ಮೌನಗಳು ಮಾತಾಡಿದಾಗ......
ಬೆಳಗಿನ ಜಾವ ಒಂದೂವರೆ ದಾಟಿತ್ತು.
ಬೆಳಗ್ಗೆ ಬೇಗ ಎದ್ದು ಆಫೀಸಿಗೆ ಹೊರಡುವುದಿದ್ದರೂ, ಪುಸ್ತಕ
ಮುಗಿಸಿಯೇ ಮಲಗಬೇಕೂಂತ ಹಠ ತೊಟ್ಟಿದ್ದೆ. ಜೆಫ್ರಿ ಆರ್ಚರ್ ನ ಸಣ್ಣ ಕಥೆ:
ಕ್ರಿಸ್ಟೀನಾ ರೋಸಾಂತಿಲ್.... ಅದರ ನಂತರ, ಪುಸ್ತಕದಲ್ಲಿ ಓದಲು ಇನ್ನೂ ಮೂರ್ನಾಲ್ಕು ಕಥೆಗಳಿದ್ದವು.
ಕಥೆಯ ಕೊನೆಯ ವಾಕ್ಯ ಮುಗಿಯುವಾಗ, ನನಗರಿವಿಲ್ಲದೆ ಫಳ್ಳನೆ
ಕಣ್ಣಿಂದ ನೀರು ಹರಿಯಲಾರಂಭಿಸಿತು.
ಇನ್ನೊಂದು ಮಂಚದಲ್ಲಿ ಮಲಗಿದ್ದ ಸ್ನೇಹಿತನಿಗೆ
ತೊಂದರೆಯಾಗಬಾರದು ಅಂತ ಕೋಣೆಯಿಂದ ಎದ್ದು ಹೊರಬಂದೆ. ಯಾಕೋ
ತಡೆಯಲಾಗಲಿಲ್ಲ. ಒಬ್ಬ ಮುದುಕನ ಮೂವತ್ತು ವರ್ಷಗಳ ಮೌನ ಮನಸ್ಸನ್ನು ಕಲಕಿಬಿಟ್ಟಿತ್ತು.
ಹಾಗೇ ಯೋಚನೆ ಮಾಡಿದೆ...
ನಾವು ಹೈಸ್ಕೂಲಿನಲ್ಲಿದ್ದಾಗ, ಇಂಗ್ಲಿಷ್ ಮೇಷ್ಟ್ರು ಎಂ
ರಾಮರಾವ್, ಕಾಬೂಲಿವಾಲ ಪಾಠ ಮಾಡುತ್ತಿದ್ದರು. ಕಥೆಯ ಕೊನೆಯ ಘಟ್ಟದಲ್ಲಿ ಕಾಬೂಲಿವಾಲ ಮೌನವಾಗಿ ತನ್ನ ಪುಟ್ಟ ಮಗಳ ಹಸ್ತದ ಗುರುತನ್ನು ನೋಡುತ್ತಾ
ಕುಳಿತ ಪ್ರಸಂಗವನ್ನು ವಿವರಿಸುವಾಗ, ಇಡೀ ತರಗತಿಯೇ ಕಣ್ಣೀರಲ್ಲಿ ಮುಳುಗಿತ್ತು.
ಖುಶ್ವಂತ್ ಸಿಂಘ್ ಬರೆದ `ಎ ಲವ್ ಸ್ಟೋರಿ ಇನ್ ಲಂಡನ್’
ಇರಬಹುದು, ಓ ಹೆನ್ರಿಯ ಕಥೆಗಳಿರಬಹುದು -- `ಮೌನ’ ಬಹಳವಾಗಿ ಕಾಡುತ್ತದೆ.
ಕಥೆಗಳಲ್ಲೇ ಇಷ್ಟೊಂದು ಭಾವುಕತೆಯಾದರೆ,
ಕ್ಯಾರೆಲ್ ಮತ್ತು ಆಯೆಲೀನಾರ ಪರಿಸ್ಥಿತಿ ಏನಾಗಿರಬಹುದು? ವಿಮಾನ ಏರುವ ಮುನ್ನ, ಅಮ್ಮ ಕ್ಯಾರೆಲ್ಲಳ ಕೈ ಚೀಲದೊಳಗೆ ಒಂದು ನೋಟ್ ಪುಸ್ತಕ ಹಾಕಿ, ಆಮೇಲೆ ಓದು ಅಂತಾಳೆ.
ಆಯೆಲೀನಾಗೆ ಪುಸ್ತಕ ಕೊಟ್ಟು, ಪುರುಸೊತ್ತಾದಗ ಓದು ಅಂತಾಳೆ. ಓದಿದಾಗ, ಐವತ್ತು ವರ್ಷಗಳ ಹಿಂದೆ ತಮ್ಮ ತಾಯಿ ಯುದ್ದಕೈದಿಯಾಗಿದ್ದಾಗ, ಸತತವಾಗಿ ಮೂರು ತಿಂಗಳು ಜಪಾನಿ ಸೈನಿಕರು
ಅತ್ಯಾಚಾರವೆಸಗಿದ ವಿಷಯ ಅನಾವರಣವಾಗುತ್ತದೆ. ಆಕೆ, ಜಪಾನಿ ಸೈನಿಕರಿಗೆ ಸುಖದಾಯಿ ಹೆಂಗಸಾಗಿ ಉಪಯೋಗಿಸಲ್ಪಟ್ಟಿದ್ದಳು. ದಿನಗಟ್ಟಲೆ, ಲೆಖ್ಖವಿಲ್ಲದಷ್ಟು ಸೈನಿಕರು ತಮ್ಮ ಲೈಂಗಿಕ ತೃಷೆಯನ್ನು
ಅಮಾನುಷವಾಗಿ ತೀರಿಸಿಕೊಂಡಿದ್ದರು.
ಯಾನ್ ರಫ್ ಓ’
ಹರ್ನ್, ತನ್ನ `ಅರೆಶತಮಾನದ ಮೌನ’
ವನ್ನು ಮುರಿಯುವುದು ಹೀಗೆ.
ಯುದ್ದ ಕ್ರೌರ್ಯದ ಭಯಾನಕತೆಯನ್ನು ಈ ಪುಸ್ತಕಕ್ಕಿಂತ
ಚೆನ್ನಾಗಿ ವಿವರಿಸಲು ಸಾಧ್ಯವೇ? ನನಗೆ ಗೊತ್ತಿಲ್ಲ.
ಸುಖದಾಯಿಯಾಗಿ ತನ್ನನ್ನು ಉಪಯೋಗಿಸಿದ ಜಪಾನಿಯರು ತನಗೆ ಹೂವಿನ ಹೆಸರಿಟ್ಟಿದ್ದರಿಂದ,
ಇಡೀ ಜೀವನ ಹೂವನ್ನು ಸಹಿಸಿಕೊಳ್ಳದ ಪರಿಸ್ಥಿತಿಯಲ್ಲಿ ಯಾನ್
ಬದುಕುತ್ತಾಳೆ. ಜಪಾನಿಯರ ಕ್ಯಾಂಪ್ ಗಳಲ್ಲಿ ಸಾವು ಸಹಜ
ಕ್ರಿಯೆಯಾಗಿತ್ತಂತೆ.... ಮೈ ನಡುಗಿ ಹೋಯಿತು.
ಯುದ್ದಕ್ಕಿಂತ ಮೊದಲು ಗೆದೊಂಗ್ ಸೊಂಗೋದಲ್ಲಿದ್ದ
ಜಪಾನಿ ದಂಪತಿಗಳು ಪುಟ್ಟ ಯಾನ್ ಳನ್ನು ಎಷ್ಟೊಂದು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಆದರೆ, ಅದೇ ಸಮಯದಲ್ಲಿ,
ಇವರು ಜಪಾನ್ ದೇಶದ ಗುಪ್ತಚರರಾಗಿ ಕೆಲಸ ಮಾಡುತ್ತ, ಇಂಡೋನೇಸಿಯಾದಲ್ಲಿದ್ದ
ಡಚ್ ಗಳ ಮೇಲಿನ ಕ್ರೌರ್ಯಕ್ಕೂ ಕಾರಣರಾಗುತ್ತಾರೆ. ಇಂಥಹ ಸಂದರ್ಭದಲ್ಲಿ ಮಾನವೀಯತೆಯ
ಮೇಲೆ ನಂಬಿಕೆ ಉಳಿಯಲು ಸಾಧ್ಯವೇ?
ಆದರೆ, ಜಪಾನಿಯರ ಕ್ರೌರ್ಯ ತಪ್ಪಿಸಿಕೊಳ್ಳಲು ಸ್ವಯಿಚ್ಚೆಯಿಂದ ಸುಖದಾಯಿಯಾದ ಈಘೋನ್ಯಾಳ ಮಾನವೀಯತೆ
ನೋಡಿದಾಗ, ಒಂದು ವಾರವಿಡೀ ಇವಳ ಕೋಣೆಯಲ್ಲಿ ಕಳೆದು, ಕಡೆ ಪಕ್ಷ ರಾತ್ರಿಯ ಸರದಿ ಅತ್ಯಾಚಾರ ತಡೆಯುವ ಜಪಾನಿ ಸೈನಿಕನನ್ನು ನೋಡಿದಾಗ, ಮನಸ್ಸು ನವಿರಾಗುತ್ತದೆ.
ಮುಂದೆ,
ಯುದ್ದ ಕ್ರೌರ್ಯಗಳ ಸಾಕ್ಷಿಯಾದಾಗ, ಯಾನ್ ತನ್ನ ಗಂಡನ ಎದುರು
ಹೋರಾಡಿರಬಹುದಾದ ಜಪಾನಿ ಸೈನಿಕ ಮತ್ತು ತನ್ನ ತಂದೆ ಹಿಂಸೆ ಅನುಭವಿಸಿದ ಕ್ಯಾಂಪ್
ನ ಕಮಾಂಡಟ್ ಜೊತೆ ಊಟ ಮಾಡುತ್ತಾಳೆ, ಮತ್ತು ಅವರನ್ನು ಅಪ್ಪಿಕೊಳ್ಳುತ್ತಾಳೆ.
ಎಲ್ಲದ್ದಂಕ್ಕಿಂತ ಹೆಚ್ಚಾಗಿ, ಮೌನ ಮುರಿದ ಮೊದಲನೇ ಭಾಷಣದಲ್ಲೇ,
ಎಲ್ಲರನ್ನು ಕ್ಷಮಿಸಿದ್ದಾಗಿ ಹೇಳುತ್ತಾಳೆ.
ಯುದ್ದ ಕೊನೆಯಾದಾಗ,
ಯಾನ್ ಮೇಲಿನ ಅತ್ಯಾಚಾರದ ವಿವರ ಮತ್ತು ಸನ್ಯಾಸಿನಿಯಾಗಬೇಕೆಂಬ ಬಯಕೆಯನ್ನು ಕೇಳಿದಾಗ,
ನೀನು ಹೀಗೇ ಇರೋದು ಒಳ್ಳೆಯದು ಎಂದು ಹೇಳುವ ಪಾದ್ರಿಗಿಂತ, ಆಕೆಯ ಕಥೆ ಗೊತ್ತಿದ್ದೂ ಆಕೆಯನ್ನು ಮದುವೆಯಾಗುವ ಟಾಮ್, ಆತನ ಕುಟುಂಬದವರು
ಮತ್ತು ಆಕೆಯನ್ನು ತುಂಬುತೋಳಿನಿಂದ ಸ್ವೀಕರಿಸುವ ವಾಲ್ಸಲಿ ಜನಗಳು, ಏಸುವಿಗೆ
ಹತ್ತಿರದವರಾಗಿ ಕಾಣುತ್ತಾರೆ. ತಮ್ಮ ಮಗಳ ಮೇಲಿನ ಅತ್ಯಾಚಾರದ ವಿವರಗಳನ್ನು
ಕೇಳಿದ ತಂದೆ ಮತ್ತು ತಾಯಿ, ತಾನು ಮದುವೆಯಾಗಲಿರುವ ಹುಡುಗಿಯ ಕಥೆ ಕೇಳಿದ ಟಾಮ್, ಮುಂದೆಂದೂ ಆ ವಿಷಯವನ್ನು ಚರ್ಚಿಸಲು ಹೋಗುವುದಿಲ್ಲ.
ಮಡುಗಟ್ಟಿದ ಮೌನ.....
ಕೆಲವು ತಿಂಗಳ ಹಿಂದೆ,
ನನ್ನ ಹಿರಿಯ ಸ್ನೇಹಿತರೂ, ಇಂಡಿಯನ್ ಎಕ್ಸ್ ಪ್ರೆಸ್ನ ಹಿರಿಯ
ಸಹೋದ್ಯೋಗಿಯೂ ಆಗಿದ್ದ ಅರುಣ್ ಫೋನ್ ಮಾಡಿ, ನಾನು ಯಾನ್ ಆತ್ಮಚರಿತ್ರೆಯನ್ನು
ಕನ್ನಡಕ್ಕೆ ಅನುವಾದಿಸುತ್ತಿದ್ದೇನೆ, ಆಕೆ ಆಸ್ಟ್ರೇಲಿಯಾದಲ್ಲಿದ್ದಾರೆ.
ಅನುವಾದಕ್ಕೆ ಅವರ ಸಹಮತ ಬೇಕಾಗಿದೆ. ಅವರನ್ನು ಸಂಪರ್ಕಿಸುವಂತವರನ್ನು
ಹುಡುಕಲು ಸಾಧ್ಯವೇ ಎಂದರು. ನಾನೂ ಆಸ್ಟ್ರೇಲಿಯಾಗೆ ವಲಸೆ ಹೋಗಿರುವ ಒಂದಿಬ್ಬರು
ಸ್ನೇಹಿತರನ್ನು ಸಂಪರ್ಕಿಸಿ, ಅಲ್ಲಿನ ಯಾವುದೋ ಒಂದು ಪತ್ರಿಕೆಯ ಸಂಪಾದಕರಿಗೂ
ಇ-ಮೇಲ್ ಕಳುಹಿಸಿದೆ. ಏನೂ ಆಗಲಿಲ್ಲ.
ಹದಿನೈದು ದಿನದ ಹಿಂದೆ, ನನ್ನ ಪುಸ್ತಕ ಬಿಡುಗಡೆ ಅಂತ ವಾಟ್ಸಪ್
ನಲ್ಲಿ ಅರುಣ್ ಮೆಸೆಜ್ ಕಳುಹಿಸಿದರು. ಯಾನ್ ಪುಸ್ತಕ ಬಿಡುಗಡೆಯೂ ಆಯ್ತು.
ನನ್ನ ಮತ್ತು ಅರುಣ್ ರವರ ಸ್ನೇಹ ಎರಡು ದಶಕಗಳಿಂದಲೂ
ಇದೆ.
ಅವರು ನನ್ನನ್ಯಾಕೆ ಸಹಿಸಿಕೊಂಡಿದ್ದಾರೆ ಅಂತ ಕೆಲವು ಸಲ ಅನ್ನಿಸುತ್ತೆ.
ಅರುಣ್ ಮಿತಭಾಷಿ. ನನ್ನ ಬಾಯಿಯನ್ನು ನಾನು ಮಾತ್ರ ಮುಚ್ಚಿಸಬಹುದು.
ಆದರೆ, ಈ ಪುಸ್ತಕವನ್ನು ಓದುವಷ್ಟು ಸಮಯವೂ, ನಾನು ಮೌನವಾಗಿದ್ದೆ. ಅರುಣ್ ಮಾತನಾಡುತ್ತಿದ್ದರು.
ಥ್ಯಾಂಕ್ಸ್ ಅರುಣ್ ಸರ್.......
ಮಾಕೋನಹಳ್ಳಿ ವಿನಯ್ ಮಾಧವ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ