ಶನಿವಾರ, ಮಾರ್ಚ್ 31, 2012

ಸ್ಯಾಂಡಲ್ ಫಾಕ್ಸ್


ಯುವರಾಜರೂ ಮತ್ತು ವೀರಪ್ಪನ್

ಇಂಡಿಯನ್ ಎಕ್ಸ್ ಪ್ರೆಸ್ ಸೇರಿ ಕೆಲವು ತಿಂಗಳುಗಳಾದ ಮೇಲೆ, ನಿಧಾನವಾಗಿ ಪ್ರೆಸ್ ಕ್ಲಬ್ ಗೆ ಕಾಲಿಡಲಾರಂಭಿಸಿದೆ. ಯಾವಾಗಲೂ ಅದರ ಬದಿಯಲ್ಲಿರುವ ಗೇಟಿನಿಂದಲೇ ಒಳಗೆ ಹೋಗುತ್ತಿದ್ದೆ. ಆಗ ಹಾದು ಹೋಗುತ್ತಿದ್ದದ್ದೇ ಬೆಂಗಳೂರು ವರದಿಗಾರರ ಕೂಟದ ಎದುರಿನಿಂದ.
ಯಾಕೋ ಇಷ್ಟವಾಗುತ್ತಿರಲಿಲ್ಲ. ಶೀಟಿನ ಒಂದು ಕೊಠಡಿಯ ಆ ಕಟ್ಟಡದ ಒಳಗೆ ಯಾವಾಗಲೂ ಸ್ವಲ್ಪ ಕತ್ತಲು. ಒಳಗಡೆ ಒಂದು ಮೇಜು, ಅದರ ಮೇಲೊಂದು ಟೈಪ್ ರೈಟರ್, ಸುತ್ತಲೂ ಕುರ್ಚಿಗಳು. ಇನ್ನೊಂದು ಕಬ್ಬಿಣದ ಅಲ್ಮೇರಾ. ಮೊದಲನೇ ಸಲ ನೋಡಿದಾಗ, ಯಾವುದೋ ರಹಸ್ಯ ಕಾರ್ಯಾಚರಣೆಯ ಕಾರಾಸ್ಥಾನದಂತೆ ಕಾಣುತ್ತಿತ್ತು.
ಒಂದೊದ್ಸಲ, ಸಮೀಉಲ್ಲಾ ಅದರ ಮುಂದೆ ನಿಂತಿದ್ದಾಗ ಅಲ್ಲೇ ನಿಂತು ಅವರನ್ನು ಮಾತಾಡಿಸ್ತಿದ್ದೆ. ಸಮೀಉಲ್ಲಾ ದಿನಾ ಸಾಯಂಕಾಲ ಎಕ್ಸ್ ಪ್ರೆಸ್ ಗೆ ಬರುತ್ತಿದ್ದರು. ಅವರ ಪತ್ನಿ ಅಫ್ ಶಾನ್ ಳನ್ನು ಕರೆದುಕೊಂಡು ಹೋಗಲು. ಹಾಗಾಗಿ ನನಗೆ ಪರಿಚಯವಾಗಿತ್ತು.
ಸ್ವಲ್ಪ ದಿನಗಳ ನಂತರ, ನನ್ನ ಜೊತೆ ಇರುತ್ತಿದ್ದ ಪ್ರಕಾಶ್ ಕೂಡ ಕೂಟದ ಒಳಗೆ ಹೋಗಿ ಬರಲು ಆರಂಭಿಸಿದ. ಒಂದಿನ ಪ್ರಕಾಶ್ನು ಮತ್ತು ಸಮಿ, ನನ್ನನ್ನು ಆ ತೆಳ್ಳಗಿನ ವ್ಯಕ್ತಿಗೆ ಪರಿಚಯ ಮಾಡಿದರು. `ಇವರು ಶಿವರಾಜ್’ ಅಂದಾಗ ನಾನು ಸುಮ್ಮನೆ `ಹಲೋ’ ಅಂದಿದ್ದೆ. ಸ್ವಲ್ಪ ದಿನಗಳಲ್ಲೇ, ಅಗತ್ಯಕ್ಕಿಂತ ಹೆಚ್ಚಾಗಿ ಹತ್ತಿರವಾದೆವು.
ಕೆಲವೇ ದಿನಗಳಲ್ಲಿ ಅರ್ಥವಾಗಿದ್ದು ಎಂದರೆ, ಇದೊಂದು ಸುದ್ದಿ ವಿನಿಮಯ ಕೇಂದ್ರ.
ಶಿವರಾಜ್ ಮತ್ತು ಸಮಿ ಅಲ್ಲದೆ, ಇವರೊಂದಿಗೆ ಆರ್.ಟಿ.ವಿಠ್ಠಲ ಮೂರ್ತಿ, ಸಂಯುಕ್ತ ಕರ್ನಾಟಕದ ಜಾನ್ ಮಥಾಯಿಸ್ ಮತ್ತು ಈ ನಾಡು ಪತ್ರಿಕೆಯ ಆದಿ ನಾರಾಯಣ ಬಹಳ ಹತ್ತಿರವಾಗಿದ್ದಾರೆ ಅಂತ ಅನ್ನಿಸುತ್ತಿತ್ತು.
ಆಗಾಗ ಮಾತಿನ ಮಧ್ಯದಲ್ಲಿ ಎಲ್ಲರೂ ಒಟ್ಟಿಗೆ ನಗುತ್ತಿದ್ದದ್ದು ಒಂದು ಪದದ ಬಳಕೆಯಾದಾಗ: `ಸ್ಯಾಂಡಲ್ ಫಾಕ್ಸ್’. `ಏನ್ರೀ ಅದೂ ಸ್ಯಾಂಡಲ್ ಫಾಕ್ಸ್’ ಅಂದರೆ, `ಅದೊಂದು ದೊಡ್ಡ ಕಥೆ ಬಿಡಿ’ ಅಂತ ನಗ್ತಿದ್ರು. ನಂಗ್ಯಾಕೋ ಇವರೆಲ್ಲಾ ನಿಗೂಢ ಮನುಷ್ಯರು ಅನ್ನಿಸೋಕೆ ಶುರುವಾಯ್ತು.
ಅಂತೂ ಹಟ ಬಿಡದೆ ಇವರ ಇತಿಹಾಸ ಹುಡುಕಲು ಆರಂಭಿಸಿದೆ. ಶಿವರಾಜ್ ಮತ್ತು ವಿಠ್ಠಲ ಮೂರ್ತಿ, ಎಂಬತ್ತರ ದಶಕದ ಒಂದೇ ದಿನ ವರದಿಗಾರಿಕೆಗೆ ಕಾಲಿಟ್ಟು, ಎರಡು ದಿಕ್ಕುಗಳಿಂದ ವಿಧಾನ ಸೌಧಕ್ಕೆ ಕಾಲಿಟ್ಟದ್ದರು. ಶಿವರಾಜ್ ಮೈಸೂರು ಮಿತ್ರಕ್ಕೆ ಸೇರಿದ್ದರು ಮತ್ತು ವಿಠ್ಠಲ ಮೈಸೂರು ಮೂಲದ ಆಂದೋಲನ ಪತ್ರಿಕೆಗೆ ಸೇರಿದ್ದರು. ದೊಡ್ಡ ಪತ್ರಿಕೆಗಳಿಂದ ಬರುವ ವಿಧಾನ ಸೌಧದ ಹಿರಿಯ ವರದಿಗಾರರ ಅಲೆಯನ್ನು ನೋಡಿ ಕಂಗಾಲಾದ ಇಬ್ಬರೂ ಒಟ್ಟಾಗಿದ್ದರಂತೆ. ಅದೇ ಸಮಯದಲ್ಲಿ ಕನ್ನಡ ಬಾರದ ಆದಿನಾರಾಯಣ ಕೂಡ ಇವರ ಜೊತೆ ಸೇರಿಕೊಂಡಿದ್ದಾನೆ. ಕೆಲವೇ ದಿನಗಳಲ್ಲಿ, ಅವರ ಜೊತೆಗೆ, ಮೈಸೂರು ಮೂಲದ ಮಹಾನಂದಿ ಪತ್ರಿಕೆ ಸೇರಿದ್ದ ಬೆಲಗೂರು ಸಮೀಉಲ್ಲಾ ಮತ್ತು ಮಥಾಯಿಸ್ ಸಹಿತ ಸೇರಿಕೊಂಡು, ಒಟ್ಟಾಗಿ ಸುದ್ದಿಗಳ ಹುಡುಕಾಟ ಶುರು ಮಾಡಿಕೊಂಡಿದ್ದಾರೆ. ಮೊದಮೊದಲು ಇವರನ್ನು ಗಣನೆಗೆ ತೆಗೆದುಕೊಳ್ಳದ ಹಿರಿಯ ವರದಿಗಾರರು, ಆನಂತರ ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ.
ಆದರೆ ಎಡವಟ್ಟಾಗಿದ್ದು ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ. ಒಂದಿನ, ಖರ್ಗೆಯವರ ಪ್ರೆಸ್ ಕಾನ್ಫರೆನ್ಸ್ ನೆಡೆಯುತ್ತಿತ್ತು. ಆಗ ತಾನೆ ಬಂಗಾರಪ್ಪನವರು ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ಟಿದ್ದರು. ಅವರ ಮಗ ಕುಮಾರ್ ಬಂಗಾರಪ್ಪ ಇನ್ನೂ ಕಾಂಗ್ರೆಸ್ ನಲ್ಲೇ ಇದ್ದರು. ಪತ್ರಕರ್ತರೊಬ್ಬರು ಮಾರ್ಮಿಕವಾಗಿ : `ಮಹಾರಾಜರೇನೋ ಹೋದರು, ಯುವರಾಜರ ಕಥೆಯೇನು?’ ಅಂತ ಕೇಳಿದರು.
ಅಷ್ಟೇ ಮಾರ್ಮಿಕವಾಗಿ ಖರ್ಗೆ: `ಯುವರಾಜರು ಪಕ್ಷ ವಿರೋಧಿ ಚಟುವಟಿಕೆ ನೆಡೆಸಿದರೆ, ಅವರ ವಿರುದ್ದ ಕ್ರಮ ತೆಗೆದುಕೊಳ್ಳುತ್ತೇವೆ,’ ಅಂದರು. ಖರ್ಗೆಯವರು ಈ ಉತ್ತರ ಹೇಳುವುದಕ್ಕೂ, ಶಿವರಾಜ್ ಪತ್ರಿಕಾ ಗೋಷ್ಟಿಯ ಒಳಗೆ ಬರುವುದಕ್ಕೂ ಸರಿಯಾಯ್ತು. ಯುವರಾಜರು ಅಂದ ತಕ್ಷಣ ಅವರ ಕಿವಿಯೂ ನೆಟ್ಟಗಾಯ್ತು.
ಆಗ ಕಾಂಗ್ರೆಸ್ ನಲ್ಲಿ ಇದ್ದ ಮೈಸೂರಿನ ಯುವರಾಜರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೂ ಮತ್ತು ಸರ್ಕಾರಕ್ಕೂ, ಮೈಸೂರಿನ ಅರಮನೆ ವಿಷಯದಲ್ಲಿ ಜಟಾಪಟಿ ನೆಡೆದಿತ್ತು. ಅದರಿಂದಾಗಿ ಯುವರಾಜರು ಕಾಂಗ್ರೆಸ್ ಬಿಡಬಹುದು ಎಂದು ದಟ್ಟವಾಗಿ ಸುದ್ದಿ ಹಬ್ಬಿತ್ತು. ಅದೇ ಸಮಯದಲ್ಲಿ ಖರ್ಗೆ ಯುವರಾಜರ ವಿರುದ್ದ ಕ್ರಮದ ಬಗ್ಗೆ ಮಾತಾಡಿದ್ದರು. ಮಾರನೇ ದಿನ ಮೈಸೂರು ಮಿತ್ರದಲ್ಲಿ ಮುಖಪುಟ ವರದಿಯಾಗಿ ಬಂತು: `ಪಕ್ಷ ವಿರೋಧಿ ಚಟುವಟಿಕೆ ನೆಡೆಸಿದರೆ, ಯುವರಾಜರ ವಿರುದ್ದ ಕ್ರಮ: ಖರ್ಗೆ’ ಅಂತ.
ಸುದ್ದಿ ಓದಿದ ಒಡೆಯರ್ ಅವರು ಖರ್ಗೆಯವರಿಗೆ ತಮ್ಮ ಲಾಯರ್ ಮುಖಾಂತರ ನೋಟಿಸ್ ಕಳುಹಿಸಿದರು. ಅದೂ ದೊಡ್ಡ ಸುದ್ದಿಯಾಯ್ತು. ಅದಕ್ಕೆ ಪ್ರತಿಯಾಗಿ ಖರ್ಗೆಯವರು, ಒಡೆಯರ್ ವಿರದ್ದ ಮಾತಾಡಿಲ್ಲದ್ದರಿಂದ, ನೋಟಿಸ್ ಅಗತ್ಯವಿರಲಿಲ್ಲ ಅಂತೇನೊ ಹೇಳಿದರಂತೆ. ಅದಕ್ಕೆ ಒಡೆಯರ್ ಅವರ ಪ್ರತಿಕ್ರಿಯೆ ತೆಗೆದುಕೊಳ್ಳಲು ಬೆಂಗಳೂರಿನ ಅರಮನೆಗೆ ಫೋನ್ ಮಾಡಿದಾಗ, ಮಹಾರಾಣಿ ಪ್ರಮೋದಾ ದೇವಿಯವರು ಫೋನ್ ಎತ್ತಿಕೊಂಡಿದ್ದಾರೆ. ಶಿವರಾಜ್ ಖರ್ಗೆಯವರ ವಿಚಾರ ಕೇಳಿದಾಗ, ಪ್ರಮೋದಾ ದೇವಿಯವರು, `ಯಾರು ಖರ್ಗೆ ಅಂದರೆ?’ ಅಂತ ಕೇಳಿದ್ದಾರೆ. ಅದೂ ವರದಿಯಾದಾಗ, ಖರ್ಗೆ ಹೈರಾಣಾಗಿ ಹೋಗಿದ್ದರಂತೆ.
ಆದರೆ ಖರ್ಗೆಯವರಷ್ಟೇ ಇಕ್ಕಟ್ಟಿಗೆ ಸಿಕ್ಕಿದ್ದು ಅವರ ವಿಶೇಷಾಧಿಕಾರಿಯಾಗಿದ್ದವಿಜಯೇಂದ್ರ. ವಿಜಯೇಂದ್ರ ಅವರಿಗೆ ಮೊದಲನೇ ದಿನದಿಂದಲೇ ಒಂದು ತಿದ್ದುಪಡಿ ಹಾಕಿಸಲು ಖರ್ಗೆಯವರು ತಾಕೀತು ಮಾಡಿದ್ದರಂತೆ. ಆದರೆ, ಮೈಸೂರು ಮೂಲದ ಮೂರೂ ಪತ್ರಿಕೆಯವರಾದ ಶಿವರಾಜ್, ಸಮಿ ಮತ್ತು ವಿಠ್ಠಲಮೂರ್ತಿಯವರಲ್ಲಿ, ಒಬ್ಬರ ವರದಿಗೆ ವಿರುದ್ದವಾಗಿ ಇನ್ನೊಬ್ಬರು ವರದಿ ಬರೆಯಬಾರದೆಂಬ ಅಲಿಖಿತ ಒಪ್ಪಂದವಿತ್ತು. ಹಾಗಾಗಿ, ವಿಜಯೇಂದ್ರ ಎಷ್ಟೇ ಗೋಗರೆದರೂ ಇವರಿಬ್ಬರು ಏನನ್ನೂ ಬರೆಯಲು ಒಪ್ಪಲಿಲ್ಲ. ನಾಲ್ಕೈದು ದಿನ ಕಳೆದ ನಂತರ ಆ ವಿಷಯ ತನ್ನಿಂದ ತಾನೇ ತಣ್ಣಗಾಯ್ತಂತೆ.
ಇದೊಂದು ಎಡವಟ್ಟು ಬಿಟ್ಟರೆ, ಈ ಗುಂಪಿನ ಸುದ್ದಿಗಲನ್ನು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವೇ ಇರಲಿಲ್ಲ. ರಾಜ್ಯದ ಎಷ್ಟೋ ಸುದ್ದಿಗಳನ್ನು ಮೈಸೂರಿನಿಂದ ಸ್ಪೋಟಿಸಿದ ಹೆಗ್ಗಳಿಕೆ ಇವರದು. ಅದರಲ್ಲಿ ಮೊದಲನೆಯದಾಗಿ ನಿಲ್ಲುವುದೇ ಈ ಸ್ಯಾಂಡಲ್ ಫಾಕ್ಸ್.
ಆಗ ವೀರಪ್ಪನ್ ಬಗ್ಗೆ ವರದಿಗಳು ಕಡ್ಲೆ-ಪುರಿಯಂತೆ ಮಾರಾಟವಾಗುತ್ತಿದ್ದವು. ಒಂದು ದಿನ, ಆದಿ ನಾರಾಯಣ ಬಂದು, ತಮಿಳುನಾಡಿನ ಎಸ್.ಟ.ಎಫ್. ಮುಖ್ಯಸ್ಥ ವಾಲ್ಟರ್ ದವರಾಂ ತಮ್ಮ ಪತ್ರಿಕೆಗೆ ಇಂಟರ್ ವ್ಯೂ ಕೊಟ್ಟಿರುವುದಾಗಿಯೂ, ಅದರಲ್ಲಿ ವೀರಪ್ಪನ್ ಹಿಡಿಯಲು `ಆಪರೇಶನ್ ಸ್ಯಾಂಡಲ್ ಫಾಕ್ಸ್’ ಸಧ್ಯದಲ್ಲಿ ಆರಂಭಿಸುವುದಾಗಿಯೂ ಹೇಳಿದ್ದಾನೆ. ಆದರೆ ಕರ್ನಾಟಕದ ಕಡೆಯಿಂದ ಏನು ಮಾಡ್ತಿದ್ದಾರೆ ಅಂತ ಅವನಿಗೆ ಗೊತ್ತಿರಲಿಲ್ಲ. ಅದೇ ಸಂಧರ್ಭದಲ್ಲಿ ದಿ ವೀಕ್ ಮ್ಯಾಗಜೀನ್ ನಲ್ಲಿ ಬಂದ, ಅಸ್ಸಾಂನ ಉಲ್ಫಾ ಉಗ್ರವಾದಿಗಳು ಕರ್ನಾಟಕದಲ್ಲಿ ಆಶ್ರಯ ಪಡೆಯುತ್ತಿರುವುದರಿಂದ, ಅವರ ಮೇಲೆ ಕಾರ್ಯಾಚರಣೆ ನೆಡೆಸಲು ಸಿದ್ದತೆ ನೆಡೆದಿದೆ ಎಂಬ ಸುದ್ದಿಯನ್ನು ಇವರುಗಳು ಮಾತಾಡುತ್ತಿದ್ದರಂತೆ. ಸರಿ, ಎರಡೂ ವಿಷಯಗಳಲ್ಲಿ ಕರ್ನಾಟಕದಲ್ಲಿ ಏನಾಗ್ತಿದೆ ಅಂತ ತಿಳ್ಕಳೋಕೆ ಆಗಿನ ಅರಣ್ಯ ಮಂತ್ರಿ ಗುರುಪಾದಪ್ಪ ನಾಗಮಾರಪಲ್ಲಿಯವರ ಹತ್ತಿರ ಹೋಗಿದ್ದಾರೆ.
`ಏನ್ಸಾರ್? ತಮಿಳುನಾಡಿನವರು ಆಪರೇಶನ್ ಸ್ಯಾಂಡಲ್ ಫಾಕ್ಸ್ ಮಾಡ್ತಿದ್ದಾರಂತಲ್ಲ ವೀರಪ್ಪನ್ ಹಿಡಿಯೋಕೆ… ನೀವೇನೂ ಮಾಡ್ತಾ ಇಲ್ವಾ?’ ಅಂತ ಸಮಿ ಕೇಳಿದ್ದೇ ತಡ, ಮಂತ್ರಿಗಳು `ಅದೇನೋ ಮಾಡ್ತಿದ್ದಾರಂತಪ್ಪ. ನಾವೆಲ್ಲಾ ಒಟ್ಟಿಗೇ ಮಾಡ್ತಿದ್ದೀವಲ್ಲಾ,’ ಅಂದಿದ್ದಾರೆ.
`ಅಂದ್ರೆ ಸ್ಯಾಂಡಲ್ ಫಾಕ್ಸ್ ಕರ್ನಾಟಕ-ತಮಿಳುನಾಡಿನ ಜಂಟಿ ಕಾರ್ಯಾಚರಣೆನಾ?’ ಅಂತ ಕೇಳಿದ್ದಾರೆ. ಅದಕ್ಕೆ ಮಂತ್ರಿಗಳು `ಒಟ್ಟಿಗೇ ಮಾಡ್ತಿದ್ದೇವೆ. ಅವರು ನಮಗೇನೂ ಹೇಳೋಲ್ಲ ಬಿಡ್ರಿ,’ ಅಂದರಂತೆ.
 ಸರಿ, ಇದು ತಮಿಳುನಾಡು ಮತ್ತು ಕರ್ನಾಟಕದ ಜಂಟಿ ಕಾರ್ಯಾಚರಣೆ ಅಂತ ಗೊತ್ತಾದ ತಕ್ಷಣ, ಇವರುಗಳು ಬಂದು ವರದಿಯನ್ನು ಕಳುಹಿಸಿದ್ದಾರೆ. ವಾಲ್ಟರ್ ದವರಾಂ ಇಂಟರ್ ವ್ಯೂ ಬಂದು ಒಂದು ವಾರವಾಗಿದ್ದರೂ ಯಾರೂ ಕ್ಯಾರೇ ಅಂದಿರಲಿಲ್ಲ. ಮೈಸೂರಿನ ಈ ಮೂರು ಪತ್ರಿಕೆಗಳು ವರದಿಯನ್ನು ಅಚ್ಚು ಮಾಡಿದ ತಕ್ಷಣವೇ, ಪತ್ರಿಕೋಧ್ಯಮ ಎದ್ದು ನಿಂತಿತ್ತು.
ಕನ್ನಡ ಪತ್ರಿಕೆಗಳ ಮೈಸೂರಿನ ವರದಿಗಾರರೆಲ್ಲ ಮಾರನೇ ದಿನವೇ ಕರ್ನಾಟಕ ಎಸ್.ಟಿ.ಎಫ್. ಅಧಿಕಾರಿಗಳನ್ನು ಸಂಪರ್ಕಿಸಿ ವಿಷಯ ತಿಳಿಯಲು ಯತ್ನಿಸಿದ್ದಾರೆ. ಅವರಿಗೆ ಈ ಹೆಸರಿನ ಕಾರ್ಯಾಚರಣೆ ಗೊತ್ತಿಲ್ಲ ಅಂತ ಗೊತ್ತಾದ ತಕ್ಷಣ, ಇವೇ ವರದಿಗಳನ್ನು ಆಧರಿಸಿ ಬೇರೆ ವರದಿ ತಯಾರಿಸಿದ್ದಾರೆ. ಕೆಲವರಂತೂ, ಆ ಕಾರ್ಯಾಚರಣೆಯ ಹೆಸರನ್ನು ಕನ್ನಡಕ್ಕೆ ಯಥಾವತ್ತಾಗಿ ಅನುವಾದಿಸಿ, ಅದಕ್ಕೆ `ಗಂಧದ ನರಿ ಕಾರ್ಯಾಚರಣೆ’ ಅಂತ ನಾಮಕರಣ ಮಾಡಿದ್ದಾರೆ. ಆದರೆ, ವರದಿಯ ತಿರುಳೆಲ್ಲ ಈ ಮೂರು ವರದಿಗಳನ್ನಾಧರಿಸಿ ಬರೆದಿದ್ದರು.
ಮೊದಲೆರೆಡು ದಿನ ಕನ್ನಡ ಪತ್ರಿಕೆಗಳದ್ದಾದರೆ, ಮೂರನೇ ದಿನದಿಂದ ಇಂಗ್ಲಿಶ್ ಪತ್ರಿಕೆಗಳ ಸರದಿ. ಮುಂದಿನ ಒಂದು ತಿಂಗಳ ಮಟ್ಟಿಗೆ, ಇದು ರಾಷ್ಟ್ರ ಮಟ್ಟದ ಸುದ್ದಿಯಾಗಿ ಬೆಳೆದಿತ್ತು. ಇದರ ಮೂಲ ಯಾವುದು ಅಂತ ಯಾರಿಗೂ ಸರಿಯಾಗಿ ತಿಳಿದಿರಲಿಲ್ಲ.
ನಾನು ನೊಡುವಾಗ, ಶಿವರಾಜ್, ವಿಠ್ಠಲ ಮೂರ್ತಿ ಮತ್ತು ಸಮಿ, ವರದಿಗಳನ್ನು ಕೈಯಲ್ಲಿ ಬರೆದು, ಫ್ಯಾಕ್ಸ್ ಮುಖಾಂತರ ಕಳುಹಿಸುತ್ತಿದ್ದರು. ನಿಧಾನವಾಗಿ, ಟೈಪಿಂಗ್ ಬರುವ ಹುಡುಗರನ್ನು ಹುಡುಕಿ, ಟೈಪ್ ಮಾಡಿದ ಪ್ರತಿಗಳನ್ನು ಫ್ಯಾಕ್ಸ್ ಮಾಡಲು ಆರಂಭಿಸಿದರು. ದಿನ ಕಳೆದಂತೆ, ರಾಜ್ಯದ ಎಲ್ಲಾ ಮೂಲೆಗಳಿಂದ, ಜಿಲ್ಲಾ ಪತ್ರಿಕೆಯವರು ಇವರನ್ನು ಹುಡುಕಿಕೊಂಡು ಬಂದು, ತಮ್ಮ ಪತ್ರಿಕೆಗಳಿಗೂ ಸುದ್ದಿ ಕೊಡುವಂತೆ ಕೇಳಿಕೊಂಡಾಗ, ಇವರ ಕಾರ್ಯಾಚರಣೆಯ ವ್ಯಾಪ್ತಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಹಬ್ಬಿತು.
ಕೆಲ ಕಾಲದ ನಂತರ, ಸಮಿಉಲ್ಲಾ ಮಹಾನಂದಿ ಬಿಟ್ಟು ಪ್ರಿಯಾಂಕ ಪತ್ರಿಕೆ ಸೇರಿ, ಈ ಟೀವಿ ಮುಖಾಂತರ ಉದಯ ಟೀವಿಯಲ್ಲಿ ಸೆಟಲ್ ಆದರು. ಹಾಗೇ, ಸಂಯುಕ್ತ ಕರ್ನಾಟಕ ಬಿಟ್ಟು ಜನವಾಹಿನಿ ಸೇರಿ, ಅದರ ಸಂಪಾದಕನೂ ಆದ ಮಥಾಯಿಸ್, ಜನವಾಹಿನಿ ಮುಚ್ಚಿದ ನಂತರ ಪತ್ರಿಕೋದ್ಯಮವನ್ನೇ ಬಿಟ್ಟು ಹೋದ. ಹಾಗೆಯೇ, ಛೀಫ್ ರಿಪೋರ್ಟರ್ ಆದ ನಂತರ, ಆದಿ ನಾರಾಯಣನ ಹಾಜರಿ ಕೂಡ ಸ್ಯಾಂಡಲ್ ಫಾಕ್ಸ್ ಗುಂಪಿನಲ್ಲಿ ಕಡಿಮೆಯಾಗತೊಡಗಿತು.
ಈ ಮಧ್ಯ, ವರದಿಗಾರರ ಕೂಟದಲ್ಲಿ ನಿಧಾನವಾಗಿ ಕೆಲವು ಬದಲಾವಣೆಗಳಾದವು. ಕಟ್ಟಡದ ಪಕ್ಕದಲ್ಲಿದ್ದ ಮರದ ರೆಂಬೆ ಬಿದ್ದ ಪ್ರಯುಕ್ತ, ಮೇಲಿದ್ದ ಶೀಟ್ ಒಡೆದು ಹೋಗಿ, ಆಗಿನ ಕಾರ್ಯದರ್ಶಿಯಾಗಿದ್ದ ಪಿ.ತ್ಯಾಗರಾಜ್ ಓಡಾಡಿ, ಆರ್.ಸಿ.ಸಿ ಹಾಕಿಸಿದರು. ಅದಾದ ನಂತರ, ಉದಯವಾಣಿಯ ಅ.ಮ.ಸುರೇಶ ವಿಪರೀತ ಮುತುವರ್ಜಿ ವಹಿಸಿದ ಪರಿಣಾಮವಾಗಿ, ಕೂಟದಲ್ಲಿ ಕಂಪ್ಯೂಟರ್ ಗಳು ತಲೆ ಎತ್ತಿದವು. ಅಲ್ಲಿಯವರೆಗೆ ತಂತ್ರಜ್ನಾನ ಅಂದರೆ ಮಾರುದೂರ ಹಾರುತ್ತಿದ್ದ ವಿಠ್ಠಲ ಮೂರ್ತಿ, ಟೈಪಿಂಗ್ ಕಲಿತ್ತದ್ದಲ್ಲದೆ, ಇ-ಮೇಲ್ ತೆಗೆದು, ಅದರ ಮುಖಾಂತರ ಸುದ್ದಿ ಕಳುಹಿಸಲು ಆರಂಭಿಸಿದ.   
ಇದೆಲ್ಲಾ ನೋಡಿದ ಮೇಲೆ, ಶಿವರಾಜ್ ಸಹ ಇ-ಮೇಲ್ ಖಾತೆ ತೆರೆದರು. ಆದರೆ, ಕಂಪ್ಯೂಟರ್ ಕಲಿಯುವ ಗೋಜಿಗೆ ಹೋಗಲಿಲ್ಲ. ಮತ್ತೆ ಟೈಪಿಂಗ್ ಬರುವ ಹುಡುಗರ ಸಹಾಯದಿಂದಲೇ, ಇ-ಮೇಲ್ ಮುಖಾಂತರ ಸುದ್ದಿ ಕಳುಹಿಸುತ್ತಾರೆ.
ಅಂದ ಹಾಗೆ, ಈಗ, ನಾನೂ ಸೇರಿದಂತೆ, ಕೆಲವು ಪ್ರಮುಖ ಪತ್ರಿಕೆಗಳ ವರದಿಗಾರರು, ಈ ಸ್ಯಾಂಡಲ್ ಫಾಕ್ಸ್ ಗುಂಪಿಗೆ `ಒಂದಾಣೆ ಪಾರ್ಟ್ನರ್ ಗಳು!’


ಮಾಕೋನಹಳ್ಳಿ ವಿನಯ್ ಮಾಧವ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ