ಬ್ರೇಕಿಂಗ್
ನ್ಯೂಸ್…..
ಯಾವುದೇ
ಗಡಿಬಿಡಿಯಿಲ್ಲದೆ, ಹೈಕೋರ್ಟ್ ಕಡೆ ಹೋಗುವುದೋ, ಅಥವಾ ಪ್ರೆಸ್ ಕ್ಲಬ್ ಕಡೆಯೋ ಅಂತ ಯೋಚಿಸುತ್ತಾ ಹೆಲ್ಮೆಟ್
ತೆಗೆದುಕೊಳ್ಳುವಾಗಲೇ ರವಿ ಬೆಳೆಗೆರೆಯಿಂದ ಫೋನ್ ಬಂತು.
`ವಿನಯ್,
ನಿಮಗೆ ಬಾಣಸವಾಡಿ ಇನ್ಸಪೆಕ್ಟರ್ ಛಲಪತಿ ಗೊತ್ತಾ?’
`ಇಲ್ಲಾ
ಸರ್, ಹೆಸರೇ ಕೇಳಿಲ್ಲ.ಯಾಕ್ಸಾರ್ ? ಏನ್ಸಮಾಚಾರ?’ ಅಂತ ಕೇಳಿದೆ.
`ಸ್ವಲ್ಪ
ಹುಡುಕಿ ವಿನಯ್. ಬೆಂಗಳೂರಿಗೆ ಹೊಸಬ ಅಂತ ಕಾಣುತ್ತೆ. ಒಂದು ಒಳ್ಳೆ ಕೇಸ್ ಹಿಡ್ದಿದ್ದಾನೆ ಕಣ್ರಿ.
ಸುಮಾರು ಮರ್ಡರ್ ಮಾಡಿದ್ದಾರೆ ಅಂತ ಕಾಣುತ್ತೆ. ಅವರೆಲ್ಲಾ ಮೈಸೂರಿನಲ್ಲಿ ಅರೆಸ್ಟ್ ಆಗಿದ್ದ ಕತ್ತೆ
ಸೀನನ ಗ್ಯಾಂಗ್ ನವರಾ ಅಂತ ಬೇಕಿತ್ತು,’ ಅಂದ್ರು.
`ಬಾಣಸವಾಡಿದಾದ್ರೆ
ತೊಂದರೆ ಇಲ್ಲ ಸರ್. ನೋಡ್ತೀನಿ,’ ಅಂದೆ.
`ಮಧ್ಯಾಹ್ನದೊಳಗೆ
ಬೇಕು ವಿನಯ್. ಇವತ್ತು ಎಡಿಷನ್ ಡೆಡ್ ಲೈನ್,’ ಅಂದರು.
ಆಗೆಲ್ಲ
ಬೆಂಗಳೂರಿನ ಕ್ರೈಂ ಸಮಸ್ಯೆಗಳೇ ವಿಚಿತ್ರವಾಗಿದ್ದವು. ತಿಂಗಳಿಗೊಂದ್ಸಾರಿ ಟ್ಯಾನರಿ ರೋಡ್ ನಲ್ಲಿ ಕೋಮುಗಲಭೆ,
ವಾರಕ್ಕೊಂದ್ನಾಲ್ಕು ಕೊಲೆ, ಸರ ಅಪಹರಣ… ಹೀಗೆ. ರೌಡಿಗಳ ಬೀದಿ ಕಾಳಗಗಳೂ ಕಮ್ಮಿಯಾಗಿದ್ದರಿಂದ, ಸುದ್ದಿಗಾಗಿ
ಕ್ರೈಂ ರಿಪೋರ್ಟರ್ ಗಳು ಸ್ವಲ್ಪ ಪರದಾಡುತ್ತಿದ್ದರು.
ಅಲ್ಲೊಂದು,
ಇಲ್ಲೊಂದು ಮೊಬೈಲ್ ಫೋನ್ ಗಳು, ಖಾಸಗಿ ಟೆಲಿವಿಷನ್ ಚಾನೆಲ್ ಗಳೂ ಕಮ್ಮಿ. ನಮಗೆ ಸುದ್ದಿ ಕೊಡುವ ಪೋಲಿಸ್
ಆಫಿಸರ್ ಗಳು, ಸ್ಟೇಶನ್ ಹೊರಗಡೆ ಹೋಗಿದ್ದರೆ, ಅವರನ್ನು ಹುಡುಕಿಕೊಂಡು ಹೋಗಬೇಕಿತ್ತು. ನಾನು ಆಗಷ್ಟೆ
ಹೈಕೋರ್ಟ್ ರಿಪೋರ್ಟಿಂಗ್ ಕೂಡ ಶುರು ಮಾಡಿಕೊಂಡಿದ್ದೆ.
ಇವನ್ಯಾವನಪ್ಪಾ
ಕತ್ತೆ ಸೀನ ಅಂದ್ರೆ? ಎಲ್ಲೂ ಕೇಳಿಲ್ಲವಲ್ಲಾ? ಅಂದ್ಕೊಂಡು ಸಿದ್ದಪ್ಪನಿಗೆ ಫೋನ್ ಮಾಡಿದೆ. ಸಿದ್ದಪ್ಪ
ಆಗ ಫ್ರೇಜರ್ ಟೌನ್ ಸಬ್ ಇನ್ಸಪೆಕ್ಟರ್ ಆಗಿದ್ದರು. `ಸಾಹೇಬರು ಡಿಕನ್ಸನ್ ರೋಡ್ ಹತ್ತಿರ ಹೋಗಿದ್ದಾರೆ.
ಏನೋ ಲಾ ಅಂಡ್ ಆರ್ಡರ್ ಪ್ರಾಬ್ಲಂ,’ ಅಂತ ಸ್ಟೇಷನ್ ನಲ್ಲಿ ಮಾಹಿತಿ ಸಿಕ್ಕಿತು.
ಅಲ್ಲಿಗೆ
ಹೋದಾಗ ಮೊದಲು ಸಿಕ್ಕಿದ್ದು ಎಸಿಪಿ ಗಣಪತಿ. ಅದ್ಭುತವಾದ ಪೋಲಿಸ್ ಅಧಿಕಾರಿ, ಮಾತು ಕಮ್ಮಿ. ಅವರಿಂದ
ಸುದ್ದಿ ತೆಗೆಯುವುದು ಸಾಧ್ಯವೇ ಇಲ್ಲದ ವಿಷಯ. ಅವರಿದ್ದಾಗ, ಕೆಳ ಅಧಿಕಾರಿಗಳು ಮಾತಾಡುವುದನ್ನು ಊಹಿಸಲೂ
ಸಾಧ್ಯವಿಲ್ಲ.
`ಏನು
ವಿನಯ್? ಇಷ್ಟು ದೂರ ಬಂದಿದ್ದು?’ ಅಂದರು.
`ಏನಿಲ್ಲ
ಸರ್. ಏನೋ ಪ್ರಾಬ್ಲಂ ಅಂತ ಸುದ್ದಿ ಬಂತು. ಏನೂ ಕೆಲಸ ಇರಲಿಲ್ಲ. ಹಾಗೇ ಬಂದೆ,’ ಅಂದೆ.
ಯಾಕೋ
ನನ್ನ ಮಾತು ನಂಬಿದಂತೆ ಕಾಣಲಿಲ್ಲ. `ಹೌದಾ? ಇಷ್ಟು ಸಣ್ಣ ಪ್ರಾಬ್ಲಂಗಳಿಗೆ ನೀವು ಜಾಗಕ್ಕೆ ಬಂದಿದ್ದು
ನಾನು ನೋಡೇ ಇಲ್ಲಾ?’ ಅಂದರು. `ಯಾಕೋ ತಗುಲಿಕೊಂಡೆ’ ಅಂತ ಸುತ್ತ ನೋಡಿದೆ. ಸಿದ್ದಪ್ಪ ದೂರದಲ್ಲಿ ನಾಲ್ಕೈದು
ಪೋಲಿಸರಿಗೆ ಏನೋ ಹೇಳುತ್ತಿದ್ದರು. `ಇಲ್ಲಾ ಸರ್, ಯಾರೋ ಊಟಕ್ಕೆ ಸಿಕ್ತೀನಿ ಅಂದಿದ್ದರು. ಹಾಗೇ ಇದನ್ನೂ
ನೋಡಿಕೊಂಡು ಹೋಗೋಣ ಅಂತ ಬಂದೆ,’ ಅಂದವನೇ ಅಲ್ಲಿಂದ ಮುಂದಕ್ಕೆ ಹೊರಟು, ಸಿದ್ದಪ್ಪನ ಹತ್ತಿರ ನಿಲ್ಲಿಸಿದೆ.
ಜಾಸ್ತಿಹೊತ್ತು
ಮಾತಾಡಿದರೆ ಎಡವಟ್ಟಾಗುತ್ತದೆ ಅಂತ ನೇರವಾಗಿ ವಿಷಯಕ್ಕೆ ಬಂದೆ. `ಬಾಣಸವಾಡಿಯಲ್ಲಿ ಹಿಡ್ಕೊಂಡಿದ್ದಾರಲ್ಲ,
ಅವರೆಲ್ಲಾ ಕತ್ತೆ ಸೀನನ ಗುಂಪಿನವರಾ?’ ಅಂತ ಕೇಳಿದೆ.
`ಕತ್ತೆ
ಸೀನ ಅಂದ್ರೆ ಯಾರು? ಇದೆಲ್ಲಾ ಈಗ ಬರೆಯೋಕೆ ಹೋಗಬೇಡ. ಈ ಗ್ಯಾಂಗ್ ನಲ್ಲಿ ಒಬ್ಬ ಕೃಷ್ಣ ಅಂತ, ಶ್ರೀರಂಗಪಟ್ಟಣದ
ಜೈಲಿಂದ ತಪ್ಪಿಸಿಕೊಂಡು ಬಂದಿದ್ದ. ಇವರಷ್ಟು ಕೆಟ್ಟ ಕೊಲೆಗಡುಕರನ್ನ ನಾನು ಸರ್ವಿಸ್ ನಲ್ಲೇ ನೋಡಿಲ್ಲ.
ಗಣಪತಿ ಸಾಹೇಬರು ಮತ್ತೆ ಸುರೇಶ್ ಬಾಬು ಸಾಹೇಬರು ಪರ್ಸನಲ್ ಆಗಿ ಮಾನಿಟರ್ ಮಾಡ್ತಿದ್ದಾರೆ. ಮೂರ್ನಾಲ್ಕು
ಟೀಮ್ ಇನ್ವೆಸ್ಟಿಗೇಟ್ ಮಾಡ್ತಾಇವೆ. ನಾನೂ ಇದ್ದೀನಿ. ಹದಿನೈದು ದಿನ ತಾಳು, ಎಲ್ಲಾ ಡೀಟೇಲ್ಸ್ ಕೊಡ್ತೀನಿ.
ಈಗ ಹೊರಡು ನೀನು,’ ಅಂದರು.
ಸರಿ,
ರವಿ ಬೆಳೆಗೆರೆಗೆ ಫೋನ್ ಮಾಡಿ ವಿಷಯ ಹೇಳಿದೆ. `ಅಷ್ಟು ಸಾಕು ಬಿಡಿ. ಇದೇ ಬೇಕಾಗಿದ್ದು,’ ಅಂದ್ರು.
`ಸರ್,
ಕತ್ತೆ ಸೀನ ಅಂದ್ರೆ ಯಾರು. ಅದು ಇವರಿಗೆ ಗೊತ್ತಿಲ್ಲ,’ ಅಂದೆ.
`ನಾಳೆ
ನಮ್ಮ ಎಡಿಷನ್ ನೋಡಿ,’ ಅಂದ್ರು ರವಿ.
ಮಾರನೇ
ದಿನ ಹಾಯ್ ಬೆಂಗಳೂರಿನಲ್ಲಿ ಮುಖಪುಟದಲ್ಲಿ ಬಂದಿತ್ತು: `ಕತ್ತೆ ರಕ್ತ ಕುಡಿದು…’ ಅಂತ.
ಸುಮಾರು
1994 ರಲ್ಲಿ ಮೈಸೂರಿನ ಎಸಿಪಿ ತಮ್ಮಯ್ಯ ಎಂಬ ಆಫಿಸರ್ ಈ ಗ್ಯಾಂಗನ್ನು ಬಂದಿಸಿದ್ದರಂತೆ. ಗುಂಪಿನ ನಾಯಕನಾದ
ಸೀನ ಎಂಬುವವನಿಗೆ ವಿಚಿತ್ರ ಖಯಾಲಿ ಇತ್ತಂತೆ. ಅಮವಾಸ್ಯೆಯ ದಿನ, ದೇವತೆಯನ್ನು ಪೂಜೆ ಮಾಡಿ, ಕತ್ತೆಯ
ರಕ್ತವನ್ನು ಇಂಜೆಕ್ಷನ್ ಸಿರಿಂಜ್ ನಲ್ಲಿ ಹೀರಿ, ಅದನ್ನು ಕುಡಿದು ದರೋಡೆ ಮಾಡಲು ಹೊರಡುತ್ತಿದ್ದನಂತೆ.
ಕೈಗೆ ಸಿಕ್ಕಿದವರನ್ನು ಕೊಲೆ ಮಾಡಿ, ಅವರಲ್ಲಿದ್ದದನ್ನು ಲೂಟಿಮಾಡುತ್ತಿದ್ದರಂತೆ. ಹೆಂಗಸರಿದ್ದರೆ,
ಅವರನ್ನು ರೇಪ್ ಮಾಡುತ್ತಾ, ಅವರ ಕುತ್ತಿಗೆಯನ್ನು ಸೀಳುತ್ತಿದ್ದರಂತೆ. ಅವರು ಸಾಯುವಾಗ ಹೊರಡುವ ಸದ್ದನ್ನು
ಕೇಳುತ್ತಾ, ಇವರುಗಳು ಕೇಕೆ ಹಾಕುತ್ತಿದ್ದರಂತೆ. ಗಂಡಸರನ್ನೂ ಕೆಲವು ಬಾರಿ ಲೈಂಗಿಕ ಹಿಂಸೆಗೆ ಗುರಿಪಡಿಸಿ
ಕೊಲ್ಲುತ್ತಿದ್ದರಂತೆ. ಮೈಸೂರು ಪೋಲಿಸರು ಇವರನ್ನು ಬಂಧಿಸುವ ಹೊತ್ತಿಗೆ, ಇವರು 10-12 ಕೊಲೆಗಳನ್ನು
ಮಾಡಿದ್ದರಂತೆ.
ಇವರ
ಗುಂಪಿನ ಕೃಷ್ಣ ತಪ್ಪಿಸಿಕೊಂಡು ಬಂದು, ಹೊರಗಡೆ ಇದ್ದರವನ್ನು ಕಲೆಹಾಕಿ, ಮತ್ತೆ ಕೊಲೆಗಳನ್ನು ಆರಂಭಿಸಿದ್ದ.
ಅವನ ಗುಂಪಿನವರನ್ನೇ ಬಾಣಸವಾಡಿಯ ಪೋಲಿಸರು ಹಿಡಿದದ್ದು.
ಈ
ಸುದ್ದಿ ಬಂದ ಎರಡೇ ದಿನಗಳಲ್ಲಿ ಪೋಲಿಸ್ ಕಮೀಷನರ್ ರೇವಣ್ಣಸಿದ್ದಯ್ಯ ಪ್ರೆಸ್ ಕಾನ್ಫರೆನ್ಸ್ ಮಾಡಿ,
ಈ ಗುಂಪು ಮಾಡಿದ್ದ 20ಕ್ಕೂ ಹೆಚ್ಚು ಕೊಲೆಗಳನ್ನು ಬಹಿರಂಗಪಡಿಸಿದರು. ನಮ್ಮ ಪೇಪರ್ ನಿಂದ ಹರ್ಷ ಹೋಗಿದ್ದ.
ಮಧ್ಯಾಹ್ನದ ಹೊತ್ತಿಗೆ ಸುರೇಶ್ ಬಾಬು ನನಗೆ ಫೋನ್ ಮಾಡಿ, ಬರಲು ಹೇಳಿದರು.
ಅಡಿಷನಲ್
ಕಮೀಷನರ್ ಆಗಿದ್ದ ಸುರೇಶ್ ಬಾಬು ಕಂಡರೆ ನನಗೆ ಈಗಲೂ ಗೌರವ. ನಗುತ್ತಲೇ ಅವರ ಕೋಣೆಗೆ ಹೋದವನೇ: `ಕಂಗ್ರಾಚ್ಯುಲೇಷನ್ಸ್
ಸರ್,’ ಎಂದೆ.
ಗಂಭೀರವಾಗಿ
ಕುಳಿತಿದ್ದ ಸುರೇಶ್ ಬಾಬು, : `ವಿನಯ್, ರವಿಗೆ ಈ ಗ್ಯಾಂಗ್ ಬಗ್ಗೆ ಇನ್ಫರ್ಮೇಶನ್ ಯಾರು ಕೊಟ್ಟಿದ್ದು?’
ತಬ್ಬಿಬ್ಬಾದ
ನಾನು: `ನಂಗೊತ್ತಿಲ್ಲ ಸರ್… ಅವರಿಗೇ ಯಾವುದೋ ಕಡೆಯಿಂದ ಬಂದಿರಬೇಕು,’ ಅಂದೆ.
`ಮೈಸೂರಿಂದ
ಬಂದಿರೊದು ನಂಗೆ ಗೊತ್ತು. ಅದೇ ಗ್ಯಾಂಗಿನವರು ಇವರು ಅಂತ ಯಾರು ಕೊಟ್ಟಿದ್ದು?’ ಅಂತ ಕೇಳಿದರು.
ಸಾಧಾರಣವಾಗಿ,
ಸುರೇಶ್ ಬಾಬುರವರ ಇನ್ಫರ್ಮೇಶನ್ ತಪ್ಪಿರೋಲ್ಲ. ಸುಮ್ಮನೆ ಕೂತೆ. `ನಿಮಗೆಲ್ಲಾ ಸೀರಿಯೆಸ್ ನೆಸ್ ಇಲ್ಲ.
ನನಗೆ ಇನ್ನೂ ಒಂದು ತಿಂಗಳಾದರು ಈ ಗ್ಯಾಂಗ್ ನವರು ಬೇಕಿತ್ತು. ನಿನ್ನ ತಲೆಹರಟೆಯಲ್ಲಿ ಅವರನ್ನ ಕೋರ್ಟ್
ಗೆ ಕಳುಹಿಸಿದೆ. ಇನ್ನೂ ಇಪ್ಪತ್ತು ಕೊಲೆಗಳ ಇನ್ವೆಸ್ಟಿಗೇಶನ್ ಬಾಕಿ ಇದೆ,’ ಅಂತ ಹೇಳಿ ನನ್ನ ಮುಖ
ನೋಡಿದರು.
ನನಗೆ
ಮಾತಾಡಲು ಏನೂ ಇರಲಿಲ್ಲ. ಸುಮ್ಮನೆ ತಲೆ ತಗ್ಗಿಸಿ ಕೂತೆ. `ಇವರು ಕೈತಪ್ಪಿ ಹೋದವರು, ಮತ್ತೆ ಕೈಗೆ
ಸಿಕ್ಕಿದರು ಗೊತ್ತಾ? ಮೂರ್ನಾಲ್ಕು ವರ್ಷಗಳಿಂದ ಪತ್ತೆಯಾಗದ ಕೊಲೆಗಳ ಹಿಂದೆ ಇವರುಗಳ ಕೈವಾಡ ಇದೆ.
ಕೃಷ್ಣ ಸಿಕ್ಕಿದ್ದು ಸಮೇತ ದೇವಸ್ಥಾನದ ಹುಂಡಿ ಕದಿಯಲು ಹೋದಾಗ. ಅವರೆಲ್ಲರನ್ನೂ ಕುಡುಕರು ಅಂದ್ಕೊಂಡು
ಬಿಡೋಕೆ ರೆಡಿಯಾಗಿದ್ದರು. ಯಾಕೋ ಅನುಮಾನ ಬಂದು ಸ್ವಲ್ಪ ವರ್ಕ್ ಮಾಡಲು ಹೇಳ್ದೆ. ಹದಿನೈದು ದಿನ ವರ್ಕ್
ಮಾಡಿದರೂ ಬಾಯಿ ಬಿಡಲಿಲ್ಲ. ಕೊನೇ ದಿನ, ಆ ಚಿಕ್ಕ ಹುಡುಗ ಇದ್ದಾನಲ್ಲ, ಚಿಕ್ಕ ಹನುಮ, ಅವ್ನು ಒಂದು
ರಾಬರಿ ವಿಷಯ ಬಾಯಿಬಿಟ್ಟ. ಅವನು ಮನೆ ತೋರಿಸಿದಾಗ ಗೊತ್ತಾಯ್ತು, ಸರಿಯಾದ ಕೇಸ್ ಇದು ಅಂತ. ಜ್ನಾಪಕ
ಇದೆಯಾ… ಟ್ಯಾನರಿ ರೋಡಲ್ಲಿ ಒಬ್ಬ ಮಂತ್ರವಾದಿ ಮತ್ತೆ ಅವನ ಶಿಷ್ಯನ್ನ ವಿಕೃತವಾಗಿ ಕೊಲೆ ಮಾಡಿದ್ದರು.
ನಾವು ಅವರನ್ನು ಸಲಿಂಗ ಕಾಮಿಗಳು ಅಂತ ತಿಳ್ಕೊಂಡಿದ್ದೆವಲ್ಲಾ, ಅದೇ ಮನೆ. ಈ ಹುಡುಗ ಹೊರಗಡೆ ನಿಂತು
ಯಾರಾದರೂ ಬಂದರೆ ಸಿಗ್ನಲ್ ಕೊಡುತ್ತಿದ್ದ. ಅವನಿಗೆ ಒಳಗಡೆ ಕೊಲೆಯಾಗಿದ್ದು ಗೊತ್ತಿರಲಿಲ್ಲ. ಹಾಗಾಗಿ
ಬಾಯಿ ಬಿಟ್ಟ. ಇನ್ನೇನು ಕೊನೆ ಹಂತಕ್ಕೆ ಬಂತು ಅನ್ನುವಾಗ, ನೀನು ರವಿಗೆ ಬಾಯಿ ಬಿಟ್ಟೆ, ಅಲ್ವಾ,’
ಅಂದರು.
ನಾನು
ಏನಾಯ್ತು ಅಂತ ವಿವರಣೆ ಕೊಡಲು ಹೋಗಲಿಲ್ಲ. `ಸಾರಿ ಸರ್,’ ಅಂದೆ. `ಹೋಗಲಿ ಬಿಡು. ಏನ್ಮಾಡೋಕ್ಕಾಗುತ್ತೆ,’
ಅಂತ ಹೇಳಿದರು.
ಅಲ್ಲಿಂದ
ನೇರವಾಗಿ ಕೆ.ಜಿ.ಹಳ್ಳಿ ಪೋಲಿಸ್ ಸ್ಟೇಷನ್ ಗೆ ಹೋದೆ. ಆರಡಿಗೂ ಹೆಚ್ಚಿದ್ದ ಆಜಾನುಭಾಹು ಇನ್ಸ್ಪೆಕ್ಟರ್
ಪ್ರತಾಪ್ ಸಿಂಘ್ ಕೈ ಚಾಚಿಕೊಂಡು ಕೂತಿದ್ದರು. ಅವರ ಕೈಯನ್ನು ಒಬ್ಬ ಒತ್ತುತ್ತಿದ್ದ. `ಏನಾಯ್ತು?’
ಅಂತ ಕೇಳಿದೆ.
`ಆ
ಕೊಲೆಗಡುಕರ ಮೇಲೆ ವರ್ಕ್ ಮಾಡ್ತಿದ್ದೆ. ಮೈಯೆಲ್ಲಾ ನೋವು. ನೋಡೋಕೆ ಸಣ್ಣಗಿದ್ದಾರೆ. ಬಾಯಿನೇ ಬಿಡೋಲ್ಲ.
ಈಗ ಬೇರೆ ಹದಿನೈದು ದಿನದಲ್ಲಿ ಇನ್ವೆಸ್ಟಿಗೇಶನ್ ಮುಗೀಬೇಕು. ಅಷ್ಟೇದಿನ ಪೋಲಿಸ್ ಕಸ್ಟಡಿ ಇರೋದು.
ಏನ್ಮಾಡೊದು ಅಂತಾನೇ ಗೊತ್ತಾಗ್ತಿಲ್ಲ,’ ಅಂದರು.
ಒಳಗೆ
ಹೋಗಿ ಸಿಕ್ಕಿಬಿದ್ದವರನ್ನು ನೋಡಿದೆ. ಪೋಲಿಸ್ ವರ್ಕಿಂಗ್ ಇನ್ನೂ ನೆಡೀತಿತ್ತು. ಅವರ್ಯಾರೂ ಬಗ್ಗುವವರಂತೆ
ಕಾಣಲಿಲ್ಲ. ಅದರ ಬದಲು, `ಹೊರಗೆ ಬಂದಾಗ ನೊಡ್ಕೋತ್ತೀವಿ,’ ಅನ್ನುವಂತಿತ್ತು ಅವರ ಮುಖದ ಭಾವನೆಗಳು.
ಆಫೀಸಿಗೆ
ಬಂದಾಗ, ಹರ್ಷ ಕೂಗಾಡುತ್ತಿದ್ದ. `ಏನಾಯ್ತೋ?’ ಅಂತ ಕೇಳಿದಾಗ, `ಅಲ್ಲಾ, ಹಾಯ್ ಬೆಂಗಳೂರಿಗೆ ಮೊದಲು
ಕೊಟ್ಟು, ಆಮೇಲೆ ಪ್ರೆಸ್ ಕಾನ್ಫರೆನ್ಸ್ ಮಾಡಿದ್ದಾರೆ, ಆ ಕಮೀಷನರ್. ಅವರ ವಿರುದ್ದ ಬರೆಯಕೂಡದು ಅಂತ
ಈ ಒಪ್ಪಂದ,’ ಅಂದ.
ಇದೇ
ಮಾತನ್ನು ಎರಡು ವರ್ಷಗಳ ಮುಂಚೆ ನಾನೇ ಹೇಳಿದ್ದೆ. ರವಿಯ ಜೊತೆ ಆಗ ನನಗಷ್ಟು ಸಲಿಗೆ ಇರಲಿಲ್ಲ. ಶ್ಯಾಮ್
ಮತ್ತು ರವಿ ಎಂಬ ಸೀರಿಯಲ್ ಕಿಲ್ಲರ್ ಗಳನ್ನು ಹಿಡಿದ ವಿಷಯ ಹಾಯ್ ಬೆಂಗಳೂರಿನಲ್ಲಿ ಮೊದಲು ಬಂದಾಗ,
ಪ್ರೆಸ್ ಕಾನ್ಫರೆನ್ಸ್ ನಲ್ಲೇ ರೇವಣ್ಣಸಿದ್ದಯ್ಯರವರನ್ನು ಕೇವಲವಾಗಿ ಮಾತಾಡಿದ್ದೆ. ಸುರೇಶ್ ಬಾಬು
ನನ್ನನ್ನು ಸಮಾಧಾನ ಮಾಡಿದ್ದರು. ಈಗಿನ ಕ್ರೈಂ ಹುಡುಗರೂ ತಿರುಗಿ ಬಿದ್ದಿದ್ದರು. `ಅಲ್ಲ ಕಣೋ, ಕತ್ತೆ
ಸೀನನ ಗ್ಯಾಂಗ್ ವಿಷಯ ಮಾತ್ರ ಇದೆ. ಇವರುಗಳು ಬೆಂಗಳೂರಿನಲ್ಲಿ ಮಾಡಿದ್ದು ಏನೂ ಬಂದಿಲ್ಲವಲ್ಲೋ,’ ಅಂದೆ.
ಆದರೆ, ಕೇಳುವ ಸ್ಥಿತಿಯಲ್ಲಿ ಹರ್ಷ ಇರಲಿಲ್ಲ.
ಮಾರನೇ
ದಿನ, ಯಾವುದೇ ಪತ್ರಿಕೆಯಲ್ಲಿ, ಈ ಕೇಸ್ ಗೆ ಸಿಗೆಬೇಕಾದ ಮಾನ್ಯತೆ ಸಿಕ್ಕಿರಲಿಲ್ಲ. ನನಗ್ಯಾಕೋ ಕಸಿವಿಸಿಯಾಯ್ತು.
ಕತ್ತೆ ಸೀನನ ಚರಿತ್ರೆ ಮತ್ತು ಈ ಗ್ಯಾಂಗ್ ನ ವಿವರಗಳನ್ನು ಸೇರಿಸಿ ಒಂದು ಕಥೆ ಬರೆದರೂ, ಡೆಸ್ಕ್ ನಲ್ಲಿದ್ದ
ಉತ್ತರ: `ಇಷ್ಟೊಂದು ಭಯಂಕರವಾಗಿದೆ, ಇದನ್ನು ಬೆಳಗ್ಗೆ ಎದ್ದು ಯಾರಾದ್ರು ಓದಿದ್ರೆ, ಮೂಡ್ ಹಾಳಾಗುತ್ತೆ,
ಅಷ್ಟೆ,’ ಅಂದರು.
ಒಂದು
ವಾರ ಹಾಗೇ ಕಳೆಯಿತು. ಒಂದು ದಿನ ಸಾಯಂಕಾಲ ಆಫೀಸಿಗೆ `ದಿ ವೀಕ್’ ನಲ್ಲಿ ಕೆಲಸ ಮಾಡುತ್ತಿದ್ದ ಚೇತನ್
ಕೃಷ್ಣಸ್ವಾಮಿ ಬಂದ. `ಹಾಯ್ ವಿನಯ್, ಏನ್ಮಾಡ್ತಿದ್ದೀಯಾ?’ ಅಂತ ಕೇಳಿದ.
ಏನೊ
ಹೊಳೆದಂತಾಗಿ, `ಚೇತನ್, ಬಾ ಇಲ್ಲಿ,’ ಅಂತ ಹಳೇ ಪೇಪರ್ ಗಳ ಫೈಲ್ ಹತ್ತಿರ ಕರೆದುಕೊಂಡು ಹೋಗಿ ಅವನಿಗೆ
ಈ ಕೊಲೆಗಡುಕರ ಕಥೆ ಹೇಳಿದೆ. `ಹಾಯ್ ಬೆಂಗಳೂರಲ್ಲಿ ಬಂತು ಅಂತ ಇದಕ್ಕೆ ಪಬ್ಲಿಸಿಟಿ ಕಮ್ಮಿ ಸಿಕ್ಕಿದೆ.
ನಲವತ್ತು ಕೊಲೆಯಾದರೂ ಮಾಡಿದ್ದಾರೆ. ನಿನಗೇನಾದರೂ ಬೇಕಾದರೆ, ಪ್ರತಾಪ್ ಸಿಂಘ್ ಗೆ ಹೇಳ್ತಿನಿ,’ ಅಂದೆ.
ನಾಳೆ
ಹೇಳ್ತೀನಿ ಅಂದ ಚೇತನ್, ಮಾರನೇ ದಿನ ಮಧ್ಯಾಹ್ನವೇ ಫೋನ್ ಮಾಡಿ, `ನಾನು ಪ್ರತಾಪ್ ಸಿಂಘ್ ಭೇಟಿಯಾಗಬೇಕು,’
ಅಂದ. ಸರಿ, ಪ್ರತಾಪ್ ಸಿಂಘ್ ನಂಬರ್ ಕೊಟ್ಟು, ಅವರಿಗೂ ಫೋನ್ ಮಾಡಿ ಹೇಳಿದೆ. ಮುಂದಿನ ನಾಲ್ಕು ದಿನ
ಚೇತನ್ ಪತ್ತೆಯೇ ಇರಲಿಲ್ಲ. ಅವತ್ತೊಂದು ಭಾನುವಾರ ಬೆಳಗ್ಗೆ ಚೇತನ್ ಫೋನ್ ಮಾಡಿ, `ನಮ್ಮ ಮ್ಯಾಗಝೀನ್
ನೋಡ್ದಾ?’ ಅಂತ ಕೇಳಿದ.
`ಇಲ್ಲ.
ಯಾಕೆ, ನಿನ್ನ ಸ್ಟೋರಿ ಬಂತಾ?’ ಅಂತ ಕೇಳಿದೆ.
`ಆರು
ಪೇಜ್ ಬಂದಿದೆ. ಥ್ಯಾಂಕ್ಸ್ ಕಣೋ. ಎಲ್ಲಾರಿಗೂ ಖುಷಿಯಾಗಿದೆ. ನೋಡಿ ಹೇಳು, ಇಲ್ಲದಿದ್ದರೆ ನಿನ್ನ ಆಫೀಸಿಗೆ
ಬೇಕಾದರೆ ಒಂದು ಕಾಪಿ ಕಳುಹಿಸುತ್ತೇನೆ,’ ಅಂದ.
ನಿಜಕ್ಕೂ
ಚೇತನ್ ಅಧ್ಬುತವಾದ ಕೆಲಸ ಮಾಡಿದ್ದ. ನನಗೆ ಗೊತ್ತಿರದ ಎಷ್ಟೋ ವಿಷಯಗಳನ್ನು ಕಲೆ ಹಾಕಿದ್ದ. ಹಾಗೆ,
ಈ ಗ್ಯಾಂಗಿನವರ ಊರಾದ ಕೋಲಾರದ ಹತ್ತಿರದ ದಂಡುಪಾಳ್ಯಕ್ಕೂ ಹೋಗಿ ಬಂದಿದ್ದ. ಹಾಗೆಯೇ, ಗ್ಯಾಂಗಿನ ಲೀಡರ್
ಆದ ಕೃಷ್ಣನನ್ನೂ ಮಾತಾಡಿಸಿದ್ದ.
ಅಲ್ಲಿಂದ
ಮುಂದೆ ಈ ಗ್ಯಾಂಗ್ ನವರು ದಂಡುಪಾಳ್ಯ ಗ್ಯಾಂಗ್ ಅಂತಲೇ ಪ್ರಸಿದ್ದಿಯಾದರು. ಅವರು ಜೈಲಿಂದ ತಪ್ಪಿಸಿಕೊಂಡು,
ಮತ್ತೆ ಅವರನ್ನು ಹಿಡಿದದ್ದೂ ಅಯ್ತು. ಆಗೊಂದು, ಈಗೊಂದು ಸಲ ಪತ್ರಿಕೆಯಲ್ಲಿ ಅವರ ಬಗ್ಗೆ ಬರುತ್ತಿತ್ತು.
ಒಂದೆರೆಡು ವರ್ಷಗಳು ಕಳೆದವು, ಒಂದು ಖಾಸಗೀ ಟೆಲಿವಿಷನ್ ಚಾನೆಲ್ ಇವರ ಬಗ್ಗೆ ಒಂದು ದೊಡ್ಡ `ಕ್ರೈಂ
ನ್ಯೂಸ್’ ಮಾಡಿತು. ಒಮ್ಮೆಲೆ, ದಂಡುಪಾಳ್ಯ ಗ್ಯಾಂಗ್ ಎಲ್ಲರ ಬಾಯಲ್ಲಿ ಓಡಾಡಲು ಶುರುವಾಯ್ತು.
ಒಂದಿನ
ಸಾಯಂಕಾಲ ಆಫೀಸಿನಿಂದ ಮನೆಗೆ ಬಂದಾಗ ನನ್ನ ಅತ್ತೆ ಹೇಳಿದರು: `ಟೀವಿಯಲ್ಲಿ ದಂಡುಪಾಳ್ಯ ಗ್ಯಾಂಗ್ ತೋರಿಸುತ್ತಿದ್ದರು.
ನೋಡಿದರೆ ಹೆದರಿಕೆಯಾಗುತ್ತೆ. ಮನೆಯ ಸುತ್ತ ಗ್ರಿಲ್ ಹಾಕಿಸಬೇಕು,’ ಅಂದರು.
`ಹೌದಾ?’
ಅಂತ ಹೇಳಿ ನಕ್ಕೆ….
ಮಾಕೋನಹಳ್ಳಿ
ವಿನಯ್ ಮಾಧವ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ