ಶನಿವಾರ, ಫೆಬ್ರವರಿ 18, 2012

ಅಸಹಾಯಕ-1


ಮಂತ್ರಿಯ ಮಾತಲ್ಲೇ ಗೊತ್ತಾಯ್ತು…..

ಮೊನ್ನೆ ತುಂಬಾ ದಿನಗಳಾದ ಮೇಲೆ, ರಾಂಬೋ ಸಿನೆಮಾ ಬರ್ತಿತ್ತು. ಸುಮ್ಮನೆ ನೋಡುತ್ತಾ ಕೂತಿದ್ದೆ. ಕೊನೆಯ ದೃಷ್ಯದಲ್ಲಿ ಸಿಲ್ವೆಸ್ಟರ್ ಸ್ಟಾಲೋನ್ ಹೇಳುವ ಪ್ರತಿಯೊಂದು ವಾಕ್ಯ ಗಮನವಿಟ್ಟು ಕೇಳುತ್ತಿದ್ದೆ.
`ನನಗೇನೂ ಬೇಕಿಲ್ಲ. ನಾವು ಈ ದೇಶವನ್ನು ಎಷ್ಟು ಪ್ರೀತಿಸುತ್ತೇವೋ, ಅಷ್ಟೇ ಪ್ರೀತಿಯನ್ನು ಈ ದೇಶ ನಮಗೆ ತೋರಿದರೆ ಸಾಕು,’ ಅಂತ ಮಾಜೀ ಸೈನಿಕನೊಬ್ಬ ಕಣ್ಣೀರಿಡುತ್ತಾನೆ. ಫಕ್ಕನೆ ನೆನಪಿಗೆ ಬಂದ ಹೆಸರು ಅರವಿಂದ ಹೆಗಡೆ.
ನಾನ್ಯಾವತ್ತೂ ನೋಡಿರದ ವ್ಯಕ್ತಿಯ ಫೋಟೋದಲ್ಲಿನ ಮುಖ ಅಸ್ಪಷ್ಟವಾಗಿ ಕಣ್ಣ ಮುಂದೆ ಹಾದು ಹೋಯಿತು. ಎಷ್ಟೇ ಕಷ್ಟಪಟ್ಟರೂ, ನನ್ನ ಮುಂದೆ ಒಂದು ಘಂಟೆ ಕೂತಿದ್ದ ಅವನ ತಂದೆಯ ಮುಖ ಮಾತ್ರ ನೆನಪಿಸಿಕೊಳ್ಳಲಾಗಲಿಲ್ಲ. ಆದರೆ, ಎರಡೇ ನಿಮಿಷದಲ್ಲಿ ಕಾಫಿ ಕೊಟ್ಟು ಒಳಗೆ ಹೋದ, ಭಾವನಾರಹಿತವಾಗಿದ್ದ ಅವನ ತಾಯಿಯ ಮುಖ ಮಾತ್ರ ಸ್ಪಷ್ಟವಾಗಿ ಹಾದುಹೋಯಿತು.
ಆಗಿನ್ನೂ ಕ್ರೈಂ ರಿಪೋರ್ಟಿಂಗ್ ಆರಂಭದ ದಿನಗಳು. ಯಾರೇ ನಕ್ಕು ಮಾತಾಡಿಸಿದ್ರೂ ತುಂಬಾನೇ ಖುಷಿಯಾಗುತ್ತಿತ್ತು. ಅಂಥಹ ದಿನಗಳಲ್ಲಿ ಪರಿಚಯವಾಗಿದ್ದೇ ಈ ನಾಗರಾಜ್. ಡಿ.ಸಿ.ಪಿ (ಇಂಟೆಲಿಜೆನ್ಸ್) ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದರು ಅನ್ನುವುದನ್ನು ಬಿಟ್ಟರೆ, ಜಾಸ್ತಿಯೇನೂ ವಿವರಗಳು ಗೊತ್ತಿರಲಿಲ್ಲ.
ಒಂದಿನ, ಯಾವುದಾದರೂ ಕಥೆ ಬರೆಯಲೇಬೇಕು ಅಂತ ಎಲ್ಲಾ ಹಿರಿಯ ಅಧಿಕಾರಿಗಳ ಕೊಣೆಗಳ ಮುಂದೆ ಶತಪತ ಹಾಕುತ್ತಿದ್ದೆ. `ವಿನಯ್ ಅವರೇ, ನಿಮ್ಮನ್ನೇ ಹುಡುಕ್ತಿದ್ದೆ ನೋಡಿ. ಸ್ವಲ್ಪ ಮಾತಾಡ್ಬೇಕಿತ್ತು,’ ಅಂತ ನಾಗರಾಜ್ ಬಂದರು.
`ಹೇಳಿ’ ಅಂದೆ.
`ಬನ್ನಿ, ಟೀ ಕುಡಿಯತ್ತಾ ಮಾತಾಡೋಣ. ಟೈಮ್ ಇದೆಯಲ್ಲ?’ ಅಂದರು.
`ಟೈಮ್ ಗೇನು ಬರ. ಬನ್ನಿ,’ ಅಂತ ಇಬ್ಬರೂ ಕಮೀಷನರ್ ಆಫೀಸಿನ ಹಿಂಬಾಗದಲ್ಲಿದ್ದ ಮೊಬೈಲ್ ಕ್ಯಾಂಟೀನ್ ಗೆ ಹೋದೆವು.
`ನೋಡಿ ವಿನಯ್ ಅವರೆ. ನನ್ನ ಸ್ನೇಹಿತನೊಬ್ಬ ಇದ್ದ, ಅರವಿಂದ್ ಅಂತ. ತುಂಬಾ ವರ್ಷದ ಹಿಂದೆ ಮರ್ಡರ್ ಮಾಡಿಬಿಟ್ಟರು. ಫಾರೆಸ್ಟ್ ಆಫೀಸರ್ ಆಗಿದ್ದ, ಕಾರವಾರದ ಕಡೆ. ಆ ಕೇಸ್ ಮುಚ್ಚಿಹಾಕ್ತಾ ಇದ್ದಾರೆ. ಅದನ್ನ ಹ್ಯಾಗಾದರೂ ಮಾಡಿ ಎತ್ತಬೇಕು,’ ಅಂದರು.
`ಫಾರೆಸ್ಟ್ ಆಫೀಸರ್ ಮರ್ಡರ್ ಆಗಿದ್ದು ಯಾರಿಗೂ ಗೊತ್ತಾಗಲಿಲ್ವಾ?’ ಅಂತ ಕೇಳ್ದೆ.
`ಮರ್ಡರ್ ಆದಾಗ ದೊಡ್ಡ ಗಲಾಟೆಯಾಗಿತ್ತು. ಸಿ.ಓ.ಡಿ. ತೆನಿಖೆನೂ ಆಯ್ತು. ಕೇಸ್ ನೆಡಿತಾ, ನೆಡಿತಾ, ಸರ್ಕಾರದವರೇ ವೀಕ್ ಮಾಡಿಬಿಟ್ರು,’ ಅಂದರು.
ಏನೋ ಹೊಳೆದಂತಾಗಿ ಕೇಳಿದೆ: `ಅರವಿಂದ್ ಅಂದ್ರೆ ಅರವಿಂದ್ ಹೆಗ್ಡೆನಾ? ಅದೇ ಸಿರ್ಸಿಯಲ್ಲೆಲ್ಲೋ ಟಿಂಬರ್ ಸ್ಮಗ್ಲರ್ ಗಳು ಮರ್ಡರ್ ಮಾಡಿದ್ರಲ್ಲಾ? ಅದರಲ್ಲಿ ಆರ್.ವಿ.ದೇಶಪಾಂಡೆ ಕೂಡ ಶಾಮೀಲಾಗಿದ್ದಾರೆ ಅಂತ ಜನ ಮಾತಾಡ್ಕೊತ್ತಿದ್ರಲ್ಲಾ? ಅದೇ ಕೇಸಾ?’ ಅಂತ ಕೇಳ್ದೆ.
`ಅದೇ ಕೇಸ್ ವಿನಯ್ ಅವರೇ. ನಾನೂ, ಅರವಿಂದ ಕ್ಲಾಸ್ ಮೇಟ್ಸ್. ಹ್ಯಾಗಿತ್ತು ಗೊತ್ತಾ ಅವನ ಪರ್ಸನಾಲಿಟಿ. ನಿಮ್ಮ ಹಾಗೇನೆ – ಎತ್ತರ, ಗಾತ್ರ ಎಲ್ಲಾದರಲ್ಲೂ. ಎಂಥಾ ಧೈರ್ಯ ವಿನಯ್, ಅವನದೂ. ಯಾವುದಕ್ಕೂ ಕೇರ್ ಮಾಡ್ತಿರಲಿಲ್ಲ. ಮರ್ಡರ್ ಆಗೋಕ್ಕೆ ಹದಿನೈದು ದಿನಕ್ಕೆ ಮುಂಚೆ ಬೆಂಗಳೂರಿಗೆ ಬಂದಿದ್ದ ಕಣ್ರಿ. ಹೇಳಿದ್ದ, ತುಂಬಾ ಜನಗಳನ್ನ ಎದುರು ಹಾಕಿಕೊಂಡಿದ್ದೀನಿ, ಅಂತ. ನಮಗೂ ವಯಸ್ಸು. ಇವ್ನು ಎಲ್ಲಾ ಗೆದ್ದುಕೊಂಡು ಬರ್ತಾನೆ, ಅಥವಾ ಟ್ರಾನ್ಸ್ಫರ್ ಆಗ್ತಾನೆ ಅಂತ ಅನ್ಕೊಂಡಿದ್ದೆ. ಬರ್ಲೇ ಇಲ್ಲ. ಎಂಥಾ ಅನ್ಯಾಯವಾಯ್ತು,’ ಅಂದರು.
`ಈಗ ಕೇಸ್ ಏನಾಯ್ತು? ಅದೇನೋ ಹನ್ನೊಂದು ಜನಗಳಿಗೆ ಕನ್ವಿಕ್ಷನ್ ಆಯ್ತು ಅಂತ ಪೇಪರ್ ಗಳಲ್ಲಿ ಓದಿದ್ದೆ,’ ಅಂದೆ.
`ಅದು, ಅಲ್ಲಿ ಕಾರವಾರದ ಕೋರ್ಟಲ್ಲಿ. ಹೈಕೋರ್ಟಲ್ಲಿ ಅರ್ಧ ಜನ ಬಿಡುಗಡೆಯಾದ್ರು. ಈಗ ನೋಡಿದ್ರೆ, ಸುಪ್ರೀಂ ಕೋರ್ಟಲ್ಲಿ, ಕೇಸೇ ಬಿದ್ದುಹೋಗಿದೆ. ಅದಕ್ಕಿಂತ ಬೇಜಾರು ಅಂದ್ರೆ, ಕೇಸು ಬಿದ್ಹೋಗಿ ಮೂರು ತಿಂಗಳಾದ್ರೂ, ಅವರ ಮನೆಯವರಿಗೆ ಸರ್ಕಾರದವರು ಏನೂ ಹೇಳಿಲ್ಲ. ಮೊನ್ನೆ ಯಾರೋ ಲಾಯರ್ ಹೇಳಿದಾಗಲೇ, ಮನೆಯವರಿಗೆ ವಿಷಯ ಗೊತ್ತಾಗಿದ್ದು,’ ಅಂದರು.
`ಅಲ್ರಿ, ಈ ಕರ್ಮಕ್ಕೆ ಅರವಿಂದ್ ಯಾಕೆ ಪ್ರಾಣ ಕೊಡ್ಬೇಕಿತ್ತು. ಅಲ್ಲಾ, ಮೂರು ತಿಂಗಳಾದ್ರೂ ಈ ಸರ್ಕಾರಕ್ಕೆ ಏನೂ ಮಾಡೋಕ್ಕೆ ಆಗ್ಲಿಲ್ವಾ? ಕಾಡು ಉಳಿಸೋಕ್ಕೆ ಹೋಗಿ ಪ್ರಾಣಾನೇ ಕಳ್ಕೊಂಡವನ ಮೇಲೆ ಇಷ್ಟೂ ಕಾಳಜಿ ಇಲ್ವಾ?’ ಅಂತ ರೇಗಿದೆ.
`ನೋಡಿ ವಿನಯ್ ಅವರೆ. ನಮ್ಮ ವ್ಯವಸ್ಥೆ ಎಷ್ಟು ಕೆಟ್ಟಿದೆ ಅಂತ. ಈಗಲೂ ಸರ್ಕಾರಕ್ಕೆ ಅಪೀಲು ಹೋಗೋಕೆ ಅವಕಾಶ ಇದೆ. ಆರು ತಿಂಗಳು ಕಳೆದು ಹೋದ್ರೆ, ಅದೂ ಇರೋಲ್ಲ. ಏನಾದ್ರೂ ಮಾಡ್ಬೇಕಲ್ಲಾ. ನಾನೂ, ಅರವಿಂದ್ ಚಿಕ್ಕಂದಿನಿಂದ ಒಟ್ಟಿಗೇ ಬೆಳೆದವರು. ಅವರ ಮನೆಯಲ್ಲೇ ಆಟ ಆಡ್ತಿದ್ದೆ. ಅವರ ತಂದೆ, ತಾಯಿಯನ್ನು ನೋಡಿದ್ರೆ ಹೊಟ್ಟೆ ಉರಿಯುತ್ತೆ. ಪಾಪ, ಈ ವಯಸ್ಸಲ್ಲಿ ಇದನ್ನೆಲ್ಲಾ ನೋಡಬೇಕಲ್ಲಾ?’ ಅಂದರು.
`ಈ ಕೋರ್ಟ್ ಆರ್ಡರ್ ಗಳೆಲ್ಲಾ ಎಲ್ಲಿ ಸಿಕ್ತಾವೆ? ಅರವಿಂದ್ ತಂದೆ, ತಾಯಿ ಎಲ್ಲಿದ್ದಾರೆ ಈಗ?’ ಅಂತ ಕೇಳ್ದೆ.
`ಅವ್ರು ಇಲ್ಲೇ ವಿಜಯನಗರದಲ್ಲಿದ್ದಾರೆ. ಅವರ ಹತ್ತಿರಾನೇ ಎಲ್ಲಾ ಪೇಪರ್ ಗಳಿದ್ದಾವೆ,’ ಅಂದ್ರು ನಾಗರಾಜ್.
`ಸರಿ ಹಾಗಾದ್ರೆ. ನಾಳೆ ಸಾಯಂಕಾಲ ಅವರ ಮನೆಗೆ ಹೋಗೋಣ್ವಾ?’ ಅಂತ ಕೇಳಿದೆ. `ಸರಿ, ಅವರಿಗೂ ಹೇಳಿ, ಆ ಪೇಪರ್ ಗಳನ್ನ ಕಾಪಿ ಮಾಡಿಸಿಟ್ಟಿರ್ತೀನಿ,’ ಅಂದ್ರು ನಾಗರಾಜ್.
ಮಾರನೇ ದಿನ ಸಾಯಂಕಾಲ, ನಾಗರಾಜ್ ಸ್ವಲ್ಪ ಬ್ಯುಸಿಯಾಗಿದ್ದರು, ಸರಿ, ಅಡ್ರಸ್ ತೆಗೆದುಕೊಂಡು ನಾನೇ ವಿಜಯನಗರಕ್ಕೆ ಹೋದೆ. ಮನೆ ಹುಡುಕೋದಿಕ್ಕೇನೂ ಅಷ್ಟು ಕಷ್ಟವಾಗಲಿಲ್ಲ. ನಾನು ಕಾಲಿಂಗ್ ಬೆಲ್ ಒತ್ತುವುದರೊಳಗೆ, ನನಗಾಗಿ ಕಾಯುತ್ತಿದ್ದಂತೆ ಬಾಗಿಲು ತೆಗೆಯಿತು. `ಬನ್ನಿ, ನೀವು ಬರ್ತೀರಿ ಅಂತ ನಾಗರಾಜ್ ಹೇಳಿದ್ದ,’ ಅಂತ ನಿಂತಿದ್ದರು – ಅರವಿಂದ್ ತಂದೆ.
ಅಲ್ಲಿಯವರೆಗಿದ್ದ ಆಕ್ರೋಶ ಒಂದೇ ಕ್ಷಣದಲ್ಲಿ ಕರಗಿಹೋಗಿತ್ತು. ನೋವಿನಲ್ಲೂ ನಗುಮುಖದಿಂದ ಒಳಗೆ ಕರೆದಿದ್ದರು. ಏನು ಮಾತಾಡಬೇಕು ಅಂತಾನೇ ಗೊತ್ತಾಗಲಿಲ್ಲ. ನಾನು ಸುಮ್ಮನೆ ಕೂತಿದ್ದನ್ನು ನೋಡಿ, ಅವರೇ ಹೇಳಿದರು: `ಏನೋ, ದೇಶಕ್ಕಾಗಿ ಒಳ್ಳೆ ಕೆಲಸ ಮಾಡ್ದ ಅಂತ ಸಮಾಧಾನ ಮಾಡಿಕೊಳ್ಳೋ ಹಾಗೂ ಇಲ್ಲ. ಹೀಗಾಗ್ಬಿಡ್ತು, ನೋಡಿ. ಮೂರು ತಿಂಗಳಾದ್ರೂ ನಮಗೆ ವಿಷಯ ಗೊತ್ತಿರಲಿಲ್ಲ. ನಮ್ಮ ಅಳಿಯ ಪೋಲಿಸ್ ಡಿಪಾರ್ಟ್ ಮೆಂಟಲ್ಲಿ ಇಲ್ಲದಿದ್ರೆ, ಇನ್ನೂ ಗೊತ್ತಾಗ್ತಿರಲಿಲ್ಲ,’ ಅಂದರು.
ಇವರಳಿಯ ಪೋಲಿಸ್ ಡಿಪಾರ್ಟ್ ಮೆಂಟಲ್ಲಿದ್ದಿದ್ದು ನಾಗರಾಜ್ ಹೇಳಲೇ ಇಲ್ಲವಲ್ಲ, ಅಂತ ಪೇಚಾಡಿಕೊಂಡೆ. ನಾಗರಾಜ್ ಇವರ ಅಳಿಯ ಇರ್ಬೋದಾ? ಅಂತಾನೂ ಮನಸ್ಸಲ್ಲಿ ಅನ್ಕೊಂಡೆ. ಅವರೇ ಮುಂದುವರೆಸಿದರು: `ನಮ್ಮಳಿಯ ಮತ್ತೆ ನಾಗರಾಜ್ ಸೇರಿ, ಸರ್ಕಾರದಿಂದ ಅಪೀಲ್ ಮಾಡಿಸ್ಬೋದಾ ಅಂತ ಪ್ರಯತ್ನ ಮಾಡ್ತಿದ್ದಾರೆ. ಏನಾಗುತ್ತೋ ಗೊತ್ತಿಲ್ಲ. ನಾಗರಾಜ್ ಎಲ್ಲಾ ಪೇಪರ್ ಗಳನ್ನ ಕಾಪಿ ಮಾಡಿಸಿ ಇಟ್ಟಿದ್ದಾನೆ. ಮನೆ ಹುಡುಗನೇ, ಅರವಿಂದನ ಜೊತೆ ಆಡ್ಕೊಂಡು ಬೆಳೆದವನು. ಪಾಪ, ಎಲ್ಲಾ ಅವನೇ ಮಾಡ್ತಾನೆ,’ ಅಂದರು.
ಅಷ್ಟರಲ್ಲಿ ಒಳಗಿನಿಂದ ಯಾರೋ ಬಂದಂತಾಯ್ತು. ತಲೆ ಎತ್ತಿ ನೋಡಿದರೆ, ಸುಮಾರು ಅರವತ್ತರ ಪ್ರಾಯದ ಹೆಂಗಸು, ಎರಡು ಲೋಟಗಳಲ್ಲಿ ಕಾಫಿ ತಗೊಂಡು ಬಂದರು. ಅಗಲವಾದ ಕುಂಕುಮ ಇಟ್ಟುಕೊಂಡು, ಸಂಪ್ರದಾಯಸ್ಥ ಮನೆತನದವರಂತೆ ಕಾಣುತ್ತಿದ್ದರು. ಅರವಿಂದ್ ತಾಯಿ ಇರಬೇಕು ಅನ್ಕೊಂಡೆ. `ಇವರು ಇಂಡಿಯನ್ ಎಕ್ಸ್ ಪ್ರೆಸ್ ರಿಪೋರ್ಟರ್’ ಅಂತ ಅರವಿಂದ್ ತಂದೆ ಪರಿಚಯ ಮಾಡಿಕೊಟ್ಟರು. ಏನೂ ಭಾವನೆಗಳಿಲ್ಲದೆ ತಲೆ ಅಲ್ಲಾಡಿಸಿದ ಅವರು, ಒಂದು ನಿಮಿಷ ನನ್ನ ಮುಖವನ್ನೇ ದಿಟ್ಟಿಸಿ ನೋಡಿ, ಒಳಗೆ ಹೋದರು.
ನನ್ನ ಪೂರ್ವಾಪರವನ್ನೆಲ್ಲಾ ವಿಚಾರಿಸಿದ ಅರವಿಂದ್ ತಂದೆ, ಮೂರು ಕೋರ್ಟ್ ಜಡ್ಜ್ ಮೆಂಟ್ ಗಳನ್ನು ನನ್ನ ಕೈಗಿಟ್ಟರು. ಅವರು ಮಾತಾಡಿದಾಗ ಅನ್ಕೊಂಡೆ: ಇವರು ನನಗೆ ಎಲ್ಲಾ ವಿಷಯ ಗೊತ್ತಿದೆ ಅನ್ಕೊಂಡಿದ್ದಾರೆ, ಅಂತ. ಆದರೆ, ಸುಮಾರು 1985ರ ಆಸುಪಾಸಿನಲ್ಲಿ, ಕಾಡುಕಳ್ಳರ ಜೊತೆ ಸಂಘರ್ಷಕ್ಕಿಳಿದ ಅಧಿಕಾರಿಯೊಬ್ಬ ಕೊಲೆಯಾಗಿದ್ದ ಅನ್ನುವುದು ಬಿಟ್ಟರೆ, ನನಗೇನೂ ಹೆಚ್ಚಿನ ವಿವರಗಳು ಗೊತ್ತಿರಲಿಲ್ಲ.
ಮರುದಿನ ಬೆಳಗ್ಗೆ ಬೇಗನೆ ಆಫೀಸಿಗೆ ಹೋದವನೇ, ಅರವಿಂದನ ಕೇಸ್ ಫೈಲ್ ಓದುವುದಕ್ಕೆ ಶುರು ಮಾಡಿದೆ. ಅರವಿಂದ, ತನ್ನ ಹಿರಿಯ ಅಧಿಕಾರಿಗಳ ಮಾತಾಗಲೀ, ಅಥವಾ ಎಲ್ಲಿಂದಲೋ ಬರುವ ವಶೀಲಿಗಳಿಗಾಗಲೀ, ಬೆಲೆಕೊಟ್ಟಿರಲಿಲ್ಲ. ನೀಲಕಂಠ ಹೆಗಡೆ ಅಂತ ಹೆಸರಿರಬೇಕು, ಅವನ ವಿರುದ್ದ ಹತ್ತಾರು ಕೇಸ್ ಜಡಿದು, ತುಂಬಾನೇ ಮರಗಳನ್ನು ವಶಪಡಿಸಿಕೊಂಡಿದ್ದ. ಬರಬರುತ್ತಾ, ಇಲಾಖೆಯಲ್ಲಿ ಒಬ್ಬೊಂಟಿಗನಾಗಿದ್ದ ಅಂತ ಕಾಣುತ್ತೆ.
ಕೊಲೆಯಾದ ರಾತ್ರಿ ಅರವಿಂದ ಒಬ್ಬನೇ ಹೆಗಡೆಯ ತೋಟದ ಮನೆಯ ಹತ್ತಿರ ಹೋಗಿದ್ದಾನೆ. ಅಲ್ಲಿ ಲಾರಿಗಳಲ್ಲಿ ಮರದ ದಿಮ್ಮಿಗಳನ್ನು ತುಂಬಿಟ್ಟಿದ್ದನ್ನು ನೋಡಿ, ಅದನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ, ಹೆಗಡೆಯ ಕಡೆಯವರು ಅವನ ಮೇಲೆ ಹಲ್ಲೆ ಮಾಡಿ, ದೊಣ್ಣೆಗಳಿಂದ ಚೆನ್ನಾಗಿ ಹೊಡೆದಿದ್ದಾರೆ. ಲಾರಿ ಡ್ರೈವರ್, ಲಾರಿಯನ್ನು ತೆಗೆದುಕೊಂಡು ಪರಾರಿಯಾಗಲು ಪ್ರಯತ್ನಿಸಿದಾಗ, ಅರವಿಂದ ಲಾರಿಯ ಮುಂಬಾಗದಿಂದ ಅದರ ಮೇಲೆ ಹತ್ತಿ, ನಿಲ್ಲಿಸಲು ಪ್ರಯತ್ನಿಸಿದ್ದಾನೆ. ಆಗ ಅವನ ಮೇಲೆ ಮತ್ತೆ ಹಲ್ಲೆಯಾಗಿದೆ. ಹೊಡೆತ ತಡೆಯಲಾಗದೆ, ಲಾರಿಯಿಂದ ಬಿದ್ದು ಸತ್ತು ಹೋಗಿದ್ದಾನೆ.
ಕಾರವಾರದ ಕೋರ್ಟ್ ನಲ್ಲಿ ಆಗ ನ್ಯಾಯಾಧೀಶರಾಗಿದ್ದ ಮಳಿಮಠ್,  ಹನ್ನೊಂದು ಜನರಿಗೆ ಜೀವಾವಧಿ ಶಿಕ್ಷೆ ನೀಡಿದ್ದಾರೆ. ಹೈಕೋರ್ಟ್ ಗೆ ಬರುವ ಹೊತ್ತಿಗೆ ಆರು ಜನರನ್ನು ಆರೋಪ ಮುಕ್ತಗೊಳಿಸಲಾಯಿತು. ಸುಪ್ರೀಂ ಕೋರ್ಟ್ ಆದೇಶ ಓದುತ್ತಿದ್ದಂತೆ ನನ್ನ ರಕ್ತ ಕುದಿಯಲು ಆರಂಭಿಸಿತು. ಅದರಲ್ಲಿ ಬರೆದಿತ್ತು: `ಅರವಿಂದ ಹೆಗಡೆ ಒಬ್ಬ ಪ್ರಾಮಾಣಿಕ ಮತ್ತು ಸಾಹಸಿ ಅಧಿಕಾರಿ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಅಂದು ರಾತ್ರಿ, ಅರಣ್ಯ ಸಂಪತ್ತು ಉಳಿಸಲು, ತನ್ನ ಪ್ರಾಣವನ್ನೇ ಕೊಟ್ಟಿದ್ದಾನೆ. ಅವನ ಮೇಲೆ ಹಲ್ಲೆಯಾಗುತ್ತಿದ್ದಾಗಲೂ, ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಲಾರಿಯನ್ನು ತಡೆಯಲು ಪ್ರಯತ್ನಿಸಿದ್ದಾನೆ. ಆದರೆ, ವೈದ್ಯರ ವರದಿ ಪ್ರಕಾರ, ಅರವಿಂದ ಹೆಗಡೆಯ ಸಾವು ಏಟಿನಿಂದ ಆಗಿದ್ದಲ್ಲ. ಆತನು ಲಾರಿಯಿಂದ ಕೆಳಕ್ಕೆ ಬಿದ್ದಾಗ ಕಲ್ಲುಗಳ ಮೇಲೆ ಬಿದ್ದದ್ದರಿಂದ ಸತ್ತಿದ್ದಾನೆ. ಹಾಗಾಗಿ, ಇದು ಅಪಘಾತವೇ ಹೊರತು, ಕೊಲೆಯಲ್ಲ, ಎಂದು ಹೇಳಿ, ಅಪರಾಧಿಗಳನ್ನು ಬಿಡುಗಡೆ ಮಾಡಿತ್ತು.
ಸುಮ್ಮನೇ ಸ್ವಲ್ಪ ಹೊತ್ತು ಕೂತವನು, ಹಾಗೇನೆ ಒಂದು ವರದಿ ತಯಾರು ಮಾಡಿದೆ. `ಪ್ರಾಮಾಣಿಕ ಅಧಿಕಾರಿಯ ಕೊಲೆ ಪ್ರಕರಣಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ’ ಅಂತ. ನನಗೇನೋ ಒಳ್ಳೆ ಕಥೆ ಎನ್ನಿಸಿತು. ಆದರೂ ಐದನೇ ಪುಟದಲ್ಲಿ ಅಚ್ಚಾಯಿತು. ಅದರಲ್ಲಿ ನನ್ನ ಹೆಸರೂ ಇರಲಿಲ್ಲ. ನನ್ನ ಸುತ್ತಮುತ್ತ ಇದ್ದವರೆಲ್ಲ ವರದಿಯ ಬಗ್ಗೆ ಮೆಚ್ಚುಗೆ ಸೂಚಿಸದರು.  ಕನ್ನಡ ಪ್ರಭದ ಆಂಶಿ ಪ್ರಸನ್ನ ಕುಮಾರ್: `ಅಲ್ರಿ, ಇಂಥಾ ಸ್ಟೋರಿಗೆ ಬೈಲೈನ್ ತಗೊಳ್ದೆ, ಎಂಥೆಂಥದಕ್ಕೋ ತಗೊಳ್ತಿರಲ್ರಿ,’ ಅಂದರು.
ಸಿರ್ಸಿ ಕಡೆಯವರಾದ ಶಶಿಧರ್ ಭಟ್ಟರು, `ಚೆನ್ನಾಗಿದೆ ಕಣ್ರಿ. ಆ ಹೆಗಡೆ ದೊಡ್ಡ ಕ್ರಿಮಿನಲ್. ಅರವಿಂದ್ ಕೊಲೆ ಆಗಿಲ್ಲದಿದ್ದರೆ, ಇನ್ನೆಷ್ಟೋ ಕೊಲೆಗಳನ್ನು ಮಾಡಿಸಿರುತ್ತಿದ್ದ. ನೀವು ಹೇಳಿದ್ದೂ ಸರೀನೆ. ಅವನಿಗೆ ದೇಶಪಾಂಡೆ ಸಪೋರ್ಟ್ ಇದೆ,’ ಅಂದರು.
ವರದಿಯೇನೋ ಬರೆದಾಗಿತ್ತು. ಮುಂದೇನು ಅಂತ ಗೊತ್ತಿರಲಿಲ್ಲ. ವರದಿ ಅಚ್ಚಾದ ಮರುದಿನ, ನಾಗರಾಜ್ ಸಿಕ್ಕಿದ್ದರು. `ವಿನಯ್ ಅವರೆ, ಇವರೇ ಗಣಪತಿ ಭಟ್. ನಮ್ಮ ಅರವಿಂದನ ಭಾವ. ಸಿ.ಎ.ಆರ್. ನಲ್ಲಿ ಎ.ಸಿ.ಪಿ. ಆಗಿದ್ದಾರೆ. ನಿಮ್ಮನ್ನ ನೋಡ್ಬೇಕೂ ಅಂತ ಕಾಯ್ತಾ ಇದ್ದರು. ತುಂಬಾ ಚೆನ್ನಾಗಿ ಬಂದಿದೆ ಆರ್ಟಿಕಲ್,’ ಅಂತ ಒಂದೇ ಉಸಿರಿಗೆ ಹೇಳಿದರು.
ಭಟ್ ಅವರು ಅವರ ಮಾವನಂತೆಯೇ ಶಾಂತ ಸ್ವಭಾವದವರು. ಗಂಭೀರವಾಗಿ ಹೇಳಿದರು : `ಈ ಸರ್ಕಾರದವರು ಅಪೀಲ್ ಹೋಗ್ತಾರೋ ಇಲ್ಲವೋ ಗೊತ್ತಿಲ್ಲ. ಅವನು ಸತ್ತು ಹದಿನೈದು ವರ್ಷಗಳಾದ ಮೇಲೆ, ಜನಗಳಿಗೆ ನೀವು ಇಷ್ಟು ಚೆನ್ನಾಗಿ ನೆನಪಿಸಿದಿರಲ್ಲ, ಅದೇ ಸಂತೋಷ.’
ಎರಡು, ಮೂರು ದಿನಗಳಾದ ಮೇಲೆ, ನಾನು ಮತ್ತು ನಾಗರಾಜ್ ಬಿಟ್ಟು ಎಲ್ಲರೂ ಅರವಿಂದ ಹೆಗಡೆ ಕೇಸ್ ಮರೆತಂತೆ ಅನ್ನಿಸತೊಡಗಿತು. ಏನಾದರೂ ಮಾಡಿ ಸರ್ಕಾರ ಅಪೀಲು ಹೋಗುವಂತೆ ಮಾಡಬೇಕು ಅನ್ನಿಸಿತು. ಕೋರ್ಟ್ ರಿಪೋರ್ಟರ್ ಆಗಿದ್ದ ಗೋವಿಂದರಾಜನ್ ಅವರ ಹತ್ತಿರ ಹೋಗಿ, ಅಡ್ವೊಕೇಟ್ ಜನರಲ್ ಹತ್ತಿರ ಮಾತಾಡ್ಬಹುದಾ? ಅಂತ ಕೇಳಿದೆ. ಅದಕ್ಕವರು, ಇಂಥಹ ವಿಷಯಗಳು ಕ್ಯಾಬಿನೆಟ್ ನಲ್ಲಿ ನಿರ್ಧಾರ ತೆಗೆದುಕೊಳ್ಳಬೇಕೆಂದೂ, ಹಾಗಾಗಿ ನಾನು ಕಾನೂನು ಮಂತ್ರಿಗಳ ಜೊತೆ ಮಾತಾಡಿದರೆ ಗೊತ್ತಾಗಬಹುದು, ಅಂತ ಹೇಳಿದರು.
ಸರಿ, ನಮ್ಮ ಪೊಲಿಟಿಕಲ್ ರಿಪೋರ್ಟರ್ ಆಗಿದ್ದ ನಚ್ಚಿಯ ಹತ್ತಿರ ಹೋಗಿ ವಿಷಯ ಹೇಳಿ, ಕಾನೂನು ಮಂತ್ರಿ ಎಂ.ಸಿ.ನಾಣಯ್ಯರವರನ್ನು ಮೀಟ್ ಮಾಡಿಸ್ತೀರಾ? ಅಂತ ಕೇಳಿದೆ. ಯಾವಾಗಲೂ ನಾನು ಮಾತಾಡಿದಕ್ಕೊಂದು ತಮಾಷೆ ಮಾಡುವ ನಚ್ಚಿ, `ಅವರ ನಂಬರ್ ಕೊಡ್ತೀನಿ, ಮಾತಾಡು. ಆಮೇಲೆ ನೋಡೋಣ,’ ಅಂದರು.
ನಾಣಯ್ಯರವರಿಗೆ ಫೋನ್ ಹಚ್ಚಿ ನನ್ನ ಪರಿಚಯ ಮಾಡಿಕೊಂಡ ತಕ್ಷಣ, ಆ ಕಡೆಯಿಂದ, `ಹೇಳಿ ವಿನಯ್, ಏನಾಗಬೇಕಿತ್ತು?’ ಅಂತ ಉತ್ತರ ಬಂತು. ಇದು ನಾಣಯ್ಯನವರೋ ಅಥವಾ ಬೇರೆಯವರೋ ಅಂಥ ಅನುಮಾನ ಬಂತು. ಯಾಕೆಂದ್ರೆ, ಅಲ್ಲಿಯವರೆಗೆ ನಾನು, ನಾಣಯ್ಯನವರನ್ನಾಗಲೀ, ಅಥವಾ ಬೇರೆ ಮಂತ್ರಿಗಳಿಗಾಗಲೀ, ಫೋನ್ ಮಾಡಿ ಮಾತಾಡಿರಲಿಲ್ಲ. ಇವರು ನೋಡಿದರೆ, ನನ್ನನ್ನು ಹಳೆಯ ಪರಿಚಯದಂತೆ ಫೋನ್ ನಲ್ಲಿ ಮಾತಾಡಿಸ್ತಾ ಇದ್ದರು.
`ಸರ್, ಅರವಿಂದ ಹೆಗಡೆ ಮರ್ಡರ್ ಆಗಿತ್ತಲ್ಲಾ, ಈಗ ಸುಪ್ರೀಂ ಕೋರ್ಟ್ ಎಲ್ಲರನ್ನೂ ಬಿಡುಗಡೆ ಮಾಡಿದ್ಯಲ್ಲಾ, ಸರ್ಕಾರ ಅಪೀಲ್ ಹೋಗುತ್ತಾ?’ ಅಂತ ಕೇಳಿದೆ.
`ಯಾವ ಅರವಿಂದ ಹೆಗಡೆ?’ ಅಂತ ತಿರುಗಿ ಕೇಳಿದ್ರು.
ನಾನು ಅದರ ಹಿನ್ನಲೆಯನ್ನು ಸ್ವಲ್ಪ ವಿವರಿಸಿ, ನಾನು ಅದರ ಬಗ್ಗೆ ಲೇಖನ ಬರೆದದ್ದನ್ನು ಹೇಳಿ, ಮತ್ತೆ ಅದೇ ಪ್ರಶ್ನೆ ಕೇಳಿದೆ. `ನೀವು ಬರೆದಿದ್ರಾ? ಯಾವ ತಾರೀಖು ಬಂದಿತ್ತು? ನಾನು ನೋಡಿಲ್ಲ. ಅದನ್ನು ನೋಡಿ, ಆಮೇಲೆ ಏನಾದ್ರು ಇದ್ರೆ ಹೇಳ್ತೀನಿ,’ ಅಂದರು.
ನಾಣಯ್ಯ ಮಾತಾಡುತ್ತಿರುವಾಗಲೇ ಮುಂದಿನದೇನು ಅಂತ ಅರ್ಥವಾಯ್ತು. ಇಲ್ಲಿಗೆ ಅರವಿಂದ ಹೆಗಡೆಯ ಮರ್ಡರ್ ಕಥೆಯದೂ ಮರ್ಡರ್ ಆಯ್ತು ಅನ್ಕೊಂಡೆ. ಪೆಚ್ಚು ಮುಖ ಹಾಕಿಕೊಂಡು ನಚ್ಚಿಯ ಮುಂದೆ ನಿಂತೆ. `ಏನಂತೆ? ಅವನು ಆ ಸ್ಟೋರಿ ನೋಡೇ ಇಲ್ವಂತಾ?’ ಅಂದರು. ನಾನೇನೂ ಉತ್ತರ ಹೇಳಲಿಲ್ಲ.
`ಅಲ್ವೋ, ನೀನೇ ಹೇಳೋ ಪ್ರಕಾರ, ಆ ಆಫೀಸರ್ ಮರ್ಡರ್ ಮಾಡಿದ್ದೋರು ದೇಶಪಾಂಡೆಗೆ ಹತ್ತಿರದವರು. ದೇಶಪಾಂಡೆ, ಆಗಲೂ ಸರ್ಕಾರದಲ್ಲಿ ಇದ್ದ, ಈಗಲೂ ಇದ್ದಾನೆ. ಹಾಗಿದ್ದಾಗ, ಅವನ ಕಡೆಯವರನ್ನ ಉಳಿಸಿಕೊಳ್ತಾನೆ ಅಂತ ನಿನ್ನ ತಲೆಗೆ ಹೋಗ್ಲಿಲ್ವಾ? ಅವನು ನಾಣಯ್ಯಂಗೂ ಮಾತಾಡಿರ್ತಾನೆ. ಅದಕ್ಕೇ ನಾನು ಹೇಳಿದ್ದು, ಮೊದಲು ಫೋನ್ ಮಾಡು ಅಂತ,’ ಅಂದರು.
ಸಾಯಂಕಾಲ, ನಮ್ಮ ಬ್ಯುರೋ ಛೀಫ್ ಮಟ್ಟೂ ಹತ್ತಿರ ಹೋಗಿ, ಅರವಿಂದ ಹೆಗಡೆಯ ವಿಷಯ ಪ್ರಸ್ತಾವಿಸಿ, `ಸರ್, ಸರ್ಕಾರ ಅಪೀಲ್ ಹೋಗೋದಿಲ್ವಂತೆ. ಒಂದು ಫಾಲೋ ಅಪ್ ಕೊಡ್ಲಾ?’ ಅಂತ ಕೇಳಿದೆ.
`ಅಪೀಲು ಹೋಗಲೇ ಬೇಕು ಅಂತ ಕಾನೂನಿಲ್ವಲ್ಲಾ? ಬೇರೆ ಯಾವುದಾದರೂ ಸ್ಟೋರಿ ಹುಡುಕು,’ ಎಂದರು. ಸುಮ್ಮನೆ ನನ್ನ ಸೀಟಿನ ಕಡೆಗೆ ಹೋದೆ.
ಅದಾದ ಮೇಲೆ ಗಣಪತಿ ಭಟ್ಟರು ಆಗಾಗ ಸಿಗುತ್ತಿದ್ದರು. ತುಂಬಾನೇ ಪ್ರೀತಿಯಿಂದ ಮಾತಾಡುತ್ತಿದ್ದರು. ಯಾವತ್ತೂ ಅರವಿಂದನ ವಿಷಯ ಮಾತಾಡಲೇ ಇಲ್ಲ. ಆದರೆ, ಅವರನ್ನು ಕಂಡಾಗಲೆಲ್ಲಾ ನನಗೆ ಅರವಿಂದನ ಕೇಸ್ ನೆನಪಾಗಿ, ಒಂಥರಾ ಅಸಹಾಯಕತೆ ಕಾಡುತ್ತಿತ್ತು.
ಇದನ್ನು ಬರೆಯುವ ಮುಂಚೆ, ನಾಗರಾಜ್ ಗೆ ಫೋನ್ ಮಾಡಿದೆ. ಅರವಿಂದನ ಮನೆಯವರ ಬಗ್ಗೆ ಹಾಗೇ ವಿಚಾರಿಸಿದೆ. `ಭಟ್ಟರು ರಿಟೈರ್ ಆದರು. ಇನ್ನೂ ದುರಂತ ನೋಡಿ, ಅರವಿಂದನ ಅಣ್ಣ ವಿವೇಕಾನಂದ ಇದ್ದನಲ್ಲ, ಅವನು ಕೇಸ್ ಬಿದ್ದುಹೋದ ಒಂದು ವರ್ಷದಲ್ಲಿ ಹಾರ್ಟ್ ಅಟ್ಯಾಕ್ ಆಗಿ ತೀರಿ ಹೋದ. ಅವರ ತಂದೆ, ತಾಯಿ ಇದ್ದಾರೆ. ವಿವೇಕಾನಂದನ ಮಗಳು ಇಂಜೀನಿಯರ್ ಆಗಿದ್ದಾಳೆ. ಈಗಲೂ ಅಷ್ಟೆ, ನಾನು ವಾರದಲ್ಲಿ ಮೂರು ದಿನ ಅವರ ಮನೆಗೆ ಹೋಗದಿದ್ದರೆ, ವಾರಂಟ್ ಇಷ್ಯೂ ಮಾಡಿಬಿಡ್ತಾರೆ,’ ಅಂತ ನಕ್ಕರು.
`ಈಗೆಷ್ಟು ವಯಸ್ಸು ಅವರಿಗೆ?’ ಅಂದೆ.
`ತಂದೆಗೆ 85, ಮತ್ತೆ ತಾಯಿಗೆ 80 ಆಗಿದೆ,’ ಅಂದ್ರು ನಾಗರಾಜ್. ಯಾಕೋ ನಾಗರಾಜ್ ಬಗ್ಗೆ ಹೆಮ್ಮೆ  ಎನಿಸಿತು.

ಮಾಕೋನಹಳ್ಳಿ ವಿನಯ್ ಮಾಧವ್

1 ಕಾಮೆಂಟ್‌:

  1. Though I hardly know anything about Aravind Hegde, his case is so similar to the IPS officer Narendra Kumar who was murdered a few days back in MP by the mining mafia. And, what a curse for parents to endure all this and continue to live. Your posts are very evocative.

    ಪ್ರತ್ಯುತ್ತರಅಳಿಸಿ