ಶುಕ್ರವಾರ, ಸೆಪ್ಟೆಂಬರ್ 21, 2012

ಪಂಚಾಯ್ತಿ ಪಾಲಿಟಿಕ್ಸ್




ಡಾ! ಪಂಚಾಯ್ತಿ ಪ್ರೆಸಿಡೆಂಟ್

ಅಮ್ಮ ಯಾಕೋ `ಓವರ್ ರಿಯಾಕ್ಟ್’ ಮಾಡ್ತಾ ಇದೆ ಅಂತ ಅನ್ನಿಸ್ತು. ಯಾರು ಬಂದು ಅಣ್ಣನ ರಿಟೈರ್ ಮೆಂಟ್ ಲೈಫ್ ಬಗ್ಗೆ ಕೇಳಿದ್ರೂ: `ಯಾರಿಗೆ ರಿಟೈರ್ ಮೆಂಟ್ ಕೊಟ್ಟರೂ, ಡಾಕ್ಟರ್ ಗಳಿಗೆ ಮಾತ್ರ ರಿಟೈರ್ ಮೆಂಟ್ ಕೊಡಬಾರ್ದು. ರಿಟೈರ್ ಆದಮೇಲೆ ನೋಡೋಕೆ ಪೇಶೆಂಟ್ಸ್ ಇರೋದಿಲ್ಲವಲ್ಲ, ಅವರಿಗೆ ಎಲ್ಲಾರಲ್ಲೂ ಖಾಯಿಲೆ ಕಾಣಿಸುತ್ತೆ,’ ಅಂತ ಗೊಣಗಾಡ್ತಿದ್ರು.
ಅಣ್ಣನ ಜೀವನವೇ ಒಂಥರಾ ವಿಚಿತ್ರ. ಅದನ್ನು ಅರ್ಥ ಮಾಡಿಕೊಳ್ಳೋಕೆ ಕಷ್ಟ ಆಗ್ತಿತ್ತು. ನಾನು ನೋಡಿದ ಹಾಗೆ, ಸಕಲೇಶಪುರ ಬಿಟ್ಟರೆ, ಅಣ್ಣ ಕೆಲಸ ಮಾಡಿದ್ದೆಲ್ಲಾ ಹಳ್ಳಿಗಳ ಆಸ್ಪತ್ರೆಗಳಲ್ಲಿ. ಜೀವನದಲ್ಲಿ ಒಂದು ಸಲನೂ ಪ್ರಮೋಶನ್ ತಗೊಳ್ಳಲಿಲ್ಲ. ಹೆಚ್ಚಿಗೆ ಮಾತನಾಡದ ಅಣ್ಣನನ್ನು ನೋಡಿ ಇವರಿಗೆ ಯಾರೂ ಸ್ನೇಹಿತರಿಲ್ಲ ಅಂದುಕೊಂಡಿದ್ದೆ. ಅಮ್ಮ, ಅಣ್ಣನ ಯಾವುದಾದರೂ ಸ್ನೇಹಿತರ ಹೆಸರು ಹೇಳಿದರೆ ನನಗೆ ಆಶ್ಚರ್ಯವಾಗುತ್ತಿತ್ತು. ಇವರೆಲ್ಲ ಅಣ್ಣನ ಜೀವನದ ಯಾವ ಭಾಗದಲ್ಲಿ ಬಂದಿದ್ದರು ಅಂತ ಅರ್ಥವಾಗುತ್ತಿರಲಿಲ್ಲ.
ಅಣ್ಣನಿಗೆ ರಿಟೈರ್ ಆಗಲು ಎರಡು ವರ್ಷವಿದ್ದಾಗ ಅವರ ಗೆಳೆಯರಲ್ಲೊಬ್ಬರಾದ ಡಾ! ಎಚ್ ಎಲ್ ತಿಮ್ಮೇಗೌಡರು ಆರೋಗ್ಯ ಮಂತ್ರಿಯಾಗಿದ್ದರು. ಒಂದೆರೆಡು ಸಲ ಅಣ್ಣನನ್ನು ಬೆಂಗಳೂರಿಗೆ ವರ್ಗ ಮಾಡಿಸಿದ್ದರೂ, ಅಣ್ಣ ಬರಲು ಒಪ್ಪಿರಲಿಲ್ಲ. ಕೊನೆ ಮೂರು ವರ್ಷಗಳು ಇದ್ದಾಗ ಅವರನ್ನು ಸಹಾಯಕ ಸರ್ಜನ್ ಅಂತ ಪ್ರಮೋಶನ್ ಕೊಟ್ಟು, ಮೂಡಿಗೆರೆಗೆ ಹಾಕಿದ್ದರು. ಆಗಲೂ ಅಷ್ಟೆ, ಊರಿನ ಹತ್ತಿರ ಹೋಗೋದಾದ್ರೆ ತೋಟಕ್ಕೆ ಹೋಗೋಣ ಅಂತ ಅಮ್ಮ ಹೇಳಿದರಿಂದ, ಯಾರೂ ಬರದ ನಂದೀಪುರದ ಆಸ್ಪತ್ರೆಗೆ ವರ್ಗ ಮಾಡಿಸಿಕೊಂಡರು. ನಂದೀಪುರ ಆಸ್ಪತ್ರೆ ನಮ್ಮ ತೋಟದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿದೆ.
ಅಲ್ಲಿಂದ ಮುಂದೆ ಪೂರ್ತಿ ಬ್ಯುಸಿ ಆಗಿದ್ದು ಅಮ್ಮ. ಹನ್ನೆರೆಡು ಕಿಲೋಮೀಟರ್ ದೂರದ ರೈಸ್ ಮಿಲ್ಲಿನಲ್ಲಿ ಕುಳಿತ ಅಜ್ಜನ ಉಸ್ತುವಾರಿಯಲ್ಲಿ, ಕಾಡು ಹತ್ತಿದ ತೋಟದ ಮಧ್ಯ ಕಾಫಿ ಗಿಡಗಳನ್ನು ಟಾರ್ಚ್ ಬಿಟ್ಟು ಹುಡುಕಬೇಕಿತ್ತು. ಅಣ್ಣ ನಾಲ್ಕು ಕಿಲೋಮೀಟರ್ ದೂರದ ಆಸ್ಪತ್ರೆ ಯಾತ್ರೆ ಶುರು ಮಾಡಿದರೆ, ಅಮ್ಮ ಕಾಡು ಕಡಿದು ತೋಟ ಮಾಡುವ ಕೆಲಸಕ್ಕೆ ನಿಂತರು. ಸರ್ಕಾರವು ನೌಕರರ ನಿವೃತ್ತಿ ವಯಸ್ಸನ್ನು ಐವತೈದರಿಂದ, ಐವತ್ತೆಂಟಕ್ಕೆ ಏರಿಸಿದ ಪರಿಣಾಮವಾಗಿ, ಅಣ್ಣ ಮೂರು ವರ್ಷದ ಬದಲು, ನಂದೀಪುರ ಆಸ್ಪತ್ರೆಯಲ್ಲಿ ಆರು ವರ್ಷ ಕೆಲಸ ಮಾಡಬೇಕಾಯಿತು. ಯಾರೂ ಬರಲು ಇಷ್ಟ ಪಡದ ನಂದೀಪುರ ಆಸ್ಪತ್ರೆಗೆ ಇದು ವರದಾನವಾಯ್ತು ಅಂತಲೇ ಹೇಳಬಹುದು.
ಆರು ವರ್ಷವೂ ಮುಗಿದ ಮೇಲಂತೂ ಅಣ್ಣ ನಿವೃತ್ತಿಯಾಗಲೇ ಬೇಕಾಯಿತು. ಅಷ್ಟರೊಳಗೆ ನಾನೂ ಮತ್ತು ವೆಂಕಟೇಶಣ್ಣ, ನಮ್ಮ ದಾರಿಗಳನ್ನು ನೋಡಿಕೊಳ್ಳಲು ಬೆಂಗಳೂರು ದಾರಿ ಹಿಡಿದಾಗಿತ್ತು. ಅಣ್ಣ ನಿವೃತ್ತಿಯಾದಮೇಲೆ ಅಮ್ಮನಿಗೆ ಸ್ವಲ್ಪ ಕೆಲಸ ಹಗುರವಾಗಬಹುದು ಅಂದುಕೊಂಡಿದ್ದೆ. ಅದು ತಪ್ಪು ಅಂತ ಗೊತ್ತಾಗಿದ್ದೇ ಊರಿಗೆ ಹೋದಾಗ.
ಜೀವನವಿಡೀ ರೋಗಿಗಳೊಡನೆ ಆಸ್ಪತ್ರೆಯಲ್ಲಿ ಕಳೆದ ಅಣ್ಣನಿಗೆ, ಮನೆಯಲ್ಲಿ ಏನು ಮಾಡಬೇಕು ಅಂತ ಗೊತ್ತಿರಲಿಲ್ಲ. ಬ್ಯಾಂಕ್ ವ್ಯವಹಾರ ನೋಡಿಕೊಳ್ಳುತ್ತಿದ್ದರು ಮತ್ತು ಆಗಾಗ ತೋಟಕ್ಕೆ ಹೋಗಿ ಬರುತ್ತಿದ್ದರು. ಏನನ್ನಿಸಿತೋ ಏನೋ, ಅಮ್ಮ ಬೆಳಗ್ಗೆ ಆಳುಗಳಿಗೆ ಕೆಲಸ ಹೇಳುವ ಸಮಯದಲ್ಲಿ ಅಣ್ಣನೂ ಹೋಗಿ ನಿಲ್ಲಲು ಶುರುಮಾಡಿದರಂತೆ.
ಸುಮ್ಮನಿದ್ದರಾಗುತ್ತಿತ್ತೇನೋ… ಕೆಲಸದವರನ್ನು ನೋಡಿ, `ವಿಜು… ಆ ಹುಡುಗಿಯನ್ನು ನೋಡು, ಎಷ್ಟು ತೆಳ್ಳಗಿದ್ದಾಳೆ. ಅನೀಮಿಕ್ ಅವಳಿಗೆ. ವಿಟಮಿನ್ ಟ್ಯಾಬ್ಲೆಟ್ ಕೊಡಬೇಕು. ಅವನಿದ್ದಾನಲ್ಲ… ಅವನು ಇರೋ ರೀತಿಯಲ್ಲಿ ಮರ ಹತ್ತೋದು ಡೇಂಜರ್….’ ಅಂತೆಲ್ಲ ಮಾತಾಡಲು ಶುರು ಮಾಡಿದರು.
ಅಮ್ಮನ ಪಿತ್ತ ನೆತ್ತಿಗೇರಿ, ಅಣ್ಣನನ್ನು ಬೆಳಗ್ಗಿನ ಹೊತ್ತು ಆಳುಗಳು ಮನೆಯ ಸುತ್ತ ಇರುವಾಗ ಹೊರಗೆ ಬರುವುದನ್ನೇ ನಿಷೇಧಿದರು. ಪಾಪ ಅಣ್ಣ, ಅವರ ಪಾಡಿಗೆ ಯಾವುದಾದರೂ ಪುಸ್ತಕ ಹಿಡ್ಕೊಂಡು ಒಳಗೆ ಕೂತಿರುತ್ತಿದ್ದರು. ಅದರ ಜೊತೆ, ಬಂದವರ ಹತ್ತಿರವೆಲ್ಲ ಅಮ್ಮ ಈ ಘಟನೆಗಳನ್ನು ಹೇಳಿ, `ಕೆಲಸ ಮಾಡಿ ಆಳುಗಳು ಇರೋದೇ ತೆಳ್ಳಗೆ. ಗಂಡಾಳುಗಳು ಕುಡಿದೂ ಕುಡಿದೂ ಯಾವಾಗ ಬೀಳ್ತಾರೆ ಅಂತ ಹೇಳೋಕಾಗಲ್ಲ. ಇವರು ಹೀಗೆ ಅವರುಗಳ ಮುಂದೆ ಮಾತಾಡಿದ್ರೆ, ನಾನು ಈ ಆಳುಗಳನ್ನು ಇಟ್ಕೊಂಡು ಕೆಲಸ ತೆಗೆಯೋದು ಹ್ಯಾಗೆ? ರಿಟೈರ್ ಆದ ಡಾಕ್ಟರ್ ಗಳಿಗೆ ಯಾವುದಾದರೂ ಕೆಲಸ ಹಚ್ಚಬೇಕು. ಇಲ್ದೇ ಹೋದ್ರೆ, ನಮ್ಮನ್ನೇ ಪೇಶೆಂಟ್ ಮಾಡ್ತಾರೆ, ಅಷ್ಟೆ,’ ಅಂತ ತಮಾಷೆ ಕೂಡ ಮಾಡ್ತಿದ್ರು.
ನನಗೆ ಅಣ್ಣನನ್ನು ನೋಡಿ ಪಾಪ ಅನ್ನಿಸ್ತು. `ಹೋಗ್ಲಿ ಬಿಡಮ್ಮ. ಅಣ್ಣ ಏನು ಮಾಡೋಕಾಗುತ್ತೆ. ತೋಟದ ಬಗ್ಗೆ ಅಣ್ಣಂಗೆ ಎಷ್ಟು ಗೊತ್ತು? ನಿಧಾನಕ್ಕೆ ಗೊತ್ತಾಗುತ್ತೆ, ಬಿಡು,’ ಅಂತ ಹೇಳೋಕೆ ಹೋಗಿ, ಅಮ್ಮನ ಕೈಲಿ ಚೆನ್ನಾಗಿ ಬೈಸಿಕೊಂಡೆ. `ಹೋಗೋ.. ನಿನಗೇನು ಗೊತ್ತು ತೋಟದ ಬಗ್ಗೆ. ಸುಮ್ಮನೆ ನಿನ್ನ ಕೆಲಸ ನೋಡ್ಕೋ,’ ಅಂದ್ರು. ನಾನು ತೆಪ್ಪಗಾದೆ.
ಇದೆಲ್ಲಾ ಆಗಿ ಒಂದು ವರ್ಷ ಆಗ್ತಾ ಬಂದಿತ್ತು. ನಮ್ಮ ಸಂಬಂಧಿಯೊಬ್ಬರ ಮದುವೆಗೆ ಅಂತ ಊರವರೆಲ್ಲ ಬೆಂಗಳೂರಿಗೆ ಬಂದಿದ್ದರು. ಅಮ್ಮ, ಅಣ್ಣನೂ ಬಂದಿದ್ದರು. ಬಸವೇಶ್ವರನಗರದ ದೊಡ್ಡಮ್ಮನ ಮನೆಯಲ್ಲಿ ಊರವರೆಲ್ಲ ಸೇರಿದಾಗ ನನಗೆ ಒಂದು ವಿಷಯ ಕಿವಿಗೆ ಬಿತ್ತು: `ಅಣ್ಣ ಪಂಚಾಯ್ತಿ ಎಲೆಕ್ಷನ್ ನಿಲ್ತಾರೆ,’ ಅಂತ.
ಸಿಕ್ಕಾಬಟ್ಟೆ ನಗು ಬಂತು. ಅಣ್ಣಂಗೆ ಈ ಹುಚ್ಚು ಯಾವಾಗ ಹಿಡೀತು? ನಮ್ಮ ಕುಟುಂಬ ರಾಜಕಾರಣದಲ್ಲಿ ಸಕ್ರಿಯವಾಗಿರೋದೇನೋ ನಿಜ. ಇಬ್ಬರು ಪಾರ್ಲಿಮೆಂಟ್ ಮೆಟ್ಟಲು ಸಹ ಹತ್ತಿದ್ದಾರೆ. ಆದರೆ, ಅಣ್ಣ ಮತ್ತು ರಾಜಕಾರಣ? ಅರ್ಥವಾಗಲಿಲ್ಲ.
ಸುಂದರೇಶ ಚಿಕ್ಕಪ್ಪನನ್ನು ಕೇಳಿದೆ. `ಅದಾ… ದೊಡ್ಡ ವಿಷಯ ಅಲ್ಲ ಬಿಡು ಮಗಾ. ಈಗ ನಮ್ಮೂರಲ್ಲಿ ಎಲ್ಲಾ ಪಾರ್ಟಿ ಸದಸ್ಯರಿದ್ದಾರೆ. ಯಾವುದಾದರೂ ಪಾರ್ಟಿಯವರು ನಿಂತರೆ ಮುಂದೆ ಸಣ್ಣ, ಪುಟ್ಟ ಸಮಸ್ಯೆಗಳು ಬರಬಹುದು. ಜೊತೆಗೆ, ಪ್ರೆಸಿಡೆಂಟ್ ಜನರಲ್ ಕ್ಯಾಟೆಗರಿಗೆ ಬಂದಿದೆ. ಅದಕ್ಕೆ ನಾವು ಊರವರೆಲ್ಲ ಸೇರಿ, ಯಾರು ರಾಜಕೀಯದಲ್ಲಿ ಇಲ್ಲವೋ, ಅವರನ್ನ ಎಲೆಕ್ಷನ್ ಗೆ ನಿಲ್ಸೋದು ಅಂತ ತೀರ್ಮಾನಿಸಿದ್ವಿ. ಮಾಧವಣ್ಣನೂ ರಿಟೈರ್ ಆದಮೇಲೆ ಏನು ಮಾಡಬೇಕೂಂತ ಗೊತ್ತಿಲ್ಲದೆ ಕೂತಿದ್ದ. ಅವನಾದ್ರೆ ಏನೂ ಸಮಸ್ಯೆ ಬರೋದಿಲ್ಲ ಅಂತ ಅಷ್ಟೆ,’ ಅಂದ್ರು.
`ಅಲ್ಲಾ, ನಾಡಿದ್ದೇ ಎಲೆಕ್ಷನ್. ಅಣ್ಣನ ಎದುರು ಇಬ್ಬರು ನಿಂತಿದ್ದಾರಂತೆ. ನೀವೆಲ್ಲ ಇಲ್ಲಿದ್ದೀರ?’ ಅಂತ ರಾಗ ಎಳೆದೆ.
`ಅಯ್ಯೋ ಬಿಡು. ಅವರಿಬ್ಬರಿಗೆ ಸೇರಿ ಇಪ್ಪತೈದು ಓಟು ಬರೋಲ್ಲ. ಜಯಕ್ಕನನ್ನೂ ನಿಲ್ಸಿದ್ದೀವಿ. ಅವ್ರೂ ಇಲ್ಲೇ ಇಲ್ಲವಾ? ಅವರು ವೈಸ್ ಪ್ರೆಸಿಡೆಂಟ್ ಆಗ್ತಾರೆ ಬಿಡು. ತಲೆ ಕೆಡೆಸಿಕೊಳ್ಳಬೇಡ,’ ಅಂದ್ರು.
ಇದೊಳ್ಳೆ ಎಲೆಕ್ಷನ್ ಅಂದುಕೊಂಡು, ನಕ್ಕುಬಿಟ್ಟೆ. ಅಮ್ಮನ ಹತ್ತಿರ ಹೋಗಿ, `ಏನಮ್ಮಾ? ಗಂಡನ್ನ ಪಾಲಿಟಿಕ್ಸ್ ಗೆ ಇಳಿಸಿದ್ದೀಯಂತೆ?’ ಅಂತ ತಮಾಷೆ ಮಾಡಿದೆ.
`ನನ್ನ ಮಾತು ಯಾರು ಕೇಳ್ತಾರೆ. ಇದೊಂದು ಕಮ್ಮಿ ಇತ್ತು, ಮನೆ ಹಾಳಾಗೋಕೆ,’ ಅಂತ ಅಮ್ಮ ಸಿಡುಕಿದರು. ಅಷ್ಟರಲ್ಲೇ ಹಿಂದುಗಡೆಯಿಂದ ಬಂದ ಸುಂದರೇಶ್ ಚಿಕ್ಕಪ್ಪ: `ಇವತ್ತು ಎಷ್ಟೋ ಪರವಾಗಿಲ್ಲ ಕಣೋ. ಅವತ್ತು ನಿಮ್ಮಮ್ಮ ಗೊಳೋ ಅಂತ ಅಳೋಕೆ ಶುರುಮಾಡಿದ್ರು. ಎಲೆಕ್ಷನ್ ಗೆ ನಿಂತು ಮಾಧವಣ್ಣ ಮನೆ ಹಾಳು ಮಾಡ್ತಾನೆ ಅಂತ. ತುಂಬಾ ಹೊತ್ತು ಸಮಾಧಾನ ಮಾಡಿ, ಎಲೆಕ್ಷನ್ ಖರ್ಚು ಊರವರೇ ನೋಡ್ಕೋತ್ತೀವಿ, ಮಾಧವಣ್ಣ ಓಡಾಡೋದೂ ಬೇಡ, ಅಂದ್ಮೇಲೆ ಸುಮ್ಮನಾದ್ರು,’ ಅಂತ ನಕ್ಕರು.
ನಾನೂ ನಗುತ್ತಾ ಅಮ್ಮನ ಮುಖ ನೋಡಿದೆ. `ನಾನು ಇಷ್ಟು ವರ್ಷ ಕಷ್ಟ ಪಟ್ಟು ತೋಟ ಮಾಡಿದೆ. ಇವ್ರು ಎಲೆಕ್ಷನ್ ನಿಂತು ಯಾರನ್ನ ಉದ್ದಾರ ಮಾಡಬೇಕು? ಈ ವಯಸ್ಸಲ್ಲಿ ರಾಜಕೀಯ ಅಂತ ಮನೆ ಹಾಳು ಮಾಡಿಕೊಳ್ಳೋದೊಂದು ಬಾಕಿ ಇದೆ,’ ಅಂತ ಅಮ್ಮ ಗೊಣಗಿದರು.
`ಹೋಗ್ಲಿ ಬಿಡಮ್ಮ. ಯಾಕ್ಹಿಂಗಾಡ್ತೀಯ? ಅಣ್ಣಂಗೆ ಮನೇಲಿ ಇದ್ದು ಅಭ್ಯಾಸ ಇಲ್ಲ. ಈ ಥರ ಸೋಶಿಯಲ್ ಸರ್ವಿಸ್ ಮಾಡ್ಲಿ ಬಿಡು,’ ಅಂದೆ. `ನಿಂಗೊತ್ತಾಗಲ್ಲ ಬಿಡು. ನಮಗ್ಯಾಕೆ ಬೇಕು ಈ ಪಾಲಿಟಿಕ್ಸ್,’ ಅಂತ ಅಮ್ಮ ಬೈದ್ರು.
ನಮ್ಮ ಕುಟುಂಬ ರಾಜಕೀಯದಲ್ಲಿದ್ರೂ, ನಮ್ಮ ಮನೆಯಲ್ಲಿ ನಾವ್ಯಾರೂ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ಮೊದಲ ಸಲ ರಾಜ್ಯದಲ್ಲಿ ಜಿಲ್ಲಾ ಪರಿಷತ್ ಚುನಾವಣೆಯಾದಾಗ ನಾನಿನ್ನೂ ಪಿಯುಸಿ ಓದುತ್ತಿದ್ದೆ. ಆ ಚುನಾವಣೆಯಲ್ಲಿ ಓಡಾಡಿದ್ದು ಅಮ್ಮನಿಗಾಗಲಿ, ಅಣ್ಣನಿಗಾಗಲಿ ಇಷ್ಟವಾಗಿರಲಿಲ್ಲ. ಅದಾದ ಮೇಲೆ ನಾನೂ ಊರಿಗೆ ಪುರುಸೋತ್ತಾಗಿ ಹೋಗಿದ್ದು, ಊರಿನ ರಾಜಕೀಯದಲ್ಲಿ ತಲೆ ಹಾಕಿದ್ದು ಕಡಿಮೆಯಾಗಿತ್ತು.
ಸುಂದರೇಶ್ ಚಿಕ್ಕಪ್ಪ ಹೇಳಿದ್ದು ನಿಜವಾಗಿತ್ತು. ಅಣ್ಣನ ಎದುರು ನಿಂತವರಿಬ್ಬರೂ ಅಷ್ಟೋ ಇಷ್ಟೋ ಓಟುಗಳನ್ನು ತೆಗೆದುಕೊಂಡಿದ್ದರು. ಇನ್ನುಳಿದ ಓಟುಗಳೆಲ್ಲಾ ಅಣ್ಣನಿಗೇ ಬಂದಿತ್ತು. ಅದು ಗೊತ್ತಾಗಿದ್ದು ಮುಂದಿನ ಸಲ ಊರಿಗೆ ಹೋದಾಗ.
ಅಣ್ಣನ ಚಿಕ್ಕಪ್ಪನ ಮಗ ಶಶಿಧರಣ್ಣನ ಜೊತೆ ಮಾತಾಡ್ತಾ, `ಹ್ಯಾಗಿತ್ರಿ ನಿಮ್ಮಣ್ಣನ ಎಲೆಕ್ಷನ್?’ ಅಂತ ತಮಾಷೆ ಮಾಡಿದೆ.
`ಅದೇನು ಬಿಡು ಮಾರಾಯ. ಇಬ್ಬರೂ ಠೇವಣಿ ಕಳ್ಕೊಂಡ್ರು ಅಷ್ಟೆ. ನಮ್ಮದೇ ಓಟುಗಳಲ್ವಾ? ನಮ್ಮ ಕೇಶವ ಮೂರ್ತಿಯಂತೂ ಒಂದು ಬೂತನ್ನೇ ಕಂಟ್ರಾಕ್ಟ್ ತಗೊಂಡಿದ್ದ. ಅವನೊಬ್ಬನೇ ಆರೋ, ಏಳೋ ಓಟು ಹಾಕಿದ್ನಂತೆ,’ ಅಂತ ನಕ್ಕರು.
ಕೇಶವ ಮೂರ್ತಿ ಅಂದ ತಕ್ಷಣ ಕಿವಿ ನೆಟ್ಟಗಾಯ್ತು. ಅವನು ನಮ್ಮೂರಿನ ಹಳೇ ತಲೆಮಾರಿನವರ ಕ್ಷೌರಿಕ. ಅಣ್ಣನಿಗೆ ಹೇರ್ ಕಟ್ ಮಾಡಲು ತಿಂಗಳಿಗೆ ಒಂದು  ದಿನ ಮನೆಗೆ ಬರ್ತಿದ್ದ. ಮನೆಯಲ್ಲೇ ನೆಡೆಯುವ ಈ ಹೇರ್ ಕಟ್ ನೆಡೆಯುವಾಗ ಇಬ್ಬರ ಮಧ್ಯ ಕೆಲವು ಸಂಭಾಷಣೆಗಳೂ ನೆಡೆಯುತ್ತಿದ್ದವು.
ಒಂದು ಸಲ ಅಣ್ಣನಿಗೆ ಯಾಕೋ ರೇಗಿತ್ತು ಅಂತ ಕಾಣುತ್ತೆ. `ಮತ್ತೆ ನೀನು ಪಂಚಾಯ್ತಿ ಮೆಂಬರ್ ಆಗಿರೋದು ಕತ್ತೆ ಕಾಯೋಕಾ. ಅಲ್ಲಿ ಮೀಟಿಂಗಲ್ಲಿ ಹೇಳೋಕೆ ಏನಾಗಿತ್ತು?’ ಅಂತ ಬೈದರು.
`ನನ್ನ ಮೆಂಬರ್ ಮಾಡಿರೋದೇ ನೀವೆಲ್ಲ ಸೇರಿಕೊಂಡು. ಇನ್ನು ನನ್ನ ಮಾತು ಯಾರು ಕೇಳ್ತಾರೆ. ತೆಪ್ಪಗೆ ಕೂತು ಬಂದರೆ ಸರಿ. ಇಲ್ಲದೆ ಹೋದರೆ, ಹೊರಗೆ ಬಂದ ಮೇಲೆ ಚಂದ್ರೇಗೌಡರು ನನ್ನ ಚಮಡಾ ಸುಲೀತಾರೆ, ಅಷ್ಟೆ,’ ಅಂದ.
ಎರಡು ಚಂದ್ರೇಗೌಡರು, ಎರಡು ರಾಮೇಗೌಡರು, ಎರಡು ಲಕ್ಷ್ಮಣಗೌಡರು ಇರುವ ನಮ್ಮ ಕುಟುಂಬದಲ್ಲಿ, ಯಾವ ಚಂದ್ರೇಗೌಡರು ಅಂತ ಗೊತ್ತಾಗದೆ ಸುಮ್ಮನಾಗಿದ್ದೆ. ಆ ವಿಷಯಗಳಲ್ಲಿ ನಾವು ತಲೆ ಹಾಕೋದು ಅಣ್ಣನಿಗೆ ಇಷ್ಟವಾಗುತ್ತಿರಲಿಲ್ಲ.
ಆದರೆ, ಒಂದಂತೂ ಗೊತ್ತಾಗಿತ್ತು – ಕೇಶವ ಮೂರ್ತಿ ಪಂಚಾಯ್ತಿ ಸದಸ್ಯನಾದರೂ, ಅದು ನಾಮ ನಿಮಿತ್ತ ಮಾತ್ರ. ತನ್ನ ಕುಲ ಕಸುಬನ್ನು ಬಿಟ್ಟು ಇನ್ನೇನೂ ಮಾಡೋಕಾಗೋಲ್ಲ, ಅಂತ. ಈ ಸಲದ ಎಲೆಕ್ಷನ್ ನಲ್ಲಿ, ಮಾಜೀ ಪಂಚಾಯ್ತಿ ಸದಸ್ಯನೊಬ್ಬ, ಆರರಿಂದ ಏಳು ನಕಲಿ ಮತದಾನ ಮಾಡಿದ್ದ.
ಅಣ್ಣನನ್ನು ಪ್ರೆಸಿಡೆಂಟ್ ಮತ್ತು ಅಣ್ಣನಿಗೆ ವರಸೆಯಲ್ಲಿ ಚಿಕ್ಕಮ್ಮನಾಗಬೇಕಾದ ಜಯ ದೊಡ್ಡಮ್ಮನನ್ನು ವೈಸ್ ಪ್ರೆಸಿಡೆಂಟ್ ಮಾಡಲಾಯಿತು.. ಸ್ವಲ್ಪ ದಿನದ ನಂತರ ನೆಡೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ, ನಮ್ಮ ಕುಟುಂಬದವರೇ ಆದ ಜಗನ್ನಾಥ ಚಿಕ್ಕಪ್ಪ ಗೆದ್ದು, ಅಧ್ಯಕ್ಷರು ಕೂಡ ಆದರು.
ಪ್ರೆಸಿಡೆಂಟ್ ಆದಮೇಲೆ ಅಣ್ಣ ಲವಲವಿಕೆಯಿಂದ ಓಡಾಡಲು ಶುರುಮಾಡಿದರು. ಅಮ್ಮನಿಗೆ ಈ ಓಡಾಟ ಇಷ್ಟವಿಲ್ಲ ಅಂತ ಗೊತ್ತಿದ್ದರಿಂದ, ಕಾರನ್ನು ಬಿಟ್ಟು, ಅವರ ಸ್ಕೂಟರ್ ನಲ್ಲೇ ಓಡಾಡುತ್ತಿದ್ದರು. ನಾವಂತೂ ಪಂಚಾಯ್ತಿಯಲ್ಲಿ ಏನು ನೆಡೆಯುತ್ತಿದೆ ಅಂತ ಅಪ್ಪಿ ತಪ್ಪಿಯೂ
ಕೇಳುತ್ತಿರಲಿಲ್ಲ. ಮೈಸೂರಿನಲ್ಲಿರುವ ನಮ್ಮ ಸರೋಜಿನಿ ಚಿಕ್ಕಮ್ಮ ತಮಾಷೆ ಮಾಡ್ತಿದ್ರು: `ಏನು ಪಂಚಾಯಿತಿ ಪ್ರೆಸಿಡೆಂಟ್ ಮಕ್ಕಳೋ ನೀವು? ನಮ್ಮ ಮಂಡ್ಯ ಕಡೆ ಬಂದು ನೋಡಬೇಕು, ಪ್ರೆಸಿಡೆಂಟ್ ಮಕ್ಕಳ ಗತ್ತು ಹ್ಯಾಗಿರಬೇಕು, ಅಂತ.’
ಊರಿಗೆ ಹೋದಾಗಲೂ ಅಷ್ಟೆ, ಅಣ್ಣನ ಜೊತೆ ಹೋದಾಗ ಏನಾದರೂ ಪಂಚಾಯ್ತಿ ಕೆಲಸಗಳಿದ್ದರೆ, ನಾವು ಹೊರಗಡೆ ಕಾರಿನಲ್ಲೇ ಕೂತಿರುತ್ತಿದ್ದೆವು. ಒಂದು ಸಲ ಮೂಡಿಗೆರೆಯ ಎಂ.ಎಲ್.ಎ ಆಗಿದ್ದ ಮೋಟಮ್ಮನ ಮನೆಗೆ ಹೋಗಿದ್ದೆವು. ಅಣ್ಣನನ್ನು ಕಳುಹಿಸಲು ಬಾಗಿಲವರೆಗೆ ಬಂದ ಮೋಟಮ್ಮ, `ಮಾಧು ಗೌಡರೆ, ನೀವೇನೋ ಬಂದು ನಿಮ್ಮ ಪಂಚಾಯ್ತಿಗೆ ಅಂತ ಕೆಲಸ ಮಾಡಿಸಿಕೊಂಡು ಹೋಗ್ತೀರಾ… ಗೌತಳ್ಳಿಯಿಂದ, ಘಟ್ಟದಳ್ಳಿವರೆಗಿನ ಹುಡುಗರು ಬಿಜೆಪಿಗೆ ಓಟು ಒತ್ತಿದರೆ, ನಾನು ಮನೆಗೆ ಹೋಗ್ತೀನಿ, ಅಷ್ಟೆ,’ ಅಂದರು. ಅಣ್ಣ ಪೆಚ್ಚಾಗಿ ನಕ್ಕಿದನ್ನು ಬಿಟ್ಟರೆ ಇನ್ನೇನೂ ಮಾಡಲಿಲ್ಲ. ಮುಂದಿನ ಚುನಾವಣೆಯಲ್ಲಿ ಮೋಟಮ್ಮ ಹೇಳಿದ್ದು ನಿಜವಾಗಿತ್ತು.
ಇನ್ನೊಂದು ಸಲ ಅಣ್ಣನ ಜೊತೆ ಮೂಡಿಗೆರೆಗೆ ಹೊರಟಾಗ, ಪಂಚಾಯ್ತಿ ಆಫೀಸಿನ ಎದುರು ಕಾರಿನಲ್ಲಿ ಕೂತಿದ್ದೆ. ಅಣ್ಣ ಹೋಗಿ ಹತ್ತು ನಿಮಿಷಗಳಿಗಿಂತ ಜಾಸ್ತಿಯಾಗಿತ್ತು. ಪಂಚಾಯ್ತಿ ಆಫೀಸಿನೊಳಗಿಂದ ಜೋರಾಗಿ ಧ್ವನಿ ಕೇಳಿಸಲು ಶುರುವಾಯ್ತು. ನಮ್ಮೂರಲ್ಲಿ ಇಷ್ಟೊಂದು ಜೋರಾಗಿ ಯಾರಪ್ಪಾ ಗಲಾಟೆ ಮಾಡುವವರು ಅಂದ್ಕೊಂಡು ಸುಮ್ಮನೆ ಹತ್ತಿರ ಹೋಗಿ ಬಗ್ಗಿ ನೋಡಿದೆ. ಅಪ್ಪನಿಗೆ  ವರಸೆಯಲ್ಲಿ ಚಿಕ್ಕಪ್ಪನಾಗುವ ಚಂದ್ರೇಗೌಡರು ಮೇಜು ಕುಟ್ಟಿ ಕೂಗಾಡುತ್ತಿದ್ದರು. ಪಂಚಾಯ್ತಿ ಸೆಕ್ರಟರಿ ತಲೆ ಅಲ್ಲಾಡಿಸುತ್ತಾ ನಿಂತಿದ್ದರೆ, ಅಣ್ಣ, `ಚಿಕ್ಕಯ್ಯ, ಇರ್ಲಿ ಬಿಡಿ. ನೋಡೋಣ, ಏನು ಮಾಡೋಕೆ ಆಗುತ್ತೆ ಅಂತ. ಹೀಗೆ ಕೂಗಾಡಿದ್ರೆ ಬಿ.ಪಿ ರೈಸ್ ಆಗುತ್ತೆ ಅಷ್ಟೆ,’ ಅಂತ ಸಮಾಧಾನ ಮಾಡ್ತಿದ್ದರು.
ಅಲ್ಲೀವರೆಗೆ ಚಂದ್ರ ಚಿಕ್ಕಯ್ಯ ಸಿಟ್ಟುಮಾಡಿಕೊಂಡಿದ್ದನ್ನು ನಾನು ನೋಡಿರಲಿಲ್ಲ. ಮೂಡಿಗೆರೆ ಕಡೆ ಹೋಗುತ್ತ, ಮೊದಲ ಸಲ ಧೈರ್ಯ ಮಾಡಿ, ಪಂಚಾಯ್ತಿ ವಿಷಯ ಮಾತಾಡಿದೆ:
 `ಅಣ್ಣ, ಚಂದ್ರ ಚಿಕ್ಕಯ್ಯ ಪಂಚಾಯ್ತಿ ಮೆಂಬರಾ?’
`ಈಗಿಲ್ಲ. ಮುಂಚೆ ಪಂಚಾಯ್ತಿ ಛೇರ್ಮನ್ ಅಂತ ಇತ್ತಲ್ಲ, ಆಗ ಸುಮಾರು ವರ್ಷ ಅವರು ಛೇರ್ಮನ್ ಆಗಿದ್ದರು. ಈಗಿನ ಥರ ಎಲೆಕ್ಷನ್ ಇರಲಿಲ್ಲವಲ್ಲ. ಊರವರೇ ಸೇರಿ ನಿರ್ಣಯ ಮಾಡ್ತಿದ್ರು,’ ಅಂತ ಹೇಳಿದ್ರು.
`ಮತ್ತೆ ಪಂಚಾಯ್ತಿ ಆಫೀಸಲ್ಲಿ ಬಂದು ಕೂಗಾಡ್ತಿದ್ರೂ?’ ಅಂದೆ.
`ಅದಾ? ಅದು ನೆಡೀತಿರ್ತದೆ. ಅವರಿಗೂ ಇಷ್ಟು ವರ್ಷ ಪಂಚಾಯ್ತಿಯಲ್ಲಿ ಇದ್ದೂ ಇದ್ದೂ, ಪಂಚಾಯ್ತಿ ಕೆಲಸ ಹೇಗೆ ನೆಡೀಬೇಕೂ ಅಂತ ಒಂದು ಕಾನ್ಸೆಪ್ಟ್ ಇರುತ್ತೆ. ಈಗ ಸುಮಾರು ಬದಲಾವಣೆ ಆಗಿ, ಕಾನೂನುಗಳೆಲ್ಲ ಬಂದಿವೆ. ವ್ಯತ್ಯಾಸ ಆದಾಗ ಅವರಿಗೆ ಸಿಟ್ಟು ಬರುತ್ತೆ, ಅಷ್ಟೆ,’ ಅಂದರು.
ಕೇಶವ ಮೂರ್ತಿ ಹೇಳಿದ್ದ ಚಮಡಾ ಸುಲಿಯೋ ಚಂದ್ರೇಗೌಡರು ಯಾರು ಅಂತ ಆಗ ಅರ್ಥವಾಯಿತು. ನಾನು ಮುಂದೇನೂ ಮಾತಾಡಲಿಲ್ಲ.
ಅಣ್ಣನಂತೂ ಪಂಚಾಯ್ತಿ ಕೆಲಸವನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಅಂತ ಅನ್ನಿಸಿತ್ತು. ಹೆಚ್ಚೇನೂ ಅನುದಾನ ಸಿಗದ ಕಾಲವದು. ಆದರೆ, ಅಣ್ಣ ಏನೇ ಕೆಲಸ ತೆಗೆದುಕೊಂಡು ಹೋದರೆ, ಪಕ್ಷ ಭೇದ ಮರೆತು ಮೋಟಮ್ಮ ಮತ್ತು ಜಗನ್ನಾಥ ಚಿಕ್ಕಪ್ಪ, ಎಲ್ಲಿಂದಾದರೂ ಅನುದಾನ ಒದಗಿಸುತ್ತಿದ್ದರಂತೆ. ಪಂಚಾಯ್ತಿ ಕೆಲಸದ ಜೊತೆ, ಊರಲ್ಲಿ ಯಾರಿಗಾದರೂ ಹುಶಾರಿಲ್ಲದಿದ್ದರೆ, ಅಣ್ಣನಿಗೇ ಕರೆ ಬರುತ್ತಿತ್ತು. ಅಣ್ಣ ಮತ್ತೆ ಖುಶಿಯಾಗಿದ್ದಾರೆ ಅಂತ ಅನ್ನಿಸ್ತಿತ್ತು.
ಮುಂದಿನ ಚುನಾವಣೆಗೆ ಅಣ್ಣ ನಿಲ್ಲಲಿಲ್ಲ. ಒಂದಾರು ತಿಂಗಳು ಬಿಟ್ಟು, ಊರಿಗೆ ಹೋದಾಗ ನಾನೇ ಕೇಳಿದೆ: `ಅಣ್ಣ, ಮತ್ತೆ ಯಾಕೆ ಪಂಚಾಯ್ತಿ ಎಲೆಕ್ಷನ್ ಗೆ ನಿಲ್ಲಲಿಲ್ಲ?’ ಅಂತ.
`ಸುಂದರ ಮತ್ತೆ ಸೋಮ ಬಂದು ಹೇಳಿದ್ರು. ನಾನೇ ಬೇಡ ಅಂದೆ,’ ಅಂದ್ರು.
`ಯಾಕಣ್ಣಾ? ಒಂದೇ ಟರ್ಮ್ ಗೆ ಸಾಕಾಗಿ ಹೋಯ್ತಾ?’ ಅಂತ ನಕ್ಕೆ
`ಇಲ್ಲಿ ಫಂಡ್ಸ್ ಕಮ್ಮಿ ಇದ್ರೂ ಒಳ್ಳೇ ಕೆಲಸ ಮಾಡಬಹುದು. ಆದ್ರೆ ಕೆಲವು ವಿಷಯಗಳು ನಮಗೆ ಸರಿ ಹೊಂದೋದಿಲ್ಲ. ಅದೂ ಅಲ್ದೆ, ನಮಗ್ಯಾಕೆ ಬೇಕು ಈ ಪಾಲಿಟಿಕ್ಸ್? ಅಂತ’ ಅಂದ್ರು.
`ಅದೂ ಸರಿ,’ ಅಂತ ಹೇಳಿ ಸುಮ್ಮನಾದೆ.


ಮಾಕೋನಹಳ್ಳಿ ವಿನಯ್ ಮಾಧವ

1 ಕಾಮೆಂಟ್‌: