ಶುಕ್ರವಾರ, ಏಪ್ರಿಲ್ 6, 2012

ತಾಯಿ


ಈ ತಾಯಿಗಿರೋ ಹೃದಯ ಆ ದೇವರಿಗೇಕಿಲ್ಲ?

ಸಾಯಂಕಾಲ ಕೋರ್ಟ್ ನಿಂದ ವಾಪಾಸ್ ಬರುವಾಗ ಬೈಕ್ ಕಮೀಷನರ್ ಆಫೀಸಿಗೆ ತಿರುಗಿಸಿದೆ. ಫೋಟೋಗ್ರಫಿ ವಿಭಾಗದಲ್ಲಿ ಯಾವುದೋ ಹಳೇ ಫೋಟೋ ಕೇಳಿದ್ದೆ. ತಿರುಗಿ ನೋಡಿದಾಗ, ಜಂಟಿ ಪೋಲಿಸ್ ಕಮೀಷನರ್ ಸುರೇಶ್ ಬಾಬುರವರ ಆಫೀಸ್ ಮುಂದೆ ಅವರ ಕಾರು ನಿಂತಿತ್ತು.
ಸಾಧಾರಣವಾಗಿ ಸಾಯಂಕಾಲ ಅವರು ಟೆನಿಸ್ ಆಡಲು ಹೋಗ್ತಿದ್ರು. ಆದರೆ, ಅವರ ಆಫೀಸ್ ನಿಂದ ಒಂದು ಹೆಂಗಸು ಮತ್ತು ಲಾಯರ್ ಥರ ಕಾಣುವ ಒಬ್ಬ ಗಂಡಸು ಹೊರಗೆ ಬಂದಿದ್ದನ್ನು ದೂರದಿಂದಲೇ ನೋಡಿ, ಆಫೀಸ್ ಮುಂದೆ ನಿಂತಿದ್ದ ಅವರ ಡ್ರೈವರ್ ಗಂಗರಾಜುವಿಗೆ ಸನ್ನೆಯಲ್ಲೇ `ಸಾಹೇಬರು ಒಳಗಿದ್ದಾರಾ?’ ಅಂತ ಕೇಳಿದೆ.
ಹೌದು ಅಂತ ಸನ್ನೆ ಮಾಡಿದ ತಕ್ಷಣ ಫೋಟೋಗ್ರಫಿ ವಿಭಾಗ ಬಿಟ್ಟು, ಅವರ ಆಫೀಸ್ ಕಡೆಗೆ ಕಾಲು ಹಾಕಿದೆ. ಒಳಗೆ ಹೋದ್ರೆ ಒಂದು ಒಳ್ಳೆ ಟೀ ಕುಡೀಬಹುದು. ಮತ್ತೆ ಸಿಗರೇಟ್ ಸೇದುತ್ತಾ, ಏನಾದರೊಂದು ವಿಷಯ ಹರಟೆ ಹೊಡೆಯಬಹುದು ಅಂತ.
`ಬಾರಯ್ಯ… ಐದು ನಿಮಿಷ ಆಗಿದ್ರೆ ಹೋಗಿಬಿಡ್ತಿದ್ದೆ,’ ಅಂತ ಹೇಳಿ ಟೀ ತರಲು ಹೇಳಿದರು. `ನೋಡಪ್ಪ, ಮರೆಯೋಕೆ ಮುಂಚೆ ಹೇಳಿಬಿಡ್ತೀನಿ. ಈಗ ಒಂದು ಹೆಂಗಸು ಹೊರಗೆ ಹೋದ್ಲಲ್ಲಾ, ಅವಳ ಕಥೆ ಚೆನ್ನಾಗಿದೆ. ಕೆನಡಾದವಳು. ಮಗ ಕುಲು-ಮನಾಲಿಯಿಂದ ಕಳೆದು ಹೋಗಿದ್ದಾನೆ. ಅಮ್ಮ, ದೇಶ ಪೂರ್ತಿ ಅವನ್ನ ಹುಡ್ಕೊಂಡು ಸುತ್ತುತ್ತಿದ್ದಾಳೆ. ಚರ್ಚ್ ಸ್ಟ್ರೀಟ್ ನಲ್ಲಿ ಹೋಟೆಲ್ ನಲ್ಲಿ ಉಳ್ಕೊಂಡಿದ್ದಾಳೆ. ಇವತ್ತು ರಾತ್ರಿನೇ ಬೆಂಗಳೂರು ಬಿಟ್ಟು ಹೊರಡ್ತಿದ್ದಾಳೆ. ಯಾವ ರಿಪೋರ್ಟರ್ ಮೊದಲು ಸಿಕ್ತಾರೋ, ಅವರಿಗೆ ಹೇಳ್ಬೇಕು ಅಂತ ಇದ್ದೆ. ಅಷ್ಟರಲ್ಲಿ ನೀನೇ ಬಂದೆ,’ ಅಂದರು.
ಕೆನಡಾದ ಹುಡುಗ ಕುಲು-ಮನಾಲಿಯಲ್ಲಿ ಕಳೆದು ಹೋಗಿದ್ದು ಬೆಂಗಳೂರಲ್ಲಿ ಸ್ಟೋರಿ ಆಗುತ್ತಾ? ಅಂತ ಯೋಚನೆ ಮಾಡ್ತಾ. ಹ್ಯಾಗಾದರಾಗ್ಲಿ ಅಂತ ಫೋಟೋಗ್ರಾಫರ್ ಕರ್ಕೊಂಡು ಚರ್ಚ್ ಸ್ಟ್ರೀಟ್ ನಲ್ಲಿದ್ದ ಹೈಗೇಟ್ ಹೋಟೆಲ್ ಗೆ ನುಗ್ಗಿದೆ. ಕೆನಡಾದ ಹೆಂಗಸು ಅಂದರೆ ಧೃಡಕಾಯದ, ಕೆಂಚುಕೂದಲಿನ, ಬೆಳ್ಳನೆಯ ಹೆಂಗಸು ಅನ್ಕೊಂಡಿದ್ದೆ. ತೆಳ್ಳಗೆ, ಕುಳ್ಳಗೆ, ಸಾಯಿಬಾಬಾನಂಥ ಕಪ್ಪು ಕೂದಲಿನ ಹೆಂಗಸನ್ನು ನೋಡಿ ಆಶ್ಚರ್ಯವಾಯ್ತು. ಪರಿಚಯ ಮಾಡ್ಕೊಂಡು ಮಾತಾಡೋಕೆ ಕೂತೆ.
ಹೋಮಾ ಬೌಸ್ಟನಿ ಅಂತ ಆ ಹೆಂಗಸಿನ ಹೆಸರು. ಒಂದು ಬಿಳೀ ಟೀ ಶರ್ಟ್ ಮೇಲೆ, `ಮಿಸ್ಸಿಂಗ್ ಇನ್ ಇಂಡಿಯಾ’ ಅಂತ ಎರಡು ಫೋಟೋಗಳನ್ನು ಮುದ್ರಿಸಿ ಹಾಕಿಕೊಂಡಿದ್ದಳು. ಸುಮಾರು ಐವತ್ತರಿಂದ, ಐವತೈದು ವರ್ಷವಿರಬಹುದು. ಪಾಪ, ಎರಡು ಮಕ್ಕಳನ್ನ ಕಳ್ಕೊಂಡಿದ್ದಾಳೆ, ಅನ್ಕೊಂಡೆ.
ಹೋಮಾ ಒಂಟಿ ತಾಯಿಯಂತೆ. ಅವಳ ಗಂಡ ತೀರಿ ಹೋಗಿದ್ದನೋ ಅಥವಾ ಡೈವೋರ್ಸ್ ಆಗಿತ್ತೋ ಅಂತ ಕೇಳೋಕ್ಕೆ ಹೋಗ್ಲಿಲ್ಲ. ಅವಳ 26-ವರ್ಷದ ಮಗ ಆರ್ಡವನ್ ತಹರ್ ಜಡೇ (ಆರ್ಡ್ ಅಂತ ಆಕೆ ಕರೆಯುತ್ತಿದ್ದದ್ದು) ಕೊರಿಯಾದಲ್ಲಿ ಇಂಗ್ಲಿಶ್ ಕಲಿಸುತ್ತಿದ್ದನಂತೆ. 1996 ಮಧ್ಯದಲ್ಲಿ, ಆ ಕೆಲಸ ಬೇಸರ ಅಂತ ಆರ್ಡ್ ಏಷ್ಯಾದ ದೇಶಗಳನ್ನು ಪ್ರವಾಸ ಮಾಡಲು ಆರಂಭಿಸಿದನಂತೆ. 1997 ಏಪ್ರಿಲ್ ನಲ್ಲಿ ಭಾರತಕ್ಕೆ ಬಂದಿದ್ದಾನೆ.
ಆರ್ಡ್ ತನ್ನ ತಾಯಿಗೆ ಹೇಳಿದಂತೆ, ಭಾರತದಂತ ದೇಶವನ್ನೇ ಅವನು ಊಹಿಸಿರಲಿಲ್ಲವಂತೆ. `ಇಲ್ಲಿ ನೋಡೋಕೆ ಎಷ್ಟೊಂದು ಇದೆ. ನಾನು ಇಲ್ಲಿ ತುಂಬಾ ಸಮಯ ಕಳೆದು, ಆಮೇಲೆ ವಾಪಾಸ್ ಬರ್ತೀನಿ,’ ಅಂದಿದ್ದನಂತೆ. ಆತ ಕೊನೆಯಬಾರಿ ತನ್ನ ತಾಯಿಗೆ ಫೋನ್ ಮಾಡಿದ್ದು, ಮೇ 21, 1997. ಕುಲು ಹತ್ತಿರದ ಕಸೋಲ್ ಎಂಬ ಹಳ್ಳಿಯಿಂದ. ಆಗ, ತಾನು ಕೆನಡಾಕ್ಕೆ ಜೂನ್ ನಲ್ಲಿ ಬರುವುದಾಗಿ ಹೇಳಿದ್ದಾನೆ.
ಯಾವಾಗ ಮಗ ವಾಪಾಸ್ ಬರಲಿಲ್ಲ, ಹೋಮಾಗೆ ಕಳವಳವಾಗಿ, ಆಗಸ್ಟ್ ನಲ್ಲಿ ಭಾರತಕ್ಕೆ ಬಂದಿದ್ದಾಳೆ. ಏಳು ವಾರಗಳ ಕಾಲ ಉತ್ತರ ಭಾರತದ ಎಲ್ಲಾ ಪ್ರದೇಶಗಳಲ್ಲಿ ಹುಡುಕಿದ್ದಾಳೆ. ಕುಲು-ಮನಾಲಿಯಿಂದ ಹಿಡಿದು, ಅಂಬಾಲಾ, ವಾರಣಾಸಿ, ಹರಿದ್ವಾರ – ದಾರಿಯಲ್ಲಿ ಸಿಕ್ಕಿದ ಆಸ್ಪತ್ರೆ, ದೇವಸ್ಥಾನಗಳು, ಆಶ್ರಮಗಳು, ಧರ್ಮಶಾಲೆಗಳು ಎಲ್ಲವನ್ನೂ ಹುಡುಕಿದ್ದಾಳೆ.
`ಕಸೋಲ್ ನಲ್ಲಿ ಆರ್ಡ್ ನನ್ನು ತುಂಬಾ ಜನ ನೋಡಿದ್ದಾರಂತೆ. ಅವನು ಒಂದು ಟೀ ಅಂಗಡಿಯ ಹತ್ತಿರ ಇರುತ್ತಿದ್ದನಂತೆ. ಅವನ ವಿಷಯ ಹೇಳ್ತಾರೆ ಹೊರತು, ಏನಾಯ್ತು ಅಂತ ಹೇಳೊದಿಲ್ಲ. ಏನೋ ಮುಚ್ಚಿಡ್ತಿದ್ದಾರೆ ಅಂತ ಅನ್ನಿಸ್ತಿತ್ತು,’ ಅಂದಳು.
ಏಳು ವಾರಗಳ ಬಳಿಕ ಹೋಮಾ ಕೆನಡಾಕ್ಕೆ ವಾಪಾಸ್ ಹೋಗಿದ್ದಾಳೆ. ಆದರೂ ತನ್ನ ಮಗ ಎಲ್ಲೋ ಇದ್ದಾನೆ ಅಂತ ಅನ್ನಿಸೋಕ್ಕೆ ಶುರುವಾಗಿದೆ. ಹಾಗೆಯೇ, 1996 ಮಾರ್ಚ್ ನಲ್ಲಿ, ತನ್ನ ಮಗನಂತೆಯೇ, ಇಂಗ್ಲೆಂಡ್ ನ ಇಯಾನ್ ಮೊಗ್ ಫೋರ್ಡ್ ಎಂಬ ಹುಡುಗನೂ ಕಸೋಲಿಯಲ್ಲಿ ಕಣ್ಮರೆಯಾದ ವಿಷಯ ತಿಳಿದಿದೆ. ಆ ಹುಡುಗನ ತಂದೆ-ತಾಯಿಯರು ಮೂರು ಸಲ ಭಾರತಕ್ಕೆ ಬಂದು, ಹುಡುಕಿ, ಕೈಚೆಲ್ಲಿ ವಾಪಾಸ್ ಹೋಗಿದ್ದಾರೆ. ಹೋಮಾ, ಆ ಕುಟುಂಬದವರನ್ನು ಸಂಪರ್ಕಿಸಿ, ಆ ಹುಡುಗನ ಹೆಚ್ಚಿನ ವಿವರ ಮತ್ತು ಫೋಟೋ ಸಂಪಾದಿಸಿದ್ದಾಳೆ. 1998 ರಲ್ಲಿ, ಕುಂಭ ಮೇಳದ ಸಮಯದಲ್ಲಿ ಭಾರತಕ್ಕೆ ಮತ್ತೆ ಬಂದು, ಒಂದು ದೊಡ್ಡ ಬೋರ್ಡ್ ಮೇಲೆ ಆರ್ಡ್ ಮತ್ತು ಇಯಾನ್ ರ ಫೋಟೋಗಳನ್ನು ದೊಡ್ಡದಾಗಿ ಅಂಟಿಸಿ, `ಇವರನ್ನು ನೋಡಿದ್ದೀರಾ’ ಅಂತ. `ತುಂಬಾ ಜನ ಬಂದು ಏನಾಯ್ತು ಅಂತ ಮಾತಾಡಿಸಿದ್ರು. ಯಾರಿಗೂ ಗೊತ್ತಿದ್ದಂತೆ ಕಾಣಲಿಲ್ಲ. ಪ್ರತೀ ರಾಜ್ಯಗಳ ರಾಜಧಾನಿಗೆ ಹೋಗಿ, ಅಲ್ಲಿನ ಪೋಲಿಸರ ಹತ್ತಿರ ಏನಾದ್ರು ಸಹಾಯ ಆಗುತ್ತಾ ಅಂತ ನೋಡ್ತಿದ್ದೀನಿ, ಇನ್ನರ್ಧ ಘಂಟೆಯಲ್ಲಿ ಗೋವಾಕ್ಕೆ ಹೊರಡುತ್ತಿದ್ದೇನೆ’ ಅಂದಳು.
`ಈ ಇಯಾನ್ ಕುಟುಂಬದವರು ನಿಮ್ಮ ಸಂಬಂಧಿಕರಾ?’ ಅಂತ ಕೇಳಿದೆ. `ಇಲ್ಲವಲ್ಲ, ಯಾಕೆ?’ ಅಂದಳು ಹೋಮಾ.
`ನಿಮ್ಮ ಮಗನನ್ನು ಕಳೆದುಕೊಂಡ ದುಃಖ ನಿಮಗಿದ್ದಾಗ, ಯಾರದೋ ಮಗನನ್ನೂ ಹುಡುಕ್ತಿದ್ದೀರಲ್ಲಾ, ಅದಕ್ಕೇ ಕೇಳ್ದೆ,’ ಅಂದೆ.
`ಅದು ಹಾಗಲ್ಲ. ಅದು ತಾಯಿಗೆ ಮಗನನ್ನ ಕಳ್ಕೊಂಡಾಗ ಆಗೋ ನೋವು. ನನ್ನ ನೋವು ಜಾಸ್ತಿ, ಇಯಾನ್ ತಾಯಿ ನೋವು ಕಮ್ಮಿ ಅಂತ ಇಲ್ಲ. ಈಗ ನನಗೆ ಇಬ್ಬರೂ ಸಿಗಬಹುದು. ಸಿಗದೇ ಇರಬಹುದು. ನನ್ನ ಮಗ ಮಾತ್ರ ಸಿಗಬಹುದು. ಆಗ ನನಗೆ ಸಂತೋಷವಾಗುತ್ತೆ. ಇಯಾನ್ ಮಾತ್ರ ಸಿಕ್ಕಿದರೆ ಅವನ ತಾಯಿಗೆ ಖುಶಿಯಾಗುತ್ತೆ. ಎಲ್ಲಾ ರಾಜ್ಯಗಳನ್ನು ಸುತ್ತಿದಮೇಲೆ, ನಾನು ಕುಲುಗೆ ವಾಪಾಸ್ ಹೋಗ್ತಿದ್ದೀನಿ. ಹೋದ ತಿಂಗಳು, ಅಲ್ಲಿಂದ ಒಬ್ಬ ಇಸ್ರೇಲಿ ಹುಡುಗ ಕಣ್ಮರೆಯಾಗಿದ್ದಾನಂತೆ. ಅವನ್ನ ಹುಡುಕೋಕೆ ಇಸ್ರೇಲ್ ನಿಂದ ಒಂದು ತಂಡ ಬರುತ್ತಂತೆ. ಅವರಿಗೆ ಸಹಾಯ ಮಾಡೋಣ ಅಂತ. ಆ ಮಗು ಸಿಕ್ಕಿದರೆ, ಅವನ ತಾಯಿಗೆ ಖುಶಿಯಾಗುತ್ತೆ. ಯಾವುದೋ ಒಂದು ತಾಯಿಗೆ ಸಂತೋಷ ಆದರೆ ಸಾಕು, ಅಲ್ವಾ?’ ಅಂದಳು.
ಆಕೆಯ ಮುಖವನ್ನೇ ನೋಡಿದೆ. ಮಗನನ್ನು ಕಳೆದುಕೊಂಡ ಆಕೆಯ ಮುಖದಲ್ಲಿ ಒಂದು ಹನಿ ಕಣ್ಣೀರು ಸಹ ಇರಲಿಲ್ಲ. ತುಂಬಾ ಹಿಂದೆನೆ ಬತ್ತಿ ಹೋಗಿರಬೇಕು ಅನ್ಕೊಂಡೆ. ಮುಖದಲ್ಲೋಂದು ನೋವಿನ ಮುಗುಳ್ನಗೆ. ಮನಸ್ಸಲ್ಲೇ ಅನ್ಕೊಂಡೆ: `ಈ ತಾಯಿಗಿರೋ ಹೃದಯ, ಆ ದೇವರಿಗೇಕಿಲ್ಲ?’ ಅಂತ. ಹಾಗೆಯೇ ಆವಳನ್ನು ಬೀಳ್ಕೊಂಡು ಆಫೀಸಿಗೆ ಬಂದೆ.
ಮಾರನೇ ದಿನ ಸುರೇಶ್ ಬಾಬು ಆಫೀಸಿಗೆ ಹೋದ ತಕ್ಷಣ ಹೇಳಿದ್ರು: `ನೋಡ್ದೆ ಕಣಪ್ಪಾ ನಿನ್ ಸ್ಟೋರಿ. ಚೆನ್ನಾಗಿ ಬರ್ದಿದ್ದೀಯಾ.’
`ಸರ್, ಅವಳ ಮಗಂಗೇನಾಗಿದೆ ಅಂತ ನಿಮ್ಗೇನಾದ್ರು ಐಡಿಯ ಇದ್ಯಾ?’ ಅಂತ ಕೇಳ್ದೆ.
`ನೆನ್ನೆ ರಾತ್ರಿ ಕುಲು ಎಸ್.ಪಿ.ಗೆ ಮಾತಾಡ್ದೆ. ಅಲ್ಲಿ ಕೆಲವು ಪ್ರಾಬ್ಲ್ಸಂ ಇದೆ ಅಂತ ಕಾಣುತ್ತೆ. ವರ್ಷಕ್ಕೆ ಹತ್ತರಿಂದ, ಹದಿನೈದು ಹುಡುಗ್ರು ಈ ಥರ ಕಳೆದ್ಹೋಗ್ತಾರೆ. ಎಲ್ಲಾ ಫಾರಿನರ್ಸ್ ಮತ್ತೆಯಾರ್ದೂ ಹೆಣ ಸಿಕ್ಕಿಲ್ಲ. ಅವರು ಹೇಳೋ ಪ್ರಕಾರ, ಮೊದಲನೆದು ಈ ಕಣಿವೆಗಳಲ್ಲಿ ಒಬ್ಬೊಬ್ಬರೇ ನೆಡ್ಕೊಂಡು  ಹೋದಾಗ, ಇಲ್ಲಾ ವ್ಯಾಲಿ ಒಳಗೆ ಬೀಳಬಹುದು. ಅಥವಾ ಯಾರಾದರೂ ದರೋಡೆ ಮಾಡಿ ಅವರುಗಳನ್ನು ವ್ಯಾಲಿಗೆ ಎಸೆಯುವ ಒಂದು ಗ್ಯಾಂಗ್ ಇದ್ದರೂ ಇರಬಹುದು. ಜನವೇ ಇಲ್ಲದ ಈ ಬೆಟ್ಟಗಳಲ್ಲಿ ಅದ್ನ ಯಾರೂ ನೋಡಿರಲ್ಲ. ಮತ್ತೆ ಸ್ನೋ ಬಿದ್ದಮೇಲೆ, ಆ ಹೆಣಗಳು ಸಿಗೋದೂ ಕಷ್ಟ. ಅಲ್ಲಿನ ಪೋಲಿಸ್ ಒಂದು ಸ್ಟೆಷಲ್ ಸ್ಕ್ವಾಡ್ ಮಾಡಬೇಕೂಂತ ಯೋಚಿಸಿದ್ದರಂತೆ. ಒಂದು ಬೆಟ್ಟದಿಂದ ಇನ್ನೊಂದು ಬೆಟ್ಟಕ್ಕೆ ಹೋಗೋಕೆ ಒಂದು ದಿನ ಬೇಕಂತೆ. ಹಾಗಾಗಿ, ಸ್ಕ್ವಾಡ್ ನಲ್ಲಿ ಕೆಲಸ ಮಾಡೋಕೆ ಯಾರೂ ಒಪ್ತಾ ಇಲ್ವಂತೆ. ಇದರ ಮಧ್ಯ ಸ್ವಲ್ಪ ಡ್ರಗ್ಸ್ ಪ್ರಾಬ್ಲಂ ಕೂಡ ಇದೆಯಂತೆ,’ ಅಂದ್ರು.
 `ಅಂದ್ರೆ, ಆ ಹುಡುಗಂಗೆ ಏನಾದ್ರೂ ಆಗಿದೆ ಅಂತ ಅನ್ಸುತ್ತಾ?’ ಅಂತ ಕೇಳ್ದೆ.
`ಎಸ್.ಪಿ. ಹೇಳಿದ್ದು ಕೇಳಿದ್ರೆ ಹಾಗೇ ಅನ್ಸುತ್ತೆ,’ ಅಂದರು.
`ಅದು ಆ ಹೆಂಗಸಿಗೂ ಗೊತ್ತಾ?’ ಅಂತ ಕೇಳ್ದೆ.
`ಅದು ನಂಗೊತ್ತಿಲ್ಲಪ್ಪ. ಒಂದೇನಾಗುತ್ತೆ ಅಂದ್ರೆ,  ಈ ಅಮೇರಿಕಾ, ಕೆನಡಾ ಮತ್ತೆ ಯುರೋಪ್ ದೇಶಗಳಲ್ಲಿ, ಯಾರಾದ್ರು ಈ ಥರ ಕಳೆದ್ಹೋದ್ರೆ, ಅವರ  ಬಾಡಿ ಅಥವಾ ಅವರಿಗೆ ಸಂಬಂಧಿಸಿದ ವಸ್ತು ಸಿಗೋವರ್ಗೂ ಹುಡುಕ್ತಾರೆ. ಅದಾದ ಮೇಲೆನೇ ಅವ್ರು ಸತ್ತುಹೋದ್ರು ಅಥವಾ ಕಳೆದು ಹೋದ್ರು ಅಂತ ಡಿಕ್ಲೇರ್ ಮಾಡೋದು. ಅಲ್ಲೆಲ್ಲಾ ಸರ್ಕಾರನೇ ಆ ಥರದ ಟೀಮ್ ಗಳನ್ನು ಮಾಡಿರ್ತಾರೆ. ಹಾಗಾಗಿ, ಆ ಥರದ ಯಾವುದಾದರೊಂದು ಆಧಾರ ಸಿಗೋವರೆಗೆ, ಕಳೆದುಹೋದವರು ಎಲ್ಲೋ ಬದುಕಿದ್ದಾರೆ ಅಂತಲೇ ನಂಬಿರುತ್ತಾರೆ. ಆದ್ರೆ, ನಮ್ಮಲ್ಲಿ ಆ ಥರದ ಯಾವುದೇ ಟೀಮ್ ಗಳಿಲ್ಲ. ‘
`ಎರಡನೇದಾಗಿ, ಈ ಫಾರಿನರ್ ಗಳು, ಒಂದೊಂದ್ಸಲ ಎಲ್ಲವನ್ನೂ ಬಿಟ್ಟು, ಯಾರಿಗೂ ಹೇಳ್ದೆ ಎಲ್ಲೋ ಹೋಗಿಬಿಡ್ತಾರೆ. ಯಾವುದೋ ಆಶ್ರಮ ಸೇರಿಕೊಂಡು ಬಿಟ್ಟಿರ್ತಾರೆ. ಅದೂ ಒಂದು ಕಷ್ಟ. ಮತ್ತೆ, ಇದ್ನೆಲ್ಲಾ ನಾವು ಆ ಹೆಂಗಸಿಗೆ ಹೇಳೋಕಾಗಲ್ಲ. ಯಾಕೇಂದ್ರೆ, ನನಗೆ ಅಲ್ಲಿನ ಫಸ್ಟ್ ಹ್ಯಾಂಡ್ ಇನ್ ಫರ್ ಮೇಶನ್ ಇಲ್ಲ. ಕುಲು ಎಸ್.ಪಿ. ಏನಾದ್ರು ಹೇಳ್ಬೇಕು ಅಷ್ಟೆ,’ ಅಂದ್ರು.
ಸುರೇಶ್ ಬಾಬು ಆಫೀಸಿನಿಂದ ಹೊರಗೆ ಬರುವಾಗ, ಆಗ ತಾನೆ ಏಷ್ಯನ್ ಏಜ್ ಗೆ ಸೇರಿದ್ದ ಜಾನ್ಸನ್ ಎದುರಿಗೆ ಬಂದ. `ನಿನ್ನ ಸ್ಟೋರಿ ಚೆನ್ನಾಗಿದೆ. ಆ ಹೆಂಗಸು ಎಲ್ಲಿ ಸಿಗಬಹುದು?’ ಅಂತ ಕೇಳ್ದ.
`ಅವ್ಳು ಗೋವಾಕ್ಕೆ ನೆನ್ನೆ ಸಾಯಂಕಾಲನೇ ಹೊರಟು ಹೋದ್ಲು. ಈ ಹ್ಯಾಂಡ್ ಬಿಲ್ ಮಾತ್ರ ಇದೆ,’ ಅಂದೆ.
`ನೆನ್ನೆ ಅವಳನ್ನ ಮಾತಾಡ್ಸಿದ ತಕ್ಷಣ ಎಲ್ಲಾ ಪೇಪರ್ ನವರಿಗೆ ಹೇಳಿದ್ದರೆ, ತುಂಬಾನೆ ಪಬ್ಲಿಸಿಟಿ ಸಿಗ್ತಿತ್ತು. ತುಂಬಾ ಜನಕ್ಕೆ ಆ ಹುಡುಗನ ಚಿತ್ರ ನೋಡಲು ಸಿಕ್ತಿತ್ತು,’ ಅನ್ನಿಸಿತು. ತಕ್ಷಣ ಸುರೇಶ್ ಬಾಬು ಹೇಳಿದ್ದು ನೆನಪಾಗಿ, `ಏನೂ ಪ್ರಯೋಜನ ಆಗ್ತಿರ್ಲಿಲ್ಲ,’ ಅನ್ಕೊಂಡು ಸುಮ್ಮನಾದೆ.

ಮಾಕೋನಹಳ್ಳಿ ವಿನಯ್ ಮಾಧವ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ