ಛೆ!...
ನಾ ಹಾಗೆ ಮಾಡ್ಬಾರ್ದಿತ್ತು
ಹೋದ
ಶುಕ್ರವಾರ ಚಂದ್ರು ಫೋನ್ ಮಾಡಿ ಹೇಳಿದ: `ಸರ್, ಧನಂಜಯಪ್ಪ ತೀರಿಕೊಂಡ್ರಂತೆ’.
ತಕ್ಷಣವೇ
`ನಾ ಹಾಗೆ ಮಾಡ್ಬಾರ್ದಿತ್ತು,’ ಅನ್ಕೊಂಡು ತುಟಿ ಕಚ್ಕೊಂಡೆ.
ನಾನು
ಕ್ರೈಂ ರಿಪೋರ್ಟಿಂಗ್ ಗೆ ಬಂದ ಮೊದಲ ದಿನವೇ ನನಗೆ ಪರಿಚಯವಾಗಿದ್ದರು. ತಲೆ ಮೇಲೆ ಪ್ರಪಂಚನೇ ಹೊತ್ತುಕೊಂಡಂತೆ,
ಎಲ್ಲೋ ಕಳೆದು ಹೋದವರಂತೆ ಓಡಾಡುತ್ತಿದ್ದರು. ಮೊದಮೊದಲು ಅಷ್ಟೇನೂ ತಲೆಕೆಡಿಸಿಕೊಂಡಿರಲಿಲ್ಲ. ಒಂದಿನ,
ನನ್ನ ಯಾವುದೋ ವಿಶೇಷ ವರದಿಯನ್ನು ಓದಿ ಬಂದವರೇ, `ನೋಡೋ, ಅಂಥಾದ್ದೇನಾದ್ರು ಇದ್ರೆ ನಮಗೂ ಒಂದೆರೆಡು
ಪ್ಯಾರಾ ಹೇಳು. ಆಮೇಲೆ ನಿಮಗೆ ಹ್ಯಾಗೆ ಬೇಕೋ, ಹಾಗೆ ಬರ್ಕೊಳ್ಳಿ,’ ಅಂದಿದ್ದರು.
ಟೆಲಿವಿಷನ್
ಗಳ ಹಾವಳಿಯಿಲ್ಲದ, ಮೊಬೈಲ್ ಹಾಗೂ ಇಂಟರ್ನೆಟ್ ಕಾಟವಿಲ್ಲದ ಆ ಕಾಲದಲ್ಲಿ, ಸಂಜೆ ಪತ್ರಿಕೆಗಳು ಮತ್ತು
ನ್ಯೂಸ್ ಏಜೆನ್ಸಿಗಳನ್ನು ನಾವು ತುಂಬಾನೇ ಮುತುವರ್ಜಿಯಿಂದ ಗಮನಿಸುತ್ತಿದ್ದೆವು. ನಾವೇನಾದ್ರು ಎರಡು
ಪ್ಯಾರಾ ಸಂಜೆವಾಣಿಗೆ ಕೊಟ್ಟರೆ, ಮರುದಿನ ಎಲ್ಲಾ ಪತ್ರಿಕೆಗಳು ಅದನ್ನು ಫಾಲೋ ಅಪ್ ಮಾಡಿ, ನಮ್ಮ ವಿಶೇಷ
ವರದಿಗೆ ಯಾವುದೇ ಕಿಮ್ಮತ್ತಿರುತ್ತಿರಲಿಲ್ಲ. `ಇದೊಳ್ಳೆ ಕಥೆಯಾಯ್ತಲ್ಲಾ,’ ಅಂದ್ಕೊಂಡು ಸುಮ್ಮನಾದೆ.
ಯಾಕೋ
ಇದೊಂಥರಾ ತಮಾಶೆ ಅಂತ ಕೂಡ ಅನ್ನಿಸತೊಡಗಿತು. ಕೆಲವು ಸಲ, ವಿಷಯ ಗೊತ್ತಿದ್ದರೂ ಮಧ್ಯಾಹ್ನ ಎರಡೂವರೆವರೆಗೆ
ಸುಮ್ಮನಿದ್ದು, `ಧನು, ಈ ಸುದ್ದಿ ಗೊತ್ತಾಗ್ಲಿಲ್ವಾ?’
ಅಂತ ಕೇಳಿದಾಗ ಅವರಿಗೆ ಸಿಟ್ಟೇ ಬರುತ್ತಿತ್ತು. `ನಿಂಗೆ ಬರೀ ಹುಡುಗಾಟ. ಒಂದಿನ ಹೊಡೆದ್ಬಿಡ್ತೀನಿ
ನೋಡು,’ ಅಂತಿದ್ರು.
ಆದ್ರೆ
ಎಲ್ಲರಿಗಿಂತ ಅವರನ್ನು ಗೋಳು ಹುಯ್ಕೊಂಡಿದ್ದುಡ್ಯಾನಿ. ಡ್ಯಾನಿ ನನಗಿಂತ ಮುಂಚೆ ಇಂಡಿಯನ್ ಎಕ್ಸ್ ಪ್ರೆಸ್
ನಲ್ಲಿ ಕ್ರೈಂ ರಿಪೋರ್ಟರ್. ಅವನಂತ ಕಿಡಿಗೇಡಿ, ನಮ್ಮ ಕ್ರೈಂ ರಿಪೋರ್ಟರ್ ಗಳಲ್ಲಿ ಯಾರೂ ಬರಲೇ ಇಲ್ಲ.
ಬರೀ ಧನಂಜಯಪ್ಪ ಅಲ್ಲ, ಯಾರು ಸಿಕ್ಕಿದರೂ ಬಿಡುತ್ತಿರಲಿಲ್ಲ. ಅವನ ವಿಚಿತ್ರ ಖಯಾಲಿಗಳಲ್ಲಿ ಒಂದೆಂದರೆ,
ಯಾವುದೋ ಆಗದೇ ಇರುವ ಸುದ್ದಿಯನ್ನು, ಯಾವುದಾದರೊಂದು ಪೇಪರ್ ನಲ್ಲಿ ಬರುವ ಹಾಗೆ ಮಾಡಿ, ರಿಪೋರ್ಟರ್
ಗಳನ್ನು ಗೋಳು ಹುಯ್ಕೊಳ್ಳೋದು. ಇದು ಎಲ್ಲರಿಗೂ ಗೊತ್ತಿದ್ದರೂ, ಡ್ಯಾನಿ ಅಧ್ಬುತವಾದ ಕ್ರೈಂ ರಿಪೋರ್ಟರ್
ಅನ್ನುವುದರಲ್ಲಿ ಯಾವುದೇ ಸಂದೇಹವಿರಲಿಲ್ಲ. ಅವನಿಗೆ ಕಥೆ ಹೇಳುವ ಕಲೆಯಂತೂ ಇನ್ನೂ ಅಧ್ಬುತವಾಗಿತ್ತು.
ಇದೆಲ್ಲದರ ಪರಿಣಾಮವಾಗಿ, ಗುಂಡಿಗೆ ಬೀಳುವವರ ಸಂಖ್ಯೆಯೂ ಹೆಚ್ಚಿತ್ತು.
ಒಂದ್ಸಲ
ಹೀಗೇ ಆಯ್ತು. ಸಾಲಾರ್ ಪತ್ರಿಕೆಯ ಸಿದ್ದಿಕಿ ಅಲ್ದೂರಿಗೆ ಯಾವುದೋ ಒಂದು ಕಥೆಯನ್ನು ಡ್ಯಾನಿ ಹೇಳಿದ.
ಅದರ ಬಗ್ಗೆ ಸ್ವಲ್ಪ ಗೊತ್ತಿದ್ದ ಅಲ್ದೂರಿ, `ಅದು ಹಾಗೆ ಇಲ್ಲ ಕಣೋ,’ ಅಂತ ಏನೋ ಹೇಳೋಕೆ ಹೋದ. `ಏನೋ
ಒಳ್ಳೆ ಸ್ಟೋರಿ ಅಂತ ನಿನ್ನೊಬ್ಬನಿಗೇ ಕೊಡ್ತಿದ್ದೀನಿ. ನಿನ್ನ ಉರ್ದು ಪೇಪರ್ ಓದಿ ಕಮೀಷನರ್ ಕ್ಲಾರಿಫಿಕೇಷನ್
ಬೇರೆ ಕೊಡ್ತಾರೆ ಅಂತ ಹೆದರ್ತೀಯ. ಉರ್ದು ಓದೋಕೆ ನಿಮ್ಮ ಸಾಬರನ್ನ ಬಿಟ್ಟು ಬೇರೆ ಯಾರಿಗೆ ಬರುತ್ತೆ?’
ಅಂದ. ಸರಿ ಅನ್ಕೊಂಡು ಸಿದ್ದಿಕಿ ಬರೆದೇ ಬಿಟ್ಟ.
ಮಾರನೇ ದಿನ ಕಮೀಶನರ್ ಚಂದೂಲಾಲ್ ಪ್ರೆಸ್ ಕಾನ್ಫರೆನ್ಸ್ ಇತ್ತು. ಎಲ್ಲರಿಗಿಂತ ಕೊನೆಗೆ ಸಿದ್ದಿಕಿ ಬಂದು ಕೂರುತ್ತಿರುವಾಗಲೇ, ಚಂದೂಲಾಲ್ ಇದ್ದವರು, ಸಾಲಾರ್ ಪೇಪರ್ ಎತ್ತಿ: `ಅರೆ ಸಿದ್ದಿಕಿ, ತೂ ಕ್ಯಾ ಲಿಖಾರೇ ಇದರ್? ಐಸಾ ನಹಿ ಹುವಾರೇ,’ ಅಂತ ಉರ್ದುವಿನಲ್ಲಿ ಹೇಳಿದಾಗ ಎಲ್ಲಾರೂ ಸುಸ್ತು.
ಮಾರನೇ ದಿನ ಕಮೀಶನರ್ ಚಂದೂಲಾಲ್ ಪ್ರೆಸ್ ಕಾನ್ಫರೆನ್ಸ್ ಇತ್ತು. ಎಲ್ಲರಿಗಿಂತ ಕೊನೆಗೆ ಸಿದ್ದಿಕಿ ಬಂದು ಕೂರುತ್ತಿರುವಾಗಲೇ, ಚಂದೂಲಾಲ್ ಇದ್ದವರು, ಸಾಲಾರ್ ಪೇಪರ್ ಎತ್ತಿ: `ಅರೆ ಸಿದ್ದಿಕಿ, ತೂ ಕ್ಯಾ ಲಿಖಾರೇ ಇದರ್? ಐಸಾ ನಹಿ ಹುವಾರೇ,’ ಅಂತ ಉರ್ದುವಿನಲ್ಲಿ ಹೇಳಿದಾಗ ಎಲ್ಲಾರೂ ಸುಸ್ತು.
ವಿಷಯವೇನೆಂದರೆ,
ಚಂದೂಲಾಲ್ ಅವರ ಪ್ರಾಥಮಿಕ ಶಿಕ್ಷಣವನ್ನು ಉರ್ದುವಿನಲ್ಲೇ ಆರಂಭಿಸಿದವರು. ಆನಂತರ, ಉರ್ದು ಕವಿತೆಗಳ
ಗೀಳು ಹಚ್ಚಿಸಿಕೊಂಡು, ಪ್ರತಿದಿನ ಬೆಳಗ್ಗೆ ಸಾಲಾರ್ ಪೇಪರ್ ಮೊದಲು ಓದುತ್ತಿದ್ದರು.
ಇಂಥ
ಅನೇಕ ಕುಚೇಷ್ಟೆಗಳಿಗೆ ಧನಂಜಯಪ್ಪನೂ ಬಲಿಯಾಗಿದ್ದರು. ಸಂಜೆವಾಣಿಯ ಎಡಿಷನ್ ಗೆ ಕೊನೇ ಸುದ್ದಿ ಕೊಡಬೇಕಾಗಿದ್ದು
ಎರಡೂವರೆಯ ಒಳಗೆ. ಅದೇ ಸಮಯಕ್ಕೆ ಬಂದ ಡ್ಯಾನಿ ಏನಾದರೊಂದು ಸುದ್ದಿ ಹೇಳಿಬಿಡುತ್ತಿದ್ದ. ಸಂಜೆವಾಣಿ
ಬಿಟ್ಟು, ಇನ್ನೆಲ್ಲೂ ಅದು ಸುದ್ದಿಯಾಗುತ್ತಿರಲಿಲ್ಲ.
ಒಂದ್ಸಲ,
ಇದೇ ಥರ ಡ್ಯಾನಿ ದೊಡ್ಡ ಸುದ್ದಿಯನ್ನೇ ಮಾಡಿಸಿಬಿಟ್ಟಿದ್ದ. ಎಡಿಷನ್ ಹೋಗುವ ಸಮಯದಲ್ಲಿ, ಇಸ್ರೇಲಿನ
ಎರಡು ಭಯೋತ್ಪಾದಕ ಗುಂಪುಗಳು ಬೆಂಗಳೂರಿನಲ್ಲಿ ಬಂದು, ಹೆಣ್ಣೂರಿನಲ್ಲಿ ಬಾಡಿಗೆ ಮನೆಯಲ್ಲಿ ಉಳಿದಿದ್ದಾರೆಂದೂ,
ಅವರೆಲ್ಲರೂ ತುಂಬಾ ಆಯುಧಗಳನ್ನು ಇಟ್ಟುಕೊಂಡಿದ್ದಾರೆಂದೂ ಸಂಜೆವಾಣಿಯಲ್ಲಿ ಪ್ರಕಟವಾಯ್ತು. ಆಗಿನ ಇಂಟೆಲಿಜೆನ್ಸ್
ವಿಭಾಗದಲ್ಲಿದ್ದ ಡಿ.ಸಿ.ಪಿ. ತುಂಬಾನೇ ಪಾಪದವರಾಗಿದ್ದರು. ಸಂಜೆವಾಣಿಯ ವರದಿ ಆಧರಿಸಿ ಅವರೂ ಒಂದು
ರಿಪೋರ್ಟ್ ತಯಾರಿಸಿ, ಕಮೀಷನರ್ ಕಡೆಗೆ ಕಳುಹಿಸಿ ಕೈ ತೊಳೆದುಕೊಂಡರು.
ಸಂಜೆವಾಣಿ
ವರದಿ ನೋಡಿದ್ದ ಆಗಿನ ಕಮೀಷನರ್ ಪಿ. ಕೋದಂಡರಾಮಯ್ಯ, ಹೆಣ್ಣೂರಿನ ಆ ಮನೆಗೆ ಒಬ್ಬ ಪೋಲಿಸ್ ಇನ್ಸ್ ಪೆಕ್ಟರ್
ಕಳುಹಿಸಿ, ಅ ಮನೆಯ ವಿವರಗಳನ್ನು ತೆಗೆದುಕೊಂಡಿದ್ದರು. ಆ ಮನೆ ಒಬ್ಬರು ಡಾಕ್ಟರ್ ದು, ಮತ್ತು ಅದು
ಅವರಿಗೆ ಪಿತ್ರಾರ್ಜಿತವಾಗಿ ಬಂದಿದ್ದು. ಡಾಕ್ಟರ್ ಮನೆಯವರನ್ನು ಬಿಟ್ಟರೆ, ಅಲ್ಲಿ ಯಾರೂ ಇರಲಿಲ್ಲ.
ಮರುದಿನ
ಮಧ್ಯಾಹ್ನ ಪ್ರೆಸ್ ಕಾನ್ಫರೆನ್ಸ್ ಹೊತ್ತಿನಲ್ಲಿ, ಬೇರೆ ಫೈಲ್ ಗಳನ್ನು ನೋಡುವಾಗ ಕೋದಂಡರಾಮಯ್ಯನವರಿಗೆ,
ಇಂಟೆಲಿಜೆನ್ಸ್ ವರದಿ ಕಣ್ಣಿಗೆ ಬಿತ್ತು. ಡಿ.ಸಿ.ಪಿ ಯನ್ನು ಕರೆದವರೇ, ಎದುರುಗಡೆ ವರದಿಗಾರರು ಇರುವುದನ್ನೂ
ಮರೆತು, `ಕತ್ತೆ ಕಾಯಲು ಹೋಗು’ ಅಂತ ಬೈದರು. ಏನಾಗಿರಬಹುದು ಅಂತ ಊಹಿಸಿದ ಡಿ.ಸಿ.ಪಿ, ಧನಂಜಯಪ್ಪನನ್ನೊಮ್ಮೆ
ಮತ್ತು ಡ್ಯಾನಿಯನ್ನೊಮ್ಮೆ ನೋಡಿ, ಬೆವರೊರಸಿಕೊಂಡು ಹೊರ ಹೋದರು.
ಆದರೆ,
ಡ್ಯಾನಿಯ ಈ ಚಾಳಿ ಅವನಿಗೇ ತಿರುಗುಬಾಣವಾಗಿದ್ದು ನನ್ನಿಂದ. ಮುಂಬೈಸ್ಪೋಟದ ನಂತರ, ದಾವೂದ್ ಇಂಬ್ರಾಹಿಂಗಾಗಿ
ಬೆಂಗಳೂರಲ್ಲಿ ಪೋಲಿಸರು ಹುಡುಕಾಟ ನೆಡೆಸಿದ್ದರು. ಆಗ ಡ್ಯಾನಿ, ನನ್ನೆದುರಲ್ಲೇ ಧನಂಜಯಪ್ಪನಿಗೆ, ಕಮೀಷನರ್
ಆಫೀಸಿನೆದುರು ಇದ್ದ ಪ್ರೆಸ್ಟೀಜ್ ಕಾಂಪ್ಲೆಕ್ಸ್ ನಿಂದ ಹಿಡಿದು, ಬೆಂಗಳೂರಿನ ಇಪ್ಪತೈದು ಪ್ರತಿಷ್ಟಿತ
ಕಾಂಪ್ಲೆಕ್ಸ್ ಗಳ ಹೆಸರು ಹೇಳಿ, ಅವೆಲ್ಲಾ ದಾವೂದ್
ಇಬ್ರಾಹಿಂಗೆ ಸೇರಿವೆಯೆಂದೂ, ಸಿ.ಬಿ.ಐ.ನವರು ಅವುಗಳನ್ನು ವಶಪಡಿಸಿಕೊಂಡಿವೆಯೆಂದೂ ಹೇಳಿದ. ಧನಂಜಯಪ್ಪ
ಆ ಕಡೆಗೆ ಹೋದ ತಕ್ಷಣ, ನನ್ನ ಕಡೆ ನೋಡಿ ಕಣ್ಣು ಹೊಡೆದ. ಸರಿ, ಆಫೀಸಿಗೆ ಹೋದ ತಕ್ಷಣವೇ ನಮ್ಮ ಬ್ಯೂರೋ
ಛೀಫ್ ಮಟ್ಟೂ ದಾವೂದ್ ಇಬ್ರಾಹಿಂ ಬಗ್ಗೆ ಕೇಳಿದರು. ನನಗೆ ಗೊತ್ತಿದ್ದನೆಲ್ಲಾ ಹೇಳಿ, ಡ್ಯಾನಿ ಸಂಜೆವಾಣಿಗೆ
ಪ್ಲ್ಯಾಂಟ್ ಮಾಡಿದ ವಿಷಯವನ್ನೂ ಹೇಳಿದೆ. ತಕ್ಷಣ ಮಟ್ಟೂ: `ಒಂದು ಸಂಜೆವಾಣಿ ತಂದು ನನ್ನ ಟೇಬಲ್ ಮೇಲೆ
ಇಟ್ಟಿರು. ಡ್ಯಾನಿಗೆ ಏನೂ ಹೇಳಬೇಡ,’ ಅಂದರು. ಸಂಜೆವಾಣಿ ಬಂದ ತಕ್ಷಣ, ಒಂದು ಪೇಪರ್ ಕೊಂಡು, ಮಟ್ಟೂ
ಟೇಬಲ್ ಮೇಲೆ ಇಟ್ಟೆ.
ಮನೆಗೆ
ಹೋಗಿ, ಚೆನ್ನಾಗಿ ನಿದ್ರೆ ಮಾಡಿ, ಆಫೀಸಿಗೆ ಡ್ಯಾನಿ ಬರುವ ಹೊತ್ತಿಗೆ ಸಂಜೆ ಆರು ಘಂಟೆಯಾಗಿತ್ತು.
ಅವನನ್ನು ನೋಡಿದ ತಕ್ಷಣವೇ ಮಟ್ಟೂ: `ಡ್ಯಾನಿ, ಸಂಜೆವಾಣಿ ಹ್ಯಾಸ್ ಕ್ಯಾರೀಡ್ ಅಬೌಟ್ ದಾವೂದ್ ಪ್ರಾಪರ್ಟೀಸ್.
ವಿ ವಿಲ್ ಟೇಕ್ ಇಟ್ ಫಾರ್ ದಿ ಫ್ರಂಟ್ ಪೇಜ್. ವಿನಯ್ ಇಸ ವೆರಿ ಜೂನಿಯರ್ ಅಂಡ್ ಯು ರೈಟ್ ದಿ ಕಾಪಿ,’
ಅಂದರು. ಡ್ಯಾನಿ ಏನೋ ಹೇಳಲು ಹೊರಟಾಗ ಅವನನ್ನು ತಡೆದು, `ಐ ವಾಂಟ್ ದಿ ಕಾಪಿ ಬೈ 7.30,’ ಅಂತ ಹೊರಗೆ
ಹೋಗೇ ಬಿಟ್ಟರು.
ಈಗ
ತಲೆ ಕೆರೆದುಕೊಳ್ಳುವ ಸರದಿ ಡ್ಯಾನಿಯದಾಗಿತ್ತು. ಮೀಟಿಂಗ್ ಮುಗಿಸಿದ ಮಟ್ಟೂ ಎಂಟು ಘಂಟೆಯವರೆಗೂ ವಾಪಾಸ್
ಬಂದಿರಲಿಲ್ಲ. ಡ್ಯಾನಿಯ ಹೆಂಡತಿ ಕವಿತಾ ಬೇರೆ ಕೆಳಗೆ ಬಂದು ಕಾಯುತ್ತಿದ್ದಳು. ವಾಪಾಸ್ ಬಂದವರೇ ಮಟ್ಟೂ:
`ಸೀ ಡ್ಯಾನಿ, ಹ್ಯಾವ್ ಸಮ್ ಮರ್ಸಿ ಆನ್ ಸಂಜೆವಾಣಿ ರಿಪೋರ್ಟರ್ಸ್. ಡೋಂಟ್ ಡು ಇಟ್ ಅಗೈನ್,’ ಅಂತ
ಹೇಳಿದಾಗ, ನಾವೆಲ್ಲಾ ಗೊಳ್ಳನೆ ನಕ್ಕೆವು.
ಮಾರನೇ
ದಿನ ವಿಷಯ ಗೊತ್ತಾದಾಗ, ಧನಂಜಯಪ್ಪ ನಕ್ಕುಬಿಟ್ಟರು. `ಅವ್ನಿಗೆ ಹಾಗೇ ಮಾಡ್ಬೇಕು. ಸ್ವಲ್ಪನೂ ಸೀರಿಯಸ್
ನೆಸ್ ಇಲ್ಲಾ ನೋಡು,’ ಅಂದ್ರು. ಇದಾದ ಮೇಲೂ, ಅವರ ಆಫೀಸಿನಲ್ಲಿ ನನ್ನ ವರದಿಗಳ ಪ್ರಸ್ತಾಪವಾದಾಗಲೆಲ್ಲಾ
ಬಂದು ಹೇಳ್ತಿದ್ರು: `ಬೆಳಗ್ಗೆನೇ ಟೆನ್ಷನ್ ಕೊಡ್ತೀಯ ನೋಡು. ಮೊದಲೇ ನನಗೆ ಬಿ.ಪಿ, ಶುಗರ್ ಇದೆ. ನನ್ನ
ಸಾಯಿಸ್ತೀಯ, ಅಷ್ಟೆ.’
ತಿನ್ನೋ
ವಿಷಯ ಬಂದಾಗ, ಧನಂಜಯಪ್ಪ ಮಗುವಿನ ಥರ ಆಡ್ತಿದ್ರು. ಪ್ರೆಸ್ ಕಾನ್ಫರೆನ್ಸ್ ಗಳಲ್ಲಿ ಕೇಕ್ ಇದ್ದರಂತೂ,
ಮೊದಲು ತೆಗೆದು ಬಾಯಿಗೆ ಹಾಕಿಕೊಳ್ತಿದ್ರು. `ರೀ ಧನು, ಶುಗರ್ ಬೇರೆ ಇದೆ, ಕೇಕ್ ತಿಂತೀರಲ್ರೀ,’ ಅಂತ
ರೇಗಿದ್ರೆ, `ನಿಂಗೊತ್ತಿಲ್ಲ ಕಣೋ ಈ ಶುಗರ್ ಸಹವಾಸ. ಆಗಾಗ ಏನಾದ್ರೂ ತಿನ್ನದೇ ಹೋದರೆ, ಶುಗರ್ ಕಮ್ಮಿಯಾಗಿಹೋಗುತ್ತೆ,’
ಅಂತಿದ್ರು.
`ಅದಕ್ಕೆ
ಕೇಕ್ ತಿನ್ನೋಕೆ ಡಾಕ್ಟರ್ ಹೇಳಿದ್ದಾರ? ಬೇರೆ ಏನಾದ್ರೂ ತಿನ್ನಬಹುದಲ್ಲಾ,’ ಅಂದ್ರೆ, ಮಗು ಥರ ನಕ್ಕುಬಿಡೋರು.
`ಹೋಗ್ಲಿ ಬಿಡಪ್ಪಾ. ಎಲ್ಲೂ ಸ್ವೀಟ್ ತಿನ್ನೋಕಾಗಲ್ಲ. ಇಲ್ಲಾದ್ರೂ ಒಂಚೂರು ತಿಂತೀನಿ,’ ಅಂದಾಗ, ನಮಗೇ
ಬೇಜಾರಾಗುತ್ತಿತ್ತು.
ಸಂಜೆ
ಪತ್ರಿಕೆಗಳಲ್ಲಿ ಆಗ ಸ್ಪರ್ದೆ ಇದ್ದದ್ದೇ ಸಂಜೆವಾಣಿ ಮತ್ತು ಈ ಸಂಜೆಯ ನೆಡುವೆ. ಮೊಬೈಲ್ ಫೋನ್ ಬರುವ
ಮೊದಲು, ಸಂಜೆವಾಣಿಯವರು ವೈರ್ ಲೆಸ್ ಉಪಯೋಗಿಸಿ, ಸುದ್ದಿಗಳನ್ನು ಆಫೀಸಿಗೆ ಕೊಡುತ್ತಿದ್ದರು. ಈ ವೈರ್ ಲೆಸ್, ಪೋಲಿಸ್ ವೈರ್
ಲೆಸ್ ಸಿಗ್ನಲ್ ಗಳನ್ನೂ ಸಹ ಗ್ರಹಿಸುತ್ತಿತ್ತು. ಇದರಿಂದ ನೇರವಾಗಿ ಏಟು ತಿಂದವರೆಂದರೆ, ಈ ಸಂಜೆಯ
ರಾಮಸ್ವಾಮಿ ಕಣ್ವ. ಎಷ್ಟೇ ಕಷ್ಟ ಪಟ್ಟರೂ, ಒಂದೆರೆಡು
ಸುದ್ದಿಗಳು ಕೈತಪ್ಪಿ ಹೋಗುತ್ತಿದ್ದವು. ಇದರಿಂದಾಗಿ ಇಬ್ಬರ ನೆಡುವೆ ಒಂದು ಕಂದಕವೇ ಏರ್ಪಟ್ಟು, ಒಂದೆರೆಡು
ವರ್ಷಗಳವರೆಗೆ, ಸವತಿಯರಂತೆ ಮೌನಯುದ್ದದಲ್ಲಿ ತೊಡಗಿದ್ದರು. ಮೊಬೈಲ್ ಫೋನ್ ಬಂದಮೇಲೆ, ಸಂಜೆವಾಣಿಯವರು,
ವೈರ್ ಲೆಸ್ ತೆಗೆದುಹಾಕಿ, ಎಲ್ಲರಿಗೂ ಮೊಬೈಲ್ ಫೋನ್ ಕೊಟ್ಟರು. ಅಲ್ಲಿಂದಾಚೆ ಧನಂಜಯಪ್ಪ ಮತ್ತು ರಾಮಸ್ವಾಮಿಯ
ಸಂಭಂಧ ಸುಧಾರಿಸುತ್ತಾ ಬಂತು.
ನಾನು
ಕ್ರೈಂ ರಿಪೋರ್ಟಿಂಗ್ ಬಿಟ್ಟು, ಹೈಕೋರ್ಟ್, ರಾಜಕೀಯ ಎಲ್ಲಾ ಸುತ್ತಿ, ಮತ್ತೆ ಕ್ರೈಂ ರಿಪೋರ್ಟಿಂಗ್
ಬಂದಾಗ ಬಹಳಷ್ಟು ಬದಲಾವಣೆಗಳಾಗಿದ್ದವು. ಪೋಲಿಸ್ ಅಧಿಕಾರಿಗಳಿಗೆ ಟಿವಿಯಲ್ಲಿ ಕಾಣಿಸಿಕೊಳ್ಳುವ ಹುಚ್ಚಿನಿಂದ,
ಎಲ್ಲಾ ಕೇಸ್ ಗಳನ್ನೂ ಸೆನ್ಸೇಷನ್ ಮಾಡಲು ಪ್ರಯತ್ನಿಸುತ್ತಿದ್ದರು. ಆ ಟಿವಿಗಳನ್ನು ಯಾವಾಗಲೂ ಹಚ್ಚಿಕೊಂಡು
ಕೂರುವ ಎಡಿಟರ್ ಗಳೂ ಸಹ, ಸೆನ್ಸೇಷನ್ ಬಯಸುತ್ತಿದ್ದರು.
ನನಗೆ
ಕ್ರೈಂ ರಿಪೋರ್ಟಿಂಗ್ ಮೇಲೆ ಮೊದಲಿನ ಹಿಡಿತ ಬರಲು ಸ್ವಲ್ಪ ಸಮಯವೇ ಹಿಡಿಯಿತು. ಆಗಲೇ ನಾನು ಗಮನಿಸಿದ್ದು:
ಇಲ್ಲಿ ಬದಲಾಗದೇ ಇದ್ದದ್ದು , ಸಂಜೆವಾಣಿ ಮತ್ತು ಈ ಸಂಜೆ ಮಾತ್ರ. ಅದರ ಕೀರ್ತಿ, ಧನಂಜಯಪ್ಪ ಮತ್ತು
ರಾಮಸ್ವಾಮಿಗೇ ಹೋಗಬೇಕು. ಅಂಥಾ ಮಹತ್ತರ ಬದಲಾವಣೆ ಕಾಲದಲ್ಲೂ, ಬದಲಾವಣೆಯನ್ನು ಒತ್ತಿ ನಿಂತು, ತಮ್ಮತನವನ್ನು
ಇನ್ನೂ ಉಳಿಸಿಕೊಂಡಿದ್ದರು.
ಈ
ಮಧ್ಯ ಧನಂಜಯಪ್ಪನ ಮಗಳ ಮದುವೆಗೆ ಆಗಿನ ಮುಖ್ಯಮಂತ್ರಿ ಯಡ್ಯೂರಪ್ಪನವರು ಬಂದಿದ್ದರು. ಗಡಿಬಿಡಿಯಲ್ಲಿ
ನನಗೆ ಆಹ್ವಾನ ಪತ್ರಿಕೆ ಕೊಡಲು ಮರೆತರು ಅಂತ ಕಾಣುತ್ತೆ. `ಏನ್ರಿ? ಮುಖ್ಯಮಂತ್ರಿ ಬರುವ ಮದುವೆಗಳಿಗೆ
ನಾವು ಬರಬಾರ್ದಾ? ಅದ್ಹ್ಯಾಗೆ ನನಗೆ ಕರೀಲಿಲ್ಲಾ?’ ಅಂತ ವಿಪರೀತವಾಗಿ ಕಾಲೆಳೆದೆ. ಅವರು ಸ್ವಲ್ಪ ನೊಂದುಕೊಂಡಾಗ
ನಾನೇ ಹೇಳ್ದೆ: `ಬಿಡಿ ಧನು. ತಮಾಶೆ ಮಾಡ್ದೆ. ನನಗೂ ಮದುವೆ ಸಮಾರಂಭಗಳೆಂದ್ರೆ ದೂರ.’
ಅದನ್ನೇನೂಂತ
ತಲೆಯಲ್ಲಿಟ್ಟುಕೊಂಡಿದ್ರೋ ಏನೋ, ಅವರ ಮಗನ ಮದುವೆ ಆಹ್ವಾನ ಪತ್ರಿಕೆ ಒಂದು ತಿಂಗಳ ಮುಂಚೆನೇ, ಖುದ್ದಾಗಿ
ತಂದು ಕೊಟ್ರು. ಕಾರಲ್ಲಿಟ್ಟು ಮರೆತೆ. ಮತ್ತೆ ನೆನಪಾಗಿದ್ದು, ಅವರ ಮಗನ ಮದುವೆ ಮುಗಿದು ಒಂದು ವಾರವಾದಮೇಲೆ.
ಧನಂಜಯಪ್ಪ ದೂರದಲ್ಲಿ ಬರುವುದು ಕಂಡಾಗ. ಎಲ್ಲೋ ಸ್ವಲ್ಪ ಅರ್ಜೆಂಟಾಗಿ ಹೋಗ್ಬೇಕಿತ್ತು. ಮಗನ ಮದುವೆಗೆ
ಯಾಕೆ ಬರಲಿಲ್ಲ? ಅಂತ ಕೇಳಿದರೆ, ಉತ್ತರವಿರಲಿಲ್ಲ. ಹಾಗೇ ಬದಿಯಿಂದ ತಪ್ಪಿಸಿಕೊಂಡು, ಮಾತಾಡದೆ ಹೋಗಿದ್ದೆ.
ಮುಂದಿನ
ವಾರವೇ ಚಂದ್ರು ನನಗೆ ಫೋನ್ ಮಾಡಿ ಹೇಳಿದ್ದು, ಧನಂಜಯಪ್ಪ ತೀರಿಕೊಂಡ್ರು ಅಂತ. ನಾನವತ್ತು ಮಾತಾಡ್ಸಬೇಕಿತ್ತು.
ಏನೋ ಸ್ವಲ್ಪ ರೇಗ್ತಿದ್ರು ಅಷ್ಟೆ. ಈಗ, ರೇಗೋಕ್ಕೆ ಅವರಿಲ್ಲ….
ಮಾಕೋನಹಳ್ಳಿ
ವಿನಯ್ ಮಾಧವ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ