ಶನಿವಾರ, ಏಪ್ರಿಲ್ 28, 2012

ಲಿಂಬೂ ಪೆಪ್ಪರ್ ಮೆಂಟ್


ಲಿಂಬೂ ಹುಳಿ ಪೆಪ್ಪರಮೆಂಟ್ ಮತ್ತು ಗಾಡ್ಲಿ

ಇದೆಲ್ಲಾ ಶುರುವಾಗಿದ್ದು ಕನ್ನಡ ಪ್ರಭದ ರಾಘವೇಂದ್ರ ಭಟ್ಟನಿಂದ. ಅವತ್ತೊಂದು ದಿನ ಫೇಸ್ ಬುಕ್ ನೋಡ್ತಾ ಇದ್ದಾಗ ಒಂದು ಫೋಟೋ ಹಾಕಿದ್ದ. `ನೆನಪಿದೆಯಾ ಲಿಂಬೂ ಹುಳಿ ಪೆಪ್ಪರ್ ಮೆಂಟ್’ ಅಂತ.
ಯಾಕೋ ಏನೋ, ನೋಡ್ತಾ ಇದ್ದ ಹಾಗೆ ಬಾಯಿಂದ ನೀರು ಬರೋಕೆ ಶುರುವಾಯ್ತು. ತಕ್ಷಣ ವಾಪಾಸ್ ಬರೆದೆ: `ಎಲ್ಲಿಂದ ಸಿಕ್ತು ಮಾರಾಯ ನಿಂಗೆ ಈ ಫೋಟೋ? ಎಲ್ಲಿ ಸಿಕ್ತದೆ ಇದು? ತುಂಬಾ ದಿನ ಆಯ್ತು ತಿಂದು. ಸಿಕ್ಕಿದ್ರೆ ನಂಗೂ ಬೇಕು,’ ಅಂತ.
ಮಾರನೇ ದಿನ ಸಿಕ್ದಾಗ ಹೇಳ್ದ: `ಸರ್, ಕುಮಟಾದಲ್ಲಿ ಸಿಗುತ್ತೆ. ಮುಂದಿನ ಸಲ ಊರಿಗೆ ಹೋದಾಗ ತಂದು ಕೊಡ್ತೀನಿ,’ ಅಂತ. ಸರಿ, ಅಂತ ಹೇಳಿ, ಅದನ್ನ ಅಲ್ಲಿಗೇ ಮರೆತು ಬಿಟ್ಟಿದ್ದೆ.
ಒಂದೆರೆಡು ವಾರಗಳಾಗಿರಬಹುದು, ಒಂದಿನ ಸಾಯಂಕಾಲ ಅಂಬಿಕ ಹೇಳಿದ್ಲು: `ರೀ, ಬೆಳಗ್ಗೆ ಜಾಗಿಂಗಿಂದ ಬರ್ತಾ ಬ್ರೆಡ್ ಮತ್ತೆ ಮೊಟ್ಟೆ ತಗೊಂಡು ಬನ್ರಿ. ಪುಟ್ಟು ಬೆಳಗ್ಗೆ ಬೇಗ ಸಮ್ಮರ್ ಕ್ಯಾಂಪ್ ಗೆ ಹೊರಡಬೇಕು,’ ಅಂತ.
`ಮತ್ತದೇ ಬ್ರೆಡ್’ ಅಂತ ಬೈಕೊಂಡೆ, ಇನ್ನೇನೂ ದಾರಿ ಇರ್ಲಿಲ್ಲ. ಬೆಳಗ್ಗೆ ಜಾಗಿಂಗ್ ಮುಗಿಸಿ ಬರುವಾಗ, ಮನೆಯ ಹತ್ತಿರ ಸೂಪರ್ ಮಾರ್ಕೆಟ್ ಗೆ ನುಗ್ಗಿದೆ. ಅದು ಯಾರೋ ಕಾಸರಗೋಡು ಕಡೆಯ ಬ್ಯಾರಿಯದು ಅಂತ ಮೊದಲಿಂದಲೂ ಗೊತ್ತಾಗಿತ್ತು. ಅರ್ಧ ರಾಗವಾದ ಕನ್ನಡ ಮತ್ತು ಮಲೆಯಾಳಿ ಭಾಷೆಯಲ್ಲಿ ಮಾತಾಡುವ ಅವರನ್ನು ಸುಲಭವಾಗಿ ಗುರ್ತಿಸಬಹುದು. ಬ್ರೆಡ್ ಏನೋ ಸಿಕ್ತು, ಮೊಟ್ಟೆ ಎಲ್ಲಿ ಅಂತ ಹುಡುಕುವಾಗ, ಅದು ಯಾವಾಗಲೂ ಇರೋ ಜಾಗದಲ್ಲಿ ಇರ್ಲಿಲ್ಲ. ಕೆಳಗೆಲ್ಲಾದರೂ ಇಟ್ಟಿದ್ದಾರಾ? ಅಂತ ಬಗ್ಗಿ ನೋಡಿದರೆ, ಅಲ್ಲಿ ನಗ್ತಿತ್ತು: `ಅದೇ ಲಿಂಬೂ ಹುಳಿ ಪೆಪ್ಪರ್  ಮೆಂಟ್’.
ಒಂದೆರೆಡು ನಿಮಿಷ ಹ್ಯಾಗೆ ರಿಯಾಕ್ಟ್ ಮಾಡ್ಬೇಕೂ ಅಂತ ಗೊತ್ತಾಗಲಿಲ್ಲ. ನಾವು ಚಿಕ್ಕಂದಿನಲ್ಲಿದ್ದಾಗ, ಲಿಂಬೂ ಮತ್ತೆ ಕಿತ್ತಳೆ ಅಂತ ಎರಡು ರುಚಿಯಲ್ಲಿ ಬರ್ತಿದ್ವು. ಆಮೇಲೆ ಬಣ್ಣ ಬಣ್ಣದ ಕ್ಯಾಂಡಿಗಳು ಸಹ ಇದ್ದವು. ಇಲ್ಲಿ ನೋಡಿದರೆ, ಅದೇ ಥರದಲ್ಲಿ ತೆಂಗಿನಕಾಯಿ, ರಾಸ್ಬೆರಿ ಸಹ ಇದ್ವು. ಒಟ್ಟು, ಏಳೆಂಟು ಥರದ ಲಿಂಬೂಗಳನ್ನು ಬೇರೆ ಬೇರೆ ಪ್ಯಾಕೆಟ್ ಗಳಲ್ಲಿ ಇಟ್ಟಿದ್ರು.
ಒಂದೆರೆಡು ಪ್ಯಾಕೆಟ್ ಗಳನ್ನು ಕೈಗೆತ್ತಿಕೊಂಡು ಹಾಗೇ ನೋಡಿದೆ. ಅದೇ ನಿಂಬೂ ಹುಳಿ. ಸ್ವಲ್ಪ ಗಾತ್ರದಲ್ಲಿ ವ್ಯತ್ಯಾಸ ಇದೆ. ಜೊತೆಯಲ್ಲಿ ಸ್ವಲ್ಪ ಜಾಸ್ತಿ ವೆರೈಟಿ ಇದೆ. ತಮಾಶೆ ಎಂದ್ರೆ, ಇದಕ್ಕೂ ಒಂದು ಬ್ರಾಂಡ್ ಇತ್ತು: `ಅರವಿಂದ್’ ಅಂತ. ಏನು ಮಾಡ್ಬೇಕು ಅಂತ ಗೊತ್ತಾಗದೆ, ವಾಪಾಸ್ ಇಟ್ಟೆ. ಮೊಟ್ಟೆ ಎಲ್ಲಿ? ಅಂತ ಕೇಳಿದಾಗ, ಅಂಗಡಿಯವನು `ಗೋಡೋನ್ ನಲ್ಲಿದೆ ಸರ್, ಈಗ ತಂದ್ಕೊಡ್ತೀನಿ,’ ಅಂತ ಒಳಗೆ ಹೋದ. ಅವನು ಒಳಗೆ ಹೋದ ತಕ್ಷಣ ಮತ್ತೆ ಆ ಪ್ಯಾಕೆಟ್ ಗಳನ್ನು ತಗೊಂಡು ನೋಡ್ತಾ ನಿಂತೆ. ಅಂಗಡಿಯವನು ಮೊಟ್ಟೆ ತಗೊಂಡು ಬಂದ ತಕ್ಷಣ, ಅದನ್ನು ವಾಪಾಸ್ ಇಟ್ಟೆ. ಬಿಲ್ ಮಾಡಿಸುವಾಗ ಏನನ್ನಿಸಿತೋ ಏನೋ, ವಾಪಾಸ್ ಹೋದವನೇ, ಮೂರು ಪ್ಯಾಕೆಟ್ ತಂದು, ಅದರದ್ದೂ ಬಿಲ್ ಮಾಡಿಸಿದೆ.
ದಾರಿಯಲ್ಲಿ ವಾಪಾಸ್ ಬರುವಾಗ ತಲೆಯಲ್ಲಿದ್ದಿದ್ದು ಒಂದೇ. ರಾಘುವನ್ನು ಕರೆದು, `ತಗೋ, ನೀನ್ ತಂದ್ಕೋಡೋಕ್ಕಿಂತ ಮುಂಚೆ ನಾನೇ ಹುಡುಕಿದ್ದೀನಿ,’ ಅಂತ ಹೇಳಿ ಒಂದು ಪ್ಯಾಕೆಟ್ ಕೊಡೋದು. ಹಾಗೇನೇ, ನನ್ನ ಮಗಳು ಸೃಷ್ಟಿಗೆ ಒಂದು ಕೊಟ್ಟರೆ ಏನಾಗಬಹುದು? ಅಂತ ಅನ್ನಿಸ್ತು. ಯದ್ವಾ ತದ್ವಾ ಚಾಕಲೇಟ್ ತಿನ್ನೋ ಈಗಿನ ಮಕ್ಕಳಿಗೆ ಲಿಂಬೂ ಪೆಪ್ಪರ್ ಮೆಂಟ್ ರುಚಿ ತಾಗುತ್ತಾ? ಅಂತಾನೂ ಅನ್ನಿಸ್ತು.
ಮನೆಗೆ ತಗೊಂಡು ಹೋಗಿ ಇಟ್ಟತಕ್ಷಣ ಅಂಬಿಕ ಕೇಳಿದ್ಲು: `ಇದೇನ್ರಿ? ಎಲ್ಲಿಂದ ಹಿಡ್ಕೊಂಡು ಬಂದ್ರಿ? ನಾವು ಚಿಕ್ಕಂದಿನಲ್ಲಿ ತಿಂತಿದ್ವಿ,’ ಅಂತ. ನೆಡೆದಿದ್ದನೆಲ್ಲ ಹೇಳಿ, ಪುಟ್ಟುಗೆ ಒಂದು ಕೊಟ್ಟು ನೋಡ್ಬೇಕು ಅಂದೆ.
`ಮಗಳೇ ನೋಡು, ನಾವೆಲ್ಲ ನಿನ್ನ ಥರ ಚಿಕ್ಕವರಿದ್ದಾಗ ಇದ್ನ ತಿಂತಿದ್ವಿ. ನೋಡು ನಿಂಗೆ ಇಷ್ಟ ಆಗುತ್ತಾ ಅಂತ,’ ಹೇಳಿ ಒಂದನ್ನು ಕೊಟ್ಟೆ. ಅದನ್ನ ಬಾಯಲ್ಲಿಟ್ಟುಕೊಂಡು ಸ್ವಲ್ಪ ಹೊತ್ತು ಚೀಪಿದವಳೇ, `ಅಪ್ಪ, ನಂಗೆ ಇನ್ನೂ ಬೇಕು’ ಅಂದಳು. `ಹ್ಯಾಗಿದೆ ಮಗಳೇ?’ ಅಂತ ಕೇಳ್ದಾಗ, `ಅಪ್ಪ ಚಾಕಲೇಟ್ ಗಿಂತ ಇದೇ ಪರವಾಗಿಲ್ಲ. ಬೇರೆ ಕ್ಯಾಂಡಿಗಳಿಗಿಂತ ಚೆನ್ನಾಗಿದೆ,’ ಅಂದ್ಲು. ಚಾಕಲೇಟ್ ಗಿಂತ ಚೆನ್ನಾಗಿದೆ ಅಂತ ನನ್ನ ಮಗಳಿಗೆ ಅನ್ನಿಸಿದ್ದು ಉತ್ಪ್ರೇಕ್ಷೆ ಅನ್ನಿಸಿದ್ರೂ, ಇಷ್ಟರಮಟ್ಟಿಗೆ ಇಷ್ಟ ಆಯ್ತಲ್ಲ, ಪರವಾಗಿಲ್ಲ, ಅನ್ನಿಸ್ತು.
`ಅಪ್ಪ, ಚಿಕ್ಕಂದಿನಲ್ಲಿ ನೀನು ಕೂಡ ಇದನ್ನ ತುಂಬಾ ತಿಂತಿದ್ದಾ?’ ಅಂತ ಮಗಳು ಕೇಳಿದಳು.
`ಹೂಂ ಮಗಳೇ. ಗೋಲಿ ಆಡುವಾಗ, ಜೇಬಲ್ಲಿ ಇವನ್ನ ಕೂಡ ಗೋಲಿ ಜೊತೆ ಇಟ್ಕೊಂಡಿರ್ತಿದ್ವಿ. ಯಾರಿಗೂ ಗೊತ್ತಾಗದ ಹಾಗೆ, ಒಂದೊಂದೇ ತೆಗೆದು ಬಾಯಿಗೆ ಹಾಕೊಳ್ತಿದ್ವಿ,’ ಅಂದೆ.
`ಅಯ್ಯೋ..  ಗೋಲಿ ಆಡುವಾಗ ಗೋಲಿ ಮತ್ತೆ ಕೈ ಮಣ್ಣಾಗಿರ್ತಿರ್ಲಿಲ್ವಾ?’ ಅಂದಳು ಸೃಷ್ಟಿ.
`ಆಗಿರ್ತಿತ್ತು. ಏನು ಮಾಡೋದು? ಆಗೆಲ್ಲ ಅಷ್ಟು ತಲೆ ಕೆಡಿಸಿಕೊಳ್ತಿರಲಿಲ್ಲ,’ ಅಂದೆ.
`ಮತ್ತೆ ವೆಂಕಟೇಶ್ ದೊಡ್ಡಪ್ಪ ಬೈತಿರಲಿಲ್ವ?’ ಅಂದಳು.
`ಅವನೂ ಚಿಕ್ಕವನಾಗಿದ್ದನಲ್ಲ. ಅವನೂ ಹಾಗೇ ಮಾಡ್ತಿದ್ದ,’ ಅಂದೆ.
`ವೆಂಕಟೇಶ್ ದೊಡ್ಡಪ್ಪ ತುಂಬಾ ಕ್ಲೀನ್ ಅಲ್ವ? ಮತ್ತೆ ಅವರೂ ಹಾಗೇ ಮಾಡ್ತಿದ್ರಾ? ಅವರು ಹಾಗೆ ಮಾಡೋಕೆ ಸಾಧ್ಯನೇ ಇಲ್ಲ,’ ಅಂತ ವಾದಕ್ಕಿಳಿದಳು. ಅವಳಿಗೆ ಹ್ಯಾಗೆ ವಿವರಿಸಿ ಹೇಳ್ಬೇಕು ಅಂತ ನಂಗೆ ಗೊತ್ತಾಗಲಿಲ್ಲ.
ಅಷ್ಟರಲ್ಲಿ ಅದಕ್ಕೆ ಅಂಬಿಕ ಕೂಡ ನಿಂಬೂ ಪೆಪ್ಪರ್ ಮಿಂಟ್ ಗೆ ಪಾಲುದಾರಳಾದಳು. `ವಿನು, ನಾನೊಂದ್ನಾಲ್ಕು ತಗೋತೀನಿ. ನಮ್ಮ ಮಮ್ಮಿಗೂ ಇಂಥದೆಲ್ಲ ಇಷ್ಟ. ಅವರಿಗೂ ತಗೊಂಡು ಹೋಗ್ತೀನಿ,’ ಅಂತ ಹೇಳಿದ ತಕ್ಷಣ, ಒಂದು ಪ್ಯಾಕೆಟ್ ಅವಳ ಕೈಗೆ ಕೊಟ್ಟೆ. ಅಷ್ಟು ಬೇಗ ಒಂದು ಪ್ಯಾಕೆಟ್ ಖಾಲಿಯಾಗಿದ್ದು ನೋಡಿ ಸ್ವಲ್ಪ ನಗು ಬಂತು. ನೋಡೋಣ ಅನ್ಕೊಂಡು ಕ್ಲಬ್ ಕಡೆ ದಾರಿ ಹಿಡಿದೆ.
ಕ್ಲಬ್ ತಲುಪೋಕೆ ಮುಂಚೆನೇ ರಾಘುಗೆ ಫೋನ್ ಮಾಡಿ ರಿಪೋರ್ಟರ್ಸ್ ಗಿಲ್ಡ್ ಹತ್ತಿರ ಬರೋಕೆ ಹೇಳ್ದೆ.  ಸ್ವಲ್ಪ ಹೊತ್ತಿನ ನಂತರ ಅವನು ಬಂದ ತಕ್ಷಣ,  ಪ್ಯಾಕೆಟ್ ತೆಗೆದು ಎರಡು ಲಿಂಬೂ ಪೆಪ್ಪರ್ ಮೆಂಟ್ ಅವನಿಗೆ ಕೊಟ್ಟೆ. `ಎಲ್ಲಿ ಸಿಕ್ತು ಸರ್ ಇದೂ?’ ಅಂತ ಚಪ್ಪರಿಸೋಕೆ ಶುರು ಮಾಡ್ದ. `ನೋಡು, ನೀನು ಬರೀ ಫೋಟೋ ಹಾಕ್ದೆ. ನಾನು ಹುಡುಕ್ಕೊಂಡೇ ಬಂದೆ,’ ಅಂತ ನಗುತ್ತಾ ಒಂದನ್ನು ಬಾಯಿಗೆ ಹಾಕ್ಕೊಂಡೆ. ಹಾಗೆನೇ, ಅಲ್ಲಿ ಬರುತ್ತಿದ್ದ ಕೆಲವು ರಿಪೋರ್ಟರ್ ಗಳಿಗೆ ಎರೆಡೆರೆಡು ಕೊಡೋಕೆ ಶುರು ಮಾಡ್ದೆ. ನಾನು ಕೊಟ್ಟ ತಕ್ಷಣ ಅದಕ್ಕೆ ಹ್ಯಾಗೆ ರಿಯಾಕ್ಟ್ ಮಾಡ್ಬೇಕು ಅಂತ ಯಾರಿಗೂ ಸರಿಯಾಗಿ ಗೊತ್ತಾಗಲಿಲ್ಲ. ಕೆಲವರು ಸುಮ್ಮನೆ ಥ್ಯಾಂಕ್ಸ್ ಹೇಳಿದರೆ, ಇನ್ನು ಕೆಲವರು `ಏನು ವಿಶೇಷ?’ ಅಂತ ಕೇಳಿದ್ರು. `ಏನಿಲ್ಲ, ಇದನ್ನ ಚಿಕ್ಕಂದಿನಲ್ಲಿ ತಿಂದಿದ್ರಾ?’ ಅಂತ ಕೇಳಿದ್ರೆ, `ಅದಕ್ಕೆ ಕೇಳ್ದೆ, ಏನು ವಿಶೇಷ ಅಂತ. ಇದು ಎಲ್ಲಿ ಸಿಗುತ್ತೆ?’ ಅಂತ ಕೇಳ್ತಿದ್ರು.
ಅಷ್ಟರಲ್ಲಿ ಬಂದವನೇ ಅನಂತರಾಮ ಸಂಕಲಾಪುರ. `ಎಲ್ಲಿ ಸಿಕ್ತೋ ಇದು? ಚಿಕ್ಕಂದಿನಲ್ಲಿ ಎಷ್ಟೊಂದು ತಿಂತಿದ್ವಿ ಗೊತ್ತಾ? ನಮ್ಮ ಹಳ್ಳಿಯಿಂದ ಅಜ್ಜಂಪುರಕ್ಕೆ ಬಸ್ಸಿನಲ್ಲಿ ಆಗ 35 ಪೈಸೆ ಬಸ್ ಚಾರ್ಜ್. ಈ ಲಿಂಬೂ ಪೆಪ್ಪರ್ ಮೆಂಟ್, ಮಂಡಕ್ಕಿ ಮತ್ತೆ ಬೋಟಿ ತಿನ್ನೋಕೆ ಅಂತ ಒಂದು ದಾರಿ ನೆಡ್ಕೊಂಡು ಬರ್ತಿದ್ವಿ. ಕೈನ ಬೆರಳುಗಳಿಗೆಲ್ಲ ಬೋಟಿ ಸಿಗಿಸ್ಕೊಂಡು, ಜೇಬಲ್ಲಿ ಮಂಡಕ್ಕಿ ಮತ್ತೆ ಲಿಂಬೂ ಪೆಪ್ಪರ್ ಮೆಂಟ್ ತುಂಬಿಕೊಂಡು, ನೆಡ್ಕೊಂಡು ಬರೋದು ಅಂದ್ರೆ ಎಷ್ಟು ಖುಶಿಯಾಗ್ತಿತ್ತು ಗೊತ್ತಾ?’ ಅಂತ ಗತಕಾಲಕ್ಕೆ ಜಾರಿದ.
ಅಷ್ಟರಲ್ಲಿ, ಕ್ಲಬ್ ಸೆಕ್ರಟರಿ ಸದಾಶಿವ ಶೆಣೈ ಬಂದರು. ಅವರಿಗೂ ಎರಡು ಕೊಟ್ಟ ತಕ್ಷಣ, `ಎಲ್ಲಿ ಸಿಕ್ತು ವಿನಯ್ ಇದು? ಎಷ್ಟು ವರ್ಷವಾಗಿತ್ತು ನೋಡಿ? ನಾವು ಚಿಕ್ಕವರಿದ್ದಾಗ, ಒಂದು ಪೈಸೆಗೆ ಎರಡು ಸಿಕ್ತಿತ್ತು,’ ಅಂದರು. ನಾನು ಚಿಕ್ಕವನಿದ್ದಾಗ ಇದು ಪೈಸೆಗೊಂದಿತ್ತೋ ಅಥವಾ ಐದು ಪೈಸೆಗೆ ಮೂರಿತ್ತೋ ಅಂತ ಸರಿಯಾಗಿ ನೆನಪಾಗಲ್ಲ.
ಅದೇ ದಾರಿಯಲ್ಲಿ ಬಂದ ಉದಯವಾಣಿಯ ಗಿರಿ ಸಹ ಪೆಪ್ಪರ್ ಮೆಂಟ್ ಚಪ್ಪರಿಸುತ್ತಾ, `ಎಲ್ಲಿಂದ ತಂದ್ರಿ ಸರ್? ನಂಗಿನ್ನೊಂದೆರಡು ಕೊಡಿ,’ ಅಂದ. ಅಷ್ಟರಲ್ಲಿ ಅಲ್ಲಿಗೆ ಬಂದ ರತ್ನಾಕರ ಜೋಶಿ, `ಒಳ್ಳೆ ಕೆಲ್ಸ ಮಾಡಿದ್ರಿ ವಿನಯ್. ಎಷ್ಟು ವರ್ಷ ಆಯ್ತ್ರೀ ತಿಂದು. ಎಲ್ಲಿಂದ ತಂದ್ರಿ ಇದ್ನಾ?’ ಅಂದರು.
ಯಾಕೋ ಲಿಂಬೂವಿಗೆ ಡಿಮ್ಯಾಂಡ್ ಇನ್ನೂ ಇದೆ ಅಂತ ಅನ್ನಿಸೋಕ್ಕೆ ಶುರುವಾಯ್ತು. ರಾಘುನೂ ಇನ್ನೂ ಬೇಕು ಅನ್ನೋಕೆ ಶುರು ಮಾಡ್ದ. `ಇದೇ ಕೊನೆ ಕಣ್ರೋ. ಇನ್ನೂ ಬೇಕಾದ್ರೆ ನಾಳೆ ತಂದ್ಕೊಡ್ತೀನಿ. ಈಗ ಸಿಕ್ಕಿದವರಿಗೆಲ್ಲಾ ಕೊಡ್ತೀನಿ. ಎಷ್ಟು ಜನಕ್ಕೆ ಅವರ ಬಾಲ್ಯ ನೆನಪಾಗುತ್ತೆ ನೋಡೋಣ,’ ಅಂದೆ.
ಏನನ್ನಿಸ್ತೋ ಏನೊ, ಸೀದ ಕ್ಲಬ್ ನ ಒಳಗೆ ಕಾರ್ಡ್ಸ್ ರೂಮಿಗೆ ನುಗ್ಗಿದೆ. ಅಲ್ಲಿ ಪೊನ್ನಪ್ಪ, ವಿಜಯೇಂದ್ರ ಮತ್ತಿನ್ನಿಬ್ಬರು ಬಿಟ್ಟರೆ ಯಾರೂ ಪರಿಚಯವಿರಲಿಲ್ಲ. ಸರಿ, ನಂಗೇನಾಗ್ಬೇಕು ಅಂತ ಎಲ್ಲರಿಗೂ ಎರೆಡೆರೆಡು ಹಂಚೋಕೆ ಶುರು ಮಾಡ್ದೆ. ಮೊದಲು ಎಲ್ಲಾ ಸುಮ್ಮನೆ ಮುಖ ನೋಡ್ತಾ ಇಸ್ಕೊಂಡ್ರು. ವಿಜಯೇಂದ್ರ ಮಾತ್ರ ಕಾರ್ಡ್ಸ್ ಎಸೆದು ಎದ್ದು ನಿಂತರು. ಎಲ್ಲೋ ಕಳೆದು ಹೋದ ವಸ್ತು ಸಿಕ್ಕಿದಂತೆ ಸಂಭ್ರಮ ಪಟ್ಟರು. `ಎಲ್ಲಿಂದ ತಂದೋ ಇದನ್ನ? ಎಷ್ಟು ವರ್ಷ ಆಗಿತ್ತು ಇದನ್ನ ನೋಡಿ. ಚಿಕ್ಕಂದಿನ ಎಲ್ಲಾ ದಿನಗಳೂ ನೆನಪು ಬರುತ್ತೆ ಇದನ್ನ ನೋಡಿದ್ರೆ,’ ಅಂತ ಚಪ್ಪರಿಸೋಕೆ ಶುರು ಮಾಡಿದ್ರು. ಅವರ ಸಂಭ್ರಮ ನೋಡಿ ಕೈಲಿದ್ದ ಅರ್ಧ ಪ್ಯಾಕೆಟ್ ವಿಜಯೇಂದ್ರನ ಕೈಗೆ ತುರುಕಿ `ಇಟ್ಕೊಳಿ ಇದನ್ನ,’ ಅಂದೆ. ಆಗ ಒಬ್ಬೊಬ್ಬರೇ ಲಿಂಬೂ ಪೆಪ್ಪರ್ ಮೆಂಟಿನ ನೆನಪುಗಳ ಮೂಲಕ ತಮ್ಮ ಬಾಲ್ಯದ ಕಥೆಗಳನ್ನು ಹೇಳೋಕೆ ಶುರು ಮಾಡಿದ್ರು. ಹೆಚ್ಚಿನವರೆಲ್ಲಾ ನನಗಿಂತ ಇಪ್ಪತ್ತು-ಇಪ್ಪತೈದು ವರ್ಷ ದೊಡ್ಡವರಿರಬಹುದು.
ವಿಜಯೇಂದ್ರನಿಗೂ ಸೇರಿ, ಅಲ್ಲಿ ಸಕ್ಕರೆ ಕಾಯಿಲೆ ಇದ್ದವರು ಸುಮಾರು ಜನ ಇದ್ದರು. ಅದರ ಬಗ್ಗೆ ಯಾರೂ ತಲೆ ಕಡಿಸಿಕೊಂಡಂತೆ ಕಾಣಲಿಲ್ಲ. ನಂಗೇನೋ ಇದು ಬಹಳ ಮಜವಾಗಿದೆ ಅನ್ನಿಸ್ತು.
ಇದ್ದ ಕೊನೆಯ ಪ್ಯಾಕೆಟನ್ನು ಜೇಬಿಗೆ ಹಾಕಿಕೊಂಡು ವಿಧಾನಸೌಧಕ್ಕೆ ನೆಡೆದೆ. ಅಲ್ಲಿ ಕಮಿಟಿ ರೂಮಿನ ಹತ್ತಿರ ಯಾವುದೋ ಮೀಟಿಂಗ್ ನೆಡೆಯುತ್ತಿತ್ತು. ಅಲ್ಲೆ ಹೊರಗಡೆ ಕಾಯ್ತಾ, ಲಕ್ಷ್ಮಣ್ ಹೂಗಾರ್ ಜೊತೆ ಮಾತಾಡ್ತಾ ಇದ್ದೆ. ಎಲ್ಲಿಂದಲೋ ಬಂದ ಕಾರಟಗಿ, ಜೇಬಿನಿಂದ ಲವಂಗ ತೆಗೆದು ಹೂಗಾರ್ ಗೆ ಕೊಡಲು ಹೊರಟ. ತಕ್ಷಣವೇ ನಾನು ಜೇಬಿನಿಂದ ಲಿಂಬೂ ಪೆಪ್ಪರ್ ಮೆಂಟ್ ತೆಗೆದು ಹೂಗಾರ್ ಗೆ ಕೊಟ್ಟೆ. `ಎಲ್ಲಿಂದ ತಂದ್ರಿ ನಾಯಕರೆ? ಎಲ್ಲಾರೂ ಚಿಕ್ಕಂದಿನಲ್ಲಿ ಇದ್ನ ತಿಂದಿರ್ತಾರೆ. ಎಷ್ಟು ವರ್ಷ ಆಯ್ತು ಗೊತ್ತಾ ನೋಡಿ,’ ಅಂದರು. ತಕ್ಷಣವೇ ನಾನು ಸುತ್ತ ಇದ್ದ ಎಲ್ಲಾ ರಿಪೋರ್ಟರ್ ಗಳಿಗೆ ಹಂಚೋಕೆ ಶುರು ಮಾಡ್ದೆ. ಯಾಕೋ ತಿರುಗಿ ನೋಡಿದರೆ ಸುಮಾರು ಕೈಗಳು ಮುಂದೆ ಬಂದಿದ್ದು ಕಾಣ್ತು. ಅಲ್ಲಿದ್ದ ಪೋಲಿಸರು, ಮಂತ್ರಿಗಳ ಸಹಾಯಕರು, ಎಲ್ಲರೂ ಕೈ ಚಾಚಿದ್ದರು. ಎಲ್ಲರೂ ಒಂದೇ ಪ್ರಶ್ನೆ ಕೇಳ್ತಿದ್ರು: `ಎಲ್ಲಿ ಸಿಕ್ತು ಸರ್ ಇದು?’ ಅಂತ. ಎರಡೇ ನಿಮಿಷದಲ್ಲಿ ಇಡೀ ಪ್ಯಾಕೆಟ್ ಖಾಲಿಯಾಯ್ತು. ಆಗ ಬಂದ ಈ ಟಿವಿ ನಾಣಯ್ಯ. `ನಂಗೆಲ್ಲಿ ವಿನಯ್?’ ಅಂದಾಗ `ನಾಳೆ ಒಂದಿಡೀ ಪ್ಯಾಕೆಟ್ ನಿಂಗೆ ಕೊಡ್ತೀನಿ’ ಅಂದೆ. ಅಲ್ಲೆ ಪಕ್ಕದಲ್ಲಿದ್ದ ಸಮಯ ಟಿವಿಯ ಸೌಮ್ಯ ರಾಣಿ, `ಸರ್ ನಂಗೂ ಒಂದು ಪ್ಯಾಕೆಟ್ ಬೇಕು,’ ಅಂದಳು. `ಸರಿಯಮ್ಮ, ತಂದ್ಕೊಡ್ತೀನಿ,’ ಅಂದ.
ಎಲ್ಲಾ ಕಥೆಗಳನ್ನು ನೋಡಿದ ಮೇಲೆ ನನಗೆನಿಸಿದ್ದು ಅಂದ್ರೆ, ಈ ಲಿಂಬೂ ಪೆಪ್ಪರ್ ಮೆಂಟ್ ಅನ್ನೋದು ಇತ್ತೀಚಿನವರೆಗೂ ಎಲ್ಲಾ ಮಕ್ಕಳ ಫೇವರೆಟ್ ಕ್ಯಾಂಡಿಯಾಗಿತ್ತು. ಯಾಕೆಂದ್ರೆ, ನಮ್ಮ ಆಫೀಸಿನಲ್ಲಿ ಅಲೀನಾಳಿಗೆ ಕೊಟ್ಟಾಗಲೂ, ಅವಳು ಚಿಕ್ಕಂದಿನಲ್ಲಿ ತಿನ್ನುತ್ತಿದ್ದಿದಾಗಿ ಹೇಳಿದಳು. ಆದ್ರೆ ಇದು ಎಲ್ಲಿ ನಾಪತ್ತೆಯಾಗಿತ್ತು ಇಷ್ಟು ದಿನ ಅಂತ ಗೊತ್ತಾಗಲಿಲ್ಲ.
ಜೋಶಿಯಂತೂ ಒಂದು ಪ್ಯಾಕೆಟ್ ತೆಗೆದುಕೊಂಡು ರಿಪೋರ್ಟರ್ಸ್ ಗಿಲ್ಡ್ ನಲ್ಲಿ ಇಟ್ಟುಕೊಂಡರು. ಕಸ್ತೂರಿ ಟಿವಿಯ ಬದ್ರುದ್ದೀನ್ ಒಂದು ಪ್ಯಾಕೆಟ್ ಮನೆಗೆ ತಗೊಂಡು ಹೋದ. ಇದರ ಮಧ್ಯ ವಿಜಯೇಂದ್ರ ಫೇಸ್ ಬುಕ್ ನಲ್ಲಿ, ಅವರಿಗೆ ಸಿಕ್ಕಿದ ಲಿಂಬೂ ಪೆಪ್ಪರ್ ಮೆಂಟ್ ಬಗ್ಗೆ ಬರೆದರು. ಅದನ್ನು ನೋಡಿದ, ನನ್ನ ಜೊತೆ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದ ಸ್ಯಾವಿ ಕರ್ನೆಲ್ ತನಗೂ ಒಂದು ಪ್ಯಾಕ್ ಬೇಕು ಅಂದಳು.
ಅವತ್ತಿನಿಂದ, ಒಬ್ಬರಲ್ಲೋಬ್ಬರಿಗೆ ಬೇಕಾಗಿ ನಾನು ಸೂಪರ್ ಮಾರ್ಕೆಟ್ ನ ಖಾಯಂ ಗಿರಾಕಿಯಾಗಿದ್ದೇನೆ. ನನ್ನ ಮಗಳು ವಾರಕ್ಕೊಂದರಂತೆ ಪ್ಯಾಕೆಟ್ ಗಳನ್ನು ಖಾಲಿ ಮಾಡ್ತಾ ಇದ್ದಾಳೆ.  ಯಾತಕ್ಕಾದರೂ ಇರಲಿ ಅಂತ ಕಾರಿನಲ್ಲಿ ಒಂದು ಪ್ಯಾಕೆಟ್ ಇಟ್ಟಿರುತ್ತೇನೆ.
ಮೊನ್ನೆ ವಿಧಾನ ಸೌಧಕ್ಕೆ ಹೋಗೋಣ ಅಂತ ಕ್ಲಬ್ ಹತ್ತಿರ ಕಾರು ನಿಲ್ಲಿಸಿದೆ. ಅಲ್ಲಿಗೆ ಬಂದ ಬದ್ರುದ್ದೀನ್, `ಅದೆಲ್ಲಿ ಸಿಗುತ್ತಣ್ಣ ನಿಂಬೂ ಪೆಪ್ಪರ್ ಮೆಂಟ್? ಅವತ್ತು ತಗೊಂಡು ಹೋಗಿದ್ದು ಖಾಲಿಯಾಯ್ತು. ನನ್ನ ಮಗಂಗೆ ರುಚಿ ಹತ್ತಿದೆ. ಅದು ನನ್ನ ಹೆಂಡತಿ ಫೇವರೆಟ್ ಬೇರೆ. ಅವಳು ಚಿಕ್ಕಂದಿನಿಂದ ಹಳ್ಳಿಯಲ್ಲಿ ಬೆಳೆದದ್ದು ಬೇರೆ. ಯಾವಾಗಲೂ ಇಂಥ ತಿಂಡಿ ತಿಂದುಕೊಂಡೇ ಬೆಳೆದದ್ದು. ಇಡೀ ಬಸವೇಶ್ವರ ನಗರ ಹುಡುಕ್ದೆ. ಸಿಗ್ಲಿಲ್ಲ. ಎಂ.ಕೆ.ಅಹ್ಮದ್ ನಲ್ಲಿ ಸಿಗ್ತದಾ ಅಂತ ನೋಡ್ಬೇಕು,’ ಅಂದ.
`ತಗೋ, ಕಾರಲ್ಲೇ ಇದೆ. ದೇವೇಗೌಡರ ಮನೆಗೆ ಬರ್ತೀಯಲ್ಲ, ಯಾವುದಾದರೂ ಇಂಟರ್ ವ್ಯೂಗೆ. ಅಲ್ಲೇ ಪಕ್ಕದಲ್ಲಿ ಇದೆ,’ ಅಂದೆ.
`ಅದಾಗಲ್ಲ ಅಣ್ಣ. ಅಲ್ಲಿಗೆ ಬರೋದು ಕಾಯೋಕಾಗಲ್ಲ. ಈಗ ಬಸವೇಶ್ವರ ನಗರದಲ್ಲಿ ಯಾವುದಾದ್ರು ಬ್ಯಾರಿಯ ಅಂಗಡಿ ಹುಡುಕಬೇಕು,’ ಅಂದ. ಅಷ್ಟರಲ್ಲಿ ಅಲ್ಲಿಗೆ ಬಂದ ಜೋಶಿ, ಲಿಂಬೂ ಪೆಪ್ಪರ್ ಮೆಂಟಿನ ವಿಷಯ ಮಾತಾಡ್ತಿದ್ದನ್ನು ನೋಡಿ, ರಿಪೋರ್ಟರ್ಸ್ ಗಿಲ್ಡ್ ನಲ್ಲಿ ಇಟ್ಟಿದ್ದ ಸ್ಟಾಕ್ ಖಾಲಿಯಾಯ್ತು, ಅಂದರು. ಸರಿ, ಉಳಿದಿದ್ದ ಇನ್ನೊಂದು ಪ್ಯಾಕೆಟ್ ತೆಗೆದು ಗಿಲ್ಡ್ ನಲ್ಲಿ ಇಟ್ಟಿದ್ದಾಯ್ತು.
ವಿಧಾನ ಸೌಧದಲ್ಲಿ ಶಿವರಾಜ್ ಮತ್ತೆ ವಿಠ್ಠಲ್ ಮೂರ್ತಿ ಸಿಕ್ಕಿದ್ರು. ಅದೂ ಇದೂ ಮಾತಾಡ್ತಾ, ಲಿಂಬೂ ಪೆಪ್ಪರ್ ಮೆಂಟ್ ಸ್ಟಾಕ್ ಮತ್ತೆ ಬಂದಿರುವ ವಿಷಯ ಹೇಳ್ದೆ. ತಕ್ಷಣ ವಿಠ್ಠಲ್ ಮೂರ್ತಿ, `ಅಣ್ಣ, ವಿಷ್ಯ ಗೊತ್ತ. ಈ ಲಿಂಬೂ ಹೊಡೆತದಲ್ಲಿ, ಶಿವರಾಜ್ ಮತ್ತೆ ಜೋಶಿ ಅಡಕೆ ತಿನ್ನೋದು ಬಿಟ್ಟಿದ್ದಾರೆ. ದಿನಾ ಊಟ ಆದ ಮೇಲೆ ಎರೆಡೆರೆಡು ಪ್ಯಾಕ್ ಅಡಕೆ ಪುಡಿ ತಿಂತಿದ್ರು. ಈಗ ಎರೆಡೆರೆಡು ಲಿಂಬೂ ತಿಂತಾರೆ,’ ಅಂದ.
ಇದೆಲ್ಲದರ ಮಧ್ಯ ಒಂದು ಘಟನೆ ನೆಡೆದಿತ್ತು. ಏಪ್ರಿಲ್ 5 ನೇ ತಾರೀಖು ಫೇಸ್ ಬುಕ್ ನಲ್ಲಿ ಯಾರೋ ಪೂರ್ಣಚಂದ್ರ ತೇಜಸ್ವಿಯವರ ಹುಟ್ಟಿದ ದಿನ ಅಂತ ಬರೆದಿದ್ದರು. `ಎಂಥಾ ಅಭಿಮಾನಿಗಳಪ್ಪಾ ಇವರು? ಹುಟ್ಟಿದ ಮತ್ತು ಸತ್ತ ದಿನಗಳನ್ನು ಸರಿಯಾಗಿ ನೆನಪು ಇಟ್ಟುಕೊಳ್ಳೋದಿಲ್ಲ’, ಅಂತ ಬೇಜಾರು ಮಾಡ್ಕೊಂಡಿದ್ದೆ. ಮಧ್ಯಾಹ್ನ ಪ್ರೆಸ್ ಕ್ಲಬ್ ಹತ್ತಿರ ಹೋದಾಗ ತೇಜಸ್ವಿಯವರ ಫೋಟೋ ನೋಡಿದೆ. ಅಲ್ಲಿನ ವೇದಿಕೆ ಮೇಲೆ ಯಾರೋ ಓಡಾಡುತ್ತಿದ್ದದ್ದು ಕಂಡಿತು. ಹತ್ತಿರ ಹೋಗಿ ನೋಡಿದಾಗ, ಯಾವುದೋ ನಾಟಕ ತಂಡದವರು ತೇಜಸ್ವಿಯವರ ಪರಿಸರದ ಕಥೆಗಳ ಸರಣಿಯಲ್ಲಿ ಬರುವ ಗಾಡ್ಲಿ ಕೋತಿ ಹಿಡಿಯಲು ಹೊರಟ ಪ್ರಸಂಗದ ನಾಟಕ ನೆಡೆಯುತ್ತಿತ್ತು. ತುಂಬಾನೇ ಚೆನ್ನಾಗಿ ಮಾಡಿದರು.
ಗಾಡ್ಲಿ ಕೋತಿಗಳನ್ನು ಬೋನಿನಲ್ಲಿ ಹಿಡಿದು, ನಂತರ ಕಾಡಿನಲ್ಲಿ ಬಿಡಲು ಹೋದಾಗ, ತಾನೇ ಬೋನಿನಲ್ಲಿ ಸಿಕ್ಕಿಹಾಕಿಕೊಂಡದ್ದನ್ನು, ಈ ತಂಡದವರು ಅಧ್ಬುತವಾಗಿ ಅಭಿನಯಿಸಿದ್ದರು. ಈಗೀಗ ನಂಗನ್ನಿಸ್ತಿದೆ, ನಾನೂ ಗಾಡ್ಲಿ ಥರ ಸಿಕ್ಕಿಹಾಕಿಕೊಂಡಿದ್ದೇನೆ. ಲಿಂಬೂ ಪೆಪ್ಪರ್ ಮೆಂಟಿನ ಬೋನಿನಲ್ಲಿ…..   

ಶನಿವಾರ, ಏಪ್ರಿಲ್ 21, 2012

ತೆಲಗಿ


ತೆಲಗಿ ಸಾಮ್ರಾಜ್ಯದಲ್ಲೋಬ್ಬ ತಿನೇಕರ್


ಈ ರಾಮು ಪಾಟೀಲ ಮಾಡಿದ ಕಿತಾಪತಿ ಒಂದೆರೆಡಲ್ಲ. ಒಂದೊಂದ್ಸಲ ನೆನಪಾದಾಗ, ಅವನೇನು ಮಾಡ್ದ ಅಂತ ಅವನಿಗೊತ್ತೋ ಇಲ್ವೋ ಅಂದ್ಕೋತ್ತೀನಿ.
ನಮ್ಮ ಹುಬ್ಬಳ್ಳಿ ಇಂಡಿಯನ್ ಎಕ್ಸ್ ಪ್ರೆಸ್ ಆಫೀಸಿನಿಂದ ಬೆಂಗಳೂರಿಗೆ ವರ್ಗವಾಗಿ ಬಂದ ತಕ್ಷಣವೇ ಗೊತ್ತಾಯ್ತು… ಇವನೊಬ್ಬ ಶುದ್ದ ಒರಟ ಅಂತ. ಗುಲ್ಬರ್ಗಾ ಮೂಲದ ಎಲ್ಲಾ ಗುಣಗಳು ಎದ್ದು ಕಾಣುತ್ತಿದ್ದವು. ಕಂಡದ್ದನ್ನು ಕಂಡ ಹಾಗೆ ಹೇಳಿಬಿಡ್ತಿದ್ದ.
ಮೊದಲು, ಅವನು ನನ್ನ ಜಾಗದಲ್ಲಿ ಕ್ರೈಂ ರಿಪೋರ್ಟರ್ ಆಗುವುದು ಮತ್ತು ನಾನು ಹೈ ಕೋರ್ಟ್ ನೋಡಿಕೊಳ್ಳುವುದು ಅಂತ ಮಾತಾಗಿತ್ತು. ಒಂದೆರೆಡು ದಿನಗಳಲ್ಲಿ ರಾಮು ಕ್ರೈಂ ರಿಪೋರ್ಟಿಂಗ್ ಗೆ ಪೂರ್ತಿ ಹೊಂದಿಕೊಂಡಾಗಿತ್ತು. ಏನಾದ್ರು ಅನುಮಾನ ಬಂದ್ರೆ ಮಾತ್ರ ಅವನಿಗೆ ನನ್ನ ಸಹಾಯ ಬೇಕಾಗುತ್ತಿತ್ತು ಅಷ್ಟೆ. ಅದು ಬಿಟ್ಟರೆ, ಅವನ ಕೆಲಸ ಅವನು ಮಾಡಿಕೊಂಡು ಹೋಗ್ತಿದ್ದ.
ಒಂದಿನ ಪೋಲಿಸ್ ಕಮೀಷನರ್ ಆಫೀಸಿನಿಂದ ಬಂದವನೇ ಹೇಳಿದ: `ಇದೇನೋ ದೊಡ್ಡದೈತ್ರಿ ಕೇಸು’
`ಯಾವುದೋ ಅದು?’ ಅಂದೆ.
`ಇದ್ಯಾವುದೋ ಗ್ಯಾಂಗ್… ಫೇಕ್ ಸ್ಟ್ಯಾಂಪ್ ಪೇಪರ್ ಮಾಡ್ತೈತಂತ್ರಿ. ಹತ್ತು ಕೋಟಿಗೂ ಮಿಕ್ಕಿ ಮಾಡೈತಂತ್ರಿ. ಬಾಳಾ ದೊಡ್ಡದೈತ್ರಿ ಗ್ಯಾಂಗ್,’ ಅಂದ.
ಹುಬ್ಬಳ್ಳಿಯಿಂದ ಈಗ ಬಂದಿದ್ದಕ್ಕೆ `ಎಕ್ಸೈಟ್’ ಆಗಿದ್ದಾನೆ ಅನ್ನಿಸ್ತು. `ಇಂಥವು ಸುಮಾರು ಗ್ಯಾಂಗುಗಳಿದ್ದಾವೆ ಕಣೋ. ಕೇರಳದ ಭಾಸ್ಕರ್ ನಾಯರ್ ಅನ್ನೋನು ತುಂಬಾ ಮಾಡಿ, ಕೊನೆಗೆ ತಪ್ಪಿಸಿಕೊಂಢು ಹೋಗಿದ್ದಾನೆ. ಅವನ ಗ್ಯಾಂಗ್ ಏನಾದ್ರೂ ಮಾಡಿದ್ಯಾ?’ ಅಂತ ಕೇಳ್ದೆ.
`ಇಲ್ರಿ… ಆ ಹೆಸರು ಹೇಳಿಲ್ರಿ. ಕಿಂಗ್ ಪಿನ್ ಯಾರು ಅಂತಾನೂ ಹೇಳಿಲ್ರಿ. ಆದ್ರೂ ಇದ್ಯಾಕೋ ದೊಡ್ಡ ಗ್ಯಾಂಗೇ ಸರ್,’ ಅಂದ. ನಾನೇನೂ ಅಷ್ಟೊಂದು ತಲೆ ಕೆಡಿಸಿಕೊಳ್ಳಲಿಲ್ಲ.
ಎರಡು ಮೂರು ದಿನಗಳಲ್ಲಿ ಯಾವುದೋ ರಜಾ ಬಂತು. ಯಾಕೋ ಪೇಪರ್ ತುಂಬುವಷ್ಟು ಸ್ಟೋರಿಗಳಿಲ್ಲ ಅಂತ ಅನ್ನಿಸಿ ನಮ್ಮ ನಮ್ಮಲ್ಲೇ ಮಾತಾಡುತ್ತಿದ್ದೆವು. ಇದ್ದಕ್ಕಿದ್ದಂತೆ ರಾಮು ಬಂದವನೇ, `ಸರ್, ಆ ಫೇಕ್ ಸ್ಟ್ಯಾಂಪ್ ಕೇಸ್ ತುಂಬಾನೇ ದೊಡ್ಡದೈತ್ರಿ. ಎರಡು ದಿನ ಆಯ್ತ್ರಿ… ಯಾರೂ ತಲಿ ಕೆಡಿಸ್ಕೊಂಡಂಗಿಲ್ಲ. ಒಟ್ಟಾ ಭಾರಿ ಕೇಸ್ರಿ ಅದು. ಸ್ವಲ್ಪ್ ಹಿಂದ ಬಿದ್ರ, ಒಳ್ಳೆ ಸ್ಟೋರಿ ಆಗ್ತದ್ರಿ,’ ಅಂದ.
ಅಷ್ಟು ದಿನ ಅದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದ ನಾನು, `ಯಾರು ಹಿಡಿದಿದ್ದು?’ ಅಂತ ಕೇಳ್ದೆ.
`ಚಿಕ್ಕಪೇಟೆ ಎ.ಸಿ.ಪಿ, ಬಾವ. ನೀವವ್ರಿಗ ಒಂದು ಫೊನ್ ಹಚ್ರೀ. ನಾ ಹೋಗಿ ಪೂರ್ತಿ ನೋಡ್ಕೊಂಡು ಬರ್ತೀನ್ರಿ,’ ಅಂದ.
ಸರಿ, ಬಾವನಿಗೆ ಫೋನ್ ಮಾಡಿ, ಆಫೀಸಿನಲ್ಲಿದ್ದೀರಾ? ಅಂತ ಕೇಳ್ದೆ. ಇದ್ದೀನಿ ಅಂತ ಅವರು ಹೇಳ್ದಾಗ, `ನಮ್ಮ ರಾಮು ಪಾಟೀಲ ಅಲ್ಲಿಗೆ ಬರ್ತಾನೆ. ಅದೇನೋ ಫೇಕ್ ಸ್ಟ್ಯಾಂಪ್ ಪೇಪರ್ ಕೇಸ್. ಸ್ವಲ್ಪ ಡೀಟೇಲ್ ಕೊಡ್ತೀರಾ?’ ಅಂತ ಕೇಳ್ದೆ.
`ನೀನೇನು ಮಾಡ್ತೀಯ ಆಫೀಸಲ್ಲಿ? ನೀನೂ ಬಾ,’ ಅಂತ ತಮಾಷೆ ಮಾಡಿದ್ರು. ನನಗೂ ಏನೂ ಕೆಲಸ ಇರಲಿಲ್ಲ. ಸರಿ ಅಂತ ರಾಮು ಜೊತೆ ಹೊರಟೆ.
ಬಾವ ತಮ್ಮ ಚೇಂಬರಿನಲ್ಲಿ ಆರಾಮವಾಗಿ ಕೂತಿದ್ದರು. ರಾಮುವನ್ನು ಪರಿಚಯ ಮಾಡಿಕೊಟ್ಟ ಒಂದೆರೆಡು ನಿಮಿಷದಲ್ಲಿ, ತಮ್ಮ ಶಿಷ್ಯ ಜಗ್ಗುವನ್ನು ಕರೆದು ವಸಂತನಗರದಲ್ಲಿ ಸೀಜ್ ಮಾಡಿದ ಒಂದು ಲೆಡ್ಜರ್ ರಾಮುವಿಗೆ ತೋರಿಸಲು ಹೇಳಿದರು. ರಾಮು ಜಗ್ಗುವಿನ ಜೊತೆ ಪಕ್ಕದ ರೂಮಿಗೆ ಹೋದ ಮೇಲೆ, ನಾನು ಮತ್ತು ಬಾವ ಮಾತಾಡ್ತಾ ಕೂತೆವು. ತುಂಬಾ ದಿನದಿಂದ ಸಿಕ್ಕಿರಲಿಲ್ಲ. ಹಾಗಾಗಿ ಸ್ವಲ್ಪ ಜಾಸ್ತಿ ಹೊತ್ತೇ ಮಾತಾಡಿದೆವು. ಯಾಕೋ ಸಮಯ ನೋಡಿದರೆ, ನಾವು ಬಂದು ಒಂದು ಘಂಟೆಗೂ ಹೆಚ್ಚು ಸಮಯ ಆಗಿತ್ತು. ರಾಮು ಪತ್ತೆ ಇರಲಿಲ್ಲ.
ಬಾವನೇ ನೆನಪು ಮಾಡಿಕೊಮಡು ಜಗ್ಗುವನ್ನು ಕರೆದರು. ಜಗ್ಗು ಬಂದವನೇ ರಾಮು ಇನ್ನೂ ಲೆಡ್ಜರ್ ಗಳನ್ನು ನೋಡ್ತಾ ಇದ್ದಾನೆ ಅಂತ ಹೇಳ್ದ. ನನ್ನ ಮುಖವನ್ನೇ ನೋಡಿದ ಬಾವ, `ಸಾಕು… ಅವರ್ನ ಕರ್ಕೊಂಡು ಬಾ,’ ಅಂದರು. ಒಂದೈದು ನಿಮಿಷದ ಬಳಿಕ, ರಾಮು ಒಳಗೆ ಬಂದವನೇ, `ತುಂಬಾ ಥ್ಯಾಂಕ್ಸ್ ರೀ,’ ಅಂದ.
`ನೀವೇನ್ಬೇಕಾದ್ರೂ ಬರ್ಕೊಳ್ಳಿ… ನನ್ನ ಹೆಸ್ರು ಮಾತ್ರ ಎಲ್ಲೂ ಬರಬಾರದು,’ ಅಂತ ರಾಮುಗೆ ಹೇಳ್ದಾಗ, ನಾನು ಸುಮ್ಮನೆ ನಕ್ಕೆ. ದಾರಿಯಲ್ಲಿ ಹೋಗುವಾಗ ರಾಮು ಹೇಳ್ದ: `ನಾ ಹೇಳಿಲ್ಲೇನ್ರಿ ಇದು ಖತರ್ನಾಕ್ ಗ್ಯಾಂಗ್ ಅಂತ. 250 ಕೋಟಿಗೂ ಹೆಚ್ಚ ಸ್ಟ್ಯಾಂಪ್ ಮಾರ್ಯಾರ… ಅದೂ ಬ್ಯಾಂಕ್ ಗಳಿಗ. ಪೂರ್ತ ಡೀಟೇಲ್ಸ್ ನನ್ನ ಕಡಿ ಇದೆ,’ ಅಂದ.
ಎದೆ ಧಸಕ್ಕಂತು. ಆಫೀಸಿಗೆ ಬಂದವನೇ ಬಾವನಿಗೆ ಫೋನ್ ಮಾಡಿ, `ಇದೇನ್ರಿ? 250 ಕೋಟಿಗೂ ಜಾಸ್ತಿ ಮಾಡಿದ್ದಾರಂತಲ್ಲ? ನಿಜಾನಾ?’ ಅಂತ ಕೇಳ್ದೆ. `ಅದರ ಕಿಂಗ್ ಪಿನ್ ಸಿಕ್ಕಿದ್ರೆ ಮಾತ್ರ ಗೊತ್ತಾಗುತ್ತೆ. ಇದು ಬರೀ ಕರ್ನಾಟಕದ ಲೆಖ್ಖ. ಇಡೀ ದೇಶದ್ದು ಜಾಸ್ತಿನೇ ಆಗುತ್ತೆ. ಅವನ್ಯಾರು ಅಂತ ಗೊತ್ತಾಗ್ತಾ ಇಲ್ಲ,’ ಅಂದರು. ಮಾರನೇ ದಿನ, ರಾಮುವಿನ ಸ್ಟೋರಿ ಮುಖಪುಟಕ್ಕೆ ಹೋಯ್ತು.
ಇದಾದ ಹದಿನೈದು ದಿನಗಳವರೆಗೆ, ಫೇಕ್ ಸ್ಟ್ಯಾಂಪ್ ಪ್ರಕರಣ ಅಲ್ಲೊಂದು, ಇಲ್ಲೊಂದು ಕಡೆ ಇಣುಕಿ ನೋಡುತ್ತಿತ್ತು. ಆಮೇಲೆ, ಅದೂ ನಿಂತು ಹೋಯ್ತು. ಅದಕ್ಕೆ ತಿರುವು ಸಿಕ್ಕಿದ್ದೇ ಸಾಂಗ್ಲಿಯಾನ ಪೋಲಿಸ್ ಕಮೀಷನರ್ ಆಗಿ ಬಂದ ಮೇಲೆ. ಹಳೇ ಕಡತಗಳನ್ನು ತಿರುವಿ ಹಾಕುತ್ತಿದ್ದ ಅವರಿಗೆ, ಈ ಫೇಕ್ ಸ್ಟ್ಯಾಂಪ್ ಪ್ರಕರಣದ ಮೇಲೆ ಕಣ್ಣು ಬಿತ್ತು. ಅದರ ಕಿಂಗ್ ಪಿನ್ ನನ್ನು ಹಿಡಿದು ತರಲೇಬೇಕು ಅಂತ ಪೋಲಿಸರ ಮೇಲೆ ಒತ್ತಡ ಹಾಕಲಾರಂಭಿಸಿದರು. ಕೊನೆಗೆ, ಅಜ್ಮೇರದಿಂದ ಅಬ್ದುಲ್ ಕರೀಂಲಾಲಾ ತೆಲಗಿಯನ್ನು ಪೋಲಿಸರು ಹಿಡಿದು ತಂದರು.
ಎಷ್ಟೇ ಸಲ ರಾಮು ಹೇಳಿದ್ರೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದ ನನಗೆ ಆಗ ಅರ್ಥವಾಯ್ತು. ಕಮೀಷನರ್ ಆಫೀಸಿನಲ್ಲಿ ಯಾರೋ ಹೇಳಿದ ಪ್ರಕಾರ, ರಾಮು ಬರೆದ 250 ಕೋಟಿ ರೂಪಾಯಿ ಕಥೆ, ಸಾಂಗ್ಲಿಯಾನನ ತಲೆಯಲ್ಲಿ ಉಳಿದಿತ್ತಂತೆ. ಮುಂದಿನ ವಿವರ ಕೇಳಿ ನಾನು ದಂಗು ಬಡಿದಿದ್ದೆ. ರಾಜಕಾರಣಿಗಳೂ ಮತ್ತು ಪೋಲಿಸರೂ ಇದರಲ್ಲಿ ಭಾಗಿಯಾಗಿದ್ದಾರೆ, ಮತ್ತೆ ಕರ್ನಾಟಕವೂ ಸೇರಿದಂತೆ, ಎಲ್ಲಾ ರಾಜ್ಯಗಳಲ್ಲಿ ಈ ಜಾಲ ಹಬ್ಬಿರುವುದರಿಂದ, ಇದರ ತೆನಿಖೆಯನ್ನು ಸಿ.ಬಿ.ಐ. ಗೆ ಒಪ್ಪಿಸಬೇಕು ಅಂತ ಸಾಂಗ್ಲಿಯಾನ ಸರ್ಕಾರಕ್ಕೆ ಪತ್ರ ಬರೆದರು. ಇದೇ ಸಮಯದಲ್ಲಿ ಇನ್ನೊಂದು ಹೆಸರು ಮೆಲ್ಲಗೆ ಹೊರಬರಲಾರಂಬಿಸಿತು. ಅದೇ ಜಯಂತ್ ತಿನೇಕರ್.
 ಜಯಂತ್ ತಿನೇಕರ್ ಸಾಂಗ್ಲಿಯಾನರಿಗೆ ತೆಲಗಿಯ ಬಗ್ಗೆ ಮಾಹಿತಿ ಕೊಡುತ್ತಿದ್ದನಂತೆ. ತೆಲಗಿಯ ಊರಾದ ಖಾನಾಪುರದವನು. ಚಿಕ್ಕಂದಿನಿಂದ ಗೊತ್ತಂತೆ. ತೆಲಗಿಯ ಚಲನ ವಲನದ ಬಗ್ಗೆ ಮತ್ತು ಫೇಕ್ ಸ್ಟ್ಯಾಂಪ್ ದಂಧೆ ಬಗ್ಗೆ ಫೋನ್ ಮಾಡಿ ಹೇಳುತ್ತಿದ್ದನಂತೆ. ಸ್ವಲ್ಪ ದಿನಗಳಲ್ಲೇ ಈ ವಿಷಯ ರಾಜಕೀಯ ವಿಷಯವಾಗಿ ಮಾರ್ಪಟ್ಟು, ತಿನೇಕರ್ ಗೆ ಪೋಲಿಸ್ ಬೆಂಗಾವಲು ನೀಡಲಾಯ್ತು. ವಿರೋಧ ಪಕ್ಷದಲ್ಲಿದ್ದ ಬಿ.ಜೆ.ಪಿ. ಯಂತೂ, ತಿನೇಕರ್ ನನ್ನು ರಾಷ್ಟ್ರಮಟ್ಟದ ಹೀರೋ ಮಾಡಿತು. ಎಷ್ಟಾದರೂ ಇವನು ಇಷ್ಟು ದೊಡ್ಡದೊಂದು ಹಗರಣವನ್ನು ಬಯಲಿಗೆಳೆದವನು ತಾನೆ.
ಎಲ್ಲಾ ಪತ್ರಿಕೆಗಳು ತಿನೇಕರ್ ನನ್ನು ಸಂದರ್ಶನ ಮಾಡೋಕೆ ಅಂತ ಓಡಾಡುತ್ತಿದ್ದರು. ಒಂದಿನ ಸಾಯಂಕಾಲ ಆಫೀಸಿಗೆ ಬಂದ ರಾಮು ಹೇಳ್ದ: `ಸರ್… ತಿನೇಕರ್ ಸಿಕ್ದರಿ. ಇಂಟರ್ ವ್ಯೂ ಮಾಡ್ದೆ,’ ಅಂತ.
`ಗುಡ್ ಕಣೋ… ಹ್ಯಾಗೋ ಅವ್ನು? ಪರವಾಗಿಲ್ವಾ? ಚೆನ್ನಾಗಿ ಮಾತಾಡ್ತನಾ?’ ಅಂದೆ.
`ಮಾತೇನೋ ಚಂದ್ ಆಡ್ತಾನ್ರೀ. ಆದ್ರ, ತುಂಬಾ ಡೀಪ್ ಇದ್ದಾನ್ರಿ ಮಗ. ಕಾಮನ್ ಸೆನ್ಸ್ ಜೋರೈತ್ರಿ ಅವಂಗ. ಅರ್ಧ ಸತ್ಯ ಹೇಳ್ತಾನ್ರಿ, ಇನ್ನರ್ಧ ಕಾಮನ್ ಸೆನ್ಸ್ ಯೂಸ್ ಮಾಡಿ ಕಥೆ ಕಟ್ತಾನ್ರಿ,’ ಅಂದ.
ಅಷ್ಟರೊಳಗೆ ರಾಮು ಮನುಷ್ಯರನ್ನ ಅರ್ಥ ಮಾಡ್ಕೊಳ್ಳೋದ್ರಲ್ಲಿ ತಪ್ಪು ಮಾಡೋಲ್ಲ ಅಂತ ನನಗೆ ಅರ್ಥವಾಗಿತ್ತು. `ಹಾಗೆಂದ್ರೇನೋ? ಅವ್ನು ಹೇಳಿದ್ದು ಇಲ್ಲಿವರೆಗೆ ಎಲ್ಲಾ ಸರಿ ಇದೆಯಲ್ಲ? ಮತ್ತೆ ಚಿಕ್ಕಂದಿನಿಂದ ತೆಲಗಿ ಬೇರೆ ಗೊತ್ತು ಅವ್ನಿಗೆ?’ ಅಂದೆ.
`ಒಟ್ಟಾ ನಂಗೆ ಹೇಳಕ್ ಬರಾಂಗಿಲ್ರಿ. ಇಂವಾ ತೆಲಗಿ ಜೊತಿ ಬೆಳ್ದವ್ನೆ, ಖರೆ. ಆದ್ರ, ತೆಲಗಿ ಅರ್ಧದಷ್ಟು ಖದೀಮ ಇದ್ದಾನ್ರಿ. ಅಂವ ಮಾತಾಡ್ತಾಗ, ಇವಂಗೂ, ತೆಲಗಿಗೂ ಏನೋ ಸಂಭಂಧ ಐತೆ ಅನ್ನಿಸಿತ್ತು ಸರ್,’ ಅಂದ.
`ಸಾಯ್ಲಿ ಬಿಡು. ನಮಗೇನು? ಇಂಟರ್ ವ್ಯೂ ಸಿಕ್ತಲ್ಲ. ಸಾಕು,’ ಅಂದೆ.
ತೆಲಗಿಯ ಸಂದರ್ಶನ ಪೇಪರ್ ನಲ್ಲಿ ಅಚ್ಚಾದ ಮಾರನೇ ದಿನ, ಇಂಡಿಯನ್ ಎಕ್ಸ್ ಪ್ರೆಸ್ ಎಡಿಟೋರಿಯಲ್ ಅಡ್ವೈಸರ್ ಆಗಿದ್ದ ಟಿ.ಜೆ.ಎಸ್. ಜಾರ್ಜ್ ನನ್ನನ್ನು ಕರೆದು, ತೆಲಗಿ ಸಂದರ್ಶನ ಯಾರು ಮಾಡಿದ್ದು? ಅಂತ ಕೇಳಿದ್ರು. ಏನಾದ್ರು ಎಡವಟ್ಟಾಯ್ತಾ? ಅನ್ಕೊಂಡು, ರಾಮುವಿಗೆ ಮಾಡಲು ಆಫೀಸಿಂದನೇ ಹೇಳಿತ್ತು, ಅಂದೆ. ಅವನನ್ನೂ ಕರೆಯಲು ಹೇಳಿದ ಜಾರ್ಜ್, ಇಬ್ಬರಿಗೂ ಒಂದು ಪ್ರಶ್ನೆ ಕೇಳಿದ್ರು: `ಒಬ್ಬ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಗರಣ ನೆಡೆಯುತ್ತಿದ್ದಾಗ, ಪೋಲಿಸರಿಗಿಂತ ಜಾಸ್ತಿ, ಇವನೊಬ್ಬನಿಗೇ ಹ್ಯಾಗೆ ಗೊತ್ತಿರುತ್ತೆ? ಅಂದಾಗ, ಇವನಿಗೂ ತೆಲಗಿಗೂ ಏನೋ ಸಂಭಂಧ ಇದೆ ಅಂತ ನಿಮಗೆ ಅನ್ಸೋಲ್ವಾ?’ ಅಂದರು.
ನಾನು ನಗುತ್ತಾ ರಾಮು ಕಡೆ ಕೈ ತೋರಿಸಿ, `ಇಂಟರ್ ವ್ಯೂ ಮಾಡಿದ ಮೇಲೆ, ರಾಮುಗೂ ಹಾಗೆ ಅನ್ನಿಸ್ತಂತೆ,’ ಅಂದೆ.
`ಹಾಗಾದ್ರೆ, ಅದೂ ಕೂಡ ಸ್ಟೋರಿ ಅಲ್ವಾ? ನಂಗೆ ಸಾಯಂಕಾಲ 4 ಘಂಟೆಯೊಳಗೆ ಇವನ ಬಗ್ಗೆ ಮತ್ತು ತೆಲಗಿ ಜೊತೆ ಇವನ ಒಡನಾಟದ ಬಗ್ಗೆ ಪೂರ್ತಿ ಕಥೆ ಬೇಕು,’ ಅಂದರು.
ಗ್ರಹಚಾರಕ್ಕೆ, ಅವತ್ತು ಕೂಡ ರಜಾನೆ. ಸಮಯ ಆಗಲೇ 12 ಘಂಟೆಯಾಗಿತ್ತು. ತಿನೇಕರ್ ಸಹ ಬೆಂಗಳೂರು ಬಿಟ್ಟು ಖಾನಾಪುರಕ್ಕೆ ಹೋಗಿದ್ದ. ನಾನೂ ಮತ್ತು ರಾಮು ಮುಖ-ಮುಖ ನೋಡಿಕೊಂಡೆವು.
`ಏನಪ್ಪಾ ರಾಮು? ಎಲ್ಲಿಂದ ತರ್ತೀಯ ಈ ಸ್ಟೋರಿ?’ ಅಂತ ನಗಾಡ್ತಾ ಕೇಳ್ದೆ.
`ಎಲ್ಲಿ ಹೋಗೋಣ್ರೀ ಇವತ್ತು ಈ ಸ್ಟೋರಿ ಸಂಭಂಧ? ಅಲ್ಲಾ, ಎಂದೂ ಇಲ್ಲದ ಈ ಜಾರ್ಜ್ ಗೆ, ಇಂದ್ಯಾಕ್ರೀ ಬಂತು ಈ ಸ್ಟೋರಿ ಬರ್ಸೋ ವಿಚಾರ?’ ಅಂತ ನನ್ನನ್ನೇ ಕೇಳ್ದ.
`ಅದು ಸಾಯ್ಲಿ ಬಿಡು. ಈಗ ಈ ಸ್ಟೋರಿ ಮಾಡ್ಲೇಬೇಕು. ಯಾರ್ನ ಹಿಡಿಯೋದು ಅಂತ ಗೊತ್ತಾಗ್ತಿಲ್ಲ,’ ಅಂದೆ. ಇಬ್ರೂ ರಿಪೋರ್ಟಿಂಗ್ ಕಡೆಗೆ ಬಂದು, ಸಿಗರೇಟ್ ಹಚ್ಕೊಂಡು, ಏನ್ಮಾಡೋದು ಅಂತ ಮಾತಾಡ್ತಾ, ಮಧ್ಯ ಕೇಳ್ದೆ: `ಅಲ್ವೊ ರಾಮು, ಈ ತೆಲಗಿ ಲಾಯರ್ ಯಾರು?’ ಅಂತ.
`ಮೂರ್ನಾಲ್ಕು ಜನ ಇದ್ದಾರ್ರೀ… ಎಂ.ಟಿ.ನಾಣಯ್ಯ ಕೂಡ ಇರ್ಬೇಕ್ರಿ,’ ಅಂದ.
ಸುಮ್ಮನೆ ಹಾಗೇ ನಾಣಯ್ಯನವರ ಆಫೀಸ್ ನಂಬರ್ ತಿರುಗಿಸಿದೆ. ನಾಣಯ್ಯ ಇರ್ಲಿಲ್ಲ. `ಬಂದರೆ, ಇನ್ನು ಒಂದು ಘಂಟೆಯೊಳಗೆ ಬರ್ತಾರೆ. ಇಲ್ದೆ ಹೋದ್ರೆ, ಇಲ್ಲ,’ ಅಂತ ಆ ಕಡೆಯಿಂದ ಉತ್ತರ ಬಂತು.
ರಾಮು ಎಲ್ಲಿಗೋ ಹೊರಟ. ನನಗೂ ಬೇರೆ ಕೆಲಸ ಇರ್ಲಿಲ್ಲ. ಸರಿ ನಾಣಯ್ಯನವರ ಆಫೀಸಿಗೆ ಹೋದೆ. ಅಲ್ಲಿ, ಅವರ ಜ್ಯೂನಿಯರ್ ಒಬ್ಬನನ್ನು ಬಿಟ್ಟು ಯಾರೂ ಇರಲಿಲ್ಲ. ಪರಿಚಯ ಮಾಡಿಕೊಂಡಾಗ, ಅವನೇ ಹೇಳ್ದ: `ಇವತ್ತು ರಜಾ ಅಲ್ವ. ಯಾರೂ ಬರೋಲ್ಲ. ನಾನೂ ಊಟದ ಸಮಯಕ್ಕೆ ಹೊರಟು ಬಿಡ್ತೀನಿ.’
ನನಗೂ ಏನು ಹೇಳ್ಬೇಕು ಅಂತ ಗೊತ್ತಾಗ್ಲಿಲ್ಲ. `ತೆಲಗಿ ವಿಷ್ಯ ಮಾತಾಡೋಣ ಅಂತ ಬಂದೆ. ಆ ತಿನೇಕರ್ ಬೇರೆ ಏನೇನೋ ಮಾತಾಡ್ತಾನೆ. ಯಾಕೋ ಅವ್ನೊಂಥರಾ ಫ್ರಾಡ್ ಅನ್ನಿಸುತ್ತೆ,’ ಅಂದೆ.
`ಆ ಕೇಸ್ ನಮ್ಮ ಸೀನಿಯರೇ ಹ್ಯಾಂಡಲ್ ಮಾಡ್ತಿದ್ದಾರೆ. ತಿನೇಕರ್ ಸುಪ್ರೀಂ ಕೋರ್ಟ್ ಗೆ ಹೋಗಿದ್ದಾನೆ,’ ಅಂದ.
`ಯಾವ ಕೇಸ್?’ ಅಂದೆ.
`ಅದೇ ಸರ್, ತಿನೇಕರ್ ಮೇಲೆ ಮನೆ ಖಾಲಿ ಮಾಡ್ಸೋಕೆ ತೆಲಗಿ ಕೇಸ್ ಹಾಕಿದ್ನಲ್ಲಾ? ಅದು,’ ಅಂದ.
`ನಂಗೊತ್ತಿಲ್ಲ,’ ಅಂದೆ.
`ಅದಾ ಸರ್… ಖಾನಾಪುರದಿಂದ ದುಬೈಗೆ ಹೋಗ್ತೀನಿ ಅಂತ ತೆಲಗಿ ಬಾಂಬೆಯಲ್ಲಿ ಫೇಕ್ ಸ್ಟ್ಯಾಂಪ್ ಗ್ಯಾಂಗ್ ಗಳ ಜೊತೆ ಸೇರ್ಕೊಂಡಿದ್ದ. ವಾಪಾಸ್ ಖಾನಾಪುರಕ್ಕೆ ಬಂದಾಗ, ತಿನೇಕರ್ ಅವನ ಜೊತೆ ಓಡಾಡ್ಕೊಂಡಿದ್ದ. ಸರಿ, ಇಷ್ಟೊಂದು ದುಡ್ಡು ಎಲ್ಲಿಂದ ಬಂತು ಅಂತ ತಿನೇಕರ್ ಕೇಳ್ದಾಗ, ತೆಲಗಿ ಇದು ಮಟ್ಕಾದ ದುಡ್ಡು ಅಂತ ಹೇಳ್ದ. ಇಬ್ಬರೂ ಸೇರಿ ಮಟ್ಕಾ ಶುರು ಮಾಡಿದ್ರು. ತಿನೇಕರ್ ಗೆ ಇರೋಕೆ ತೆಲಗಿ ತನ್ನ ಮನೆನೇ ಕೊಟ್ಟ. ಆದ್ರೂ, ಮಟ್ಕಾ ದುಡ್ಡಿಗಿಂತ ಜಾಸ್ತಿ ದುಡ್ಡು ತೆಲಗಿ ಕೈಲಿ ಇದೆ ಅನ್ನಿಸಿ, ತಿನೇಕರ್ ಅವನ್ನ ಪೀಡಿಸೋಕೆ ಶುರು ಮಾಡ್ದ. ತೆಲಗಿ ಅವನ್ನ ಮನೆಯಿಂದ ಹೊರಗೆ ಹಾಕೋಕೆ ಹೋದಾಗ, ಈ ಕೇಸು ಶುರುವಾಯ್ತು. ಹೈಕೋರ್ಟಲ್ಲೂ ಕೇಸು ತೆಲಗಿ ಪರವಾಗಿ ಆಗಿದೆ. ಮೂರು ವರ್ಷದ ಹಿಂದೆ ತೆಲಗಿ ಅಣ್ಣ ಕೆ.ಆರ್.ಮಾರ್ಕೆಟ್ ನಲ್ಲಿ ಫೇಕ್ ಸ್ಟ್ಯಾಂಪ್ ಇಟ್ಕೊಂಡು ಸಿಕ್ಕಿಕೊಂಡಾಗ, ತಿನೇಕರ್ ಗೆ ತೆಲಗಿ ಇದ್ನ ಮಾಡ್ದಿದ್ದಾನೆ ಅಂತ ಗೊತ್ತಾಗಿದ್ದು,’ ಅಂತ ಹೇಳ್ದ. ನಾ ಬಾಯಿ ಬಿಟ್ಕೊಂಡು ಕೇಳ್ತಾ ಇದ್ದೆ.
ಆಮೇಲೆ, ಕೇಸ್ ನಂಬರ್ ಸಹಿತ ಕೊಟ್ಟ ಆ ಜ್ಯೂನಿಯರ್ ಲಾಯರ್, `ಸರ್, ನಮ್ಮ ಹೆಸರು ಎಲ್ಲೂ ಬರೋದು ಬೇಡ. ಇದೊಂದು ದೊಡ್ಡ ಹಗರಣ ಬೇರೆ,’ ಅಂದ. ನಾನು ನಗುತ್ತಾ ತಲೆ ಆಡಿಸಿದೆ.
ಮೂರು ಘಂಟೆಯೊಳಗೆ ಸ್ಟೋರಿ ಕೊಟ್ಟಾಗ, ಜಾರ್ಜ್ ಒಮ್ಮೆ ಹುಬ್ಬೇರಿಸಿ ನೋಡಿದರು. ರಾಮುವಂತೂ ಕುಣಿದಾಡೋದೊಂದು ಬಾಕಿ. `ನಾ ಹೇಳಿದ್ನೋ ಇಲ್ವೋ ಸರ್. ಅಂವ ಲೋಫರ್ ಇದ್ದಾನ್ರಿ. ಎಲ್ಲಿಂದ ತಂದ್ರಿ ಸರ್ ಇಷ್ಟು ಬೇಗ?’ ಅಂದ. ನಾ ಸುಮ್ಮನೆ ನಕ್ಕೆ.
ನಮ್ಮ ಖುಶಿಯೇನು ಜಾಸ್ತಿ ದಿನ ಉಳಿಯಲಿಲ್ಲ. ತಿನೇಕರ್ ಕಥೆ ಬಂದ ದಿನ ನಮ್ಮ ಬ್ಯುರೋ ಛೀಫ್ ಮಟ್ಟು ಊರಲ್ಲಿರಲಿಲ್ಲ. ಬಂದವರೇ, `ವಾಟ್ ವಾಸ್ ದ ಪ್ರೊವೋಕೇಶನ್ ಬಾಸ್?’ ಅಂತ ನನ್ನ ಕೇಳಿದ್ರು. ನಾನೇನೂ ಹೇಳೋಕ್ಕೆ ಹೋಗ್ಲಿಲ್ಲ. ಹಾಗೆನೆ, ಬಿ.ಜೆ.ಪಿ. ಯವರು ನನ್ನನ್ನು ದೇಶದ್ರೋಹಿಗಳ ಲಿಸ್ಟಿನಲ್ಲಿ ಸೇರಿಸಿದಂತೆ ಇತ್ತು. ಎರಡು ದಿನಗಳ ನಂತರದ ಪ್ರೆಸ್ ಕಾನ್ಫರೆನಸ್ಸ್ ನಲ್ಲಿ, ಡಿ.ಎಚ್. ಶಂಕರ ಮೂರ್ತಿಯವರು, `ತೆಲಗಿಯಂಥ ದೇಶದ್ರೋಹಿಯೊಡನೆ ಕಾಂಗ್ರೆಸ್ ನವರು ಕೈ ಜೋಡಿಸಿರುವುದನ್ನು, ತಿನೇಕರ್ ನಂಥ ದೇಶ ಭಕ್ತರು ಬಯಲಿಗೆಳೆದಿದ್ದಾರೆ. ಆದರೆ, ಪ್ರೆಸ್ ನವರು, ತಿನೇಕರ್ ಅಂಥವರ ತೇಜೋವಧೆ ಮಾಡಿದರೆ, ಉಳಿದರವರು ಎಲ್ಲಿ ಹೋಗಬೇಕು?’  ಅಂತ ಸೂಕ್ಷ್ಮವಾಗಿ ನನ್ನ ಕಡೆಗೆ ನೋಡಿದರು. ನಾನೇನೂ ಮಾತಾಡೋಕ್ಕೆ ಹೊಗ್ಲಿಲ್ಲ.
ಅವತ್ತು ಸಾಯಂಕಾಲ ಆಫೀಸಿನಲ್ಲಿ ಇ-ಮೇಲ್ ತೆಗೆದಾಗ ಇನ್ನೂ ಆಶ್ಚರ್ಯವಾಯಿತು. ಜಯಂತ್ ತಿನೇಕರ್ ಹೆಸರಿನ ಇ-ಮೇಲ್ ಬಂದಿತ್ತು. ತುಂಬಾ ವಿಸ್ತಾರವಾಗಿ ಬರೆದಿದ್ದ ಆ ಪತ್ರದಲ್ಲಿ ತೆಲಗಿ ಎಂಥಾ ದೇಶದ್ರೋಹಿ ಅಂತ ವಿವರವಾಗಿ ಬರೆದಿತ್ತು. ಆ ದೇಶದ್ರೋಹದ ಕೆಲಸ ತಡೆಯಲು ತಾನು ಹೇಗೆ ಜೀವನ ಮುಡುಪಾಗಿಟ್ಟಿದ್ದೇನೆ ಅಂತಾನೂ ಬರೆದಿತ್ತು. ಆದರೆ, ಒಂದೇ ಒಂದು ವಾಕ್ಯದಲ್ಲೂ, ತನಗೂ ಮತ್ತು ತೆಲಗಿಗೂ ಮುಂಚೆ ವ್ಯಾವಹಾರಿಕ ಸಂಭಂಧ ಇರಲಿಲ್ಲ ಅಂತ ಬರೆದಿರಲಿಲ್ಲ.
ಸ್ವಲ್ಪ ಹೊತ್ತಿಗೆ ರಾಮುನ ಕರ್ಕೊಂಡು ಕಾಫಿ ಕುಡಿಯಲು ಕ್ಯಾಂಟೀನ್ ಗೆ ಹೋದವನು, ಮೂರು ದಿನಗಳಿಂದ ನೆಡೆದದ್ದನ್ನೆಲ್ಲ ಹೇಳ್ದೆ. ತಿನೇಕರ್ ಗೆ ನನ್ನ ಇ-ಮೇಲ್ ಅಡ್ರೆಸ್ ಯಾರು ಕೊಟ್ಟಿರಬಹುದು? ಅಂತಾನೂ ಮಾತಾಡ್ದೆ.
ಪಟ್ಟನೆ ಬಂತು ಉತ್ತರ: `ಅದು ಇಶ್ಯೂ ಅಲ್ಲಾ ಸರ್. ತೆಲಗಿ ದೇಶದ್ರೋಹಿ ಅಲ್ಲ ಅಂತ ನಾವೇಲ್ಲೂ ಹೇಳಿಲ್ಲಲ್ಲಾ? ಅಂವ ದೇಶದ್ರೋಹಿ ಆದ ಮಾತ್ರಕ್ಕ, ಇವನ್ನ ದೇಶಪ್ರೇಮಿ ಅಂತ ಕರೀಬೇಕೂಂತ ಎಲ್ಲದ ಹೇಳ್ರಿ?’ ಅಂದ.
`ಅದೂ ಸರಿ ಅನ್ನು,’ ಅಂತ ಸಿಗರೇಟ್ ಮುಗಿಸಿ ಎದ್ದೆ…


ಮಾಕೋನಹಳ್ಳಿ ವಿನಯ್ ಮಾಧವ


ಶನಿವಾರ, ಏಪ್ರಿಲ್ 14, 2012

ಮಗ


ಐನೂರು ಡಾಲರ್ ಗೆ ಇಷ್ಟೆಲ್ಲಾ ಮಾಡ್ಬೇಕಿತ್ತಾ?

ಇನ್ನೇನು ಪೋಲಿಸ್ ಕಮೀಶನರ್ ಆಫೀಸ್ ನಿಂದ ಹೊರಡಬೇಕು ಅಂತಿದ್ದೆ, ಸಂಜೆ ವಾಣಿ ಧನಂಜಯಪ್ಪ ಬಂದು ಹೇಳಿದರು: `ಸ್ವಲ್ಪ ತಾಳು. ಕಮೀಶನರ್ ಹತ್ತಿರ ಯಾರೋ ಫಾರಿನರ್ ಬಂದಿದ್ದಾರೆ. ಇನೈದು ನಿಮಿಷದಲ್ಲಿ ಮಾತಾಡ್ಬಹುದು,’
`ನಿಮ್ಮ ಎಡಿಶನ್ ಟೈಮ್ ಆಯ್ತಲ್ಲಾ? ಏನಂತೆ ಇವರ್ದು? ರಾಬರಿನಾ?’ ಅಂತ ಕೇಳ್ದೆ.
`ಹೇಳಿ ಕಳ್ಸಿದ್ದೀನಿ ತಾಳು. ಎಡಿಶನ್ ಗೆ ಇನ್ನೂ ಹತ್ತು ನಿಮಿಷ ಇದೆ. ಯಾವುದೋ ಇಂಟರೆಸ್ಟಿಂಗ್ ಸ್ಟೋರಿ,’ ಅಂದ್ರು.
ಹೊಟ್ಟೆ ಹಸಿತಿತ್ತು. ಗೊಣಗುತ್ತಾ ನಿಂತ್ಕೊಂಡೆ. ಎರಡೇ ನಿಮಿಷದಲ್ಲಿ ರೇವಣ್ಣಸಿದ್ದಯ್ಯನವರು ನಮ್ಮನ್ನು ಒಳಗೆ ಕರೆದರು. ಧನಂಜಯಪ್ಪ ಹೇಳಿದ ಹಾಗೆ ಫಾರಿನ್ ಹೆಂಗಸೇನೋ ಕೂತಿದ್ಲು. ಆದರೆ ಪ್ರೆಸ್ ನವರ ಜೊತೆ ಮಾತಾಡೋಕ್ಕೆ ಆಸಕ್ತಿ ತೋರಿಸಲಿಲ್ಲ. ಅವಳ ಪಕ್ಕ ಕೂತಿದ್ದ 27-28 ವಯಸ್ಸಿನ ಭಾರತೀಯ ಯುವಕ ಮಾತ್ರ ಕಮೀಶನರ್ ಮುಖ ಮತ್ತು ಪ್ರೆಸ್ ನವರನ್ನು ನೋಡ್ತಾ ಇದ್ದ.
`ಇದೇನೂ ಕ್ರೈಂ ಸುದ್ದಿಯಲ್ಲ. ಅಂತೂ ಬೆಂಗಳೂರು ಪೋಲಿಸರು ಈ ಯುವಕನಿಗೆ ಅವನ ತಂದೆ ತಾಯಿಯರನ್ನು ಹುಡುಕಿಕೊಡಲು ಸಹಾಯ ಮಾಡ್ಬೇಕೂ ಅಂತ ಇದ್ದೀವಿ,’ ಅಂತ ಶುರು ಮಾಡಿದವರೇ, ಅವನ ಕಥೆ ಹೇಳಲು ಶುರು ಮಾಡಿದರು.
ಆ ಹುಡುಗನ ಹೆಸರು ಜೊನಾಥನ್ ಅಂತ. ಅವನು ಕರ್ನಾಟಕದವನೇ ಅಂತೆ. ಮೂರು-ನಾಲ್ಕು ವರ್ಷ ವಯಸ್ಸಿನವನಾಗಿದ್ದಾಗ ಬೆಂಗಳೂರು ರೈಲ್ವೇ ಸ್ಟೇಷನ್ ನಲ್ಲಿ ಯಾವುದೋ ಸ್ವಯಂಸೇವಾ ಸಂಘದವರ ಕೈಗೆ ಸಿಕ್ಕಿದನಂತೆ. ಸ್ವಲ್ಪ ದಿನಗಳ ನಂತರ, ಸ್ವೀಡನ್ ದೇಶದ ದಂಪತಿಗಳು, ಇವನನ್ನು ದತ್ತು ತೆಗೆದುಕೊಂಡರಂತೆ. ಅಲ್ಲಿಂದ ಪೂರ್ತಿ ಇವನು ಅಲ್ಲೇ ಬೆಳೆದನಂತೆ. ಈಗ ಅವನಿಗೆ ತನ್ನ ಸ್ವಂತ ತಂದೆ ತಾಯಿಯರನ್ನು ನೋಡ್ಬೇಕು ಅಂತ ಅನ್ನಿಸಿದೆಯಂತೆ. ಬೆಂಗಳೂರಿನಿಂದ ಅವರನ್ನು ಹುಡುಕೋಕೆ ಶುರು ಮಾಡೋದು ಅನ್ಕೊಂಡನಂತೆ. ಅವನ ಜೊತೆಯಲ್ಲಿ ಬಂದ ಫಾರಿನರ್ ಹೆಂಗಸಿನ ಹೆಸರು ಟೋವ್ ಅಂತ. ಆಕೆ ಸಿನೆಮಾ ಮಾಡ್ತಾಳಂತೆ.
ನನಗೇನೋ ಈ ಕಥೆ ಅಲೆಕ್ಸ್ ಹೀಲಿಯ `ರೂಟ್’ ಪುಸ್ತಕದಿಂದ ಸ್ಪೂರ್ತಿ ಪಡೆದಂತೆ ಅನ್ನಿಸ್ತು. ಒಂದೆರೆಡು ಪ್ರಶ್ನೆ ಕೇಳಿದ ತಕ್ಷಣವೇ ಜೊನಾಥನ್ ಮಾತಾಡತೊಡಗಿದ. ಅವನಿಗೆ ತನ್ನ ಮನೆಯ ಬಗ್ಗೆ ಮತ್ತು ಬೆಂಗಳೂರಿನ ಕೆಲವು ನೆನಪುಗಳು ಇದ್ದವು. ಅವನ ಪ್ರಕಾರ, ಅವನನ್ನು ತಂದೆ ತಾಯಿಗಳು ಇಶಾರ್ ಅಂತ ಏನೋ ಕರೀತ್ತಿದ್ರಂತೆ. ಅವನು ಸ್ವಲ್ಪ ದೊಡ್ಡದಾದ ಊರಿನಲ್ಲಿ ಇದ್ದನಂತೆ. ಆತನ ಮನೆಯ ಪಕ್ಕದಲ್ಲಿ ತುಂಬಾ ರೈಲುಗಳು ನಿಂತಿರುತ್ತಿದ್ದವಂತೆ ಮತ್ತು ಓಡಾಡುತ್ತಿದ್ದವಂತೆ. ಅವನ ತಂದೆ ಜೊನಾಥನ್ ನನ್ನು ಯಾವಾಗಲೂ ರೈಲಿನೊಳಗೆ ಕರೆದುಕೊಂಡು ಹೋಗುತ್ತಿದ್ದರಂತೆ.
ಅವರ ಮನೆ ಒಂದು ಸಣ್ಣ ಓಣಿಯಲ್ಲಿ ಇತ್ತಂತೆ. ಅವರ ತಾಯಿಯು ಯಾವುದೋ ಹಿಟ್ಟಿನಿಂದ ರೊಟ್ಟಿ ಮಾಡಿ, ಅದರೊಡನೆ ಮೆತ್ತಗಿನ ಖಾರದ ಮುದ್ದೆಯೊಡನೆ ಕೊಡುತ್ತಿದ್ದಳಂತೆ. ಅವನಿಗೆ ಒಬ್ಬ ತಮ್ಮನೋ, ತಂಗಿಯೋ ಇದ್ದ ನೆನಪು. ಒಂದು ದಿನ ಎಲ್ಲಿಂದಲೋ ಬಂದ ರೈಲಿನಲ್ಲಿ ಇವನು ಹತ್ತಿ ಕೂತಿದ್ದನಂತೆ. ಆಗ ರೈಲು ಮುಂದಕ್ಕೆ ಹೋಗಿದೆ. ಚಿಕ್ಕ ಹುಡುಗನಾಗಿದ್ದ ಇವನು ನಿದ್ದೆ ಮಾಡಿದ್ದಾನೆ. ಎದ್ದು ನೋಡಿದಾಗ ಬೆಂಗಳೂರಿಗೆ ಬಂದು ತಲುಪಿದ್ದಾನೆ. ಯಾರೋ ಕರೆದುಕೊಂಡು ಹೋಗಿ ಪೋಲಿಸರಿಗೆ ಒಪ್ಪಿಸಿದ್ದಾರೆ. ಪೋಲಿಸರು ಅವನನ್ನು ಒಂದು ಅನಾಥಾಶ್ರಮಕ್ಕೆ ಬಿಟ್ಟಿದ್ದಾರೆ. ಸ್ವಲ್ಪ ದಿನಗಳ ಮೇಲೆ ಸ್ವೀಡನ್ ನಿಂದ ಬಂದ ಟೇಗ್ ಬ್ರಿಫ್ಟ್ ಫ್ರೋಶನ್ ಎಂಬುವವರು ಅವನನ್ನು ದತ್ತು ತೆಗೆದುಕೊಂಡಿದ್ದಾರೆ. ಇವೆಲ್ಲಾ ಆಗಿದ್ದು 1974 ರಲ್ಲಿ.
ಜೊನಾಥನ್ ಮೊದಲ ಸಲ ಇಂಡಿಯಾಗೆ ಬಂದಿದ್ದು 1990 ರಲ್ಲಿ. ಆಗಲೂ ತನ್ನ ತಂದೆ ತಾಯಿಯರನ್ನು ಹುಡುಕಲು ಪ್ರಯತ್ನಿಸಿದ್ದಾನೆ. ಅದು ಆಗದೆ ವಾಪಾಸ್ ಹೋಗಿದ್ದಾನೆ. ಈ ಸಲ, ಸಿನೆಮಾ ಮಾಡುವ  ಈ ಟೋವ್ ಜೊತೆ ಬಂದಿದ್ದಾನೆ. ಜೊತೆಗೆ, ತಾನು ನಾಲ್ಕು ವರ್ಷ ವಯಸ್ಸಿನವನಾಗಿದ್ದಾಗಿನ ಫೋಟೋ ಕೂಡ ತಂದಿದ್ದ.
ಪ್ರೆಸ್ ಕಾನ್ಫರೆನ್ಸ್ ಮುಗಿದ ತಕ್ಷಣ ಟೋವ್ ನನ್ನು ಮಾತಾಡ್ಸೋಕೆ ಪ್ರಯತ್ನ ಮಾಡ್ದೆ. ಯಾರ ಪ್ರಶ್ನೆಗೂ ಉತ್ತರ ಕೊಡದೆ ಜೊನಾಥನ್ ನ ಕರ್ಕೊಂಡು ಹೋದಳು. ಅವರಿಗೆ ಸಹಾಯ ಮಾಡೋಕೆ ಅಂತ ರೇವಣ್ಣಸಿದ್ದಯ್ಯನವರು ಇನ್ಸ್ ಪೆಕ್ಟರ್ ಆಗಿದ್ದ ಲವಕುಮಾರ್ ಅವರನ್ನು ಕಳುಹಿಸುವುದಾಗಿ ಹೇಳಿದ್ದರು. ಅಲ್ಲೇ ಇದ್ದ ಲವಕುಮಾರ್ ಅವರನ್ನು ಮಾತಾಡಿಸ್ದೆ.
`ಇವನು ಹೇಳೋದು ನೋಡಿದ್ರೆ, ಯಾರೋ ರೈಲ್ವೆ ಡಿಪಾರ್ಟ್ ಮೆಂಟ್ ನೌಕರನ ಮಗ ಅಂತ ಕಾಣುತ್ತೆ. ಹಾಗಾಗಿ, ರೈಲ್ವೆ ಸ್ಟೇಷನ್ ಹತ್ತಿರ ಮನೆ ಮಾಡ್ಕೊಂಡು ಇದ್ದು, ದಿನಾ ಅಪ್ಪನ ಜೊತೆ ರೈಲ್ವೆ ಸ್ಟೇಷನ್ ಗೆ ಹೋಗ್ತಿದ್ದ ಅನ್ನಿಸುತ್ತೆ. ದಿನಾ ತುಂಬಾ ರೈಲುಗಳು ಬಂದು ಹೋಗ್ತಿದ್ವು ಮತ್ತೆ ಕೆಲವು ನಿಂತಿರುತ್ತಿದ್ವು ಅಂತಾನೆ. ಹಾಗಾದ್ರೆ, ಅದು ಯಾವುದೋ ರೈಲ್ವೆ ಜಂಕ್ಷನ್ ಇರ್ಬೇಕು. ಹೆಸರೇನೋ ಇಶಾರ್ ಅಂತಾನೆ. ಆ ಥರ ಹೆಸರು ಇಲ್ಲಿವರೆಗೆ ನಾನು ಕೇಳಿಲ್ಲ. ಈಶ್ವರ್ ಇರಬೇಕು ಅಂದ್ಕೊಂಡಿದ್ದೀನಿ. ಅವ್ನಿಗೆ ಜ್ನಾಪಕ ಇರೋದು ರೊಟ್ಟಿ ಮತ್ತೆ ಚಟ್ನಿ ಮಾತ್ರ. ಅದು ರಾಗಿ ರೊಟ್ಟಿ ಅಲ್ಲ. ಜೋಳದ್ದಿರಬೇಕು ಅನ್ನಿಸ್ತದೆ. ಹಾಗಾಗಿ, ಅರಸೀಕೆರೆ ಮತ್ತೆ ಕಡೂರು ಜಂಕ್ಷನ್ ಆಲ್ಲ ಅಂತ ಕಾಣುತ್ತೆ. ಇನ್ನು ಹುಬ್ಬಳ್ಳಿ, ಬೆಳಗಾಂ ಕಡೆಯಿಂದ ಎಲ್ಲಾ ರೈಲ್ವೇ ಸ್ಟೇಷನ್ ಹುಡುಕಬೇಕು,’ ಅಂದ್ರು.
ವಿಷಯ ಅಷ್ಟೇನೂ ಸುಲಭ ಇಲ್ಲ ಅಂತ ಅನ್ನಿಸ್ತು. ಎಲ್ಲಾ ಫೋಟೋಗ್ರಾಫರ್ ಗಳೂ, ಜೊನಾಥನ್ ತಾನು ಚಿಕ್ಕದಿರುವಾಗ ತೆಗೆದ ಫೋಟೋ ಹಿಡ್ಕೊಂಡು ನಿಂತ ಪೋಟೋ ತೆಗೆದರು. ಮಾರನೇ ದಿನ, ಎಲ್ಲಾ ಪತ್ರಿಕೆಗಳಲ್ಲೂ ದೊಡ್ಡ ಸುದ್ದಿಯಾಯ್ತು.
ನಾನೇನೋ ಈ ಹುಡುಕಾಟ ತಿಂಗಳುಗಟ್ಟಲೆ ಆಗಬಹುದು ಅನ್ಕೊಂಡಿದ್ದೆ. ಎರಡೇ ದಿನದಲ್ಲಿ ಹುಬ್ಬಳ್ಳಿಯಿಂದ ಲವಕುಮಾರ್ ಫೋನ್ ಮಾಡಿ ಹೇಳಿದ್ರು: `ವಿನಯ್, ಆ ಹುಡುಗನ ಫ್ಯಾಮಿಲಿ ಸಿಕ್ಬಿಡ್ತು,’ ಅಂತ. ಅದ್ಹ್ಯಾಗ್ರಿ ಎರಡೇ ದಿನದಲ್ಲಿ ಪತ್ತೆ ಹಚ್ಚಿದ್ರಿ?’ ಅಂತ ಕೇಳ್ದಾಗ, `ಗೊತ್ತಾಗುತ್ತೆ ತಾಳು. ಕಮಿಷನರ್ ಎಲ್ಲಾ ಹೇಳ್ತಾರೆ,’ ಅಂದ್ರು..
ಆಗಿದ್ದಿಷ್ಟು. ಎಲ್ಲಾ ಪತ್ರಿಕೆಗಳಲ್ಲಿ ಇವನ ಕಥೆ ಮತ್ತು ಫೋಟೋ ಬಂದಿದ್ದನ್ನು ಹುಬ್ಬಳ್ಳಿಯ ರೈಲ್ವೇ ಸ್ಟೇಶನ್ ನಲ್ಲಿ ಓದಿದ ರೈಲ್ವೇ ನೌಕರರೊಬ್ಬರಿಗೆ, ಇಪ್ಪತೈದು ವರ್ಷಗಳ ಹಿಂದೆ ಅಲ್ಲಿಂದ ಕಣ್ಮರೆಯಾಗಿದ್ದ ಚಿಕ್ಕ ಹುಡುಗನ ಕಥೆ ಗೊತ್ತಿತ್ತು. ರೈಲ್ವೆ ನೌಕರನಾಗಿದ್ದ ಆ ಹುಡುಗನ ತಂದೆ ತೀರಿಹೋಗಿದ್ದರು. ತಕ್ಷಣವೇ ಆ ಹುಡುಗನ ತಾಯಿಗೆ ಹೇಳಿ ಕಳುಹಿಸಿದರು. ಜೊನಾಥನ್ ಹಿಡಿದುಕೊಂಡಿದ್ದ ಚಿಕ್ಕ ಹುಡುಗನ ಫೋಟೋ ನೋಡಿ, ಅವಳು ತನ್ನ ಮಗ ಅಂತ ಗುರುತು ಹಿಡಿದಿದ್ದಾಳೆ. ಸರಿ, ಅವರೆಲ್ಲಾ ಸೇರಿ ಹುಬ್ಬಳ್ಳಿ ಪೋಲಿಸ್ ಹತ್ತಿರ ಹೋಗಿದ್ದಾರೆ. ಹುಬ್ಬಳ್ಳಿ ಪೋಲಿಸರು ಬೆಂಗಳೂರು ಪೋಲಿಸರಿಗೆ ವಿಷಯ ಹೇಳಿದ್ದಾರೆ.
ಲವಕುಮಾರ್ ಊಹಿಸಿದ್ದ ಎಲ್ಲಾ ವಿಷಯಗಳೂ ಸರಿಯಾಗಿದ್ದವು. ಹೆಸರನ್ನು ಬಿಟ್ಟು. ಜೊನಾಥನ್ ಹೆಸರು ಇಶಾರ್ ಎಂದೇ ಇತ್ತು. ಅವನ ತಾಯಿಯ ಹೆಸರು ಮರೋನಾಬಿ ಅಂತ. ಇಶಾರ್ ಅಲ್ಲದೆ, ಆಕೆಗೆ ಇನ್ನೊಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳು ಇದ್ದರು. ಗಂಡ ಸತ್ತ ಮೇಲೆ, ಬಹಳ ಕಷ್ಟದಿಂದ ಮೂರು ಮಕ್ಕಳನ್ನು ಸಾಕಿದ್ದಳು. ಇದಿಷ್ಟನ್ನೂ ರೇವಣ್ಣಸಿದ್ದಯ್ಯನವರೇ ನಮಗೆ ಹೇಳಿದರು. ಪ್ರೆಸ್ ಕಾನ್ಫರೆನ್ಸ್ ಗೆ ಜೊನಾಥನ್ ಮಾತ್ರ ಬಂದಿದ್ದ. ಟೋವ್ ಬಂದಿರಲಿಲ್ಲ. ಈ ಸಲ, ಜೊನಾಥನ್ ಹೆಚ್ಚೇನೂ ಮಾತಾಡಲಿಲ್ಲ. ತನ್ನ ಕುಟುಂಬದವರನ್ನು ಹುಡುಕಲು ಸಹಾಯ ಮಾಡಿದ ಎಲ್ಲರಿಗೂ ಥ್ಯಾಂಕ್ಸ್ ಹೇಳಿ, ತಾನು ಕುಟುಂಬದವರನ್ನು ನೋಡಲು ಮತ್ತೆ ಬರ್ತೀನಿ ಅಂತ ಹೇಳಿದ.
ಎಲ್ಲರಿಗಿಂತ ಖುಶಿಯಾಗಿದ್ದಿದ್ದು ಲವಕುಮಾರ್. `ನನ್ನ ಜೀವನದಲ್ಲಿ ಒಂದು ತುಂಬಾ ಒಳ್ಳೆ ಕೆಲಸ ಮಾಡಿದ್ದೀನಿ. ಮಗ ಸಿಕ್ಕಿದಾಗ ಆ ತಾಯಿಯ ಮುಖ ನೋಡ್ಬೇಕಿತ್ತು. ಪಾಪ, ಹೆಣ್ಣುಮಕ್ಕಳ ಮದುವೆ ಮಾಡೋಕಾಗ್ದೆ ಒದ್ದಾಡ್ತಾ ಇದ್ದಳು. ಇವನೇ ಮದುವೆಗೆ ದುಡ್ಡು ಕಳುಹಿಸ್ತೀನಿ ಅಂತ ಹೇಳ್ದ. ಮುಸ್ಲಿಂ ಸಮುದಾಯದಲ್ಲಿ ಇಪ್ಪತ್ತು ದಾಟಿದ ಹೆಣ್ಣುಮಕ್ಕಳು ಮದುವೆ ಆಗ್ದೆ ಹೋದ್ರೆ ಕಷ್ಟ. ನಾವು ವಾಪಾಸ್ ಬರುವಾಗ ನನ್ನ ಕೈ ಹಿಡ್ಕೊಂಡು, ನೀವು ನಮ್ಮ ಪಾಲಿನ ದೇವರು ಅಂದುಬಿಟ್ಟಳು,’ ಅಂದ್ರು.
ಇನ್ನೊಂದು ವರದಿ ಬರೆದು, ನಾಲ್ಕು ದಿನ ಮಾತಾಡಿ, ನಾವೆಲ್ಲ ಜೊನಾಥನ್ ನನ್ನು ಮರೆತೇ ಬಿಟ್ಟೆವು. ಮತ್ತೆ ಜೊನಾಥನ್ ಎದುರಿಗೆ ಬಂದಿದ್ದು ಒಂದು ವರ್ಷದ ನಂತರ. ನಮ್ಮ ಬ್ಯುರೋ ಛೀಫ್ ಮಟ್ಟು ಜಿಲ್ಲೆಗಳ ದಿನದ ವರದಿಗಳನ್ನು ಪಟ್ಟಿ ಮಾಡೋಕೆ ಹೇಳಿದ್ರು. ಒಂದೊಂದೇ ಪಟ್ಟಿ ಮಾಡ್ತಾ ಇದ್ದಾಗ, ಜೊನಾಥನ್ ಬಗ್ಗೆ ವರದಿ ಕಣ್ಣಿಗೆ ಬಿತ್ತು. ನಮ್ಮ ಹುಬ್ಬಳ್ಳಿ ವರದಿಗಾರ, ಮರೋನಾಬಿಯನ್ನು ಮಾತಾಡಿಸಿ ಒಂದು ವರದಿ ಬರೆದಿದ್ದ. ಆಗಲೇ ನನಗೆ ನೆನಪಾಗಿದ್ದು: ಜೊನಾಥನ್ ಬಂದು ಹೋಗಿ ಒಂದು ವರ್ಷವಾಯ್ತು, ಅಂತ.
ಸ್ವೀಡನ್ ಗೆ ವಾಪಾಸ್ ಹೋದ ಮೇಲೆ, ಜೊನಾಥನ್ ದುಡ್ಡು ಕಳುಹಿಸುವುದಿರಲಿ, ಒಂದು ಪತ್ರ ಕೂಡ ಬರೆದಿರಲಿಲ್ಲವಂತೆ, ಮರೋನಾಬಿ ಅಂತೂ, `ಅವನು ನನ್ನ ಮಗನೇ ಅಲ್ಲ. ಅವನು ಬರದೇ ಹೋಗಿದ್ದರೆ ಚೆನ್ನಾಗಿತ್ತು. ಸತ್ತು ಅಂತ ನೆಮ್ಮದಿಯಲ್ಲಿರುತ್ತಿದ್ದೆ,’ ಅಂದಿದ್ದಳು.
ಬೇಗನೆ ಪಟ್ಟಿಮಾಡಿ ಮುಗಿಸಿ ಲವಕುಮಾರ್ ಗೆ ಫೋನ್ ಮಾಡ್ದೆ. ವಿಷಯ ಹೇಳಿ, `ಏನ್ರಿ? ಹೀಗ್ಮಾಡಿದ್ದಾನಲ್ಲ ಅವನು?’ ಅಂತ ಕೇಳ್ದೆ.
`ಅವನು ಬಂದು ಹೋದ ಮೂರು ತಿಂಗಳಲ್ಲೇ ಗೊತ್ತಾಯ್ತು. ತುಂಬಾನೇ ಬೇಜಾರಾಯ್ತು. ಅದಕ್ಕೆ ಯಾರಿಗೂ ಹೇಳದೆ ಸುಮ್ಮನಾದೆ,’ ಅಂದ್ರು.
`ಮತ್ತೇನಕ್ಕೆ ಬಂದಿದ್ದ ಅವನು? ಸುಮ್ಮನೆ ಸ್ವೀಡನ್ ನಲ್ಲೇ ಇರ್ಬಹುದಿತ್ತಲ್ಲಾ?’ ಅಂತ ಕೇಳ್ದೆ.
`ಅದನ್ನ ಹ್ಯಾಗೆ ಹೇಳ್ಬೇಕು ಅಂತ ಅರ್ಥ ಆಗೋಲ್ಲ. ಅವನ ಜೊತೆ ಬಂದಿದ್ಲಲ್ಲಾ, ಅವಳು ಇವನ ಬಗ್ಗೆ ಡಾಕ್ಯುಮೆಂಟರಿ ಮಾಡ್ತಾ ಇದ್ದಳು. ಅವಳೇ ಇದೆಲ್ಲದರ ರೂವಾರಿ. ಹುಬ್ಬಳ್ಳಿಯಲ್ಲಿ ನಾವು ಇವನ ತಾಯಿಯನ್ನ ಭೇಟಿಯಾದಾಗ, ಅವಳು ಯಾರಿಗೂ ಇವರಿಬ್ಬರ ಜೊತೆ ಮಾತಾಡೋಕೆ ಬಿಡಲಿಲ್ಲ. ನಾನು ಟ್ರಾನ್ಸ್ ಲೇಟ್ ಮಾಡ್ತಿದ್ದೆ, ಅಷ್ಟೆ. ಅವಳು ಎಲ್ಲವನ್ನೂ ವೀಡಿಯೋ ರೆಕಾರ್ಡ್ ಮಾಡ್ತಿದ್ಲು. ಇವನು ಅವಳು ಹೇಳಿದ ಹಾಗೆ ಕೇಳ್ತಿದ್ದ. ಆಗ ನಾನು ಅಷ್ಟಾಗಿ ಗಮನಿಸಿರಲಿಲ್ಲ,’ ಅಂದ್ರು.
ವಾಪಾಸ್ ಹೋಗಿ ಮೂರು ತಿಂಗಳಾದ್ರೂ ಮಗನಿಂದ ಯಾವುದೇ ಸುದ್ದಿ ಬರದಿದ್ದಾಗ, ಮರೋನಬಿ ಲವಕುಮಾರ್ ಗೆ ಫೋನ್ ಮಾಡಿದ್ದಾಳೆ. ಲವಕುಮಾರ್ ಜೊನಾಥನ್ ನ ಸ್ವೀಡನ್ ನಂಬರ್ ಗೆ ಫೋನ್  ಮಾಡಿ ವಿಚಾರಿಸಿದ್ದಾರೆ. ಒಂದೆರೆಡು ಸಲ, ತುಂಬಾ ಬ್ಯುಸಿಯಾಗಿದ್ದೆನೆಂದೂ, ಮುಂದಿನ ವಾರದಲ್ಲಿ ಫೋನ್ ಮಾಡ್ತೀನಿ ಅಂತ ಹೇಳಿದ್ದಾನೆ. ಆಮೇಲೆ ಒಂದ್ಸಲ, ತಾನು ತುಂಬಾ ಕಷ್ಟದಲ್ಲಿರುವುದಾಗಿಯೂ, ಡಾಕ್ಯುಮೆಂಟರಿ ಮಾಡಿದ ಟೋವ್ ಕೂಡ ತನಗೆ ಬರೀ 500 ಡಾಲರ್ ಕೊಟ್ಟಳೆಂದೂ ಹೇಳಿದ್ದಾನೆ. ತಾನು ಸ್ವಲ್ಪದಿನಗಳಲ್ಲಿ ತಾಯಿಗೆ ಫೋನ್ ಮಾಡಿ, ದುಡ್ಡು ಕಳುಹಿಸುತ್ತೇನೆ ಅಂತಾನೂ ಹೇಳಿದ್ದಾನೆ. ಆನಂತರ, ಲವಕುಮಾರ್ ಫೋನ್ ಮಾಡಿದರೆ, ಜೊನಾಥನ್ ಮಾತಾಡಲು ನಿರಾಕರಿಸಿದ್ದಾನೆ.
`ಅಲ್ರೀ, ಬರೀ ಐನೂರು ಡಾಲರ್ ಗೆ ಅವನು ಇಷ್ಟೆಲ್ಲ ಮಾಡ್ಬೇಕಿತ್ತಾ?’ ಅಂತ ಕೇಳ್ದೆ.
`ಅವನು ಅಷ್ಟೊಂದು ದಡ್ಡ ಅಂತ ನನಗೇನೂ ಅನ್ಸೋಲ್ಲ ವಿನಯ್. ಮತ್ತೆ, ಈ ಥರ ಮೋಸ ಮಾಡೋಕೆ ಆ ದೇಶಗಳಲ್ಲಿ ಕಷ್ಟ. ಕೋರ್ಟ್ ಗಳು ಸುಮ್ಮನೆ ಬಿಡೋಲ್ಲ. ಎಲ್ಲಾದಕ್ಕೂ ಅಗ್ರೀಮೆಂಟ್ ಇರುತ್ತೆ. ಸರಿ, ಆ 500 ಡಾಲರ್ ನಾದ್ರೂ ಅವ್ನು ಕಳುಹಿಸಬಹುದಿತ್ತಲ್ಲಾ? 10-15 ಸಾವಿರ, ಆ ಅಮ್ಮನಿಗೆ ದೊಡ್ಡ ದುಡ್ಡೇ. ಒಟ್ನಲ್ಲಿ, ನಾವು ದಡ್ಡರಾದ್ವಿ ಅಷ್ಟೆ,’ ಅಂದ್ರು.
ನಂಗೂ ಅದು ಸರಿ ಅನ್ನಿಸ್ತು…


ಮಾಕೋನಹಳ್ಳಿ ವಿನಯ್ ಮಾಧವ

ಶುಕ್ರವಾರ, ಏಪ್ರಿಲ್ 6, 2012

ತಾಯಿ


ಈ ತಾಯಿಗಿರೋ ಹೃದಯ ಆ ದೇವರಿಗೇಕಿಲ್ಲ?

ಸಾಯಂಕಾಲ ಕೋರ್ಟ್ ನಿಂದ ವಾಪಾಸ್ ಬರುವಾಗ ಬೈಕ್ ಕಮೀಷನರ್ ಆಫೀಸಿಗೆ ತಿರುಗಿಸಿದೆ. ಫೋಟೋಗ್ರಫಿ ವಿಭಾಗದಲ್ಲಿ ಯಾವುದೋ ಹಳೇ ಫೋಟೋ ಕೇಳಿದ್ದೆ. ತಿರುಗಿ ನೋಡಿದಾಗ, ಜಂಟಿ ಪೋಲಿಸ್ ಕಮೀಷನರ್ ಸುರೇಶ್ ಬಾಬುರವರ ಆಫೀಸ್ ಮುಂದೆ ಅವರ ಕಾರು ನಿಂತಿತ್ತು.
ಸಾಧಾರಣವಾಗಿ ಸಾಯಂಕಾಲ ಅವರು ಟೆನಿಸ್ ಆಡಲು ಹೋಗ್ತಿದ್ರು. ಆದರೆ, ಅವರ ಆಫೀಸ್ ನಿಂದ ಒಂದು ಹೆಂಗಸು ಮತ್ತು ಲಾಯರ್ ಥರ ಕಾಣುವ ಒಬ್ಬ ಗಂಡಸು ಹೊರಗೆ ಬಂದಿದ್ದನ್ನು ದೂರದಿಂದಲೇ ನೋಡಿ, ಆಫೀಸ್ ಮುಂದೆ ನಿಂತಿದ್ದ ಅವರ ಡ್ರೈವರ್ ಗಂಗರಾಜುವಿಗೆ ಸನ್ನೆಯಲ್ಲೇ `ಸಾಹೇಬರು ಒಳಗಿದ್ದಾರಾ?’ ಅಂತ ಕೇಳಿದೆ.
ಹೌದು ಅಂತ ಸನ್ನೆ ಮಾಡಿದ ತಕ್ಷಣ ಫೋಟೋಗ್ರಫಿ ವಿಭಾಗ ಬಿಟ್ಟು, ಅವರ ಆಫೀಸ್ ಕಡೆಗೆ ಕಾಲು ಹಾಕಿದೆ. ಒಳಗೆ ಹೋದ್ರೆ ಒಂದು ಒಳ್ಳೆ ಟೀ ಕುಡೀಬಹುದು. ಮತ್ತೆ ಸಿಗರೇಟ್ ಸೇದುತ್ತಾ, ಏನಾದರೊಂದು ವಿಷಯ ಹರಟೆ ಹೊಡೆಯಬಹುದು ಅಂತ.
`ಬಾರಯ್ಯ… ಐದು ನಿಮಿಷ ಆಗಿದ್ರೆ ಹೋಗಿಬಿಡ್ತಿದ್ದೆ,’ ಅಂತ ಹೇಳಿ ಟೀ ತರಲು ಹೇಳಿದರು. `ನೋಡಪ್ಪ, ಮರೆಯೋಕೆ ಮುಂಚೆ ಹೇಳಿಬಿಡ್ತೀನಿ. ಈಗ ಒಂದು ಹೆಂಗಸು ಹೊರಗೆ ಹೋದ್ಲಲ್ಲಾ, ಅವಳ ಕಥೆ ಚೆನ್ನಾಗಿದೆ. ಕೆನಡಾದವಳು. ಮಗ ಕುಲು-ಮನಾಲಿಯಿಂದ ಕಳೆದು ಹೋಗಿದ್ದಾನೆ. ಅಮ್ಮ, ದೇಶ ಪೂರ್ತಿ ಅವನ್ನ ಹುಡ್ಕೊಂಡು ಸುತ್ತುತ್ತಿದ್ದಾಳೆ. ಚರ್ಚ್ ಸ್ಟ್ರೀಟ್ ನಲ್ಲಿ ಹೋಟೆಲ್ ನಲ್ಲಿ ಉಳ್ಕೊಂಡಿದ್ದಾಳೆ. ಇವತ್ತು ರಾತ್ರಿನೇ ಬೆಂಗಳೂರು ಬಿಟ್ಟು ಹೊರಡ್ತಿದ್ದಾಳೆ. ಯಾವ ರಿಪೋರ್ಟರ್ ಮೊದಲು ಸಿಕ್ತಾರೋ, ಅವರಿಗೆ ಹೇಳ್ಬೇಕು ಅಂತ ಇದ್ದೆ. ಅಷ್ಟರಲ್ಲಿ ನೀನೇ ಬಂದೆ,’ ಅಂದರು.
ಕೆನಡಾದ ಹುಡುಗ ಕುಲು-ಮನಾಲಿಯಲ್ಲಿ ಕಳೆದು ಹೋಗಿದ್ದು ಬೆಂಗಳೂರಲ್ಲಿ ಸ್ಟೋರಿ ಆಗುತ್ತಾ? ಅಂತ ಯೋಚನೆ ಮಾಡ್ತಾ. ಹ್ಯಾಗಾದರಾಗ್ಲಿ ಅಂತ ಫೋಟೋಗ್ರಾಫರ್ ಕರ್ಕೊಂಡು ಚರ್ಚ್ ಸ್ಟ್ರೀಟ್ ನಲ್ಲಿದ್ದ ಹೈಗೇಟ್ ಹೋಟೆಲ್ ಗೆ ನುಗ್ಗಿದೆ. ಕೆನಡಾದ ಹೆಂಗಸು ಅಂದರೆ ಧೃಡಕಾಯದ, ಕೆಂಚುಕೂದಲಿನ, ಬೆಳ್ಳನೆಯ ಹೆಂಗಸು ಅನ್ಕೊಂಡಿದ್ದೆ. ತೆಳ್ಳಗೆ, ಕುಳ್ಳಗೆ, ಸಾಯಿಬಾಬಾನಂಥ ಕಪ್ಪು ಕೂದಲಿನ ಹೆಂಗಸನ್ನು ನೋಡಿ ಆಶ್ಚರ್ಯವಾಯ್ತು. ಪರಿಚಯ ಮಾಡ್ಕೊಂಡು ಮಾತಾಡೋಕೆ ಕೂತೆ.
ಹೋಮಾ ಬೌಸ್ಟನಿ ಅಂತ ಆ ಹೆಂಗಸಿನ ಹೆಸರು. ಒಂದು ಬಿಳೀ ಟೀ ಶರ್ಟ್ ಮೇಲೆ, `ಮಿಸ್ಸಿಂಗ್ ಇನ್ ಇಂಡಿಯಾ’ ಅಂತ ಎರಡು ಫೋಟೋಗಳನ್ನು ಮುದ್ರಿಸಿ ಹಾಕಿಕೊಂಡಿದ್ದಳು. ಸುಮಾರು ಐವತ್ತರಿಂದ, ಐವತೈದು ವರ್ಷವಿರಬಹುದು. ಪಾಪ, ಎರಡು ಮಕ್ಕಳನ್ನ ಕಳ್ಕೊಂಡಿದ್ದಾಳೆ, ಅನ್ಕೊಂಡೆ.
ಹೋಮಾ ಒಂಟಿ ತಾಯಿಯಂತೆ. ಅವಳ ಗಂಡ ತೀರಿ ಹೋಗಿದ್ದನೋ ಅಥವಾ ಡೈವೋರ್ಸ್ ಆಗಿತ್ತೋ ಅಂತ ಕೇಳೋಕ್ಕೆ ಹೋಗ್ಲಿಲ್ಲ. ಅವಳ 26-ವರ್ಷದ ಮಗ ಆರ್ಡವನ್ ತಹರ್ ಜಡೇ (ಆರ್ಡ್ ಅಂತ ಆಕೆ ಕರೆಯುತ್ತಿದ್ದದ್ದು) ಕೊರಿಯಾದಲ್ಲಿ ಇಂಗ್ಲಿಶ್ ಕಲಿಸುತ್ತಿದ್ದನಂತೆ. 1996 ಮಧ್ಯದಲ್ಲಿ, ಆ ಕೆಲಸ ಬೇಸರ ಅಂತ ಆರ್ಡ್ ಏಷ್ಯಾದ ದೇಶಗಳನ್ನು ಪ್ರವಾಸ ಮಾಡಲು ಆರಂಭಿಸಿದನಂತೆ. 1997 ಏಪ್ರಿಲ್ ನಲ್ಲಿ ಭಾರತಕ್ಕೆ ಬಂದಿದ್ದಾನೆ.
ಆರ್ಡ್ ತನ್ನ ತಾಯಿಗೆ ಹೇಳಿದಂತೆ, ಭಾರತದಂತ ದೇಶವನ್ನೇ ಅವನು ಊಹಿಸಿರಲಿಲ್ಲವಂತೆ. `ಇಲ್ಲಿ ನೋಡೋಕೆ ಎಷ್ಟೊಂದು ಇದೆ. ನಾನು ಇಲ್ಲಿ ತುಂಬಾ ಸಮಯ ಕಳೆದು, ಆಮೇಲೆ ವಾಪಾಸ್ ಬರ್ತೀನಿ,’ ಅಂದಿದ್ದನಂತೆ. ಆತ ಕೊನೆಯಬಾರಿ ತನ್ನ ತಾಯಿಗೆ ಫೋನ್ ಮಾಡಿದ್ದು, ಮೇ 21, 1997. ಕುಲು ಹತ್ತಿರದ ಕಸೋಲ್ ಎಂಬ ಹಳ್ಳಿಯಿಂದ. ಆಗ, ತಾನು ಕೆನಡಾಕ್ಕೆ ಜೂನ್ ನಲ್ಲಿ ಬರುವುದಾಗಿ ಹೇಳಿದ್ದಾನೆ.
ಯಾವಾಗ ಮಗ ವಾಪಾಸ್ ಬರಲಿಲ್ಲ, ಹೋಮಾಗೆ ಕಳವಳವಾಗಿ, ಆಗಸ್ಟ್ ನಲ್ಲಿ ಭಾರತಕ್ಕೆ ಬಂದಿದ್ದಾಳೆ. ಏಳು ವಾರಗಳ ಕಾಲ ಉತ್ತರ ಭಾರತದ ಎಲ್ಲಾ ಪ್ರದೇಶಗಳಲ್ಲಿ ಹುಡುಕಿದ್ದಾಳೆ. ಕುಲು-ಮನಾಲಿಯಿಂದ ಹಿಡಿದು, ಅಂಬಾಲಾ, ವಾರಣಾಸಿ, ಹರಿದ್ವಾರ – ದಾರಿಯಲ್ಲಿ ಸಿಕ್ಕಿದ ಆಸ್ಪತ್ರೆ, ದೇವಸ್ಥಾನಗಳು, ಆಶ್ರಮಗಳು, ಧರ್ಮಶಾಲೆಗಳು ಎಲ್ಲವನ್ನೂ ಹುಡುಕಿದ್ದಾಳೆ.
`ಕಸೋಲ್ ನಲ್ಲಿ ಆರ್ಡ್ ನನ್ನು ತುಂಬಾ ಜನ ನೋಡಿದ್ದಾರಂತೆ. ಅವನು ಒಂದು ಟೀ ಅಂಗಡಿಯ ಹತ್ತಿರ ಇರುತ್ತಿದ್ದನಂತೆ. ಅವನ ವಿಷಯ ಹೇಳ್ತಾರೆ ಹೊರತು, ಏನಾಯ್ತು ಅಂತ ಹೇಳೊದಿಲ್ಲ. ಏನೋ ಮುಚ್ಚಿಡ್ತಿದ್ದಾರೆ ಅಂತ ಅನ್ನಿಸ್ತಿತ್ತು,’ ಅಂದಳು.
ಏಳು ವಾರಗಳ ಬಳಿಕ ಹೋಮಾ ಕೆನಡಾಕ್ಕೆ ವಾಪಾಸ್ ಹೋಗಿದ್ದಾಳೆ. ಆದರೂ ತನ್ನ ಮಗ ಎಲ್ಲೋ ಇದ್ದಾನೆ ಅಂತ ಅನ್ನಿಸೋಕ್ಕೆ ಶುರುವಾಗಿದೆ. ಹಾಗೆಯೇ, 1996 ಮಾರ್ಚ್ ನಲ್ಲಿ, ತನ್ನ ಮಗನಂತೆಯೇ, ಇಂಗ್ಲೆಂಡ್ ನ ಇಯಾನ್ ಮೊಗ್ ಫೋರ್ಡ್ ಎಂಬ ಹುಡುಗನೂ ಕಸೋಲಿಯಲ್ಲಿ ಕಣ್ಮರೆಯಾದ ವಿಷಯ ತಿಳಿದಿದೆ. ಆ ಹುಡುಗನ ತಂದೆ-ತಾಯಿಯರು ಮೂರು ಸಲ ಭಾರತಕ್ಕೆ ಬಂದು, ಹುಡುಕಿ, ಕೈಚೆಲ್ಲಿ ವಾಪಾಸ್ ಹೋಗಿದ್ದಾರೆ. ಹೋಮಾ, ಆ ಕುಟುಂಬದವರನ್ನು ಸಂಪರ್ಕಿಸಿ, ಆ ಹುಡುಗನ ಹೆಚ್ಚಿನ ವಿವರ ಮತ್ತು ಫೋಟೋ ಸಂಪಾದಿಸಿದ್ದಾಳೆ. 1998 ರಲ್ಲಿ, ಕುಂಭ ಮೇಳದ ಸಮಯದಲ್ಲಿ ಭಾರತಕ್ಕೆ ಮತ್ತೆ ಬಂದು, ಒಂದು ದೊಡ್ಡ ಬೋರ್ಡ್ ಮೇಲೆ ಆರ್ಡ್ ಮತ್ತು ಇಯಾನ್ ರ ಫೋಟೋಗಳನ್ನು ದೊಡ್ಡದಾಗಿ ಅಂಟಿಸಿ, `ಇವರನ್ನು ನೋಡಿದ್ದೀರಾ’ ಅಂತ. `ತುಂಬಾ ಜನ ಬಂದು ಏನಾಯ್ತು ಅಂತ ಮಾತಾಡಿಸಿದ್ರು. ಯಾರಿಗೂ ಗೊತ್ತಿದ್ದಂತೆ ಕಾಣಲಿಲ್ಲ. ಪ್ರತೀ ರಾಜ್ಯಗಳ ರಾಜಧಾನಿಗೆ ಹೋಗಿ, ಅಲ್ಲಿನ ಪೋಲಿಸರ ಹತ್ತಿರ ಏನಾದ್ರು ಸಹಾಯ ಆಗುತ್ತಾ ಅಂತ ನೋಡ್ತಿದ್ದೀನಿ, ಇನ್ನರ್ಧ ಘಂಟೆಯಲ್ಲಿ ಗೋವಾಕ್ಕೆ ಹೊರಡುತ್ತಿದ್ದೇನೆ’ ಅಂದಳು.
`ಈ ಇಯಾನ್ ಕುಟುಂಬದವರು ನಿಮ್ಮ ಸಂಬಂಧಿಕರಾ?’ ಅಂತ ಕೇಳಿದೆ. `ಇಲ್ಲವಲ್ಲ, ಯಾಕೆ?’ ಅಂದಳು ಹೋಮಾ.
`ನಿಮ್ಮ ಮಗನನ್ನು ಕಳೆದುಕೊಂಡ ದುಃಖ ನಿಮಗಿದ್ದಾಗ, ಯಾರದೋ ಮಗನನ್ನೂ ಹುಡುಕ್ತಿದ್ದೀರಲ್ಲಾ, ಅದಕ್ಕೇ ಕೇಳ್ದೆ,’ ಅಂದೆ.
`ಅದು ಹಾಗಲ್ಲ. ಅದು ತಾಯಿಗೆ ಮಗನನ್ನ ಕಳ್ಕೊಂಡಾಗ ಆಗೋ ನೋವು. ನನ್ನ ನೋವು ಜಾಸ್ತಿ, ಇಯಾನ್ ತಾಯಿ ನೋವು ಕಮ್ಮಿ ಅಂತ ಇಲ್ಲ. ಈಗ ನನಗೆ ಇಬ್ಬರೂ ಸಿಗಬಹುದು. ಸಿಗದೇ ಇರಬಹುದು. ನನ್ನ ಮಗ ಮಾತ್ರ ಸಿಗಬಹುದು. ಆಗ ನನಗೆ ಸಂತೋಷವಾಗುತ್ತೆ. ಇಯಾನ್ ಮಾತ್ರ ಸಿಕ್ಕಿದರೆ ಅವನ ತಾಯಿಗೆ ಖುಶಿಯಾಗುತ್ತೆ. ಎಲ್ಲಾ ರಾಜ್ಯಗಳನ್ನು ಸುತ್ತಿದಮೇಲೆ, ನಾನು ಕುಲುಗೆ ವಾಪಾಸ್ ಹೋಗ್ತಿದ್ದೀನಿ. ಹೋದ ತಿಂಗಳು, ಅಲ್ಲಿಂದ ಒಬ್ಬ ಇಸ್ರೇಲಿ ಹುಡುಗ ಕಣ್ಮರೆಯಾಗಿದ್ದಾನಂತೆ. ಅವನ್ನ ಹುಡುಕೋಕೆ ಇಸ್ರೇಲ್ ನಿಂದ ಒಂದು ತಂಡ ಬರುತ್ತಂತೆ. ಅವರಿಗೆ ಸಹಾಯ ಮಾಡೋಣ ಅಂತ. ಆ ಮಗು ಸಿಕ್ಕಿದರೆ, ಅವನ ತಾಯಿಗೆ ಖುಶಿಯಾಗುತ್ತೆ. ಯಾವುದೋ ಒಂದು ತಾಯಿಗೆ ಸಂತೋಷ ಆದರೆ ಸಾಕು, ಅಲ್ವಾ?’ ಅಂದಳು.
ಆಕೆಯ ಮುಖವನ್ನೇ ನೋಡಿದೆ. ಮಗನನ್ನು ಕಳೆದುಕೊಂಡ ಆಕೆಯ ಮುಖದಲ್ಲಿ ಒಂದು ಹನಿ ಕಣ್ಣೀರು ಸಹ ಇರಲಿಲ್ಲ. ತುಂಬಾ ಹಿಂದೆನೆ ಬತ್ತಿ ಹೋಗಿರಬೇಕು ಅನ್ಕೊಂಡೆ. ಮುಖದಲ್ಲೋಂದು ನೋವಿನ ಮುಗುಳ್ನಗೆ. ಮನಸ್ಸಲ್ಲೇ ಅನ್ಕೊಂಡೆ: `ಈ ತಾಯಿಗಿರೋ ಹೃದಯ, ಆ ದೇವರಿಗೇಕಿಲ್ಲ?’ ಅಂತ. ಹಾಗೆಯೇ ಆವಳನ್ನು ಬೀಳ್ಕೊಂಡು ಆಫೀಸಿಗೆ ಬಂದೆ.
ಮಾರನೇ ದಿನ ಸುರೇಶ್ ಬಾಬು ಆಫೀಸಿಗೆ ಹೋದ ತಕ್ಷಣ ಹೇಳಿದ್ರು: `ನೋಡ್ದೆ ಕಣಪ್ಪಾ ನಿನ್ ಸ್ಟೋರಿ. ಚೆನ್ನಾಗಿ ಬರ್ದಿದ್ದೀಯಾ.’
`ಸರ್, ಅವಳ ಮಗಂಗೇನಾಗಿದೆ ಅಂತ ನಿಮ್ಗೇನಾದ್ರು ಐಡಿಯ ಇದ್ಯಾ?’ ಅಂತ ಕೇಳ್ದೆ.
`ನೆನ್ನೆ ರಾತ್ರಿ ಕುಲು ಎಸ್.ಪಿ.ಗೆ ಮಾತಾಡ್ದೆ. ಅಲ್ಲಿ ಕೆಲವು ಪ್ರಾಬ್ಲ್ಸಂ ಇದೆ ಅಂತ ಕಾಣುತ್ತೆ. ವರ್ಷಕ್ಕೆ ಹತ್ತರಿಂದ, ಹದಿನೈದು ಹುಡುಗ್ರು ಈ ಥರ ಕಳೆದ್ಹೋಗ್ತಾರೆ. ಎಲ್ಲಾ ಫಾರಿನರ್ಸ್ ಮತ್ತೆಯಾರ್ದೂ ಹೆಣ ಸಿಕ್ಕಿಲ್ಲ. ಅವರು ಹೇಳೋ ಪ್ರಕಾರ, ಮೊದಲನೆದು ಈ ಕಣಿವೆಗಳಲ್ಲಿ ಒಬ್ಬೊಬ್ಬರೇ ನೆಡ್ಕೊಂಡು  ಹೋದಾಗ, ಇಲ್ಲಾ ವ್ಯಾಲಿ ಒಳಗೆ ಬೀಳಬಹುದು. ಅಥವಾ ಯಾರಾದರೂ ದರೋಡೆ ಮಾಡಿ ಅವರುಗಳನ್ನು ವ್ಯಾಲಿಗೆ ಎಸೆಯುವ ಒಂದು ಗ್ಯಾಂಗ್ ಇದ್ದರೂ ಇರಬಹುದು. ಜನವೇ ಇಲ್ಲದ ಈ ಬೆಟ್ಟಗಳಲ್ಲಿ ಅದ್ನ ಯಾರೂ ನೋಡಿರಲ್ಲ. ಮತ್ತೆ ಸ್ನೋ ಬಿದ್ದಮೇಲೆ, ಆ ಹೆಣಗಳು ಸಿಗೋದೂ ಕಷ್ಟ. ಅಲ್ಲಿನ ಪೋಲಿಸ್ ಒಂದು ಸ್ಟೆಷಲ್ ಸ್ಕ್ವಾಡ್ ಮಾಡಬೇಕೂಂತ ಯೋಚಿಸಿದ್ದರಂತೆ. ಒಂದು ಬೆಟ್ಟದಿಂದ ಇನ್ನೊಂದು ಬೆಟ್ಟಕ್ಕೆ ಹೋಗೋಕೆ ಒಂದು ದಿನ ಬೇಕಂತೆ. ಹಾಗಾಗಿ, ಸ್ಕ್ವಾಡ್ ನಲ್ಲಿ ಕೆಲಸ ಮಾಡೋಕೆ ಯಾರೂ ಒಪ್ತಾ ಇಲ್ವಂತೆ. ಇದರ ಮಧ್ಯ ಸ್ವಲ್ಪ ಡ್ರಗ್ಸ್ ಪ್ರಾಬ್ಲಂ ಕೂಡ ಇದೆಯಂತೆ,’ ಅಂದ್ರು.
 `ಅಂದ್ರೆ, ಆ ಹುಡುಗಂಗೆ ಏನಾದ್ರೂ ಆಗಿದೆ ಅಂತ ಅನ್ಸುತ್ತಾ?’ ಅಂತ ಕೇಳ್ದೆ.
`ಎಸ್.ಪಿ. ಹೇಳಿದ್ದು ಕೇಳಿದ್ರೆ ಹಾಗೇ ಅನ್ಸುತ್ತೆ,’ ಅಂದರು.
`ಅದು ಆ ಹೆಂಗಸಿಗೂ ಗೊತ್ತಾ?’ ಅಂತ ಕೇಳ್ದೆ.
`ಅದು ನಂಗೊತ್ತಿಲ್ಲಪ್ಪ. ಒಂದೇನಾಗುತ್ತೆ ಅಂದ್ರೆ,  ಈ ಅಮೇರಿಕಾ, ಕೆನಡಾ ಮತ್ತೆ ಯುರೋಪ್ ದೇಶಗಳಲ್ಲಿ, ಯಾರಾದ್ರು ಈ ಥರ ಕಳೆದ್ಹೋದ್ರೆ, ಅವರ  ಬಾಡಿ ಅಥವಾ ಅವರಿಗೆ ಸಂಬಂಧಿಸಿದ ವಸ್ತು ಸಿಗೋವರ್ಗೂ ಹುಡುಕ್ತಾರೆ. ಅದಾದ ಮೇಲೆನೇ ಅವ್ರು ಸತ್ತುಹೋದ್ರು ಅಥವಾ ಕಳೆದು ಹೋದ್ರು ಅಂತ ಡಿಕ್ಲೇರ್ ಮಾಡೋದು. ಅಲ್ಲೆಲ್ಲಾ ಸರ್ಕಾರನೇ ಆ ಥರದ ಟೀಮ್ ಗಳನ್ನು ಮಾಡಿರ್ತಾರೆ. ಹಾಗಾಗಿ, ಆ ಥರದ ಯಾವುದಾದರೊಂದು ಆಧಾರ ಸಿಗೋವರೆಗೆ, ಕಳೆದುಹೋದವರು ಎಲ್ಲೋ ಬದುಕಿದ್ದಾರೆ ಅಂತಲೇ ನಂಬಿರುತ್ತಾರೆ. ಆದ್ರೆ, ನಮ್ಮಲ್ಲಿ ಆ ಥರದ ಯಾವುದೇ ಟೀಮ್ ಗಳಿಲ್ಲ. ‘
`ಎರಡನೇದಾಗಿ, ಈ ಫಾರಿನರ್ ಗಳು, ಒಂದೊಂದ್ಸಲ ಎಲ್ಲವನ್ನೂ ಬಿಟ್ಟು, ಯಾರಿಗೂ ಹೇಳ್ದೆ ಎಲ್ಲೋ ಹೋಗಿಬಿಡ್ತಾರೆ. ಯಾವುದೋ ಆಶ್ರಮ ಸೇರಿಕೊಂಡು ಬಿಟ್ಟಿರ್ತಾರೆ. ಅದೂ ಒಂದು ಕಷ್ಟ. ಮತ್ತೆ, ಇದ್ನೆಲ್ಲಾ ನಾವು ಆ ಹೆಂಗಸಿಗೆ ಹೇಳೋಕಾಗಲ್ಲ. ಯಾಕೇಂದ್ರೆ, ನನಗೆ ಅಲ್ಲಿನ ಫಸ್ಟ್ ಹ್ಯಾಂಡ್ ಇನ್ ಫರ್ ಮೇಶನ್ ಇಲ್ಲ. ಕುಲು ಎಸ್.ಪಿ. ಏನಾದ್ರು ಹೇಳ್ಬೇಕು ಅಷ್ಟೆ,’ ಅಂದ್ರು.
ಸುರೇಶ್ ಬಾಬು ಆಫೀಸಿನಿಂದ ಹೊರಗೆ ಬರುವಾಗ, ಆಗ ತಾನೆ ಏಷ್ಯನ್ ಏಜ್ ಗೆ ಸೇರಿದ್ದ ಜಾನ್ಸನ್ ಎದುರಿಗೆ ಬಂದ. `ನಿನ್ನ ಸ್ಟೋರಿ ಚೆನ್ನಾಗಿದೆ. ಆ ಹೆಂಗಸು ಎಲ್ಲಿ ಸಿಗಬಹುದು?’ ಅಂತ ಕೇಳ್ದ.
`ಅವ್ಳು ಗೋವಾಕ್ಕೆ ನೆನ್ನೆ ಸಾಯಂಕಾಲನೇ ಹೊರಟು ಹೋದ್ಲು. ಈ ಹ್ಯಾಂಡ್ ಬಿಲ್ ಮಾತ್ರ ಇದೆ,’ ಅಂದೆ.
`ನೆನ್ನೆ ಅವಳನ್ನ ಮಾತಾಡ್ಸಿದ ತಕ್ಷಣ ಎಲ್ಲಾ ಪೇಪರ್ ನವರಿಗೆ ಹೇಳಿದ್ದರೆ, ತುಂಬಾನೆ ಪಬ್ಲಿಸಿಟಿ ಸಿಗ್ತಿತ್ತು. ತುಂಬಾ ಜನಕ್ಕೆ ಆ ಹುಡುಗನ ಚಿತ್ರ ನೋಡಲು ಸಿಕ್ತಿತ್ತು,’ ಅನ್ನಿಸಿತು. ತಕ್ಷಣ ಸುರೇಶ್ ಬಾಬು ಹೇಳಿದ್ದು ನೆನಪಾಗಿ, `ಏನೂ ಪ್ರಯೋಜನ ಆಗ್ತಿರ್ಲಿಲ್ಲ,’ ಅನ್ಕೊಂಡು ಸುಮ್ಮನಾದೆ.

ಮಾಕೋನಹಳ್ಳಿ ವಿನಯ್ ಮಾಧವ