ಶನಿವಾರ, ಏಪ್ರಿಲ್ 21, 2012

ತೆಲಗಿ


ತೆಲಗಿ ಸಾಮ್ರಾಜ್ಯದಲ್ಲೋಬ್ಬ ತಿನೇಕರ್


ಈ ರಾಮು ಪಾಟೀಲ ಮಾಡಿದ ಕಿತಾಪತಿ ಒಂದೆರೆಡಲ್ಲ. ಒಂದೊಂದ್ಸಲ ನೆನಪಾದಾಗ, ಅವನೇನು ಮಾಡ್ದ ಅಂತ ಅವನಿಗೊತ್ತೋ ಇಲ್ವೋ ಅಂದ್ಕೋತ್ತೀನಿ.
ನಮ್ಮ ಹುಬ್ಬಳ್ಳಿ ಇಂಡಿಯನ್ ಎಕ್ಸ್ ಪ್ರೆಸ್ ಆಫೀಸಿನಿಂದ ಬೆಂಗಳೂರಿಗೆ ವರ್ಗವಾಗಿ ಬಂದ ತಕ್ಷಣವೇ ಗೊತ್ತಾಯ್ತು… ಇವನೊಬ್ಬ ಶುದ್ದ ಒರಟ ಅಂತ. ಗುಲ್ಬರ್ಗಾ ಮೂಲದ ಎಲ್ಲಾ ಗುಣಗಳು ಎದ್ದು ಕಾಣುತ್ತಿದ್ದವು. ಕಂಡದ್ದನ್ನು ಕಂಡ ಹಾಗೆ ಹೇಳಿಬಿಡ್ತಿದ್ದ.
ಮೊದಲು, ಅವನು ನನ್ನ ಜಾಗದಲ್ಲಿ ಕ್ರೈಂ ರಿಪೋರ್ಟರ್ ಆಗುವುದು ಮತ್ತು ನಾನು ಹೈ ಕೋರ್ಟ್ ನೋಡಿಕೊಳ್ಳುವುದು ಅಂತ ಮಾತಾಗಿತ್ತು. ಒಂದೆರೆಡು ದಿನಗಳಲ್ಲಿ ರಾಮು ಕ್ರೈಂ ರಿಪೋರ್ಟಿಂಗ್ ಗೆ ಪೂರ್ತಿ ಹೊಂದಿಕೊಂಡಾಗಿತ್ತು. ಏನಾದ್ರು ಅನುಮಾನ ಬಂದ್ರೆ ಮಾತ್ರ ಅವನಿಗೆ ನನ್ನ ಸಹಾಯ ಬೇಕಾಗುತ್ತಿತ್ತು ಅಷ್ಟೆ. ಅದು ಬಿಟ್ಟರೆ, ಅವನ ಕೆಲಸ ಅವನು ಮಾಡಿಕೊಂಡು ಹೋಗ್ತಿದ್ದ.
ಒಂದಿನ ಪೋಲಿಸ್ ಕಮೀಷನರ್ ಆಫೀಸಿನಿಂದ ಬಂದವನೇ ಹೇಳಿದ: `ಇದೇನೋ ದೊಡ್ಡದೈತ್ರಿ ಕೇಸು’
`ಯಾವುದೋ ಅದು?’ ಅಂದೆ.
`ಇದ್ಯಾವುದೋ ಗ್ಯಾಂಗ್… ಫೇಕ್ ಸ್ಟ್ಯಾಂಪ್ ಪೇಪರ್ ಮಾಡ್ತೈತಂತ್ರಿ. ಹತ್ತು ಕೋಟಿಗೂ ಮಿಕ್ಕಿ ಮಾಡೈತಂತ್ರಿ. ಬಾಳಾ ದೊಡ್ಡದೈತ್ರಿ ಗ್ಯಾಂಗ್,’ ಅಂದ.
ಹುಬ್ಬಳ್ಳಿಯಿಂದ ಈಗ ಬಂದಿದ್ದಕ್ಕೆ `ಎಕ್ಸೈಟ್’ ಆಗಿದ್ದಾನೆ ಅನ್ನಿಸ್ತು. `ಇಂಥವು ಸುಮಾರು ಗ್ಯಾಂಗುಗಳಿದ್ದಾವೆ ಕಣೋ. ಕೇರಳದ ಭಾಸ್ಕರ್ ನಾಯರ್ ಅನ್ನೋನು ತುಂಬಾ ಮಾಡಿ, ಕೊನೆಗೆ ತಪ್ಪಿಸಿಕೊಂಢು ಹೋಗಿದ್ದಾನೆ. ಅವನ ಗ್ಯಾಂಗ್ ಏನಾದ್ರೂ ಮಾಡಿದ್ಯಾ?’ ಅಂತ ಕೇಳ್ದೆ.
`ಇಲ್ರಿ… ಆ ಹೆಸರು ಹೇಳಿಲ್ರಿ. ಕಿಂಗ್ ಪಿನ್ ಯಾರು ಅಂತಾನೂ ಹೇಳಿಲ್ರಿ. ಆದ್ರೂ ಇದ್ಯಾಕೋ ದೊಡ್ಡ ಗ್ಯಾಂಗೇ ಸರ್,’ ಅಂದ. ನಾನೇನೂ ಅಷ್ಟೊಂದು ತಲೆ ಕೆಡಿಸಿಕೊಳ್ಳಲಿಲ್ಲ.
ಎರಡು ಮೂರು ದಿನಗಳಲ್ಲಿ ಯಾವುದೋ ರಜಾ ಬಂತು. ಯಾಕೋ ಪೇಪರ್ ತುಂಬುವಷ್ಟು ಸ್ಟೋರಿಗಳಿಲ್ಲ ಅಂತ ಅನ್ನಿಸಿ ನಮ್ಮ ನಮ್ಮಲ್ಲೇ ಮಾತಾಡುತ್ತಿದ್ದೆವು. ಇದ್ದಕ್ಕಿದ್ದಂತೆ ರಾಮು ಬಂದವನೇ, `ಸರ್, ಆ ಫೇಕ್ ಸ್ಟ್ಯಾಂಪ್ ಕೇಸ್ ತುಂಬಾನೇ ದೊಡ್ಡದೈತ್ರಿ. ಎರಡು ದಿನ ಆಯ್ತ್ರಿ… ಯಾರೂ ತಲಿ ಕೆಡಿಸ್ಕೊಂಡಂಗಿಲ್ಲ. ಒಟ್ಟಾ ಭಾರಿ ಕೇಸ್ರಿ ಅದು. ಸ್ವಲ್ಪ್ ಹಿಂದ ಬಿದ್ರ, ಒಳ್ಳೆ ಸ್ಟೋರಿ ಆಗ್ತದ್ರಿ,’ ಅಂದ.
ಅಷ್ಟು ದಿನ ಅದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದ ನಾನು, `ಯಾರು ಹಿಡಿದಿದ್ದು?’ ಅಂತ ಕೇಳ್ದೆ.
`ಚಿಕ್ಕಪೇಟೆ ಎ.ಸಿ.ಪಿ, ಬಾವ. ನೀವವ್ರಿಗ ಒಂದು ಫೊನ್ ಹಚ್ರೀ. ನಾ ಹೋಗಿ ಪೂರ್ತಿ ನೋಡ್ಕೊಂಡು ಬರ್ತೀನ್ರಿ,’ ಅಂದ.
ಸರಿ, ಬಾವನಿಗೆ ಫೋನ್ ಮಾಡಿ, ಆಫೀಸಿನಲ್ಲಿದ್ದೀರಾ? ಅಂತ ಕೇಳ್ದೆ. ಇದ್ದೀನಿ ಅಂತ ಅವರು ಹೇಳ್ದಾಗ, `ನಮ್ಮ ರಾಮು ಪಾಟೀಲ ಅಲ್ಲಿಗೆ ಬರ್ತಾನೆ. ಅದೇನೋ ಫೇಕ್ ಸ್ಟ್ಯಾಂಪ್ ಪೇಪರ್ ಕೇಸ್. ಸ್ವಲ್ಪ ಡೀಟೇಲ್ ಕೊಡ್ತೀರಾ?’ ಅಂತ ಕೇಳ್ದೆ.
`ನೀನೇನು ಮಾಡ್ತೀಯ ಆಫೀಸಲ್ಲಿ? ನೀನೂ ಬಾ,’ ಅಂತ ತಮಾಷೆ ಮಾಡಿದ್ರು. ನನಗೂ ಏನೂ ಕೆಲಸ ಇರಲಿಲ್ಲ. ಸರಿ ಅಂತ ರಾಮು ಜೊತೆ ಹೊರಟೆ.
ಬಾವ ತಮ್ಮ ಚೇಂಬರಿನಲ್ಲಿ ಆರಾಮವಾಗಿ ಕೂತಿದ್ದರು. ರಾಮುವನ್ನು ಪರಿಚಯ ಮಾಡಿಕೊಟ್ಟ ಒಂದೆರೆಡು ನಿಮಿಷದಲ್ಲಿ, ತಮ್ಮ ಶಿಷ್ಯ ಜಗ್ಗುವನ್ನು ಕರೆದು ವಸಂತನಗರದಲ್ಲಿ ಸೀಜ್ ಮಾಡಿದ ಒಂದು ಲೆಡ್ಜರ್ ರಾಮುವಿಗೆ ತೋರಿಸಲು ಹೇಳಿದರು. ರಾಮು ಜಗ್ಗುವಿನ ಜೊತೆ ಪಕ್ಕದ ರೂಮಿಗೆ ಹೋದ ಮೇಲೆ, ನಾನು ಮತ್ತು ಬಾವ ಮಾತಾಡ್ತಾ ಕೂತೆವು. ತುಂಬಾ ದಿನದಿಂದ ಸಿಕ್ಕಿರಲಿಲ್ಲ. ಹಾಗಾಗಿ ಸ್ವಲ್ಪ ಜಾಸ್ತಿ ಹೊತ್ತೇ ಮಾತಾಡಿದೆವು. ಯಾಕೋ ಸಮಯ ನೋಡಿದರೆ, ನಾವು ಬಂದು ಒಂದು ಘಂಟೆಗೂ ಹೆಚ್ಚು ಸಮಯ ಆಗಿತ್ತು. ರಾಮು ಪತ್ತೆ ಇರಲಿಲ್ಲ.
ಬಾವನೇ ನೆನಪು ಮಾಡಿಕೊಮಡು ಜಗ್ಗುವನ್ನು ಕರೆದರು. ಜಗ್ಗು ಬಂದವನೇ ರಾಮು ಇನ್ನೂ ಲೆಡ್ಜರ್ ಗಳನ್ನು ನೋಡ್ತಾ ಇದ್ದಾನೆ ಅಂತ ಹೇಳ್ದ. ನನ್ನ ಮುಖವನ್ನೇ ನೋಡಿದ ಬಾವ, `ಸಾಕು… ಅವರ್ನ ಕರ್ಕೊಂಡು ಬಾ,’ ಅಂದರು. ಒಂದೈದು ನಿಮಿಷದ ಬಳಿಕ, ರಾಮು ಒಳಗೆ ಬಂದವನೇ, `ತುಂಬಾ ಥ್ಯಾಂಕ್ಸ್ ರೀ,’ ಅಂದ.
`ನೀವೇನ್ಬೇಕಾದ್ರೂ ಬರ್ಕೊಳ್ಳಿ… ನನ್ನ ಹೆಸ್ರು ಮಾತ್ರ ಎಲ್ಲೂ ಬರಬಾರದು,’ ಅಂತ ರಾಮುಗೆ ಹೇಳ್ದಾಗ, ನಾನು ಸುಮ್ಮನೆ ನಕ್ಕೆ. ದಾರಿಯಲ್ಲಿ ಹೋಗುವಾಗ ರಾಮು ಹೇಳ್ದ: `ನಾ ಹೇಳಿಲ್ಲೇನ್ರಿ ಇದು ಖತರ್ನಾಕ್ ಗ್ಯಾಂಗ್ ಅಂತ. 250 ಕೋಟಿಗೂ ಹೆಚ್ಚ ಸ್ಟ್ಯಾಂಪ್ ಮಾರ್ಯಾರ… ಅದೂ ಬ್ಯಾಂಕ್ ಗಳಿಗ. ಪೂರ್ತ ಡೀಟೇಲ್ಸ್ ನನ್ನ ಕಡಿ ಇದೆ,’ ಅಂದ.
ಎದೆ ಧಸಕ್ಕಂತು. ಆಫೀಸಿಗೆ ಬಂದವನೇ ಬಾವನಿಗೆ ಫೋನ್ ಮಾಡಿ, `ಇದೇನ್ರಿ? 250 ಕೋಟಿಗೂ ಜಾಸ್ತಿ ಮಾಡಿದ್ದಾರಂತಲ್ಲ? ನಿಜಾನಾ?’ ಅಂತ ಕೇಳ್ದೆ. `ಅದರ ಕಿಂಗ್ ಪಿನ್ ಸಿಕ್ಕಿದ್ರೆ ಮಾತ್ರ ಗೊತ್ತಾಗುತ್ತೆ. ಇದು ಬರೀ ಕರ್ನಾಟಕದ ಲೆಖ್ಖ. ಇಡೀ ದೇಶದ್ದು ಜಾಸ್ತಿನೇ ಆಗುತ್ತೆ. ಅವನ್ಯಾರು ಅಂತ ಗೊತ್ತಾಗ್ತಾ ಇಲ್ಲ,’ ಅಂದರು. ಮಾರನೇ ದಿನ, ರಾಮುವಿನ ಸ್ಟೋರಿ ಮುಖಪುಟಕ್ಕೆ ಹೋಯ್ತು.
ಇದಾದ ಹದಿನೈದು ದಿನಗಳವರೆಗೆ, ಫೇಕ್ ಸ್ಟ್ಯಾಂಪ್ ಪ್ರಕರಣ ಅಲ್ಲೊಂದು, ಇಲ್ಲೊಂದು ಕಡೆ ಇಣುಕಿ ನೋಡುತ್ತಿತ್ತು. ಆಮೇಲೆ, ಅದೂ ನಿಂತು ಹೋಯ್ತು. ಅದಕ್ಕೆ ತಿರುವು ಸಿಕ್ಕಿದ್ದೇ ಸಾಂಗ್ಲಿಯಾನ ಪೋಲಿಸ್ ಕಮೀಷನರ್ ಆಗಿ ಬಂದ ಮೇಲೆ. ಹಳೇ ಕಡತಗಳನ್ನು ತಿರುವಿ ಹಾಕುತ್ತಿದ್ದ ಅವರಿಗೆ, ಈ ಫೇಕ್ ಸ್ಟ್ಯಾಂಪ್ ಪ್ರಕರಣದ ಮೇಲೆ ಕಣ್ಣು ಬಿತ್ತು. ಅದರ ಕಿಂಗ್ ಪಿನ್ ನನ್ನು ಹಿಡಿದು ತರಲೇಬೇಕು ಅಂತ ಪೋಲಿಸರ ಮೇಲೆ ಒತ್ತಡ ಹಾಕಲಾರಂಭಿಸಿದರು. ಕೊನೆಗೆ, ಅಜ್ಮೇರದಿಂದ ಅಬ್ದುಲ್ ಕರೀಂಲಾಲಾ ತೆಲಗಿಯನ್ನು ಪೋಲಿಸರು ಹಿಡಿದು ತಂದರು.
ಎಷ್ಟೇ ಸಲ ರಾಮು ಹೇಳಿದ್ರೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದ ನನಗೆ ಆಗ ಅರ್ಥವಾಯ್ತು. ಕಮೀಷನರ್ ಆಫೀಸಿನಲ್ಲಿ ಯಾರೋ ಹೇಳಿದ ಪ್ರಕಾರ, ರಾಮು ಬರೆದ 250 ಕೋಟಿ ರೂಪಾಯಿ ಕಥೆ, ಸಾಂಗ್ಲಿಯಾನನ ತಲೆಯಲ್ಲಿ ಉಳಿದಿತ್ತಂತೆ. ಮುಂದಿನ ವಿವರ ಕೇಳಿ ನಾನು ದಂಗು ಬಡಿದಿದ್ದೆ. ರಾಜಕಾರಣಿಗಳೂ ಮತ್ತು ಪೋಲಿಸರೂ ಇದರಲ್ಲಿ ಭಾಗಿಯಾಗಿದ್ದಾರೆ, ಮತ್ತೆ ಕರ್ನಾಟಕವೂ ಸೇರಿದಂತೆ, ಎಲ್ಲಾ ರಾಜ್ಯಗಳಲ್ಲಿ ಈ ಜಾಲ ಹಬ್ಬಿರುವುದರಿಂದ, ಇದರ ತೆನಿಖೆಯನ್ನು ಸಿ.ಬಿ.ಐ. ಗೆ ಒಪ್ಪಿಸಬೇಕು ಅಂತ ಸಾಂಗ್ಲಿಯಾನ ಸರ್ಕಾರಕ್ಕೆ ಪತ್ರ ಬರೆದರು. ಇದೇ ಸಮಯದಲ್ಲಿ ಇನ್ನೊಂದು ಹೆಸರು ಮೆಲ್ಲಗೆ ಹೊರಬರಲಾರಂಬಿಸಿತು. ಅದೇ ಜಯಂತ್ ತಿನೇಕರ್.
 ಜಯಂತ್ ತಿನೇಕರ್ ಸಾಂಗ್ಲಿಯಾನರಿಗೆ ತೆಲಗಿಯ ಬಗ್ಗೆ ಮಾಹಿತಿ ಕೊಡುತ್ತಿದ್ದನಂತೆ. ತೆಲಗಿಯ ಊರಾದ ಖಾನಾಪುರದವನು. ಚಿಕ್ಕಂದಿನಿಂದ ಗೊತ್ತಂತೆ. ತೆಲಗಿಯ ಚಲನ ವಲನದ ಬಗ್ಗೆ ಮತ್ತು ಫೇಕ್ ಸ್ಟ್ಯಾಂಪ್ ದಂಧೆ ಬಗ್ಗೆ ಫೋನ್ ಮಾಡಿ ಹೇಳುತ್ತಿದ್ದನಂತೆ. ಸ್ವಲ್ಪ ದಿನಗಳಲ್ಲೇ ಈ ವಿಷಯ ರಾಜಕೀಯ ವಿಷಯವಾಗಿ ಮಾರ್ಪಟ್ಟು, ತಿನೇಕರ್ ಗೆ ಪೋಲಿಸ್ ಬೆಂಗಾವಲು ನೀಡಲಾಯ್ತು. ವಿರೋಧ ಪಕ್ಷದಲ್ಲಿದ್ದ ಬಿ.ಜೆ.ಪಿ. ಯಂತೂ, ತಿನೇಕರ್ ನನ್ನು ರಾಷ್ಟ್ರಮಟ್ಟದ ಹೀರೋ ಮಾಡಿತು. ಎಷ್ಟಾದರೂ ಇವನು ಇಷ್ಟು ದೊಡ್ಡದೊಂದು ಹಗರಣವನ್ನು ಬಯಲಿಗೆಳೆದವನು ತಾನೆ.
ಎಲ್ಲಾ ಪತ್ರಿಕೆಗಳು ತಿನೇಕರ್ ನನ್ನು ಸಂದರ್ಶನ ಮಾಡೋಕೆ ಅಂತ ಓಡಾಡುತ್ತಿದ್ದರು. ಒಂದಿನ ಸಾಯಂಕಾಲ ಆಫೀಸಿಗೆ ಬಂದ ರಾಮು ಹೇಳ್ದ: `ಸರ್… ತಿನೇಕರ್ ಸಿಕ್ದರಿ. ಇಂಟರ್ ವ್ಯೂ ಮಾಡ್ದೆ,’ ಅಂತ.
`ಗುಡ್ ಕಣೋ… ಹ್ಯಾಗೋ ಅವ್ನು? ಪರವಾಗಿಲ್ವಾ? ಚೆನ್ನಾಗಿ ಮಾತಾಡ್ತನಾ?’ ಅಂದೆ.
`ಮಾತೇನೋ ಚಂದ್ ಆಡ್ತಾನ್ರೀ. ಆದ್ರ, ತುಂಬಾ ಡೀಪ್ ಇದ್ದಾನ್ರಿ ಮಗ. ಕಾಮನ್ ಸೆನ್ಸ್ ಜೋರೈತ್ರಿ ಅವಂಗ. ಅರ್ಧ ಸತ್ಯ ಹೇಳ್ತಾನ್ರಿ, ಇನ್ನರ್ಧ ಕಾಮನ್ ಸೆನ್ಸ್ ಯೂಸ್ ಮಾಡಿ ಕಥೆ ಕಟ್ತಾನ್ರಿ,’ ಅಂದ.
ಅಷ್ಟರೊಳಗೆ ರಾಮು ಮನುಷ್ಯರನ್ನ ಅರ್ಥ ಮಾಡ್ಕೊಳ್ಳೋದ್ರಲ್ಲಿ ತಪ್ಪು ಮಾಡೋಲ್ಲ ಅಂತ ನನಗೆ ಅರ್ಥವಾಗಿತ್ತು. `ಹಾಗೆಂದ್ರೇನೋ? ಅವ್ನು ಹೇಳಿದ್ದು ಇಲ್ಲಿವರೆಗೆ ಎಲ್ಲಾ ಸರಿ ಇದೆಯಲ್ಲ? ಮತ್ತೆ ಚಿಕ್ಕಂದಿನಿಂದ ತೆಲಗಿ ಬೇರೆ ಗೊತ್ತು ಅವ್ನಿಗೆ?’ ಅಂದೆ.
`ಒಟ್ಟಾ ನಂಗೆ ಹೇಳಕ್ ಬರಾಂಗಿಲ್ರಿ. ಇಂವಾ ತೆಲಗಿ ಜೊತಿ ಬೆಳ್ದವ್ನೆ, ಖರೆ. ಆದ್ರ, ತೆಲಗಿ ಅರ್ಧದಷ್ಟು ಖದೀಮ ಇದ್ದಾನ್ರಿ. ಅಂವ ಮಾತಾಡ್ತಾಗ, ಇವಂಗೂ, ತೆಲಗಿಗೂ ಏನೋ ಸಂಭಂಧ ಐತೆ ಅನ್ನಿಸಿತ್ತು ಸರ್,’ ಅಂದ.
`ಸಾಯ್ಲಿ ಬಿಡು. ನಮಗೇನು? ಇಂಟರ್ ವ್ಯೂ ಸಿಕ್ತಲ್ಲ. ಸಾಕು,’ ಅಂದೆ.
ತೆಲಗಿಯ ಸಂದರ್ಶನ ಪೇಪರ್ ನಲ್ಲಿ ಅಚ್ಚಾದ ಮಾರನೇ ದಿನ, ಇಂಡಿಯನ್ ಎಕ್ಸ್ ಪ್ರೆಸ್ ಎಡಿಟೋರಿಯಲ್ ಅಡ್ವೈಸರ್ ಆಗಿದ್ದ ಟಿ.ಜೆ.ಎಸ್. ಜಾರ್ಜ್ ನನ್ನನ್ನು ಕರೆದು, ತೆಲಗಿ ಸಂದರ್ಶನ ಯಾರು ಮಾಡಿದ್ದು? ಅಂತ ಕೇಳಿದ್ರು. ಏನಾದ್ರು ಎಡವಟ್ಟಾಯ್ತಾ? ಅನ್ಕೊಂಡು, ರಾಮುವಿಗೆ ಮಾಡಲು ಆಫೀಸಿಂದನೇ ಹೇಳಿತ್ತು, ಅಂದೆ. ಅವನನ್ನೂ ಕರೆಯಲು ಹೇಳಿದ ಜಾರ್ಜ್, ಇಬ್ಬರಿಗೂ ಒಂದು ಪ್ರಶ್ನೆ ಕೇಳಿದ್ರು: `ಒಬ್ಬ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಗರಣ ನೆಡೆಯುತ್ತಿದ್ದಾಗ, ಪೋಲಿಸರಿಗಿಂತ ಜಾಸ್ತಿ, ಇವನೊಬ್ಬನಿಗೇ ಹ್ಯಾಗೆ ಗೊತ್ತಿರುತ್ತೆ? ಅಂದಾಗ, ಇವನಿಗೂ ತೆಲಗಿಗೂ ಏನೋ ಸಂಭಂಧ ಇದೆ ಅಂತ ನಿಮಗೆ ಅನ್ಸೋಲ್ವಾ?’ ಅಂದರು.
ನಾನು ನಗುತ್ತಾ ರಾಮು ಕಡೆ ಕೈ ತೋರಿಸಿ, `ಇಂಟರ್ ವ್ಯೂ ಮಾಡಿದ ಮೇಲೆ, ರಾಮುಗೂ ಹಾಗೆ ಅನ್ನಿಸ್ತಂತೆ,’ ಅಂದೆ.
`ಹಾಗಾದ್ರೆ, ಅದೂ ಕೂಡ ಸ್ಟೋರಿ ಅಲ್ವಾ? ನಂಗೆ ಸಾಯಂಕಾಲ 4 ಘಂಟೆಯೊಳಗೆ ಇವನ ಬಗ್ಗೆ ಮತ್ತು ತೆಲಗಿ ಜೊತೆ ಇವನ ಒಡನಾಟದ ಬಗ್ಗೆ ಪೂರ್ತಿ ಕಥೆ ಬೇಕು,’ ಅಂದರು.
ಗ್ರಹಚಾರಕ್ಕೆ, ಅವತ್ತು ಕೂಡ ರಜಾನೆ. ಸಮಯ ಆಗಲೇ 12 ಘಂಟೆಯಾಗಿತ್ತು. ತಿನೇಕರ್ ಸಹ ಬೆಂಗಳೂರು ಬಿಟ್ಟು ಖಾನಾಪುರಕ್ಕೆ ಹೋಗಿದ್ದ. ನಾನೂ ಮತ್ತು ರಾಮು ಮುಖ-ಮುಖ ನೋಡಿಕೊಂಡೆವು.
`ಏನಪ್ಪಾ ರಾಮು? ಎಲ್ಲಿಂದ ತರ್ತೀಯ ಈ ಸ್ಟೋರಿ?’ ಅಂತ ನಗಾಡ್ತಾ ಕೇಳ್ದೆ.
`ಎಲ್ಲಿ ಹೋಗೋಣ್ರೀ ಇವತ್ತು ಈ ಸ್ಟೋರಿ ಸಂಭಂಧ? ಅಲ್ಲಾ, ಎಂದೂ ಇಲ್ಲದ ಈ ಜಾರ್ಜ್ ಗೆ, ಇಂದ್ಯಾಕ್ರೀ ಬಂತು ಈ ಸ್ಟೋರಿ ಬರ್ಸೋ ವಿಚಾರ?’ ಅಂತ ನನ್ನನ್ನೇ ಕೇಳ್ದ.
`ಅದು ಸಾಯ್ಲಿ ಬಿಡು. ಈಗ ಈ ಸ್ಟೋರಿ ಮಾಡ್ಲೇಬೇಕು. ಯಾರ್ನ ಹಿಡಿಯೋದು ಅಂತ ಗೊತ್ತಾಗ್ತಿಲ್ಲ,’ ಅಂದೆ. ಇಬ್ರೂ ರಿಪೋರ್ಟಿಂಗ್ ಕಡೆಗೆ ಬಂದು, ಸಿಗರೇಟ್ ಹಚ್ಕೊಂಡು, ಏನ್ಮಾಡೋದು ಅಂತ ಮಾತಾಡ್ತಾ, ಮಧ್ಯ ಕೇಳ್ದೆ: `ಅಲ್ವೊ ರಾಮು, ಈ ತೆಲಗಿ ಲಾಯರ್ ಯಾರು?’ ಅಂತ.
`ಮೂರ್ನಾಲ್ಕು ಜನ ಇದ್ದಾರ್ರೀ… ಎಂ.ಟಿ.ನಾಣಯ್ಯ ಕೂಡ ಇರ್ಬೇಕ್ರಿ,’ ಅಂದ.
ಸುಮ್ಮನೆ ಹಾಗೇ ನಾಣಯ್ಯನವರ ಆಫೀಸ್ ನಂಬರ್ ತಿರುಗಿಸಿದೆ. ನಾಣಯ್ಯ ಇರ್ಲಿಲ್ಲ. `ಬಂದರೆ, ಇನ್ನು ಒಂದು ಘಂಟೆಯೊಳಗೆ ಬರ್ತಾರೆ. ಇಲ್ದೆ ಹೋದ್ರೆ, ಇಲ್ಲ,’ ಅಂತ ಆ ಕಡೆಯಿಂದ ಉತ್ತರ ಬಂತು.
ರಾಮು ಎಲ್ಲಿಗೋ ಹೊರಟ. ನನಗೂ ಬೇರೆ ಕೆಲಸ ಇರ್ಲಿಲ್ಲ. ಸರಿ ನಾಣಯ್ಯನವರ ಆಫೀಸಿಗೆ ಹೋದೆ. ಅಲ್ಲಿ, ಅವರ ಜ್ಯೂನಿಯರ್ ಒಬ್ಬನನ್ನು ಬಿಟ್ಟು ಯಾರೂ ಇರಲಿಲ್ಲ. ಪರಿಚಯ ಮಾಡಿಕೊಂಡಾಗ, ಅವನೇ ಹೇಳ್ದ: `ಇವತ್ತು ರಜಾ ಅಲ್ವ. ಯಾರೂ ಬರೋಲ್ಲ. ನಾನೂ ಊಟದ ಸಮಯಕ್ಕೆ ಹೊರಟು ಬಿಡ್ತೀನಿ.’
ನನಗೂ ಏನು ಹೇಳ್ಬೇಕು ಅಂತ ಗೊತ್ತಾಗ್ಲಿಲ್ಲ. `ತೆಲಗಿ ವಿಷ್ಯ ಮಾತಾಡೋಣ ಅಂತ ಬಂದೆ. ಆ ತಿನೇಕರ್ ಬೇರೆ ಏನೇನೋ ಮಾತಾಡ್ತಾನೆ. ಯಾಕೋ ಅವ್ನೊಂಥರಾ ಫ್ರಾಡ್ ಅನ್ನಿಸುತ್ತೆ,’ ಅಂದೆ.
`ಆ ಕೇಸ್ ನಮ್ಮ ಸೀನಿಯರೇ ಹ್ಯಾಂಡಲ್ ಮಾಡ್ತಿದ್ದಾರೆ. ತಿನೇಕರ್ ಸುಪ್ರೀಂ ಕೋರ್ಟ್ ಗೆ ಹೋಗಿದ್ದಾನೆ,’ ಅಂದ.
`ಯಾವ ಕೇಸ್?’ ಅಂದೆ.
`ಅದೇ ಸರ್, ತಿನೇಕರ್ ಮೇಲೆ ಮನೆ ಖಾಲಿ ಮಾಡ್ಸೋಕೆ ತೆಲಗಿ ಕೇಸ್ ಹಾಕಿದ್ನಲ್ಲಾ? ಅದು,’ ಅಂದ.
`ನಂಗೊತ್ತಿಲ್ಲ,’ ಅಂದೆ.
`ಅದಾ ಸರ್… ಖಾನಾಪುರದಿಂದ ದುಬೈಗೆ ಹೋಗ್ತೀನಿ ಅಂತ ತೆಲಗಿ ಬಾಂಬೆಯಲ್ಲಿ ಫೇಕ್ ಸ್ಟ್ಯಾಂಪ್ ಗ್ಯಾಂಗ್ ಗಳ ಜೊತೆ ಸೇರ್ಕೊಂಡಿದ್ದ. ವಾಪಾಸ್ ಖಾನಾಪುರಕ್ಕೆ ಬಂದಾಗ, ತಿನೇಕರ್ ಅವನ ಜೊತೆ ಓಡಾಡ್ಕೊಂಡಿದ್ದ. ಸರಿ, ಇಷ್ಟೊಂದು ದುಡ್ಡು ಎಲ್ಲಿಂದ ಬಂತು ಅಂತ ತಿನೇಕರ್ ಕೇಳ್ದಾಗ, ತೆಲಗಿ ಇದು ಮಟ್ಕಾದ ದುಡ್ಡು ಅಂತ ಹೇಳ್ದ. ಇಬ್ಬರೂ ಸೇರಿ ಮಟ್ಕಾ ಶುರು ಮಾಡಿದ್ರು. ತಿನೇಕರ್ ಗೆ ಇರೋಕೆ ತೆಲಗಿ ತನ್ನ ಮನೆನೇ ಕೊಟ್ಟ. ಆದ್ರೂ, ಮಟ್ಕಾ ದುಡ್ಡಿಗಿಂತ ಜಾಸ್ತಿ ದುಡ್ಡು ತೆಲಗಿ ಕೈಲಿ ಇದೆ ಅನ್ನಿಸಿ, ತಿನೇಕರ್ ಅವನ್ನ ಪೀಡಿಸೋಕೆ ಶುರು ಮಾಡ್ದ. ತೆಲಗಿ ಅವನ್ನ ಮನೆಯಿಂದ ಹೊರಗೆ ಹಾಕೋಕೆ ಹೋದಾಗ, ಈ ಕೇಸು ಶುರುವಾಯ್ತು. ಹೈಕೋರ್ಟಲ್ಲೂ ಕೇಸು ತೆಲಗಿ ಪರವಾಗಿ ಆಗಿದೆ. ಮೂರು ವರ್ಷದ ಹಿಂದೆ ತೆಲಗಿ ಅಣ್ಣ ಕೆ.ಆರ್.ಮಾರ್ಕೆಟ್ ನಲ್ಲಿ ಫೇಕ್ ಸ್ಟ್ಯಾಂಪ್ ಇಟ್ಕೊಂಡು ಸಿಕ್ಕಿಕೊಂಡಾಗ, ತಿನೇಕರ್ ಗೆ ತೆಲಗಿ ಇದ್ನ ಮಾಡ್ದಿದ್ದಾನೆ ಅಂತ ಗೊತ್ತಾಗಿದ್ದು,’ ಅಂತ ಹೇಳ್ದ. ನಾ ಬಾಯಿ ಬಿಟ್ಕೊಂಡು ಕೇಳ್ತಾ ಇದ್ದೆ.
ಆಮೇಲೆ, ಕೇಸ್ ನಂಬರ್ ಸಹಿತ ಕೊಟ್ಟ ಆ ಜ್ಯೂನಿಯರ್ ಲಾಯರ್, `ಸರ್, ನಮ್ಮ ಹೆಸರು ಎಲ್ಲೂ ಬರೋದು ಬೇಡ. ಇದೊಂದು ದೊಡ್ಡ ಹಗರಣ ಬೇರೆ,’ ಅಂದ. ನಾನು ನಗುತ್ತಾ ತಲೆ ಆಡಿಸಿದೆ.
ಮೂರು ಘಂಟೆಯೊಳಗೆ ಸ್ಟೋರಿ ಕೊಟ್ಟಾಗ, ಜಾರ್ಜ್ ಒಮ್ಮೆ ಹುಬ್ಬೇರಿಸಿ ನೋಡಿದರು. ರಾಮುವಂತೂ ಕುಣಿದಾಡೋದೊಂದು ಬಾಕಿ. `ನಾ ಹೇಳಿದ್ನೋ ಇಲ್ವೋ ಸರ್. ಅಂವ ಲೋಫರ್ ಇದ್ದಾನ್ರಿ. ಎಲ್ಲಿಂದ ತಂದ್ರಿ ಸರ್ ಇಷ್ಟು ಬೇಗ?’ ಅಂದ. ನಾ ಸುಮ್ಮನೆ ನಕ್ಕೆ.
ನಮ್ಮ ಖುಶಿಯೇನು ಜಾಸ್ತಿ ದಿನ ಉಳಿಯಲಿಲ್ಲ. ತಿನೇಕರ್ ಕಥೆ ಬಂದ ದಿನ ನಮ್ಮ ಬ್ಯುರೋ ಛೀಫ್ ಮಟ್ಟು ಊರಲ್ಲಿರಲಿಲ್ಲ. ಬಂದವರೇ, `ವಾಟ್ ವಾಸ್ ದ ಪ್ರೊವೋಕೇಶನ್ ಬಾಸ್?’ ಅಂತ ನನ್ನ ಕೇಳಿದ್ರು. ನಾನೇನೂ ಹೇಳೋಕ್ಕೆ ಹೋಗ್ಲಿಲ್ಲ. ಹಾಗೆನೆ, ಬಿ.ಜೆ.ಪಿ. ಯವರು ನನ್ನನ್ನು ದೇಶದ್ರೋಹಿಗಳ ಲಿಸ್ಟಿನಲ್ಲಿ ಸೇರಿಸಿದಂತೆ ಇತ್ತು. ಎರಡು ದಿನಗಳ ನಂತರದ ಪ್ರೆಸ್ ಕಾನ್ಫರೆನಸ್ಸ್ ನಲ್ಲಿ, ಡಿ.ಎಚ್. ಶಂಕರ ಮೂರ್ತಿಯವರು, `ತೆಲಗಿಯಂಥ ದೇಶದ್ರೋಹಿಯೊಡನೆ ಕಾಂಗ್ರೆಸ್ ನವರು ಕೈ ಜೋಡಿಸಿರುವುದನ್ನು, ತಿನೇಕರ್ ನಂಥ ದೇಶ ಭಕ್ತರು ಬಯಲಿಗೆಳೆದಿದ್ದಾರೆ. ಆದರೆ, ಪ್ರೆಸ್ ನವರು, ತಿನೇಕರ್ ಅಂಥವರ ತೇಜೋವಧೆ ಮಾಡಿದರೆ, ಉಳಿದರವರು ಎಲ್ಲಿ ಹೋಗಬೇಕು?’  ಅಂತ ಸೂಕ್ಷ್ಮವಾಗಿ ನನ್ನ ಕಡೆಗೆ ನೋಡಿದರು. ನಾನೇನೂ ಮಾತಾಡೋಕ್ಕೆ ಹೊಗ್ಲಿಲ್ಲ.
ಅವತ್ತು ಸಾಯಂಕಾಲ ಆಫೀಸಿನಲ್ಲಿ ಇ-ಮೇಲ್ ತೆಗೆದಾಗ ಇನ್ನೂ ಆಶ್ಚರ್ಯವಾಯಿತು. ಜಯಂತ್ ತಿನೇಕರ್ ಹೆಸರಿನ ಇ-ಮೇಲ್ ಬಂದಿತ್ತು. ತುಂಬಾ ವಿಸ್ತಾರವಾಗಿ ಬರೆದಿದ್ದ ಆ ಪತ್ರದಲ್ಲಿ ತೆಲಗಿ ಎಂಥಾ ದೇಶದ್ರೋಹಿ ಅಂತ ವಿವರವಾಗಿ ಬರೆದಿತ್ತು. ಆ ದೇಶದ್ರೋಹದ ಕೆಲಸ ತಡೆಯಲು ತಾನು ಹೇಗೆ ಜೀವನ ಮುಡುಪಾಗಿಟ್ಟಿದ್ದೇನೆ ಅಂತಾನೂ ಬರೆದಿತ್ತು. ಆದರೆ, ಒಂದೇ ಒಂದು ವಾಕ್ಯದಲ್ಲೂ, ತನಗೂ ಮತ್ತು ತೆಲಗಿಗೂ ಮುಂಚೆ ವ್ಯಾವಹಾರಿಕ ಸಂಭಂಧ ಇರಲಿಲ್ಲ ಅಂತ ಬರೆದಿರಲಿಲ್ಲ.
ಸ್ವಲ್ಪ ಹೊತ್ತಿಗೆ ರಾಮುನ ಕರ್ಕೊಂಡು ಕಾಫಿ ಕುಡಿಯಲು ಕ್ಯಾಂಟೀನ್ ಗೆ ಹೋದವನು, ಮೂರು ದಿನಗಳಿಂದ ನೆಡೆದದ್ದನ್ನೆಲ್ಲ ಹೇಳ್ದೆ. ತಿನೇಕರ್ ಗೆ ನನ್ನ ಇ-ಮೇಲ್ ಅಡ್ರೆಸ್ ಯಾರು ಕೊಟ್ಟಿರಬಹುದು? ಅಂತಾನೂ ಮಾತಾಡ್ದೆ.
ಪಟ್ಟನೆ ಬಂತು ಉತ್ತರ: `ಅದು ಇಶ್ಯೂ ಅಲ್ಲಾ ಸರ್. ತೆಲಗಿ ದೇಶದ್ರೋಹಿ ಅಲ್ಲ ಅಂತ ನಾವೇಲ್ಲೂ ಹೇಳಿಲ್ಲಲ್ಲಾ? ಅಂವ ದೇಶದ್ರೋಹಿ ಆದ ಮಾತ್ರಕ್ಕ, ಇವನ್ನ ದೇಶಪ್ರೇಮಿ ಅಂತ ಕರೀಬೇಕೂಂತ ಎಲ್ಲದ ಹೇಳ್ರಿ?’ ಅಂದ.
`ಅದೂ ಸರಿ ಅನ್ನು,’ ಅಂತ ಸಿಗರೇಟ್ ಮುಗಿಸಿ ಎದ್ದೆ…


ಮಾಕೋನಹಳ್ಳಿ ವಿನಯ್ ಮಾಧವ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ