ಶುಕ್ರವಾರ, ಆಗಸ್ಟ್ 31, 2012

ಫ್ರಾಡ್


ಸಾಯಿಬಾಬ ಕಣ್ತೆರೆದಾಗ……

ಆಫೀಸಿಗೆ ಹೊರಡೋಕೆ ಅಂತ ಶೂ ಹಾಕ್ತಾ ಇರೋವಾಗ, ಏನಾದ್ರೂ `ಬ್ರೇಕಿಂಗ್ ನ್ಯೂಸ್’ ಇದೆಯಾ ಅಂತ ನ್ಯೂಸ್ ಚಾನೆಲ್ ಹಾಕಿದೆ. ಬಂದೇ ಬಿಡ್ತು… `ಪವಾಡವಾಗಿ ಬಿಟ್ಟಿದೆ…. ಕಣ್ಣು ಬಿಟ್ಟ ಶೀರ್ಡಿ ಸಾಯಿಬಾಬಾ’ ಅಂತ.
ಒಂದು ಸಾಯಿಬಾಬಾನ ಪ್ರತಿಮೆ ತೋರಿಸುತ್ತಿದ್ದರು. ಒಂದು ಕಣ್ಣು ತೆಗೆದಂತೆ ಕಾಣುತ್ತಿತ್ತು ಮತ್ತು ಕೆಲವು ಹೆಂಗಸರು ಆ ಪ್ರತಿಮೆಗೆ ಆರತಿ ಎತ್ತುತ್ತಿದ್ದರು. ಆ ಮನೆಯ ಹೊರಗಡೆ ಜನರು ಸಾಲುಗಟ್ಟಿ ನಿಂತಿರುವುದನ್ನೂ ತೋರಿಸುತ್ತಿದ್ದರು.
`ಇದಕ್ಕೇನೂ ಬರ ಇಲ್ಲ. ಗಣೇಶ ಹಾಲು ಕುಡಿದಾಯ್ತು, ಈಗ ಸಾಯಿಬಾಬ ಕಣ್ಣು ಬಿಟ್ಟಿದ್ದಾರೆ,’ ಅಂತ ಅನ್ಕೊಂಡು, ಟಿವಿ ಆರಿಸಿ ಕಮೀಷನರ್ ಆಫೀಸಿಗೆ ಹೊರಟೆ. ಅಲ್ಲಿ ನೋಡಿದರೂ ಸಾಯಿಬಾಬನದೇ ಮಾತು.
 `ಇವರೆಲ್ಲ ಯಾವ ಕಾಲದಲ್ಲಿ ಇದ್ದಾರೆ?’ ಅಂತ ಅನ್ಕೊಂಡು ಆಫೀಸಿಗೆ ಬಂದರೆ, ಅಲ್ಲಿ ನಮ್ಮ ಛೀಫ್ ರಿಪೋರ್ಟರ್ ಆಗಿದ್ದ ಕುಶಾಲ ಬಂದು, `ಗವಿ ಗಂಗಾಧರೇಶ್ವರ ದೇವಸ್ಥಾನದ ಹತ್ತಿರ ಒಂದು ಮನೆಯಲ್ಲಿ ಸಾಯಿಬಾಬ ಕಣ್ಣು ಬಿಟ್ಟಿದ್ದಾರಂತೆ. ನೀನೇನೂ ತಲೆ ಕೆಡಿಸಿಕೊಳ್ಳಬೇಡ. ಫೋಟೋಗ್ರಾಫರ್ ಮತ್ತು ರಿಪೋರ್ಟರ್ ಕಳುಹಿಸಿದ್ದೇನೆ,’ ಅಂತ. ಆಗಲೇ ನನಗೆ ಹೊಳೆದಿದ್ದು… `ಬಾಬ ಕಣ್ಣು ಬಿಟ್ಟಿದ್ದು ನಮಗೂ ಸಹ ನ್ಯೂಸ್’ ಅಂತ.
ಸಾಯಂಕಾಲದ ಹೊತ್ತಿಗೆ ಬಾಬ ಕಣ್ಣು ತೆಗೆದಿದ್ದು ದೊಡ್ಡ ಸುದ್ದಿಯಾಗಿತ್ತು. ಅವತ್ತು ಬೇರೆ ಗುರು ಪೂರ್ಣಿಮೆಯಂತೆ. ಯಾವ ಟಿವಿಯಲ್ಲಿ ನೋಡಿದರೂ, ಇದೇ ಸುದ್ದಿ. ಆ ಮನೆಯ ಮಾಲಿಕ ಬಾಬು ಅಂತ… ಅವನು ದೊಡ್ಡ ಧರ್ಮಾರ್ಥನಂತೆ ಆಗಾಗ ಪೋಸು ಕೊಡುತ್ತಿದ್ದ. ನನಗಂತೂ ರೇಜಿಗೆಯಾಗಲು ಶುರುವಾಗಿತ್ತು.
ಈ ಗವಿ ಗಂಗಾಧರೇಶ್ವರ ದೇವಸ್ಥಾನದ ಹತ್ತಿರದ ಚಾಮರಾಜಪೇಟೆಯಲ್ಲೇ ನಾನಿದ್ದಿದ್ದು. ಆದರೆ, ಆ ಕಡೆಗೆ ಅವತ್ತು ಹೋಗಿರಲಿಲ್ಲ. ಇನ್ನೇನು ಸಾಯಂಕಾಲದವರೆಗೆ ಅಲ್ಲಿಗೆ ಹೋಗೋಕೆ ಸಾಧ್ಯವಿಲ್ಲ ಅಂತ ಅನ್ಕೊಂಡು ಸುಮ್ಮನಾದೆ. ಟಿವಿಯಲ್ಲಿ ನೋಡಿದರೆ, ಯಾವುದೋ ಜಾತ್ರೆಯಲ್ಲಿದ್ದಂತೆ ಜನಗಳು ಗಿಜಿಗಿಡುತ್ತಿದ್ದರು. ಪೋಲಿಸರಂತೂ ಇಡೀ ದೇವಸ್ಥಾನವನ್ನೇ ಸುತ್ತುವರೆದಿದ್ದರು.
ರಾತ್ರೆ ಮನೆಗೆ ಬಂದಾಗ, ನಮ್ಮತ್ತೆ ಟಿವಿಯಲ್ಲಿ ಅದನ್ನೇ ನೋಡುತ್ತಿದ್ದರು.  `ಇದೇನೋ ಶುರುವಾಗಿದೆ ನೋಡ್ದಾ?’ ಅಂತ ಕೇಳಿದ್ರು.
`ಜನಗಳಿಗೇನು? ಈ ಥರದ್ದೇನಾದ್ರೂ ಸಿಕ್ಕಿದ್ರೆ ಸಾಕು.. ಇಡೀ ದಿನ ಹಬ್ಬ ಮಾಡ್ತಾರೆ,’ ಅಂತ ನಕ್ಕೆ.
`ಇಲ್ಲೇ ಹಿಂದುಗಡೆ ಇರೋದು. ನಾಳೆ ಬೆಳಗ್ಗೆ ವಾಕಿಂಗ್ ಹೋದಾಗ, ಹೋಗಿ ನೋಡ್ಕೊಂಡು ಬರಬೇಕು,’ ಅಂತ ಅಂದ್ರು.
`ಅಷ್ಟರೊಳಗೆ ಕಣ್ನು ಮುಚ್ಚಿದ್ರೆ ಏನು ಮಾಡ್ತೀರಿ?’ ಅಂತ ತಮಾಷೆ ಮಾಡಿದೆ.
`ಕಣ್ಣು ಮುಚ್ಚಿದ್ರೆ ಆ ವಿಗ್ರಹನೇ ನೋಡ್ಕೊಂಡು ಬರೋದು,’ ಅಂತ ಅವರೂ ನಕ್ಕರು.
ಯಾಕೋ ವಿಷಯ ವಿಕೋಪಕ್ಕೆ ಹೋಗ್ತಾ ಇದೆ ಅನ್ನಿಸ್ತು. ಎರಡು ದಿನ ಬಿಟ್ಟು, ಬೆಳಗ್ಗೆ ಆಫೀಸಿಗೆ ಹೊರಡುವ ಮುಂಚೆ, ಆ ಮನೆಯನ್ನಾದ್ರೂ ನೋಡ್ಕೊಂಡು ಬರೋಣ ಅಂತ ಆ ಕಡೆ ಹೋದೆ. ನಾನು ಯೋಚನೆ ಮಾಡಿದಂತೆ, ಆ ಮನೆ ಗವಿ ಗಂಗಾಧರೇಶ್ವರ ದೇವಸ್ಥಾನದ ಹತ್ತಿರ ಅಲ್ಲ, ಪಕ್ಕದಲ್ಲೇ ಇತ್ತು.
ನನಗೆ ಗೊತ್ತಿದ್ದಂತೆ, ಕೆಂಪೇಗೌಡನಗರ ಪೋಲಿಸ್ ಠಾಣೆಯ ಪಕ್ಕದಲ್ಲಿದ್ದ ಇಡೀ ಗುಡ್ಡವೇ ದೇವಸ್ಥಾನಕ್ಕೆ ಸೇರಿದ್ದು. ಅದರಲ್ಲಿ, ಹಿಂದುಗಡೆ ಭಾಗದಲ್ಲಿ ಕೆಲವು ಕಲ್ಯಾಣ ಮಂಟಪಗಳು ಮತ್ತು ಯೋಗ ಶಾಲೆ ಇದ್ದಿದ್ದು ನೋಡಿದ್ದೆ. ಇವುಗಳ ಮಧ್ಯದಲ್ಲಿ ಮನೆ ಇದ್ದಿದ್ದು ಗೊತ್ತಿರಲಿಲ್ಲ.
ಯಾರನ್ನಾದರೂ ಕೇಳೋಣ ಅಂದ್ರೆ, ಜನಗಳ ಜಾತ್ರೆಯೇ ಇತ್ತು. ಜಾತ್ರೆಯಲ್ಲಿದ್ದಂತೆ ಸಣ್ಣ ಸಣ್ಣ ಅಂಗಡಿಗಳೂ ತಲೆ ಎತ್ತಿದ್ದವು. ಪೋಲಿಸರನ್ನು ಮಾತಾಡಿಸೋಕೆ ಹೋದ್ರೆ, ಮೈಮೇಲೆ ಬಂದರು. ಅವರಿಗೂ ಎರಡು ದಿನಗಳಿಂದ ಊಟ, ನಿದ್ರೆ ಇಲ್ಲದೆ ಸಾಕಾಗಿ ಹೋಗಿತ್ತು ಅಂತ ಕಾಣುತ್ತೆ. ಪಕ್ಕದಲ್ಲಿದ್ದ ಸ್ಲಂ ಜನಗಳಂತೂ ಮಜಾ ತಗೊಳ್ತಿದ್ದಂತೆ ಅನ್ನಿಸ್ತು. ಒಟ್ಟಿನಲ್ಲಿ, ಒಂದು ಹುಚ್ಚಾಸ್ಪತ್ರೆಗೆ ಹೋಗಿ ಬಂದ ಹಾಗಾಯ್ತು.
ಆಮೇಲೆ ವಿಚಾರಿಸಿದರೆ ಆಯ್ತು ಅನ್ಕೊಂಡು ವಾಪಾಸ್ ಬಂದೆ. ಅವತ್ತಿಡೀ ನಾನು ಈ ಸಾಯಿಬಾಬಾನ ಬಗ್ಗೆ ತಲೆ ಕೆಡಿಸಿಕೊಂಡು, ಟಿವಿಯಲ್ಲಿ ಬರುತ್ತಿದ್ದ ಕಾರ್ಯಕ್ರಮಗಳನ್ನು ಗಮನವಿಟ್ಟು ನೋಡಿದೆ. ಅಲ್ಲಿಗೆ ಹೋಗಿದ್ದ ಕೆಲವು ಟಿವಿ ರಿಪೋರ್ಟರ್ ಗಳನ್ನೂ ಮಾತಾಡಿಸಿದೆ.
ಅಗ ನನಗೆ ಗೊತ್ತಾಗಿದಿಷ್ಟು. ಆ ಜಾಗದಲ್ಲಿ ಕೆಲವು ಅರ್ಚಕರ ಮನೆಗಳೂ ಇವೆ ಮತ್ತು ಬಾಬುವಿನ ಮನೆಯೂ ಇದೆ. ಆ ಮನೆಯ ಮಾಲಿಕ ವಿಗ್ರಹದ ಹತ್ತಿರಕ್ಕೆ ಯಾವುದೇ ಕ್ಯಾಮೆರಾಗಳನ್ನೂ ಬಿಟ್ಟಿರಲಿಲ್ಲ. ಜನಗಳು ಮಾತ್ರ ಐದು ಅಡಿ ದೂರದವರೆಗೆ ಹೋಗಬಹುದಿತ್ತು.  ಕಾಣಿಕೆಯ ದುಡ್ಡಿನಲ್ಲಿ ಸಾಯಿಬಾಬಾನ ಗುಡಿ ಕಟ್ಟಿ, ಬಾಬಾನ ಸೇವೆ ಮಾಡುತ್ತಾ ಜೀವನ ಕಳೆಯುವುದಾಗಿ ಆ ಮನೆ ಮಾಲಿಕ ಹೇಳಿದ್ದನಂತೆ. ನಾನಂತೂ ಅದನ್ನು ನಂಬಲು ತಯಾರಿರಲಿಲ್ಲ.
ಸಾಯಂಕಾಲದ ಹೊತ್ತಿಗೆ ನನಗೆ ಅನುಮಾನ ಬಲವಾಗಲು ಶುರುವಾಯ್ತು. ಯಾರನ್ನು ಕೇಳುವುದು ಅನ್ನೋದು ಮಾತ್ರ ಗೊತ್ತಾಗಲಿಲ್ಲ. ಸುಮ್ಮನೆ ಕೆಂಪೇಗೌಡನಗರದ ಪೋಲಿಸ್ ಸ್ಟೇಷನ್ ಗೆ ಫೋನ್ ತಿರುಗಿಸಿದೆ. ಫೋನ್ ಎತ್ತಿದ ಕಾನ್ಸ್ ಟೇಬಲ್ ಜೊತೆ ಸುಮ್ಮನೆ ಮಾತಾಡೋಕೆ ಶುರುಮಾಡ್ದೆ:
`ಏನ್ರೀ? ಎರಡು ದಿನದಿಂದ ಊಟ, ನಿದ್ರೆ ಏನೂ ಇಲ್ಲ ಅಂತ ಕಾಣುತ್ತೆ? ಎಲ್ಲಾ ಸಾಯಿಬಾಬನ ಕೃಪೆನಾ?’ ಅಂದೆ.
`ಏನು ಮಾಡೋದು ಸರ್? ಇರ್ತದ್ದಲ್ಲ ನಮಗೆ ಒಂದಲ್ಲಾ ಒಂದು,’ ಅಂದ.
`ಅಲ್ರಿ… ನೀವೂ ನಂಬ್ತಿರಾ ಇದನ್ನೆಲ್ಲಾ?’ ಅಂದೆ.
`ಏನು ಮಾಡೋದು ಸರ್? ದೇವರು ಅಂದ ಮೇಲೆ ಅದನ್ನೆಲ್ಲಾ ಪ್ರಶ್ನೆ ಮಾಡೋಕೆ ಆಗುತ್ತಾ?’ ಅಂದ.
`ಅಲ್ರಿ… ಎರಡು ದಿನದಲ್ಲಿ ತುಂಬಾ ತೊಂದರೆ ಆಗಿರಬೇಕಲ್ಲ?’ ಅಂದೆ.
`ಅಯ್ಯೋ ಏನು ಹೇಳ್ತೀರಾ ಸರ್? ಬರಿ ಪಿಕ್ ಪಾಕೆಟ್ ಮತ್ತು ಚೈನ್ ಸ್ನ್ಯಾಚಿಂಗ್ ಕೇಸ್ ಗಳು. ಈ ಜನಗಳು ಹುಚ್ಚೆದ್ದು ಹೋಗಿದ್ದಾರೆ. ಕಳ್ಕೊಂಡ ಮೇಲೆ ಸೀದ ಸ್ಟೇಷನ್ ಗೆ ಬರ್ತಾರೆ,’ ಅಂತ ನಕ್ಕ.
`ಅಲ್ಲ? ಆ ದೇವಸ್ಥಾನದ ಜಾಗದಲ್ಲಿ ಈ ಬಾಬು ಮನೆ ಹ್ಯಾಗೆ ಬಂತು?’ ಅಂತ ಕೇಳ್ದೆ.
`ಅದು ಹ್ಯಾಗೆ ಬಂತೋ ಗೊತ್ತಿಲ್ಲ. ಕಾರ್ಪೋರೇಷನ್ ನವರು ಅವರ ಮೇಲೆ ಕೇಸ್ ಹಾಕಿದ್ರು. ಅದೇನೋ ಕಾರ್ಪೋರೇಷನ್ ಕಡೆಗೇ ಕೇಸ್ ಆಯ್ತು ಅಂತ ಯಾರೋ ಮಾತಾಡ್ಕೋತ್ತಿದ್ರು,’ ಅಂದ.
`ಕಾರ್ಪೋರೇಷನ್ ಕಡೆಗೇ ಕೇಸ್ ಆದ್ರೆ ಇನ್ನೂ ಯಾಕೆ ಖಾಲಿ ಮಾಡಿಸಿಲ್ಲ?’ ಅಂತ ಕೇಳ್ದೆ.
`ಅದೇನೋ ಖಾಲಿ ಮಾಡೋಕೆ ನೋಟಿಸ್ ಕೊಟ್ಟಿದ್ರಂತೆ. ನಂಗೆ ಸರಿಯಾಗಿ ಗೊತ್ತಿಲ್ಲ,’ ಅಂದ.
`ಓ… ಖಾಲಿ ಮಾಡೋಕೆ ನೋಟಿಸ್ ಕೊಟ್ಟ ತಕ್ಷಣ ಅವರ ಮನೇಲಿ ಸಾಯಿಬಾಬ ಕಣ್ಣು ಬಿಟ್ಟರಂತಾ?’ ಅಂತ ಕೇಳ್ದೆ.
`ದೇವರ ಬಗ್ಗೆ ಹಾಗೆಲ್ಲ ಮಾತಾಡಬಾರದು ಸರ್. ಯಾವುದೋ ವಿಷಯಕ್ಕೆ, ಇನ್ಯಾವುದೋ ವಿಷಯ ಸೇರಿಸ್ತಿದ್ದೀರಲ್ಲ… ನೋಡಿ, ಕಲಿಗಾಲದಲ್ಲಿ ದೇವರು ಕಣ್ಣು ಬಿಟ್ಟಿದ್ದಾನೆ. ಒಳ್ಳೆಯದಕ್ಕೋ, ಕೆಟ್ಟದಕ್ಕೋ ಗೊತ್ತಿಲ್ಲ. ನಾನು ಮಾತ್ರ ದೇವರ ವಿಷಯ ಕೆಟ್ಟದಾಗಿ ಮಾತಾಡೋದಿಲ್ಲ ಸರ್,’ ಅಂದ.
`ಸರಿ,’ ಅಂತ, ಅದೂ ಇದೂ ಮಾತಾಡಿ ಫೋನ್ ಕೆಳಗಿಟ್ಟೆ. ನನಗಂತೂ ಅನುಮಾನನೇ ಉಳಿದಿರಲಿಲ್ಲ, ಬಾಬಾ ಕಣ್ಣು ಬಿಟ್ಟಿದ್ದು ಯಾಕೆ ಅನ್ನೋದ್ರಲ್ಲಿ. ಆದ್ರೆ, ಆ ಕೇಸ್ ಬಗ್ಗೆ ಯಾರ ಹತ್ರ ವಿಚಾರಿಸೋದು ಅನ್ನೋದು ಮಾತ್ರ ಗೊತ್ತಾಗಲಿಲ್ಲ. ಆಗಲೇ ಏಳು ಘಂಟೆಯಾಗಿತ್ತು ಮತ್ತು ಕಾರ್ಪೋರೇಷನ್ ಬೀಗ ಹಾಕಿರುತ್ತೆ.
ಸರಿ, ಕುಶಾಲಳನ್ನು ಕರೆದು ವಿಷಯ ಹೇಳಿದೆ. `ಅಲ್ಲಾ ಕಣೋ, ಎಂಥಾ ದೊಡ್ಡ ಫ್ರಾಡ್ ಅಲ್ವಾ? ನಾನೂ ನಂಬಿರಲಿಲ್ಲ,’ ಅಂದವಳೇ, ಸೀದ ನಮ್ಮ ಎಡಿಟರ್ ಬಲರಾಮರ ಹತ್ತಿರ ಹೋಗಿ ವಿಷಯ ಹೇಳಿದಳು.
ಮನೆಗೆ ಹೊರಡುತ್ತಿದ್ದ ಬಲರಾಮ್, `ದಿಸ್ ಇಸ್ ಎಬೌಟ್ ರಿಲಿಜಿಯಸ್ ಸೆಂಟಿಮೆಂಟ್ಸ್. ಬಿ ಕಾಶಿಯಸ್ ವೆನ್ ಯು ಆರ್ ರೈಟಿಂಗ್,’ ಅಂದರು.
ಇಷ್ಟಾದರೆ ಸಾಕು ಅಂದ್ಕೊಂಡು, ಬಾಬ ಕಣ್ಣುತೆರೆದ ಮನೆ ಕಾರ್ಪೋರೇಷನ್ ಜಾಗದ ಒತ್ತುವರಿ ಅಂತ. ಮಾರನೇ ದಿನ ನೋಡಿದರೆ, ಎರಡನೇ ಪುಟದ ಮೂಲೆಯಲ್ಲಿ ನನ್ನ ವರದಿ ಮುದುಡಿ ಕೂತಿತ್ತು. ಅವತ್ತು ಕಾರ್ಪೋರೇಷನ್ ಆಫೀಸಿಗೆ ಹೋಗಿ, ಕೇಸಿಗೆ ಸಂಬಂಧಪಟ್ಟ ಕಾಗದಗಳನ್ನು ತೆಗೆಸಬೇಕು ಅನ್ಕೊಂಡಿದ್ದವನು, ಹಾಳಾಗಿ ಹೋಗ್ಲಿ ಅಂತ ಸುಮ್ಮನಾದೆ.
ಆದರೆ, ಮಧ್ಯಾಹ್ನದ ಹೊತ್ತಿಗೆ ಪವಾಡ ಜರುಗಿತು. ಮನೆ ಮಾಲಿಕರು ಬಾಬಾ ದರ್ಶನವನ್ನು ನಿಲ್ಲಿಸಿದರು. ಸಾಯಂಕಾಲದ ಹೊತ್ತಿಗೆ, ಅಲ್ಲಿನ ಜನಜೀವನ ಮೊದಲಿನಂತೆಯೇ ಆಯಿತು.
ಈಗ, ದಿನಾ ನಾನು ಆ ದಾರಿಯಲ್ಲಿ ತಿರುಗುತ್ತೇನೆ. ಅವತ್ತು ಅಲ್ಲಿ ಏನಾಯ್ತು? ಬಾಬಾ ಏನಾದರೂ ತೆರೆದ ಕಣ್ಣು ಮುಚ್ಚಿಬಿಟ್ಟರೇ? ಅಥವಾ, ಬಾಬುವಿಗೇ ಬಾಬಾ ಬಗ್ಗೆ ನಂಬಿಕೆ ಕಡಿಮೆಯಾಯ್ತಾ? ಅಂತ ಗೊತ್ತಾಗಲೇ ಇಲ್ಲ.
ಇನ್ನೊಂದು ಗೊತ್ತಾಗ್ದೆ ಇರೋ ವಿಷಯ ಅಂದ್ರೆ, ಕಾರ್ಪೋರೇಶನ್ ನವರು ಆ ಮನೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡರೋ, ಇಲ್ಲವೋ ಅನ್ನೋದು………



ಮಾಕೋನಹಳ್ಳಿ ವಿನಯ್ ಮಾಧವ

  

ಶುಕ್ರವಾರ, ಆಗಸ್ಟ್ 24, 2012

ಸರಗಳ್ಳ


ಹಿ ಬಿಲ್ಟ್ ದಿ ಹೌಸ್ ಚೈನ್ ಬೈ ಚೈನ್

ಆಗಲೇ ಐದೂವರೆಯಾಗ್ತಾ ಬಂದಿತ್ತು. ಬೆಳಗ್ಗಿನಿಂದ ಏನೂ ಬರೆದಿರಲಿಲ್ಲ. ತಲೆ ಹೋಗುವಂತದೇನೂ ಬರೆಯೋಕೂ ಇರಲಿಲ್ಲ. ಆದ್ರೂ ಕೈಯಲ್ಲಿದ್ದ ಸಣ್ಣ ಪುಟ್ಟ ಕ್ರೈಂ ಸುದ್ದಿಯಾದ್ರೂ ಬರೆದು ಮುಗಿಸಿರುತ್ತಿದ್ದೆ. ಇವತ್ತು ಅದೂ ಮಾಡಿರಲಿಲ್ಲ.
ನೋಟ್ ಬುಕ್ ತೆಗೆದು ಹಾಗೇ ಕಣ್ಣಾಡಿಸಿದೆ. ಒಂದು ಕೊಲೆ, ಎರಡು ಸುಲಿಗೆ, ಎರಡು ಅಪಘಾತ ಮತ್ತು ಒಂದು ಸಣ್ಣ ಪ್ರೆಸ್ ನೋಟ್. ಸಾಯಂಕಾಲ ಕೋರ್ಟ್ ನಲ್ಲೂ ಏನೂ ಸಿಕ್ಕಿರಲಿಲ್ಲ.
ಸಾಧಾರಣವಾಗಿ ಬೆಳಗ್ಗಿನ ಸುದ್ದಿಯನ್ನು ಬರೆದೇ ಕೋರ್ಟ್ ಗೆ ಹೋಗ್ತಿದ್ದೆ. ಕನ್ನಡ ಪ್ರಭದ ವರದಿಗಾರರಾಗಿದ್ದ ಶ್ರೀಶ ಅದನ್ನು ನನಗೆ ಹೇಳಿಕೊಟ್ಟಿದ್ದರು. `ಸ್ಟೋರಿ ಇಟ್ಕೊಂಡು ಕಾಯೋದು ಹೆಣ ಇಟ್ಕೊಂಡ ಹಾಗೆ ಕಣ್ರೀ. ತಕ್ಷಣ ಬರೆದು ಮುಗಿಸಬೇಕು. ಇಲ್ಲದೇ ಹೋದರೆ, ಹೆಣದ ಥರ ಕೊಳೆಯೋಕೆ ಶುರುವಾಗುತ್ತೆ, ಅಷ್ಟೆ,’ ಅಂದಿದ್ದರು.
ಇವತ್ತೊಂದು ದಿನ ಬಿಟ್ಟು, ಯಾವಾಗಲೂ ಅದನ್ನು ಪಾಲಿಸುತ್ತಿದ್ದೆ. ನೋಟ್ ಬುಕ್ಕಿನಲ್ಲಿದ್ದ ಸುದ್ದಿಗಳನ್ನು ಬರೆದ ಮೇಲೆ, ಪ್ರೆಸ್ ನೋಟಿನ ಕಡೆ ಕಣ್ಣಾಡಿಸಿದೆ. ಮೂರೇ ಪ್ಯಾರಾಗ್ರಾಫ್… ಯಾವುದೋ ಸರಗಳ್ಳನನ್ನು ಸಿಸಿಬಿ ಯವರು ಹಿಡಿದು, ಹನ್ನೆರೆಡು ಸರಗಳನ್ನು ವಶಪಡಿಸಿಕೊಂಡಿದ್ದರು.
ತೊಂಬತ್ತರ ಕೊನೆಯ ಭಾಗದವರೆಗೂ ಸರಗಳ್ಳತನ ಅಂದರೆ ಜನ ಮಾತಾಡಿಕೊಳ್ಳುವ ಸುದ್ದಿ. ಸರಗಳ್ಳರ ಕೆಲವು ಗುಂಪುಗಳೇ ಹುಟ್ಟಿಕೊಂಡಿದ್ದೆವು. ಸರಗಳ್ಳತನವಾದಾಗ ಒಂದೆರೆಡು ಸಾಲಿನ ಸುದ್ದಿ ಮಾಡುತ್ತಿದ್ದೆವು. ಅದನ್ನು ಪೋಲಿಸರು ಹಿಡಿದಾಗ ಅಷ್ಟೇನೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.
ಆ ಪ್ರೆಸ್ ನೋಟನ್ನು ಶಪಿಸಿಕೊಂಡೆ. ಸೈಕ್ಲೋಸ್ಟೈಲ್ ಮಾಡಿದ ಆ ಕಾಗದವನ್ನು ಓದುವುದೇ ಒಂದು ತೆನಿಖೆ ಇದ್ದಂತೆ. ಸರಗಳ್ಳನ ಹೆಸರು ರವಿ ಅಂತಲೂ, ಆತನು ಬೆಂಗಳೂರಿನ ದಕ್ಷಿಣ ಭಾಗವಾದ ಜಯನಗರದ ಸುತ್ತ ಮುತ್ತ ಸರಗಳ್ಳತನ ಮಾಡುತ್ತಿದ್ದನೆಂದೂ ಇತ್ತು. ಮುಂದಿನದನ್ನು ಓದಲು ಆಗುತ್ತಿರಲಿಲ್ಲ. ಅವನು ಸರಗಳ್ಳತನ ಮಾಡಿದ….. ಕನಕಪು…. ಅಂತ ಅಸ್ಪಷ್ಟವಾಗಿ ಏನೋ ಇತ್ತು.
ಆ ಪ್ರೆಸ್ ನೋಟನ್ನ ಡೆಕ್ಕನ್ ಹೆರಾಲ್ಡ್ ನ ಊಮನ್ ಜಾನ್ ಕೈಯಿಂದ ಕಿತ್ತುಕೊಂಡು ಬಂದಿದ್ದೆ. ಅದೇ ಸಮಯಕ್ಕೆ ನಮ್ಮ ಬ್ಯುರೋ ಛೀಫ್ ಮಟ್ಟು ನನ್ನನ್ನು ಕರೆದು, `ವಾಟ್ ಇಸ ದೆರ್ ಇನ ಕ್ರೈಂ ಪಾ? ಪೇಜಸ್ ಅರ್ ಲುಕಿಂಗ್ ಲೈಕ್ ಫುಟ್ ಬಾಲ್ ಗ್ರೌಂಡ್ ಪಾ… ಚರ್ನ್ ಔಟ್ ಸಮ್ ಸ್ಟೋರಿ ನೋ?’ ಅಂತ ತಮಾಷೆ ಮಾಡಿದ್ರು. `ಇದೊಳ್ಳೆ ಕಥೆ. ಹನುಮಂತರಾಯ ಹಗ್ಗ ಮೇಯೋವಾಗ, ಪೂಜಾರಿ ಶಾವಿಗೆ ಬೇಡಿದ್ನಂತೆ,’ ಅನ್ಕೊಂಡು ವಾಪಾಸ್ ನನ್ನ ಜಾಗಕ್ಕೆ ಬಂದೆ.
ಒಂದೈದು ನಿಮಿಷ ತಲೆ ಕೆರೆದುಕೊಂಡರೂ, ಏನೋ ಹೊಳೆಯಲಿಲ್ಲ. ಮೂಲೆಯಲ್ಲಿ ಮುದ್ದೆಯಾಗಿದ್ದ ಪ್ರೆಸ್ ನೋಟ್ ತಗೊಂಡು ಮತ್ತೆ ಓದೋಕೆ ಪ್ರಯತ್ನ ಮಾಡಿದೆ. ಕೊನೆಗೆ ಸಿಟ್ಟು ಬಂದು, ಸಿಸಿಬಿ ಡಿಸಿಪಿ ಯಾಗಿದ್ದ ಉಲ್ಫತ್ ಹುಸೇನ್ ರವರಿಗೆ ಫೋನ್ ಮಾಡ್ದೆ.
ಪ್ರೆಸ್ ನೋಟ್ ಸರಿಯಾಗಿ ಪ್ರಿಂಟ್ ಆಗಿಲ್ಲ ಅಂತ ಬೆಂಡೆತ್ತಬೇಕು ಅನ್ಕೊಂಡು, `ಏನ್ಸಾರ್, ನಿಮ್ಮ ಪ್ರೆಸ್ ನೋಟಲ್ಲಿ ಕೊನೆ ಪ್ಯಾರಾಗ್ರಾಫ್ ಕಾಣ್ತಾನೇ ಇಲ್ಲ?’ ಅಂತ ಶುರು ಹಚ್ಕೊಂಡೆ. ಉಲ್ಫತ್ ಬೇರೆ ಕಾಲೇಜಿನಲ್ಲಿ ನನ್ನ ಚಿಕ್ಕಮ್ಮನ ಸಹಪಾಠಿಯಾಗಿದ್ದವರು. ನೇರವಾಗಿ ಜಗಳವಾಡೋಕೂ ಆಗ್ತಿರಲಿಲ್ಲ. ಯಾಕೇಂದ್ರೆ, ಅವರಿಗೆ ಜಗಳವಾಡಿ ಅಭ್ಯಾಸ ಇರಲಿಲ್ಲ.
`ಅದೇನ್ರೀ… ಅದು, ಅವನು ಸರಗಳ್ಳತನ ಮಾಡಿದ ದುಡ್ಡಲ್ಲಿ, ಕನಕಪುರದಲ್ಲಿ ಒಂದು ಮನೆ ಕಟ್ತಾ ಇದ್ದ ಅಂತ. ಸೈಕ್ಲೋಸ್ಟೈಲ್ ಮಾಡೋವಾಗ, ಅದು ಸರಿಯಾಗಿ ಬಂದಿಲ್ಲ. ನಮ್ಮವರರೂ ನೋಡ್ದೆ ಹಂಚಿಬಿಟ್ಟಿದ್ದಾರೆ,’ ಅಂದ್ರು.
ನನಗೆ ಜಗಳ ಮಾಡೋದು ಮರ್ತೇ ಹೋಯ್ತು. `ಸರ್, ಐದೇ ನಿಮಿಷದಲ್ಲಿ ನಿಮ್ಮ ಆಫೀಸಲ್ಲಿ ಇರ್ತೀನಿ. ಎಲ್ಲೂ ಹೋಗಬೇಡಿ,’ ಅಂದವನೇ ಹೊರಟೆ. ಹಾಗೇ ಮಟ್ಟೂರವರ ಛೇಂಬರ್ ದಾಟುವಾಗು, `ಛೀಫ್, ಐ ವಿಲ್ ಬಿ ಬ್ಯಾಕ್ ಇನ್ ಟೆನ್ ಮಿನಿಟ್ಸ್, ಐ ಗಾಟ್ ಎ ಗುಡ್ ಸ್ಟೋರಿ,’ ಅಂತ ಕೂಗಿಕೊಂಡು ಓಡಿದೆ. `ಟೆಲ್ ಮಿ ವಾಟ್ ಇಸ್ ಇಟ್,’ ಅಂತ ಮಟ್ಟೂ ಕೂಗಿದ್ದು ಕಿವಿಗೆ ಬಿದ್ದರೂ, ಅದಕ್ಕೆ ಉತ್ತರಿಸುವ ಗೋಜಿಗೆ ಹೋಗಲಿಲ್ಲ.
ಉಲ್ಫತ್ ಮುಂದೆ ಕೂತವನೇ, `ಸರ್, ಮೊದಲಿಂದ ಸರಿಯಾಗಿ ಹೇಳಿ… ಇವನು ಬರೀ ಚೈನ್ ಕದ್ದೇ ಮನೆ ಕಟ್ಟಿದ್ದಾನಾ?’ ಅಂದೆ.
`ಇನ್ನೂ ಪೂರ್ತಿಯಾಗಿಲ್ಲ. ಕಟ್ತಾ ಇದ್ದಾನೆ. ಅದಕ್ಕೆ ಪೂರ್ತಿ ದುಡ್ಡು ಚೈನ್ ಕದ್ದೇ ಮಾಡಿದ್ದು,’ ಅಂತ ಹೇಳ್ತಾ, ಒಂದು ಅರ್ಧ ಕಟ್ಟಿದ್ದ ಎರಡಂತಸ್ತಿನ ಮನೆ ಫೋಟೋ ತೋರಿಸಿ, `ಇದು ಪೂರ್ತಿ ಆಗೋಕ್ಕೆ ಹನ್ನೆರೆಡರಿಂದ ಹದಿಮೂರು ಲಕ್ಷ ಆಗುತ್ತೆ. ಆಗಲೇ ಎಂಟರಿಂದ ಹತ್ತು ಲಕ್ಷ ಖರ್ಚು ಮಾಡಿದ್ದಾನೆ,’ ಅಂದ್ರು.
 `ಅಲ್ಲ ಸರ್, ಇವನು ಹನ್ನೆರೆಡು ಸರ ಕದ್ದು ಹತ್ತು ಲಕ್ಷ ಸಂಪಾದನೆ ಮಾಡಿದ್ನಾ?’ ಅಂತ ಕೇಳಿದೆ.
`ಇಲ್ಲಾರಿ, ಅದೊಂದು ದೊಡ್ಡ ಕಥೆ,’ ಅಂತ ಉಲ್ಫತ್ ಹೇಳೋಕೆ ಶುರುಮಾಡಿದ್ರು.
ರವಿ ಕನಕಪುರದ ಪಕ್ಕದ ಹಳ್ಳಿಯವನಾದ್ರೂ, ಅವನ ವಿಷಯ ಕನಕಪುರದಲ್ಲಿ ಯಾರಿಗೂ ಗೊತ್ತಿಲ್ಲ. ಯಾರ ಹತ್ತಿರವೂ ಮಾತಾಡದ ಅವನು, ಅವನ ತಂದೆಯ ಐದೆಕೆರೆ ಜಮೀನಿನಲ್ಲಿ ಇದ್ದ. ಕುಡಿಯುತ್ತಿರಲಿಲ್ಲ, ಸಿಗರೇಟು ಸೇದುತ್ತಿರಲಿಲ್ಲ ಮತ್ತು ಹುಡುಗಿಯರನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಮನುಷ್ಯರ ಸಹವಾಸವನ್ನೇ ಮಾಡುತ್ತಿರಲಿಲ್ಲ.
ಹಾಗೇನೇ, ಒಂದು ಯಮಾಹಾ ಮೋಟಾರ್ ಸೈಕಲ್ ಖರೀದಿಸಿದ. ಅವನಿಗೆ ಮೋಟಾರ್ ಸೈಕಲ್ ಹತ್ತಿ ಬೆಂಗಳೂರಿಗೆ ಬರುವುದು ಒಂದು ಶೋಕಿ. ಆ ಮೋಟಾರ್ ಸೈಕಲ್ ಗೆ ಮೂರು ಬಣ್ಣದ ಪೆಟ್ರೋಲ್ ಟ್ಯಾಂಕ್ ಮತ್ತು ಸೈಡ್ ಬಾಕ್ಸ್ ಗಳನ್ನೂ ಖರೀದಿಸಿದ್ದ. ಬೆಂಗಳೂರಿಗೆ ಬಂದು ಅವನು ಏನು ಮಾಡ್ತಾನೆ ಅನ್ನೋದು ಅವನ ಮನೆಯವರಿಗೂ ಗೊತ್ತಿರಲಿಲ್ಲ.
ಒಂದು ಸಲ, ಮನೆಯಲ್ಲಿ ಹೊಸ ಮನೆ ಕಟ್ಟುವ ವಿಷಯ ಪ್ರಸ್ತಾಪವಾಯಿತು.  ಆಗ ರವಿ ಒಳ್ಳೇ ಮನೆ ಕಟ್ಟುವ ವಿಷಯ ಹೇಳಿದ. ಅಲ್ಲಿಂದ ಮನೆ ಕಟ್ಟಲು ಬೇಕಾಗುವ ದುಡ್ಡನ್ನು ಅವನೇ ಹೊಂದಿಸಲು ಶುರುಮಾಡಿದ. ಬೆಂಗಳೂರಲ್ಲಿ ಮಗ ಬ್ಯುಸಿನೆಸ್ ಮಾಡ್ತಿದ್ದಾನೆ ಅಂತ ಮನೆಯವರು ತಿಳಿದಿದ್ದರು.
ಬೆಂಗಳೂರಿಗೆ ಬರುವಾಗ ರವಿಯು ತನ್ನ ಮೋಟಾರ್ ಸೈಕಲ್ ನ ನಾಲ್ಕು ನಂಬರ್ ಗಳಲ್ಲಿ ಯಾವುದಾದರೂ ಒಂದೋ, ಎರಡೋ ನಂಬರ್ ಗಳ ಮೇಲೆ ಗ್ರೀಸ್ ಹಚ್ಚುತ್ತಿದ್ದ. ಹಾಗಾಗಿ, ನೋಡುವವರಿಗೆ, ಒಂದೋ, ಎರಡೋ ನಂಬರ್ ಇದ್ದಂತೆ ಕಾಣುತ್ತಿತ್ತು. ಪ್ರತೀ ಸಲ ಟ್ಯಾಂಕ್ ಬದಲಾಯಿಸುವುದರಿಂದ, ಅದರ ಬಣ್ಣ ಬೇರೆ ಅಂತ ಆಗುತ್ತಿತ್ತು. ಒಂದು ಸಲ ಬೆಂಗಳೂರಿಗೆ ಬಂದರೆ, ಎಂಟರಿಂದ ಹತ್ತು ಸರ ಕದಿಯುತ್ತಿದ್ದ ಮತ್ತು ನೆಟ್ಟಗೆ ಊರಿಗೆ ವಾಪಾಸ್ ಹೋಗುತ್ತಿದ್ದ. ಅವುಗಳಲ್ಲಿ ಒಂದೆರೆಡು ಘಟನೆಗಳು ಪತ್ರಿಕೆಗಳಲ್ಲಿ ಬಂದರೆ, ಉಳಿದವನ್ನು ಪೋಲಿಸರು ಮುಚ್ಚಿಹಾಕುತ್ತಿದ್ದರು.
ರವಿಗೆ ಇನ್ನೊಂದು ಅಭ್ಯಾಸವಿತ್ತು. ಸರಗಳ್ಳತನ ಮಾಡುವಾಗ ಬರೀಕಾಲಿನಲ್ಲಿ ಮೋಟಾರ್ ಸೈಕಲ್ ಓಡಿಸುತ್ತಿದ್ದ. ತನ್ನ ಚಪ್ಪಲಿಯನ್ನು ಕನಕಪುರ ರಸ್ತೆಯ ಒಂದು ಕಾಡಿನಲ್ಲಿ ಇಟ್ಟು ಬರುತ್ತಿದ್ದ. ವಾಪಾಸ್ ಹೋಗುವಾಗ, ಹಾಕಿಕೊಂಡು ಹೋಗುತ್ತಿದ್ದ. ಬರಿಗಾಲ ಸರಗಳ್ಳನ ವಿಷಯವನ್ನು ಒಂದಿಬ್ಬರು ಸರ ಕಳೆದುಕೊಂಡ ಹೆಂಗಸರು ಪೋಲಿಸರಿಗೆ ಹೇಳಿದ್ದರು.
ಹೀಗಿದ್ದಾಗ ಒಂದು ಸಲ ರವಿಯನ್ನು ಸಂಚಾರ ಪೋಲಿಸರು ತಡೆದು ನಿಲ್ಲಿಸಿ ಅವನ ಲೈಸೆನ್ಸ್ ಮತ್ತು ಮೋಟಾರ್ ಸೈಕಲ್ ನ ದಾಖಲೆಗಳನ್ನು ಕೇಳಿದರು. ಅದರಲ್ಲೋಬ್ಬ ಕಾನ್ಸ್ ಟೇಬಲ್ ಮುಂಚೆ ಜಯನಗರ ಠಾಣೆಯಲ್ಲಿ ಕ್ರೈಂ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಅವನು ಬರಿಗಾಲ ಸರಗಳ್ಳನ ಬಗ್ಗೆ ಕೇಳಿದ್ದ. ಬರಿಗಾಲಲ್ಲಿ ದಾಖಲೆಗಳನ್ನು ತಂದುಕೊಟ್ಟ ರವಿಯನ್ನು ಚಪ್ಪಲಿ ಬಗ್ಗೆ ಕೇಳಿದ. ರವಿ, ತಾನು ಶಬರಿಮಲೈಗೆ ಹೋಗುತ್ತಿರುವುದಾಗಿ ಹೇಳಿದ. ಜೀನ್ಸ್ ಮತ್ತು ಟೀ ಶರ್ಟ್ ಹಾಕಿದ ಹುಡುಗ, ಕುತ್ತಿಗೆಯಲ್ಲಿ ಮಾಲೆಯನ್ನೂ ಹಾಕದೆ ಶಬರಿಮಲೈಗೆ ಹೋಗೋದನ್ನು ನಂಬಲು ಕಾನ್ಸ್ ಟೇಬಲ್ ಸಿದ್ದವಿರಲಿಲ್ಲ. ಅಲ್ಲೇ ಹಿಡಿದು ಜೇಬನ್ನು ತಲಾಶ್ ಮಾಡಿದಾಗ, ಎರಡು ಚಿನ್ನದ ಸರಗಳು ಹೊರಕ್ಕೆ ಬಂದವು.
ರವಿಯನ್ನು ಹಿಡಿದು ಸಿಸಿಬಿಗೆ ಕೊಡಲಾಯ್ತು. ಆದರೆ, ಐದೇ ದಿನದೊಳಗೆ ಅವನ ತಂದೆ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿ, ತಮ್ಮ ಮಗನನ್ನು ಹುಡುಕಿ ಕೊಡಬೇಕು ಅಂತ ಕೋರ್ಟ್ ಮೊರೆ ಹೋದರು.
``ನಮ್ಮ ಪ್ರಕಾರ ಇವನು ನೂರು ಸರಗಳ್ಳತನವಾದರೂ ಮಾಡಿದ್ದಾನೆ. ಹನ್ನೆರೆಡು ಕೇಸ್ ರಿಕವರಿಯಾಗುವುದರೊಳಗೆ ಅವನಪ್ಪ ಕೋರ್ಟ್ ಗೆ ಹೋದ. ಹಾಗಾಗಿ ಈಗ ರೆಗ್ಯುಲರೈಸ್ ಮಾಡಿದೆವು. ಮತ್ತೆ ಪೋಲಿಸ್ ಕಸ್ಟಡಿಗೆ ತಗೊಂಡು ರಿಕವರಿ ಶುರುಮಾಡಬೇಕು. ಒಂದು ಸಲ ರೆಗ್ಯುಲರೈಸ್ ಆದರೆ, ಬಾಯಿ ಬಿಡೋದು ಕಷ್ಟ,’ ಅಂದರು.
ನಾನು ಆ ಮನೆಯ ಫೋಟೊ ತೆಗೆದುಕೊಂಡು ಸೀದ ಆಫೀಸಿಗೆ ಬಂದವನೇ, ವರದಿ ಬರೆಯೋಕೆ ಶುರು ಮಾಡಿದೆ. ಮೊದಲು ತಲೆಗೆ ಬಂದ ವಾಕ್ಯವೇ, `ಹಿ ಬಿಲ್ಟ್ ದಿ ಹೌಸ್ ಚೈನ್ ಬೈ ಚೈನ್,’ ಅಂತ. ನಾನು ವರದಿ ಬರೆಯುವಾಗ, ಮಟ್ಟು ಹಿಂದುಗಡೆಯಿಂದ ಬಂದು, ನಾನು ಏನು ಬರೀತಾ ಇದ್ದೀನಿ ಅಂತ ಇಣುಕಿ ನೋಡಿ ಹೋಗಿದ್ದೂ ಗೊತ್ತಾಗಿರಲಿಲ್ಲ. ಅವರು ಮೀಟಿಂಗ್ ಮುಗಿಸಿ ಮನೆಗೆ ಹೋಗುವಾಗ ಮಾತ್ರ ನನಗೆ ಹೇಳಿದರು: ಲೌಲಿ ಸ್ಟೋರಿ ಪಾ’ ಅಂತ.
ಮಾರನೇ ದಿನ ಪೋಲಿಸ್ ಕಮೀಷನರ್ ಆಫೀಸಿಗೆ ಹೋದಾಗ ಡೆಕ್ಕನ್ ಹೆರಾಲ್ಡ್ ನಿಂದ ಸುಬ್ರಹ್ಮಣ್ಯ ಬಂದಿದ್ದ. `ಒಳ್ಳೆ ಸ್ಟೋರಿ ಕಣೋ,’ ಅಂತ ಹೇಳಿದಾಗ, ಸುಮ್ಮನೆ ಹಲ್ಲು ಕಿರಿದೆ.
`ನಿಂಗೆ ಪ್ರೆಸ್ ನೋಟ್ ಕೊಡೋದೂ ಕಷ್ಟ. ಬೆಳಗ್ಗೆನೆ ಬೈಸ್ಕೋಬೇಕಾಗುತ್ತೆ,’ ಅಂತ ಹಿಂದುಗಡೆಯಿಂದ ಧ್ವನಿ ಬಂದಾಗ ತಿರುಗಿ ನೋಡಿದೆ.
ಊಮನ್ ಜಾನ್ ನಗುತ್ತಾ ನಿಂತಿದ್ದ.


ಮಾಕೋನಹಳ್ಳಿ ವಿನಯ್ ಮಾಧವ್

ಶುಕ್ರವಾರ, ಆಗಸ್ಟ್ 17, 2012

ಅಣ್ಣು


ಯಾರು? ತಪ್ಪಿದ್ದೆಲ್ಲಿ? ಅನ್ನೋದು ಯಕ್ಷ ಪ್ರಶ್ನೆಯಾಗೇ ಉಳೀತು

ಬೆಳಗ್ಗಿನ ಜಾವ ಐದೂವರೆಯಾಗಿತ್ತು. ಮನೆ ಮುಂದೆ ಆಟೋರಿಕ್ಷಾ ಬಂದು ನಿಂತ ಸದ್ದಾಯಿತು. ಹಾಗೇ, ಗೇಟು ತೆಗೆದು ಯಾರೋ ಒಳಗಡೆ ಬಂದು, ಕಿಟಕಿಯಿಂದ ಕೈ ಹಾಕಿ, ಬೀಗದ ಕೀಲಿ ತೆಗೆದುಕೊಂಡ ಶಬ್ದ ಬಂತು.
`ಕುಟ್ಟಪ್ಪ ಬಂದಿರಬೇಕು’ ಅಂದ್ಕೊಂಡೆ. ಆರು ಜನ ಹುಡುಗರು ಸೇರಿ ಮಾಡಿಕೊಂಡಿದ್ದ ಬಾಡಿಗೆ ಮನೆ.  ನನ್ನನ್ನು ಹೊರತಾಗಿಸಿ, ಎಲ್ಲರೂ ಕೆಲಸಕ್ಕೆ ಹೋಗುತ್ತಿದ್ದರು. ಯಾರಾದರೂ ಊರಿಗೆ ಹೋದವರು, ರಾತ್ರಿ ಬಸ್ಸಿಗೆ ಬಂದು, ಈ ಥರ ಕೀಲಿ ತೆಗೆದು ಒಳಗೆ ಬರುವುದು ವಾಡಿಕೆ. ಹಾಗಾಗಿ, ನಾನೇನೂ ಏಳುವ ಗೋಜಿಗೆ ಹೋಗಲಿಲ್ಲ.
ಕುಟ್ಟಪ್ಪ ಒಳಗೆ ಬಂದವನೇ ಕೊಡವ ಭಾಷೆಯಲ್ಲಿ ಏನೋ ಮಾತಾಡಲು ಶುರುಮಾಡಿದ. ಒಂದೆರೆಡು ನಿಮಿಷ ಬಿಟ್ಟು, ನೀನು ಇಲ್ಲಿ ಮಲಗಿಕೋ ಅಂತ ಹೇಳಿದ್ದು ಕೇಳಿಸಿತು. `ಯಾರನ್ನ ಕರ್ಕೊಂಡು ಬಂದಿದ್ದಾನೆ? ಅವನ ಜೊತೆ ಪಕ್ಕದ ರೂಮಲ್ಲಿ ಮಲಗೋಕೆ  ಹೇಳೋಕೆ ಬಿಟ್ಟು, ಹಾಲಲ್ಲಿ ಮಲಗೋಕೆ ಯಾಕೆ ಹೇಳ್ತಿದ್ದಾನೆ?’ ಅಂತ ಗೊತ್ತಾಗಲಿಲ್ಲ.
ಹೊರಗಡೆಯಿಂದ `ಓ…’ ಅಂತ ಯಾರೋ ಅಂದಿದ್ದು ಕೇಳಿಸ್ತು. `ಇದ್ಯಾರಪ್ಪಾ?’ ಅಂತ ಅನ್ಕೊಂಡ್ರೂ, ಸುಮ್ಮನೆ ಬಿದ್ದುಕೊಂಡಿದ್ದೆ.
ಬೆಳಗ್ಗೆ ಎದ್ದು ನೋಡಿದರೆ, ಮೂಲೆಯಲ್ಲಿ ಒಂದು ಬೆಡ್ ಶೀಟ್ ಹೊದ್ದುಕೊಂಡು, ಯಾರೋ ಒಬ್ಬ ಹುಡುಗ ಬಿದ್ದುಕೊಂಡಿದ್ದ. ಕುಟ್ಟಪ್ಪನ ಕಾಫೀ ತೋಟದಲ್ಲಿ ಕೆಲಸ ಮಾಡುವ ಆಳಿರಬೇಕು ಅನ್ಕೊಂಡೆ. ನಾನೆದ್ದ ಸ್ವಲ್ಪ ಹೊತ್ತಿನಲ್ಲಿ, ಹೇಮಂತ, ವೇದಮೂರ್ತಿ, ಜಯಂತ ಮತ್ತು ಗಣಪತಿ ಸಹ ಎದ್ದರು. ನಮ್ಮ ಮನೆ ಒಂಥರಾ ದರ್ಮ ಛತ್ರದ ಥರ ಇದ್ದಿದ್ದರಿಂದ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ.
ಸ್ವಲ್ಪ ಹೊತ್ತಿಗೆ ಆ ಹುಡುಗನೂ ಎದ್ದು ಕೂತು ಮಿಕಿ ಮಿಕಿ ನೋಡೋಕೆ ಶುರು ಮಾಡ್ದ. `ಏನೋ ಹೆಸರು?’ ಅಂತ ಕೇಳಿದ ತಕ್ಷಣ `ಅಣ್ಣು’ ಅಂದ. `ಯಾವೂರು?’ ಅಂತ ಕೇಳಿದಾಗ, `ಕುಟ್ಟ’ ಅಂದ. ಸರಿ, ನಾಗರಹೊಳೆ ಕಾಡಿಂದ ನೇರವಾಗಿ ಬಂದಿದ್ದಾನೆ ಅಂದ್ಕೊಂಡೆ. ಮುಂದೇನು ಕೇಳ್ಬೇಕು ಅಂತ ಗೊತ್ತಾಗಲಿಲ್ಲ. ಎಲ್ಲರ ಜೊತೆ ಅವನಿಗೂ ಟೀ ಕೊಟ್ಟು, ಸುಮ್ಮನಾದೆ.
ಕುಟ್ಟಪ್ಪ ಏಳುವಾಗ ಉಳಿದವರೆಲ್ಲ ಕೆಲಸಕ್ಕೆ ಹೋಗಿದ್ದರು. ಅಷ್ಟರವರೆಗೆ, ಅಣ್ಣು ಮೂಲೆಯಲ್ಲಿ ನಿಂತುಕೊಂಡು ಎಲ್ಲವನ್ನೂ ಕುತೂಹಲದಿಂದ ನೋಡುತ್ತಿದ್ದ. ಕುಟ್ಟಪ್ಪ ಏಳುವ ಹೊತ್ತಿಗೆ, ನಾನು ಆ ಹುಡುಗನಿಗೆ ಬ್ರೆಡ್ ಕೊಟ್ಟು ತಿನ್ನಲು ಹೇಳಿದ್ದೆ.
`ಇವನು ನಮ್ಮ ಅಕ್ಕನ ತೋಟದಲ್ಲಿ ಕೆಲಸಕ್ಕೆ ಇದ್ದ. ಇಲ್ಲಿ ಮನೆ ಕೆಲಸ ಮಾಡೋಕೆ ಇರಲಿ ಅಂತ ಕರ್ಕೊಂಡು ಬಂದೆ,’ ಅಂದ.
ನಾನೇನೂ ಮಾತಾಡಲಿಲ್ಲ. ಸಾಯಂಕಾಲ ಎಲ್ಲರೂ ಬರಲಿ ಅಂತ ಸುಮ್ಮನಾದೆ. ಯಾಕೋ ಈ ಹುಡುಗನ್ನ ಕೆಲಸಕ್ಕೆ ಇಟ್ಟುಕೊಳ್ಳಲು ಎಲ್ಲರೂ ಒಪ್ಪೋದಿಲ್ಲ ಅನ್ನಿಸಿತು. 13-14 ವರ್ಷದ ಆ ಹುಡುಗ ಯಾವಾಗ ಸ್ನಾನ ಮಾಡಿದ್ದ ಅಥವಾ ಯಾವಾಗ ಬಟ್ಟೆ ಒಗೆದಿದ್ದ ಅಂತ ಖಂಡಿತವಾಗಿ ಹೇಳೋಕೆ ಆಗ್ತಿರಲಿಲ್ಲ. ಮನೆಯಲ್ಲಿದ್ದವರೆಲ್ಲ `ಕ್ಲೀನಪ್ಪಗಳು’. ಇವನನ್ನು ಇಟ್ಕೋತ್ತಾರಾ? ಅಂತ ಅನ್ನಿಸಿತ್ತು.
ಆದರೆ, ಬಂದ ತಕ್ಷಣವೇ ವೇದಮೂರ್ತಿ ಅಣ್ಣುವನ್ನು ಒಪ್ಪಿಕೊಂಡೇ ಬಿಟ್ಟ. ಮೊದಲ ಕೆಲಸ ಮಾಡಿದ್ದು ಅಂದ್ರೆ, ಅವನಿಗೆ ಸೋಪು ತಂದುಕೊಟ್ಟು ಸ್ನಾನ ಮಾಡಲು ಹೇಳಿದ್ದು. ಆಮೇಲೆ, ಅವನಿಗೆ ಬೇರೆ ಹಳೇ ಬಟ್ಟೆ ಕೊಟ್ಟು, ಅವನು ಹಾಕಿಕೊಂಡು ಬಂದಿದ್ದ ಬಟ್ಟೆಯನ್ನು ಒಗೆಯಲು ಹೇಳಿದ್ದು. ಸಾಯಂಕಾಲದೊಳಗೆ ಅಣ್ಣು ಸ್ವಚ್ಚವಾಗಿ ಕಾಣೋಕೆ ಶುರುವಾದ.
ಅವತ್ತಿನಿಂದ ಅಣ್ಣು ನಮ್ಮ ಮನೆಯ ಏಳನೇ ಸದಸ್ಯನಾಗೇ ಬಿಟ್ಟ. ಅಣ್ಣು ನಾಗರಹೊಳೆಯ ಪಕ್ಕದಲ್ಲಿರುವ ಕುಟ್ಟದಿಂದ ಬಂದ ಕಾಡು ಕುರುಬರ ಹುಡುಗ. ಅವನಿಗೆ ಕಾಡು ಕುರುಬರಿಗಿರುವ ಎಲ್ಲಾ ಗುಣಗಳೂ ಇದ್ದವು. ನಾವು ಏನು ಹೇಳಿದರೂ, ಅದು ಅವನಿಗೆ ಬೇರೆ ಥರಾನೇ ಅರ್ಥವಾಗಿ, ಅನರ್ಥಗಳಾಗುತ್ತಿದ್ದವು. ಈ ಬ್ರಹ್ಮಚಾರಿಗಳ ಸಂಸಾರಕ್ಕೆ ಅವನೊಂದು ಥರ ಮನರಂಜನೆಯ ಮೂಲವಾಗಿದ್ದ.
ಮೊದಲು, ಕನಕರಾಜನ ಅಂಗಡಿಗೆ ಹೋಗಿ, ಹಾಲು ತಂದು ಟೀ ಮಾಡುವುದನ್ನು ಕಲಿತ. ಆಮೇಲೆ, ನಿಧಾನವಾಗಿ ಅನ್ನ ಮತ್ತು ಸಾರು ಮಾಡಿ, ಎಲ್ಲರಿಗೂ ಮೊಟ್ಟೆ ಮಾಡಿಕೊಡುವುದನ್ನೂ ಕಲಿತ. ನಮಗೆ ಇಷ್ಟು ಕೆಲಸ ಸಾಕಾಗುತ್ತಿತ್ತು.
ಅಣ್ಣುವನ್ನು ತಿದ್ದೋ ಕೆಲಸ ವೇದಮೂರ್ತಿ ಮಾಡಿದ. ಎಲ್ಲರ ಹಳೇ ಬಟ್ಟೆಗಳನ್ನು ತೆಗೆದು ಅಣ್ಣುವಿಗೆ ಕೊಟ್ಟ. ಅವನಿಗೆ ದಿನಾ ಸ್ನಾನ ಮಾಡಬೇಕು ಅಂತ ತಾಕೀತು ಮಾಡಿದ. ಅವನ ಒಡೆದ ಕೈ, ಕಾಲುಗಳಿಗೆ ಹಚ್ಚಲು ವ್ಯಾಸೆಲಿನ್ ತಂದು ಕೊಟ್ಟ. ಒಂದೆರೆಡು ವಾರದಲ್ಲೇ ಅಣ್ಣು ಲಕ ಲಕ ಹೊಳೆಯಲಾರಂಭಿಸಿದ. ಅದರೆ, ಅವನ ಕನ್ನಡಕೊಳಗೆ, ಕೊಡವ ಭಾಷೆ ಮತ್ತು ಸ್ವಲ್ಪ ಮಲಯಾಳಂ ಎಲ್ಲಾ ಸೇರಿರುತ್ತಿತ್ತು. ಒಟ್ಟಾರೆ ನಮಗೆ ಅರ್ಥವಾಗುತ್ತಿತ್ತು.
ಸ್ವಲ್ಪ ದಿನಗಳಲ್ಲೇ ಅಣ್ಣು ನಮಗಿಂತ ಕ್ಲೀನ್ ಅನ್ನಿಸೋಕೆ ಶುರುವಾಯ್ತು. ದಿನಕ್ಕೆರೆಡು ಸಲ ಸ್ನಾನ ಮಾಡುತ್ತಿದ್ದ. ನೀಟಾಗಿ ವ್ಯಾಸೆಲಿನ್ ಹಚ್ಚಿಕೊಂಡು, ಮೂರು ಸಲ ಬಟ್ಟೆ ಬದಲಾಯಿಸುತ್ತಿದ್ದ. `ಯಾಕೋ?’ ಅಂತ ಕೇಳಿದರೆ, ಫಕ್ಕನೆ ಹಲ್ಲು ಬಿಟ್ಟು ನಗುತ್ತಿದ್ದ. ನಾವೂ ನಕ್ಕು ಸುಮ್ಮನಾಗುತ್ತಿದ್ದೆವು.
ನಮಗಷ್ಟೇ ಅಲ್ಲ. ಬೇಗನೆ, ನಮ್ಮ ಮನೆಗೆ ಬರುತ್ತಿದ್ದ ಎಲ್ಲರಿಗೂ ಅಣ್ಣು ಅಚ್ಚುಮೆಚ್ಚಾಗಿದ್ದ. ವೇದಮೂರ್ತಿ ಯುರೇಕಾ ಫೋರ್ಬ್ಸ್ ನಲ್ಲಿ ಕೆಲಸ ಮಾಡುತ್ತಿದ್ದದರಿಂದ, ಅವನ ಸಹೋದ್ಯೋಗಿಗಳು ಮನೆಗೆ ಬರುತ್ತಿದ್ದರು. ಬಂದವರೇ, ನಾನು ಇರುವುದನ್ನು ಲೆಖ್ಖಕ್ಕೇ ತೆಗೆದುಕೊಳ್ಳದಂತೆ, `ಅಣ್ಣೂ, ಟೀ ಮಾಡ್ತೀಯೇನೋ?’ ಅಂತ ಕೇಳ್ತಿದ್ರು. ತಕ್ಷಣವೇ ಅಣ್ಣು ಪುಸ್ತಕ ತೆಗೆದುಕೊಂಡು ಕನಕರಾಜನ ಅಂಗಡಿಗೆ ಹೊರಡುತ್ತಿದ್ದ. ಆಮೇಲೇ ನಮ್ಮ ಜೊತೆ ಮಾತು.
ಅಣ್ಣು ಟೀ ಮಾಡಲು ಶುರುಮಾಡಿದ ಮೇಲೆ ಇನ್ಯಾರಾದರೂ ಬಂದರೆ, ಅಲ್ಲಿಂದಲೇ ಕೂಗಿ ಹೇಳುತ್ತಿದ್ದೆವು: `ಆಣ್ಣು, ಇನ್ನೂ ಇಬ್ಬರು ಬಂದಿದ್ದಾರೆ,’ ಅಂತ.
`ಸರಿ, ಉದ್ದ ಮಾಡ್ತೀನಿ,’ ಅಂತ ಅವನೂ ಕೂಗ್ತಿದ್ದ. ಉದ್ದ ಮಾಡ್ತೀನಿ ಅಂದರೆ, ಮಾಡುತ್ತಿದ್ದ ಟೀ ಗೆ ಇನ್ನೂ ಸ್ವಲ್ಪ ನೀರು ಹಾಕುವುದು. ಹೀಗಾಗಿ, ಅರ್ಧ ಲೀಟರ್ ಹಾಲಿನಿಂದ, ಎರಡು ಜನರಿಂದ ಹಿಡಿದು, ಹತ್ತು-ಹದಿನೈದು ಜನರವರೆಗೂ ಟೀ ಸರಬರಾಜಾಗುತ್ತಿತ್ತು. ಕೆಲವು ಸಲವಂತೂ, ನೀರಿಗೆ ಟೀ ಪುಡಿ ಮತ್ತು ಸಕ್ಕರೆ ಹಾಕಿದ್ದಂತೆ ಅನ್ನಿಸ್ತಿತ್ತು. `ಯಾಕೋ, ಇನ್ನೂ ಸ್ವಲ್ಪ ಹಾಲು ತರೋದಲ್ವೇನೋ?’ ಅಂತ ಕೇಳಿದರೆ, `ಚೆನ್ನಾಗೇ ಇದ್ಯಲ್ಲ ಅಣ್ಣ,’ ಅಂತ ನಮ್ಮ ಬಾಯಿ ಮುಚ್ಚಿಸುತ್ತಿದ್ದ.
ಅಣ್ಣುವಿನ ಈ ಫಾರ್ಮುಲಾ ಕೆಲವು ಸಲ ಸಾರಿಗೂ ಉಪಯೋಗಿಸುತ್ತಿದ್ದ. ಯಾಕೇಂದ್ರೆ, ಏಳು ಜನಕ್ಕೆ ಸಾರು ಮಾಡಲು ಎಷ್ಟು ಬೇಳೆ ಹಾಕಬೇಕು ಅಂತ ವೇದಮೂರ್ತಿ ಹೇಳಿಕೊಟ್ಟಿದ್ದ. ಜಾಸ್ತಿ ಜನ ಆದಾಗ, ಆಣ್ಣು ಸಾರನ್ನು ಉದ್ದಮಾಡಿ, ಅವನೇ ಹೇಳಿದಂತೆ, `ತಿಳಿ ಸಾಂಬಾರ್’ ಮಾಡಿ ಬಡಿಸುತ್ತಿದ್ದ.
ಅಣ್ಣು ಕಲಿತದ್ದು ಒಂದರೆಡಲ್ಲ. ಮನೆಯಲ್ಲಿದ್ದ ಮ್ಯೂಸಿಕ್ ಸೆಟ್ ಹಾಕೋದು ಕಲಿತ. ಹಾಗೇನೆ, ಅದರ ರೇಡಿಯೋದಲ್ಲಿ, ಪಕ್ಕದ ಮನೆ ಹುಡುಗಿ ಕಾರ್ಡ್ ಲೆಸ್ ಫೋನ್ ಉಪಯೋಗಿಸಿ ಮಾತಾಡುವಾಗ, ಅದು ಶಾರ್ಟ್ ವೇವ್ ನ ಒಂದು ವೇವ್ ಲೆಂತ್ ನಲ್ಲಿ ಸಿಗುತ್ತೆ ಅಂತಾನೂ ಕಂಡು ಹಿಡಿದ. ಬೈಕ್ ಗಳನ್ನು ನೋಡಿದರೆ ರೋಮಾಂಚನಗೊಳ್ಳುತ್ತಿದ್ದ. ಮನೆಯಲ್ಲಿ ಆರು ಬೈಕ್ ಗಳು ಇದ್ದವು. ಅದರ ಜೊತೆ ನಮ್ಮ ಸ್ನೇಹಿತರ ಬೈಕ್ ಗಳೂ ಬರುತ್ತಿದ್ದವು. ಪ್ರತೀ ಬೈಕ್ ಗಳನ್ನು ಒಂದು ಸುತ್ತು ಬಂದು, ಏನೋ ಪರೀಕ್ಷಿಸುವಂತೆ ನೋಡುತ್ತಿದ್ದ.
ಒಂದು ಸಲ, ವೇದಮೂರ್ತಿಯ ಹತ್ತಿರ ತಾನೂ ಬೈಕ್ ಓಡಿಸೋಕೆ ಕಲಿಸಬೇಕು ಅಂತ ಕೇಳಿದ್ದಾನೆ. ವೇದಮೂರ್ತಿ ಎಲ್ಲವನ್ನೂ ಹೇಳಿಕೊಟ್ಟು, `ಸರಿ, ಓಡಿಸು’ ಅಂತ ಕೊಟ್ಟಿದ್ದಾನೆ. ವೇದಮೂರ್ತಿ ಕಣ್ಣು ಮುಚ್ಚಿ ಬಿಡುವುದರೊಳಗೆ, ಕ್ಲಚ್ ಬಿಟ್ಟು, ಆಕ್ಸಲರೇಟರ್ ಕೊಟ್ಟ ರಭಸಕ್ಕೆ ಬೈಕ್ ನೇರವಾಗಿ ಮನೆಯ ಹತ್ತಿರವಿದ್ದ ಕಾರ್ಪೋರೇಶನ್ ತೊಟ್ಟಿಯ ಪಕ್ಕ ಬಿದ್ದಿತ್ತಂತೆ. ಅಣ್ಣು ತೊಟ್ಟಿಯೊಳಗಿಂದ ಎದ್ದು ಬಂದನಂತೆ. ಸಾಯಂಕಾಲ ಇದನ್ನು ವೇದಮೂರ್ತಿಯೇ ನಮಗೆ ಹೇಳಿದಾಗ, ನಾವೆಲ್ಲ ಬಿದ್ದೂ ಬಿದ್ದು ನಕ್ಕಿದ್ದೆವು.
ಇದರ ಜೊತೆ ಅಣ್ಣು ಮತ್ತು ವೇದಮೂರ್ತಿಯ ಇನ್ನೊಂದು ಒಪ್ಪಂದವಿತ್ತು. ಪ್ರತೀ ವಾರ, ಅಣ್ಣುವನ್ನು ಒಂದು ಸಿನಿಮಾಕ್ಕೆ ಕರ್ಕೊಂಡು ಹೋಗಬೇಕಿತ್ತು. ವೇದಮೂರ್ತಿಯೇ ಅವನನ್ನು ನಂದಾ ಥೀಯೇಟರ್ ಗೆ ಕರ್ಕೊಂಡು ಹೋಗಿ, ಒಂದು ಟಿಕೆಟ್ ಕೊಡಿಸಿ, ಇಂಟರ್ ವೆಲ್ ನಲ್ಲಿ ಏನಾದ್ರೂ ತಿನ್ನೋಕೆ ಸ್ವಲ್ಪ ದುಡ್ಡು ಕೊಟ್ಟು ಬರುತ್ತಿದ್ದ. ಸಿನೆಮಾ ನೋಡಿ ಬಂದ ಎರಡು ದಿನ ಅಣ್ಣು ಎದೆ ಉಬ್ಬಿಸಿಕೊಂಡು ನೆಡೆಯುತ್ತಿದ್ದ. ಒಂದು ಸಲ ಸಿನೆಮಾದಿಂದ ಬಂದ ಅಣ್ಣುವನ್ನು ವೇದಮೂರ್ತಿ ಕೇಳೇ ಬಿಟ್ಟ: `ನೀನು ನೋಡಿದ ಸಿನಿಮಾ ಕಥೆ ಹೇಳೋ’ ಅಂತ.
ಒಂದೆರೆಡು ನಿಮಿಷ ಹೇಗೆ ಶುರುಮಾಡಬೇಕು ಅಂತ ತಲೆ ಕೆರ್ಕೊಂಡವನೇ ಹೇಳ್ದ: `ಅವನು ಬಂದು ಹೊಡೆದ… ಇವನು ಬಿದ್ದ’ ಅಂತ.
`ಯಾರು ಹೊಡೆದ್ರೋ? ಯಾರು ಬಿದ್ದಿದ್ದು?’ ಅಂತ ನಾನು ಕೇಳ್ದೆ.
`ಅದೇ, ಪರಬಕರ್ ಹೊಡೆದ, ಇನ್ನೊಬ್ಬ ಬಿದ್ದ,’ ಅಂದ.
ವೇದಮೂರ್ತಿ ಬಿದ್ದು ಬಿದ್ದು ನಗೋಕೆ ಶುರು ಮಾಡ್ದ. `ಏನಾಯ್ತೋ?’ ಅಂತ ಕೇಳಿದ್ರೆ, `ನಾನು ಕರ್ಕೊಂಡು ಹೋಗಿದ್ದು ವಿಷ್ಣುವರ್ಧನ್ ಸಿನೆಮಾಕ್ಕೆ,’ ಅಂದ.
ನಾವ್ಯಾರೂ ಇಲ್ಲದ ಹೊತ್ತಿನಲ್ಲಿ ಅಣ್ಣು ಮನೆ ಎದುರಿಗಿದ್ದ ಮರ ಹತ್ತಿ ಕೂತಿರುತ್ತಿದ್ದ. ನಾವೆಲ್ಲ ಬೈಕ್ ತೊಳೆಯಲು ಹೊರಟರೆ, ನೀರು ಸಪ್ಲೈ ಮಾಡೋದ್ರಿಂದ ಹಿಡಿದು, ಬೈಕ್ ಒರೆಸೋವರೆಗೂ ಕೈ ಹಾಕುತ್ತಿದ್ದ. ವೇದಮೂರ್ತಿ ಅವನಿಗೆ ಅಕ್ಷರಾಭ್ಯಾಸ ಸಹ ಶುರು ಮಾಡಿದ್ದ. ಅಂತೂ, ಅದೊಂದು ಜೀವ ನಮ್ಮ ಜೊತೆಯಲ್ಲಿ ಒಂದು ವರ್ಷಕ್ಕಿಂತ ಜಾಸ್ತಿ ಇತ್ತು.
ಒಂದು ದಿನ ಎಲ್ಲೋ ಹೊರಗೆ ಹೋಗಿ ಬಂದಾಗ, ಕುಟ್ಟಪ್ಪ ಮುಖ ದಪ್ಪ ಮಾಡ್ಕೊಂಡು ಗೇಟ್ ಹತ್ತಿರ ನಿಂತಿದ್ದ. `ಏನಾಯ್ತೋ?’ ಅಂತ ಕೇಳ್ತಾನೇ ಒಳಗೆ ಹೋಗಿ ನೋಡಿದರೆ, ಅಣ್ಣುವಿನ ಮೈಯಲ್ಲಿ ಬಾಸುಂಡೆ ಬಂದಿತ್ತು. ಅವನು ತಲೆ ತಗ್ಗಿಸಿಕೊಂಡು, ಅಪರಾಧಿಯ ಥರ ನಿಂತಿದ್ದ.
`ನೋಡೋ… ಇಷ್ಟೆಲ್ಲ ಸಲಿಗೆ ಕೊಟ್ಟಿದ್ದೀರಲ್ಲ ನೀವೆಲ್ಲ. ದಾರಿಲಿ ಹೋಗೋ ಹುಡುಗಿಯರನ್ನ ಚುಡಾಯಿಸೋಕೆ ಶುರು ಮಾಡಿದ್ದಾನಂತೆ,’ ಅಂದ ಕುಟ್ಟಪ್ಪ.
ನಾವು ನಾಲ್ಕೈದು ವರ್ಷಗಳಿಂದ ಬ್ರಹ್ಮಚಾರಿಗಳೇ ಆ ಮನೆಯಲ್ಲಿದ್ದರೂ, ಒಂದೇ ಒಂದು ದಿನ ನಮ್ಮ ಮೇಲೆ ಯಾರೂ ಬೆಟ್ಟುಮಾಡಿ ತೋರಿಸದಂತೆ ಎಚ್ಚರ ವಹಿಸಿದ್ದೆವು. ಪ್ರತೀ ಶನಿವಾರ ನಮ್ಮ ಮನೆಯಲ್ಲಿ ಪಾರ್ಟಿ ನೆಡೆಯುತ್ತಿದ್ದರೂ, ಅಕ್ಕ ಪಕ್ಕದವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದೆವು. ಕೆಲವೊಮ್ಮೆ ಹತ್ತು-ಹನ್ನೆರೆಡು ಜನ ಇರುತ್ತಿದ್ದದ್ದೂ ಇತ್ತು.
ಅಣ್ಣುವಿನ ಮುಖವನ್ನೇ ನೋಡಿದೆ. ಸಣ್ಣದಾಗಿ ಮೀಸೆ ಬರಲು ಶುರುವಾಗಿತ್ತು. ನಾನೇನೂ ಮಾತಾಡಲಿಲ್ಲ. ರಾತ್ರಿ ಬಂದ ವೇದಮೂರ್ತಿಗೆ ವಿಷಯ ಗೊತ್ತಾಗಿ ತುಂಬಾ ನೊಂದುಕೊಂಡ. ಹದಿನೈದೇ ದಿನದಲ್ಲಿ ಕುಟ್ಟಪ್ಪ ಅಣ್ಣುವನ್ನು ಊರಿಗೆ ವಾಪಾಸ್ ಕಳುಹಿಸಿದ.
ಅಣ್ಣು ಊರಿಗೆ ಹೋಗಿದ್ದರಿಂದ ನಮಗೇನೂ ತೊಂದರೆಯಾಗಲಿಲ್ಲ. ನಮ್ಮ ನಮ್ಮ ಕೆಲಸ ಮಾಡಿಕೊಂಡು ಅಭ್ಯಾಸವಿದ್ದ ನಾವು, ಆರಾಮವಾಗೇ ಇದ್ದೆವು. ಅಣ್ಣು ಮಾತ್ರ ಕುಟ್ಟಪ್ಪನ ಅಕ್ಕನ ಮನೆಯಲ್ಲಿ ತೋಟದ ಕೆಲಸಕ್ಕೆ ಹೋಗಲು ಶುರುಮಾಡಿದ ಅಂತ ಗೊತ್ತಾಯ್ತು.
ಇನ್ನಾರು ತಿಂಗಳಲ್ಲಿ ಕುಟ್ಟಪ್ಪ ಮೈಸೂರಿನಲ್ಲಿ ಕೆಲಸಕ್ಕೆ ಸೇರಿಕೊಂಡ. ಅವನ ಮದುವೆಯೂ ಗೊತ್ತಾಯ್ತು.
ಕುಟ್ಟಪ್ಪನ ಮದುವೆಗೆ ನಾವೆಲ್ಲರೂ ಮಡಿಕೇರಿಗೆ ಹೊದೆವು. ಅಲ್ಲಿ ಒಂದಿಪ್ಪತ್ತು ಜನರ ದೊಡ್ಡ ಗುಂಪೇ ಇತ್ತು. ನಾವೆಲ್ಲ ಮಡಿಕೇರಿ ತಿರುಗಿಕೊಂಡು, ಸಾಯಂಕಾಲದ ಹೊತ್ತಿಗೆ ಕೊಡವ ಸಮಾಜದ ಹತ್ತಿರ ಬಂದೆವು. ಆಚೀಚೆ ಓಡಾಡುತ್ತಾ, ಸಿಗರೇಟ್ ಸೇದೋಕೆ ಅಂತ ಹೊರಗಡೆ ಬಂದೆ. ಯಾರೋ ನನ್ನ ಕಡೆ ನೆಡೆದುಕೊಂಡು ಬಂದಂತಾಯಿತು. ತಿರುಗಿ ನೋಡುವುದರಲ್ಲಿ, `ಅಣ್ಣಾ’ ಅಂತ ತಬ್ಬಿಕೊಂಡ ಅಣ್ಣು.
ಗಪ್ಪಂತ ಹೊಡೆಯಿತು ಸರಾಯಿ ವಾಸನೆ. ಅಣ್ಣು ತೊದಲುತ್ತಾ ಏನೇನೋ ಮಾತಾಡ್ತಾನೆ ಇದ್ದ. ನನಗೆ ವಾಂತಿ ಬರುವಂತಾಗಿತ್ತು. ಹಾಗೂ ಹೀಗೂ ತಪ್ಪಿಸಿಕೊಂಡು ಬಂದೆ. ಒಳಗೆ ಬಂದವನೇ ವೇದಮೂರ್ತಿಗೆ ಅಣ್ಣುವಿನ ವಿಷಯ ಹೇಳಿದೆ.
ಒಂದರ್ಧ ಘಂಟೆ ಕಳೆದಿರಬಹುದು. ವಾಲಗದ ಸದ್ದು ನಿಂತಾಗ ಹೊರಗಡೆ ಯಾರೋ ಕೂಗಾಡುವುದು ಕೇಳಿಸಿತು. ಹಾಗೇ ಬಾಗಿಲಿಂದ ಹೊರಗಡೆ ನೋಡಿದಾಗ, ಅಣ್ಣು ಕೂಗಾಡುತ್ತಿದ್ದ. ಅವನ ಜೊತೆ ಇದ್ದ ಇನ್ನಿಬ್ಬರು ಅವನಿಗೆ ತಲೆ ಮೇಲೆ ಹೊಡೆದು, ಎಳೆದುಕೊಂಡು ಹೋಗುತ್ತಿದ್ದರು.
ಒಂದೇ ವರ್ಷದಲ್ಲಿ ಅಣ್ಣು ಪ್ರಪಂಚ ಸುತ್ತಿ ಬಂದಿದ್ದಾನೆ ಅನ್ನಿಸಿತು. ಅವನು ಕೆಟ್ಟು ಪಟ್ಟಣ ಸೇರಿದನೋ ಅಥವಾ ಪಟ್ಟಣದಿಂದ ಬಂದು ಕೆಟ್ಟನೋ ಅಂತ ಗೊತ್ತಾಗಲಿಲ್ಲ.
ಎಷ್ಟೇ ನೆನಪಿಸಿಕೊಂಡರೂ, ಅವನು ನಮ್ಮ ಮನೆಯಲ್ಲಿದ್ದಾಗಿನ ಮುಗ್ದ ಮುಖ ನೆನಪಿಗೆ ಬರಲೇ ಇಲ್ಲ……


ಮಾಕೋನಹಳ್ಳಿ ವಿನಯ್ ಮಾಧವ  



ಶನಿವಾರ, ಆಗಸ್ಟ್ 11, 2012

ಸೆಕ್ಯುರಿಟಿ


ರೈಫಲ್ ತುದಿಯಲ್ಲಿ ನಿಂತಾಗ ನನಗೆ ನಗು ತಡೆಯಲಾಗುತ್ತಿರಲಿಲ್ಲ

ಸವಾಯ್ ಮಾಧೋಪುರ್ ನಿಂದ ರೈಲು ಹತ್ತಿದಾಗ ಬೆಳಗ್ಗಿನ ಜಾವ ಒಂದು ಘಂಟೆಯಾಗಿತ್ತು. ಮೂರು ದಿನಗಳ ಕಾಲ, ರಾಜಸ್ಥಾನದ ರಣಥಂಬೋರಿನ ಕಾಡುಗಳಲ್ಲಿ ಸುತ್ತಾಡಿ, ವಾಪಾಸ್ ದೆಹಲಿಗೆ ಹೊರಟಿದ್ದೆ.
ರೈಲು ಒಂದು ಘಂಟೆ ತಡವಾಗಿ ಬಂದಿತ್ತು. ದೆಹಲಿಯಲ್ಲಿ ಇಳಿದ ತಕ್ಷಣ ಏರ್ ಪೋರ್ಟ್ ಗೆ ಹೋಗಿ, ಅಲ್ಲಿಂದ ಬೆಂಗಳೂರಿಗೆ ಹೊರಡಬೇಕಿತ್ತು. ಅದಕ್ಕಿದ್ದದ್ದು ಬರೀ ಒಂದೂವರೆ ಘಂಟೆ ಸಮಯ. ಈ ರೈಲು ಬೇರೆ ತಡವಾಗಿ ಬಂದಿದ್ದರಿಂದ, ಯಾಕೋ ಎಡವಟ್ಟಾಗಬಹುದು ಅನ್ನಿಸೋಕೆ ಶುರುವಾಯ್ತು.
ಈಗಿದ್ದ ಪ್ರಶ್ನೆ ಎಂದರೆ, ರೈಲಲ್ಲಿ ನಿದ್ರೆ ಮಾಡುವುದೋ, ಅಥವಾ ಬೆಳಗ್ಗೆ ವಿಮಾನದಲ್ಲಿ ನಿದ್ರೆ ಮಾಡುವುದೋ ಅನ್ನುವುದು. ಇನ್ನೂ ನಾಲ್ಕೈದು ಘಂಟೆ ಮಲಗದೇ ಏನು ಮಾಡುವುದು ಅನ್ನೋದೂ ದೊಡ್ಡ ಪ್ರಶ್ನೆಯಾಗಿತ್ತು. ನನ್ನ ಕಂಪಾರ್ಟ್ ಮೆಂಟಿನಲ್ಲಿ ಒಬ್ಬನೇ ಇದ್ದಿದ್ದರಿಂದ, ನನಗೆ ಮಾಡಲೇನೂ ಕೆಲಸವಿರಲಿಲ್ಲ. ಸುಮ್ಮನೇ ಹಾಗೇ ಹೊರಳಿಕೊಂಡೆ.
ಸಾಧಾರಣ ಮೂರು ಘಂಟೆಯಾಗಿರಬಹುದು. ಯಾರೋ ನನ್ನನ್ನು ತಿವಿದ ಹಾಗಾಯ್ತು. ತಿರುಗಿ ನೋಡಿದರೆ, ಖಾಕಿ ಬಟ್ಟೆಯಲ್ಲಿದ್ದ ಇಬ್ಬರು, ಕೈಯಲ್ಲಿ ರೈಫಲ್ ಹಿಡಿದುಕೊಂಡು ನಿಂತಿದ್ದರು. ನೋಡಿದ ತಕ್ಷಣ ಅನ್ನಿಸಿತು: ರೈಲ್ವೇ ಪೋಲಿಸ್ ಇರಬೇಕು ಅಂತ.
ಒಬ್ಬ ನನ್ನತ್ತಲೇ ರೈಫಲ್ ಗುರಿ ಇಟ್ಟರೆ, ಇನ್ನೊಬ್ಬ ನನ್ನ ಜೊತೆ ಮಾತಾಡಲು ಆರಂಭಿಸಿದ. ಯಾರು? ಎಲ್ಲಿಂದ ಎಲ್ಲಿಗೆ ಪ್ರಯಾಣ? ಅಂತ ಹಿಂದಿಯಲ್ಲಿ ಪ್ರಶ್ನೆ ಹಾಕಲು ಆರಂಭಿಸಿದ. ನನ್ನ ಕ್ಯಾಮೆರಾ ಬ್ಯಾಗ್ ನೋಡಿ, ಅದರಲ್ಲಿ ಏನಿದೆ? ಅಂತಾನೂ ಕೇಳಿದ.
ಪೋಲಿಸರ ಜೊತೆ ಸಾಕಷ್ಟು ಪಳಗಿದ ನನಗೆ ಏನೂ ಅನ್ನಿಸಲಿಲ್ಲ. ನಾನು ಬೆಂಗಳೂರಿನ ಪತ್ರಕರ್ತ ಎಂದೂ, ರಣಥಂಬೋರಿಗೆ ಹೋಗಿ, ದೆಹಲಿಗೆ ಹಿಂದುರುಗುತ್ತಿದ್ದೇನೆ ಅಂತ ನಗುತ್ತಲೇ ಹಿಂದಿಯಲ್ಲಿ ಉತ್ತರಿಸಿದೆ. ಅವರು ನನ್ನ ಕ್ಯಾಮೆರಾ ಬ್ಯಾಗ್ ತೆಗೆದು ತೋರಿಸಲು ಹೇಳಿದರು
ಒಂದೊಂದೇ ಕ್ಯಾಮೆರಾ ಮತ್ತು ಲೆನ್ಸ್ ಗಳನ್ನು ತೆಗೆದು ತೋರಿಸಿದೆ. ಪತ್ರಕರ್ತ ಅಂದರೆ ಏನು ಮಾಡ್ತೀರಿ ಅಂತ ಒಬ್ಬ ಕೇಳಿದ. ನಾನು ನಗುತ್ತಲೇ ಸಾಧಾರಣವಾಗಿ ಕ್ರೈಂ ರಿಪೋರ್ಟರ್ ಗಳು ಮಾಡುವ ಕೆಲಸಗಳನ್ನು ವಿವರಿಸುತ್ತಿದ್ದೆ. ರೈಲ್ವೇ ಅಪಘಾತ ಅಥವಾ ಅಲ್ಲೇನಾದರೂ ಅಪರಾಧಗಳು ಆದರೆ, ರೈಲ್ವೇ ಪೋಲಿಸರ ಹಿರಿಯ ಅಧಿಕಾರಿಗಳನ್ನೂ ಭೇಟಿಯಾಗ್ತೀನಿ ಅಂತ ಹೇಳಿದೆ.
ರೈಫಲ್ ನನ್ನತ್ತಲೇ ಗುರಿ ಮಾಡಿ ಇಟ್ಟುಕೊಂಡವನು ತಕ್ಷಣ ಕೇಳಿದ: `ನಿನ್ನದೇನಾದ್ರೂ ಐಡೆಂಟಿಟಿ ಕಾರ್ಡ್ ಇದ್ದರೆ ತೋರಿಸು,’ ಅಂತ.
ನಗುತ್ತಲೇ ನನಗೆ ವಾರ್ತಾ ಇಲಾಖೆಯವರು ಕೊಟ್ಟಿದ್ದ ಗುರುತು ಚೀಟಿಯನ್ನು ಅವನ ಕೈಗೆ ಕೊಟ್ಟೆ. ಅದನ್ನು ನೋಡಿದ ತಕ್ಷಣವೇ, ಇನ್ನೇನಾದರೂ ಗುರುತಿನ ಚೀಟಿ ಇದೆಯಾ? ಅಂತ ಕೇಳಿದ. ನನ್ನ ಆಫೀಸಿನ ಗುರುತಿಚ ಚೀಟಿ ಮತ್ತು ಪ್ರೆಸ್ ಕ್ಲಬ್ ಗುರುತಿನ ಚೀಟಿಗಳನ್ನೂ ಅವನ ಕೈಯಲ್ಲಿ ಇಟ್ಟೆ.
ಅದನ್ನು ವಾಪಾಸ್ ನನಗೆ ಕೊಡುತ್ತಾ ಹೇಳಿದ: `ನೋಡಿ, ದೊಡ್ಡ ಆಫೀಸರ್ ಗಳು ಗೊತ್ತು ಅಂತ ಹೇಳಿದ್ರೆ, ನಾವು ನಮ್ಮ ಕೆಲಸ ಮಾಡೋದು ನಿಲ್ಲಿಸೋಕೆ ಆಗೋಲ್ಲ,’ ಅಂದ.
ನನಗೆ ಇನ್ನೂ ನಗು ಬಂತು. `ನಾನೇನು ತೋರಿಸೋಲ್ಲ ಅಂತ ಹೇಳಿಲ್ಲವಲ್ಲ? ನಿಮ್ಮ ಕೆಲಸ ನೀವು ಮಾಡಿದರೆ ನನಗೇನೂ ಬೇಜಾರಿಲ್ಲ,’ ಅಂದೆ.
`ನೀವು ಬೇಜಾರು ಮಾಡ್ಕೊಂಡ್ರೂ ನಾವೇನೂ ಮಾಡೋಕ್ಕಾಗೋಲ್ಲ. ದೊಡ್ಡ ಆಫೀಸರ ಹೆಸರು ಹೇಳಿದ ತಕ್ಷಣ ನಮ್ಮ ಕೆಲಸ ಮಾಡದಿದ್ದರೆ, ಭದ್ರತೆಗೆ ತೊಂದರೆ ಆಗುತ್ತೆ,’ ಅಂತ ಜೋರಾಗಿ ಹೇಳಿದ.
ನಾನೊಂದು ಕ್ಷಣ ಪೆಚ್ಚಾದೆ. ಏನಾದ್ರೂ ತಪ್ಪು ಮಾತಾಡಿದೆನಾ ಅಂತ ಯೋಚಿಸಿದೆ. ನಾನು ನಕ್ಕಷ್ಟೂ ಅವನಿಗೆ ಪಿತ್ತ ನೆತ್ತಿಗೇರುತ್ತಿದೆ ಅಂತ ಅನ್ನಿಸ್ತು. ಗಂಭೀರವಾಗಿ ಕೇಳಿದೆ: `ಇನ್ನೇನಾದ್ರೂ ತೋರಿಸ್ಬೇಕಾ?’ ಅಂತ.
ಅವನ ಪಕ್ಕದಲ್ಲಿದ್ದವನಿಗೆ ನಮ್ಮ ಸಂಭಾಷಣೆ ಎತ್ತ ಸಾಗುತ್ತಿದೆ ಅಂತ ಗೊತ್ತಾಯ್ತು ಅಂತ ಕಾಣುತ್ತೆ. ಅವನ ಹೆಗಲಿಗೆ ಕೈ ಹಾಕಿದವನೇ, ಪಕ್ಕದ ಕಂಪಾರ್ಟ್ ಮೆಂಟಿಗೆ ಕರ್ಕೊಂಡು ಹೋದ. ಹೋಗುತ್ತ ಹಿಂದಕ್ಕೆ ತಿರುಗಿ, ಮುಗುಳ್ನಗುತ್ತಾ ಹೇಳಿದ: `ಅಚ್ಚಾ ಸಾಬ್, ಆಪ್ ಸೋ ಜಾಯಿಯೇ’ ಅಂತ.
ಈಗ ನಾನು ಗೊಂದಲದಲ್ಲಿ ಬಿದ್ದೆ. ನಗಬೇಕೋ ಬೇಡವೋ ಅಂತ. ಸರಿ, ಸುಮ್ಮನೆ ತಲೆ ಅಲ್ಲಾಡಿಸಿದೆ.
ಇದೆಲ್ಲ ಆಗಿ ಎರಡು ವರ್ಷಗಳೇ ಕಳೆದಿರಬೇಕು. ಒಂದು ದಿನ ನಮ್ಮ ಬ್ಯುರೋ ಛೀಫ್ ಮಟ್ಟೂ ಕರೆದವರೇ, ಕುದುರೇಮುಖ ಕಬ್ಬಿಣ ಅದಿರು ಕಂಪನಿಯವರು ಪತ್ರಕರ್ತರನ್ನು ಕುದುರೇಮುಖಕ್ಕೆ ಕರೆದುಕೊಂಡು ಹೋಗ್ತಾರೆ ಅಂದ್ರು. ನಾನೇನೂ ಮಾತಾಡಲಿಲ್ಲ. ಐದು ವರ್ಷದಿಂದ ಕುದುರೇಮುಖದಲ್ಲಿನ ಗಣಿಗಾರಿಕೆ ವಿರುದ್ದವಾಗಿ ಬರೆಯುತ್ತಿದ್ದ ನನಗೆ ಅಲ್ಲಿ ಹೋಗಿ ನೋಡೋಕೆ ಏನೂ ಇರಲಿಲ್ಲ. ಚಿಕ್ಕಂದಿನಿಂದ ನೋಡಿದ ಜಾಗ ಬೇರೆ. ಈಗ ಸುಪ್ರೀಂ ಕೋರ್ಟ್ ಕುದುರೇಮುಖದಲ್ಲಿ ಗಣಿಗಾರಿಕೆಯನ್ನು ನಿಲ್ಲಿಸಬೇಕು ಅಂತ ತೀರ್ಪು ನೀಡಿತ್ತು. ತೀರ್ಪು ಬಂದ ಮೇಲೆ ಕುದುರೇಮುಖ ಕಂಪನಿಯ ಅಧಿಕಾರಿಗಳು ನನಗೆ ಮರ್ಯಾದೆ ಕೊಟ್ಟು ಮಾತಾಡಲು ಶುರು ಮಾಡಿದ್ದರು.
ಮಟ್ಟೂನೆ ಮತ್ತೆ ಮುಂದುವರೆಸಿದರು. `ನೀನೇ ಹೋಗ್ಬೇಕಂತೆ. ಎಡಿಟರ್ ಸಹ ಹೇಳಿದ್ದಾರೆ,’ ಅಂದ್ರು. ಕಂಪನಿಯ ಅಧಿಕಾರಿಯೊಬ್ಬರು ಮಟ್ಟೂ ಎದುರೇ ಕೂತಿದ್ದರು.
`ಯಾವಾಗ ಹೊರಡೋದು?’ ಅಂತ ಕೇಳಿದೆ.
`ನಾಡಿದ್ದು ಮಧ್ಯಾಹ್ನ ಏರ್ ಪೋರ್ಟ್ ಗೆ ಬಂದುಬಿಡಿ. ಮಂಗಳೂರಿಗೆ ಹೋಗಿ, ಅಲ್ಲಿಂದ ಕಾರಿನಲ್ಲಿ ಕುದುರೇಮುಖಕ್ಕೆ ಹೋಗುವುದು,’ ಅಂತ ಅಧಿಕಾರಿ ಹೇಳಿದರು.
`ಅಲ್ರೀ, ಇಲ್ಲಿಂದಲೇ ಕುದುರೇಮುಖಕ್ಕೆ ಕಾರಿನಲ್ಲಿ ಹೋಗಬಹುದಲ್ಲ? ಎರಡೂ ಒಂದೇ ಆಗೋಲ್ವಾ?’ ಅಂತ ಕೇಳಿದೆ.
`ಬೇರೆ ರಿಪೋರ್ಟರ್ ಗಳೂ ಬರ್ತಾರೆ. ಅದಕ್ಕೆ….’ ಅಂತ ತಡವರಿಸಿದ.
`ಕಾರ್ಪರೇಟ್ ಕಲ್ಚರ್’ ಅಂತ ಗೊಣಗಿಕೊಂಡು ಹೋದೆ. ಎರಡು ದಿನ ಬಿಟ್ಟು ಮಧ್ಯಾಹ್ನ ಏರ್ ಪೋರ್ಟ್ ನಲ್ಲಿ ಹಾಜರಿದ್ದೆ. ಅಭ್ಯಾಸದಂತೆ ಕ್ಯಾಮೆರಾ ಬ್ಯಾಗ್ ಹೆಗಲಿಗೆ ಹಾಕಿಕೊಂಡಿದ್ದೆ. ಬೆಂಗಳೂರಿನಿಂದ ಐದು ಜನ ರಿಪೋರ್ಟರ್ ಗಳು ಹೋಗುವುದು ಅಂತ ಗೊತ್ತಾಯ್ತು. ಏನೂ ಮಾತಾಡದೆ, ಚೆಕ್ ಇನ್ ಮಾಡುವ ಕಡೆಗೆ ನೆಡೆದೆ.
ನನ್ನ ಬ್ಯಾಗ್ ಗಳನ್ನು ಚೆಕ್ ಮಾಡಡಲು ಹಾಕಿ, ನಾನೂ ಚೆಕ್ಕಿಂಗಿಗೆ ಹೋದೆ. ನನ್ನ ಬ್ಯಾಗ್ ಬಂದರೂ, ಕ್ಯಾಮೆರಾ ಬ್ಯಾಗ್ ಬಂದಿರಲಿಲ್ಲ. ಅದನ್ನೇ ಕಾಯುತ್ತಾ ನಿಂತಾಗ, ಅಲ್ಲಿನ ಸೆಕ್ಯುರಿಟಿ ಆಫಿಸರ್ ಬಂದು, ಹಸಿರು ಬಣ್ಣದ ಕ್ಯಾಮೆರಾ ಬ್ಯಾಗ್ ನಿಮ್ಮದಲ್ವಾ? ಅಂತ ಕೇಳಿದ.
ಹೌದು ಅಂದವನೇ, ಅವರ ಹಿಂದೆ ಹೋದೆ. ಅಲ್ಲಿ ನಿಂತಿದ್ದ ಹಿರಿಯ ಅಧಿಕಾರಿಯೊಬ್ಬರು `ಇದರಲ್ಲೇನಿದೆ?’ ಅಂತ ಕೇಳಿದರು.
`ಎರಡು ಕ್ಯಾಮೆರಾ, ಐದಾರು ಲೆನ್ಸ್ ಗಳು,’ ಅಂತ ಹೇಳಿದೆ.
`ತೆಗೆಯಿರಿ ನೋಡೋಣ,’ ಅಂದ್ರು. ತೆಗೆದು ತೋರಿಸಿದೆ. `ಇನ್ನೂ ಏನೋ ಇದೆ,’ ಅಂದ್ರು.
`ಇಲ್ಲ ಸರ್.ಇದು ಸಾದಾರಣ ನಾನು ಕಾಡಿಗೆ ತೆಗೆದುಕೊಂಡು ಹೋಗುವ ಬ್ಯಾಗ್. ಇದರಲ್ಲಿ ಇನ್ನೇನೂ ಇರೋದಿಲ್ಲ,’ ಅಂದೆ.
ಯಾಕೋ ಅವರು ತಲೆ ಅಲ್ಲಾಡಿಸಲು ಶುರು ಮಾಡಿದ್ರು. ನನಗೂ ಏನೋ ಅನುಮಾನ ಬಂದು ತುಂಬಾ ಯೋಚಿಸಿದೆ. ತಕ್ಷಣ ನೆನಪಾಯ್ತು…. ನಗುತ್ತಲೇ, ಬ್ಯಾಗಿನ ಬದಿಯಲ್ಲಿದ್ದ ಕೆಲವು ಕಂಪಾರ್ಟ್ ಮೆಂಟ್ ಗಳಲ್ಲಿ ಒಂದಕ್ಕೆ ಕೈ ಹಾಕಿ, ಒಂಬತ್ತು ಇಂಚಿನ ಚೂರಿಯೊಂದನ್ನು ಹೊರಗೆ ತೆಗೆದು ಅಧಿಕಾರಿಯ ಕೈಯಲ್ಲಿ ಕೊಟ್ಟೆ. ಯಾಕೋ ಬೆನ್ನಲ್ಲಿ ಏನೋ ತಾಗಿದ ಹಾಗಾಯ್ತು. ನೋಡಿದರೆ, ಇಬ್ಬರು ಸೆಕ್ಯುರಿಟಿಯವರು ತಮ್ಮ ರೈಫಲ್ ಗಳನ್ನು ನನ್ನ ಬೆನ್ನಿಗೆ ಹಿಡಿದು ನಿಂತಿದ್ದರು.
ಪರಿಸ್ಥಿತಿಯೇನೋ ಗಂಭೀರವಾಗಿತ್ತು. ನಾನು ಮಾತ್ರ ಪಕ್ಕನೆ ನಗೋಕೆ ಶುರುಮಾಡಿದೆ. ನನ್ನನ್ನು ನೋಡಿದ ಸೆಕ್ಯುರಿಟಿಯವರು ಮಾತ್ರ ಗಲಿಬಿಲಿಗೊಂಡರು. ನಾನೇ ಶುರು ಮಾಡಿದೆ: `ಇದು ನಾನು ಕಾಡಿಗೆ ಹೋಗುವಾಗ ತೆಗೆದುಕೊಂಡು ಹೋಗುವ ಕ್ಯಾಮೆರಾ ಬ್ಯಾಗ್. ಕಾಡಿಗಲ್ಲಿ ಸುತ್ತಾಡುವಾಗ ಇರಲಿ ಅಂತ ಚೂರಿಯನ್ನು ತೆಗೆದು ಬ್ಯಾಗಿನಲ್ಲಿ ಇಟ್ಟಿದ್ದೆ. ಎರಡು ವರ್ಷದಿಂದ ಆ ಚೂರಿಯನ್ನು ಹೊರಗೆ ತೆಗೆಯುವ ಪ್ರಮೇಯವೇ ಬರದಿದ್ದರಿಂದ, ಮರೆತು ಹೋಗಿತ್ತು,’ ಅಂದೆ.
ಸೆಕ್ಯುರಿಟಿ ಆಫಿಸರ್ ಸುಮ್ಮನೆ ತಲೆ ಅಲ್ಲಾಡಿಸಿ, ಅವರ ಕೆಳಗಿನ ಸಿಬ್ಬಂದಿಗೆ, ನನ್ನನ್ನು ಕಮಾಂಡೆಂಟ್ ಹತ್ತಿರ ಕರೆದುಕೊಂಡು ಹೋಗುವಂತೆ ಹೇಳಿದರು. ನಾನು ಮುಂದೆ ನೆಡೆಯುವಾಗ, ನನ್ನ ಬೆನ್ನಿಗೆ ತಾಗಿಕೊಂಡಿದ್ದ ಎರಡು ರೈಫಲ್ ಗಳು ಸಹ ಹಿಂಬಾಲಿಸಿದವು.
ಕಮಾಂಡೆಂಟ್ ಕೋಣೆಯ ಹತ್ತಿರ ಹೋಗುವಾಗ ತಲೆ ಎತ್ತಿ ನಾಮಫಲಕದಲ್ಲಿ ಅವರ ಹೆಸರು ಓದಿದೆ. `ಬಾಲಸುಬ್ರಹ್ಮಣ್ಯಂ’ ಅಂತ ಬರೆದಿರೋದು ನೋಡಿ, ಇನ್ನೂ ಜೋರಾಗಿ ನಗು ಬಂತು. ವಾರದಲ್ಲಿ ಐದು ಸಲವಾದರೂ ಅವರಿಗೆ ಫೋನ್ ಮಾಡುತ್ತಿದ್ದೆ. ಏರ್ ಪೋರ್ಟ್ ಸೆಕ್ಯುರಿಟಿಯಲ್ಲಿ ಏನಾದ್ರೂ ಸುದ್ದಿ ಇದೆಯಾ ಅಂತ.
ನಾನು ಕೋಣೆಯೊಳಗೆ ಹೋದಾಗ ಬಾಲಸುಬ್ರಹ್ಮಣ್ಯಂ ನನ್ನ ಚೂರಿ ಹಿಡಿದುಕೊಂಡು ನೋಡುತ್ತಿದ್ದರು. ನಾನೂ ಎರಡು ವರ್ಷಗಳಿಂದ ತೆಗೆದು ನೋಡಿರಲಿಲ್ಲ. ಅಲ್ಲಲ್ಲಿ ತುಕ್ಕು ಹಿಡಿದಿತ್ತು. ಅವರು ನನ್ನ ಮುಖ ನೋಡಿ ಏನೋ ಕೇಳುವುದರೊಳಗೆ, ನಾನು ನನ್ನ ಪರ್ಸ್ ನಿಂದ ವಿಸಿಟಿಂಗ್ ಕಾರ್ಡ್ ತೆಗೆದು ಅವರಿಗೆ ಕೊಟ್ಟೆ. ಅದನ್ನು ನೋಡಿದ ತಕ್ಷಣ ಅವರು ಜೋರಾಗಿ ನಗೋಕೆ ಶುರು ಮಾಡಿದ್ರು.
`ಏನ್ರೀ? ನಿಮ್ಮದಾ ಇದು? ಇದನ್ಯಾಕೆ ಚೆಕ್ ಇನ್ ಮಾಡೋಕೆ ಹೋದ್ರಿ?’ ಅಂತ ಕುಳಿತುಕೊಳ್ಳುವಂತೆ ತಮ್ಮ ಮುಂದಿನ ಕುರ್ಚಿ ತೋರಿಸಿದರು. ನಾನು ಕೂರಲೆಂದು ಹಿಂದೆ ತಿರುಗಿ ನೋಡಿದರೆ, ರೈಫಲ್ ಹಿಡಿದುಕೊಂಡ ಸೆಕ್ಯುರಿಟಿಯವರು ಮುಖ ಮುಖ ನೋಡಿಕೊಳ್ಳುತ್ತಿದ್ದರು. ನೆಡೆದದ್ದನ್ನು ಸೂಕ್ಷ್ಮವಾಗಿ ಹೇಳಿದೆ.
`ಈಗೇನು ಮಾಡಲಿ? ಪ್ರೆಸ್ ಕಾನ್ಫರೆನ್ಸ್ ಕರೆದು ಜರ್ನಲಿಸ್ಟ್ ಎರೋಪ್ಲೇನ್ ಒಳಗೆ ಮಾರಕಾಸ್ತ್ರ ತೆಗೆದುಕೊಂಡು ಹೋಗುವಾಗ ಅರೆಸ್ಟ್ ಮಾಡಲಾಗಿದೆ ಅಂತ ಹೇಳ್ಲಾ?’ ಅಂತ ಇನ್ನೂ ಜೋರಾಗಿ ನಗಲು ಶುರುಮಾಡಿದ್ರು.
ಅಷ್ಟರಲ್ಲೇ ಅವರ ಕೋಣೆ ಹೊರಗಡೆಯಿಂದ ಯಾರೋ ಇಣುಕಿದಂತಾಯ್ತು. `ಸುಮ್ಮನೆ ಹೋಗ್ತೀಯೋ, ಇಲ್ವೋ. ಇಲ್ಲೇನು ಕೆಲಸ ನಿಮ್ಮಗಳಿಗೆ?’ ಅಂತ ಬಾಲಸುಬ್ರಹ್ಮಣ್ಯಂ ಗದರಿಸಿದರು. ನಾನು ತಿರುಗಿ ನೋಡಿದಾಗ ಹೇಳಿದರು: `ಸಿಟಿ ಪೋಲಿಸ್. ಇಲ್ಲೇನೋ ಆಯ್ತು ಅಂತ ಗೊತ್ತಾಗುತ್ತಲ್ಲ, ಬಂದು ಕೇಸ್ ಹಾಕಿ, ದುಡ್ಡು ಕಿತ್ತುಕೊಳ್ಳೋಕೆ ಅಂತ ಕಾಯ್ತಿದ್ದಾರೆ. ಈ ಚೂರಿನ ಏನ್ಮಾಡ್ತೀಯ? ಬೇಕಾದರೆ ಮಂಗಳೂರಿಗೆ ಕಳುಹಿಸುತ್ತೇನೆ. ವಾಪಾಸ್ ಬರುವಾಗ ಮಾತ್ರ ಚೆಕ್ ಇನ್ ಮಾಡುವ ಮೊದಲೇ ಸೆಕ್ಯುರಿಟಿಯವರಿಗೆ ಹೇಳಿ, ಸರೆಂಡರ್ ಮಾಡಿ. ಇಲ್ಲಿ ಬಂದು ತಗೋಬಹುದು,’ ಅಂದ್ರು.
`ಬೇಡ ಸರ್. ಈ ಚೂರಿ ಇಟ್ಕೊಂಡು ಬಂದಿದ್ದರಿಂದ ನಾವಿಬ್ಬರೂ ಒಬ್ಬರನೊಬ್ಬರು ನೋಡಿದ್ವಿ. ಇಲ್ಲದೇ ಹೋಗಿದ್ದರೆ, ಬರೀ ಫೋನಿನಲ್ಲಿ. ಆ ನೆನಪಿಗೆ ಇದನ್ನ ನೀವೇ ಇಟ್ಕೊಳ್ಳಿ. ಮಂಗಳೂರಿಂದ ಬಂದ ಮೇಲೆ ಸಿಕ್ತೀನಿ,’ ಅಂತ ಹೇಳಿ, ವಿಮಾನದ ಕಡೆಗೆ ಹೊರಟೆ….


ಮಾಕೋನಹಳ್ಳಿ ವಿನಯ್ ಮಾಧವ

ಶುಕ್ರವಾರ, ಆಗಸ್ಟ್ 3, 2012

ಗಾಯಕ



ಹಾಡು ಮುಗಿಯುವ ಮುನ್ನ……..

`ಲೋ ಮಾಕೋನಹಳ್ಳಿ…. ಏನ್ಮಾಡ್ತಿದ್ದೀಯೋ? ಓಬೇರಾಯ್ ಹೋಟೆಲ್ ಗೆ ಬರ್ತೀಯಾ?,’ ಅಂತ ನಮ್ಮ ಛೀಫ್ ರಿಪೋರ್ಟರ್ ಆಗಿದ್ದ ನಚ್ಚಿ ಕೇಳಿದ್ರು.
ಎರಡು ಮೂರು ದಿನ ರಜಾ ಇದ್ದ ಕಾಲವದು. ಲಾಟರಿ ಹೊಡಿತಾ ಕೂತಿದ್ದೆ, ಆಫೀಸಿನಲ್ಲಿ. `ಓಬೇರಾಯ್ ಗಾ? ಏನ್ಸಮಾಚಾರ ಅಲ್ಲಿ?’ ಅಂತ ಕೇಳ್ದೆ.
`ನುಸ್ರತ್ ಫತೇ ಆಲಿಖಾನ್ ಅಲ್ಲಿದ್ದಾರಂತೆ. ಸಿಕ್ಕಿದ್ರೆ ಇಂಟರ್ ವ್ಯೂ ಮಾಡೋಣ ಅಂತ. ಬರ್ತೀಯಾ?’ ಅಂದ್ರು. ಹೆಲ್ಮೆಟ್ ತೆಗೆದುಕೊಂಡವನೇ, ನಚ್ಚಿ ಹಿಂದೆ ಹೊರಟೆ.
ಬೈಕ್ ಹತ್ತುವಾಗು ಮೆಲ್ಲಗೆ ಕೇಳ್ದೆ: `ನಚ್ಚಿ, ಪಾಕಿಸ್ತಾನದಲ್ಲೂ ಜನ ಘಜಲ್ ಕೇಳ್ತಾರಾ? ಈ ನುಸ್ರತ್ ಖಾನ್ ಘಜಲ್ ಗಳು ತುಂಬಾ ಫೇಮಸ್ಸಾ?’
`ಮಾಕೋನಹಳ್ಳಿ ಗೌಡನ ಥರಾನೇ ಪ್ರಶ್ನೆ ಕೇಳ್ದೆ ಬಿಡು. ಅಲ್ಲ ಕಣೋ. ಇಪ್ಪತ್ನಾಲ್ಕು ಘಂಟೆ ಸೊಂಟಕ್ಕೆ ಆ ವಾಕ್ ಮನ್ ಸಿಕ್ಕಿಸಿಕೊಂಡು ಹಾಡುಗಳನ್ನ ಕೇಳ್ತಿರ್ತೀಯಾ? ಎಲ್ಲಾ ಮ್ಯೂಸಿಕ್ ಬಗ್ಗೆ ಮಾತಾಡ್ತಿರ್ತೀಯಾ? ನುಸ್ರತ್ ಫತೇಆಲಿ ಖಾನ್ ಬಗ್ಗೆ ಗೊತ್ತಿಲ್ಲ ಅಂತೀಯಲ್ಲ? ಘಜಲ್ ಇಂಡಿಯಾದಷ್ಟೇ ಪಾಕಿಸ್ತಾನದಲ್ಲೂ ಇಷ್ಟ ಪಡ್ತಾರೆ. ಇವರು ಸೂಫೀ ಹಾಡುಗಳನ್ನೂ ಅಧ್ಬುತವಾಗಿ ಹಾಡ್ತಾರೆ,’ ಅಂದ್ರು.
ನಾನು ತೆಪ್ಪಗಾದೆ. ಅದಕ್ಕೆ ಕಾರಣ ಕೂಡ ಇತ್ತು. ಕಾಲೆಜ್ ದಿನಗಳಲ್ಲಿ ಸಿಕ್ಕ ಹಾಡುಗಳನ್ನೆಲ್ಲಾ ಕೇಳ್ತಿದ್ವಿ. ಹಿಂದಿ, ಕನ್ನಡ ಚಿತ್ರಗೀತೆಗಳಿಂದ ಶುರುವಾಗಿದ್ದು, ಕಾರ್ಕಾಳದಲ್ಲಿ ಓದುವಾಗ ಮಲೇಶಿಯಾದ ಹುಡುಗರ ಜೊತೆ ಸೇರಿ ಇಂಗ್ಲಿಶ್ ಹಾಡುಗಳನ್ನೂ ಕೇಳಲು ಆರಂಭಿಸಿದ್ದೆ. ನಾಮ್ ಚಲನಚಿತ್ರದಲ್ಲಿ ಪಂಕಜ್ ಉದಾಸ್ ಹಾಡಿದ `ಚಿಟ್ಟಿ ಆಯೀಯೆ…’ ಹಾಡಿನಿಂದ ಪ್ರಭಾವಿತನಾಗಿ, ಅವರ ಎಲ್ಲಾ ಘಜಲ್ ಗಳನ್ನೂ ಕೇಳಲು ಶುರುಮಾಡಿದ್ದೆ. ಬೆಂಗಳೂರಿಗೆ ಬಂದ ಮೇಲೆ, ತಮಿಳು, ಮಲಯಾಳಂ ಮತ್ತು ತೆಲುಗು ಹಾಡುಗಳನ್ನೂ ಕೇಳಲು ಶುರುಮಾಡಿದ್ದೆ. ಯಾವುದೋ ಸಂಧರ್ಭಗಳಲ್ಲಿ, ಯೇಸುದಾಸ್, ಪಂಡಿತ್ ಭೀಮಸೇನ್ ಜೋಶಿ ಮತ್ತು ಡಾ! ಬಾಲಮುರುಳಿ ಕೃಷ್ಣರ ಸಂಗೀತ ಕಛೇರಿಗಳಿಗೂ ಹೋಗಿದ್ದೆ. ಇದೆಲ್ಲಾ ಸೇರಿ, ನಾನು ಸಂಗೀತ ಪ್ರೇಮಿ ಅನ್ನೋ ಭ್ರಮೆಯಲ್ಲಿ, ಸೊಂಟಕ್ಕೊಂದು ವಾಕ್ ಮನ್ ಸಿಕ್ಕಿಸಿಕೊಂಡು, ಯಾವಾಗಲೂ ಹಾಡು ಕೇಳುತ್ತಾ ತಿರುಗುತ್ತಿದ್ದೆ.
ನನ್ನ ಭ್ರಮೆಗೆ ಏಟು ಬಿದ್ದದ್ದೇ ನಾನು ಇಂಡಿಯನ್ ಎಕ್ಸ್ ಪ್ರೆಸ್ ಗೆ ಸೇರಿದ ಮೇಲೆ. ಅಲ್ಲಿ, ಉತ್ತರಾ, ವಿನಯಾ ಹೆಗಡೆ, ವಾಸಂತಿ, ನಚ್ಚಿ, ನಮ್ಮ ಎಡಿಟರ್ ಕೆ.ವಿ.ರಮೇಶ್ ರವರಿಗೆ ಸಂಗೀತದಲ್ಲಿದ್ದ ಅಪಾರ ಜ್ಞಾನ ನೋಡಿ, ನನ್ನ ಭ್ರಮೆ ಕಡಿಮೆಯಾಗತೊಡಗಿತು. ಪಂಕಜ್ ಉದಾಸ್ ಬಿಟ್ಟರೆ, ಅನುಪ್ ಜಲೋಟ, ಜಗಜೀತ್ ಸಿಂಘ್ ಮತ್ತು ಇತರರ ಘಜಲ್ ಗಳ ಬಗ್ಗೆ ನನಗೇನೂ ಗೊತ್ತೇ ಇರಲಿಲ್ಲ. ಹಾಗೇನೆ, ಜೇಸುದಾಸ್ ಬಗ್ಗೆ ನನಗೆ ತಿಳಿದಿದ್ದಿದ್ದು ತುಂಬಾ ಕಡಿಮೆ ಅಂತ ಅನ್ನಿಸೋಕೆ ಶುರುವಾಗಿತ್ತು. ಅವರೆಲ್ಲ ಸಂಗೀತದ ಬಗ್ಗೆ ಮಾತಾಡ್ತಿದ್ರೆ, ನನಗೆ ಯಾರೋ ಲ್ಯಾಟಿನ್ ಭಾಷೆಯಲ್ಲಿ ಮಾತಾಡ್ತಿದ್ದಂತೆ ಅನ್ನಿಸೋಕೆ ಶುರುವಾಯ್ತು. ಆದ್ರೂ ವಾಕ್ ಮನ್ ಹಾಕಿಕೊಂಡು ತಿರುಗೋದು ಕಮ್ಮಿ ಮಾಡಿರಲಿಲ್ಲ.
ಗಡಿಬಿಡಿಯಾಗಿದ್ದೇ ಬೆಂಗಳೂರಿಗೆ ನುಸ್ರತ್ ಫತೇಆಲಿ ಖಾನ್ ಬರ್ತಾರೆ ಅಂತ ನಮ್ಮ ಆಫೀಸಿನಲ್ಲಿ ಸಂಭ್ರಮ ಶುರುವಾದ ಮೇಲೆ. ನಾನು ಕೇಳದಿರುವ ಪ್ರಸಿದ್ದ ಗಾಯಕರ ಸಾಲಿಗೆ ಇನ್ನೊಂದು ಹೆಸರು ಸೇರ್ಪಡೆಯಾಗಿತ್ತು. ನಚ್ಚಿ ಮುಂದೆ ಬಾಯಿಬಿಟ್ಟು ಬಣ್ಣಗೇಡು ಮಾಡಿಕೊಂಡಿದ್ದೆ.
ಓಬೇರಾಯ್ ಹೋಟೆಲ್ ಹತ್ತಿರ ಬೈಕ್ ನಿಲ್ಲಿಸಿ, ನಚ್ಚಿ ಹಿಂದೆ ನೆಡ್ಕೊಂಡು ಒಳಗೆ ಹೊದೆ. ನಾವು ಸ್ವಾಗತಕಾರರ ಹತ್ತಿರ ಹೋಗುವಾಗಲೇ, ಆಗ ಮಂತ್ರಿಯಾಗಿದ್ದ ರೋಶನ್ ಬೇಗ್ ಮೆಟ್ಟಲು ಇಳ್ಕೊಂಡು ಬಂದರು. `ಸಧ್ಯ, ಇಲ್ಲೇ ಸಿಕ್ದ,’ ಅಂತ ಅಂದವರೇ, ನಚ್ಚಿ ಬೇಗ್ ಕಡೆಗೆ ಕೈ ಬೀಸಿದರು.
ರೋಶನ್ ಬೇಗ್ ಸಹ ನಮ್ಮ ಕಡೆಗೇ ಬಂದು, `ಏನು ನಚ್ಚಿ? ಇಲ್ಲಿವರೆಗೆ ಬಂದಿದ್ದೀರಿ?’ ಅಂತ ನಕ್ಕರು.
`ಏ ನೋಡಪ್ಪಇಂಟರ್ ವ್ಯೂ ಮಾಡ್ಬೇಕು. ಒಂದೈದು ನಿಮಿಷ ಸಿಕ್ಕಿದ್ರೆ ಸಾಕು,’ ಅಂದ್ರು. ನಾನು ನಚ್ಚಿ ಮುಖ ನೋಡೋಕೆ ಶುರು ಮಾಡ್ದೆ.
ತಕ್ಷಣ ರೋಶನ್ ಬೇಗ್, `ಕಷ್ಟ ನಚ್ಚಿ. ಅವರಿಗೆ ಹುಶಾರಿಲ್ಲ,’ ಅಂದ್ರು. ಆಗಲೇ ನನಗೆ ಗೊತ್ತಾಗಿದ್ದು: ರೋಶನ್ ಬೇಗ್ ಈ ಕಾರ್ಯಕ್ರಮದ ರೂವಾರಿ ಅಂತ.
`ಏ ನೋಡಪ್ಪಾಬೇಕಾದ್ರೆ ಕಾಯ್ತೀವಿ. ಐದು ನಿಮಿಷ ಸಿಕ್ಕಿದ್ರೆ ಸಾಕು,’ ಅಂತ ನಚ್ಚಿ ಕೇಳಿದ್ರು.
`ಇಲ್ಲ ನಚ್ಚಿ. ನಿಮಗೆ ಇಲ್ಲ ಅಂತೀನಾ? ನೋಡಿ, ಅವರಿಗೆ ವಿಪರೀತ ಶುಗರ್. ಅದ್ರ ಮೇಲೆ, ಅವರು ಹೊಸ ಚಪ್ಪಲಿ ತಗೊಂಡಿದ್ರಂತೆ. ಅದನ್ನು ಹಾಕಿಕೊಂಡು ಶೂ ಬೈಟ್ ಆಗಿ, ಕಾಲೆಲ್ಲ ಊದಿ ಹೋಗಿದೆ. ಡಾಕ್ಟರ್ ಮೆಡಿಸನ್ ಕೊಟ್ಟಿದ್ದಾರೆ. ಅವರು ಮಲಗಿದ ಮೇಲೆನೇ ನಾನು ಕೆಳಕ್ಕೆ ಬಂದಿದ್ದು,’ ಅಂತ ಮಾತಾಡುತ್ತಲೇ, ಬೇಗ್ ತಮ್ಮ ಬ್ರೀಫ್ ಕೇಸ್ ತೆಗೆದು, ಅದರಿಂದ ಕೆಲವು ಪಾಸ್ ಗಳನ್ನು ನಚ್ಚಿ ಕೈಗೆ ಕೊಟ್ಟರು. ನಚ್ಚಿ ಅದನ್ನು ಹಾಗೇ ತೆಗೆದು ನನ್ನ ಕೈಗೆ ಕೊಟ್ಟರು. ನಾನೂ ಅದನ್ನು ಹಾಗೇ ಶರ್ಟ್ ಒಳಕ್ಕೆ ಸೇರಿಸಿದೆ.
ಹಾಗೇ ವಾಪಾಸ್ ಬರುವಾಗ ನಚ್ಚಿ ಹೇಳಿದ್ರು: `ಕಾನ್ಸರ್ಟ್ ಮಿಸ್ ಮಾಡ್ಬೇಡ. ತುಂಬಾ ಚೆನ್ನಾಗಿರುತ್ತೆ. ಜೊತೆಗೆ ಯಾರಾದರೂ ಫ್ರೆಂಡ್ಸ್ ಕರ್ಕೊಂಡು ಹೋಗು.
`ನೀವು ಬರೋಲ್ವ ನಚ್ಚಿ?’ ಅಂತ ಕೇಳ್ದೆ.
`ನೋಡ್ಬೇಕು ಗುರೂಟೈಮ್ ಆದ್ರೆ ಹೋಗ್ತೀನಿ. ನಂಗೆ ನಾನು ವ್ಯವಸ್ಥೆ ಮಾಡ್ಕೋತ್ತೀನಿ. ನೀನು ಹೋಗು,’ ಅಂದ್ರು.
ಆಫೀಸಿಗೆ ಬಂದವನೇ ಆ ಪಾಸ್ ಗಳನ್ನು ತೆಗೆದು ನೋಡಿದೆ. ಐದು ಸಾವಿರ ರೂಪಾಯಿಯ ಐದು ಪಾಸ್ ಗಳನ್ನು ನಮಗೆ ಕೊಟ್ಟಿದ್ದರು. ಯಾರನ್ನು ಕರೆಯೋದು ಅಂತ ಗೊತ್ತಾಗಲಿಲ್ಲ. ನಾನು ಹೋಗೋದೂ ಗ್ಯಾರಂಟಿ ಇರಲಿಲ್ಲ. ಯಾಕೆಂದ್ರೆ, ಕಛೇರಿ ಶುರುವಾಗೋದು ಏಳೂವರೆ ಘಂಟೆಗೆ. ಆ ಹೊತ್ತಿಗೆ, ಕ್ರೈಂ ರಿಪೋರ್ಟರ್ ಗಳು ಬ್ಯುಸಿಯಾಗಿರುತ್ತಾರೆ.
ಏನು ಮಾಡೋದು ಅಂತ ಗೊತ್ತಾಗಲಿಲ್ಲ. ಒಂದೆರೆಡು ಸ್ನೇಹಿತರಿಗೆ ಫೋನ್ ಮಾಡಿ ನೋಡಿದೆ. ಅವರಿಗೂ ಘಜಲ್ ಜ್ಞಾನ ಅಷ್ಟಕ್ಕಷ್ಟೆ ಅಂತ ಗೊತ್ತಾಯ್ತು. ಏಳೂವರೆ ಹೊತ್ತಿಗೆ ಯಾಕೋ ದುಗುಡ ಶುರುವಾಯ್ತು. ಐದು ಪಾಸ್ ಇದೆ, ಅಂತೂ ಇವರ ಹಾಡು ಕೇಳೋಕ್ಕೆ ಆಗೋಲ್ಲ ಅಂತ.
ಒಂದಷ್ಟು ಹೊತ್ತು ತಲೆಕೆಡಿಸಿಕೊಂಡ ಮೇಲೆ, ಏನಾದರೂ ಆಗಲಿ. ಬಂದು ಕ್ರೈಂ ನೋಡಿಕೊಂಡರಾಯ್ತು ಅಂತ ಹೆಲ್ಮೆಟ್ ತಗೊಂಡು ಎದ್ದೆ.
ನಾನು ಸೆಂಟ್ ಜೋಸೆಫ್ ಮೈದಾನ ಸೇರುವ ಹೊತ್ತಿಗೆ ಕಛೇರಿ ಶುರುವಾಗಿದೆ ಅನ್ನುವ ಸೂಚನೆಗಳು ಸಿಕ್ಕಿದವು. ದೂರದಿಂದಲೇ ಹಾಡು ಮೆಲ್ಲಗೆ ಕೇಳಿಸುತ್ತಿತ್ತು. ಬೈಕಿನಿಂದ ಇಳಿದವನೇ, ಹೆಲ್ಮೆಟ್ ಕೈಯಲ್ಲಿ ಹಿಡಿದುಕೊಂಡು, ಗೇಟಿನ ಕಡೆ ನೆಡೆದೆ. ಯಾಕೋ ನಾನು ಸರಿಯಾದ ಜಾಗಕ್ಕೆ ಬಂದಿಲ್ಲ ಅಂತ ಅನ್ನಿಸೋಕೆ ಶುರುವಾಯ್ತು.
ಗೇಟಿನ ಹತ್ತಿರ, ಶೇರವಾನಿ ಧರಿಸಿದ ಒಬ್ಬರು ಟಿಕೆಟ್ ಗಾಗಿ ಗೋಗರಿಯುತ್ತಿದ್ದರು. ತಾವು ಮದರಾಸಿನಿಂದ ಬಂದಿರುವುದಾಗಿ, ಎಷ್ಟು ದುಡ್ಡಾದರೂ ಕೊಡಲು ತಯಾರು ಅಂತ ಹೇಳುತ್ತಾ, ಎರಡು ಟಿಕೆಟ್ ಆದರೂ ಕೊಡುವಂತೆ ಕೇಳುತ್ತಿದ್ದರು. ನಾನು ಶರ್ಟ್ ಒಳಗಿದಂದ ಪಾಸ್ ಗಳನ್ನು ತೆಗೆದವನೇ, ಒಂದನ್ನು ನನ್ನ ಕೈಯಲ್ಲಿ ಇಟ್ಟುಕೊಂಡು, ಇನ್ನುಳಿದವನ್ನು ಅವರ ಕೈಗೆ ಇಟ್ಟೆ. ಅವರು ತಿರುಗಿ ನೋಡುವುದರಲ್ಲಿ, `ಅದು ಕಾಂಪ್ಲಿಮೆಂಟರಿ ಪಾಸ್. ನನ್ನ ಜೊತೆ ಯಾರೂ ಬಂದಿಲ್ಲ. ಅದಕ್ಕೆ ಏನೂ ಕೊಡಬೇಕಾಗಿಲ್ಲ,’ ಅಂತ ಹೇಳಿ, ಹಿಂದೆ ತಿರುಗಿಯೂ ನೋಡದೆ, ಗೇಟ್ ಕೀಪರ್ ಕಡೆ ಹೋದೆ.
ನಾನು ಕೊಟ್ಟ ಪಾಸ್ ನೋಡಿದವನೇ, ಗೇಟ್ ಕೀಪರ್ ನನ್ನನ್ನು ಮೇಲಿಂದ ಕೆಳಗೆ ನೋಡಿದ. ನಾನು ತಲೆ ನಿರ್ವಿಕಾರವಾಗಿ ಹೇಳಿದೆ: `ಪ್ರೆಸ್,’ ಅಂತ.  ಒಳಗೆ ಹೋದವನಿಗೆ ಗೊತ್ತಾಯ್ತು, ಆ ಗೇಟ್ ಕೀಪರ್ ನನ್ನನ್ನು ಯಾಕೆ ಹಾಗೆ ನೋಡಿದ ಅಂತ.
ನನಗೆ ಸಿಕ್ಕಿದ ಪಾಸ್, ಮುಂದುಗಡೆ ಸೋಫಾ ಆಗಿತ್ತು. ಅಲ್ಲಿ ಕೂತವರ ವೇಷ-ಭೂಷಣಕ್ಕೂ, ನಾನು ಬಂದಂತ ರೀತಿಗೂ ತಾಳೆಯಾಗುತ್ತಿರಲಿಲ್ಲ. ಜೀನ್ಸ್ ಪ್ಯಾಂಟ್, ಟಿ ಶರ್ಟ್ ಹಾಕಿಕೊಂಡ ನಾನು, ಗಂಭೀರವಾಗಿ ಬಟ್ಟೆ ಹಾಕಿಕೊಂಡು ಬಂದವರ ಮುಂದೆ, ಕಾಫೀ-ಟೀ ಸರಬರಾಜು ಮಾಡುವ ಹುಡುಗನ ಥರ ಕಾಣುತ್ತಿದ್ದೆ. ಆದರೆ, ಎಲ್ಲರೂ ಸಂಗೀತದಲ್ಲಿ ತಲ್ಲೀನವಾಗಿದ್ದರು.
ನಾನು ಕೊನೆಯಲ್ಲಿದ್ದ ಸೋಫಾದ ಮೂಲೆಯಲ್ಲಿ ಮುದುಡಿ ಕುಳಿತೆ. ನನ್ನ ಹಿಂದೆಯೇ, ನನ್ನ ಕೈಯಲ್ಲಿ ಪಾಸ್ ತೆಗೆದುಕೊಂಡವರು ಮೂರು ಜನರ ಸಂಸಾರ ಒಳಗೆ ಬಂದರು. ಇಬ್ಬರು ವಯಸ್ಸಾದ ದಂಪತಿಗಳು, ಇನ್ನೊಬ್ಬರು ಅವರ ಮಗ ಅಂತ ಕಾಣುತ್ತೆ. ಮೂರೂ ಜನರೂ ನನ್ನನ್ನು ನೋಡಿ, ಮುಗುಳ್ನಕ್ಕು, `ಥ್ಯಾಂಕ್ಸ್ಅನ್ನುವಂತೆ ತಲೆ ಆಡಿಸಿದರು. ನಾನೂ ಅವರಿಗೆ ಪ್ರತಿಕ್ರಿಯೆ ನೀಡಿದರೂ, ಯಾಕೋ ಕಸಿವಿಸಿಯಾಗಲು ಶುರುವಾಯ್ತು.
ಒಂದೆರೆಡು ನಿಮಿಷದಲ್ಲಿ, ಅಲ್ಲಿಯವರೆಗೆ ಹಾಡುತ್ತಿದ್ದ ಹಾಡು ಕೊನೆಯಾಯ್ತು. ವೇದಿಕೆ ಮೇಲೆ ನುಸ್ರತ್ ಫತೇ ಆಲಿಖಾನ್ ಅಲ್ಲದೆ, ಇನ್ನೂ ಹತ್ತು ಜನ ಪಠಾಣರಂತೆ ವೇಷ ಹಾಕಿಕೊಂಡು ಕೂತಿದ್ರು. ಎರಡು ನಿಮಿಷದ ನಂತರ ಮುಂದಿನ ಹಾಡು ಶುರುವಾಯ್ತು. `ಅಲ್ಲಾ ಹೋ....’ . ಅವೆರೆಡು ಪದ ಬಿಟ್ಟರೆ, ನನಗೆ ಇನ್ನೇನೂ ಅರ್ಥವಾಗಲಿಲ್ಲ. ಆದರೆ ಹಾಡು ಅಧ್ಬುತವಾಗಿದೆ ಅಂತ ಅನ್ನಿಸಿತು. ಯಾವುದೋ ಲೋಕದಿಂದ ಹಾಡು ಬರುತ್ತಿರುವಂತೆ ಅನ್ನಿಸೋಕ್ಕೆ ಶುರುವಾಯ್ತು. ಆದ್ರೆ, ಬೇರೆಯವರು ಆ ಹಾಡನ್ನು ಆಸ್ವಾದಿಸುವ ರೀತಿ ನೋಡಿ, ಮಧ್ಯದಲ್ಲೇ ಮತ್ತೆ ಕಸಿವಿಸಿಯಾಗಲು ಶುರುವಾಯ್ತು. ಅದು ಕಸಿವಿಸಿಯೋ, ಕಿಳರಿಮೆಯೋ ಗೊತ್ತಾಗಲಿಲ್ಲ. ಕೂತಲ್ಲೇ ಚಡಪಡಿಸಿದೆ. ಆ ಹಾಡು ಮುಗಿಯುತ್ತಿದ್ದಂತೆ, ಎಲ್ಲರೂ ಚಪ್ಪಾಳೆ ತಟ್ಟುವಾಗ, ನಾನು ಹೆಲ್ಮೆಟ್ ಎತ್ತಿಕೊಂಡು ಅಲ್ಲಿಂದ ಹೊರಕ್ಕೆ ನೆಡೆದೆ. ಆಫೀಸಿಗೆ ಬರುವವರೆಗೆ ಎಲ್ಲೂ ತಿರುಗಿ ನೋಡಲಿಲ್ಲ.
ಆಫೀಸಿಗೆ ಬಂದ ಮೇಲೆ, ನಾನು ಅಲ್ಲಿ ಇನ್ನೂ ಸ್ವಲ್ಪ ಹೊತ್ತು ಇರಬೇಕಿತ್ತು ಅಂತ ಅನ್ನಿಸೋಕೆ ಶುರುವಾಯ್ತು. ಈ ವಾರದಲ್ಲಿ ಯಾವಾಗಾದರೂ ನುಸ್ರತ್ ಫತೇ ಆಲಿಖಾನ್ ಹಾಡಿನ ಕ್ಯಾಸೆಟ್ ತಗೋಬೇಕು ಅಂತ ಅನ್ಕೊಂಡೆ. ಮಾರನೇ ದಿನ ಪೇಪರ್ ನಲ್ಲಿ ನೋಡಿದರೆ, ಈ ಕಛೇರಿಯ ವರದಿಯನ್ನು ನಮ್ಮ ಎಡಿಟರ್ ಕೆ.ವಿ.ರಮೇಶ್, ಖುದ್ದಾಗಿ ಮಾಡಿದ್ದರು.
ಎಂಟು-ಹತ್ತು ದಿನ ಕಳೆದಿರಬಹುದು. ನನ್ನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಆಫ್ ಶಾನ್ ಯಾಸ್ಮಿನ್ ಮನೆಗೆ ಹೋಗಿದ್ದೆ. ಅವಳ ಯಜಮಾನರಾದ ಬೆಲಗೂರು ಸಮೀಉಲ್ಲಾ ಜೊತೆ ಮಾತಾಡ್ತಾ, ಯಾಕೋ ಅವರ ಸಂಗೀತದ ಸಿ.ಡಿ ಕಡೆ ನನ್ನ ಗಮನ ಹೋಯ್ತು. ನೋಡಿದರೆ, ನುಸ್ರತ್ ಫತೇ ಆಲಿಖಾನ್ ರ ಮೂರು ಸಿ.ಡಿ ಗಳಿದ್ದವು. ಒಂದೊಂದೇ ಹಾಡುಗಳ ಹೆಸರನ್ನು ಓದುತ್ತಾ ಹೋದಾಗ, ಕೆಲವು ಹಿಂದಿ ಸಿನಿಮಾಗಳಲ್ಲಿ ಅವರ ಹಾಡುಗಳನ್ನು ಅಳವಡಿಸಿಕೊಂಡಿದ್ದು ಗಮನಕ್ಕೆ ಬಂತು.
`ಏನ್ರಿ ಸಮೀ? ಈ ಹಾಡು ಸಿನಿಮಾದಲ್ಲಿ ಇದೆಯಲ್ವಾ?’ ಅಂತ ಕೇಳ್ದೆ.
`ಇದಷ್ಟೇ ಅಲ್ಲ ಕಣ್ರಿ. ಇವರ ತುಂಬಾ ಹಾಡುಗಳನ್ನು ಸಿನಿಮಾಗಳಿಗೆ ಅಳವಡಿಸಿಕೊಂಡಿದ್ದಾರೆ. ಇವರ ಪರ್ಮಿಶನ್ ಸಹ ತಗೊಂಡಿಲ್ಲ. ಅವೇ ಹಾಡುಗಳನ್ನು, ಬೇರೆಯವರ ಹತ್ತಿರ ಹಾಡಿಸಿದ್ದಾರೆ ಅಷ್ಟೆ,’ ಅಂದ್ರು.
`ನನ್ನ ಹತ್ರ ಸಿ.ಡಿ ಪ್ಲೇಯರ್ ಇಲ್ಲ. ಇವರ ಕ್ಯಾಸೆಟ್ ತಗೋಬೇಕು,’ ಅಂತ ಹೇಳ್ದೆ.
ಮತ್ತೂ ಒಂದೆರೆಡು ದಿನ ಬಿಟ್ಟು ಬೆಳಗ್ಗೆ ಪೇಪರ್ ನಲ್ಲಿ ಸುದ್ದಿ ಬಂದಿತ್ತು: `ಖ್ಯಾತ ಘಜಲ್ ಗಾಯಕ ನುಸ್ರತ್ ಫತೇ ಆಲಿಖಾನ್ ತೀರಿಕೊಂಡರು,’ ಅಂತ. ಇತ್ತೀಚೆಗೆ ಅವರಿಗೆ ಶೂ ಬೈಟ್ ಆಗಿದ್ದು, ಅದು ಗ್ಯಾಂಗ್ರೀನ್ ಆಗಿ ತಿರುಗಿತ್ತು. ಅವರು, ಸಾಯಂಕಾಲ ಹೃದಯಾಘಾತದಿಂದ ತೀರಿಕೊಂಡರು, ಅಂತಾನೂ ಬರೆದಿತ್ತು.
ನಚ್ಚಿ ಆಫೀಸಿಗೆ ಬಂದ ತಕ್ಷಣ, ಅವರಿಗೆ ಸುದ್ದಿ ತೋರಿಸಿದೆ. `ಹೌದು ಗುರೂಅವತ್ತು ರೋಶನ್ ಬೇಗ್ ಹೇಳಿದ್ದನಲ್ಲಾ, ಶೂ ಬೈಟ್ ಆಗಿದೆ ಅಂತ. ಅದೇ ಇದು. ಅದಕ್ಕೇ ಅವತ್ತು ಹೇಳಿದ್ದು, ಕಾನ್ಸರ್ಟ್ ಮಿಸ್ ಮಾಡ್ಬೇಡಾ ಅಂತ,’ ಅಂದರು.
ಯಾಕೋ ಮತ್ತೊಮ್ಮೆ ಅನ್ನಿಸಿತು: `ಅಲ್ಲಿ ನಾನು ಇನ್ನೂ ಸ್ವಲ್ಪ ಹೊತ್ತು ಇರಬೇಕಿತ್ತು,’ ಅಂತ.


ಮಾಕೋನಹಳ್ಳಿ ವಿನಯ್ ಮಾಧವ್