ಶುಕ್ರವಾರ, ಅಕ್ಟೋಬರ್ 30, 2015

ಕಲಾವಿದರು

ಬೇಸರ ಮೂಡಿದ್ರೆ ಹೀಗಾ ಆಟ ಮುಗಿಸೋದು?

ವಿಶಾಲ್…… ಗೆಟ್ ಔಟ್ ಆಫ್ ದಟ್ ಪ್ಲೇಸ್…. ಡೋಂಟ್ ಈವನ್ ಡೇರ್ ಟಾಕಿಂಗ್ ಇನ್ ಇಂಗ್ಲಿಷ್…. ಗೆಟ್ ಬ್ಯಾಕ್ ಟು ದಿ ಆಫಿಸ್… ಅಂತ ಕೂಗಾಡುತ್ತಿದ್ದೆ.
ಐ ಕಾಂಟ್ ಈವನ್ ಮೂವ್ ವಿನಯ್…. ಪೀಪಲ್ ಆರ್ ಕ್ರೇಜಿ ಹಿಯರ್…. ದೆ ಆರ್ ಥ್ರೋಯಿಂಗ್ ಸ್ಟೋನ್ಸ್ ಅಟ್ ಅಸ್.. ವಿ ಆರ್ ಇನ್ ದಿ ಮಿಡ್ಲ್ ಆಫ್ ದಿ ಕ್ರೌಡ್, ಅಂತ ಆ ಕಡೆಯಿಂದ ವಿಶಾಲ್ ಜೋರಾಗಿ ಕೂಗುತ್ತಿದ್ದ.
ನನ್ನ ಪತ್ರಿಕೋದ್ಯಮದ ವೃತ್ತಿಯಲ್ಲಿ ಅಷ್ಟೊಂದು ಗಾಭರಿಯಾಗಿರಲಿಲ್ಲ. ಎಷ್ಟೋ ಥರದ ದೊಂಬಿ, ಗಲಾಟೆಗಳ ಮಧ್ಯ ಹೋಗಿ ವರದಿ ಮಾಡಿದ್ದೆ. ಕೆಲವು ಸಲ ನನ್ನ ಎದುರೇ ಹೆಣಗಳು ಉರುಳಿದ್ದಾಗಲೂ ಅಷ್ಟೊಂದು ಗಡಿಬಿಡಿಯಾಗಿರದಲಿಲ್ಲ. ಅವತ್ತು ಮಾತ್ರ ವರದಿಗೆ ಅಂತ ಹೋಗಿದ್ದ ಮೂರು ಜನ ಜ್ಯೂನಿಯರ್ ಗಳು ಏನು ಅನಾಹುತ ಮಾಡಿಕೊಳ್ಳುತ್ತಾರೋ ಅಂತ ಗಾಭರಿಯಾಗಿತ್ತು.
ಆ ಥರದಲ್ಲಿ ಬೆಂಗಳೂರು ಹತ್ತಿ ಉರಿದಿದ್ದನ್ನು ನಾನು ಕಂಡೇ ಇರಲಿಲ್ಲ. ಮತ್ತೆ, ಟೆಲಿವಿಷನ್ನ ನಲ್ಲಿ ನೋಡೋದು ಬಿಟ್ಟರೆ, ಸ್ಥಳದಲ್ಲಿ ಏನಾಗ್ತಿದೆ ಅಂತ ಗೊತ್ತೂ ಆಗ್ತಿರ್ಲಿಲ್ಲ. ನನ್ನ ನೆನಪು ಸರಿಯಾಗಿದ್ದರೆ, ವಿಶಾಲ್ ಜೊತೆ ಒಂದು ಹುಡುಗಿಯೂ ಹೋಗಿತ್ತು. ಇದ್ದದ್ದರಲ್ಲಿ ಸ್ವಲ್ಪ ಅನುಭವ ಇದ್ದವನು ಅಜಯ್ ಮಾತ್ರ ಅಂತ ಕಾಣುತ್ತೆ.
ಏಪ್ರಿಲ್ 17, 2006. ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್ ಕುಮಾರ್ ತೀರಿಕೊಂಡ ಮಾರನೇ ದಿನ. ನಾನಿನ್ನೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲೇ ಇದ್ದೆ. ಅಣ್ಣಾವ್ರು ತೀರಿಕೊಂಡಾಗ ಅವಸರದಲ್ಲಿ ಡಾಕ್ಟರ್ ಗಳು ಸುದ್ದಿಯನ್ನು ಟಿವಿ ಮಾಧ್ಯಮಗಳಿಗೆ ಹೇಳಿದ್ದರಿಂದ ಬೆಂಗಳೂರಲ್ಲಿ ಏನು, ಇಡೀ ರಾಜ್ಯದಲ್ಲಿ ಗಲಾಟೆ ಶುರುವಾಗಿತ್ತು. ಆದರೆ, ಸಾಯಂಕಾಲದ ಹೊತ್ತಿಗೆ ಪೋಲಿಸರು ಪರಿಸ್ಥಿತಿಯನ್ನು ಹತೋಟಿಗೆ ತಂದುಕೊಂಡಿದ್ದರು. ಹಾಗಾಗಿ, ನಾವು ಪತ್ರಕರ್ತರು ಸಹ ವಿಷಯವನ್ನು ಹಗುರವಾಗಿ ತೆಗೆದುಕೊಂಡು, ಒಬ್ಬೊಬ್ಬರನ್ನು ಒಂದೊಂದು ದಿಕ್ಕಿಗೆ ಕಳುಹಿಸುವುದು ಅಂತ ಆಫೀಸಿನಲ್ಲಿ ಮಾತಾಡಿಕೊಂಡಿದ್ದೆವು.
ಯಾವಾಗ ಕಂಠೀರವ ಕ್ರೀಡಾಂಗಣದಿಂದ ಅಣ್ಣಾವ್ರ ಪಾರ್ಥವ ಶರೀರ ಹೊರಗೆ ಹೊರಟಿತೋ, ಅಲ್ಲಿ ಮತ್ತೆ ಶುರುವಾಯ್ತು ಗಲಾಟೆ. ಒಂದಿಬ್ಬರು ಪೋಲೀಸರ ಮೇಲೇ ಹಲ್ಲೆಯಾಗಿ, ಅವರುಗಳ ಸ್ಥಿತಿ ಗಂಭೀರ ಅಂತ ಗೊತ್ತಾಯ್ತೋ, ಆಗ ಅನ್ನಿಸಿತ್ತು ನನಗೆ…. ಇವತ್ತು ಏನೋ ಅನಾಹುತ ಕಾಯ್ದಿದೆ ಅಂತ. ಸದಾಶಿವನಗರ ಮತ್ತೆ ಯಶವಂತಪುರ ಕಡೆ ಇದ್ದ ವಿಶಾಲ್ ಕೃಷ್ಣನಿಗೆ ಫೋನ್ ಮಾಡಿದ್ರೆ, ಕಲ್ಲುಗಳು ಎಲ್ಲಾ ದಿಕ್ಕಿನಿಂದ ಬಂದು ಬೀಳ್ತಾ ಇದೆ ಅಂತ ಹೇಳ್ದ.
ಅವನು ಇಂಗ್ಲಿಷ್ ನಲ್ಲಿ ಮಾತಾಡಿದ ತಕ್ಷಣ ಪಕ್ಕದಲ್ಲಿದ್ದ ಒಂದಿಬ್ಬರು ಅವನನ್ನು ತಳ್ಳಿದ್ದಾರೆ ಬೇರೆ. ವಿಶಾಲ್ ದೇನೂ ತಪ್ಪಿರಲಿಲ್ಲ. ಹುಟ್ಟಿದ್ದು ಬೆಂಗಳೂರಿನಲ್ಲಾದರೂ, ಹೆಚ್ಚಿನ ಜೀವನವನ್ನೆಲ್ಲ ತನ್ನ ತಂದೆಯ ಜೊತೆ ದಕ್ಷಿಣ ಆಫ್ರಿಕಾದಲ್ಲಿ ಕಳೆದವನು. ಕನ್ನಡ ಮಾತಾಡುತ್ತಿದ್ದರೂ, ಹೆಚ್ಚಿನ ಸಮಯ ಇಂಗ್ಲಿಷ್ ಪದಗಳೇ ಬಾಯಿಂದ ಬರುತ್ತಿದ್ದವು. ಇಂತಹ ಗಾಭರಿಯ ಸಮಯದಲ್ಲಂತೂ, ನಮಗೇ ಕನ್ನಡ ಮರೆತು ಹೋಗುವಂತಿತ್ತು…. ಇನ್ನು ವಿಶಾಲ್ ಪರಿಸ್ಥಿತಿ ಏನಾಗಿರಬೇಡ?.
`ಛೀಫ್…. ಐ ಥಿಂಕ್ ವಿ ಮೇಡ್ ಅ ಮಿಸ್ಟೇಕ್ ಬೈ ಸೆಂಡಿಂಗ್ ದೀಸ್ ಬಾಯ್ಸ್ ಆನ್ ದಿ ಫೀಲ್ಡ್…. ಥಿಂಗ್ಸ್ ಆರ್ ಗೋಯಿಂಗ್ ಔಟ್ ಆಫ್ ಹ್ಯಾಂಡ್…. ಐ ಶುಡ್ ಹ್ಯಾವ್ ಗಾನ್ ಬೈ ಮೈಸೆಲ್ಫ್,’ ಅಂತ ಮಟ್ಟೂ ಛೇಂಬರ್ ಗೆ ನುಗ್ಗಿ ಹೇಳಿದೆ.
ಟಿವಿ ನೋಡುತ್ತಿದ್ದ ಮಟ್ಟೂ, `ಐ ಹರ್ಡ್ ಯು ಟಾಕಿಂಗ್ ಟು ವಿಶಾಲ್…. ಕ್ಯಾನ್ ದೇ ಕಮ್ ಬ್ಯಾಕ್ ಸೇಫ್ ಲೀ?’ ಅಂತ ಕೇಳಿದರು.
`ಐ ಹೋಪ್ ಸೋ,’ ಅಂದವನೇ, ನಾನೇ ಆ ಕಡೆ ಹೋಗಿ ನೋಡ್ಕೊಂಡು ಬರ್ತೀನಿ ಅಂದೆ. `ಹುಚ್ಚುಚ್ಚಾಗಿ ಆಡ್ಬೇಡ. ಅಲ್ಲಿಗೆ ಹೋಗಿ ಹ್ಯಾಗೆ ತಲುಪ್ತೀಯ? ಹೋದ್ರೂ ನಿಂಗೆ ಆ ಜನಗಳು ನಿಂಗೆ ಹೊಡೆಯೋಲ್ಲ ಅಂತ ಗ್ಯಾರಂಟಿ ಏನು? ನಿಂಗೆ ಇಂಥಾ ಗುಂಪುಗಳ ಮಧ್ಯ ಸೇರ್ಕೊಂಡು ಅಭ್ಯಾಸ ಇರಬೋದು. ಇವರನ್ನ ಎಲ್ಲಿ ಅಂತ ಹುಡುಕ್ತೀಯ ಮತ್ತೆ ಹ್ಯಾಗೆ ಕರ್ಕೊಂಡು ಬರ್ತೀಯ? ನಿನ್ನ ಪೋಲಿಸ್ ಫ್ರೆಂಡ್ಸ್ ಯಾರಾದ್ರೂ ಫೋನ್ ಗೆ ಸಿಕ್ತಾರಾ ನೋಡು. ಅವರೇನಾದ್ರೂ ಸಹಾಯ ಮಾಡ್ಬೋದು ಅಷ್ಟೆ,’ ಅಂತ ಮಟ್ಟೂ ಹೇಳಿದ್ರು.
ನಂಗೂ ಸರಿ ಅನ್ನಿಸ್ತು. ಯಾಕಂದ್ರೆ, ಕಂಠೀರವ ಕ್ರೀಡಾಂಗಣದಿಂದ ಹೊರಟ ಮೆರವಣಿಗೆ ಯಾರ ಹಿಡಿತಕ್ಕೂ ಸಿಗದೆ, ಎಲ್ಲೆಲ್ಲೋ ಹೋಗುತ್ತಿತ್ತು. ಕಂಠೀರವ ಕ್ರೀಡಾಂಗಣದಿಂದ, ಕಂಠೀರವ ಸ್ಟುಡಿಯೋದವರೆಗೆ ಎಲ್ಲಾ ದಿಕ್ಕುಗಳಲ್ಲೂ ಜನಗಳೇ. ಯಾರು, ಯಾರಿಗೆ, ಯಾಕಾಗಿ ಕಲ್ಲು ಹೊಡೀತ್ತಿದ್ದಾರೆ, ಕಾರು, ಪೆಟ್ರೋಲ್ ಬಂಕ್ ಗಳಿಗೆ ಬೆಂಕಿ ಹಾಕ್ತಿದ್ದಾರೆ ಅನ್ನೋದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಸುದ್ದಿಯನ್ನ ಎಲ್ಲಿಂದ ಶುರುಮಾಡಿ, ಎಲ್ಲಿಗೆ ಕೊನೆ ಮಾಡ್ಬೇಕೂ ಅನ್ನೋದು ಸಹ ಗೊತ್ತಾಗ್ತಾ ಇರಲಿಲ್ಲ.
`ಏನಾಗ್ತಿದೆ ಇಲ್ಲಿ? ನಂಗೇನೂ ಅರ್ಥ ಆಗ್ತಿಲ್ಲ,’ ಅಂತ ಮಟ್ಟೂ ಇಂಗ್ಲಿಶ್ ನಲ್ಲಿ ಶುರುಮಾಡಿದ್ರು.
`ಇವರ್ಯಾರೂ ಅಸಲಿಗೆ ರಾಜ್ ಕುಮಾರ್ ಅಭಿಮಾನಿಗಳೇ ಅಲ್ಲ. ಬೆಳಗ್ಗೆ ಸ್ಟೇಡಿಯಂ ಹತ್ತಿರ ನೆಡೆದ ಘಟನೆ ನೋಡಿದ್ರೆ, ಯಾವುದೋ ಗುಂಪು ಬರೀ ಗಲಾಟೆ ಮಾಡಿಸೋ ಸಲುವಾಗಿ ಸೇರಿಕೊಂಡ ಹಾಗಿದೆ. ಕೆಲವು ಪೋಲಿಸ್ ಗಳನ್ನೇ ಟಾರ್ಗೆಟ್ ಮಾಡಿ ಹೊಡೆದಿದ್ದಾರೆ. ಒಂದಿಬ್ಬರ ಸ್ಥಿತಿ ಗಂಭೀರವಾಗಿದೆ. ಎಷ್ಟೇ ಕೆಣಕಿದರೂ, ಪೋಲಿಸ್ ಏನೂ ಪ್ರತಿಕ್ರಿಯೆ ತೋರಿಸುತ್ತಿಲ್ಲ. ಕಮೀಷನರ್ ಆರ್ಡರ್ ಅಂತೆ…. ಏನೇ ಆದ್ರೂ ಫೈರ್ ಓಪನ್ ಮಾಡಬಾರದು ಅಂತ,’ ಅಂದೆ.
`ಮತ್ತೆ ಗಲಾಟೆ ಹೇಗೆ ಕಂಟ್ರೋಲ್ ಮಾಡೋದು?’ ಅಂತ ಮಟ್ಟೂ ನನ್ನನ್ನೇ ಕೇಳಿದ್ರು
`ಎಲ್ಲಿ ಕಂಟ್ರೋಲ್ ಮಾಡ್ತಿದ್ದಾರೆ? ಅವ್ರಿಗೇ ಪೆಟ್ಟು ಬಿದ್ರೂ ಸುಮ್ಮನೇ ನೋಡ್ತಾ ಇದ್ದಾರಲ್ಲ... ಪೋಲಿಸರಿಗೆ ಈಗ ಫೋನ್ ಮಾಡಿದ್ರೂ ಏನಾದ್ರೂ ಆಗ್ಬೋದು ಅಂತ ನಂಗೆ ಅನ್ನಿಸ್ತಾ ಇಲ್ಲ. ನಾವೇ ಏನಾದ್ರೂ ಮಾಡ್ಬೇಕು ಅಷ್ಟೆ,’ ಅಂದೆ.
`ಈಗ ನಮ್ಮ ಹುಡುಗ್ರ ಕಥೆ ಏನು? ಯಾರಿಗೂ ಏನೂ ಆಗೋಲ್ಲ ತಾನೆ?’ ಅಂತ ಮಟ್ಟೂ ಕಳವಳದಿಂದ ಕೇಳಿದ್ರು.
`ಇಲ್ಲ ಅಂತ ಅನ್ನಿಸ್ತದೆ. ಟಿವಿಯವರ್ದಾದ್ರೆ, ಅವರ ಕೈಲಿ ಕ್ಯಾಮೆರಾ ಇರ್ತದೆ. ಈ ಹುಡುಗ್ರು ಯಾರು ಅಂತ ಯಾರಿಗೂ ಗೊತ್ತಾಗೋದಿಲ್ಲ. ಇವು ಬಾಯಿ ಬಿಡ್ದೇ ಹೋದ್ರೆ ಸಾಕು. ಆದ್ರೆ ನಮ್ಮ ಫೋಟೋಗ್ರಾಫರ್ಗಳದ್ದೇ ತೊಂದ್ರೆ,’ ಅಂದವನೇ, ಏನೋ ಯೋಚನೆ ಮಾಡ್ಕೊಂಡು ಎದ್ದೆ.
`ನೀನೆಲ್ಲಾದ್ರೂ ಆ ಕಡೆ ಹೋಗ್ಬೇಡ. ಇಲ್ಲಿಂದ್ಲೇ ಏನಾದ್ರೂ ಮಾಡೋಕೆ ಆಗುತ್ತಾ ನೋಡು,’ ಅಂತ ಮಟ್ಟೂ ಗಾಭರಿಯಿಂದ ಹೇಳಿದ್ರು.
`ಇಲ್ಲ ಛೀಫ್... ನಾ ಹೊರಟ್ರೂ, ಅಲ್ಲಿಗೆ ತಲುಪೋದಿಲ್ಲ. ಎರಡೂವರೆ ಆಗಿದೆ. ಕಮೀಷನರ್ ಆಫೀಸ್ ಗೆ ಹೋಗಿ ಏನಾದ್ರೂ ಮಾಡೋಕೆ ಆಗುತ್ತಾ ಅಂತ ನೋಡ್ತೀನಿ,’ ಅಂದವನೇ ಹೊರಕ್ಕೆ ನೆಡೆದೆ.
ಪೋಲಿಸ್ ಕಮೀಷನರ್ ಆಫೀಸ್ ತಲುಪುವ ಹೊತ್ತಿಗೆ, ಆಗಿನ ಕಮೀಷನರ್ ಡಾ ಅಜಯ್ ಕುಮಾರ್ ಸಿಂಗ್ ಯಾರನ್ನೂ ಒಳಗೆ ಬಿಡಬಾರದು ಅಂತ ಅಪ್ಪಣೆ ಕೊಟ್ಟಿದ್ದರಂತೆ. ನಾನು ಬಂದಿದ್ದೇನೆ ಅಂತ ಇಂಟರ್ ಕಾಮ್ ನಲ್ಲಿ ಹೇಳೋಕೆ ಹೇಳಿ ನಿಂತುಕೊಂಡೆ. `ಐದೇ ನಿಮಿಷ ಅಂತೆ ಸರ್.... ನಿಮ್ಮನ್ನ ಕರೀತಾರೆ,’ ಅಂತ ಅವರ ಪಿಎ ಹೇಳಿದರು. ಸುಮ್ಮನೆ ಕಾರಿಡಾರ್ ನಲ್ಲಿ ಕಾಯುತ್ತಾ ನಿಂತಾಗ, ಎಲ್ಲಾ ಕಡೆಯಿಂದ ಕಬ್ಬಿಣದ ಗ್ರಿಲ್ ಹಾಕಿದ್ದ ಜೀಪೊಂದು ಬಂದು ನಿಂತಿತು. ಅದರಿಂದ ಇಳಿದ ಸಬ್ ಇನ್ಸ್ ಪೆಕ್ಟರ್ ಲಗುಬಗೆಯಿಂದ ಕಮೀಷನರ್ ಕೊಠಡಿಯೊಳಗೆ ಹೋದವರೇ, ಹಾಗೇ ಹೊರಗೆ ಬಂದರು. ಜೀಪಿನಲ್ಲಿದ್ದವರೆಲ್ಲ ಲಘುಬಗೆಯಿಂದ ಇಳಿದು ನಿಂತರು. ಸಬ್ ಇನ್ಸ್ ಪೆಕ್ಟರ್ ಹಿಂದೆಯೇ ಅಜಯ್ ಕುಮಾರ್ ಸಿಂಗ್ ಸಹ ಬಂದರು. ಅವರ ಹಿಂದೆ ವಯಸ್ಸಾದವರೊಬ್ಬರು ನಿಧಾನವಾಗಿ ನೆಡೆದುಕೊಂಡು ಬಂದರು.
ನಾನು ನೋಡಿದ ಅತ್ಯುತ್ತಮ ವ್ಯಕ್ತಿತ್ವಗಳಲ್ಲಿ ಡಾ ಸಿಂಗ್ ಕೂಡ ಒಬ್ಬರು. ಆ ವಯಸ್ಸಾದ ವ್ಯಕ್ತಿಯನ್ನು ಎಲ್ಲೋ ನೋಡಿದ್ದೇನೆ ಅಂತ ಅನ್ನಿಸುತ್ತಿತ್ತು. ಯಾರೋ ಕನ್ನಡದ ಉನ್ನತ ಲೇಖಕರನ್ನು ಹೋಲುತ್ತಾರೆ ಅಂತ ಅನ್ನಿಸುತ್ತಿತ್ತು. ಅವರನ್ನು ತುಂಬಾ ಗೌರವಪೂರಕವಾಗಿ ಡಾ ಸಿಂಗ್ ಜೀಪಿಗೆ ಹತ್ತಿಸಿ, ತುಂಬಾ ಹುಶಾರಾಗಿ ಕರೆದುಕೊಂಡು ಹೋಗಿ ಬನ್ನಿ ಅಂತ ಪೋಲಿಸರಿಗೆ ತಿಳಿಸಿದರು. ಜೀಪು ಅವರನ್ನು ದಾಟುವ ಹೊತ್ತಿಗೆ, ನಾನು ಅವರ ಪಕ್ಕದಲ್ಲಿ ನಿಂತಿದ್ದೆ.
`ಗೊತ್ತಲ್ಲ ವಿನಯ್ ಅವರು? ಡಾ ಪಿ ಬಿ ಶ್ರೀನಿವಾಸ್ ಅಂತ ಹೆಸರು. ಪಾಪ... ಚೆನೈನಿಂದ ಬಂದಿದ್ದಾರೆ. ಅವರು ಡಾ ರಾಜ್ ಕುಮಾರ್ ರವರ ಸಿನಿಮಾಗಳಿಗೆ ಹಾಡಿದ್ದಾರಂತೆ ಮತ್ತೆ ತುಂಬಾ ಆತ್ಮೀಯರಂತೆ. ಬೆಳಗ್ಗೆ ರೈಲಿಗೇ ಬಂದಿದ್ದರಂತೆ. ಕಂಠೀರವ ಸ್ಟೇಡಿಯಂ ಹತ್ತಿರ ಹೋಗಲೂ ಆಗಲಿಲ್ಲವಂತೆ. ಯಾರೋ ಹೇಳಿದ್ರು ಅಂತ ಇಲ್ಲಿಗೆ ಬಂದಿದ್ದಾರೆ. ನಿಮಗೆ ಇವರ ಬಗ್ಗೆ ಗೊತ್ತಾ?’ ಅಂತ ಕೇಳಿದ್ರು.
`ಹೌದು ಸರ್... ತುಂಬಾ ಒಳ್ಳೇ ಹಾಡುಗಳನ್ನ ಹಾಡಿದ್ದಾರೆ. ಇತ್ತೀಚೆಗಷ್ಟೇ ರಾಜ್ ಕುಮಾರ್ ಅವರ ಸಿನೆಮಾಗಳಿಗೆ ಅವರೇ ಹಾಡೋಕೆ ಶುರುಮಾಡಿದ್ದು. ಹಳೇ ಸಿನೆಮಾಗಳಲ್ಲೆಲ್ಲ  ಹಾಡ್ತಿದ್ದಿದ್ದು,’ ಅಂದವನೇ, `ಈಗ ಎಲ್ಲಿಗೆ ಹೋದ್ರು?’ ಅಂತ ಕೇಳಿದೆ.
`ಇಲ್ಲೇ ಬಂದು ಕೂತಿದ್ದರಂತೆ. ನಮ್ಮ ಸೆಂಟ್ರಿ ಬಂದು ಹೇಳಿದ. ಒಳಗೆ ಕರೆದಾಗ, ಒಂದು ಸಲವಾದ್ರೂ ಅವರನ್ನ ನೋಡ್ಬೇಕು ಅಂತ ಕೇಳ್ಕೊಂಡ್ರು ಪಾಪ. ಅದಕ್ಕೆ, ಹ್ಯಾಗಾದ್ರೂ ಮಾಡಿ ಒಂದ್ಸಲ ಇವರಿಗೆ ದರ್ಶನ ಮಾಡ್ಸಿ ಅಂತ ಹೇಳಿ, ನಮ್ಮ ಜೀಪಿನಲ್ಲಿ ಕಳುಹಿಸಿದ್ದೇನೆ,’ ಅಂದ್ರು.
ನಂಗೇನೂ ಆಶ್ಚರ್ಯವಾಗಲಿಲ್ಲ. ಯಾಕೆಂದ್ರೆ, ಡಾ ಸಿಂಗ್ ವ್ಯಕ್ತಿತ್ವನೇ ಅಂಥದ್ದು. ಅವತ್ತು ಪೋಲಿಸರ ಎಲ್ಲಾ ವೈಫಲ್ಯಗಳ ಮಧ್ಯ, ಒಂದು ಒಳ್ಳೆ ಕೆಲಸ ಮಾಡಿರೋದನ್ನ ಬರೀಬಹುದು ಅಂದ್ಕೊಂಡೆ. ನಾವು ಮಾತಾಡ್ತಿದ್ದಾಗ ನನಗೆ ನೆನಪಾಯ್ತು. ಮೊದಲನೇ ಸಲ ಪಿ ಬಿ ಶ್ರೀನಿವಾಸ್ ರವರನ್ನ ನೋಡಿದಾಗ ನನಗೆ ನೆನಪಾದ ಕನ್ನಡ ಲೇಖಕ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅಂತ. ಯಾಕೋ ಇಬ್ಬರಿಗೂ ಹೋಲಿಕೆ ಇದೆ ಅಂತ ಅನ್ನಿಸ್ತು.
`ಏನು ಬಂದಿದ್ದು ವಿನಯ್? ಒಳಗೆ ಬನ್ನಿ ಮಾತಾಡೋಣ,’ ಅಂದ್ರು ಡಾ ಸಿಂಗ್.
`ಇಲ್ಲ ಸರ್... ಆಫೀಸಲ್ಲಿ ತುಂಬಾ ಕೆಲ್ಸ ಇದೆ,’ ಅಂದವನೇ, ನಮ್ಮ ಹುಡುಗರು ಗುಂಪಿನಲ್ಲಿ ಸಿಕ್ಕಿಹಾಕಿಕೊಂಡಿರುವುದನ್ನು ಸೂಕ್ಷ್ಮವಾಗಿ ಹೇಳಿದೆ. ಏನಾದ್ರೂ ಮಾಡಿ ಅಂತ ಹೇಳ್ಬೇಕು ಅನ್ನಿಸಿದರೂ, ಯಾಕೋ ಬಾಯಿಂದ ಹೊರಗೆ ಬರಲಿಲ್ಲ. `ಅಲ್ಲಾ ಸರ್... ಇಷ್ಟೊಂದು ಗಲಾಟೆಯಾದ್ರೂ ಪೋಲಿಸ್ ಯಾಕೆ ಏನೂ ಮಾಡ್ತಿಲ್ಲ?’ ಅಂತ ಕೇಳೇಬಿಟ್ಟೆ.
`ಇಲ್ಲ ವಿನಯ್.... ನೆನ್ನೆ ಮೀಟಿಂಗ್ ನಲ್ಲಿ ಸರ್ಕಾರದವರು ನೇರವಾಗಿ ಹೇಳಿದ್ದಾರೆ. ಏನೇ ಆದ್ರೂ ಗೋಲಿಬಾರ್ ಆಗಬಾರದು ಅಂತ. ನೆನ್ನೆ ಇಂಟೆಲಿಜೆನ್ಸ್ ಮಾಹಿತಿ ಇತ್ತು... ಇವತ್ತು ಗಲಾಟೆ ಆಗುತ್ತೆ ಅಂತ. ತುಂಬಾ ಪಾಲಿಟಿಕ್ಸ್ ನೆಡೀತ್ತಿದೆ. ಇಲ್ಲಿ ನಾನು ನಮ್ಮ ಪೋಲಿಸಿನವರ ಕೈಗಳನ್ನು ಹಿಂದಕ್ಕೆ ಕಟ್ಟಿ, ಹೊಡೆದಾಡೋಕೆ ಹೇಳಿದ ಹಾಗೆ ಇದೆ,’ ಅಂತ ವಿಷಾದದಿಂದ ನಕ್ಕರು.
`ಸರಿ ಸರ್,’ ಅಂತ ಹೇಳಿ ನಾನು ಆಫೀಸಿನ ಕಡೆ ಹೊರಟೆ. ಡಾ ಸಿಂಗ್ ಅವರ ಕೊಠಡಿಗೆ ಹೋದರು.
ಹೊಟ್ಟೆ ಹಸಿವಿನಿಂದ ತಲೆ ಸಿಡಿಯೋಕೆ ಶುರುವಾಗಿತ್ತು. ಹಾಗೇ ಆಫೀಸಿಗೆ ಬಂದಾಗ ಮೊದಲು ಸಿಕ್ಕವನೇ ವಿಶಾಲ್. `ಉಳಿದವರು ಎಲ್ಲಿ?’ ಅಂತ ಕೇಳಿದಾಗ, ಕ್ಯಾಂಟೀನಿನಲ್ಲಿ ಇದ್ದಾರೆ ಅಂದ. ಯಾಕೋ, ಏನೂ ತಿನ್ನೋಕೆ ಮನಸ್ಸಾಗಲಿಲ್ಲ. ಹಾಗೇ ಕಾಫಿ ಕುಡಿದವನೇ, ಮೇಲಕ್ಕೆ ಬಂದೆ. ಯಾಕೋ ಯಾಂತ್ರಿಕವಾಗಿ ಕೆಲಸ ಮಾಡುತ್ತಿದ್ದೆ. ಮಟ್ಟೂ ಯಾವುದು ಬೇಕು ಅಂದ್ರೆ, ಅದನ್ನ ಮಾತ್ರ ಮಾಡುತ್ತಿದ್ದೆ. ನನಗೇ ಆಶ್ಚರ್ಯವಾಗುವಷ್ಟು ನಿರ್ಲಿಪ್ತನಾಗಿದ್ದೆ. ಇಂತಹ ಸಂದರ್ಭದಲ್ಲಿ  ಯಾವಾಗಲೂ ಪ್ರಪಂಚ ನನ್ನ ತಲೆ ಮೇಲೆ ಬಿದ್ದಂತೆ ಆಡುತ್ತಿದ್ದ ನಾನು, ಅವತ್ತು ಮಾತ್ರ ಕೂತಲ್ಲಿಂದ ಏಳಲು ಸಹ ಒದ್ದಾಡುತ್ತಿದ್ದೆ.
ಸುಮಾರು ಎಂಟೂವರೆಯಾಗಿತ್ತೇನೋ.... ಮಟ್ಟು ನನಗೆ ನಾಲ್ಕೈದು ಕಾಪಿಗಳನ್ನು ನೋಡೋಕೆ ಹೇಳಿದ್ದರು. ಕಾಪಿಗಳನ್ನ ನೋಡ್ತಾ ಕೂತಿದ್ದಾಗ ಟೈಮ್ಸ್ ಆಫ್ ಇಂಡಿಯಾದಿಂದ ಅಜ್ಮತ್ ಫೋನ್ ಮಾಡಿದ. `ಅಣ್ಣಾ.... ಒಂದು ವಿಷಯ ಆಗಿದೆ, ಆದ್ರೆ ಯಾರಿಗೂ ಗೊತ್ತಿಲ್ಲ,’ ಅಂತ ಪೀಠಿಕೆ ಹಾಕಿದ.
`ಏನಾಯ್ತು?’ ಅಂತ ಅಸಡ್ಡೆಯಿಂದಲೇ ಕೇಳಿದೆ.
`ಅಣ್ಣ.... ನಿಂಗೆ ಪಿ ಬಿ ಶ್ರೀನಿವಾಸ್ ಗೊತ್ತಲ್ಲ... ಅವ್ರು ಅಣ್ಣಾವ್ರ ಕೊನೆ ದರ್ಶನಕ್ಕೆ ಅಂತ ಬೆಳಗ್ಗೆ ರೈಲಿಗೆ ಚೆನೈನಿಂದ ಬಂದಿದ್ದರು. ಈ ಗಲಾಟೆ ಮಧ್ಯದಲ್ಲಿ ಅವರಿಗೆ ಶವದ ಹತ್ತಿರ ಹೋಗೋಕೇ ಆಗಿಲ್ಲ. ಅದಕ್ಕೆ ಅವ್ರು ಕಮೀಶನರ್ ಹತ್ತಿರ ಬಂದಿದ್ದರು,’ ಅಂತ ಹೇಳೋ ಹೊತ್ತಿಗೆ ಮಧ್ಯ ಬಾಯಿ ಹಾಕಿದ ನಾನು, `ಅದೇ ಕಣೋ.... ಅಜಯ್ ಅವ್ರನ್ನ ಪೋಲಿಸ್ ಜೀಪಲ್ಲಿ ಕಳುಹಿಸಿದ್ರು. ನೋಡು ಬರೆಯೋಕೇ ಮರ್ತು ಹೋಗಿತ್ತು. ಸಧ್ಯ ನೀನು ನೆನಪಿಸಿದೆಯಲ್ಲ,’ ಅಂದೆ.
`ಇಲ್ಲಣ್ಣ..... ಪೋಲಿಸ್ ಜೀಪಿಗೆ ಸಮೇತ ಅಣ್ಣಾವ್ರ ಶವದ ಹತ್ರ ಅವ್ರನ್ನ ಕರ್ಕೊಂಡು ಹೋಗೋಕೆ ಆಗ್ಲಿಲ್ಲ. ಒಂದೆರೆಡು ಸಲ ಜಾಗ ಮಾಡ್ಕೊಂಡು ಹತ್ರ ಹೋದ್ರಂತೆ. ಜನ ಬಿಟ್ಟಿಲ್ಲಣ್ಣ. ಜೀಪಿಗೇ ಕಲ್ಲು ಹೊಡೆದ್ರಂತೆ. ಪೋಲಿಸ್ ನವರೂ ಇಳಿದು ಜನಗಳಿಗೆ ಕೇಳ್ಕೊಂಡ್ರಂತೆ.... ಶ್ರೀನಿವಾಸ್ ರವರನ್ನ ಶವದ ಹತ್ತಿರ ಹೋಗೋಕೆ ಬಿಡಿ ಅಂತ. ಒಂದು ಕಡೆ ಜೀಪಿಗೆ ಬೆಂಕಿ ಹಾಕೋಕೆ ಬಂದಿದ್ರಂತೆ. ಪಾಪ ಅಣ್ಣ.... ಕಣ್ಣೀರು ಹಾಕ್ಕೊಂಡು, ಸಾಯಂಕಾಲದ ರೈಲು ಹತ್ತಿ ಚೆನೈಗೆ ವಾಪಾಸ್ ಹೋದ್ರಂತೆ,’ ಅಂದ.
ತಲೆ ಧಿಮ್ಮೆಂದಿತು. ಒಂದೆರೆಡು ಕ್ಷಣ ಮಾತೇ ಹೊರಡಲಿಲ್ಲ. ಅಜ್ಮತ್ ಮುಂದುವರೆಸಿದೆ.... `ಅಣ್ಣ.... ನಾನು ಬರೀತ್ತಿದ್ದೀನಿ. ನೀನೂ ಒಂದು ಸಣ್ಣ ಸ್ಟೋರಿ ಹಾಕಣ್ಣ,’ ಅಂತ.
`ಮನುಷ್ಯರೇನೋ ಈ ಹಲ್ಕಾ ಸೂ.... ಮಕ್ಕಳು. ಒಬ್ಬೊಬ್ಬರನ್ನೂ ಸಾಲಾಗಿ ನಿಲ್ಸಿ ಶೂಟ್ ಮಾಡ್ಬೇಕು. ಬೇವರ್ಸಿಗಳು.... ಇವರ್ನೆಲ್ಲ ಅಭಿಮಾನಿಗಳು ಅಂತ ಹೇಳೋಕಾಗುತ್ತಾ?’ ಅಂತ ಕೂಗಾಡಿದೆ. ಇಡೀ ಆಫೀಸಿನಲ್ಲಿ ಎಲ್ಲರೂ ನನ್ನ ಕಡೆ ನೋಡೋಕೆ ಶುರುಮಾಡಿದ್ರು.
`ಏನ್ಮಾಡೋದಣ್ಣ.... ಪಾಪ ಕಮೀಷನರ್. ಸಿಎಂ ಹೇಳಿದ್ರಂತೆ.... ಫೈರ್ ಓಪನ್ ಮಾಡ್ಬಾರ್ದೂಂತ. ಗಲಾಟೆ ಮಾಡ್ದವ್ರೂ ಬೇರೆನೇ ಬಿಡು,’ ಅಂದ.
`ಗೊತ್ತು.... ಯಾರು, ಎಲ್ಲಿಂದ ಬಾಡಿಗೆಗೆ ಜನ ತಂದು ಗಲಾಟೆ ಮಾಡ್ಸಿದ್ರು ಅಂತ. ಪಾಪ ನೋಡು.... ಆ ಟ್ರೈನಿ ಕಾನ್ಸ್ಟೇಬಲ್ ನನ್ನ ಕೊಂದೇ ಹಾಕಿದ್ರಲ್ಲ ಮಾರಾಯ. ನಾವೆಲ್ಲ ಯಾವಾಗ ಮನುಷ್ಯರಾಗ್ತೀವೋ ಏನೋ.... ಯಾಕೋ ಈ ಪ್ರೊಫೆಷನ್ ಬೇಜಾರಾಗಿ ಹೋಗಿದೆ ಕಣೋ,’ ಅಂತ ಹೇಳಿ, ಫೋನ್ ಕೆಳಗಿಟ್ಟೆ.
ಮಟ್ಟು ಛೇಂಬರ್ ಗೆ ಹೋಗಿ, ಶ್ರೀನಿವಾಸ್ ರವರ ಕಥೆ ಹೇಳಿದೆ. `ನೈಸ್ ಸ್ಟೋರಿ ಪಾ.... ಗಿವ್ ಅ ಡೀಸೆಂಟ್ ಕಾಪಿ,’ ಅಂದ್ರು. ಮಾರನೇ ದಿನ, ಮುಖ ಪುಟದಲ್ಲಿ ಒಂದು ಬಾಕ್ಸ್ ಐಟಂ ಆಗಿ ಪ್ರಕಟನೂ ಆಯ್ತು.
ಇತ್ತೀಚೆಗೆ ಕಾರಿನಲ್ಲಿ ಎಫ್ ಎಂ ರೇಡಿಯೋ ಹಾಕಿಕೊಂಡು ಹೋಗುವಾಗ, ಪ್ರತೀ ಹಾಡಿನ ಮೊದಲು ಪಿ ಬಿ ಶ್ರೀನಿವಾಸ್ ಹಾಡಿದ ಕಸ್ತೂರಿ ನಿವಾಸದ ಹಾಡಿನ `ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ,’ ಸಾಲು ಹಾಕುತ್ತಿದ್ದರು. ಯಾಕೆ ಅಂತ ಯೋಚಿಸುವಾಗ ರೇಡಿಯೋದಲ್ಲಿ ಅವತ್ತು ದಿವಂಗತ ಪಿ ಬಿ ಶ್ರೀನಿವಾಸ್ ರವರ ಜನ್ಮದಿನ ಅಂತ ಹೇಳಿದರು.
ಯಾಕೋ ಅಣ್ಣಾವ್ರು ತೀರಿ ಹೋದ ದಿನದ ಘಟನೆ ಮತ್ತೆ ನೆನಪಿಗೆ ಬಂತು.... ಆ ಸಾಲು ಬಂದಾಗ ಅಪ್ರಯತ್ನವಾಗಿ ಅನ್ನಿಸ್ತು...... ಬೇಸರ ಮೂಡಿದ್ರೆ ಹೀಗಾ ಆಟ ಮುಗ್ಸೋದು?!!!!!


ಮಾಕೋನಹಳ್ಳಿ ವಿನಯ್ ಮಾಧವ್

2 ಕಾಮೆಂಟ್‌ಗಳು: