ಶನಿವಾರ, ಮೇ 12, 2012

ಶ್ವಾನ ಪುರಾಣ - 2


ಪಿಂಕಿ ಸಂತತಿ ಇನ್ನೂ ಉಳಿದಿದವೆಯಾ?...

ರಜಾ ದಿನಗಳಲ್ಲಿ ನಾನು ಕಾಫೀ ತೋಟಕ್ಕೆ ಹೋಗುವಾಗ ಕೋವಿ ತಗೊಂಡ ತಕ್ಷಣ ಅಮ್ಮಂಗೂ, ನಂಗೂ ಶುರುವಾಗ್ತಿತ್ತು ಗಲಾಟೆ. ಸ್ವಲ್ಪ ಹೊತ್ತು ಜಗಳವಾದ ಮೇಲೆ, ತೋಟಾ ಕೋವಿ ಬಿಟ್ಟು ಕೇಪಿನ ಕೋವಿ ಹಿಡ್ಕೊಂಡು, ಗೊಣಗುತ್ತಾ ಹೊರಡ್ತಿದ್ದೆ. ದಿನಾ ಏನೂ ಸಿಗದಿದ್ರೂ, ತೋಟಗಳಲ್ಲಿ ಆಗಾಗ ಸಿಗುವ ಕಾಡು ಕೋಳಿ, ಕಾಡು ಕುರಿ, ಆಡಲಕ್ಕಿಗಳನ್ನು ಹೊಡೀಬೇಕು ಅಂತ.
ಒಂದೆರೆಡು ಸಲ ಆಡಲಕ್ಕಿ ಹೊಡೆದು ಅಮ್ಮನ ಕೈಲಿ ಬೈಸಿಕೊಂಡಿದ್ದು ಬಿಟ್ಟರೆ, ಅಂಥಾ ಶಿಕಾರಿಯೇನು ಮಾಡಿದ್ದು ನೆನಪಿಲ್ಲ. ಕಾಡು ಹಂದಿಯಂತೂ ನಾನು ಹೊಡೆದೇ ಇಲ್ಲ. ಜಗಳ ಆಡಿ ಕೇಪಿನ ಕೋವಿ ತಗೊಂಡು ಹೊರಟಾಗ ಸಿಟ್ಟೇ ಬರುತ್ತಿತ್ತು. ತೋಟಾ ಕೋವಿಯಾದ್ರೆ ಡಬಲ್ ಬ್ಯಾರೆಲ್, ಮತ್ತೆ ಎರಡು ತೋಟಾ ಒಟ್ಟಿಗೆ ಹಾಕಿ, ಒಂದರ ಹಿಂದೆ ಒಂದು ಹೊಡೆಯಬಹುದು. ಕೇಪಿನ ಕೋವಿಯನ್ನ ಲೋಡ್ ಮಾಡೋದೇ ಒಂದು ಸರ್ಕಸ್.
ಮೊದಲು ರಂಜಕ ತುಂಬಬೇಕು. ಆಮೇಲೆ ಅದಕ್ಕೆ ತೆಂಗಿನ ಕತ್ತ ಹಾಕಿ ಚೆನ್ನಾಗಿ ಪ್ಯಾಕ್ ಮಾಡ್ಬೇಕು. ಅದಾದ ಮೇಲೆ ಚರೆ (ಸೈಕಲ್ ಚಕ್ರದಲ್ಲಿರುವ ಬೇರಿಂಗ್ ಬಾಲ್ ಗಳು) ಹಾಕಬೇಕು. ಮತ್ತೆ ಅದನ್ನು ಕತ್ತದಲ್ಲಿ ಪ್ಯಾಕ್ ಮಾಡ್ಬೇಕು. ಹಕ್ಕಿಗಳನ್ನು ಹೊಡೆಯೋಕೆ ಇದು ಸಾಕು. ಆದರೆ, ದೊಡ್ಡ ಪ್ರಾಣಿಗಳು ಸಿಕ್ಕಿದರೆ ಅಂತ ಮುಂಜಾಗ್ರತೆಯಿಂದ ಒಂದೆರೆಡು ಬಾಕ್ಸೈಟ್ (ದೊಡ್ಡ ಬೇರಿಂಗ್ ಬಾಲ್ ಗಳು) ಹಾಕಬೇಕು. ಅದಾದ ಮೇಲೆ ಹಿಂದುಗಡೆ ಕೇಪ್ ಸಿಕ್ಕಿಸಿ ಹೊಡೀಬೇಕು.
ಅದರ ಪ್ರಮಾಣನೂ ಸರಿಯಾಗಿ ಇರಬೇಕು. ಕಮ್ಮಿಯಾದ್ರೆ ಹೊಡೆಯೋದಿಲ್ಲ. ಜಾಸ್ತಿಯಾದರೆ, ಕೋವಿ ಹೊಡೆದವನಿಗೇ ತಿರುಗಿ ಒದ್ದು, ಅವನ ಭುಜ ಮುರಿಯೋ ಸಾಧ್ಯತೆನೂ ಇದೆ. ಗುರಿ ತಪ್ಪಿದರೆ, ಇನ್ನೊಂದು ಸಲ ಲೋಡ್ ಮಾಡೋಕೆ 10-15 ನಿಮಿಷವಾದ್ರೂ ಬೇಕು. ಅದೇ ತೋಟಾ ಕೋವಿಯಲ್ಲಾದರೆ, ಒಂದರ ಹಿಂದೆ ಇನ್ನೊಂದು ಹೊಡೆಯಬಹುದು. ಅದಕ್ಕೆ ಸರಿಯಾಗಿ ನಂಜೊತೆ ಶಿಕಾರಿ ನಾಯಿಯೂ ಇರಲಿಲ್ಲ.
ಒಂದ್ಸಲ ಹೀಗೆ ಆಗಿತ್ತು. ನಾನು ಕೇಪಿನ ಕೋವಿಯಲ್ಲಿ ಗುಂಡು ಹೊಡೆಯೋಕೆ ಕಲ್ತಿದ್ದು ನಮ್ಮ ಮನೆ ಹತ್ತಿರ ಅಂಗಡಿ ಇಟ್ಟುಕೊಂಡಿದ್ದ ಇದಿನಬ್ಬನ ಸಂಬಂಧಿ ಮೈದಾಲಿ ಜೊತೆ. ಬ್ಯಾರಿಯಾದ್ದರಿಂದ ಶಿಕಾರಿ ಮಾಡಿದ ಪ್ರಾಣಿಗಳ ಮಾಂಸ ತಿನ್ನುತ್ತಿರಲಿಲ್ಲ, ಆದರೆ ಕೋವಿ ಹುಚ್ಚು ಮಾತ್ರ ತುಂಬಾ ಇತ್ತು. ಕೋವಿಗೆ ಕತ್ತ ಪ್ಯಾಕ್ ಮಾಡಲು ಒಂದು ಕಬ್ಬಿಣದ ರಾಡ್ ಇರುತ್ತೆ. ಸರಿಯಾದ ಪ್ರಮಾಣದ ಲೋಡಿಂಗ್ ಅಂದರೆ, ಲೋಡ್ ಮಾಡಿದ ಮೇಲೆ ರಾಡ್ ನಾಲ್ಕು ಬೆರಳುಗಳನ್ನು ಅಡ್ಡ ಇಟ್ಟಾಗ ಬರುವಷ್ಟು ಎತ್ತರ ಇರಬೇಕು ಅಂದಿದ್ದ.
ಒಂದ್ಸಲ ರಜಾ ಮುಗಿದು ಹೋಗುವುದಕ್ಕಿಂತ ಮುಂಚೆ ನಾನು ಕೋವಿ ಲೋಡ್ ಮಾಡಿ ಮನೆಯಲ್ಲಿಟ್ಟು ಹೋಗಿದ್ದೆ. ತೆಳ್ಳಗಿದ್ದ ಮೈದಾಲಿ, ಅವನ ಬೆರಳಿನ ಅಳತೆಯಲ್ಲಿ ನಾಲ್ಕು ಬೆರಳು ಅಂತ ಹೇಳಿದ್ದ. ನಾನು ನನ್ನ ದೊಡ್ಡ ಬೆರಳುಗಳ ಲೆಕ್ಕದಲ್ಲಿ ಲೋಡ್ ಮಾಡಿದ್ದೆ. ಅದು ಸ್ವಲ್ಪ ಜಾಸ್ತಿಯಾಗಿತ್ತು.
ಒಂದು ದಿನ ಮಳೆ ಬಂದಾಗ ಕಾಡು ಕೋಳಿ ಕೂಗುವುದನ್ನು ಕೇಳಿದ ಮೈದಾಲಿ, ಅಮ್ಮನ ಹತ್ತಿರ ಬಂದು ಕೇಪಿನ ಕೋವಿ ತಗೊಂಡು ಹೋಗಿದ್ದಾನೆ. ಕಾಡು ಕೋಳಿಗಳು ಕೂಗುವುದನ್ನೇ ಕೇಳಿಕೊಂಡು ಮೆಲ್ಲಗೆ ಕಡೆ ಹೋಗಿದ್ದಾನೆ. ಅಷ್ಟರಲ್ಲಿ ಅವನ ಜೊತೆಯಲ್ಲಿ ಬಂದ ನಾಯಿಗಳು, ಕಾಡು ಕೋಳಿಯನ್ನು ಹಾರಿಸಿವೆ. ಮರದ ಮೇಲೆ ಕೂತು ನಾಯಿಗಳ ಕಡೆ ನೋಡುತ್ತಿದ್ದ ಕಾಡು ಕೋಳಿಯ ಕಡೆಗೆ ಗುರಿಯಿಟ್ಟು ಗುಂಡು ಹಾರಿಸಿದ್ದಾನೆ.
ಮುಂದೇನಾಯ್ತು ಅಂತ ಗೊತ್ತಾಗೋಕ್ಕೆ ಮೈದಾಲಿಗೆ 10 ನಿಮಿಷ ಬೇಕಾಯ್ತು. ನಾನು ಮಾಡಿದ ಲೋಡಿಂಗ್ ಹ್ಯಾಗಿತ್ತು ಅಂದರೆ, ಕೋವಿಯ ಬ್ಯಾರೆಲ್ ಸೀಳಿ ಹೋಗಿ, ಸ್ವಲ್ಪ ರಂಜಕ ಹಿಂದಕ್ಕೆ ಸಿಡಿದು, ಮೈದಾಲಿ ಮುಖಕ್ಕೆ ಹಾರಿ, ಅವನ ಕಣ್ಣಿನ ಸುತ್ತ ರೆಪ್ಪೆ, ಹುಬ್ಬು ಮತ್ತೆ ಸ್ವಲ್ಪ ತಲೆ ಕೂದಲುಗಳು ಸುಟ್ಟು ಹೋಗಿವೆ. ಕೋವಿ ಒದ್ದ ರಭಸಕ್ಕೆ  ಮೈದಾಲಿ ಐದು ಅಡಿ ಹಿಂದೆ ಹೋಗಿ ಬಿದ್ದಿದ್ದಾನೆ. ಒಂದೆರೆಡು ನಿಮಿಷ ಸುಧಾರಿಸಿಕೊಂಡು ಕಣ್ಣು ಬಿಟ್ಟು ನೋಡಿದಾಗ, ಅವನ ಜೊತೆ ಬಂದಿದ್ದ ನಾಯಿಗಳು ನಿರಾಂತಕವಾಗಿ ಇವನು ಹೊಡೆದ ಕೋಳಿಯನ್ನು ತಿನ್ನುತ್ತಾ ಇದ್ದವಂತೆ. ಮಧ್ಯ ತಲೆ ಎತ್ತಿ, ಇವನ ಕಡೆ ನೋಡಿ, ಥ್ಯಾಂಕ್ಸ್ ಅನ್ನುವಂತೆ ಬಾಲ ಅಲ್ಲಾಡಿಸಿವೆ.
ಒಂದ್ಹತ್ತು ನಿಮಿಷ ಅಲ್ಲೇ ಬಿದ್ದಿದ್ದ ಮೈದಾಲಿ, ಮೆಲ್ಲಗೆ ಎದ್ದು ಕೋವಿ ಹಿಡ್ಕೊಂಡು ಮನೆಗೆ ಬಂದಿದ್ದಾನೆ. ಅಮ್ಮನಿಗೆ ಎಲ್ಲಾ ಹೇಳಿದಾಗ, ಅಮ್ಮ `ಹೋಗಲಿ ಬಿಡುಅಂದಿದ್ದಾರೆ. ಮತ್ತೆ ಕೋವಿಯ ಬ್ಯಾರೆಲ್ ಕತ್ತರಿಸಿ, ಅದನ್ನು ಸರಿ ಮಾಡಿಸಿದರೂ, ಅದು ಮುಂಚಿನ ಮೊನಚು ಕಳೆದುಕೊಂಡಿತ್ತು. ಮೈದಾಲಿಯಂತೂ, ಪ್ರತೀ ರಜಕ್ಕೆ ಬಂದಾಗ ಕಥೆಯನ್ನು ಹೇಳಿ, `ಅಣ್ಣ, ನೀವು ಮಾತ್ರ ಕೋವಿ ಲೋಡ್ ಮಾಡ್ಬೇಡಿ. ನಾಯಿಗಳು ಕೋಳಿ ತಿನ್ನುವಾಗ ಹೊಟ್ಟೆ ಉರೀತಿತ್ತು. ಏನ್ಮಾಡೋದು? ಏಳಕ್ಕೇ ಆಗ್ಲಿಲ್ಲ,’ ಅಂತಿದ್ದ.
ಈ ಶಿಕಾರಿ ನಾಯಿಗಳೇ ಹೀಗೆ. ಕಾಡು ಹಂದಿ, ಕಾಡು ಕುರಿ ಥರದ ದೊಡ್ಡ ಪ್ರಾಣಿಗಳಾದ್ರೆ ಪರವಾಗಿಲ್ಲ. ಹಕ್ಕಿಗಳು ಮತ್ತೆ ಮೊಲಗಳನ್ನ ಹೊಡೆದಾಗ, ಶಿಕಾರಿದಾರರು ಹಿಂದೆನೇ ಓಡಿಹೋಗಿ ಕಿತ್ಕೊಳ್ದೇ ಹೋದ್ರೆ, ಎಲ್ಲಾ ತಮ್ಮ ಪಾಲು ಅನ್ಕೊಂಡು ತಿನ್ಕೊಂಡು ಬಿಡ್ತವೆ.
ನಮ್ಮೂರಲ್ಲಿ ಶಿಕಾರಿಗೂ ಮತ್ತೆ ನಾಯಿಗಳಿಗೂ ಒಂಥರಾ ನಂಟು. ಶಿಕಾರಿ ಹುಚ್ಚು ಇದ್ದವರೆಲ್ಲ ಒಂದು ನಾಯಿಯನ್ನೂ ಇಟ್ಕೊಂಡಿರ್ತಾರೆ. ಮನೆಯಲ್ಲಿ ಎಷ್ಟೇ ನಾಯಿಗಳಿದ್ದರೂ, ಎಲ್ಲವೂ ಶಿಕಾರಿಗೆ ಆಗಿ ಬರೋಲ್ಲ. ಶಿಕಾರಿ ನಾಯಿಗಳಿಗೆ ಅವುಗಳದೇ ಕೆಲವು ಗುಣಗಳಿರ್ತವೆ.
ಶಿಕಾರಿ ನಾಯಿಗಳು ಸಾಧಾರಣವಾಗಿ ಯಾವ ಮನುಷ್ಯರ ಮೇಲೆ ಏರಿ ಹೋಗೋದಿಲ್ಲ. ಮತ್ತೆ, ಬೇರೆ ನಾಯಿಗಳ ಜೊತೆ ಜಗಳಕ್ಕೂ ನಿಲ್ಲುವುದಿಲ್ಲ. ಯಾವುದಾದರೂ ನಾಯಿ ಕಾಲು ಕೆರೆದುಕೊಂಡು ಬಂದರೆ, ಕೇರ್ ಮಾಡದೆ ಮುಂದೆ ಹೋಗ್ತಾವೆ. ಬೇರೆ ನಾಯಿಗಳೂ ಶಿಕಾರಿ ನಾಯಿಗಳ ನೆಡೆತೆ ನೋಡಿ, ಅವುಗಳ ಸಹವಾಸಕ್ಕೆ ಹೋಗೋದಿಲ್ಲ. ಯಾಕೆಂದ್ರೆ, ಅವು ತಿರುಗಿ ಬಿದ್ದರೆ, ಇವುಗಳಿಗೆ ಉಳಿಗಾವಲಿಲ್ಲ.
ಈ ನಾಯಿಗಳು, ಸಾಧಾರಣವಾಗಿ ಶಿಕಾರಿಗೆ ಹೋಗುವವರನ್ನು ಗುರ್ತಿಸಿ, ಅವರ ಹಿಂದೆ-ಮುಂದೆ ಸುತ್ತುತ್ತಾ ಇರ್ತವೆ. ಅವರು ಕೋವಿ ಹೆಗಲಿಗೇರಿಸಿದರೆ ಸಾಕು, ಅವೇ ಮುಂದೆ ಓಡಿ ದಾರಿ ತೋರ್ಸೋಕೆ ಶುರು ಮಾಡ್ತವೆ. ಯಾವುದಾದರು ಕಾಡು ಕೋಳಿ ಕಂಡರೆ ಸಾಕು, ಸೀದ ಅವುಗಳ ಕಡೆಗೆ ನುಗ್ಗುತ್ತವೆ. ಗಾಭರಿಯಿಂದ ಕೋಳಿ ಮರಕ್ಕೆ ಹಾರಿ ಕೂತು, ನಾಯಿಕಡೆಗೇ ನೋಡ್ತಾ ಇರ್ತಾವೆ. ಹತ್ತಿರದಲ್ಲೇ ಕೋವಿ ಹಿಡ್ಕೊಂಡಿರುವ ಮನುಷ್ಯನ ಕಡೆಗೆ ಅವುಗಳ ಗಮನ ಹೋಗಿರುವುದಿಲ್ಲ. ಅದೇ ಸಮಯಕ್ಕೆ ಸರಿಯಾಗಿ ಶಿಕಾರಿದಾರರು ಈಡು ಹೊಡೆಯುತ್ತಾರೆ.
ಕಾಡು ಕುರಿಗಳು ಸಿಕ್ಕಿದರೆ, ಈ ನಾಯಿಗಳು ನೇರವಾಗಿ ಅವುಗಳ ಮೇಲೆ ನುಗ್ಗುವುದಿಲ್ಲ. ಅದರ ಬದಲು, ಬಳಸಿಕೊಂಡು ಬಂದು ನುಗ್ಗುತ್ತವೆ. ಗಾಭರಿಯಲ್ಲಿ ಕಾಡುಕುರಿಗಳು ನೇರವಾಗಿ ಶಿಕಾರಿದಾರರ ಕಡೆಗೇ ನುಗ್ಗಿ, ಈಡಿಗೆ ಬಲಿಯಾಗುತ್ತವೆ.
ಇವುಗಳಲ್ಲದೆ, ಗುಂಪಿನಲ್ಲಿ ಶಿಕಾರಿಗೆ ಹೋಗುವ ಅಭ್ಯಾಸವೂ ನಮ್ಮೂರ ಕಡೆ ಇವೆ. ಸಾಧಾರಣವಾಗಿ ಕಾಡು ಹಂದಿಗಳನ್ನು ಗುರಿಯಾಗಿಟ್ಟುಕೊಂಡು ಈ ಶಿಕಾರಿಗಳಿಗೆ ಹೋಗುತ್ತಾರೆ. ನಾಲ್ಕೈದು ಕಾರು-ಜೀಪುಗಳಲ್ಲಿ, ಹತ್ತಾರು ಜನ ಕೋವಿಗಳನ್ನು ಇಟ್ಕೊಂಡು ಹೊರಡುತ್ತಾರೆ. ನಮ್ಮ ತೋಟಗಳಲ್ಲಿ ಇದ್ದ ಕಾಡುಹಂದಿಗಳನ್ನು ಯಾವಾಗಲೋ ಕೊಂದು, ತಿಂದು ತೀರಿಸಿದ್ದರಿಂದ, ಕಡೂರಿನ ಕಡೆಯೋ ಅಥವಾ ಹಳೇಬೀಡಿನ ಕಡೆಯೋ ಶಿಕಾರಿ ಹೋಗುವುದು ವಾಡಿಕೆಯಾಗಿತ್ತು. ಕಾಡು ಹಂದಿಗಳ ಕಾಟ ಜಾಸ್ತಿಯಾದಾಗ, ಅಲ್ಲಿನ ಜನಗಳೇ ವಿಷಯ ತಿಳಿಸುತ್ತಿದ್ದರು. ಫಾರೆಸ್ಟ್ ಡಿಪಾರ್ಟ್ ಮೆಂಟ್ ನವರು ಬಂದರೆ, ಹಳ್ಳಿಯವರೆಲ್ಲ ಸೇರಿ ಅವರನ್ನು ಅಡ್ಡ ಹಾಕುತ್ತಿದ್ದರು.
ಕಾಡು ಹಂದಿ ಶಿಕಾರಿಗೆ, ತೋಟಗಳಲ್ಲಿ ಓಡಾಡುವ ಎಲ್ಲಾ ಶಿಕಾರಿ ನಾಯಿಗಳು ಆಗಿ ಬರುವುದಿಲ್ಲ. ಅವುಗಳನ್ನು ಅನುಭವ ಇರುವ ಒಂದಿಷ್ಟು ನಾಯಿಗಳ ಜೊತೆ ಕರೆದುಕೊಂಡು ಹೋಗಿ, ಒಂದರೆಡು ಸಲ ತೋರಿಸಿ, ಆಮೇಲೆ ಹಂದಿಗಳನ್ನು ಬೆರಸಲು ಬಿಡಬೇಕು.  ಕಬ್ಬಿನ ಗದ್ದೆಗಳ ಮಧ್ಯ ಎಷ್ಟು ಹಂದಿಗಳಿರುತ್ತವೆ ಅಂತ ಗೊತ್ತಾಗೋದಿಲ್ಲ. ಮನುಷ್ಯರನ್ನೂ ಸಿಗಿಯಬಲ್ಲ ಈ ಕಾಡು ಹಂದಿಗಳು ಕೋರೆಯಲ್ಲಿ ಹೊಡೆದರೆ, ಈ ನಾಯಿಗಳು ಎರಡು ತುಂಡಾಗಿ ಹೋಗುತ್ತವೆ ಅಷ್ಟೆ. ಹೊಡೆತಕ್ಕೆ ಸಿಗದಂತೆ, ಈ ಕಾಡು ಹಂದಿಗಳನ್ನು ಅಡ್ಡ ಹಾಕಿ ಮನುಷ್ಯರಿರುವ ದಿಕ್ಕಿಗೆ ಓಡಿಸುವುದಷ್ಟೇ ಈ ನಾಯಿಗಳ ಕೆಲಸ.
ಒಂದ್ಸಲ ಹೀಗೇ ಆಯ್ತು. ಶಿವಮೊಗ್ಗದಲ್ಲಿ ಪ್ರಫುಲ್ಲಚಂದ್ರರ ಮಗ ಸಾಚಿಯಣ್ಣನ ಜೊತೆ ಶಿಕಾರಿಗೆ ಹೋಗಿದ್ದೆ. ಸಾಧಾರಣವಾಗಿ ರಾತ್ರಿ ಒಂದು ಅಥವಾ ಎರಡು ಜೀಪಿನಲ್ಲಿ ಹೋಗುವುದು ಅವರ ವಾಡಿಕೆ. ಅವತ್ತು ಒಂದೇ ಜೀಪಿನಲ್ಲಿ ಹೋಗಿದ್ದೆವು. ಸಾಚಿಯಣ್ಣನ ತಮ್ಮ ಇಕ್ಷು ಜೀಪು ಬಿಡುತ್ತಿದ್ದ. ಸಾಚಿಯಣ್ಣ ಮತ್ತೆ ಅವರ ಸ್ನೇಹಿತರೊಬ್ಬರು ಹಿಂದುಗಡೆ ನಿಂತಿದ್ದರು.
ನಾವು ಜೀಪಿಗೆ ಕೂತ ತಕ್ಷಣವೇ ಎರಡು ಡ್ಯಾಶ್ ಹೌಂಡ್ ನಾಯಿಗಳು ಜೀಪಿಗೆ ಹತ್ತಿದವು. ಇನ್ನೊಂದು ಡ್ಯಾಶ್ ಹೌಂಡ್ ನಾಯಿಯನ್ನು ಸಾಚಿಯಣ್ಣ ನನ್ನ ಕೈಗೆ ಕೊಟ್ಟು ಹಿಡ್ಕೊಳ್ಳೋಕೆ ಹೇಳಿದರು. ಒಂದರ್ಧ ಘಂಟೆಯೊಳಗೆ ಕಾಡು ಹಂದಿಯೊಂದು ಫ್ಲ್ಯಾಶ್ ಲೈಟ್ ಗೆ ಕಣ್ಣು ಕೊಟ್ಟು ನಿಂತಿತು. ಸಾಚಿಯಣ್ಣನ ಸ್ನೇಹಿತರು ಅವರ ತೋಟಾ ಕೋವಿಯಲ್ಲಿ ಗುಂಡು ಹಾರಿಸಿದರು. ಏಟು ತಗೊಂಡು ಹಂದಿ ಓಡೋಕೆ ಶುರು ಮಾಡ್ತು. ತಕ್ಷಣ ಸಾಚಿಯಣ್ಣ ತಮ್ಮ ರೈಫಲ್ ನಿಂದ ಗುಂಡು ಹಾರಿಸಿದರು. ಸೊಂಟಕ್ಕೆ ಏಟು ಬಿದ್ದ ಹಂದಿ ಅಲ್ಲೇ ಕೂತು ಬಿಡ್ತು.
ತಕ್ಷಣವೇ ಎರಡು ನಾಯಿಗಳು ಜೀಪಿಂದ ನೆಗೆದು ಹಂದಿಯ ಕಡೆಗೆ ಓಡತೊಡಗಿತು. ನನ್ನ ಕೈಲಿದ್ದ ನಾಯಿ ಸಹ ಒದ್ದಾಡೋಕೆ ಶುರುಮಾಡ್ತು. ನಾನಿದ್ದವನು ನಾಯಿಯನ್ನು ಜೀಪಿಂದ ಬಗ್ಗಿ ನಾಯಿಯನ್ನು ಕೆಳಗೆ ಬಿಟ್ಟೆ. ತಕ್ಷಣವೇ ಸಾಚಿಯಣ್ಣ ಕೂಗಿದರು: `ಅದು ಶಿಕಾರಿಗೆ ಹೊಸದು. ಅದನ್ನ ಬಿಡ್ಬೇಡ,’ ಅಂತ.
ಏನು ಮಾಡ್ಬೇಕು ಅಂತ ಗೊತ್ತಾಗದೆ ನಾನು ಜೀಪಿಂದ ಇಳಿದು ನಾಯಿ ಹಿಂದೆ ಓಡೋಕೆ ಶುರುಮಾಡ್ದೆ. ನಾನು ನಾಯಿನ ಹಿಡ್ಕೊಳ್ಳೋಕೆ ಮುಂಚೆನೆ ಅದು ಹಂದಿಯನ್ನು ತಲುಪಿ, ಅದನ್ನು ಕಚ್ಚಲು ಹೋಗಿದೆ. ಒಂದೇ ಸಲ ಮೂತಿಯಿಂದ ಹಂದಿ ತಿವಿದ ತಕ್ಷಣ, ಕುಯ್ಯೋಂ… ಅಂತ ನನ್ನ ಕಾಲ ಹತ್ತಿರ ಬಂದು ಬಿತ್ತು. ನಾನು ನಾಯಿನ ಎತ್ಕೊಳ್ಳೋ ಹೊತ್ತಿಗೆ, ನನ್ನ ಪಕ್ಕದಲ್ಲೇ ಗುಂಡು ಹಾರಿದ ಶಬ್ಧ ಬಂತು. ತಿರುಗಿ ನೋಡಿದರೆ, ಸಾಚಿಯಣ್ಣ ಹಂದಿ ತಲೆ ಮೇಲೆ ರೈಫಲ್ ಇಟ್ಟು ಗುಂಡು ಹೊಡೆದಿದ್ದರು.
ಅಗಿದ್ದಿಷ್ಟೆ. ನಾನು ಜೀಪಿಂದ ಇಳಿಯುವ ಹೊತ್ತಿಗೆ ಸಾಚಿಯಣ್ಣ ಇನ್ನೊಂದು ಗುಂಡು ಹೊಡೆಯೋಕೆ ಅಂತ ರೈಫಲ್ ಎತ್ತಿದ್ದಾರೆ. ಅವರಿಗೆ, ಓಡುತ್ತಿದ್ದ ನನ್ನ ತಲೆ ಅಡ್ಡ ಬಂದಿದೆ. ಇನ್ನು ಘಾಯಗೊಂಡ ಹಂದಿ ಕೈಲಿ ನಾನು ಸಿಕ್ಕಿಹಾಕಿಕೊಂಡರೆ, ಅದು ನನ್ನನ್ನೂ ಸಿಗಿದು ಹಾಕುವುದು ಗ್ಯಾರಂಟಿ ಅಂತ, ಸಾಚಿಯಣ್ಣ ನನ್ನ ಹಿಂದೆ ಓಡಿಬಂದಿದು, ಹಂದಿ ತಲೆಗೆ ಗುಂಡು ಹೊಡೆದಿದ್ದಾರೆ.
ನಾನು ನಾಯಿಗೇನಾಗಿದೆ ಅಂತ ನೋಡ್ತಾ ಇದ್ದೆ. ಮುಂದಿನ ತೊಡೆಗೆ ಸರಿಯಾಗೇ ಏಟಾಗಿತ್ತು. `ಇನ್ನೂ ಸ್ವಲ್ಪ ದಿನ ಇದಕ್ಕೆ ನೆಡೆಯೋಕೆ ಕಷ್ಟ ಆಗ್ಬೋದು,’ ಅಂದೆ. ಸಾಚಿಯಣ್ಣ ಜೋರಾಗಿ ನಗೋಕೆ ಶುರು ಮಾಡಿದ್ರು. `ಅಲ್ಲ, ನಾಯಿ ಹೋಗಿದ್ರೆ ಹೋಗ್ತಿತ್ತು. ನೀನೂ ಹೋಗಿದ್ರೆ ನಾವೇನು ಮಾಡ್ಬೇಕಿತ್ತು. ಲಕ್ ಚೆನ್ನಾಗಿತ್ತು ಅಷ್ಟೆ. ನನ್ನ ಮೊದಲನೇ ಗುಂಡಿಗೆ, ಅದ್ರ ಸೊಂಟ ಮುರಿದು ಹೋಗಿ, ಅದಕ್ಕೆ ಕೂತಲ್ಲಿಂದ ಏಳೋಕ್ಕಾಗಿಲ್ಲ. ಇಲ್ದೆ ಹೋಗಿದ್ರೆ, ಇವತ್ತು ನಿಮ್ಮಿಬ್ಬರನ್ನೂ ಸಿಗಿದು ತೋರಣ ಕಟ್ತಿತ್ತು, ಅಷ್ಟೆ,’ ಅಂದ್ರು. ಆಗಲೇ ನಂಗೆ ಗೊತ್ತಾಗಿದ್ದು: ನಾನು ಮಾಡಿದ್ದು ಒಂದಲ್ಲ, ಎರಡು ಅನಾಹುತಗಳು ಅಂತ.
ಈ ಕಾಡು ಹಂದಿ ಶಿಕಾರಿಗಳಲ್ಲಿ ಕಂತ್ರಿ ನಾಯಿಗಳನ್ನು ಬಿಟ್ಟರೆ ಡ್ಯಾಶ್ ಹೌಂಡ್ ಗಳೇ ಜಾಸ್ತಿ ಇರುತ್ತವೆ. ಹೀಗೇಕೆ ಅಂತ ಒಂದಿಬ್ಬರನ್ನು ಕೇಳಿದ್ದೆ. ಡ್ಯಾಶ್ ಹೌಂಡ್ ಗಳು ಕುಳ್ಳಕಿರುವ ನಾಯಿಗಳಾದ್ದರಿಂದ, ದೊಡ್ಡಕ್ಕಿರುವ ಹಂದಿಗಳ ಮೇಲೆ ಏರಿ ಹೋಗುವುದಿಲ್ಲ. ಅದರ ಬದಲು, ಹಂದಿಗಳನ್ನು ಸುತ್ತುವರೆದು, ಅವುಗಳು ಓಡುವ ವೇಗವನ್ನು ಕಡಿಮೆ ಮಾಡುತ್ತವೆ. ಹಂದಿಗಳು ಮೂತಿಯಿಂದ ತಿವಿಯಲು ಪ್ರಯತ್ನಿಸಿದರೂ, ಇವು ಪುಟ್ಟದಾಗಿರುವುದರಿಂದ ತಪ್ಪಿಸಿಕೊಳ್ಳುತ್ತವೆ, ಎಂದಿದ್ದರು. ಅದೆಷ್ಟು ಸತ್ಯವೋ ನಂಗಂತೂ ಗೊತ್ತಿಲ್ಲ.
ಆದರೆ, ಶಿಕಾರಿಗೆ ಹೋಗದವರು ಕೂಡ ಈ ಥರದ ಹಂದಿ ಶಿಕಾರಿ ನಾಯಿಗಳನ್ನು ಸಾಕಿರುತ್ತಾರೆ. ಮತ್ತೆ, ಅವರ ಕೋವಿಗಳನ್ನು ಹಂದಿ ಶಿಕಾರಿಗೆ ಕಳುಹಿಸಿ ಕೊಡ್ತಾರೆ ಕೂಡ. ಯಾಕೆಂದ್ರೆ, ಶಿಕಾರಿ ಮುಗಿದ ಮೇಲೆ ಮಾಂಸವನ್ನು ಪಾಲು ಹಾಕ್ತಾರೆ. ಒಂದು ಪಾಲು ಹೊಡೆದವನದು, ಎರಡನೇ ಪಾಲು ಕೋವಿಯದು, ಮೂರನೇ ಪಾಲು ನಾಯಿಯದು…… ಹೀಗೆ ಪಾಲು ಸಾಗುತ್ತದೆ. ಕೋವಿ ಮತ್ತೆ ನಾಯಿ ಕಳುಹಿಸಿದವರಿಗೆ ಅನಾಯಾಸವಾಗಿ ಎರಡು ಪಾಲು ಮನೆಗೆ ಬರುತ್ತದೆ.
ನಮ್ಮೂರ ವಿಜಯಣ್ಣ ಕೂಡ ಈ ಥರದ ನಾಯಿಗಳನ್ನು ಸಾಕೋದ್ರಲ್ಲಿ ಎತ್ತಿದ ಕೈ. ಹುಡುಗರಾಗಿದ್ದಾಗ ವಿಪರೀತ ಶಿಕಾರಿ ಹುಚ್ಚಿದ್ದ ವಿಜಯಣ್ಣ, ಆಮೇಲೆ ಬಿಟ್ಟುಬಿಟ್ಟಿದ್ದರು. ಅವರ ಮನೆಯಲ್ಲಿ ಯಾವಾಗಲೂ ಒಂದೈದಾರು ನಾಯಿಗಳನ್ನು ನೋಡ್ತಾ ಇರ್ತಿದ್ದೆ. ಹಾಗೆ ನೋಡಿದ ನಾಯಿಗಳಲ್ಲಿ ನನ್ನ ನೆನಪಲ್ಲಿ ಉಳಿದಿದ್ದು ಒಂದು ನಾಯಿ: ಪಿಂಕಿ.
ಪಿಂಕಿ ಕಂದು ಬಣ್ಣದ ಡ್ಯಾಶ್ ಹೌಂಡ್ ನಾಯಿ ಮತ್ತೆ ಯಾವಾಗಲೂ ಶಿಕಾರಿಗೆ ಹೋಗುತ್ತಿದ್ದ ನಾಯಿ. ಹಾಗೇ ಒಂದ್ಸಲ ಶಿಕಾರಿಗೆ ಹೋದ ಪಿಂಕಿ ವಾಪಾಸ್ ಬರಲೇ ಇಲ್ಲ. ಅದರ ಹಿಂದೆ ಕಬ್ಬಿನ ಗದ್ದೆಯಲ್ಲಿ ಹೋದ ಶಿಕಾರಿದಾರನಿಗೆ, ಪಿಂಕಿ ದೂರದಲ್ಲೆಲ್ಲೋ ಬೊಗಳುತ್ತಿದ್ದದ್ದು ಕೇಳಿಸಿದೆ. ಅವತ್ತು ನಾಲ್ಕೈದು ಹಂದಿಗಳನ್ನು ಹೊಡೆದು ಉರುಳಿಸಿದ್ದಾರೆ. ಸ್ವಲ್ಪ ಹೊತ್ತಾದ ಮೇಲೆ ಸಾಧಾರಣವಾಗಿ ನಾಯಿಗಳು ವಾಪಾಸ್ ಬರುತ್ತವೆ. ಆದ್ರೆ, ಪಿಂಕಿ ಮಾತ್ರ ಬಂದಿಲ್ಲ.
ನಾಯಿಗಳನ್ನು ಕಾರಿಗೆ ತುಂಬುವಾಗ ಒಂದು ನಾಯಿ ಕಮ್ಮಿ ಇದ್ದಿದ್ದು ಗಮನಕ್ಕೆ ಬಂದಿದೆ. ಶಿಕಾರಿಗೆ ಹೋದವರೆಲ್ಲ ಕಬ್ಬಿನ ಗದ್ದೆ, ಸುತ್ತ ಮುತ್ತ ಎಲ್ಲಾ ಹುಡುಕಿದ್ದಾರೆ. ಎಲ್ಲೂ ಸಿಕ್ಕಿಲ್ಲ. ವಾಪಾಸ್ ಬಂದ ಮೇಲೆ, ವಿಜಯಣ್ಣನಿಗೆ ವಿಷಯ ತಿಳಿಸಿದ್ದಾರೆ. ವಿಜಯಣ್ಣ ಮಾತ್ರ ಆ ನಾಯಿಯನ್ನು ಕಳ್ಕೊಳ್ಳೋಕೆ ತಯಾರಿರಲಿಲ್ಲ.
ಟ್ಯಾಕ್ಸಿ ಮಾಡಿಕೊಂಡವರೇ, ಊರವರೆಲ್ಲಾ ಶಿಕಾರಿ ಮಾಡಲು ಹೋದ ಊರಿಗೆ ಹೋಗಿ, ಎಲ್ಲರನ್ನೂ ವಿಚಾರಿಸಿದ್ದಾರೆ. ಆ ನಾಯಿಯ ಬಗ್ಗೆ ಏನಾದ್ರೂ ಗೊತ್ತಾದ್ರೆ ತಮಗೆ ವಿಷಯ ತಿಳಿಸಿದವರಿಗೆ ದುಡ್ಡು ಕೊಡುವುದಾಗಿಯೂ ಹೇಳಿದ್ದಾರೆ. ಆದ್ರೆ, ಏನೂ ಪ್ರಯೋಜನವಾಗಿಲ್ಲ. ಒಂದೆರೆಡು ದಿನ ಹುಡುಕಿ ವಾಪಾಸ್ ಬಂದಿದ್ದಾರೆ.
ಅದಾದ ಮೇಲೆ ಕೂಡ, ವಿಜಯಣ್ಣನಿಗೆ ಯಾರಾದರೂ, ಯಾರಿಗಾದರೂ ಒಂದು ನಾಯಿ ಸಿಕ್ಕಿದೆ ಅಂತ ಹೇಳಿದ್ರೆ ಹುಡುಕಿಕೊಂಡು ಹೋಗ್ತಿದ್ರು. ಹಾಗೇ, ಎರಡು ವರ್ಷ ಕಳೆದು ಹೋಗಿತ್ತು. ಒಂದು ದಿನ, ಯಾವುದೋ ಹಬ್ಬದ ಸಮಯದಲ್ಲಿ, ವಿಜಯಣ್ಣನ ತೋಟದ ಕೆಲಸದವನೊಬ್ಬ ಚೀಕನಹಳ್ಳಿಗೆ ನೆಂಟರ ಮನೆಗೆ ಹೋಗಿದ್ದನಂತೆ. ಅಲ್ಲಿ, ರಾತ್ರಿ ಶರಾಬು ಅಂಗಡಿಯ ಹತ್ತಿರ, ಇನ್ಯಾರದೋ ತೋಟದ ಆಳಿನ ಸಂಭಂದಿಕ ಕಡೂರಿನಿಂದ ಬಂದಿದ್ದನಂತೆ. ಕುಡಿದು ಮಾತಾಡುವಾಗ, ಕಡೂರಿನ ಕಡೆಯಿಂದ ಬಂದವನು, ತಮ್ಮ ಊರಿನ ತೆಂಗಿನ ತೋಟದ ಮೇನೇಜರ್ ಗೆ ಹಂದಿಯೋ, ಕರಡಿಯೋ ಘಾಯ ಮಾಡಿದ ನಾಯಿಯೊಂದು ಸಿಕ್ಕಿತ್ತೆಂದು ಅದರ ಕಥೆ ಹೇಳಿದ್ದಾನೆ. ಎರಡು ವರ್ಷದ ಬಳಿಕ, ಆ ನಾಯಿ ಊರಿಲೆಲ್ಲಾ ಬಹಳ ಒಳ್ಳೆ ಹೆಸರು ಮಾಡಿದೆ, ಅಂತಾನೂ ಹೇಳಿದ್ದಾನೆ.
ಬೆಳಗ್ಗೆ ಎದ್ದವನೇ, ವಿಜಯಣ್ಣನ ಆಳು ಸೀದ ವಾಪಾಸ್ ಬಂದು ವಿಜಯಣ್ಣನಿಗೆ ವರದಿ ಒಪ್ಪಿಸಿದ್ದಾನೆ. ವಿಜಯಣ್ಣ ಟ್ಯಾಕ್ಸಿ ತಗೊಂಡು ನೆಟ್ಟಗೆ ಚೀಕನಳ್ಳಿಗೆ ಹೋಗಿ, ಅವರ ಆಳಿನ ಸಂಬಂಧಿಯ ಸಹಾಯದಿಂದ, ಕಥೆ ಹೇಳಿದವನ ಸಂಬಂಧಿಯನ್ನು ಹುಡುಕಿದ್ದಾರೆ. ಅಷ್ಟರೊಳಗೆ ಕಥೆ ಹೇಳಿದ್ದವನು ಅವನ ಊರಿಗೆ ವಾಪಾಸ್ ಹೋಗಿದ್ದಾನೆ. ಅಂತೂ ಬೆನ್ನು ಬಿಡದೆ, ಅವನನ್ನೂ ಹುಡುಕಿ, ನಾಯಿ ಇದ್ದ ತೆಂಗಿನ ತೋಟವನ್ನು ಹುಡುಕಿದ್ದಾರೆ. ಅದು ಶಿಕಾರಿ ಮಾಡಲು ಹೋದ ಜಾಗದಿಂದು ಮೂರು ಕಿಲೋಮೀಟರ್ ದೂರದಲ್ಲಿ ಇತ್ತು.
ತೆಂಗಿನ ತೋಟ ತಲುಪಿದಾಗ, ಅದರ ಮೇನೇಜರ್ ಎದುರಿಗೇ ಸಿಕ್ಕಿದ್ದಾರೆ. ಇವರು ನಾಯಿಯ ಕಥೆ ಹೇಳುತ್ತಿದ್ದಂತೆ, ಅವನ ಮುಖದ ಬಣ್ಣವೇ ಬದಲಾಗಿದೆ. `ಸರ್, ನೀವು ಹೇಳೋದೆಲ್ಲ ಸರಿ. ಇದು ನಿಮ್ಮ ನಾಯಿನೇ ಇರಬಹುದು. ಆದ್ರೆ, ನಂಗೆ ಸಿಕ್ದಾಗ ಅದು ಸಾಯೋ ಸ್ಥಿತಿಯಲ್ಲಿ ಇತ್ತು. ಹಂದಿ ಕಚ್ಚಿ ಅದರ ಬಾಲ ತುಂಡಾಗಿ, ಕರುಳೇ ಹೊರಗಡೆ ಬಂದಿತ್ತು. ನಾನು ಅದನ್ನು ಡಾಕ್ಟರಿಗೆ ತೋರಿಸಿ ತುಂಬಾ ದುಡ್ಡು ಖರ್ಚು ಮಾಡಿದ್ದೀನಿ. ಅದಕ್ಕಿಂತ ಜಾಸ್ತಿ, ಮೂರು ತಿಂಗಳು ಮಗುವಿನ ಥರ ನೋಡ್ಕೊಂಡಿದ್ದೀನಿ. ಆಮೇಲೇ ಅದು ಸರಿಯಾಗಿದ್ದು. ನೋಡಿ ಸರ್, ನಾನು ಆ ನಾಯಿನ ತುಂಬಾ ಪ್ರೀತಿ ಮಾಡ್ತೀನಿ. ಅದೂ ಅಷ್ಟೆ, ತೋಟದಿಂದ ಒಂದು ಕಾಯಿ ಹೊರಗೆ ಹೋಗೋಕೆ ಬಿಡೋಲ್ಲ. ನೀವು ಈಗ ಬಂದು ಕೇಳಿದ್ರೆ, ಎಷ್ಟೇ ದುಡ್ಡು ಕೊಟ್ರೂ ನಾಯಿನ ಕೊಡೋಕ್ಕಾಗೋಲ್ಲ,’ ಅಂತ ಖಡಾ ಖಂಡಿತವಾಗಿ ಹೇಳಿದ್ದಾರೆ.
ವಿಜಯಣ್ಣನಿಗೆ ಏನು ಹೇಳ್ಬೇಕು ಅಂತ ಗೊತ್ತಾಗಿಲ್ಲ. ಒಂದೆರೆಡು ನಿಮಿಷ ಸುಮ್ಮನೆ ನಿಂತವರು, `ಎಲ್ಲೋ ಒಂದ್ಕಡೆ ಬದುಕಿದೆಯಲ್ಲಾ’ ಅಂತ ಸಮಾಧಾನ ಮಾಡ್ಕೊಂಡರು. ಆಮೇಲೆ ಮೆಲ್ಲಗೆ ಕೇಳಿದ್ರು: `ನೀವಿಷ್ಟು ಹೇಳಿದ್ಮೇಲೆ ನಾನು ನಾಯಿನ ಕೇಳೋಲ್ಲ. ಇಷ್ಟು ದೂರ ಬಂದಿದ್ದೀನಲ್ಲ, ಒಂದ್ಸಲ ಅದನ್ನ ನೋಡಿಬಿಟ್ಟು ಹೋಗ್ಬಹುದಾ?’.
`ನೋಡೋಕ್ಕೇನೂ ತೊಂದ್ರೆ ಇಲ್ಲ,’ ಅಂದವರೇ, ಕೆಲಸದವರನ್ನು ಕರೆದು, ನಾಯಿನ ಬಿಡೋಕೆ ಹೇಳಿದ್ದಾರೆ. ಮನೆಯ ಹಿಂದುಗಡೆಯಿಂದ ಬಂದ ಪಿಂಕಿ, ಕಾರಿನ ಪಕ್ಕ ಇದ್ದ ವಿಜಯಣ್ಣನನ್ನು ಗಮನಿಸಿಲ್ಲ. ಮೇನೇಜರ್ ಹತ್ತಿರ ಹೋಗಿ ಮುದ್ದು ಮಾಡಿಸಿಕೊಳ್ಳಲು ನೋಡುತ್ತಿತ್ತು. ಆಗ ವಿಜಯಣ್ಣ: `ಏ ಪಿಂಕಿ,’ ಅಂದಿದ್ದಾರೆ.
ಒಂದೇ ಸಲ ಕರೆಂಟ್ ಹೊಡೆದಂತೆ ಬೆಚ್ಚಿದ ನಾಯಿ, ಮೇನೇಜರ್ ಬಿಟ್ಟು ವಿಜಯಣ್ಣನ ಹತ್ತಿರ ಓಡಿ ಬಂದಿದೆ. ಅವರ ಮೇಲೆ ಹಾರಿ, ವಿಚಿತ್ರವಾದ ಕೀರಲು ಧ್ವನಿಯಲ್ಲಿ ಕೂಗುತ್ತಾ, ಅವರ ಮುಖವನ್ನೆಲ್ಲ ನೆಕ್ಕಿ, ಶರ್ಟನ್ನೆಲ್ಲಾ ಹರಿದು ಹಾಕಿದೆ. ಕಾರಿನ ಬಾನೆಟ್ ಮೇಲೆ ಪಿಂಕಿಯನ್ನು ಕೂರಿಸಿಕೊಂಡ ವಿಜಯಣ್ಣ ಎಷ್ಟೇ ಸಮಾಧಾನ ಮಾಡಿದರೂ, ಅದು ಕೀರಲು ಧ್ವನಿಯಲ್ಲಿ ಗೋಳಿಡುವುದು ಕಮ್ಮಿ ಮಾಡಲಿಲ್ಲವಂತೆ.
ಒಂದೈದು ನಿಮಿಷ ಇದನ್ನೇ ನೋಡಿದ ಮೇನೇಜರ್, ಸೀದ ವಿಜಯಣ್ಣನ ಹತ್ತಿರ ಬಂದವರೇ, `ಸರ್, ತಿರುಗಿ ನೋಡಬೇಡಿ. ಈ ನಾಯಿನ ಕಾರಿಗೆ ಹಾಕಿಕೊಂಡು ಸೀದ ಊರಿಗೆ ಹೋಗಿಬಿಡಿ,’ ಅಂದರಂತೆ. ಅವರ ಕಣ್ಣಲ್ಲಿ ನೀರು ಬರುತ್ತಿತ್ತಂತೆ.
`ನೋಡಿ ಸರ್, ಇಷ್ಟು ದಿನ ನೀವು ಸಿಗೋಲ್ಲ ಅಂತ ಇದು ನನ್ನ ಜೊತೆ ಬದುಕ್ತು. ಇನ್ನು ನಿಮ್ಮನ್ನ ಬಿಟ್ಟು ಇರೋಲ್ಲ. ನೀವಿದನ್ನ ಇಲ್ಲೇ ಬಿಟ್ಟು ಹೋದ್ರೂ, ಇದು ಉಪವಾಸ ಬಿದ್ದು ಸಾಯುತ್ತೆ. ಇದು ಹೋಗೋದನ್ನೂ ನಂಗೆ ನೋಡೋಕ್ಕಾಗಲ್ಲ. ನೀವಿದನ್ನ ತಗೊಂಡು ಹೊರಟುಬಿಡಿ,’ ಅಂತ ಮೇನೇಜರ್ ಹೇಳಿದಾಗ, ವಿಜಯಣ್ಣನಿಗೆ ಏನು ಹೇಳ್ಬೇಕು ಅಂತ ಗೊತ್ತಾಗಿಲ್ಲ.
ವಿಜಯಣ್ಣ ದುಡ್ಡು ಕೊಡಲು ಹೋದರೂ, ಮೇನೇಜರ್ ಅದನ್ನ ತಗೊಳ್ಳೋಕೆ ಒಪ್ಪಿಲ್ಲ. `ಈ ನಾಯಿಗೆ ಬೆಲೆ ಕಟ್ಟೋಕೆ ಆಗೋಲ್ಲ, ಬಿಡಿ ಸರ್. ನೀವಿನ್ನು ಹೊರಡಿ,’ ಅಂತ ಕಳುಹಿಸಿ ಬಿಟ್ಟಿದ್ದಾರೆ. ವಾಪಾಸ್ ಬಂದ ಮೇಲೂ, ಪಿಂಕಿ ಎರಡು, ಮೂರು ವರ್ಷ ಬದುಕ್ಕಿತ್ತು. ಆಮೇಲೆ, ವಯಸ್ಸಾಗಿ ಸತ್ತು ಹೋಯ್ತು.
ಇತ್ತೀಚೆಗೆ ತೋಟಗಳಲ್ಲಿ ಕೋವಿ ಹಿಡ್ಕೊಂಡು ತಿರುಗೋರ ಸಂಖ್ಯೆ ಕಮ್ಮಿಯಾಗಿದೆ. ಹಾಗೇನೆ, ಊರಲ್ಲಿ ಶಿಕಾರಿ ಕಥೆಗಳೂ ಅಷ್ಟೆ. ಕಣ್ಮರೆಯಾಗಿದ್ದ ನವಿಲುಗಳು ಮತ್ತೆ ಕಾಡು ಹಂದಿಗಳು ಮನೆಯ ಹತ್ತಿರವೇ ಬರುತ್ತವೆ.
ಯಾವಾಗಾದರೂ ತೋಟದಲ್ಲಿ ತಿರುಗುವಾಗ ಕಾಫಿ ಗಿಡಗಳ ನೆಡುವೆ ಬಗ್ಗಿ ನೋಡ್ತಿರ್ತೀನಿ: ಆ ಪಿಂಕಿ ಸಂತತಿ ಇನ್ನೂ ಉಳಿದಿವೆಯಾ?...... ಅಂತ.


ಮಾಕೋನಹಳ್ಳಿ ವಿನಯ್ ಮಾಧವ್ 

1 ಕಾಮೆಂಟ್‌: