ಬಾಬಾ, ದತ್ತ ಮತ್ತು ನೆನ್ನೆ, ನವೀದರ ಕೋಳಿ ಜಗಳ
ಮೂಡಿಗೆರೆ ಹತ್ತಿರದ ನನ್ನೂರಿಗೆ ಹೊದಾಗ, ನನಗೇನು ಕೆಲಸ ಇರುವುದಿಲ್ಲ. ಮನೆ ಹತ್ತಿರ ಕ್ಯಾಮರ ಹರಡಿಕೊಂಡು, ಬಾರದ ಹಕ್ಕಿಗಳನ್ನು ಕಾಯುತ್ತಾ ಕುಳಿತಿರುತ್ತೇನೆ. ಇನ್ನೊಂದು ಕೆಲಸ ಎಂದರೆ, ಅಣ್ಣ(ಅಪ್ಪ) ಎಲ್ಲಾದರೂ ಹೊರಟರೆ, ಡ್ರೈವರ್.
ಪ್ರತಿಸಲದಂತೆ ಆಯುದ ಪೂಜೆಗೆ ಅಣ್ಣ ಗೆಂಡೇಹಳ್ಳಿಗೆ ಹೊರಟರು. ನಾವಿರುವ ಮೂಡಸಸಿಯಿಂದ 8 ಕಿಲೋಮೀಟರ್ ದೂರದಲ್ಲಿ, ಹಾಸನ ಜಿಲ್ಲೆಯ, ಬೇಲೂರು ತಾಲೂಕಿನಲ್ಲಿ ಇದೆ. ನಮ್ಮದೊಂದು ರೈಸ್ ಮಿಲ್ ಮತ್ತು ಸ್ವಲ್ಪ ತೋಟ, ಅಜ್ಜ, ಅಜ್ಜಿ ತೀರಿಹೋದ ಮೇಲೆ ಆ ಮನೆಗೆ ಬೀಗ, ವಾರಕ್ಕೊಮ್ಮೆ ಅಣ್ಣ ಹೋಗಿ ಬರುತ್ತಾರೆ.
ಚಿಕ್ಕ ಊರು, ನಮ್ಮಜ್ಜನ ತಮ್ಮ ಪುಟ್ಟೇಗೌಡರು ಮಿಲ್ಲು ಹಾಕಿದಾಗ ಬೇಲೂರಿನಲ್ಲೂ ಮಿಲ್ಲು ಇರಲಿಲ್ಲವಂತೆ. ಪಾಲಿನಲ್ಲಿ ನಮಗೆ ಬಂತು. ಮನೆಬೀಗ ತೆಗೆದ ತಕ್ಷಣ, ಸದಾ ಕಾರ್ಟೂನ್ ನೆಟ್ವರ್ಕ್ ಗುಂಗಿನಲ್ಲಿರುವ ನನ್ನ ಮಗಳು ಸೃಷ್ಟಿ ಅಂದಳು: `ಅಪ್ಪ ಹಾಂಟೆಂಡ್ ಹೌಸ್ !’
ನಗು ಬಂತು. ಗತಕಾಲ ವೈಭವದಲ್ಲಿ ಮನೆ ಯಾವಾಗಲೂ ಗಿಜಿಗುಡುತ್ತಿತ್ತು. ಮಕ್ಕಳು, ಮೊಮ್ಮಕ್ಕಳು, ಆಳು ಕಾಳುಗಳ ಮಧ್ಯ ಈ ಮನೆಯಲ್ಲಿ ನಮ್ಮ ಅಸ್ತಿತ್ವ ಏನು ಎಂದು ಅರ್ಥ ಆಗುವುದರೊಳಗೆ ನಾನು, ನನ್ನಣ್ಣ ವೆಂಕಟೇಶನೂ ಕಾಲೇಜ್ ಮೆಟ್ಟಿಲು ಹತ್ತಿದ್ದೆವು. ಅಜ್ಜ, ಅಜ್ಜಿ ಸಾಯುವುದರೊಳಗೆ, ನಾವಿಬ್ಬರು ಕೆಲಸಕ್ಕೆ ಸೇರಿಕೊಂಡಿದ್ದೆವು.
ವಾರದ ಬಟವಾಡೆ ಮುಗಿದ ಮೇಲೆ, ಆಯುಧ ಪೂಜೆಯ ಮಾತು ಶುರು ಆಯ್ತು. ಪೂಜೆಯ ಲೆಕ್ಕ ಆದ ಮೇಲೆ, ಕೋಳಿ ಲೆಕ್ಕ ಶುರು ಆಯ್ತು. ಮಿಲ್ಲಿನಲ್ಲಿ ಇರುವವರು ಮೂರು ಜನ. ಮೂಟೆ ಹೊರೋಕ್ಕೆ ಮೊಗಣ್ಣ, ಎಲ್ಲರಿಗೂ ಸಣ್ಣ ಪುಟ್ಟ ಕೆಲಸ ಮಾಡಿಕೊಟ್ಟು ಹೊಟ್ಟೆ ಹೊರಯುವ ಪಾಪದ ಅಲೀಮ ಮತ್ತು ಮಿಲ್ಲಿನ ಡ್ರೈವರ್ ನವೀದ್ .
ಎಲ್ಲರಂತೆ ಅಣ್ಣನಿಗೂ ಅಲೀಮನ ಮೇಲೆ ವಿಶೇಷ ಮಮತೆ. ಕುಂಠಿತವಾದ ಬುದ್ದಿ ಬೆಳವಣಿಗೆ, ಮುಗ್ದನಗೆ. ಅವನಿಗೆ ಅನ್ಯಾಯವಾಗುವುದು ಯಾರಿಗೂ ಇಷ್ಟವಾಗದ ವಿಷಯ. ಅವನಿಗೂ ಸೇರಿ ಕೋಳಿ ಲೆಕ್ಕ ಮಾಡುವಾಗ, ನವೀದ್, ನೆನ್ನೆಗೂ ಒಂದು ಕೋಳಿ ಸ್ಯಾಂಕ್ಷನ್ ಮಾಡುವಂತೆ ಕೇಳಿದ ಪಕ್ಕನೆ ನಗುಬಂತು, ಮುಗುಳ್ನಗುತ್ತಾ ಹೊರಗೆ ಬಂದೆ. ನೆನ್ನೆ ಇನ್ತಾರೂ ಅಲ್ಲ. ನವೀದನ ಅಪ್ಪ
“ ಅಲ್ವೊ, ಇಬ್ಬರೂ ಒಂದೇ ಮನೆಯಲ್ಲಿ ಇದ್ದೀರಲ್ಲೋ. ಮತ್ಯಾಕೆ ಇನ್ನೊಂದು ಕೋಳಿ.” ಅಂತ ಅಣ್ಣ ಕೇಳುತ್ತಿದ್ದದು ಕಿವಿಗೆ ಬಿತ್ತು.
” ನೀವು ಇನ್ನೊಂದು ಕೊಡದೆ ಹೋದರೆ. ಅವರು ನನ್ನ ಕೋಳಿಯನ್ನೇ ಕಿತ್ತುಕೊಳ್ಳುತ್ತಾರೆ ಅಷ್ಟೆ.” ಅಂತ ನವೀದ್ ವಾದಿಸುತ್ತಿದ್ದ. ಅಂತೂ ಇಂತೂ, ನೆನ್ನೆಗೂ ಇಂದು ಕೋಳಿ ಸ್ಯಾಂಕ್ಷನ್ ಆಯ್ತು.
ನಮ್ಮ ಕುಟುಂಬದಂತೆಯೇ, ನೆನ್ನೆ ಕುಟುಂಬದವರೂ, ನಮ್ಮ ಮಿಲ್ಲಿನಲ್ಲಿ ಡ್ರೈವರ್ ಕೆಲಸವನ್ನು ವಂಶಪಾರಂಪರ್ಯವಾಗಿ ಮಾಡಿಕೊಂಡು ಬಂದಿದ್ದಾರೆ. 70 ವರ್ಷಗಳಿಗೂ ಮಿಕ್ಕಿ. ಮಿಲ್ಲಿನಲ್ಲಿ ಗಣಪತಿ ಹಬ್ಬ, ದೀಪಾವಳಿ ಅಥವಾ ಆಯುಧಪೂಜೆ ನಡೆಯುವಾಗಿ ಅವರದೇ ಮುಂದಾಳತ್ವ ಇದೂ, ವಂಶಪಾರಂಪರ್ಯ.
ನವೀದ ನನಗಿಂತ ಐದಾರು ವರ್ಷ ದೊಡ್ಡವನಿರಬಹುದು. ನನ್ನ ಮಗಳ ವಯಸ್ಸಿನ ಮೊಮ್ಮಗುವಿದೆ. ಚಿಕ್ಕದಿನಿಂದ ಚಿನ್ನಿದಾಂಡು, ಕ್ರಿಕೆಟ್ ಆಡಿಕೊಂಡು ಬೆಳೆದವರು, ಗೆಂಡೆಹಳ್ಳಿಗೆ ಹೋದಾಗಲೆಲ್ಲ, ನವೀದನ ಕೈಯಲ್ಲಿ ಸ್ವಲ್ಪ ದುಡ್ಡಿಟ್ಟು, ಮೂರು ಜನ ತಗೊಳ್ಳಿ ಅಂತ ಹೇಳುವಾಗ, ಮೊಗಣ್ಣ ಮತ್ತು ಅಲೀಮ ಮುಗುಳ್ನಗುತ್ತಾರೆ.
ವರ್ಷಗಳ ಹಿಂದೆ ನಾನು ಬೆಂಗಳೂರಿನಲ್ಲಿ ಕೆಲಸಕ್ಕೆ ಹೊರಟಾಗ ನವೀದ ವಿಚಲಿತಗೊಂಡಿದ್ದ. “ ದೇವರು ಕೊಟ್ಟ ಆಸ್ತಿ ಇದೆ ಅಣ್ಣ, ಕಷ್ಟಪಟ್ಟು ದುಡಿದರೆ ಸಾಕು. ಎಲ್ಲೋ ಹೋಗಿ ಯಾಕೆ ಒದ್ದಾಡಬೇಕು?” ಅಂದಿದ್ದ.
ಮಲೆನಾಡಿನಲ್ಲಿ ಸಂಬಂಧಗಳಿದ್ದದ್ದೇ ಹೀಗೆ. ಚಿಕ್ಕವನಿದ್ದಾಗ, ಗೆಂಡೇಹಳ್ಳಿಗೆ ಬರುತ್ತಿದ್ದದ್ದೇ ಎರಡು ಬಸ್, ಒಂದು ಶಂಕರ್, ಮತ್ತೊಂದು ಹನುಮಾನ್, ಒಂದೆರಡು ಸರ್ಕಾರಿ ಬಸ್ಸುಗಳು ಬೇಲೂರಿನಿಂದ ಮೂಡಿಗೆರೆಗೆ ಹೋಗುತ್ತಿದ್ದವೇನೋ. ಆದರೆ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಚಿಕ್ಕಮಗಳೂರಿಗೋ, ಮೂಡಿಗೆರೆಗೋ ಹೋಗಲು ಜನಗಳು ನೆಚ್ಚಿಕೊಂಡಿದ್ದು ಇರೆರಡೇ ಬಸ್ಸುಗಳನ್ನು.
ಹನುಮಾನ್ ಬಸ್ಸಿನ ಮಾಲೀಕ ಮುಸ್ಲಿಂ. ಅಬ್ಬಾಸ್ ಅಂತ ಏನೋ ಇರಬೇಕು ಮತ್ತು ಹಿರೇಮಗಳೂರಿನ ಹನುಮನ ಭಕ್ತ. ಹನುಮಾನ್ ಪೂಜೆ ಮಾಡದೆ, ಒಂದು ತೊಟ್ಟು ನೀರೂ ಕುಡಿಯುತ್ತಿರಲಿಲ್ಲವಂತೆ.
ಅಣ್ಣ ಚಿಕ್ಕವರಿದ್ದಾಗ. ಮೂಡಿಗೆರೆಯ ಗಣಪತಿ ವಿಸರ್ಜನೆಯಲ್ಲಿ ಕರಗ ಹೊರುತ್ತಿದ್ದದ್ದು ಸಾಬರವನೆ. ಅಬ್ದುಲ್ಲಾ ಅಂತ ಏನೋ ಇರಬೇಕು. ಇವುಗಳ ಬಗ್ಗೆ ಬಹಳ ಕಥೆಗಳನ್ನು ಚಿಕ್ಕಂದಿನಲ್ಲಿ ಕೇಳಿದ್ದೆವು. ಎಲ್ಲಾ ಕಥೆಗಳೂ ನಿಜವಲ್ಲದಿದ್ದರೂ , ಸತ್ಯಕ್ಕೇನೂ ದೂರವಲ್ಲ.
ಈ ಸಂಬಂಧಗಳ ಬಗ್ಗೆ ಅನುಮಾನ ಬಂದಿದ್ದೇ ಸುಂದರೇಶ ಚಿಕ್ಕಪ್ಪನ ಮಗಳು ನಿಶ್ಚಿತಾಳ ನಶ್ಛಿತಾರ್ಥದಲ್ಲಿ. ನಮ್ಮ ಮನೆತನದ ಐದಾರು ಹುಡುಗರು ಜೀಪಿನಲ್ಲಿ ಬಂದು ಇಳಿದರು. ಎಲ್ಲರೂ ದತ್ತಮಾಲೆ ದರಿಸಿ, ಯಾವುದೋ ಫ್ಯಾನ್ಸಿಡ್ರೆಸ್ ಗೆ ಹೋಗುತ್ತಿರುವಂತೆ ಅನ್ನಿಸಿತು. ಬೆಂಗಳೂರಿನಲ್ಲಿ ಪಬ್ಬಿಂದ ಪಬ್ಬಿಗೆ ಹಾರುತ್ತಿದ್ದ ಈ ಹುಡುಗರೆಲ್ಲಿ, ದತ್ತಮಾಲೆ ಎಲ್ಲಿ? ಬೆಳಿಗ್ಗೆ 5 ಘಂಟೆಗೆ ತಣ್ಣೀರು ಸ್ನಾನ ಬೇರೆ, ನನಗೇ ಛಳಿ ಬಂದಂತೆ ಆಯ್ತಿ. ಏನ್ರೋ ಇದು ಅಂದ್ರೆ ಹಿ..ಹಿ…ಹಿ.. ಅಂತ ಪೆಚ್ಚು ಪೆಚ್ಚಾಗಿ ಹಲ್ಲು ಕಿರಿದರು.
ಅಂದೇ, ಮೂಡಿಗೆರೆ ಕಡೆಯಿಂದ ಮನೆಗೆ ಹೋಗುವಾಗ ಸಾಲು ಬುರ್ಖಾಗಳು ಮತ್ತು ಗಡ್ಡಧಾರಿ ಮುಸ್ಲಿಮರನ್ನು ನೋಡಿದಾಗ ಪಿಚ್ಚೆನಿಸಿತು. ಅಣ್ಣನನ್ನು ಕೇಳಿದಾಗ, `ಎಲ್ಲಾ ಬದಲಾಗಿದೆ. ಮೊದಲಿನಂತಿಲ್ಲ’ ಎಂದು ಫಿಲಾಸಫಿಕಲ್ ಆಗಿ ಹೇಳಿದರು. ಈ ಬದಲಾವಣೆ ನಾನು ಗಮನಿಸರಿಲಿಲ್ಲ.
ಈ ದತ್ತ ಪೀಠವೇ ಒಂದು ವಿಚಿತ್ರವಾದ ಸಮಸ್ಯೆ, ನನಗೆ ತಿಳಿದಂತೆ, ಬಾಬಾ ಬುಡನ್ ಸಾಹೇಬರ ಉರಸಿನಲ್ಲಿ ತಾಯತ ಕಟ್ಟಿಸಕೊಳ್ಳುವ ಹಿಂದೂಗಳಿಗೂ, ದತ್ತಪೂರ್ಣಿಮೆಯಲ್ಲಿ ಹರಕೆ ಸಲ್ಲಿಸುವ ಸಾಬರಿಗೂ ಏನೂ ಕಡಿಮೆ ಇರಲಿಲ್ಲ. ಇದೇನು ಸಾವಿರಾರು ಜನ ಸೇರುವ ಜಾಗವೂ ಆಗಿರಲಿಲ್ಲ. ಅಲ್ಲಿ ಗುರು ದತ್ತಾತ್ರೇಯ ಪೀಠವಿದೆ, ಅನುಸೂಯ ದೇವಿಯವರ ಗುಹೆ ಇದೆ. ಮೈಸೂರು ಮಹಾರಾಜ ಮತ್ತು ಮಹಾರಾಣಿಯವರು ಇಲ್ಲಿಗೆ ಭೇಟಿ ನೀಡಿ ದೇಣಿಗೆ ನೀಡಿದ್ದರು.
ಹಾಗೆಯೇ, ಬಾಬಾ ಬುಡನ್ ಸಾಹೇಬರು ಅರೆಬಿಯಾದಿಂದ ಊರುಗೋಲಿನಲ್ಲಿ ಕಾಫಿ ಬೀಜ ಹಾಕಿಕೊಂಡು ಬಂದು, ಇದೇ ಗುಹೆಯೊಳಗೆ, ಅವರ ಜೀವನದ ಕೊನೆಯ ದಿನಗಳನ್ನು ಕಳೆದದ್ದು ಸಹ ಸತ್ಯ. ಮಲೆನಾಡು ಪ್ರದೇಶದಲ್ಲಿ ಕಾಫಿ ಬೆಳೆ ಬರಲು ಇದೇ ಮೂಲ ಕಾರಣ ಮತ್ತು ಅದು ದಾದ ಹಯಾತ್ ಮೀರ್ ಖಲಂದರ್ ಅಲಿಯಾಸ್ ಬಾಬ ಬುಡಾನ್ ಸಾಹೇಬರ ಪ್ರಸಾದ ಎಂದರೂ ತಪ್ಪಾಗಲಾರದು.,
ಸಮಸ್ಯೆ ಶುರು ಆಗಿದ್ದೇ ಆಗಿನ ಶಾಖಾದ್ರಿ( ಈಗಿನ ಶಾಖಾದ್ರಿಯ ತಂದೆ) ಮತ್ತು ಅಪ್ಪಣ್ಣ ಶೆಟ್ಟರ ಜಗಳದಿಂದ. ಶಾಖಾದ್ರಿ ಪೂಜೆ ಮಾಡಲು ಅಡ್ಡಿಮಾಡಿದಾಗ, 1964ರಲ್ಲಿ ಬಿ.ಎಸ್. ನಾಗರಾಜ್ ಮತ್ತು ಸಿ. ಚಂದ್ರಶೇಖರ್ ಕೋರ್ಟ್ ಮೆಟ್ಟಿಲು ಹತ್ತಿದ್ದರು. 1978ರಲ್ಲಿ ಚಿಕ್ಕಮಗಳೂರು ಕೋರ್ಟ್ ಜಿಲ್ಲಾ ಆಡಳಿತಕ್ಕೆ ಪೀಠದ ಉಸ್ತುವಾರಿಯನ್ನು ವಹಿಸಿಕೊಳ್ಳುವಂತೆ ಹೇಳಿತು. ಆದರೆ ಅಲ್ಲಿಂದಾಚೆ ಕಾನೂನು ಸಮರ ನಿಲ್ಲಲೇ ಇಲ್ಲ. ಒಂದಕ್ಕೊಂದು ತದ್ವಿರುದ್ದವಾದ ತೀರ್ಪುಗಳು ಹೊರಬಂದವು.
ಇದಕ್ಕೆ ತಿರುವು ಬಂದದ್ದೇ ರಾಮ ಜನ್ಮಭೂಮಿ ವಿವಾದದ ನಂತರ, ವಿವಿಧ ಸಂಘ ಸಂಸ್ಥೆಗಳು ಮತ್ತು ಸರ್ಕಾರವು ದತ್ತಪೀಠದ ವಿವಾಧವನ್ನು ಗುತ್ತಿಗೆಗೆ ತೆಗೆದುಕೊಂಡು, ತಮಗೆ ಅನುಕೂಲವಾಗುವ ಕೋರ್ಟ್ ತೀರ್ಪಿನ ಅನುಗುಣವಾಗಿ ವಾದ-ವಿವಾಧಗಳನ್ನು ಮಂಡಿಸಲಾರಂಭಿಸಿದವು. ಸಂಘ ಪರಿವಾರದಿಂದ ಪ್ರಮೋದ್ ಮುತಾಲಿಕ್, ಸಿ.ಟಿ.ರವಿ ಮುಂತಾದವರು ಮುಂದಾಳತ್ವ ವಹಿಸಿದರೆ ಬುದ್ದಿ ಜೀವಿಗಳೆನಿಸಿದ ಗಿರೀಶ್ ಕಾರ್ನಾಡ್, ಗೌರಿ ಲಂಕೇಶ್ ಹಿಂದೆ ಬೀಳಲಿಲ್ಲ.
ವಿವಾದ ತಾರಕಕ್ಕೇರಿದಾಗ, ನಾನು ಪೊಲೀಸ್ ಗುಪ್ತಚರ ವರದಿಯೊಂದನ್ನು ಸಂಪಾದಿಸಿ ಓದಿದೆ. ಅದರ ಪ್ರಕಾರ, ದತ್ತಪೀಠ ಅಂಥಾ ದೊಡ್ಡ ಸಮಸ್ಯೆಯೇನೂ ಆಗಿರಲಿಲ್ಲ. ವಿವಿಧ ಕೋರ್ಟ್ ತೀರ್ಪುಗಳನ್ನು ವಿಶ್ಲೇಶಿಸಿ. ಸರ್ಕಾರಕ್ಕೆ ಒಂದು ಸಲಹೆ ನೀಡಿತ್ತು. ಹಿರಿಯ ಶಾಖಾದ್ರಿ ಆಗಾಗಲೇ ತೀರಿ ಹೋಗಿದ್ದರು. ಹಾಗಾಗಿ ಅವರ ಮಗನನ್ನು ಶಾಖಾದ್ರಿ ಎಂದು ಒಪ್ಪಿಕೊಂಡರೂ, ಬರೀ ಧಾರ್ಮಿಕ ವಿಧಿ ವಿಧಾನಗಳಿಗೆ ಸೀಮಿತವಾಗಿರಬೇಕೆಂದೂ, ಉರುಸ್ ಮತ್ತು ದತ್ತಜಯಂತಿಯನ್ನು ಜಿಲ್ಲಾಡಳಿತವೇ ನಡೆಸಬೇಕೆಂದು ಸಲಹೆ ನೀಡಿತು. ಆಸಲಹೆ ಸರಿ ಇದೆ ಎಂದು ನನಗೆ ಅನಿಸಿತು.
ಪತ್ರಕರ್ತನಾಗಿ ಮೊದಲ ಸಲ ದತ್ತ ಪೀಠದ ವಿಷಯವನ್ನು ವರದಿ ಮಾಡಲು ಹೋದಾಗ ಅದು ಬುದ್ದಿ ಜೀವಿಗಳ ಸಭೆಯಾಗಿತ್ತು. ಗಿರೀಶ್ ಕಾರ್ನಾಡ್ ಮತ್ತು ಗೌರಿ ಲಂಕೇಶ್ ಉಪಸ್ಥಿತಿಯಿದ್ದ ಸಭೆಯಲ್ಲಿ ಇವರು ಶಾಖಾದ್ರಿ, ಬಾಬಾ ಬುಡನ್ ಗಿರಿಯ ‘ಚೀಫ್’ ಎಂದು ಕಾರ್ನಾಡರು ಪರಿಚಯಿಸಿದರು. ಸಭೆಯ ನಂತರ ಈ ವಿಷಯ ಪೊಲೀಸ್ ವರದಿಯಷ್ಟು ಸರಳವಿಲ್ಲ ಎನಿಸಿತು.
ಅದೇ ವರ್ಷ ಬಾಬ ಬುಡನ್ ಗಿರಿಯ ದತ್ತ ಜಯಂತಿಯನ್ನು ವರದಿ ಮಾಡಲು ಹೋಗಿದ್ದೆ. ಕೈಮರದಿಂದ ಬಾಬಬುಡನ್ ಗಿರಿಯವರೆಗೆ ಪೊಲೀಸ್ ಬಂದೋಬಸ್ತ್ ನೋಡೊ ದಂಗಾದೆ. ಅಲ್ಲೇ ಹತ್ತಿರದಲ್ಲಿದ್ದ ನನ್ನ ಸಂಬಂಧಿ ಗಿರೀಶನ ಮನೆಗೆ ಹೋದವನೇ ಅಲ್ವೋ ಮಾರಾಯ ಅದ್ಹೇಗೆ ಈ ಸೆಕ್ಯುರಿಟಿ ಅನಿಷ್ಠಾನ ಪ್ರತಿ ವರ್ಷ ಸಹಿಸ್ಕೊಂಡಿದ್ದೀರಾ ನಿಮಗೇನು ಅನ್ಸೋದಿಲ್ವಾ” ಅಂತ ಕೇಳಿದೆ.
“ ಏನು ಮಾಡೋದ್ ಮಾರಾಯಾ, ದಿನಕ್ಕೆರಡ್ಸಲಾ ಚಿಕ್ಕಮಗಳೂರಿಗೆ ಹೋದ್ರೆ ನಾಲ್ಕು ಸಲ ಚೆಕಿಂಗ್ ಆಗ್ತದೆ. ಅದಕ್ಕೆ ನಾವು ದತ್ತ ಜಯಂತಿಯ ಸಮಯದಲ್ಲಿ ಮೂರು ಮೂರು ದಿನ ಮನೆ ಬಿಟ್ಟು ಹೊರಗೆ ಬರಲ್ಲಾ” ಅಂದ. ಗಿರೀಶ ಅಲ್ದೆ ಆ ಪ್ರದೇಶದಲ್ಲಿ ನೂರಾರು ಎಸ್ಟೇಟ್ ಗಳಿವೆ ಅಲ್ಲಿಯ ಮಾಲೀಕರು ಆಳುಗಳು ಸೇರಿದಂತೆ ಅನೇಕರಿಗೆ ಇದು ಒಂಥರಾ ‘ಓಪನ್ ಜೈಲ್’ ಅನಿಸಿತು.
ಯಾರೂ ಕೋವಿ ತೆಗೆದುಕೊಂಡು ಇವರಿಗೆ ಗುಂಡುಹೊಡೆದಿಲ್ವಾ ಇನ್ನೂ, ಎನ್ನಿಸಿತು.
ಅಷ್ಟರಲ್ಲಿ ಚಿಕ್ಕಮಗಳೂರಿನಿಂದ ಹೊರಟ ಪಾದಯಾತ್ರೆ ಬಾಬ ಬುಡನ್ ಗಿರಿ ಸಮೀಪಿಸಿತು. ಮುಂಚೂಣಿಯಲ್ಲಿದ್ದ ಸಿ.ಟಿ.ರವಿ ಪಂಚೆಯೊಂದನ್ನು ತೊಟ್ಟು ಬರಿಕಾಲಿನಲ್ಲಿ ನಡೆದುಕೊಂಡು ಬರುತ್ತಿದ್ದರು. ಪೂಜೆಯಾದ ಮೇಲೆ ಹತ್ತಿರದಲ್ಲೇ ಮಟ್ಟಮಾಡಿದ ಜಾಗದಲ್ಲಿ ಭಾಷಣಗಳು ಆರಂಭವಾದವು. ಉದ್ವೇಗಗೊಂಡಂತೆ ಕಾಣುತ್ತಿದ್ದ ಮುತಾಲಿಕ್ ಪದೇಪದೇ ‘ಮುಸ್ಲಿಂ’ ಎಂದು ಕೂಗುತ್ತಿದ್ದರು. ಮಿತ್ರನಾದ ಮಾಕೋಡು ಸುಧೀರನು ಕಾರ್ನಾಡರನ್ನು ಯದ್ವಾ-ತದ್ವಾ ತರಾಟೆಗೆ ತೆಗೆದುಕೊಳ್ಳುತ್ತಿದ್ದ. ಅವನನ್ನು ಬಿಟ್ಟರೆ ಭಾಷಣಕಾರರೆಲ್ಲಾ ಹೊರಗಿನವರು. ಅಂದು ಸಂಜೆ ಸಾಧ್ವಿ ರಿತಂಬರ ಚಿಕ್ಕಮಗಳೂರಿನಲ್ಲಿ ದತ್ತ ಪೀಠದ ಚರಿತ್ರೆಯ ಬಗ್ಗೆ ಉದ್ದದ ಭಾಷಣವನ್ನೇ ಬಿಗಿದರು. ಅಲ್ಲಿಗೆ ದತ್ತ ಪೀಠದ ಸಮಸ್ಯೆಗೆ ಚಿಕ್ಕಮಗಳೂರಿನವರು ಪರಿಹಾರ ಕಂಡು ಕೊಳ್ಳಲು ಸಾಧ್ಯವೇ ಎಂದು ಎಂದು ನನಗೆ ಬಲವಾಗಿ ನಂಬಿಕೆ ಮೂಡಿತು. ಹೊರಗಿನವರಿಗೆ ಈ ಸಮಸ್ಯೆಯ ಉಸಾಬರೀ ಏತಕ್ಕೆ ಎಂದು ವಿಪರೀತ ರೇಜಿಗೆಯಾಯಿತು.
ಈ ರೇಜಿಗೆಯನ್ನು ಯಾರೊಟ್ಟಿಗೂ ಹಂಚಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಒಮ್ಮೆ ನಕ್ಸಲ್ ವಿಚಾರದಲ್ಲಿ ನಾನು ಬರೆದ ವರದಿಯ ಬಗ್ಗೆ ಮಾತನಾಡಲು ಗೌರಿ ಲಂಕೇಶ್ ಫೋನ್ ಮಾಡಿದ್ದರು. ಅದೂ ಹೊರಗಿನವರೂ ತಲೆ ಹಾಕಿತ್ತಿರುವ ವಿಷಯವಾಗಿದ್ದರಿಂದ ನಾನು ಸ್ವಲ್ಪ ಉದ್ವೇಗಗೊಂಡೆ. ಮಾತಿನ ಭರದಲ್ಲಿ ದತ್ತ ಪೀಠವನ್ನು ಪ್ರಸ್ತಾಪಿಸಿ, ನಮ್ಮ ಮನೆಯಲ್ಲಿನ ಸಮಸ್ಯೆಯ ಮಧ್ಯ ತಲೆಹಾಕಲು ಉಮಾಭಾರತಿ, ರಿತಂಬರ, ಗೌರಿ ಲಂಕೇಶ್ ಇವರಿಗೆಲ್ಲಾ ಯಾರು ಅಧಿಕಾರ ಕೊಟ್ಟಿದ್ದು ಎಂದು ಕೇಳೇ ಬಿಟ್ಟೆ. ಅಲ್ಲಿಗೆ ಮುಗಿಯಿತು ನನ್ನ ಗೌರಿ ಲಂಕೇಶರ ಸಂಬಂಧ.
ಮುಂದಿನ ಸಲ ಊರಿಗೆ ಹೋದಾಗ ಸೀದ ತೇಜಸ್ವಿಯವರನ್ನು ಭೇಟಿಯಾದೆ. ನಡೆದ ವಿಷಯವನ್ನು ಹೇಳಿ “ ಸರ್, ಇಲ್ಲಿ ನಾವು ಒಂದು ನಿಲುವನ್ನು ತೆಗೆದುಕೊಳ್ಳಲೇ ಬೇಕಾ? ನೀವು ಮಾಡೋದು ತಪ್ಪು ಎಂದು ಎಡಪಂಥೀಯರಿಗೆ ಹೇಳಿದರೆ, ನಮ್ಮನ್ನು ಸಂಘ ಪರಿವಾರದವರು ಎಂದು ಪಟ್ಟಿ ಕಟ್ತಾರೆ. ಸಂಘ ಪರಿವಾರದವರಿಗೆ ಹೇಳಿದ್ರೆ ನೀವು ನಕ್ಸಲ್ ಅಂತಾರೆ. ನಾವು ಮಧ್ಯದಲ್ಲಿರೋದೇ ತಪ್ಪಾ,” ಅಂತ ಕೇಳಿದೆ.
“ ಮಧ್ಯದಲ್ಲಿರಕ್ಕೆ ನೀನೇನು ಜಡ್ಜಾ. ನೋಡಯ್ಯಾ ನೀನು ನಿನ್ನ ಸಮಯ ಹಾಳು ಮಡ್ತಾ ಇದ್ದೀಯ, ನನ್ನದ್ನೂ ಹಾಳು ಮಾಡ್ತಾ ಇದ್ದೀಯ. ದತ್ತ ಪೀಠ ಯಾರದೂ ಅಲ್ಲ. ಆ ದತ್ತಾತ್ರೇಯನ ಫೋಟೋ ಕೆಳಗೆ ನೋಡು, ನಾಯಿ ಇದೆ. ನಾಯಿನ ಹಿಂದೂಗಳಾಗ್ಲಿ, ಮುಸ್ಲೀಮರಾಗಲಿ ಪೂಜೆ ಮಾಡಲ್ಲ. ಈ ವಿವಾದ ಒಂದು ಸಿವಿಲ್ ಡಿಸ್ಪೂಟ್ ಅಷ್ಟೇ. ಟೈಮ್ ವೇಸ್ಟ್ ಮಾಡ್ಬೇಡ ಹೋಗು” ಎಂದರು.
ಅಲ್ಲಿಗೆ ನಾನು ಆ ವಿಷಯದಲ್ಲಿ ತಲೆ ಹಾಕೋಂದನ್ನು ನಿಲ್ಲಿಸಿದೆ. ಮುಂದಿನ ಚುನಾವಣೆಯಲ್ಲಿ ಸಿ.ಟಿ.ರವಿ ಎಂ.ಎಲ್.ಎ ಕೂಡಾ ಆದರು. ದತ್ತನಾಗಲಿ ಬಾಬನಾಗಲಿ, ಅವರನ್ನು ನಂಬಿದವರ ಕೈ ಬಿಟ್ಟಂತೆ ಕಾಣಲಿಲ್ಲ. ಎಲ್ಲರೂ ಒಂದಲ್ಲ ಒಂದು ಥರ ಒಳಿತನ್ನೇ ಕಂಡರು. ಎಂ ಎಲ್ ಎ ಆದ ನಂತರ ಪಾದಯಾತ್ರೆಯಲ್ಲಿ, ಸಿ.ಟಿ.ರವಿಯ ಕಾಲಿನಲ್ಲಿ ನೈಕಿ ಷೂ ಮತ್ತು ಮುಖದಲ್ಲಿ ರೇಬಾನ್ ಗ್ಲಾಸ್ ರಾರಾಜಿಸುತ್ತಿದ್ದವು. ಹಾಗೇ ಉರುಸ್ ಗೆ ಹೋಗುವ ಹಿಂದುಳ ಸಂಖ್ಯೆಯೂ, ದತ್ತ ಜಯಂತಿಯಲ್ಲಿ ಭಾಗವಹಿಸುವ ಮುಸ್ಲೀಂಮರ ಸಂಖ್ಯೆಯೂ ಶೂನ್ಯವಾಗಿದೆ ಎಂಬುದು ನನಗೆ ತಿಳಿದಿತ್ತು. ದತ್ತ ಜಯಂತಿಯಾದ ಮೇಲೆ ಉಟ್ಟ ಅರಿವೆಯನ್ನು ಮಾಣೀಕ್ಯಾಧಾರ ಜಲಪಾತಕ್ಕೆ ಎಸೆಯುವ ಅನಾಹುತಕಾರಿ ಸಂಪ್ರದಾಯವೂ ಹುಟ್ಟು ಹಾಕಿಕೊಂಡಿದೆ. ದತ್ತ ಪೀಠದ ಸುತ್ತ ಒಂದಲ್ಲೊಂದು ಸಣ್ಣಪುಟ್ಟ ನಿರ್ಮಾಣಗಳು ನಡೆಯುತ್ತಲ್ಲೇ ಇರುತ್ತದೆ.
ನನಗೆ ಈಗ ದತ್ತಪೀಠ ಒಂದು ಇತಿಹಾಸ.
ಆ ಸಲದ ಆಯುದ ಪೂಜೆ ಮುಗಿಸಿ ಬೆಂಗಳೂರಿಗೆ ಬರುತ್ತಿರುವಾಗ ಗೆಂಡೆಹಳ್ಳಿಯ ಮೇಲೆ ಹಾದು ಬಂದೆ. ನಿಲ್ಲಿಸದಿದ್ದರೂ ಗೇಟಿನ ಮುಖಾಂತರ ಮನೆ ಮತ್ತು ಮಿಲ್ಲಿನ ಕಡೆ ಕಣ್ಣು ಹಾಯಿಸಿದೆ. ನವೀದ ಕಾಣಲಿಲ್ಲ. ಅಷ್ಟಾವಕ್ರನಂತೆ ಹೆಜ್ಜೆ ಹಾಕುತ್ತಾ ಅಲೀಮ ಮಿಲ್ಲಿನ ಕಡೆ ನಡೆದು ಹೋಗುತ್ತಿದ್ದ. ನಿನ್ನೆ ಮತ್ತು ನವೀದರಲ್ಲಿ ದೊಡ್ಡ ಕೋಳಿ ಯಾರಿಗೆ ಸಿಕ್ಕಿತು ಎಂದು ಕೆಳಬೇಕೆನಿಸಿತು. ಒಳಗೆ ನಗುತ್ತಾ ಮುಂದೆ ಹೋದೆ.
ಬೇಲೂರು ಹತ್ತಿರವಾಗುತ್ತಿದ್ದಂತೆ ಯಗಚೀ ಅಣೆಕಟ್ಟಿನ ಹಿನ್ನೀರಿನ ಹತ್ತಿರ ಕಾರನ್ನು ನಿಲ್ಲಿಸಿದೆ. ಅಲ್ಲಿಂದ ಬಾಬಬುಡನ್ ಗಿರಿಯ ಪರ್ವತ ಶ್ರೇಣಿ ಮನೋಹರವಾಗಿ ಕಾಣಿಸುತ್ತಿತ್ತು. ಇದಕ್ಕೆ ಹೇಳುವುದು’ ರುದ್ರರಮಣೀಯ’ ಅಂದುಕೊಂಡು ಕಾರು ಹತ್ತಿದೆ.
ಮಾಕೋನಹಳ್ಳಿ ವಿನಯ್ ಮಾಧವ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ