ದೇವರುಂದದ ಅಂದರ್-ಬಾಹರ್
ಮತ್ತು ಅವತಿಯ ಗುಂಡು-ತುಂಡು
ಶಾಂತೀನಗರದ ಕಡೆಯಿಂದ
ಡಬ್ಬಲ್ ರೋಡ್ ಗೆ ಬರುವಾಗಲೆಲ್ಲ `ಸನ್ನಿ ರೂಮ್’ ಕಡೆ ತಿರುಗಿ ನೋಡದೇ ಇರುವುದಿಲ್ಲ. ಸನ್ನಿ ರೂಮಿನ
ಬಗ್ಗೆ ಇರುವ ಕಥೆಗಳನ್ನೆಲ್ಲಾ ಸೇರಿಸಿದರೆ, ಒಂದು ಸಣ್ಣ ಪುಸ್ತಕವಂತೂ ಆಗುತ್ತದೆ. ಅಲ್ಲಿಗೆ ಹೋದಾಗ
ದಿನಕ್ಕೊಂದು ಕುತೂಹಲಕಾರಿ ಘಟನೆಯ ಬಗ್ಗೆ ಚರ್ಚೆಯಾಗುತ್ತಿತ್ತು. ಅಲ್ಲಿ ಬರುತ್ತಿದ್ದ ತರಹೇವಾರಿ ಜನಗಳೂ
ಒಂದೊಂದು ಪಾತ್ರಧಾರಿಗಳಾಗಿ ಕಾಣಿಸುತ್ತಿದ್ದರು.
ಸನ್ನಿ ನಮ್ಮ ಜೊತೆ
ಉಡುಪಿಯಲ್ಲಿ ಓದುತ್ತಿದ್ದ ಬೆನ್ನಿ ಪೌಲ್ ನ ಅಣ್ಣ. ಬೆಂಗಳೂರಿಗೆ ಬಂದ ಹೊಸದರಲ್ಲಿ, ಇಲ್ಲಿನ ನಿಗೂಢ
ಪ್ರಪಂಚವನ್ನು ಪರಿಚಯಿಸುವಲ್ಲಿ ಮತ್ತು ನಮ್ಮನ್ನು ಬೆಂಗಳೂರಿನ ಬದುಕಿಗೆ ಹೊಂದಿಸುವಲ್ಲಿ, ಈ ರೂಮಿನ
ಪಾತ್ರ ಬಹಳ ದೊಡ್ಡದು.
ಸನ್ನಿಯನ್ನು ನೋಡದಿದ್ದವರು
ಸಹ ಸನ್ನಿ ರೂಮಿನ ಬಗ್ಗೆ ಮಾತಾಡುತ್ತಿದ್ದರು. ಯಾರಿಗೋ ಸನ್ನಿಯನ್ನು ಪರಿಚಯಿಸಿದಾಗ ಅವರು: `ನಿಮ್ಮನ್ನು
ಸನ್ನಿ ರೂಮಿನಲ್ಲಿ ನೋಡಿದ್ದೇನೆ’ ಅಂದಿದ್ದರು. ಅಲ್ಲಿನ ಪಾತ್ರದಾರಿಗಳಲ್ಲಿ ಕಡಿಮೆ ಮಾತಾಡುತ್ತಿದ್ದದ್ದೇ
ಸನ್ನಿಯಾದ್ದರಿಂದ, ಅವರ ರೂಮಿಗೇ ತಾವು ಬಂದಿದ್ದೇವೆ ಅಂತ ತುಂಬಾ ಜನರಿಗೆ ಗೊತ್ತಾಗ್ತಿರಲಿಲ್ಲ.
ಅಲ್ಲಿ ಪರಿಚಯವಾದ ಮಾಧವ ಮೂರ್ತಿಯನ್ನು ನಾವೆಲ್ಲಾ ಬಾಯಿ ಬಿಟ್ಟುಕೊಂಡು ನೋಡುತ್ತಿದ್ದೆವು.
13 ಇಸ್ಪೀಟ್ ಎಲೆಗಳನ್ನು ತನಗೆ ಮಾತ್ರ ಕಾಣಿಸುವಂತೆ ಜೋಡಿಸಿಕೊಂಡು, ಷೇರು ಮಾರ್ಕೆಟ್ ನ ಒಳಗುಟ್ಟುಗಳನ್ನು
ನಿರರ್ಗಳವಾಗಿ ಮಾತಾಡುತ್ತಾ, ಪಕ್ಕದವರಿಗೆ ಯಾವ ಎಲೆ ಬೇಕಾಗಬಹುದು ಅಂತ ಊಹಿಸಿಕೊಂಡೇ ಕಾರ್ಡ್ ಎಸೆಯುತ್ತಿದ್ದರು. ಕುದುರೆ ರೇಸ್
ಯಾವತ್ತೂ ತಪ್ಪಿಸುತ್ತಿರಲಿಲ್ಲ. ಅವರ ಮಾತು ಎಷ್ಟು ಚೆನ್ನಾಗಿರುತ್ತಿತ್ತು ಎಂದರೆ, ಅವರು ಪ್ರತೀಸಲ
ಈ ಜೂಜಿನಲ್ಲಿ ದುಡ್ಡು ಕಳ್ಕೋತ್ತಾರೆ ಅನ್ನೋದನ್ನೇ ಮರೆತು ಬಿಡುತ್ತಿದ್ದೆವು.
ಇಸ್ಪೀಟಿನಲ್ಲಿ ಜಾಸ್ತಿ ಸೋಲದ ನನ್ನನ್ನು ಒಂದ್ಸಲ ಕುದುರೆ ರೇಸ್ ಗೂ ಕರ್ಕೊಂಡು
ಹೋಗಿದ್ದರು. ತಲೆ ಬುಡ ಗೊತ್ತಿರದ ನನ್ನ ಕೈಯಲ್ಲಿ ಒಂದಿಪ್ಪತ್ತು ರೂಪಾಯಿ ಕಟ್ಟಿಸಿದರು. ಹೊರಗೆ ಬರುವಾಗ,
ನನ್ನ ಮತ್ತು ಅವರ ಜೇಬಿನಲ್ಲಿ ತಲಾ ಆರುನೂರು ರೂಪಾಯಿ ಕೂತಿದ್ದವು. ತೊಂಬತ್ತನೇ ಇಸವಿಯಲ್ಲಿ ಅದು ದೊಡ್ಡ
ದುಡ್ಡು. `ರೀ, ನಿಮ್ಮ ಗೆರೆ ತುಂಬಾ ಚೆನ್ನಾಗಿದೆ ಕಣ್ರಿ. ನಾಳೆನೂ ಬರೋಣ,’ ಅಂದರು. ಅದೇನಾಯ್ತೋ ಗೊತ್ತಿಲ್ಲ,
ನಾನು ಮಾರನೇ ದಿನ ಹೋಗಲಿಲ್ಲ. ಮಾಧವ ಮೂರ್ತಿ ಮಾತ್ರ ತುಂಬಾನೇ ಬೇಜಾರು ಮಾಡಿಕೊಂಡರು.
`ಇಷ್ಟೊಳ್ಳೆ ಗೆರೆ ಇದ್ದೂ ಎನಕ್ಯಾಶ್ ಮಾಡಿಕೊಳ್ಳದೇ ಇರೋರು ನೀವೊಬ್ಬರೇ ಕಣ್ರಿ’
ಅಂತಿದ್ರು.
ಒಂದಿನ ಸನ್ನಿ ರೂಮಿಗೆ ನಾನು ತಲುಪಿದಾಗ, ಸನ್ನಿ ಮತ್ತು ಮಾಧವ ಮೂರ್ತಿ ಇಬ್ಬರೇ
ಗಂಭೀರವಾಗಿ ಮಾತಾಡ್ತಾ ಇದ್ದರು. `ಅವರು ಹೀಗ್ ಮಾಡ್ತಾರೆ ಅಂತ ಅನ್ಕೊಂಡಿರ್ಲಿಲ್ಲ,’ ಅಂತ ಮಾಧವ ಮೂರ್ತಿ
ಹೇಳಿದಾಗ, ಸನ್ನಿ: `ಅವ್ನು ಸ್ವಲ್ಪ ಹಾಗೇನೆ’ ಅಂತ ಹೇಳ್ತಿದ್ದರು.
`ಯಾರ್ರೀ ಅದು?’ ಅಂತ ಕೇಳಿದೆ.
`ಎಂ ಬಿ ಕಣ್ರಿ. ಮಾಧವ ಮೂರ್ತಿ ಏನೋ ಟಿಂಬರ್ ವ್ಯಾಪಾರ ಮಾಡೋಣ ಅಂತ ಅವನ ಕೈಲಿ
30,000 ಕೊಟ್ಟರೆ, ಇಸ್ಪಿಟ್ಟಿನಲ್ಲಿ ಕಳೆದಿದ್ದಾನೆ,’ ಅಂದ್ರು.
`ಎಲ್ಲಿ? ಹಾನುಬಾಳು ಕ್ಲಬ್ಬಲ್ಲಾ?’ ಅಂತ ಕೇಳಿದೆ.
`ಇಲ್ಲಾ. ದೇವರುಂದ ಜಾತ್ರೇಲಿ. ಅವರ ತಂದೆ ಹತ್ತಿರ ಕೇಳಿದೆ. ಅವನ ಕೈಲಿ ಯಾಕೆ
ದುಡ್ಡು ಕೊಟ್ಟಿದ್ರಿ ಅಂತ ನಂಗೇ ಬೈದರು. ಅವನ ತಂಗಿಗೇನೋ ಮದುವೆಗೆ ಓಡಾಡ್ತಾ ಇದ್ದಾರಂತೆ. ಮದುವೆ
ಮುಗಿದ ಮೇಲೆ ನೋಡೋಣ ಅಂದ್ರು,’ ಅಂತ ಮಾಧವ ಮೂರ್ತಿ ತಲೆ ಕೆರಿತಾ ಹೇಳಿದರು.
ಎಂ ಬಿ ರವಿ ನಮಗೇನು ಹೊಸಬನಲ್ಲ. ಸನ್ನಿ ಜೊತೆ ಶೃಂಗೇರಿಯಲ್ಲಿ ಓದುತ್ತಿದ್ದ.
ಅವನ ಉಗ್ರ ಪ್ರತಾಪಗಳನ್ನು ನಾವು ಕಾರ್ಕಾಳ ಮತ್ತು ಉಡುಪಿಯಲ್ಲಿ ಓದುವಾಗ ಕೇಳುತ್ತಿದ್ದೆವು. ಊರಿನಲ್ಲಿ
ಇದ್ದಾಗ, ಯಾವುದೋ ತರಲೆ ಪೋಲಿಸ್ ಕೇಸ್ ನಲ್ಲಿ ಸಿಕ್ಕಿಕೊಂಡು, ಬೆಂಗಳೂರಿಗೆ ಬಂದು ಸನ್ನಿ ರೂಮಿನಲ್ಲಿ
ಒಂದು ವರ್ಷ ಇದ್ದ. ಒಂದೆರೆಡು ಕಂಪನಿಗಳಲ್ಲಿ ಸೇಲ್ಸ್ ಮನ್ ಕೆಲಸಕ್ಕೂ ಸೇರಿದ್ದ. ಎಲ್ಲಿಗೆ ಕರೆದರೂ
ಇಲ್ಲ ಅಂತ ಹೇಳ್ತಿರಲಿಲ್ಲ. ಆದರೆ, ತನ್ನ ಜೇಬಿನಲ್ಲಿರುವ ಆಸ್ತಿ ವಿವರಗಳನ್ನು ಬಹಿರಂಗವಾಗಿ ಘೋಷಿಸಿ,
ಅದರ ಮೇಲಿನ ಖರ್ಚನ್ನು ಬೇರೆಯವರು ಭರಿಸಬೇಕು ಅಂತ ಹೇಳುವಷ್ಟು ಪ್ರಾಮಾಣಿಕನಾಗಿದ್ದ. ಕೆಲಸಕ್ಕಿಂತ
ಜಾಸ್ತಿ ಸನ್ನಿ ರೂಮಿನಲ್ಲಿ ನೆಡೆಯುತ್ತಿದ್ದ ಇಸ್ಪೀಟು ಟೇಬಲ್ ನಲ್ಲಿ ಹೆಚ್ಚಿನ ಸಮಯ ಕಳೆದು, ಒಂದು
ದಿನ ಸದ್ದಿಲ್ಲದೆ ಹಾನುಬಾಳಿನ ಹತ್ತಿರದ ತನ್ನ ಊರಿಗೆ ಸೇರಿಕೊಂಡಿದ್ದ.
ದೇವರುಂದದ ಜಾತ್ರೆ ಹೆಸರು ಕೇಳಿದ ತಕ್ಷಣ ಅಮ್ಮ ನೆನಪಾಯ್ತು. ಕಾಲೇಜಿನಲ್ಲಿದ್ದಾಗ
ಒಂದ್ಸಲ `ಅಮ್ಮ, ದೇವರುಂದದ ಜಾತ್ರೆಗೆ ಒಂದ್ಸಲ ಹೋಗ್ಬೇಕು. ನೋಡೇ ಇಲ್ಲ,’ ಅಂದಿದ್ದೆ.
ಅಮ್ಮನ ಕಾಲಲ್ಲಿದ್ದಿದ್ದು ಕೈಗೆ ಬರದಿದ್ದು ಹೆಚ್ಚು. `ಅಲ್ಲಿ ಕುಡಿದು, ಇಸ್ಪೀಟ್
ಆಡಿಕೊಂಡು, ಹುಡುಗಿಯರನ್ನ ನೋಡೋಕೆ ಬರೋರೆ ಜಾಸ್ತಿ. ಇವನೊಬ್ಬ ಅಲ್ಲಿಗೆ ಹೋಗೋಕೆ ಕಡಿಮೆ ಇದ್ದ,’ ಅಂತ
ಬೈದಿದ್ದರು. ಅಮ್ಮ ಹೇಳಿದ್ದೇನೂ ಸುಳ್ಳಿರಲಿಲ್ಲ. ಬೇರೆ ಯಾವ ಘನಂದಾರಿ ಉದ್ದೇಶಗಳೂ ನನ್ನ ತಲೆಯಲ್ಲಿ
ಇರಲಿಲ್ಲ. ದೇವರುಂದ ಜಾತ್ರೆಯಲ್ಲಿ ಇಸ್ಪೀಟು ಆಡುವಷ್ಟು ದುಡ್ಡಿಲ್ಲದಿದ್ದರೂ, ಚೆನ್ನಾಗಿ ಬೈನೆ ಕಳ್ಳು
ಮಾತ್ರ ಏರಿಸುತ್ತಿದ್ದೆ. ನಮ್ಮೂರಲ್ಲೂ ಕಳ್ಳು ಸಿಕ್ಕಿದರೂ, ದೇವರುಂದದ ಸುತ್ತ ಮುತ್ತ ಸ್ವಲ್ಪ ಹೇರಳವಾಗೇ
ಸಿಗುತ್ತಿತ್ತು.
ದೇವರುಂದದ ಜಾತ್ರೆಯೆ ಅಂಥದ್ದು. ಅಲ್ಲಿನವರನ್ನು ಕೇಳಿದರೆ, ಸಾವಿರದ ಇನ್ನೂರು
ವರ್ಷಗಳ ಇತಿಹಾಸ ಇದೆ ಅಂತಾರೆ. ಯುಗಾದಿಯ ಸಮಯದಲ್ಲಿ ನೆಡೆಯುವ ಮೂರುದಿನದ ಜಾತ್ರೆ ಅದು. ತುಂಬಾ ಸಂಪ್ರದಾಯಕವಾಗಿ
ನೆಡೆಯುತ್ತದೆ ಅಂದರೆ ತಪ್ಪಾಗಲಾರದು. ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ಎಷ್ಟೋ ಸಂಪ್ರದಾಯಗಳು ನಾವು
ನೋಡುತ್ತಿದ್ದಂತೆ ಕಣ್ಮುಚ್ಚಿವೆ.
ಹಾನುಬಾಳಿನ ಸುತ್ತಾ ಮುತ್ತ, ಇತ್ತೀಚಿನವರೆಗೂ ಬತ್ತದ ಕುಯ್ಲು ಮುಗಿದ ಕೂಡಲೇ,
ಸ್ವಲ್ಪ ಬತ್ತವನ್ನು ಐನೋರಿಗೆ ಕೊಡೋ ಸಂಪ್ರದಾಯವಿತ್ತಂತೆ. ಬತ್ತವನ್ನು, ಕುಲ್ವಾಡಿಗಳು ಮನೆ ಮನೆಯಿಂದ
ಸಂಗ್ರಹಿಸಿ, ತಲೆಮೇಲೆ ಹೊತ್ತುಕೊಂಡು ಹೋಗಿ, ಗುತ್ತಿಯ ಹತ್ತಿರವಿರುವ ಐನೋರ ಮನೆಗೆ ಹಾಕಿ ಬರುತ್ತಿದ್ದರಂತೆ.
ಇತ್ತೀಚಿನ ವರ್ಷಗಲಲ್ಲಿ ಕುಲ್ವಾಡಿಗಳೆಲ್ಲಾ ಬೇರೆ ಕೆಲಸಗಳಿಗೆ ಹೋಗಲಾರಂಬಿಸಿದ ಮೇಲೆ, ಈ ಸಂಪ್ರದಾಯ
ಕೈ ಬಿಟ್ಟಿದ್ದರು.
ಹಂಜುಗೊಡನಹಳ್ಳಿ ವಿಶ್ವಣ್ಣನಿಗೆ ಕೇಳಿದರೆ: `ನೋಡ್ರಿ, ಜನರು ಆರ್ಥಿಕವಾಗಿ
ಪ್ರಭಲರಾಗಿ ಹೋದಂತೆ, ಸಾಮಾಜಿಕ ಸಮಾನತೆ ಕೇಳ್ತಾರೆ. ಮುಂಚೆ ಎಲ್ಲರೂ ಸಂಪ್ರದಾಯಗಳನ್ನು ಸೇವೆ ಅಂತ
ಮಾಡ್ತಿದ್ರು. ಈಗ ಅದಕ್ಕೂ ಕೂಲಿ ಬಂದಿದೆ. ಇಂಥಾ ಸಮಯದಲ್ಲಿ ಸಂಪ್ರದಾಯಗಳು ಮುರಿದು ಬೀಳ್ತಾವೆ ಅಷ್ಟೆ,’
ಅಂತ ಹೇಳಿದ್ರು.
ಎಷ್ಟೇ ಸಂಪ್ರದಾಯಗಳು ಮುರಿದಿದ್ದರೂ, ದೇವರುಂದದ ಜಾತ್ರೆ ಮಾತ್ರ ತನ್ನ ಖ್ಯಾತಿಯನ್ನು
ಕಳೆದುಕೊಂಡಿಲ್ಲ. ಇಲ್ಲಿ ಎಷ್ಟೋ ಹುಡುಗಿಯರಿಗೆ ಗಂಡು ನೋಡಲಾಗುತ್ತದೆ. ಹೆಂಗಸರಂತೂ, ಚಾಚೂ ತಪ್ಪದೆ
ಸಂಪ್ರದಾಯಗಳನ್ನು ಪಾಲಿಸುತ್ತಾರೆ. ಅವರವರ ಪಾಲಿನ ಕೆಲಸಗಳನ್ನು ಸಾಮಾಜಿಕ ಸಮಾನತೆಯ ಬಗ್ಗೆ ಮಾತಾಡದೇ
ಮಾಡುತ್ತಾರೆ.
ಆದರೆ, ಇವೆಲ್ಲಕ್ಕಿಂತ ಕುಖ್ಯಾತಿ ಎಂದರೆ, ಅಲ್ಲಿನ ಅಂದರ್-ಬಾಹರ್. ಜಾತ್ರೆಯಲ್ಲಿ
ಸಂಪ್ರದಾಯಗಳು ಚಾಚೂ ತಪ್ಪದೆ ನೆಡೆಯುವಾಗ, ದೇವಸ್ಥಾನದ ಹತ್ತಿರ ಕಾಡಿನೊಳಗೆ, ಮರದ ಕೆಳಗೆ ಜಮಖಾನ ಹಾಸಿಕೊಂಡು
ಮೂರುದಿನ ನೆಡೆಯುತ್ತೆ ಈ ಆಟ.
ಇದಕ್ಕೇನೂ ಸಾವಿರ ವರ್ಷದ ಇತಿಹಾಸವಿಲ್ಲ. ಆದರೆ, ಯಾವಾಗ ಶುರುವಾಯ್ತು ಅಂತ
ಯಾರಿಗೂ ಸರಿಯಾಗಿ ಗೊತ್ತಿಲ್ಲ. ನಲವತ್ತೈವತ್ತು ವರ್ಷಗಳ ಹಿಂದೆ ಶುರುವಾಗಿರಬಹುದು. ಸುತ್ತಮುತ್ತ ಹಳ್ಳಿಗಳಿಂದ
ಹಿಡಿದು, ದೂರದ ಬಳ್ಳಾರಿಯಿಂದಲೂ ಜನಗಳೂ ಇಲ್ಲಿ ಅಂದರ್-ಬಾಹರ್ ಆಡಲು ಬರುತ್ತಾರೆ. ಮೂರುದಿನಗಳಲ್ಲಿ
ಕೋಟಿಗಟ್ಟಲೆ ದುಡ್ಡು ಜಮಖಾನದ ಮೇಲೆ ಬಿದ್ದು ಹೊರಳಾಡುತ್ತದೆ ಮತ್ತು ಗೋಣಿಚೀಲಗಳಲ್ಲಿ ತುಂಬಿಸಲ್ಪಡುತ್ತದೆ.
ಆ ಮೂರು ದಿನಗಳಲ್ಲಿ ಯಾರ ಮನೆ ಹಾಳಾಗುತ್ತದೆ ಮತ್ತು ಯಾರ ಮನೆ ಉದ್ದಾರವಾಗುತ್ತೆ ಅಂತ ಹೇಳಲು ಕಷ್ಟ.
ಎಲ್ಲಾ ಜುಗಾರಿ ಕೇಂದ್ರಗಳಂತೆ, ದೇವರುಂದದ ಜಾತ್ರೆಯಲ್ಲಿ ಸಹ ಸಣ್ಣ ಪ್ರಮಾಣದಲ್ಲಿ
ಶುರುವಾಯ್ತಂತೆ. ಎಪ್ಪತ್ತರ ದಶಕದಲ್ಲಿ, ಹಾಸನದ ರೌಡಿಗಳಾದ ಮಾರಿಗುಡಿ ಮತ್ತು ನಾಗರಾಜರ ಕಣ್ಣು ಇದರ
ಮೇಲೆ ಬಿತ್ತಂತೆ. ಅವರು ಬರಲು ಶುರು ಮಾಡಿದಮೇಲೆ, ಇದು ದೊಡ್ಡ ಪ್ರಮಾಣದಲ್ಲಿ ಬೆಳೆಯಲಾರಂಭಿಸಿತಂತೆ.
ಕೆಲವು ಸಲ ಪೋಲಿಸ್ ರೈಡ್ ಆದರೂ, ದುಡ್ಡುಕೊಟ್ಟು `ಸರಿ’ ಮಾಡಿಕೊಂಡರಂತೆ. ಆ ರೌಡಿಗಳಿಬ್ಬರೂ ಕೊಲೆಯಾದರೂ,
ದೇವರುಂದದ ಅಂದರ್-ಬಾಹರ್ ಖದರ್ ಮಾತ್ರ ಹಾಗೇ ಉಳಿದಿದೆ. ಒಮ್ಮೊಮ್ಮೆ ಅನ್ನಿಸುತ್ತೆ, ಅಂದರ್-ಬಾಹರ್
ಇಲ್ಲದಿದ್ದರೆ, ದೇವರುಂದದ ಜಾತ್ರೆ ಇಷ್ಟೊಂದು ವೈಭವ ಉಳಿಸಿಕೊಳ್ಳುತ್ತಿರಲಿಲ್ಲ ಅಂತ.
ಹಣದ ಪ್ರಭಾವ ಜಾಸ್ತಿಯಾದಂತೆ, ಮಲೆನಾಡಿನ ಕಡೆ ಸುಗ್ಗಿ ಹಬ್ಬಗಳೂ ನಿಧಾನವಾಗಿ
ಕಣ್ಮರೆಯಾಗುತ್ತಿವೆ. ನಮ್ಮೂರ ಸುಗ್ಗಿಯನ್ನಂತೂ, ನಮ್ಮ ತಂದೆ ಕೂಡ ನೋಡಿಲ್ಲ. ಆದರೆ, ಎಲ್ಲೆಲ್ಲಿ ಉಳಿದಿವೆಯೋ,
ಅಲ್ಲಿ ಮಾತ್ರ ತುಂಬಾ ಶ್ರದ್ಧೆಯಿಂದ ನೆಡೆಯುತ್ತದೆ. ಸುಗ್ಗಿ ನೆಡೆಯುವಷ್ಟು ದಿನವೂ, ಊರಿನವರು ಗುಂಡು-ತುಂಡುಗಳಿಂದ
ದೂರ. ತಣ್ಣೀರಿನ ಸ್ನಾನ ಮತ್ತು ಕಾಲಿಗೆ ಚಪ್ಪಲಿ ಕೂಡ ಹಾಕುವುದಿಲ್ಲ.
ಇದಕ್ಕೆಲ್ಲಾ ಅಪವಾದವಿದ್ದದ್ದೇ ಅವತಿಯ ಸುಗ್ಗಿ. ಚಿಕ್ಕಂದ್ದಿನಲ್ಲಿ ಸರಳತ್ತೆ ಮನೆಗೆ ಹೋಗುವುದೆಂದರೆ ನಮಗೆಲ್ಲಾ
ಖುಷಿ. ದೊಡ್ಡವರು ಕೊಡುವ ಎರಡೆರಡು ರೂಪಾಯಿಗಳು ಸೇರಿ, ಹತ್ತಿಪ್ಪತ್ತು ರೂಪಾಯಿಗಳನ್ನು ಜೇಬಿನಲ್ಲಿ
ಸಿಕ್ಕಿಸಿಕೊಂಡು, ಸುಗ್ಗಿಯಲ್ಲಿ ಮಾರಾಟವಾಗುವ ಗಿಲಕಿಗಳನ್ನೆಲ್ಲ ಕೊಂಡು, ಟರ್ರೋ… ಅಂತ ಶಬ್ಧ ಮಾಡಿಕೊಂಡು
ಓಡಾಡುತ್ತಿದ್ದೆವು.
ಅಲ್ಲಿನ ವಿಶೇಷ ಎಂದರೆ, ಗುಂಡು-ತುಂಡು. ಸುಗ್ಗಿಯ ಸಮಯದಲ್ಲಿ ಯಾರ ಮನೆಗೆ
ಹೋದರೂ, ಯಥೇಚ್ಚವಾಗಿ ಮಾಂಸದೂಟ ತಯಾರಾಗಿರುತ್ತಿತ್ತು.
ಜೊತೆಯಲ್ಲಿ, ಕಳ್ಳು ಮತ್ತು ವಿಸ್ಕಿ ಧಾರಾಳವಾಗಿ ಇಟ್ಟಿರುತ್ತಿದ್ದರು. ದೇವರು ಏಳುವ ಹೊತ್ತಿಗೆ, ಜನರ
ಮೈಯಲ್ಲೇ ದೇವರು ಬಂದಿರುವಂತೆ ಗುಂಡು ಕೆಲಸ ಮಾಡುತ್ತಿತ್ತು.
ಇದಕ್ಕೊಂದು ಕಥೆಯಿದೆ. ತುಂಬಾ ವರ್ಷಗಳ ಮುಂಚೆ, ಎಲ್ಲಾ ಕಡೆಗಳಂತೆ ಅವತಿಯಲ್ಲೂ
ಸುಗ್ಗಿ ಸಸ್ಯಹಾರಿ ಹಬ್ಬವಾಗಿತ್ತಂತೆ. ಸಂಪ್ರದಾಯದ ಪ್ರಕಾರ, ದೇವರು ಏಳುವ ಮುಂಚೆ, ಊರವರು ಊಟ ಸಹ
ಮಾಡುವುದಿಲ್ಲ. ಒಂದು ಸುಗ್ಗಿಯಲ್ಲಿ ಯಾಕೋ ದೇವರು ಏಳುವುದು ತಡವಾಯ್ತಂತೆ. ದಿನವಿಡೀ ಕಳೆದು ಮಧ್ಯರಾತ್ರಿಯಾದರೂ
ದೇವರು ಏಳಲೇಇಲ್ಲ. ಕಾದೂ ಕಾದೂ ಸುಸ್ತಾಗಿ, ಊರವರು ಕಣ್ಣುಬಿಡಲೂ ಆಗದೆ ಮಲಗಿದರು. ಬೆಳಗ್ಗಿನ ಜಾವದಲ್ಲಿ
ದೇವರು ಎದ್ದೇ ಬಿಡ್ತು. ಕುಣಿಯುವುದಿರಲಿ, ಊರವರಿಗೆ ನಿಲ್ಲಲೂ ತ್ರಾಣವಿರಲಿಲ್ಲ.
ಆದರೆ, ತಮಟೆ ಬಡಿಯುವನೊಬ್ಬ ಮಾತ್ರ ಹಿಂದಿನ ದಿನ ಚೆನ್ನಾಗಿ ಗುಂಡು ಹಾಕಿ,
ಮಾಂಸದೂಟ ಮಾಡಿ ಮಲಗಿದ್ದ. ದೇವರು ಎದ್ದ ಕೂಡಲೆ, ತಮಟೆ ಬಡಿಯುತ್ತಾ, ಸಕತ್ತಾಗಿ ಕುಣಿದ. ಅದನ್ನು ನೋಡಿದ
ದೇವರು ಅಪ್ಪಣೆ ಕೊಡಿಸಿತಂತೆ: `ನಾನು ಬರುವವರೆಗೆ ಹಸಿದಿದ್ದು ಎದ್ದು ನಿಲ್ಲಲೂ ತಾಕತ್ತಿಲ್ಲದೆ ಹೊದರೆ
ಹೇಗೆ. ತಮಟೆ ಬಡಿಯುವವನನ್ನು ನೋಡಿ, ನನ್ನ ಹ್ಯಾಗೆ ಕರ್ಕೊಳ್ತಿದ್ದಾನೆ. ಮುಂದಿನ ಸುಗ್ಗಿಯಿಂದ, ಎಲ್ಲರೂ
ಅವನ ಥರ ಚೆನ್ನಾಗಿ ಕುಡಿದು-ತಿಂದು, ನಾನು ಬರುವಾಗ ಸಂತೋಷದಿಂದ ಕರ್ಕೋಬೇಕು.’
ದೇವರೇ ಅಪ್ಪಣೆ ಕೊಡಿಸಿದ ಮೇಲೆ ಇನ್ನೇನು. ಅವತಿಯ ಸುಗ್ಗಿ ಸ್ವರ್ಗವಾಗಿ ಹೋಗಿತ್ತು.
ಸುಗ್ಗಿ ಪೂಜೆ ಮುಗಿದ ಮೇಲೆ, ಹೊರಗಡೆಯಿಂದ ಬಂದ ನೆಂಟರನ್ನು ಮನೆಗೆ ಕರೆಯುವುದು ವಾಡಿಕೆ. ಹೋದಲ್ಲೆಲ್ಲ
ಒಂದ್ಸೊಲ್ಪ ಗುಂಡು ಮತ್ತು ಎರಡು ತುಂಡು ಬಾಯಿಗೆ ಹಾಕಿಕೊಂಡರೂ ಸಾಕು, ನಾಲ್ಕು ದಿನದ `ಕೋಟಾ’ ಮುಗಿದೇ
ಹೋಗುತ್ತಿತ್ತು. ಅವರವರ ಮನೆಗೆ ಹ್ಯಾಗೆ ಕಾರ, ಜೀಪು ಡ್ರೈವಿಂಗ್ ಮಾಡಿಕೊಂಡು ಹೊಗ್ತಿದ್ದರು ಅನ್ನೋದೇ
ಆಶ್ಚರ್ಯ.
ದೊಡ್ಡವರಾದಮೇಲೆ ಅವತಿಯ ಸುಗ್ಗಿಗೆ ಹೋಗಲೂ ಆಗಲೇ ಇಲ್ಲ. ಒಂದೆರೆಡು ವರ್ಷಗಳ
ಹಿಂದೆ, ಸರಳತ್ತೆ ಮಗ ರಘು ಅಣ್ಣನ ಮನೆ ಗೈಹಪ್ರವೇಶದ ಸಮಯದಲ್ಲಿ ಯಾಕೋ ಸುಗ್ಗಿ ನೆನಪಾಯ್ತು.
`ರಘಣ್ಣ, ಈ ಸತಿ ಅವತಿ ಸುಗ್ಗಿಗೆ ಬರಬೇಕು ಕಣ್ರಿ’, ಅಂದೆ.
`ಅದೆಲ್ಲಿದೆ ಸುಗ್ಗಿ? ಅದು ನಿಂತು ಐದಾರು ವರ್ಷ ಆಯ್ತು,’ ಅಂದರು.
`ಯಾಕೆ? ಏನಾಯ್ತು?’ ಅಂದೆ.
`ಊರವರ ಸಣ್ಣ ಜಗಳ… ಮಧ್ಯ ರಾಜಕೀಯ. ಎಲ್ಲಾ ಸೇರಿ ಕೋರ್ಟ್ ಮೆಟ್ಟಿಲೂ ಹತ್ತಿ,
ನಿಂತೇ ಹೋಯ್ತು,’ ಅಂದರು. ಎಷ್ಟೇ ಕೇಳಿದರೂ, ವಿವರಗಳನ್ನು ಹೇಳಲಿಲ್ಲ.
ಕೊನೆಗೆ, ಅವತಿ ಕಡೆಯಲ್ಲಿದ್ದ ನನ್ನ ಗೆಳೆಯರನ್ನು ಕೇಳಿ ಸ್ವಲ್ಪ ವಿವರಗಳನ್ನು
ತಿಳ್ಕೊಂಡೆ. ಸಂಪ್ರದಾಯದಂತೆ, ದೀವರ ಮಕ್ಕಳು ಸುಗ್ಗಿ
ತೇರು ಕಟ್ಟುತ್ತಿದ್ದರಂತೆ ಮತ್ತು ಅದನ್ನು ಗೌಡರು ಎಳೆಯುತ್ತಿದ್ದರಂತೆ. ದೀವರ ಮಕ್ಕಳೂ ತಾವೂ ಸಹ ಗೌಡರು
ಅಂತ ಹೇಳ್ಕೊಂಡ್ರೂ, ಗೌಡರು ಅಷ್ಟು ಸುಲಭವಾಗಿ ಅವರನ್ನು ಒಪ್ಪಿಕೊಳ್ಳೋದಿಲ್ಲ. ಮುಂಚಿನಿಂದಲೂ ಅವರು
ಆರ್ಥಿಕವಾಗಿ ಹಿಂದುಳಿದ್ದವರು ಕೂಡ. ಇತ್ತೀಚಿನ ದಿನಗಳಲ್ಲಿ ಅವರು ಕೂಡ ಕಾಫಿತೋಟ ಮಾಡಿ, ಮಕ್ಕಳನ್ನು
ಹೊರಗಡೆ ಓದಿಸಿ, ಕಾರು, ಜೀಪು ಇಟ್ಟುಕೊಂಡು ಅನಕೂಲವಾಗಿದ್ದಾರೆ.
ಒಂದು ವರ್ಷ ಸುಗ್ಗಿಯ ಸಮಯದಲ್ಲಿ ದೀವರ ಮಕ್ಕಳು ತೇರು ಕಟ್ಟಲು ಒಪ್ಪಲಿಲ್ಲ.
ಎಲ್ಲರೂ ಸೇರಿ ತೇರು ಕಟ್ಟೋಣ ಮತ್ತು ಎಳೆಯೋಣ. ದೀವರ ಮಕ್ಕಳೇ ಏಕೆ ತೇರು ಕಟ್ಟಬೇಕು? ಗೌಡರೇ ಏಕೆ ಅದನ್ನು
ಎಳೆಯಬೇಕು? ಅಂತ ವರಾತ ತೆಗೆದರು. ಸರಿ, ಊರವರೆಲ್ಲಾ ಪಂಚಾಯ್ತಿ ಕೂತರು. ರಘು ಆಣ್ಣನ ಚಿಕ್ಕಮ್ಮ ಮಸ್ಕಲಿ
ರತ್ನತ್ತೆ ದೀವರ ಮಕ್ಕಳ ಪರ ವಹಿಸಿದರು. ಪಂಚಾಯ್ತಿ ಚುನಾವಣೆಯಲ್ಲಿ ಕುಟುಂಬದವರ್ಯಾರೂ ಅವರ ಪರ ನಿಲ್ಲದಿದ್ದರಿಂದ,
ಅವರೇ ದೀವರ ಮಕ್ಕಳಿಗೆ ಹಚ್ಚಿಕೊಟ್ಟು ಚಿತಾವಣೆ ನೆಡೆಸಿದ್ದಾರೆ ಅಂತ ಗೌಡರುಗಳು ಭಾವಿಸಿದರು. ಏನೇ
ಮಾಡಿದರೂ, ಗೌಡರುಗಳು ಸಂಪ್ರದಾಯ ಬದಲಾವಣೆಗೆ ಒಪ್ಪಲಿಲ್ಲ. ತೇರು ಕಟ್ಟದಿದ್ದರೆ ದೀವರ ಮಕ್ಕಳಿಗೆ ಬಹಿಷ್ಕಾರ
ಹಾಕುವುದಾಗಿ ಧಮಕಿ ಹಾಕಿದರು. ದೀವರ ಮಕ್ಕಳು ಕೋರ್ಟ್ ಮೆಟ್ಟಿಲು ಹತ್ತಿದರು. ಅಲ್ಲಿಗೆ ನೆಗೆದು ಬಿತ್ತು
ಅವತಿಯ ಸುಗ್ಗಿ.
ಯಾಕೋ ಕಸಿವಿಸಿಯಾಯ್ತು. ಬರಿ ತೇರು ಯಾರು ಕಟ್ಟಬೇಕು ಅನ್ನೋ ವಿಷಯಕ್ಕೆ ಸುಗ್ಗೀನೇ
ಬಲಿ ಕೊಡೋದೇ? ದೇವರುಂದ ಜಾತ್ರೆಯಲ್ಲೂ ಈ ಥರದ ಸಂಪ್ರದಾಯಗಳಿದ್ದಾವೆ ಮತ್ತೆ ಅಲ್ಲೂ ಬೇರೆ ಜಾತಿಯವರು
ಪ್ರಭಲರಾಗಿದ್ದಾರೆ. ಯಾವುದೇ ವ್ಯತ್ಯಾಸಗಳಿದ್ದರೂ, ತೇರು ಕಟ್ಟಿ, ಜಾತ್ರೆ ಶುರು ಮಾಡಿಕೊಟ್ಟು, ಜಮಖಾನದ
ಹತ್ತಿರ ಹೊರಡುತ್ತಾರೆ.
ಅವತಿಯಲ್ಲಿ ದೇವರು, ಗುಂಡು-ತುಂಡಿನ ಜೊತೆ, ಅಂದರ್-ಬಾಹರ್ ಗೂ ಅಪ್ಪಣೆ ಕೊಡಿಸಿದ್ದರೆ,
ಸುಗ್ಗಿ ಇನ್ನೂ ಸ್ವಲ್ಪ ಕಾಲ ಉಳಿಯುತ್ತಿತ್ತೇನೋ ಅಂತ ಅನ್ನಿಸ್ತು.
ಮಾಕೋನಹಳ್ಳಿ ವಿನಯ್ ಮಾಧವ್
naanu Sringeriyalli ooduttidaga "Sunny" nanna jothe hostelnalli eedda.aaga avana jothe N.R.Purada byrigalu eeddaru. aagaloo saha kaage ennuvana roominalli 3 eele joragi nadithtitthu.neena story oodi aadelavoo nenapayithu....cheers to SUNNY POUL
ಪ್ರತ್ಯುತ್ತರಅಳಿಸಿ