ಅಣ್ಣಾವ್ರ ಅಪಹರಣದ ಹಿಂದೊಂದು
ಗಾಳಿಪಟ
ಬೆಳಗ್ಗಿನಿಂದ
ಆಫೀಸಿನಲ್ಲಿ ಮುಖ ದಪ್ಪ ಮಾಡಿಕೊಂಡು ಓಡಾಡುತ್ತಿದ್ದೆ. ಯಾರೇ ಮಾತಾಡಿದರೂ ರೇಗುತ್ತಿತ್ತು. ನನ್ನನ್ನು
ನಾನೇ ಸಮಾಧಾನ ಮಾಡಿಕೊಳ್ಳೊಕೆ ನೋಡಿದರೂ ಪ್ರಯೋಜನವಾಗುತ್ತಿರಲಿಲ್ಲ. ಒಂದ್ಹತ್ಸಲನಾದ್ರೂ ಗೊಣಗಿಕೊಂಡಿದ್ದೆ:
`ಯಾವನಿಗೆ ಬೇಕು ಈ ಕೆಲಸ? ಕತ್ತೆ ಥರ ದುಡೀಬೇಕು. ನಮಗಿಷ್ಟ ಇದ್ದಿದ್ದು ಮಾಡೋಣ ಅಂದ್ರೆ, ಎಲ್ಲಾದಕ್ಕೂ
ಕಲ್ಲು ಹಾಕ್ತಾರೆ.’
ಆಗಿದ್ದಿಷ್ಟೆ.
ಡಾ. ರಾಜ್ ಕುಮಾರ್ ಅವರನ್ನು ಅವರ ಗಾಜನೂರು ಮನೆಯಿಂದ ವೀರಪ್ಪನ್ ಅಪಹರಿಸಿ ನಾಲ್ಕು ದಿನಗಳಾಗಿದ್ದವು.
ಆ ನಾಲ್ಕು ದಿನಗಳೂ, ಬೆಳಗ್ಗಿನಿಂದ ರಾತ್ರಿಯವರೆಗೆ ಆಫೀಸಿಗೆ ಏನೇನು ಸುದ್ದಿ ಬೇಕೋ, ಅಲ್ಲೇಲ್ಲಾ ತಿರುಗಾಡಿಕೊಂಡು
ಬರುತ್ತಿದ್ದೆ. ಐದನೇ ದಿನಕ್ಕೆ ಬೆಂಗಳೂರಿನಿಂದ ಇನ್ನೇನೂ ಸುದ್ದಿ ಜಾಸ್ತಿ ಹುಟ್ಟೋದಿಲ್ಲ ಅಂತ ಅರ್ಥವಾಗತೊಡಗಿತು.
ಏನಾದರೂ ಮುಖ್ಯಮಂತ್ರಿ ಅಥವಾ ಹೋಂ ಮಿನಿಸ್ಟರ್ ಮಾತಾಡಿದರೆ ಸುದ್ದಿ, ಇಲ್ಲದಿದ್ದರೆ ಯಾವುದಾದರೂ ಊಹಾಪೋಹ
ಅಷ್ಟೆ.
ಬೆಳಗ್ಗೆನೇ
ನಮ್ಮ ಬ್ಯುರೋ ಛೀಫ್ ಆಗಿದ್ದ ಮಟ್ಟುವಿಗೆ ಎಲ್ಲವನ್ನೂ ವಿವರಿಸಿ, `ಸರ್, ಇನ್ನೊಂದು ವಾರವಾದರೂ ರಾಜ್
ಕುಮಾರ್ ಅವರು ಬಿಡುಗಡೆ ಆಗುವ ಸಾಧ್ಯತೆ ಇಲ್ಲ. ನಾನು ಚಾಮರಾಜನಗರಕ್ಕೆ ಹೋಗುತ್ತೇನೆ. ಅಲ್ಲಿ ಕೆಲವು
ಲೋಕಲ್ಸ್ ಗೊತ್ತಿದ್ದಾರೆ. ಒಳ್ಳೆ ಸ್ಟೋರಿಗಳು ಸಿಕ್ತಾವೆ,’ ಅಂದೆ.
`ಅಲ್ಲಿಗೆ
ಮೈಸೂರು ರಿಪೋರ್ಟರ್ ಗಳು ಹೋಗಿದ್ದಾರೆ,’ ಅಂದರು.
`ಅವರ
ಪಾಡಿಗೆ ಅವರ ಸ್ಟೋರಿ ಮಾಡಲಿ ಸರ್. ನಾನು ಅಲ್ಲಿನ ಯಾವುದೇ ಅಧಿಕಾರಿಗಳನ್ನು ಮಾತಾಡ್ಸೋಲ್ಲ. ನಾನು
ಕಾಡೊಳಗೆ ಹೋಗ್ತಾ ಇದ್ದೀನಿ,’ ಅಂದೆ.
`ನೀನು
ಹೋದರೆ ಅವರು ಬೇಜಾರು ಮಾಡ್ಕೋತ್ತಾರೆ. ಮತ್ತೆ ಇಲ್ಲಿ ಏನಾದರೂ ಬೆಳವಣಿಗೆ ಆದರೆ ನನಗೆ ನೀನಿರಬೇಕು.
ನೀ ಹೋಗೋದು ಬೇಡ,’ ಅಂತ ಕಡ್ಡಿ ಮುರಿದ ಹಾಗೆ ಹೇಳಿದರು.
ನಾನು
ಹೋದರೆ ಯೋಗಿಗಾಗಲಿ, ಶಿವಕುಮಾರ್ ಗೆ ಆಗಲಿ ಏನೂ ಬೇಜಾರಾಗೋದಿಲ್ಲ ಅಂತ ನನಗೆ ಅನ್ನಿಸಿತು. `ಸರ್, ಒಂದು
ವಾರ ಯಾವುದೇ ಬೆಳವಣಿಗೆ ಆಗಲು ಸಾಧ್ಯನೇ ಇಲ್ಲ. ಹಾಗೇನಾದರೂ ಆದರೆ, ತಕ್ಷಣ ವಾಪಾಸ್ ಬರ್ತೀನಿ,’ ಅಂತ
ಕೇಳಿದರೂ, ಮಟ್ಟು ಒಪ್ಪಲಿಲ್ಲ.
ಇದೇನು
ನನಗೆ ಹೊಸ ಅನುಭವವೇನಲ್ಲ. ಮುಂಚೆನೂ ತುಂಬಾ ಸಲ ಆಗಿತ್ತು. ಆಗೆಲ್ಲಾ ನಿರಾಸೆ ಆಗುತ್ತಿದ್ದರೆ, ಈ ಸಲ
ಮಾತ್ರ ಸಿಟ್ಟೇ ಬಂದಿತ್ತು. ಅವತ್ತು ಮಟ್ಟು ಕೂಡ ಒಂದೆರೆಡು ಸಲ ಮಾತಾಡಿಸಲು ನೋಡಿದರೂ, ನಾನು ಮುಖ ಕೊಟ್ಟು
ಮಾತಾಡಲಿಲ್ಲ. ಕಂಪ್ಯೂಟರ್ ಕಡೆ ನೋಡುತ್ತಾ, ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟು ಸುಮ್ಮನಾದೆ.
ಮೂರೂವರೆ
ಹೊತ್ತಿಗೆ ರವಿ ಬೆಳೆಗೆರೆ ಫೋನ್ ಮಾಡಿ, `ಏನ್ಮಾಡ್ತಿದ್ದೀರಾ?’ ಅಂತ ಕೇಳಿದರು. `ಏನಿಲ್ಲಾ ಸರ್, ಆಫೀಸ್
ನಲ್ಲಿ ಕೂತಿದ್ದೀನಿ,’ ಅಂದೆ.
`ಬನ್ರಿ,
ಚಾಮರಾಜ ನಗರಕ್ಕೆ ಹೋಗಿ, ವೀರಪ್ಪನ್ ಸಿಕ್ಕಿದ್ರೆ ಮಾತಾಡ್ಸಿಕೊಂಡು ಬರೋಣ,’ ಅಂತ ನಕ್ಕರು.
`ಆಫೀಸಲ್ಲಿ
ಕೇಳ್ದೆ ಸರ್, ಹೋಗೋದು ಬೇಡ ಅಂದ್ರು,’ ಅಂದೆ.
`ರಜಾ
ಹಾಕಿ ಬನ್ರಿ… ಮೂರು ದಿನ ಹೋಗಿ ಬರೋಣ. ಇವತ್ತು ಎಡಿಷನ್ ಬೇಗ ಮುಗಿಸ್ತೀನಿ. ಏಳು ಘಂಟೆಗೆ ಹೊರಡೋಣ,’
ಅಂದು ಫೋನ್ ಇಟ್ಟರು.
ಮೊದಲೇ
ಮೂಡ್ ಸರಿ ಇರಲಿಲ್ಲ. ಸೀದ ಹೋದವನೆ, ಒಂದು ಲೀವ್ ಲೆಟರ್ ಗೀಚಿ, ಮಟ್ಟುವಿನ ಮುಂದೆ ಹಿಡಿದು, `ಸರ್,
ನಾಲ್ಕು ದಿನ ರಜಾ ಹೋಗ್ತಿದ್ದೀನಿ,’ ಅಂದೆ. ಬೆಳಗ್ಗಿನಿಂದ ನನ್ನ ಅವತಾರ ನೋಡಿದ್ದ ಮಟ್ಟು ಏನೂ ಮಾತಾಡಲಿಲ್ಲ.
ಸೀದ
ಮನೆಗೆ ಹೋದವನೇ, ಬ್ಯಾಗಿನಲ್ಲಿ ಎರಡು ಜೊತೆ ಬಟ್ಟೆ ತುಂಬಿಕೊಂಡು ರವಿ ಆಫಿಸ್ ಗೆ ಹೊರಟೆ. ರವಿ ಬರೆಯುತ್ತಾ
ಕೂತಿದ್ದವರು, ನನ್ನನ್ನು ನೋಡಿದ ತಕ್ಷಣ: `ವಿನಯ್, ಒಂದು ಜಿಪ್ಸಿಗೆ ಹೇಳಿದ್ದೆ… ಅದು ಚಾಮರಾಜಪೇಟೆಯಲ್ಲಿ,
ನನ್ನ ಫ್ರೆಂಡ್ ಆಫಿಸ್ ನಲ್ಲಿ ಇದೆ. ನಾನು ಎಡಿಷನ್ ಮುಗಿಸಬೇಕು. ನೀವು ಹೋಗಿ ತಗೊಂಡು ಬನ್ನಿ,’ ಅಂತ
ಅಡ್ರೆಸ್ ಕೊಟ್ಟರು. ನನಗಿನ್ನೇನೂ ಕೆಲಸವಿರಲಿಲ್ಲ. ಸೀದ ಆ ಆಫೀಸಿಗೆ ಹೋಗಿ, ಜಿಪ್ಸಿ ತಗೊಂಡು ಬಂದು
ಕಾಯುತ್ತಾ ಕುಳಿತೆ. ಸ್ವಲ್ಪ ಹೊತ್ತಿಗೆ ನಿವೇದೀತಾ ಬಂದು ಹೇಳಿದಳು: `ಎಡಿಷನ್ ಮುಗಿಯೋಕ್ಕೆ, ಬೆಳಗ್ಗಿನ
ಜಾವ ಒಂದು ಘಂಟೆ ಆದರೂ ಆಗುತ್ತೆ.’
ಅದೇನೂ
ನನಗೆ ಹೊಸದಾಗಿರಲಿಲ್ಲ. ರವಿ ಆಫಿಸ್ ನಲ್ಲಿ ಬೆಳಗ್ಗಿನ ಜಾವ ಎರಡು ಘಂಟೆಯವರೆಗೆ ಕಾಯ್ದದ್ದೂ ಇತ್ತು.
ಹಾಗೆ, ಹೀಗೆ ಕಾಲಹರಣ ಮಾಡಿ, `ಹೊರಡುವ ಸಮಯಕ್ಕೆ ಎಬ್ಬಿಸಿ’ ಅಂತ ಹೇಳಿ, ಸೋಫಾದ ಮೇಲೆ ಮುದುಡಿಕೊಂಡೆ.
ನನ್ನನ್ನು ರವಿ ಎಬ್ಬಿಸಿದಾಗ, ಸಮಯ ಎರಡು ಘಂಟೆ ದಾಟಿತ್ತು. ಮುಖ ತೊಳೆದುಕೊಂಡು ಹೊರಟಾಗ ಹೇಳಿದೆ:
`ಸರ್, ನೀವು ಮಲ್ಕೊಳ್ಳಿ. ನಾನು ಡ್ರೈವ್ ಮಾಡ್ತೀನಿ,’ ಅಂತ..
ಅವರದೊಂಥರಾ
ಕೋಳಿ ನಿದ್ರೆ ಇದ್ದಹಾಗಿತ್ತು. ಬೆಂಗಳೂರಲ್ಲಿ ಮಲಗಿದವರು, ಮಳವಳ್ಳಿಗೆ ತಲುಪುವ ಹೊತ್ತಿಗೆ ಎದ್ದಿದ್ದರು.
ಅಲ್ಲೇ ಒಂದು ಬೇಕರಿಯಲ್ಲಿ ಟೀ ಕುಡಿದು ಮಾತಾಡುತ್ತಾ ಹೊರಟವರು, ಐದು ಘಂಟೆಯ ಹೊತ್ತಿಗೆ ಚಾಮರಾಜನಗರ
ತಲುಪಿದ್ದೆವು.
ನಾವು
ಅಲ್ಲಿಗೆ ತಲುಪುವುದರೊಳಗೆ, ಮೂರು ದಿನಗಳ ಹಿಂದೆ ಅಲ್ಲಿಗೆ ಬಂದಿದ್ದ ಪ್ರಕಾಶ್, ಐ.ಬಿ ಯಲ್ಲಿ ಒಂದು
ರೂಮು ಮಾಡಿದ್ದ. ಪ್ರಕಾಶ್ ಆಗ ಸುಪ್ರಭಾತ ಅನ್ನೋ ಟೆಲಿವಿಷನ್ ಸೇರಿಕೊಂಡಿದ್ದ. ನಾವು ತಲುಪಿ ಸ್ವಲ್ಪ
ಮಲಗುವುದರೋಳಗೆ, ರವಿಯನ್ನು ನೋಡಲು ಅವರದೊಂದು ದೊಡ್ಡ ಅಭಿಮಾನಿ ಬಳಗ ಬಂತು. ಸರಿ, ನಾನು ಸ್ನಾನ ಮಾಡಿಕೊಂಡು,
ಊರು ತಿರುಗಲು ಪ್ರಕಾಶನ ಜೊತೆ ಹೊರಟೆ.
ವಾಪಾಸು
ಬರುವ ಹೊತ್ತಿಗೆ, ಗುಂಪು ದೊಡ್ಡದಾಗಿತ್ತು. ಹತ್ತೂವರೆ ಸುಮಾರಿಗೆ ರವಿ ಹೊರಟರು. ಅವರೇ ಡ್ರೈವಿಂಗ್
ತೆಗೆದುಕೊಂಡರು. ತಕ್ಷಣವೇ ಎಲ್ಲಿಂದಲೋ ಬಂದ ರವಿಯವರ ರಿಪೋರ್ಟರ್ ರಾ ಸೋಮನಾಥ, ಜೀಪಿನ ಹಿಂದೆ ಹತ್ತಿಕೊಂಡ.
ಸ್ವಲ್ಪ ದೂರ ಹೋದಮೇಲೆ ರವಿ ಹೇಳಿದರು: `ಸೋಮನಾಥ ಎಂಥಾ ಕಥೆ ಕಳುಹಿಸಿದ್ದ ಗೊತ್ತಾ? ನೆನ್ನೆ ರಾತ್ರಿ
ಬೇಕಂತಲೇ ಹೇಳಲಿಲ್ಲ. ಅದು ನಮ್ಮ ಈ ಸಲ ಎಡಿಷನ್ ಲೀಡ್. ರಾಜ್ ಕುಮಾರ್ ಕಿಡ್ನ್ಯಾಪ್ ಗಿಂತ ಹದಿನೈದು
ದಿನ ಮುಂಚೆ ಇಬ್ಬರು ಕೊಯಮತ್ತೂರು ಜೈಲಿನಿಂದ ಬಿಡುಗಡೆ ಆಗ್ತಾರೆ. ನೇರವಾಗಿ ಅವರು ಗಾಜನೂರಿನಲ್ಲಿ
ಅಣ್ಣಾವ್ರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಳ್ತಾರೆ. ಅವರೇ ವೀರಪ್ಪನ್ ಗೆ ರಾಜ್ ಕುಮಾರ್ ಬಗ್ಗೆ ಇನ್ಫರ್
ಮೇಷನ್ ಕೊಟ್ಟಿದ್ದು,’ ಅಂದರು.
`ರಾತ್ರಿನೇ
ಹೇಳಿದ್ದರೆ ನಾನೂ ಬರೀತ್ತಿದ್ದೆ’ ಅಂತ ಹೇಳಿ ಹಿಂದೆ ತಿರುಗಿ ಸೋಮನಾಥ್ ಗೆ ತಮಾಷೆ ಮಾಡಿದೆ. `ಅದಕ್ಕೇ
ಹೇಳಲಿಲ್ಲ,’ ಅಂದ್ರು ರವಿ. ಅಲ್ಲಿಂದ ನೇರವಾಗಿ ಗಾಜನೂರಿಗೆ ಹೋದೆವು. ಅಲ್ಲಿ ರಾಜ್ ಕುಮಾರ್ ಅವರ ಮನೆಗೆ
ಹೋದಾಗ, ದೊಡ್ಡ ಗುಂಪು, ಪೋಲಿಸರು ಎಲ್ಲಾ ಇದ್ದರು.
`ಒಳಗೆ
ಹೋಗೊಣ,’ ಅಂದೆ.
`ಅಲ್ಲೇನಿರಲ್ಲ
ಬಿಡಿ. ಎಲ್ಲಾರಿಗೆ ಹೇಳಿದ ಕಥೆನೇ ನಮಗೂ ಹೇಳ್ತಾರೆ. ಅದನ್ನೇನೂ ನಾವು ಬರೆಯೋಕೆ ಆಗೋಲ್ಲ,’ ಅಂದ್ರು
ರವಿ. ಸರಿ, ಜೀಪು ತಾಳವಾಡಿ ಕಡೆಯಿಂದ ದಿಂಬಂ ದಾರಿ ಹಿಡಿಯಿತು. `ಅಲ್ಲಾ ಸರ್, ವಿರಪ್ಪನ್ ಇಂಟರ್ ವ್ಯೂ
ಮಾಡಬೇಕಾದರೆ ಏನು ಮಾಡಬೇಕು?’ ಅಂತ ಕೇಳಿದೆ.
`ಒಂದಾರು
ತಿಂಗಳು ಎಲ್ಲಾ ಕೆಲಸ ಬಿಟ್ಟು ಇಲ್ಲಿ ತಿರುಗಬೇಕು. ಆಗ ಎಲ್ಲಾದರೂ ಸಿಕ್ಕೇ ಸಿಗುತ್ತಾನೆ,’ ಅಂದ್ರು
ರವಿ.
`ಅಂದ್ರೆ,
ವೇಷ ಬದಲಿಸಿಕೊಂಡಾ?’ ಅಂತ ಕೇಳಿದೆ.
`ಹಾಗ್ಮಾಡಿದ್ರೆ,
ಪೋಲಿಸ್ ಅಂತ ಅವನಿಗೆ ಸಂಶಯ ಬರುತ್ತೆ. ಇಲ್ಲಿನವರಿಗೆ ನಾವ್ಯಾರು ಅಂತ ಗೊತ್ತಿದ್ರೆ ಒಳ್ಳೆದು,’ ಅಂದ
ಸೋಮನಾಥ. ಅಷ್ಟರಲ್ಲಿ, ಒಂದು ತಿರುವಿನ ಹತ್ತಿರ ಬಂದಾಗ, ಯಾರೋ ಇಬ್ಬರು ಹುಡುಗರು ಬೈಕಿನ ಜೊತೆ ಕೂತಿದ್ದರು.
ಹತ್ತಿರ ಹೋಗಿ ನಿಲ್ಲಿಸಿದವರೇ, ರವಿ `ಏನೋ ಪ್ರವೀಣ್? ಇಲ್ಲೇನು ಮಾಡ್ತಿದ್ದೀರ?’ ಅಂತ ಕೇಳಿದರು.
ನೋಡಿದರೆ,
ಬೈಕ್ ನಿಂದ ಬಿದ್ದು ಪ್ಯಾಂಟ್ ಹರಿದಿತ್ತು. ಮೊಣಕೈನಿಂದ ರಕ್ತ ಹರಿಯುತ್ತಿತ್ತು. ಅವನ ಹೆಸರು ರಾ ಪ್ರವೀಣ್
ಅಂತ ಗೊತ್ತಾಯ್ತು. ರಾಜ್ ಕುಮಾರ್ ಅವರ ಉಗ್ರಾಭಿಮಾನಿ. ಮದುವೆಯಾಗಿ ಹದಿನೈದು ದಿನಗಳಾಗಿತ್ತಂತೆ. ಅಣ್ಣಾವ್ರ
ಅಪಹರಣ ಗೊತ್ತಾಗಿ, ಯಾರಿಗು ಹೇಳದೆ, ಒಂದು ಚೀಟಿ ಬರೆದಿಟ್ಟು ಕಾಡಿಗೆ ಬಂದಿದ್ದಾನೆ.
`ಅಲ್ಲಪ್ಪ…
ಯಾವ ಕಡೆ ಸರಿಯಾಗಿ ಬೈಕ್ ಓಡಿಸಬಹುದು ಅಂತ ನೋಡ್ಕೊಂಡು ಬರಬೇಕು. ಕಾಡುದಾರಿಗೆ ಯಾಕೆ ಇಳಿಸ್ದೆ?’ ಅಂತ
ನಾನು ಕೇಳ್ದೆ. ಅವನೇನೋ ಉತ್ತರ ಕೊಡಲು ಹೋದಾಗ ರವಿಯೇ ಅವನಿಗೆ ಈ ಥರ ಹುಡುಕಿದರೆ ಅಣ್ಣಾವ್ರಾಗಲೀ,
ವೀರಪ್ಪನ್ ಆಗಲೀ ಸಿಗೋದಿಲ್ಲ ಅಂಥ ಹೇಳಿ, ಅವನಿಗೆ ಬೆಂಗಳೂರಿಗೆ ವಾಪಾಸ್ ಹೋಗಲು ಹೇಳಿದರು.
ಅವರು
ಮಾತಾಡುತ್ತಿದ್ದಾಗ ಜೀಪಿನ ಕೆಳಗಿಂದ ಏನೋ ಹರಿದಂತಾಗಿ ಬಗ್ಗಿ ನೋಡಿದೆ. `ಸರ್, ಕೂಲೆಂಟ್ ಕೈ ಕೊಟ್ಟಿದೆ.
ಪೂರ್ತಿ ಲೀಕ್ ಆಗಿದ ಅಂತ ಕಾಣುತ್ತೆ,’ ಅಂತ ಹೇಳಿ ಬಾನೆಟ್ ತೆಗೆದೆ. ನನ್ನ ಊಹೆ ಸರಿಯಾಗಿತ್ತು. ಕೂಲೆಂಟ್
ಕ್ಯಾನ್ ಇರಬೇಕಾದ ಸ್ಥಳದಲ್ಲಿ ಇರಲಿಲ್ಲ. ಅದನ್ನು ವಾಪಾಸ್ ಇಡುವ ಹೊತ್ತಿಗೆ, ಕೂಲೆಂಟ್ ಹೆಚ್ಚು ಕಡಿಮೆ
ಖಾಲಿಯಾಗಿತ್ತು.
`ಈಗೇನ್ಮಾಡೋದು?’
ಅಂತ ರವಿ ಕೇಳಿದರು. `ಏನಿಲ್ಲ, ನೀರು ಹಾಕಿ ಓಡಿಸ್ಬೇಕು. ಇಂಜಿನ್ ಹೀಟ್ ಆಗದ್ದಿದ್ರೆ ಪರವಾಗಿಲ್ಲ.
ಹೀಟ್ ಆದರೆ ಕಷ್ಟ,’ ಅಂದೆ. ಸರಿ, ಆ ಕೂಲೆಂಟ್ ಕ್ಯಾನ್ ಗೇ ನೀರು ಹಾಕಿ, ಪ್ರವೀಣ್ ಗೆ ಬೈ ಹೇಳಿ, ಸ್ವಲ್ಪ
ದೂರ ಹೊಗುವುದರಲ್ಲೇ ಇಂಜಿನ್ ಹೀಟ್ ಆಯ್ತು. ಮತ್ತೆ ಸ್ವಲ್ಪ ನೀರು ಹಾಕಿ, ನಾನೇ ಡ್ರೈವಿಂಗ್ ತಗೊಂಡೆ.
ದಿಂಬಂ ತಲುಪುವುದರೊಳಗೆ ನಮಗೆ ಸಾಕುಬೇಕಾಗಿತ್ತು.
ಅಲ್ಲಿಂದ
ಒಂದೇ ದಾರಿ ಇದ್ದಿದ್ದು. ಸರಿ, ನೇರವಾಗಿ ಸತ್ಯಮಂಗಲಕ್ಕೆ ಹೋದೆವು. ಅಲ್ಲಿ, ಒಂದು ಗ್ಯಾರೇಜಿನಲ್ಲಿ
ಜೀಪನ್ನು ಬಿಟ್ಟು, ಪಕ್ಕದ ಹೋಟೆಲ್ ನಲ್ಲಿ ಊಟಕ್ಕೆ ಹೋದೆವು. ರವಿ ಒಂದೆರೆಡು ಪಗ್ ಹಾಕಿದರು. ನಾನು
ಮತ್ತು ಸೋಮನಾಥ್, ಬರೀ ಊಟ ಮಾಡಿ ಹೊರಗೆ ಬಂದೆವು.
ಏನೇ
ಮಾಡಿದರೂ ಕೂಲೆಂಟ್ ಕ್ಯಾನ್ ಸರಿಮಾಡಲು ಆ ಗ್ಯಾರೇಜಿನವನಿಗೆ ಆಗಲಿಲ್ಲ. ಮತ್ತೆ, ಸತ್ಯಮಂಗಲದಲ್ಲೇಲ್ಲೂ
ಕೂಲೆಂಟ್ ಸಿಗಲಿಲ್ಲ. ಆದರೆ, ಅದರಿಂದ ನೀರು ಸೋರದಂತೆ ಮಾತ್ರ ಏನೋ ವ್ಯವಸ್ಥೆ ಮಾಡಿದ್ದ. ರವಿ ಡ್ರೈವ್
ಮಾಡ್ತೀನಿ ಅಂದಾಗ: `ಮೊದಲೇ ಜೀಪ್ ಸರಿ ಇಲ್ಲ. ಜೊತೇಲಿ, ನೀವು ಗುಂಡು ಬೇರೆ ಹಾಕಿದ್ದೀರ. ನಾನೇ ಮಾಡ್ತಿನಿ,’
ಅಂದೆ. ನಾವು ಮತ್ತೆ ದಿಂಬಂ ತಲುಪುವ ಹೊತ್ತಿಗೆ ಕತ್ತಲಾಗತೊಡಗಿತು.
ನಾನೂ
ಸೋಮನಾಥನೂ, ಉತ್ಸಾಹದಿಂದ ಅದೂ ಇದೂ ಮಾತಾಡುತ್ತಿದ್ದೆವು. ಮಧ್ಯದಲ್ಲಿ, ರವಿ ಮೌನವಾಗಿರುವುದನ್ನು ನಾನು
ಗಮನಿಸಿಯೇ ಇರಲಿಲ್ಲ. ದಿಂಬಂ ದಾಟಿ ಸ್ವಲ್ಪ ದೂರ ಹೋದಮೇಲೆ, ಅದೂ ಇದೂ ಮಾತಾಡುತ್ತಾ, `ಈಗ ವೀರಪ್ಪನ್
ನಮ್ಮನ್ನ ಅಡ್ಡ ಹಾಕಿದ್ರೆ ಮಜಾ ಇರುತ್ತೆ, ಅಲ್ವಾ ಸರ್?’ ಅಂದೆ.
`ಏನು
ಮಣ್ಣು ಮಜಾ? ನೀವು ಪ್ರಪಂಚ ಅಂದ್ರೆ ನೀವೊಬ್ಬರೇ ಅನ್ಕೊಂಡಿದ್ದೀರ. ಬೇರೆಯವರಿಗೆ ತಲೆ ಇಲ್ಲಾ ಅನ್ಕೊಂಡಿದ್ದೀರ,’
ಅಂತ ಕೂಗಾಡೋಕೆ ಶುರು ಮಾಡಿದ್ರು. ಏನಾಯ್ತು ಅಂತ ಅರ್ಥವಾಗದೆ ನಾನು: `ಯಾಕೆ ಸರ್? ಏನಾಯ್ತು? ಯಾಕೆ
ಇದ್ದಕ್ಕಿದ್ದ ಹಾಗೆ ಕೂಗಾಡ್ತಾ ಇದ್ದೀರ?’ ಅಂತ ಕೇಳ್ದೆ.
`ಬೆಳಗ್ಗಿಂದ
ನೋಡ್ತಿದ್ದೀನಿ. ಎಲ್ಲಾ ನೀವೇ ಮಾಡ್ತೀರ, ಮಾತಾಡ್ತೀರ. ನಮಗೇನು ಇಲ್ಲೆಲ್ಲಾ ಡ್ರೈವಿಂಗ್ ಮಾಡಬೇಕು
ಅಂತ ಇಷ್ಟ ಇರೋಲ್ವ?’ ಅಂತ ಮತ್ತೆ ಕೂಗಾಡಿದರು. ಓಹೋ.. ಇದಾ ವಿಷ್ಯ ಅಂತ ನಗು ಬಂತು. ಆದರೆ, ರವಿಯ
ಕೂಗಾಟ ನಾಲ್ಕೈದು ನಿಮಿಷ ಮುಂದುವರೆಯಿತು. ನನಗೂ ತಾಳ್ಮೆ ತಪ್ಪಲು ಶುರುವಾಯ್ತು. ಒಮ್ಮೆಗೆ ಬ್ರೇಕ್
ಹಾಕಿದವನೇ, `ನೋಡ್ರಿ, ಈ ಜೀಪ್ ಇಸ್ಕೊಂಡು ಬಂದವರು ನೀವು. ಗಾಡಿ ಪ್ರಾಬ್ಲಂ ಇತ್ತು ಅಂತ ನಾನು ಡ್ರೈವಿಂಗ್
ತಗೊಂಡೆ. ನೀವು ಡ್ರೈವ್ ಆದರೂ ಮಾಡ್ಕೊಂಡು ಹೋಗಿ, ಇಲ್ಲಾ ನಿಮ್ಮ ತಲೆ ಮೇಲಾದರೂ ಇಟ್ಕೊಳ್ಳಿ. ನಂಗೇನಾಗಬೇಕು,’
ಅಂದವನೇ, ನನ್ನ ಬ್ಯಾಗ್ ತೆಗೆದುಕೊಂಡು, ಜೀಪಿನಿಂದ ಇಳಿದು, ಕತ್ತಲಲ್ಲಿ ತಿರುಗಿ ನೆಡೆದುಕೊಂಡು ಹೋಗಲಾರಂಭಿಸಿದೆ.
ರವಿ
ಏನೂ ಮಾತಾಡಲಿಲ್ಲ. ಸೋಮನಾಥ ಮಾತ್ರ ನನ್ನ ಹಿಂದೆ ಬರುತ್ತಾ: `ಸರ್, ಇಷ್ಟಕ್ಕೆಲ್ಲಾ ಯಾಕೆ ಸರ್ ಗಲಾಟೆ.
ಬನ್ನಿ ಸರ್. ಈ ಕಾಡಲ್ಲಿ ಎಲ್ಲಿ ಹೋಗ್ತೀರ? ಕತ್ತಲೆ ಬೇರೆ ಆಗಿದೆ,’ ಅಂದ. `ನೀವಿದಕ್ಕೆಲ್ಲಾ ಬರ್ಬೇಡಿ.
ನೋಡಿ ಜೀಪ್ ಹೋಗ್ತಾ ಇದೆ. ನೀವು ಹೋಗಿ ಹತ್ಕೊಳಿ. ಇಲ್ದೆ ಹೋದ್ರೆ, ನನ್ನ ಜೊತೆ ಕಾಡಲ್ಲಿರಬೇಕಾಗುತ್ತೆ,’
ಅಂದೆ. ಸೋಮನಾಥ ಓಡುತ್ತಾ ಹೋಗಿ, ಜೀಪ್ ಹತ್ತಿಕೊಂಡ.
ನಾನಿಳಿದ
ಜಾಗ ಕಗ್ಗಾಡಾಗಿತ್ತು. ಜೀಪು ಹೋದಮೇಲಂತೂ ಪೂರ್ತಿ ಕತ್ತಲಾಗಿದ್ದರಿಂದ, ರಸ್ತೆ ಸಹ ಸರಿಯಾಗಿ ಕಾಣುತ್ತಿರಲಿಲ್ಲ.
ಬರುವಾಗ, ಹೆಚ್ಚೂ ಕಡಿಮೆ ಒಂದು ಕಿಲೋಮೀಟರ್ ಹಿಂದೆ, ಚೆಕ್ ಪೋಸ್ಟ್ ಹತ್ತಿರ ಒಂದು ಟೀ ಅಂಗಡಿ ನೋಡಿದ್ದೆ.
ನಮ್ಮ ಕಾಫೀ ತೋಟಗಳಲ್ಲಿ ಮಾಡಿದಂತೆ, ಕತ್ತಲಲ್ಲೇ ಅಂದಾಜಿನ
ಮೇಲೆ ಕಾಲು ಹಾಕಿದೆ. ಸ್ವಲ್ಪ ದೂರ ನೆಡೆದ ಮೇಲೆ ದೂರದಲ್ಲಿ ಮಿಣುಕು ದೀಪ ಕಾಣಿಸಿತು. ಸರಿ, ಅಂಗಡಿ
ಬಂತು ಅಂತ ಆ ಕಡೆಗೇ ಕಾಲು ಹಾಕಿದೆ.
ಕತ್ತಲಲ್ಲಿ
ಬೆನ್ನಿಗೆ ಬ್ಯಾಗ್ ತಗುಲಿಸಿಕೊಂಡು ಬಂದ ನನ್ನನ್ನು ನೋಡಿ ಅಂಗಡಿಯವನಿಗೆ ಆಶ್ಚರ್ಯವಾದರೂ ತೋರಿಸಿಕೊಳ್ಳಲಿಲ್ಲ.
ಒಂದೆರೆಡು ಟೀ ಕುಡಿದು, ಸಿಗರೇಟು ಸೇದುತ್ತಾ ಕುಳಿತೆ. ಹತ್ತಿರದ ಚೆಕ್ ಪೋಸ್ಟ್ ನಲ್ಲಿ ಆಗೊಂದು,
ಈಗೊಂದು ವಾಹನಗಳು ಬಂದು ನಿಲ್ಲುತ್ತಿದ್ದವು. ಒಂಬತ್ತು ಘಂಟೆಯ ಹೊತ್ತಿಗೆ ಅಂಗಡಿಯವನೇ ಧೈರ್ಯ ಮಾಡಿ
ಕೇಳಿದ: `ಎಲ್ಲಿಗೆ ಹೋಗಬೇಕು ಸರ್?’
`ಚಾಮರಾಜನಗರಕ್ಕೆ.
ಬಸ್ ಎಷ್ಟು ಹೊತ್ತಿಗೆ ಇದೆ?’
`ನಗರಕ್ಕೆ
ಬಸ್ ಇಲ್ಲ ಸರ್. ಇನ್ನು ಬೆಳಗ್ಗೆನೆ. ಚೆಕ್ ಪೋಸ್ಟ್ ಹತ್ರ ಯಾವುದಾದರೂ ಲಾರಿ ಬರ್ತವೆ. ಅಲ್ಲಿ ನಿಮ್ಮವರೇ
ಇರ್ತಾರಲ್ಲ ಕೇಳಿ. ಹತ್ತಿಸ್ತಾರೆ,’ ಅಂದ.
ಆಗ
ಅರ್ಥವಾಗಿದ್ದು ನಂಗೆ, ಅಂಗಡಿಯವನು ನನ್ನ ಪೋಲಿಸ್ ಅನ್ಕೊಂಡಿದ್ದ ಅಂತ. ಸುಮ್ಮನೆ ನಕ್ಕು ಚೆಕ್ ಪೋಸ್ಟ್
ಹತ್ತಿರ ಹೋಗಿ, ಅಲ್ಲಿದ್ದ ಪೋಲಿಸ್ ಜೊತೆ ಮಾತಾಡ್ದೆ. `ಏನ್ ಸಾರ್ ನೀವು. ಈ ಕತ್ತಲಲ್ಲಿ ಕಾಡಲ್ಲಿ
ಅಲೀತಿದ್ದೀರಲ್ಲ. ಇಲ್ಲೆಲ್ಲಾ ಆನೆ ಕಾಟ ಜಾಸ್ತಿ. ನಿಮ್ಮ ಬೆಂಗಳೂರು ರಿಪೋರ್ಟರ್ ಗಳಿಗೆ ಇವೇನೂ ಗೊತ್ತಾಗಲ್ಲ.
ಎಲ್ಲಾ ಆನೆಗಳನ್ನೂ ಸರ್ಕಸ್ ಆನೆಗಳು ಅನ್ಕೊಂಡಿರ್ತೀರ. ಕಾಡು ಅಂದ್ರೆ ಗೊತ್ತಿರೋದಿಲ್ಲ ನಿಮಗೆ,’ ಅಂತ
ಬೈಕೊಂಡೇ ಒಂದು ಲಾರಿ ಹತ್ತಿಸಿದ. ಚಾಮರಾಜನಗರ ತಲುಪುವ ಹೊತ್ತಿಗೆ ಘಂಟೆ ಹನ್ನೊಂದಾಗಿತ್ತು.
ಐ.ಬಿ.
ಗೆ ನೇರವಾಗಿ ಹೋದವನೇ, ಪ್ರಕಾಶನ ರೂಮಿನ ಬಾಗಿಲು ತಟ್ಟಿದೆ. ನನಗಾಗೇ ಕಾಯ್ತಿದ್ದ ಅಂತ ಕಾಣುತ್ತೆ.
ಬಾಗಿಲು ತೆಗೆದವನೇ `ಊಟ ಆಯ್ತಾ?’ ಅಂತ ಕೇಳಿದ.
ಇಲ್ಲ
ಅನ್ನುವ ಹಾಗೆ ತಲೆ ಆಡಿಸಿದೆ. `ಬಾ, ಬಸ್ ಸ್ಯ್ಟಾಂಡ್ ಹತ್ತಿರ ಸಿಗಬಹುದು,’ ಅಂದ. `ಬೇಡ… ಹಸಿವಿಲ್ಲ,’
ಅಂತ ಹೇಳಿ ಮುಖ ತೊಳೆಯಲು ಹೋದೆ. ಬರುವ ಹೊತ್ತಿಗೆ ಟೇಬಲ್ ಮೇಲೆ ಮೂರು ಬಾಳೆಹಣ್ಣು ಇಟ್ಟಿದ್ದ. ಸರಿ,
ತಿಂದು ಏನೂ ಮಾತಾಡದೆ ಮಲಗಿದೆವು.
ಬೆಳಗ್ಗೆ
ಎದ್ದು ಕಾಫಿಕುಡಿಯತ್ತಾ ಪ್ರಕಾಶನಿಗೆ ಹೇಳಿದೆ: `ರಾತ್ರಿ ಜಗಳ ಆಯ್ತು.’
`ರವಿ
ಹೇಳಿದ್ರು. ರಾತ್ರಿನೇ ಬೆಂಗಳೂರಿಗೆ ಹೋದರು,’ ಅಂದ.
`ಸರಿ,
ನಿನ್ನ ಪ್ರೋಗ್ರಾಂ ಏನು?’ ಅಂತ ಕೇಳಿದೆ.
`ನಾಳೆ
ಅಥವಾ ನಾಡಿದ್ದು ವೀರಪ್ಪನ್ ಹೆಂಡತಿ ಮುತ್ತುಲಕ್ಷ್ಮಿ ಇಂಟರ್ ವ್ಯೂ ಮಾಡ್ತಿದ್ದೀನಿ. ಅದಕ್ಕೆ ಮೆಟ್ಟೂರು
ಅಥವಾ ಕೊಯಮತ್ತೂರಿಗೆ ಹೋಗಬೇಕಾಗುತ್ತೆ. ಇವತ್ತೇನಾದ್ರು ಮಾಡಬೇಕು…ಏನು ಅಂತ ಗೊತ್ತಿಲ್ಲ,’ ಅಂದ.
`ಇವತ್ತು
ನಾನಿರ್ತೀನಿ. ತಿಂಡಿ ತಿಂದು ನೋಡೋಣ, ಏನಾಗುತ್ತೆ ಅಂತ,’ ಅಂದೆ.
ತಿಂಡಿಗೆ
ಹೊರಟಾಗ ನಾನು ಡೆಕ್ಕನ್ ಹೆರಾಲ್ಡ್ ಪೇಪರ್ ತಗೊಂಡೆ. ಮುಖಪುಟದಲ್ಲೇ ದೊಡ್ಡದಾಗಿ ಬಂದಿತ್ತು: `ತಾಳವಾಡಿಯ
ಹತ್ತಿರದ ಟಿಪ್ಪೂ ಮಲ್ಲಿಗೆ ಮಂಟಪದ ಹತ್ತಿರ ವೀರಪ್ಪನ್ ಡಾ. ರಾಜ್ ಜೊತೆ ಇದ್ದಾನೆ. ಅಲ್ಲಿ ಎರಡು ಕಲ್ಯಾಣಿಗಳಿವೆ.
ಒಂದು ಕಲ್ಯಾಣಿಯಲ್ಲಿ ರಾಜ್ ಸ್ನಾನಮಾಡುವುದನ್ನು ದನ ಕಾಯಲು ಹೋದ ಹುಡುಗರು ನೊಡಿದ್ದಾರೆ,’ ಅಂತ.
ಅದನ್ನು
ಪ್ರಕಾಶನಿಗೆ ತೋರಿಸಿ, `ಏನು ಮಡೋದು?’ ಅಂತ ಕೇಳಿದೆ.
`ಅಲ್ಲಿಗೆ
ಹ್ಯಾಗೋ ಹೋಗೋದು? ಮತ್ತೆ, ವೀರಪ್ಪನ್ ನೆನ್ನೆ ಅಲ್ಲಿದ್ದರೆ, ಇವತ್ತು ಇರ್ತಾನಾ?’ ಅಂತ ಕೇಳಿದ.
`ವೀರಪ್ಪನ್
ಸಿಗೋದು ಅಷ್ಟರಲ್ಲೇ ಇದೆ. ಅವನಿದ್ದರೆ, ಅಲ್ಲಿ ಕ್ಯಾಂಪ್ ಮಾಡಿದ ಬೆಂಕಿ ಗುರುತಿರುತ್ತದೆ. ಇನ್ನೇನಾದ್ರೂ
ಸಿಗುತ್ತಾ ನೋಡಬಹುದು. ತಾಳವಾಡಿಗೆ ಹೋಗಿ, ಯಾರನ್ನಾದರೂ ಕೇಳಿದರೆ ದಾರಿ ಹೇಳ್ತಾರೆ,’ ಎಂದೆ.
`ಸರಿ,
ನಡಿ ಹೋಗೋಣ,’ ಅಂದ ಪ್ರಕಾಶ್.
ಪ್ರಕಾಶ್
ಅಫೀಸಿನಿಂದ ಒಂದು ಟಾಟಾ ಸುಮೋ ಕಳಿಸಿದ್ದರು. ಡ್ರೈವರ್, ಕ್ಯಾಮೆರಾಮನ್ ಜೊತೆ ಹೊರಟೆವು. ಕ್ಯಾಮೆರಾಮನ್
ಒಬ್ಬ ತಮಿಳಿನ ಹುಡುಗ. ಬಾಲು ಅಂತ ಏನೊ ಇರಬೇಕು. ತಾಳವಾಡಿಗೆ ಬಂದವರೇ, ಅಲ್ಲಿನ ಅಂಗಡಿಯಲ್ಲಿ ಟಿಪ್ಪುವಿನ
ಮಲ್ಲಿಗೆ ಮಂಟಪದ ಬಗ್ಗೆ ಕೇಳಿದೆವು. ಯಾರಿಗೂ ಮಲ್ಲಿಗೆ ಮಂಟಪದ ಬಗ್ಗೆ ಗೊತ್ತಿರಲಿಲ್ಲ. ಅವರಿಗೆ ಗೊತ್ತಿದ್ದು
ಟಿಪ್ಪು ಶಿಕಾರಿಗೆ ಬಂದಾಗ ಇರುತ್ತಿದ್ದ ಜಾಗ. ಅಲ್ಲಿ ಎರಡು ಕಲ್ಯಾಣಿಗಳು ಇವೆ ಅಂತ ಕೂಡ ಹೇಳಿದರು.
ಅವರಲ್ಲೊಬ್ಬನನ್ನು ಪುಸಲಾಯಿಸಿ ಸುಮೋಗೆ ಹತ್ತಿಸಿಕೊಂಡೆವು. ಒಂದೆರಡು ಕಿಲೋಮೀಟರ್ ಹೋಗುವುದರೊಳಗೆ,
ಡ್ರೈವರ್ ಹೇಳಿದ: `ಈ ರಸ್ತೆಯಲ್ಲಿ ಹೋಗೋಕೆ ಸಾಧ್ಯನೇ ಇಲ್ಲಾ’ ಅಂತ.
ಅಲ್ಲಿಂದ ಎಲ್ಲಾರೂ ನೆಡೆಯಲು ಶುರು ಮಾಡಿದ್ವಿ. ಬಾಲು ದೊಡ್ಡದೊಂದು
ಕ್ಯಾಮೆರಾ ಹೆಗಲ ಮೇಲೆ ಹೊತ್ತುಕೊಂಡು ನೆಡೆಯಲು ಶುರು ಮಾಡಿದ. ಒಂದು ಕಿಲೋಮೀಟರ್ ಹೋದ ತಕ್ಷಣ ನಮ್ಮ
ಜೊತೆ ತಾಳವಾಡಿಯಿಂದ ಬಂದವನು ಹೇಳಿದ: `ಸರ್, ಇಲ್ಲೇ ಬಲಗಡೆ ಇರೋದು ಮೊದಲನೇ ಕಲ್ಯಾಣಿ.’
ನಾವು
ನೆಡೆಯುತ್ತಿದ್ದ ದಾರಿ ಕುರುಚಲು ಕಾಡಿನ ಮಧ್ಯ ಇತ್ತು. ಕಲ್ಯಾಣಿಯ ಸುತ್ತ ಮಾತ್ರ ದೊಡ್ಡ ಮರಗಳಿದ್ದು,
ರಸ್ತೆಗೆ ಸರಿಯಾಗಿ ಕಾಣುತ್ತಿರಲಿಲ್ಲ. ಅಲ್ಲಿಗೆ ಹೋಗಿ ನೋಡಿದ ತಕ್ಷಣ ನಾನು ಮತ್ತು ಪ್ರಕಾಶ್ ಮುಖ
ನೋಡಿಕೊಂಡೆವು. ತುಂಬಾ ಹಳೆಯ ಸುಂದರವಾದ ಕಲ್ಯಾಣಿ. ನೀರಿನ ಮೇಲೆ ಒಂದಡಿ ಪಾಚಿ ಕಟ್ಟಿ, ವಾಸನೆ ಬರುತ್ತಿತ್ತು.
ಅಲ್ಲಿ ರಾಜ್ ಅವರು ಸ್ನಾನ ಮಾಡುವುದಿರಲಿ, ಕಾಲು ತೊಳೆಯುವುದೂ ಸಾಧ್ಯವಿರಲಿಲ್ಲ. `ಟಿಪ್ಪು ಮಂಟಪದ
ಹತ್ತಿರ ಇನ್ನೊಂದು ಸಣ್ಣದಿದೆ ಸರ್,’ ಅಂದ, ನಮ್ಮ
ಜೊತೆ ಬಂದವನು.
ಮುಂದೆ
ನೆಡೆಯಲು ಶುರು ಮಾಡಿದಾಗ ಗೊತ್ತಾಯ್ತು, ಇವರುಗಳ ಒಂದು ಕಿಲೋಮೀಟರ್ ನಲ್ಲಿ, ಸುಮಾರು ಕಿಲೋಮೀಟರ್ ಗಳು
ಇರ್ತಾವೆ ಅಂತ. ಕುರುಚಲು ಕಾಡಿನಲ್ಲಿ ನೆರಳಿಗೆ ಮರಗಳೂ ಇಲ್ಲ. ಸೂರ್ಯ ನೆತ್ತಿಯ ಮೇಲೆ ಹೊಡೆಯುತ್ತಿದ್ದ.
ನಾಲ್ಕು ಕಿಲೋಮೀಟರ್ ನೆಡೆದಮೇಲೆ ಹೇಳಿದ, ಇದೇ ಜಾಗ ಸರ್.
ಅದು
ಬೆಟ್ಟದ ಇಳಿಜಾರಿನಲ್ಲಿ, ಕಣಿವೆಗೆ ಮುಖ ಮಾಡಿಕೊಂಡಿದ್ದ ಜಾಗ. ಎದುರುಗಡೆ, ನೀಲಗಿರಿ ಪರ್ವತ. ಬಲಕ್ಕೂ,
ಎಡಕ್ಕೂ ನೋಡಿದರೆ, ಕಣ್ಣಿಗೆ ಕಾಣುವಷ್ಟು ದೂರ ಕಣಿವೆ. ಮಧ್ಯದಲ್ಲಿ, ಎರಡು ಜಾಗಗಳನ್ನು ಮಟ್ಟಮಾಡಿದಂತೆ
ಇತ್ತು. ಮಲ್ಲಿಗೆ ಮಂಟಪ ಅಂತ ಕರೆಯುವ ಯಾವುದೇ ಕುರುಹುಗಳು ಇರಲಿಲ್ಲ. `ಇಲ್ಲಿ ಟಿಪ್ಪು ಮತ್ತೆ ಅವರ
ಸೈನಿಕರು ಕ್ಯಾಂಪ್ ಮಾಡುತ್ತಿದ್ದರಂತೆ. ಅಲ್ಲಿ, ಅವರ ಕುದುರೆಗಳನ್ನು ಕಟ್ಟುತ್ತಿದ್ದರಂತೆ,’ ಅಂತ
ಹೇಳಿದ.
`ಇನ್ನೊಂದು ಕಲ್ಯಾಣಿ ಎಲ್ಲಿ?’ ಅಂದೆ.
`ಅಲ್ಲಿ,
ಆ ಬಂಡೆಯ ಹಿಂದೆ ಇದೆ,’ ಅಂತ ಸ್ವಲ್ಪ ಎತ್ತರದ ಜಾಗ ತೋರಿಸಿದ.
ಅಲ್ಲಿ
ಹೋಗಿ ನೋಡಿದರೆ, ಕಲ್ಯಾಣಿ ಏನೂ ಇರಲಿಲ್ಲ. ಬಂಡೆಯ ಸಂದಿಯಲ್ಲಿ ಸಣ್ಣ ನೀರಿನ ಹೊಂಡ ಇತ್ತು. ಈ ನೀರನ್ನೂ
ಯಾವ ಮನುಷ್ಯರೂ, ಯಾವುದೇ ಕಾರಣಕ್ಕೆ ಉಪಯೋಗಿಸಲು ಆಗುತ್ತಿರಲಿಲ್ಲ. ಆ ಕಣಿವೆಯನ್ನು ನೋಡಿದಾಗ, ಇಲ್ಲಿ
ವೀರಪ್ಪನ್ ಹಿಡಿದಂತೆಯೇ, ಅಂದುಕೊಂಡೆ.
`ಯಾರ್
ಬರ್ದಿದ್ದು ಸ್ಟೋರಿ?’ ಅಂತ ಪ್ರಕಾಶ್ ಕೇಳಿದ.
`ಖಾನ್
ಕಣೋ. ಸರಿಯಾದ ಗಾಳಿಪಟ ಹಾರ್ಸಿದ್ದಾನೆ ಬಿಡು,’ ಅಂತ ನಕ್ಕೆ. ಬಂದ ತಪ್ಪಿಗೆ, ಪ್ರಕಾಶ್ ಆ ಸ್ಥಳದ್ದೇ
ಒಂದು ಸಣ್ಣ ಡಾಕ್ಯುಮೆಂಟೇಶನ್ ಮಾಡಿದ. ವಾಪಾಸು ಬಿಸಿಲಿನಲ್ಲಿ ಐದು ಕಿಲೋಮೀಟರ್ ನೆಡೆದು ಬರುವ ಹೊತ್ತಿಗೆ,
ಎಲ್ಲಾರೂ ಸುಟ್ಟ ಬದನೇಕಾಯಿಯಂತೆ ಆಗಿದ್ದೆವು. ದಾರಿಯಲ್ಲಿ ಬಾಲನಿಗೆ ಕ್ಯಾಮೆರಾ ಎತ್ತಿಕೋಬೇಕಾ ಅಂತ
ಕೇಳಿದರೂ, ಆ ಹುಡುಗ `ಇಲ್ಲಾ ಸರ್, ನನಗೆ ಅಭ್ಯಾಸ ಇದೆ,’ ಅಂತ ನಯವಾಗಿ ನಿರಾಕರಿಸಿದ.
ಅಲ್ಲಿಂದ
ಹೊರಟು, ಗಾಜನೂರು ಮಾರ್ಗವಾಗಿ ಹೋಗೋಣ ಅಂತ ಹೊರಟೆವು. ದಾರಿಯಲ್ಲಿ ಎರಡು-ಮೂರು `ಪ್ರೆಸ್’ ಬೋರ್ಡ್
ಹಾಕಿಕೊಂಡ ಕಾರುಗಳು ನಿಂತಿದ್ದೆವು. ಇಳಿದು ನೋಡಿದರೆ, ಎಲ್ಲಾ ಮೈಸೂರು ರಿಪೋರ್ಟರ್ ಗಳು. ನಮ್ಮ ಯೋಗಿ
ಕೂಡ ಅಲ್ಲಿದ್ದ. ನನ್ನ ನೋಡಿದ ತಕ್ಷಣ, `ಏನಪ್ಪಾ, ಬಂದ್ಬಿಟ್ಟೀದ್ದೀಯ?’ ಅಂತ ನಕ್ಕ.
`ಸ್ಟೋರಿ
ಬರಿಯೋಕಲ್ಲಪ್ಪ. ರಜ ಹಾಕಿ ಬಂದಿದ್ದೀನಿ. ಅದೇನಿದ್ದರೂ, ನಿಂದೇನೆ,’ ಅಂತ ನಕ್ಕೆ.
`ನಿನೇ
ಬರ್ದಿದ್ರೆ ಸರಿಯಿತ್ತು ಕಣೋ. ಇಬ್ಬರು ಫಾರಿನರ್ ಗಳನ್ನ ಕರ್ಕೊಂಡು ಬಂದಿದ್ದೀನಿ. ಒಳ್ಳೆ ಹವಾನಾ ಸಿಗಾರ್
ತಂದಿದ್ದಾರೆ. ಬೆಳಗ್ಗಿಂದ ಮಜವಾಗಿದ್ದೀನಿ,’ ಅಂತ ನಕ್ಕ.
`ಸರಿ
ಬಿಡು. ನಾನೂ ಬೆಂಗಳೂರಿಗೆ ನಾಳೆ ಹೊರಟೆ,’ ಅಂತ ನಕ್ಕು ಹೊರಟೆ.
ಚಾಮರಾಜನಗರಕ್ಕೆ
ಬರುವ ಹೊತ್ತಿಗೆ ಕಣ್ಣು ಬಿಡಲು ಆಗುತ್ತಿರಲಿಲ್ಲ. ಬಲವಂತಕ್ಕೊಂದು ಬೀರ್ ಕುಡಿದು ಮಲಗಿದವನಿಗೆ ಬೆಳಗ್ಗೆ
ಎಂಟು ಘಂಟೆಗೆ ಎಚ್ಚರವಾಯ್ತು. ರೆಡಿಯಾಗಿ ತಿಂಡಿ ತಿನ್ನುವ ಹೊತ್ತಿಗೆ, ಪ್ರಕಾಶನಿಗೆ ಮುತ್ತುಲಕ್ಷ್ಮಿಯ
ಇಂಟರ್ ವ್ಯೂ ಇನ್ನೆರೆಡು ದಿನ ಬಿಟ್ಟು ಅಂತ ಗೊತ್ತಾಯ್ತು.
`ಬರ್ತೀಯ
ತಮಿಳುನಾಡು ಕಡೆಗೆ?’ ಅಂತ ಕೇಳ್ದ.
`ಇಲ್ಲ
ಬಿಡು. ಬಸ್ ಸ್ಟ್ಯಾಂಡ್ ಗೆ ಡ್ರಾಪ್ ಕೊಡು. ಯಾವುದಾದರೂ ಬಸ್ ಹಿಡ್ಕೊಂಡು ಬೆಂಗಳೂರಿಗೆ ಹೋಗ್ತೀನಿ,’
ಅಂದೆ.
ಮಾಕೋನಹಳ್ಳಿ
ವಿನಯ್ ಮಾಧವ
Dayavittu T S Satyan avara autobiography (Kannada translation) 'Kaalakke Kannadi' odi - journalists gaalipata harisuva bage chennaagide.
ಪ್ರತ್ಯುತ್ತರಅಳಿಸಿRAVI yavaaga enne bittidu matte shuru madiddu....?
ಪ್ರತ್ಯುತ್ತರಅಳಿಸಿwhere is RAW.Praveena....?
aarthavagada questionssssss..!!!
An interesting read. Took me back to those days of confusion & speculation....
ಪ್ರತ್ಯುತ್ತರಅಳಿಸಿಖಾನ್್ ಬಹಳ ಒಳ್ಳೇ ಹುಡುಗ. ಆದರೆ ಗಾಳಿಪಟ ಬಿಡುವ ಒತ್ತಡಕ್ಕೆ ಬಲಿಯಾದಂತಿದೆ. ಇಂತಹ ಹಲವು ಗಾಳಿಪಟಗಳನ್ನು ನಾನು ಖುದ್ದು ಬಲ್ಲೆ. ಆದರೆ ಅವುಗಳ ಹಿಂದು ಮುಂದಿನ ಕತೆ ಗೊತ್ತಿಲ್ಲ. ಮಧು, ನೀವು ಸೇರಿ ಬರೀಬೇಕು ಅನ್ಸುತ್ತೆ.
ಪ್ರತ್ಯುತ್ತರಅಳಿಸಿ