ಶುಕ್ರವಾರ, ಸೆಪ್ಟೆಂಬರ್ 7, 2018

ತೇಜಸ್ವಿ-80



ನೀವೇನೋ ಹೋಗ್ಬಿಟ್ರಿ, ನಾವೇನು ಮಾಡ್ಬೇಕು?

`ಅಲ್ಲ ಮಾರಾಯಾ, ನೀವು ಪತ್ರಕರ್ತರಿಗೆ ಯಾವುದಕ್ಕೆ ಪ್ರಾಮುಖ್ಯತೆ ಕೊಡ್ಬೇಕು ಅನ್ನೋದು ಯಾರು ಹೇಳ್ತಾರೆ? ನೀನೂ ಇದನ್ನೇ ಕೇಳ್ತಿದ್ದೀಯ ನೋಡು. ಕಾಫಿ ಪ್ಲಾಂಟರ್ ಗಳ ಒತ್ತುವರಿ. ಕುದುರೇಮುಖದ ಬಗ್ಗೆ ಮಾತಾಡ್ತಾ ಇದ್ದಲ್ಲ, ಅದು ಏನಾಯ್ತು ಈಗ? ಕುದುರೇಮುಖದಲ್ಲಿ ಆ ದೊಡ್ಡ ಯಂತ್ರಗಳು ಒಂದು ಬಕೆಟ್ ಮಣ್ಣು ಅಗೀತ್ತಾವಲ್ಲ, ಅದು ಪರಿಸರಕ್ಕೆ ಮಾಡೋ ಹಾನಿ, ಈ ಒತ್ತುವರಿ ನೂರು ವರ್ಷದಲ್ಲಿ ಮಾಡೋಕೆ ಆಗಲ್ಲ. ನಿಮಗೆ ಕಾಫೀ ಪ್ಲಾಂಟರ್ ಗಳನ್ನು ಕಳ್ಳರು ಅಂತ ಹೇಳಿ ಜನಗಳು ನಿಮ್ಮ ಪತ್ರಿಕೆಗಳನ್ನು ಜಾಸ್ತಿ ಓದುವಂತೆ ಮಾಡೋದು ಮುಖ್ಯನೋ ಅಥವಾ ಪರಿಸರ ಉಳಿಸೋದಾ?’
ಆಗ ತಾನೆ ತೇಜಸ್ವಿಯವರ ಪರಿಚಯವಾಗಿತ್ತು. ಬಹಳ ಜನರಿಗಿದ್ದಂತೆ, ಅವರಿಗೆ ಹತ್ತಿರವಾಗಬೇಕು ಅನ್ನೋ ಆಸೆ ನನಗೂ ಇತ್ತು. ಯಾವುದೇ ಕಾಡಿನ ವಿಷಯ ಬಂದರೂ, ಅವರ ಒಂದು ಪ್ರತಿಕ್ರಿಯೆ ತೆಗೆದುಕೊಳ್ಳೋಕೆ ಪ್ರಯತ್ನ ಮಾಡ್ತಿದ್ದೆ. ಒತ್ತುವರಿ ವಿಷಯದಲ್ಲಿ ಅವರ ಪ್ರತಿಕ್ರಿಯೆ ತೆಗೆದುಕೊಳ್ಳಲು ಫೋನ್ ಮಾಡಿದಾಗ, ಏನು ಹೇಳಬೇಕು ಅನ್ನೋದು ಗೊತ್ತಾಗದೆ ಸುಮ್ಮನಾದೆ. ಹಾಗಂತ ತೇಜಸ್ವಿಯವರೇನೂ ಒತ್ತುವರಿ ಮಾಡಿದವರ ಪರ ಯಾವತ್ತೂ ವಕಾಲತ್ತು ವಹಿಸಿದ್ದು ನಾನು ನೋಡಿಲ್ಲ.
ಎರಡು ಮೂರು ದಿನಗಳಿಂದ ಈ ವಿಷಯ ತಲೆಯಲ್ಲಿ ಕೊರೆಯುತ್ತಿತ್ತು. ಯಾಕೋ ಏನೋ, ಈ ಸಲ ತೇಜಸ್ವಿಯವರ ಹುಟ್ಟುಹಬ್ಬದ ದಿನ ಅವರ ಬಗ್ಗೆ ಏನೂ ಬರೆಯಬಾರದು ಅಂತ ತೀರ್ಮಾನಿಸಿದೆ. ತೀರ್ಮಾನಿಸಿ ಒಂದು ಘಂಟೆಯೂ ಆಗಿರಲಿಲ್ಲ, ಮಿತ್ರ ಪ್ರವೀಣ್ ಭಾರ್ಗವ್ ಫೋನ್ ಮಾಡಿದರು. ಅದೂ, ಇದೂ ಮಾತಾಡ್ತಾ, ತೇಜಸ್ವಿಯವರ ವಿಷಯ ಬಂತು. ಕುದುರೇಮುಖದಲ್ಲಿ ಗಣಿಗಾರಿಕೆಯ ವಿರುದ್ಧ ಕಾನೂನು ಸಮರದಲ್ಲಿ ಪ್ರವೀಣ್ ಭಾರ್ಗವ್ ಪಾತ್ರ ಬಹಳ ದೊಡ್ಡದು. ಮಾತಿನ ಮಧ್ಯದಲ್ಲಿ, `ಆಗ ಶಾಸಕರಿಗೆಲ್ಲ ಅಂತ ಒಂದು ಪತ್ರ ಬರೆದಿದ್ದೆವಲ್ಲ, ತೇಜಸ್ವಿ ಮತ್ತೆ ಅನಂತಮೂರ್ತಿಯವರೂ ಸಹಿ ಹಾಕಿದ್ದರಲ್ಲ, ಅದು ನನ್ನ ಹತ್ತಿರ ಇನ್ನೂ ಇದೆ,’ ಅಂದರು.
ಯಾಕೋ ತಡೆಯಲಾಗಲಿಲ್ಲ. `ಆ ಪತ್ರ ಕಳುಹಿಸಿ,’ ಅಂದೆ. ಆ ಪತ್ರವನ್ನು ಮೇಲಿಂದ ಕೆಳಗಿನವರೆಗೆ ಎರಡು ಸಲ ಓದುವಾಗ, ಆ ಪತ್ರದ ಹಿಂದಿನ ನೆಡೆದ ಘಟನಾವಳಿಗಳೆಲ್ಲ ಕಣ್ಣಮುಂದೆ ಹಾದು ಹೋಯಿತು. 2002 ರಲ್ಲಿ, ಸರ್ವೋಚ್ಚ ನ್ಯಾಯಾಲಯ 2005, ಡಿಸೆಂಬರ್ ನಿಂದ ಗಣಿಗಾರಿಕೆ ನಿಲ್ಲಿಸಬೇಕು ಎಂದು ಆದೇಶವನ್ನೇನೋ ಕೊಟ್ಟಿತ್ತು. ಆದರೆ, 2005ರ ಮಧ್ಯಭಾಗದಲ್ಲಿ, ಗಣಿಗಾರಿಕೆ ಕಂಪನಿ ಪುನರ್ವಿಮರ್ಶನಾ ಅರ್ಜಿಯನ್ನು ಸಲ್ಲಿಸಿತ್ತು. ಹೋರಾಟ ಶುರುವಾಗಿ ಎಂಟು ವರ್ಷಗಳಾಗಿತ್ತು ಮತ್ತು ಕಾನೂನು ಸಮರವೇ ಐದು ವರ್ಷಗಳಷ್ಟಾಗಿತ್ತು. ಇನ್ನು ಈ ಅರ್ಜಿಯನ್ನು ಪುರಸ್ಕರಿಸಿ, ಸರ್ವೋಚ್ಚ ನ್ಯಾಯಾಲಯ 2002ನೇ ಆದೇಶಕ್ಕೆ ತಡೆಯಾಜ್ಞೆ ನೀಡಿದರೆ, ಹೋರಾಟ ಮುಂದುವರೆಸಬೇಕಾಗುತ್ತಿತ್ತು. ರಾಜ್ಯ ಸರ್ಕಾರ, ನ್ಯಾಯಾಲಯದ ಮುಂದೆ ಸಲ್ಲಿಸುವ ಪ್ರಮಾಣಪತ್ರದ ಮೇಲೆ ಅರ್ಜಿಯ ಹಣೆಬರಹ ನಿಂತಿತ್ತು.
ಇದರ ಮಧ್ಯೆ ಊರಿಗೆ ಹೋಗಿದ್ದಾಗ ತೇಜಸ್ವಿಯವರ ಮನೆಗೆ ಹೋಗಿದ್ದೆ. ಕುದುರೆಮುಖದ ವಿಷಯ ಹೇಳಿದಾಗ, `ನಾನು ಹೇಳ್ದೆ ಅಂತ ಕಾನೂನು ಮಂತ್ರಿ ಪಾಟೀಲರಿಗೆ ಹೇಳು,’ ಅಂತ ಅಂದರು. ಅವರು ಹೇಳಿದ ರೀತಿ ನೋಡಿ ನಾನು ತೇಜಸ್ವಿ ಮತ್ತು ಎಚ್ ಕೆ ಪಾಟೀಲರು ಹಳೇ ಸ್ನೇಹಿತರಿರಬೇಕು ಅಂತ ತಿಳಿದು, ಬೆಂಗಳೂರಿಗೆ ಬಂದ ತಕ್ಷಣ ಪಾಟೀಲರನ್ನು ಭೇಟಿಯಾದೆ. ತೇಜಸ್ವಿಯವರ ಹೆಸರನ್ನು ಹೇಳಿದ ತಕ್ಷಣ ಪಾಟೀಲರ ಮುಖ ಅರಳಿತು.
`ತೇಜಸ್ವಿಯವರು ನನಗೆ ಸೂಚನೆ ಕೊಟ್ರೇ? ಬಹಳ ಸಂತೋಷ. ನೋಡಿ, ನಾನು ತೇಜಸ್ವಿಯವರನ್ನು ಭೇಟಿ ಮಾಡಬೇಕು ಅಂತ ಎಷ್ಟೋ ಕಾಲದಿಂದ ಅಂದುಕೊಂಡಿದ್ದೆ. ನಾಡಿದ್ದು ಗುರುವಾರ ರಾತ್ರಿ ಅವರನ್ನು ನಮ್ಮ ಮನೆಗೆ ಊಟಕ್ಕೆ ಕರೆದುಕೊಂಡು ಬನ್ನಿ. ನಿಮ್ಮ ಕೆಲಸ ಮಾಡಿಕೊಡುತ್ತೇನೆ,’ ಅಂದೇ ಬಿಟ್ಟರು. ನನಗೆ ಬಿಟ್ಟಿದ್ದ ಬಾಯಿ ಮುಚ್ಚೋಕೆ ಮರೆತೇ ಹೋಗಿತ್ತು.
ತೇಜಸ್ವಿಯವರನ್ನು ಮೂಡಿಗೆರೆಯಿಂದ ಬೆಂಗಳೂರಿಗೆ ಕರೆದುಕೊಂಡು ಬರೋದೇ ದೊಡ್ಡ ವಿಷಯ. ಅದರಲ್ಲೂ ರಾಜಕಾರಣಿಯೊಬ್ಬರ ಮನೆಗೆ, ನನ್ನ ತಪ್ಪು ಗ್ರಹಿಕೆಯಿಂದಾದ ಯಡವಟ್ಟನ್ನು ಸರಿಪಡಿಸೋಕೆ ಕರೆದುಕೊಂಡು ಬರಲು ಸಾಧ್ಯವೇ ಇಲ್ಲ ಅಂತ ಅನ್ನಿಸ್ತು. ನಾನೂ ಮತ್ತೆ ಪ್ರವೀಣ್ ಚರ್ಚೆ ಮಾಡಿ, ನನ್ನ ಸಂಬಂಧಿ ಗಿರೀಶನಿಗೆ ಈ ಕೆಲಸ ವಹಿಸಿದೆವು. ಅವರನ್ನು ಒಪ್ಪಿಸೋ ಹೊತ್ತಿಗೆ ಗಿರೀಶನಿಗೆ ನೀರಿಳಿದು ಹೋದರೆ, ಪಾಟೀಲರ ಮನೆ ಹತ್ತಿರ ಇಳಿದ ತಕ್ಷಣ, ತೇಜಸ್ವಿಯವರು ನನಗೆ ನೀರಿಳಿಸಿದರು. `ಅಲ್ಲಾ ಮಾರಾಯ, ಒಂದು ಕೆಲ್ಸ ಸರಿ ಮಾಡೋಕೆ ಬರ್ದೆ ಹೋದ್ರೆ, ಯಾಕೆ ಆ ಕೆಲ್ಸ ಮಾಡ್ಬೇಕು. ನಾಯಿಗೆ ಹೇಳಿದ್ರೆ, ಅದು ಬಾಲಕ್ಕೆ ಹೇಳ್ತಂತೆ. ಇದ್ರ ಮಧ್ಯ ನನ್ನ ಸಮಯ ಮತ್ತೆ ಕೆಲಸ ಎರಡೂ ಹಾಳು. ನಿಮಗೆಲ್ಲ ಯಾವಾಗ ಬುದ್ದಿ ಬರುತ್ತೋ ಏನೋ?’ ಅಂತ ಬೈಯುತ್ತಲೇ ಮನೆ ಒಳಗೆ ಹೋದರು.
ಹೋಗಿ ಕೂತು ಒಂದು ನಿಮಿಷವೂ ಆಗಿರಲಿಲ್ಲ. ಚಿತ್ರಣವೇ ಬದಲಾಯಿತು. ಪಾಟೀಲರ ಸಹೋದರ ಡಿ.ಆರ್. ಪಾಟೀಲರು ಮತ್ತು ಅವರ ಮನೆಯವರೆಲ್ಲ ತೇಜಸ್ವಿಯವರ ಹತ್ತಿರ ಬಂದು ಪರಿಚಯ ಮಾಡಿಕೊಂಡರು. ರಾಮಕೃಷ್ಣ ಆಶ್ರಮದ ವಿಷಯದಿಂದ ಶುರುವಾದ ಚರ್ಚೆ, ಜೀವನ, ಮಲೆನಾಡು, ಬಯಲುಸೀಮೆ, ಕೃಷಿ, ಪರಿಸರ ಹೀಗೇ ಸಾಗುತ್ತಿತ್ತು. ಊಟಕ್ಕೆ ಏಳುವಾಗ ಮಧ್ಯರಾತ್ರಿಯಾಗಿತ್ತು. ಇದರ ಮಧ್ಯೆ ಕುದುರೇಮುಖ ಕಳೆದೇ ಹೋಗಿತ್ತು. ನಾವು ತೆಗೆದುಕೊಂಡು ಹೋಗಿದ್ದ ದಾಖಲೆಗಳ ಕಂತೆಯನ್ನಾಗಲೀ, ಲ್ಯಾಪ್ ಟಾಪ್ ನಲ್ಲಿದ್ದ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಆಗಲೀ ನೋಡಲು ಪಾಟೀಲರು ಒಪ್ಪಲೇ ಇಲ್ಲ.
ಕೊನೆಗೆ ತೇಜಸ್ವಿಯವರು ಕುದುರೇಮುಖದ ಬಗ್ಗೆ ವಿಷಯ ಎತ್ತುವಾಗಲೇ ಪಾಟೀಲರು ಅಡ್ಡ ಬಂದು ಆ ವಿಷಯದ ಬಗ್ಗೆ ತೇಜಸ್ವಿಯವರು ಚಿಂತಿಸುವ ಪ್ರಮೇಯವಿಲ್ಲ ಎಂದುಬಿಟ್ಟರು. ನನಗೆ ಮತ್ತು ಅವರ ಆಪ್ತ ಸಹಾಯಕ ಪುರೋಹಿತ್ ಕಡೆಗೆ ಕೈ ತೋರಿಸಿ, `ನೀವಿಬ್ಬರು ನೋಡಿಕೊಳ್ಳಿ, ಉಳಿದದ್ದು ನಾನು ಮಾಡ್ತೇನೆ,’ ಅಂದರು.
ಊಟ ಮುಗಿದು ಹೊರಡುವಾಗ, ಪಾಟೀಲರು ಒಂದು ಸಲಹೆ ನೀಡಿದರು. `ಈ ಕುದುರೇಮುಖ ಕಂಪನಿಯವರು ಕೆಲವು ಶಾಸಕರನ್ನು ಹಿಡಿದು ಗಲಾಟೆ ಮಾಡಿಸುವ ಸಾಧ್ಯತೆ ಇರುತ್ತದೆ. ನೀವು ಎಲ್ಲಾ ಶಾಸಕರಿಗೆ ಒಂದು ಪತ್ರ ಬರೆದು, ಅವರಿಗೆ ಅನಾಹುತದ ಬಗ್ಗೆ ವಿವರಣೆ ಕೊಟ್ಟಿರಿ. ಆಮೇಲೆ ನೋಡೋಣ,’ ಅಂದರು.
ಅದರಂತೆ, ಪ್ರವೀಣ್ ಪತ್ರವನ್ನು ತಯಾರು ಮಾಡಿ ತೇಜಸ್ವಿಯವರಿಗೆ ಕಳುಹಿಸಿದಾಗ, ಅವರು ಕೆಲವು ಬದಲಾವಣೆಗಳನ್ನೂ ಮಾಡಿದರು. ಯು ಆರ್ ಅನಂತಮೂರ್ತಿಯವರೂ ಸಹ ಆಗ ಕುದುರೇಮುಖ ಗಣಿಗಾರಿಕೆಯ ವಿರುದ್ದ ಚಳುವಳಿಯಲ್ಲಿ ಭಾಗವಹಿಸಿದ್ದರಿಂದ, ಅವರ ಸಹಿಯನ್ನೂ ಪಡೆಯಲಾಯಿತು. ಇನ್ನುಳಿದಂತೆ, ಅರ್ಜಿದಾರರಾದ ಚಿಣ್ಣಪ್ಪ ಮತ್ತು ಪ್ರವೀಣ್ ರವರು, ಮತ್ತೆ ವನ್ಯಜೀವಿ ಸಂಶೋಧನಕಾರರಾದ ಉಲ್ಲಾಸ್ ಕಾರಂತರ ಸಹಿಯನ್ನೂ ಹಾಕಿಸಲಾಯಿತು. ಆದರೆ, ಆ ಪತ್ರವನ್ನು ಬಿಡುಗಡೆ ಮಾಡುವ ಪ್ರಮೇಯವೇ ಬರಲಿಲ್ಲ. ಪುರೋಹಿತ್ ಮತ್ತು ಪಾಟೀಲರು ಎಷ್ಟು ಚೆನ್ನಾಗಿ ನಿಭಾಯಿಸಿದರೆಂದರೆ, ರಾಜ್ಯದ ಪ್ರಮಾಣಪತ್ರ ಗಣಿಗಾರಿಕೆಯ ವಿರುದ್ದವಾಗಿ ಸಲ್ಲಿಕೆಯಾಯಿತು. ಕಂಪನಿಯ ಅರ್ಜಿ ವಜಾ ಆಯಿತು.
ಡಿಸೆಂಬರ್ 31, 2005 ರಲ್ಲಿ ಕುದುರೇಮುಖದಲ್ಲಿ ಗಣಿಗಾರಿಕೆ ಕೊನೆಗೊಂಡರೆ, 2007, ಏಪ್ರಿಲ್ ನಲ್ಲಿ, ತೇಜಸ್ವಿಯವರು ಹೋಗಿಬಿಟ್ಟರು.
ಇದೆಲ್ಲದರ ನೆಡುವೆ, ಮಲೆನಾಡಿನ ಅವನತಿಗೆ ಒಂದು ಬೀಜ ಮೊಳಕೆಯೊಡೆಯಲು ಶುರುವಾಗಿದ್ದನ್ನು ನಾವು ನಿರ್ಲಕ್ಷಿಸಿದ್ದೆವೆಂದೇ ಹೇಳಬೇಕು. 2003ರ ಕೊನೆ ಭಾಗದಲ್ಲಿರಬೇಕು. ಮಲೆನಾಡಿನವರೇ ಆದ, ನನ್ನ ದೂರದ ಸಂಬಂಧಿ ಮತ್ತು ಐಎಎಸ್ ಅಧಿಕಾರಿಯಾಗಿದ್ದ ಐ ಎಂ ವಿಠ್ಠಲಮೂರ್ತಿಯವರು `ಹೋಂ ಸ್ಟೇ’ ಅನ್ನೋ ಕಲ್ಪನೆಯನ್ನು ಪ್ರವಾಸೋಧ್ಯಮ ಇಲಾಖೆಯಿಂದ ಹರಿಬಿಟ್ಟರು. ವಿದೇಶ ಪ್ರವಾಸಕ್ಕೆ ಹೋದಾಗ, ಸ್ವಿಟ್ಸರ್ಲೆಂಡಿನಲ್ಲಿ ಈ ಮಾದರಿಯ ಪ್ರವಾಸೋಧ್ಯಮ ಬಹಳ ಜನಪ್ರಿಯ ಅಂತ ನನ್ನ ಬಳಿ ಹೇಳಿದರು.
`ಅಲ್ಲ ಅಣ್ಣ, ಸ್ವಿಟ್ಸರ್ಲೆಂಡಿಗೂ, ನಮ್ಮ ಮಲೆನಾಡಿಗೂ ವ್ಯತ್ಯಾಸ ಇಲ್ವಾ? ಈಗ ಹಾಳಾಗಿರೋದೇ ಸಾಕು. ಇವೆಲ್ಲ ಮಾಡಿ ಇನ್ನಷ್ಟು ಅಧ್ವಾನ ಮಾಡೋದು ಬೇಡ,’ ಅಂತ ನೇರವಾಗಿ ಹೇಳಿದೆ.
`ಹಾಗಲ್ಲ… ಅಲ್ಲಿರೋ ನಮ್ಮ ಹುಡುಗರಿಗೆ ಕೆಲಸ ಇರೋದಿಲ್ಲ. ಅವರಿಗೆಲ್ಲ ಇದೊಂಥರಾ ಬ್ಯುಸಿನೆಸ್ ಆಗುತ್ತದೆ. ಖಾಲಿ-ಪೋಲಿ ಸುತ್ಕೊಂಡು ಇರೋದ್ ಬಿಟ್ಟು, ಸಂಪಾದನೆ ಮಾಡೋಕೆ ಶುರುಮಾಡ್ತಾರೆ. ನಮ್ಮಲ್ಲಿ ಏನೇನು ಇದೆ ಅನ್ನೋದನ್ನ ಬೇರೆಯವರಿಗೂ ತೋರಿಸ್ಬೇಕಲ್ಲಾ? ಹೊಸದೊಂದು ಎಕಾನಮಿನೇ ಶುರುವಾಗುತ್ತೆ, ನೋಡ್ತಿರಿ,’ ಅಂದರು.
`ದುಡ್ಡು ಮಾಡೋದೇ ಮುಖ್ಯ ಆದರೆ, ಇವೆಲ್ಲ ಯಾಕೆ. ಕ್ಯಾಸಿನೋ ಹಾಕಿದ್ರೆ ಸಾಕು. ಅದ್ರ ಜೊತೆ ಥಾಯ್ಲೆಂಡ್ ಥರ ಸೆಕ್ಸ್ ಟೂರಿಸಂ ಶುರುಮಾಡಿದ್ರೆ, ಬೇಕಾದಷ್ಟು ದುಡ್ಡು ಬರುತ್ತೆ. ಹಾಗಂತ ಎಲ್ಲಾದನ್ನೂ ಹಾಳು ಮಾಡ್ತಾ ಕೂರೋಕೆ ಆಗುತ್ತಾ?,’ ಅಂತ ನೇರವಾಗಿ ಹೇಳಿದೆ.
`ಅದಕ್ಕೆ ನೋಡಿ ನಮ್ಮ ದೇಶ ಮುಂದೆ ಬರ್ತಾ ಇಲ್ಲ. ಇವೆಲ್ಲ ಹಳೇಕಾಲದ ಯೋಚನೆಗಳು. ಸುಮ್ಮನೆ ಇರೋ ನಮ್ಮ ಹುಡುಗರ ಕೈಗೆ ದುಡ್ಡು ಬರಬೇಕು. ಆಗ ಅವರು ಚುರುಕಾಗ್ತಾರೆ. ದೇಶದ ಸಂಪತ್ತೂ ಜಾಸ್ತಿಯಾಗುತ್ತೆ,’ ಅಂತ  ಹೇಳಿದರು.
`ನೋಡಿ ಅಣ್ಣ, ನಾನೂ ಎಕನಾಮಿಕ್ಸ್ ಓದಿದವನು. ಬರೀ ಜಿಡಿಪಿ, ಗ್ರೋತ್ ರೇಟ್, ಎಂಪ್ಲಾಯ್ ಮೆಂಟು ಅಂತ ಹೇಳ್ಕೊಂಡು, ಒಂದಿಷ್ಟು ಅಂಕಿ, ಅಂಶಗಳನ್ನು ಜನಗಳ ಮುಖಕ್ಕೆ ಎರಚಿ ಬೆಳವಣಿಗೆ ಅಂತ ಬಡ್ಕೋತ್ತಿದ್ದೀವಿ ಅಷ್ಟೆ. ಅದು ನಮ್ಮ ಜೀವನಾನ ಎಷ್ಟರ ಮಟ್ಟಿಗೆ ಹಾಳು ಮಾಡಿದೆ ಅನ್ನೋದನ್ನ ಯಾರೂ ಮಾತಾಡ್ತಿಲ್ಲ. ಮಾತಾಡೋದೆಲ್ಲ ಏನಿದ್ರೂ ಯಾವ ಕಾರು, ಎಷ್ಟರ ಮನೆ, ಎಷ್ಟು ಸಂಬಳ ಅಂತ. ಅಲ್ಲ ಅಣ್ಣ, ಇಲ್ಲಿ ಕೆಲಸಕ್ಕೆ ಸೇರ್ತಾರಲ್ಲ, ನಲ್ವತ್ತು, ಐವತ್ತು ಸಾವಿರ ಸಂಬಳ ತಗೊಂಡು, ಅವರಿಗೆ ಕೆಲಸ ಹೋದ್ರೆ ಏನಾಗುತ್ತೆ ಅಂತ ನೀವ್ಯಾವತ್ತಾದ್ರೂ ಯೋಚನೆ ಮಾಡಿದ್ದೀರಾ? ಮನೆ, ಫ್ಲ್ಯಾಟು ಎಲ್ಲಾ ಮಾರ್ಕೊಂಡು ಹೋಗ್ಬೇಕಾಗುತ್ತೆ, ಬೇರೆ ಕಡೆ ಕೆಲ್ಸ ಸಿಗದಿದ್ರೆ. ಈ `ಡಾಟ್ಕಾಮ್’ ಕಂಪನಿಗಳು ಮುಚ್ಚಿದಾಗ ನಾವು ನೋಡಿರ್ಲಿಲ್ವಾ?’ ಅಂದೆ.
`ಎಲ್ಲಾದಕ್ಕೂ ಹಾಗೇ ಯೋಚನೆ ಮಾಡಿದ್ರೆ ಹ್ಯಾಗೆ? ನಾವು ಜೀವನದಲ್ಲಿ ಪಾಸಿಟಿವ್ ಆಗಿರ್ಬೇಕು. ಮುಂದೆ ನೋಡಿ, ನಮ್ಮ ಮಲೆನಾಡಿನ ಜೀವನ ಹೇಗಾಗುತ್ತೆ ಅಂತ,’ ಅಂದರು.
`ಏನಾದ್ರೂ ಮಾಡ್ಕೊಂಡು ಸಾಯ್ರಿ, ನಂಗೇನಾಗ್ಬೇಕು? ಬಟ್ಟೆ ಬಿಚ್ಚಿ ಬೆತ್ತಲೆಯಾಗೋದೊಂದು ಬಾಕಿಯಾಗಿದೆ ಅಷ್ಟೆ,’ ಅಂತ ಸಿಟ್ಟಿನಲ್ಲಿ ಎದ್ದು ಹೊರಗೆ ಹೋದೆ. ಅಲ್ಲಿಂದ ನೇರವಾಗಿ ಐಜಿಪಿ ಯಾಗಿದ್ದ ಚಿಕ್ಕಮಗಳೂರಿನ ಟಿ ಜಯಪ್ರಕಾಶ್ ರವರ ಆಫೀಸಿಗೆ ಹೋಗಿ, ವಿಷಯ ಹೇಳಿದೆ.
`ಅಣ್ಣ, ನೀವಾದ್ರೂ ಅವ್ರಿಗೆ ಹೇಳಿ. ಇಲ್ಲದ್ದನೆಲ್ಲ ಮಾಡೋಕೆ ಹೊರಟಿದ್ದಾರೆ,’ ಅಂತ ಹೇಳಿದೆ.
`ಯಾರು ಮಾತಾಡ್ತಾರೆ ಅವರ ಹತ್ರ. ಬರೀ ಶೋಕಿ ಅಷ್ಟೆ, ಆ ಮನುಷ್ಯಂಗೆ. ಆ ಪಿಕ್ಚರ್ ತೆಗೆದು, ಒಂದಿಷ್ಟು ಹೈ ಸೊಸೈಟಿಯವರ ಜೊತೆ ಇರ್ತಾರೆ. ಇವ್ರಿಗೆಲ್ಲ ನಮ್ಮೂರು ಅಂದ್ರೆ ಮಾರಾಟದ ವಸ್ತು ಆಗಿದೆ ಅಷ್ಟೆ. ಮಾತಾಡೋದ್ರಿಂದ ಏನೂ ಪ್ರಯೋಜನ ಇಲ್ಲರಿ. ನಮ್ಮ ತಲೆ ಹಾಳಾಗುತ್ತೆ, ಗಂಟಲು ನೋವುತ್ತೆ, ಅಷ್ಟೆ,’ ಅಂತ ಅವರು ತಣ್ಣಗೆ ಹೇಳಿದಾಗ, ತೆಪ್ಪಗಾದೆ. ವಿಠ್ಠಲಮೂರ್ತಿಯವರು , ಕುವೆಂಪುರವರ ಕಾನೂರು ಸುಬ್ಬಮ್ಮ ಹೆಗ್ಗಡತಿ ಕಾದಂಬರಿಯನ್ನು ಚಲನಚಿತ್ರವಾಗಿ ಮಾಡಿದ್ದರು ಮತ್ತು ಅದಕ್ಕೆ ರಾಷ್ಟ್ರ ಪ್ರಶಸ್ತಿಯೂ ದೊರೆತಿತ್ತು.
ಆ ವಿಷಯ ನನ್ನ ತಲೆಯಿಂದ ಹಾಗೇ ಜಾರಿಹೋಯಿತು. ಮತ್ತೆರೆಡು ವರ್ಷ ಚುನಾವಣೆಯಲ್ಲಿ ಎಸ್ ಎಂ ಕೃಷ್ಣ ಸರ್ಕಾರ ಸೋತು, ಸಮ್ಮಿಶ್ರ ಸರ್ಕಾರ ಬಂದಿದ್ದು, ಕುದುರೇಮುಖದ ವಿಷಯ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು, ಹೀಗೇ ಕಳೆದುಹೋಯಿತು. ನಮ್ಮದೇ ನೂರೆಂಟು ವಿಷಯಗಳ ಬಗ್ಗೆ `ಹೋಂ ಸ್ಟೇ’ ಅನ್ನೋ ವಿಷಯ ನನಗೆ ಗಮನದಲ್ಲಿಟ್ಟುಕೊಳ್ಳಬೇಕು  ಅಂತ ಅನ್ನಿಸಿರಲಿಲ್ಲ.
ನಿಧಾನವಾಗಿ, ಬೆಂಗಳೂರಿನಿಂದ ಬಹಳ ಜನ ಕೊಡಗಿಗೆ ಹೋಗಿ ಬರುತ್ತಿದ್ದಾರೆ ಅನ್ನುವುದು ನನ್ನ ಗಮನಕ್ಕೆ ಬರಲು ಶುರುವಾಯಿತು. ಮುಂಚೆ ಊಟಿಗೆ ಹೋಗಿ ಬರುವವರೆಲ್ಲ ಈಗ ಕೊಡಗಿಗೆ ದಾಳಿ ಇಡುತ್ತಿದ್ದಾರೆ ಅಂತ ತಿಳಿದಾಗ, ಮಡಿಕೇರಿಯ ಬಾಲಾಜಿಗೆ ಫೋನ್ ಮಾಡಿದೆ.
`ಸಾವು ಮಾರಾಯ… ಈ ಹೋಂ ಸ್ಟೇಗಳ ಹಾವಳಿ. ಶುಕ್ರವಾರ ಸಾಯಂಕಾಲಕ್ಕೆ ಮಡಿಕೇರಿಯಲ್ಲಿ ಟ್ರಾಫಿಕ್ ಜಾಮ್ ಆದರೆ, ಭಾನುವಾರ ಸಾಯಂಕಾಲವೇ ಸರಿ ಆಗೋದು. ಜೀವನ ಬರ್ಬಾದ್ ಆಗಿದೆ,’ ಅಂದ.
`ಅಲ್ವೋ, ನಿನ್ನ ಅಂಗಡೀಲಿ ವ್ಯಾಪಾರ ಜೋರಾಗಿರಬೇಕಲ್ಲ?’ ಅಂದೆ.
`ಈ ಥರದ ಜೀವನ ಆದ್ರೆ ವ್ಯಾಪಾರ ಆದ್ರೆಷ್ಟು, ಬಿಟ್ರೆಷ್ಟು…. ಲೈಫೇ ಇಲ್ಲ ಕಣೋ ಇಲ್ಲಿಯವರಿಗೆ. ಎಲ್ಲಾ ಕಡೆಯಿಂದ ಬಂದವರ ಸೇವೆ ಮಾಡ್ಕೊಂಡು, ಅವ್ರ ಕಸ ತೊಳೆಯೋ ಕೆಲಸ ಆಗಿದೆ. ಹೋಂ ಸ್ಟೇಗಳ ಒಂದೊಂದು ಕಥೆ ಕೇಳಿದರೆ ಗಾಭರಿಯಾಗ್ತದೆ. ಇಲ್ಲಿ ಬರೋ ಜನಗಳೋ, ದೇವರಿಗೇ ಪ್ರೀತಿ. ಅವರನ್ನು ಮನುಷ್ಯರು ಅಂತ ಹೇಳೋಕೆ ನಾಚಿಗೆಯಾಗುತ್ತೆ. ಎಲ್ಲಾ ಕಡೆ ಕಸ ಎಸೀತ್ತಾರೆ, ಗಲೀಜು ಜನಗಳು. ಸಾಕಾಗಿ ಹೋಗಿದೆ ಮಾರಾಯ,’ ಅಂದ.
`ನಾನೂ ಮಡಿಕೇರಿಗೆ ಬಂದು ಹತ್ತು ವರ್ಷ ಆಗ್ತಾ ಬಂತು ಅಂತ ಕಾಣುತ್ತೆ. ಹುಣಸೂರಿನಿಂದ ನಾಗರಹೊಳೆಗೆ ತಿರುಗಿಸಿ, ಹಾಗೇ ವಾಪಾಸ್ ಹೋಗ್ತೀನಿ. ಈ ಕಾಟ ಇನ್ನೂ ಚಿಕ್ಕಮಗಳೂರಿಗೆ ಕಾಲಿಟ್ಟಿಲ್ಲ ನೋಡು,’ ಅಂದೆ.
`ಅದೇನೂ ದೂರ ಇಲ್ಲ. ಅಲ್ಲೂ ಇದ್ದಾವೆ, ಇಷ್ಟಿಲ್ಲ. ನೋಡ್ತಾ ಇರು, ಅಲ್ಲೂ ಬರ್ತಾವೆ,’ ಅಂದ.
ಹಾಗೇ ಯೋಚನೆ ಮಾಡುತ್ತಾ ಕೂತೆ. ಎಷ್ಟೊಂದು ಬದಲಾವಣೆಗಳಾಗಿವೆ ಅನ್ನಿಸಿತು. ನಮ್ಮ ಮನೆಯಲ್ಲೇ ಗದ್ದೆ ಮಾಡೋದನ್ನ ಬಿಟ್ಟಿದ್ದೆವು. ನಿಧಾನವಾಗಿ ಒಬ್ಬೊಬ್ಬರೇ ಗದ್ದೆ ಮಾಡುವುದನ್ನು ನಿಲ್ಲಿಸುತ್ತಿದ್ದರು. ಇದ್ದ ಬದ್ದ ಗದ್ದೆ ಬೈಲುಗಳೆಲ್ಲ ಶುಂಠಿ ಬೆಳೆಸಿ, ಕಾಫೀ ತೋಟಗಳಾಗಿ ಮಾರ್ಪಾಡಾಗಲು ಶುರುವಾಗಿತ್ತು. ನಿಧಾನವಾಗಿ, ಎಷ್ಟೋ ಹಳ್ಳಗಳು ಹರಿಯುವುದನ್ನೇ ನಿಲ್ಲಿಸಿದ್ದವು. ನಾನು ನೋಡಿದ ಅತೀ ದೊಡ್ಡ ಗದ್ದೆಬೈಲು ಅಂದರೆ ವಿರಾಜಪೇಟೆಯ ಹತ್ತಿರದ ಬಿಟ್ಟಂಗಾಲ. ಅಲ್ಲಿಯೂ ಗದ್ದೆ ಮಾಡುವುದನ್ನು ನಿಲ್ಲಿಸಿ, ವಿರಾಜಪೇಟೆಯ ಕಡೆಯಿಂದ ಮನೆಗಳನ್ನು ಕಟ್ಟುವುದಕ್ಕೆ ಶುರುಮಾಡಿದ್ದಾರೆ.
ಬೆಂಗಳೂರು-ಹಾಸನ ಮಧ್ಯದ ರಸ್ತೆ ಅಭಿವೃದ್ಧಿಯಾದಮೇಲೆ, ಹೋಂ ಸ್ಟೇ ಹಾವಳಿ ಸಕಲೇಶಪುರ, ಮೂಡಿಗೆರೆ ಮತ್ತು ಚಿಕ್ಕಮಗಳೂರಿಗೆ ದಾಳಿ ಇಟ್ಟವು. ತೋಟದ ಕೆಲಸಕ್ಕಿಂತ, ಆಳುಗಳಿಗೆ ಹೋಂ ಸ್ಟೇ ಕೆಲಸ ಬಹಳ ಇಷ್ಟವಾಗತೊಡಗಿತು. ಜೀವನ ಶೈಲಿಯೇ ಬದಲಾಯಿತು. ಮುಂಚೆಲ್ಲ ಊರಿಗೆ ಹೋದರೆ, ನಮ್ಮ ಕುಟುಂಬದವರ ಮನೆಗಳಿಗೆ ಹೋಗುವುದು ಸಹಜ. ಈಗ, ಅವರ ಮನೆಯಲ್ಲಿ ಹೋಂ ಸ್ಟೇ ಇದ್ದರೆ, ಹೋಗಲು ಹಿಂಜರಿಯುತ್ತೇವೆ. ಅವರಿಗೂ ಇಷ್ಟವಾಗುವುದಿಲ್ಲ. ಕುಟುಂಬಗಳಲ್ಲಿದ್ದ ಅನೋನ್ಯತೆಗೆ ಕುತ್ತು ಬಂದಂತೆ ಅನ್ನಿಸುತ್ತಿದೆ. ಯಾರಿಗೂ ಅದರ ಬಗ್ಗೆ ಪರಿತಾಪವಿಲ್ಲ. ಕಾಡನ್ನು ಒತ್ತುವರಿ ಮಾಡಿ ಹೋಂ ಸ್ಟೇ, ರೆಸಾರ್ಟ್ ಮಾಡುವವರಿಗೆ ಲೆಖ್ಖವಿಲ್ಲ. ನಿಯಂತ್ರಿಸುವವರು ಯಾರೂ ಇಲ್ಲ. ಎಲ್ಲರ ಲಕ್ಷ್ಯವಿರುವುದು ಕುಣಿಯುವ ಕಾಂಚಾಣದ ಮೇಲೆ ಮಾತ್ರ.
ವಾರಾಂತ್ಯದಲ್ಲಿ ಎಲ್ಲಿ ನೋಡಿದರೂ ಬೆಂಗಳೂರಿನಿಂದ ಬರೋ ಕಾರುಗಳನ್ನು ನೋಡಿದರೆ ಗಾಭರಿಯಾಗುತ್ತದೆ. ಬಸ್ಸಿನಲ್ಲಿ ಬರುವವರ ಸಂಖ್ಯೆಯೂ ಕಡಿಮೆಯಿಲ್ಲ. ಚಿಕ್ಕಮಗಳೂರಿನ ಎಂ ಜಿ ರಸ್ತೆ, ವಾರಾಂತ್ಯದಲ್ಲಿ ತೆರೆದ ಬಾರ್ ಆಗಿರುತ್ತದೆ ಅಂತ ನಮ್ಮವರೇ ಹೇಳುತ್ತಾರೆ. ಇನ್ನು ವಾರಾಂತ್ಯಕ್ಕೆ ಹೊಂದಿಕೊಂಡಂತೆ ರಜೆ ಇದ್ದರಂತೂ ಕೇಳುವುದೇ ಬೇಡ. ಹೋದ ವರ್ಷ, ಒಂದೇ ದಿನದಲ್ಲಿ ಮುಳ್ಳಯ್ಯನಗಿರಿಗೆ 75000 ಜನ ಬಂದಿದ್ದರಂತೆ. ಗಿರಿ ರಸ್ತೆಯಲ್ಲಿ ಐದು ಕಿಲೋಮೀಟರ್ ಟ್ರಾಫಿಕ್ ಜಾಮ್. ಕೇಳಿ ತಲೆ ಕೆಟ್ಟು ಹೋಯಿತು. ಈ ಶನಿ ಸಂಸ್ಕೃತಿ ನಿಧಾನವಾಗಿ ಶಿವಮೊಗ್ಗ, ಉತ್ತರಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳನ್ನೂ ಆವರಿಸುತ್ತಿದೆ.
ಇದರ ನೆಡುವೆ ವಕ್ಕರಿಸಿದ ಇನ್ನೊಂದು ಭೂತವೇ ಎತ್ತಿನಹೊಳೆ ಯೋಜನೆ. ಇದರ `ಪ್ರಯೋಜನ’ ಪ್ರಪಂಚಕ್ಕೇ ಗೊತ್ತಿದ್ದರೂ, ಯಾರೂ ನಿಲ್ಲಿಸಲಾಗಲಿಲ್ಲ. ವಿರೋಧ ಪಕ್ಷದಲ್ಲಿದ್ದಾಗ ವಿರೋಧಿಸಿದ ಎಚ್ ಡಿ ಕುಮಾರಸ್ವಾಮಿಯವರೂ ಮೌನಕ್ಕೆ ಶರಣಾಗಿದ್ದಾರೆ. ನಮ್ಮ ರಾಜ್ಯದ `ನೀತಿ ಚಿಂತಾಮಣಿ’ ಒಬ್ಬರು, ಈ ಯೋಜನೆಯನ್ನು ವಿರೋಧಿಸಲು ವಿದೇಶಗಳಿಂದ ಪರಿಸರವಾದಿಗಳಿಗೆ ಹಣ ಹರಿದು ಬಂದಿದೆ ಅಂತ ವಿಧಾನಸಭೆಯಲ್ಲೇ ಆರೋಪಿಸಿದರು. ಅವರ ವಿರುದ್ದ ಅರಣ್ಯ ಒತ್ತುವರಿಯ ಆರೋಪ ಬಂದಾಗ, ಅದು ವಿರೋಧಿಗಳ ಕುತಂತ್ರ ಅಂತ ವಾದಿಸಿದವರು. ಹಾಗೆಯೇ, ಈ ಹದಿಮೂರು ಸಾವಿರ ಕೋಟಿ ರೂಪಾಯಿಯ ಯೋಜನೆಯ ಕಮಿಷನ್ ಎಷ್ಟು ಅಂತ ಆಡಳಿತ, ವಿರೋಧಿ ಪಕ್ಷದವರ್ಯಾರೂ ಚಕಾರವೆತ್ತುತ್ತಿಲ್ಲ. ಇದೆಲ್ಲದರ ಮಧ್ಯ ಸೊರಗಿದ್ದು ಮಲೆನಾಡು ಮಾತ್ರ.
ಎತ್ತಿನ ಹೊಳೆ ನಂತರ ಎಲ್ಲರ ಕಣ್ಣು ಬಿದ್ದಿರುವುದು ಎತ್ತಿನ ಭುಜದ ಮೇಲೆ. ಶಿಶಿಲ-ಭೈರಾಪುರ ರಸ್ತೆ ಮಲೆನಾಡಿನ ಅಭಿವೃದ್ದಿಯ ಪಥ ಎಂದೇ ರಾಜಕಾರಣಿಗಳು ಬಣ್ಣಿಸುತ್ತಿದ್ದಾರೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರಿಂದ ಹಿಡಿದು, ಎಲ್ಲಾ ರಾಜಕಾರಣಿಗಳೂ ಇದರ ಹಿಂದೆ ಬಿದ್ದಿದ್ದಾರೆ. ಈ ರಸ್ತೆ ಬಂದರೆ, ತಮ್ಮ ಆಸ್ತಿಗಳಿಗೆ ಎಕರೆಗೆ 40 ಲಕ್ಷ ರೂಪಾಯಿ ದೊರಕುತ್ತದೆ ಅಂತ ಅಲ್ಲಿನ ಜನಗಳೂ ನಂಬಿದ್ದಾರೆ. ಒಂದು ಕಡೆ ಶಿರಾಡಿ, ಇನ್ನೊಂದು ಕಡೆ ಚಾರ್ಮಾಡಿ ರಸ್ತೆಗಳು ಇರುವಾಗ, ಇನ್ನೊಂದು ರಸ್ತೆ ಯಾಕೆ ಅಂತ ಕೇಳುವವರನ್ನು ಅಭಿವೃದ್ಧಿ ವಿರೋಧಿಗಳು ಅಂತ ಬಿಂಬಿಸುತ್ತಾರೆ. ಇವರ ಪ್ರಕಾರ ಅಭಿವೃದ್ದಿ ಅಂದರೆ ಟಾರು ಮತ್ತು ಕಾಂಕ್ರೀಟು.
ಈ ಯೋಜನೆಯನ್ನು ಕೈಬಿಡುವಂತೆ ಮನವೊಲಿಸಲು ನನ್ನ ಕುಟುಂಬದವರೇ ಆದ ಮತ್ತು ಎಂಎಲ್ಸಿಯಾಗಿರುವ ಪ್ರಾಣೇಶಣ್ಣನ ಹತ್ತಿರ ಕೆಲವರು ಹೋದಾಗ, ಅವರನ್ನು ಬೈದು ಕಳುಹಿಸಿದರಂತೆ. ನನಗೆ ಅಂಗೈ ತೋರಿಸಿ ಅವಲಕ್ಷಣ ಅನ್ನಿಸಿಕೊಳ್ಳುವ ತೆವಲು ಇಲ್ಲದಿರುವುದರಿಂದ, ನಾನು ಯಾವತ್ತೂ ಆ ವಿಷಯವನ್ನು ಅವರ ಹತ್ತಿರ ಮಾತನಾಡಲು ಹೋಗಲಿಲ್ಲ. ಆದರೆ, ಒಂದು ಮಾತಂತೂ ಸತ್ಯ. ಈ ಯೋಜನೆಯ ಹಿಂದಿರುವವರು  ಕಾಂಟ್ರಾಕ್ಟರ್ ಗಳು ಮತ್ತು ಇವರ ಕಮಿಷನ್ ಗೋಸ್ಕರ ಪಕ್ಷಾತೀತವಾಗಿ ಎಲ್ಲರೂ ತಮ್ಮನ್ನು ಮಾರಿಕೊಂಡಿದ್ದಾರೆ.
ಮೂಡಿಗೆರೆಯ ಚಿತ್ರಣವೇ ಬದಲಾಗಿದೆ. ಹೋದ ವರ್ಷ ದೇವರ ಮನೆಗೆ ಹೋಗುವಾಗ, ದಾರಿಯಲ್ಲಿ ಅರುಂದತಿ ಅಕ್ಕನ ಮನೆಗೆ ಹೋಗಿದ್ದೆ. ಮನೆ ತುಂಬಾ ಚೆನ್ನಾಗಿದೆ. ತೋಟದ ಚಿತ್ರಣ ನೋಡಿ ಬೆಚ್ಚಿಬಿದ್ದೆ. ರೋಬಸ್ಟಾ ತೋಟಕ್ಕೆ ನೆರಳು ಬೇಕು ಅಂತ ಇದ್ದ ಕಾಡುಮರಗಳನ್ನೆಲ್ಲ ತೆಗೆದು, ಅಲ್ಲೊಂದು, ಇಲ್ಲೊಂದು ಸಿಲ್ವರ್ ಮರ ಬಿಟ್ಟಿದ್ದಾರೆ. ಅದು ಇವರೊಬ್ಬರಿಗೆ ಮಾತ್ರ ಸೀಮಿತವಾಗಿಲ್ಲ. ಮೂಡಿಗೆರೆ-ಬಣಗಲ್ ರಸ್ತೆಯಿಂದ ದೇವರ ಮನೆಗೆ ಎಡಕ್ಕೆ ತಿರುಗಿದ ತಕ್ಷಣದಿಂದ ಶುರುವಾಗುತ್ತೆ. ಎಲ್ಲೆಲ್ಲಿ ಕಾಫೀ ತೋಟಗಳಿವೆಯೋ, ಅಲ್ಲೆಲ್ಲ ಇದೇ ಅವಸ್ಥೆ. ಇದೇ ದಾರಿಯಲ್ಲಿ ಮುಂದೆ ಹೋದರೆ ಭೈರಾಪುರ-ಶಿಶಿಲ ಸಿಗುವುದು.
ಮುಂಚೆಲ್ಲ ದೇವರ ಮನೆ, ಕೋಗಿಲೆಗೆ ಹೋಗುವುದೆಂದರೆ ಅದೊಂದು ಸಾಹಸವೇ ಸರಿ. ಕಗ್ಗಾಡು. ತೇಜಸ್ವಿಯವರ ನಿಗೂಡ ಮನುಷ್ಯರು, ಹುಲಿಯೂರಿನ ಸರಹದ್ದು, ಕಿರಗೂರಿನ ಗಯ್ಯಾಳಿಗಳ ವಿವರಗಳನ್ನು ನೋಡಿದರೆ, ಈ ಜಾಗವನ್ನು ನೋಡಿದಂತೆ ಅನ್ನಿಸುತ್ತಿತ್ತು. ಈಗ ದೇವರ ಮನೆಗೆ ವಾರಾಂತ್ಯದಲ್ಲಿ ಕಾಲಿಡಲು ಸಾಧ್ಯವೇ ಇಲ್ಲ. ಜನಗಳ ಜಾತ್ರೆ.
ತೇಜಸ್ವಿಯವರ ವರ್ಣನೆಯಂತೆ ಮೂಡಿಗೆರೆಯ ಸೌಂದರ್ಯ ಆಸ್ವಾದಿಸಲು ಸಾಧ್ಯವೇ ಇಲ್ಲ. ಯಾಕಂದರೆ, ಎರ್ರಾಬಿರ್ರಿಯಾಗಿ ಬರುವ ಬೆಂಗಳೂರಿನ ಕಾರುಗಳಿಂದ ತಪ್ಪಿಸಿಕೊಳ್ಳುವುದೇ ಒಂದು ದೊಡ್ಡ ಸಾಹಸ. ವಾರಾಂತ್ಯದಲ್ಲಿ, ಹೋಂಸ್ಟೇ ಮತ್ತು ರೆಸಾರ್ಟ್ ಗಳಲ್ಲಿ ಹಾಕುವ ಸಂಗೀತ ಎರಡು, ಮೂರು ಕಿಲೋಮೀಟರ್ ದೂರಕ್ಕೆ ಕೇಳುತ್ತಿರುತ್ತದೆ. ಎಲ್ಲೂ ಉಳಿಯಲು ಜಾಗ ಸಿಗದಿದ್ದವರು, ಯಾರಾದದರೂ ತೋಟದ ಬೇಲಿ ಪಕ್ಕದಲ್ಲಿ ಪಾರ್ಟಿ ಮಾಡಿ ಹೋಗಿರುತ್ತಾರೆ. ಬೆಳಗ್ಗೆ ಎದ್ದಾಗ ಬೇಲಿ ಪಕ್ಕದಲ್ಲಿರುವ ಪ್ಲಾಸ್ಟಿಕ್ ಮತ್ತು ಬಾಟ್ಲಿಗಳ ರಾಶಿ ನೋಡಿದಾಗಲೇ ಗೊತ್ತಾಗುವುದು. ಒಟ್ಟಾರೆ, ಬೆಂಗಳೂರಿನ ಜನಗಳು ವಾರಾಂತ್ಯ ಪಾರ್ಟಿಗೆ ಅಂತ ಮೂರೂವರೆ ಘಂಟೆ ಪ್ರಯಾಣ ಮಾಡಿ ಮಲೆನಾಡು ತಲುಪುತ್ತಾರೆ ಅಷ್ಟೆ.
ಕೃಪಾಕರ-ಸೇನಾನಿ ಬರೆದ ಕೆನ್ನಾಯಿಯ ಜಾಡಿನಲ್ಲಿ ಪುಸ್ತಕ ಓದುವಾಗ ತೇಜಸ್ವಿಯವರು ಹೇಳಿದ ಮಾತೋಂದರ ಉಲ್ಲೇಖವಿತ್ತು.  `ಅಲ್ರಯ್ಯಾ, ನಾನು ನೋಡಿದ ಕಾಡಿರಲಿ, ನೀವು ನೋಡುತ್ತಿರುವ ಕಾಡು, ನೀವು ಬರೆಯುವ ಕಾಡಿನ ಕಥೆಗಳನ್ನೆಲ್ಲ ಮುಂದೊಮ್ಮೆ ಜನ ಬರೀ ಸುಳ್ಳು ಬರೆದಿದ್ದಾರೆ ಅಥವಾ ಅವುಗಳೆಲ್ಲಾ ಕಾಲ್ಪನಿಕ ಚಿತ್ರಣಗಳಿರಬಹುದೆಂದು ಹೇಳಬಹುದು. ಆಗ ಏನ್ ಮಾಡ್ತೀರ ನೋಡೋಣ…’ ಎಂದು ನಕ್ಕಿದ್ದರಂತೆ.
ಇಂದು ತೇಜಸ್ವಿ ಇದ್ದಿದ್ದರೆ, ಅವರಿಗೆ 80 ವರ್ಷಗಳಾಗಿರುತ್ತಿತ್ತು. ಅವರು ಹೋಗಿ ಬರೀ ಹನ್ನೊಂದು ವರ್ಷಗಳಷ್ಟೇ ಆಗಿರುವುದು. ಈಗಾಗಲೇ ಅವರ ಕಥೆಗಳಲ್ಲಿ ಬರುವ ಪಾತ್ರಗಳು ಮತ್ತು ಹಿನ್ನೆಲೆಗಳು, ಹೊಸ ಪೀಳಿಗೆಗಳಿಗೆ ಕಾಲ್ಪನಿಕವಾಗಿ ಕಾಣುತ್ತಿವೆ. ಅಷ್ಟೇಕೆ, ಅವರ ಕರ್ವಾಲೋ ಕಾದಂಬರಿಯಿಂದ ಎದ್ದು ಬಂದು ಅವರನ್ನೇ ಪ್ರಶ್ನಿಸಿದ ಯಂಕ್ಟ ಮತ್ತು ಬಿರಿಯಾನಿ ಕರಿಯಪ್ಪ ಕೂಡ ಕಾಲ್ಪನಿಕವಾಗೇ ಕಾಣುತ್ತಾರೆ.
ಸೋಮಾರಿತನವನ್ನೇ ಹೊದ್ದುಕೊಂಡು, ಸಾಹಿತ್ಯದ ಬಂಜರುಭೂಮಿಯಾದ ಮೂಡಿಗೆರೆ ಎಂಬ ಸಣ್ಣ ಪಟ್ಟಣದಲ್ಲಿ ಇದ್ದ ಜೀವಸೆಲೆಯನ್ನು ಬಗೆದು ತೆಗೆದವರೇ ತೇಜಸ್ವಿ. ಈಗ, ಆ ಪಟ್ಟಣ ತೇಜಸ್ವಿಯವರು ಕಂಡ ಮುಗ್ದತೆ, ಸಾಮಾಜಿಕ, ನೈತಿಕ ಮತ್ತು ಭೌಗೋಳಿಕ ಚೌಕಟ್ಟನ್ನು ಹರಿದು, ಹೊಸ ಪ್ರಪಂಚವಾಗಿ ಪರಿವರ್ತನೆಗೊಂಡಿದೆ. ಯಾಕೋ ಮನಸ್ಸಿಗೆ ಪಿಚ್ಚೆನಿಸುತ್ತದೆ. ಒಮ್ಮೆ ತೇಜಸ್ವಿಯವರಿಗೆ ಕೇಳಬೇಕು ಅನ್ನಿಸ್ತಿದೆ -- `ನೀವೇನೋ ಹೋಗ್ಬಿಟ್ರಿ, ನಾವೇನು ಮಾಡ್ಬೇಕು’?

ಮಾಕೋನಹಳ್ಳಿ ವಿನಯ್ ಮಾಧವ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ