ಗುರುವಾರ, ಡಿಸೆಂಬರ್ 1, 2011

ಸುಗ್ಗಲಮ್ಮ


ಸುಗ್ಗಲಮ್ಮನ ಸುವ್ವಾಲಾಲಿ…



`ಇದು ಸುಗ್ಗಲಮ್ಮನ ಶಾಪ’ ಅಂತ ಎಲ್ಲಾ ಮಾಧ್ಯಮಗಳೂ ಚೀರಿ ಹೇಳುತ್ತಿದ್ದಾಗಲೆಲ್ಲ, ಈ ಸುಗ್ಗಲಮ್ಮನನ್ನು ಒಂದ್ಸಲ ನೋಡಬೇಕು ಅಂತ ನನಗೆ ಅನ್ನಿಸುತ್ತಿತ್ತು. ಹೌದು… ಸುಗ್ಗಲಮ್ಮನ ಗುಡಿಯನ್ನು ಡೈನಮೈಟ್ ಹಾಕಿ ಉಡಾಯಿಸಿ ನಾಲ್ಕು ವರ್ಷ ಕಳೆದ ನಂತರ, ಗಣಿಧಣಿಗಳ ಸಾರ್ವಭೌಮ ಜನಾರ್ಧನ ರೆಡ್ಡಿಯನ್ನು ಸಿಬಿಐ ನವರು ತೆಗೆದುಕೊಂಡು ಹೋಗಿ ಚಂಚಲಗುಡ್ಡ ಜೈಲಿನಲ್ಲಿ ಸಾಧಾರಣ ಕೈದಿಯಂತೆ ಇಟ್ಟಿದ್ದಾರೆ!
ನಾಲ್ಕಾರು ವರ್ಷಗಳಿಂದ ಯಾವುದು ಅಸಾಧ್ಯ ಅಂತ ಜನ ತಿಳಿದಿದ್ದರೋ, ಅದು ನೆಡೆದೇಹೋಗಿದೆ.
ಗಣಿಗಾರಿಕೆ ನಿಂತುಹೋದಮೇಲೆ, ಬಳ್ಳಾರಿ ಜನಜೀವನ ಹೇಗಿದೆ ಅಂತ ವರದಿ ಮಾಡಲು ನಾನು ಮತ್ತು ಛಾಯಾಗ್ರಾಹಕ ಸತೀಶ್, ಹೊಸಪೇಟೆ ಮತ್ತು ಬಳ್ಳಾರಿಯನ್ನು ಒಂದು ಸುತ್ತು ಹಾಕಿದೆವು. ಇಬ್ಬರಿಗೂ ಒಂದೇ ಆಸೆ. ಜನಾರ್ಧನ ರೆಡ್ಡಿಯ ಗಣಿ ಕಾರಾಸ್ಥಾನವಾದ ಓಬಳಾಪುರಂ ನೋಡಬೇಕು ಅಂತ. ಅದಕ್ಕಿಂತ ಹೆಚ್ಚಾಗಿ, ರೆಡ್ಡಿಪಡೆ ಕೆಡವಿದ ಸುಗ್ಗಲಮ್ಮನ ಗುಡಿ….
ಪ್ರವಾಸದ ಕೊನೆಯದಿನ, ಮಾಜಿಶಾಸಕ ಸೂರ್ಯನಾರಾಯಣ ರೆಡ್ಡಿಯನ್ನು ಮಾತನಾಡಿಸಲು ಹೋಗಿದ್ದೆ. ಹಾಗೆಯೇ, ಓಬಳಾಪುರಂ ಮತ್ತು ಸುಗ್ಗಲಮ್ಮ ಗುಡಿಯ ವಿಷಯ ತೆಗೆದೆ. `ಇಲ್ಲೇ ಐದ್ ಕಿಲೋಮೀಟರ್ ದೂರದಾಗೈತ್ರಿ. ಅಲ್ಲಿನ ಸಬ್-ಇನ್ಸಪೆಕ್ಟರ್ ನಂಗ ಪರಿಚಯದವ. ಅವಂಗ ಹೇಳ್ತೀನ್ ನೋಡ್ರಿ,’ ಅಂದವರೆ, ಫೋನ್ ಮಾಡಿ ತೆಲುಗಿನಲ್ಲಿ ಮಾತನಾಡಿಸಲಾರಂಭಿಸಿದರು.
ಯಾಕೋ ಏನೋ, ಓಬಳಾಪುರಂ ಹೆಸರು ಹೇಳಿದ ತಕ್ಷಣ ಆ ಕಡೆಯಿಂದ ಅಂತಾ ಒಳ್ಳೆ ಪ್ರತಿಕ್ರಿಯೆ ಬಂದಂತೆ ಅನ್ನಿಸಲಿಲ್ಲ. ಒಂದು ವಾರದ ಹಿಂದಷ್ಟೇ, ರೆಡ್ಡಿ ಬಂಧನವಾದಮೇಲೆ ಕಮ್ಯುನಿಸ್ಟರು ಓಬಳಾಪುರಂ ಮೈನಿಂಗ್ ಆವರಣದೋಳಗೆ ನುಗ್ಗಿ, ಸಿಕ್ಕದ್ದನೆಲ್ಲ ಧ್ವಂಸ ಮಾಡಿ, ತಮ್ಮ ಧ್ವಜಗಳನ್ನು ಹಾರಿಸಿದ್ದರು.
ಫೋನ್ ಕೆಳಗಿಡುತ್ತಾ, ಸೂರ್ಯನಾರಾಯಣ ರೆಡ್ಡಿ ಹೇಳಿದರು: ``ನೀವ್ ಕಾರ್ ನಾಗ ಬಂದೀರಿ. ಸೈಕಲ್ ಮೋಟಾರ್ ಆದರ ಚಲೋ ಇತ್ತು ಅಂತ ಅಂವ ಹೇಳ್ತಾನ. ಜಾಗದಾಗ ಇನ್ನೂ ಟೆನ್ಶನ್ ಐತಂತ್ರಿ. ನೀವ್ ಬರ್ತೀರಿ ಅಂತ ಹೇಳೀನಿ. ಅವಂಗ ಭೆಟ್ಟಿ ಆಗ್ರಿ. ಸಹಾಯ ಮಡ್ತಾನ.’
ಏನೋ ಒಂದು.. ಸುಗ್ಗಲಮ್ಮ ದೇವಸ್ಥಾನಕ್ಕೆ ಹೋಗಲು ಒಂದು ದಾರಿಯಾಯ್ತು ಅಂತ ಹೊರಟೆವು. ಬಳ್ಳಾರಿ ನಗರ ದಾಟಿ ಐದೇ ಕಿಲೋಮೀಟರ್ ನಲ್ಲಿ ಆಂಧ್ರಪ್ರದೇಶವನ್ನು ಪ್ರವೇಶಿಸಿ, ಓಬಳಾಪುರಂ ತಲುಪಿದೆವು. ಊರು ದಾಟುತ್ತಲೇ, ರಸ್ತೆ ಬದಿಯಲ್ಲಿ ಪೋಲಿಸ್ ಸ್ಟೇಷನ್ ಕಾಣಿಸಿತು. ಒಳಗ್ಗೆ ಹೋದರೆ, ಸಬ್-ಇನ್ಸಪೆಕ್ಟರ್ ನಾಪತ್ತೆ. ಸರಿ, ಅವನ ಮೊಬೈಲ್ ಗೆ ಫೋನ್ ಹಚ್ಚಿದೆ. ನಾನು ಇಂಗ್ಲಿಷ್ ನಲ್ಲಿ ಮಾತನಾಡಿದ್ದಕ್ಕೆ, ತೆಲುಗಿನಲ್ಲಿ ಉತ್ತರ ಬಂತು. ನನಗೆ ಅರ್ಥವದದ್ದು ಇಷ್ಟೆ: `ನೋಡಿ, ಈ ಜಾಗ ಮತ್ತು ನೀವು ಬಂದಿರುವ ಸಮಯ ಸರಿ ಇಲ್ಲ. ಸಾಧ್ಯವಾದರೆ, ನೇರವಾಗಿ ಬೆಂಗಳೂರಿಗೆ ನೇರವಾಗಿ ಹೋಗಿಬಿಡಿ. ಇಲ್ಲವಾದರೆ, ವಾಪಾಸ್ ಒಂದು ಕಿಲೋಮೀಟರ್ ಹೋಗಿ, ಬಸ್ ಸ್ಟ್ಯಾಂಡಿನಲ್ಲಿ ನಿಮ್ಮ ಕಾರ್ ಬಿಟ್ಟು, ಆಟೋರಿಕ್ಷ ಹತ್ತಿ. ನೂರು ರೂಪಾಯಿ ಕೊಟ್ಟರೆ, ಸುಗ್ಗಲಮ್ಮನ ಗುಡಿಗೆ ಕರೆದುಕೊಂಡು ಹೋಗಿ ಬರುತ್ತಾರೆ. ನೀವು ಪೇಪರಿನೋರು ಅಂತ ಪೋಲಿಸರಿಗೂ ಹೇಳಬೇಡಿ. ಎಲ್ಲಾ ಕಡೆ `ಅವರ’ ಏಜೆಂಟರಿರುತ್ತಾರೆ. ಫೋಟೋ ಮಾತ್ರ ತೆಗೆಯಲು ಹೋಗಲೇಬೇಡಿ.’
ಪಕ್ಕನೆ ನಕ್ಕುಬಿಟ್ಟೆ. ಫೋನ್ ಇಟ್ಟತಕ್ಷಣ ಸ್ವಲ್ಪ ರೇಗಿತು. `ಯಾವ ದೇಶದಲ್ಲಿದ್ದೀವಿ ನಾವು’ ಎನ್ನಿಸಿತು. ಸಂಡೂರಿನಲ್ಲಿ ಘೋರ್ಪಡೆಯವರನ್ನು ಕಂಡು, ದಟ್ಟ ಕಾಡುಗಳ ಮಧ್ಯ ಕಳ್ಳ ಗಣಿಗಳನ್ನು ನೋಡಿ, ಹೊಸಪೇಟೆ, ಬಳ್ಳಾರಿಯಲ್ಲಿ ಎಗ್ಗಿಲ್ಲದೆ ಮೂರುದಿನ ಸುತ್ತಿದ ನನಗೆ, ಇಲ್ಲಿ ಕಿರಿಕಿರಿಯಾಯಿತು.
ಕಾರಿಗೆ ಹತ್ತುವಾಗ ನನ್ನ ಮುಖ ನೋಡಿದ ಸತೀಶನಿಗೆ, `ಏನೂ ಪ್ರಯೋಜನ ಇಲ್ಲ ಕಣೋ. ನರ ಇಲ್ಲ ಈ ಪೋಲೀಸ್ ನನ್ನಮಕ್ಕ್ಳಿಗೆ. ಹಿಂದೆ ನೆಡಿ… ಅಲ್ಲೇ ರೈಲ್ವೆಸ್ಟೇಷನ್ ಹತ್ತಿರ ಎಡಕ್ಕೆ ತೆಗೆದುಕೊಂಡರೆ, ಸುಗ್ಗಲಮ್ಮ ಗುಡಿಗೆ ದಾರಿಯಂತೆ. ಕೇಳಿಕೊಂಡು ಹೋದರಾಯ್ತು,’ ಅಂದೆ.
ದಾರಿಯಲ್ಲಿ ಹೋಗುವಾಗ, ಎಲ್ಲಾ ನಿಗೂಢ ಎನ್ನಿಸತೊಡಗಿತು. ಗುಂಪುಗೂಡಿ ಮಾತನಾಡುತ್ತಿದ್ದ ಜನಗಳೆಲ್ಲ ರೆಡ್ಡಿಗಳ ಗೂಢಾಚಾರರಾ?
ಒಬ್ಬಿಬ್ಬರನ್ನು ಗುಡಿಯ ದಾರಿ ವಿಚಾರಿಸಿಕೊಂಡು ಮುಂದುವರೆದೆವು. ಅವರೂ ನಮ್ಮನ್ನು ಯಾರು ಎಂದು ವಿಚಾರಿಸಿದಾಗ, `ಪೂಜೆಗಾಗಿ ಬಂದಿದ್ದೇವೆ’ ಎಂದೆ. ಒಂದೆರೆಡು ಮುಖಗಳಲ್ಲಿ, ಅಪನಂಬಿಕೆಯ ಕಿರುನಗೆ ಮೂಡಿದವು. ನಾನಾಗಲಿ, ಸತೀಶನಾಗಲಿ, ಬೆಂಗಳೂರಿನಿಂದ ಬಂದು ಪೂಜೆಮಾಡಿಸುವಂತ ಭಕ್ತರಂತೇನೂ ಕಾಣುತ್ತಿರಲಿಲ್ಲ.
ಹೆದ್ದಾರಿ ಬಿಟ್ಟು ಕಚ್ಚಾರಸ್ತೆಗೆ ಬಂದಾಗ, ಇನ್ನೂ ವಿಚಿತ್ರ ಎನಿಸಿತು. ಸಾವಿರಾರು ಲಾರಿಗಳು ಓಡಾಡುತ್ತಿದ್ದ ದಾರಿ ಇದೇನಾ ಅಂತ. ಆಫ್ರಿಕಾದ ಕಾಡುಗಳಲ್ಲಿದ್ದಂತೆ ಎಲ್ಲಾ ದಿಕ್ಕಿಗೊಂದು ಕಚ್ಚಾ ರಸ್ತೆಗಳಿದ್ದವು. ಪಕ್ಕದಲ್ಲೆಲ್ಲಾ ಬಳ್ಳಾರಿ ಜಾಲಿ ಗಿಡಗಳು.
ಅಂದಾಜಿನ ಮೇಲೆ ದಾರಿ ಆರಿಸಿಕೊಂಡು ಸ್ವಲ್ಪ ಮುಂದೆ ಬಂದೆವು. ಅಕ್ಕ ಪಕ್ಕಗಳಲ್ಲಿ ಸಣ್ಣ ಸಣ್ಣ ಗಣಿಗಳ ದಾಸ್ತಾನುಕೇಂದ್ರಗಳಿದ್ದರೂ, ಚಟುವಟಿಕೆಗಳೇನೂ ನೆಡೆಯುತ್ತಿರಲಿಲ್ಲ. ಸ್ವಲ್ಪ ಮುಂದೆ ಹೋಗುವಾಗ, ದೂರದಲ್ಲಿ ದೇವಸ್ಥಾನ ಕಂಡಿತು. ಸರಿ, ಅಲ್ಲೇ ವಿಚಾರಿಸಿದರಾಯ್ತು ಅಂತ ಅತ್ತ ಕಡೆಗೇ ಕಾರು ತಿರುಗಿಸಿದೆವು. ದೇವಸ್ಥಾನದ ಹತ್ತಿರ ಬಂದಾಗಲೇ ನಮಗೆ ತಿಳಿದಿದ್ದು ನಾವು ಜನಾರ್ಧನ ರೆಡ್ಡಿಯ ಓಬಳಾಪುರಂ ಗಣಿ ಪ್ರದೇಶದಲ್ಲಿದ್ದೇವೆ ಎಂದು.
ದಾರಿಗೆ ಅಡ್ಡವಾಗಿ ಕಲ್ಲುಗಳನ್ನು ಇಟ್ಟುಕೊಂಡು, ಸೆಕ್ಯುರಿಟಿ ಗಾರ್ಡ್ ಗಳು ನಿಂತಿದ್ದರು. ಯಾವಕಡೆ ಹೋಗಬೇಕು ಅಂತ ಯೋಚಿಸುವಾಗಲೇ, ಮೋಟಾರ್ ಸೈಕಲ್ ನಲ್ಲಿ ಇಬ್ಬರು ಬಂದರು. ನಮ್ಮನ್ನು ನೋಡಿದವರೇ, ನಿಲ್ಲಿಸಿ `ಏನ್ ಬೇಕ್ರೀ, ಯಾವ್ ಕಡೀಗ್ ಹೊಂಟೀರಿ?’ ಅಂತ ಕೇಳಿದರು.
ನಾವು ಸುಗ್ಗಲಮ್ಮನ ಗುಡಿ ಅಂತ ಹೇಳಿದ ತಕ್ಷಣ, `ಬರ್ರೀ ನಮ್ಹ್ಮಿಂದ’ ಅಂತ ಎಡಕ್ಕೆ ತಿರುಗಿದರು.  ಐವತ್ತು ಅಡಿಗಳ ಮುಂದೆ ಹೋದವರೇ, ಮತ್ತೆ ಜಾಲಿಗಿಡಗಳ ಮಧ್ಯ ಬಲಕ್ಕೆ ತಿರುಗಿದರು. ಅಲ್ಲಿ ಹೋಗಿ ನೋಡಿದಾಗ ಗೊತ್ತಾಯಿತು – ನಾವು ಸುಗ್ಗಲಮ್ಮನ ಹೊಸ ಗುಡಿಯ ಹೊರಗೆ ನಿಂತಿದ್ದೇವೆ ಅಂತ.
ಗುಡಿಯ ಹೊರಗಿನ ಕಟ್ಟೆ ಮೇಲೆ ಕಾವಿ ಶಲ್ಯ ಹೊದ್ದ ಅರ್ಚಕನೂ ಮತ್ತು ಪುಸು ಪುಸು ಬೀಡಿ ಹೊಗೆ ಬಿಡುತ್ತಿದ್ದ ಹಳ್ಳಿಯವನೊಬ್ಬನೂ ಕುಳಿತ್ತಿದ್ದರು. ನಮಗೆ ದಾರಿ ತೋರಿಸಿದವರು ಮೋಟಾರು ಸೈಕಲ್ ನಿಂದ ಇಳಿದು ಕಟ್ಟೆಯಕಡೆ ಬಂದರು. ಇನ್ನು ಕಥೆಹೇಳಿ ಪ್ರಯೋಜನವಿಲ್ಲ ಎಂದುಕೊಂಡು, ನಾವು ಬೆಂಗಳೂರಿನಿಂದ ಬಂದ ವರದಿಗಾರರು, ಬಳ್ಳಾರಿಗೆ ಬಂದವರು, ಓಬಳಾಪುರಂ ಗಣಿ ಮತ್ತು ಸುಗ್ಗಲಮ್ಮ ಗುಡಿಯನ್ನು ನೋಡಿಕೊಂಡು ಹೋಗಲು ಬಂದೆವೆಂದು   ಪರಿಚಯ ಮಾಡಿಕೊಂಡೆವು.
ತಕ್ಷಣವೇ, ಮೋಟಾರ್ ಸೈಕಲ್ ಓಡಿಸಿಕೊಂಡು ಬಂದವನು `ಆ ರೆಡ್ಡಿಗ್ ಸೊಕ್ಕ್ ಭಾಳಾ ಇತ್ತ್ರಿ. ನಮ್ಮ್ ಜಮೀನ್ ಎಲ್ಲಾ ಹೊಡ್ಕೊಂಡಿದ್ದ ನೋಡ್ರಿ. ಇಲ್ಲಿ ಗೇಟು, ಪೆಟ್ರೋಲ್ ಬಂಕ್ ಕಟ್ಟಿದ್ದಾರಲ್ಲಾ, ಎಲ್ಲಾ ಸೇರಿ ಹನ್ನೊಂದ್ ಎಕರೆ ನಂದಿತ್ತ್ರಿ. ಇದರ ವಿಷಯ ಮಾತಾಡಿದ್ಕ, ಅವನ್ ಕಡೀರು ದನಕ್ ಬಡ್ದಂಗ ಬಡದ್ರು. ಈಗ ಬಂದಾರ, ನನಗ್ ರೊಕ್ಕ ಕೊಟ್ಟ್, ಭೂಮೀನೂ ಬಿಟ್ ಕೊಡ್ತೀವ್ ಅಂತ ಹೇಳಾಕ,’ ಅಂತ ಒಂದೇ ಉಸಿರಿನಲ್ಲಿ ಹೇಳಿದ.
ವಿಷಯದ ಹಿಂದೆ ಮುಂದೆ ಗೊತ್ತಿಲ್ಲದ ನಾನು ಸಮಾಧಾನದಿಂದಲೇ ಕೇಳಿಸಿಕೊಂಡೆ. ಹಾಗೆಯೇ, ಒಬ್ಬರನ್ನಾಗಿ ಪರಿಚಯ ಮಾಡಿಕೊಂಡೆ. ಮೋಟಾರ್ ಸೈಕಲ್ ನಲ್ಲಿ ಬಂದವರು ಬಸಪ್ಪ ಮತ್ತು ರಾಜಾ ರೆಡ್ಡಿ. ಇಬ್ಬರೂ ಓಬಳಾಪುರಂ ಊರಿನವರು. ಬೀಡಿ ಸೇದುತ್ತಾ ಕುಳಿತ್ತಿದ್ದವನ ಹೆಸರು ಸಿದ್ದ. ಅವನ ಊರು ಅಳಂದಿ – ನಾವು ಹೆದ್ದಾರಿಯಿಂದ ಕಚ್ಚಾರಸ್ತೆಗೆ ತಿರುಗಿದ ಜಾಗ. ಊರುಗಳು ಕಣ್ಣಳತೆಯ ದೂರದಲ್ಲಿದ್ದರೂ, ಅಳಂದಿ ಕರ್ನಾಟಕಕ್ಕೆ ಸೇರಿದೆ ಮತ್ತು ಓಬಳಾಪುರಂ ಆಂಧ್ರಪ್ರದೇಶದಲ್ಲಿದೆ. ಅರ್ಚಕರ ಹೆಸರು ಭೀಮಾ ನಾಯ್ಕ ಅಂತ ಗೊತ್ತಾಯಿತು.
`ಸುಗ್ಗಲಮ್ಮ ಅಂದ್ರೆ ಸುಮ್ನೆ ಅಂತ ಮಾಡೀರೇನು? ಆ ಗುಡಿ ಕೆಡವಿದಾಗ್ಲೇ ನಮಗ್ ಗೊತ್ತಿತ್ತ್ ನೋಡ್ರಿ, ಈ ರೆಡ್ಡಿಗ ಕೇಡುಗಾಲ ಬಂದೈತಂತ,’ ಅಂದ ಬಸಪ್ಪ.
`ಅಂದ್ರ, ನೀ ಹೇಳೋದ್ ಸುಗ್ಗಾಲಮ್ಮನ್ ಗುಡಿಗ್ ಡೈನಮೈಟ್ ಇಡೋದ್ ಓಬಳಾಪುರಂದವರ್ಗ ಗೊತ್ತಿರ್ಲಿಲ್ಲೇನು?’ ಅಂದ ಸಿದ್ದ.
`ಅದಾ… ಒಂದಿಬ್ಬರಿಗ್ ಗೊತ್ತಿತ್ ಬಿಡು. ನಾವು ಟಿಡಿಪಿ ನವರು ಧರಣಿ ಮಾಡ್ಲಿಲ್ಲೇನು? ಆ ಕಾಂಗ್ರೆಸ್ ನವರು ಆಂಧ್ರದ ಎಲ್ಲಾ ಪೋಲಿಸನ್ನೂ ಓಬಳಾಪುರಂಗೆ ಕಳ್ಸಿದ್ರಲ್ಲ?’ ಅಂದ ಬಸಪ್ಪ.
`ಅಲ್ಲಲೇ, ನಾ ಕೇಳಿದ್ದು ನಿಮ್ಮೂರಿನವರ್ಗೆ ಗೊತ್ತಿರ್ಲಿಲ್ವಾ ಅಂತಾ… ನಿನ್ನ್ ಜಮೀನ್ಗೆ ಎರಡ್ ಸಲ ರೊಕ್ಕ ತಗೊಂಡೀಯೋ ಇಲ್ವೋ?’ ಅಂತ ತಿರುಗಿ ಕೇಳಿದ ಸಿದ್ದ.
ಅವರಿಬ್ಬರು ಮಾತನಾಡುವಾಗ, ಇಬ್ಬರೂ ಒಳ್ಳೆ ಗೆಳೆಯರು ಅಂತ ಗೊತ್ತಾಗುತ್ತಿತ್ತು. ರಾಜಾ ರೆಡ್ಡಿ ಕೂಡ ಎರಡೂ ಪರ ವಹಿಸಿಕೊಂಡು, ಮಧ್ಯ ಮಧ್ಯ ಹಾಸ್ಯಚಟಾಕಿಗಳನ್ನು ಸಿಡಿಸಿಕೊಂಡು ಮಜಾ ತೆಗೆದುಕೊಳ್ಳುತ್ತಿದ್ದ. ಭೀಮಾ ನಾಯ್ಕರಂತೂ ಸುಮ್ಮನೆ ಮುಗುಳ್ನಗುತ್ತಾ ಕುಳಿತಿದ್ದರು.
ಆದರೆ, ನಮಗಿದ್ದದ್ದು ಒಂದೇ. ಸುಗ್ಗಲಮ್ಮನ ಗುಡಿ ಕೆಡವಿದ ಜಾಗಕ್ಕೆ ಹೋಗಿ ಬರಬೇಕಿತ್ತು. ಅದಕ್ಕೆ ರೆಡ್ಡಿಗಳ ಗಣಿಪ್ರದೇಶದಿಂದ ಮಾತ್ರ ಪ್ರವೇಶ ಸಾಧ್ಯ.
ಚಕಚಕನೆ ಫೋಟೋಗಳನ್ನು ತೆಗೆಯುತ್ತಿದ್ದ ಸತೀಶ ಚಡಪಡಿಸಲು ಆರಂಭಿಸಿದ. ನಾನೇನೋ ಈ ಮೂರು ಮಿತ್ರರ ಸರಸ-ಸಲ್ಲಾಪಗಳನ್ನು ಆಸಕ್ತಿಯಿಂದ ಕೇಳುತ್ತಿದ್ದೆ. ಆದರೆ, ಆಗಲೇ ಸಂಜೆಯಾಗತೊಡಗಿತು. ಇನ್ನೂ ರೆಡ್ಡಿಗಳ ಸಾಮ್ರಾಜ್ಯದ ಹೆಬ್ಬಾಗಿಲಲ್ಲೇ ನಿಂತಿದ್ದೆವು. ಬಿಸಿಲು ಕಮ್ಮಿಯಾಗುವುದರೊಳಗೆ, ಒಳಗೆ ಹೋಗಿ, ಗುಡ್ಡದಮೇಲಿದ್ದ ಸುಗ್ಗಲಮ್ಮನ ಹಳೇ ಗುಡಿಯ ಪಳೆಯುಳಿಗೆಯನ್ನು ಫೋಟೋ ತೆಗೆಯಬೇಕಿತ್ತು. ಈ ನಾಲ್ವರಲ್ಲಿ, ರೆಡ್ಡಿಗಳ ಸೆಕ್ಯುರಿಟಿ ದಾಟಲು ಯಾರು ಸಹಾಯ ಮಾಡಬಹುದು? ಅಂತ ಯೋಚಿಸುತ್ತಿದ್ದೆ.
ಅಷ್ಟರಲ್ಲಿ ಸತೀಶ, ಭೀಮಾನಾಯ್ಕರನ್ನು ಕುರಿತು ಕೇಳಿದ: `ಸ್ವಾಮಿ, ಈ ಗುಡಿಯ ಒಳಗೆ ನೋಡಬಹುದೇ’? ಅಂತ. ಭೀಮಾನಾಯ್ಕರು ಸಂತೋಷವಾಗಿಯೇ ಅವನನ್ನು ಒಳಗೆ ಕರೆದರು. ನನಗೂ ಸತೀಶನ ಯೋಚನೆ ಸರಿಯಾಗಿಯೇ ಕಂಡಿತು. ಅವನು ಒಳಗೆ ಭೀಮಾನಾಯ್ಕರ ಹತ್ತಿರ ಪ್ರಯತ್ನಿಸಲಿ. ಅದು ಫಲಿಸದೇ ಹೋದರೆ, ಈ ಮೂವರನ್ನು ಕೇಳೋಣ ಅಂದುಕೊಂಡೆ. ಈ ಮೂವರಂತೂ, ತಮ್ಮದೇ ವಾಗ್ವಾದಗಳಲ್ಲಿ ಮುಳುಗಿದ್ದರು.
ಈ ಬಳ್ಳಾರಿ ಮತ್ತು ಆಂಧ್ರದ ಗಣಿಪ್ರದೇಶಗಳಲ್ಲಿ ವಾಸಿಸುವ ಜನಗಳೇ ಒಂತರಾ ವಿಚಿತ್ರ ಎನಿಸತೊಡಗಿತು. ಅಳಂದಿಯಲ್ಲಿ ಜೋರಾಗಿ ಗಾಳಿ ಬೀಸಿದರೆ, ಊರಿನ ಕಸ ಹೋಗಿ ಓಬಳಾಪುರಂಗೆ ಬೀಳುತ್ತದೆ ಅಷ್ಟೆ. ಆದರೂ, ಎರಡು ಬೇರೆ ಬೇರೆ ರಾಜ್ಯಗಳು ಮತ್ತು ರಾಜಕೀಯ ಸನ್ನಿವೇಶಗಳು. ಬಸಪ್ಪನ 11 ಎಕರೆಗಳಲ್ಲಿ, ಐದು ಎಕರೆಗಳನ್ನು ರೆಡ್ಡಿಗಳು, ತಮ್ಮ ಗಣಿಪ್ರದೇಶದ ಅದಿರು ಸಂಗ್ರಹ ಕೇಂದ್ರಕ್ಕಾಗಿ ಬಳಸಿಕೊಂಡಿದ್ದಂತೂ ನಿಜ. ಆದರೆ, ಅದಕ್ಕೆ ದುಡ್ಡು ಕೊಟ್ಟಿರಲಿಲ್ಲ ಎಂಬುದು ಶುದ್ದ ಸುಳ್ಳು. ಮೊದಲು, ಎಕರೆಗೆ 40,000 ರೂಪಾಯಿಯಂತೆ ಪಡೆದಿದ್ದ ಬಸಪ್ಪ, ಮತ್ತೊಮ್ಮೆ ಹೋಗಿ, ಎಕರೆಗೆ 1.5 ಲಕ್ಷ ರೂ.ಗಳನ್ನು ಪಡೆದಿದ್ದ. ಕೊನೆಗೆ, ನನ್ನ ಜಮೀನಿನ ಬೆಲೆ ಒಂದು ಕೋಟಿ ರೂ. ಎಂದೂ, ಅದನ್ನು ಕೊಡದಿದ್ದರೆ ರೆಡ್ಡಿಗಳಿಗೆ ಗಣಿಪ್ರದೇಶಕ್ಕೆ ಪ್ರವೇಶ ಮಾಡಲು ಬಿಡುವುದಿಲ್ಲ ಎಂದು ತಕರಾರು ಮಾಡಿದಾಗ, ರೆಡ್ಡಿ ಪಡೆಯವರು ಅವನನ್ನು ಹಿಡಿದು ಚೆನ್ನಾಗಿ ತದುಕಿದರು.  ಸಿದ್ದನ ಪ್ರಶ್ನೆ ಇಷ್ಟೇ: ಅಲ್ಲಿನ ಜಮೀನುಗಳಿಗೆ, ಯಾವಾಗ ಮತ್ತು ಹೇಗೆ ಎಕರೆಗೆ ಒಂದು ಕೋಟಿ ಬೆಲೆ ಬಂತು?
ಆದರೆ ಬಸಪ್ಪ ತನ್ನ ವಿತಂಡವಾದಗಳನ್ನು ಬಿಡಲಿಲ್ಲ. ಗಣಿಗಳಲ್ಲಿ ದಿನಕ್ಕೆ ಕೋಟಿಗಟ್ಟಲೆ ದುಡಿಯುವಾಗ, ಅದಕ್ಕೆ ಹೊಂದಿಕೊಂಡಿರುವ ತನ್ನ ಜಮೀನಿಗೂ ಅಷ್ಟೇ ಬೆಲೆ ಎಂದು ವಾದಿಸತೊಡಗಿದ. ಆಗಿನ ರಾಜಶೇಖರ ರೆಡ್ಡಿ ನೇತ್ರತ್ವದ ಆಂಧ್ರದ ಕಾಂಗ್ರೆಸ್ ಪಕ್ಷ ತನ್ನ ಸಹಾಯಕ್ಕೆ ಬರಲಿಲ್ಲ ಅಂತ ಸಿಟ್ಟುಮಾಡಿಕೊಂಡು, ಬಸಪ್ಪ ತೆಲುಗು ದೇಶಂ ಪಕ್ಷ ಸೇರಿದ್ದ.
ಸುಗ್ಗಲಮ್ಮನ ಗುಡಿ ಕೆಡವಿದಾಗಲೂ ಅಷ್ಟೆ. ಎರಡೂ ಊರಿನವರೂ ಬೇರೆ ಬೇರೆ ನಿಲುವನ್ನು ತೆಗೆದುಕೊಂಡಿದ್ದರು. ಸುಗ್ಗಲಮ್ಮ, ಈ ಪ್ರಾಂತ್ಯದ ಹಲವಾರು ಹೆಣ್ಣು ಶಕ್ತಿದೇವತೆಗಳಲ್ಲಿ ಒಂದು. ಸುಗ್ಗಲಮ್ಮನ ಗುಡಿ ಎಂದರೆ, ಅದು ಒಂದು ಗುಹೆ. ಇದೇ ಎರಡು ರಾಜ್ಯಗಳ ಗಡಿ ಕೂಡ ಮತ್ತು ರಕ್ಷಿತಾರಣ್ಯದಲ್ಲಿ ಇತ್ತು. ಎರಡೂ ಕಡೆಯವರೂ ಅಲ್ಲಿ ತಮ್ಮ ಹರಕೆ ತೀರಿಸುತ್ತಿದ್ದರು.
ಮಾಂಸಾಹಾರಿ ದೇವತೆಯಾದ್ದರಿಂದ, ಪ್ರಾಣಿಬಲಿ ಕೂಡಾ ನೆಡೆಯುತ್ತಿತ್ತು. ಗುಡಿಯ ಹೆಚ್ಚಿನ ಭಾಗ ಆಂಧ್ರದ ಕಡೆಗಿತ್ತು. ತಮ್ಮ ಕಾನೂನುಬಾಹಿರ ಗಣಿಗಾರಿಕೆಯನ್ನು ಮುಚ್ಚಿಟ್ಟುಕೊಳ್ಳಲು ರೆಡ್ಡಿಗಳಿಗೆ ಈ ಗುಡಿಯನ್ನು ಕೆಡವದೆ ದಾರಿಯೇ ಇರಲಿಲ್ಲ.
ಆದರೆ, ಅವರಿಗೂ ಸುಗ್ಗಲಮ್ಮನ ಹೆದರಿಕೆ ಇತ್ತು ಅಂತ ಕಾಣುತ್ತೆ. ಕೆಡವುದಕ್ಕೆ ಮುಂಚೆ, ರೆಡ್ಡಿಗಳು ಓಬಳಾಪುರಂ ಜನಗಳನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಯಾವುದೇ ದೇವರ ಸ್ಥಳಕ್ಕೆ ಹಾನಿಯಾಗುವಂತಿದ್ದರೆ, ಅಥವಾ ಸ್ಥಳಾಂತರಿಸಬೇಕು ಎಂದಿದ್ದರೆ, ಅದಕ್ಕೆ ಹನ್ನೊಂದು ದಿನಗಳ ಪರ್ಯಾಯ ಪೂಜೆಯಾಗಬೇಕು. ರೆಡ್ಡಿಗಳ ಕೃಪೆಯಲ್ಲಿ, ಓಬಳಾಪುರಂ ಜನ, ಹನ್ನೊಂದು ದಿನ ಹಬ್ಬ ಆಚರಿಸಿದ್ದಾರೆ. ಊರಿಗಿಡೀ ಊಟ ಉಪಚಾರದ ಜೊತೆ, ಗುಂಡು-ತುಂಡುಗಳೂ, ನಾಚ್-ಗಾನಾ-ಬಜಾನಾ ಕೂಡ ನೆಡೆದಿದೆ. ಗುಡಿ ಸ್ಥಳಾಂತರ ಸಂಬಂಧ, ಅಲ್ಲಿನ ಪಂಚಾಯ್ತಿಯು, ಒಮ್ಮತದ ನಿರ್ಣಯವನ್ನೂ ಕೈಗೊಂಡಿದೆ. ಊರಿನ ಪ್ರಮುಖರು, ಈ ಸಂಬಂಧ ಪತ್ರಕ್ಕೆ ಸಹಿ ಕೂಡ ಹಾಕಿದ್ದಾರೆ.
ಗುಡಿಯನ್ನು ಸಿಡಿಸುವ ಮೊದಲೇ, ಅಲ್ಲಿದ್ದ ಸುಗ್ಗಲಮ್ಮನ ಮೂರ್ತಿಯನ್ನು ತೆಗೆದು ಬೇರೆ ಜಾಗಕ್ಕೆ ಸಾಗಿಸಿದ್ದಾರೆ. ಇವೆಲ್ಲಾ ಆದಮೇಲೆಯೇ, ರೆಡ್ಡಿಗಳು ಗುಡಿಯನ್ನು ಕೆಡುವುದಕ್ಕೆ ಧೈರ್ಯ ಮಾಡಿದ್ದು.
ಗುಡಿ ಕೆಡವಿದ್ದನ್ನು ಮುಂದಿಟ್ಟುಕೊಂಡು, ತೆಲುಗು ದೇಶಂ ಪಕ್ಷ ಓಬಳಾಪುರಂ ಬಂದ್ ಗೆ ಕರೆ ಕೊಟ್ಟಿತ್ತು. ಆದರೆ, ಆಂಧ್ರ ಸರ್ಕಾರ ಯಾವ ರೀತಿ ಪೋಲಿಸ್ ಬಂದೋ ಬಸ್ತ್ ಮಾಡಿತ್ತೆಂದರೆ, ಕಾರ್ಯಕರ್ತರಿಗಿಂತ, ಪೋಲಿಸರೇ ಹೆಚ್ಚಿದ್ದರಂತೆ.
ಸಿದ್ದ ಘಟನೆಗಳನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುವಾಗ, ಬಸಪ್ಪ ಶಕ್ತಿಮೀರಿ ತನ್ನನ್ನು ಮತ್ತು ತನ್ನೂರನ್ನು ಸಮರ್ಥಿಸಿಕೊಳ್ಳಲು ಒದ್ದಾಡುತ್ತಿದ್ದ. `ಸುಮ್ಮನ ಮಾತ್ ಯಾಕ್ ಆಡ್ಬೇಕ್ ಹೇಳು? ನೋಡಿ ಸರ್, ನಮ್ಮೂರಾಗೆ ಈಗ ಸುಗ್ಗಲಮ್ಮಾಗೆ ಗುಡಿ ಕಟ್ಟಿಸ್ತಿದ್ದೀವ್ರಿ. ಗುಡ್ಡದ ಮ್ಯಾಗಿದ್ದ ಆ ಮೂರ್ತಿ ಅಲ್ಲಿಡ್ತಿವ್ರಿ. ಓಬಳಾಪುರದವರ್ಗೂ, ಸುಗ್ಗಲಮ್ಮಂಗೂ ಯಾವ ಸಂಬಂಧ ಇಲ್ಲ ಬಿಡ್ರಿ,’ ಅಂತ ಸಿದ್ದ ತಣ್ಣಗೆ ಹೇಳಿದ.
ಅಷ್ಟರಲ್ಲೇ, ಪೂಜೆ ಮುಗಿಸಿಕೊಂಡು ಸತೀಶ ಗುಡಿಯಿಂದ ಹೊರಗೆ ಬಂದ. ಅವನ ಹಿಂದೆಯೇ ಭೀಮಾನಾಯ್ಕರು ಮತ್ತು ಗಣಿಯ ಸೆಕ್ಯುರಿಟಿ ಗಾರ್ಡ್ ಕೂಡ ಬಂದರು. ಗಾರ್ಡ್ ಎಲ್ಲರಿಗೂ ಪ್ರಸಾದ ಹಂಚಲು ಸಹಾಯ ಮಾಡುತ್ತಿದ್ದ. ತಕ್ಷಣವೇ ಅಂದುಕೊಂಡೆ: `ಸತೀಶ ವ್ಯವಹಾರ ಕುದುರಿಸಿದ್ದಾನೆ’ ಅಂತ.
ಐದೇ ನಿಮಿಷದಲ್ಲಿ ಎಲ್ಲರನ್ನೂ ಬೀಳ್ಕೊಂಡು, ಸೆಕ್ಯುರಿಟಿ ಗಾರ್ಡ್ ನ್ನು ಕಾರಿನೊಳಗೆ ತುಂಬಿಕೊಂಡು, ರೆಡ್ಡಿಗಳ ಗಣಿಪ್ರದೇಶದೊಳಗೆ ನುಗ್ಗೇ ಬಿಟ್ಟೆವು. ಹತ್ತಿಪ್ಪತ್ತು ಗಾರ್ಡ್ ಗಳು, ಅಲ್ಲಲ್ಲಿ ಬಿದ್ದಿದ್ದ ಅದಿರು ರಾಶಿಗಳ ಮೇಲೆ ನೆಡಲಾಗಿದ್ದ ಕಮ್ಯುನಿಸ್ಟರ ಧ್ವಜಗಳು ಮತ್ತು ಎಲ್ಲೆಂದರಲ್ಲಿ ನಿಲ್ಲಿಸಿದ್ದ ಗಣಿಪ್ರದೇಶದಲ್ಲಿ ಉಪಯೋಗಿಸುವ ವಾಹನಗಳು. ಹೆಚ್ಚಿನ ವಾಹನಗಳ ಕೆಲವು ಚಕ್ರಗಳು ಕಣ್ಮರೆಯಾಗಿದ್ದವು. `ಬೇಕಂತಲೇ, ಗಣಿಯವರೇ ತೆಗೆದಿದ್ದಾರಂತೆ. ಸಿಬಿಐ ನವರಾಗಲಿ, ಬೇರೆಯವರಾಗಲಿ ತೆಗೆದುಕೊಂಡು ಹೋಗಲು ಆಗಬಾರದು ಅಂತ,’ ಸತೀಶ ಹೇಳಿದ. 
ಸೆಕ್ಯುರಿಟಿ ಗಾರ್ಡ್ ನಿಂದ ಯಾವುದೇ ವಿಷಯ ತಿಳಿಯುವಂತಿರಲಿಲ್ಲ. ಕಮ್ಯುನಿಸ್ಟರ ದಾಳಿಯ ನಂತರ ಎಲ್ಲರನ್ನೂ ಬದಲಾಯಿಸಲಾಗಿತ್ತು. ಎಲ್ಲರೂ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದವರು. ಸತೀಶನಂತೂ, ಒಂದೂಕಡೆ ನಿಲ್ಲದೆ, ಫೋಟೋ ತೆಗೆಯುತ್ತಿದ್ದ. ಕಡೆಗೆ ಗುಡ್ಡದ ಮೇಲೆ ಹಳೇ ಗುಡಿಯತ್ತ ಹೋಗಲು ಹೊರಟೆವು. ಆದರೆ, ಕಾರು ಹೋಗುವ ದಾರಿಗಳೇ ಇರಲಿಲ್ಲ.
ಮೋಟಾರ್ ಸೈಕಲ್ ಇದ್ದಿದ್ದರೆ ಪ್ರಯತ್ನಿಸಬಹುದಿತ್ತು, ಅಥವಾ ನೆಡೆದೇ ಹೋಗಬೇಕಿತ್ತು. ಆಗಲೇ ಸೂರ್ಯ ಕೆಳಕ್ಕೆ ಇಳಿಯಲಾರಂಭಿಸಿದ್ದ. ಸತೀಶನ ಮುಖ ನೋಡಿದೆ. ನಿರಾಶೆಯಾದರೂ ಹೇಳಿದ: `ಬಿಡಣ್ಣ ಸಾಕು. ಇಷ್ಟಾದರೂ ಸಿಕ್ತಲ್ಲಾ’.
ವಾಪಾಸು ಹೊರಟಾಗ, ಎಲ್ಲಾ ಸುಂದರವಾಗಿ ಕಾಣತೊಡಗಿತು. ಹಿಂದಿನ ಎರಡು ದಿನಗಳಂತೆ. ಇಷ್ಟರ ಮಧ್ಯ ನಾನು ಮರೆತದ್ದು ಒಂದೇ. ಸುಗ್ಗಲಮ್ಮ ಹೇಗಿರುತ್ತಾಳೆ ಅಂತ ನೋಡುವುದು….

ಮಾಕೋನಹಳ್ಳಿ ವಿನಯ್ ಮಾಧವ 




4 ಕಾಮೆಂಟ್‌ಗಳು: