಿಷಯಗಳಲ್ಲಿ ಜಗಳವಾಗಲಿಲ್ಲ. ಮಲ್ಯರೇನೋ ಇಡೀ ರಾಜ್ಯವನ್ನು ಹೆಲಿಕಾಪ್ಟರ್ ನಲ್ಲಿ ಸುತ್ತುತ್ತಾ, ಮಧ್ಯದಲ್ಲಿ ಬೆಂಗಳೂರಿಗೂ ಬಂದು ಪ್ರೆಸ್ ಕಾನ್ಫರೆನ್ಸ್ ಮಾಡುತ್ತಾ ಇದ್ದರು. ನಮಗೇನೋ ಈ ಪಕ್ಷ ಮೇಲೇಳುವ ಯಾವುದೇ ಲಕ್ಷಣಗಳು ಕಾಣುತ್ತಿರಲಿಲ್ಲ.
ಚುನಾವಣೆ ಒಂದು ವಾರವಿದ್ದಾಗ, ಮಲ್ಯ ಪತ್ರಿಕಾ ಮಿತ್ರರಿಗಾಗಿ ಒಂದು ಪಾರ್ಟಿ ಕೊಟ್ಟರು. ನಮ್ಮ ಬ್ಯರೋ ಛೀಫ್ ಮಟ್ಟೂವಂತೂ, ನೀನು ಹೋಗಲೇ ಬೇಕು ಅಂತ ಫರ್ಮಾನು ಹೊರಡಿಸಿದರು. ಪ್ರೆಸ್ ಕಾನ್ಫರೆನ್ಸಿನಲ್ಲಿ ನಡೆಯುವುದನ್ನು ತುಷಿತ ಮೂಲಕ ಮಟ್ಟೂ ತಿಳಿದುಕೊಳ್ಳುತ್ತಿದ್ದರು. ಇಂಥಾ ಪಾರ್ಟಿಗಳಿಂದ ಸಾಧಾರಣವಾಗಿ ದೂರವಿರುವ ನಾನು, ಮನಸ್ಸಿಲ್ಲದ ಮನಸ್ಸಿನಿಂದ ಹೋದೆ.
ಅವತ್ತೇ ಗೊತ್ತಾಗಿದ್ದು ನನಗೆ, ಮಲ್ಯ ಎಂಥಾ ಒಳ್ಳೆ ಅತಿಥೇಯ ಅಂತ. ಬಂದ ಪ್ರತೀಯೊಬ್ಬರನ್ನೂ ಕೈ ಹಿಡಿದು ಒಳಗೆ ಕರೆದುಕೊಂಡು ಹೋಗುತ್ತಿದ್ದರು. ಮಲ್ಯರ ಪಾರ್ಟಿ ಎಂದ ಮೇಲೆ ಕೇಳಬೇಕೆ. ವಿಂಡ್ಸರ್ ಮ್ಯಾನರ್ ಹೋಟೆಲಿನಲ್ಲಿ, ಅತ್ಯುತ್ತಮ ಸ್ಕಾಚ್ ಇಟ್ಟಿದ್ದರು. ಆದರೆ, ಶೇಕಡಾ ತೊಂಬತ್ತಕ್ಕಿಂತ ಹೆಚ್ಚು ಪತ್ರಕರ್ತರು ಪೆಪ್ಸಿ ಹಿಡ್ಕೊಂಡು ನಿಂತಿದ್ದರು. ನಾನೂ ಒಂದು ಸಾಫ್ಟ್ ಡ್ರಿಂಕ್ ಹಿಡ್ಕೊಂಡು, ಕೈಲೊಂದು ಸಿಗರೇಟ್ ಹಚ್ಕೊಂಡು ನಿಂತಿದ್ದೆ.
ನಮ್ಮ ಕಡೆಗೆ ಬಂದವರೇ, ಮಲ್ಯ ಆಶ್ಚರ್ಯದಿಂದ ಕೇಳಿದರು: `ವಾಟ್ ಇಸ್ ದಿಸ್. ಎವೆರಿಬಡಿ ಆರ್ ಡ್ರಿಂಕಿಂಗ್ ಸಾಫ್ಟ್ ಡ್ರಿಂಕ್ಸ್. ದಿಸ್ ಇಸ್ ಎ ಪಾರ್ಟಿ… ನಾಟ್ ಪ್ರೆಸ್ ಕಾನ್ಫರೆನ್ಸ್,’ ಅಂದ್ರು.
ಮಧ್ಯದಲ್ಲಿದ್ದವರೊಬ್ಬರು, `ನನ್ ಆಫ್ ಅಸ್ ಡ್ರಿಂಕ್,’ ಅಂದಾಗ, ಮಲ್ಯ ದಂಗಾದಂತೆ ಕಂಡರು. `ಐ ಕಾಂಟ್ ಬಿಲಿವ್ ದಿಸ್.  ದಿ ಪ್ರೆಸ್ ಪೀಪಲ್ ಡಸ್ ನಾಟ್ ಡ್ರಿಂಕ್. ಐ ಆಮ್ ರೂಯಿನ್ಡ್. ಐ ಮೇಕ್ ಎ ಲಿವಿಂಗ್ ಬೈ ಸೆಲ್ಲಿಂಗ್ ಲಿಕ್ಕರ್. ಇಫ್ ಪ್ರೆಸ್ ಡಸ್ ನಾಟ್ ಪ್ರಮೋಟ್ ಮೈ ಪ್ರಾಡಕ್ಟ್, ಹೂ ವಿಲ್ ಡ್ರಿಂಕ್ ಇಟ್?’ ಅಂತ ನಗೋಕೆ ಶುರು ಮಾಡಿದ್ರು. ನಾವೂ ಜೋರಾಗಿ ನಗಲು ಶುರು ಮಾಡಿದ ತಕ್ಷಣ, `ಡೋಂಟ್ ವರಿ ವಿಜಯ್… ಐ ಆಮ್ ಡ್ರಿಂಕಿಂಗ್. ದೆರ್ ಆರ್ ಪ್ರೆಸ್ ಪೀಪಲ್ ಹೂ ವಿಲ್ ಪ್ರಮೋಟ್ ವಿಸ್ಕಿ ಆಲ್ಸೋ,’ ಅಂತ ಒಂದು ಧ್ವನಿ ಬಂತು.
ಯಾರೂಂತ ನೋಡಿದ್ರೆ, ಪತ್ರಿಕಾ ಪ್ರಪಂಚದಲ್ಲಿ ಬಿಲ್ಲಾ ಅಂತ್ಲೇ ಗುರುತಿಸಲ್ಪಟ್ಟ ಪ್ರಸಾದ್, ಒಂದು ಕೈಯಲ್ಲಿ ವಿಸ್ಕಿ ಲೋಟ ಇಟ್ಕೊಂಡು, ಇನ್ನೊಂದು ಕೈಯನ್ನು ಮಲ್ಯ ಹೆಗಲ ಮೇಲೆ ಇಟ್ಟಿದ್ದ. ನಮಗೆಲ್ಲ ನಾಚಿಗೆಯಾಗಿ ತಲೆ ತಗ್ಗಿಸಿಕೊಂಡೆವು. ಅಷ್ಟರಲ್ಲಿ ಪ್ರಸಾದ್ ಮತ್ತೆ ಮುಂದುವರೆಸಿ, `ವಿಜಯ್, ಐ ವಿಲ್ ಆಲ್ಸೋ ಟೇಕ್ ಎ ಬಾಟಲ್ ಟು ರೋಡ್,’ ಅಂದ.
ಸುಧಾರಿಸಿಕೊಂಡ ಮಲ್ಯ, `ಐ ಆಮ್ ಸೋ ಹ್ಯಾಪಿ ಫಾರ್ ಯು. ಐ ವಿಲ್ ಜಸ್ಟ್ ಅಟೆಂಡ್ ದೀಸ್ ನಾನ್ ಡ್ರಿಂಕರ್ಸ್ ಆಂಡ್ ಜಾಯಿನ್ ಯು ಇನ್ ಟೂ ಮಿನಿಟ್ಸ್,’ ಅಂತ ಹೇಳಿ ಸಾಗ ಹಾಕಿದ್ರು.
ಅಲ್ಲಿಂದ ಮುಂದೆ ಸುಮಾರು ಹೊತ್ತು ನಮ್ಮ ಜೊತೆ ಮಾತಾಡ್ತಾ ನಿಂತಿದ್ರು. ಈ ಮನುಷ್ಯನಿಗೆ ಯಾರ ಬಗ್ಗೆಯೂ ದ್ವೇಶವಿದ್ದಂತೆ ಕಾಣಲಿಲ್ಲ. ಯಾರ ಬಗ್ಗೆಯೂ ಕೆಟ್ಟದಾಗಿ ಮಾತಾಡಲಿಲ್ಲ. ಒಂದು ಭ್ರಮಾಲೋಕ ಸೃಷ್ಟಿಸಿಕೊಂಡು, ಅದರಲ್ಲಿ ವಿಹರಿಸುತ್ತಿದ್ದಂತೆ ಕಾಣುತ್ತಿತ್ತು. ಕೊನೆಗೆ ನಾನು ಹೊರಡುತ್ತೇನೆ ಅಂದಾಗ, `ಕ್ಯನ್ ವಿ ಟಾಕ್ ಫಾರ್ ಎ ಮಿನಿಟ್?’ ಅಂತ ಕೇಳಿದ್ರು.
ನನ್ನ ಹತ್ತಿರ ಇವರಿಗೇನಪ್ಪಾ ಮಾತು ಅನ್ಕೊಂಡು, ಅವರ ಹಿಂದೆ ಹೋಗಿ ಒಂದು ಟೇಬಲ್ ಎದುರು ಕೂತೆ. ಅದೂ ಇದೂ ಮಾತಾಡ್ತಾ, `ಡು ಯು ರಿಯಲ್ಲೀ ಥಿಂಕ್ ದಟ್ ದ ಯೂತ್ ಕೇರ್ ಮಚ್ ಅಬೌಟ್ ಕ್ಯಾಸ್ಟ್, ವ್ಹೈಲ್ ವೋಟಿಂಗ್? ದಟ್ ಇಸ್ ಟೂ ಇನ್ ದಿಸ್ ಟ್ವೆಂಟಿ ಫಸ್ಟ್ ಸೆಂಚ್ಯುರಿ?’ ಅಂತ ಕೇಳಿದ್ರು.
ಒಂದೇ ಕ್ಷಣದಲ್ಲಿ ತಡಬಡಾಯಿಸಿ ಹೋಗಿದ್ದೆ. ಆ ಪ್ರಶ್ನೆ ಹಾಕುವಾಗ, ಮುಖದಲ್ಲಿ ಒಂದು ಮುಗ್ದತೆಯಿತ್ತು. ಪ್ರತೀ ಸಲ ಮಾತಾಡುವಾಗ, ಈ ರಾಜ್ಯಕ್ಕೆ ಒಂದು ಒಳ್ಳೆ ಆಡಳಿತ ಕೊಡಬೇಕು ಅಂತ ಮಲ್ಯ ಹೇಳ್ತಿದ್ರು. ಆ ಮಾತಿನ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತಿರಲಿಲ್ಲ. ಆದರೆ, ಅವರಿಗೆ ವ್ಯವಸ್ಥೆ ಸರಿಯಾಗಿ ಅರ್ಥವಾಗಿಲ್ಲ ಅನ್ನುವುದರಲ್ಲಿ ಅನುಮಾನವಿರಲಿಲ್ಲ.
ಒಂದು ಕ್ಷಣ ಸುಧಾರಿಸಿಕೊಂಡು, ನಿಧಾನವಾಗಿ ಹೇಳಿದೆ. `ಹೌದು. ಇಪ್ಪತ್ತು ವರ್ಷಗಳ ಹಿಂದಿಗಿಂತಲೂ ಈಗ ಜಾತಿ ಪದ್ದತಿ ಭಾವನೆ ಈಗ ಜಾಸ್ತಿಯಾಗಿದೆ. ಚುನಾವಣೆ ಸಮಯದಲ್ಲಂತೂ ಅದು ಇನ್ನೂ ಹೆಚ್ಚಾಗುತ್ತೆ,’ ಅಂದು, ಅದಕ್ಕೆ ಕಾರಣಗಳನ್ನು ಹೇಳುತ್ತಾ ಹೋದೆ.
ಸುಮ್ಮನೆ ಕೂತು ಕೇಳಿಸಿಕೊಂಡ ಮಲ್ಯ, ಕೊನೆಗೆ ತಲೆ ಆಡಿಸಲು ಶುರುಮಾಡಿದ್ರು. `ಯು ನೋ.. ಐ ಹ್ಯಾವ್ ಎ ಡ್ರೀಮ್ ಫಾರ್ ದಿ ಸ್ಟೇಟ್. ಇನ್ ದಿಸ್ ಎಲೆಕ್ಷನ್, ವಿ ಹ್ಯಾವ್ ಟು ವಿನ್ ಸಮ್ ಸೀಟ್ಸ್ ಅಂಡ್ ಕೀಪ್ ದಿ ಪಾರ್ಟಿ ಅಜೆಂಡಾ ಅಲೈವ್ ಫಾರ್ ದಿ ನೆಕ್ಸ್ಟ್ ಎಲೆಕ್ಷನ್,’ ಅಂತ ಎದ್ದರು.
ಮೊದಮೊದಲು, ನಾವು ಮಲ್ಯರ ಪಕ್ಷ ಹತ್ತರಿಂದ, ಹದಿನೈದು ಸೀಟ್ ಗೆಲ್ಲಬಹುದು ಅಂದ್ಕೊಂಡಿದ್ದೆವು. ಬರುಬರುತ್ತಾ, ಅದು ಐದಕ್ಕಿಂತ ಕಮ್ಮಿಯಾಗತೊಡಗಿತು. ಮಲ್ಯನಿಂದ ಕೋಟಿಗಟ್ಟಲೆ ಹಣ ಪಡೆಯಬಹುದು ಅಂತ ಅವರ ಪಕ್ಷಕ್ಕೆ ಹೋದವರಿಗೆ ನಿರಾಶೆ ಕಾದಿತ್ತು. ಪ್ರಚಾರಕ್ಕೆ ಬೇಕಾದ ಪದಾರ್ಥಗಳನ್ನು ಎಷ್ಟು ಬೇಕಾದ್ರೂ ಕೊಡುತ್ತಿದ್ದ ಮಲ್ಯ, ಯಾರಿಗೂ ದುಡ್ಡು ಕೊಡಲು ಒಪ್ಪಲಿಲ್ಲ.
ಚುನಾವಣೆ ಫಲಿತಾಂಗ ಬಂದಾಗ, ಮಲ್ಯರ ಪಕ್ಷ ಒಂದೂ ಸೀಟ್ ಗೆಲ್ಲದೆ, ಧೂಳೀಪಟವಾಗಿತ್ತು. ಹಾಗೇ, ಮಲ್ಯರ ಕಾರ್ಪೊರೇಟ್ ಪಾಲಿಟಿಕ್ಸ್ ಕೂಡ………


ಮಾಕೋನಹಳ್ಳಿ ವಿನಯ್ ಮಾಧವ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ