ಅವಿಶ್ಲೇಷಿತ ಹಕ್ಕು ಮತ್ತು ಆದ್ಯತೆಗಳ ಸುಳಿಯಲ್ಲಿ,
ನಮ್ಮ ಸ್ಥಾನವೆಲ್ಲಿ?
ಮೊನ್ನೆ ಬೆಳಗಾವಿ ಅಧಿವೇಶನ ಮುಗಿಸಿ ರಾಕೇಶ್
ಪ್ರಕಾಶ್,
ನಿರಂಜನ ಕಗ್ಗೆರೆ ಮತ್ತು ಸತೀಶ್ ಬಿ ಎಸ್ ಜೊತೆ ಹಿಂದಿರುಗುವಾಗ, ಜೆ ಎಚ್ ಪಟೇಲ್, ಬಂಗಾರಪ್ಪ, ಎಸ್ ಎಂ
ಕೃಷ್ಣ ಮತ್ತು ಘೋರ್ಪಡೆಯವರಂಥಹ ಹಳೇ ರಾಜಕಾರಣಿಗಳ ವಿಷಯ ಮಾತನಾಡುತ್ತಿದ್ದೆವು. ಸತೀಶನು ಮೊದಲನೇ ಸಲ ಪಟೇಲರನ್ನು ಭೇಟಿಯಾದಾಗ, ಅವರು ಹೇಳಿದ ಕಥೆಯನ್ನು
ನೆನಪಿಸಿಕೊಂಡ.
ಪಟೇಲರು ಸಂಸತ್ತಿಗೆ ಆಯ್ಕೆಯಾದಾಗ,
ಶಿಮಮೊಗ್ಗದಲ್ಲಿ ಗೆಳೆಯರೊಡನೆ ಗುಂಡು ಹಾಕಲು ಹೋಗಿದ್ದರಂತೆ. ಮನೆವರೆಗೆ ಬಿಟ್ಟು ಬರುತ್ತೇವೆ ಅಂತ ಸ್ನೇಹಿತರು ಹೇಳಿದರೂ ಕೂಡ, ಪಟೇಲರು ತಾವೇ ನೆಡೆದುಕೊಂಡು ಹೋಗುವುದಾಗಿ ಹೇಳಿದರಂತೆ. ಸ್ವಲ್ಪ
ದೂರ ಹೋದ ಮೇಲೆ ಪಟೇಲರಿಗೆ ಗುಂಡು ಜಾಸ್ತಿಯಾಗಿದ್ದು ಗೊತ್ತಾಗಿದೆ ಮತ್ತು ಮನೆ ಯಾವುದು ಅನ್ನೋದು ಗೊತ್ತಾಗುತ್ತಿಲ್ಲ.
ಇಂಥಹ ಪರಿಸ್ಥಿತಿಯಲ್ಲಿ, ಪಂಚೆ ಕೂಡ ಜಾರಿ ಬಿದ್ದಿದೆ.
ಆಗ ಪೋಲಿಸೊಬ್ಬ ಬಂದು ವಿಚಾರಿಸಿದ್ದಾನೆ.
ತಾನು ಇಲ್ಲಿನ ಸಂಸದ ಮತ್ತು ಮನೆ ಹುಡುಕುತ್ತಿದ್ದೇನೆ ಎಂದು ಹೇಳಿದಾಗ, ಪಟೇಲರ ತಲೆ ಮೇಲೆ ಮೊಟಕಿದ ಪೋಲಿಸಪ್ಪ, ನೆಟ್ಟಗೆ ಅವರನ್ನು ಲಾಕಪ್ಪಿನೊಳಗೆ
ಹಾಕಿದ್ದಾನೆ. ಮುಂದೇನಾಯ್ತು ಅಂತ ಪಟೇಲರಿಗೆ ನೆನಪಿಲ್ಲವಂತೆ. ಗಡದ್ದಾಗಿ ನಿದ್ದೆ ಮಾಡಿದ್ದಾರೆ. ಬೆಳಗ್ಗೆ ಎದ್ದು ನೋಡಿದರೆ,
ಪೋಲಿಸಪ್ಪ ಇವರ ಕಾಲು ಹಿಡಿದುಕೊಂಡು ಕೂತಿದ್ದನಂತೆ. ಒಂದೆರೆಡು
ನಿಮಿಷದ ಬಳಿಕ ಏನಾಯ್ತು ಅಂತ ನೆನಪಿಸಿಕೊಂಡ ಪಟೇಲರು ನಕ್ಕು ಸುಮ್ಮನಾದರಂತೆ.
ಪಟೇಲರ ಹಿಂಬಾಲಕರಿಗೆ ಬಹಳ ಸಿಟ್ಟು ಬಂದಿತ್ತಂತೆ.
ಪೋಲಿಸನ ಮೇಲೆ ಏನಾದರೂ ಕ್ರಮ ಜರುಗಿಸಬೇಕು ಎಂದು ಹೇಳಿದಾಗ, `ಅಲ್ರೋ…. ನಾನು ಎಂ ಪಿ ಥರ ಕಾಣದೆಹೋದರೆ, ಪೋಲಿಸನವದೇನು ತಪ್ಪು? ನಾನು ಪಾರ್ಲಿಮೆಂಟ್ ಮೆಂಬರ್ ಥರ ಕಾಣೋದಿಲ್ಲ
ಅನ್ನೋದು ಈಗಲೇ ಗೊತ್ತಾಗಿದ್ದು ನೋಡು,’ ಅಂತ ಹೇಳಿ ಜೋರಾಗಿ ನಕ್ಕರಂತೆ.
ಈ ಥರ ಹಳೇ ಕಹಿ ಘಟನೆಗಳನ್ನು ನಕ್ಕು ಕ್ಷಮಿಸಿದ ಹಲವಾರು ಘಟನೆಗಳು ಪಟೇಲರ ಮತ್ತು
ಇನ್ನೊಬ್ಬ ಮಾಜೀ ಮುಖ್ಯಮಂತ್ರಿ ಗುಂಡೂರಾಯರ ಜೀವನಗಳಲ್ಲಿ ಬೇಕಾದಷ್ಟಿವೆ.
ಆದರೆ, ಈಗಿನ ರಾಜಕಾರಣಿಗಳು ಇಂತಹ ಘಟನೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದರು? ಪಟೇಲರ ವ್ಯಕ್ತಿತ್ವದ ಹತ್ತಿರವೂ ಸುಳಿಯುತ್ತಿರಲಿಲ್ಲ. ಅದಲ್ಲದೆ,
ಹಕ್ಕುಚ್ಯುತಿಯನ್ನು ನಿರ್ದಾಕ್ಷಿಣ್ಯವಾಗಿ ಆ ಪೋಲಿಸ್ ನವನ ಮೇಲೆ ಪ್ರಯೋಗಿಸುತ್ತಿದ್ದರು
ಅನ್ನೋದು ನನ್ನ ಭಾವನೆ.
1997 ರಲ್ಲಿ,
ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಕೆಲಸ ಮಾಡುವಾಗ, ವಿಧಾನ
ಮಂಡಲಗಳ ವರದಿ ಮಾಡುವ ಸಲುವಾಗಿ, ವಿಧಾನಸೌದದೊಳಗೆ ಇಣುಕಲು ಶುರುಮಾಡಿದೆ.
ಯಾವುದಾದರೂ ಹಿರಿಯ ವರದಿಗಾರರಿಗೆ ಬೇರೆ ಕೆಲಸವಿದ್ದಾಗ, ನನ್ನನ್ನು ಕಳುಹಿಸುತ್ತಿದ್ದರು. ಆಗಿನ ರಾಜಕಾರಣಿಗಳು ಮಾತನಾಡುವಾಗ
ತಬ್ಬಿಬ್ಬಾಗುತ್ತಿದ್ದದ್ದೂ ಉಂಟು.
ಒಂದು ಕಡೆ,
ಪಟೇಲ್, ಎಂ ಪಿ ಪ್ರಕಾಶ್, ಎಂ
ಸಿ ನಾಣಯ್ಯ, ಭೈರೇಗೌಡ, ಜಯಪ್ರಕಾಶ್ ಹೆಗಡೆ ಥರದವರೂ,
ಇನ್ನೊಂದು ಕಡೆ, ಮಲ್ಲಿಕಾರ್ಜುನ ಖರ್ಗೆ, ಎಂ ವೈ ಘೋರ್ಪಡೆ ಥರದವರೂ ಮಾತನಾಡುವಾಗ, ಯಾವುದು ಬರೆಯಬೇಕು,
ಯಾವುದು ಬಿಡಬೇಕು ಅನ್ನೋದು ಸಮಸ್ಯೆಯಾಗುತ್ತಿತ್ತು. ಮುಂದಿನ
ಚುನಾವಣೆಗಳಲ್ಲಿ ಕೆಲವರು ಸೋತರೂ, ಎಸ್ ಕೃಷ್ಣ, ಕಾಗೋಡು ತಿಮ್ಮಪ್ಪ, ಕೆ ಎಚ್ ರಂಗನಾಥ್, ಎ ಎಚ್ ವಿಶ್ವನಾಥ್ ಥರದವರು ಒಳಗೆ ಬಂದಿದ್ದರು.
ಕಲಾಪದ ನಡುವೆ,
ಮೊಗಸಾಲೆಗಳಲ್ಲಿ, ಈ ನಾಯಕರ ಸುತ್ತ ಮೊದಲ ಸಲ ಚುನಾಯಿತರಾದವರು
ಕುಳಿತಿರುತ್ತಿದ್ದರು. ಹೆಚ್ಚಿನ ಸಮಯಗಳಲ್ಲಿ, ಸಂಸದೀಯ ನಡುವಳಿಕೆಗಳು, ಹಿಂದಿನ ಘಟನೆ ಮತ್ತು ಚರ್ಚೆಯ ಸುತ್ತ
ಮಾತುಕತೆಗಳು ಸಾಗುತ್ತಿದ್ದವು. ನಾವು ಸಹ, ಈ ನಾಯಕರುಗಳನ್ನು
ಪರಿಚಯ ಮಾಡಿಕೊಳ್ಳಲು ಸಮಯ ಕಾಯುತ್ತಿದ್ದವು. ಹಿರಿಯ ಪತ್ರಕರ್ತರು ಮತ್ತು
ಬೇರೆ ಸದಸ್ಯರು ಇಲ್ಲದ ಸಮಯದಲ್ಲಿ ಮಾತಿಗೆ ಕೂರುತ್ತಿದ್ದೆವು. ರಾಜಕೀಯದ
ಜೊತೆ, ಅವರು ಪತ್ರಿಕೆಗಳಲ್ಲಿನ ವರದಿಗಳ ಬಗ್ಗೆಯೂ ಚರ್ಚಿಸುತ್ತಿದ್ದರು ಮತ್ತು
ಸಲಹೆಗಳನ್ನು ನೀಡುತ್ತಿದ್ದರು. ಅವರ ಪ್ರೌಡಿಮೆಯ ಬಗ್ಗೆ ಚಕಾರವೆತ್ತುವ ಹಾಗಿಲ್ಲ.
ಈ ಮೊದಲು,
ಹಕ್ಕುಚ್ಯುತಿ ಅನ್ನೋದನ್ನ ಒಂದು ಸಲ ಮಾತ್ರ ನೋಡಿದ್ದೆ. ವಿಧಾನ ಪರಿಷತ್ ನಲ್ಲಿ, ಐಎಎಸ್ ಅಧಿಕಾರಿಯೊಬ್ಬರನ್ನು ಕರೆದು ಛೀಮಾರಿ
ಹಾಕುವುದರೊಂದಿಗೆ, ಅದು ಮುಗಿದು ಹೋಗಿತ್ತು. ಆ
ಘಟನೆ ನನಗೆ ಇಷ್ಟವಾಗಿರಲಿಲ್ಲ. ಆದರೂ ಏನೂ ಮಾಡುವ ಹಾಗಿರಲಿಲ್ಲ.
ಕಳೆದ ವಾರದವರೆಗೆ, ಈ ಹಕ್ಕುಚ್ಯುತಿಯ ಬಗ್ಗೆ ನನಗೆ ತಪ್ಪು ಕಲ್ಪನೆಗಳಿದ್ದವು
ಅಂತ ಅನ್ನಿಸುತ್ತದೆ. ಯಾಕೆಂದರೆ, ರವಿ ಬೆಳಗೆರೆ
ಮತ್ತು ಅನಿಲ್ ರಾಜ್ ಅನ್ನೋ ಇಬ್ಬರು ಪತ್ರಕರ್ತರನ್ನು ಒಂದು ವರ್ಷ ಜೈಲು ಮತ್ತು 10000 ರೂಪಾಯಿ ಜುಲ್ಮಾನೆಯನ್ನು ಖಾಯಂಗೊಳಿಸಿದ ಮೇಲೆ, ಗೊಂದಲಕ್ಕೊಳಗಾಗಿದ್ದೇನೆ.
ಮೊದಲು ಮಾಡಿದ ಕೆಲಸ ಎಂದರೆ,
ಹಕ್ಕುಭಾದ್ಯತಾ ಸಮಿತಿಯ ವರದಿಯನ್ನು ತೆಗೆದುಕೊಂಡು ಓದಿದೆ. ರವಿ ಬೆಳೆಗೆರೆ ಬರೆದ ಈ ವರದಿ ಹೇಗೆ ಹಕ್ಕುಚ್ಯುತಿಯಾಗಿದೆ ಎಂಬ ನಿರ್ಣಯಕ್ಕೆ ಸಮಿತಿ ಬಂದಿತು
ಅನ್ನೋದರ ಸಾಧಕ-ಭಾದಕಗಳ ವಿಷ್ಲೇಶಣೆ ಮಾಡದೇ ಹೋದರೂ, ಕೆಲವು ವಿಷಯಗಳನ್ನು ಪ್ರಸ್ತಾಪ ಮಾಡಲೇಬೇಕಾಗುತ್ತದೆ.
ಮೊದಲನೆಯದಾಗಿ,
ಸಮಿತಿಯೇ ಹೇಳುವಂತೆ, ಹಕ್ಕುಚ್ಯುತಿ ಎನ್ನುವುದಕ್ಕೆ ಯಾವುದೇ
ವ್ಯಾಖ್ಯಾನವಿಲ್ಲ. ಆದರೂ, ಸಂಸತ್ ನಡುವಳಿಕೆಯ
ಬಗ್ಗೆ, ಕೌಲ್ ಮತ್ತು ಶಖ್ತರ್ ಬರೆದಿರುವ `PRACTICE
AND PROCEDURE OF PARLIAMENT’ ಎನ್ನುವ ಪುಸ್ತಕವನ್ನು
ಆಧರಿಸಿ,
ಹೀಗೆ ಹೇಳುತ್ತಾರೆ. ಅದನ್ನು ಕನ್ನಡಕ್ಕೆ ಅನುವಾದಿಸುವ
ಗೋಜಿಗೆ ನಾನು ಹೋಗುವುದಿಲ್ಲ:
`It is breach of privilege and contempt of the House to make speeches,
or print or publish any libels, reflecting on the character of proceedings of
the house or its Committees, or any member of the House for or relating to his
character or conduct as a member of Parliament’.
Speeches and writings reflecting on House or its Committees or member
are punished by the House as contempt on the principle that such acts, ``tend
to obstruct the House in the performance of their functions by diminishing the
respect due to them.’’
The house may punish not only contempt’s arising out of
facts of which the ordinary courts will take cognizance, but those of which
they cannot, thus a libel on a member of Parliament any amount to a breach of
privilege without being a libel under civil or criminal law.
ಅನಿಲ್ ರಾಜ್ ಯಾರು ಅಂತ ಗೊತ್ತಿಲ್ಲದಿದ್ದರೂ,
ರವಿ ಬೆಳೆಗೆರೆಯನ್ನು ಇಪ್ಪತ್ತು ವರ್ಷಗಳಿಂದ ಬಲ್ಲೆ. ಎಷ್ಟೋ
ಸಲ, ಕೆಲವು ಲೇಖನಗಳನ್ನು ಕುರಿತು, ಇದ್ಯಾಕೋ ವಿಪರೀತವಾಯ್ತು
ಅಂತ ಮುಖಕ್ಕೆ ಹೊಡೆದಂತೆ ಹೇಳಿದ್ದೇನೆ ಮತ್ತು ಜಗಳವಾಡಿದ್ದೇನೆ. ಅನಿಲ್
ರಾಜ್ ವಿರುದ್ದ ದೂರು ಕೊಟ್ಟವರು ಬಿಜೆಪಿಯ ಎಸ್ ಆರ್ ವಿಶ್ವನಾಥ್ ಮತ್ತು ರವಿ ಬೆಳೆಗೆರೆಯ ವಿರುದ್ದ
ದೂರು ನೀಡಿರುವವರು, ಆಗಿನ ಹಕ್ಕು ಭಾದ್ಯತಾ ಸಮಿತಿಯ ಅಧ್ಯಕ್ಷರು ಮತ್ತು
ಈಗಿನ ಸಭಾಧ್ಯಕ್ಷರಾಗಿರುವ ಕೆ ಬಿ ಕೋಳೀವಾಡ್.
ಕೋಳೀವಾಡ್ ವಿರುದ್ದ ರವಿ ಬರೆದಿದ್ದ ವರದಿಯನ್ನು
ಓದಿದ ಮೇಲೆ, ಇದು ಸದಭಿರುಚಿಯ ವರದಿ ಅಲ್ಲದಿದ್ದರೂ,
ಹಕ್ಕುಚ್ಯುತಿ ಹೇಗಾಯ್ತು ಅನ್ನೋ ಅನುಮಾನ ಬಂತು. ಯಾಕಂದರೆ,
ರವಿಯ ಹೆಚ್ಚಿನ ವರದಿಗಳನ್ನು ಓದಿದ್ದ ನನಗೆ, ರವಿ ನೂರಾರು
ಸಲ ಜೈಲಿಗೆ ಹೋಗಿ ಬಂದಿರಬೇಕಾಗುತ್ತಿತ್ತು ಅನ್ನಿಸಿತು. ಅದು ರವಿಗಷ್ಟೇ ಸೀಮಿತವಾಗಿರುತ್ತಿರಲಿಲ್ಲ.
ಎಷ್ಟೋ ನಿಯತಕಾಲ ಮತ್ತು ದಿನ ಪತ್ರಿಕೆಯ ವರದಿಗಾರರೂ ಜೈಲಿಗೆ ಹೋಗೋ ಪರಿಸ್ಥಿತಿ ಬಂದಿರುತ್ತಿತ್ತು.
ರವಿ ವಿರುದ್ದ ದೂರು ದಾಖಲಿಸಿದಾಗ,
ಕೋಳೀವಾಡ್ ಹಕ್ಕುಭಾದ್ಯತಾ ಸಮಿತಿಯ ಅಧ್ಯಕ್ಷರಾಗಿದ್ದರು. ಆಗಿನ ಸಭಾಧ್ಯಕ್ಷರಾಗಿದ್ದ ಕಾಗೋಡು ತಿಮ್ಮಪ್ಪನವರು, ದೂರನ್ನು
ಹಕ್ಕಭಾದ್ಯತಾ ಸಮಿತಿಗೆ ಕಳುಹಿಸಿದ್ದರು. ಅಂದರೆ, ದೂರು ನೀಡಿದವರೂ ಮತ್ತು ನ್ಯಾಯಾದೀಶರೂ ಒಬ್ಬರೇ ಆಗಿದ್ದಿದ್ದು, ಈ ದೂರಿನ ವೈಶಿಷ್ಟ್ಯ. ಸಭಾಧ್ಯಕ್ಷರಾಗಿ ಆಯ್ಕೆಯಾಗಿ,
ಕಿಮ್ಮನೆ ರತ್ನಾಕರ್ ರವರಿಗೆ ಸಮಿತಿಯ ಅಧ್ಯಕ್ಷಗಿರಿ ಹಸ್ತಾಂತರಿಸುವ ಹೊತ್ತಿಗೆ,
ಕೋಳೀವಾಡರು ತಮ್ಮ ವರದಿಯನ್ನು ತಯಾರು ಮಾಡಿ ಇಟ್ಟಿದ್ದರು. ಅನಿಲ್ ರಾಜ್ ವಿರುದ್ದದ ದೂರಿನ ವರದಿ ಮಾತ್ರ ತಯಾರಾಗದೇ ಉಳಿದಿತ್ತು.
ಕಿಮ್ಮನೆ ರತ್ನಾಕರ್,
ಅನಿಲ್ ರಾಜ್ ವಿರುದ್ದ ದೂರಿನ ವರದಿ ತಯಾರು ಮಾಡಿ, ಸದನದ
ಮುಂದೆ ಮಂಡಿಸಿದರು. ಸದನದ ಮುಂದೆ ಪುನರ್ವಿಮರ್ಶೆಗಾಗಿ ಮನವಿ ಬಂದಾಗ,
ಒಕ್ಕೊರಳಿನಿಂದ ಮನವಿಯನ್ನು ತಿರಸ್ಕರಿಸಲಾಯಿತು. ಬಿಜೆಪಿಯ
ಸುರೇಶ್ ಕುಮಾರ್ ಮಾತ್ರ ಇದರ ವಿರುದ್ದ ಧ್ವನಿ ಎತ್ತಿದರೆ, ಆರೋಗ್ಯ ಸಚಿವ
ರಮೇಶ್ ಕುಮಾರ್, ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದರು. ಮನವಿ ತಿರಸ್ಕಾರವಾದ ತಕ್ಷಣ, ದಿಕ್ಸೂಚಿಯಂತೆ, ಸಚಿವ ಕೆ ಜೆ ಜಾರ್ಜ್, ಟಿವಿ9 ಮತ್ತು ಜಗದೀಶ್ ಶೆಟ್ಟರ್ ವಿರುದ್ದ ಹಕ್ಕುಚ್ಯುತಿ ಮಂಡಿಸಿಯೇ
ಬಿಟ್ಟರು.
ನನ್ನ ಪತ್ರಿಕೋದ್ಯಮ ಜೀವನದಲ್ಲಿ,
ಕೋಳೀವಾಡ್ ರವರು, ನಾನು ನೋಡುತ್ತಿರುವ ಏಳನೇ ಸಭಾಧ್ಯಕ್ಷರು.
ಹಿಂದೆಂದೂ, ಪತ್ರಕರ್ತರು ತಿರುಗಿ ಬೀಳುವುದು ಹೋಗಲಿ,
ಸಭಾಧ್ಯಕ್ಷರ ಹಿಂದೆ ಮಾತನಾಡಲೂ ಹಿಂಜರಿಯುತ್ತಿದ್ದೆವು. ಯಾಕೋ ಏನೋ, ಕೋಳಿವಾಡರ ಜೊತೆ ವಾಗ್ವಾದಕ್ಕೇ ಎರಡು ಸಲ ಇಳಿದಿದ್ದರು.
ಕೋಳೀವಾಡರು ಸಭಾಧ್ಯಕ್ಷರಾದ ಸ್ವಲ್ಪದಿನದಲ್ಲೇ,
ವಿಧಾನಮಂಡಳದ ನೌಕರರ ಗೃಹ ಸಹಕಾರಿ ಸಂಘವು, ಅವರ ಮಕ್ಕಳಿಗೆ
ನಿವೇಶನಗಳನ್ನು ಮಂಜೂರು ಮಾಡಿತು. ಇದನ್ನು ಪ್ರಶ್ನಿಸಿದ ಪತ್ರಕರ್ತರ ಮೇಲೆ
ಕೂಗಾಡಿದ ಕೋಳೀವಾಡರು, ಆ ಥರ ನಿವೇಶನ ತೆಗೆದುಕೊಳ್ಳುವುದರಲ್ಲಿ ತಪ್ಪೇನಿಲ್ಲ
ಅಂತ ವಾದಿಸಿದರು. ಆದರೆ, ವಿಧಾನಸೌಧದ ವಜ್ರಮಹೋತ್ಸವಕ್ಕೆ
26 ಕೋಟಿ ರೂಪಾಯಿ ಖರ್ಚು ಮಾಡಲು ಹೊರಟಾಗ, ಪತ್ರಕರ್ತರು
ಕೋಳೀವಾಡರ ಬಾಯಿ ಮುಚ್ಚಿಸಿದ್ದರು. ಮುಖ್ಯಮಂತ್ರಿಗಳು ಕೂಡ, ಬರೀ 10 ಕೋಟಿ ರೂಪಾಯಿ ಕೊಟ್ಟು ಸುಮ್ಮನಾದರು.
ಈ ವಿಷಯವನ್ನು ಇಲ್ಲಿಗೇ ನಿಲ್ಲಿಸುತ್ತೇನೆ.
ಪತ್ರಕರ್ತರನ್ನು ಹದ್ದುಬಸ್ತಿನಲ್ಲಿಡುವ ಪ್ರಯತ್ನವೇನೂ
ಹೊಸದಲ್ಲ.
ಹೋದ ವಿಧಾನ ಮಂಡಲದ ಅಧಿವೇಶನದಲ್ಲಿ, ಪಕ್ಷಾತೀತವಾಗಿ ಸದಸ್ಯರು
ಪತ್ರಕರ್ತರ ಮೇಲೆ ಹರಿಹಾಯ್ದಿದ್ದರು. ಪತ್ರಕರ್ತರು, ರಾಜಕಾರಣಿಗಳ ಒಳ್ಳೇಕೆಲಸಗಳನ್ನು ಮಾತ್ರ ವರದಿ ಮಾಡಬೇಕೆಂದೂ ಆಗ್ರಹಿಸಿದರು. ಪತ್ರಕರ್ತರ ನಿಯಂತ್ರಣಕ್ಕೆ ಸಮಿತಿ ಮಾಡಬೇಕೆಂಬುದೂ ಒಂದು ಬೇಡಿಕೆಯಾಗಿತ್ತು.
ರವಿ ಬೆಳೆಗೆರೆಯ ಪ್ರಕರಣವಾದ ಮೇಲೆ,
ನಾನು ಸುರೇಶ್ ಕುಮಾರ್ ಮತ್ತು ಕಿಮ್ಮನೆ ರತ್ನಾಕರ್ ರವರನ್ನು ಭೇಟಿ ಮಾಡಿದೆ.
ಅವರ ಜೊತೆ ಮಾತನಾಡಿದ ವಿವರಗಳನ್ನು ತಡೆಹಿಡಿದಿದ್ದೇನೆ. ಇಬ್ಬರೂ ನನ್ನ ಪ್ರಕಾರ ಸಂಭಾವಿತರು. ನಾನು ಅವರಿಗೆ ಹೇಳಿದಿಷ್ಟೆ:
ಈಗಿನ ವಿಧಾನ ಸಭೆಯಲ್ಲಿ, ಶೇ 10-15 ರಷ್ಟು ಸದಸ್ಯರನ್ನು ಹೊರತುಪಡಿಸಿ, ನಾವು ಇನ್ಯಾರಿಂದಲೂ,
ಯಾವುದೇ ಒಳ್ಳೇ ಕೆಲಸ ಬಯಸಲಾಗುವುದಿಲ್ಲ. ವಿಧಾನಸಭೆಗೆ
ಚುನಾಯಿತರಾಗುವವರ ಗುಣಮಟ್ಟ, ದಿನೇ ದಿನೇ ಇಳಿಯುತ್ತಿದೆ. ವಿಧಾನ ಪರಿಷತ್ ಸಹ ಇದಕ್ಕೆ ಹೊರತಾಗಿಲ್ಲ.
ವಿಧಾನಮಂಡಲದ ವರದಿಗಾರಿಕೆಯ ಶುರುವಿನಲ್ಲಿ,
ಕೆಲವು ನಾಯಕರ ಸಹವಾಸ ನನಗೆ ಇಷ್ಟವಾಗುತ್ತಿತ್ತು. ಉತ್ತಮ
ವಾಗ್ಮಿಗಳೂ ಮತ್ತು ಬದ್ದತೆಯಿದ್ದ ನಾಯಕರುಗಳು. ಎಲ್ಲಾ 224 ಜನರೂ ಉತ್ತಮವಾಗಿದ್ದರು ಅಂತ ಹೇಳೋಕಾಗದಿದ್ದರೂ, ಜ್ಙಾನ,ವಾಕ್ಚತುರತೆ ಮತ್ತು ಬದ್ದತೆಗೆ ಮಾನ್ಯತೆ ಸಿಗುತ್ತಿತ್ತು.
ಘೋರ್ಪಡೆಯವರು ಪಂಚಾಯತ್ ರಾಜ್ ಮಂತ್ರಿಗಳಾಗಿದ್ದಾಗ,
ಕಾಂಗ್ರೆಸ್ಸಿಗರೇ ಆದ ಆತ್ಮಾನಂದರವರು ಒಂದು ಪ್ರಶ್ನೆಯನ್ನು ಕೇಳಿದರು. ಜಿಲ್ಲಾ ಮತ್ತು ಗ್ರಾಮ ಪಂಚಾಯತ್ ಗಳಲ್ಲಿ, ಎಂಎಲ್ಲೆ ಗಳಿಗೆ ಎಷ್ಟು
ಹಣವನ್ನು ಮುಡುಪಾಗಿಟ್ಟಿದ್ದಾರೆ ಎಂದು. ಘೋರ್ಪಡೆಯವರು ಇಟ್ಟಿಲ್ಲ ಎಂದು
ಹೇಳಿ ತಣ್ಣಗೆ ಕುಳಿತರು.
ಪಕ್ಷಾತೀತವಾಗಿ,
ಹಿಂದಿನ ಸಾಲಿನ ಸದಸ್ಯರು ಇಡಲೇ ಬೇಕು ಎಂದು ಆಗ್ರಹಿಸಲು ಶುರುಮಾಡಿದರು.
ಅದು ಗಲಾಟೆಯಾಗಿ ಪರಿವರ್ತನೆಯಾಯಿತು. ಸಭಾಧ್ಯಕ್ಷರಾಗಿದ್ದ
ಎಂ ವಿ ವೆಂಕಟಪ್ಪನವರು, ಒಂದು ಸಭೆ ಕರೆಯುತ್ತೇನೆ ಅಂತ ಆಶ್ವಾಸನೆ ನೀಡಿ
ಮುಗಿಸಿಬಿಡಿ ಅಂತ ಕೇಳಿಕೊಂಡರೂ, ಘೋರ್ಪಡೆಯವರು ಜಗ್ಗಲಿಲ್ಲ. `ನನಗೆ ಸುಳ್ಳು ಆಶ್ವಾಸನೆ ನೀಡೋ ಅಭ್ಯಾಸವಿಲ್ಲ. ಪಂಚಾಯ್ತಿಯಲ್ಲಿ
ಕೆಲಸ ಮಾಡಬೇಕಾದವರು, ಅಲ್ಲಿ ಚುನಾವಣೆಗೆ ನಿಂತುಕೊಳ್ಳಲಿ. ಇಲ್ಲಿಗೆ ಬರುವುದು ಬೇಡ,’ ಅಂದು ಮುಗುಮ್ಮಾಗಿ ಕುಳಿತರು.
ಮುಖ್ಯಮಂತ್ರಿ ಎಸ್ ಎಂ ಕೃಷ್ಣರವರಿಂದ ಹಿಡಿದು,
ಎಲ್ಲಾ ಹಿರಿಯ ಮಂತ್ರಿಗಳು ಮತ್ತು ಸದಸ್ಯರು ಮೌನವಾಗಿ ಕುಳಿತು, ಘೋರ್ಪಡೆಯವರಿಗೆ ಬೆಂಬಲ ಸೂಚಿಸಿದರು. ಬದ್ದತೆಯಿದ್ದ ಹಿಡಿಯಷ್ಟು
ಸದಸ್ಯರು, ಇಡೀ ಸದನವನ್ನು ಮೌನದಲ್ಲೇ ಸೋಲಿಸಿದ್ದರು.
ಆದರೆ, ಮುಂದಿನ ಚುನಾವಣೆಯಲ್ಲೇ ಬದಲಾವಣೆ ಬಂದಿತ್ತು. 2004 ರ ಸಮ್ಮಿಶ್ರ
ಸರ್ಕಾರದಲ್ಲಿ, ಬಿಜೆಪಿಯ ಗಾಲಿ ಜನಾರ್ಧನ ರೆಡ್ಡಿ, ವಿಧಾನ ಪರಿಶತ್ ನಲ್ಲಿ ಎಂ ಪಿ ಪ್ರಕಾಶ್ ರನ್ನು, ` ಈ ಶರಣನೊಬ್ಬ
ಗೋಮುಖ ವ್ಯಾಗ್ರ’, ಎಂದು ಹೇಳಿದಾಗ, ಯಾರೂ ಅವರ
ನೆರವಿಗೆ ಬರಲಿಲ್ಲ. ಗಣಿ ಧಣಿಗಳು, ರಿಯಲ್ ಎಸ್ಟೇಟ್
ಧಣಿಗಳು ಮತ್ತು ಇತರ ವ್ಯಾಪಾರಿಗಳು ಸದನಗಳನ್ನು ಆಕ್ರಮಿಸಿಕೊಂಡಾಗಿತ್ತು.
ಈಗೆಲ್ಲ,
ವಿಧಾನಸಭೆಯ ಮೊಗಸಾಲೆಗಳಲ್ಲಿ ಚರ್ಚೆಯಾಗುವ ವಿಷಯವೆಂದರೆ, ಮುಂದಿನ ಚುನಾವಣೆಗೆ ಎಷ್ಟು ಖರ್ಚು ಮಾಡಬೇಕಾಗುತ್ತದೆ, ವಿರೋಧ
ಪಕ್ಷದವರು ಎಷ್ಟು ಖರ್ಚು ಮಾಡಲು ತಯಾರಿದ್ದಾರೆ ಅನ್ನೋದೇ ಜಾಸ್ತಿ. ಅದನ್ನು
ಬಿಟ್ಟರೆ, ಯಾವ ವಿಷಯದಿಂದ ಸಭೆಯಲ್ಲಿ ಗಲಭೇಯಾಗುತ್ತದೆ, ಇಂದು ಎಷ್ಟು ಹೊತ್ತಿಗೆ ಕಲಾಪಗಳು ಮುಗಿಯುತ್ತದೆ ಅನ್ನೋದು ಇನ್ನೊಂದು.
ವಿಧಾನ ಸಭೆಗಳ ಒಳಗಡೆಯ ಚರ್ಚೆಗಳೂ ಕೆಸರೆರೆಚಾಟ,
ಕೂಗಾಟಗಳಿಗಿಂತ ಹೆಚ್ಚೇನೂ ನೆಡೆಯೋದಿಲ್ಲ. ವಿರೋಧ ಪಕ್ಷಗಳೂ
ಮೊನಚು ಕಳೆದುಕೊಂಡು, ಮಂಕಾಗಿ ಕಾಣುತ್ತವೆ. ಯಾಕೋ,
ಹಳೇ ನಾಯಕರುಗಳ ಮುಖ ಮುಂದೆ ಬಂದಂತಾಗಿ ಮನಸ್ಸಿಗೆ ಪಿಚ್ಚೆನಿಸುತ್ತದೆ.
ಈ ಎರಡು ದಶಕಗಳಲ್ಲಿ,
ಪತ್ರಿಕೋದ್ಯಮವೂ ಬಹಳ ಬದಲಾವಣೆ ಕಂಡಿದೆ. ಟೆಲಿವಿಷನ್ ಚಾನಲ್
ಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡು, ಸತ್ತಿವೆ. ಎಷ್ಟು ಹೊಸ ವರದಿಗಾರರು ಮತ್ತಿತರನ್ನು ಹುಟ್ಟುಹಾಕಿತೋ, ಅಷ್ಟೇ
ನಿರುದ್ಯೋಗಿಗಳನ್ನೂ ಸೃಷ್ಟಿಸಿದೆ. ರಾಜಕಾರಣಿಗಳು ಸಹ ಟೆಲಿವಿಷನ್ ಚಾನಲ್
ಗಳ ಮಾಲೀಕರಾಗಿ, ಅದರಲ್ಲಿ ಕೆಲಸ ಮಾಡುವ ವರದಿಗಾರರ ಬಾಯಿಯನ್ನು ಭಾಗಶ:
ಮುಚ್ಚಿದೆ. ಟಿ ಆರ್ ಪಿ, ಬ್ರೇಕಿಂಗ್
ನ್ಯೂಸ್ ಹುಚ್ಚಿನಲ್ಲಿ, ವಿಷಯ ತಿಳಿದುಕೊಳ್ಳುವ ವ್ಯವಧಾನವೂ ಇಲ್ಲ,
ತಿಳುವಳಿಕೆಯೂ ಇಲ್ಲದವರಾಗಿದ್ದಾರೆ.
ಎರಡು ದಶಕಗಳ ನಂತರ,
ನನಗೊಂದು ಪ್ರಶ್ನೆ ಎದ್ದಿದೆ: ಈ ಅವಿಶ್ಲೇಷಿತ ಹಕ್ಕು ಮತ್ತು
ಆದ್ಯತೆಗಳ ನೆಡುವೆ, ನಮ್ಮ ಸ್ಥಾನ ಯಾವುದು?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ