ಶುಕ್ರವಾರ, ಮೇ 25, 2012

ಚಿದು


ಜನ, ಚೇಂಜ್ ಕೇಳ್ತಾರಮ್ಮಾ…..


ಮೊನ್ನೆ ಲಾ ಕಮಿಷನ್ ಸರ್ಕಾರಕ್ಕೆ ಕಳುಹಿಸಿದ ಕೆಲವು ಸಲಹೆಗಳನ್ನು ಓದ್ತಾ ಇದ್ದೆ. ಅದ್ರಲ್ಲಿ ಪ್ರಮುಖವಾಗಿದ್ದದ್ದೇ ಡೌರಿ ಕೇಸುಗಳು ತುಂಬಾ ದುರುಪಯೋಗವಾಗುತ್ತಿರುವುದರಿಂದ, ಅದಕ್ಕೆ ತಿದ್ದುಪಡಿ ತರಬೇಕು ಅಂತ. ಈಗ ಡೌರಿ ಕೇಸ್ ಕೊಟ್ಟ ತಕ್ಷಣ, ದೂರಿನಲ್ಲಿ ಹೆಸರಿರುವವರನ್ನೆಲ್ಲ ಅರೆಸ್ಟ್ ಮಾಡಿ, ಒಳಗೆ ಹಾಕ್ತಾರೆ ಮತ್ತೆ ಅವರಿಗೆ ಬೇಲ್ ಸಿಗೋದು ಕಷ್ಟ.
ಲಾ ಕಮಿಷನ್, ಎಷ್ಟೊ ಕೇಸ್ ಗಳನ್ನು ಅಭ್ಯಾಸ ಮಾಡಿ, ಡೌರಿ ಕೇಸ್ ಗಳಲ್ಲಿ ತಕ್ಷಣ ಅರೆಸ್ಟ್ ಮಾಡದಂತೆಯೂ, ಆಪಾ ದಿತರಿಗೆ ಬೇಲ್ ಸಿಗುವಂತೆ, ಕಾನೂನಿಗೆ ತಿದ್ದುಪಡಿ ತರಬೇಕು ಅಂತ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.
ಅದು ಓದ್ತಾ ಇದ್ದಂತೆ ತಲೆಗೆ ಬಂದಿದ್ದು ಒಂದೇ ಡೈಲಾಗ್ : ಜನ, ಚೇಂಜ್ ಕೇಳ್ತಾರಮ್ಮಾ! ಇಷ್ಟು ವರ್ಷದ ಮೇಲಾದ್ರೂ ಸತ್ಯ ಆಗ್ತಿದೆ ಅನ್ಕೊಂಡು ನಕ್ಕೆ.
ನಾನು ಮೊದಲ ಸಲ ಈ ಡೈಲಾಗ್ ಕೇಳಿದ್ದು ಬೆಂಗಳೂರಿಗೆ ಬಂದ ಹೊಸತರಲ್ಲಿ. ನನ್ನ ಕಸಿನ್ ಡಾ. ದೇವಿ ಪ್ರಸಾದ್ ನೋಡೋಕೆ ಕೆಂಪೇಗೌಡ ಮೆಡಿಕಲ್ ಕಾಲೇಜಿಗೆ ಹೋಗಿದ್ದೆ.  ಅಲ್ಲಿನ ಡೆಂಟಲ್ ಕಾಲೇಜ್ ಪೂರ್ತಿ ನನಗೆ ಗೆಳೆಯರಿದ್ದರು. ಎಲ್ಲರ ಜೊತೆ ಮಾತಾಡ್ತಾ ಇದ್ದಾಗ  ಅವನು ಮೆಟ್ಟಿಲು ಹತ್ತಿಕೊಂಡು ಬಂದವನೇ, ಸಿನೆಮಾ ಹೀರೋ ಗತ್ತಲ್ಲಿ, ನಮ್ಮ ಕಡೆ ತಿರುಗಿಯೂ ನೋಡದೆ, `ಹಾಯ್….’ ಅಂದವನೇ ಮುಂದಕ್ಕೆ ಹೋದ.
ನಮಗೇ ವಿಚಿತ್ರ ಅನ್ನಿಸುವಂತ ಪ್ಯಾಂಟ್, ಶರ್ಟ್ ಹಾಕ್ಕೊಂಡು, ಕೂದಲನ್ನು ಪಾಪ್ ಸಿಂಗರ್ಸ್ ಥರ ಮಾಡ್ಕೊಂಡು, ಕಾಲೇಜಿನ ನಾಲ್ಕನೇ ಅಂತಸ್ತಿನಲ್ಲೂ ಕೂಲಿಂಗ್ ಗ್ಲಾಸ್ ಹಾಕ್ಕೊಂಡು ಬಂದವನನ್ನು ನೋಡಿ ಸುಸ್ತಾದೆ. `ಏನಮ್ಮಾ ಚಿದೂ… ಗಡ್ಡ ಶೇವ್ ಮಾಡ್ಬಿಟ್ಟಾ?’ ಅಂತ ಕುಲದೀಪ್ ತಮಾಷೆ ಮಾಡ್ದ.
ತಿರುಗಿನೂ ನೋಡ್ದೆ ಅವನು ಉತ್ತರಿಸಿದ: `ಜನ, ಚೇಂಜ್ ಕೇಳ್ತಾರಮ್ಮಾ’ ಅಂತ.
ಆ ಗುಂಪಲ್ಲಿದ್ದವರ್ಯಾರೂ ಅವನನ್ನು ಸೀರಿಯಸ್ ಆಗಿ ತಗೊಂಡ ಹಾಗೆ ಕಾಣಲಿಲ್ಲ. ನಾನೇ ಕೇಳ್ದೆ: `ಯಾರೋ ಇದು ನಮೂನ?’ ಅಂತ.
`ಅವ್ನು ಚಿದು, ದಿ ಗ್ರೇಟ್ ವಿನಯಣ್ಣ… ಹಿ ಇಸ್ ಡಿಫರೆಂಟ್. ನೋಡು, ಯಾರ್ನೂ ಕೇರ್ ಮಾಡ್ದೆ ಎಷ್ಟು ಆರಾಮವಾಗಿ ಹೋದ. ದಿನಕ್ಕೊಂಥರ ಸ್ಟೈಲ್ ಮಾಡ್ತಾನೆ. ಒಂದಿನ ಸೂಟ್ ಹಾಕ್ಕೊಂಡು ಬಂದ್ರೆ, ಇನ್ನೊಂದಿನ ಬರ್ಮುಡ ಹಾಕ್ಕೊಂಡು ಬರ್ತಾನೆ. ಒಂದಿನ ಮೀಸೆ, ಗಡ್ಡ ಬಿಟ್ಕೊಂಡು ಬಂದ್ರೆ, ಇನ್ನೊಂದಿನ ಮೀಸೆ ಬೋಳಿಸಿ, ಬರೀ ಗಡ್ಡ ಬಿಟ್ಕೊಂಡು ಬರ್ತಾನೆ…’ ಅಂತ ದೇವಿ ಪ್ರಸಾದ್ ನಾಟಕೀಯವಾಗಿ ಹೇಳ್ತಾ ಹೋದ.
ಶುದ್ದ ತರ್ಲೆ ಗ್ಯಾಂಗ್ ಅಂತ ಮೊದಲಿಂದ್ಲೇ ಗೊತ್ತಿತ್ತು. `ಏ… ಅವ್ನಿಗೆಲ್ಲೋ ಇದೆ ಮೀಸೆ, ಗಡ್ಡ? ಪಾಪದವ್ನು ಸಿಕ್ದ ಅಂತ ಸಿಕ್ಕಾಬಟ್ಟೆ ತಮಾಷೆ ಮಾಡ್ತೀಯ,’ ಅಂತ ಗದರಿಸಿದೆ.
`ಅವ್ನು ಕೆಟ್ಟವ್ನು ಅಂತ ನಾನೆಲ್ಲಿ ಹೇಳ್ದೆ? ಅವ್ನು ಒಳ್ಳೆಯವ್ನೇ…. ಡಿಫರೆಂಟ್ ಅಷ್ಟೆ,’ ಅಂತ ಎಲ್ಲರೂ ನಗೋಕೆ ಶುರು ಮಾಡಿದ್ರು.
ಯಾವಾಗಲೂ ಸೀರಿಯಸ್ ಆಗಿ ಇರ್ತಿದ್ದ ಆದರ್ಶ, ಗಂಭೀರವಾಗಿ ಹೇಳ್ದ: `ಇವ್ನ ಕಂಡ್ರೆ ಹುಡುಗೀರು ಮಾತ್ರ ಲಾಠಿ ಚಾರ್ಜ್ ಆದ ಹಾಗೆ ಓಡ್ತಾರೆ,’ ಅಂದ.
`ಯಾಕೋ?’ ಅಂತ ಕೇಳ್ದೆ.
`ತುಂಬಾ ಕೊರೀತಾನಂತೆ. ನಮಗೆ ಹುಡುಗರಿಗೆ ತೊಂದ್ರೆ ಇಲ್ಲ. ಯಾಕೆಂದ್ರೆ, ನಮ್ಮನ್ನೇನು ಜಾಸ್ತಿ ಮಾತಾಡ್ಸೋಲ್ಲ,’ ಅಂತ ನಕ್ಕ.
ಸರಿ, ಇವರ್ಗೆಲ್ಲಾ ಆಡಿಕೊಳ್ಳೋಕೆ ಒಂದು ಕಾರ್ಟೂನ್ ಸಿಕ್ಕಿದೆ ಅಂತ ಅನ್ಕೊಂಡೆ.
ಈ ಗ್ಯಾಂಗ್ ಜೊತೆ ಸೇರಿದಾಗಲೆಲ್ಲ ಒಂದಲ್ಲ ಒಂದು ಸಲ ಚಿದು ಹೆಸರು ಬಂದು ಹೋಗ್ತಿತ್ತು. ಯಾವುದೋ ಒಂದು ಡೈಲಾಗ್ ಅಥವಾ ಅವನು ಹಾಕಿದ್ದ ಬಟ್ಟೆ, ಯಾವ ಹುಡುಗಿಗೆ ಚೆನ್ನಾಗಿ ಕೊರೆದು, ಅವಳು ಎರಡು ದಿನ ಕಾಲೇಜಿಗೆ ತಲೆ ಹಾಕಲಿಲ್ಲ. ಇವನ್ನು ಸ್ವಾರಸ್ಯವಾಗಿ ಹೇಳುವ ಸುಮಾರು ಜನ ಆ ಗ್ಯಾಂಗ್ ನಲ್ಲಿದ್ದಿದ್ದರಿಂದ, ಅದೊಂಥರ ಎಂಟರ್ ಟೈನ್ಮೆಂಟ್ ಅಂತಲೇ ನಾವು ಅನ್ಕೋತ್ತಿದ್ವಿ.
ಎಲ್ಲಾರೂ ಕಾಲೆಜ್ ಮುಗಿಸಿದಂತೆ, ಈ ಗ್ಯಾಂಗ್ ದೂ ಕಾಲೇಜ್ ಮುಗೀತು. ಕೆಲವರು ಫೇಲಾಗಿ ದಂಡಯಾತ್ರೆಗಳನ್ನು ಶುರು ಮಾಡಿದ್ರೆ, ಕೆಲವರು ಕ್ಲಿನಿಕ್ ಗಳನ್ನು ತೆಗೆದರು. ಇನ್ನು ಕೆಲವರು, ಬೇರೆ ಬೇರೆ ಕಾಲೇಜುಗಳಲ್ಲಿ ಕೆಲಸಕ್ಕೆ ಸೇರಿದರು.
ಆದ್ರೂ ಈ ಗ್ಯಾಂಗ್ ಆಗಾಗ ಸಿಕ್ತಿತ್ತು. ಸಿಕ್ಕಿದಾಗಲೆಲ್ಲ ಚಿದು ಜೋಕ್ಸ್ ಗ್ಯಾರಂಟಿ. ಚಿದುನೂ ಯಾವುದೋ ಒಂದು ಕಾಲೇಜಿನಲ್ಲಿ ಲೆಕ್ಚರ್ ಆಗಿ ಸೇರಿದ್ದಾನಂತೆ. ಅದೇ ಥರ ಡ್ರೆಸಿಂಗ್ ಸೆನ್ಸ್… ಕಾಲೇಜಿನಲ್ಲಿ ವಾಕ್ ಮನ್ ಹಾಕಿಕೊಂಡು ಓಡಾಡುವ ಏಕೈಕ ಲೆಕ್ಚರ್ ಅಂತೆ. ಇವನ್ನ ಕಂಡ್ರೆ ಈಗಲೂ ಹುಡುಗೀರು ಹೆದರ್ತಾರಂತೆ. ಆದ್ರೆ, ಏನೂ ಮಾಡೋ ಹಾಗಿಲ್ಲವಂತೆ. ಯಾಕೇಂದ್ರೆ ಲೆಕ್ಚರ್ ಕಾಫಿಗೆ ಕರೆದ್ರೆ ಹೋಗಲೇ ಬೇಕಾಗುತ್ತಂತೆ… ಹೀಗೇ ಕಥೆಗಳು.
`ಅಲ್ವೋ, ಕಾಲೇಜ್ ಮೇನೇಜ್ ಮೆಂಟ್ ಏನೂ ಇವನಿಗೆ ಹೇಳೋಲ್ವಂತಾ? ಯಾರೂ ಕಂಪ್ಲೇಂಟ್ ಮಾಡಿಲ್ವಾ?’ ಅಂತ ಒಂದ್ಸಲ ದೇವಿ ಪ್ರಸಾದ್ ಗೆ ಕೇಳ್ದೆ.
`ವಿನಯಣ್ಣ… ಚಿದು ಒಳ್ಳೆಯವ್ನು ಕಣೋ. ಯಾರ ತಂಟೆಗೂ ಹೋಗಲ್ಲ. ಹುಡುಗೀರ್ನ ಕ್ಯಾಂಟೀನಿಗೆ ಕರ್ಕೊಂಡು ಹೋಗಿ ಕೊರೀತಾನೆ ಅನ್ನೋದು ಬಿಟ್ಟರೆ, ಅವ್ನು ಹಾರ್ಮ್ ಲೆಸ್ ಪ್ರಾಣಿ ಕಣೋ. ಮತ್ತೆ, ಚೆನ್ನಾಗಿ ಪಾಠನೂ ಮಾಡ್ತಾನಂತೆ,’ ಅಂದ. ಸರಿ, ಅಂತ ನಾನು ಸುಮ್ಮನಾದೆ.
ಅದಾಗಿ ಮೂರ್ನಾಲ್ಕು ವರ್ಷಗಳು ಕಳೆದಿರಬಹುದು. ದೇವಿ ಪ್ರಸಾದನ ಹಳೇ ಗ್ಯಾಂಗ್ ಮತ್ತು ನನ್ನ ಒಡನಾಟ ಕಮ್ಮಿಯಾಗಿತ್ತು. ಅವರವರ ಕೆಲಸದಲ್ಲಿ ಬ್ಯಸಿಯಾಗಿದ್ದೆವು. ಒಂದ್ಸಲ ಬಸವೇಶ್ವರನಗರದಲ್ಲಿ ದೇವಿ ಪ್ರಸಾದ್ ಮನೆಯಲ್ಲಿದ್ದಾಗ, ಅವನ ಕಿಮ್ಸ್ ಗ್ಯಾಂಗ್ ನ ಕೆಲವು ಮೆಂಬರ್ ಗಳು ಬಂದಿಳಿದರು. ಮತ್ತೆ ಶುರುವಾಯ್ತು… ಹಳೇ ನೆನಪುಗಳನ್ನು ಕೆದುಕೋ ಕೆಲ್ಸ.
ಮಧ್ಯದಲ್ಲಿ ನಾನು ಕೇಳ್ದೆ: `ಅಲ್ರೋ… ಚಿದು ಹ್ಯಾಗಿದ್ದಾನೆ?’ ಅಂತ.
`ಪಾಪ ಕಣೋ… ಅವ್ನಿಗೆ ಹಾಗಾಗ ಬಾರ್ದಿತ್ತು. ಹುಚ್ಚ ಕಣೋ. ಅವನಿಗ್ಯಾಕೆ ಬೇಕಿತ್ತು ಊರು ಉದ್ದಾರ ಮಾಡೋ ಕೆಲ್ಸ. ಈಗೇನೋ ಪರ್ವಾಗಿಲ್ಲವಂತೆ. ಅಪ್ಪ, ಅಮ್ಮನ ಜೊತೆಲೇ ಇದ್ದಾನಂತೆ,’ ಅಂತ ಹರೀಶ್ ಗುಟ್ಟಳ್ಳಿ ಹೇಳ್ದ.
`ಯಾಕೋ? ಏನಾಯ್ತೋ?’ ಅಂತ ಕೇಳ್ದೆ.
`ನಿಂಗೊತ್ತಿಲ್ವಾ? ಚಿದುದು ಮದ್ವೆ ಆಗಿ ಡೈವೋರ್ಸ್ ಆಯ್ತು. ಅದೊಂದು ದೊಡ್ಡ ಕಥೆ. ಇವ್ನ ಹಳೇ ಫ್ರೆಂಡ್ ಅಂತೆ. ಒಂದಿನ ಬಂದು ಕಷ್ಟ ಹೇಳ್ಕೊಂಡಿದ್ದಾನೆ. ಇವ್ನ ಫ್ರೆಂಡ್, ಒಂದು ಹುಡುಗೀನ ಲವ್ ಮಾಡಿದ್ದಾನಂತೆ. ಅವ್ನ ತಂಗಿ ಮದುವೆ ಆಗೋವರೆಗೆ ಮನೆಯಲ್ಲಿ ಅವ್ನಿಗೆ ಮದುವೆ ಆಗೋಕೆ ಬಿಡೋಲ್ಲವಂತೆ. ಅವ್ನ ತಂಗಿಗೆ ಗಂಡು ಕೂಡ ಸೆಟ್ ಆಗ್ತಿಲ್ಲವಂತೆ. ಹಾಗಾಗಿ ನನ್ನ ತಂಗೀನ ಮದ್ವೆ ಆಗ್ತೀಯಾ? ಅಂತ ಚಿದುಗೆ ಕೇಳಿದ್ದಾನೆ,’ ಅಂತ ಹರೀಶ್ ಶುರು ಮಾಡ್ದ.
`ಫ್ರೆಂಡ್ ಕಷ್ಟಕ್ಕೆ ಆಗ್ದೆ ಹೋದ್ರೆ ಫ್ರೆಂಡ್ ಶಿಪ್ ಯಾಕಮ್ಮಾ ಇರ್ಬೇಕು?’ ಅಂತ ಡೈಲಾಗ್ ಹೊಡೆದ ಚಿದು, ಮದುವೆಗೆ ಒಪ್ಪಿದ್ದಾನೆ. ಆದ್ರೆ ಚಿದು ತಂದೆ, ತಾಯಿ, ಇವನಿಗೆ ಈಗಲೇ ಮದುವೆ ಬೇಡ ಅಂದಿದ್ದಾರೆ. ಯಾರ ಮಾತನ್ನೂ ಸುಲಭವಾಗಿ ಕೇಳದ ಚಿದು, ಹಟ ಹಿಡಿದು ಮದುವೆಗೆ ಒಪ್ಪಿಸಿದ್ದಾನೆ.
ಮದುವೆಯೇನೋ ಜೋರಾಗಿ ಆಯ್ತು. ಆದ್ರೆ, ಹುಡುಗಿ ಮಾತ್ರ ಚಿದು ಹತ್ತಿರವಾಗ್ಲಿ, ಅವನ ಮನೆಯವರ ಹತ್ತಿರವಾಗ್ಲಿ, ಹೆಚ್ಚು ಮಾತಾಡ್ತಾ ಇರ್ಲಿಲ್ಲ. ಲಾ ಓದಿದ ಅವಳು, ಯಾವುದೋ ಲಾಯರ್ ಆಫೀಸಿನಲ್ಲಿ ಕೆಲಸ ಮಾಡ್ತಿದ್ಲು. ಸ್ವಲ್ಪ ದಿನ ಆದ್ಮೇಲೆ, ಬೇರೆ ಮನೆ ಮಾಡೋಕೆ ಹೇಳಿದ್ಲು. ಕುರಿ ಥರ, ಬೇರೆ ಮನೆ ಮಾಡಿದ್ದಾನೆ.
ಯಾಕೋ ಎಲ್ಲಾ ಸರಿ ಇಲ್ಲ ಅಂತ ಚಿದುಗೆ ಅನ್ನಿಸೋಕೆ ಶುರುವಾಗಿದೆ. ಅದಕ್ಕೆ ಸರಿಯಾಗಿ, ಎದುರು ಮನೆಯವರು ಚಿದುಗೆ ಹಳೆ ಪರಿಚಯ. ಒಂದು ದಿನ ಅವನನ್ನು ಕರೆದು, ಪ್ರತಿದಿನ ಮಧ್ಯಾಹ್ನ ಅವನ ಹೆಂಡತಿ ಯಾರೋ ಒಬ್ಬ ಹುಡುಗನ ಜೊತೆ ಮನೆಗೆ ಬರ್ತಾಳೆ, ಮತ್ತೆ ನಾಲ್ಕು ಘಂಟೆ ಹೊತ್ತಿಗೆ ಇಬ್ಬರೂ ವಾಪಾಸ್ ಹೋಗ್ತಾರೆ, ಅಂತ ಹೇಳಿದ್ದಾರೆ.
ಮಾರನೇ ದಿನ, ಚಿದು ಮಧ್ಯಾಹ್ನದ ಹೊತ್ತಿಗೆ ರಜಾ ಹಾಕಿ ಮನೆಗೆ ಬಂದಿದ್ದಾನೆ. ಎದುರು ಮನೆಯವರು ಹೇಳಿದ್ದು ಸುಳ್ಳೇನೂ ಆಗಿರಲಿಲ್ಲ. ಮನೆಯ ಬೀಗ ತೆಗೆದು ಒಳಗೆ ನುಗ್ಗಿದವನೇ, ವೀರಾವೇಶದಿಂದ ಹೆಂಡತಿಯ ಕೆನ್ನೆಗೊಂದು ಹೊಡೆದು, ಆ ಹುಡುಗನಿಗೂ ಹೊಡೆಯಲು ಹೋಗಿದ್ದಾನೆ. ಇವನಿಗಿಂತ ಬಲವಾಗಿದ್ದ ಆ ಹುಡುಗ, ಚಿದುಗೆ ಯದ್ವಾ ತದ್ವಾ ಬಾರಿಸಿದ್ದಾನೆ.
ಚಿದು ತನ್ನ ಹೆಂಡತಿಯ ಅಣ್ಣನಿಗೆ  ಮತ್ತೆ ಅತ್ತೆ, ಮಾವಂದಿರಿಗೆ ಫೋನ್ ಮಾಡಿ ಜಾಡಿಸಿದ್ದಾನೆ. ಹಾಗೇ, ತನ್ನ ತಂದೆ, ತಾಯಿಯರಿಗೆ ವಿಷಯ ಹೇಳಿ ಗೋಳಾಡಿದ್ದಾನೆ. ಅವನ ತಂದೆ, ತಾಯಿಯರು ಅವಳನ್ನ ಬಿಟ್ಟು ಬಾ ಅಂತ ಹೇಳಿದ್ದಾರೆ.
ಚಿದುವಿಗೆ ಗೊತ್ತಾಗಿದ್ದು ಇಷ್ಟು. ಮದುವೆಗೆ ಮುಂಚೆನೇ ಅವನ ಹೆಂಡತಿಗೆ ಬಿಹಾರಿ ಹುಡುಗನೊಬ್ಬನ ಜೊತೆ ಅಫೇರ್ ಇತ್ತಂತೆ. ಅದು ಗೊತ್ತಾದ ಮನೆಯವರು, ನಮ್ಮ ಜಾತಿಯ ಹುಡುಗನಿಗೆ ಕೊಟ್ಟು ಮದುವೆ ಮಾಡಲು ಓಡಾಡ್ತಾ ಇದ್ರಂತೆ. ಆ ಸಮಯದಲ್ಲಿ ಅವಳ ಅಣ್ಣ ಚಿದುಗೆ ಗಾಳ ಹಾಕಿ, ತನ್ನ ತಂಗಿಯನ್ನು ಸಾಗ ಹಾಕಿದ್ದಾನೆ, ಅಷ್ಟೆ.
ಚಿದು ಮಾವನ ಕಡೆಯವರು ಯಾವುದೇ ಮಧ್ಯಸ್ತಿಕೆ ವಹಿಸಲು ಮುಂದೆ ಬರಲಿಲ್ಲ. ಮನೆತನದ ಮರ್ಯಾದೆಗೆ ಅಂಜಿದ ಅವರು ಮಗಳಿಗೇ ಬೈದಿದ್ದಾರೆ. ಸ್ವಲ್ಪ ದಿನ ಹಾಗೇ ಕಳೆದಿದೆ. ಒಂದು ದಿನ ಸಾಯಂಕಾಲ ಏಳು ಘಂಟೆಯ ಹೊತ್ತಿಗೆ ಪೋಲಿಸ್ ಬಂದು, ಚಿದು, ಅವನ ತಂದೆ, ತಾಯಿ ಮತ್ತೆ ತಮ್ಮ ಎಲ್ಲರನ್ನೂ ಅರೆಸ್ಟ್ ಮಾಡಿಕೊಂಡು ಹೋಗಿದ್ದಾರೆ. ಅವನ ಹೆಂಡತಿ ಡೌರಿ ಕೇಸ್ ಜಡಿದಿದ್ದಾಳೆ.
ಕಾನೂನು ಅಂದ್ರೆ ಏನು ಅಂತ ಗೊತ್ತಿಲ್ಲದ ಕುಟುಂಬದವರು ಪೋಲಿಸರ ಹತ್ತಿರ ಗೋಳಾಡಿದ್ದಾರೆ. ಆ ಇನ್ಸ್ ಪೆಕ್ಟರ್, ಅವರಿಗೆ ಲಾಯರ್ ಗೆ ಪೋನ್ ಮಾಡಲು ಬಿಟ್ಟಿದ್ದಾರೆ. ಲಾಯರ್ ಬಂದವರೇ, `ಇವತ್ತು ಶುಕ್ರವಾರ. ನಾಳೆ, ಸೆಕೆಂಡ್ ಸ್ಯಾಟರ್ ಡೇ. ಇನ್ನು ಕೋರ್ಟ್ ತೆಗೆಯೋದು ಸೋಮವಾರವೇ. ಅಲ್ಲಿ ತನಕ ಏನೂ ಮಾಡೋಕ್ಕಾಗಲ್ಲ,’ ಅಂದಿದ್ದಾರೆ.
ಈ ಮಧ್ಯ, ಚಿದುವಿನ ಅತ್ತೆ, ಮಾವನಿಗೆ ವಿಷಯ ಗೊತ್ತಾಗಿ, ಅವರೂ ಪೋಲಿಸ್ ಸ್ಟೇಶನ್ ಗೆ ಬಂದಿದ್ದಾರೆ. ತಮ್ಮ ಮಗಳದೇ ತಪ್ಪು ಅಂತ ಪೋಲಿಸರ ಮುಂದೆ ಹೇಳಿಕೆ ಕೊಟ್ಟರೂ, ಹುಡುಗಿಯೇ ಬಂದು ಕಂಪ್ಲೇಂಟ್ ವಾಪಾಸ್ ತೆಗೆಯದೆ ಹೋದರೆ ಏನೂ ಮಾಡಲಾಗುವುದಿಲ್ಲ ಅಂತ ಹೇಳಿ ಕಳುಹಿಸಿದ್ದಾರೆ. ಅಂತೂ ಇಂತೂ, ಸೋಮವಾರ ಸಾಯಂಕಾಲದ ಹೊತ್ತಿಗೆ ಮನೆಯವರೆಲ್ಲಾ ಬಿಡುಗಡೆಯಾಗಿ ವಾಪಾಸ್ ಬಂದಿದ್ದಾರೆ.
ಅವತ್ತಿಡೀ ನಾವೆಲ್ಲಾ ಚಿದೂದೇ ವಿಷಯ ಮಾತಾಡಿದ್ವಿ. ಕೆಲವರು ಹುಚ್ಚ ಅಂದ್ರೆ, ಇನ್ನು ಕೆಲವರು, ಪಾಪ ಅಂತಿದ್ರು. ಒಟ್ಟಾರೆ, ಅವ್ನಿಗೆ ಒಳ್ಳೆದಾಗ್ಲಿ ಅಂತಾನೇ ಎಲ್ಲಾರೂ ಮಾತಾಡ್ಕೊಂಡ್ವಿ.
ಮುಂದಿನ ಹತ್ತು ವರ್ಷ ಚಿದು ನಂಗೆ ನೆನಪಾಗಿರ್ಲಿಲ್ಲ. ಮತ್ತೆ ನೆನಪಾಗಿದ್ದು ಬೆಂಗಳೂರಿನಲ್ಲಿ ಟೆಕ್ಕಿ ಗಿರೀಶ್ ಕೊಲೆಯಾದಾಗ. ಲಾಯರ್ ಹುಡುಗಿ, ಬಿಹಾರಿ ಹುಡುಗನ ಜೊತೆ ಅಫೇರ್ ಇಟ್ಕೊಂಡು, ನಿಶ್ಚಿತಾರ್ಥವಾಗಿದ್ದ ಹುಡುಗನನ್ನು ಕೊಲೆ ಮಾಡಿಸಿದಾಗ, ಚಿದು ಲಕ್ಕಿ ಅನ್ನಿಸಿತು. ಆಗೆಲ್ಲ ಮಧ್ಯಮ ವರ್ಗದ ಜನಗಳಿಗೆ, ಕೊಲೆ ಮಾಡುವ ಅಥವಾ ಮಾಡಿಸುವ ಧೈರ್ಯ ಇರಲಿಲ್ಲ.
ಚಿದು ಜೀವಂತವಾಗಿ ಉಳಿದಿದ್ದ……


ಮಾಕೋನಹಳ್ಳಿ ವಿನಯ್ ಮಾಧವ್  

ಶುಕ್ರವಾರ, ಮೇ 18, 2012

ಶೆರಿಲ್



ಅವಳಿಗೆ ಇನ್ನೊಂದು ಛಾನ್ಸ್ ಸಿಗಬಾರದಿತ್ತಾ?

`ಅದ್ಸರಿ ಮ್ಯಾಡಂ, ಅವಳಿಗೆ ಸೀಮೇಎಣ್ಣೆ ಎಲ್ಲಿ ಸಿಕ್ಕಿದ್ದು?’ ಅಂತ ಕೇಳ್ದೆ.
`ಕಿಚನ್ ನಿಂದ ಕದ್ಕೊಂಡು ಹೋಗಿರ್ಬೇಕು ಸರ್... ಎಷ್ಟು ಜನನಾಂತ ನಾವೂ ಕಾಯ್ತಾ ಇರೋಕೆ ಆಗುತ್ತೆ. ಆ ಹುಡುಗಿ ಬಂದಾಗಿಂದ ಹಾಗೆನೆ. ದಿನಾ ಒಂದಲ್ಲಾ ಒಂದು ರಗಳೆ. ಒಂದ್ಸಲ ಓಡಿ ಹೋಗಿದ್ಲು. ಆಗ್ಲೇ ನಾವು ಅವಳನ್ನ ಮತ್ತೆ ಕರ್ಕೊಂಡು ಬರ್ಬೇಡಿ ಅಂತ ಹೇಳಿದ್ವಿ. ನಮ್ಮ ಮಾತು ಯಾರು ಕೇಳ್ತಾರೆ. ಪೋಲಿಸ್ ಎಲ್ಲಾರನ್ನೂ ತಂದು ಇಲ್ಲಿ ತುಂಬ್ತಾರೆ, ಹೀಗಾದಾಗ ನಮ್ಮ ತಲೆಗೆ ಕಟ್ತಾರೆ, ಅಷ್ಟೆ,’ ಅಂತ ಒಂದೇ ಉಸಿರಿಗೆ ಆ ಹೆಂಗಸು ಹೇಳಿದ್ಲು.
ಆ ಕಡೆಯಲ್ಲಿ ಮಾತಾಡ್ತಿದ್ದಿದ್ದು ಬಾಲಾಪರಾಧಿಗಳ ಕೇಂದ್ರದ ವಾರ್ಡನ್. ಹಿಂದಿನ ದಿನ ಸಾಯಂಕಾಲ  ಒಂದು ಹುಡುಗಿ ಬಾತ್ ರೂಮಿನಲ್ಲಿ ಸೀಮೆಎಣ್ಣೆ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಬೆಳಗ್ಗೆನೇ ಫೋನ್ ಮಾಡಿ, ಏನಾದ್ರೂ ಫಾಲೋ ಅಪ್ ಮಾಡೋಕೆ ಇದ್ಯಾ ಅಂತ ಕೆದಕುತ್ತಿದ್ದೆ.
`ಅಲ್ಲಾ ಮ್ಯಾಡಂ....’ಅಂತ ಮತ್ತೇನೋ ಕೇಳೋಕೆ ಹೋದಾಗ, ಅರ್ಧಕ್ಕೇ ತಡೆದು ಹೇಳಿದ್ಲು: `ನೋಡಿ ಸರ್, ಈಗ್ಲೇ ನಮ್ಗೆ ಪೂರ್ತೀ ಪ್ರಾಬ್ಲಂ ಆಗಿದೆ. ಮತ್ತೆ ನೀವು ಏನೇನೊ ಬರ್ದು ಬಿಟ್ರೆ ಮುಗೀತು. ನಾವು ಸಾಯೋವರೆಗೂ ದಿನಾ ನಮ್ಮ ತಿಥಿ ಮಾಡ್ತಾರೆ. ಮೊದಲನೇ ಸಲ ಇಲ್ಲಿಗೆ ಕರ್ಕೊಂಡು ಬರುವಾಗಲೇ ಇವ್ಳು ಇಬ್ಬರು ಹುಡುಗರ ಜೊತೆ ರೂಮಿನಲ್ಲಿ ಇದ್ಲಂತೆ. ಈ ವಯಸ್ಸಿಗೇ ಇಷ್ಟು. ಇನ್ನೊಂದು ಹತ್ತು ವರ್ಷ ಬದುಕಿದ್ದರೆ, ಇಡೀ ಬೆಂಗ್ಳೂರೇ ತಿಂದು ಹಾಕ್ತಿದ್ಲು,’ ಅಂತ ತನ್ನ ಸಿಟ್ಟನ್ನೇಲ್ಲಾ ಕಾರಿ, ಫೋನ್ ಕುಕ್ಕಿದಳು.
`ಥತ್ತೇರಿ,’ ಅನ್ಕೊಂಡೆ. ನಾನು ಏನೋ ಕೇಳೋಕೆ ಹೋದ್ರೆ, ಈ ಹೆಂಗಸು ಇನ್ನೇನೋ ಮಾತಾಡ್ತದೆ. ಅಲ್ಲ, ಹದಿನೈದು ವರ್ಷದ ಆಂಗ್ಲೋ ಇಂಡಿಯನ್ ಹುಡುಗಿ ಇಬ್ಬರು ಹುಡುಗ್ರ ಜೊತೆ ಹೋಗಿದ್ಲು ಸರಿ. ದಾರಿ ತಪ್ಪಿದ್ಲು ಅನ್ಕೊಳ್ಳೋಣ. ಆದ್ರೆ, ಬಾಲಾಪರಾಧಿಗಳ ಕೇಂದ್ರದಲ್ಲಿ ಅವಳು ಸೀಮೇಎಣ್ಣೆ ಸುರ್ಕೊಂಡು ಬೆಂಕಿ ಹಾಕ್ಕೋಬೇಕು ಅಂತೇನೂ ಇಲ್ಲ ಅನ್ನಿಸ್ತು.
ಸರಿ, ಪೋಲಿಸರಿಗೇ ಕೇಳೋಣ ಅನ್ಕೊಂಡು ಫೋನ್ ಮಾಡಿದರೆ, ವಿಲ್ಸನ್ ಗಾರ್ಡನ್ ಮತ್ತೆ ಸಿದ್ದಾಪುರ ಪೋಲಿಸ್ ಮಧ್ಯ ಜ್ಯುರಿಸ್`ಡಿಕ್ಷನ್ ಪ್ರಾಬ್ಲಂ ಶುರುವಾಯ್ತು. ಕೊನೆಗೂ ಸಿದ್ದಾಪುರದ ಪೋಲಿಸ್ ಕಾನ್ಸ್ ಟೇಬಲ್ ಮಾತಾಡಲು ಒಪ್ಪಿಕೊಂಡ. ಫೋನಲ್ಲೇಕೆ ಅಂತ ನಾನು ಅಲ್ಲಿಗೇ ಹೋದೆ.
`ನಂಗ್ಯಾಕೋ ಆ ಹುಡುಗಿ ಬಗ್ಗೆ ಪಾಪ ಅನ್ನಿಸ್ತು ಸರ್. ತುಂಬಾನೇ ಮುದ್ದಾಗಿದ್ಲು. ಅದು ಸ್ಯುಸೈಡ್ ಅನ್ನೋದ್ರ ಬಗ್ಗೆ ನಿಮಗೆ ಸಂಶಯ ಬೇಡ. ಅವಳೇ ಚಿಕ್ಕ ಚೀಟಿಯಲ್ಲಿ ಬರೆದಿದ್ದಾಳೆ – ನಂಗೆ ಜೀವನದಲ್ಲಿ ಅಪ್ಪ, ಅಮ್ಮ ಇಬ್ಬರೂ ಸಿಗದಿದ್ರೂ ಪರವಾಗಿಲ್ಲ. ನಾನು ಸತ್ತ ಮೇಲೆ, ನನ್ನ ತಂಗಿ ಮತ್ತೆ ತಮ್ಮನಿಗೆ ಸಿಕ್ಕಿದರೂ ಸಾಕು ಅಂತ. ಹೆಣ ತಗೊಂಡು ಹೋಗೋಕ್ಕೆ ತಂದೆ, ತಾಯಿ ಇಬ್ಬರೂ ಬರಲಿಲ್ಲ. ಯಾರೋ ವಯಸ್ಸಾದವರು -- ಅಂಕಲ್ ಅನ್ಕೊಂಡು ಬಂದಿದ್ರು. ಅವರೇ ಬಾಡಿ ತಗೊಂಡು ಹೋದ್ರು,’ ಅಂದರು.
`ಸರ್, ಅವಳ ಫೋಟೋ ಇದೆಯಾ?’ ಅಂತ ಕೇಳ್ದೆ.
ಅಲ್ಲೇ ಫೈಲಿನಲ್ಲಿ ಹುಡುಕಿ, ಒಂದು ಪಾಸ್ ಪೋರ್ಟ್ ಸೈಜ್ ಫೋಟೋ ಕೊಟ್ಟರು.
ತುಂಬಾ ಮುದ್ದಾಗಿದ್ದ ಹುಡುಗಿ. ಶೆರಿಲ್ ಅಂತ ಹೆಸರಿರಬೇಕು. ವಯಸ್ಸಿಗೆ ಮೀರಿ ಬೆಳೆದಿದ್ದಳೇನೋ ಅನ್ನಿಸಿತು. `ಯಾಕೆ`? ಅಪ್ಪ, ಅಮ್ಮ ಸರಿ ಇರಲಿಲ್ವಾ?’ ಅಂತ ಕೇಳ್ದೆ.
`ನಮ್ಗೂ ಹಾಗೇ ಅನ್ನಿಸಿತು. ಬಾಡಿ ನೋಡೋಕೂ ಬರ್ಲಿಲ್ಲ, ಮತ್ತೆ ಅವಳ ಅಂಕಲ್ ಕೂಡ ಬಾಡಿಯನ್ನ ಮನೆಗೆ ತಗೊಂಡು ಹೋಗ್ಲಿಲ್ಲ. ಇಲ್ಲೇ ವಿಲ್ಸನ್ ಗಾರ್ಡನ್ ಹತ್ತಿರ ದಫನ್ ಮಾಡಿದ್ರಂತೆ. ಅದ್ಕೂ ಮನೆಯವರ್ಯಾರೂ ಬಂದಿರಲಿಲ್ಲ. ಆ ಮನುಷ್ಯನ ಮುಖ ನೋಡಿದ್ರೆ, ಇನ್ನುಳಿದ ಡೀಟೇಲ್ಸ್ ಕೇಳೋಕೆ ಮನಸ್ಸು ಬರ್ಲಿಲ್ಲ. ತಂದೆ, ತಾಯಿ ಈ ಊರಲಿಲ್ಲ ಅಂತ ಬರ್ಕೊಂಡ್ವಿ,’ ಅಂದರು.
ಯಾಕೋ ಎಲ್ಲಾ ಸರಿ ಇಲ್ಲ ಅನ್ನಿಸ್ತು. ಸರಿ, ಫೈಲ್ ನಲ್ಲಿದ್ದ ಅಡ್ರೆಸ್ ಬರ್ಕೊಂಡು ಸೀದ ಕಮೀಷನರ್ ಆಫೀಸಿಗೆ ಬಂದೆ. ಯಾಕೋ ಜಾಸ್ತಿ ಕ್ರೈಂ ಇಲ್ಲ ಅನ್ನಿಸ್ತು. ಯಾಕೆ ಜೇಬಿನಲ್ಲಿರೋ ಅಡ್ರೆಸ್ ಹುಡ್ಕೊಂಡು ಲಿಂಗರಾಜಪುರಂಗೆ ಹೋಗಬಾರ್ದು? ಅನ್ನಿಸ್ತು. ಸರಿ, ಬೈಕ್ ಹತ್ತಿದವನೇ, ಲಿಂಗರಾಜಪುರಂ ಕಡೆಗೆ ಹೊರಟೆ.
ಆಗಿನ್ನೂ ಲಿಂಗರಾಜಪುರಂ ಇಷ್ಟೊಂದು ಬೆಳೆದಿರಲಿಲ್ಲ. ಕೆಲವು ಕಡೆ ಹಳ್ಳಿಗಳಂತೆ ಇತ್ತು. ನನ್ನ ಕೈಲಿದ್ದ ಅಡ್ರೆಸ್ ಕೂಡ ಹಾಗೇ ಇತ್ತು. ಟಾರ್ ರಸ್ತೆ ಬಿಟ್ಟು ಮಣ್ಣಿನ ರಸ್ತೆಗೆ ಇಳಿದೆ. ದಾರಿ ಪಕ್ಕದಲ್ಲೆಲ್ಲಾ ಚರಂಡಿಗಳು ಹರಿಯುತ್ತಿದ್ದವು. ದೂರ ದೂರದಲ್ಲಿ ಒಂದೊಂದು ಮನೆಗಳು. ಒಂದೆರೆಡು ಗೂಡಂಗಡಿಗಳಲ್ಲಿ ಕೇಳಿಕೊಂಡು ಅರ್ಧ ಘಂಟೆ ಹುಡುಕಿದ ಮೇಲೆ, ಒಂದು ಗೂಡಂಗಡಿಯವನು ಅಲ್ಲಿಂದಲೇ ದೂರದಲ್ಲಿದ್ದ ಮನೆಗಳನ್ನು ತೋರಿಸಿದ. `ಅಲ್ಲಿ ಎರಡು ಮನೆಗಳಿವೆ. ಬಲಗಡೆಯದು, ಶೆರಿಲ್ ತಾಯಿ ಇರುವ ಮನೆ. ಅದಕ್ಕೆ ಸ್ವಲ್ಪ ಹಿಂದೆ ಇದೆಯಲ್ಲ, ಅದ್ರಲ್ಲಿ ತಂದೆ ಇರ್ತಾನೆ. ಹೋಗಿ ನೋಡಿ,’ ಅಂದ.
 ಬೈಕ್ ಅಲ್ಲೇ ನಿಲ್ಲಿಸಿ ನೆಡ್ಕೊಂಡು ಹೋದೆ. ಮೊದಲನೇ ಮನೆ ಹತ್ತಿರ ಹೋಗುತ್ತಲೇ ಬಾಗಿಲು ತೆಗೆದುಕೊಂಡಿತು. ದಪ್ಪಗೆ, ಎತ್ತರವಾಗಿದ್ದ ಹೆಂಗಸೊಬ್ಬಳು, ನೈಟ್ ಡ್ರೆಸ್ ಹಾಕಿಕೊಂಡು, `ಏನು?’ ಅನ್ನುವಂತೆ ನನ್ನ ಕಡೆ ನೋಡ್ತಿದ್ಲು. ಮುಖ ನೋಡಿದ ತಕ್ಷಣ, ಶೆರಿಲ್ ತಾಯಿ ಅನ್ಕೊಂಡೆ. 35-36 ವರ್ಷದ ಅವಳು, ನೋಡಲು ಸುಂದರವಾಗಿದ್ದಳು.
`ನಾನು ಇಂಡಿಯನ್ ಎಕ್ಸ್ ಪ್ರೆಸ್ ನಿಂದ ಬಂದಿದ್ದೀನಿ. ಶೆರಿಲ್ ವಿಷಯ ಮಾತಾಡ್ಬೇಕಿತ್ತು,’ ಅಂದೆ.
ಅಳಬಹುದು ಅನ್ಕೊಂಡಿದ್ದೆ... ಊಹೂಂ... ಸಿಟ್ಟಿಗೆದ್ದಳು. `ಅವಳಪ್ಪ ಅಂತ ಇದ್ದಾನಲ್ಲ, ಆ ಬಾಸ್ಟರ್ಡ್. ಅವನನ್ನ ಕೇಳು. ಇಪ್ಪತ್ನಾಲ್ಕು ಘಂಟೆ ಕುಡ್ಕೊಂಡು ಕೂತಿರ್ತಾನೆ. ಅವಳೇನೋ ಸುಖವಾಗಿ ಸತ್ತು ಹೋದ್ಲು. ನಾನಿನ್ನೂ ಬದುಕಿದ್ದೇನಲ್ಲಾ, ಈ ನರಕದಲ್ಲಿ,’ ಅಂದ್ಲು. ಮುಖದಲ್ಲಿ ನೋವೇ ಇರಲಿಲ್ಲ. ಮಗಳು ಸತ್ತಿದ್ದು ತನಗೆ ಸಂಬಂಧವೇ ಇಲ್ಲ ಅನ್ನುವ ಹಾಗಿದ್ದು, ತನ್ನ ಗಂಡನ ಬಗ್ಗೆ ವಾಚಾಮಗೋಚರವಾಗಿ ಏರಿದ ಸ್ವರದಲ್ಲಿ ಕೂಗಾಡಲು ಶುರು ಮಾಡಿದ್ಲು.
ಅವಳ ಕೂಗಾಟ ಕೇಳಿ, ಹಿಂದಿದ್ದ ಮನೆಯಿಂದ ಅವಳ ಗಂಡ ಹೊರಗಡೆ ಬಂದವನೇ, ಇವಳ ಮೇಲೆ ಕೂಗಾಡಲು ಶುರು ಮಾಡಿದ. ನಾನು ಯಾರು ಅಂತ ಗೊತ್ತಿಲ್ಲದಿದ್ದರೂ, ನನ್ನ ಹತ್ತಿರ ದೂರತೊಡಗಿದ. `ಇವಳಿದ್ದಾಳಲ್ಲ... ದೊಡ್ಡ ಸೂಳೆ. ದಿನಕ್ಕೆ ಎಷ್ಟು ಜನಗಳ ಜೊತೆ ಮಲಗ್ತಾಳೆ ಅಂತ ಅವಳಿಗೇ ಗೊತ್ತಿಲ್ಲ. ನನ್ನ ಮೇಲೆ ಕೂಗಾಡ್ತಳೆ. ಇವಳಿಗೆ ಮಕ್ಕಳನ್ನ ನೋಡ್ಕೊಳೋಕ್ಕೆ ಬಂದ್ರೆ ತಾನೆ, ನನ್ನ ಬಗ್ಗೆ ಮಾತಾಡೋದು,’ ಅಂತ ಕೂಗಾಡಿದ.
ಒಂದೇ ಕ್ಷಣದಲ್ಲಿ ಆ ಜಾಗ ರಣರಂಗವಾಯ್ತು. ಇಬ್ಬರೂ ಕೂಗಾಡಲು ಶುರು ಮಾಡಿದ್ರು. ಸುತ್ತಮುತ್ತಲಿನ ಯಾವ ಮನೆಯವರೂ ಹೊರಗೆ ಬರಲಿಲ್ಲ. ಅಲ್ಲೇ ಆಟಾಡುತ್ತಿದ್ದ ಎರಡು ಮಕ್ಕಳು ಮಾತ್ರ ಹೋ.... ಅಂತ ಅಳೋಕೆ ಶುರು ಮಾಡಿದ್ವು. ನಾನ್ಯಾಕಾದರೂ ಇಲ್ಲಿಗೆ ಬಂದ್ನೋ, ಅಂತ ಅನ್ನಿಸೋಕ್ಕೆ ಶುರುವಾಯ್ತು. ಇಬ್ಬರೂ ಕಚ್ಚಾಡುತ್ತಿರುವಾಗಲೇ, ಅಲ್ಲಿಂದ ಮೆಲ್ಲಗೆ ಕಾಲು ತೆಗೆದೆ.
ಮೆಲ್ಲಗೆ ನೆಡ್ಕೊಂಡು ಗೂಡಂಗಡಿಯ ಹತ್ತಿರ ಬಂದು, ಒಂದು ಸಿಗರೇಟ್ ಹಚ್ಚಿಕೊಂಡೆ. `ಅವರಿಬ್ಬರೂ ಹಾಗೇ ಸರ್, ಸರಿಯಿಲ್ಲ. ಅದಕ್ಕೇ ಆ ಮಗು ಬೆಂಕಿ ಹಾಕಿಕೊಂಡಿದ್ದು,’ ಅಂತ ಗೂಡಂಗಡಿಯವನು ಹೇಳಿದ.
`ಅವಳು ಸತ್ತು ಹೋದ್ರೂ ಇವರಿಬ್ಬರು ಜಗಳ ಆಡ್ತಿದ್ದಾರಲ್ರೀ?’ ಅಂದೆ.
`ಅವಳೇನು. ಆ ಇನ್ನೆರಡು ಮಕ್ಕಳು ಸತ್ರೂ ಇವರೇನೂ ಸರಿಯಾಗೊಲ್ಲ, ಬಿಡಿ. ದರಿದ್ರದವರು. ಇವರಿಬ್ಬರಿಂದ, ಈ ಏರಿಯಾದಲ್ಲಿ ಯಾರಿಗೂ ನೆಮ್ಮದಿಯಿಲ್ಲ. ಪಾಪ, ಆ ಅಂಕಲ್ ಸ್ವಲ್ಪನಾದ್ರೂ ಈ ಮಕ್ಕಳನ್ನ ನೋಡ್ಕೋತ್ತಾರೆ. ಅವ್ರ ಜೊತೆನೂ ಇವರಿಬ್ಬರು ಜಗಳ ಆಡ್ತಿದ್ರು. ಶೆರಿಲ್ ಸತ್ತಳು ಅಂತ ಗೊತ್ತಾದ ತಕ್ಷಣ ಅವರೇ ಹೋಗಿ, ಬಾಡಿನ ದಫನ್ ಕೂಡ ಮಾಡಿದ್ರು. ಹಾಗೆ ನೋಡದ್ರೆ, ಅಂಕಲ್ ಗೂ, ಇವರಿಗೂ ಸಂಬಂಧನೇ ಇಲ್ಲ,’ ಅಂದ.
`ಮತ್ತೆ ಅಂಕಲ್ ಅಂತ ಯಾಕೆ ಕರೀತಿದ್ರು?’ ಅಂತ ಕೇಳ್ದೆ.
`ಅದೇನಿಲ್ಲ. ಅವ್ರು ಒಬ್ರೇ ಇರೋದು. ಹೆಂಡತಿ, ಮಕ್ಕಳು ಯಾರೂ ಇಲ್ಲ. ಈ ಮೂರು ಮಕ್ಕಳಿಗೆ ಆಗಾಗ ಊಟ, ತಿಂಡಿ ಕೊಡ್ತಿದ್ರು. ಇನ್ನು ಈ ಎರಡು ಮಕ್ಕಳು ಉಪವಾಸ ಸಾಯ್ತಾವೆ, ಅಷ್ಟೆ,’ ಅಂದ.
`ಸರಿ, ಈ ಶೆರಿಲ್ ಹ್ಯಾಗೆ?’ ಅಂತ ಕೇಳ್ದೆ.
`ತುಂಬಾ ಒಳ್ಳೆ ಹುಡುಗಿ ಸರ್, ಎಲ್ಲಾರ ಹತ್ರ ನಕ್ಕೊಂಡು, ಮಾತಾಡ್ಕೊಂಡು ಇರ್ತಿದ್ಲು. ಎಲ್ಲರಿಗೂ ಚಿಕ್ಕ ಪುಟ್ಟ ಕೆಲಸ ಮಾಡಿಕೊಟ್ಟು, ಅವರೇನಾದ್ರು ಕೊಟ್ರೆ, ತಮ್ಮ, ತಂಗಿ ಜೊತೆ ಹಂಚಿಕೊಂಡು ತಿಂತಿದ್ಲು. ಅಪ್ಪ, ಅಮ್ಮ ಜಗಳ ಶುರು ಮಾಡಿದ್ರೆ, ಮಧ್ಯ ಹೋಗಿ ಬಿಡಿಸೋಕ್ಕೆ ಟ್ರೈ ಮಾಡಿ, ಇಬ್ಬರು ಕೈಲೂ ಪೆಟ್ಟು ತಿಂತಿದ್ಲು. ನೆನಸ್ಕೊಂಡ್ರೆ ಹೊಟ್ಟೆ ಉರಿಯುತ್ತೆ,’ ಅಂದ.
`ಮತ್ತೆ, ಈ ಪೋಲಿಸ್ ಕಂಪ್ಲೇಂಟ್ ನಲ್ಲಿ ಇವಳು ಇಬ್ಬರು ಹುಡುಗರ ಜೊತೆ ಸಿಕ್ಕಿಹಾಕಿಕೊಂಡಿದ್ಲು ಅಂತ ಇದೆಯಲ್ಲಾ?’ ಅಂದೆ.
`ಅದೊಂದು ದೊಡ್ಡ ಕಥೆ ಸರ್. ಶೆರಿಲ್ ನ ಎಲ್ಲಾ ಮನೆಯವರೂ ಇಷ್ಟ ಪಡ್ತಿದ್ರು. ಅವಳು ನಾಲ್ಕನೇ ಕ್ಲಾಸೋ, ಐದನೇ ಕ್ಲಾಸೋ ಇದ್ದಾಗ, ಅವಳಪ್ಪ, ಅಮ್ಮ ಸ್ಕೂಲ್ ಬಿಡಿಸಿದ್ರು. ಅಪ್ಪ ಕುಡಿದು ಎಲ್ಲೆಲ್ಲೋ ಬಿದ್ದಿರ್ತಿದ್ದ. ಅಮ್ಮನ ಜೊತೆ ಬೇರೆ ಬೇರೆ ಗಂಡಸರೆಲ್ಲ ಬಂದು ಇರ್ತಿದ್ರು. ಹಾಗಾಗಿ, ಎರಡು ಮನೆ ಇದ್ದೂ, ಮಕ್ಕಳಿಗೆ ಮನೆ ಇಲ್ಲದ ಹಾಗೆ ಇತ್ತು. ಹಗಲೆಲ್ಲ ಅಮ್ಮನ ಮನೆ, ಅಂಕಲ್ ಮನೆ ಅಥವಾ ರಸ್ತೆಯಲ್ಲಿ ಆಟ ಆಡ್ತಿದ್ದ ಮಕ್ಕಳು, ರಾತ್ರಿ ಅಪ್ಪನ ಮನೆಯಲ್ಲಿ ಮಲ್ಕೊಳ್ತಿದ್ರು. ಶೆರಿಲ್ ಏನಾದ್ರು ಮಾಡಿ ತಮ್ಮ ಮತ್ತೆ ತಂಗಿಗೆ ತಿನ್ನೋಕೆ ವ್ಯವಸ್ತೆ ಮಾಡ್ತಿದ್ಲು.’
ಬೇರೆಯವರಿಗಾದರೆ ಸಂಸಾರಗಳಿದ್ವು. ಸಂಸಾರವಿಲ್ಲದ ಅಂಕಲ್ ಮಾತ್ರ ಈ ಮಕ್ಕಳನ್ನು ಸ್ವಲ್ಪ ಜಾಸ್ತಿ ಹಚ್ಚಿಕೊಂಡಿದ್ರು. ಆದ್ರೆ, ಅವರಿಗೂ ಹಣಕಾಸಿನ ಅನುಕೂಲ ಏನೂ ಜಾಸ್ತಿ ಇರಲಿಲ್ಲ. ಹಾಗಾಗಿ, ಕೈಯಲ್ಲಿ ಆದಷ್ಟು ಸಹಾಯ ಮಾಡ್ತಿದ್ರು. ಒಂದ್ಸಲ, ಶೆರಿಲ್ ತಮ್ಮನ ಹುಟ್ಟಿದ ಹಬ್ಬ ಹತ್ತಿರ ಬಂದಾಗ, ಅಂಕಲ್ ಹತ್ತಿರ ಹೋದ ಶೆರಿಲ್, ತಮ್ಮನಿಗೆ ಹುಟ್ಟಿದ ಹಬ್ಬಕ್ಕೆ ಹೊಸ ಬಟ್ಟೆ ಮತ್ತೆ ಕೇಕ್ ತರಬೇಕು ಅಂತ ಕೇಳಿದ್ದಾಳೆ. ಅದಕ್ಕಿಂತ ಮುಂಚೆ ಅಪ್ಪ ಮತ್ತು ಅಮ್ಮನ ಕೈಲಿ ಕೇಳಿ ಪೆಟ್ಟು ತಿಂದಿದ್ದಾಳೆ. ಆದರೆ, ಅಂಕಲ್ ಕೈಲಿ ದುಡ್ಡಿರಲಿಲ್ಲ. ಏನಾಯ್ತೋ ಏನೋ, ಶೆರಿಲ್ ಅಂಕಲ್ ಕೈಲಿದ್ದ ಚಿನ್ನದ ಉಂಗುರು ಕದ್ದಿದ್ದಾಳೆ.
ಮುಂದೆ ಏನು ಮಾಡ್ಬೇಕು ಅಂತ ಗೊತ್ತಾಗದೆ, ನೇರವಾಗಿ ದೊಡ್ಡ ಬೇಕರಿ ಒಂದಕ್ಕೆ ಹೋಗಿ, ಈ ಉಂಗುರಕ್ಕೆ ಬದಲು ಒಂದು ಬರ್ತ್ ಡೇ ಕೇಕ್ ಕೊಡ್ತೀರಾ? ಅಂತ ಕೇಳಿದ್ದಾಳೆ. ಅನುಮಾನ ಬಂದ ಬೇಕರಿಯವನು ಪೋಲಿಸರಿಗೆ ಶೆರಿಲ್ ನನ್ನು ಹಿಡಿದು ಕೊಟ್ಟಿದ್ದಾನೆ. ಪೋಲಿಸ್ ಕೇಳಿದ ತಕ್ಷಣ, ಶೆರಿಲ್ ಈ ಉಂಗುರವನ್ನು ತನ್ನ ಅಂಕಲ್ ತನಗೆ ಕೊಟ್ಟಿದ್ದು ಅಂತ ಸುಳ್ಳು ಹೇಳಿದ್ದಾಳೆ. ಪೋಲಿಸರು, ಶೆರಿಲ್ ನನ್ನು ಅಂಕಲ್ ಹತ್ತಿರ ಕರೆದುಕೊಂಡು ಹೋಗಿದ್ದಾರೆ. ಶೆರಿಲ್ ಮತ್ತೆ ಉಂಗುರು ನೋಡಿದ ತಕ್ಷಣ, ಅಂಕಲ್ ಗೆ ಏನಾಗಿದೆ ಅಂತ ಗೊತ್ತಾಗಿದೆ. `ಹೌದು, ಇದು ನನ್ನದೇ ಉಂಗುರ. ಇವಳಿಗೆ ಕೊಟ್ಟಿದ್ದೆ. ಇದನ್ಯಾಕೆ ಮಾರೋಕೆ ಹೊರಟಳು ಅಂತ ಗೊತ್ತಿಲ್ಲ,’ ಅಂತ ಹೇಳಿದ್ದಾರೆ. ಅದನ್ನು ಕೇಳಿದ ಪೋಲಿಸರು, ಶೆರಿಲ್ ನನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ.
ಆದರೆ, ಪೋಲಿಸ್ ಶೆರಿಲ್ ಕರ್ಕೊಂಡು ಬಂದಿದ್ದು, ಮತ್ತೆ ಉಂಗುರದ ವಿಚಾರ ಸುತ್ತ ಮುತ್ತಲಿನವರಿಗೆ ಗೊತ್ತಾಗಿದೆ. ಅಂಕಲ್, ಶೆರಿಲ್ ನನ್ನು ಸಮಾಧಾನ ಮಾಡಿ, ಅವಳ ತಮ್ಮನ ಹುಟ್ಟು ಹಬ್ಬಕ್ಕೆ ಕೇಕ್ ತೆಗೆಸಿಕೊಟ್ಟಿದ್ದಾರೆ. ಶೆರಿಲ್ ಮತ್ತು ಅಂಕಲ್ ಈ ವಿಷಯವನ್ನು ಮರೆತರೂ, ಸುತ್ತ ಮುತ್ತಲಿನ ಮನೆಯವರು ಮರೆಯಲಿಲ್ಲ. ಅಲ್ಲಿಂದ ಮುಂದೆ, ಶೆರಿಲ್ ನನ್ನು ಯಾರೂ ಮನೆಯೊಳಗೆ ಸೇರಿಸುತ್ತಿರಲಿಲ್ಲ. ಅವರ ಮಕ್ಕಳನ್ನೂ ಅವಳ ಜೊತೆ ಆಟವಾಡಲು ಬಿಡುತ್ತಿರಲಿಲ್ಲ.
ಅಲ್ಲಿಂದ ಮುಂದೆ ಶೆರಿಲ್ ತುಂಬಾ ಗಂಭೀರವಾಗತೊಡಗಿದಳು. ಅಂಕಲ್ ಇಲ್ಲದ ಸಮಯದಲ್ಲಿ ತಮ್ಮ, ತಂಗಿಯರ ಊಟ, ತಿಂಡಿಗೂ ತೊಂದರೆಯಾಗತೊಡಗಿತು. ಆಗಾಗ, ಅಂತಾ ದಿನಗಳಲ್ಲಿ ಹೊರಗಡೆ ಏನಾದ್ರು ಕೆಲಸ ಸಿಗುತ್ತಾ ಅಂತ ಏರಿಯಾದಿಂದ ಹೊರಗಡೆ ಹೋಗ್ತಿದ್ಲು. ಒಂದೆರೆಡು ಸಲ ಹೋದಾಗ, ಏನೂ ಕೆಲಸ ಸಿಗಲಿಲ್ಲ ಅಂತ ನಿರಾಶೆಯಿಂದ ಬಂದಾಗ, ಅಂಕಲ್ ಅವಳಿಗೆ ಬೈದಿದ್ದರಂತೆ. ಇನ್ನೊಂದ್ಸಲ ಹೊರಗಡೆ ಹೋಗಿದ್ದು ಗೊತ್ತಾದ್ರೆ, ನಿನ್ನ ಮಾತಾಡಿಸೋಲ್ಲ, ಅಂತಾನೂ ಹೇಳಿದ್ದರಂತೆ.
ಅವತ್ತೇನಾಯ್ತೋ, ಏನೋ, ಶೆರಿಲ್ ಮತ್ತೆ ಹೊರಗಡೆ ಹೋಗಿದ್ದಾಳೆ. ಫ್ರೇಜರ್ ಟೌನ್ ಹತ್ತಿರ ಹೋಗಿ, ಯಾವುದೋ ಅಂಗಡಿಯಲ್ಲಿ ಕೆಲಸ ಏನಾದ್ರೂ ಖಾಲಿ ಇದೆಯಾ? ಅಂತ ಕೇಳಿದ್ದಾಳೆ. ಅವರು ಇಲ್ಲ ಅಂತ ಹೇಳ್ದಾಗ, ನಿರಾಶೆಯಿಂದ ಅಲ್ಲಿಂದ ಹೊರಟಿದ್ದಾಳೆ. ಆಗ ಇಬ್ಬರು ಹುಡುಗರು ಬಂದು, ಇಲ್ಲೇ ಹತ್ತಿರದ ಅಂಗಡಿಯಲ್ಲಿ ಕೆಲಸ ಖಾಲಿ ಇದೆ ಅಂತ ಹೇಳಿದ್ದಾರೆ. ನಿಜ ಅನ್ಕೊಂಡು ಅವರ ಜೊತೆ ನೆಡ್ಕೊಂಡು ಹೊರಟಿದ್ದಾಳೆ ಅಷ್ಟೆ, ಅಷ್ಟರಲ್ಲಿ ಅಲ್ಲೇ ಬರುತ್ತಿದ್ದ ಪೋಲಿಸರಿಗೆ ಅನುಮಾನ ಬಂದಿದೆ. ಏನು, ಎತ್ತ ಅಂತ ವಿಚಾರಿಸುವಾಗ, ಹುಡುಗರು ಜಾಗ ಖಾಲಿ ಮಾಡಿದ್ದಾರೆ. ಶೆರಿಲ್ ಮಾತ್ರ ಇದ್ದ ವಿಷಯ ಹೇಳಿದ್ದಾಳೆ.
`ಇಬ್ಬರು ಹುಡುಗರ ಜೊತೆ ರೂಮಿನಲ್ಲಿ ಸಿಕ್ಕಿದ್ದು ಸುಳ್ಳು ಸರ್. ಪೋಲಿಸರು ಶೆರಿಲ್ ಕರ್ಕೊಂಡು ಇಲ್ಲಿಗೆ ಬಂದ್ರು. ಯಥಾ ಪ್ರಕಾರ, ಪೋಲಿಸರ ಎದುರ ಅವಳ ಅಪ್ಪ, ಅಮ್ಮ ಜಗಳ ಮಾಡೊಕೆ ಶುರು ಮಾಡಿದ್ರು. ಇವರ ಜಗಳ ನೋಡೋಕ್ಕಾಗ್ದೆ ಪೋಲಿಸರು ಅವಳನ್ನ ರಿಮ್ಯಾಂಡ್ ಹೋಂ ಗೆ ಕಳಿಸ್ತೀವಿ ಅಂದ್ರು. ಅಂಕಲ್ ಪರಿಪರಿಯಾಗಿ ಬೇಡ್ಕೊಂಡ್ರೂ, ಪೋಲಿಸರು ಬಿಡಲಿಲ್ಲ. ಅವಳ ಅಪ್ಪ, ಅಮ್ಮಂಗೇ ಬೇಡ್ದವಳನ್ನ, ನೀವೇನು ನೋಡ್ಕೋತ್ತೀರ? ನಾಳೆ ಏನಾದ್ರೂ ಹೆಚ್ಚು ಕಡಿಮೆ ಆದ್ರೆ, ನಮ್ಮ ತಲೆಗೆ ಬರುತ್ತೆ, ಅಂತ ಹೇಳಿ ಕರ್ಕೊಂಡೇ ಹೋದ್ರು,’ ಅಂದ ಅಂಗಡಿಯವನು.
ಅಲ್ಲಿಂದ ಮುಂದೆ ಶೆರಿಲ್ ನನ್ನು ಯಾರೂ ನೋಡಲಿಲ್ಲ. ಮೂರ್ನಾಲ್ಕು ತಿಂಗಳು ಕಳೆದ ಮೇಲೆ, ರಿಮ್ಯಾಂಡ್ ಹೋಂ ನಿಂದ ತಪ್ಪಿಸಿಕೊಂಡಿದ್ದಾಳೆ. ಆದ್ರೆ, ಎಲ್ಲಿಗೆ ಹೋಗಬೇಕು ಅಂತ ಗೊತ್ತಾಗದೆ, ಸಾಯಂಕಾಲದೊಳಗೆ ಪೋಲಿಸರ ಕೈಲಿ ಸಿಕ್ಕಿಹಾಕಿಕೊಂಡಿದ್ದಾಳೆ. ಮತ್ತೆ ವಾಪಾಸ್, ರಿಮ್ಯಾಂಡ್ ಹೋಂ ಗೆ. ಮತ್ತೊಂದ್ಸಲ ತಪ್ಪಿಸಿಕೊಳ್ಳೋಕೆ ಪ್ರಯತ್ನ ಮಾಡಿದ್ದಾಳೆ, ಆದ್ರೆ ಸಿಕ್ಕಿಹಾಕಿಕೊಂಡಿದ್ದಾಳೆ.
ಮತ್ತೆರೆಡು ತಿಂಗಳು ಕಳೆದಿದೆ. ಒಂದ್ಸಲ ಓಡಿ ಹೋದವಳು ಅಂತ, ಸಾಯಂಕಾಲ ಕಾಂಪೌಂಡಿನೊಳಗೆ ವಾಕಿಂಗ್ ಕೂಡ ಕಟ್ ಮಾಡಿದ್ದರಂತೆ. ಆ ದಿನ ಸಾಯಂಕಾಲ, ಎಲ್ಲರೂ ಕಟ್ಟಡದ ಹೊರಗೆ ತಿರುಗಾಡುತ್ತಿದ್ದಾಗ, ಬಾತ್ ರೂಂಗೆ ಹೋಗಿ, ಸೀಮೆಎಣ್ಣೆ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡಿದ್ದಾಳೆ.
ಅಂಗಡಿಯವನು ಕಥೆ ಹೇಳಿ ಮುಗಿಸಿದ ತಕ್ಷಣ ಕೇಳಿದೆ: `ಅಂಕಲ್ ಮನೆ ಯಾವುದು?’
ಎದುರು ಮನೆಯನ್ನು ತೋರಿಸುತ್ತಾ, ಅಂಗಡಿಯವನು ಹೇಳ್ದ: `ಅದರಲ್ಲಿದ್ದರು. ನೆನ್ನೆ ದಫನ್ ಮುಗಿಸಿ ಬಂದವರೇ, ಮನೆ ಖಾಲಿ ಮಾಡಿ ಹೋದರು. ಕಮ್ಮನಹಳ್ಳಿಗೆ ಹೋಗ್ತೀನಿ ಅಂದ್ರು. ತುಂಬಾ ಅಳ್ತಿದ್ರು,’ ಅಂದ.
ಈ ಕಥೆ ಎಲ್ಲಿ ಶುರು ಮಾಡ್ಬೇಕು, ಎಲ್ಲಿ ಕೊನೆ ಮಾಡ್ಬೇಕು ಅಂತ ಅರ್ಥಾನೇ ಆಗ್ಲಿಲ್ಲ. ಮತ್ತೆ, ಈ ಥರದ ಏರಿಯಾದಲ್ಲಿ ಆದ ಹ್ಯೂಮನ್ ಇಂಟರೆಸ್ಟ್ ಸ್ಟೋರಿಗಳು, ನಮ್ಮ ಪೇಪರ್ ನಲ್ಲಿ ಅಚ್ಚಾಗುವುದು ಸ್ವಲ್ಪ ಅನುಮಾನವೇ ಆಗಿತ್ತು. ಇದನ್ನ ಆಫೀಸಿನಲ್ಲಿ ಹ್ಯಾಗೆ ಹೇಳ್ಬೇಕೂ ಅಂತ ಯೋಚನೆ ಮಾಡ್ಕೊಂಡು ವಾಪಾಸ್ ಬಂದೆ.
ಆಫೀಸಿಗೆ ಬಂದ ತಕ್ಷಣ ಬ್ಯುರೋ ಛೀಫ್ ಮಟ್ಟೂ ಕೇಳಿದ್ರು: `ವಿನಯ್, ಎನಿಥಿಂಗ್ ಇಂಪಾರ್ಟೆಂಟ್ ಇನ ಕ್ರೈಂ?’ ಅಂತ.
`ನೋ ಸರ್... ಬಟ್ ದೆರ್ ಇಸ್ ಎ ಸ್ಟೋರಿ ಆನ್ ಕುದ್ರೇಮುಖ್. ಐ ಹ್ಯಾವ್ ಟು ಫೈಲ್ ಇಟ್ ನೌ,’ ಅಂದೆ.
`ನೋ... ಡೋಂಟ್ ಫೈಲ್ ಇಟ್ ಟುಡೇ.... ದೆರ್ ಇಸ್ ಸೆಕೆಂಡ್ ಸ್ಯಾಟರ್ ಡೇ ಆ್ಯಂಡ್ ಸಂಡೇ ಕಮಿಂಗ್. ಟುಡೇ, ದೆರ್ ಆರ್ ಸಫೀಶಿಯೆಂಟ್ ಸ್ಟೋರೀಸ್. ಯುವರ್ ಸ್ಟೋರಿ ವಿಲ್ ಗೆಟ್ ಗುಡ್ ಡಿಸ್ ಪ್ಲೇ ಆನ್ ಲೀನ್ ಡೇಸ್,’ ಅಂದ್ರು.
ಈ ಕಥೆಯನ್ನು ಹೇಳ್ಬೇಕು ಅಂತ ಎಷ್ಟೇ ಪ್ರಯತ್ನ ಮಾಡಿದ್ರೂ, ಬಾಯಿಂದ ಹೊರಗೆ ಬರಲಿಲ್ಲ. ಆದರೆ, ಮುಂದೆ ಅನೇಕ ದಿನಗಳವರೆಗೆ, ಆ ಪಾಸ್ ಪೋರ್ಟ್ ಸೈಜಿನ ಫೋಟೋದಲ್ಲಿನ ಮುದ್ದು ಮುಖ ಆಗಾಗ ನೆನಪಾಗುತ್ತಿತ್ತು.
ಆ ಹುಡುಗಿಗೆ ರಿಮ್ಯಾಂಡ್ ಹೋಂ ನಿಂದ ತಪ್ಪಿಸಿಕೊಳ್ಳೋಕೆ ಇನ್ನೊಂದು ಛಾನ್ಸ್ ಸಿಗಬಾರದಿತ್ತಾ? ಅಂತ ಅನ್ನಿಸ್ತಿತ್ತು.


ಮಾಕೋನಹಳ್ಳಿ ವಿನಯ್ ಮಾಧವ್

ಶನಿವಾರ, ಮೇ 12, 2012

ಶ್ವಾನ ಪುರಾಣ - 2


ಪಿಂಕಿ ಸಂತತಿ ಇನ್ನೂ ಉಳಿದಿದವೆಯಾ?...

ರಜಾ ದಿನಗಳಲ್ಲಿ ನಾನು ಕಾಫೀ ತೋಟಕ್ಕೆ ಹೋಗುವಾಗ ಕೋವಿ ತಗೊಂಡ ತಕ್ಷಣ ಅಮ್ಮಂಗೂ, ನಂಗೂ ಶುರುವಾಗ್ತಿತ್ತು ಗಲಾಟೆ. ಸ್ವಲ್ಪ ಹೊತ್ತು ಜಗಳವಾದ ಮೇಲೆ, ತೋಟಾ ಕೋವಿ ಬಿಟ್ಟು ಕೇಪಿನ ಕೋವಿ ಹಿಡ್ಕೊಂಡು, ಗೊಣಗುತ್ತಾ ಹೊರಡ್ತಿದ್ದೆ. ದಿನಾ ಏನೂ ಸಿಗದಿದ್ರೂ, ತೋಟಗಳಲ್ಲಿ ಆಗಾಗ ಸಿಗುವ ಕಾಡು ಕೋಳಿ, ಕಾಡು ಕುರಿ, ಆಡಲಕ್ಕಿಗಳನ್ನು ಹೊಡೀಬೇಕು ಅಂತ.
ಒಂದೆರೆಡು ಸಲ ಆಡಲಕ್ಕಿ ಹೊಡೆದು ಅಮ್ಮನ ಕೈಲಿ ಬೈಸಿಕೊಂಡಿದ್ದು ಬಿಟ್ಟರೆ, ಅಂಥಾ ಶಿಕಾರಿಯೇನು ಮಾಡಿದ್ದು ನೆನಪಿಲ್ಲ. ಕಾಡು ಹಂದಿಯಂತೂ ನಾನು ಹೊಡೆದೇ ಇಲ್ಲ. ಜಗಳ ಆಡಿ ಕೇಪಿನ ಕೋವಿ ತಗೊಂಡು ಹೊರಟಾಗ ಸಿಟ್ಟೇ ಬರುತ್ತಿತ್ತು. ತೋಟಾ ಕೋವಿಯಾದ್ರೆ ಡಬಲ್ ಬ್ಯಾರೆಲ್, ಮತ್ತೆ ಎರಡು ತೋಟಾ ಒಟ್ಟಿಗೆ ಹಾಕಿ, ಒಂದರ ಹಿಂದೆ ಒಂದು ಹೊಡೆಯಬಹುದು. ಕೇಪಿನ ಕೋವಿಯನ್ನ ಲೋಡ್ ಮಾಡೋದೇ ಒಂದು ಸರ್ಕಸ್.
ಮೊದಲು ರಂಜಕ ತುಂಬಬೇಕು. ಆಮೇಲೆ ಅದಕ್ಕೆ ತೆಂಗಿನ ಕತ್ತ ಹಾಕಿ ಚೆನ್ನಾಗಿ ಪ್ಯಾಕ್ ಮಾಡ್ಬೇಕು. ಅದಾದ ಮೇಲೆ ಚರೆ (ಸೈಕಲ್ ಚಕ್ರದಲ್ಲಿರುವ ಬೇರಿಂಗ್ ಬಾಲ್ ಗಳು) ಹಾಕಬೇಕು. ಮತ್ತೆ ಅದನ್ನು ಕತ್ತದಲ್ಲಿ ಪ್ಯಾಕ್ ಮಾಡ್ಬೇಕು. ಹಕ್ಕಿಗಳನ್ನು ಹೊಡೆಯೋಕೆ ಇದು ಸಾಕು. ಆದರೆ, ದೊಡ್ಡ ಪ್ರಾಣಿಗಳು ಸಿಕ್ಕಿದರೆ ಅಂತ ಮುಂಜಾಗ್ರತೆಯಿಂದ ಒಂದೆರೆಡು ಬಾಕ್ಸೈಟ್ (ದೊಡ್ಡ ಬೇರಿಂಗ್ ಬಾಲ್ ಗಳು) ಹಾಕಬೇಕು. ಅದಾದ ಮೇಲೆ ಹಿಂದುಗಡೆ ಕೇಪ್ ಸಿಕ್ಕಿಸಿ ಹೊಡೀಬೇಕು.
ಅದರ ಪ್ರಮಾಣನೂ ಸರಿಯಾಗಿ ಇರಬೇಕು. ಕಮ್ಮಿಯಾದ್ರೆ ಹೊಡೆಯೋದಿಲ್ಲ. ಜಾಸ್ತಿಯಾದರೆ, ಕೋವಿ ಹೊಡೆದವನಿಗೇ ತಿರುಗಿ ಒದ್ದು, ಅವನ ಭುಜ ಮುರಿಯೋ ಸಾಧ್ಯತೆನೂ ಇದೆ. ಗುರಿ ತಪ್ಪಿದರೆ, ಇನ್ನೊಂದು ಸಲ ಲೋಡ್ ಮಾಡೋಕೆ 10-15 ನಿಮಿಷವಾದ್ರೂ ಬೇಕು. ಅದೇ ತೋಟಾ ಕೋವಿಯಲ್ಲಾದರೆ, ಒಂದರ ಹಿಂದೆ ಇನ್ನೊಂದು ಹೊಡೆಯಬಹುದು. ಅದಕ್ಕೆ ಸರಿಯಾಗಿ ನಂಜೊತೆ ಶಿಕಾರಿ ನಾಯಿಯೂ ಇರಲಿಲ್ಲ.
ಒಂದ್ಸಲ ಹೀಗೆ ಆಗಿತ್ತು. ನಾನು ಕೇಪಿನ ಕೋವಿಯಲ್ಲಿ ಗುಂಡು ಹೊಡೆಯೋಕೆ ಕಲ್ತಿದ್ದು ನಮ್ಮ ಮನೆ ಹತ್ತಿರ ಅಂಗಡಿ ಇಟ್ಟುಕೊಂಡಿದ್ದ ಇದಿನಬ್ಬನ ಸಂಬಂಧಿ ಮೈದಾಲಿ ಜೊತೆ. ಬ್ಯಾರಿಯಾದ್ದರಿಂದ ಶಿಕಾರಿ ಮಾಡಿದ ಪ್ರಾಣಿಗಳ ಮಾಂಸ ತಿನ್ನುತ್ತಿರಲಿಲ್ಲ, ಆದರೆ ಕೋವಿ ಹುಚ್ಚು ಮಾತ್ರ ತುಂಬಾ ಇತ್ತು. ಕೋವಿಗೆ ಕತ್ತ ಪ್ಯಾಕ್ ಮಾಡಲು ಒಂದು ಕಬ್ಬಿಣದ ರಾಡ್ ಇರುತ್ತೆ. ಸರಿಯಾದ ಪ್ರಮಾಣದ ಲೋಡಿಂಗ್ ಅಂದರೆ, ಲೋಡ್ ಮಾಡಿದ ಮೇಲೆ ರಾಡ್ ನಾಲ್ಕು ಬೆರಳುಗಳನ್ನು ಅಡ್ಡ ಇಟ್ಟಾಗ ಬರುವಷ್ಟು ಎತ್ತರ ಇರಬೇಕು ಅಂದಿದ್ದ.
ಒಂದ್ಸಲ ರಜಾ ಮುಗಿದು ಹೋಗುವುದಕ್ಕಿಂತ ಮುಂಚೆ ನಾನು ಕೋವಿ ಲೋಡ್ ಮಾಡಿ ಮನೆಯಲ್ಲಿಟ್ಟು ಹೋಗಿದ್ದೆ. ತೆಳ್ಳಗಿದ್ದ ಮೈದಾಲಿ, ಅವನ ಬೆರಳಿನ ಅಳತೆಯಲ್ಲಿ ನಾಲ್ಕು ಬೆರಳು ಅಂತ ಹೇಳಿದ್ದ. ನಾನು ನನ್ನ ದೊಡ್ಡ ಬೆರಳುಗಳ ಲೆಕ್ಕದಲ್ಲಿ ಲೋಡ್ ಮಾಡಿದ್ದೆ. ಅದು ಸ್ವಲ್ಪ ಜಾಸ್ತಿಯಾಗಿತ್ತು.
ಒಂದು ದಿನ ಮಳೆ ಬಂದಾಗ ಕಾಡು ಕೋಳಿ ಕೂಗುವುದನ್ನು ಕೇಳಿದ ಮೈದಾಲಿ, ಅಮ್ಮನ ಹತ್ತಿರ ಬಂದು ಕೇಪಿನ ಕೋವಿ ತಗೊಂಡು ಹೋಗಿದ್ದಾನೆ. ಕಾಡು ಕೋಳಿಗಳು ಕೂಗುವುದನ್ನೇ ಕೇಳಿಕೊಂಡು ಮೆಲ್ಲಗೆ ಕಡೆ ಹೋಗಿದ್ದಾನೆ. ಅಷ್ಟರಲ್ಲಿ ಅವನ ಜೊತೆಯಲ್ಲಿ ಬಂದ ನಾಯಿಗಳು, ಕಾಡು ಕೋಳಿಯನ್ನು ಹಾರಿಸಿವೆ. ಮರದ ಮೇಲೆ ಕೂತು ನಾಯಿಗಳ ಕಡೆ ನೋಡುತ್ತಿದ್ದ ಕಾಡು ಕೋಳಿಯ ಕಡೆಗೆ ಗುರಿಯಿಟ್ಟು ಗುಂಡು ಹಾರಿಸಿದ್ದಾನೆ.
ಮುಂದೇನಾಯ್ತು ಅಂತ ಗೊತ್ತಾಗೋಕ್ಕೆ ಮೈದಾಲಿಗೆ 10 ನಿಮಿಷ ಬೇಕಾಯ್ತು. ನಾನು ಮಾಡಿದ ಲೋಡಿಂಗ್ ಹ್ಯಾಗಿತ್ತು ಅಂದರೆ, ಕೋವಿಯ ಬ್ಯಾರೆಲ್ ಸೀಳಿ ಹೋಗಿ, ಸ್ವಲ್ಪ ರಂಜಕ ಹಿಂದಕ್ಕೆ ಸಿಡಿದು, ಮೈದಾಲಿ ಮುಖಕ್ಕೆ ಹಾರಿ, ಅವನ ಕಣ್ಣಿನ ಸುತ್ತ ರೆಪ್ಪೆ, ಹುಬ್ಬು ಮತ್ತೆ ಸ್ವಲ್ಪ ತಲೆ ಕೂದಲುಗಳು ಸುಟ್ಟು ಹೋಗಿವೆ. ಕೋವಿ ಒದ್ದ ರಭಸಕ್ಕೆ  ಮೈದಾಲಿ ಐದು ಅಡಿ ಹಿಂದೆ ಹೋಗಿ ಬಿದ್ದಿದ್ದಾನೆ. ಒಂದೆರೆಡು ನಿಮಿಷ ಸುಧಾರಿಸಿಕೊಂಡು ಕಣ್ಣು ಬಿಟ್ಟು ನೋಡಿದಾಗ, ಅವನ ಜೊತೆ ಬಂದಿದ್ದ ನಾಯಿಗಳು ನಿರಾಂತಕವಾಗಿ ಇವನು ಹೊಡೆದ ಕೋಳಿಯನ್ನು ತಿನ್ನುತ್ತಾ ಇದ್ದವಂತೆ. ಮಧ್ಯ ತಲೆ ಎತ್ತಿ, ಇವನ ಕಡೆ ನೋಡಿ, ಥ್ಯಾಂಕ್ಸ್ ಅನ್ನುವಂತೆ ಬಾಲ ಅಲ್ಲಾಡಿಸಿವೆ.
ಒಂದ್ಹತ್ತು ನಿಮಿಷ ಅಲ್ಲೇ ಬಿದ್ದಿದ್ದ ಮೈದಾಲಿ, ಮೆಲ್ಲಗೆ ಎದ್ದು ಕೋವಿ ಹಿಡ್ಕೊಂಡು ಮನೆಗೆ ಬಂದಿದ್ದಾನೆ. ಅಮ್ಮನಿಗೆ ಎಲ್ಲಾ ಹೇಳಿದಾಗ, ಅಮ್ಮ `ಹೋಗಲಿ ಬಿಡುಅಂದಿದ್ದಾರೆ. ಮತ್ತೆ ಕೋವಿಯ ಬ್ಯಾರೆಲ್ ಕತ್ತರಿಸಿ, ಅದನ್ನು ಸರಿ ಮಾಡಿಸಿದರೂ, ಅದು ಮುಂಚಿನ ಮೊನಚು ಕಳೆದುಕೊಂಡಿತ್ತು. ಮೈದಾಲಿಯಂತೂ, ಪ್ರತೀ ರಜಕ್ಕೆ ಬಂದಾಗ ಕಥೆಯನ್ನು ಹೇಳಿ, `ಅಣ್ಣ, ನೀವು ಮಾತ್ರ ಕೋವಿ ಲೋಡ್ ಮಾಡ್ಬೇಡಿ. ನಾಯಿಗಳು ಕೋಳಿ ತಿನ್ನುವಾಗ ಹೊಟ್ಟೆ ಉರೀತಿತ್ತು. ಏನ್ಮಾಡೋದು? ಏಳಕ್ಕೇ ಆಗ್ಲಿಲ್ಲ,’ ಅಂತಿದ್ದ.
ಈ ಶಿಕಾರಿ ನಾಯಿಗಳೇ ಹೀಗೆ. ಕಾಡು ಹಂದಿ, ಕಾಡು ಕುರಿ ಥರದ ದೊಡ್ಡ ಪ್ರಾಣಿಗಳಾದ್ರೆ ಪರವಾಗಿಲ್ಲ. ಹಕ್ಕಿಗಳು ಮತ್ತೆ ಮೊಲಗಳನ್ನ ಹೊಡೆದಾಗ, ಶಿಕಾರಿದಾರರು ಹಿಂದೆನೇ ಓಡಿಹೋಗಿ ಕಿತ್ಕೊಳ್ದೇ ಹೋದ್ರೆ, ಎಲ್ಲಾ ತಮ್ಮ ಪಾಲು ಅನ್ಕೊಂಡು ತಿನ್ಕೊಂಡು ಬಿಡ್ತವೆ.
ನಮ್ಮೂರಲ್ಲಿ ಶಿಕಾರಿಗೂ ಮತ್ತೆ ನಾಯಿಗಳಿಗೂ ಒಂಥರಾ ನಂಟು. ಶಿಕಾರಿ ಹುಚ್ಚು ಇದ್ದವರೆಲ್ಲ ಒಂದು ನಾಯಿಯನ್ನೂ ಇಟ್ಕೊಂಡಿರ್ತಾರೆ. ಮನೆಯಲ್ಲಿ ಎಷ್ಟೇ ನಾಯಿಗಳಿದ್ದರೂ, ಎಲ್ಲವೂ ಶಿಕಾರಿಗೆ ಆಗಿ ಬರೋಲ್ಲ. ಶಿಕಾರಿ ನಾಯಿಗಳಿಗೆ ಅವುಗಳದೇ ಕೆಲವು ಗುಣಗಳಿರ್ತವೆ.
ಶಿಕಾರಿ ನಾಯಿಗಳು ಸಾಧಾರಣವಾಗಿ ಯಾವ ಮನುಷ್ಯರ ಮೇಲೆ ಏರಿ ಹೋಗೋದಿಲ್ಲ. ಮತ್ತೆ, ಬೇರೆ ನಾಯಿಗಳ ಜೊತೆ ಜಗಳಕ್ಕೂ ನಿಲ್ಲುವುದಿಲ್ಲ. ಯಾವುದಾದರೂ ನಾಯಿ ಕಾಲು ಕೆರೆದುಕೊಂಡು ಬಂದರೆ, ಕೇರ್ ಮಾಡದೆ ಮುಂದೆ ಹೋಗ್ತಾವೆ. ಬೇರೆ ನಾಯಿಗಳೂ ಶಿಕಾರಿ ನಾಯಿಗಳ ನೆಡೆತೆ ನೋಡಿ, ಅವುಗಳ ಸಹವಾಸಕ್ಕೆ ಹೋಗೋದಿಲ್ಲ. ಯಾಕೆಂದ್ರೆ, ಅವು ತಿರುಗಿ ಬಿದ್ದರೆ, ಇವುಗಳಿಗೆ ಉಳಿಗಾವಲಿಲ್ಲ.
ಈ ನಾಯಿಗಳು, ಸಾಧಾರಣವಾಗಿ ಶಿಕಾರಿಗೆ ಹೋಗುವವರನ್ನು ಗುರ್ತಿಸಿ, ಅವರ ಹಿಂದೆ-ಮುಂದೆ ಸುತ್ತುತ್ತಾ ಇರ್ತವೆ. ಅವರು ಕೋವಿ ಹೆಗಲಿಗೇರಿಸಿದರೆ ಸಾಕು, ಅವೇ ಮುಂದೆ ಓಡಿ ದಾರಿ ತೋರ್ಸೋಕೆ ಶುರು ಮಾಡ್ತವೆ. ಯಾವುದಾದರು ಕಾಡು ಕೋಳಿ ಕಂಡರೆ ಸಾಕು, ಸೀದ ಅವುಗಳ ಕಡೆಗೆ ನುಗ್ಗುತ್ತವೆ. ಗಾಭರಿಯಿಂದ ಕೋಳಿ ಮರಕ್ಕೆ ಹಾರಿ ಕೂತು, ನಾಯಿಕಡೆಗೇ ನೋಡ್ತಾ ಇರ್ತಾವೆ. ಹತ್ತಿರದಲ್ಲೇ ಕೋವಿ ಹಿಡ್ಕೊಂಡಿರುವ ಮನುಷ್ಯನ ಕಡೆಗೆ ಅವುಗಳ ಗಮನ ಹೋಗಿರುವುದಿಲ್ಲ. ಅದೇ ಸಮಯಕ್ಕೆ ಸರಿಯಾಗಿ ಶಿಕಾರಿದಾರರು ಈಡು ಹೊಡೆಯುತ್ತಾರೆ.
ಕಾಡು ಕುರಿಗಳು ಸಿಕ್ಕಿದರೆ, ಈ ನಾಯಿಗಳು ನೇರವಾಗಿ ಅವುಗಳ ಮೇಲೆ ನುಗ್ಗುವುದಿಲ್ಲ. ಅದರ ಬದಲು, ಬಳಸಿಕೊಂಡು ಬಂದು ನುಗ್ಗುತ್ತವೆ. ಗಾಭರಿಯಲ್ಲಿ ಕಾಡುಕುರಿಗಳು ನೇರವಾಗಿ ಶಿಕಾರಿದಾರರ ಕಡೆಗೇ ನುಗ್ಗಿ, ಈಡಿಗೆ ಬಲಿಯಾಗುತ್ತವೆ.
ಇವುಗಳಲ್ಲದೆ, ಗುಂಪಿನಲ್ಲಿ ಶಿಕಾರಿಗೆ ಹೋಗುವ ಅಭ್ಯಾಸವೂ ನಮ್ಮೂರ ಕಡೆ ಇವೆ. ಸಾಧಾರಣವಾಗಿ ಕಾಡು ಹಂದಿಗಳನ್ನು ಗುರಿಯಾಗಿಟ್ಟುಕೊಂಡು ಈ ಶಿಕಾರಿಗಳಿಗೆ ಹೋಗುತ್ತಾರೆ. ನಾಲ್ಕೈದು ಕಾರು-ಜೀಪುಗಳಲ್ಲಿ, ಹತ್ತಾರು ಜನ ಕೋವಿಗಳನ್ನು ಇಟ್ಕೊಂಡು ಹೊರಡುತ್ತಾರೆ. ನಮ್ಮ ತೋಟಗಳಲ್ಲಿ ಇದ್ದ ಕಾಡುಹಂದಿಗಳನ್ನು ಯಾವಾಗಲೋ ಕೊಂದು, ತಿಂದು ತೀರಿಸಿದ್ದರಿಂದ, ಕಡೂರಿನ ಕಡೆಯೋ ಅಥವಾ ಹಳೇಬೀಡಿನ ಕಡೆಯೋ ಶಿಕಾರಿ ಹೋಗುವುದು ವಾಡಿಕೆಯಾಗಿತ್ತು. ಕಾಡು ಹಂದಿಗಳ ಕಾಟ ಜಾಸ್ತಿಯಾದಾಗ, ಅಲ್ಲಿನ ಜನಗಳೇ ವಿಷಯ ತಿಳಿಸುತ್ತಿದ್ದರು. ಫಾರೆಸ್ಟ್ ಡಿಪಾರ್ಟ್ ಮೆಂಟ್ ನವರು ಬಂದರೆ, ಹಳ್ಳಿಯವರೆಲ್ಲ ಸೇರಿ ಅವರನ್ನು ಅಡ್ಡ ಹಾಕುತ್ತಿದ್ದರು.
ಕಾಡು ಹಂದಿ ಶಿಕಾರಿಗೆ, ತೋಟಗಳಲ್ಲಿ ಓಡಾಡುವ ಎಲ್ಲಾ ಶಿಕಾರಿ ನಾಯಿಗಳು ಆಗಿ ಬರುವುದಿಲ್ಲ. ಅವುಗಳನ್ನು ಅನುಭವ ಇರುವ ಒಂದಿಷ್ಟು ನಾಯಿಗಳ ಜೊತೆ ಕರೆದುಕೊಂಡು ಹೋಗಿ, ಒಂದರೆಡು ಸಲ ತೋರಿಸಿ, ಆಮೇಲೆ ಹಂದಿಗಳನ್ನು ಬೆರಸಲು ಬಿಡಬೇಕು.  ಕಬ್ಬಿನ ಗದ್ದೆಗಳ ಮಧ್ಯ ಎಷ್ಟು ಹಂದಿಗಳಿರುತ್ತವೆ ಅಂತ ಗೊತ್ತಾಗೋದಿಲ್ಲ. ಮನುಷ್ಯರನ್ನೂ ಸಿಗಿಯಬಲ್ಲ ಈ ಕಾಡು ಹಂದಿಗಳು ಕೋರೆಯಲ್ಲಿ ಹೊಡೆದರೆ, ಈ ನಾಯಿಗಳು ಎರಡು ತುಂಡಾಗಿ ಹೋಗುತ್ತವೆ ಅಷ್ಟೆ. ಹೊಡೆತಕ್ಕೆ ಸಿಗದಂತೆ, ಈ ಕಾಡು ಹಂದಿಗಳನ್ನು ಅಡ್ಡ ಹಾಕಿ ಮನುಷ್ಯರಿರುವ ದಿಕ್ಕಿಗೆ ಓಡಿಸುವುದಷ್ಟೇ ಈ ನಾಯಿಗಳ ಕೆಲಸ.
ಒಂದ್ಸಲ ಹೀಗೇ ಆಯ್ತು. ಶಿವಮೊಗ್ಗದಲ್ಲಿ ಪ್ರಫುಲ್ಲಚಂದ್ರರ ಮಗ ಸಾಚಿಯಣ್ಣನ ಜೊತೆ ಶಿಕಾರಿಗೆ ಹೋಗಿದ್ದೆ. ಸಾಧಾರಣವಾಗಿ ರಾತ್ರಿ ಒಂದು ಅಥವಾ ಎರಡು ಜೀಪಿನಲ್ಲಿ ಹೋಗುವುದು ಅವರ ವಾಡಿಕೆ. ಅವತ್ತು ಒಂದೇ ಜೀಪಿನಲ್ಲಿ ಹೋಗಿದ್ದೆವು. ಸಾಚಿಯಣ್ಣನ ತಮ್ಮ ಇಕ್ಷು ಜೀಪು ಬಿಡುತ್ತಿದ್ದ. ಸಾಚಿಯಣ್ಣ ಮತ್ತೆ ಅವರ ಸ್ನೇಹಿತರೊಬ್ಬರು ಹಿಂದುಗಡೆ ನಿಂತಿದ್ದರು.
ನಾವು ಜೀಪಿಗೆ ಕೂತ ತಕ್ಷಣವೇ ಎರಡು ಡ್ಯಾಶ್ ಹೌಂಡ್ ನಾಯಿಗಳು ಜೀಪಿಗೆ ಹತ್ತಿದವು. ಇನ್ನೊಂದು ಡ್ಯಾಶ್ ಹೌಂಡ್ ನಾಯಿಯನ್ನು ಸಾಚಿಯಣ್ಣ ನನ್ನ ಕೈಗೆ ಕೊಟ್ಟು ಹಿಡ್ಕೊಳ್ಳೋಕೆ ಹೇಳಿದರು. ಒಂದರ್ಧ ಘಂಟೆಯೊಳಗೆ ಕಾಡು ಹಂದಿಯೊಂದು ಫ್ಲ್ಯಾಶ್ ಲೈಟ್ ಗೆ ಕಣ್ಣು ಕೊಟ್ಟು ನಿಂತಿತು. ಸಾಚಿಯಣ್ಣನ ಸ್ನೇಹಿತರು ಅವರ ತೋಟಾ ಕೋವಿಯಲ್ಲಿ ಗುಂಡು ಹಾರಿಸಿದರು. ಏಟು ತಗೊಂಡು ಹಂದಿ ಓಡೋಕೆ ಶುರು ಮಾಡ್ತು. ತಕ್ಷಣ ಸಾಚಿಯಣ್ಣ ತಮ್ಮ ರೈಫಲ್ ನಿಂದ ಗುಂಡು ಹಾರಿಸಿದರು. ಸೊಂಟಕ್ಕೆ ಏಟು ಬಿದ್ದ ಹಂದಿ ಅಲ್ಲೇ ಕೂತು ಬಿಡ್ತು.
ತಕ್ಷಣವೇ ಎರಡು ನಾಯಿಗಳು ಜೀಪಿಂದ ನೆಗೆದು ಹಂದಿಯ ಕಡೆಗೆ ಓಡತೊಡಗಿತು. ನನ್ನ ಕೈಲಿದ್ದ ನಾಯಿ ಸಹ ಒದ್ದಾಡೋಕೆ ಶುರುಮಾಡ್ತು. ನಾನಿದ್ದವನು ನಾಯಿಯನ್ನು ಜೀಪಿಂದ ಬಗ್ಗಿ ನಾಯಿಯನ್ನು ಕೆಳಗೆ ಬಿಟ್ಟೆ. ತಕ್ಷಣವೇ ಸಾಚಿಯಣ್ಣ ಕೂಗಿದರು: `ಅದು ಶಿಕಾರಿಗೆ ಹೊಸದು. ಅದನ್ನ ಬಿಡ್ಬೇಡ,’ ಅಂತ.
ಏನು ಮಾಡ್ಬೇಕು ಅಂತ ಗೊತ್ತಾಗದೆ ನಾನು ಜೀಪಿಂದ ಇಳಿದು ನಾಯಿ ಹಿಂದೆ ಓಡೋಕೆ ಶುರುಮಾಡ್ದೆ. ನಾನು ನಾಯಿನ ಹಿಡ್ಕೊಳ್ಳೋಕೆ ಮುಂಚೆನೆ ಅದು ಹಂದಿಯನ್ನು ತಲುಪಿ, ಅದನ್ನು ಕಚ್ಚಲು ಹೋಗಿದೆ. ಒಂದೇ ಸಲ ಮೂತಿಯಿಂದ ಹಂದಿ ತಿವಿದ ತಕ್ಷಣ, ಕುಯ್ಯೋಂ… ಅಂತ ನನ್ನ ಕಾಲ ಹತ್ತಿರ ಬಂದು ಬಿತ್ತು. ನಾನು ನಾಯಿನ ಎತ್ಕೊಳ್ಳೋ ಹೊತ್ತಿಗೆ, ನನ್ನ ಪಕ್ಕದಲ್ಲೇ ಗುಂಡು ಹಾರಿದ ಶಬ್ಧ ಬಂತು. ತಿರುಗಿ ನೋಡಿದರೆ, ಸಾಚಿಯಣ್ಣ ಹಂದಿ ತಲೆ ಮೇಲೆ ರೈಫಲ್ ಇಟ್ಟು ಗುಂಡು ಹೊಡೆದಿದ್ದರು.
ಅಗಿದ್ದಿಷ್ಟೆ. ನಾನು ಜೀಪಿಂದ ಇಳಿಯುವ ಹೊತ್ತಿಗೆ ಸಾಚಿಯಣ್ಣ ಇನ್ನೊಂದು ಗುಂಡು ಹೊಡೆಯೋಕೆ ಅಂತ ರೈಫಲ್ ಎತ್ತಿದ್ದಾರೆ. ಅವರಿಗೆ, ಓಡುತ್ತಿದ್ದ ನನ್ನ ತಲೆ ಅಡ್ಡ ಬಂದಿದೆ. ಇನ್ನು ಘಾಯಗೊಂಡ ಹಂದಿ ಕೈಲಿ ನಾನು ಸಿಕ್ಕಿಹಾಕಿಕೊಂಡರೆ, ಅದು ನನ್ನನ್ನೂ ಸಿಗಿದು ಹಾಕುವುದು ಗ್ಯಾರಂಟಿ ಅಂತ, ಸಾಚಿಯಣ್ಣ ನನ್ನ ಹಿಂದೆ ಓಡಿಬಂದಿದು, ಹಂದಿ ತಲೆಗೆ ಗುಂಡು ಹೊಡೆದಿದ್ದಾರೆ.
ನಾನು ನಾಯಿಗೇನಾಗಿದೆ ಅಂತ ನೋಡ್ತಾ ಇದ್ದೆ. ಮುಂದಿನ ತೊಡೆಗೆ ಸರಿಯಾಗೇ ಏಟಾಗಿತ್ತು. `ಇನ್ನೂ ಸ್ವಲ್ಪ ದಿನ ಇದಕ್ಕೆ ನೆಡೆಯೋಕೆ ಕಷ್ಟ ಆಗ್ಬೋದು,’ ಅಂದೆ. ಸಾಚಿಯಣ್ಣ ಜೋರಾಗಿ ನಗೋಕೆ ಶುರು ಮಾಡಿದ್ರು. `ಅಲ್ಲ, ನಾಯಿ ಹೋಗಿದ್ರೆ ಹೋಗ್ತಿತ್ತು. ನೀನೂ ಹೋಗಿದ್ರೆ ನಾವೇನು ಮಾಡ್ಬೇಕಿತ್ತು. ಲಕ್ ಚೆನ್ನಾಗಿತ್ತು ಅಷ್ಟೆ. ನನ್ನ ಮೊದಲನೇ ಗುಂಡಿಗೆ, ಅದ್ರ ಸೊಂಟ ಮುರಿದು ಹೋಗಿ, ಅದಕ್ಕೆ ಕೂತಲ್ಲಿಂದ ಏಳೋಕ್ಕಾಗಿಲ್ಲ. ಇಲ್ದೆ ಹೋಗಿದ್ರೆ, ಇವತ್ತು ನಿಮ್ಮಿಬ್ಬರನ್ನೂ ಸಿಗಿದು ತೋರಣ ಕಟ್ತಿತ್ತು, ಅಷ್ಟೆ,’ ಅಂದ್ರು. ಆಗಲೇ ನಂಗೆ ಗೊತ್ತಾಗಿದ್ದು: ನಾನು ಮಾಡಿದ್ದು ಒಂದಲ್ಲ, ಎರಡು ಅನಾಹುತಗಳು ಅಂತ.
ಈ ಕಾಡು ಹಂದಿ ಶಿಕಾರಿಗಳಲ್ಲಿ ಕಂತ್ರಿ ನಾಯಿಗಳನ್ನು ಬಿಟ್ಟರೆ ಡ್ಯಾಶ್ ಹೌಂಡ್ ಗಳೇ ಜಾಸ್ತಿ ಇರುತ್ತವೆ. ಹೀಗೇಕೆ ಅಂತ ಒಂದಿಬ್ಬರನ್ನು ಕೇಳಿದ್ದೆ. ಡ್ಯಾಶ್ ಹೌಂಡ್ ಗಳು ಕುಳ್ಳಕಿರುವ ನಾಯಿಗಳಾದ್ದರಿಂದ, ದೊಡ್ಡಕ್ಕಿರುವ ಹಂದಿಗಳ ಮೇಲೆ ಏರಿ ಹೋಗುವುದಿಲ್ಲ. ಅದರ ಬದಲು, ಹಂದಿಗಳನ್ನು ಸುತ್ತುವರೆದು, ಅವುಗಳು ಓಡುವ ವೇಗವನ್ನು ಕಡಿಮೆ ಮಾಡುತ್ತವೆ. ಹಂದಿಗಳು ಮೂತಿಯಿಂದ ತಿವಿಯಲು ಪ್ರಯತ್ನಿಸಿದರೂ, ಇವು ಪುಟ್ಟದಾಗಿರುವುದರಿಂದ ತಪ್ಪಿಸಿಕೊಳ್ಳುತ್ತವೆ, ಎಂದಿದ್ದರು. ಅದೆಷ್ಟು ಸತ್ಯವೋ ನಂಗಂತೂ ಗೊತ್ತಿಲ್ಲ.
ಆದರೆ, ಶಿಕಾರಿಗೆ ಹೋಗದವರು ಕೂಡ ಈ ಥರದ ಹಂದಿ ಶಿಕಾರಿ ನಾಯಿಗಳನ್ನು ಸಾಕಿರುತ್ತಾರೆ. ಮತ್ತೆ, ಅವರ ಕೋವಿಗಳನ್ನು ಹಂದಿ ಶಿಕಾರಿಗೆ ಕಳುಹಿಸಿ ಕೊಡ್ತಾರೆ ಕೂಡ. ಯಾಕೆಂದ್ರೆ, ಶಿಕಾರಿ ಮುಗಿದ ಮೇಲೆ ಮಾಂಸವನ್ನು ಪಾಲು ಹಾಕ್ತಾರೆ. ಒಂದು ಪಾಲು ಹೊಡೆದವನದು, ಎರಡನೇ ಪಾಲು ಕೋವಿಯದು, ಮೂರನೇ ಪಾಲು ನಾಯಿಯದು…… ಹೀಗೆ ಪಾಲು ಸಾಗುತ್ತದೆ. ಕೋವಿ ಮತ್ತೆ ನಾಯಿ ಕಳುಹಿಸಿದವರಿಗೆ ಅನಾಯಾಸವಾಗಿ ಎರಡು ಪಾಲು ಮನೆಗೆ ಬರುತ್ತದೆ.
ನಮ್ಮೂರ ವಿಜಯಣ್ಣ ಕೂಡ ಈ ಥರದ ನಾಯಿಗಳನ್ನು ಸಾಕೋದ್ರಲ್ಲಿ ಎತ್ತಿದ ಕೈ. ಹುಡುಗರಾಗಿದ್ದಾಗ ವಿಪರೀತ ಶಿಕಾರಿ ಹುಚ್ಚಿದ್ದ ವಿಜಯಣ್ಣ, ಆಮೇಲೆ ಬಿಟ್ಟುಬಿಟ್ಟಿದ್ದರು. ಅವರ ಮನೆಯಲ್ಲಿ ಯಾವಾಗಲೂ ಒಂದೈದಾರು ನಾಯಿಗಳನ್ನು ನೋಡ್ತಾ ಇರ್ತಿದ್ದೆ. ಹಾಗೆ ನೋಡಿದ ನಾಯಿಗಳಲ್ಲಿ ನನ್ನ ನೆನಪಲ್ಲಿ ಉಳಿದಿದ್ದು ಒಂದು ನಾಯಿ: ಪಿಂಕಿ.
ಪಿಂಕಿ ಕಂದು ಬಣ್ಣದ ಡ್ಯಾಶ್ ಹೌಂಡ್ ನಾಯಿ ಮತ್ತೆ ಯಾವಾಗಲೂ ಶಿಕಾರಿಗೆ ಹೋಗುತ್ತಿದ್ದ ನಾಯಿ. ಹಾಗೇ ಒಂದ್ಸಲ ಶಿಕಾರಿಗೆ ಹೋದ ಪಿಂಕಿ ವಾಪಾಸ್ ಬರಲೇ ಇಲ್ಲ. ಅದರ ಹಿಂದೆ ಕಬ್ಬಿನ ಗದ್ದೆಯಲ್ಲಿ ಹೋದ ಶಿಕಾರಿದಾರನಿಗೆ, ಪಿಂಕಿ ದೂರದಲ್ಲೆಲ್ಲೋ ಬೊಗಳುತ್ತಿದ್ದದ್ದು ಕೇಳಿಸಿದೆ. ಅವತ್ತು ನಾಲ್ಕೈದು ಹಂದಿಗಳನ್ನು ಹೊಡೆದು ಉರುಳಿಸಿದ್ದಾರೆ. ಸ್ವಲ್ಪ ಹೊತ್ತಾದ ಮೇಲೆ ಸಾಧಾರಣವಾಗಿ ನಾಯಿಗಳು ವಾಪಾಸ್ ಬರುತ್ತವೆ. ಆದ್ರೆ, ಪಿಂಕಿ ಮಾತ್ರ ಬಂದಿಲ್ಲ.
ನಾಯಿಗಳನ್ನು ಕಾರಿಗೆ ತುಂಬುವಾಗ ಒಂದು ನಾಯಿ ಕಮ್ಮಿ ಇದ್ದಿದ್ದು ಗಮನಕ್ಕೆ ಬಂದಿದೆ. ಶಿಕಾರಿಗೆ ಹೋದವರೆಲ್ಲ ಕಬ್ಬಿನ ಗದ್ದೆ, ಸುತ್ತ ಮುತ್ತ ಎಲ್ಲಾ ಹುಡುಕಿದ್ದಾರೆ. ಎಲ್ಲೂ ಸಿಕ್ಕಿಲ್ಲ. ವಾಪಾಸ್ ಬಂದ ಮೇಲೆ, ವಿಜಯಣ್ಣನಿಗೆ ವಿಷಯ ತಿಳಿಸಿದ್ದಾರೆ. ವಿಜಯಣ್ಣ ಮಾತ್ರ ಆ ನಾಯಿಯನ್ನು ಕಳ್ಕೊಳ್ಳೋಕೆ ತಯಾರಿರಲಿಲ್ಲ.
ಟ್ಯಾಕ್ಸಿ ಮಾಡಿಕೊಂಡವರೇ, ಊರವರೆಲ್ಲಾ ಶಿಕಾರಿ ಮಾಡಲು ಹೋದ ಊರಿಗೆ ಹೋಗಿ, ಎಲ್ಲರನ್ನೂ ವಿಚಾರಿಸಿದ್ದಾರೆ. ಆ ನಾಯಿಯ ಬಗ್ಗೆ ಏನಾದ್ರೂ ಗೊತ್ತಾದ್ರೆ ತಮಗೆ ವಿಷಯ ತಿಳಿಸಿದವರಿಗೆ ದುಡ್ಡು ಕೊಡುವುದಾಗಿಯೂ ಹೇಳಿದ್ದಾರೆ. ಆದ್ರೆ, ಏನೂ ಪ್ರಯೋಜನವಾಗಿಲ್ಲ. ಒಂದೆರೆಡು ದಿನ ಹುಡುಕಿ ವಾಪಾಸ್ ಬಂದಿದ್ದಾರೆ.
ಅದಾದ ಮೇಲೆ ಕೂಡ, ವಿಜಯಣ್ಣನಿಗೆ ಯಾರಾದರೂ, ಯಾರಿಗಾದರೂ ಒಂದು ನಾಯಿ ಸಿಕ್ಕಿದೆ ಅಂತ ಹೇಳಿದ್ರೆ ಹುಡುಕಿಕೊಂಡು ಹೋಗ್ತಿದ್ರು. ಹಾಗೇ, ಎರಡು ವರ್ಷ ಕಳೆದು ಹೋಗಿತ್ತು. ಒಂದು ದಿನ, ಯಾವುದೋ ಹಬ್ಬದ ಸಮಯದಲ್ಲಿ, ವಿಜಯಣ್ಣನ ತೋಟದ ಕೆಲಸದವನೊಬ್ಬ ಚೀಕನಹಳ್ಳಿಗೆ ನೆಂಟರ ಮನೆಗೆ ಹೋಗಿದ್ದನಂತೆ. ಅಲ್ಲಿ, ರಾತ್ರಿ ಶರಾಬು ಅಂಗಡಿಯ ಹತ್ತಿರ, ಇನ್ಯಾರದೋ ತೋಟದ ಆಳಿನ ಸಂಭಂದಿಕ ಕಡೂರಿನಿಂದ ಬಂದಿದ್ದನಂತೆ. ಕುಡಿದು ಮಾತಾಡುವಾಗ, ಕಡೂರಿನ ಕಡೆಯಿಂದ ಬಂದವನು, ತಮ್ಮ ಊರಿನ ತೆಂಗಿನ ತೋಟದ ಮೇನೇಜರ್ ಗೆ ಹಂದಿಯೋ, ಕರಡಿಯೋ ಘಾಯ ಮಾಡಿದ ನಾಯಿಯೊಂದು ಸಿಕ್ಕಿತ್ತೆಂದು ಅದರ ಕಥೆ ಹೇಳಿದ್ದಾನೆ. ಎರಡು ವರ್ಷದ ಬಳಿಕ, ಆ ನಾಯಿ ಊರಿಲೆಲ್ಲಾ ಬಹಳ ಒಳ್ಳೆ ಹೆಸರು ಮಾಡಿದೆ, ಅಂತಾನೂ ಹೇಳಿದ್ದಾನೆ.
ಬೆಳಗ್ಗೆ ಎದ್ದವನೇ, ವಿಜಯಣ್ಣನ ಆಳು ಸೀದ ವಾಪಾಸ್ ಬಂದು ವಿಜಯಣ್ಣನಿಗೆ ವರದಿ ಒಪ್ಪಿಸಿದ್ದಾನೆ. ವಿಜಯಣ್ಣ ಟ್ಯಾಕ್ಸಿ ತಗೊಂಡು ನೆಟ್ಟಗೆ ಚೀಕನಳ್ಳಿಗೆ ಹೋಗಿ, ಅವರ ಆಳಿನ ಸಂಬಂಧಿಯ ಸಹಾಯದಿಂದ, ಕಥೆ ಹೇಳಿದವನ ಸಂಬಂಧಿಯನ್ನು ಹುಡುಕಿದ್ದಾರೆ. ಅಷ್ಟರೊಳಗೆ ಕಥೆ ಹೇಳಿದ್ದವನು ಅವನ ಊರಿಗೆ ವಾಪಾಸ್ ಹೋಗಿದ್ದಾನೆ. ಅಂತೂ ಬೆನ್ನು ಬಿಡದೆ, ಅವನನ್ನೂ ಹುಡುಕಿ, ನಾಯಿ ಇದ್ದ ತೆಂಗಿನ ತೋಟವನ್ನು ಹುಡುಕಿದ್ದಾರೆ. ಅದು ಶಿಕಾರಿ ಮಾಡಲು ಹೋದ ಜಾಗದಿಂದು ಮೂರು ಕಿಲೋಮೀಟರ್ ದೂರದಲ್ಲಿ ಇತ್ತು.
ತೆಂಗಿನ ತೋಟ ತಲುಪಿದಾಗ, ಅದರ ಮೇನೇಜರ್ ಎದುರಿಗೇ ಸಿಕ್ಕಿದ್ದಾರೆ. ಇವರು ನಾಯಿಯ ಕಥೆ ಹೇಳುತ್ತಿದ್ದಂತೆ, ಅವನ ಮುಖದ ಬಣ್ಣವೇ ಬದಲಾಗಿದೆ. `ಸರ್, ನೀವು ಹೇಳೋದೆಲ್ಲ ಸರಿ. ಇದು ನಿಮ್ಮ ನಾಯಿನೇ ಇರಬಹುದು. ಆದ್ರೆ, ನಂಗೆ ಸಿಕ್ದಾಗ ಅದು ಸಾಯೋ ಸ್ಥಿತಿಯಲ್ಲಿ ಇತ್ತು. ಹಂದಿ ಕಚ್ಚಿ ಅದರ ಬಾಲ ತುಂಡಾಗಿ, ಕರುಳೇ ಹೊರಗಡೆ ಬಂದಿತ್ತು. ನಾನು ಅದನ್ನು ಡಾಕ್ಟರಿಗೆ ತೋರಿಸಿ ತುಂಬಾ ದುಡ್ಡು ಖರ್ಚು ಮಾಡಿದ್ದೀನಿ. ಅದಕ್ಕಿಂತ ಜಾಸ್ತಿ, ಮೂರು ತಿಂಗಳು ಮಗುವಿನ ಥರ ನೋಡ್ಕೊಂಡಿದ್ದೀನಿ. ಆಮೇಲೇ ಅದು ಸರಿಯಾಗಿದ್ದು. ನೋಡಿ ಸರ್, ನಾನು ಆ ನಾಯಿನ ತುಂಬಾ ಪ್ರೀತಿ ಮಾಡ್ತೀನಿ. ಅದೂ ಅಷ್ಟೆ, ತೋಟದಿಂದ ಒಂದು ಕಾಯಿ ಹೊರಗೆ ಹೋಗೋಕೆ ಬಿಡೋಲ್ಲ. ನೀವು ಈಗ ಬಂದು ಕೇಳಿದ್ರೆ, ಎಷ್ಟೇ ದುಡ್ಡು ಕೊಟ್ರೂ ನಾಯಿನ ಕೊಡೋಕ್ಕಾಗೋಲ್ಲ,’ ಅಂತ ಖಡಾ ಖಂಡಿತವಾಗಿ ಹೇಳಿದ್ದಾರೆ.
ವಿಜಯಣ್ಣನಿಗೆ ಏನು ಹೇಳ್ಬೇಕು ಅಂತ ಗೊತ್ತಾಗಿಲ್ಲ. ಒಂದೆರೆಡು ನಿಮಿಷ ಸುಮ್ಮನೆ ನಿಂತವರು, `ಎಲ್ಲೋ ಒಂದ್ಕಡೆ ಬದುಕಿದೆಯಲ್ಲಾ’ ಅಂತ ಸಮಾಧಾನ ಮಾಡ್ಕೊಂಡರು. ಆಮೇಲೆ ಮೆಲ್ಲಗೆ ಕೇಳಿದ್ರು: `ನೀವಿಷ್ಟು ಹೇಳಿದ್ಮೇಲೆ ನಾನು ನಾಯಿನ ಕೇಳೋಲ್ಲ. ಇಷ್ಟು ದೂರ ಬಂದಿದ್ದೀನಲ್ಲ, ಒಂದ್ಸಲ ಅದನ್ನ ನೋಡಿಬಿಟ್ಟು ಹೋಗ್ಬಹುದಾ?’.
`ನೋಡೋಕ್ಕೇನೂ ತೊಂದ್ರೆ ಇಲ್ಲ,’ ಅಂದವರೇ, ಕೆಲಸದವರನ್ನು ಕರೆದು, ನಾಯಿನ ಬಿಡೋಕೆ ಹೇಳಿದ್ದಾರೆ. ಮನೆಯ ಹಿಂದುಗಡೆಯಿಂದ ಬಂದ ಪಿಂಕಿ, ಕಾರಿನ ಪಕ್ಕ ಇದ್ದ ವಿಜಯಣ್ಣನನ್ನು ಗಮನಿಸಿಲ್ಲ. ಮೇನೇಜರ್ ಹತ್ತಿರ ಹೋಗಿ ಮುದ್ದು ಮಾಡಿಸಿಕೊಳ್ಳಲು ನೋಡುತ್ತಿತ್ತು. ಆಗ ವಿಜಯಣ್ಣ: `ಏ ಪಿಂಕಿ,’ ಅಂದಿದ್ದಾರೆ.
ಒಂದೇ ಸಲ ಕರೆಂಟ್ ಹೊಡೆದಂತೆ ಬೆಚ್ಚಿದ ನಾಯಿ, ಮೇನೇಜರ್ ಬಿಟ್ಟು ವಿಜಯಣ್ಣನ ಹತ್ತಿರ ಓಡಿ ಬಂದಿದೆ. ಅವರ ಮೇಲೆ ಹಾರಿ, ವಿಚಿತ್ರವಾದ ಕೀರಲು ಧ್ವನಿಯಲ್ಲಿ ಕೂಗುತ್ತಾ, ಅವರ ಮುಖವನ್ನೆಲ್ಲ ನೆಕ್ಕಿ, ಶರ್ಟನ್ನೆಲ್ಲಾ ಹರಿದು ಹಾಕಿದೆ. ಕಾರಿನ ಬಾನೆಟ್ ಮೇಲೆ ಪಿಂಕಿಯನ್ನು ಕೂರಿಸಿಕೊಂಡ ವಿಜಯಣ್ಣ ಎಷ್ಟೇ ಸಮಾಧಾನ ಮಾಡಿದರೂ, ಅದು ಕೀರಲು ಧ್ವನಿಯಲ್ಲಿ ಗೋಳಿಡುವುದು ಕಮ್ಮಿ ಮಾಡಲಿಲ್ಲವಂತೆ.
ಒಂದೈದು ನಿಮಿಷ ಇದನ್ನೇ ನೋಡಿದ ಮೇನೇಜರ್, ಸೀದ ವಿಜಯಣ್ಣನ ಹತ್ತಿರ ಬಂದವರೇ, `ಸರ್, ತಿರುಗಿ ನೋಡಬೇಡಿ. ಈ ನಾಯಿನ ಕಾರಿಗೆ ಹಾಕಿಕೊಂಡು ಸೀದ ಊರಿಗೆ ಹೋಗಿಬಿಡಿ,’ ಅಂದರಂತೆ. ಅವರ ಕಣ್ಣಲ್ಲಿ ನೀರು ಬರುತ್ತಿತ್ತಂತೆ.
`ನೋಡಿ ಸರ್, ಇಷ್ಟು ದಿನ ನೀವು ಸಿಗೋಲ್ಲ ಅಂತ ಇದು ನನ್ನ ಜೊತೆ ಬದುಕ್ತು. ಇನ್ನು ನಿಮ್ಮನ್ನ ಬಿಟ್ಟು ಇರೋಲ್ಲ. ನೀವಿದನ್ನ ಇಲ್ಲೇ ಬಿಟ್ಟು ಹೋದ್ರೂ, ಇದು ಉಪವಾಸ ಬಿದ್ದು ಸಾಯುತ್ತೆ. ಇದು ಹೋಗೋದನ್ನೂ ನಂಗೆ ನೋಡೋಕ್ಕಾಗಲ್ಲ. ನೀವಿದನ್ನ ತಗೊಂಡು ಹೊರಟುಬಿಡಿ,’ ಅಂತ ಮೇನೇಜರ್ ಹೇಳಿದಾಗ, ವಿಜಯಣ್ಣನಿಗೆ ಏನು ಹೇಳ್ಬೇಕು ಅಂತ ಗೊತ್ತಾಗಿಲ್ಲ.
ವಿಜಯಣ್ಣ ದುಡ್ಡು ಕೊಡಲು ಹೋದರೂ, ಮೇನೇಜರ್ ಅದನ್ನ ತಗೊಳ್ಳೋಕೆ ಒಪ್ಪಿಲ್ಲ. `ಈ ನಾಯಿಗೆ ಬೆಲೆ ಕಟ್ಟೋಕೆ ಆಗೋಲ್ಲ, ಬಿಡಿ ಸರ್. ನೀವಿನ್ನು ಹೊರಡಿ,’ ಅಂತ ಕಳುಹಿಸಿ ಬಿಟ್ಟಿದ್ದಾರೆ. ವಾಪಾಸ್ ಬಂದ ಮೇಲೂ, ಪಿಂಕಿ ಎರಡು, ಮೂರು ವರ್ಷ ಬದುಕ್ಕಿತ್ತು. ಆಮೇಲೆ, ವಯಸ್ಸಾಗಿ ಸತ್ತು ಹೋಯ್ತು.
ಇತ್ತೀಚೆಗೆ ತೋಟಗಳಲ್ಲಿ ಕೋವಿ ಹಿಡ್ಕೊಂಡು ತಿರುಗೋರ ಸಂಖ್ಯೆ ಕಮ್ಮಿಯಾಗಿದೆ. ಹಾಗೇನೆ, ಊರಲ್ಲಿ ಶಿಕಾರಿ ಕಥೆಗಳೂ ಅಷ್ಟೆ. ಕಣ್ಮರೆಯಾಗಿದ್ದ ನವಿಲುಗಳು ಮತ್ತೆ ಕಾಡು ಹಂದಿಗಳು ಮನೆಯ ಹತ್ತಿರವೇ ಬರುತ್ತವೆ.
ಯಾವಾಗಾದರೂ ತೋಟದಲ್ಲಿ ತಿರುಗುವಾಗ ಕಾಫಿ ಗಿಡಗಳ ನೆಡುವೆ ಬಗ್ಗಿ ನೋಡ್ತಿರ್ತೀನಿ: ಆ ಪಿಂಕಿ ಸಂತತಿ ಇನ್ನೂ ಉಳಿದಿವೆಯಾ?...... ಅಂತ.


ಮಾಕೋನಹಳ್ಳಿ ವಿನಯ್ ಮಾಧವ್