ಶುಕ್ರವಾರ, ಅಕ್ಟೋಬರ್ 5, 2012

ರೈ





ಡಾನ್ ಒಬ್ಬನ `ಚಿನ್ನ ಚಿನ್ನ ಆಸೈ.....'

ಲಿಫ್ಟ್ ಒಳಗೆ ಹೋದಾಗಲೇ ಗೊತ್ತಾಗಿದ್ದು... ಐದನೇ ಮಹಡಿಯ ಬಟನ್ ತೆಗೆದು ಹಾಕಿದ್ದಾರೆ ಅಂತ. ನಾಲ್ಕನೇ ಮಹಡಿಗೆ ಹೋಗಿ, ಅಲ್ಲಿಂದ ಒಂದು ಮಹಡಿ ಹತ್ತಬೇಕು ಅಂತ ಗೊತ್ತಾಯ್ತು. ಸರಿ... ನಾಲ್ಕನೇ ಮಹಡಿಗೆ ಬಟನ್ ಒತ್ತಿ ಸುಮ್ಮನೆ ನಿಂತೆ.
ನಾಲ್ಕನೇ ಮಹಡಿಯಲ್ಲಿ ಲಿಫ್ಟ್ ನಿಲ್ಲುತ್ತಲೇ ನನ್ನನ್ನು ಸ್ವಾಗತಿಸಿದ್ದು ಶಾಟ್ ಗನ್ ಗಳನ್ನು ಹಿಡಿದುಕೊಂಡಿದ್ದ ಮೂರು ಜನ. ಬೇಡದವರು ಬಂದರೆ ಲಿಫ್ಟ್ ನಿಂದ ಹೊರಗೆ ಹೆಣ ಮಾತ್ರ ಹೊರಗೆ ಬರಲು ಸಾಧ್ಯಅಂತ ಅನ್ಕೊಂಡೆ. ಅವರೇ ಲಿಫ್ಟ್ ನ ಗೇಟ್ ತೆಗೆದು, `ವಿನಯ್?’ ಅಂತ ಕೇಳಿದ್ರು. ಸುಮ್ಮನೆ ತಲೆ ಅಲ್ಲಾಡಿಸಿದೆ.
ಒಂದು ಸಲ ಮೇಲಿಂದ ಕೆಳಗೆ ತಡಕಾಡಿ, ಪಕ್ಕದಲ್ಲಿದ್ದ ಮೆಟ್ಟಿಲ ಕಡೆ ಕೈ ತೋರಿಸಿದರು. ಅಲ್ಲೊಂದು ಮೇಜಿನ ಮೇಲೆ ಇನ್ನಿಬ್ಬರು ಪಿಸ್ತೂಲ್ ಹಿಡಿದುಕೊಂಡು, ಒರಗಿ ನಿಂತಿದ್ದರು. ಐದನೇ ಮಹಡಿಯಲ್ಲಿ ಇವರನ್ನು ಬಿಟ್ಟರೆ ಇನ್ಯಾರೂ ಇರೋದಿಲ್ಲ ಅನ್ನೋದಂತೂ ಖಚಿತವಾಗಿ ಹೋಯ್ತು.
`ಬನ್ನಿ ಮಾರಾಯರೆ... ಮುಂಚೆ ಎಲ್ಲೋ ಮೀಟ್ ಮಾಡಿದ್ದೆವು ಅಲ್ಲವಾ?’ ಅಂತ ಮಂಗಳೂರು ಶೈಲಿಯಲ್ಲಿ ಪ್ರಶ್ನೆ ಬಂತು.
`ನಿಮ್ಮನ್ನು ಇಂಡಿಯಾಕ್ಕೆ ಕರೆದುಕೊಂಡು ಬಂದ ಶುರುವಿನಲ್ಲಿ ಜೈಲಲ್ಲಿ ಸಿಕ್ಕಿದ್ದೆ,’ ಅಂತ ನಗುತ್ತಾ ಮಂಗಳೂರು ಶೈಲಿಯಲ್ಲೇ ಹೇಳಿದೆ. ನಾನು ಜೈಲಿನಲ್ಲಿ ನೋಡಿದಾಗ `ಫಿಟ್ ಆಗಿದ್ದವರಿಗೆ, ಈಗ ಸ್ವಲ್ಪ ಹೊಟ್ಟೆ ಬಂದಿದೆ ಅಂದುಕೊಂಡೆ.
`ನಿಮ್ಮದು ಯಾವ ಊರು?’ ಅಂತ ಕೇಳಿದರು.
`ಮೂಡಿಗೆರೆ... ಆದರೆ ಕಾರ್ಕಾಳ ಮತ್ತು ಉಡುಪಿಯಲ್ಲಿ ಓದಿದ್ದೆ. ಪುತ್ತೂರಿನ ಹತ್ತಿರ ಚಾರ್ವಕ ಇದೆಯಲ್ಲ, ಅಲ್ಲಿ ಸಿ.ಪಿ.ಜಯರಾಂ ನನಗೆ ಭಾವನಾಗಬೇಕು,’ ಅಂದೆ.
`ಹೌದಾ ಮಾರಾಯರೆ... ಹಾಗಾದರೆ ನೀವು ನಮಗೆ ತುಂಬಾ ಹತ್ತಿರದವರಾದಿರಲ್ಲ?’ ಅಂತ ಉತ್ತರ ಬಂತು.
ಮುತ್ತಪ್ಪ ರೈ ಭೇಟಿಯಾಗಲು ನನಗೆ ದೊಡ್ಡ ಕಾರಣಗಳೇನೂ ಇರಲಿಲ್ಲ. ನನ್ನ ಕ್ರೈಂ ರಿಪೋರ್ಟಿಂಗ್ ಸಮಯದಲ್ಲೂ ಅಷ್ಟೆ, ಭೂಗತ ಪ್ರಪಂಚ ಅಂತ ಪಟ್ಟಿ ಕಟ್ಟಿಕೊಂಡವರನ್ನು ಭೇಟಿಯಾಗುವಾಗ ಯಾವುದಾದರೂ ಹೋಟೆಲ್ ಗಳಲ್ಲೇ ಭೇಟಿ ಮಾಡುತ್ತಿದ್ದೆನೇ ಹೊರತು, ಅವರಿರುವ ಜಾಗಕ್ಕೆ ಅಥವಾ ಅಡ್ಡೆಗಳಿಗೆ ಹೋಗದಂತೆ ಎಚ್ಚರ ವಹಿಸುತ್ತಿದ್ದೆ. ಆದರೆ, ಮುತ್ತಪ್ಪ ರೈ ದುಬೈನಿಂದ ವಾಪಾಸ್ ಬಂದು, ಕೇಸ್ ಗಳಿಂದ ಖುಲಾಸೆಯಾಗಿ, ಭೂಗತ ಪ್ರಪಂಚದ ಚಟುವಟಿಕೆಗಳಿಂದ ದೂರವಾಗಿದ್ದೇನೆ, ಅನ್ನೋ ಹೇಳಿಕೆಗಳು ಬಂದಿದ್ದವು.
ಅದರ ಮಧ್ಯ, ವಿದೇಶಿ ಪತ್ರಕರ್ತನೊಬ್ಬ ಬಂದು, ಬೆಂಗಳೂರಿನ `ಲ್ಯಾಂಡ್ ಮಾಫಿಯಾದ ದೊರೆ ಮುತ್ತಪ್ಪ ರೈ,’ ಅನ್ನೋ ಬರವಣಿಗೆಯನ್ನು ಇಂಟರ್ನೆಟ್ ನಲ್ಲಿ ಹಾಕಿದ್ದ. ಅದನ್ನು ನಮ್ಮ ಎಡಿಟರ್ ಬಲರಾಂಗೆ ತೋರಿಸಿದಾಗ, `ನೀನ್ಯಾಕೆ ಮುತ್ತಪ್ಪ ರೈ ಜೊತೆ ಮಾತಾಡಬಾರದು?’ ಅಂತ ಹೇಳಿದರು.
ಹಾಗೂ ಹೀಗೂ ರೈ ನಂಬರ್ ಸಂಪಾದಿಸಿ ಫೋನ್ ಹಚ್ಚಿ, ಸದಾಶಿವನಗರದ ಫ್ಲ್ಯಾಟ್ ನಲ್ಲಿ ಭೇಟಿ ನಿಶ್ಚಯವಾಗಿತ್ತು. ಆ ಸೆಕ್ಯುರಿಟಿ ದಾಟಿಕೊಂಡು ಹೋದ ನನಗೆ, ಮೊದಲು ವಾತಾವರಣ ತಿಳಿಗೊಳಿಸಬೇಕಿತ್ತು. ಬಾದರಾಯಣ ಸಂಬಂಧ ಮಾತಾಡುತ್ತಾ, ರೈ ಜೊತೆ ವಿಜಯ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಮಡಿಕೇರಿಯ ರಾಧಾಂಟಿ ಬಗ್ಗೆ ಹೇಳಿದೆ. `ರಾಧಾ ಮ್ಯಾಡಂ ನಿಮಗೆ ಗೊತ್ತಾ? ಅವರ ಮಗಳು ಸಂಗೀತ ದುಬೈನಲ್ಲಿದ್ದಾಳಲ್ಲ. ತುಂಬಾ ಒಳ್ಳೆಯ ಜನ,’ ಅಂತ  ಹಳೇ ನೆನಪುಗಳಿಗೆ ಹೋಗುತ್ತಿದ್ದಾಗಲೇ, ಎತ್ತರದ ವ್ಯಕ್ತಿಯೊಬ್ಬರು ಒಳಗೆ ಬಂದರು.
`ಇವರು ಗೊತ್ತಾ... ನಿಮ್ಮ ಊರಿನವರೇ... ಚಂದ್ರು ಅಂತ,’ ರೈ ಹೇಳುವಾಗಲೇ ನಾನು ಮಧ್ಯ ಬಾಯಿ ಹಾಕಿ, `ಬೈರಮುಡಿ ಚಂದ್ರು,’ ಅಂದೆ.
`ನೀವು ಗೊತ್ತಾಗಲಿಲ್ಲ,’ ಅಂತ ಚಂದ್ರು ಹೇಳಿದಾಗ, `ನಾನು ಮಾಕೋನಹಳ್ಳಿ ಡಾ. ಮಾಧವ ಗೌಡರ ಮಗ, ವಿನಯ್,’ ಅಂತ ಪರಿಚಯ ಮಾಡಿಕೊಂಡೆ.
`ಹೌದಾ? ಇಲ್ಲೇನು ಮಾಡ್ತಿದ್ದೀಯಾ? ಅಣ್ಣ... ಈ ಹುಡುಗ ನನಗೆ ಸಂಬಂಧಿಯಾಗಬೇಕು,’ ಅಂತ ಉದ್ವೇಗದಿಂದ ಚಂದ್ರು ಮಾತಾಡೋಕೆ ಶುರು ಮಾಡಿದ್ರು. ಚಂದ್ರು ಮತ್ತು ರೈ ಒಡನಾಟ ನನಗೆ ಬಹಳ ಸಮಯದಿಂದ ಗೊತ್ತಿತ್ತು. `ಯಾಕೋ ನಮ್ಮ ಈ ಭೇಟಿ ಟ್ರ್ಯಾಕ್ ತಪ್ತಾ ಇದೆ,’ ಅಂತ ಅನ್ನಿಸೋಕೆ ಶುರುವಾಯ್ತು.
ಅಷ್ಟರಲ್ಲೇ ಚಂದ್ರು ಜೇಬಿನಿಂದ ಒಂದು ಪ್ಯಾಕ್ ಎಲೆಕ್ಟ್ರಾನಿಕ್ ಸಿಗರೇಟ್ ತೆಗೆದು, `ಅಣ್ಣ ಸಿಕ್ತು ನೋಡಿ. ಇನ್ನು ಇದನ್ನು ಸೇದೋಕೆ ಶುರು ಮಾಡಿ,’ ಅಂತ ಕೊಟ್ಟವರೇ, ಅದನ್ನು ಉಪಯೋಗಿಸುವುದು ಹೇಗೆ ಅಂತ ಹೇಳಿಕೊಡೋಕೆ ಶುರುಮಾಡಿದ್ರು. ಅದನ್ನು ಒಂದು ದಂ ಎಳೆದ ರೈ, ಮುಂದೆ ಬೆಂಕಿಯಂತೆ ಕಾಣುವ ಕೆಂಪು ಬಣ್ಣವನ್ನು ಮುಟ್ಟಿ ನೋಡಿ, `ಇದು ಸುಡೋಲ್ಲ, ಅಲ್ಲವಾ?’ ಅಂತ ಕೇಳಿದ್ರು.
ಏನೋ ಹೊಳೆದಂತೆ, `ಒಂದು ನಿಮಿಷ... ಅಮ್ಮನಿಗೆ ತೋರಿಸಿ ಬರುತ್ತೇನೆ,’ ಅಂತ ಹೇಳಿ, ಎದುರುಗಡೆ ಇದ್ದ ಫ್ಲ್ಯಾಟ್ ಕಡೆಗೆ ಹೋದರು. ಎರಡೇ ನಿಮಿಷದಲ್ಲಿ ಹ್ಹಿ..ಹ್ಹಿ...ಹ್ಹಿ ಅಂತ ನಗುತ್ತಾ ವಾಪಾಸ್ ಬಂದು ನಮ್ಮ ಎದುರು ಬಂದು ಕುಳಿತರು. `ಅಮ್ಮನಿಗೆ ಒಂದು ಸೆಕೆಂಡ್ ಬಿ.ಪಿ ರೈಸ್ ಆದದ್ದಲ್ಲ ಮಾರಾಯರೆ. ನಾನು ಏನು ಮಾಡಿದೆ ಗೊತ್ತಾ? ಅಮ್ಮನ ಹತ್ತಿರ ಏನೋ ಮಾತಾಡುತ್ತಾ, ಒಂದು ದಂ ಎಳೆದು, ಸಿಗರೇಟನ್ನು ಕಿಸೆಯ ಒಳಗೆ ಹಾಕಿದೆ. ಅಮ್ಮ ಒಂದೇ ಸಲ, ಮುತ್ತಪ್ಪ, ಶರ್ಟ್ ಸುಡುತ್ತೆ ಅಂತ ಕೂಗಿದ್ದಲ್ಲ....ಅಂತ ಇನ್ನೂ ಜೋರಾಗಿ ನಗಲು ಆರಂಭಿಸಿದರು.
ಒಂದು ಕ್ಷಣ ರೈ ಮುಖವನ್ನೇ ನೋಡಿದೆ. ಕಾಲೇಜು ಹುಡುಗರ ಮುಖದಲ್ಲಿದ್ದ ತುಂಟತನವಿತ್ತು. ಅಲ್ಲಿಂದ ಮುಂದಿನ ಮಾತುಕತೆ ತುಂಬಾ ಸರಾಗವಾಗಿ ನೆಡೆದುಕೊಂಡು ಹೋಯಿತು. ಲ್ಯಾಂಡ್ ಮಾಫಿಯಾದ ವಿಷಯವನ್ನು ನಿರಾಕರಿಸಿದ ರೈ, ಅವರ ಕನಸುಗಳ ಬಗ್ಗೆ ಮಾತಾಡಲು ಶುರುಮಾಡಿದರು. ಉಡುಪಿಯ ಹತ್ತಿರವಿರು ಹತ್ತೊಂಬತ್ತು ಎಕರೆ ಜಾಗವನ್ನು ಪಕ್ಷಿಧಾಮದ ರೀತಿ ಬೆಳೆಸುವ ಬಗ್ಗೆ ಮತ್ತು ಎಚ್ ಡಿ ಕೋಟೆಯ ಹತ್ತಿರವಿರುವ ಜಾಗವನ್ನು ವನ್ಯಜೀವಿಗಳ ಸಂರಕ್ಷಣೆಗೆ ಮೀಸಲಿಡುವ ಬಗ್ಗೆ ಮಾತಾಡಿದಾಗ, ನನಗೆ ಆಶ್ಚರ್ಯವಾಯಿತು. ಇಷ್ಟೆಲ್ಲಾ ತುಂಟತನ ಮತ್ತು ಕನಸುಗಳನ್ನು ಹೊತ್ತವರು, ಇಪ್ಪತ್ನಾಲ್ಕು ಘಂಟೆ ಸೆಕ್ಯುರಿಟಿ ಮಧ್ಯದಲ್ಲಿ ಬದುಕಬೇಕಾದ ಪರಿಸ್ಥಿತಿ ನೋಡಿ, ಅಯ್ಯೋ ಅನಿಸಿತು.
ಅಲ್ಲಿನ ಇಂಟರ್ ವ್ಯೂ ಮುಗಿಸಿ ಆಫೀಸಿಗೆ ಬಂದವನೇ, ಬಲರಾಂ ಹತ್ತಿರ ನೆಡೆದ ವಿಷಯವನ್ನೆಲ್ಲ ಹೇಳಿದೆ. `ತುಂಬಾ ಇಂಟರೆಸ್ಟಿಂಗ್ ಆಗಿದೆ ವಿನಯ್. ಲ್ಯಾಂಡ್ ಮಾಫಿಯಾ ಬಿಟ್ಟು, ಅಲ್ಲಿ ನೆಡೆದ ವಿಷಯದ ಬಗ್ಗೆ ಒಂದು ಲೇಖನ ಬರಿ. ಅದು ಹೇಗೆ ಬರುತ್ತೆ ಅಂತ ನೋಡಿ, ಏನು ಮಾಡೋದು ಅಂತ ಯೋಚನೆ ಮಾಡೋಣ, ಅಂದರು.
ನನಗೇನೂ ಈ ಕಥೆ ಪ್ರಕಟವಾಗೋ ಗ್ಯಾರಂಟಿ ಇರಲಿಲ್ಲ. ಸರಿ, ಎಡಿಟರ್ ಹೇಳಿದ ಮೇಲೆ ನಂದೇನು ಅಂತ, ರೈ ಅಮ್ಮನನ್ನು ಹೆದರಿಸಿದರಿಂದ ಶುರು ಮಾಡಿಕೊಂಡು, ಒಂದು ಲೇಖನ ಬರೆದೆ. ಅದನ್ನು ಬಲರಾಂ ರಿಗೆ ಕಳುಹಿಸಿದ ಮೇಲೆ, ಅವರ ಕೋಣೆಗೆ ಹೋದೆ. ನನ್ನನ್ನು ನೋಡಿದವರೆ ನಗುತ್ತಾ, `ಬಾ, ಅದನ್ನೇ ಓದುತ್ತಿದ್ದೆ. ವಿನಯ್, ಇದು ತುಂಬಾ ಇಂಟರೆಸ್ಟಿಂಗ್ ಆಗಿದೆ. ಭಾನುವಾರಕ್ಕೆ ತಗೋಳ್ತೀನಿ. ಮುತ್ತಪ್ಪ ರೈ ಫೋಟೋ ಏನಾದ್ರೂ ತೆಗೆದಿದ್ದೀಯಾ? ಅಂತ ಕೇಳಿದರು.
`ಇಲ್ಲ ಸರ್.... ಹಳೇ ಫೋಟೋ ಯಾವುದಾದರೂ ಉಪಯೋಗಿಸಬೇಕಷ್ಟೆ, ಅಂದೆ.
`ಭಾನುವಾರಕ್ಕೆ ಇನ್ನೂ ಮೂರು ದಿನ ಇದೆ. ಅಷ್ಟರೊಳಗೆ ಹೊಸದೇ ತೆಗೆಸು. ಹಳೇ ಫೋಟೋ ಯಾಕೆ? ಅಂತ ಹೇಳಿದರು.
`ಸರಿ ಸರ್, ಅಂತ ಹೇಳಿ, ರೈಗೆ ಫೋನ್ ಹಚ್ಚಿದೆ.
`ನಾನು ಇನ್ನೂ ಮೂರು ದಿನ ಸಿಟಿಗೆ ಬರುವುದಿಲ್ಲ ವಿನಯ್... ಏನು ಮಾಡುವುದು? ಅಂತ ಕೇಳಿದರು.
`ಸರ್, ನಾನೇ ಬಿಡದಿಗೆ ಬರುತ್ತೇನೆ ಬಿಡಿ. ಆ ಮನೆ ನೋಡ್ಬೇಕು ಅಂತ ಮೈಸೂರಿಗೆ ಹೋಗುವಾಲೆಲ್ಲ ಅಂದುಕೊಳ್ಳುತ್ತಿದ್ದೆ. ನೋಡಿದ ಹಾಗೆ ಆಗುತ್ತೆ, ಅಂತ ಹೇಳಿದೆ.
`ಆಗಲಿ... ಹನ್ನೊಂದು ಘಂಟೆಗೆ ಬಂದುಬಿಡಿ. ಮನೆಯಲ್ಲೇ ಇರುತ್ತೇನೆ, ಅಂದರು.
ರೈ ಬಿಡದಿ ಮನೆ ಬಗ್ಗೆ ತುಂಬಾ ಕೇಳಿದ್ದೆ. ಎಲ್ಲಾ ರಿಪೋರ್ಟರ್ ಗಳ ಬಾಯಲ್ಲಿ ಮತ್ತು ಬರವಣಿಗೆಯಲ್ಲಿ. ಅದರ ಸೆಕ್ಯುರಿಟಿ ಬಗ್ಗೆಯಂತೂ, ದಾರಿಯುದ್ದಕ್ಕೂ ನೆಲದಲ್ಲಿ ಕ್ಯಾಮೆರಾ ಅಡಗಿಸಿ ಇಟ್ಟಿದ್ದಾರೆ ಅಂತ ಬೇರೆ ಹೇಳಿದ್ರು.
ಬಿಡದಿ ಮನೆಯ ಮೊದಲನೇ ಗೇಟು ದಾಟಿದಾಗ, ಅಂತಾ ಸೆಕ್ಯುರಿಟಿ ಇಲ್ಲ ಅನ್ನಿಸ್ತು.  ಗ್ಸನಾಡು ಅನ್ನೋ ಪಾಳು ಬಿದ್ದ ಆ ಹೌಸಿಂಗ್ ಲೇಔಟ್ ನಲ್ಲಿ, ಇಬ್ಬರು ಗನ್ ಮ್ಯಾನ್ ಗಳನ್ನು ಬಿಟ್ಟರೆ ಯಾರೂ ಇರಲಿಲ್ಲ. ಅಲ್ಲಿಂದ ಮುಂದೆ ಹೋದಾಗ ಎದುರಾಗಿದ್ದೇ ದೊಡ್ಡ ಗೋಡೆ ಮತ್ತು ಅದರ ಮಧ್ಯ ಒಂದು ಕಿಂಡಿಯಂತಹ ಬಾಗಿಲು. ಅಲ್ಲಿನ ಸೆಕ್ಯುರಿಟಿ ನೋಡಿದಾಗ ಅನ್ನಿಸಿತು: `ಇಲ್ಲೂ ಹಾಗೇನೇ, ಅಂತ.
ಒಳಗೆ ಹೋಗುತ್ತಲೇ ನಾನು ನೆಲದೊಳಗೆ ಇಟ್ಟ ಕ್ಯಾಮೆರಾಗಳಿಗಾಗಿ ಕಣ್ಣಾಡಿಸತೊಡಗಿದೆ. ಆ ಕಿಂಡಿಯಂತ ಬಾಗಿಲಿನಿಂದ ಮನೆಗೆ ಸಾಧಾರಣ ನೂರೈವತ್ತು ಅಡಿಗಳಾದರೂ ಇದೆ. ನೆಲದಲ್ಲೆಲ್ಲೂ ಕಾಣದಿದ್ದಾಗ, ಅಲ್ಲಿ ಬೆಳೆದಿದ್ದ ಹೂಗಿಡಗಳ ಮಧ್ಯ ಏನಾದರೂ ಇದೆಯಾ ಅಂತ ಕಣ್ಣಾಡಿಸುತ್ತಾ ಮುಂದೆ ಹೋದೆ. ನಾನು ನೆಡೆದುಕೊಂಡು ಬರುವುದನ್ನು ಬಾಗಿಲಲ್ಲಿ ನಿಂತಿದ್ದ ಮುತ್ತಪ್ಪ ರೈ ನೋಡುತ್ತಿದ್ದರು. ಹತ್ತಿರ ಹೋದ ತಕ್ಷಣ ಕೇಳಿದರು: `ಆ ಗಿಡಗಳ ಮಧ್ಯ ಏನು ಕ್ಯಾಮೆರಾ ಹುಡುಕುತ್ತಿದ್ದಿರಾ? ಅಂತ. ಪೆಚ್ಚಾಗಿ ನಕ್ಕೆ.
`ಅಲ್ಲ ಮಾರಾಯರೆ... ನನ್ನನ್ನು ಕೊಲ್ಲಲು ಕೋಟಿಗಟ್ಟಲೆ ಸುಪಾರಿ ಕೊಡಬೇಕು. ಒಂದು ಹೆಲಿಕಾಪ್ಟರ್ ತೆಗೆದುಕೊಂಡು ಬಂದು ಕಾರ್ಪೆಟ್ ಬಾಂಬಿಂಗ್ ಮಾಡಿದರೆ, ಈ ಕ್ಯಾಮೆರಾ ಇಟ್ಟುಕೊಂಡು ನಾನು ಏನು ಮಾಡಬೇಕು. ನೀವು ರಿಪೋರ್ಟರ್ ಗಳು ಅಷ್ಟೂ ಯೋಚನೆ ಮಾಡದೆ ಬರೀತೀರಲ್ಲಾ? ಅಂದರು. ನಾನೇನೂ ಮಾತಾಡಲಿಲ್ಲ.
ಅಷ್ಟರಲ್ಲಿ ಅವರೇ ತಿರುಗಿ, `ವಿನಯ್, ನೋಡಿ ಅಲ್ಲಿ ನನ್ನ ನವಿಲು ಮರಿಗಳು, ಅಂದರು. ತಿರುಗಿ ನೋಡಿದರೆ, ಅವರ ವಿಶಾಲವಾದ ಹೂತೋಟದಲ್ಲಿ ಐದು ಚಿಕ್ಕ ಚಿಕ್ಕ ನವಿಲು ಮರಿಗಳು, ಕೋಳಿಗಳ ಜೊತೆ ಮೇಯುತ್ತಿದ್ದವು.
`ಇವೆಲ್ಲಿ ಸಿಕ್ಕಿದವು? ಅಂತ ಕೇಳಿದೆ.
`ಇವುಗಳ ಮೊಟ್ಟೆಗಳನ್ನು ಯಾರೋ ತಂದು ಕೊಟ್ಟರು. ಯಾವ ಮೊಟ್ಟೆ ಅಂತ ಗೊತ್ತಾಗದೆ, ಕೋಳಿ ಮೊಟ್ಟೆಗಳ ಜೊತೆ ಮರಿ ಮಾಡಲು ಇಟ್ಟೆವು. ನೋಡಿದರೆ ನವಿಲು ಮರಿಗಳು. ಇರಲಿ ಅಲ್ಲವಾ? ಅಂತ ನಕ್ಕರು.
ಹಾಗೇ, ಅವರ ನಾಯಿಗಳನ್ನು ತೋರಿಸಲು ಆರಂಭಿಸಿದರು. ಎಲ್ಲಾ ನಾಯಿಗಳನ್ನು ನೋಡಿದ ಮೇಲೆ, ಅವರದೊಂದು ಹೊಸ ಪಗ್ ಮರಿಯನ್ನು ತೋರಿಸಿದರು. ಅವರು ಮುಟ್ಟಿದ ಕೂಡಲೇ, ಆ ನಾಯಿ ಮರಿ ಉಚ್ಚೆ ಹೊಯ್ದುಕೊಂಡಿತು. `ಇದೊಂದು ಹೆದರು ಪುಕ್ಕಲು ನಾಯಿ ಮಾರಾಯರೆ. ನನ್ನ ರೆಪ್ಯುಟೇಶನ್ ಗೆ, ಇದು ಇಲ್ಲಿ ಹೇಗೆ ಬಂದು ಸೇರಿತು ಅನ್ನೋದೇ ಆಶ್ಚರ್ಯ, ಅಂತ ನಗೋಕೆ ಶುರು ಮಾಡಿದ್ರು. ಮನೆ ಸುತ್ತಲೂ ಸುತ್ತಾಡಿದ ಮೇಲೆ ಊಟಕ್ಕೆ ಕುಳಿತೆವು. ಫಿಶ್ ಕರಿ ಮತ್ತು ನನಗೆ ಇಷ್ಟವಾದ ಚಿಕ್ಕನ್ ಸುಕ್ಕ ಮಾಡಿದ್ದರು. ನಾನು ಕುಸಲಕ್ಕಿ ಅನ್ನ ಊಟ ಮಾಡುತ್ತೇನೆ ಎಂದಾಗ, ರೈ ಅವರ ತಾಯಿಗೆ ಆಶ್ಚರ್ಯವಾಯಿತು. ನಾನು ಮತ್ತೆ ಮಂಗಳೂರು ಕಡೆಯ ನನ್ನ ಬಾದರಾಯಣ ಸಂಬಂಧಗಳನ್ನು ಹೇಳಬೇಕಾಯಿತು.
ಸಾಕಷ್ಟು ಫೋಟೋಗಳನ್ನು ತೆಗೆದಮೇಲೆ ನಾನು ಅಲ್ಲಿಂದ ಹೊರಟೆ. ನನ್ನನ್ನು ಬಿಳ್ಕೊಳ್ಳಲು ಮನೆಯ ಬಾಗಿಲವರೆಗೆ ಬಂದ ರೈ, `ವಿನಯ್ ಅವರೆ, ಒಂದು ವಿಷಯ.... ನಿಮಗೆ ಈ ಕಾಡು ಪ್ರಾಣಿಗಳ ಸಂರಕ್ಷಣೆ ಬಗ್ಗೆ ಬಹಳ ವಿಷಯ ಗೊತ್ತಿದೆ. ಈಗ ನಾನು ನನ್ನ ಉಡುಪಿ ಮತ್ತು ಎಚ್ ಡಿ ಕೋಟೆಯ ಜಾಗದಲ್ಲಿ ಏನಾದರೂ ಮಾಡಬೇಕು ಅಂತ ಇದ್ದೇನೆ. ಆದರೆ, ಅಲ್ಲಿರುವ ಪ್ರಾಣಿಗಳಿಗೆ ಏನೂ ತೊಂದರೆ ಆಗಬಾರದು ಮತ್ತು ಅಲ್ಲಿ ಸುತ್ತಮುತ್ತ ಇರುವ ಪ್ರಾಣಿಗಳಿಗೆ ಅದರಿಂದ ಸಹಾಯವಾಗಬೇಕು. ನೀವೊಂದು ಸಲ ನನ್ನ ಜೊತೆ ಅವೆರೆಡು ಜಾಗಗಳಿಗೆ ಬಂದರೆ, ನಾನು ತೋರಿಸುತ್ತೇನೆ. ನೀವು ನನಗೆ ಸಲಹೆಗಳನ್ನು ಕೊಡಬಹುದು, ಅಂದರು.
ನಾನು ನಗುತ್ತಾ `ಆಗಲಿ... ಸಿಕ್ಕೋಣ ಮತ್ತೆ, ಅಂದೆ.
ಆ ಕಿಂಡಿಯಂತ ಬಾಗಿಲನ್ನು ದಾಟುವಾಗ ಮನೆ ಕಡೆಗೆ ತಿರುಗಿ ನೋಡಿದೆ. ರೈ ಬಾಗಿಲಲ್ಲಿ ಇರಲಿಲ್ಲ. ಬಾಗಿಲು ದಾಟಿ ಕಾರಿಗೆ ಹತ್ತುವಾಗ ಯಾಕೋ ರೋಜಾ ಸಿನೆಮಾದ ಹಾಡು ನೆನಪಾಯಿತು: `ಚಿನ್ನ ಚಿನ್ನ ಆಸೈ.......



ಮಾಕೋನಹಳ್ಳಿ ವಿನಯ್ ಮಾದವ




ಶುಕ್ರವಾರ, ಸೆಪ್ಟೆಂಬರ್ 28, 2012

ಡ್ರಗ್ಸ್


ಮಡುಗಟ್ಟಿದ ಆಕ್ರೋಶ ಅಂದ್ರೆ ಇದೇನಾ?

`ವಿನಯ್, ಕೊನೆಗೂ ಸಿಕ್ಕಿಬಿಟ್ಟರು ಕಣ್ರೀ…. ನೆನ್ನೆ ಇಡೀ ದಿನ ಸುಸ್ತಾಗಿ ಹೋದ್ವಿರೀ,’ ಅಂತ ಬೆಳಗ್ಗೆ ಆರೂವರೆ ಘಂಟೆಗೆ ಫೋನ್ ಬಂದಾಗ ನನಗೂ ಸರಿಯಾಗಿ ಅರ್ಥವಾಗಲಿಲ್ಲ.
`ಯಾರು ವಿಜಯ್? ಡ್ರಗ್ಸ್ ಗ್ಯಾಂಗಾ?’ ಅಂದೆ.
`ಹೌದು ರೀ… ನಾ ಹೇಳ್ತಿದ್ದೆನಲ್ಲ… ಕೊರಿಯರ್ ನಲ್ಲಿ ಕಳಿಸೋ ಇನ್ನೊಂದು ಪಾರ್ಟಿ ಇದೆ ಅಂತ. ತುಂಬಾನೇ ವರ್ಕ್ ಮಾಡ್ತಿದ್ವಿ. ಈ ಸಲ ಇಬ್ಬರು ಸಿಕ್ಕಿದ್ದಾರೆ….ಒಬ್ಬಳು ಹುಡುಗಿನೂ ಇದ್ದಾಳೆ,’ ಅಂದ್ರು.
`ಹೌದಾ? ಇಬ್ರೂ ನೈಜೀರಿಯಾದವರಾ?’ ಅಂತ ಕೇಳಿದೆ.
`ಇಲ್ಲರೀ.. ಹುಡುಗಿ ನಾರ್ಥ್ ಈಸ್ಟ್ ನವಳು. ಅವಳ ಅಡ್ರೆಸ್ ಕನ್ಫರ್ಮ್ ಮಾಡ್ತಿದ್ದೀವಿ. ಹುಡುಗ ಮಾತ್ರ ನೈಜೀರಿಯಾದವನು. ಇಬ್ಬರೂ ಡೆಲ್ಲಿಯಲ್ಲಿ ಓದ್ತಾ ಇದ್ದಾರೆ. ಡೆಲ್ಲಿಯಿಂದ ಇಲ್ಲಿಗೆ ಬಂದು, ಕೊರಿಯರ್ ನಲ್ಲಿ ಡ್ರಗ್ಸ್ ಬೇರೆ ದೇಶಕ್ಕೆ ಕೊರಿಯರ್ ಮಾಡಿ, ವಾಪಾಸ್ ಹೋಗುತ್ತಿದ್ದರು. ಹನ್ನೊಂದು ಘಂಟೆಯೊಳಗೆ ಬಂದು ಬಿಡಿ. ಹನ್ನೊಂದು ಘಂಟೆಗೆ ಅವರನ್ನು ಕೋರ್ಟ್ ಗೆ ಪ್ರೊಡ್ಯೂಸ್ ಮಾಡೋಕೆ ಕಮೀಷನರ್ ಹೇಳಿದ್ದಾರೆ,’ ಅಂದ್ರು.
ಅವರಿಬ್ಬರ ಹೆಸರು ಕೇಳಿದಾಗ, ಹುಡುಗನ ಹೆಸರು ಬರ್ಟ್ರಾಂಡ್ ತೊಚೇಕ್ವ ಇಕ್ವಾಕ ಅಂತನೂ, ಹುಡುಗಿಯ ಹೆಸರು ಡಫೀರ ವಾಲಂಗ್ ಅಂತಾನೂ ಹೇಳಿ, ಫೋನ್ ಇಟ್ಟರು.
ಸರಿ, ಒಂದಿಬ್ಬರು ಟೆಲಿವಿಷನ್ ಫ್ರೆಂಡ್ಸ್ ಗಳಿಗೆ ಸಂಕ್ಷಿಪ್ತವಾಗಿ ವಿವರ ಕೊಟ್ಟೆ. ಅವರಿಬ್ಬರನ್ನು ಎಲ್ಲಿ ಇಟ್ಟಿದ್ದಾರೆ ಅಂತ ವಿಷಯನೂ ಹೇಳಿ, ನಾನು ಬೇಗನೆ ತಯಾರಾಗೋಕೆ ಶುರುಮಾಡಿದೆ.
ವಿಜಯ್ ಕಸ್ಟಮ್ಸ್ ನಲ್ಲಿ ಇದ್ದ ನನ್ನ ಸ್ನೇಹಿತ. ಅವರು ಮತ್ತು ಅವರ ಒಂದು ತಂಡ, ಮೈಮೇಲೆ ದೆವ್ವ ಬಂದಂತೆ ಕೆಲಸ ಮಾಡುತ್ತಿದ್ದರು. ಯಾವ ಸಮಯದಲ್ಲಿ ಫೋನ್ ಮಾಡಿದರೂ ತಲೆ ಕೆಡಿಸಿಕೊಳ್ಳದೆ ಮಾತಾಡುತ್ತಿದ್ದರು. ಇಡೀ ತಂಡವೇ ಡ್ರಗ್ಸ್ ಹಿಂದೆ ಬಿದ್ದಿತ್ತು. ಬೆಂಗಳೂರಿನಿಂದ ಬೇರೆ ದೇಶಗಳಿಗೆ ಕಳುಹಿಸುವ ಮತ್ತು ಬೇರೆ ದೇಶಗಳಿಂದ ಇಲ್ಲಿಗೆ ತರಿಸುವ ಮಾಫಿಯಾವನ್ನು ಅವರು ಬೆನ್ನು ಹತ್ತಿದ್ದರು. ಯಾವುದೇ ಒಂದು ಪಾರ್ಟಿಯನ್ನು ಹಿಡದರೂ, ತಕ್ಷಣ ನನಗೆ ಫೋನ್ ಮಾಡಿ ಹೇಳುತ್ತಿದ್ದರು.
ನಾನು ವಿಜಯ್ ಆಫೀಸ್ ತಲುಪುವಾಗ ಹತ್ತು ಘಂಟೆ ದಾಟಿತ್ತು. ಆಗಲೇ ಒಂದಿಬ್ಬರು ಟೆಲಿವಿಷನ್ ಗೆಳೆಯರು ಫೋನ್ ಮಾಡಿ, ಆ ಇಬ್ಬರನ್ನು ವಿಡಿಯೋ ತೆಗೆಯೋಕೆ ಅಧಿಕಾರಿಗಳು ಬಿಡ್ತಾ ಇಲ್ಲ ಅಂತ ನನಗೆ ಹೇಳಿದರು. ಅಲ್ಲಿಗೆ ನಾನು ತಲುಪಿದ ಮೇಲೆ ಏನಾದರೂ ಮಾಡ್ತೀನಿ ಅಂತ ಹೇಳಿ, ನಾನು ವಿಜಯ್ ಆಫೀಸಿಗೆ ಹೋದೆ.
ಆ ಆಫೀಸಿನಲ್ಲಿ ನನ್ನನ್ನು ಯಾರೂ ತಡೆಯುತ್ತಿರಲಿಲ್ಲ. ವಾರಕ್ಕೆ ಎರಡು ಸಲವಾದರೂ ಹೋಗುತ್ತಿದ್ದದ್ದರಿಂದ, ಎಲ್ಲರೂ ಪರಿಚಯವಾಗಿದ್ದರು. ವಿಜಯ್ ಕೋರ್ಟ್ ಗೆ ಹೊರಡುವ ತರಾತುರಿಯಲ್ಲಿ ಕಾಗದಗಳನ್ನು ಸಿದ್ದಪಡಿಸುತ್ತಿದ್ದರು. ನನ್ನನ್ನು ನೋಡಿದವರೇ, `ಇದು ತುಂಬಾ ಇಂಟರೆಸ್ಟಿಂಗ್ ಕೇಸ್. ನೀವೇ ಮಾತಾಡಿ. ಆ ಹುಡುಗಿ ಇನ್ನೋಸೆಂಟ್ ಅಂತ ಆ ಹುಡುಗನೇ ಹೇಳ್ತಾನೆ. ಆದ್ರೆ, ಈ ಕೇಸಿಂದ ಅವಳು ತಪ್ಪಿಸಿಕೊಳ್ಳೋಕೆ ಆಗೋಲ್ಲ. ಯಾಕೆಂದ್ರೆ, ಎಲ್ಲಾ ಕನ್ಸೈನ್ ಮೆಂಟ್ ಗಳೂ ಅವಳ ಹೆಸರಲ್ಲೇ ಬುಕ್ ಆಗಿರೋದು,’ ಅಂತ ಹೇಳಿದರು.
ಈ ಇಬ್ಬರು ಬಹಳ ಸಮಯದಿಂದ ಹೆರಾಯಿನ್ ಮತ್ತು ಬ್ರೌನ್ ಶುಗರ್ ಗಳನ್ನು ಡೆಲ್ಲಿಯಿಂದ ತೆಗೆದುಕೊಂಡು ಬಂದು, ಬೆಂಗಳೂರಿನ ವಿವಿಧ ಕೊರಿಯರ್ ಆಫೀಸ್ ಗಳಿಂದ, ಸ್ಪೇನ್, ಕೆನಡಾ, ದಕ್ಷಿಣ ಆಫ್ರಿಕಾ ಮುಂತಾದ ದೇಶಗಳಿಗೆ ಕಳುಹಿಸುತ್ತಿದ್ದರು. ಕೆಲವು ಸಲ ಅವರ ಮಾಲುಗಳು ಸಿಕ್ಕಿಬಿದ್ದರೂ, ಅದನ್ನು ಯಾರು ಬುಕ್ ಮಾಡಿದರು ಅನ್ನೋದು ಗೊತ್ತಾಗುತ್ತಿರಲಿಲ್ಲ. ಯಾಕೆಂದ್ರೆ, ಡಫೀರಾ ಹೆಸರಿನಲ್ಲಿ ಕೊಲ್ಕತ್ತಾ, ಮುಂಬೈ ಮುಂತಾದ ಸ್ಥಳಗಳ ನಕಲಿ ಗುರುತು ಚೀಟಿಗಳನ್ನು ತಯಾರಿಸಿ, ಆ ವಿಳಾಸಗಳನ್ನು ಕೊಟ್ಟಿರುತ್ತಿದ್ದರು. ಬೆಳಗ್ಗಿನ ವಿಮಾನದಲ್ಲಿ ಬಂದಿಳಿದು, ಮೂರು ನಾಲ್ಕು ಪಾರ್ಸೆಲ್ ಗಳನ್ನು ಕೊರಿಯರ್ ಗೆ ಹಾಕಿ, ಸಾಯಂಕಾಲದ ವಿಮಾನದಲ್ಲಿ ವಾಪಾಸ್ ಹೋಗಿಬಿಡುತ್ತಿದ್ದರು.
ಆದರೆ, ಈ ಸಲ ಮಾತ್ರ ಇವರಿಬ್ಬರೂ ಬಂದ ತಕ್ಷಣವೇ ವಿಜಯ್ ತಂಡಕ್ಕೆ ವಿಷಯ ಗೊತ್ತಾಯಿತು. ನಾಲ್ಕು ತಂಡಗಳಲ್ಲಿ ಹುಡುಕೋಕೆ ಶುರುಮಾಡಿದವರಿಗೆ, ಸಾಯಂಕಾಲದ ಹೊತ್ತಿಗೆ ಕೋರಮಂಗಲದ ಕೊರಿಯರ್ ಆಫೀಸಿನಲ್ಲಿ ಸಿಕ್ಕಿದರು. ವಿಜಯ್ ತಂಡ ಇವರನ್ನು ಪಾರ್ಸೆಲ್ ಬಗ್ಗೆ ಕೇಳಿದ ತಕ್ಷಣ, ಹುಡುಗ ಮೊದಲನೇ ಮಹಡಿಯಿಂದ ಹಾರಿ ಓಡಿ ಹೋಗೋಕೆ ನೋಡಿದ್ದಾನೆ. ಆದರೆ, ಇವರ ಹುಡುಗರು ಅವನನ್ನು ಹಿಡಿದುಕೊಂಡಿದ್ದಾರೆ.
ಇಷ್ಟು ಹೇಳಿದ ವಿಜಯ್, ಪಕ್ಕದ ರೂಮಿಗೆ ಕರೆದುಕೊಂಡು ಹೋಗಿ, ಅಲ್ಲಿ ಕುಳಿತಿದ್ದ ಇಬ್ಬರಿಗೆ, `ಇವರು ಕೇಳಿದ್ದಕ್ಕೆಲ್ಲ ಉತ್ತರ ಹೇಳಿ,’ ಅಂತ ನನ್ನನ್ನು ಬಿಟ್ಟು ಹೋದರು.
ನೈಜೀರಿಯನ್ ಹುಡುಗ ಕಟ್ಟು ಮಸ್ತಾಗಿದ್ದ. ಹಾಗೆಯೇ, ಆ ಹುಡುಗಿ ಕೂಡ ಮುದ್ದಾಗಿದ್ದಳು. ಯಾಕೋ, ಅವರಿಬ್ಬರನ್ನು ನೋಡಿದ ತಕ್ಷಣ `ಪಾಪ’ ಅನ್ನಿಸಿತು.
ನಿಧಾನವಾಗಿ ಹುಡುಗನ ಜೊತೆ ಮಾತಾಡೋಕೆ ಶುರು ಮಾಡಿದೆ. ನಾನು ಕೇಳಿದ್ದಕ್ಕೆಲ್ಲ ಸ್ಪಷ್ಟವಾಗಿ ಉತ್ತರ ಕೊಡುತ್ತಾ ಹೋದ. ನನ್ನನ್ನು ಪೋಲಿಸ್ ಅಂತ ತಪ್ಪಾಗಿ ತಿಳಿದ್ದಿದ್ದಾರೆ ಅಂತ ನನಗೆ ಅನ್ನಿಸಿತು.
`ಸರ್, ನನ್ನ ತಂದೆ ನೈಜೀರಿಯಾದಲ್ಲಿ ಪಾದ್ರಿ. ನಾನು ಐದು ವರ್ಷದ ಕೆಳಗೆ ಡೆಲ್ಲಿಗೆ ಮ್ಯಾನೆಜ್ ಮೆಂಟ್ ಓದೋಕೆ ಅಂತ ಬಂದೆ. ಮೊದಲ ಎರಡು ವರ್ಷ, ಕಷ್ಟ ಪಟ್ಟು ಓದಿದೆ. ಆದರೆ ಇಲ್ಲಿನ ಬದುಕು ದುಬಾರಿ. ಆಗ ನನ್ನ ಸ್ನೇಹಿತರು ಈ ಡ್ರಗ್ ವ್ಯವಹಾರದ ಬಗ್ಗೆ ನನಗೆ ಹೇಳಿಕೊಟ್ಟರು.
ಅದೇ ಸಮಯದಲ್ಲಿ ನನಗೆ ಡಫೀರ ಪರಿಚಯವಾಯಿತು. ನನಗೂ ಈ ಬ್ಯುಸಿನೆಸ್ ಮಾಡಲು ಇಲ್ಲಿಯವರೊಬ್ಬರ ಅವಶ್ಯಕತೆಯಿತ್ತು. ಡಫೀರಾಗೆ ನಾನು ಬಟ್ಟೆಗಳ ರಫ್ತು ಮಾಡುವುದಾಗಿಯೂ, ನಾನು ಈ ದೇಶದ ಪ್ರಜೆಯಲ್ಲವಾದ್ದರಿಂದ, ನನ್ನ ಹೆಸರಿನಲ್ಲಿ ಡಾಕ್ಯುಮೆಂಟ್ ಕಳುಹಿಸಲು ಕಷ್ಟವಾಗುತ್ತಿರುವುದಾಗಿಯೂ ಹೇಳಿದೆ. ಪಾಪ ಅವಳು, ನನಗೆ ಸಹಾಯ ಮಾಡಲು ಒಪ್ಪಿಕೊಂಡಳು. ನಾನೇ ನಕಲಿ ಗುರುತು ಪತ್ರಗಳನ್ನು ತಯಾರಿಸಿ, ಅವುಗಳಿಗೆ ಡಫೀರಾಳ ಫೋಟೋ ಅಂಟಿಸಿ, ಅವಳನ್ನು ಕೊರಿಯರ್ ಆಫೀಸ್ ಗಳಿಗೆ ಕರೆದುಕೊಂಡು ಹೋಗಿ, ಪಾರ್ಸೆಲ್ ಕಳುಹಿಸುತ್ತಿದ್ದೆ’.
`ಅವಳಿಗೆ ನಾನು ಡ್ರಗ್ ವ್ಯವಹಾರ ಮಾಡುವುದು ಗೊತ್ತಾಗದಂತೆ ತುಂಬಾ ಎಚ್ಚರ ವಹಿಸಿದ್ದೆ. ಅವಳು ತುಂಬಾ ಒಳ್ಳೆ ಹುಡುಗಿ. ಬರುಬರುತ್ತಾ, ನನಗೆ ಅವಳು ತುಂಬಾ ಇಷ್ಟವಾಗತೊಡಗಿದಳು. ಅವಳನ್ನು ಮದುವೆಯಾಗಬೇಕು ಅಂತ ಯೋಚನೆ ಮಾಡಿ, ನಾವಿಬ್ಬರೂ ಒಟ್ಟಿಗೆ ಇರೋಕೆ ಶುರುಮಾಡಿದೆವು. ಇತ್ತೀಚೆಗೆ ನಾನು ಈ ಡ್ರಗ್ಸ್ ಬ್ಯುಸಿನೆಸ್ ಬಿಡಬೇಕು ಮತ್ತು ಬೇರೆ ಯಾವುದಾದರೂ `ಲೀಗಲ್’ ಬ್ಯುಸಿನೆಸ್ ಶುರು ಮಾಡಬೇಕು ಅಂತ ಯೋಚನೆ ಮಾಡ್ತಿದ್ದೆ. ಅದಕ್ಕೆ ಬಂಡವಾಳ ಬೇಕಿತ್ತು ಮತ್ತೆ ನಾನು ಡಫೀರಾಳ ಜೊತೆ ಡೆಲ್ಲಿಯಲ್ಲಿರೋಕೆ ಒಂದು ಫ್ಲ್ಯಾಟ್ ತಗೋಬೇಕಿತ್ತು. ಅದಕ್ಕೆ ಅಂತ ನಾನು ಇನ್ನೊಂದೆರೆಡು ಸಲ `ಕನ್ಸೈನ್ ಮೆಂಟ್’ ಕಳುಹಿಸಿ, ಸೆಟಲ್ ಆಗಿಬಿಡೋಕೆ ಯೋಚನೆ ಮಾಡಿದ್ದೆ’, ಅಂದ.
`ನಿನಗೆ ಈ ಡ್ರಗ್ಸ್ ಯಾರು ಸಪ್ಲೈ ಮಾಡುತ್ತಿದ್ದರು?’ ಅಂತ ಕೇಳಿದೆ.
`ಇದು ಎಲ್ಲಿಂದ ಬರುತ್ತೆ ಅಂತ ನನಗೂ ಗೊತ್ತಿಲ್ಲ. ಈ ಪಾರ್ಸೆಲ್ ಗಳನ್ನು ನನಗೆ ಕೊಡುವವರು ಮಾತ್ರ ಗೊತ್ತು. ಅವರ ವಿವರಗಳನ್ನು ಬೇಕಾದರೆ ನಾನು ಕೊಡುತ್ತೇನೆ. ಸರ್, ಇದರಲ್ಲಿ ಡಫೀರಾದೇನೂ ತಪ್ಪಿಲ್ಲ. ಅವಳನ್ನು ಬಿಟ್ಟುಬಿಡಿ ಸರ್. ಎಲ್ಲಾ ತಪ್ಪುಗಳನ್ನೂ ನಾನು ಒಪ್ಪಿಕೊಳ್ಳುತ್ತೇನೆ. ಅವಳು ತುಂಬಾ ಒಳ್ಳೆಯ ಹುಡುಗಿ ಸರ್,’ ಅಂದ.
ನಾನು ನಿಧಾನವಾಗಿ ಹುಡುಗಿಯ ಕಡೆಗೆ ತಿರುಗಿ, `ಯಾವೂರು?’ ಅಂತ ಕೇಳಿದೆ.
`ಶಿಲ್ಲಾಂಗ್…. ಮೇಘಾಲಯ,’ ಅಂದಳು.
`ಅಲ್ಲಿ ನಿಮ್ಮ ಕುಟುಂಬದ ಬ್ಯುಸಿನೆಸ್ ಇದೆಯಾ?’ ಅಂತ ಕೇಳಿದೆ.
ಸುಮ್ಮನೆ ತಲೆ ಆಡಿಸಿದಳು.
`ನೀನು ಇದರಲ್ಲಿ ಹೇಗೆ ಬಿದ್ದೆ?’ ಅಂತ ಕೇಳಿದೆ.
ತನ್ನ ಎರಡೂ ಕೈಗಳಿಂದ, ಮೂಗು ಮತ್ತು ಗಲ್ಲವನ್ನು ಮುಚ್ಚಿಕೊಂಡು ಶೂನ್ಯವನ್ನು ದಿಟ್ಟಿಸತೊಡಗಿದಳು. ರಾತ್ರೆಯೆಲ್ಲ ನಿದ್ರೆ ಮಾಡಿಲ್ಲ ಅನ್ನೋದು ಸ್ಪಷ್ಟವಾಗಿ ಕೆಂಪಾದ ಕಣ್ಣುಗಳಿಂದ ಗೊತ್ತಾಗತೊಡಗಿತು. ಆಕೆ ಏನೂ ಉತ್ತರಿಸಲಿಲ್ಲ.
ಸರಿ, ಇವಳಿಂದ ಇನ್ನೇನೂ ಸಿಗೋದಿಲ್ಲ ಅಂದ್ಕೊಂಡು ಹೊರಡಲು ಎದ್ದೆ. ತಕ್ಷಣವೇ ಡಫೀರಾ ಮಾತಾಡಿದಳು: `ಸರ್, ನನ್ನ ಕುಟುಂಬಕ್ಕೆ ನಾನು ಅರೆಸ್ಟ್ ಆಗಿರೋದು ಗೊತ್ತಾಗಬಾರದು. ಅವರಿಗೆ ತಡೆದುಕೊಳ್ಳಲು ಆಗೋದಿಲ್ಲ,’ ಅಂದಳು.
ನಾನು ತಲೆ ಅಲ್ಲಾಡಿಸುತ್ತಾ ತಿರುಗಿದಾಗ, ಆ ಹುಡುಗ ನನ್ನ ಎಡದ ಕೈ ಹಿಡಿದುಕೊಂಡು: `ಸರ್, ಡಫೀರಾಳನ್ನು ಬಿಟ್ಟು ಬಿಡಿ ಸರ್. ಅವಳು ತುಂಬಾ ಮುಗ್ದೆ. ಅವಳಿಗೆ ಏನು ಶಿಕ್ಷೆ ಇದೆಯೋ, ಅದನ್ನು ಸಹ ನಾನೇ ಅನುಭವಿಸುತ್ತೇನೆ. ನನ್ನನ್ನು ನೇಣಿಗೇರಿಸಿದರೂ ಪರವಾಗಿಲ್ಲ. ಅವಳಿಗೆ ಸಹಾಯ ಮಾಡಿ ಸರ್,’ ಅಂತ ಅಂಗಲಾಚಿದೆ.
ಅವನ ಮುಖವನ್ನೇ ನೋಡಿದೆ. ಅವನ ಕಣ್ಣಲ್ಲಿ ನೀರು ಹನಿಗೂಡಿತ್ತು. ಹಾಗೇ ಡಫೀರಾಳ ಮುಖ ನೋಡಿದೆ. ಅವಳು ಎವೆಯಿಕ್ಕದೆ  ಅವನನ್ನೇ ನೋಡುತ್ತಿದ್ದಳು. ಅವಳ ಕಣ್ಣಲ್ಲಿ ಒಂದು ಹನಿ ನೀರು ಕೂಡ ಇರಲಿಲ್ಲ. ಅದು ಸಿಟ್ಟೋ, ದುಃಖವೋ ಅನ್ನೋದು ಗೊತ್ತಾಗಲಿಲ್ಲ. ಇದೇನಾ `ಮಡುಗಟ್ಟಿದ ಆಕ್ರೋಶ’ ಅಂದರೆ ಅಂದ್ಕೊಂಡೆ.
ಹೊರಗಡೆ ಬಂದವನು ವಿಜಯ್ ಹತ್ತಿರ ಹೋಗಿ, `ಟೀವಿಯವರಿರೆ ವಿಡಿಯೋ ತೆಗೆಯೋಕೆ ಬಿಡಲಿಲ್ಲವಂತೆ? ಒಂದಿಬ್ಬರು ಕೇಳಿದರು, ಅಂದೆ.
`ಇಲ್ಲ ವಿನಯ್. ತುಂಬಾ ಪ್ರೆಶರ್ ಇದೆ. ಕೋರ್ಟ್ ಹತ್ತಿರ ತಗೊಳ್ಳೋಕೆ ಹೇಳಿ,’ ಅಂದರು.
`ಸರಿ,’ ಅಂತ ಹೇಳಿ, ಅಲ್ಲಿಂದ ಹೊರಟೆ.
ಆಫೀಸಿಗೆ ಬಂದವನೇ, ನನ್ನ ಜೊತೆ ಕೆಲಸ ಮಾಡುತ್ತಿದ್ದ ಶಿಲ್ಲಾಂಗ್ ಹುಡುಗಿ ಧರಿಣ್ಯಳಿಗೆ ವಿಷಯ ಹೇಳಿದೆ. ಡಫೀರಾ ವಾಲಂಗ್ ಎಂದ ತಕ್ಷಣವೇ, `ವಾಲಂಗ್ ಶಿಲ್ಲಾಂಗ್ ನಲ್ಲೇ ದೊಡ್ಡ ಕುಟುಂಬ. ಆ ಕುಟುಂಬದ ಹುಡುಗಿ ಯಾಕೆ ಹೀಗೆ ಮಾಡಿದಳು? ಅವಳನ್ನು ನಾನು ನೋಡಬಹುದಾ?’ ಅಂತ ಕೇಳಿದಳು.
`ಈಗ ಅವಳನ್ನು ಜೈಲಿಗೆ ಕಳುಹಿಸಿದ್ದಾರೆ. ಬೇಕಾದರೆ ಹೇಳು… ನಾಳೆ ನಾಡಿದ್ದರಲ್ಲಿ ವ್ಯವಸ್ಥೆ ಮಾಡ್ತೀನಿ,’ ಅಂದೆ.
ಎರಡು ದಿನ ಬಿಟ್ಟು ವಿಜಯ್ ಗೆ ಫೋನ್ ಮಾಡಿ, `ಡಫೀರಾ ಕುಟುಂಬ ಶಿಲ್ಲಾಂಗ್ ನಲ್ಲೇ ದೊಡ್ಡ ಕುಟುಂಬ ಅಂತೆ. ನನ್ನ ಜೊತೆ ಕೆಲಸ ಮಾಡುವ ಹುಡುಗಿ ಶಿಲ್ಲಾಂಗ್ ನವಳು. ಅವಳು ಹೇಳಿದಳು,’ ಅಂದೆ.
`ಹೌದು ವಿನಯ್. ಅದಕ್ಕೇ ನಾವು ವಿಡಿಯೋ ತೆಗೆಯೋಕೆ ಬಿಡಲಿಲ್ಲ. ಅವಳು ಅರೆಸ್ಟ್ ಆದ ವಿಷಯ ಗೊತ್ತಾದ ತಕ್ಷಣ ನಮಗೆ ಶಿಲ್ಲಾಂಗ್ ಮತ್ತು ಡೆಲ್ಲಿಯಿಂದ ಫೋನ್ ಗಳು ಬರಲಾರಂಬಿಸಿದವು. ವಿ ವರ್ ಅಂಡರ್ ಟ್ರೆಮೆಂಡಸ್ ಪ್ರೆಶರ್. ಮೀಡಿಯಾಗೆ ಹೇಳಬಾರದು ಅಂತ ಇದ್ದೆವು……,’ ಅಂತ ಹೇಳುತ್ತಾ ಹೋದಾಗ, ಶೂನ್ಯವನ್ನೇ ದಿಟ್ಟಿಸುತ್ತಿದ್ದ ಡಫೀರಾಳ ಮುಖ ಒಮ್ಮೆ ಕಣ್ಣ ಮುಂದೆ ಬಂತು…….


ಮಾಕೋನಹಳ್ಳಿ ವಿನಯ್ ಮಾದವ್



ಶುಕ್ರವಾರ, ಸೆಪ್ಟೆಂಬರ್ 21, 2012

ಪಂಚಾಯ್ತಿ ಪಾಲಿಟಿಕ್ಸ್




ಡಾ! ಪಂಚಾಯ್ತಿ ಪ್ರೆಸಿಡೆಂಟ್

ಅಮ್ಮ ಯಾಕೋ `ಓವರ್ ರಿಯಾಕ್ಟ್’ ಮಾಡ್ತಾ ಇದೆ ಅಂತ ಅನ್ನಿಸ್ತು. ಯಾರು ಬಂದು ಅಣ್ಣನ ರಿಟೈರ್ ಮೆಂಟ್ ಲೈಫ್ ಬಗ್ಗೆ ಕೇಳಿದ್ರೂ: `ಯಾರಿಗೆ ರಿಟೈರ್ ಮೆಂಟ್ ಕೊಟ್ಟರೂ, ಡಾಕ್ಟರ್ ಗಳಿಗೆ ಮಾತ್ರ ರಿಟೈರ್ ಮೆಂಟ್ ಕೊಡಬಾರ್ದು. ರಿಟೈರ್ ಆದಮೇಲೆ ನೋಡೋಕೆ ಪೇಶೆಂಟ್ಸ್ ಇರೋದಿಲ್ಲವಲ್ಲ, ಅವರಿಗೆ ಎಲ್ಲಾರಲ್ಲೂ ಖಾಯಿಲೆ ಕಾಣಿಸುತ್ತೆ,’ ಅಂತ ಗೊಣಗಾಡ್ತಿದ್ರು.
ಅಣ್ಣನ ಜೀವನವೇ ಒಂಥರಾ ವಿಚಿತ್ರ. ಅದನ್ನು ಅರ್ಥ ಮಾಡಿಕೊಳ್ಳೋಕೆ ಕಷ್ಟ ಆಗ್ತಿತ್ತು. ನಾನು ನೋಡಿದ ಹಾಗೆ, ಸಕಲೇಶಪುರ ಬಿಟ್ಟರೆ, ಅಣ್ಣ ಕೆಲಸ ಮಾಡಿದ್ದೆಲ್ಲಾ ಹಳ್ಳಿಗಳ ಆಸ್ಪತ್ರೆಗಳಲ್ಲಿ. ಜೀವನದಲ್ಲಿ ಒಂದು ಸಲನೂ ಪ್ರಮೋಶನ್ ತಗೊಳ್ಳಲಿಲ್ಲ. ಹೆಚ್ಚಿಗೆ ಮಾತನಾಡದ ಅಣ್ಣನನ್ನು ನೋಡಿ ಇವರಿಗೆ ಯಾರೂ ಸ್ನೇಹಿತರಿಲ್ಲ ಅಂದುಕೊಂಡಿದ್ದೆ. ಅಮ್ಮ, ಅಣ್ಣನ ಯಾವುದಾದರೂ ಸ್ನೇಹಿತರ ಹೆಸರು ಹೇಳಿದರೆ ನನಗೆ ಆಶ್ಚರ್ಯವಾಗುತ್ತಿತ್ತು. ಇವರೆಲ್ಲ ಅಣ್ಣನ ಜೀವನದ ಯಾವ ಭಾಗದಲ್ಲಿ ಬಂದಿದ್ದರು ಅಂತ ಅರ್ಥವಾಗುತ್ತಿರಲಿಲ್ಲ.
ಅಣ್ಣನಿಗೆ ರಿಟೈರ್ ಆಗಲು ಎರಡು ವರ್ಷವಿದ್ದಾಗ ಅವರ ಗೆಳೆಯರಲ್ಲೊಬ್ಬರಾದ ಡಾ! ಎಚ್ ಎಲ್ ತಿಮ್ಮೇಗೌಡರು ಆರೋಗ್ಯ ಮಂತ್ರಿಯಾಗಿದ್ದರು. ಒಂದೆರೆಡು ಸಲ ಅಣ್ಣನನ್ನು ಬೆಂಗಳೂರಿಗೆ ವರ್ಗ ಮಾಡಿಸಿದ್ದರೂ, ಅಣ್ಣ ಬರಲು ಒಪ್ಪಿರಲಿಲ್ಲ. ಕೊನೆ ಮೂರು ವರ್ಷಗಳು ಇದ್ದಾಗ ಅವರನ್ನು ಸಹಾಯಕ ಸರ್ಜನ್ ಅಂತ ಪ್ರಮೋಶನ್ ಕೊಟ್ಟು, ಮೂಡಿಗೆರೆಗೆ ಹಾಕಿದ್ದರು. ಆಗಲೂ ಅಷ್ಟೆ, ಊರಿನ ಹತ್ತಿರ ಹೋಗೋದಾದ್ರೆ ತೋಟಕ್ಕೆ ಹೋಗೋಣ ಅಂತ ಅಮ್ಮ ಹೇಳಿದರಿಂದ, ಯಾರೂ ಬರದ ನಂದೀಪುರದ ಆಸ್ಪತ್ರೆಗೆ ವರ್ಗ ಮಾಡಿಸಿಕೊಂಡರು. ನಂದೀಪುರ ಆಸ್ಪತ್ರೆ ನಮ್ಮ ತೋಟದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿದೆ.
ಅಲ್ಲಿಂದ ಮುಂದೆ ಪೂರ್ತಿ ಬ್ಯುಸಿ ಆಗಿದ್ದು ಅಮ್ಮ. ಹನ್ನೆರೆಡು ಕಿಲೋಮೀಟರ್ ದೂರದ ರೈಸ್ ಮಿಲ್ಲಿನಲ್ಲಿ ಕುಳಿತ ಅಜ್ಜನ ಉಸ್ತುವಾರಿಯಲ್ಲಿ, ಕಾಡು ಹತ್ತಿದ ತೋಟದ ಮಧ್ಯ ಕಾಫಿ ಗಿಡಗಳನ್ನು ಟಾರ್ಚ್ ಬಿಟ್ಟು ಹುಡುಕಬೇಕಿತ್ತು. ಅಣ್ಣ ನಾಲ್ಕು ಕಿಲೋಮೀಟರ್ ದೂರದ ಆಸ್ಪತ್ರೆ ಯಾತ್ರೆ ಶುರು ಮಾಡಿದರೆ, ಅಮ್ಮ ಕಾಡು ಕಡಿದು ತೋಟ ಮಾಡುವ ಕೆಲಸಕ್ಕೆ ನಿಂತರು. ಸರ್ಕಾರವು ನೌಕರರ ನಿವೃತ್ತಿ ವಯಸ್ಸನ್ನು ಐವತೈದರಿಂದ, ಐವತ್ತೆಂಟಕ್ಕೆ ಏರಿಸಿದ ಪರಿಣಾಮವಾಗಿ, ಅಣ್ಣ ಮೂರು ವರ್ಷದ ಬದಲು, ನಂದೀಪುರ ಆಸ್ಪತ್ರೆಯಲ್ಲಿ ಆರು ವರ್ಷ ಕೆಲಸ ಮಾಡಬೇಕಾಯಿತು. ಯಾರೂ ಬರಲು ಇಷ್ಟ ಪಡದ ನಂದೀಪುರ ಆಸ್ಪತ್ರೆಗೆ ಇದು ವರದಾನವಾಯ್ತು ಅಂತಲೇ ಹೇಳಬಹುದು.
ಆರು ವರ್ಷವೂ ಮುಗಿದ ಮೇಲಂತೂ ಅಣ್ಣ ನಿವೃತ್ತಿಯಾಗಲೇ ಬೇಕಾಯಿತು. ಅಷ್ಟರೊಳಗೆ ನಾನೂ ಮತ್ತು ವೆಂಕಟೇಶಣ್ಣ, ನಮ್ಮ ದಾರಿಗಳನ್ನು ನೋಡಿಕೊಳ್ಳಲು ಬೆಂಗಳೂರು ದಾರಿ ಹಿಡಿದಾಗಿತ್ತು. ಅಣ್ಣ ನಿವೃತ್ತಿಯಾದಮೇಲೆ ಅಮ್ಮನಿಗೆ ಸ್ವಲ್ಪ ಕೆಲಸ ಹಗುರವಾಗಬಹುದು ಅಂದುಕೊಂಡಿದ್ದೆ. ಅದು ತಪ್ಪು ಅಂತ ಗೊತ್ತಾಗಿದ್ದೇ ಊರಿಗೆ ಹೋದಾಗ.
ಜೀವನವಿಡೀ ರೋಗಿಗಳೊಡನೆ ಆಸ್ಪತ್ರೆಯಲ್ಲಿ ಕಳೆದ ಅಣ್ಣನಿಗೆ, ಮನೆಯಲ್ಲಿ ಏನು ಮಾಡಬೇಕು ಅಂತ ಗೊತ್ತಿರಲಿಲ್ಲ. ಬ್ಯಾಂಕ್ ವ್ಯವಹಾರ ನೋಡಿಕೊಳ್ಳುತ್ತಿದ್ದರು ಮತ್ತು ಆಗಾಗ ತೋಟಕ್ಕೆ ಹೋಗಿ ಬರುತ್ತಿದ್ದರು. ಏನನ್ನಿಸಿತೋ ಏನೋ, ಅಮ್ಮ ಬೆಳಗ್ಗೆ ಆಳುಗಳಿಗೆ ಕೆಲಸ ಹೇಳುವ ಸಮಯದಲ್ಲಿ ಅಣ್ಣನೂ ಹೋಗಿ ನಿಲ್ಲಲು ಶುರುಮಾಡಿದರಂತೆ.
ಸುಮ್ಮನಿದ್ದರಾಗುತ್ತಿತ್ತೇನೋ… ಕೆಲಸದವರನ್ನು ನೋಡಿ, `ವಿಜು… ಆ ಹುಡುಗಿಯನ್ನು ನೋಡು, ಎಷ್ಟು ತೆಳ್ಳಗಿದ್ದಾಳೆ. ಅನೀಮಿಕ್ ಅವಳಿಗೆ. ವಿಟಮಿನ್ ಟ್ಯಾಬ್ಲೆಟ್ ಕೊಡಬೇಕು. ಅವನಿದ್ದಾನಲ್ಲ… ಅವನು ಇರೋ ರೀತಿಯಲ್ಲಿ ಮರ ಹತ್ತೋದು ಡೇಂಜರ್….’ ಅಂತೆಲ್ಲ ಮಾತಾಡಲು ಶುರು ಮಾಡಿದರು.
ಅಮ್ಮನ ಪಿತ್ತ ನೆತ್ತಿಗೇರಿ, ಅಣ್ಣನನ್ನು ಬೆಳಗ್ಗಿನ ಹೊತ್ತು ಆಳುಗಳು ಮನೆಯ ಸುತ್ತ ಇರುವಾಗ ಹೊರಗೆ ಬರುವುದನ್ನೇ ನಿಷೇಧಿದರು. ಪಾಪ ಅಣ್ಣ, ಅವರ ಪಾಡಿಗೆ ಯಾವುದಾದರೂ ಪುಸ್ತಕ ಹಿಡ್ಕೊಂಡು ಒಳಗೆ ಕೂತಿರುತ್ತಿದ್ದರು. ಅದರ ಜೊತೆ, ಬಂದವರ ಹತ್ತಿರವೆಲ್ಲ ಅಮ್ಮ ಈ ಘಟನೆಗಳನ್ನು ಹೇಳಿ, `ಕೆಲಸ ಮಾಡಿ ಆಳುಗಳು ಇರೋದೇ ತೆಳ್ಳಗೆ. ಗಂಡಾಳುಗಳು ಕುಡಿದೂ ಕುಡಿದೂ ಯಾವಾಗ ಬೀಳ್ತಾರೆ ಅಂತ ಹೇಳೋಕಾಗಲ್ಲ. ಇವರು ಹೀಗೆ ಅವರುಗಳ ಮುಂದೆ ಮಾತಾಡಿದ್ರೆ, ನಾನು ಈ ಆಳುಗಳನ್ನು ಇಟ್ಕೊಂಡು ಕೆಲಸ ತೆಗೆಯೋದು ಹ್ಯಾಗೆ? ರಿಟೈರ್ ಆದ ಡಾಕ್ಟರ್ ಗಳಿಗೆ ಯಾವುದಾದರೂ ಕೆಲಸ ಹಚ್ಚಬೇಕು. ಇಲ್ದೇ ಹೋದ್ರೆ, ನಮ್ಮನ್ನೇ ಪೇಶೆಂಟ್ ಮಾಡ್ತಾರೆ, ಅಷ್ಟೆ,’ ಅಂತ ತಮಾಷೆ ಕೂಡ ಮಾಡ್ತಿದ್ರು.
ನನಗೆ ಅಣ್ಣನನ್ನು ನೋಡಿ ಪಾಪ ಅನ್ನಿಸ್ತು. `ಹೋಗ್ಲಿ ಬಿಡಮ್ಮ. ಅಣ್ಣ ಏನು ಮಾಡೋಕಾಗುತ್ತೆ. ತೋಟದ ಬಗ್ಗೆ ಅಣ್ಣಂಗೆ ಎಷ್ಟು ಗೊತ್ತು? ನಿಧಾನಕ್ಕೆ ಗೊತ್ತಾಗುತ್ತೆ, ಬಿಡು,’ ಅಂತ ಹೇಳೋಕೆ ಹೋಗಿ, ಅಮ್ಮನ ಕೈಲಿ ಚೆನ್ನಾಗಿ ಬೈಸಿಕೊಂಡೆ. `ಹೋಗೋ.. ನಿನಗೇನು ಗೊತ್ತು ತೋಟದ ಬಗ್ಗೆ. ಸುಮ್ಮನೆ ನಿನ್ನ ಕೆಲಸ ನೋಡ್ಕೋ,’ ಅಂದ್ರು. ನಾನು ತೆಪ್ಪಗಾದೆ.
ಇದೆಲ್ಲಾ ಆಗಿ ಒಂದು ವರ್ಷ ಆಗ್ತಾ ಬಂದಿತ್ತು. ನಮ್ಮ ಸಂಬಂಧಿಯೊಬ್ಬರ ಮದುವೆಗೆ ಅಂತ ಊರವರೆಲ್ಲ ಬೆಂಗಳೂರಿಗೆ ಬಂದಿದ್ದರು. ಅಮ್ಮ, ಅಣ್ಣನೂ ಬಂದಿದ್ದರು. ಬಸವೇಶ್ವರನಗರದ ದೊಡ್ಡಮ್ಮನ ಮನೆಯಲ್ಲಿ ಊರವರೆಲ್ಲ ಸೇರಿದಾಗ ನನಗೆ ಒಂದು ವಿಷಯ ಕಿವಿಗೆ ಬಿತ್ತು: `ಅಣ್ಣ ಪಂಚಾಯ್ತಿ ಎಲೆಕ್ಷನ್ ನಿಲ್ತಾರೆ,’ ಅಂತ.
ಸಿಕ್ಕಾಬಟ್ಟೆ ನಗು ಬಂತು. ಅಣ್ಣಂಗೆ ಈ ಹುಚ್ಚು ಯಾವಾಗ ಹಿಡೀತು? ನಮ್ಮ ಕುಟುಂಬ ರಾಜಕಾರಣದಲ್ಲಿ ಸಕ್ರಿಯವಾಗಿರೋದೇನೋ ನಿಜ. ಇಬ್ಬರು ಪಾರ್ಲಿಮೆಂಟ್ ಮೆಟ್ಟಲು ಸಹ ಹತ್ತಿದ್ದಾರೆ. ಆದರೆ, ಅಣ್ಣ ಮತ್ತು ರಾಜಕಾರಣ? ಅರ್ಥವಾಗಲಿಲ್ಲ.
ಸುಂದರೇಶ ಚಿಕ್ಕಪ್ಪನನ್ನು ಕೇಳಿದೆ. `ಅದಾ… ದೊಡ್ಡ ವಿಷಯ ಅಲ್ಲ ಬಿಡು ಮಗಾ. ಈಗ ನಮ್ಮೂರಲ್ಲಿ ಎಲ್ಲಾ ಪಾರ್ಟಿ ಸದಸ್ಯರಿದ್ದಾರೆ. ಯಾವುದಾದರೂ ಪಾರ್ಟಿಯವರು ನಿಂತರೆ ಮುಂದೆ ಸಣ್ಣ, ಪುಟ್ಟ ಸಮಸ್ಯೆಗಳು ಬರಬಹುದು. ಜೊತೆಗೆ, ಪ್ರೆಸಿಡೆಂಟ್ ಜನರಲ್ ಕ್ಯಾಟೆಗರಿಗೆ ಬಂದಿದೆ. ಅದಕ್ಕೆ ನಾವು ಊರವರೆಲ್ಲ ಸೇರಿ, ಯಾರು ರಾಜಕೀಯದಲ್ಲಿ ಇಲ್ಲವೋ, ಅವರನ್ನ ಎಲೆಕ್ಷನ್ ಗೆ ನಿಲ್ಸೋದು ಅಂತ ತೀರ್ಮಾನಿಸಿದ್ವಿ. ಮಾಧವಣ್ಣನೂ ರಿಟೈರ್ ಆದಮೇಲೆ ಏನು ಮಾಡಬೇಕೂಂತ ಗೊತ್ತಿಲ್ಲದೆ ಕೂತಿದ್ದ. ಅವನಾದ್ರೆ ಏನೂ ಸಮಸ್ಯೆ ಬರೋದಿಲ್ಲ ಅಂತ ಅಷ್ಟೆ,’ ಅಂದ್ರು.
`ಅಲ್ಲಾ, ನಾಡಿದ್ದೇ ಎಲೆಕ್ಷನ್. ಅಣ್ಣನ ಎದುರು ಇಬ್ಬರು ನಿಂತಿದ್ದಾರಂತೆ. ನೀವೆಲ್ಲ ಇಲ್ಲಿದ್ದೀರ?’ ಅಂತ ರಾಗ ಎಳೆದೆ.
`ಅಯ್ಯೋ ಬಿಡು. ಅವರಿಬ್ಬರಿಗೆ ಸೇರಿ ಇಪ್ಪತೈದು ಓಟು ಬರೋಲ್ಲ. ಜಯಕ್ಕನನ್ನೂ ನಿಲ್ಸಿದ್ದೀವಿ. ಅವ್ರೂ ಇಲ್ಲೇ ಇಲ್ಲವಾ? ಅವರು ವೈಸ್ ಪ್ರೆಸಿಡೆಂಟ್ ಆಗ್ತಾರೆ ಬಿಡು. ತಲೆ ಕೆಡೆಸಿಕೊಳ್ಳಬೇಡ,’ ಅಂದ್ರು.
ಇದೊಳ್ಳೆ ಎಲೆಕ್ಷನ್ ಅಂದುಕೊಂಡು, ನಕ್ಕುಬಿಟ್ಟೆ. ಅಮ್ಮನ ಹತ್ತಿರ ಹೋಗಿ, `ಏನಮ್ಮಾ? ಗಂಡನ್ನ ಪಾಲಿಟಿಕ್ಸ್ ಗೆ ಇಳಿಸಿದ್ದೀಯಂತೆ?’ ಅಂತ ತಮಾಷೆ ಮಾಡಿದೆ.
`ನನ್ನ ಮಾತು ಯಾರು ಕೇಳ್ತಾರೆ. ಇದೊಂದು ಕಮ್ಮಿ ಇತ್ತು, ಮನೆ ಹಾಳಾಗೋಕೆ,’ ಅಂತ ಅಮ್ಮ ಸಿಡುಕಿದರು. ಅಷ್ಟರಲ್ಲೇ ಹಿಂದುಗಡೆಯಿಂದ ಬಂದ ಸುಂದರೇಶ್ ಚಿಕ್ಕಪ್ಪ: `ಇವತ್ತು ಎಷ್ಟೋ ಪರವಾಗಿಲ್ಲ ಕಣೋ. ಅವತ್ತು ನಿಮ್ಮಮ್ಮ ಗೊಳೋ ಅಂತ ಅಳೋಕೆ ಶುರುಮಾಡಿದ್ರು. ಎಲೆಕ್ಷನ್ ಗೆ ನಿಂತು ಮಾಧವಣ್ಣ ಮನೆ ಹಾಳು ಮಾಡ್ತಾನೆ ಅಂತ. ತುಂಬಾ ಹೊತ್ತು ಸಮಾಧಾನ ಮಾಡಿ, ಎಲೆಕ್ಷನ್ ಖರ್ಚು ಊರವರೇ ನೋಡ್ಕೋತ್ತೀವಿ, ಮಾಧವಣ್ಣ ಓಡಾಡೋದೂ ಬೇಡ, ಅಂದ್ಮೇಲೆ ಸುಮ್ಮನಾದ್ರು,’ ಅಂತ ನಕ್ಕರು.
ನಾನೂ ನಗುತ್ತಾ ಅಮ್ಮನ ಮುಖ ನೋಡಿದೆ. `ನಾನು ಇಷ್ಟು ವರ್ಷ ಕಷ್ಟ ಪಟ್ಟು ತೋಟ ಮಾಡಿದೆ. ಇವ್ರು ಎಲೆಕ್ಷನ್ ನಿಂತು ಯಾರನ್ನ ಉದ್ದಾರ ಮಾಡಬೇಕು? ಈ ವಯಸ್ಸಲ್ಲಿ ರಾಜಕೀಯ ಅಂತ ಮನೆ ಹಾಳು ಮಾಡಿಕೊಳ್ಳೋದೊಂದು ಬಾಕಿ ಇದೆ,’ ಅಂತ ಅಮ್ಮ ಗೊಣಗಿದರು.
`ಹೋಗ್ಲಿ ಬಿಡಮ್ಮ. ಯಾಕ್ಹಿಂಗಾಡ್ತೀಯ? ಅಣ್ಣಂಗೆ ಮನೇಲಿ ಇದ್ದು ಅಭ್ಯಾಸ ಇಲ್ಲ. ಈ ಥರ ಸೋಶಿಯಲ್ ಸರ್ವಿಸ್ ಮಾಡ್ಲಿ ಬಿಡು,’ ಅಂದೆ. `ನಿಂಗೊತ್ತಾಗಲ್ಲ ಬಿಡು. ನಮಗ್ಯಾಕೆ ಬೇಕು ಈ ಪಾಲಿಟಿಕ್ಸ್,’ ಅಂತ ಅಮ್ಮ ಬೈದ್ರು.
ನಮ್ಮ ಕುಟುಂಬ ರಾಜಕೀಯದಲ್ಲಿದ್ರೂ, ನಮ್ಮ ಮನೆಯಲ್ಲಿ ನಾವ್ಯಾರೂ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ಮೊದಲ ಸಲ ರಾಜ್ಯದಲ್ಲಿ ಜಿಲ್ಲಾ ಪರಿಷತ್ ಚುನಾವಣೆಯಾದಾಗ ನಾನಿನ್ನೂ ಪಿಯುಸಿ ಓದುತ್ತಿದ್ದೆ. ಆ ಚುನಾವಣೆಯಲ್ಲಿ ಓಡಾಡಿದ್ದು ಅಮ್ಮನಿಗಾಗಲಿ, ಅಣ್ಣನಿಗಾಗಲಿ ಇಷ್ಟವಾಗಿರಲಿಲ್ಲ. ಅದಾದ ಮೇಲೆ ನಾನೂ ಊರಿಗೆ ಪುರುಸೋತ್ತಾಗಿ ಹೋಗಿದ್ದು, ಊರಿನ ರಾಜಕೀಯದಲ್ಲಿ ತಲೆ ಹಾಕಿದ್ದು ಕಡಿಮೆಯಾಗಿತ್ತು.
ಸುಂದರೇಶ್ ಚಿಕ್ಕಪ್ಪ ಹೇಳಿದ್ದು ನಿಜವಾಗಿತ್ತು. ಅಣ್ಣನ ಎದುರು ನಿಂತವರಿಬ್ಬರೂ ಅಷ್ಟೋ ಇಷ್ಟೋ ಓಟುಗಳನ್ನು ತೆಗೆದುಕೊಂಡಿದ್ದರು. ಇನ್ನುಳಿದ ಓಟುಗಳೆಲ್ಲಾ ಅಣ್ಣನಿಗೇ ಬಂದಿತ್ತು. ಅದು ಗೊತ್ತಾಗಿದ್ದು ಮುಂದಿನ ಸಲ ಊರಿಗೆ ಹೋದಾಗ.
ಅಣ್ಣನ ಚಿಕ್ಕಪ್ಪನ ಮಗ ಶಶಿಧರಣ್ಣನ ಜೊತೆ ಮಾತಾಡ್ತಾ, `ಹ್ಯಾಗಿತ್ರಿ ನಿಮ್ಮಣ್ಣನ ಎಲೆಕ್ಷನ್?’ ಅಂತ ತಮಾಷೆ ಮಾಡಿದೆ.
`ಅದೇನು ಬಿಡು ಮಾರಾಯ. ಇಬ್ಬರೂ ಠೇವಣಿ ಕಳ್ಕೊಂಡ್ರು ಅಷ್ಟೆ. ನಮ್ಮದೇ ಓಟುಗಳಲ್ವಾ? ನಮ್ಮ ಕೇಶವ ಮೂರ್ತಿಯಂತೂ ಒಂದು ಬೂತನ್ನೇ ಕಂಟ್ರಾಕ್ಟ್ ತಗೊಂಡಿದ್ದ. ಅವನೊಬ್ಬನೇ ಆರೋ, ಏಳೋ ಓಟು ಹಾಕಿದ್ನಂತೆ,’ ಅಂತ ನಕ್ಕರು.
ಕೇಶವ ಮೂರ್ತಿ ಅಂದ ತಕ್ಷಣ ಕಿವಿ ನೆಟ್ಟಗಾಯ್ತು. ಅವನು ನಮ್ಮೂರಿನ ಹಳೇ ತಲೆಮಾರಿನವರ ಕ್ಷೌರಿಕ. ಅಣ್ಣನಿಗೆ ಹೇರ್ ಕಟ್ ಮಾಡಲು ತಿಂಗಳಿಗೆ ಒಂದು  ದಿನ ಮನೆಗೆ ಬರ್ತಿದ್ದ. ಮನೆಯಲ್ಲೇ ನೆಡೆಯುವ ಈ ಹೇರ್ ಕಟ್ ನೆಡೆಯುವಾಗ ಇಬ್ಬರ ಮಧ್ಯ ಕೆಲವು ಸಂಭಾಷಣೆಗಳೂ ನೆಡೆಯುತ್ತಿದ್ದವು.
ಒಂದು ಸಲ ಅಣ್ಣನಿಗೆ ಯಾಕೋ ರೇಗಿತ್ತು ಅಂತ ಕಾಣುತ್ತೆ. `ಮತ್ತೆ ನೀನು ಪಂಚಾಯ್ತಿ ಮೆಂಬರ್ ಆಗಿರೋದು ಕತ್ತೆ ಕಾಯೋಕಾ. ಅಲ್ಲಿ ಮೀಟಿಂಗಲ್ಲಿ ಹೇಳೋಕೆ ಏನಾಗಿತ್ತು?’ ಅಂತ ಬೈದರು.
`ನನ್ನ ಮೆಂಬರ್ ಮಾಡಿರೋದೇ ನೀವೆಲ್ಲ ಸೇರಿಕೊಂಡು. ಇನ್ನು ನನ್ನ ಮಾತು ಯಾರು ಕೇಳ್ತಾರೆ. ತೆಪ್ಪಗೆ ಕೂತು ಬಂದರೆ ಸರಿ. ಇಲ್ಲದೆ ಹೋದರೆ, ಹೊರಗೆ ಬಂದ ಮೇಲೆ ಚಂದ್ರೇಗೌಡರು ನನ್ನ ಚಮಡಾ ಸುಲೀತಾರೆ, ಅಷ್ಟೆ,’ ಅಂದ.
ಎರಡು ಚಂದ್ರೇಗೌಡರು, ಎರಡು ರಾಮೇಗೌಡರು, ಎರಡು ಲಕ್ಷ್ಮಣಗೌಡರು ಇರುವ ನಮ್ಮ ಕುಟುಂಬದಲ್ಲಿ, ಯಾವ ಚಂದ್ರೇಗೌಡರು ಅಂತ ಗೊತ್ತಾಗದೆ ಸುಮ್ಮನಾಗಿದ್ದೆ. ಆ ವಿಷಯಗಳಲ್ಲಿ ನಾವು ತಲೆ ಹಾಕೋದು ಅಣ್ಣನಿಗೆ ಇಷ್ಟವಾಗುತ್ತಿರಲಿಲ್ಲ.
ಆದರೆ, ಒಂದಂತೂ ಗೊತ್ತಾಗಿತ್ತು – ಕೇಶವ ಮೂರ್ತಿ ಪಂಚಾಯ್ತಿ ಸದಸ್ಯನಾದರೂ, ಅದು ನಾಮ ನಿಮಿತ್ತ ಮಾತ್ರ. ತನ್ನ ಕುಲ ಕಸುಬನ್ನು ಬಿಟ್ಟು ಇನ್ನೇನೂ ಮಾಡೋಕಾಗೋಲ್ಲ, ಅಂತ. ಈ ಸಲದ ಎಲೆಕ್ಷನ್ ನಲ್ಲಿ, ಮಾಜೀ ಪಂಚಾಯ್ತಿ ಸದಸ್ಯನೊಬ್ಬ, ಆರರಿಂದ ಏಳು ನಕಲಿ ಮತದಾನ ಮಾಡಿದ್ದ.
ಅಣ್ಣನನ್ನು ಪ್ರೆಸಿಡೆಂಟ್ ಮತ್ತು ಅಣ್ಣನಿಗೆ ವರಸೆಯಲ್ಲಿ ಚಿಕ್ಕಮ್ಮನಾಗಬೇಕಾದ ಜಯ ದೊಡ್ಡಮ್ಮನನ್ನು ವೈಸ್ ಪ್ರೆಸಿಡೆಂಟ್ ಮಾಡಲಾಯಿತು.. ಸ್ವಲ್ಪ ದಿನದ ನಂತರ ನೆಡೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ, ನಮ್ಮ ಕುಟುಂಬದವರೇ ಆದ ಜಗನ್ನಾಥ ಚಿಕ್ಕಪ್ಪ ಗೆದ್ದು, ಅಧ್ಯಕ್ಷರು ಕೂಡ ಆದರು.
ಪ್ರೆಸಿಡೆಂಟ್ ಆದಮೇಲೆ ಅಣ್ಣ ಲವಲವಿಕೆಯಿಂದ ಓಡಾಡಲು ಶುರುಮಾಡಿದರು. ಅಮ್ಮನಿಗೆ ಈ ಓಡಾಟ ಇಷ್ಟವಿಲ್ಲ ಅಂತ ಗೊತ್ತಿದ್ದರಿಂದ, ಕಾರನ್ನು ಬಿಟ್ಟು, ಅವರ ಸ್ಕೂಟರ್ ನಲ್ಲೇ ಓಡಾಡುತ್ತಿದ್ದರು. ನಾವಂತೂ ಪಂಚಾಯ್ತಿಯಲ್ಲಿ ಏನು ನೆಡೆಯುತ್ತಿದೆ ಅಂತ ಅಪ್ಪಿ ತಪ್ಪಿಯೂ
ಕೇಳುತ್ತಿರಲಿಲ್ಲ. ಮೈಸೂರಿನಲ್ಲಿರುವ ನಮ್ಮ ಸರೋಜಿನಿ ಚಿಕ್ಕಮ್ಮ ತಮಾಷೆ ಮಾಡ್ತಿದ್ರು: `ಏನು ಪಂಚಾಯಿತಿ ಪ್ರೆಸಿಡೆಂಟ್ ಮಕ್ಕಳೋ ನೀವು? ನಮ್ಮ ಮಂಡ್ಯ ಕಡೆ ಬಂದು ನೋಡಬೇಕು, ಪ್ರೆಸಿಡೆಂಟ್ ಮಕ್ಕಳ ಗತ್ತು ಹ್ಯಾಗಿರಬೇಕು, ಅಂತ.’
ಊರಿಗೆ ಹೋದಾಗಲೂ ಅಷ್ಟೆ, ಅಣ್ಣನ ಜೊತೆ ಹೋದಾಗ ಏನಾದರೂ ಪಂಚಾಯ್ತಿ ಕೆಲಸಗಳಿದ್ದರೆ, ನಾವು ಹೊರಗಡೆ ಕಾರಿನಲ್ಲೇ ಕೂತಿರುತ್ತಿದ್ದೆವು. ಒಂದು ಸಲ ಮೂಡಿಗೆರೆಯ ಎಂ.ಎಲ್.ಎ ಆಗಿದ್ದ ಮೋಟಮ್ಮನ ಮನೆಗೆ ಹೋಗಿದ್ದೆವು. ಅಣ್ಣನನ್ನು ಕಳುಹಿಸಲು ಬಾಗಿಲವರೆಗೆ ಬಂದ ಮೋಟಮ್ಮ, `ಮಾಧು ಗೌಡರೆ, ನೀವೇನೋ ಬಂದು ನಿಮ್ಮ ಪಂಚಾಯ್ತಿಗೆ ಅಂತ ಕೆಲಸ ಮಾಡಿಸಿಕೊಂಡು ಹೋಗ್ತೀರಾ… ಗೌತಳ್ಳಿಯಿಂದ, ಘಟ್ಟದಳ್ಳಿವರೆಗಿನ ಹುಡುಗರು ಬಿಜೆಪಿಗೆ ಓಟು ಒತ್ತಿದರೆ, ನಾನು ಮನೆಗೆ ಹೋಗ್ತೀನಿ, ಅಷ್ಟೆ,’ ಅಂದರು. ಅಣ್ಣ ಪೆಚ್ಚಾಗಿ ನಕ್ಕಿದನ್ನು ಬಿಟ್ಟರೆ ಇನ್ನೇನೂ ಮಾಡಲಿಲ್ಲ. ಮುಂದಿನ ಚುನಾವಣೆಯಲ್ಲಿ ಮೋಟಮ್ಮ ಹೇಳಿದ್ದು ನಿಜವಾಗಿತ್ತು.
ಇನ್ನೊಂದು ಸಲ ಅಣ್ಣನ ಜೊತೆ ಮೂಡಿಗೆರೆಗೆ ಹೊರಟಾಗ, ಪಂಚಾಯ್ತಿ ಆಫೀಸಿನ ಎದುರು ಕಾರಿನಲ್ಲಿ ಕೂತಿದ್ದೆ. ಅಣ್ಣ ಹೋಗಿ ಹತ್ತು ನಿಮಿಷಗಳಿಗಿಂತ ಜಾಸ್ತಿಯಾಗಿತ್ತು. ಪಂಚಾಯ್ತಿ ಆಫೀಸಿನೊಳಗಿಂದ ಜೋರಾಗಿ ಧ್ವನಿ ಕೇಳಿಸಲು ಶುರುವಾಯ್ತು. ನಮ್ಮೂರಲ್ಲಿ ಇಷ್ಟೊಂದು ಜೋರಾಗಿ ಯಾರಪ್ಪಾ ಗಲಾಟೆ ಮಾಡುವವರು ಅಂದ್ಕೊಂಡು ಸುಮ್ಮನೆ ಹತ್ತಿರ ಹೋಗಿ ಬಗ್ಗಿ ನೋಡಿದೆ. ಅಪ್ಪನಿಗೆ  ವರಸೆಯಲ್ಲಿ ಚಿಕ್ಕಪ್ಪನಾಗುವ ಚಂದ್ರೇಗೌಡರು ಮೇಜು ಕುಟ್ಟಿ ಕೂಗಾಡುತ್ತಿದ್ದರು. ಪಂಚಾಯ್ತಿ ಸೆಕ್ರಟರಿ ತಲೆ ಅಲ್ಲಾಡಿಸುತ್ತಾ ನಿಂತಿದ್ದರೆ, ಅಣ್ಣ, `ಚಿಕ್ಕಯ್ಯ, ಇರ್ಲಿ ಬಿಡಿ. ನೋಡೋಣ, ಏನು ಮಾಡೋಕೆ ಆಗುತ್ತೆ ಅಂತ. ಹೀಗೆ ಕೂಗಾಡಿದ್ರೆ ಬಿ.ಪಿ ರೈಸ್ ಆಗುತ್ತೆ ಅಷ್ಟೆ,’ ಅಂತ ಸಮಾಧಾನ ಮಾಡ್ತಿದ್ದರು.
ಅಲ್ಲೀವರೆಗೆ ಚಂದ್ರ ಚಿಕ್ಕಯ್ಯ ಸಿಟ್ಟುಮಾಡಿಕೊಂಡಿದ್ದನ್ನು ನಾನು ನೋಡಿರಲಿಲ್ಲ. ಮೂಡಿಗೆರೆ ಕಡೆ ಹೋಗುತ್ತ, ಮೊದಲ ಸಲ ಧೈರ್ಯ ಮಾಡಿ, ಪಂಚಾಯ್ತಿ ವಿಷಯ ಮಾತಾಡಿದೆ:
 `ಅಣ್ಣ, ಚಂದ್ರ ಚಿಕ್ಕಯ್ಯ ಪಂಚಾಯ್ತಿ ಮೆಂಬರಾ?’
`ಈಗಿಲ್ಲ. ಮುಂಚೆ ಪಂಚಾಯ್ತಿ ಛೇರ್ಮನ್ ಅಂತ ಇತ್ತಲ್ಲ, ಆಗ ಸುಮಾರು ವರ್ಷ ಅವರು ಛೇರ್ಮನ್ ಆಗಿದ್ದರು. ಈಗಿನ ಥರ ಎಲೆಕ್ಷನ್ ಇರಲಿಲ್ಲವಲ್ಲ. ಊರವರೇ ಸೇರಿ ನಿರ್ಣಯ ಮಾಡ್ತಿದ್ರು,’ ಅಂತ ಹೇಳಿದ್ರು.
`ಮತ್ತೆ ಪಂಚಾಯ್ತಿ ಆಫೀಸಲ್ಲಿ ಬಂದು ಕೂಗಾಡ್ತಿದ್ರೂ?’ ಅಂದೆ.
`ಅದಾ? ಅದು ನೆಡೀತಿರ್ತದೆ. ಅವರಿಗೂ ಇಷ್ಟು ವರ್ಷ ಪಂಚಾಯ್ತಿಯಲ್ಲಿ ಇದ್ದೂ ಇದ್ದೂ, ಪಂಚಾಯ್ತಿ ಕೆಲಸ ಹೇಗೆ ನೆಡೀಬೇಕೂ ಅಂತ ಒಂದು ಕಾನ್ಸೆಪ್ಟ್ ಇರುತ್ತೆ. ಈಗ ಸುಮಾರು ಬದಲಾವಣೆ ಆಗಿ, ಕಾನೂನುಗಳೆಲ್ಲ ಬಂದಿವೆ. ವ್ಯತ್ಯಾಸ ಆದಾಗ ಅವರಿಗೆ ಸಿಟ್ಟು ಬರುತ್ತೆ, ಅಷ್ಟೆ,’ ಅಂದರು.
ಕೇಶವ ಮೂರ್ತಿ ಹೇಳಿದ್ದ ಚಮಡಾ ಸುಲಿಯೋ ಚಂದ್ರೇಗೌಡರು ಯಾರು ಅಂತ ಆಗ ಅರ್ಥವಾಯಿತು. ನಾನು ಮುಂದೇನೂ ಮಾತಾಡಲಿಲ್ಲ.
ಅಣ್ಣನಂತೂ ಪಂಚಾಯ್ತಿ ಕೆಲಸವನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಅಂತ ಅನ್ನಿಸಿತ್ತು. ಹೆಚ್ಚೇನೂ ಅನುದಾನ ಸಿಗದ ಕಾಲವದು. ಆದರೆ, ಅಣ್ಣ ಏನೇ ಕೆಲಸ ತೆಗೆದುಕೊಂಡು ಹೋದರೆ, ಪಕ್ಷ ಭೇದ ಮರೆತು ಮೋಟಮ್ಮ ಮತ್ತು ಜಗನ್ನಾಥ ಚಿಕ್ಕಪ್ಪ, ಎಲ್ಲಿಂದಾದರೂ ಅನುದಾನ ಒದಗಿಸುತ್ತಿದ್ದರಂತೆ. ಪಂಚಾಯ್ತಿ ಕೆಲಸದ ಜೊತೆ, ಊರಲ್ಲಿ ಯಾರಿಗಾದರೂ ಹುಶಾರಿಲ್ಲದಿದ್ದರೆ, ಅಣ್ಣನಿಗೇ ಕರೆ ಬರುತ್ತಿತ್ತು. ಅಣ್ಣ ಮತ್ತೆ ಖುಶಿಯಾಗಿದ್ದಾರೆ ಅಂತ ಅನ್ನಿಸ್ತಿತ್ತು.
ಮುಂದಿನ ಚುನಾವಣೆಗೆ ಅಣ್ಣ ನಿಲ್ಲಲಿಲ್ಲ. ಒಂದಾರು ತಿಂಗಳು ಬಿಟ್ಟು, ಊರಿಗೆ ಹೋದಾಗ ನಾನೇ ಕೇಳಿದೆ: `ಅಣ್ಣ, ಮತ್ತೆ ಯಾಕೆ ಪಂಚಾಯ್ತಿ ಎಲೆಕ್ಷನ್ ಗೆ ನಿಲ್ಲಲಿಲ್ಲ?’ ಅಂತ.
`ಸುಂದರ ಮತ್ತೆ ಸೋಮ ಬಂದು ಹೇಳಿದ್ರು. ನಾನೇ ಬೇಡ ಅಂದೆ,’ ಅಂದ್ರು.
`ಯಾಕಣ್ಣಾ? ಒಂದೇ ಟರ್ಮ್ ಗೆ ಸಾಕಾಗಿ ಹೋಯ್ತಾ?’ ಅಂತ ನಕ್ಕೆ
`ಇಲ್ಲಿ ಫಂಡ್ಸ್ ಕಮ್ಮಿ ಇದ್ರೂ ಒಳ್ಳೇ ಕೆಲಸ ಮಾಡಬಹುದು. ಆದ್ರೆ ಕೆಲವು ವಿಷಯಗಳು ನಮಗೆ ಸರಿ ಹೊಂದೋದಿಲ್ಲ. ಅದೂ ಅಲ್ದೆ, ನಮಗ್ಯಾಕೆ ಬೇಕು ಈ ಪಾಲಿಟಿಕ್ಸ್? ಅಂತ’ ಅಂದ್ರು.
`ಅದೂ ಸರಿ,’ ಅಂತ ಹೇಳಿ ಸುಮ್ಮನಾದೆ.


ಮಾಕೋನಹಳ್ಳಿ ವಿನಯ್ ಮಾಧವ

ಶನಿವಾರ, ಸೆಪ್ಟೆಂಬರ್ 15, 2012

ಸಂಬಂಧ


ಅರ್ಥಹೀನ ಸಂಬಂಧಗಳ ನಾಡಿನಲ್ಲಿ

`ಯಾಕೋ ದಿನ ಸರಿ ಇರಲ್ಲ,’ ಅನ್ನಿಸ್ತು. ಒದ್ದಾಡಿ ಮಲಗಲು ಪ್ರಯತ್ನಿಸಿದರೂ, ಆಗಲಿಲ್ಲ. ಸ್ನಾನ ಮುಗಿಸಿ ನೋಡಿದರೆ, ಇನ್ನೂ ಬೆಳಗ್ಗಿನ ಜಾವ ಮೂರೂವರೆ ಘಂಟೆ. ರೂಮಲ್ಲೇ ಕಾಫಿ ಮಾಡ್ಕೊಂಡು ಕುಡಿದು ಮತ್ತೆ ಟೈಮ್ ನೋಡಿದರೆ, ಇನ್ನೂ ನಾಲ್ಕು ಘಂಟೆ ಆಗಿರಲಿಲ್ಲ.
ರಾತ್ರಿ ತಾನೆ ಲಾಸ್ ಏಂಜಲ್ಸ್ ಗೆ ರಾತ್ರಿ ತಾನೆ ಬಂದು ಇಳಿದಿದ್ದೆ. ಅಮೆರಿಕಾಗೆ ಬರುವಾಗಲೇ ಮೊದಲು ಜೆಟ್ ಲ್ಯಾಗ್ ಬರದಂತೆ ನೋಡಿಕೊಳ್ಳಬೇಕು ಅಂತ ಯೋಚಿಸಿದ್ದೆ. ದಾರಿಯುದ್ದಕ್ಕೂ ಅಮೆರಿಕಾದಲ್ಲಿ ಈ ಎಷ್ಟು ಹೊತ್ತಾಗಿರಬಹುದು ಅಂತ ಯೋಚಿಸಿಕೊಂಡೇ, ವಿಮಾನದಲ್ಲಿ ನನ್ನ ನಿದ್ರೆಯನ್ನು ನಿಯಂತ್ರಿಸಿಕೊಳ್ಳಲು ಹೆಣಗಿದೆ. ಅದೂ ಕೈ ಕೊಟ್ಟಿದೆ ಅಂತ ರಾತ್ರಿ 11 ಘಂಟೆಗೆ ಮಲಗಿದವನು, ಬೆಳಗ್ಗಿನ ಜಾವ ಮೂರು ಘಂಟೆಗೂ ಮುಂಚೆ ಎದ್ದು ಕುಳಿತಾಗ ಅನ್ನಿಸಿತ್ತು: ಸುಮ್ಮನೆ ನಿದ್ರೆ ಬಂದಾಗಲೆಲ್ಲ ಮಲಗಿದ್ದರೆ ಚೆನ್ನಾಗಿತ್ತು ಅಂತ.
ಕಾಫಿ ಕುಡಿದ ಮೇಲೆ ಇನ್ನೇನೂ ಕೆಲಸ ಇರಲಿಲ್ಲ. ಸಿಗರೇಟ್ ಸೇದೋಕೆ 12 ಮಹಡಿ ಇಳಿಯಬೇಕಿತ್ತು. ಲಿಫ್ಟಿನಲ್ಲಿ ಕೆಳಗೆ ಬಂದಾಗ, ಕೆಳಗಡೆ ಬಿಳಿಯನೊಬ್ಬ ಲಿಫ್ಟ್ ಗೆ ಕಾಯುತ್ತಿದ್ದ. ನನ್ನನ್ನು ನೋಡಿದವನೇ: `ಹಿ ದೆರ್… ಗುಡ್ ಮಾರ್ನಿಂಗ್… ಹ್ಯಾವ್ ಎ ನೈಸ್ ಡೇ,’ ಅಂತ.
ಒಂದು ಕ್ಷಣ ತಬ್ಬಿಬ್ಬಾದರೂ, ಲಿಫ್ಟ್ ನಲ್ಲಿ ನಾನೊಬ್ಬನೇ ಇದ್ದಿದ್ದರಿಂದ ಅವನು ನನಗೇ ಹೇಳಿದ್ದು ಅಂತ ಖಾತ್ರಿಯಾಗಿತ್ತು. ತಡವರಿಸುತ್ತಾ: `ಗುಡ್ ಮಾರ್ನಿಂಗ್… ಯು ಟೂ ಹ್ಯಾವ್ ಅ ನೈಸ್ ಡೇ,’ ಅಂದು ಹೋಟೆಲ್ ಹೊರಕ್ಕೆ ಹೊರಟೆ.
ಸಿಗರೇಟ್ ಸೇದುವ ಜಾಗದಲ್ಲಿ ನನಗಿಂತ ಮುಂಚೆ ಬಂದವರಿಬ್ಬರಿದ್ದರು. ಅವರೂ ನನ್ನನ್ನು ನೋಡಿ, `ಗುಡ್ ಮಾರ್ನಿಂಗ್,’ ಅಂದರು.
ಒಳಗೆ ಬರುವಾಗ ಯಾಕೋ ಖುಶಿಯಾಗತೊಡಗಿತು. ಯಾರು ಅಂತ ಗೊತ್ತಿಲ್ಲದಿದ್ದರೂ, ಒಂದು ಮುಗುಳ್ನಗು ಮತ್ತು ಗುಡ್ ಮಾರ್ನಿಂಗ್ ಉಚಿತ. ಮತ್ತೆ ಲಿಫ್ಟ್ ಹತ್ತಿರ ಬಂದಾಗ, ಎದುರಿಗೆ ಬಂದ ಬಿಳಿಯನೊಬ್ಬನಿಗೆ ನಾನೇ ಮೊದಲು ಹೇಳಿದೆ: `ಹಿ ದೆರ್, ಗುಡ್ ಮಾರ್ನಿಂಗ್… ಹ್ಯಾವ್ ಎ ನೈಸ್ ಡೇ,’ ಅಂತ.
ಏಳು ಘಂಟೆವರೆಗೆ ಹೇಗೋ ಟೈಮ್ ಪಾಸ್ ಮಾಡಿ, ತಿಂಡಿ ತಿನ್ನೋಕೆ ಅಂತ ಕೆಳಗೆ ಬಂದೆ. ಇಬ್ಬರು ಭಾರತೀಯರು ಎದುರಿಗೆ ಬಂದರು. ನಗುತ್ತಾ… `ಹಿ ದೆರ್.. ಗುಡ್ ಮಾರ್ನಿಂಗ್,’ ಅಂದೆ. ನನ್ನನ್ನು ವಿಚಿತ್ರವಾಗಿ ಮೇಲಿನಿಂದ ಕೆಳಗಿನವರೆಗೆ ನೋಡಿ, ಸುಮ್ಮನೆ ಹೋದರು. ಗಲಿಬಿಲಿಗೊಂಡ ನಾನು ಮುಂದಕ್ಕೆ ಹೊರಟಾಗ, ಎದುರಿಗೆ ಬಂದ ಆಫ್ರಿಕನ್ ಒಬ್ಬ ಹೇಳಿದ: `ಹಿ ದೆರ್, ಗುಡ್ ಮಾರ್ನಿಂಗ್,’ ಅಂತ.
ತಿಂಡಿ ತಿಂದು ಮುಗಿಸುವವರೆಗೂ ಇದೇ ವಿಷಯದ ಬಗ್ಗೆ ತಲೆ ಕೆಡಿಸಿಕೊಂಡೆ. ಆ ಇಬ್ಬರು ಭಾರತೀಯರೇನಾದರೂ ನನ್ನ ತರಹವೇ ನೆನ್ನೆ ರಾತ್ರಿ ಬಂದಿರಬಹುದೇ ಅಂತಾನೂ ಅನ್ನಿಸ್ತು. ಆದರೆ, ತಿಂಡಿ ತಿನ್ನುವಾಗ ಸುತ್ತ ಮುತ್ತ ಇದ್ದ ಯಾವುದೇ ಭಾರತೀಯರೂ ಅಪ್ಪಿ ತಪ್ಪಿಯೂ ನಮ್ಮವರ ಕಡೆ ತಿರುಗಿ ನೋಡುತ್ತಿರಲಿಲ್ಲ. ಯಾರಾದರೂ ವಿದೇಶಿಯರು ಕಂಡರೆ ಮಾತ್ರ ವಿಶ್ ಮಾಡುತ್ತಿದ್ದರು.
ತಿಂಡಿ ಮುಗಿಸಿ ಸಿಗರೇಟ್ ಸೇದೋಕೆ ಹೊರಗಡೆ ಹೋದಾಗ, ನನ್ನ ದೊಡ್ಡಮ್ಮನ ಮಗಳು ಮೇಧಿನಿಗೆ ಫೋನ್ ಮಾಡಿ, `ಇದ್ಯಾವ ಊರಿಗೆ ಬಂದು ಬದುಕ್ತಾ ಇದ್ದೀಯ ಮಾರಾಯ್ತಿ. ಪರಿಚಯನೇ ಇಲ್ಲದ ಬಿಳಿಯರು, ಕರಿಯರೆಲ್ಲ ನಮಗೆ ವಿಶ್ ಮಾಡ್ತಾರೆ. ನಮ್ಮವರು ಮಾತ್ರ ವಿಶ್ ಮಾಡಿದ್ರೆ ಮುಖ ತಿರುಗಿಸಿಕೊಂಡು ಹೋಗ್ತಾರೆ,’ ಅಂತ ನಕ್ಕುಬಿಟ್ಟೆ.
`ಅದು ಹಾಗೇನೇ ವಿನಯಣ್ಣ. ನಮ್ಮವರು, ಪರಿಚಯವಿದ್ದವರನ್ನ, ಇಲ್ಲಾಂದ್ರೆ ನಮ್ಮ ಭಾಷೆ ಮಾತಾಡ್ತಾರೆ ಅಂತ ಗೊತ್ತಾದ್ರೆ ಮಾತ್ರ ಮಾತಾಡಿಸ್ತಾರೆ. ಇಲ್ಲದೇ ಹೋದ್ರೆ ತಲೆ ಕೆಡಿಸಿಕೊಳ್ಳೋದಿಲ್ಲ. ನೀವು ಪರವಾಗಿಲ್ಲ ಕಣ್ರಿ… ರಾತ್ರಿ ಬಂದವರು, ಬೆಳಗ್ಗೆ ಹೊತ್ತಿಗೆಲ್ಲ ಸುಮಾರು ರಿಸರ್ಚ್ ಮಾಡಿದ್ದೀರ,’ ಅಂತ ನಕ್ಕಳು.
ಅಲ್ಲಿಂದ ಮುಂದೆ ನಾನು ನನ್ನ ಪಾಡಿಗೆ ಇರೋಕೆ ಶುರು ಮಾಡಿದೆ. ಮುಂದಿನ ನಾಲ್ಕು ದಿನ ನಾನು ಆಫೀಸಿನಿಂದ ಕಳುಹಿಸಿದ ಅಡೋಬಿ ಕಂಪನಿಯ ಸಮ್ಮೇಳನವನ್ನು ವರದಿ ಮಾಡಬೇಕಿತ್ತು. ಪ್ರೆಸ್ ನವರನ್ನು ನಿರ್ವಹಿಸುತ್ತಿದ್ದ ಆಸ್ಟ್ರೇಲಿಯಾದ ಜ್ಯೂಲಿ ಮತ್ತು ಆಂಡ್ರ್ಯೂ ನನಗೆ ತುಂಬಾ ಹಿಡಿಸಿದರು. ಅವರನ್ನು ಬಿಟ್ಟರೆ, ಇನ್ಯಾರ ಗೊಡವೆಗೂ ಹೋಗದೆ ನನ್ನ ಪಾಡಿಗೆ ನಾನಿದ್ದೆ.
ಸಮ್ಮೇಳನ ಮುಗಿದ ಮೇಲೆ ಸ್ಯಾನ್ ಫ್ರಾನ್ಸಿಸ್ಕೋಗೂ ಹೋಗಿ ಬಂದೆ. ಅಲ್ಲಿಂದ, ಲಾಸ್ ವೇಗಾಸ್ ಮತ್ತು ಗ್ರ್ಯಾಂಡ್ ಕ್ಯಾನಿಯನ್ ಗೆ ಹೊರಟೆ.
ಏಶಿಯನ್ ಟ್ರಾವೆಲ್ ಏಜೆನ್ಸಿ ಮುಖಾಂತರ ನಾನು ಆ ಪ್ರವಾಸವನ್ನು ಕೈಗೊಂಡಿದ್ದೆ. ಬಸ್ಸಿನಲ್ಲಿ ಇಪ್ಪತೈದು ಜನ ಪ್ರವಾಸಿಗರಿದ್ದೆವು. ನಾನೊಬ್ಬನೇ ಒಂಟಿಯಾಗಿ ಬಂದಿದ್ದರೆ, ಇನ್ನೆಲ್ಲರೂ ಗುಂಪುಗಳಲ್ಲಿದ್ದರು. ಇಲ್ಲೂ ನಾನು ಒಂಟಿಯಾಗಿ ಇರಲು ಇಷ್ಟ ಪಟ್ಟೆ.
ಗ್ರ್ಯಾಂಡ್ ಕ್ಯಾನಿಯನ್ ತಲುಪುವ ಹೊತ್ತಿಗೆ ಹೊರಟು ಎರಡು ದಿನವಾಗಿತ್ತು. ಎಲ್ಲರ ಮುಖಗಳೂ ಪರಿಚಯವಾದರೂ, ಹಲೋಗಿಂತ ಮುಂದೆ ನಾನು ಜಾಸ್ತಿ ಮಾತಾಡುತ್ತಿರಲಿಲ್ಲ. ಎಲ್ಲರೂ ಸಂಸಾರಗಳ ಜೊತೆ ಬಂದಿದ್ದರು. ಆವರ ಮಧ್ಯ ಇಬ್ಬರು ಮಾತ್ರ ಎದ್ದು ಕಾಣುತ್ತಿದ್ದರು. ಒಬ್ಬ ಸುಮಾರು ಐವತ್ತು ವರ್ಷ ದಾಟಿದ್ದ ಅಮೆರಿಕನ್ ಮತ್ತು ಅವನ ಜೊತೆ ಇದ್ದ ಇಪ್ಪತೈದು ವರ್ಷವೂ ತುಂಬದ ಒಬ್ಬ ಚೈನಾ ದೇಶದವನಂತೆ ಕಾಣುವ ಹುಡುಗ.
ಮೊದಲನೆ ದಿನದಿಂದಲೂ ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಹಚ್ಚಿಕೊಂಡಂತೆ ಕಾಣುತ್ತಿತ್ತು. ಆ ಹುಡುಗನ ಬೇಕು ಬೇಡಗಳನ್ನೆಲ್ಲ ಆ ಅಮೆರಿಕನ್ ತುಂಬಾ ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದ. ಕಾರಣವಿಲ್ಲದೆ ಡೈವೋರ್ಸ್ ಕೊಟ್ಟು, ಹೆಚ್ಚಾಗಿ ಒಂಟಿಯಾಗಿರಲು ಇಷ್ಟ ಪಡೋ ಈ ಅಮೆರಿಕನ್ನರ ಮಧ್ಯ, ಇದೊಂದು ಜೋಡಿ ವಿಚಿತ್ರ ಅನ್ನಿಸೋಕೆ ಶುರುವಾಯ್ತು. ಇವರಿಬ್ಬರೇನಾದ್ರೂ ಸಲಿಂಗಕಾಮಿಗಳಾ? ಅಂತಾನೂ ಅನ್ನಿಸಿದ್ರೂ, ಇರಲಾರದು ಅಂತ ಅನ್ನಿಸಿತು.
ಸಾಯಂಕಾಲದ ಹೊತ್ತಿಗೆ ನಾವೆಲ್ಲರೂ ಗ್ರ್ಯಾಂಡ್ ಕ್ಯಾನಿಯನ್ ಸ್ಕೈ ವಾಕ್ ಕಡೆಗೆ ಹೋದೆವು. ಸ್ಕೈ ವಾಕ್ ಒಳಗೆ ಹೋಗುವ ಮುಂಚೆ, ಕಣಿವೆಯ ತುದಿಯಲ್ಲಿ ಸ್ವಲ್ಪ ಹೊತ್ತು ನಿಂತುಕೊಂಡೆ. ಒಂದು ಫೋಟೋ ತೆಗೆದರೆ ಚೆನ್ನಾಗಿರುತ್ತೆ ಅಂತ, ಹಿಂದಕ್ಕೆ ತಿರುಗಿ ನೋಡಿದೆ. ಐವತ್ತು ಅಡಿ ಹಿಂದಿದ್ದ ಒಂದು ಬೆಂಚ್ ಮೇಲೆ ಅಮೆರಿಕನ್ ಮಾತ್ರ ಕುಳಿತಿದ್ದ. ಆ ಹುಡುಗ ಮಾತ್ರ ಕಾಣಲಿಲ್ಲ. ನನ್ನ ಕಡೆಗೆ ಕೈ ಎತ್ತಿ `ಹಲೋ’ ಅಂದ. ನಾನೂ ನಗುತ್ತ `ಆರ್ ಯು ನಾಟ್ ಕಮಿಂಗ್ ಟು ಸ್ಕೈ ವಾಕ್?’ ಅಂತ ಕೇಳಿದೆ.
`ನೋ…ಐ ವಿಲ್ ಫೇಯಿಂಟ್… ಐ ಆಮ್ ಸ್ಕೇರ್ಡ್ ಆಫ್ ಹೈಟ್ಸ್,’ ಅಂದ.
ಎತ್ತರದ ಬಗ್ಗೆ ಹೆದರಿಕೆ ಇದ್ದವನು ಇಲ್ಲಿಗೇಕೆ ಬಂದ? ಅನ್ಕೊಂಡು ನಾನು ಸ್ಕೈ ವಾಕ್ ಕಡೆಗೆ ನೆಡೆದುಕೊಂಡು ಹೋದೆ. ಅಲ್ಲಿಂದ ನಾವೆಲ್ಲ ವಾಪಾಸ್ ಬಂದಾಗಲೂ ಅವನು ಅಲ್ಲೇ ಕೂತಿದ್ದ. ನಾವೆಲ್ಲರೂ ಹತ್ತಿರದ ಗುಡ್ಡ ಹತ್ತಿ, ಅಲ್ಲಿಂದ ಕ್ಯಾನಿಯನ್ ಕಣಿವೆ ನೋಡುವುದು ಅಂತ ನಿಶ್ಚಯವಾಗಿತ್ತು. ನಾನು ಸ್ಕೈ ವಾಕ್ ನಿಂದ ವಾಪಾಸ್ ಬಂದಾಗ, ಹುಡುಗನು ಅಮೆರಿಕನ್ ಜೊತೆ ಏನೋ ಮಾತಾಡ್ತಾ ಇದ್ದ. ನಾನು ಅವರ ಹತ್ತಿರ ಹೋದವನೇ, `ಗುಡ್ಡ ಹತ್ತಲೂ ಬರೋದಿಲ್ವಾ?’ ಅಂತ ಕೇಳಿದ.
ಅಮೆರಿಕನ್ ಇದ್ದವನು ಜೋರಾಗಿ ನಗಲು ಶುರುಮಾಡಿದ. `ಇಫ್ ಐ ಟ್ರೈ ಟು ಕ್ಲೈಂಬ್, ಯು ವಿಲ್ ಹ್ಯಾವ್ ಟು ಕ್ಯಾರಿ ಮಿ,’ ಅಂದ. `ವೈ ನಾಟ್… ಐ ಆಮ್ ದೆರ್ ಟು ಟೇಕ್ ಕೇರ್ ಆಫ್ ಯು. ಡೋಂಟ್ ವರಿ, ಜಸ್ಟ್ ಮೇಕ್ ಅಪ್ ಯುವರ್ ಮೈಂಡ್ ಅಂಡ್ ಸ್ಟಾರ್ಟ್ ವಾಕಿಂಗ್ ವಿತ್ ಅಸ್,’ ಎಂದೆ. ಅವನ ಪ್ರತಿಭಟನೆಗಳಿಗೆ ನಾನು ಬಗ್ಗಲೇ ಇಲ್ಲ. ಹಟ ಮಾಡಿ ನನ್ನ ಜೊತೆ ಕರೆದುಕೊಂಡು ಹೋದೆ.
ದಾರಿಯಲ್ಲಿ ನನ್ನ ವಿಷಯಗಳನ್ನು ಕೇಳಿ ತಿಳಿದುಕೊಂಡ. ಅವನ ಹೆಸರು ಜಾನ್ ಅಂತಲೂ, ಆ ಹುಡುಗನ ಹೆಸರು ಚಿನ್ ಅಂತಲೂ ಹೇಳಿದ. ಚಿನ್, ವಿಯಟ್ನಾಂ ದೇಶದವನು ಮತ್ತು ಲಾಸ್ ಏಂಜಲ್ಸ್ ನಲ್ಲಿ ಓದುತ್ತಿದ್ದಾನೆ, ಎಂದು ಹೇಳಿದ. ನಾನು ಹೆಚ್ಚಿನ ವಿವರ ಕೇಳೋಕೆ ಹೋಗಲಿಲ್ಲ.
ಮೆಲೆ ಹತ್ತುವಾಗ ಜಾನ್ ಹಿಂದೆ ತಿರುಗಿ ನೋಡಲು ತುಂಬಾ ಹೆದರಿದ. ಅಲ್ಲಿ ಒಂದು ಕಲ್ಲಿನ ಮೇಲೆ ಕೂರಿಸಿದಾಗಲೂ, ತುಂಬಾ ಹೊತ್ತು ಕಣ್ಣು ಮುಚ್ಚಿಕೊಂಡೇ ಕೂತಿದ್ದ. ಕಣ್ಣು ಬಿಟ್ಟಾಗಲೂ ತಲೆ ತಿರುಗುತ್ತದೆ ಅಂತ ಹೇಳಿದ. ಒಂದರ್ಧ ಘಂಟೆ ಆದಮೇಲೆ, ಧೈರ್ಯ ಮಾಡಿ ಬಂಡೆಯ ಮೇಲೆ ನಿಂತುಕೊಂಡು, ಚಿನ್ ಜೊತೆ ಒಂದು ಫೋಟೋ ತೆಗೆಸಿಕೊಂಡ. ಅವನನ್ನು ಕೆಳಗೆ ಇಳಿಸುವ ಹೊತ್ತಿಗೆ ನನಗೆ ಸಾಕು ಬೇಕಾಗಿ ಹೋಯಿತು.
ಮಾರನೇ ದಿನ ನಾವೆಲ್ಲ ಹೆಲಿಕಾಪ್ಟರ್ ನಲ್ಲಿ ಕಣಿವೆಯೊಳಗೆ ಇಳಿಯುವ ಕಾರ್ಯಕ್ರಮ ಇತ್ತು. ಹೆಲಿಪ್ಯಾಡ್ ವರೆಗೆ ಬಂದ ಜಾನ್, ಹೆಲಿಕಾಪ್ಟರ್ ಹತ್ತುವುದಿಲ್ಲ ಅಂತ ಅಲ್ಲಿಯೇ ಕುಳಿತ. ನಾನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುಳಿತುಕೊಳ್ಳುವಂತೆ ಸಲಹೆ ಮಾಡಿದೆ. ಆದರೆ ಜಾನ್ ಮಾತ್ರ ತಯಾರಿರಲಿಲ್ಲ. ಚಿನ್ ಸಹ ಅಷ್ಟೊಂದು ಉತ್ಸಾಹ ತೋರಿಸಲಿಲ್ಲ.
ನಾವೆಲ್ಲರೂ ಕಣಿವೆಯಿಂದ ವಾಪಾಸ್ ಬರುವವರೆಗೂ ಜಾನ್ ಅಲ್ಲೇ ಬೆಂಚ್ ಮೇಲೆ ಕುಳಿತಿದ್ದ. ಎತ್ತರದ ಬಗ್ಗೆ ಇಷ್ಟೆಲ್ಲಾ ಹೆದರಿಕೆ ಇರುವವನು ಇಲ್ಲಿಗೇಕೆ ಬಂದ? ಅನ್ನೋದು ಮಾತ್ರ ಕಾಡೋಕೆ ಶುರುವಾಯ್ತು.
ಕ್ಯಾನಿಯನ್ ನಿಂದ ವಾಪಾಸ್ ಹೊರಟಾಗ ಜಾನ್ ನನಗೆ ಲಾಸ್ ಏಂಜಲ್ಸ್ ನಿಂದ ಎಲ್ಲಿಗೆ ಹೋಗ್ತೀಯಾ ಅಂತ ಕೇಳಿದ. ನಾನು ಬಾಸ್ಟನ್ ಗೆ ಅಂದ ತಕ್ಷಣ, `ಅಲ್ಲಿ ನನ್ನ ಮಾಜೀ ಪತ್ನಿ, ನನ್ನ ಮೂರು ಹೆಣ್ಣುಮಕ್ಕಳ ಜೊತೆ ಇದ್ದಾಳೆ,’ ಅಂದ.
`ನೀನು ಇಲ್ಲೇನು ಮಾಡ್ತಿದ್ದೀಯಾ?’ ಅಂತ ಕೇಳಿದೆ.
`ಯಾವುದಾದರೂ ಕೆಲಸಗಳನ್ನು ಮಾಡಿಕೊಂಡು ಇರ್ತೇನೆ. ಮೊದಲು ಟ್ರಕ್ ಡ್ರೈವ್ ಮಾಡ್ತಿದ್ದೆ, ಆಮೇಲೆ ಬಸ್. ಕೊನೆಗೆ ಎಲ್ಲವನ್ನೂ ಬಿಟ್ಟು ಯಾವುದಾದರೂ ಕೆಲಸಗಳನ್ನು ಮಾಡ್ತಿರ್ತೇನೆ,’ ಅಂದ.
ನಾನು ಸುಮ್ಮನೆ ಅವನ ಮುಖವನ್ನೇ ನೋಡ್ತಿದ್ದೆ. ಅವನೇ ಹೇಳಿದ: `ನನ್ನ ಹೆಂಡತಿ ತುಂಬಾ ಮಹಾತ್ವಾಕಾಂಕ್ಷಿಯಾಗಿದ್ದಳು. ಒಂದು ಸಲ, ನಮ್ಮ ಮನೆಯ ಪಾರ್ಟಿಯಲ್ಲಿ ನನ್ನ ಸಂಬಂಧಿಯೊಬ್ಬನ ಜೊತೆ ಗೆಳೆತನ ಬೆಳೆಯಿತು. ಅವನು ಬೋಸ್ಟನ್ ನಲ್ಲಿ ಇದ್ದಾನೆ. ಬ್ಯಾಂಕ್ ನಲ್ಲಿ ಕೆಲಸ. ಮಕ್ಕಳನ್ನೂ ಕರೆದುಕೊಂಡು ಅಲ್ಲಿಗೆ ಹೋದಳು. ಮಕ್ಕಳು ಅವಳ ಜೊತೆ ಇರುವುದರಿಂದ, ನಾನು ಉಳಿಸಿದನ್ನೆಲ್ಲಾ ಅವಳಿಗೇ ಕೊಟ್ಟೆ. ಹತ್ತು ವರ್ಷವಾಯ್ತು. ನಾನು ಕೆಲಸ ಬಿಟ್ಟ ಮೇಲೆ ನನಗೆ ಇರೋಕೆ ಒಂದು ಜಾಗ ಬೇಕಿತ್ತು. ನನ್ನ ತಾಯಿಯ ಹತ್ತಿರ ಒಂದು ಮನೆ ಇತ್ತು. ಅದೇ ಸಮಯದಲ್ಲಿ ಅವಳ ಬಾಯ್ ಫ್ರೆಂಡ್ ಸಹ ಅವಳನ್ನು ಬಿಟ್ಟು ಹೋದ. ಅವಳಿಗೂ ಆರೋಗ್ಯ ಸರಿ ಇರಲಿಲ್ಲ. ಅವಳಿಗೆ ಜೊತೆಗೆ ಇರಲು ಯಾರಾದರೂ ಬೇಕಿತ್ತು. ಸಂದರ್ಭ ಇಬ್ಬರಿಗೂ ಹೊಂದಾಣಿಕೆಯಾಯ್ತು. ಸರಿ, ಅಮ್ಮನ ಜೊತೆಯಲ್ಲೇ ಇದ್ದೇನೆ,’ ಅಂದ.
`ಮಕ್ಕಳನ್ನೂ ಆಗಾಗ ನೋಡ್ತಿರ್ತೀಯಾ?’ ಅಂತ ಕೇಳಿದೆ.
`ಇಲ್ಲ. ಅವರಿಗೆ ಬೇರೆ ತಂದೆ ಸಿಕ್ಕಿದ್ದಾನಲ್ಲ? ನಾನು ಹೋಗುವುದು ಅಷ್ಟು ಸರಿಯಾಗೋದಿಲ್ಲ,’ ಅಂದ.
`ಮತ್ತೆ ಚಿನ್?’ ಅಂತ ಕೇಳಿದೆ.
`ಅವನು ವಿಯೆಟ್ನಾಂ ನಿಂದ ಇಲ್ಲಿಗೆ ಓದೋಕೆ ಅಂತ ಬಂದಿದ್ದಾನೆ. ನಾನು ಒಂದು ರೆಸ್ಟೋರಂಟ್ ನಲ್ಲಿ ಕೆಲಸ ಮಾಡುವಾಗ ಸಿಕ್ಕಿದ. ಅವನಿಗೆ ತುಂಬಾ ಕಷ್ಟವಿತ್ತು. ಈಗ ನಮ್ಮ ಜೊತೆಯಲ್ಲೇ ಇದ್ದಾನೆ. ಅಮ್ಮನಿಗೂ ಸಹಾಯ ಮಾಡ್ತಾನೆ. ಅದರಿಂದ ಅವನಿಗೂ ಓದಲು ಸಹಾಯವಾಗುತ್ತೆ. ನನಗೂ ಒಬ್ಬ ಒಳ್ಳೇ ಗೆಳೆಯ ಸಿಕ್ಕಿದ,’ ಅಂತ ಹೇಳುತ್ತಾ ಹೋದ.
ಯಾಕೋ ಈ ಸಂಬಂಧ ನನಗೆ ಅರ್ಥವಾಗಲಿಲ್ಲ ……


ಮಾಕೋನಹಳ್ಳಿ ವಿನಯ್ ಮಾಧವ್

ಶುಕ್ರವಾರ, ಸೆಪ್ಟೆಂಬರ್ 7, 2012

ಅಸಮಾನತೆ



ಆ ಕಲ್ಲುಗಳ ಮಧ್ಯದಲ್ಲಿ ಜೀವಕ್ಕೆ ಬೆಲೆ ಇರಲಿಲ್ಲ


`ಥೂತ್ತೆರಿ...ಯಾವಾಗಲೂ ಹೀಗೇ ಆಗೋದು. ನಾನೊಂದು ಕಡೆ ಇದ್ರೆ, ಇನ್ನೊಂದು ಕಡೆ ಏನಾದ್ರೂ ಆಗಿರ್ತದೆ...ಅಂತ ಬೈಕೊಂಡೆ. ಅವತ್ತು ಬೆಳಗ್ಗಿನಿಂದ ಯಲಹಂಕದಲ್ಲಿ ಯಾವುದೋ ಒಂದು ಸೆಮಿನಾರ್ ನಲ್ಲಿ ಕೂತಿದ್ದೆ. ಇನ್ನೇನು ಹೊರಡಬೇಕು ಅನ್ನೊವಾಗ ಗೊತ್ತಾಯ್ತು.. ಬೇಗೂರಿನ ಕ್ವಾರಿಯಲ್ಲಿ ಡೈನಮೈಟ್ ಸಿಡಿದು ಒಬ್ಬ ಸತ್ತು ಹೋದ, ಅಂತ.
ಈಗ ಆಫೀಸಿಗೆ ವಾಪಾಸ್ ಬಂದು, ಅಲ್ಲಿಂದ ಹೊಸೂರು ರಸ್ತೆ ತಲುಪಿ, ಬೇಗೂರಿನ ಕಾಡು ದಾರಿಗೆ ತಿರುಗಿಕೊಳ್ಳಬೇಕು. ಎಷ್ಟೇ ಬೇಗ ಹೋದರೂ, ಎರಡು ಘಂಟೆ ಬೇಕಿತ್ತು. ಬೆಳಗ್ಗಿನಿಂದ ಇದ್ದ ಸುದ್ದಿಗಳನ್ನು ಕಂಪ್ಯೂಟರ್ ಗೆ ತುಂಬಿಸಿ ಹೊರಟರೆ ಇನ್ನೂ ಅನುಕೂಲ. ಅಂತೂ, ಅಲ್ಲಿಗೆ ತಲುಪುವ ಹೊತ್ತಿಗೆ ಸಾಯಂಕಾಲ ನಾಲ್ಕೈದು ಘಂಟೆ ಗ್ಯಾರಂಟಿ, ಅಂತ ಅನ್ಕೊಂಡೆ.
ಬೆಂಗಳೂರಿನ ಸುತ್ತ ಮುತ್ತ ಇದೊಂದು ಶುರುವಾಗಿತ್ತು. ಕ್ವಾರಿಗಳಲ್ಲಿ ಡೈನಮೈಟ್ ಸಿಡಿದು ಸಾಯೋದು. ಮೊದಲಾಗಿದ್ದರೆ, ಈ ಕ್ವಾರಿಗಳು ಬಿಡದಿ, ಕನಕಪುರದ ಕಡೆ ಇರುತ್ತಿದ್ದವು. ಕೆಲವು ಸಲ ಈ ಥರದ ಅನಾಹುತಗಳು ನೆಡೆದರೂ, ನಮಗೆ ಗೊತ್ತಾಗುವ ಹೊತ್ತಿಗೆ ಒಂದೆರೆಡು ತಿಂಗಳು ಆಗಿರುತ್ತಿದ್ದವು. ಮೊಬೈಲ್ ಇಲ್ಲದ, ಪೇಜರ್ ಗಳೇ ಅತ್ಯಾಧುನಿಕವಾದ ಸಂಪರ್ಕ ಸಾಧನವಾಗಿದ್ದ ಕಾಲವದು. ಅಪ್ಪಿ ತಪ್ಪಿ ಗೊತ್ತಾದರೂ, ಅಲ್ಲಿನ ಪೋಲಿಸ್ ಗಳು, `ಅದಾ ಸರ್, ಹೋದ ತಿಂಗಳು ಆಗಿದ್ದು,’ ಅಂತ ಹೇಳಿ ದಾರಿ ತಪ್ಪಿಸುತ್ತಿದ್ದರು. ನಾವೂ ಸುಮ್ಮನಾಗುತ್ತಿದ್ದೆವು.
ಆದರೆ, ಬೆಂಗಳೂರಿನಲ್ಲಿ ಐಟಿ ಕಂಪನಿಗಳು ಹೆಚ್ಚಾಗಲು ಆರಂಭವಾದ ಮೇಲೆ, ಕೆ.ಆರ್.ಪುರಂ ನಿಂದ ವೈಟ್ ಫೀಲ್ಡ್ ಕಡೆಗೂ, ಮಡಿವಾಳದಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೂ ಒಂದೊಂದೇ ಹೊಸ ಕಟ್ಟಡಗಳು ತಲೆ ಎತ್ತಲು ಆರಂಭಿಸಿದವು. ಹಾಗೇನೇ, ಆ ಪ್ರದೇಶಗಳಲ್ಲಿದ್ದ ಕಲ್ಲು ಗುಡ್ಡೆಗಳೆಲ್ಲ ಕ್ವಾರಿಗಾಳಾಗಿ ಬದಲಾಗಿ ಹೋದವು.
ಯಲಹಂಕದಿಂದ ಆಫೀಸಿಗೆ ಬಂದವನೇ, ಒಂದು ಟ್ಯಾಕ್ಸಿಗೆ ಹೇಳಿ, ಬೇಗ ಬೇಗನೆ ಸುದ್ದಿಯನ್ನು ಟೈಪ್ ಮಾಡಿದೆ. ಹಾಗೇ ಹೊರಡುವ ಮುಂಚೆ, ಘಟನೆ ಎಷ್ಟು ಹೊತ್ತಿಗೆ ನೆಡೆದದ್ದು ಅಂತ ವಿಚಾರಿಸಿದೆ. ಪೋಲಿಸರಿಗೆ ಗೊತ್ತಾಗಿದ್ದೇ 11 ಘಂಟೆಗೆ ಅಂತೆ. ಹಾಗಾದರೆ, ಒಂಬತ್ತೂವರೆ ಸುಮಾರಿಗೆ ಆಗಿರಬಹುದು ಅಂದುಕೊಂಡೆ.
ನಮಗೆ ಈ ಡೈನಮೈಟ್ ಸ್ಪೋಟದಿಂದ ಸಾಯುವವರ ವಿಷಯ ಬಂದಾಗ ತುಂಬಾನೇ ಹುಶಾರಾಗಿರುತ್ತಿದ್ದೆವು. ಹೋದ ಸಲ, ಇದೇ ಊರಿನ ಹತ್ತಿರ ಡೈನಮೈಟ್ ಸಿಡಿದು, ಎರಡು ಮಕ್ಕಳೂ ಸೇರಿದಂತೆ ಆರು ಜನ ಸತ್ತಿದ್ದರು. ಅದಾದ ಸ್ವಲ್ಪ ದಿನ ಡೈನಮೈಟ್ ಕುರಿತಾಗಿ ವಿಷಯವನ್ನು ಸಂಗ್ರಹಿಸುತ್ತಿದ್ದೆ. ಹೊಸದಾಗಿ ಆರಂಭವಾಗಿರುವ ಈ ಕ್ವಾರಿಗಳಲ್ಲಿ ಕೆಲವಕ್ಕೆ ಸರ್ಕಾರದ ಪರವಾನಿಗೆ ಇರುವುದಿಲ್ಲ ಮತ್ತು ಅವರೆಲ್ಲರೂ ಕಾನೂನು ಬಾಹಿರವಾಗಿ ಡೈನಮೈಟ್ ಉಪಯೋಗಿಸುತ್ತಾರೆ ಅನ್ನೋದು ಗೊತ್ತಾಗಿತ್ತು. ಈ ಡೈನಮೈಟ್ ಗಳನ್ನು ನೀರಾವರಿ ಇಲಾಖೆಯ ಅಧಿಕಾರಿಗಳ ಜೊತೆ ಶಾಮೀಲಾಗಿ, ಸರ್ಕಾರದ ಗೋದಾಮುಗಳಿಂದ ಕದ್ದು ತರುತ್ತಾರೆ ಅಂತಾನೂ ಗೊತ್ತಾಗಿತ್ತು. ಲೈಸೆನ್ಸ್ ಇಲ್ಲದೆ ಡೈನಮೈಟ್ ಮಾರುವ ದೊಡ್ಡ ಜಾಲವೇ ಈ ಹೊಸ ಕ್ವಾರಿಗಳ ಹತ್ತಿರ ಇರುತ್ತವೆ ಅನ್ನೋದೂ ಗೊತ್ತಾಗಿತ್ತು. ಆದರೆ, ಅದನ್ನು ಬರೆಯಲು ಇನ್ನೂ ಅವಕಾಶ ಸಿಕ್ಕಿರಲಿಲ್ಲ.
ನಮ್ಮ ಕಾರು ಇನ್ನೂ ಹೊಸೂರು ರಸ್ತೆಯಿಂದ ತಿರುಗುತ್ತಿರುವಾಗಲೇ, ಎದುರುಗಡೆಯಿಂದ ಟೈಮ್ಸ್ ಆಫ್ ಇಂಡಿಯಾ ಮತ್ತು ಡೆಕ್ಕನ್ ಹೆರಾಲ್ಡ್ ವರದಿಗಾರರು ಹೋಗಿದ್ದ ಎರಡು ಟ್ಯಾಕ್ಸಿಗಳು ಬಂದವು. ಡೆಕ್ಕನ್ ಹೆರಾಲ್ಡ್ ನ ಸುಬ್ರಹ್ಮಣ್ಯ ನನ್ನನ್ನು ನೋಡಿದ ತಕ್ಷಣ ಗಾಡಿ ನಿಲ್ಲಿಸಲು ಹೇಳಿ ಕೆಳಗಿಳಿದ. ನಾನೂ ಕೆಳಗಿಳಿದು ಅವನ ಜೊತೆ ಮಾತಿಗಾರಂಭಿಸಿದೆ.
`ಹೋಗಿ ಏನೂ ಪ್ರಯೋಜನ ಇಲ್ಲ ಕಣೋ. ಬೆಳಗ್ಗೆ ಏಳೂವರೆ, ಎಂಟು ಘಂಟೆಗೇ ಆಗಿದೆ. ಪರ್ಮಿಟ್ ಇಲ್ಲ ಅಂತ ಕಾಣುತ್ತೆ. ಪೋಲಿಸರಿಗೆ ಗೊತ್ತಾದರೆ ತೊಂದರೆ ಅಂತ ಬಾಡಿನ ಸುಟ್ಟು ಹಾಕೋಕೆ ನೋಡಿದ್ದಾರೆ. ಅಷ್ಟರಲ್ಲಿ ಪೋಲಿಸರಿಗೆ ಸುದ್ದಿ ಬಂದು, ಜಾಗಕ್ಕೆ ಬಂದಿದ್ದಾರೆ. ಪೋಲಿಸರು ಬಂದಿದ್ದು ನೋಡಿ ಅಲ್ಲಿಂದ ಎಲ್ಲರೂ ಕಾಡಿಗೆ ಓಡಿ ಹೋಗಿದ್ದಾರೆ. ಅಲ್ಲಿ ಹೆಣ ಮತ್ತು ಹತ್ತು ಜನ ಪೋಲಿಸ್ ಬಿಟ್ಟು ಇನ್ಯಾರೂ ಇಲ್ಲ. ಎಸ್.ಪಿ ನಾರಾಯಣ ಗೌಡ ಕೂಡ ಬಂದಿದ್ದರು. ಅವರೂ ಹೊರಟರು ಅಂತ ಕಾಣುತ್ತೆ. ಕಾಡಿನಲ್ಲಿದ್ದವರಿಗೆ ಪೋಲಿಸ್ ಏನೂ ಮಾಡೋದಿಲ್ಲ ಅಂತ ಮೆಸೆಜ್ ಕಳುಹಿಸಿದ್ದಾರೆ. ನಾಳೆ ಹೊತ್ತಿಗೆ ಅವರು ವಾಪಾಸ್ ಬರಬಹುದು,’ ಅಂದ.
ಸುಬ್ರಹ್ಮಣ್ಯ ಹೇಳಿದ್ದು ಸರಿ ಅಂತ ಅನ್ನಿಸಿದರೂ, ಅಷ್ಟು ದೂರ ಬಂದು, ಇನ್ನೂ ಐದು ಕಿಲೋಮೀಟರ್ ದೂರಕ್ಕೆ ಯಾಕೆ ಚೌಕಾಶಿ ಮಾಡಬೇಕು? ಅನ್ನಿಸಿತು. `ಸರಿ ಕಣೋ... ಅಲ್ಲಿವರೆಗೆ ಹೋಗಿ ಜಾಗಾನಾದ್ರೂ ನೋಡ್ಕೊಂಡು ಬರ್ತೀನಿ. ಫೋಟೋಗ್ರಾಫರ್ ಗೆ ಜಾಗದ ಫೋಟೋ ಬೇಕಲ್ಲಾ?’ ಅಂದೆ. `ಸರಿ,’ ಅಂತ ಹೇಳಿ, ಇಬ್ಬರೂ ನಮ್ಮ ನಮ್ಮ ಕಾರು ಹತ್ತಿಕೊಂಡೆವು.
ನಾವು ಜಾಗ ತಲುಪುವ ಹೊತ್ತಿಗೆ ಸುಮಾರು ಐದು ಘಂಟೆ ದಾಟಿತ್ತು. ಅದೇ ಸಮಯದಲ್ಲಿ, ಹೆಣ ತಗೊಂಡು ಹೋಗಲು ಒಂದು ಆಂಬುಲೆನ್ಸ್ ಬಂತು. ಹಾಗೇ ಗುಡ್ಡ ಹತ್ತಿ ಕ್ವಾರಿ ಹತ್ತಿರ ಹೋಗುವಾಗ, ನಾರಾಯಣ ಗೌಡರು ಎದುರುಗಡೆಯಿಂದ ಬಂದರು.
`ಸರ್, ನೀವು ಹೋದ್ರಿ ಅಂತ ಹೇಳಿದ್ರು?’ ಅಂತ ಶುರು ಮಾಡಿದೆ.
`ಇಲ್ಲಪ್ಪಾ... ಇನ್ನೊಂಚೂರು ಕೆಲಸ ಇತ್ತು. ಈಗ ತಾನೆ ನಮ್ಮ ಕೆಲಸ ಶುರುವಾಗಿದೆ. ಇನ್ನೂ ಸ್ವಲ್ಪ ಹೊತ್ತು ಆಗುತ್ತೆ,’ ಅಂತ ನಕ್ಕರು.
`ಏನು? ಇಲ್ಲಿದ್ದವರೆಲ್ಲಾ ಕಾಡಿಂದ ವಾಪಾಸ್ ಬರೋಕೆ ಕಾಯ್ತೀರಾ?’ ಅಂತ ಕೇಳಿದೆ.
`ಎಲ್ಲರೂ ಬಂದಾಯ್ತು... ಹತ್ತು ನಿಮಿಷ ಆಯ್ತು. ಅವರ ಜೊತೆನೇ ಮಾತಾಡ್ತಾ ಇದ್ದೆ,’ ಅಂದರು. ಸುತ್ತಾ ನೋಡಿದಾಗ, ಒಂದೈವತ್ತು ಅಡಿ ದೂರದಲ್ಲಿ ಅರ್ಧ ಸುಟ್ಟ ಹೆಣ ಬಿದ್ದಿತ್ತು. `ಟೈರು ಮತ್ತೆ ಸೀಮೇ ಎಣ್ಣೆ ಹಾಕಿ ಸುಡೋಕೆ ನೋಡಿದ್ದಾರೆ. ಮಳೆ ಬೇರೆ ಬಂದಿತ್ತಲ್ಲ, ಸರಿಯಾಗಿ ಹತ್ತಿಲ್ಲ. ಅಷ್ಟರೋಳಗೆ ನಮ್ಮವರು ಬಂದು ಆರಿಸಿದ್ದಾರೆ. ಈಗ ಪೋಸ್ಟ್ ಮಾರ್ಟಂಗೆ ಕಳುಹಿಸಬೇಕು,’ ಅಂದರು.
ಹಾಗೇ ಮುಂದೆ ನೆಡೆದುಕೊಂಡು ಹೋದೆ. ಕ್ವಾರಿ ಒಂದು ಗುಂಡಿಯೊಳಗಿತ್ತು. ಅದರ ಮೇಲೆ ಮೂರ್ನಾಲ್ಕು ಗುಡಿಸಲು ಕಟ್ಟಿದ್ದರು. ಸತ್ತು ಹೋದ ಹುಡುಗನಿಗೆ 19 ವರ್ಷ ವಯಸ್ಸಂತೆ. ತಮಿಳುನಾಡಿನಿಂದ ಬಂದವನಂತೆ. ಹಾಗಂತ, ಅಲ್ಲಿಯೇ ಇದ್ದ ಒಬ್ಬ ಕನ್ನಡದ ಕೆಲಸಗಾರ ನನಗೆ ಹೇಳುತ್ತಾ, ನನ್ನ ಜೊತೆ ನೆಡೆದುಕೊಂಡು ಬಂದ. ಕೊನೆ ಗುಡಿಸಲ ಮುಂದೆ, ಒಬ್ಬಳು ಹೆಂಗಸು ಮತ್ತು ಇನ್ನೊಬ್ಬ ಹುಡುಗಿ ಕುಳಿತಿದ್ದರು. ಇಬ್ಬರ ಮುಖವೂ ಅತ್ತೂ, ಅತ್ತೂ ಬತ್ತಿಹೋದಂತೆ ಕಾಣುತ್ತಿತ್ತು.
`ಸರ್, ಆ ಹುಡುಗನ ತಾಯಿ ಮತ್ತು ಅವನ ಹೆಂಡತಿ. ತಮಿಳುನಾಡಿನಿಂದ ಬಂದಿದ್ದಾರೆ,’ ಅಂದ.
ತಾಯಿಗೆ ಸುಮಾರು 36 ವರ್ಷ ವಯಸ್ಸಿರಬಹುದು. ಹೆಂಡತಿಗೆ 15-16 ವರ್ಷ ವಯಸ್ಸಿರಬಹುದು. `ಪಾಪಅನ್ನಸಿತು. `ನಿಮಗೆ ಎಷ್ಟು ಹೊತ್ತಿಗೆ ವಿಷಯ ಗೊತ್ತಾಯ್ತು?’ ಅಂತ ತಾಯಿಯನ್ನು ಉದ್ದೇಶಿಸಿ ಕೇಳಿದೆ.
ಅವಳಿಗೆ ಏನು ಅರ್ಥವಾಯ್ತೋ ಏನೋ. ನನ್ನನ್ನು ಪೋಲಿಸ್ ಅಂತ ಅಂದುಕೊಂಡಿರಬೇಕು. ಒಂದೇ ಉಸಿರಿನಲ್ಲಿ, ತಮಿಳಿನಲ್ಲಿ ಕಥೆ ಹೇಳೋಕೆ ಶುರುಮಾಡಿದ್ಲು. `ಸರ್, ಇವತ್ತು ಅವನ ಹುಟ್ಟಿದ ಹಬ್ಬ ಅಲ್ವಾ, ಅದಕ್ಕೆ ಅವನಿಗೆ ಹೋಳಿಗೆ ಇಷ್ಟ ಅಂತ ಮಾಡಿಕೊಂಡು, ಹೊಸ ಶರ್ಟ್ ತಗೊಂಡು ನಾವಿಬ್ಬರೂ ಆರು ಘಂಟೆಗೆ ಬಂದೆವು. ಇನ್ನೊಂದು ವಿಷಯ ಅಂದ್ರೆ, ಈ ಹುಡುಗಿ ಗರ್ಭಿಣಿ ಅಂತ ಮೊನ್ನೆ ಗೊತ್ತಾಯ್ತು. ಅವನಿಗೆ ಆಶ್ಚರ್ಯ ಪಡಿಸಬೇಕು ಅಂತ ಹೇಳದೆ ಬಂದೆವು. ಇವಳು ನನ್ನ ಅಣ್ಣನ ಮಗಳೇ ಸರ್,’ಅಂತ ಅಳೋಕೆ ಶುರು ಮಾಡಿದ್ಲು.
ಇವರನ್ನು ನೋಡಿದ ತಕ್ಷಣವೇ ಆ ಹುಡುಗ ಖುಶಿಯಿಂದ, `ಇವತ್ತು ಒಂದೇ ಡೈನಮೈಟ್ ಇಟ್ಟರೆ ನನ್ನ ಕೆಲಸ ಮುಗಿಯುತ್ತದೆ. ಡೈನಮೈಟ್ ಇಟ್ಟು, ಸ್ನಾನ ಮಾಡಿ, ಹೊಸ ಶರ್ಟ್ ಹಾಕಿಕೊಂಡು, ಹೋಳಿಗೆ ತಿನ್ನುತ್ತೇನೆ,’ ಅಂದವನೇ, ಕ್ವಾರಿಗೆ ಇಳಿದು ಓಡಿದ್ದಾನೆ. ಅಲ್ಲಿಯವರೆಗೆ ಡೈನಮೈಟ್ ಹೇಗೆ ಇಡುತ್ತಾರೆ ಅನ್ನೋದನ್ನು ನೋಡಿರದ ಅತ್ತೆ ಮತ್ತು ಸೊಸೆ ಕೂಡ ಗುಡ್ಡದ ಅಂಚಿಗೆ ಬಂದು ನಿಂತಿದ್ದಾರೆ. ನೋಡುತ್ತಿದ್ದಂತೆ ಡೈನಮೈಟ್ ಸಿಡಿದು, ಹುಡುಗ ಸತ್ತೇ ಹೋಗಿದ್ದಾನೆ.
`ನಾನು ನೋಡ್ತಾ ಇದ್ದಾಗ ನನ್ನ ಮಗ ಏರೋಪ್ಲೇನ್ ನಂತೆ ಮೇಲಕ್ಕೆ ಹೋಗಿ, ಹಾಗೇ ಕೆಳಕ್ಕೆ ಬಿದ್ದ ಸರ್. ಇಷ್ಟು ಸಣ್ಣ ಹುಡುಗಿ, ಗರ್ಭಿಣಿ ಬೇರೆ... ಇವಳನ್ನು ಏನು ಮಾಡ್ಲಿ?’ ಅಂತ ಎದೆ ಬಡಿದುಕೊಂಡು ಅಳೋಕೆ ಶುರು ಮಾಡಿದಳು.
ವಾಪಾಸ್ ಬರುವಾಗ ತುಂಬಾ ಬೇಜಾರಾಗಿತ್ತು. ಆಫೀಸಿಗೆ ಬಂದವನೇ, ಡೈನಮೈಟ್ ಮತ್ತು ಕ್ವಾರಿ ದಂಧೆಗಳ ಬಗ್ಗೆ ಒಂದು ವರದಿ ಬರೆದು, ಆ ತಾಯಿಯ ಬಾಯಿಂದ ಬಂದ ವಿಷಯವನ್ನು ವಿಸ್ತಾರವಾಗಿ ಒಂದು ವರದಿ ಮಾಡಿದೆ. ಮಾರನೇ ದಿನ ನೋಡಿದರೆ, ದಂಧೆಯ ವಿಷಯ ದೊಡ್ಡದಾಗಿ ಪ್ರಕಟವಾದರೆ, ಈ ಹುಡುಗನ ಸಾವನ್ನು ಮೂರೇ ಪ್ಯಾರಾಗಳಲ್ಲಿ, ಒಂದು ಬಾಕ್ಸ್ ಐಟಂ ಆಗಿ ತಗೊಂಡಿದ್ದರು. ಅದನ್ನು ನೋಡಿ ತುಂಬಾ ಬೇಜಾರಾಯಿತು.
ಮಾರನೇ ದಿನ, ಡೆಸ್ಕ್ ಉಸ್ತುವಾರಿಯಾಗಿದ್ದ ಉತ್ತರಾ ಹತ್ತಿರ ಈ ಕಥೆಯ ಬಗ್ಗೆ ಮಾತಾಡಿ, ನನಗೆ ಆ ತಾಯಿ ಹೇಳಿದ ವಿಷಯ ತುಂಬಾ ಬೇಜಾರಾಗಿತ್ತು, ಅಂದೆ. `ನಿನ್ನ ಸ್ಟೋರಿ ಚೆನ್ನಾಗಿತ್ತು. ನೀನು ಚೆನ್ನಾಗಿ ಬರೆದಿದ್ದೆ. ಆದ್ರೆ, ಜಾಗ ಇರಲಿಲ್ಲ. ಮತ್ತೆ, ಸತ್ತು ಹೋದವನು ಕೂಲಿ ಹುಡುಗ. ಅಂಥವರ ಕಥೆ ಓದುವವರೂ ಕಡಿಮೆ. ಹಾಗಾಗಿ ಚಿಕ್ಕದಾಗಿ ತೆಗೆದುಕೊಂಡೆವು,’ ಅಂದರು.
ನಾನೇನೂ ಮಾತಾಡಲಿಲ್ಲ, ಹಾಗೇ ಪೋಲಿಸ್ ಕಮೀಷನರ್ ಆಫೀಸಿಗೆ ಹೋಗಿ ಪ್ರೆಸ್ ರೂಂನಲ್ಲಿ ಸುಮ್ಮನೆ ಕುಳಿತೆ. ಅಲ್ಲಿ ಕ್ರೈಂ ರಿಪೋರ್ಟರ್ ಗಳೆಲ್ಲ ಯಾವುದೋ ವಿಷಯದಲ್ಲ, ಸಮಾನತೆಯ ಬಗ್ಗೆ ವಾದ ಮಾಡುತ್ತಿದ್ದರು. ಅಷ್ಟರಲ್ಲಿ, ಟೈಮ್ಸ್ ಆಫ್ ಇಂಡಿಯಾದ ಶ್ರೀಧರ್ ಪ್ರಸಾದ್, `ಜಗತ್ತಿನಲ್ಲಿ ಸಮಾನತೆ ಅನ್ನೋದು ಸಾವಲ್ಲಿ ಮಾತ್ರ ಕಾಣಬಹುದು. ಒಲ್ಲಿ ಡೆತ್ ಇಸ್ ದಿ ಈಕ್ವಲೈಸರ್. ಏನಂತೀಯಾ ವಿನಿ?’ ಅಂತ ನನ್ನನ್ನು ಕೇಳಿದ.
`ಇಟ್ ಡಿಪೆಂಡ್ಸ್ ಕಣೋ... ಈವನ್ ಡೆತ್ಸ್ ಹ್ಯಾವ್ ಸಮ್ ಎಕ್ಸೆಪ್ಷನ್ಸ್ ಇನ್ ಜರ್ನಲಿಸಂ,’ ಅಂದೆ.
`ಅದು ಹ್ಯಾಗೋ... ಡೆತ್ ಇಸ್ ಡೆತ್, ಅಲ್ವಾ?’ ಅಂದ.
`ಇಲ್ಲ ಕಣೋ... ಕೂಲಿಯವನು ಸತ್ರೆ ಒಂದು ಪ್ಯಾರಾ... ಅದೇ ರೌಡಿ ಸತ್ತರೆ, ನಾಲ್ಕು ಕಾಲಂ... ಇನ್ಯಾವುದೋ ಫಿಲಂ ಸ್ಟಾರ್ ಸತ್ತರೆ, ಮೂರು ಪೇಜ್.... ಎಲ್ಲೋ ಈಕ್ವಲೈಸರ್?’ ಅಂತ ಹೇಳಿ, ಅವನ ಉತ್ತರಕ್ಕೂ ಕಾಯದೆ, ಸಿಗರೇಟ್ ಸೇದೋಕೆ ಅಂತ ಹೊರಗಡೆ ಬಂದೆ.....


ಮಾಕೋನಹಳ್ಳಿ ವಿನಯ್ ಮಾಧವ್