ಐನೂರು ಡಾಲರ್ ಗೆ ಇಷ್ಟೆಲ್ಲಾ
ಮಾಡ್ಬೇಕಿತ್ತಾ?
ಇನ್ನೇನು ಪೋಲಿಸ್ ಕಮೀಶನರ್ ಆಫೀಸ್
ನಿಂದ ಹೊರಡಬೇಕು ಅಂತಿದ್ದೆ, ಸಂಜೆ ವಾಣಿ ಧನಂಜಯಪ್ಪ ಬಂದು ಹೇಳಿದರು: `ಸ್ವಲ್ಪ ತಾಳು. ಕಮೀಶನರ್
ಹತ್ತಿರ ಯಾರೋ ಫಾರಿನರ್ ಬಂದಿದ್ದಾರೆ. ಇನೈದು ನಿಮಿಷದಲ್ಲಿ ಮಾತಾಡ್ಬಹುದು,’
`ನಿಮ್ಮ ಎಡಿಶನ್ ಟೈಮ್ ಆಯ್ತಲ್ಲಾ?
ಏನಂತೆ ಇವರ್ದು? ರಾಬರಿನಾ?’ ಅಂತ ಕೇಳ್ದೆ.
`ಹೇಳಿ ಕಳ್ಸಿದ್ದೀನಿ ತಾಳು.
ಎಡಿಶನ್ ಗೆ ಇನ್ನೂ ಹತ್ತು ನಿಮಿಷ ಇದೆ. ಯಾವುದೋ ಇಂಟರೆಸ್ಟಿಂಗ್ ಸ್ಟೋರಿ,’ ಅಂದ್ರು.
ಹೊಟ್ಟೆ ಹಸಿತಿತ್ತು. ಗೊಣಗುತ್ತಾ
ನಿಂತ್ಕೊಂಡೆ. ಎರಡೇ ನಿಮಿಷದಲ್ಲಿ ರೇವಣ್ಣಸಿದ್ದಯ್ಯನವರು ನಮ್ಮನ್ನು ಒಳಗೆ ಕರೆದರು. ಧನಂಜಯಪ್ಪ
ಹೇಳಿದ ಹಾಗೆ ಫಾರಿನ್ ಹೆಂಗಸೇನೋ ಕೂತಿದ್ಲು. ಆದರೆ ಪ್ರೆಸ್ ನವರ ಜೊತೆ ಮಾತಾಡೋಕ್ಕೆ ಆಸಕ್ತಿ
ತೋರಿಸಲಿಲ್ಲ. ಅವಳ ಪಕ್ಕ ಕೂತಿದ್ದ 27-28 ವಯಸ್ಸಿನ ಭಾರತೀಯ ಯುವಕ ಮಾತ್ರ ಕಮೀಶನರ್ ಮುಖ ಮತ್ತು
ಪ್ರೆಸ್ ನವರನ್ನು ನೋಡ್ತಾ ಇದ್ದ.
`ಇದೇನೂ ಕ್ರೈಂ ಸುದ್ದಿಯಲ್ಲ.
ಅಂತೂ ಬೆಂಗಳೂರು ಪೋಲಿಸರು ಈ ಯುವಕನಿಗೆ ಅವನ ತಂದೆ ತಾಯಿಯರನ್ನು ಹುಡುಕಿಕೊಡಲು ಸಹಾಯ ಮಾಡ್ಬೇಕೂ
ಅಂತ ಇದ್ದೀವಿ,’ ಅಂತ ಶುರು ಮಾಡಿದವರೇ, ಅವನ ಕಥೆ ಹೇಳಲು ಶುರು ಮಾಡಿದರು.
ಆ ಹುಡುಗನ ಹೆಸರು ಜೊನಾಥನ್ ಅಂತ.
ಅವನು ಕರ್ನಾಟಕದವನೇ ಅಂತೆ. ಮೂರು-ನಾಲ್ಕು ವರ್ಷ ವಯಸ್ಸಿನವನಾಗಿದ್ದಾಗ ಬೆಂಗಳೂರು ರೈಲ್ವೇ
ಸ್ಟೇಷನ್ ನಲ್ಲಿ ಯಾವುದೋ ಸ್ವಯಂಸೇವಾ ಸಂಘದವರ ಕೈಗೆ ಸಿಕ್ಕಿದನಂತೆ. ಸ್ವಲ್ಪ ದಿನಗಳ ನಂತರ,
ಸ್ವೀಡನ್ ದೇಶದ ದಂಪತಿಗಳು, ಇವನನ್ನು ದತ್ತು ತೆಗೆದುಕೊಂಡರಂತೆ. ಅಲ್ಲಿಂದ ಪೂರ್ತಿ ಇವನು ಅಲ್ಲೇ
ಬೆಳೆದನಂತೆ. ಈಗ ಅವನಿಗೆ ತನ್ನ ಸ್ವಂತ ತಂದೆ ತಾಯಿಯರನ್ನು ನೋಡ್ಬೇಕು ಅಂತ ಅನ್ನಿಸಿದೆಯಂತೆ.
ಬೆಂಗಳೂರಿನಿಂದ ಅವರನ್ನು ಹುಡುಕೋಕೆ ಶುರು ಮಾಡೋದು ಅನ್ಕೊಂಡನಂತೆ. ಅವನ ಜೊತೆಯಲ್ಲಿ ಬಂದ
ಫಾರಿನರ್ ಹೆಂಗಸಿನ ಹೆಸರು ಟೋವ್ ಅಂತ. ಆಕೆ ಸಿನೆಮಾ ಮಾಡ್ತಾಳಂತೆ.
ನನಗೇನೋ ಈ ಕಥೆ ಅಲೆಕ್ಸ್ ಹೀಲಿಯ
`ರೂಟ್’ ಪುಸ್ತಕದಿಂದ ಸ್ಪೂರ್ತಿ ಪಡೆದಂತೆ ಅನ್ನಿಸ್ತು. ಒಂದೆರೆಡು ಪ್ರಶ್ನೆ ಕೇಳಿದ ತಕ್ಷಣವೇ
ಜೊನಾಥನ್ ಮಾತಾಡತೊಡಗಿದ. ಅವನಿಗೆ ತನ್ನ ಮನೆಯ ಬಗ್ಗೆ ಮತ್ತು ಬೆಂಗಳೂರಿನ ಕೆಲವು ನೆನಪುಗಳು
ಇದ್ದವು. ಅವನ ಪ್ರಕಾರ, ಅವನನ್ನು ತಂದೆ ತಾಯಿಗಳು ಇಶಾರ್ ಅಂತ ಏನೋ ಕರೀತ್ತಿದ್ರಂತೆ. ಅವನು
ಸ್ವಲ್ಪ ದೊಡ್ಡದಾದ ಊರಿನಲ್ಲಿ ಇದ್ದನಂತೆ. ಆತನ ಮನೆಯ ಪಕ್ಕದಲ್ಲಿ ತುಂಬಾ ರೈಲುಗಳು
ನಿಂತಿರುತ್ತಿದ್ದವಂತೆ ಮತ್ತು ಓಡಾಡುತ್ತಿದ್ದವಂತೆ. ಅವನ ತಂದೆ ಜೊನಾಥನ್ ನನ್ನು ಯಾವಾಗಲೂ
ರೈಲಿನೊಳಗೆ ಕರೆದುಕೊಂಡು ಹೋಗುತ್ತಿದ್ದರಂತೆ.
ಅವರ ಮನೆ ಒಂದು ಸಣ್ಣ ಓಣಿಯಲ್ಲಿ
ಇತ್ತಂತೆ. ಅವರ ತಾಯಿಯು ಯಾವುದೋ ಹಿಟ್ಟಿನಿಂದ ರೊಟ್ಟಿ ಮಾಡಿ, ಅದರೊಡನೆ ಮೆತ್ತಗಿನ ಖಾರದ
ಮುದ್ದೆಯೊಡನೆ ಕೊಡುತ್ತಿದ್ದಳಂತೆ. ಅವನಿಗೆ ಒಬ್ಬ ತಮ್ಮನೋ, ತಂಗಿಯೋ ಇದ್ದ ನೆನಪು. ಒಂದು ದಿನ
ಎಲ್ಲಿಂದಲೋ ಬಂದ ರೈಲಿನಲ್ಲಿ ಇವನು ಹತ್ತಿ ಕೂತಿದ್ದನಂತೆ. ಆಗ ರೈಲು ಮುಂದಕ್ಕೆ ಹೋಗಿದೆ. ಚಿಕ್ಕ
ಹುಡುಗನಾಗಿದ್ದ ಇವನು ನಿದ್ದೆ ಮಾಡಿದ್ದಾನೆ. ಎದ್ದು ನೋಡಿದಾಗ ಬೆಂಗಳೂರಿಗೆ ಬಂದು ತಲುಪಿದ್ದಾನೆ.
ಯಾರೋ ಕರೆದುಕೊಂಡು ಹೋಗಿ ಪೋಲಿಸರಿಗೆ ಒಪ್ಪಿಸಿದ್ದಾರೆ. ಪೋಲಿಸರು ಅವನನ್ನು ಒಂದು
ಅನಾಥಾಶ್ರಮಕ್ಕೆ ಬಿಟ್ಟಿದ್ದಾರೆ. ಸ್ವಲ್ಪ ದಿನಗಳ ಮೇಲೆ ಸ್ವೀಡನ್ ನಿಂದ ಬಂದ ಟೇಗ್ ಬ್ರಿಫ್ಟ್
ಫ್ರೋಶನ್ ಎಂಬುವವರು ಅವನನ್ನು ದತ್ತು ತೆಗೆದುಕೊಂಡಿದ್ದಾರೆ. ಇವೆಲ್ಲಾ ಆಗಿದ್ದು 1974 ರಲ್ಲಿ.
ಜೊನಾಥನ್ ಮೊದಲ ಸಲ ಇಂಡಿಯಾಗೆ ಬಂದಿದ್ದು
1990 ರಲ್ಲಿ. ಆಗಲೂ ತನ್ನ ತಂದೆ ತಾಯಿಯರನ್ನು ಹುಡುಕಲು ಪ್ರಯತ್ನಿಸಿದ್ದಾನೆ. ಅದು ಆಗದೆ ವಾಪಾಸ್
ಹೋಗಿದ್ದಾನೆ. ಈ ಸಲ, ಸಿನೆಮಾ ಮಾಡುವ ಈ ಟೋವ್ ಜೊತೆ
ಬಂದಿದ್ದಾನೆ. ಜೊತೆಗೆ, ತಾನು ನಾಲ್ಕು ವರ್ಷ ವಯಸ್ಸಿನವನಾಗಿದ್ದಾಗಿನ ಫೋಟೋ ಕೂಡ ತಂದಿದ್ದ.
ಪ್ರೆಸ್ ಕಾನ್ಫರೆನ್ಸ್ ಮುಗಿದ
ತಕ್ಷಣ ಟೋವ್ ನನ್ನು ಮಾತಾಡ್ಸೋಕೆ ಪ್ರಯತ್ನ ಮಾಡ್ದೆ. ಯಾರ ಪ್ರಶ್ನೆಗೂ ಉತ್ತರ ಕೊಡದೆ ಜೊನಾಥನ್ ನ
ಕರ್ಕೊಂಡು ಹೋದಳು. ಅವರಿಗೆ ಸಹಾಯ ಮಾಡೋಕೆ ಅಂತ ರೇವಣ್ಣಸಿದ್ದಯ್ಯನವರು ಇನ್ಸ್ ಪೆಕ್ಟರ್ ಆಗಿದ್ದ
ಲವಕುಮಾರ್ ಅವರನ್ನು ಕಳುಹಿಸುವುದಾಗಿ ಹೇಳಿದ್ದರು. ಅಲ್ಲೇ ಇದ್ದ ಲವಕುಮಾರ್ ಅವರನ್ನು
ಮಾತಾಡಿಸ್ದೆ.
`ಇವನು ಹೇಳೋದು ನೋಡಿದ್ರೆ, ಯಾರೋ
ರೈಲ್ವೆ ಡಿಪಾರ್ಟ್ ಮೆಂಟ್ ನೌಕರನ ಮಗ ಅಂತ ಕಾಣುತ್ತೆ. ಹಾಗಾಗಿ, ರೈಲ್ವೆ ಸ್ಟೇಷನ್ ಹತ್ತಿರ ಮನೆ
ಮಾಡ್ಕೊಂಡು ಇದ್ದು, ದಿನಾ ಅಪ್ಪನ ಜೊತೆ ರೈಲ್ವೆ ಸ್ಟೇಷನ್ ಗೆ ಹೋಗ್ತಿದ್ದ ಅನ್ನಿಸುತ್ತೆ. ದಿನಾ
ತುಂಬಾ ರೈಲುಗಳು ಬಂದು ಹೋಗ್ತಿದ್ವು ಮತ್ತೆ ಕೆಲವು ನಿಂತಿರುತ್ತಿದ್ವು ಅಂತಾನೆ. ಹಾಗಾದ್ರೆ, ಅದು
ಯಾವುದೋ ರೈಲ್ವೆ ಜಂಕ್ಷನ್ ಇರ್ಬೇಕು. ಹೆಸರೇನೋ ಇಶಾರ್ ಅಂತಾನೆ. ಆ ಥರ ಹೆಸರು ಇಲ್ಲಿವರೆಗೆ ನಾನು
ಕೇಳಿಲ್ಲ. ಈಶ್ವರ್ ಇರಬೇಕು ಅಂದ್ಕೊಂಡಿದ್ದೀನಿ. ಅವ್ನಿಗೆ ಜ್ನಾಪಕ ಇರೋದು ರೊಟ್ಟಿ ಮತ್ತೆ ಚಟ್ನಿ
ಮಾತ್ರ. ಅದು ರಾಗಿ ರೊಟ್ಟಿ ಅಲ್ಲ. ಜೋಳದ್ದಿರಬೇಕು ಅನ್ನಿಸ್ತದೆ. ಹಾಗಾಗಿ, ಅರಸೀಕೆರೆ ಮತ್ತೆ
ಕಡೂರು ಜಂಕ್ಷನ್ ಆಲ್ಲ ಅಂತ ಕಾಣುತ್ತೆ. ಇನ್ನು ಹುಬ್ಬಳ್ಳಿ, ಬೆಳಗಾಂ ಕಡೆಯಿಂದ ಎಲ್ಲಾ ರೈಲ್ವೇ
ಸ್ಟೇಷನ್ ಹುಡುಕಬೇಕು,’ ಅಂದ್ರು.
ವಿಷಯ ಅಷ್ಟೇನೂ ಸುಲಭ ಇಲ್ಲ ಅಂತ
ಅನ್ನಿಸ್ತು. ಎಲ್ಲಾ ಫೋಟೋಗ್ರಾಫರ್ ಗಳೂ, ಜೊನಾಥನ್ ತಾನು ಚಿಕ್ಕದಿರುವಾಗ ತೆಗೆದ ಫೋಟೋ
ಹಿಡ್ಕೊಂಡು ನಿಂತ ಪೋಟೋ ತೆಗೆದರು. ಮಾರನೇ ದಿನ, ಎಲ್ಲಾ ಪತ್ರಿಕೆಗಳಲ್ಲೂ ದೊಡ್ಡ ಸುದ್ದಿಯಾಯ್ತು.
ನಾನೇನೋ ಈ ಹುಡುಕಾಟ ತಿಂಗಳುಗಟ್ಟಲೆ
ಆಗಬಹುದು ಅನ್ಕೊಂಡಿದ್ದೆ. ಎರಡೇ ದಿನದಲ್ಲಿ ಹುಬ್ಬಳ್ಳಿಯಿಂದ ಲವಕುಮಾರ್ ಫೋನ್ ಮಾಡಿ ಹೇಳಿದ್ರು:
`ವಿನಯ್, ಆ ಹುಡುಗನ ಫ್ಯಾಮಿಲಿ ಸಿಕ್ಬಿಡ್ತು,’ ಅಂತ. ಅದ್ಹ್ಯಾಗ್ರಿ ಎರಡೇ ದಿನದಲ್ಲಿ ಪತ್ತೆ
ಹಚ್ಚಿದ್ರಿ?’ ಅಂತ ಕೇಳ್ದಾಗ, `ಗೊತ್ತಾಗುತ್ತೆ ತಾಳು. ಕಮಿಷನರ್ ಎಲ್ಲಾ ಹೇಳ್ತಾರೆ,’ ಅಂದ್ರು..
ಆಗಿದ್ದಿಷ್ಟು. ಎಲ್ಲಾ
ಪತ್ರಿಕೆಗಳಲ್ಲಿ ಇವನ ಕಥೆ ಮತ್ತು ಫೋಟೋ ಬಂದಿದ್ದನ್ನು ಹುಬ್ಬಳ್ಳಿಯ ರೈಲ್ವೇ ಸ್ಟೇಶನ್ ನಲ್ಲಿ
ಓದಿದ ರೈಲ್ವೇ ನೌಕರರೊಬ್ಬರಿಗೆ, ಇಪ್ಪತೈದು ವರ್ಷಗಳ ಹಿಂದೆ ಅಲ್ಲಿಂದ ಕಣ್ಮರೆಯಾಗಿದ್ದ ಚಿಕ್ಕ
ಹುಡುಗನ ಕಥೆ ಗೊತ್ತಿತ್ತು. ರೈಲ್ವೆ ನೌಕರನಾಗಿದ್ದ ಆ ಹುಡುಗನ ತಂದೆ ತೀರಿಹೋಗಿದ್ದರು. ತಕ್ಷಣವೇ
ಆ ಹುಡುಗನ ತಾಯಿಗೆ ಹೇಳಿ ಕಳುಹಿಸಿದರು. ಜೊನಾಥನ್ ಹಿಡಿದುಕೊಂಡಿದ್ದ ಚಿಕ್ಕ ಹುಡುಗನ ಫೋಟೋ ನೋಡಿ,
ಅವಳು ತನ್ನ ಮಗ ಅಂತ ಗುರುತು ಹಿಡಿದಿದ್ದಾಳೆ. ಸರಿ, ಅವರೆಲ್ಲಾ ಸೇರಿ ಹುಬ್ಬಳ್ಳಿ ಪೋಲಿಸ್
ಹತ್ತಿರ ಹೋಗಿದ್ದಾರೆ. ಹುಬ್ಬಳ್ಳಿ ಪೋಲಿಸರು ಬೆಂಗಳೂರು ಪೋಲಿಸರಿಗೆ ವಿಷಯ ಹೇಳಿದ್ದಾರೆ.
ಲವಕುಮಾರ್ ಊಹಿಸಿದ್ದ ಎಲ್ಲಾ
ವಿಷಯಗಳೂ ಸರಿಯಾಗಿದ್ದವು. ಹೆಸರನ್ನು ಬಿಟ್ಟು. ಜೊನಾಥನ್ ಹೆಸರು ಇಶಾರ್ ಎಂದೇ ಇತ್ತು. ಅವನ
ತಾಯಿಯ ಹೆಸರು ಮರೋನಾಬಿ ಅಂತ. ಇಶಾರ್ ಅಲ್ಲದೆ, ಆಕೆಗೆ ಇನ್ನೊಬ್ಬ ಮಗ ಮತ್ತು ಇಬ್ಬರು ಹೆಣ್ಣು
ಮಕ್ಕಳು ಇದ್ದರು. ಗಂಡ ಸತ್ತ ಮೇಲೆ, ಬಹಳ ಕಷ್ಟದಿಂದ ಮೂರು ಮಕ್ಕಳನ್ನು ಸಾಕಿದ್ದಳು. ಇದಿಷ್ಟನ್ನೂ
ರೇವಣ್ಣಸಿದ್ದಯ್ಯನವರೇ ನಮಗೆ ಹೇಳಿದರು. ಪ್ರೆಸ್ ಕಾನ್ಫರೆನ್ಸ್ ಗೆ ಜೊನಾಥನ್ ಮಾತ್ರ ಬಂದಿದ್ದ.
ಟೋವ್ ಬಂದಿರಲಿಲ್ಲ. ಈ ಸಲ, ಜೊನಾಥನ್ ಹೆಚ್ಚೇನೂ ಮಾತಾಡಲಿಲ್ಲ. ತನ್ನ ಕುಟುಂಬದವರನ್ನು ಹುಡುಕಲು
ಸಹಾಯ ಮಾಡಿದ ಎಲ್ಲರಿಗೂ ಥ್ಯಾಂಕ್ಸ್ ಹೇಳಿ, ತಾನು ಕುಟುಂಬದವರನ್ನು ನೋಡಲು ಮತ್ತೆ ಬರ್ತೀನಿ ಅಂತ
ಹೇಳಿದ.
ಎಲ್ಲರಿಗಿಂತ ಖುಶಿಯಾಗಿದ್ದಿದ್ದು
ಲವಕುಮಾರ್. `ನನ್ನ ಜೀವನದಲ್ಲಿ ಒಂದು ತುಂಬಾ ಒಳ್ಳೆ ಕೆಲಸ ಮಾಡಿದ್ದೀನಿ. ಮಗ ಸಿಕ್ಕಿದಾಗ ಆ
ತಾಯಿಯ ಮುಖ ನೋಡ್ಬೇಕಿತ್ತು. ಪಾಪ, ಹೆಣ್ಣುಮಕ್ಕಳ ಮದುವೆ ಮಾಡೋಕಾಗ್ದೆ ಒದ್ದಾಡ್ತಾ ಇದ್ದಳು.
ಇವನೇ ಮದುವೆಗೆ ದುಡ್ಡು ಕಳುಹಿಸ್ತೀನಿ ಅಂತ ಹೇಳ್ದ. ಮುಸ್ಲಿಂ ಸಮುದಾಯದಲ್ಲಿ ಇಪ್ಪತ್ತು ದಾಟಿದ
ಹೆಣ್ಣುಮಕ್ಕಳು ಮದುವೆ ಆಗ್ದೆ ಹೋದ್ರೆ ಕಷ್ಟ. ನಾವು ವಾಪಾಸ್ ಬರುವಾಗ ನನ್ನ ಕೈ ಹಿಡ್ಕೊಂಡು,
ನೀವು ನಮ್ಮ ಪಾಲಿನ ದೇವರು ಅಂದುಬಿಟ್ಟಳು,’ ಅಂದ್ರು.
ಇನ್ನೊಂದು ವರದಿ ಬರೆದು, ನಾಲ್ಕು
ದಿನ ಮಾತಾಡಿ, ನಾವೆಲ್ಲ ಜೊನಾಥನ್ ನನ್ನು ಮರೆತೇ ಬಿಟ್ಟೆವು. ಮತ್ತೆ ಜೊನಾಥನ್ ಎದುರಿಗೆ
ಬಂದಿದ್ದು ಒಂದು ವರ್ಷದ ನಂತರ. ನಮ್ಮ ಬ್ಯುರೋ ಛೀಫ್ ಮಟ್ಟು ಜಿಲ್ಲೆಗಳ ದಿನದ ವರದಿಗಳನ್ನು ಪಟ್ಟಿ
ಮಾಡೋಕೆ ಹೇಳಿದ್ರು. ಒಂದೊಂದೇ ಪಟ್ಟಿ ಮಾಡ್ತಾ ಇದ್ದಾಗ, ಜೊನಾಥನ್ ಬಗ್ಗೆ ವರದಿ ಕಣ್ಣಿಗೆ
ಬಿತ್ತು. ನಮ್ಮ ಹುಬ್ಬಳ್ಳಿ ವರದಿಗಾರ, ಮರೋನಾಬಿಯನ್ನು ಮಾತಾಡಿಸಿ ಒಂದು ವರದಿ ಬರೆದಿದ್ದ. ಆಗಲೇ
ನನಗೆ ನೆನಪಾಗಿದ್ದು: ಜೊನಾಥನ್ ಬಂದು ಹೋಗಿ ಒಂದು ವರ್ಷವಾಯ್ತು, ಅಂತ.
ಸ್ವೀಡನ್ ಗೆ ವಾಪಾಸ್ ಹೋದ ಮೇಲೆ,
ಜೊನಾಥನ್ ದುಡ್ಡು ಕಳುಹಿಸುವುದಿರಲಿ, ಒಂದು ಪತ್ರ ಕೂಡ ಬರೆದಿರಲಿಲ್ಲವಂತೆ, ಮರೋನಾಬಿ ಅಂತೂ,
`ಅವನು ನನ್ನ ಮಗನೇ ಅಲ್ಲ. ಅವನು ಬರದೇ ಹೋಗಿದ್ದರೆ ಚೆನ್ನಾಗಿತ್ತು. ಸತ್ತು ಅಂತ
ನೆಮ್ಮದಿಯಲ್ಲಿರುತ್ತಿದ್ದೆ,’ ಅಂದಿದ್ದಳು.
ಬೇಗನೆ ಪಟ್ಟಿಮಾಡಿ ಮುಗಿಸಿ
ಲವಕುಮಾರ್ ಗೆ ಫೋನ್ ಮಾಡ್ದೆ. ವಿಷಯ ಹೇಳಿ, `ಏನ್ರಿ? ಹೀಗ್ಮಾಡಿದ್ದಾನಲ್ಲ ಅವನು?’ ಅಂತ ಕೇಳ್ದೆ.
`ಅವನು ಬಂದು ಹೋದ ಮೂರು
ತಿಂಗಳಲ್ಲೇ ಗೊತ್ತಾಯ್ತು. ತುಂಬಾನೇ ಬೇಜಾರಾಯ್ತು. ಅದಕ್ಕೆ ಯಾರಿಗೂ ಹೇಳದೆ ಸುಮ್ಮನಾದೆ,’
ಅಂದ್ರು.
`ಮತ್ತೇನಕ್ಕೆ ಬಂದಿದ್ದ ಅವನು?
ಸುಮ್ಮನೆ ಸ್ವೀಡನ್ ನಲ್ಲೇ ಇರ್ಬಹುದಿತ್ತಲ್ಲಾ?’ ಅಂತ ಕೇಳ್ದೆ.
`ಅದನ್ನ ಹ್ಯಾಗೆ ಹೇಳ್ಬೇಕು ಅಂತ
ಅರ್ಥ ಆಗೋಲ್ಲ. ಅವನ ಜೊತೆ ಬಂದಿದ್ಲಲ್ಲಾ, ಅವಳು ಇವನ ಬಗ್ಗೆ ಡಾಕ್ಯುಮೆಂಟರಿ ಮಾಡ್ತಾ ಇದ್ದಳು.
ಅವಳೇ ಇದೆಲ್ಲದರ ರೂವಾರಿ. ಹುಬ್ಬಳ್ಳಿಯಲ್ಲಿ ನಾವು ಇವನ ತಾಯಿಯನ್ನ ಭೇಟಿಯಾದಾಗ, ಅವಳು ಯಾರಿಗೂ
ಇವರಿಬ್ಬರ ಜೊತೆ ಮಾತಾಡೋಕೆ ಬಿಡಲಿಲ್ಲ. ನಾನು ಟ್ರಾನ್ಸ್ ಲೇಟ್ ಮಾಡ್ತಿದ್ದೆ, ಅಷ್ಟೆ. ಅವಳು
ಎಲ್ಲವನ್ನೂ ವೀಡಿಯೋ ರೆಕಾರ್ಡ್ ಮಾಡ್ತಿದ್ಲು. ಇವನು ಅವಳು ಹೇಳಿದ ಹಾಗೆ ಕೇಳ್ತಿದ್ದ. ಆಗ ನಾನು ಅಷ್ಟಾಗಿ
ಗಮನಿಸಿರಲಿಲ್ಲ,’ ಅಂದ್ರು.
ವಾಪಾಸ್ ಹೋಗಿ ಮೂರು ತಿಂಗಳಾದ್ರೂ
ಮಗನಿಂದ ಯಾವುದೇ ಸುದ್ದಿ ಬರದಿದ್ದಾಗ, ಮರೋನಬಿ ಲವಕುಮಾರ್ ಗೆ ಫೋನ್ ಮಾಡಿದ್ದಾಳೆ. ಲವಕುಮಾರ್
ಜೊನಾಥನ್ ನ ಸ್ವೀಡನ್ ನಂಬರ್ ಗೆ ಫೋನ್ ಮಾಡಿ
ವಿಚಾರಿಸಿದ್ದಾರೆ. ಒಂದೆರೆಡು ಸಲ, ತುಂಬಾ ಬ್ಯುಸಿಯಾಗಿದ್ದೆನೆಂದೂ, ಮುಂದಿನ ವಾರದಲ್ಲಿ ಫೋನ್
ಮಾಡ್ತೀನಿ ಅಂತ ಹೇಳಿದ್ದಾನೆ. ಆಮೇಲೆ ಒಂದ್ಸಲ, ತಾನು ತುಂಬಾ ಕಷ್ಟದಲ್ಲಿರುವುದಾಗಿಯೂ,
ಡಾಕ್ಯುಮೆಂಟರಿ ಮಾಡಿದ ಟೋವ್ ಕೂಡ ತನಗೆ ಬರೀ 500 ಡಾಲರ್ ಕೊಟ್ಟಳೆಂದೂ ಹೇಳಿದ್ದಾನೆ. ತಾನು
ಸ್ವಲ್ಪದಿನಗಳಲ್ಲಿ ತಾಯಿಗೆ ಫೋನ್ ಮಾಡಿ, ದುಡ್ಡು ಕಳುಹಿಸುತ್ತೇನೆ ಅಂತಾನೂ ಹೇಳಿದ್ದಾನೆ.
ಆನಂತರ, ಲವಕುಮಾರ್ ಫೋನ್ ಮಾಡಿದರೆ, ಜೊನಾಥನ್ ಮಾತಾಡಲು ನಿರಾಕರಿಸಿದ್ದಾನೆ.
`ಅಲ್ರೀ, ಬರೀ ಐನೂರು ಡಾಲರ್ ಗೆ
ಅವನು ಇಷ್ಟೆಲ್ಲ ಮಾಡ್ಬೇಕಿತ್ತಾ?’ ಅಂತ ಕೇಳ್ದೆ.
`ಅವನು ಅಷ್ಟೊಂದು ದಡ್ಡ ಅಂತ
ನನಗೇನೂ ಅನ್ಸೋಲ್ಲ ವಿನಯ್. ಮತ್ತೆ, ಈ ಥರ ಮೋಸ ಮಾಡೋಕೆ ಆ ದೇಶಗಳಲ್ಲಿ ಕಷ್ಟ. ಕೋರ್ಟ್ ಗಳು
ಸುಮ್ಮನೆ ಬಿಡೋಲ್ಲ. ಎಲ್ಲಾದಕ್ಕೂ ಅಗ್ರೀಮೆಂಟ್ ಇರುತ್ತೆ. ಸರಿ, ಆ 500 ಡಾಲರ್ ನಾದ್ರೂ ಅವ್ನು
ಕಳುಹಿಸಬಹುದಿತ್ತಲ್ಲಾ? 10-15 ಸಾವಿರ, ಆ ಅಮ್ಮನಿಗೆ ದೊಡ್ಡ ದುಡ್ಡೇ. ಒಟ್ನಲ್ಲಿ, ನಾವು
ದಡ್ಡರಾದ್ವಿ ಅಷ್ಟೆ,’ ಅಂದ್ರು.
ನಂಗೂ ಅದು ಸರಿ ಅನ್ನಿಸ್ತು…
ಮಾಕೋನಹಳ್ಳಿ ವಿನಯ್ ಮಾಧವ
heegu unta MAGAA,,,
ಪ್ರತ್ಯುತ್ತರಅಳಿಸಿ