ನಾಯಿ
ಮಾತಾಡ್ದಾಗ…..
`ಏನ್ಮಾಡ್ತಿದ್ದೀಯೋ
ರಾಜೀವ?’ ಅಂತ ಸುಮ್ಮನೆ ಜಿ-ಮೇಲ್ ಚಾಟ್ ನಲ್ಲಿ ಬರೆದೆ.
`ಏನಿಲ್ಲ
ಸರ್, ಬೆಳಗ್ಗೆ ಆಗುಂಬೆಯಿಂದ ಬಂದೆ. ಸುಮ್ಮನೆ ಯಾವುದೋ ಸ್ಟೋರಿ ಹುಡುಕ್ತಾ ಇದ್ದೀನಿ,’ ಅಂತ ಬರೆದ.
`ನಾಯಿ
ಜೊತೆ ಕಾಡಲ್ಲಿ ವಾಕಿಂಗ್ ಹೋಗಿದ್ದಾ?’ ಅಂತ ಕೇಳ್ದೆ.
`ಹೋಗಿದ್ದೆ
ಸರ್,’ ಅಂದ.
`ಜಾಸ್ತಿ
ಹೆದರಿಸ್ಬೇಡ ಕಣೋ ನಾಯಿನ,’ ಅಂದೆ.
`ಇಲ್ಲ
ಸರ್. ನಾನು ಸುಸ್ತಾಗಿ ಮರದ ಕೆಳಗೆ ಕೂತಾಗ, ಎದ್ರುಗಡೆನೇ ಹೊಟ್ಟೆ ಮೇಲೆ ಮಲ್ಕೊಂಡು, ನನ್ನ ಮುಖನೇ
ನೋಡ್ತಿತ್ತು. ಏನೋ ಹೇಳೋಕೆ ಹೊರಟಂಗೆ ಕಾಣ್ತಿತ್ತು,’ ಅಂದ.
`ಅಲ್ವೋ…
ನೀನೇನಾದ್ರು ಮಾಡಿದ್ರೆ ಅಂತ ಹೆದರಿಕೇಲಿ ಕಣ್ಣು ತೆಕ್ಕೋಂಡೇ ಮಲಗಿತ್ತು ಅಂತ ಕಾಣುತ್ತೆ,’ ಅಂದೆ.
ಆ ಕಡೆಯಿಂದ ಹ..ಹ..ಹ.. ಅಂತ ಬರೆದ, ರಾಜೀವ.
ತೇಜಸ್ವಿಯ
ಕಥೆಗಳಲ್ಲಿ ನಿನಗೇನು ಇಷ್ಟ? ಅಂತ ಕೇಳಿದ್ರೆ, ರಾಜೀವ ಕಲ್ಕೋಡನ ಬಾಯಲ್ಲಿ ಮೊದಲು ಬರೋದು ಅವರ ನಾಯಿ
`ಕಿವಿ’. ಅದೇನು ಕಥೆನೋ ಏನೋ, ಕಿವಿ ಬಗ್ಗೆ ಯಾರಾದ್ರು ಪಿ.ಎಚ್.ಡಿ. ಮಾಡ್ಬಹುದು ಅಂದ್ರೆ, ನನ್ನ ಪ್ರಕಾರ
ರಾಜೀವ ಮಾತ್ರ. ಸಿಕ್ಕಾಬಟ್ಟೆ ಅದರ ಬಗ್ಗೆ ಮಾತಾಡ್ತಾನೆ.
ರಾಜೀವ
ಹೇಳಿದ್ರಲ್ಲಿ ಸುಳ್ಳೇನೂ ಇರಲಿಲ್ಲ. ಈ ನಾಯಿಗಳೇ ಹೀಗೆ… ತುಂಬಾ ಹಚ್ಕೊಂಡು ಬಿಡ್ತವೆ. `ಅಪ್ಪ ನಂಗೂ
ಒಂದು ನಾಯಿ ಬೇಕು’ ಅಂತ ನನ್ನ ಮಗಳು ಸೃಷ್ಟಿ ಕೇಳ್ದಾಗ, ತುಂಬಾನೇ ಬೇಜಾರಾಗುತ್ತೆ. ಈ ಬೆಂಗಳೂರಿನ
ಫ್ಲ್ಯಾಟ್ ಗಳಲ್ಲಿ ನಾಯಿ ಸಾಕೋಕೆ ಆಗಲ್ಲ. ನಮ್ಮತ್ತೆ ಮನೆ ಹತ್ರ ಜಾಗ ಇದ್ರೂ, ಅವ್ರಿಗೆ ನಾಯಿ ಸಾಕೋದು
ಇಷ್ಟ ಇಲ್ಲ. ಒಟ್ಟು ಸೃಷ್ಟಿಗೆ ನಾಯಿಗಳು ಸಿಗೋದು ರಜಕ್ಕೆ ಮೂಡಿಗೆರೆಗೆ ಹೋದಾಗ ಮಾತ್ರ. ನಮ್ಮ ನಾಯಿಗಳ
ಜೊತೆ ಅವಳು ಮುಖ, ಮೂತಿ ನೆಕ್ಕಿಸಿಕೊಳ್ಳುವಾಗ ನಾನು ನಗ್ತಾ ಇರ್ತೀನಿ. ಚಿಕ್ಕಂದಿನಲ್ಲಿ ನಾನೂ ಹಾಗೇ
ಮಾಡಿಸ್ಕೊಳ್ತಿದ್ದೆ. ಅಂಬಿಕಾ ಮಾತ್ರ ಸಿಡಿಮಿಡಿಗೊಳ್ತಾಳೆ.
ನಾಯಿನ
ಕಂಡ್ರೆ ನಂಗಾಗೊಲ್ಲ ಅಂತ ಹೇಳೋರ್ನ ನೋಡಿದ್ರೆ ನಂಗೆ ಅಯ್ಯೋ ಅನ್ಸುತ್ತೆ. ಅವರಿಗೆ ಜೀವನದಲ್ಲಿ ಏನು
ಕಳ್ಕೊಂಡಿದ್ದೀವಿ ಅಂತ ಗೊತ್ತಿರೋದಿಲ್ಲ.
ನಂಗಾಗ ಐದು ವರ್ಷ ಅಂತ ಕಾಣುತ್ತೆ… ಪುಟ್ಟದೊಂದು ಪೊಮೇರಿಯನ್
ನಾಯಿ ಮನೆಗೆ ಬಂದಾಗ. ಆಗ ತಾನೆ ಸಕಲೇಶಪುರದಿಂದ, ಕೇರಳಾಪುರದ ಆಸ್ಪತ್ರೆಗೆ ಅಣ್ಣನಿಗೆ ಟ್ರಾನ್ಸ್ ಫರ್
ಆಗಿತ್ತು. ಆಗಿನ ಕಾಲಕ್ಕೆ ತುಂಬಾ ಹಿಂದುಳಿದಿದ್ದ ಕೇರಳಾಪುರದಲ್ಲಿ, ರಸ್ತೆಯಲ್ಲಿರುವ ನಾಯಿಗಳನ್ನು
ಬಿಟ್ಟರೆ, ಯಾರೂ ಈ ಥರದ ನಾಯಿಗಳನ್ನು ನೊಡಿರ್ಲಿಲ್ಲ. ಪುಟ್ಟಗೆ ಒಂದು ಉಲ್ಲನ್ ಉಂಡೆಯಂತಿದ್ದ ಜೂಲಿಯನ್ನು
ತುಂಬಾ ಜನ ಮೊಲದ ಮರಿ ಅಂತಾನೇ ಅನ್ಕೊಂಡಿದ್ರು. ನಾನೂ ಮತ್ತೆ ವೆಂಕಟೇಶಣ್ಣ ಇಬ್ಬರೂ ಹಾಸ್ಟೆಲ್ ಗೆ
ಹೋದ ಮೇಲೆ, ಜೂಲಿ ಅಮ್ಮನ ಹಿಂದೆ-ಮುಂದೆ ಸುತ್ಕೊಂಡೇ ಇರ್ತಿತ್ತು. ಕೊನೆಗೆ ಅಮ್ಮನ್ನ ಎಷ್ಟು ಹಚ್ಕೊಂಡಿತ್ತು
ಅಂದ್ರೆ, ಅಮ್ಮ ಎದುರಲ್ಲಿದ್ದಾರ ಇನ್ಯಾರ ಮಾತೂ ಕೇಳ್ತಿರಲಿಲ್ಲ.
ಜೂಲಿ
ಹಾಕಿದ್ದು ಒಂದೇ ಮರಿ… ಪಪ್ಪಿ. ಅದೂ ಕೂಡ ನಮ್ಮ ಮನೆಯಲ್ಲೇ ಕೊನೆಯವರೆಗೆ ಇತ್ತು. ಅಣ್ಣಂಗೆ ಎಲ್ಲಾ
ಕಡೆ ಟ್ರಾನ್ಸ್ ಫರ್ ಆಗಿ, ಕೊನೆಗೆ ನಮ್ಮ ತೋಟದ ಹತ್ತಿರದ ನಂದೀಪುರ ಆಸ್ಪತ್ರೆಗೆ ಬಂದಾಗಲೂ ಜೂಲಿ ಮತ್ತು
ಪಪ್ಪಿ ಇದ್ದವು. ಸಾಯೋ ದಿನ ಕೂಡ ಜೂಲಿ ಅಮ್ಮನ ಹಿಂದೆನೇ
ಸುತ್ತುತ್ತಾ ಇತ್ತಂತೆ. ಸಾಧಾರಣವಾಗಿ, ಬೆಳಗ್ಗೆ ತಿಂಡಿಯಾದ ಮೇಲೆ, ನಾಯಿಗಳನ್ನು ಕೂಡುತ್ತಿದ್ದರು.
ಅವತ್ತು ಮಾತ್ರ ತನ್ನ ಗೂಡಿಗೆ ಹೋಗೋಕ್ಕೆ ಜೂಲಿ ಒಪ್ಪಲೇ ಇಲ್ಲವಂತೆ. ಅಮ್ಮನೇ ಜೋರು ಮಾಡಿದ ಮೇಲೆ,
ಮನಸ್ಸಲ್ಲದ ಮನಸ್ಸಿನಿಂದ ಹೋಗಿದೆ. ಹೋಗಿ ಎರಡೇ ನಿಮಷದಲ್ಲಿ ಅದಕ್ಕೆ ಹಾರ್ಟ್ ಅಟ್ಯಾಕ್ ಆಗಿ ಸತ್ತು
ಹೋಗಿದೆ. ನಮ್ಮ ಮನೆಯ ಯಾವುದೇ ನಾಯಿ ಸತ್ತಾಗಲೂ ಅಮ್ಮನ ಗೋಳು ನೋಡೋಕ್ಕಾಗಲ್ಲ.
ಊರಿಗೆ
ಬಂದ ಮೇಲೆ ನಂಗೆ ಗೊತ್ತಾಗಿದ್ದು ಅಂದರೆ, ಎಲ್ಲರ ಮನೆಯಲ್ಲೂ ನಾಯಿಗಳನ್ನ ಸಾಕ್ತಾರೆ. ಈಗೆಲ್ಲ ಹ್ಯಾಗೋ
ಗೊತ್ತಿಲ್ಲ. ಆಗಂತೂ, ಆಳುಗಳ ಮನೆಯಲ್ಲೂ ಒಂದು ನಾಯಿಯನ್ನು ಮನೆ ಮಗನ ಹಾಗೆ ಸಾಕುತ್ತಿದ್ದರು. ಊಟಕ್ಕೆ
ಕೂತಾಗ, ಮೊದಲ ತುತ್ತನ್ನು ಬದಿಗಿಟ್ಟು ಊಟ ಮಾಡುತ್ತಿದ್ದರು. ಊಟ ಮುಗಿದ ಮೇಲೆ ಆ ತುತ್ತನ್ನು ನಾಯಿಗೆ
ಹಾಕುತ್ತಿದ್ದರು.
ಪ್ಲಾಂಟರ್
ಗಳು ಸಾಧಾರಣವಾಗಿ ಜಾತಿ ನಾಯಿಗಳನ್ನು ಸಾಕ್ತಿದ್ದರು. ನಾಯಿಗಳ ಬಗ್ಗೆ ತುಂಬಾ ಇಷ್ಟ ಇದ್ದವರು ಒಟ್ಟೊಟ್ಟಿಗೆ
ಬೇರೆ ಬೇರೆ ಜಾತಿಗಳ ನಾಯಿಗಳನ್ನು ಸಾಕುತ್ತಿದ್ದರು. ಮರಿ ಹಾಕೋ ಸಮಯಕ್ಕೆ, ಕಂತ್ರಿ ನಾಯಿಗಳ ಜೊತೆ
ಕೂಡಿಕೊಂಡು ಮರಿ ಮಾಡಿಕೊಳ್ಳದಂತೆ ನೋಡಿಕೊಳ್ಳೋದೆ ಒಂದು ಕೆಲಸ. ಆದ್ರೂ, ತಮ್ಮ ಜಾತಿಯದಲ್ಲದೆ, ಬೇರೆ
ಜಾತಿ ನಾಯಿಗಳ ಜೊತೆ ಕೂಡಿಕೊಂಡು, ಯಾವ್ಯಾವುದೋ ಬಣ್ಣ, ಆಕಾರಗಳಲ್ಲಿ ಹುಟ್ಟುವ ಮರಿಗಳಿಗೆ ಯಾವ ಜಾತಿ
ಪಟ್ಟ ಕಟ್ಟಬೇಕು ಅಂತ ಗೊತ್ತಾಗ್ತಿರ್ಲಿಲ್ಲ. ಒಟ್ಟಾರೆ, ನಾಯಿ ಜಾತಿಲಂತೂ ಬೆಳೀತಿದ್ವು.
ಪ್ರತೀ
ಮನೆಯಲ್ಲೂ, ಕಾಲ ಕಾಲಕ್ಕೆ ನಾಯಿಗಳು ಬಂದು ಹೋಗ್ತಿದ್ವು. ಅವುಗಳಲ್ಲಿ ಒಂದೆರೆಡು ಮಾತ್ರ ದಂತ ಕಥೆಗಳಾಗಿ,
ಅವುಗಳ ನೆನಪು ಮಾಲೀಕರ ಮನಸ್ಸಲ್ಲಿ ಕೊನೇವರೆಗೆ ಉಳಿದಿರುತ್ತಿದ್ದವು.
ನಮ್ಮ
ಕುಟುಂಬದಲ್ಲೂ ಈ ಥರದ ನಾಯಿ ಪ್ರಿಯರಿಗೇನೂ ಕಡಿಮೆಯಿರಲಿಲ್ಲ. ಅಣ್ಣನ ಚಿಕ್ಕಪ್ಪನಾದ ಶರಾವತಿ ಪುಟ್ಟೇಗೌಡರ
ಮನೆಯಲ್ಲಂತೂ, ನಾನು ಚಿಕ್ಕಂದಿನಿಂದ ಯಾವಾಗಲೂ ಕಡೇ ಪಕ್ಷ ನಾಲ್ಕೈದು ನಾಯಿಗಳಿರುವುದನ್ನು ನೋಡಿದ್ದೇನೆ.
ಆಲ್ಸೇಶನ್, ಡ್ಯಾಶ್ ಹೌಂಡ್, ಲ್ಯಾಬ್ರಡಾರ್, ಮುಧೋಳ್ ಮುಂತಾದ ನಾಯಿಗಳು ಯಾವಾಗಲೂ ಇರುತ್ತಿದ್ದವು.
ಬರೀ
ನಾಯಿಗಳಲ್ಲ. ಹಾಗೆ ನೋಡಿದರೆ, ಶರಾವತಿ ಮನೆ ಒಂಥರಾ ಪುಟ್ಟ ಜೂ ಅಂತಾನೇ ಹೇಳ್ಬಹುದು. ಅಜ್ಜ ಬದುಕಿದ್ದಾಗ,
ಆ ಮನೆಯಲ್ಲಿ ಸಾಕದ ಪ್ರಾಣಿಗಳಿಲ್ಲ. ಕೋತಿ, ಹಕ್ಕಿಗಳು, ಕಾಡು ಹಂದಿ ಮರಿಗಳು, ಕಾಡು ಕುರಿ, ಜಿಂಕೆ.
ಅಷ್ಟೇ ಅಲ್ಲ, ಒಂದ್ಸಲ ನರಿ, ಮತ್ತೊಂದ್ಸಲ ಮುಂಗುಸಿ
ಸಮೇತ ತಂದು ಸಾಕಿದ್ರು. ಆ ಮುಂಗುಸಿ ಇದ್ದಾಗಲೇ ಶರಾವತಿ
ಪ್ರಕಾಶಣ್ಣನ ಮಗಳು ತೇಜಸ್ವಿನಿ ಹುಟ್ಟಿದ್ದು. ಚಿಕ್ಕ ಮಗು ಮುಂಗುಸಿ ಜೊತೆ ಆಟಾಡೋದು ನೋಡಿ, ಮನೆಗೆ
ಬಂದವರು ಗಾಭರಿಯಾಗ್ತಿದ್ರು. ಆದ್ರೆ, ಮನೆಯವರಿಗೇನೂ ತಲೆಬಿಸಿ ಇರಲಿಲ್ಲ. ಮುಂಗುಸಿ ಜೊತೆ ಬೆಳೆದ ತೇಜು,
ಬೆಂಗಳೂರು ಸೇರಿ ಫ್ಲ್ಯಾಟ್ ನಲ್ಲಿ ಬದುಕೋದು ನೋಡಿದ್ರೆ, ವಿಪರ್ಯಾಸ ಅನ್ನಿಸುತ್ತೆ.
ಅದೆಲ್ಲ
ಹಾಳಾಗಿ ಹೋಗ್ಲಿ ಅಂದ್ರೆ, ಅಜ್ಜನಿಗೆ ಹಾವು ಹಿಡಿಯೋ ಹುಚ್ಚು ಕೂಡ ಇತ್ತು. ಅವುಗಳನ್ನು ಹಿಡ್ಕೊಂಡು
ಬಂದು ಮನೆಯಲ್ಲೆಲ್ಲಾದ್ರು, ಯಾವುದಾದ್ರು ಡಬ್ಬಿಯಲ್ಲೆಲ್ಲಾ ಇಟ್ಟಿರ್ತಿದ್ರಂತೆ. ಎಷ್ಟೋ ಸಲ ಗೊತ್ತಿಲ್ಲದೆ
ಆ ಡಬ್ಬಿಗಳನ್ನು ಎತ್ತಿದವರ ಪಾಡು ದೇವರಿಗೇ ಪ್ರೀತಿ. ಆದ್ರೆ, ನಾವು ಸರಿಯಾಗಿ ನೋಡೋ ಹೊತ್ತಿಗೆ ಅಜ್ಜನಿಗೆ
ಕಿವಿ ಕೇಳ್ತಿರ್ಲಿಲ್ಲ. ಕೋಲೂರಿಕೊಂಡು ಹೊರಗಡೆ ಓಡಾಡುವಾಗ, ಅವರ ಜೊತೆ ಯಾವಾಗಲು ಇರ್ತಿದ್ದೋಳು ಒಬ್ಬಳೇ:
ರೂಬಿ. ಅವಳೊಂದು ಸುಂದರವಾದ ಆಲ್ಸೇಶನ್ ನಾಯಿ. ಮನೆಯವರ್ಯಾರು, ಹೊರಗಿನರ್ಯಾರು ಅನ್ನೋದನ್ನ ತುಂಬ ಸೂಕ್ಷ್ಮವಾಗಿ
ಕಂಡು ಹಿಡೀತ್ತಿದ್ದಳು. ರೂಬಿ ಹತ್ತಿರದಲ್ಲಿದ್ದಾಗ, ಅಜ್ಜನ ಕೈನಿಂದ ಯಾರೂ, ಏನನ್ನೂ ತೆಗೆದುಕೊಳ್ಳುವಂತಿರಲಿಲ್ಲ.
ತೆಗೆದುಕೊಳ್ಳುವವರ ಕೈಯನ್ನೇ ಹಿಡೀತಿದ್ಲು.
ಶರಾವತಿ
ಮನೆ, ಪೆಡ್ಡೆ ಹುಡುಗರಿಗೆ ಒಂಥರಾ ಛತ್ರ ಇದ್ದಂತೆ. ಯಾರು, ಯಾವಾಗ ಬೇಕಾದ್ರೂ ಹೋಗಿ, ಊಟ ಮಾಡಿ, ಉಳಿದು
ಬರ್ತಿದ್ದೆವು. ಈಗ ಶರಾವತಿ ಮನೆ ಇಲ್ಲ. ಗಂಡು ಮಕ್ಕಳು ಪಾಲಾದ ಮೇಲೆ, ಎಲ್ಲರೂ ಬೇರೆ ಮನೆಗಳನ್ನು ಕಟ್ಟಿಕೊಂಡ್ರು.
ಅಷ್ಟು ದೊಡ್ಡ ಮನೆ ಸುಧಾರಿಸೋದು ಕಷ್ಟ ಅಂತ ಶಶಿಧರಣ್ಣ ಅದನ್ನು ಕೆಡವಿ, ಬೇರೆ ಮನೆ ಕಟ್ಟಿದರು. ಆದ್ರೂ,
ಆ ಕಡೆ ಹೋದಾಗ, ಅ ಮನೆಯಲ್ಲಿದ್ದ ಪಂಚು, ಜುಗುಣು ಮತ್ತೆ ಜುಂಗ ಅನ್ನೋ ನಾಯಿಗಳ ಮುಖ, ರೂಬಿಯ ಮುಖದ
ಜೊತೆ ನೆನಪಾಗುತ್ತೆ. ತೋಟದಲ್ಲಿ ತಿರುಗುವಾಗ ಯಾವ ಕಾಡು ಪ್ರಾಣಿಗಳನ್ನು ಕಂಡ್ರೂ ಅವುಗಳ ಮೇಲೆ ಎಗರಿ
ಬೀಳುತ್ತಿದ್ದ ಈ ನಾಯಿಗಳು, ಅವನ್ನೇ ಮನೆಗೆ ತಂದು
ಸಾಕಿದರೆ ಒಪ್ಪಿಕೊಂಡು ಸುಮ್ಮನಾಗಿಬಿಡುತ್ತಿದ್ದವು. ಕೆಲವು ಸಲ, ಅತೀ ಸಲುಗೆಯಿಂದಲೂ ಇರ್ತಿದ್ವು.
ಇವೆಲ್ಲಾ ಅವುಗಳಿಗೆ ಹೇಗೆ ಗೊತ್ತಾಗುತ್ತೆ ಅನ್ನೋದೆ ಪ್ರಶ್ನೆ.
ಜೂಲಿ,
ಪಪ್ಪಿ ಅಲ್ಲದೆ ನಮ್ಮ ಮನೆಲೂ ಸುಮಾರು ನಾಯಿಗಳು ಬಂದು ಹೋಗಿವೆ. ಅಮ್ಮನ್ನ ಕೇಳಿದ್ರೆ ಪ್ರತೀ ನಾಯಿದೂ
ಒಂದೊಂದು ಕಥೆ ಹೇಳ್ತಾರೆ. ಕಡೆಗೆ ಬಂದು ನಿಲ್ಲೋದು ಜಾಕ್ಸಿಯ ವಿಷಯದಲ್ಲಿ.
ಜಾಕ್ಸಿಯನ್ನು
ನಮ್ಮ ದೂರದ ಸಂಬಂಧಿಕರ ಮನೆಯಿಂದ ತಂದಿದ್ದೆವು. ತಾಯಿ ಆಲ್ಸೇಶನ್ ಆದರೂ, ತಂದೆ ಕಂತ್ರಿ. ಜಾಕ್ಸಿ ಆಲ್ಸೇಶನ್
ನಾಯಿಯಂತೆ ಇದ್ದರೂ, ಬೇರೆ ಆಲ್ಸೇಶನ್ ನಾಯಿಗಳಿಗೆ ಹೋಲಿಸಿದರೆ, ಸ್ವಲ್ಪ ಕುಳ್ಳ. ಅವನಿಗೆ ಆರೇಳು ತಿಂಗಳು
ತುಂಬುವುದರೊಳಗೆ, ತನ್ನ ಎಲ್ಲಾ ಗುಣಗಳನ್ನ ತೋರ್ಸೋಕೆ ಶುರುಮಾಡಿದ.
ಮೊದಲನೆಯದಾಗಿ,
ನಮ್ಮ ಮನೆಯ ಸುತ್ತ ಇರುವ ಜಾಗ ಬಿಟ್ಟರೆ, ಹೊರಗಡೆ ಹೋಗ್ತಿರ್ಲಿಲ್ಲ. ಹಾಗೇನೆ, ಹೊರಗಡೆಯಿಂದ ಬರುವ
ಮನುಷ್ಯ, ನಾಯಿ, ದನ ಯಾವುದನ್ನೂ ಸುಮ್ಮನೆ ಬಿಡ್ತಿರ್ಲಿಲ್ಲ. ಅಣ್ಣ, ಅಮ್ಮ, ವೆಂಕಟೇಶಣ್ಣ ಮತ್ತೆ ನನ್ನನ್ನು
ಬಿಟ್ಟರೆ, ಅದು ಹತ್ತಿರ ಬಿಟ್ಟುಕೊಂಡಿದ್ದು ನಮ್ಮ ರೈಟರ್ ಕೃಷ್ಣನನ್ನು ಮಾತ್ರ. ಅವನ ಹೆಂಡತಿ ರಾಧ
ಕೆಲವು ಸಲ ಜಾಕ್ಸಿಗೆ ಊಟ ಹಾಕುತ್ತಿದ್ದಳು. ಊಟ ಹಾಕುವಾಗ ಮಾತ್ರ ಸುಮ್ಮನಿರುತ್ತಿದ್ದ ಜಾಕ್ಸಿ, ಆಮೇಲೆ
ಮಾತಾಡ್ಸಿದ್ರೆ ಎಗರಿ ಬೀಳ್ತಿದ್ದ.
ಜಾಕ್ಸಿಯನ್ನು
ಬಿಟ್ತಿದ್ದಿದ್ದೇ ಸಾಯಂಕಾಲ ಆರು ಘಂಟೆಯಿಂದ ಬೆಳಗ್ಗೆ ಆರು ಘಂಟೆಯವರೆಗೆ. ಯಾರಾದರೂ ಮನೆ ಗೇಟಿನ ಹತ್ತಿರ
ಬಂದರೆ ಸಾಕು, ಜಾಕ್ಸಿ ಗೇಟಿನ ಹತ್ತಿರ ಹೋಗಿ ಬಾಲ ಅಲ್ಲಾಡಿಸೋಕೆ ಶುರು ಮಾಡ್ತಿದ್ದ. ಇದ್ಯಾವುದೋ ಸಾಧು
ನಾಯಿ ಅಂತ ಗೇಟ್ ತೆಗೆದು ಕಾಲು ಒಳಗಿಟ್ಟರೆ, ಕಥೆ ಮುಗೀತು. ಯಾವುದಾದರು ಕಾರು ಬಂದರಂತೂ, ಜಾಕ್ಸಿಗೆ
ವಿಪರೀತ ಸಿಟ್ಟು ಬರುತ್ತಿತ್ತು. ಕಾರು ಗೇಟಿನಿಂದ ಮನೆಯವರೆಗೆ ಬರುವವರೆಗೆ ಸುಮ್ಮನೆ ಕಾರಿನ ಜೊತೆ
ಓಡಿಬಂದು, ಕಾರು ನಿಂತ ತಕ್ಷಣ ಅದರ ಕೆಳಗೆ ಹೋಗಿ ಮಲಗಿ ಬಿಡ್ತಿತ್ತು. ಕಾರಿನಿಂದ ಯಾರಾದರೂ ಇಳಿದ್ರೆ,
ಅವರ ಕಥೆ ಏನಾಗುತ್ತೆ ಅಂತ ಎಲ್ಲಾರಿಗೂ ಗೊತ್ತಿತ್ತು. ಏನೇ ಮಾಡಿದ್ರೂ, ಕಾರಿನ ಕೆಳಗಿನಿಂದ ಹೊರಗೆ
ಬರುತ್ತಿರಲಿಲ್ಲ. ಎಷ್ಟೋ ಸಲ, ಮನೆಗೆ ಬಂದ ನೆಂಟರು ಕಾರಿನಿಂದ ಇಳಿಯದೇ ಹಾಗೇ ವಾಪಾಸ್ ಹೋಗಿದ್ದಾರೆ.
ಇದರ
ಕಥೆ ಗೊತ್ತಿದ್ದರಿಂದ, ನಮ್ಮ ಮನೆ ಕಡೆಗೆ ಯಾರೂ ಸಾಯಂಕಾಲ ಆರು ಘಂಟೆ ಮೇಲೆ ಬರ್ತಿರ್ಲಿಲ್ಲ. ಯಾರಾದರೂ
ಗೊತ್ತದ್ದವರು ಮತ್ತೆ ನೆಂಟರು ಫೋನ್ ಮಾಡಿ ಹೇಳಿ ಬರ್ತಿದ್ರು. ಅವರು ಬರೋದ್ರೊಳಗೆ, ಜಾಕ್ಸಿನ ಕೂಡಿ
ಹಾಕ್ತಿದ್ವಿ. ಅದಿದ್ದಷ್ಟು ವರ್ಷಾನೂ, ಕಾಫೀ ಸಮಯದಲ್ಲಿ ಕಣ ಕಾಯೋಕೂ ಜನ ಬಿಡ್ತಿರ್ಲಿಲ್ಲ. ಜಾಕ್ಸಿ
ಸತ್ತು ಎಷ್ಟೋ ವರ್ಷಗಳವರೆಗೆ ಸಾಯಂಕಾಲದ ಹೊತ್ತು ನಮ್ಮ ಗೇಟಿನೊಳಗೆ ಯಾರೂ ಕಾಲಿಡ್ತಿರ್ಲಿಲ್ಲ.
ಆದ್ರೆ
ನಂಗೆ ತುಂಬಾ ಇಷ್ಟವಾಗಿದ್ದು ಬಾಬಿ ಅನ್ನೋ ಡ್ಯಾಶ್ ಹೌಂಡ್ ನಾಯಿ. ಬೇರೆ ನಾಯಿಗಳ ಥರ ಇದು ನಮ್ಮ ಮನೆಯಲ್ಲಿ
ಹುಟ್ಟಲೂ ಇಲ್ಲ, ಬೆಳೆಯಲೂ ಇಲ್ಲ. ಇದು ಚಿಕ್ಕಮಗಳೂರಿನಲ್ಲಿ ಅಣ್ಣನ ಸೋದರ ಮಾವ ಚಿನ್ನಪ್ಪ ಗೌಡರ ಮನೆಯಲ್ಲಿತ್ತು.
ಯಾರ ಜೊತೆಯಲ್ಲೂ ಬೆರೆಯುತ್ತಿರಲಿಲ್ಲ. ಬಿಟ್ಟ ತಕ್ಷಣ ಬೀದಿ ನಾಯಿಗಳ ಜೊತೆ ಕುಸ್ತಿಗಿಳಿಯುತ್ತಿತ್ತು.
ಇದನ್ನು ಸುಧಾರಿಸಲು ಸಾಕು ಬೇಕಾಗಿ ಹೋಗಿ, ಈ ನಾಯಿನ ಏನು ಮಾಡ್ಬೇಕು ಅಂತ ಮನೆಯವರೆಲ್ಲ ಯೋಚನೆ ಮಾಡ್ತಿದ್ರು.
ಅಣ್ಣನಿಗೆ ಏನನ್ನಿಸ್ತೋ ಏನೋ, ಕಾರಲ್ಲಿ ಹಾಕ್ಕೊಂಡು ಮನೆಗೆ ತಂದೇ ಬಿಟ್ರು.
ತಮಾಶೆ
ಅಂದ್ರೆ, ಮೊದಮೊದಲಿಗೆ ಬಾಬಿಗೆ ತನಗೊಂದು ಹೆಸರಿದೆ ಅಂತಾನೇ ಗೊತ್ತಿರ್ಲಿಲ್ಲ. ಬಾಬಿ ಅಂತ ಕರೆದ್ರೂ,
ಸುಮ್ಮನೆ ಹೋಗ್ತಿತ್ತು. ಇದ್ದ ಇನ್ನೆರೆಡು ನಾಯಿಗಳ ಜೊತೆ ಜಗಳಕ್ಕೆ ನಿಲ್ತಿತ್ತು. ಅದನ್ನು ಯಾರೂ ಮುದ್ದು
ಮಾಡಿದ್ದಂತೆ ಕಾಣಲಿಲ್ಲ. ತಲೆ ಹತ್ತಿರ ಕೈ ಹಾಕಿದರೆ, ಎಗರಿ ಹಿಂದಕ್ಕೆ ಹಾರ್ತಿತ್ತು.
ಕೆಲವೇ
ದಿನಗಳಲ್ಲಿ ಅದಕ್ಕೆ ಇನ್ನೆರೆಡು ನಾಯಿಗಳ ಜೊತೆ ಹೊಂದ್ಕೊಂಡು ಬದುಕಬೇಕು ಅಂತ ಗೊತ್ತಾಯ್ತು ಅಂತ ಕಾಣುತ್ತೆ.
ಅವೆರೆಡು ಆಟ ಆಡುವಾಗ, ಇದೂ ಮೆಲ್ಲಗೆ ಹತ್ತಿರ ಹೋಗಲು ಶುರು ಮಾಡ್ತು. ಪಪ್ಪಿ, ಬ್ಲ್ಯಾಕಿ ಅಂತ ಕರೆದಾಗ,
ಹತ್ತಿರ ಬಂದು ಮುದ್ದು ಮಾಡಿಸಿಕೊಳ್ಳುವುದನ್ನೂ ನೋಡಿದ ಮೇಲೆ, ಮನುಷ್ಯರ ಹತ್ತಿರ ಹೋದ್ರೆ ತೊಂದ್ರೆ
ಇಲ್ಲಾ ಅಂತಾನೂ ಗೊತ್ತಾಯ್ತೇನೋ. ನಿಧಾನವಾಗಿ ಬಾಬಿ ಅಂತ ಕರೆದರೆ ಹತ್ತಿರ ಬರೋಕೆ ಶುರು ಮಾಡ್ತು. ಮುದ್ದು
ಮಾಡಿಸ್ಕೊಳ್ಳೋದನ್ನೂ ಕಲೀತು. ಆದರೆ, ಹೊರಗಡೆಯಿಂದ ಬರುವ ನಾಯಿಗಳನ್ನು ಮಾತ್ರ ಸಹಿಸ್ತಾ ಇರ್ಲಿಲ್ಲ.
ಬರ್ತಾ
ಬರ್ತಾ ಅಣ್ಣನನ್ನು ವಿಪರೀತ ಹಚ್ಚಿಕೊಳ್ಳೋಕೆ ಶುರು ಮಾಡ್ತು. ಆಸ್ಪತ್ರೆಗೆ ಹೊರಡುವ ಮೊದಲು ಒಂದು ಸುತ್ತು
ತೋಟಕ್ಕೆ ಅಣ್ಣ ಹೊರಟರೆ, ಇದೂ ಹೊರಡುತ್ತಿತ್ತು. ಮುಂದೊಂದೆರೆಡು ವರ್ಷ, ಅದರದೇ ಒಂದು ಸಣ್ಣ ಪ್ರಪಂಚ
ಸೃಷ್ಟಿಯಾಗಿ ಹೋಗಿತ್ತು.
ಅವತ್ತೊಂದು
ದಿನ ಅಣ್ಣ ಮನೆ ಹತ್ತಿರದ ಗದ್ದೆಗೆ ಹೋಗಿದ್ದರು. ಅಲ್ಲೇ ಮೇಲುಗಡೆ ಆಳುಗಳ ಮನೆಗಳೂ ಇವೆ. ಅಣ್ಣ ಗದ್ದೆ
ನೋಡಿಕೊಂಡು ವಾಪಾಸ್ ಹೊರಡುವಾಗ, ಮೂಲೆಯಲ್ಲೆಲ್ಲೋ ಬಾಬಿ ಬೊಗೊಳೋದು ಕೇಳಿದೆ. ಹಾವು ಅಥವಾ ಹೆಗ್ಗಣಗಳನ್ನು
ನೋಡಿದಾಗ ಅದು ಅಲ್ಲೇ ನಿಂತು ಬಿಡುತ್ತಿತ್ತು. ಆಮೇಲೆ ಮನೆಗೆ ಬರುತ್ತಿತ್ತು. ಒಂದೆರೆಡು ಸಲ ಬಾಬಿಯನ್ನು
ಕರೆದ ಅಣ್ಣ, ಆಸ್ಪತ್ರೆಗೆ ಹೊತ್ತಾಗುತ್ತೆ ಅಂತ ವಾಪಾಸ್ ಬಂದಿದ್ದಾರೆ.
ಅರ್ಧ
ಘಂಟೆ ಕಳೆದ ಮೇಲೆ ರೈಟರ್ ಕೃಷ್ಣ ಮನೆ ಹತ್ತಿರ ಬಂದು ಅಮ್ಮನನ್ನು ಕೋವಿ ಕೊಡುವಂತೆ ಕೇಳಿದ್ದಾನೆ. ಅವನ
ಹಿಂದೆನೇ ಅವನು ಸಾಕಿದ ಎರಡು ನಾಯಿಗಳೂ ಬಂದಿವೆ. ಎಲ್ಲೋ ಕೋತಿಗಳು ಬಂದಿರಬೇಕು, ಓಡಿಸೋಕೆ ಅಂತ ಅನ್ಕೊಂಡು
ಅಮ್ಮ ಕೇಪಿನ ಕೋವಿ ಕೊಟ್ಟಿದ್ದಾರೆ. ಕೋವಿಯನ್ನು ಲೋಡ್ ಮಾಡಿದವನೇ, ಅವನ ಹಿಂದೆ ನಿಂತಿದ್ದ ಒಂದು ನಾಯಿಗೆ
ಗುಂಡು ಹೊಡೆದು ಸಾಯಿಸಿದ್ದಾನೆ. ಅದನ್ನು ನೋಡುತ್ತಲೇ, ಇನ್ನೋಂದು ನಾಯಿ ಅಲ್ಲಿಂದ ಓಡಿ ಹೋಗಿದೆ.
ದಿನಾ
ಕೈ ತುತ್ತು ಹಾಕಿ ಸಾಕಿದ ನಾಯಿಗೆ ಯಾಕೆ ಗುಂಡು ಹೊಡೆದ ಅಂತ ಅಮ್ಮನಿಗೆ ಮೊದಲು ಅರ್ಥವಾಗಿಲ್ಲ. ಮತ್ತೆ
ಕೋವಿಯನ್ನು ಲೋಡ್ ಮಾಡುತ್ತಿದ್ದ ಕೃಷ್ಣನಿಗೆ ಕೇಳಿದಾಗ ವಿಷಯ ಗೊತ್ತಾಯ್ತು: ಹೆಗ್ಗಣದ ಹಿಂದೆ ಹೋದ
ಬಾಬಿ, ಸೀದ ಕೃಷ್ಣನ ಮನೆಯ ಹತ್ತಿರ ಹೋಗಿದೆ. ಅಲ್ಲಿದ್ದ ಈ ಎರಡು ನಾಯಿಗಳಿಗೂ, ಬಾಬಿಗೂ ಹಳೇ ದ್ವೇಷ
ಇತ್ತು. ಎರಡೂ ನಾಯಿಗಳು ಸೇರಿ ಬಾಬಿಯ ಮೇಲೆ ಬಿದ್ದಿವೆ. ಸ್ವಲ್ಪ ಹೊತ್ತು ಕಚ್ಚಾಡಿದರೂ, ಕುಳ್ಳಗಿದ್ದ
ಬಾಬಿ ಎರಡೂ ನಾಯಿಗಳ ಮಧ್ಯ ಸರಿಯಾಗಿ ಸಿಕ್ಕಿಕೊಂಡಿದೆ. ಕೃಷ್ಣನ ತಾಯಿ ದೊಣ್ಣೆ ತಗೊಂಡು ಹೊಡೆದರೂ,
ಎರಡೂ ನಾಯಿಗಳು ಬಾಬಿಯನ್ನು ಬಿಡಲಿಲ್ಲ. ಕೊನೆಗೆ ಬಾಬಿಯನ್ನು ಕೊಂದೇ ಹಾಕಿವೆ.
ನಮ್ಮ
ಮನೆಯ ಎಲ್ಲಾ ನಾಯಿಗಳಂತೆ, ಬಾಬಿಯನ್ನು ಕೂಡ ಕೃಷ್ಣ ಹಚ್ಚಿಕೊಂಡಿದ್ದ. ಅದಕ್ಕಿಂತ ಹೆಚ್ಚಾಗಿ, ತನ್ನ
ಮನೆ ನಾಯಿಗಳು ಗೌಡರ ಮನೆ ನಾಯಿಯನ್ನು ಕೊಂದು ಹಾಕಿದೆ ಅಂತ ಹೇಗೆ ಹೇಳೋದು. ಅದೇ ಸಿಟ್ಟಿನಲ್ಲಿ ಬಂದು
ತಾನೇ ಕೈ ತುತ್ತು ತಿನ್ನಿಸುತ್ತಿದ್ದ ನಾಯಿಗೆ ಗುಂಡು ಹೊಡೆದಿದ್ದ.
ಅಮ್ಮನಿಗಂತೂ,
ಬಾಬಿಗಾಗಿ ಅಳ್ಬೇಕಾ, ಇಲ್ಲಾ ಕೃಷ್ಣನಿಗೆ ಬೈಬೇಕಾ ಅಂತ ಗೊತ್ತಾಗಿರಲಿಲ್ಲ. ಕೊನೆಗೆ ಕೋವಿ ಕಿತ್ಕೊಂಡು,
ಇನ್ನೊಂದು ನಾಯಿಗೆ ಏನೂ ಮಾಡ್ಬೇಡ ಅಂತ ಕೃಷ್ಣನಿಗೆ ಹೇಳಿ ಕಳುಹಿಸಿದರು. ಸಿಟ್ಟಲ್ಲಿ ಸಾಕಿದ ನಾಯಿಗೆ
ಗುಂಡೇನೋ ಹೊಡೆದ. ಆದರೆ, ಅದರ ನೆನಪಿಂದ ಹೊರಗೆ ಬರೋಕೆ ಕೃಷ್ಣನಿಗೆ ತುಂಬಾನೆ ಸಮಯ ಬೇಕಾಯ್ತು.
ಆಗಾಗ
ಅನ್ನಿಸ್ತಿತ್ತು: ಬಾಬಿನ ನಾವು ತರದೇ ಹೋಗಿದ್ದರೆ, ಇನ್ನೂ ನಾಲ್ಕಾರು ವರ್ಷ ಎಲ್ಲಾದ್ರೂ ಬದುಕ್ಕೊಂಡಿರ್ತಿತ್ತೇನೋ,
ಅಂತ……..
ಮಾಕೋನಹಳ್ಳಿ
ವಿನಯ್ ಮಾಧವ್
www.ekanasu.com
ಪ್ರತ್ಯುತ್ತರಅಳಿಸಿ